ಕಾರಂತರೆಂದರೆ ಯಾರಂತ ತಿಳಿದಿರಿ?
– ರೋಹಿತ್ ಚಕ್ರತೀರ್ಥ
“ಬೋಸ್ ಐನ್‍ಸ್ಟೈನ್ ಸ್ಟಾಟಿಸ್ಟಿಕ್ಸ್” ಎಂಬ ಅದ್ಭುತ ಸಂಗತಿಯನ್ನು ಭೌತಶಾಸ್ತ್ರಕ್ಕೆ ಕೊಟ್ಟ ಸತ್ಯೇಂದ್ರನಾಥ ಬೋಸ್‍ರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂಬ ಶಿಫಾರಸು ಹೋಗಿತ್ತು. ಆದರೆ ಅಂತಿಮಕ್ಷಣದಲ್ಲಿ ಅವರಿಗೆ ಆ ಪ್ರಶಸ್ತಿ ಕೈತಪ್ಪಿತು. “ಈ ಮನುಷ್ಯ ಕೇವಲ ಭೌತಶಾಸ್ತ್ರಜ್ಞನಲ್ಲ. ಕವಿ, ಸಂಗೀತಗಾರ, ಅನುವಾದಕ, ಹೋರಾಟಗಾರ, ಕಲಾವಿದ ಎಲ್ಲವೂ ಆಗಿದ್ದಾರೆ. ಇವರಿಗೆ ವೃತ್ತಿನಿಷ್ಠೆ ಇದೆಯೆಂದು ನಂಬುವುದು ಹೇಗೆ?” ಎಂದು ಪ್ರಶಸ್ತಿ ಸಮಿತಿ ಕೇಳಿತ್ತಂತೆ! ಅಕ್ಟೋಬರ್ ಎರಡನೆ ವಾರ ಎಂದರೆ ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗುವ ಸಮಯ. ದುರಂತವೋ ಗೌರವವೋ ಕಾಕತಾಳೀಯವೋ, ಅದೇ ವಾರದ ಮೂರನೇ ದಿನ – ಅಂದರೆ ಅಕ್ಟೋಬರ್ 10ರಂದು ನಮ್ಮ ಕಡಲತಡಿಯ ಭಾರ್ಗವ ಶಿವರಾಮ ಕಾರಂತರ ಜನ್ಮದಿನವೂ ಕೂಡ. ಬಹುಶಃ ಕಾರಂತರ ಹೆಸರು ನೊಬೆಲ್ ಸಾಹಿತ್ಯ ಪ್ರಶಸ್ತಿಗಾಗಿ ಶಿಫಾರಸುಗೊಂಡಿದ್ದರೆ ಅವರಿಗೂ ಆ ಪುರಸ್ಕಾರ ಸಿಗುತ್ತಿದ್ದದ್ದು ಸಂಶಯ. ಬದುಕಿನಲ್ಲಿ ಏನೇನೆಲ್ಲಾ ಆಗಿ ಸಾಧನೆ ಮಾಡಿದ ಈ ವ್ಯಕ್ತಿಗೆ ಬರೆಯುವುದಕ್ಕೆ ಸಮಯವೇ ಸಿಕ್ಕಿರಲಿಕ್ಕಿಲ್ಲ ಎಂದು ಸಮಿತಿಯವರು ಹೆಸರನ್ನು ತಿರಸ್ಕರಿಸುತ್ತಿದ್ದರೋ ಏನೋ.
ಕಾರಂತರನ್ನು ಏನೆಂದು ಕರೆಯುವುದು? ಹೆಮ್ಮರವೆಂದೇ? ವಿಶಾಲ ಸಾಗರವೆಂದೇ? ಹಿಮಾಲಯವೆಂದೇ? ಔನ್ನತ್ಯವಷ್ಟೇ ಹಿರಿಮೆಯಾಗಿ ನಿಂತಿರುವ ಗೌರೀಶಂಕರ ಕಾರಂತರ ಜ್ಞಾನದ ಆಳಕ್ಕೆ, ವಿಸ್ತಾರಕ್ಕೆ ಸಾಟಿಯಾಗುವುದಿಲ್ಲ. ಹಿಂದೂ ಸಾಗರದಂತಹ ಸಮುದ್ರರಾಜನಿಗೆ ಕಾರಂತರ ಮಾನವೀಯತೆಯ ಎತ್ತರವನ್ನು ಸರಿಗಟ್ಟಲು ಸಾಧ್ಯವಾದೀತೇ? ಕಾರಂತರ ಅಜ್ಜ ಚಿನ್ನದ ಕಸುಬು ಕಲಿತ ರಸವೈದ್ಯರಾಗಿದ್ದರಂತೆ. ಅಪ್ಪ ಶೇಷ ಕಾರಂತರು ಕಲಿತದ್ದು ಎಲ್ಲಿ, ಎಷ್ಟು ಇವೆಲ್ಲ ನಿಗೂಢ. ಆದರೆ ಲೋಕಜ್ಞಾನದಿಂದ ಬಂದದ್ದನ್ನು ಮೇಷ್ಟ್ರಾಗಿ ಶಾಲೆಯಲ್ಲಿ ಹಂಚುತ್ತಿದ್ದರು. ಒಂಬತ್ತು ಮಕ್ಕಳ ಹಿರಿಸಂಸಾರದಲ್ಲಿ ಶಿವರಾಮ ನಾಲ್ಕನೆಯವನು. ಸಂಸಾರ ದೊಡ್ಡದಾಯಿತು; ದುಡಿವ ಕೈ ಸಾಲದಾಯಿತೆಂದು ಶೇಷ ಕಾರಂತರು ಮಾಸ್ತರಿಕೆ ಕೈಬಿಟ್ಟು ಜವಳಿ ವ್ಯಾಪಾರಕ್ಕೆ ಇಳಿದರು. ಅಕ್ಷರಾಭ್ಯಾಸದ ಜೊತೆಗೆ ಈ ತಂದೆ ತನ್ನ ಹೋರಾಟದ ಕೆಚ್ಚು, ಧೈರ್ಯಗಳನ್ನೂ ಮಕ್ಕಳಲ್ಲಿ ಆಗಲೇ ತುಂಬಿಸಿರಬೇಕು. ಶಿವರಾಮ ಹದಿನೆಂಟು ತುಂಬುವ ಹೊತ್ತಿಗೆ ಎಸ್ಸೆಸ್ಸೆಲ್ಸಿ ಮುಗಿಸಿದ. ಗಾಂಧೀಜಿಯ ಅಸಹಕಾರ ಚಳುವಳಿ ಕಾವು ಪಡೆಯುತ್ತಿದ್ದ ಸಮಯ. ಹುಡುಗನ ನೆತ್ತರು ಧಿಮಧಿಮನೆ ಕುಣಿದಿರಬೇಕು. ಹೋರಾಟಕ್ಕೆ ಇಳಿದ. ಮಂಗಳೂರು, ಕೋಟದ ನಡುವೆ ಉಠ್‍ಭೈಸ್ ಮಾಡಿದ.
1925ರಲ್ಲಿ, ತನ್ನ ಇಪ್ಪತ್ತಮೂರನೇ ವಯಸ್ಸಲ್ಲಿ ಕಾರಂತರು “ವಸಂತ” ಮಾಸಪತ್ರಿಕೆಯನ್ನು ಶುರು ಮಾಡಿದರು. ಮಾಡಿದ್ದು ಸಂಪಾದಕನೆಂದು ಕರೆಸಿಕೊಳ್ಳಬೇಕೆಂದು ಉಮ್ಮೇದಿನಿಂದ. ಆದರೆ ತಿಂಗಳುತಿಂಗಳೂ ಪುಟ ತುಂಬಿಸಬೇಕಲ್ಲ! ಸರಿ, ಅದಕ್ಕಾಗಿ ತಾನೇ ಕಾದಂಬರಿಗಳನ್ನು ಹೊಸೆಯತೊಡಗಿದರು. ಅವರ ಮೊದಲ ಕಾದಂಬರಿ “ವಿಚಿತ್ರಕೂಟ” ಬಂದಿದ್ದು ಇದೇ ಪತ್ರಿಕೆಯಲ್ಲಿ. ಆಗಾಗ ಗೋವಿಂದ ಪೈಗಳಂಥ ರಾಷ್ಟ್ರಕವಿಯನ್ನೂ ಕಾಡಿಬೇಡಿ ಪದ್ಯ ತರಿಸಿಕೊಂಡು ಇದರಲ್ಲಿ ಅಚ್ಚು ಹಾಕಿದ್ದಿದೆ. ಐದು ವರ್ಷ ನಡೆದು ಪತ್ರಿಕೆ 1930ರಲ್ಲಿ ನಿಂತಿತು. ರಾಕೆಟ್ಟಿನ ಕೆಲಸ ಉಪಗ್ರಹವನ್ನು ಕಕ್ಷೆಯಲ್ಲಿ ಕೂರಿಸುವುದಷ್ಟೆ; ಮಿಕ್ಕಿದ್ದನ್ನೆಲ್ಲ ಆ ಉಪಗ್ರಹವೇ ನೋಡಿಕೊಳ್ಳುತ್ತದೆ ತಾನೆ? ಹಾಗೆ, ಐದು ವರ್ಷದ ಸಂಪಾದಕತ್ವದ ಅನುಭವ ಕಾರಂತರ ಬರವಣಿಗೆಗೆ ಬೇಕಾದ ಎಲ್ಲ ನೂಕುಬಲವನ್ನೂ ಕೊಟ್ಟಿತ್ತು. ಅಲ್ಲದೆ, ಅದು ಅವರ ಬರವಣಿಗೆಗೂ ಒಂದು ವಿಚಿತ್ರ ವೇಗವನ್ನು ದಯಪಾಲಿಸಿತು ಎನ್ನಬೇಕು. ನಂಬಿದರೆ ನಂಬಿ, ಕಾರಂತರು “ಚೋಮನ ದುಡಿ” ಮತ್ತು “ಸರಸಮ್ಮನ ಸಮಾಧಿ” – ಎರಡೂ ಕಾದಂಬರಿಗಳನ್ನು ಬರೆದದ್ದು ತಲಾ ಐದು ದಿನಗಳಲ್ಲಿ! ಅವರ ಸಾಹಿತ್ಯಕೃಷಿಯ ಕ್ಲಾಸಿಕ್ ಎನ್ನಿಸಿರುವ “ಮರಳಿ ಮಣ್ಣಿಗೆ” ಮುಗಿದದ್ದು 30 ದಿನಗಳಲ್ಲಿ. “ಔದಾರ್ಯದ ಉರುಳಲ್ಲಿ” 23 ದಿನಗಳಲ್ಲಿ ತಯಾರಾಗಿತ್ತಂತೆ. ಅದೆಲ್ಲ ಯಾಕೆ, ಮೂರು ಸಾವಿರ ಪುಟಗಳ ಬಾಲಪ್ರಪಂಚ ವಿಶ್ವಕೋಶಗಳನ್ನು ಬರೆಯಲು ಕಾರಂತರು ತೆಗೆದುಕೊಂಡದ್ದು 3 ತಿಂಗಳ ಕಾಲಾವಧಿ! ಒಂದು ಯೂನಿವರ್ಸಿಟಿಗೇನಾದರೂ ಈ ಕೆಲಸ ವಹಿಸಿದ್ದರೆ, ಲೇಖಕರ ಸಮಿತಿ ರಚಿಸುವುದಕ್ಕೇ ಆ ಅವಧಿಯಲ್ಲಿ ಆಗುತ್ತಿತ್ತೋ ಇಲ್ಲವೋ.
ಕಾರಂತರು ತಮ್ಮ ಇಷ್ಟವಿದ್ದು ಎಲ್ಲವನ್ನೂ ಮೈಮೇಲೆಳೆದುಕೊಂಡರು ಎನ್ನುವುದಕ್ಕಿಂತಲೂ ಬದುಕಿನಲ್ಲಿ ಆಗುತ್ತ ಹೋದ ಸ್ಥಿತ್ಯಂತರಗಳಿಗೆ ಎದೆಯೊಡ್ಡುತ್ತ ಹೋದರು ಎನ್ನುವುದೇ ಹೆಚ್ಚು ಯುಕ್ತ. ಯಾವುದೋ ಒಂದು ಕಾಲಘಟ್ಟದಲ್ಲಿ ಅವರಿಗೆ ದೇಶದ ಶಿಕ್ಷಣಪದ್ಧತಿ ಸರಿ ಇಲ್ಲ ಅನ್ನಿಸಿಬಿಟ್ಟಿತು. ಅದಕ್ಕಾಗಿ ಏನು ಮಾಡಬೇಕು? ಸರಕಾರವನ್ನು ಎದುರುಹಾಕಿಕೊಂಡು ಜೀವನ ತೇಯುವುದು ವ್ಯರ್ಥ; ಅಂಥ ಹೋರಾಟಗಳಲ್ಲಿ ಕಾರಂತರಿಗೆ ನಂಬಿಕೆಯೂ ಆಸಕ್ತಿಯೂ ಇರಲಿಲ್ಲ. ನೇರವಾಗಿ ಪುತ್ತೂರಿಗೆ ತೆರಳಿ, ಬಾಲವನ ತೆರೆದರು. ಮಕ್ಕಳ ಪಾಠ ಪ್ರಕೃತಿಯ ನಡುವಲ್ಲಿ ಆಗಬೇಕು; ಅವರ ಬದುಕಿಗೆ ಓದು ಎಷ್ಟೋ ಅಷ್ಟೇ ಈ ಸುತ್ತಲಿನ ಪರಿಸರ, ಕಾಡು, ಆಟೋಟಗಳೂ ಮುಖ್ಯ ಎನ್ನುವುದು ಕಾರಂತರ ಕಾಳಜಿಯಾಗಿತ್ತು. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ವನ್ಯಜೀವಿ ತಜ್ಞ, ವಿಜ್ಞಾನಿ ಉಲ್ಲಾಸ ಕಾರಂತ ಈ ಬಾಲವನದ ಮೊದಲ ಪ್ರಾಡಕ್ಟು! ಊರವರ ಮಕ್ಕಳಿಗೆ ಪಾಠ ಹೇಳುವ ಮೊದಲು ನನ್ನ ಶಿಶುವನ್ನೇ ಈ ಪ್ರಯೋಗಕ್ಕೆ ಒಡ್ಡುತ್ತೇನೆ ಎನ್ನುವುದು ಕಾರಂತರ ಛಾತಿ! ಪುತ್ತೂರಿನಲ್ಲಿ ನಲವತ್ತು ವರ್ಷ ಕಳೆದ ಕಾರಂತರು ಅಲ್ಲೇ ಒಂದು ಪ್ರೆಸ್ಸು ತೆರೆದರು. (ಅಷ್ಟೂ ವರ್ಷ, ಅವರ ಅಂಚೆ ವಿಳಾಸ – “ಶಿವರಾಮ ಕಾರಂತ, ಪುತ್ತೂರು” – ಅಷ್ಟೆ!) ತನ್ನ ಪುಸ್ತಕಗಳನ್ನು ಅಲ್ಲಿ ಅಚ್ಚು ಹಾಕಿದರು. ಅವಕ್ಕೆ ಮುಖಪುಟ ಬರೆಯುವುದಕ್ಕೆ ಪೇಂಟು-ಬ್ರಶ್ಶುಗಳನ್ನೂ ಹಿಡಿದರು. ಆಡು ಮುಟ್ಟದ ಸೊಪ್ಪು ಯಾವುದು ಅಂದರೆ ಆಡುಸೋಗೆಯನ್ನು ತೋರಿಸಬಹುದು; ಕಾರಂತರು ಮಾಡದ ಕೆಲಸ ಇದೆಯೇ ಹುಡುಕುವುದು ಕಷ್ಟ.
ಕಾರಂತರ ಬದುಕಿನಲ್ಲಿ ನಡೆದುಹೋದ ಎರಡು ಘಟನೆಗಳು ನನಗೆ ಮುಖ್ಯವೆನಿಸುತ್ತವೆ. ಒಂದು – ಅವರು ವೇಶ್ಯೆಯರ ಬಗ್ಗೆ ತೋರಿಸಿದ ಕಾಳಜಿ. ಶ್ರೀಮಂತರ ಮನೆಯ ಸಮಾರಂಭಗಳಲ್ಲಿ ಕುಣಿಯಲು ಕರೆಸುತ್ತಿದ್ದ ವೇಶ್ಯೆಯರ ಬದುಕಿನ ಬಗ್ಗೆ ಕಾರಂತರಿಗೆ ಅಪಾರವಾದ ಮರುಕವಿತ್ತು. ಅಂಥ ಒಬ್ಬಾಕೆಯ ಮಗನ ಜೊತೆ ಸ್ನೇಹ ಬೆಳೆಸಿ, ಆತನ ಮೂರು ಜನ ಸೋದರಿಯರಿಗೆ ಕಾರಂತರೇ ಮುಂದೆನಿಂತು ಸಂಬಂಧ ಹುಡುಕಿ ಮದುವೆ ಮಾಡಿಸುತ್ತಾರೆ. ಅವರಿಗೆ ಗಾಂಧಿಯ ಬಗ್ಗೆ ಗೌರವವಿದ್ದದ್ದರಿಂದ, “ವೇಶ್ಯೆಯರ ಕುಟುಂಬದಲ್ಲಿ ಹುಟ್ಟಿದ ಒಬ್ಬ ಹುಡುಗಿಗೆ ಆ ವೃತ್ತಿಯಲ್ಲಿ ಮುಂದುವರಿಯಲು ಇಷ್ಟವಿಲ್ಲ. ಆಕೆ ಏನು ಮಾಡಬೇಕು?” ಎಂದು ಪತ್ರ ಬರೆದರಂತೆ. ಗಾಂಧಿ, “ಆಕೆ ಬ್ರಹ್ಮಚಾರಿಣಿಯಾಗಿ ಉಳಿಯಬೇಕು” ಎಂದು ಮಾರೋಲೆ ಬರೆಯುತ್ತಾರೆ. ಸಿಟ್ಟಿಗೆದ್ದ ಕಾರಂತರು ತನ್ನ ಅದುವರೆಗಿನ ಗಾಂಧಿಯ ಜೊತೆಗಿನ ಸಂಬಂಧವನ್ನು ಕಡಿದುಕೊಂಡು, ವೇಶ್ಯೆಯರಿಗೆ ಮದುವೆ ಮಾಡಿಸುವ ಕೆಲಸಕ್ಕೆ ಕೈಹಾಕುತ್ತಾರೆ. ಇನ್ನು ಎರಡನೆ ಘಟನೆ – ಕಾರಂತರು ಕೆನರಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತಾರೆ. ಆದರೆ ವ್ಯವಸ್ಥಿತ ಸಂಚು ಹೂಡಿ ಅವರನ್ನು ಸೋಲಿಸಲಾಗುತ್ತದೆ. ಆ ಸಂಚಿನ ಒಂದು ಪ್ರಮುಖ ಭಾಗವಾಗಿ ಕಾಂಗ್ರೆಸಿಗರು “ಕಾರಂತರು ಬ್ರಾಹ್ಮಣ. ಯಾವ ಕಾರಣಕ್ಕೂ ಅವರಿಗೆ ಉಳಿದ ಜಾತಿಯವರು ಓಟು ಹಾಕಬಾರದು” ಎಂದು ಅಪಪ್ರಚಾರ ಮಾಡಿದರಂತೆ. ಈ ಸುದ್ದಿ ಕೇಳಿ ನೊಂದ ಕಾರಂತರು, “ನಾನು ದಲಿತರಿಗಾಗಿ ದುಡಿದೆ; ಬರೆದೆ; ಅವರ ನೋವು ನನ್ನ ನೋವು ಎಂದು ಕೆಲಸ ಮಾಡಿದೆ. ಕೆಳಜಾತಿಯವಳೆಂದು ಗುರುತಿಸಿದವಳನ್ನು ಪತ್ನಿಯಾಗಿ ಸ್ವೀಕರಿಸಿ ಬ್ರಾಹ್ಮಣ ಸಮುದಾಯಕ್ಕೆ ಸವಾಲಾದೆ. ನಾಸ್ತಿಕವಾದಿಯಾಗಿ ಬದುಕಿದೆ. ಇಷ್ಟೆಲ್ಲ ಆದ ಮೇಲೆ, ನನ್ನನ್ನು ಜನ ಬ್ರಾಹ್ಮಣನೆಂದು ಗುರುತಿಸಿ ಮತ ನಿರಾಕರಿಸಿದರು” ಎಂದು ಹೇಳಿಕೊಂಡರು. ನಿಷ್ಟುರವಾದಿ ಕಾರಂತರಿಗೆ ಆಗ ಆಗಿರಬಹುದಾದ ಆಘಾತ ಎಂಥದ್ದು, ಯೋಚಿಸಿದರೂ ಮೈಮುಳ್ಳೇಳುತ್ತದೆ.
ಅವರನ್ನು ಸಮುದ್ರ ಎನ್ನುವುದಕ್ಕಿಂತ ಎಲ್ಲ ಬೆಟ್ಟ ಕಾನನ ಬಯಲುಗಳಲ್ಲಿ ದಾರಿ ಮಾಡಿಕೊಳ್ಳುತ್ತ ಹರಿವ ನದಿಗೆ ಹೋಲಿಸಬಹುದೇನೋ. ಮಳಲಿ ಸುಬ್ಬರಾಯರಿಂದ ಪ್ರೇರಿತರಾಗಿ ಯಕ್ಷಗಾನದ ಗೆಜ್ಜೆ ಕಟ್ಟಿದರು. ಕೆಕೆ ಹೆಬ್ಬಾರರ ಒಡನಾಡಿಯಾಗಿ ಚಿತ್ರಕಲೆಯ ಸಂಶೋಧನೆಗೆಂದು ಊರೂರು ಸುತ್ತಿದರು. ಕನ್ನಡದ ಮಕ್ಕಳಿಗೆ ವಿಶ್ವಕೋಶಗಳೇ ಇಲ್ಲ ಎಂದು ಅವುಗಳ ರಚನೆಗೆ ಕೂತರು. ಕೈಗಾದಂಥ ವಿಚಾರದಲ್ಲಿ ಪರಿಸರ ರಕ್ಷಣೆಗಾಗಿ ಬೀದಿಗಿಳಿದರು. ಮೂಕಿಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಕ್ಯಾಮರಾಮನ್ ಆಗಿ, ನಟಿಸಿಯೂ ಬಿಟ್ಟರು. ವಯಸ್ಕರ ಶಿಕ್ಷಣದ ಬಗ್ಗೆ ಸರಕಾರಕ್ಕಿಂತ ಮೊದಲು ಚಿಂತೆ ಮಾಡಿಕೊಂಡು, ಅವರಿಗಾಗಿ ಸರಳಪಾಠಗಳನ್ನು ಬರೆದರು. ಮಕ್ಕಳಿಗೆ ಓದುವ ಆಟ ಎಂಬ ಪಠ್ಯ ರಚಿಸಿದರು. ಎಲ್ಲಾ ಬಿಟ್ಟು “ಮಂಗನ ಕಾಯಿಲೆ”ಯಂಥ ವಿಷಯದಲ್ಲೂ ಕೃತಿರಚನೆ ಮಾಡಿದರು! ತನ್ನ ತೊಂಭತ್ತಾರನೇ ವಯಸ್ಸಲ್ಲಿ ಕಾರಂತರು ಹಕ್ಕಿಗಳ ಬಗ್ಗೆ ಪುಸ್ತಕ ಬರೆದರು! ಚಿತ್ರಗಳು ಸಿಗುವುದು ಕಷ್ಟ ಎಂದು ಗೊತ್ತಾಯಿತು; ಸಿಕ್ಕ ಒಂದಷ್ಟು ಫೋಟೋಗಳು ಕೂಡ ಚೆನ್ನಾಗಿರಲಿಲ್ಲ. ಪ್ರಿಂಟಾಗಿ ಬಂದಾಗ ಅವೇನೂ ಸ್ಪಷ್ಟವಾಗಿ ಕಾಣುವುದಿಲ್ಲ ಎಂದು ಗೊತ್ತಾದ ಮೇಲೆ ನಾನೇ ಚಿತ್ರಗಳನ್ನು ಬರೆದೆ ಎಂದು ಈ ಅಜ್ಜ ಹೇಳಿದಾಗ, ಅವರಿಗೆ ಕೇವಲ ತೊಂಬತ್ತು ವರ್ಷ!
“ಸಾಹಿತಿ ಲೋಕೋದ್ಧಾರಕನೆಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವ ಹೇಳುತ್ತಾನಷ್ಟೆ; ಪರಿಹಾರ ಸೂಚಿಸುವುದಿಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ” ಎಂದು ಖಂಡತುಂಡವಾಗಿ ಹೇಳುವ ಎಂಟೆದೆ ಅವರಿಗಲ್ಲದೆ ಇನ್ನಾರಿಗೆ ಬರಬೇಕು? ಎಮರ್ಜೆನ್ಸಿ ವಿರೋಧಿಸಿ ಉಳಿದವರು ಕತೆಕವನ ಹೊಸೆಯುತ್ತ ಕೂತಿದ್ದ ಸಮಯದಲ್ಲಿ ದಿಟ್ಟವಾಗಿ ಇಂದಿರೆಗೆ ಪತ್ರ ಬರೆದು “ಪದ್ಮಭೂಷಣ” ಪ್ರಶಸ್ತಿ ವಾಪಸು ಮಾಡಿದ ಛಾತಿ ಅವರದ್ದು. “ನಾವು ಭೂಮಿಗೆ ಬಂದಾಗ ಇದ್ದ, ನಮ್ಮ ಸುತ್ತಣ ಬದುಕನ್ನು ಕೊಂಚ ಚೆಂದವಾಗಿ ಮಾಡಿ ಇಲ್ಲಿಂದ ಹೊರಡಬೇಕು” ಎಂದು ಸರಳಸಂದೇಶ ಕೊಟ್ಟ ಕಾರಂತರ ಅಗಲಿಕೆ ಸೃಷ್ಟಿಸಿದ ಶೂನ್ಯ ಅದೆಷ್ಟು ದೊಡ್ಡದು! ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದ ಕನ್ನಡದ ಸಾಹಿತ್ಯರತ್ನಗಳಲ್ಲಿ ಕಾರಂತರು ಖಂಡಿತವಾಗಿಯೂ ವಜ್ರವೇ. ಗುಣದಲ್ಲಿಯೂ ಮೌಲ್ಯದಲ್ಲಿಯೂ.
ಧನ್ಯವಾದಗಳು ಸಾರ್! ಶ್ರೇಷ್ಟ ಕಾರಂತರನ್ನು ಸರಳವಾಗಿ ಪರಿಚಯಿಸಿದ್ದಕ್ಕೆ.
ಚೆನ್ನಾಗಿದೆ . ಭಗವಾನ್ ಬೇತಾಳದಿಂದ ನಿಮಗೆ ಶೀಘ್ರವೇ ಮುಕ್ತಿ ಸಿಗಲಿ ಎಂದು ಆಶಿಸುತ್ತೇನೆ !
ನಿಜ.
ಕನ್ನಡದಲ್ಲಿ ಲೇಖನಗಳನ್ನು ಸರಳವಾಗಿ ಸುಂದರವಾಗಿ ಆದರೆ ಅಷ್ಟೇ ಆಳವಾಗಿ ಬರೆಯುವುದರಲ್ಲಿ ರೋಹಿತ್ ರಿಗೆ ಅವರೇ ಸಾಟಿ.
ವಿಜ್ಞಾನಿಗಳ ಕುರಿತಾದ ಇವರ ಕಿರು ಪುಸ್ತಕಗಳನ್ನು ಓದಿರದವರು ಒಮ್ಮೆ ಓದಿ.
ನಿಮ್ಮ ಸ್ನೇಹ ನಮ್ಮ ಹೆಮ್ಮೆ
ಕಾರಂತರ ವ್ಯಕ್ತಿತ್ವವನು ಸರಳ, ಸುಂದರವಾಗಿ ಪರಿಚಯಿಸಿದ ನಿಮಗೆ ಧನ್ಯವಾದಗಳು.
Super, the way which you explained its awesome.
ಕಾರಂತರಿಗೆ ಕಾರಂತರೇ ಸಾಟಿ.
“ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದ ಕನ್ನಡದ ಸಾಹಿತ್ಯರತ್ನಗಳಲ್ಲಿ ಕಾರಂತರು ಖಂಡಿತವಾಗಿಯೂ ವಜ್ರವೇ.”
Why measure our Karanthajja in terms of the Nobel yardstick?
“ಎಮರ್ಜೆನ್ಸಿ ವಿರೋಧಿಸಿ ಉಳಿದವರು ಕತೆಕವನ ಹೊಸೆಯುತ್ತ ಕೂತಿದ್ದ ಸಮಯದಲ್ಲಿ ದಿಟ್ಟವಾಗಿ ಇಂದಿರೆಗೆ ಪತ್ರ ಬರೆದು “ಪದ್ಮಭೂಷಣ” ಪ್ರಶಸ್ತಿ ವಾಪಸು ಮಾಡಿದ ಛಾತಿ ಅವರದ್ದು.”
Now a long list of writers have returned their awards to protest against the new emergency raj. Rahmat Tarikere including.
Which emergency
ಕಡಲ ತಡಿಯ ಭಾರ್ಗವ… ಸಾಗರಕ್ಕೆ ಸಾಗರವೇ ಸಾಟಿ
ಕಾರಂತರಿಗೆ ಕಾರಂತರೇ ಸಾಟಿ.. ನಮ್ಮ ಕಾರಂತಜ್ಜ
ಬದುಕಿದ್ದಾಗಲೇ ದಂತಕತೆಯಾಗಿದ್ದ ಕಾರಂತರ ಬದುಕಿನ ಮಜಲುಗಳನ್ನು, ಇನ್ನೇನು ನಾವು ಮಿಕ್ಕೆಲ್ಲವರನ್ನು ಮರೆತಂತೆಯೇ ಮರೆತೆವೇನೋ ಎನಿಸುವಂಥ ಸಮಯದಲ್ಲೇ ಇಷ್ಟು ಸುಂದರವಾಗಿ ಅನಾವರಣ ಮಾಡಿದ ನಿಮಗಿದೋ ನಮನ.
ಕಾರಂತರ ಬದುಕಿನ ನಿಮಗೆ ಮುಖ್ಯವೆನಿಸಿದ ಎರಡು ಘಟನೆಗಳನ್ನು ಬರೆದಿದ್ದೀರಿ. ನನಗೂ ಗಟ್ಟಿಯಾಗಿ ನೆನಪಿರುವುದು ವೇಶ್ಯಾ ವಿವಾಹದ ಘಟನೆ. ಗಾಂಧೀಜಿಯ ಪತ್ರಕ್ಕೆ ಕಾರಂತರು ಎಷ್ಟು ಅರ್ಥವತ್ತಾಗಿ ಸ್ಗಗತ ಹೇಳಿಕೊಂಡರೆಂದರೆ ಅದನ್ನು ಸುಲಭವಾಗಿ ಮರೆಯಲು ಆಗುವುದಿಲ್ಲ. ” ಗಾಂದೀಜಿಗೆ ಮನುಷ್ಯ ಸ್ವಬಾವಗಳು ಅರ್ಥವಾಗುವುದಿಲ್ಲ ” ಮಹಾತ್ಮರ ಮತ್ತು ಮನುಷ್ಯರ ಅಥವಾ ಆದರ್ಶ ಮತ್ತು ವಾಸ್ತವದ ನಡುವೆ ತುಮುಲ ನಡೆದಾಗ ನನಗೆ ಈ ಮಾತುಗಳು ನೆನಪಾಗುತ್ತವೆ. ಕಾರಂತರು ನಮಗೆ ಪ್ರೀತಿಯ ಅಜ್ಜ ಅಷ್ಟೇ! ಅವರು ತಾಯಿಗೆ ಓದಲೆಂದು ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೇಯನ್ನೇ ಕನ್ನಡದಲ್ಲಿ ಬರೆದವರು. ನಾವು ಚೆಂದವಾಗಿ ಬರೆದು ಮುದ್ರಿತವಾಗಿದ್ದನ್ನು ಓದಿಯೂ ಹೇಳುವುದಿಲ್ಲ. ನಮಗೆ ಸಮಯವಿಲ್ಲ.
ನಾನು ಉತ್ಕಟವಾಗಿ ಗೌರವಿಸುವ ಮೇರು ವ್ಯಕ್ತಿ ಇವರು, ಇವರ ಬಗ್ಗೆ ಎಷ್ಟು ಹೇಳಿದರು, ಕೇಳಿದರು ಕಡಿಮೆ ಎನಿಸುತ್ತೆ
ಕಾರಂತರ ಬರಹಗಳಷ್ಟೇ ಓದಿದ್ದೆ. ಈ ಲೇಖನದಲ್ಲಿನ ಅನೇಕ ವಿಷಯಗಳು ಹೊಸ ಕಾರಂತರನ್ನ ತೋರಿಸಿದೆ. ಧನ್ಯವಾದಗಳು
Nijavagiyu naanu avarannu tumba miss madkoteeni nanna jeevanadalli omme avarannu bhetiyagbekendu kodidde. Adu neraveralilla. Avara balavanadalli karantajja bhagada regular reader nanagidde.
Thank you sir.
ಕಾರಂತರ ಬಗ್ಯೆ ಓದಿ ಧನ್ಯವಾದಗಳನ್ನ ತಿಳಿಸುತ್ತಿದ್ದೇನೆ. ಬ್ರಾಹ್ಮಣ್ಯವನ್ನು ಬ್ರಾಹ್ಮಣರು ಬಿಡಬೇಕೆಂದರೂ ಬ್ರಾಹ್ಮಣ್ಯ ಅವರನ್ನು ಬಿಡುವುದಿಲ್ಲ. ನಮ್ಮವರ ಬಗ್ಯೆ ಸತ್ಯಸಂಗತಿಗಳನ್ನು ಬರೆದಾಗಲೂ ಒಪ್ಪಿಕೊಳ್ಳಬಾರದೆಂಬ ಮನಸ್ಥಿತಿಯವರೆದುರು ನಾನು ಹೇಳುವುದನ್ನು ಹೇಳಿಯೇ ತೀರುತ್ತೇನೆಂಬ ಛಲವಿದೆಯಲ್ಲ ಅದಕ್ಕೆ ಬೆಂಬಲ