ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 10, 2015

ಮಂಡೆ ಮೊಸರಾದ ಕಥೆ!

‍ನಿಲುಮೆ ಮೂಲಕ

– ತೇಜಸ್ ಡೋಂಗ್ರೆ,ಚಿಕ್ಕಮಗಳೂರು

ಮಂಡೆ ಮೊಸರುಬೆಂಗಳೂರು, ತನ್ನ ವಾಹನ ದಟ್ಟನೆಯಿಂದಲೂ ಒಂದು ಜಾಗದಿಂದಿನ್ನೊಂದಕ್ಕೆ ದಿನಕ್ಕೆರಡು ಬಾರಿ ವಿಧಿಯಿಲ್ಲದೆ ಪ್ರಯಾಣಿಸುವ ನನ್ನಂಥವರಿಂದಲೂ, ಆಗಾಗ್ಗೆ ಶ್ರೇಣೀಯ ಸಮಾನತೆಯನ್ನು ಇರುವೆ ಕಚ್ಚಿದ ಹಾಗೆ ನೆನಪಿಸಿಕೊಂಡು ಧಿಗ್ಗನೆದ್ದು ಕುಣಿದು ದಿನಪತ್ರಿಕೆಗಳಲ್ಲಿ ಅರಚುವ ಕಮ್ಯುನಿಸ್ಟರ ರೀತಿಯನ್ನು ನೆನಪಿಸುತ್ತದೆ.

ಹೇಗೆಂದು ಹೇಳುತ್ತೇನೆ ಕೇಳಿ.ಕೋಟಿ ದುಡಿಯುವ ಕಂಪೆನಿ ಮುಖ್ಯಸ್ಥನೂ ,ಬಡಪಾಯಿಗಳಾದ ನನ್ನಂಥವರೂ ಊರಿಗೆ ಹೊರಡಬೇಕೆಂದರೆ ಬರಬೇಕೆಂದರೆ ಸಮುದ್ರದಂತಿರುವ ವಾಹನ ದಟ್ಟಣೆಯನ್ನು ದಾಟಿಕೊಂಡೇ ಬರಬೇಕು,ನಾವ್ಯಾರೂ ಅಂಜನೇಯ ಸ್ವರೂಪಿಗಳಲ್ಲವಷ್ಟೇ.ಅದಕ್ಕೇ ಹೇಳಿದ್ದು ನೀನೂರಿಗೆ ರಾಜನಾದರೂ ಬೆಂಗಳೂರಿನ ರಸ್ತೆಗಳಿಗೆ ಒಬ್ಬ ಪ್ರಯಾಣಿಕನೇ,ಜಾಸ್ತಿಯೇನಲ್ಲ.

ಈ ಗೋಳಿನಿಂದ ಬಿಡಿಸಿಕೊಳ್ಳುಲು ಇರುವುದೂ ಒಂದೇ ಮಾರ್ಗ,ಸಂಸಾರದಿಂದ ಮುಕ್ತಿಹೊಂದಿ ಭಗವಂತನ ಪಾದ ಸೇರುವುದು.ಆದರೆ ನೀವು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲವೆಂದಾದಲ್ಲಿ ಈ ಯಾತನೆಯನ್ನು ಕೊಂಚ ಮಟ್ಟಿಗೆ ತಗ್ಗಿಸಬಹುದು.ಯಾತನೆ ಬರುವುದು ನೀವು ವಾಹನ ಚಲಾಯಿಸುತ್ತಿದ್ದಾಗ ಅಥವಾ ಬಸ್ಸಿನಲ್ಲಿ ಜಾಗ ಸಿಗದೆ ಪರದಾಡುವಂತಾಗ ತಾನೆ?ಇತ್ತೀಚಿಗೆ ಬಂದ ಖಾಸಗಿ ಟ್ಯಾಕ್ಸಿ ಕಂಪೆನಿಗಳಾದ ಊಬರ್ರೋ,ಓಲಾನೋ ಮತ್ತೊಂದೋ ಮಗದೊಂದನ್ನೋ ಉಪಯೋಗಿಸಿ ತಲೆಬಿಸಿಯಿಲ್ಲದೆ ಒಂದು ಬದಿಯಿಂದ ಇನ್ನೊಂದಕ್ಕೆ ತಲುಪಬಹುದು.ಆಚೆ ಈಚೆ ವಾಹನವನ್ನು ಗುದ್ದೋಡಿ ಕೋಪ ತರಿಸುವ ಮುಟ್ಠಾಳರ ಭಯವಿರುವುದಿಲ್ಲ.

ವಾಹನದಲ್ಲಿ ಹೋದಷ್ಟೊತ್ತಾದರೂ ನಾವೇ ವಾಹನದ ಮಾಲೀಕನೆಂಬ ಭಾವನೆ ಬರುವುದು ಸಹಜ.ಸಾಮಾನ್ಯವಾಗಿ ಇಂಥ ಖಾಸಗಿ ಟ್ಯಾಕ್ಸಿಗಳ ಚಾಲಕರೇ ಮಾಲೀಕರಾಗಿದ್ದು ಸಾಲ ಸೋಲ ಮಾಡಿ ವಾಹನ ಕೊಂಡಿರುತ್ತಾರೆ.ಈ ಚಾಲಕರ ಅನುಭವ ಕೇಳಲು ನನಗೇನೋ ತೆವಲು.ನಾನು ಪ್ರಯಾಣಿಸಿದ ವಾಹನಗಳ ಚಾಲಕರು ಸಾಮಾನ್ಯವಾಗಿ ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದು  ದುಡಿತಕ್ಕೆ ತಕ್ಕಂತೆ  ಪ್ರತಿಫಲವನ್ನು ಕೊಡುವ ಬೆಂಗಳೂರಿನ ಕ್ಷಮತೆಯನ್ನು ಕಂಡು ಮಾರುಹೋಗಿ,ಹಗಲೂ ರಾತ್ರಿಯೆನ್ನದೆ ಗಾಣಕ್ಕೆ ಹೆಗಲುಕೊಟ್ಟ ಎತ್ತುಗಳಂತೆ ದುಡಿಯುತ್ತಾರೆ.ಸಮಯ ಕಳೆದಂತೆ ಗಾಣದೆತ್ತುಗಳಿಗೆ ನೊಗವೇ ಸುಖವಾಗಿ ನಿಲ್ಲಿಸಲು ಮನಸ್ಸು ಬಾರದೇ ಇರುವ ಹಾಗೆ (ಇದು ನನ್ನ ಮೂರ್ಖ ಕಲ್ಪನೆ,ನೊಗದೆತ್ತುಗಳಿಗೆ ನಶೆಯೇ?) ಈ ವಾಹನ ಚಾಲಕರಿಗೂ ಹಿಂದಿರುಗಿ ಹೋಗಲು ಮನಸ್ಸು ಬಾರದೇ ಜೀವನ ಕಳೆಯುತ್ತಾರೆ.ಒಬ್ಬನು ಇಪ್ಪತ್ನಾಲ್ಕು ವರ್ಷದವನಾದರೆ ಮತ್ತೊಬ್ಬ ಮೂವತ್ತೈದರವ.ಇವರಲ್ಲಿ ಇಂತಿಷ್ಟೇ ವರ್ಷ ದುಡಿದು ಹಿಂದಿರುಗುತ್ತೇನಂಬುವರು ಕೆಲವರು,ದುಡಿದು ಇನ್ನೂ ಕೆಲವೊಂದು ವಾಹನಗಳನ್ನು ಕೊಂಡು ತನ್ನದೇ ಒಂದು ಕಂಪೆನಿ ಶುರು ಮಾಡುತ್ತೇನೆನ್ನುವರು ಕೆಲವರು.ಬಹಳಷ್ಟು ಜನ ಸಣ್ಣ ಪುಟ್ಟ ರೈತರೂ ಆಗಿದ್ದು , ಆಳುಗಳಿಗೆ ಸಂಬಳಕೊಡಲಾಗದೇ ಬೆಂಗ್ಳೂರಿಗೆ ಬಂದು ಹೊಟ್ಟೆ ಹೊರೆಯುವವರೂ ಇದ್ದಾರೆ, ಅಣ್ಣ ತಮ್ಮಂದಿರಲ್ಲೇ ಪಿತ್ರಾರ್ಜಿತ ಆಸ್ತಿಗಾಗಿ ಜಗಳವಾಡಿ ಬಂದ ಜಮೀನಿನಲ್ಲಿ ಜೀವನ ಮಾಡಲಾಗದೇ ಬೆಂಗಳೂರಿನ ಮುಖ ನೋಡಿದವರೂ ಇದ್ದಾರೆ.

ಈ ರೀತಿ ಭೇಟಿಯಾದ ಚಾಲಕರಲ್ಲಿ ನನಗೆಲ್ಲರೂ ಸ್ವಾಭಿಮಾನಿಗಳಾಗಿ ಕಂಡಿದ್ದಾರೆ,ದುಡಿಯಬೇಕಂಬ ಛಲವುಳ್ಳವರೂ ಆಗಿದ್ದಾರೆ.ನನಗೆ ವಿಶೇಷವಾಗಿ ನೆನಪಲ್ಲುಳಿಯುವಂಥವರೂ ಕೆಲವರು ಮನಸ್ಸಿಲ್ಲಿ ಅಚ್ಚೊತ್ತಿ ಛಾಪು ಮೂಡಿಸಿದ್ದಾರೆ.ಹೀಗೊಂದು ಬಾರಿ ನನ್ನ ಮೌಶಿಯ ಮನೆಗೆ ಟ್ಯಾಕ್ಸಿಯಲ್ಲಿ  ಪ್ರಯಾಣಿಸುತ್ತಿರಬೇಕಾದರೊಮ್ಮೆ ನನ್ನ ಬಾಯ್ತುರಿಕೆ ಕಳೆಯಲು, ಚಾಲಕನ ಬಳಿ ಮಾತಿಗಿಳಿದೆ.ಆ ಬಡಪಾಯಿಯೂ ಐಟಿಯಲ್ಲಿ ಕೆಲ ವರ್ಷಗಳ ಕಾಲ ಜೀವ ಸವೆಸಿ,ರೋಧನೆ ತಾಳಿಕೊಳ್ಳಲಾಗದೆ ಈಗ ಟ್ಯಾಕ್ಸಿ ಮೂಲಕ ಜೀವನ ಮಾಡುತಿದ್ದಾನೆಂಬುದು ವಿಶೇಷವಾಗಿತ್ತು.

ಸಾಲ ಮಾಡಿ ಪ್ರತಿ ತಿಂಗಳಿಗೆ ಕಂತು ಕಟ್ಟುವ ಅವನನ್ನು,ಈಗ ಹೇಗಿದೆಯಪ್ಪ ಜೀವನ ಅಂದಿದಕ್ಕೆ,’ಸಾರ್ ಬೇಕಾದಾಗ ಮನೆಗೆ ಹೋಗ್ತೀನಿ,ಮನೆಯವರ ಜೊತೆ ಬೇಕಾದಷ್ಟು ಸಮಯ ಕಳೀತೀನಿ,ಸಾಕಾಗುವಷ್ಟು ದುಡೀತೀನಿ.ಇನ್ನೇನು ಬೇಕು ಸಾರ್’ ಅಂದಿದ್ದನ್ನು ಕಂಡು ತನ್ನ ಸಮಯದ ಯಜಮಾನ ತಾನೆ ಅಲ್ಲವೇ ಎಂದೆನೆಸಿ. ಜೀವನ ಇಷ್ಟು ಸರಳವಾಗಿರಬಹುದೇ ಎಂದು ಆಶ್ಚರ್ಯ ಪಟ್ಟೆ.ಆದರೆ ಎಲ್ಲಾ ವಾಹನ ಚಾಲಕರ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲವೆಂದು ನನ್ನ ಅನುಭವದಿಂದ ಈಗ ಗೊತ್ತಾಗಿದೆ.ಯಾರ ಜೀವನ ಹೇಗಿರಬೇಕೆಂದು ನಿರ್ಧರಿಸುವವರು ಯಾರು? ನಮ್ಮ ನಿರ್ಧಾರಗಳು ಅದರಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆಯೆಂದು ಒಪ್ಪುವುದಾದರೂ ಆ ನಿರ್ಧಾರಗಳ ಹಿಂದಿನ ಪ್ರಚೋದನೆಯ ಮೂಲವೇನು? ನಂಗಂತೂ ಯೋಚನೆ ಮಾಡಿ ಮಂಡೆ ಮೊಸರಾಗಿದೆ, ನೀವಾದರೂ ತಿಳಿಸಿ.

ಚಿತ್ರಕೃಪೆ : ಕವರ್ಬೂತ್.ಕಾಂ

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments