ಸಾವಿನ ಮನೆಯಲ್ಲಿ ಲಾಭದ ಲೆಕ್ಕಾಚಾರಗಳು
-ಡಾ. ಪ್ರವೀಣ ಟಿ. ಎಲ್. ಕುವೆಂಪು ವಿಶ್ವವಿದ್ಯಾನಿಲಯ
ನಾರಾಣಪ್ಪನ ಶವಸಂಸ್ಕಾರವನ್ನು ವಿರೋಧಿಸಿದ ಅಗ್ರಹಾರದವರು, ಆತನ ವೇಶ್ಯೆಯಾದ ಚಂದ್ರಿಯು ಆತನಿಗೆ ಸೇರಿದ ಬಂಗಾರವನ್ನು ತೆಗೆದುಕೊಟ್ಟ ತಕ್ಷಣ ಲಾಭದ ಲೆಕ್ಕಾಚಾರದಲ್ಲಿ ತೊಡಗುವ ಸನ್ನಿವೇಶವೊಂದನ್ನು ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿಯವರು ಚಿತ್ರಿಸಿದ್ದಾರೆ. ಅವನು ಬ್ರಾಹ್ಮಣನೇ ಅಲ್ಲ, ವೈದಿಕ ರೀತಿಯ ಶವಸಂಸ್ಕಾರ ಮಾಡುವುದು ಸರಿಯಲ್ಲ ಎಂದವರೆಲ್ಲಾ, ಆತಕ್ಷಣದಿಂದ ಆತನು ಎಲ್ಲರಿಗಿಂತಲೂ ತಮಗೆ ಹತ್ತಿರದ ಸಂಬಂಧಿ ಎಂಬ ವರಸೆಯನ್ನು ಶುರುಮಾಡುತ್ತಾರೆ. ಅಲ್ಲಿ ನಡೆಯುವುದು ಸಾವಿನ ಕುರಿತ ಮರುಕವಲ್ಲ, ಬದಲಾಗಿ ತಮಗಾಗುವ ಲಾಭದ ಲೆಕ್ಕಾಚಾರ. ಇದೇ ಸನ್ನಿವೇಷ ಇಂದು ಕಲ್ಬುರ್ಗಿಯವರ ಹತ್ಯೆಯ ಸುತ್ತ ನಡೆಯುತ್ತಿರುವುದು ಗೋಚರವಾಗುತ್ತಿದೆ. ಅವರ ಹತ್ಯೆಯು ಅಮಾನವೀಯ ಕೃತ್ಯವಾಗಿದ್ದು, ಅದನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕಿದೆ. ಈ ಕುರಿತು ಹಲವು ಲೇಖನಗಳು, ಚರ್ಚೆಗಳು ಈಗಾಗಲೇ ನಡೆದಿವೆ. ಈ ಹತ್ಯೆಯಿಂದ ಕನ್ನಡ ನಾಡಿನ ಚಿಂತನಾ ಪರಂಪರೆಗೆ ಬಹುದೊಡ್ಡ ನಷ್ಟವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಈ ನಷ್ಟದ ನಡುವೆಯೂ ಕೆಲವರು ತಮ್ಮ ಲಾಭದ ಲೆಕ್ಕಾಚಾರದಲ್ಲಿ ಮುಳುಗಿರುವುದು ಕೆಟ್ಟ ಪರಂಪರೆಯೊಂದಕ್ಕೆ ನಾಂದಿಹಾಡುತ್ತಿರುವಂತಿದೆ.
ಮೊದಲನೆಯದಾಗಿ, ಹತ್ಯೆಯಾದ ತಕ್ಷಣವೇ ಕೆಲವು ಚಿಂತಕರು ಹಾಗೂ ಪ್ರಗತಿಪರ ಸಂಘಟನೆಗಳು ಹಿಂದೂ ಸಂಘಟನೆಗಳೇ ಈ ಕೃತ್ಯವನ್ನು ಎಸಗಿರುವುದೆಂದು ತೀರ್ಪಿಟ್ಟರು. ಕಲ್ಬುರ್ಗಿಯವರ ಜೊತೆ ವೈಮನಸ್ಸಿದ್ದವರೂ ಸಹ ಬಲಪಂಥೀಯರನ್ನು ಹಣಿಯಲು ಈ ಅವಕಾಶವನ್ನು ಬಳಸಿಕೊಂಡರು. ಆ ಮೂಲಕ ಉಗ್ರವಾದಕ್ಕಿಂತ ಹಿಂದೂ ಸಂಘಟನೆಗಳ ಕೃತ್ಯ ಹೀನವಾದುದು ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದರು. ಹಿರಿಯ ಚಿಂತಕರೊಬ್ಬರ ಹತ್ಯೆಯಾಗಿದ್ದರಿಂದ ಕನ್ನಡನಾಡು ದುಃಖತಪ್ತವಾಗಿದ್ದುದು ನಿಜ. ಆದರೆ ಅದನ್ನು ಯಾರು, ಯಾಕಾಗಿ ಮಾಡಿದ್ದಾರೆ ಎಂಬುದು ತನಿಖೆಯ ನಂತರ ತಿಳಿಯಬೇಕಿರುವ ವಿಚಾರ. ಇಂತಹ ಸೂಕ್ಷ್ಮವಿಚಾರಗಳ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಮರೆತು, ವಿರೋಧಿ ಪಂಥದವರ ಮೇಲೆ ಹಾಕಿ ಕೈತೊಳೆದುಕೊಂಡರು. ಅವರ ಈ ಪ್ರತಿಕ್ರಿಯೆಗಳು ಇಡೀ ಪ್ರಕರಣವನ್ನು ಬೇದಿಸಲು ದೊಡ್ಡ ಅಡ್ಡಿಯನ್ನುಂಟು ಮಾಡಿರುವುದು ಈಗಾಗಲೇ ವೇದ್ಯವಾಗಿದೆ.
ಎರಡನೆಯದಾಗಿ, ಕಲ್ಬುರ್ಗಿಯವರ ಹತ್ಯೆಯ ನಂತರ ಮತ್ತೆ ಚಿಗುರಿದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಕನಸು. ಹಿಂದೊಮ್ಮೆ ಈ ಮಸೂದೆಯನ್ನು ಮಂಡಿಸಲು ಹೋಗಿ ತೀವ್ರ ಪ್ರತಿರೋಧ ಎದುರಿಸಿದ ಸರ್ಕಾರ ಅದನ್ನು ಅಲ್ಲಿಗೆ ಕೈಬಿಟ್ಟಿತು. ಆ ಮಸೂದೆಯನ್ನು ವೈಚಾರಿಕವಾಗಿಯಾಗಲೀ, ವೈಜ್ಞಾನಿಕವಾಗಿಯಾಗಲೀ ಸಮರ್ಥಿಸಿಕೊಳ್ಳಲಾಗದ ಸ್ಥಿತಿ ಎದುರಾಗಿತ್ತು. ಆದರೆ ಈಗ ಕೆಲವು ‘ವೈಚಾರಿಕ’ ಚಿಂತನಾ ಮಹಾಶಯರು ಈ ಮಸೂದೆಯನ್ನು ಜಾರಿಗೆ ತರುವುದು ಕಲ್ಬುರ್ಗಿಯವರಿಗೆ ಸಲ್ಲಿಸುವ ಗೌರವ ಎಂಬಂತೆ ಬಿಂಬಿಸುವ ಪ್ರಯತ್ನದಲ್ಲಿ ಮುಳುಗಿದ್ದಾರೆ. ಅಂದರೆ ಯಾವುದನ್ನು ವೈಚಾರಿಕವಾಗಿ, ವೈಜ್ಞಾನಿಕವಾಗಿ ಸಾಧಿಸಲು ಸಾಧ್ಯವಾಗಿಲ್ಲವೋ ಅದನ್ನು ಈ ಹತ್ಯೆಯ ಹೆಸರಿನಲ್ಲಿ ಸಾಧಿಸಲು ಹೊರಟಿದ್ದಾರೆ. ಅದಕ್ಕೆ ಸರ್ಕಾರದ ಕಡೆಯಿಂದ ಸಕಾರಾತ್ಮಕವಾದ ಸ್ಪಂಧನೆ ಬೇರೆ. ಕಲ್ಬುರ್ಗಿಯವರ ಹತ್ಯೆಯು ಏಕೆ ನಡೆದಿದೆ ಎಂದು ತನಿಖಾ ಇಲಾಖೆಗಳಿಗೆ ತಿಳಿದಿಲ್ಲವಾದರೂ ಈ ಚಿಂತಕ ಪಡೆಗೆ ಮಾತ್ರ ಅದು ಕಲ್ಬುರ್ಗಿಯವರ ಮೂಢನಂಬಿಕೆ ವಿರುದ್ಧದ ನಿಲುವಿನಿಂದಾಗಿಯೇ ಎಂದು ಸಾಭೀತಾದ ವಿಚಾರವಾಗಿ ಬಿಟ್ಟಿದೆ. ಆ ಕಾರಣಕ್ಕಾಗಿಯೇ ಹತ್ಯೆ ನಡೆದಿರುವುದು ಎಂದು ಸಾಭೀತಾದರೂ ಸಹ ಮಸೂದೆಯನ್ನು ಸಮರ್ಥಿಸಲು ಬೇರೆ ಕಾರಣಗಳೇ ಬೇಕಾಗುತ್ತವೆ. ಅದನ್ನು ಹುಡುಕಬೇಕಾಗುತ್ತದೆಯೇ ಹೊರತು, ಸಾವಿನ ಮನೆಯಲ್ಲಿ ರಾಜಕಾರಣ ಮಾಡುವುದಲ್ಲ.
ಮೂರನೆಯದಾಗಿ, ಹಲವರು ಕಲ್ಬುರ್ಗಿಯವರ ಸಾಧನೆಯ ಸಾಲಿನಲ್ಲಿ ತಮ್ಮನ್ನೂ ಗುರುತಿಸಿಕೊಳ್ಳುವ ಹಂಬಲ. ಅಂದರೆ ಕಲ್ಬುರ್ಗಿಯವರಂತೆಯೇ ತಾವೂ ವಿಚಾರವಾದಿಗಳು, ತಮಗೂ ಜೀವಬೆದರಿಕೆಗಳಿವೆ ಎಂಬಂತೆ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿಕೊಳ್ಳುತ್ತಿರುವ ಪ್ರವೃತ್ತಿಗಳು. ಮೊನ್ನೆ ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಹಿಂದೂ ಸಂಘಟನೆಗಳ ಮುಂದಿನ ಟಾರ್ಗೆಟ್ ಆಗಿರುವವರ ಪಟ್ಟಿಯೊಂದನ್ನು ನೋಡಿದೆ. ಎಷ್ಟೋ ಜನರ ಪರಿಚಯ ಕನ್ನಡಿಗರಿಗೆ ತಿಳಿದೇ ಇಲ್ಲ. ಅಂದರೆ ಅವರಲ್ಲಿ ಹಲವರು ಇನ್ನೂ ಕಣ್ಣು ಬಿಡದ ಜೀವಿಗಳು! ಉಳಿದ ಕೆಲವರು ಸಮಾಜದಲ್ಲಿ ದ್ವೇಷ ಮೂಡಿಸುವ ಹೇಳಿಕೆಗಳಿಂದಾಗಿ ಪ್ರತಿರೋಧವನ್ನು ಎದುರಿಸುತ್ತಿರುವವರು. ಅದೇನೆ ಇರಲಿ ಆ ಪಟ್ಟಿಯಲ್ಲಿದ್ದವರ್ಯಾರು ಘನ ಪಂಡಿತರೂ ಅಲ್ಲ, ವಿಚಾರವಂತರೂ ಅಲ್ಲ, ಕನ್ನಡ ಚಿಂತನಾ ಪರಂಪರೆಗೆ ಅವರ ಕೊಡುಗೆಯೇನೂ ಇಲ್ಲ. ಹಾಗಾದರೆ ಪಟ್ಟಿಯಲ್ಲಿ ಈ ಹೆಸರುಗಳು ಸೇರ್ಪಡೆಗೊಂಡುದಾದರೂ ಹೇಗೆ? ಅಂದರೆ ಒಂದಿಷ್ಟು ಮಂದಿ ತಾವು ವೈಚಾರಿಕರು, ನಮ್ಮ ಘನವಿಚಾರಕ್ಕೆ ಕೋಮುವಾದಿಗಳಿಂದ ಜೀವಬೆದರಿಕೆ ಇದೆ ಎಂದು ಸುಳ್ಸುದ್ದಿ ಹಬ್ಬಿಸುವ ಪ್ರಕ್ರಿಯೆಯಲ್ಲಿ ಮಗ್ನರಾಗಿದ್ದಾರೆ. ಕಲ್ಬುರ್ಗಿಯವರ ಸ್ಥಾನಕ್ಕೆ ಅವರು ಸಾಗಿದ ಮಾರ್ಗದಲ್ಲಿಯೇ ತಲುಪಬೇಕೆಂದರೆ, ಹಲವು ದಶಕಗಳ ಆಧ್ಯಯನ, ಸಂಶೋಧನೆ, ಬರವಣಿಗೆ ಮುಂತಾದ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರ ಬದಲಿಗೆ ತಮ್ಮ ವಿಚಾರಕ್ಕೂ ಜೀವ ಬೆದರಿಕೆ ಇದೆ ಎಂದು ಹೇಳುವ ಮೂಲಕ ಕಲ್ಬುರ್ಗಿಯವರ ಸಾಲಿನಲ್ಲಿ ಸುಲಭವಾಗಿ ನಿಲ್ಲುವ ಸಾಧ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಕಲ್ಬುರ್ಗಿಯವರ ಸತತ ಪರಿಶ್ರಮ, ಅಧ್ಯಯನ ಶೀಲತೆ ಎಲ್ಲಿ, ಇವರ ಅಗ್ಗದ ಗಿಮಿಕ್ಕುಗಳೆಲ್ಲಿ?!
ನಾಲ್ಕನೆಯದಾಗಿ, ತಮಗಾಗದವರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹತ್ಯೆಗೆ ಕಾರಣರೆಂದು ಬಿಂಬಿಸುವ ಪ್ರಯತ್ನಗಳು. ಆ ಮೂಲಕ ಅವರನ್ನು ನೈತಿಕವಾಗಿ ಕುಗ್ಗಿಸುವ ಯತ್ನ. ಒಂದಿಷ್ಟು ಜನರು ಈ ಸಾವಿನಲ್ಲಿಯೂ ತಮ್ಮ ದ್ವೇಷವನ್ನು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಅವರು ಸೈದ್ಧಾಂತಿಕವಾಗಿ ಎದುರಿಸಲಾಗದ ಹಾಗೂ ಬಲಪಂಥೀಯ ಚಿಂತನೆಗಳಿಂದ ಅಂತರವನ್ನು ಕಾಯ್ದುಕೊಂಡಿರುವ ಕೆಲವು ತಮಗಾಗದ ಸಂಸ್ಥೆಯನ್ನೋ, ವ್ಯಕ್ತಿಯನ್ನೋ, ಸಂಶೋಧನೆಗಳನ್ನೋ ಗುರಿಮಾಡಿ, ಅವುಗಳು ಸಹ ಪರೋಕ್ಷವಾಗಿ ಕಲ್ಬುರ್ಗಿಯವರ ಹತ್ಯೆಯ ರುವಾರಿಗಳೆಂದು ಸಾರುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಮೂಲಕ ಅವುಗಳನ್ನು ನೈತಿಕವಾಗಿ ದುರ್ಬಲಗೊಳಿಸಬಹುದೆಂಬ ಲೆಕ್ಕಾಚಾರ ಅವರದ್ದು. ನಿಲುಮೆ ಎಂಬ ಸಾಮಾಜಿಕ ತಾಣವನ್ನು ಗುರಿಯಾಗಿಸಿದ ಕೆಲವು ಪ್ರತಿಕ್ರಿಯೆಗಳು ಹೀಗಿದ್ದವು. ಆದರೆ ನಿಲುಮೆಯಂತಹ ಗುಂಪು ವಿಚಾರದ ಮೂಲಕವೇ ಎದುರಾಳಿಯನ್ನು ಎದುರಿಸುವ ಶಕ್ತಿಯನ್ನು ಯುವಕರಲ್ಲಿ ಬೆಳೆಸುತ್ತಿದೆಯೇ ಹೊರತು ಬಂದೂಕನ್ನು ಕೊಡುವ ಕೆಲಸವನ್ನಲ್ಲ.
ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಂದು ದುರಂತ ಸಾವನ್ನು ತಮ್ಮ ಲಾಭದ ಉಧ್ಯಮವನ್ನಾಗಿ ಮಾಡಿಕೊಂಡಿರುವ ಇವರ ಕಾಳಜಿ ಸಮಾಜದ ಸ್ವಾಸ್ಥ್ಯ ಕಾಪಾಡುವುದಾಗಿದೆಯೇ? ಖಂಡಿತಾ ಇಲ್ಲ. ಹೀಗೆ ಕೆಲವರು ತಮಗಾಗದವರನ್ನು ಹಣಿಯಲು ಈ ಎಲ್ಲಾ ಪ್ರಯತ್ನಗಳಿಗೆ ಮುಂದಾದುದು ಆರೋಗ್ಯಕರ ಬೆಳವಣಿಗೆಯಂತೂ ಅಲ್ಲ. ಈ ಕೀಳು ಪ್ರವೃತ್ತಿಗಳನ್ನೆಲ್ಲಾ ನೋಡಿದರೆ, ಸಾವಿನ ಮನೆಯಲ್ಲೂ ಬೇಳೆ ಬೇಯಿಸಿಕೊಳ್ಳುವುದೆಂದರೆ ಇದೆನಾ? ಎಂಬ ಪ್ರಶ್ನೆ ಏಳುತ್ತದೆ.
ನೀವು ಹೇಳಿದ “ಮೂರನೆಯದಾಗಿ…” ಪ್ಯಾರಾ ಆಪ್ಯಾಯಮಾನವೆನಿಸಿತು. ಸರಿಯಾದ ಓದು, ಸಂಶೋಧನಾ ನಿಷ್ಠೆ, ಬದ್ಧತೆ, ಏನೂ ಇಲ್ಲದೇ ಎಲ್ಲೋ ಕುಳಿತಾಗ ಹೊಳೆದ ಸಂಗತಿಯನ್ನು ಹರಡಿ ಒಂದಿಷ್ಟು ಸುದ್ದಿಗೆ ಗ್ರಾಸವಾಗುವ ಚಟ ವ್ಯಾಪಕವಾಗಿ ಹಬ್ಬುತ್ತಿದೆ. ಕೀರ್ತಿಶನಿಯ ಬೆನ್ನು ಹತ್ತಿದವರು ಇವರು. ಕಲಬುರ್ಗಿಯವರಂಥ ಸಂಶೋಧಕರನ್ನು ಎಂದಾದರೂ ಹತ್ತಿರ ಬಿಟ್ಟುಕೊಂಡಿದ್ದರಾ? ಈಗ ಅವರ ಫೋಟೋ ಹಿಡಿದು ನಾವೆಲ್ಲ ಕಲಬುರ್ಗಿಯವರಂಥಾ ‘ಮಹಾನ್ ಸಂಶೋಧಕರು’ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಅಷ್ಟೆ. ಕಲಬುರ್ಗಿಯವರಿಗೆ ಹೆಗಲೆಣೆಯಾಗುವ ಜನ ಎಂದರೆ ಸದ್ಯ ವೆಂಕಟಾಚಲ ಶಾಸ್ತ್ರೀಗಳು ಮತ್ತು ಚಿದಾನಂದಮೂರ್ತಿಗಳು ಮಾತ್ರ.
Sir Please Publish this Post in ‘Nilume’ If Meaningful .
With Regards
ಶ್ರೀರಾಮನು ಸ್ತ್ರೀ ವಿರೋಧಿಯೂ ಅಲ್ಲ – ಶೂದ್ರ ವಿರೋಧಿಯೂ ಅಲ್ಲ.
– ಡಾ.ಮಾನಕರಿ ಶ್ರೀನಿವಾಸಾಚಾರ್ಯ
ಅಗಸನ ಮಾತಿಗೆ ಬೆಲೆಕೊಟ್ಟು ರಾಮನು ಸೀತೆಯನ್ನು ಪರಿತ್ಯಜಿಸಿದನಂತೆ. ಪುತ್ರಶೋಕದಿಂದ
ರೋದಿಸುತ್ತಿದ್ದ ತಂದೆಯ ದುಃಖಕ್ಕೆ ಕಾರಣನಾಗಿದ್ದ ಶಂಭೂಕನನ್ನು ವಧಿಸಿದನಂತೆ. ಆ ಕಾರಣದಿಂದ
ಅವನು ಸ್ತ್ರೀ ವಿರೋಧಿ – ಶೂದ್ರ ವಿರೋಧಿ ಎನ್ನುವ ಸಾಹಿತಿ.ಕೆ.ಎಸ್.ಭಗವಾನ್ ಅವರ ಆರೋಪವನ್ನು
ಒಪ್ಪುವ ಅನಿವಾರ್ಯತೆ ಇಲ್ಲ.
ಆ ಭಾಗದ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು ರಚಿಸಿಲ್ಲವೆಂಬ ವಾದವಿದೆ. ಒಂದೊಮ್ಮೆ ಆ ಭಾಗದ
ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳೇ ರಚಿಸಿದ್ದಾರೆ ಎಂದಾದರೂ, ಅವರು ಆದರ್ಶ ಪುರುಷನಾದ
ತನ್ನ ಕಾವ್ಯ ನಾಯಕನಾದ ಶ್ರೀರಾಮನ ಸದ್ಗುಣಗಳನ್ನು ಬಾಯ್ತುಂಬ ಹಾಡಿ ಹೊಗಳಿದ್ದಾರೆ.
ವಾಲ್ಮೀಕಿ ಮಹರ್ಷಿಗಳ ಪ್ರಕಾರ ಶ್ರೀರಾಮ ಸ್ತ್ರೀ ವಿರೋಧಿಯಾಗಿದ್ದರೆ – ಶೂದ್ರ
ವಿರೋಧಿಯಾಗಿದ್ದರೆ ಅಂತಹ ವ್ಯಕ್ತಿಯನ್ನು ಕುರಿತು ಕಾವ್ಯವನ್ನು ರಚಿಸುತ್ತಿದ್ದರೆ?
ಶ್ರೀರಾಮನು ಸ್ತ್ರೀ ವಿರೋಧಿಯಾಗಿದ್ದರೆ ಅಹಲ್ಯೆಯೆನ್ನು ನಿರಪರಾಧಿಯೆಂದು
ತೀರ್ಮಾನಿಸುತ್ತಿರಲಿಲ್ಲ. ಅವಳನ್ನು ಮತ್ತೆ ಸ್ವೀಕರಿಸುವಂತೆ ಗೌತಮ ಋಷಿಗೆ ಹೇಳಿ,
ಮುರಿದುಹೋಗಿದ್ದ ಅವರ ಸಂಸಾರವನ್ನು ಕೂಡಿಸುತ್ತಿರಲಿಲ್ಲ. ಶ್ರೀರಾಮನು ಸ್ತ್ರೀ
ವಿರೋಧಿಯಾಗಿದ್ದರೆ ವನವಾಸಕ್ಕೆ ಹೋಗದೆ, ಕಕೇಯಿಯನ್ನು ಧಿಕ್ಕರಿಸಿ, ಅಯೋಧ್ಯೆಯನ್ನು
ಆಳುತ್ತಿದ್ದನು. ಶ್ರೀರಾಮನು ಸ್ತ್ರೀ ವಿರೋಧಿಯಾಗಿದ್ದರೆ ಅವನನ್ನು ಸೀತೆಯ ಸಹಿತವಾಗಿಯೇ
ಪೂಜಿಸುವ, ಚಿಂತಿಸುವ, ಧ್ಯಾನಿಸುವ ಸಂಪ್ರದಾಯವನ್ನು ಭಾರತೀಯರು
ಅನುಸರಿಸುತ್ತಿರಲಿಲ್ಲ.ಸೀತೆಯನ್ನು ಬಿಟ್ಟು ಬೇರೊಬ್ಬಳ ಸಹವಾಸ ಮಾಡಿದ್ದರೆ ಶ್ರೀರಾಮನನ್ನು
ಆಕ್ಷೇಪಿಸಲು ಆವಕಾಶವಿತ್ತು. ವಾಲ್ಮೀಕಿ ರಾಮಾಯಣದಲ್ಲಿ ಹಾಗಿಲ್ಲವಲ್ಲ!
ಶ್ರೀರಾಮನು ಶೂದ್ರ ವಿರೋಧಿಯಾಗಿದ್ದರೆ ಗುಹನೊಂದಿಗೆ ಸೌಹಾರ್ದದಿಂದ
ವರ್ತಿಸುತ್ತಿರಲಿಲ್ಲ.ಶಬರಿಗೆ ಮೋಕ್ಷವನ್ನು ಕೊಡುತ್ತಿರಲಿಲ್ಲ. ಶ್ರೀರಾಮನು ಶೂದ್ರ
ವಿರೋಧಿಯಾಗಿದ್ದರೆ ಅಂದಿನಿಂದ ಇಂದಿನವರೆಗೆ ಯಾವುದೇ ಶೂದ್ರಸಮುದಾಯದ ಪ್ರಜೆಗಳು ರಾಮನ
ಹೆಸರನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಶ್ರೀರಾಮನನ್ನಾಗಲಿ, ಅವನ ಭಕ್ತನಾದ ಃಅನುಮನನ್ನಾಗಲಿ
ಪೂಜಿಸುತ್ತಿರಲಿಲ್ಲ.ರಾಮಭಜನೆ ಮಾಡುತ್ತಿರಲಿಲ್ಲ. ಆ ಲಕ್ಷಾಂತರ ವರ್ಷಗಳ ಪರಂಪರೆಯ ಕೋಟ್ಯಂತರ
ಜನಸಮೂಹವನ್ನು ದಡ್ಡರೆಂದು ತೀರ್ಮಾನಿಸುವುದಕ್ಕಿಂತ, ಅವರಾರಿಗೂ ತೋರದ ಅದ್ಭುತ ದೋಷಗಳು
ಪ್ರೊ.ಕೆ.ಎಸ್.ಭಗವಾನ್ ಅವರಿಗೆ ತೋರಿರುವುದರಿಂದ ಇವರ ದೃಷ್ಟಿಕೋನವನ್ನೇ ಸಂದೇಹಿಸುವುದು
ಅನಿವಾರ್ಯವಾಗಿದೆ.
ಆದ್ದರಿಂದ ಶ್ರೀರಾಮನು ಸ್ತ್ರೀ ವಿರೋಧಿಯೂ ಅಲ್ಲ – ಶೂದ್ರ ವಿರೋಧಿಯೂ ಅಲ್ಲ. ನಾಯಿಗೂ
ನ್ಯಾಯಕೊಟ್ಟ ರಾಮನ ನಿಸ್ಪೃಹತೆ ಭಗವಾನ್ ಅವರಿಗೆ ಏಕೆ ಕಾಣುವುದಿಲ್ಲ? ಆಗ್ರಹ ತುಂಬಿದ
ಕಣ್ಣಿಗೆ ಸತ್ಯ ಗೋಚರಿಸುವುದಿಲ್ಲ. ದುರಾಗ್ರಹದಿಂದ ಹೊರಟರೆ ನಮ್ಮ ವಿವೇಕವೆಂಬ ಕಣ್ಣು
ಕುರುಡಾಗುತ್ತದೆ.
ಮೂರನೆಯ ಪ್ಯಾರಾ: ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ!!
ಡಾ. ಪ್ರವೀಣ ಅವರು ಬರದಿದ್ದು ನಿಜ. ಬೇರೇ ರಾಜ್ಯಗಳಿಂದಲೂ ಇದೇ ಪ್ರತಿಕ್ರಿಯೆ.
ಶ್ರೀನಿವಾಸಾಚಾರಿ ಅವರು ತಮ್ಮ ಮಾತನ್ನ ಚೆನ್ನಾಗಿ ನಿರೂಪಿಸಿದ್ದಾರೆ.
ಇಬ್ಬರಿಗೂ ಶುಭಾಶಯಗಳು.
jayakumarcsj@gmail.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ