ಪ್ರಗತಿಪರರ ಸಮರ್ಥನೆಯಲ್ಲಡಗಿರುವ ಮೂಢನಂಬಿಕೆಯ ಮೂಲ ಹಿಡಿದು
ಡಾ. ಸಂತೋಷ್ ಕುಮಾರ್ ಪಿ.ಕೆ
ಕನ್ನಡದ ಒಂದು ಪತ್ರಿಕೆಯಲ್ಲಿ ದಿನಾಂಕ 5 ಅಕ್ಬೋಬರ್ 2015 ರಂದು ಸಮ್ವರ್ಥ ಸಾಹಿಲ್ ರವರು ಭಗವಾನರ ಹೇಳಿಕೆಯನ್ನು ಸಮರ್ಥಿಸಿಕೊಂಡು ಇಂದಿಷ್ಟು ವಿಚಾರಗಳನ್ನು ಹೊರಗೆಡಹಿದ್ದಾರೆ. ಅವರ ವಾದವನ್ನು ಸಾರಾಂಶೀಕರಿಸುವುದಾದರೆ, ಭಗವಾನ್ ರವರು ‘ರಾಮ ಅಪ್ಪನಿಗೆ ಹುಟ್ಟಿದವನಲ್ಲ’ ಎಂಬ ಹೇಳಿಕೆಗೆ ಜನರು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಹೊಸದೊಂದು ಕಾರಣವನ್ನು ಹುಡುಕಿದ್ದಾರೆ. ಭಗವಾನ್ ರವರ ಹೇಳಿಕೆಯಿಂದ ಜನರಿಗೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಿಲ್ಲ, ಬದಲಿಗೆ ಸಮಾಜದಲ್ಲಿ ಅಡಗಿರುವ ಪುರುಷ ಪ್ರಾಬಲ್ಯಕ್ಕೆ ಧಕ್ಕೆ ಬಂದಂತಾಗಿ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎನ್ನುವುದೇ ಅವರ ಹೊಸ ಹುಡುಕಾಟವಾಗಿದೆ. ಸಮ್ವರ್ಥರ ಸಮರ್ಥನೆಯನ್ನು ಸ್ವಲ್ಪ ಪರಿಶೀಲಿಸುವ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ.
ಮೊದಲಿಗೆ ಸಾಹಿಲ್ ರ ಸಮರ್ಥನೆಯಾಗಲಿ ಅಥವಾ ಅವರು ನಗಣ್ಯ ಮಾಡುವ ಸಂಗತಿಯಾಗಲಿ ಎರಡೂ ವಾಸ್ತವವಲ್ಲ. ಅಂದರೆ ಪುರುಷ ಅಹಂಕಾರಕ್ಕೆ ಧಕ್ಕೆಯಾಗಿ ಜನರು ಆಕ್ರೋಶ ವ್ಯಕ್ತಪಡಿಸಿಲ್ಲ ಹಾಗೂ ಜನರ ಧಾರ್ಮಿಕ ಭಾವನೆ ಧಕ್ಕೆಯಾಗಿರಬಹುದು ಎಂಬುದು ಸತ್ಯವಲ್ಲ. ಇಲ್ಲಿ ನಾವು ಎರಡು ಅಂಶಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ, ಅವುಗಳೆಂದರೆ ಒಂದು ಇವೆರಡೂ ಕಾರಣಗಳು ಸತ್ಯವಾಗಿರದಿದ್ದರೆ ಮತ್ತೇಕೆ ಜನರು ಆಕ್ರೋಶವನ್ನು ವ್ಯಕ್ತಪಡಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಹಾಗೂ ಕೆಲವು ಸೋ ಕಾಲ್ಡ್ ವಿದ್ವಾಂಸರುಗಳು ಇಂತಹ ತಲೆಮಾಸಿದ ಸಮರ್ಥನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ? ಈ ಎರಡೂ ಅಂಶಗಳನ್ನು ಅರ್ಥಮಾಡಿಕೊಂಡರೆ ಜನರ ವಿರೋಧಕ್ಕೆ ಕಾರಣಗಳು ಹಾಗೂ ಪ್ರಗತಿಪರರ ಹಿಪೋಕ್ರಸಿಯನ್ನು ಅರರ್ಥೈಸಿಕೊಳ್ಳಲು ಸಾಧ್ಯವಾಗಬಹುದು.
ಭಗವಾನ್ ಹೇಳಿಕೆಯಿಂದ ಜನರು ರೊಚ್ಚಿಗೆದ್ದಿರುವುದಕ್ಕೆ ಮೊಟ್ಟಮೊದಲನೆಯದಾಗಿ ಧಾರ್ಮಿಕ ಕಾರಣವಂತೂ ಅಲ್ಲ, ಇದನ್ನು ಸಾಹಿಲ್ ಕೂಡ ಒಪ್ಪುತ್ತಾರೆ, ಆದರೆ ಏಕೆ ಎಂಬುದನ್ನು ಅವರು ವಿವರಿಸುವುದಿಲ್ಲ. ಅಂತಹ ಒಂದು ವಿವರಣೆಯನ್ನು ನೋಡುವ ಅಗತ್ಯವಿದೆ. ಅನೇಕ ಭಾರತೀಯರಿಗೆ ರಾಮ ಒಬ್ಬ ಆದರ್ಶ ಪುರುಷ, ಸತ್ಯ ಮತ್ತು ನ್ಯಾಯದ ವ್ಯಕ್ತಿತ್ವದ ಪ್ರತಿರೂಪ ಎಂದು ಹೇಳುವುದಿದೆ. ಅಂತೆಯೇ ದ್ರಾವಿಡ ಚಳುವಳಿಯ ಸಂದರ್ಭದಲ್ಲಿ ರಾಮನನ್ನು ಹೀಗಳೆಯುವ ಮತ್ತು ಆತ ಒಬ್ಬ ವಿಲನ್ ಎಂದು ಹೇಳುವ ಪರಿಪಾಠವೂ ಮತ್ತೊಂದೆಡೆ ಇತ್ತು. ಆದರೆ ಆಗ ಇಲ್ಲದ ಧಾರ್ಮಿಕ ಮನೋಭಾವ ಈಗ ಮತ್ತೆಲ್ಲಿಂದಲೋ ಬರಲು ಹೇಗೆ ಸಾಧ್ಯ? ರಾಮನನ್ನು ಜನರು ಪೂಜಿಸುವುದು ಆತ ದಶರಥನ ಮಗ ಎಂಬ ಕಾರಣಕ್ಕೂ ಅಲ್ಲ, ಅಥವಾ ಯಾರಿಗೆ ಹುಟ್ಟಿದ್ದಾನೆಂದು ಪರಿಗಣಿಸುವುದರ ಮೂಲಕವೂ ಅಲ್ಲ. ಅದಕ್ಕೂ ಮಿಗಿಲಾಗಿ ರಾಮಾಯಣ ಮತ್ತು ಮಹಾಭಾರತ ಯಾವ ರೀತಿಯಲ್ಲಿಯೂ ಧರ್ಮಗ್ರಂಥಗಳಾಗಿ ಪರಿಗಣಿಸಲ್ಪಟ್ಟಿಲ್ಲ. ಇತರ ದೇವರುಗಳಂತೆಯೆ ಭಾರತೀಯರಿಗೆ ರಾಮನೂ ಒಬ್ಬ ದೇವರು ಅಷ್ಟೆ. ಆತನನ್ನು ಕೊಂಡಾಡುವವರು ಮತ್ತು ವಿರೋಧಿಸುವವರು ಕೆಲವು ಅತಿಯಾದ ಗುಣಲಕ್ಷಣಗಳನ್ನು ಆರೋಪಿಸಬಹುದು, ಆದರೆ ಅವೆಲ್ಲವೂ ಸತ್ಯವೋ ಸುಳ್ಳೋ ಎನ್ನುವುದಕ್ಕಿಂತ, ಅವರವರ ಗ್ರಹಿಕೆ ಸಂಬಂಧಿಸಿದ ವಿಚಾರವಾಗಿದೆ. ರಾಮಾಯಣವು ಪವಿತ್ರ ಅಥವಾ ಧಾರ್ಮಿಕ ಗ್ರಂಥವೇ ಆಗಿರದಿದ್ದ ಪಕ್ಷದಲ್ಲಿ ಧಾರ್ಮಿಕ ಭಾವನೆ ಎಲ್ಲಿಂದ ಬರಲು ಸಾಧ್ಯ?
ಎರಡನೆಯ ವಿಷಯ ಸಾಹಿಲ್ ಹೇಳುವಂತೆ ಪುರುಷ ಅಹಂಕಾರಕ್ಕೆ ಧಕ್ಕೆಯಾದ್ದರಿಂದ ಜನರು ಭಗವಾನ್ ಹೇಳಿಕೆಗೆ ಆಕ್ರೋಶವ್ಯಕ್ತಪಡಿಸಿದರು ಎಂದು ಹೇಳುವಲ್ಲಿ ಎಷ್ಟು ಸತ್ಯಾಂಶವಿದೆ? ಖಂಡಿತವಾಗಿಯೂ ಇದು ಸಾಹಿಲ್ ರವರ ಕಪೋಲ ಕಲ್ಪಿತ ಗ್ರಹಿಕೆಯೇ ಹೊರತು ಯಾವುದೇ ವಾಸ್ತವದ ವಿಷಯವನ್ನು ಆಧರಿಸಿದ ಹೇಳಿಕೆಯಲ್ಲ. ಭಾರತೀಯ ಸಮಾಜದ ಕುರಿತು ಇರುವ ತರಹೇವಾರಿ ಚಿತ್ರಣಗಳಲ್ಲಿ ಪುರುಷ ಪ್ರಧಾನ ಎನ್ನುವುದೂ ಸಹ ಒಂದಾಗಿದೆ. ಮನುಕುಲದ ಇತಿಹಾಸ ಬರೆದ ಹಲವಾರು ಇತಿಹಾಸಕಾರರು ಮತ್ತು ಸೆಮಟಿಕ್ ರಿಲಿಜನ್ನಿನ ಪವಿತ್ರಗ್ರಂಥಗಳು ಪುರುಷ ಪ್ರಧಾನ ವ್ಯವಸ್ಥೆಯ ಕುರಿತು ಒತ್ತು ನೀಡುತ್ತವೆ. ಮಹಿಳೆಯು ಪುರುಷನ ಸೊಂಟದಿಂದ ಜನ್ಮತಾಳಿದವಳು ಎಂದು ಗ್ರಂಥವು ಪುರುಷಪ್ರಧಾನ್ಯತೆಯನ್ನು ಸಾರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹುದೇ ಹಿನ್ನೆಲೆಯಲ್ಲಿ ಸಮಾಜಶಾಸ್ತ್ರಜ್ಞರು ಭಾರತೀಯ ಸಮಾಜದ ಕುರಿತು ಪುರುಷ ಪ್ರಧಾನ ಸಮಾಜ ಎನ್ನುವಂತೆ ಬಿಂಬಿಸುತ್ತಾ ಬಂದಿದ್ದಾರೆ. ಆದರೆ ಅದು ವಾಸ್ತವವೇ ಎಂಬುದನ್ನು ನೋಡಬೇಕಾಗಿದೆ.
ಭಾರತದ ಇತಿಹಾಸವನ್ನು ಸ್ತ್ರೀವಾದದ ಹಿನ್ನೆಯಲ್ಲಿ ನೋಡುವವರಿಗೆ ಒಂದು ಸಾಮಾನ್ಯವಾದ ಚಿತ್ರಣ ಕಣ್ಣೆದುರಿಗೆ ಬರುತ್ತದೆ. ಅದೆಂದರೆ ವೇದಗಳ ಕಾಲದಲ್ಲಿ ಮಹಿಳೆಯರು ಯಜ್ಞಯಾಗಾದಿಗಳಲ್ಲಿ ಭಾಗವಹಿಸುತ್ತಿದ್ದರು, ತದನಂತರ ಮಧ್ಯಕಾಲದಲ್ಲಿ ಅವರನ್ನು ಮೂಲೆಗುಂಪು ಮಾಡಲಾಯಿತು, ಆಧುನಿಕ ಕಾಲದಲ್ಲಿ ಅವರ ಸ್ಥಿತಿ ಆಧುನೀಕತೆ ಮತ್ತು ಹೋರಾಟಗಳಿಂದಾಗಿ ಸುಧಾರಿಸುತ್ತಿದೆ ಎಂಬುದು ಸಂಕ್ಷಿಪ್ತ ಇತಿಹಾಸ. ಆದರೆ ನೋಡಿ, ವೇದಗಳ ಕಾಲ ಯಾವುದೇ ಇದ್ದಿರಬಹುದು, ಅಲ್ಲಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನವಿತ್ತು ಎನ್ನುವುದಾದರೆ, ಅದು ಭಾರತೀಯ ಸಮಾಜಕ್ಕೆ ಹಿಡಿದ ಕನ್ನಡಿ. ನಂತರ ಮಧ್ಯಕಾಲದಲ್ಲಿ ಹಾಳಾಯಿತು ಎಂದು ಗೋಳಾಡುವ ಸ್ತ್ರೀವಾದಿಗಳು ಒಂದು ಅಂಶವನ್ನು ಗಮನಿಸಬೇಕು, ಅದೆಂದರೆ ಮಧ್ಯಕಾಲದ ಹೊತ್ತಿಗೆ ಇಸ್ಲಾಂ ಮತ್ತು ಬ್ರಿಟೀಷ್ ವಸಾಹತುಶಾಹಿತ್ವಕ್ಕೆ ಭಾರತ ಒಳಗೊಳ್ಳುತ್ತಿತ್ತು. ಹಾಗಾದರೆ ನೇರವಾಗಿ ಮಹಿಳೆಯ ಅಧೋಗತಿಗೆ ಯಾರ ಕಡೆ ಬೆರಳು ತೋರಿಸಬೇಕು? ಬ್ರಿಟೀಷರು ಕ್ರಿಶ್ಚಿಯಾನಿಟಿ, ಮತ್ತು ಮುಸ್ಲಿಂರು ಇಸ್ಲಾಂ ರಿಲಿಜನ್ ಹಿನ್ನೆಲೆಯನ್ನು ಹೊಂದಿದ್ದರು, ಈಗಾಗಲೇ ಹೇಳಿದಂತೆ ಸೆಮೆಟಿಕ್ ರಿಲಿಜನ್ ಗಳು ಪುರುಷ ಪ್ರಾಧಾನ್ಯತೆಗೆ ಒತ್ತು ನೀಡುತ್ತವೆ. ಹಾಗಾದರೆ ಮಧ್ಯಕಾಲದಲ್ಲಿದ್ದ ಇತಿಹಾಸ ಮತ್ತು ಮಹಿಳೆಯ ಸ್ಥಿತಿಗತಿಯಲ್ಲಿ ಆದಂತಹ ಬದಲಾವಣೆಗೆ (ಒಂದೊಮ್ಮೆ ಆಗಿದ್ದರೆ) ನೇರ ಹೊಣೆಯಾಗುವುದು ಸೆಮಟಿಕ್ ರಿಲಿಜನ್ಗಳು. ಅಂದರೆ ಅದು ಭಾರತೀಯ ಸಮಾಜದ ವಾಸ್ತವವಲ್ಲ ಎಂದಾಗುತ್ತದೆ.
ಇನ್ನು ಆಧುನಿಕ ಕಾಲದಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸ್ತ್ರೀವಾದಿ ಹೋರಾಟಗಳು ನಡೆದಿವೆ. ಎನ್ಲೈಟನ್ಮೆಂಟ್, ರಿನೈಸ್ಸಾನ್ಸ್, ಕೈಗಾರಿಕಾ ಕ್ರಾಂತಿ, ಆಧುನಿಕ ತಂತ್ರಜ್ಞಾನಗಳ ಆವಿಷ್ಕಾರ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಂತಹ ಶ್ರೇಷ್ಠ ಮೌಲ್ಯಗಳನ್ನು ಜಗತ್ತಿಗೆ ತೋರಿಸಿಕೊಟ್ಟ ಪಾಶ್ಚಾತ್ಯ ರಾಷ್ಟ್ರಗಳು ಸುಮಾರು 21 ನೆ ಶತಮಾನದವರೆಗೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿರಲಿಲ್ಲ ಎಂಬುದು ಇಂದಿಗೆ ಇತಿಹಾಸ. 1918 ರವರೆಗೂ ಪ್ರಪಂಚವನ್ನಾಳಿಗೆ ಇಂಗ್ಲೆಂಡ್ ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಇಂತಹ ಸಮಸ್ಯೆಗಳನ್ನು ಒಳಗೊಂಡ ಪಾಶ್ಚಾತ್ಯ ರಾಷ್ಟ್ರಗಳು ತಾವು ಶ್ರೇಷ್ಠವಾದ ಮೌಲ್ಯಗಳನ್ನು ಹೊಂದಿದ್ದೇವೆಂಬ ಭ್ರಮೆಯಲ್ಲಿರುವುದು ನಿಜವಾಗಿಯೂ ವಿರೋಧಾಭಾಸ. ಇದನ್ನೆ ರೋಲ್ ಮಾಡೆಲ್ ಆಗಿ ಮಾಡಿಕೊಂಡ ಹಲವಾರು ಭಾರತೀಯ ಸ್ತ್ರೀವಾದಿಗಳು ಮಹಿಳಾ ಹೋರಾಟವನ್ನು ಇಲ್ಲಿಯೂ ಪ್ರಾರಂಭಿಸಿದರು. ಅವರಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಹಿಳಾ ಹೋರಾಟದ ಇತಿಹಾಸ ಮತ್ತು ಅಲ್ಲಿಯ ಮಹಿಳೆಯ ಸಮಸ್ಯೆಗಳಾಗಲಿ ಭಾರತದ ಸಮಾಜದ ವಾಸ್ತವವಾಗಲಿ ಗೊತ್ತಿರುವುದು ಅನುಮಾನವೇ ಸರಿ.
ಭಾರತೀಯ ಸಮಾಜ ಪುರುಷಪ್ರಧಾನ ಎಂದು ಹೇಳುವಾಗ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿ ಪುರುಷರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾರಥ್ಯವಹಿಸುತ್ತಾರೆ ಎನ್ನುವುದನ್ನು ಒಪ್ಪಬೇಕಾಗುತ್ತದೆ. ಉದ್ಯೋಗ, ಸಾಮಾಜಿಕ ಜೀವನ, ಕೌಟುಂಬಿಕ ವ್ಯವಸ್ಥೆ ಇತ್ಯಾದಿ ಇತ್ಯಾದಿ ಕ್ಷೇತ್ರಗಳಲ್ಲಿ ಮಹಿಳೆಯ ಪಾಲು ನಗಣ್ಯವಾಗಿರಬೇಕು. ಎಲ್ಲಾ ವ್ಯವಸ್ಥೆಗಳಿಗೂ ಮೂಲವಾಗಿರುವ ಕುಟುಂಬವನ್ನು ಒಮ್ಮೆ ಅವಲೋಕಿಸಿದರೆ ಯಾರ ಸ್ಥಾನ ಎಷ್ಟೆಷ್ಟು ಎನ್ನವುದು ನಮ್ಮ ಗಮನಕ್ಕೆ ಬರುತ್ತದೆ. ಪುರುಷ ಮತ್ತು ಪ್ರಕೃತಿಯ ಸಹಯೋಗ, ಸಂಯೋಜನೆ ಇರದಿದ್ದರೆ ಒಂದು ಗುಂಪು ಕುಟುಂಬವಾಗಿರಲು ಸಾಧ್ಯವೇ ಇಲ್ಲ. ನನ್ನ ಅನುಭವದಂತೆಯೇ, ನನ್ನ ಮನೆಯಲ್ಲಿಯೆ ಹಲವಾರು ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತಂದೆಯಷ್ಟೆ ಸಮಾನವಾಗಿ ಅಥವಾ ಅದಕ್ಕಿಂತ ಹೆಚ್ಚಾಗಿ ಪಾತ್ರ ವಹಿಸುತ್ತಿದ್ದರು, ಈಗಲೂ ವಹಿಸುತ್ತಿದ್ದಾರೆ. ಇದು ನನ್ನೊಬ್ಬನ ಅನುಭವವಲ್ಲ, ಹಲವಾರು ಸ್ನೇಹಿತರನ್ನು ಕೇಳಿದ್ದೇನೆ, ನೊಡಿದ್ದೇನೆ ಹಾಗೂ ಅಮ್ಮಾವ್ರ ಗಂಡಂದಿರನ್ನು ಗಮನಿಸಿದ್ದೇನೆ. ಇಷ್ಟೆಲ್ಲಾ ಪುರಾಣ ಹೇಳುತ್ತಿರುವುದಕ್ಕೆ ಕಾರಣ, ಪುರುಷ ಪ್ರಧಾನ ಅಥವಾ ಮಾತೃ ಪ್ರಧಾನ ಎನ್ನುವುದನ್ನು ಬದಿಗಿಟ್ಟು ನಮ್ಮ ಅನುಭವವನ್ನು ನೋಡಿದರೆ ಹೊಸ ಹೊಸ ಆಯಾಮಗಳು ನಮ್ಮ ಕೌಟುಂಬಿಕ ವ್ಯವಸ್ಥೆಯ ಕುರಿತು ಕಾಣಸಿಗುತ್ತವೆ. ಹಾಗಾಗಿ, ಇಲ್ಲಿರುವುದು ಪರುಷಪ್ರಧಾನವೋ ಅಥವಾ ಮಾತೃಪ್ರಧಾನವೋ ಎಂದು ಹುಡುಕಲು ಪ್ರಾರಂಭಿಸಿದರೆ ಅದಕ್ಕೆ ವಿರುದ್ಧವಾದ ಉದಾಹರಣೆಗಳು ನಮಗೆ ಸಿಗುತ್ತಾ ಹೋಗುತ್ತವೆ.
ಮೇಲಿನ ಎರಡೂ ಹಿನ್ನೆಲೆಯಲ್ಲಿ ಸಾಹಿಲ್ ರವರ ಲೇಖನವನ್ನು ಪರಿಶೀಲಿಸಬೇಕಾಗುತ್ತದೆ. ಧಾರ್ಮಿಕ ಕಾರಣ ಮತ್ತು ಅಹಂಕಾರದ ಕಾರಣದಿಂದ ಭಗವಾನ್ ರವರಂತಹ ಹೇಳಿಕೆಗಳನ್ನು ತಿರಸ್ಕರಿಸುತ್ತಿಲ್ಲ ಎಂದಾರೆ ಮತ್ತೇಕೆ ಎಂಬ ಪ್ರಶ್ನೆ ಏಳುತ್ತದೆ. ರಾಮಾಯಣ ಮಹಾಭಾರತವಾಗಲಿ ಭಾರತೀಯರಿಗೆ ಕತೆಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದಲೆ 300 ರಾಮಾಯಣದಂತಹ ಲೇಖನವನ್ನು ಎ.ಕೆ.ರಾಮಾನುಜಮ್ ರವರು ಬರೆಯಲು ಸಾಧ್ಯವಾಗಿರುವುದು. ರಾಮಾಯಣವು ಹಲವಾರು ಆವೃತಿಗಳಲ್ಲಿ ಅನೇಕ ಸಮುದಾಯಗಳಲ್ಲಿ ಅಸ್ತಿತ್ವದಲ್ಲಿರವುದನ್ನು ಲೇಖಕರು ಪ್ರಸ್ತುತಪಡಿಸುತ್ತಾರೆ. ಇದರ ಅರ್ಥ ಕತೆಯನ್ನು ಜನರು ಒಂದಲ್ಲ ರೀತಿಯಲ್ಲಿ ತಮ್ಮ ಬದುಕಿನೊಂದಿಗೆ ಅಳವಡಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು, ಹಾಗಾಗಿ ಸೀತೆಯ ಸೆರಗು, ಭೀಮನ ಪಾದ ಇತ್ಯಾದಿಗಳನ್ನು ಹೇಳಿಕೊಳ್ಳುವ ಮೂಲಕ, ಹಾಗೂ ಇರುವ ವ್ಯಕ್ತಿಗಳನ್ನು ಕತೆಯ ಕೆಲವೊಂದು ಪಾತ್ರಗಳಿಗೆ ಹೋಲಿಕೆ ಮಾಡುವುದು ಸಹ ಸಾಮಾನ್ಯವಾಗಿದೆ. ಒಟ್ಟಿನಲ್ಲಿ, ಅದೊಂದು ಕತೆಯಾಗಿದ್ದು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿದೆ, ಕೆಲವರಿಗೆ ವ್ಯಕ್ತಿತ್ವವಾಗಿ ಕಂಡರೆ, ಕೆಲವರಿಗೆ ದೇವರಾಗಿ ಕಾಣಬಹುದು, ಮತ್ತೆ ಕೆಲವರಿಗೆ ನೀತಿ ಅನೀತಿ ಏನಾದರು ಕಂಡಿರಬಹುದು. ಬಗೆದಷ್ಟು ದೊರಕುವ ಮಟ್ಟಿಗೆ ಆ ಕತೆಗಳು ಸಂಪನ್ಮೂಗಳನ್ನು ತಮ್ಮಲ್ಲಿ ಹುದುಗಿಸಿಕೊಂಡಿವೆ.
ಕತೆಗಳನ್ನು ಒಂದು ರೀತಿಯಲ್ಲಿ ಅಳವಡಿಕೊಂಡಿರುವ ಮತ್ತು ಅನಗತ್ಯ ಪ್ರಶ್ನೆಗಳನ್ನು ಅವುಗಳ ಕುರಿತು ಎತ್ತದೆ ಬದುಕುತ್ತಿರುವ ಜನಸಮುದಾಯಕ್ಕೆ ವಿಚಿತ್ರವಾದ ಯಾವ ಹೇಳಿಕೆಗಳನ್ನು ಕೇಳಿದರೂ ವಿರೋಧ ವ್ಯಕ್ತವಾಗುವುದು ಸಹಜವೆ ಸರಿ. ಕತೆಗಳಲ್ಲಿರುವ ಹಲವಾರು ನಾಯಕರು ಯಜ್ಞಗಳಿಂದ ಹಾಗೂ ಋಷಿಮುನಿಗಳು ನೀಡಿದ ಫಲಗಳಿಂದ ಜನ್ಮತಾಳಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಪ್ಪನಿಗೆ ಹುಟ್ಟಿಲ್ಲ ಎನ್ನುವ ಹೇಳಿಕೆಗೂ ಯಜ್ಞಗಳಿಂದ ಜನಿಸಿದ್ದಾರೆ, ಅಥವಾ ಸೂರ್ಯನ ವರದಿಂದ ಜನಿಸಿದ್ದರು ಎನ್ನುವುದಕ್ಕೂ ವ್ಯತ್ಯಾಸವಿದೆ. ಆ ವ್ಯತ್ಯಾಸವು ಹೇಳುವವರ ದೃಷ್ಟಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಭಗವಾನ್ ರಂತಹ ಪ್ರಗತಿಪರರು ಇರುವ ವಾಸ್ತವವನ್ನು ಹೇಳುತ್ತಿದ್ದಾರೋ ಅಥವಾ ಹಿಂದೂ ಸಮಾಜವನ್ನು ಹೀಗಳೆಯಲೆಂದೇ ಅಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೋ ಎಂಬ ಸಣ್ಣ ವ್ಯತ್ಯಾಸ ಮಾಡಿಕೊಂಡು ತಮ್ಮ ವಿಚಾರಗಳನ್ನು ಮಂಡಿಸುವುದು ಒಳಿತು.
ಕೆಲವು ವಿಚಾರವಾದಿಗಳಲ್ಲಿ ಒಂದು ರೀತಿಯ ಹಿಪೋಕ್ರಸಿ ಕಂಡುಬರುತ್ತದೆ. ತಮಗೆ ಬೇಕಾದವರು ಮೀಸಲಾತಿ ಅಥವಾ ದಲಿತರ ಕುರಿತು ಅಪಸ್ವರ ಎತ್ತಿದರೂ ತಂಡೋಪತಂಡವಾಗಿ ಅವರನ್ನು ಸಮರ್ಥಿಸುವ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಆದರೆ ಅಂತಹುದೇ ಹೇಳಿಕೆಯನ್ನು ಅವರಿಗೆ ಬೇಡವಾದವರು ಹೇಳಿದರೆ ಅದೇ ತಂಡ ಹೇಳಿಕೆ ನೀಡಿದವರನ್ನು ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ ಅದು ಇದು ಮಣ್ಣು ಮಸಿ ಎಂದು ಹೇಳುವ ಮೂಲಕ ವಿರೋಧಿಸಲು ಪ್ರಾರಂಭಿಸುತ್ತಾರೆ. ಹಾಗಾಗಿ, ಪ್ರಗತಿಪರರ ಸಮರ್ಥನೆ ಮತ್ತು ವಿರೋಧಗಳು ವಿಷಯಾಧಾರಿತವಾಗಿರದೆ ವ್ಯಕ್ತಿಯಾಧಾರಿತವಾಗಿರುತ್ತದೆ. ಇದನ್ನೆ ಒಂದು ರೀತಿ ಹಿಪೋಕ್ರಸಿ ಎನ್ನಬಹುದು.
Photo curtsy: http://theviewspaper.net/role-of-media-in-removing-superstition-in-india/black-cat/
ಪದಪ್ರಯೋಗಕೋಶಗಳು ಅಷ್ಟಾಗಿ ಮೂಡಿಬಂದಿಲ್ಲ. ಲೇಖನದಲ್ಲಿ ಒಂದು ಜಿಜ್ಞಾಸೆ ಕಂಡರೂ ಪದಗಳು ಚದುರಿಹೋಗಿವೆ.
Its not hitting the right (intended) spot effectively
😳
ಎಳಚಿತ್ತಾಯರೆ
ಪದಪ್ರಯೋಗಗಳು ಸರಿಯಾಗಿಲ್ಲದೆ ಇರಬಹುದು, ಅದು ಬರಹಗಾರನಿಗಿಂತ ಓದುಗನಿಗೆ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಆದ್ದರಿಂದ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಬರೆಯಲು ಸಲಹೆ ನೀಡಿದರೆ ಮುಕ್ತವಾಗಿ ಸ್ವೀಕರಿಸುತ್ತೇನೆ.