ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 8, 2015

4

ಹುಳಿಮಾವಿನ ಮರ: ಪಿ.ಲಂಕೇಶ್ ಅವರ ಆತ್ಮಕಥನ

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ

ಪಿ.ಲಂಕೇಶ್‘ಹುಳಿಮಾವಿನ ಮರ’ ಕನ್ನಡದ ಶ್ರೇಷ್ಟ ಲೇಖಕ ಹಾಗೂ ಪತ್ರಕರ್ತ ಪಿ.ಲಂಕೇಶ್ ಅವರ ಆತ್ಮಕಥನ. ಲಂಕೇಶ್ ಲೇಖಕರಾಗಿ ಮತ್ತು ಪತ್ರಕರ್ತರಾಗಿ ಕನ್ನಡಿಗರಿಗೆ ಚಿರಪರಿಚಿತರು. ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿಯೊಂದರ ರೈತಕುಟುಂಬದಲ್ಲಿ ಜನಿಸಿ ತನ್ನೊಳಗಿನ ಪ್ರತಿಭೆ ಮತ್ತು ಪ್ರಯತ್ನದಿಂದ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಹೆಸರು ಮಾಡಿದ ಪ್ರತಿಭೆ ಈ ಲಂಕೇಶ್. ಲಂಕೇಶರ ಆಸಕ್ತಿಯ ಕ್ಷೇತ್ರದ ಹರವು ಬಹುದೊಡ್ಡದು. ಬರವಣಿಗೆ, ಪತ್ರಿಕೋದ್ಯಮ, ನಾಟಕ, ಅಧ್ಯಾಪನ, ಕೃಷಿ, ಚಳವಳಿ,ಫೋಟೋಗ್ರಾಫಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಲೆದಾಡಿ ಕೊನೆಗೆ ತನ್ನ ಛಾಪನ್ನು ಮೂಡಿಸಿದ್ದು ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ. ಹತ್ತೊಂಬತ್ತು ವರ್ಷಗಳ ಕಾಲ ಅಧ್ಯಾಪಕರಾಗಿ ದುಡಿದು ವೃತ್ತಿಯ ಏಕತಾನತೆ ಬೇಸರ ಮೂಡಿಸಿದಾಗ ಮುಲಾಜಿಲ್ಲದೆ ರಾಜಿನಾಮೆಯಿತ್ತು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ವಿಚಿತ್ರ ವ್ಯಕ್ತಿತ್ವ ಪಿ.ಲಂಕೇಶ್ ಅವರದು. 1978 ರಿಂದ 1980ರ ವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿಯೂ ಕನ್ನಡ ಚಿತ್ರೋದ್ಯಮದ ಪಟ್ಟುಗಳು ಅರ್ಥವಾಗದೇ ಹೋದಾಗ ಲಂಕೇಶರ ಆಸಕ್ತಿ ಪತ್ರಿಕೋದ್ಯಮದತ್ತ ಹೊರಳುತ್ತದೆ. 1980 ರಲ್ಲಿ ‘ಲಂಕೇಶ್ ಪತ್ರಿಕೆ’ಯನ್ನು ಆರಂಭಿಸುವುದರೊಂದಿಗೆ ಲಂಕೇಶ್ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯದ ಬಹುದೊಡ್ಡ ಪಲ್ಲಟಕ್ಕೆ ಕಾರಣರಾಗುತ್ತಾರೆ. ಪತ್ರಿಕೋದ್ಯಮ ಎನ್ನುವುದು ರಾಜಕಾರಣಿಗಳ ಮತ್ತು ಧನಿಕರ ಸೊತ್ತು ಎಂದು ಅದುವರೆಗೂ ತಿಳಿದುಕೊಂಡಿದ್ದ ಜನಸಾಮಾನ್ಯರಿಗೆ ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಜನರ ಧ್ವನಿ ಎಂದು ಅರ್ಥಮಾಡಿಸುತ್ತಾರೆ. ಲಂಕೇಶ್ ಸಾಹಿತ್ಯ ಮತ್ತು ಸಿನಿಮಾಕ್ಕಿಂತ ಪತ್ರಿಕೆಯ ಮೂಲಕವೇ ಜನರಿಗೆ ಹೆಚ್ಚು ಹತ್ತಿರವಾದರು. ಬದುಕಿನ ಕೊನೆಯ ದಿನದವರೆಗೂ ಪತ್ರಿಕೋದ್ಯಮಕ್ಕೆ ನಿಷ್ಟರಾಗುಳಿದ ಲಂಕೇಶ್ ತಮ್ಮ ಪತ್ರಿಕೆಯನ್ನು ಕನ್ನಡದ ಜಾಣ-ಜಾಣೆಯರ ಪತ್ರಿಕೆಯಾಗಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದರು. ಪತ್ರಿಕಾ ಬರವಣಿಗೆಯಾಚೆಯೂ ಲಂಕೇಶ್ ಕಥೆ, ನಾಟಕ, ಕಾದಂಬರಿ, ಕವಿತೆ, ಗದ್ಯ, ಅನುವಾದದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಕನ್ನಡದ ಅನನ್ಯ ಬರಹಗಾರ. ಓದಿದ್ದು ಇಂಗ್ಲಿಷ್ ಸಾಹಿತ್ಯ, ಹತ್ತೊಂಬತ್ತು ವರ್ಷಗಳ ಕಾಲ ಪಾಠ ಮಾಡಿದ್ದು ಕೂಡ ಇಂಗ್ಲಿಷ್ ಸಾಹಿತ್ಯವನ್ನೇ ಆದರೆ ಬರೆದದ್ದು ಮಾತ್ರ ಕನ್ನಡದಲ್ಲಿ. ಲಂಕೇಶ್ ಅವರಂತೆ ಅನಂತಮೂರ್ತಿ, ಭೈರಪ್ಪ, ತೇಜಸ್ವಿ, ಚಂಪಾ, ಚಿತ್ತಾಲ ಇವರುಗಳೆಲ್ಲ ತಮ್ಮ ಅಧ್ಯಯನದ ವಿಷಯದಾಚೆಯೂ ಕನ್ನಡದಲ್ಲಿ ಶ್ರೇಷ್ಟ ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಲಂಕೇಶರ ಸಮಕಾಲೀನ ಬರಹಗಾರರು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡು ಬಂದ ಈ ಪ್ರವೃತ್ತಿ ಕನ್ನಡದ ಬರಹಗಾರರ ವಿಶಿಷ್ಟ ಗುಣದ ದ್ಯೋತಕವಾಗಿದೆ ಮತ್ತು ಅವರಲ್ಲಿನ ಈ ಗುಣ ಕನ್ನಡ ಸಾಹಿತ್ಯವನ್ನು ಸಾಕಷ್ಟು ಸಮೃದ್ಧಗೊಳಿಸಿತು.

ವಾಟೆ, ಸಸಿ, ಗಿಡ ಮತ್ತು ಮರ
ಪಿ. ಲಂಕೇಶ್ ಅವರ ಸಮಗ್ರ ಬದುಕಿನ ಕಥನ ಪುಸ್ತಕದಲ್ಲಿ ವಾಟೆ, ಸಸಿ, ಗಿಡ ಮತ್ತು ಮರ ಎನ್ನುವ ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಶಿವಮೊಗ್ಗೆಗೆ ಒಂಬತ್ತು ಮೈಲಿ ದೂರದ ಕೊನಗವಳ್ಳಿ ಎಂಬ ಸಣ್ಣ ಊರಿನ ರೈತ ಕುಟುಂಬದಲ್ಲಿ ಅಪ್ಪ ಅಮ್ಮನಿಗೆ ಐದನೆ ಮಗುವಾಗಿ ಜನಿಸುವುದರೊಂದಿಗೆ ಲಂಕೇಶರ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ. ಲಂಕೇಶ್ ಮೇಲೆ ಅಪ್ಪನಿಗಿಂತ ಹೆಚ್ಚು ಪ್ರಭಾವ ಬೀರಿದ್ದು ಜಗಳಗಂಟಿ ಹೆಂಗಸೆಂದೇ ಖ್ಯಾತಳಾದ ಅವ್ವ. ಗಂಡಸಿಗೆ ಸಮನಾಗಿ ಹೊಲದಲ್ಲಿ ದುಡಿಯುತ್ತ ಸಂಸಾರದ ಎಲ್ಲ ಹೊಣೆಯನ್ನು ಹೊತ್ತುಕೊಂಡ ಅವ್ವನ ಪಾತ್ರ ಅಚ್ಚಳಿಯದೆ ನೆನಪಿನಲ್ಲುಳಿದು ಮುಂದೆ ‘ಅವ್ವ’ ಕವಿತೆಗೂ ಮತ್ತು ‘ಅಕ್ಕ’ ಕಾದಂಬರಿಗೂ ಪ್ರೇರಣೆಯಾಯಿತು. ತಮ್ಮ ಆತ್ಮಕಥನದ ಪ್ರಾರಂಭದ ಪುಟಗಳಲ್ಲಿ ಲಂಕೇಶ್ ಮಲೆನಾಡಿನ ಬದುಕಿನ ಚಿತ್ರಣವನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಡುತ್ತಾರೆ. ಅಲ್ಲಿನ ಬೇಸಾಯ, ಜಾತ್ರೆ, ಸಾಮಾಜಿಕ ಬದುಕು, ಟೆಂಟ್‍ನಲ್ಲಿ ನೋಡಿದ ಸಿನಿಮಾ ಅನುಭವ,ಶಾಲೆಯ ವಾತಾವರಣ ಹೀಗೆ ತಾವು ಬಾಲ್ಯದಲ್ಲಿ ಕಂಡು ಅನುಭವಿಸಿದ್ದನ್ನು ಲಂಕೇಶ್ ಇಲ್ಲಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿರುವರು.

ಶಿವಮೊಗ್ಗೆಯಲ್ಲಿ ಓದುತ್ತಿರುವಾಗಲೆ ಸಾಹಿತಿಗಳ ಸಂಪರ್ಕಕ್ಕೆ ಬಂದು ಲಂಕೇಶರ ಬದುಕು ಮಹತ್ವದ ತಿರುವು ಪಡೆದುಕೊಳ್ಳುತ್ತದೆ. ಅನಕೃ, ಶಿವರಾಮ ಕಾರಂತ, ಕೋ.ಚೆನ್ನಬಸ್ಸಪ್ಪ, ಜಿ.ಎಸ್.ಶಿವರುದ್ರಪ್ಪ, ನಿರಂಜನ, ದ.ರಾ.ಬೇಂದ್ರೆ ಇವರುಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೇರವಾಗಿ ನೋಡುವ ಅವಕಾಶ ಒದಗಿಬರುತ್ತದೆ. ಡಾಕ್ಟರಾಗಬೇಕೆಂದು ಬಯಸಿದ್ದ ಲಂಕೇಶ್ ಮೆಡಿಕಲ್ ಸೀಟು ಸಿಗದೆ ನಿರಾಶರಾದಾಗ ಶಿವರುದ್ರಪ್ಪನವರ ಸಲಹೆ ಮೇರೆಗೆ ಇಂಗ್ಲಿಷ್ ಆನರ್ಸ್‍ಗೆ ಸೇರಿಕೊಳ್ಳುತ್ತಾರೆ. ‘ಕನ್ನಡದಲ್ಲಿ ವಿಮರ್ಶಕರು ಕಮ್ಮಿ. ಇಂಗ್ಲಿಷ್ ಆನರ್ಸ್‍ಗೆ ಸೇರಿದರೆ ಸಾಹಿತ್ಯದ ಜೊತೆಗೆ ವಿಮರ್ಶೆಯ ಮರ್ಮ ತಿಳಿಯುತ್ತದೆ’ ಎಂದ ಜಿಎಸ್ಸೆಸ್ ಅವರ ಮಾತುಗಳೇ ಪ್ರೇರಣೆಯಾಗಿ ಲಂಕೇಶ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಆನರ್ಸನ್ನು ಆಯ್ದುಕೊಳ್ಳುತ್ತಾರೆ. ಇಂಗ್ಲಿಷ್ ಸಾಹಿತ್ಯದಿಂದ ಎಲಿಯಟ್ಸ್,ಕಿಟ್ಸ್,ಬೋದಿಲೇರ್,ಲೋರ್ಕಾ,ನೆರೂಡ್,ಫಾಸ್ಟರ್ ನಾಕ್, ಹೆಮಿಂಗ್ವೆ ಇವರುಗಳನ್ನೆಲ್ಲ ಕನ್ನಡದ ಓದುಗರಿಗೆ ಪರಿಚಯಿಸುತ್ತಾರೆ.ಈ ವಿಷಯದಲ್ಲಿ ಕನ್ನಡದ ಓದುಗರು ಜಿಎಸ್ಸೆಸ್ ಅವರಿಗೆ ನಿಜಕ್ಕೂ ಋಣಿಗಳಾಗಿರಬೇಕು.ವೈದ್ಯರಾಗಿ ಎಲ್ಲೋ ಕಳೆದು ಹೋಗುತ್ತಿದ್ದ ಲಂಕೇಶ್ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಪಾಶ್ಚಿಮಾತ್ಯ ಸಾಹಿತ್ಯದ ಓದಿನ ಅನುಭವದಿಂದ ಕನ್ನಡಕ್ಕೆ ಅತ್ಯುತ್ತಮ ಕೃತಿಗಳನ್ನು ಕೊಡುಗೆಯಾಗಿ ನೀಡಿದರು.

ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕರಾಗಿ ಲಂಕೇಶ್ ಅವರದು ಅಧ್ಯಾಪನ ಕ್ಷೇತ್ರದಲ್ಲಿ 19 ವರ್ಷಗಳ ಕೃಷಿ. ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು,ಬೆಂಗಳೂರಿನ ಸೆಂಟ್ರಲ್ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ. ಅಧ್ಯಾಪಕ ವೃತ್ತಿಯಲ್ಲಿ ತಾನು ಯಶಸ್ಸು ಸಾಧಿಸಲಿಲ್ಲ ಎನ್ನುವ ಅವರೊಳಗಿನ ಪ್ರಾಮಾಣಿಕ ತೊಳಲಾಟ ವೃತ್ತಿ ಬದುಕಿನುದ್ದಕ್ಕೂ ಲಂಕೇಶರನ್ನು ಕಾಡುತ್ತದೆ. ಕ್ಲಾಸಿಗೆ ಹೋಗಿ ಪಾಠ ಮಾಡುವುದೇ ಕಷ್ಟವೆನಿಸುತ್ತಿತ್ತು, ಪಾಠ ಮಾಡುವುದಕ್ಕೆ ವಿಚಿತ್ರ ರೀತಿಯಲ್ಲಿ ಕಂಪಿಸುತ್ತಿದ್ದೆ, ನಾನು ಒಳ್ಳೆಯ ಅಧ್ಯಾಪಕನಾಗಬೇಕೆಂದು ಭ್ರಮೆ ಪಡೆದಷ್ಟೂ ಅನೇಕ ವಿದ್ಯಾರ್ಥಿಗಳು ನನ್ನನ್ನು ಇಷ್ಟಪಡದಿರುವುದು ನನಗೆ ಗೊತ್ತಿತ್ತು.ಈ ವಾಕ್ಯಗಳು ಲಂಕೇಶರ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಪುರಾವೆ ಒದಗಿಸುತ್ತವೆ. ಒಂದೆಡೆ ಸಹ್ಯಾದ್ರಿ ಮತ್ತು ಸೆಂಟ್ರಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂಘರ್ಷ ಇನ್ನೊಂದೆಡೆ ಅಧ್ಯಾಪಕ ವೃತ್ತಿ ಇಕ್ಕಟ್ಟಾದ ಓಣಿಯಂತೆ ವ್ಯಕ್ತಿತ್ವವನ್ನೇ ನಾಶಪಡಿಸಬಲ್ಲ ಮಾತಿನ ಕಸುಬಿನಂತೆ ಕಾಣಿಸುತ್ತದೆ ಎನ್ನುವ ಪ್ರಕ್ಷುಬ್ಧತೆ. ಒಟ್ಟಿನಲ್ಲಿ ದಿಗಿಲು, ಕಿಳರಿಮೆ, ಒತ್ತಡ, ಭ್ರಮೆ, ಹತಾಶೆ, ಹುಂಬುತನದಲ್ಲೇ ಅಧ್ಯಾಪನ ವೃತ್ತಿಯ ದಿನಗಳು ಕಳೆದುಹೋಗುತ್ತವೆ. ಲಂಕೇಶ್ ನಾಡಿನ ಅಸಂಖ್ಯಾತ ಕನ್ನಡಿಗರಿಗೆ ‘ಮೇಷ್ಟ್ರು’ ಎಂದೇ ಪರಿಚಿತರಾದರೂ ತಮ್ಮ ಉಪನ್ಯಾಸಕ ವೃತ್ತಿಯಲ್ಲಿ ಅವರು ಯಶಸ್ಸು ಮತ್ತು ಜನಪ್ರಿಯತೆ ಕಾಣದಿರುವುದು ಮಾತ್ರ ವಿಪರ್ಯಾಸದ ಸಂಗತಿ. ಲಂಕೇಶ್ ತಮ್ಮ ಸಹ ಅಧ್ಯಾಪಕರುಗಳ ಕನಸು, ಭ್ರಮೆ, ಕಾಮ, ಆಕರ್ಷಣೆಯನ್ನು ತೆರೆದಿಡುವುದು ಪುಸ್ತಕದೊಳಗಿನ ಕೌತುಕದ ಸಂಗತಿಗಳಲ್ಲೊಂದು.ಅಧ್ಯಾಪಕರು ಹುಡುಗರಿಗಿಂತಲೂ ಹೆಚ್ಚಾಗಿ ತಮ್ಮ ವಿದ್ಯಾರ್ಥಿನಿಯರ ಕನಸು ಕಾಣುತ್ತಾರೆ ಎಂದು ಹೇಳುವ ಲಂಕೇಶ್ ಅದಕ್ಕೆ ಉದಾಹರಣೆಗಳನ್ನೂ ಕೊಡುತ್ತಾರೆ. ಜೊತೆಗೆ ಅಧ್ಯಾಪಕನಾಗಿ ತಾನು ಸಹ ಅಂಥದ್ದೊಂದು ಭ್ರಮೆ, ಕಾಮ ಮತ್ತು ಆಕರ್ಷಣೆಗೆ ಒಳಗಾಗಿದ್ದನ್ನು ಹೇಳಲು ಅವರು ಹಿಂಜರಿಯುವುದಿಲ್ಲ.ಲೇಖಕನ ಇಂಥದ್ದೊಂದು ಪ್ರಾಮಾಣಿಕ ಗುಣದಿಂದಲೇ ಪುಸ್ತಕದ ಓದು ನಮಗೆ ಹೆಚ್ಚು ಆಪ್ತವಾಗುತ್ತದೆ. ಬೇರೆಯವರ ಗುಣಾವಗುಣಗಳನ್ನು ಪಟ್ಟಿ ಮಾಡುವಷ್ಟೇ ನಮ್ಮೊಳಗಿನ ಗುಣಾವಗುಣಗಳನ್ನು ತೆರೆದಿಡುವ ಎದೆಗಾರಿಕೆ ಲೇಖಕನಿಗಿರಬೇಕು ಎನ್ನುವುದನ್ನು ಲಂಕೇಶ್ ತಮ್ಮ ಆತ್ಮಕಥೆಯ ಬರವಣಿಗೆಯಲ್ಲಿ ತೋರಿಸಿಕೊಟ್ಟಿರುವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದ ಘಳಿಗೆ ಲಂಕೇಶ್,ಕುಮಾರಿ ಎನ್ನುವ ವಿದ್ಯಾರ್ಥಿನಿಯನ್ನು ಬಹುವಾಗಿ ಹಚ್ಚಿಕೊಳ್ಳುತ್ತಾರೆ. ತಮ್ಮ ಪತ್ನಿಯಲ್ಲಿನ ವೈಚಾರಿಕತೆಯ ಕೊರತೆಯನ್ನು ಈ ಕುಮಾರಿಯಲ್ಲಿ ತುಂಬಿಕೊಳ್ಳುತ್ತಿರುವ ಭ್ರಮೆ ಅವರದು. ಕುಮಾರಿಯನ್ನು ಉತ್ಕಟವಾಗಿ ಪ್ರೀತಿಸಲು ಪ್ರಾರಂಭಿಸಿದ ಹೊತ್ತು ಆಕೆಗೊಬ್ಬ ಗೆಳೆಯನಿರುವ ವಿಷಯ ತಿಳಿದು ಒಂದು ರೀತಿಯ ಸೋಲು, ಷಚಿಡತನ ಏನೂ ಮಾಡಲಾಗದಂಥ ಅಸಹಾಯಕತೆ ಅವರನ್ನು ಕಾಡುತ್ತದೆ. ಕೊನೆಗೆ ಅದು ಪ್ರೇಮವೂ ಅಲ್ಲ ಹಾಗೂ ವ್ಯಭಿಚಾರವೂ ಆಗಿರದೆ ಅದೊಂದು ಬಗೆಯ ಆತ್ಮಘಾತಕ ದುಗುಡದಂತೆ ಇತ್ತು ಎಂದು ವಿವರಿಸುತ್ತಾರೆ. ಈ ನಡುವೆ ಸಿನಿಮಾ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಲಂಕೇಶ್ ಅವರಿಗೆ ಒಂದು ಹಂತದಲ್ಲಿ ಉಪನ್ಯಾಸಕ ವೃತ್ತಿಗೆ ತಮ್ಮಿಂದ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವು ಕಾಡಲಾರಂಭಿಸುತ್ತದೆ. ಕೊನೆಗೆ 1978 ರಲ್ಲಿ ತಾವು ಹತ್ತೊಂಬತ್ತು ವರ್ಷಗಳ ಕಾಲ ನಿರ್ವಹಿಸಿಕೊಂಡು ಬಂದ ವೃತ್ತಿಗೆ ರಾಜಿನಾಮೆ ನೀಡುವುದರೊಂದಿಗೆ ತಮ್ಮನ್ನು ಕಾಡುತ್ತಿದ್ದ ನೋವಿನಿಂದ ಹೊರಬರುತ್ತಾರೆ.

ಲಂಕೇಶ್ ಮತ್ತು ಸಿನಿಮಾ
1969 ರಲ್ಲಿ ಲಂಕೇಶ್ ‘ಸಂಸ್ಕಾರ’ ಸಿನಿಮಾದಲ್ಲಿ ಅಭಿನಯಿಸುವುದರೊಂದಿಗೆ ಸಿನಿಮಾದೊಂದಿಗಿನ ಅವರ ನಂಟು ಪ್ರಾರಂಭವಾಗುತ್ತದೆ. ಯು.ಆರ್.ಅನಂತಮೂರ್ತಿ ಅವರ ‘ಸಂಸ್ಕಾರ’ ಕಾದಂಬರಿಯನ್ನು ಸಿನಿಮಾ ಮಾಡಲು ಕೈಗೆತ್ತಿಕೊಂಡಾಗ ಲಂಕೇಶ್ ನಾರಣಪ್ಪನ ಪಾತ್ರಕ್ಕೆ ಆಯ್ಕೆಯಾಗುತ್ತಾರೆ. ‘ಸಂಸ್ಕಾರ ನನ್ನ ಆಳದಲ್ಲಿ ಟಿಪ್ಪಣಿಗಳಾಗಿ, ಹಲವಾರು ಶಾಟ್‍ಗಳ ತುಣುಕುಗಳಾಗಿ ನನ್ನಲ್ಲಿ ನಿಂತು ಹೋಯಿತು. ಆದರೆ ನನ್ನ ಅಂತರಾಳ ಏನನ್ನೂ ಸೃಷ್ಟಿಸಲಾಗದ ಹತಾಶೆಯಿಂದ ಅಲ್ಲೋಲಕಲ್ಲೋಲವಾಗಿತ್ತು’ ಎಂದೆನ್ನುವ ಲಂಕೇಶ್ ಮುಂದೆ ‘ಪಲ್ಲವಿ’, ‘ಅನುರೂಪ’, ‘ಖಡವಿದಕೋ ಮಾಂಸವಿದಕೋ’, ‘ಎಲ್ಲಿಂದಲೋ ಬಂದವರು’ ಸಿನಿಮಾಗಳ ಮೂಲಕ ತಮ್ಮೊಳಗಿನ ಹತಾಶೆ ಮತ್ತು ಅಲ್ಲೋಲಕಲ್ಲೋಲಗಳನ್ನು ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಲಂಕೇಶ್ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟಾದರೂ ಆವರ ಆತ್ಮಕಥೆ ಜಗತ್ತಿನ ಶ್ರೇಷ್ಟ ಸಿನಿಮಾಗಳನ್ನು ಓದುಗರಿಗೆ ಪರಿಚಯಿಸುತ್ತದೆ. ಸಿನಿಮಾ ಮೇಲಿನ ಉತ್ಕಟ ಪ್ರೀತಿ ಒಮ್ಮೆ ಅಡಿಗರನ್ನು ಸಿನಿಮಾ ತೋರಿಸುವಂತೆ ಪ್ರೇರೇಪಿಸುತ್ತದೆ. ಡೇವಿಡ್ ಲೀನ್ ನಿರ್ದೇಶನದ ‘ಬ್ರಿಜ್ ಆನ್ ದಿ ರಿವರ್ ಕ್ವೌಯ್’ ಸಿನಿಮಾ ವೀಕ್ಷಿಸಿದ ಅಡಿಗರ ನಿರಸ ಪ್ರತಿಕ್ರಿಯೆುಯಿಂದ ಲಂಕೇಶರಿಗೆ ಭಾರಿ ನಿರಾಸೆ ಉಂಟಾಗುತ್ತದೆ. ಅಡಿಗರು ಸಿನಿಮಾ ವಿಚಾರದಲ್ಲಿ ನಿಜಕ್ಕೂ ಅನಕ್ಷರಸ್ಥರು ಎನ್ನುವ ಅಭಿಪ್ರಾಯಕ್ಕೆ ಬರುತ್ತಾರೆ.

‘ಸೆವೆನ್ ಬ್ರೈಡ್ಸ್ ಫಾರ್ ಸೆವೆನ್ ಬ್ರದರ್ಸ್’, ‘ಬ್ರಿಜ್ ಆನ್ ದಿ ರಿವರ್ ಕ್ವೌಯ್’, ‘ಬ್ಲೂ ಏಜಂಲ್’, ‘ವೈಲ್ಡ್ ಸ್ಟ್ರಾಬೆರಿಸ್’, ‘ಪರ್ಸೋನಾ’ ಸಿನಿಮಾಗಳನ್ನು ಕುರಿತು ಬರೆಯುವಾಗ ಒಂದು ರೀತಿಯ ಉತ್ಕಟ ಪ್ರೀತಿ ಅವರಲ್ಲಿ ಕಾಣುತ್ತದೆ. ಮಾನವನ ಮೂಲಭೂತ ದ್ವಂದ್ವ ಮತ್ತು ಅಸಹಾಯಕತೆಗೆ ಕನ್ನಡಿ ಹಿಡಿಯುವ ಬರ್ಗಮನ್‍ನ ‘ಪರ್ಸೋನಾ’ ಸಿನಿಮಾ ಒಂದರ್ಥದಲಿ ಲಂಕೇಶರ ಬದುಕಿನ ದ್ವಂದ್ವ, ತಲ್ಲಣ, ಅಸಹಾಯಕತೆಗಳ ಒಳನೋಟವಾಗಿ ಕಾಣಿಸುತ್ತದೆ. ಸಿನಿಮಾ ಮಾಡುವುದು ನೆರಳು ಮತ್ತು ಬೆಳಕನು ಬೆರೆಸಿ, ನೋಡುವುದು ಕತ್ತಲ ಕೋಣೆಯಲ್ಲಿ ಎನ್ನುವ ಲಂಕೇಶರಿಗೆ ಸಿನಿಮಾ ಬದುಕಿನ ವಾಸ್ತವಿಕತೆಯ ತಳಹದಿಯ ಮೇಲೆ ಎದ್ದು ನಿಲ್ಲಬೇಕೆನ್ನುವ ಅರಿವಿತ್ತು. ನಿರ್ದೇಶಕ ಮನುಷ್ಯನ ಅನಿರೀಕ್ಷಿತ ಪದರುಗಳಿಗೆ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ ಎನ್ನುವುದರಲ್ಲಿ ಅವರಿಗೆ ಬಲವಾದ ನಂಬಿಕೆಯಿತ್ತು. ಈ ನಂಬಿಕೆಯ ಕಾರಣದಿಂದಲೇ ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರುನಂತಹ ಬದುಕಿಗೆ ಹತ್ತಿರವಾದ ಮತ್ತು ಫ್ಯಾಂಟಸಿಯಿಂದ ಮುಕ್ತವಾದ ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು.

ಲಂಕೇಶ್ ಈ ಸಿನಿಮಾ ಪ್ರಪಂಚವನ್ನು ತೀರ ವ್ಯವಹಾರಿಕ ದೃಷ್ಟಿಯಿಂದ ನೋಡುವಲ್ಲಿ ವಿಫಲರಾದ ಕಾರಣ ಅವರು ಸಿನಿಮಾ ನಿರ್ದೇಶಕರಾಗಿ ಯಶಸ್ಸು ಪಡೆಯಲು ಸಾಧ್ಯವಾಗದೇ ಹೋಯಿತು. ಅವರ ಸಿನಿಮಾಗಳು ವಿಮರ್ಶಕರ ಗಮನ ಸೆಳೆದರೂ ಗಲ್ಲಾಪೆಟ್ಟಿಗೆಯನ್ನು ತುಂಬುವಲ್ಲಿ ವಿಫಲವಾದವು.ವ್ಯವಹಾರ ಜ್ಞಾನದ ಕೊರತೆಯಿಂದಾಗಿ ಲಂಕೇಶ್ ತಮ್ಮ ಸಿನಿಮಾಗಳ ನಿರ್ಮಾಣದಿಂದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು. ಈ ಆರ್ಥಿಕ ನಷ್ಟದ ನಡುವೆಯೂ ‘ಪಲ್ಲವಿ’ ಸಿನಿಮಾಕ್ಕೆ ದೊರೆತ ರಾಷ್ಟ್ರ ಪ್ರಶಸ್ತಿ ಮತ್ತು ಉಳಿದ ಸಿನಿಮಾಗಳಿಗೆ ದಕ್ಕಿದ ರಾಜ್ಯಪ್ರಶಸ್ತಿ ಲಂಕೇಶರಿಗೆ ಒಂದಿಷ್ಟು ನೆಮ್ಮದಿ ತಂದುಕೊಟ್ಟವು. ಲಂಕೇಶ್ ಅದ್ಭುತ ಕಲಾವಿದನಲ್ಲದಿದ್ದರೂ ಅವರೊಳಗೊಬ್ಬ ಸೃಜನಶೀಲ ನಿರ್ದೇಶಕನಿದ್ದ. ಪಾಶ್ಚಾತ್ಯ ಸಿನಿಮಾಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿ ನೋಡುತ್ತಿದ್ದ ಲಂಕೇಶ್ ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾಗಳನ್ನು ಮಾಡುವ ಪ್ರತಿಭಾವಂತರಾಗಿದ್ದರು. ಆದರೆ ಕನ್ನಡ ಚಿತ್ರರಂಗ ಮಾತ್ರ ಈ ನಿರ್ದೇಶಕನಲ್ಲಿದ್ದ ಪ್ರತಿಭೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳದೆಹೋಯಿತು.

ಲಂಕೇಶ್ ಪತ್ರಿಕೆ
‘ಲಂಕೇಶ್ ಪತ್ರಿಕೆ’ ಯನ್ನು ಆರಂಭಿಸಿದ ಅವಧಿ ಲಂಕೇಶರ ಬದುಕಿನ ಮುಖ್ಯಕಾಲಘಟ್ಟವದು. ಲಂಕೇಶ್ ಪತ್ರಿಕೋದ್ಯಮದ ವಿದ್ಯಾರ್ಥಿಯಲ್ಲ. ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಫ್ರೀಲ್ಯಾನ್ಸ್ ಪತ್ರಕರ್ತನಾಗಿ ತಮ್ಮ ಪತ್ರಿಕಾ ಬರವಣಿಗೆಯನ್ನು ಆರಂಭಿಸುವ ಲಂಕೇಶರಿಗೆ ಅನೇಕ ಎಡರುತೊಡರುಗಳು ಎದುರಾಗುತ್ತವೆ. ಸಂಪಾದಕರ ಸಣ್ಣತನ, ಆಡಳಿತ ಮಂಡಳಿಯ ಅಸಹಕಾರದಿಂದ ಬೇಸತ್ತು ತಾವೇ ಒಂದು ಪತ್ರಿಕೆಯನ್ನು ತರಲು ಯೋಚಿಸುತ್ತಾರೆ. ಪ್ರಜಾವಾಣಿ ದಿನಪತ್ರಿಕೆಯಿಂದ ಹೊರಬಂದ ಕ್ಷಣ ಅವರ ಈ ನಿರ್ಧಾರ ಗಟ್ಟಿಯಾಗುತ್ತದೆ. ತಾವು ಹೊರತರುವ ಪತ್ರಿಕೆಯನ್ನು ಶ್ರೀಮಂತ ಯಜಮಾನ,ಸಂಪಾದಕ ಮತ್ತು ಜಾಹಿರಾತುದಾರ ಎನ್ನುವ ಒಕ್ಕೂಟದಿಂದ ಮುಕ್ತವಾಗಿಸಬೇಕೆನ್ನುವ ಆಕಾಂಕ್ಷೆ ಲಂಕೇಶ್ ಅವರದಾಗಿತ್ತು. ಅವರ ಈ ಆಕಾಂಕ್ಷೆಯಂತೆ ಯಾವುದೇ ಬಂಡವಾಳವಿಲ್ಲದೆ 1980 ಜುಲೈ 6 ನೇ ತಾರೀಖು ‘ಲಂಕೇಶ್ ಪತ್ರಿಕೆ’ ಜನ್ಮತಳೆಯಿತು.ಪತ್ರಿಕೆ ಲಂಕೇಶರೊಳಗಿನ ಆಳದ ದಿಗ್ಭ್ರಮೆಯ, ಅವರ ಪರಿಸರದ ಕಿರುದನಿಯ ಮತ್ತು ಇಡೀ ರಾಜ್ಯವನ್ನು ತುಂಬಿದ್ದ ಹತಾಶೆಯ ಪ್ರತಿಕವಾಗಿ ರೂಪುಗೊಳ್ಳತೊಡಗಿತು. ಪ್ರಾರಂಭದ ದಿನಗಳಲ್ಲಿ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಪಾಟೀಲ, ಡಿ.ಆರ್.ನಾಗರಾಜ, ಚಂದ್ರೇಗೌಡ, ಪುಂಡಲೀಕ್ ಶೇಟ್, ರವೀಂದ್ರ ರೇಷ್ಮೆ ಅವರಂಥ ಬರಹಗಾರರ ನೈತಿಕ ಬೆಂಬಲ ಪತ್ರಿಕೆಗೆ ದೊರೆತು ಮಿಂಚಿನ ವೇಗದಲ್ಲಿ ಪ್ರತಿಗಳು ಖರ್ಚಾಗತೊಡಗಿದವು. ಲಂಕೇಶ್ ಅವರೆ ಹೇಳಿಕೊಂಡಂತೆ ವಿಡಂಬನೆ, ಸ್ಮರಣೆ, ಭಾವುಕತೆ, ವೈಚಾರಿಕತೆ ಈ ಎಲ್ಲದರ ಮಿಶ್ರಣವಾದ ಪತ್ರಿಕೆ ರಾಜ್ಯದಲ್ಲಿ ವಿಚಿತ್ರ ಪರಿಣಾಮ ಬೀರಿತು. ಲಂಕೇಶ್ ಅವರ ‘ಟೀಕೆ-ಟಿಪ್ಪಣೆ’ ಮತ್ತು ‘ನೀಲು’ ಕವನ ಪತ್ರಿಕೆಯ ಬಹುಮುಖ್ಯ ಆಕರ್ಷಣೆಗಳಾಗಿ ಪತ್ರಿಕೆಯ ಜನಪ್ರಿಯತೆಯನ್ನು ಹೆಚ್ಚಿಸಿದವು. ಈ ನಡುವೆ ಮಹಿಳಾ ಬರಹಗಾರ್ತಿಯರಿಗೆ ಪತ್ರಿಕೆ ವೇದಿಕೆಯಾದದ್ದು, ರಾಜಕುಮಾರ ಮತ್ತು ವಾಟಾಳ ನಾಗರಾಜ ವಿರುದ್ಧ ಬರೆದು ಅವರ ಅಭಿಮಾನಿಗಳಿಂದಾದ ಹಲ್ಲೆ, 1983 ರ ಚುನಾವಣೆಯಲ್ಲಿ ಪತ್ರಿಕೆಯಿಂದಾದ ಬಹುದೊಡ್ಡ ರಾಜಕೀಯ ಬದಲಾವಣೆ, ಪತ್ರಿಕೆಗೆ ಎದುರಾದ ಆತಂಕದ ಘಳಿಗೆಗಳು ಈ ಎಲ್ಲ ಘಟನೆಗಳನ್ನು ಲಂಕೇಶ್ ತಮ್ಮ ಆತ್ಮಕಥೆಯಲ್ಲಿ ಮನೋಜ್ಞವಾಗಿ ಚಿತ್ರಿಸಿರುವರು.

ಅಧ್ಯಾಪಕನಾಗಿ ಮತ್ತು ಸಿನಿಮಾ ನಿರ್ದೇಶಕನಾಗಿ ವಿಫಲರಾದ ಲಂಕೇಶರಿಗೆ ‘ಪತ್ರಿಕೆ’ಯಿಂದ ಹಣ ಮತ್ತು ಹೆಸರು ಹೇರಳವಾಗಿ ಲಭಿಸಿತು. 1989 ರ ಹೊತ್ತಿಗೆ ಲಂಕೇಶ್ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಇದೇ ಅವಧಿಯಲ್ಲಿ ತಮ್ಮ ಆತ್ಮಾವಲೋಕನಕ್ಕಿಳಿಯುವ ಲಂಕೇಶ್ ಮಹಾದುರಹಂಕಾರಿಯೂ, ಅಧಿಕಾರದ ಆಸೆಯುಳ್ಳವನೂ ಆಗುವ ಎಲ್ಲ ಅಪಾಯಗಳಿಂದ ತಪ್ಪಿಸಿಕೊಳ್ಳಲು ನನ್ನ ಕತೆಗಳು ನನಗೆ ನೆರವಾದವು ಎಂದು ಹೇಳಿಕೊಳ್ಳುತ್ತಾರೆ. ಸಾರ್ವಜನಿಕ ಜೀವನವನ್ನೇ ತನ್ನ ವೈಯಕ್ತಿಕ ಜೀವನವನ್ನಾಗಿ ಮಾಡಿಕೊಳ್ಳುವವನಿಗೆ ತನ್ನ ಸ್ವಂತದ ಇಷ್ಟ, ಹವ್ಯಾಸ, ಆನಂದಗಳೇ ಇರುವುದಿಲ್ಲ ಎನ್ನುವ ನಂಬಿಕೆಯಿಂದ ತೋಟ ಮಾಡುವುದು, ರೇಸ್‍ಗೆ ಹೋಗುವುದು, ಇಸ್ಪಿಟ್ ಆಡುವ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಲ್ಲಿ ಲಂಕೇಶ್‍ರ ವ್ಯಕ್ತಿತ್ವ ಅನೇಕ ವ್ಶೆರುಧ್ಯಗಳ ಸಮ್ಮಿಶ್ರಣವಾಗಿ ಗೋಚರಿಸಿದರೂ ಅವರೊಳಗಿನ ಈ ಎಲ್ಲ ವೈರುಧ್ಯಗಳೇ ನಮಗೆ ಪಾಠವಾಗಿಯೂ ಮತ್ತು ಆದರ್ಶವಾಗಿಯೂ ಕಾಣಿಸುತ್ತವೆ.

ತಮ್ಮೊಳಗಿನ ಕಾಮ ಮತ್ತು ಲೈಂಗಿಕ ಬಯಕೆಯನ್ನು ಕುರಿತು ಬರೆಯುವಾಗಲೂ ಲಂಕೇಶ್ ಅವರಲ್ಲಿ ಯಾವುದೇ ಹಿಂಜರಿಕೆ ಇಲ್ಲದಿರುವುದು ಈ ಆತ್ಮಕಥೆಯಲ್ಲಿ ಮೆಚ್ಚುಗೆಯಾಗುವ ಬಹುಮುಖ್ಯ ವಿಷಯಗಳಲ್ಲೊಂದು. ಲಂಕೇಶ್ ತಮ್ಮ ಆತ್ಮಕಥೆಯಲ್ಲಿ ತಮ್ಮನ್ನು ತಾವು ಉದಾತ್ತ ಚಿಂತಕನಂತೆಯೋ, ಶ್ರೇಷ್ಟ ಬರಹಗಾರನಂತೆಯೋ ಇಲ್ಲವೆ ಬಹುಮುಖಿ ವ್ಯಕ್ತಿತ್ವದಂತೆ ಚಿತ್ರಿಸಿಕೊಂಡಿಲ್ಲ. ತಮ್ಮ ಬಗ್ಗೆ ಬರೆದುಕೊಳ್ಳುವಾಗ ಯಾವ ಸೋಗಲಾಡಿತನವಾಗಲಿ ಅಥವಾ ಮುಖವಾಡವಾಗಲಿ ಲಂಕೇಶ್ ಧರಿಸಿಕೊಂಡಿಲ್ಲ. ಕಾಮ, ಹತಾಶೆ, ದಿಗಿಲು, ಕೀಳರಿಮೆ, ಅತೃಪ್ತಿಗಳಿರುವ ಒಬ್ಬ ಸಾಧಾರಣ ಮನುಷ್ಯನಾಗಿ ಲಂಕೇಶ್ ತಮ್ಮನ್ನು ತಾವು ಕಂಡುಕೊಂಡಿರುವರು. ಚಿಕ್ಕ ವಯಸ್ಸಿನಲ್ಲಿ ಗದ್ದೆಯಲ್ಲಿ ನಿಂಗಿಯನ್ನು ನೆಲಕ್ಕೆ ಕೆಡವಿ ಅನುಭವಿಸಿದ ಲೈಂಗಿಕ ಮುಖಭಂಗ, ರಂಗಿಯನ್ನು ಮುಟ್ಟಲು ಹೋಗಿ ಬೈಯಿಸಿಕೊಂಡಿದ್ದು, ಸಂಸ್ಕಾರ ಚಿತ್ರಿಕರಣದ ವೇಳೆ ಸಹನಟಿಯನ್ನು ಸೇರುವ ಅವಕಾಶದಿಂದ ವಂಚಿತರಾದದ್ದು ಈ ಎಲ್ಲವನ್ನೂ ಲಂಕೇಶ್ ಆತ್ಮಕಥೆಯಲ್ಲಿ ಸಹಜವೆಂಬಂತೆ ಹೇಳಿಕೊಂಡಿರುವರು. ಈ ನಡುವೆ ಮದುವೆ, ಪತ್ನಿ ಇಂದಿರಾ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡದ್ದು, ಮಕ್ಕಳು ಇದೆಲ್ಲವನ್ನು ಕುರಿತು ಲಂಕೇಶ್ ಬರೆಯುತ್ತಾರೆ. ಪುಸ್ತಕದ ಅಲ್ಲಲ್ಲಿ ಅಪ್ಪ, ಅವ್ವ, ಅನಕೃ, ಕೆ.ವಿ.ಸುಬ್ಬಣ್ಣ, ಗೋಪಾಲಗೌಡರು, ಸ್ನೇಹಲತಾ ರೆಡ್ಡಿ, ಬಿ.ವಿ.ಕಾರಂತ, ಶ್ರೀಕೃಷ್ಣ ಆಲನಹಳ್ಳಿ, ಟಿ.ಎಸ್.ರಾಮಚಂದ್ರರಾವ, ದಿನಸುಡರ್ ಪತ್ರಿಕೆಯ ಮಣಿ, ಬಾಲಾಜಿ ನಾಯಕ್ ಇವರುಗಳ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿರುವರು.

ಕೆಲವೊಮ್ಮೆ ಆತ್ಮಕಥೆಗಳನ್ನು ಓದುವಾಗ ಆ ಪುಸ್ತಕಗಳ ವಿಷಯ ವಸ್ತು ಲೇಖಕನ ವೈಯಕ್ತಿಕ ಬದುಕಿನ ಜೊತೆಜೊತೆಗೆ ಆ ಕಾಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಅನೇಕ ಮಜಲುಗಳನ್ನು ಪರಿಚಯಿಸುತ್ತದೆ. ಸಾಮಾನ್ಯವಾಗಿ ಇದು ಆ ಆತ್ಮಕಥನದ ಕಥಾನಾಯಕ ಕಟ್ಟಿಕೊಂಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಅವಲಂಬಿಸಿರುತ್ತದೆ. ಕಲ್ಲು ಕರಗುವ ಸಮಯ, ಮುಸ್ಸಂಜೆಯ ಕಥಾ ಪ್ರಸಂಗ, ಅಕ್ಕ, ಸಂಕ್ರಾಂತಿಯಂತಹ ಶ್ರೇಷ್ಟ ಕೃತಿಗಳನ್ನು ಕೊಡುಗೆಯಾಗಿ ನೀಡಿದ ಪಿ.ಲಂಕೇಶ್ ತಮ್ಮ ಈ ಆತ್ಮಕಥೆಯಲ್ಲಿ ಅನೇಕ ಪಾಶ್ಚಿಮಾತ್ಯ ಬರಹಗಾರರನ್ನು ಕುರಿತು ಬರೆಯುತ್ತಾರೆ. ಕನ್ನಡದ ಈ ಕೃತಿ ಓದುತ್ತಿರುವ ಘಳಿಗೆ ನಮಗೆ ಎಲಿಯಟ್ಸ್,ಕಿಟ್ಸ್, ಬೋದಿಲೇರ್, ನೆರೂಡ್, ಹೆಮಿಂಗ್ವೆ ಪರಿಚಿತರಾಗುತ್ತಾರೆ. ಬೋದಿಲೇರನ ರಸಿಕ ಜೀವನ, ಹತ್ತಾರು ಕಾಯಿಲೆಗಳು, ನೋವುಗಳು, ಪ್ರಶಸ್ತಿ-ಸ್ಥಾನಮಾನ-ಮನ್ನಣೆ ಎನ್ನುವುದನ್ನೂ ತಿರಸ್ಕರಿಸಿದ ಆತನ ಬದುಕಿನ ಸಾರ್ಥಕತೆ ಈ ಎಲ್ಲ ಲಂಕೇಶರ ಬರಹಗಳಿಂದಲೇ ನಮ್ಮ ಅರಿವಿನ ವ್ಯಾಪ್ತಿಗೆ ಬರುತ್ತವೆ. ಬದುಕಿನ ಕೊನೆಯ ದಿನಗಳಲ್ಲಿ ಕಾಣಿಸಿಕೊಳ್ಳುವ ದೈಹಿಕ ತೊಂದರೆಗಳು ಲಂಕೇಶ್ ಅವರನ್ನು ಸಹ ಬೋದಿಲೇರ್‍ನಂತೆ ಆತ್ಮಾವಲೋಕನಕ್ಕೆ ಇಳಿಸುತ್ತವೆ. ಅಂತೆಯೇ ‘ನನ್ನ ಗಾಢ ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತಿದ್ದಾಗ ಈ ಮುತ್ಸದ್ದಿತನ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿಯೂ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆು ಅನ್ನಿಸತೊಡಗಿತು’ ಎನ್ನುವ ಆತ್ಮಾವಲೋಕನದ ಸಾಲುಗಳೊಂದಿಗೆ ಲಂಕೇಶರ ಆತ್ಮಕಥೆ ಕೊನೆಗೊಳ್ಳುತ್ತದೆ.

ಚಿತ್ರಕೃಪೆ : ದಿ.ಹಿಂದೂ

4 ಟಿಪ್ಪಣಿಗಳು Post a comment
  1. ಆಕ್ಟೋ 8 2015

    ವಿಮರ್ಶೆ ಪುಸ್ತಕದ ಒಳ್ಳೆಯ ಅಂಶಗಳನ್ನು ಯಶಸ್ವಿಯಾಗಿ ಓದುಗರಿಗೆ ಎತ್ತಿ ತೋರಿಸಿದೆ. ಧನ್ಯವಾದಗಳು. ಒಳ್ಳೆಯ ಲೇಖನ.

    ಉತ್ತರ
  2. Rajkumar V.Kulkarni
    ಆಕ್ಟೋ 8 2015

    ಲೇಖನದಲ್ಲಿ ಒಂದು ಕಡೆ ‘ಪಚಿಡತನ’ ಎಂದಿದೆ ಆದರೆ ಅದನ್ನು ‘ಷಂಡತನ’ ಎಂದು ಓದಿಕೊಳ್ಳಬೇಕು ಮತ್ತು ಈ ಪದವನ್ನು ಲಂಕೇಶ್ ಅವರ ಅತ್ಮಕಥೆಯ ಪುಸ್ತಕದಿಂದಲೇ ತೆಗೆದುಕೊಳ್ಳಲಾಗಿದೆ. ಓದುಗರು ಅನ್ಯಥಾ ಭಾವಿಸಬಾರದೆಂದು ಈ ವಿವರಣೆ.

    ಉತ್ತರ
  3. ಗಂಗಾಧರ್
    ಫೆಬ್ರ 14 2018

    ಲಂಕೇಶರ ಆತ್ಮಕಥನದ ಮುಖ್ಯಾಂಶಗಳನ್ನು ಬಿಡದೆ,ಉತ್ತಮವಾಗಿ ಓದಿಸಿಕೊಂಡು ಹೋಗುವ ಲೇಖನ ಬರೆದಿರುವುದಕ್ಕೆ ಧನ್ಯವಾದಗಳು ಸರ್.ನನಗೆ ಇದರಿಂದ ಪ್ರಯೋಜನ ವಾಯಿತು.

    ಉತ್ತರ
  4. ವರದರಾಜುಶಿವಪುರ
    ಡಿಸೆ 12 2019

    ಒಬ್ಬ ಲೇಖಕನ ಪರಿಪೂರ್ಣ ಜೀವನದ ಸಾರ್ಥಕತೆಯನ್ನು ಹುಳಿಮಾವಿನ ಮರ ಆತ್ಮಕಥೆಯ ಮೂಲಕ ಲಂಕೇಶ್ ರು ತೋರಿಸಿಕೊಟ್ಟಿದ್ದಾರೆ ಇದೊಂದು ಮುಚ್ಚುಮರೆಯಿಲ್ಲದ ವ್ಯಕ್ತಿತ್ವದ ಕಥೆ ಎಂದೆ ಹೇಳ ಬಹುದು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments