ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 8, 2015

ಕೊಟ್ಟ ಕುದುರೆಯನೇರಲರಿಯದೆ… -ಪುಸ್ತಕ ವಿಮರ್ಶೆ

‍CSLC Ka ಮೂಲಕ

ಕೊಟ್ಟ ಕುದುರೆಯನೇರಲರಿಯದೆ  -ವಿನುತಾ ಎಸ್ ಪಾಟೀಲ್. ಕುವೆಂಪು ವಿಶ್ವವಿದ್ಯಾನಿಲಯ

  ವಚನಸಾಹಿತ್ಯವು ಜಾತಿ ವಿರೋಧಿ ಚಳುವಳಿಯೇ? ಹೌದಾದರೆ, ವಚನಕಾರರೇ ಅದಕ್ಕೆ ವಿರುದ್ಧವಾಗಿ ಮಾತನಾಡುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಜಾತಿ ವಿನಾಶವೇ ವಚನಕಾರರ ಉದ್ದೇಶವಾಗಿದ್ದರೆ ಅವರೇಕೆ ಜಾತಿಯ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ? ದಲಿತ ಪರವು ಸ್ತ್ರೀಪರವು ಆಗಿರುವ ವಚನಕಾರರು ಅವರ ಬಗ್ಗೆ ಕೀಳಾಗಿ ಮಾತನಾಡಲು ಹೇಗೆ ಸಾಧ್ಯ? ನಿಲುಮೆ ಪ್ರಕಾಶನದಿಂದ ಹೊರಬಂದಿರುವ ‘ಕೊಟ್ಟ ಕುದುರೆಯನೇರಲರಿಯದೆ…’ ಎಂಬ ಪ್ರಸ್ತುತ ಕೃತಿಯು ಇಂತಹ ಅನೇಕ ಗೊಂದಲಗಳನ್ನು ದೂರ ಮಾಡುವ ಮೂಲಕ ವಚನಗಳ ಅಧುನಿಕ ನಿರೂಪಣೆಗಳ ಆಚೆಗೆ ವಚನಸಾಹಿತ್ಯವನ್ನು ಅರ್ಥಮಾಡಿಸುವಲ್ಲಿ ಸಫಲವಾಗಿದೆ ಎಂದು ಹೇಳುವುದು ಅತಿಶೋಕ್ತಿಯಾಗಲಾರದು.

  ಕಳೆದ ಕೆಲವು ವರ್ಷಗಳಿಂದ ಎಸ್.ಎನ್. ಬಾಲಗಂಗಾಧರ ಮತ್ತವರ ಸಂಶೋಧನಾ ತಂಡದವರ ಸಂಶೋಧನೆ ಮತ್ತು ವಾದಗಳು ಕನ್ನಡದ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಸುಳ್ಳಲ್ಲ. ಇದು ವಚನಗಳ ಕುರಿತ ಚರ್ಚೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ವಚನಸಾಹಿತ್ಯವು ಜಾತಿವಿರೋಧಿ ಚಳವಳಿ ಎಂಬುದು ಕನ್ನಡದ ಬೌದ್ಧಿಕವಲಯದ ನಂಬಿಕೆ. ಇದನ್ನು ಪ್ರಶ್ನಿಸುವ ಬಾಲಗಂಗಾಧರ ಅವರು ವಚನಸಾಹಿತ್ಯವು ‘ಜಾತಿವಿರೋಧಿ ಚಳುವಳಿ’ ಎಂದು ಹೇಳುವುದಕ್ಕೆ ಯಾವುದೇ ಅಧಾರವಿಲ್ಲ. ವಚನಕಾರರನ್ನು ಸಾಮಾಜಿಕ ಹೋರಾಟಗಾರರಂತೆ ನೋಡುವುದು ಗೊಂದಲಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಅದನ್ನು ಅಧ್ಯಾತ್ಮ ಸಾಧನೆಯ ಮಾರ್ಗ ಎಂದು ನೋಡಿದಲ್ಲಿ  ಹೆಚ್ಚು ಸುಸಂಬದ್ಧವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎನ್ನುತ್ತಾರೆ. ಬಾಲಗಂಗಾಧರ ಅವರ ಈ ವಾದವು ಪ್ರಜಾವಾಣಿಯ ಪತ್ರಿಕೆಯಲ್ಲಿ ಚರ್ಚೆಗೆ ಕಾರಣವಾಗುವುದರ ಜೊತೆಗೆ, ಚರ್ಚೆಯ ಸಂದರ್ಭದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿಯೂ ಹೊರತರಲಾಯಿತು. ಒಂದು ಗುಂಪಿನ ವಾದಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದ ಈ ಪುಸ್ತಕದ ವಿಚಾರಗಳು ವಚನಸಾಹಿತ್ಯದ ಕುರಿತ ಗೊಂದಲಗಳನ್ನು ಪರಿಹರಿಸುವ ಬದಲಾಗಿ ಬಾಲಗಂಗಾಧರ ಅವರ ಸಂಶೋಧನೆಯ ಹೊಸತನವನ್ನು ತಿಳಿಯಲು ತಡೆಯುಂಟುಮಾಡಿತ್ತು. ಪ್ರಸ್ತುತ ಕೃತಿಯು ಎಲ್ಲಾ ಲೇಖನಗಳು ವಚನಸಾಹಿತ್ಯದ ಕುರಿತ ಗೊಂದಲಗಳನ್ನು ನಿವಾರಿಸುವ ಮೂಲಕ ಬಾಲಗಂಗಾಧರ ಅವರ ಸಂಶೋಧನೆಯ ಹೊಸತನವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.  

  ಪ್ರಸ್ತುತ ಕೃತಿಯ ವಾದಕ್ಕೆ ಪೂರಕವೆಂಬಂತೆ ಬಾಲ್ಯದಲ್ಲಿ ಎದುರಾದ ಒಂದು ಗೊಂದಲವನ್ನು ಇಲ್ಲಿ ಉಲ್ಲೇಖಿಸುವುದು ಪ್ರಸ್ತುತವೆನಿಸುತ್ತದೆ. ಒಮ್ಮೆ ತರಗತಿಯಲ್ಲಿ ಬಸವಣ್ಣರ ಬಗ್ಗೆ ವಿವರಿಸುತ್ತಾ, ‘ಕ್ಯಾಥೋಲಿಕ್ ಪೊಪ್ನ ದುರಾಡಳಿತದ ವಿರುದ್ಧ ಮಾರ್ಟಿನ್ ಲೂಥರ್ ಹೋರಾಡಿದನು. ಅಂತೆಯೇ ಭಾರತದಲ್ಲಿಯೂ ಪುರೋಹಿತಶಾಹಿಯ ದಬ್ಬಾಳಿಕೆಯನ್ನು ತಡೆದು ಸಮಾನತೆಯನ್ನು ಸ್ಥಾಪಿಸಲು ಬಸವಣ್ಣ ಹೋರಾಡಿದರು. ಈ ಕಾರಣದಿಂದ ಬಸವಣ್ಣರು ಭಾರತದ ಮಾರ್ಟಿನ್ ಲೂಥರ್ ಆಗಿದ್ದಾರೆ’ ಎಂದು ಹೇಳಿಕೊಡುತ್ತಿದ್ದರು. ಅಲ್ಲಿಂದ ಬಸವಣ್ಣನನ್ನು ಸಮಾಜ ಸುಧಾರಕರೆಂದು ಗುರುತಿಸಿದರೆನೇ ಅವರಿಗೆ ಗೌರವ ಕೊಟ್ಟಂತೆ ಎಂಬ ಮನೋಭಾವ ಬೆಳೆಯಿತು.  ಇನ್ನೊಂದು ಸಂದರ್ಭದಲ್ಲಿ ಅದೇ ತರಗತಿಯಲ್ಲಿ ಬಸವಣ್ಣನವರ ‘ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ’ ಎಂಬ ವಚನ ಮಾಡುವಾಗ ‘ಬಸವಣ್ಣನವರು ಮಾದಿಗ, ಹೊಲೆಯ ಎಂಬ ಜಾತಿ ಸೂಚಕ ಪದಗಳನ್ನು ಕೀಳು ಎಂಬರ್ಥದಲ್ಲಿ ಬಳಸಿದ್ದಾರೆಂದು’ ವಿವರಿಸಿದ್ದರು. ಒಂದುಕಡೆ ಬಸವಣ್ಣನವರು ಜಾತಿವ್ಯವಸ್ಥೆ ವಿರುದ್ಧ ಹೋರಾಡಿದರು ಎನ್ನುತ್ತಾರೆ. ಮತ್ತೊಂದು ಕಡೆ ಕೆಲವು ಜಾತಿಗಳನ್ನು ನಿಕೃಷ್ಟವಾಗಿ ನೋಡುತ್ತಾರೆ ಎನ್ನುತ್ತಾರೆ. ಈ ರೀತಿಯ ವೈರುದ್ಯಪೂರ್ಣ ವಿವರಣೆಗಳು ವಚನಸಾಹಿತ್ಯದ ನಿಜ ಅರ್ಥವನ್ನು ಗ್ರಹಿಸುವಲ್ಲಿ ಗೊಂದಲವನ್ನು ಎದುರುಮಾಡಿದ್ದವು. ಆದರೆ ನನ್ನ ಮಿತಿಯಲ್ಲಿ ಹೇಳುವುದಾದರೆ, ಪ್ರಸ್ತುತ ಕೃತಿಯು ಮೇಲಿನಂತಹ ಹಲವು ಗೊಂದಲಗಳಿಗೆ ಕಾರಣಗಳೇನು ಎಂಬುದನ್ನು ಸೂಚಿಸುವುದರ ಜೊತೆಗೆ ವಚನಗಳ ಪರ್ಯಾಯ ಓದಿಗೆ ಬುನಾದಿಯನ್ನು ಹಾಕಿಕೊಡುತ್ತದೆ.

  ಕೃತಿಯ ಮೊದಲನೆಯ ಭಾಗದಲ್ಲಿ: ವಚನಸಾಹಿತ್ಯವನ್ನು ಸಾಮಾಜಿಕ ಚಳವಳಿ ಎನ್ನುವ, ಹಾಗೂ ವಚನಕಾರರನ್ನು ಸಾಮಾಜಿಕ ಹೋರಾಟಗಾರರು ಎನ್ನುವ ಸಾರ್ವತ್ರಿಕ ಒಪ್ಪಿತ ಸತ್ಯವನ್ನು ವಿಮರ್ಶೆಗೆ ಒಳಪಡಿಸಲಾಗಿದೆ. ಈ ಭಾಗದಲ್ಲಿನ ಎರಡು ಲೇಖನಗಳು ಅನುಕ್ರಮವಾಗಿ ವಚನಕಾರರು ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಹೆಚ್ಚು ಸುಸಂಬದ್ಧರಾಗಿ ಕಾಣುವಂತೆ ಮಾಡುತ್ತವೆ. ‘ಚಿದ್ಬೆಳಗಿನ ಬಯಲು…’ ಎಂಬ ಮೊದಲನೆಯ ಲೇಖನದಲ್ಲಿ ಭಾರತೀಯ ಅರ್ಥದಲ್ಲಿ ಅಧ್ಯಾತ್ಮದ ಪರಿಕಲ್ಪನೆ ಏನು? ಎಂಬುದನ್ನು ವಿವರಿಸುತ್ತಾ ಭಾರತೀಯ ವಿವಿಧ ಮತಪಂಥಗಳು ಹೇಗೆ ಇದರೊಳಗೆ ಸ್ಥಾನಪಡೆಯುತ್ತವೆ ಎಂಬುದನ್ನು ತಿಳಿಸಿಕೊಡುತ್ತಾರೆ. ಹಾಗೂ ಪಾಶ್ಚಾತ್ಯ ಚೌಕಟ್ಟಿನ ಹಿನ್ನಲೆಯಲ್ಲಿ ಬಸವಣ್ಣನವರನ್ನು ಸಾಮಾಜಿಕ ಹೋರಾಟಗಾರನಂತೆ ಚಿತ್ರಿಸುವುದರಿಂದ ಅವರನ್ನು ಶರಣನ ಸ್ಥಾನದಿಂದ ಭವಿಯ ಸ್ಥಾನದಲ್ಲಿ ನಿಲ್ಲಿಸುವ ಅನಿವಾರ್ಯತೆಯನ್ನು ತೋರಿಸಿಕೊಡುತ್ತಾರೆ. ಹಾಗಾದರೆ ಬಸವಣ್ಣನವರನ್ನು ಹೇಗೆ ನೋಡಬೇಕು? ಅಲ್ಲಮ ಪ್ರಭುಗಳು ನೋಡುವ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದೇ ಇದಕ್ಕಿರುವ ಪರ್ಯಾಯ ಮಾರ್ಗ ಎನ್ನುತ್ತಾರೆ ಲೇಖಕರು. ಅಂದರೆ ಷಟ್ಸ್ಥಲ ಮಾರ್ಗವನ್ನು ಅನುಸರಿಸಿ ಅದನ್ನು ಮೀರಿದ ಅವಸ್ಥೆಯನ್ನು ತಲುಪಿದ ರೀತಿಯಲ್ಲಿ ನೋಡಿದಾಗ ಮಾತ್ರ ಬಸವಣ್ಣನವರಿಗೆ ಘನತೆಯನ್ನು ಒದಗಿಸಿಕೊಟ್ಟಾಂತಾಗುತ್ತದೆ ಹಾಗು ಬಸವಣ್ಣನವರ ಕುರಿತ ಪರಸ್ಪರ ವೈರುಧ್ಯ ಅಭಿಪ್ರಾಯಗಳಿಂದ ಹೊರಬಂದು ಅವರ ವಚನಗಳ ತಿರುಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎನ್ನುತ್ತಾರೆ.

  ವಚನಗಳಲ್ಲಿ ಬರುವ ವೇದ ಮತ್ತು ಬ್ರಾಹ್ಮಣರ ಟೀಕೆಗಳೆ ಜಾತಿ ವಿರೋಧಿ ಚಳವಳಿಗೆ ಅಧಾರ ಎಂದು ಹೇಳುವ ಅಧುನಿಕ ನಿರೂಪಣೆಗಳನ್ನು ಪ್ರಶ್ನಿಸುವ ಎರಡನೆಯ ಲೇಖನದಲ್ಲಿ ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ಈ ಟೀಕೆಗಳು ಹೇಗೆ ಪ್ರಸ್ತುತತೆಯನ್ನು ಪಡೆಯುತ್ತವೆ ಎಂಬುದನ್ನು ತೋರಿಸಿಕೊಡಲಾಗಿದೆ. ಲೇಖನದ ಈ ಸಾಲುಗಳು ತನ್ನ ವಾದವನ್ನು ಅರ್ಥಮಾಡಿಸುತ್ತದೆ: ‘ವಚನಗಳಲ್ಲಿನ ಇಂಥ ಹೇಳಿಕೆಗಳನ್ನು ವೇದಗಳ ವರ್ಣಾಶ್ರಮಗಳ ನಿರಾಕರಣೆ ಅಥವಾ ವಿರೋಧ ಎಂಬಂತೆ ನೋಡುವುದು ತಪ್ಪಾಗುತ್ತದೆ. ಅಧ್ಯಾತ್ಮವು ವೇದ ವಿದ್ಯೆಯ ಮೇಲಿನ ಪಾಂಡಿತ್ಯವೇ ಅಂತಿಮವಲ್ಲ ಎಂಬುದನ್ನು ಎಚ್ಚರಿಸಲಿಕ್ಕೆ ಇಂಥ ವಿಮರ್ಶೆಯನ್ನು ಹುಟ್ಟುಹಾಕಿದೆ.’

  ಸಂಶೋಧನೆ ಮತ್ತು ಐಡಿಯಾಲಜಿ ಎಂಬ ಶೀರ್ಷಿಕೆಯ ಎರಡನೆಯ ಭಾಗದಲ್ಲಿ ಇಂದಿನ ಬೌದ್ಧಿಕ ಚರ್ಚೆಯೆಂದರೆ ಅದು ಐಡಿಯಾಲಜಿಕಲ್ ಚರ್ಚೆಯೇ ಆಗಿದೆ ಎಂಬುದನ್ನು ಮತ್ತು ಐಡಿಯಾಲಜಿಗಳು ವಚನಗಳ ಓದಿನ ಮೇಲೆ ಹಾಕಿರುವ ಮಿತಿಗಳನ್ನು ವಿಶ್ಲೇಷಿಸಲಾಗಿದೆ. ವಚನಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ಕನ್ನಡದ ಚಿಂತನಾವಲಯವು ಬಾಲಗಂಗಾಧರ ಮತ್ತು ಅವರ ತಂಡದ ಸಂಶೋಧನೆಗೂ ಒಂದಲ್ಲ ಒಂದು ಐಡಿಯಾಲಜಿಯನ್ನು ಅರೋಪಿಸಲು ಪ್ರಯತ್ನಿಸಿದರು. ಇಂಥ ಪ್ರಕ್ರಿಯೆಯು ಓದುಗರಿಗೆ ಆ ಸಂಶೋಧನೆಯ ಹೊಸತನವನ್ನು ತಿಳಿಯಲು ತಡೆಯನ್ನುಂಟುಮಾಡಿದ್ದಷ್ಟೇ ಅಲ್ಲ ಅವರ ವಾದದಲ್ಲಿಯೂ ಒಂದು ಐಡಿಯಾಲಜಿಯನ್ನು ಹುಡುಕುವ ಕೆಲಸಕ್ಕೆ ಹಚ್ಚಿದರು. ಆದರೆ ಈ ಭಾಗದ ಲೇಖನಗಳು ಅವರ ಪ್ರಯತ್ನಗಳಲ್ಲಿನ ತೊಡಕುಗಳನ್ನು ವಿವರಿಸುತ್ತವೆ. ಹಾಗೂ ಅಂತಹ ವೈಧಾನಿಕತೆಯು ವಚನಸಾಹಿತ್ಯದ ಕುರಿತ ವೈಜ್ಞಾನಿಕ ತಿಳುವಳಿಕೆಯ ಭಾಗಿಲನ್ನು ಸಂಪೂರ್ಣವಾಗಿ ಮುಚ್ಚಿಬಿಡುತ್ತದೆ ಎಂಬುದನ್ನು ದೃಷ್ಟಾಂತಪಡಿಸಲಾಗಿದೆ.

  ಹಾಗೆಯೇ ಲಿಂಗಾಯತರ ಕುರಿತ ಪ್ರಸ್ತುತ ಬೌದ್ಧಿಕ ಚರ್ಚೆಯು ಲಿಂಗಾಯತ ಧರ್ಮ(ರಿಲಿಜನ್), ಮತ್ತು ಲಿಂಗಾಯತ ಜಾತಿ ಎಂಬ ಎರಡು ಆಯ್ಕೆಗಳನ್ನು ಮುಂದಿಡುತ್ತದೆ. ಆದರೆ ಈ ಎರಡೂ ಆಯ್ಕೆಗಳೂ ಹೇಗೆ ಅರ್ಥಹೀನವಾದುದು ಎಂಬುದನ್ನು ಲಿಂಗಾಯತ ಪ್ರಭೇದದ ಸ್ವರೂಪ ಎಂಬ ಲೇಖನವು ಸ್ಪಷ್ಟಪಡಿಸುತ್ತದೆ. ಮುಂದುವರೆದು ಅದಕ್ಕಿರುವ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.

  ಜ್ಯೋತಿವಿಡಿದು ಕತ್ತಲೆಯನರಸುವರೆ?ಎಂಬ ಶೀರ್ಷಿಕೆಯ ಮೂರನೆಯ ಭಾಗದಲ್ಲಿ ವಚನಗಳನ್ನು ಅರ್ಥೈಸಲು ಷಟ್ಸ್ಥಲದಂತಹ ಒಂದೊಳ್ಳೆ ಚೌಕಟ್ಟಿದ್ದರೂ ಸಹಾ ವಸಾಹತು ಹಿನ್ನೆಲೆಯ ಸಮಾಜ ಸುಧಾರಣಾ ಚೌಕಟ್ಟು ಮುನ್ನೆಲೆಗೆ ಬಂದ ರೀತಿಯನ್ನು ಹಾಗೂ ಅದು ಸೃಷ್ಟಿಸುತ್ತಿರುವ ಅಸಂಬದ್ಧತೆಯನ್ನು ತೋರಿಸಲಾಗುತ್ತಿದೆ. ವಚನಗಳನ್ನು ಅರ್ಥೈಸುವಾಗ ಸಮಾಜ ಸುಧಾರಣಾ ಚೌಕಟ್ಟು ಸೃಷ್ಟಿಸುವ ಹಲವು ಸಮಸ್ಯೆಗಳು, ಅಸಂಬದ್ಧತೆಗಳು ಷಟ್ಸ್ಥಲದ ಸಂದರ್ಭದಲ್ಲಿಟ್ಟರೆ ಸುಲಭವಾಗಿ ಪರಿಹಾರವಾಗುವುದನ್ನು ಇಲ್ಲಿನ ಲೇಖನಗಳು ದೃಷ್ಟಾಂತಪಡಿಸುತ್ತವೆ. ಉದಾಹರಣೆಗೆ, ಸಾಮಾಜಿಕ ಚಳವಳಿಯ ಚೌಕಟ್ಟನ್ನು ಹೊಂದಿರುವವರು ವಚನಸಾಹಿತ್ಯವನ್ನು ಜಾತಿವಿರೋಧಿ ಚಳವಳಿ ಎಂದು ವಾದಿಸುತ್ತಾರೆ. ಆದರೆ, ಇದಕ್ಕೆ ವಿರುದ್ಧವಾಗಿ ವಚನಗಳಲ್ಲೇ ಸಾಕಷ್ಟು ಉದಾಹರಣೆಗಳಿವೆ(ಲೋಕದ ಡೊಂಕ ನೀವೇಕೆ ತಿದ್ದುವಿರಿ?…, ಪರರ ಚಿಂತೆ ನಮಗೇಕಯ್ಯ?…). ಆದರೆ ಅಂಥ ವಚನಗಳನ್ನು ವಿವರಿಸುವಲ್ಲಿ ಸಾಮಾಜಿಕ ಚಳವಳಿಯ ಚೌಕಟ್ಟು ವಿಫಲವಾಗುತ್ತದೆ. ಹೀಗೆ ಇಂತಹ ಹಲವು ವಿಷಯಗಳ ಸಂದರ್ಭಗಳಲ್ಲಿ ಈ ಹಿಂದಿನ ಅಧ್ಯಯನಗಳು ಸೃಷ್ಟಿಸಿದ ಗೊಂದಲಗಳನ್ನು ಪರಿಹರಿಸುವ ಉತ್ತಮ ಪ್ರಯತ್ನಗಳು ಇಲ್ಲಿ ನಡೆದಿವೆ. ಈ ಭಾಗದ ವಾದವನ್ನು ಹಿಡಿದಿಡುವ ಮುಂದಿನ ಉಲ್ಲೇಖವನ್ನು ನೋಡಿ, ‘ಇಂದು ವಚನಗಳಿಗೆ ತಮಗನಿಸಿದ ಅರ್ಥವನ್ನು ಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಮಹಿಳಾವಾದಿಗಳು, ದಲಿತ ಚಿಂತಕರು, ಜಾತ್ಯತೀತವಾದಿಗಳು, ಮುಂತಾದವರು ತಮ್ಮ ವಿಚಾರಗಳ ಹಿನ್ನೆಲೆಯಲ್ಲಿ ಅರ್ಥೈಸುತ್ತಿದ್ದಾರೆ. ಆದ್ದರಿಂದ ವಚನಗಳ ಸಂದರ್ಭದಲ್ಲಿ ಇಲ್ಲದ ಅರ್ಥಗಳು ಸೇರ್ಪಡೆಗೊಳ್ಳುತ್ತಿವೆ. ಆದರೆ ಷಟ್ಸ್ಥಲಗಳ ಹಿನ್ನೆಲೆಯಲ್ಲಿ ಅರ್ಥೈಸುವಾಗ ಈ ರೀತಿಯಾಗಿ ಇಲ್ಲದ ಅರ್ಥವನ್ನು ಹಚ್ಚುವ ಸ್ವಾತಂತ್ರ ಇರುವುದಿಲ್ಲ.’

  ಒಟ್ಟಾರೆಯಾಗಿ ಹೇಳುವುದಾದರೆ, ವಚನಸಾಹಿತ್ಯ ಮತ್ತು ವಚನಕಾರರನ್ನು ಅಧುನಿಕ ನಿರೂಪಣೆಗಳ ಅಡಿಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಓದುಗರಿಗೆ ಗೊಂದಲಗಳ ಹೊರತಾಗಿ ಹೆಚ್ಚೇನು ದಕ್ಕುತ್ತಿರಲಿಲ್ಲ ಎಂಬುದು ಸ್ಪಷ್ಟ.  ಆದರೆ, ವಚನಸಾಹಿತ್ಯದ ಕುರಿತ ಅಧುನಿಕ ಅಧ್ಯಯನಗಳ ಆಚೆಗೂ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಒಂದು ವೈಜ್ಞಾನಿಕ ನೆಲೆಗಟ್ಟನ್ನು ಹಾಕಿಕೊಡುವಲ್ಲಿ ಪ್ರಸ್ತುತ ಕೃತಿಯ ಕೊಡುಗೆ ಅಪಾರ. ವಚನಗಳ ಅಧ್ಯಯನದಲ್ಲಿ ಆಧುನಿಕರ ಪೂರ್ವಗ್ರಹಗಳನ್ನು ತೆರೆದಿಡುವಲ್ಲಿ ಯಶಸ್ವಿಯಾಗುವ ಕೃತಿ ಅಲ್ಲಿಗೆ ನಿಲ್ಲುವುದಿಲ್ಲ. ಬದಲಾಗಿ ವಚನ ಪರಂಪರೆಯನ್ನು ಅರ್ಥೈಸಲು ಹೊಸ ಮಾರ್ಗಗಳನ್ನು ತೋರಿಸುವ ಕಡೆಗೆ ಸಾಗುತ್ತದೆ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments