ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 12, 2015

1

ಇಂಡಿಯಾಸ್ ಡಾಟರ್ ಮತ್ತು ಬಿಬಿಸಿ-ವಿದೇಶಿಗರೊಬ್ಬರ ಬಿಚ್ಚು ನುಡಿ

‍ನಿಲುಮೆ ಮೂಲಕ

ಇಂಗ್ಲಿಷ್ ಮೂಲ: ಜೇಕಬ್ ಡಿ ರೂವರ್
ಕನ್ನಡಕ್ಕೆ: ಅಶ್ವಿನಿ ಬಿ ದೇಸಾಯಿ, ಆರೋಹಿ, ಬೆಂಗಳೂರು

ಸಂತ್ರಸ್ತೆದೆಹಲಿಯಲ್ಲಿ ವರ್ಷಗಳ ಹಿಂದೆ ನಡೆದ ನಿರ್ಭಯಾ ಪ್ರಕರಣ ದೇಶವನ್ನಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಗೆಬಗೆಯ ಚರ್ಚೆಗೆ ಗ್ರಾಸವಾಗಿತ್ತು. ಅತ್ಯಾಚಾರದಂಥ ಹೇಯ ಕೃತ್ಯಗಳು ಎಲ್ಲೇ ನಡೆದರೂ ಖಂಡನೀಯ.ಇಂದು (12 ಅಕ್ಟೋಬರ್ 2015) ಕೂಡ ದೆಹಲಿಯಲ್ಲಿಯೂ ಮಂಡ್ಯದಲ್ಲಿಯೂ ಇದೇ ಬಗೆಯ ಪ್ರಕರಣಗಳ ವರದಿಯಾಗಿದೆ. ಇಂಥ ಕೃತ್ಯಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಗೆ ನೋಡುತ್ತವೆ? ಚರ್ಚೆಯ ದಿಕ್ಕನ್ನು ಹೇಗೆ ತಪ್ಪಿಸುತ್ತವೆ? ಭಾರತದೊಳಗಿನ ಚರ್ಚೆಯನ್ನು ಕೂಡ ಹೇಗೆ ಪ್ರಭಾವಿಸುತ್ತಿವೆ? ಈ ನೆಪದಲ್ಲಿ ಭಾರತವನ್ನು ಹೇಗೆ ಚಿತ್ರಿಸುತ್ತವೆ? ಎಂಬ ಬಗ್ಗೆ ಬೆಲ್ಜಿಯಂನ ಪ್ರಾಧ್ಯಾಪಕ ರೂವರ್ ಅವರು ನೀಡಿದ ಒಂದು ಒಳನೋಟ.

ಹೀಗೊಮ್ಮೆ ಕಲ್ಪಿಸಿಕೊಳ್ಳಿ. ದೇಶದಲ್ಲಿರುವ ಶಿಶುಕಾಮ ಹಗರಣಗಳ ಬಗ್ಗೆ ಕೇಳಿದ ಚಿತ್ರ ನಿರ್ಮಾಪಕಿಯೊಬ್ಬರು ಬೆಲ್ಜಿಯಂಗೆ ಪ್ರವಾಸ ಕೈಗೊಳ್ಳುತ್ತಾರೆ. ಕುಖ್ಯಾತ ಶಿಶುಕಾಮಿಯೊಬ್ಬನ ಸಂದರ್ಶನವನ್ನೊಳಗೊಂಡ ಕಿರುಚಿತ್ರವೊಂದನ್ನು ಆಕೆ ನಿರ್ದೇಶಿಸುತ್ತಾಳೆ. ತಾನು ಅತ್ಯಾಚಾರವೆಸಗಿದ ಹೆಣ್ಣುಮಕ್ಕಳು ನಿಜವಾಗಿ ತನ್ನನ್ನೇ ಕೆಡಿಸಲು ಮುಂದಾದರಲ್ಲದೇ,ತನ್ನ ಕೃತ್ಯವನ್ನು ಅವರು ಸಂತೋಷದಿಂದ ಅನುಭವಿಸಿದ್ದಾರೆ ಎಂದು ಈ ಮನುಷ್ಯ ಹೇಳುತ್ತಾನೆ. ಏನನ್ನು ಚಿಂತಿಸಬೇಕೆಂದು ಇಂಥ ಶಿಶುಕಾಮಿಗಳಿಗೆ ಬೋಧಿಸುವ ಮೂಲಕ? ಬೆಲ್ಜಿಯಂ ಸಮಾಜ ಇದಕ್ಕೆ ಜವಾಬ್ದಾರಿ ಎಂದು ಚಿತ್ರನಿರ್ಮಾಪಕಿ ಟಿಪ್ಪಣಿ ನೀಡುತ್ತಾಳೆ. ಈ ದೇಶದ ಬಹುತೇಕ ಪುರುಷರು ಹೀಗೇ ತಯಾರಾಗಿದ್ದಾರೆಂದೂ ಆಕೆ ಹೇಳುತ್ತಾಳೆ. ನಿಜವಾಗಿ ಶಿಶುಕಾಮ ಬೆಲ್ಜಿಯಂನ ದೊಡ್ಡ ರೋಗ ಮತ್ತು ಸಂಸ್ಕೃತಿಯ ಭಾಗವಾದ್ದರಿಂದ ಬೆಲ್ಜಿಯಂ ಸಿನಿಮಾಗಳೂ ಅದನ್ನೇ ಪ್ರತಿಫಲಿಸುತ್ತವೆ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಬೆಲ್ಜಿಯಂನ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಈ ರೀತಿಯ ಹೇಳಿಕೆಗಳು ಆಘಾತಕಾರಿಯೂ, ನಮ್ಮನ್ನು ಕೆರಳಿಸುವಂಥದ್ದೂ ಆಗಿದೆ ಎಂದು ನಾವು ಭಾವಿಸುತ್ತೇವೆ. ಈ ರೀತಿಯ ಹೇಳಿಕೆಗಳು ಶಿಶುಕಾಮ ನಮ್ಮ ಸಂಸ್ಕೃತಿಯ ತಿರುಳಿನ ಅಭಿವ್ಯಕ್ತಿಯಾಗಿದ್ದು ಬಾಲದೌರ್ಜನ್ಯ ನಡೆಸುವಂತೆಯೇ ನಮ್ಮನ್ನೆಲ್ಲರನ್ನು ಸಿದ್ದಪಡಿಸಿದ್ದಾರೆ ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ.

ಮತ್ತೊಂದು ದೇಶದ ಬಗ್ಗೆ ಕಾಳಜಿ ತೋರದಿದ್ದರೂ ಇದು ಕಾಲ್ಪನಿಕ ಕತೆಯಲ್ಲ. ಭಾರತದಲ್ಲಿ ನಡೆದ ಅತ್ಯಾಚಾರದ ಬಗ್ಗೆ ಕೆಲ ದಿನಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗದ್ದಲ ಮತ್ತು ಕೂಗು ಇನ್ನೊಂದು ತಿರುವು ಪಡೆದುಕೊಂಡಿದೆ. ಈ ಬಾರಿ ಕ್ರೂರ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಹೇಯ ಹೇಳಿಕೆ ನೀಡಿರುವ ಕಿರುಚಿತ್ರ ಇದಕ್ಕೆ ಕಾರಣವಾಗಿದೆ. ಗಮನಾರ್ಹ ಎನ್ನುವಂತೆ ಇಂಗ್ಲಿಷ್ ಚಿತ್ರನಿರ್ಮಾಪಕಿ ಲೆಸ್ಲೀ ಉಡ್ವಿನ್ ಈ ಸಮಸ್ಯೆಯನ್ನು ಅತ್ಯಾಚಾರಿಯೊಬ್ಬನ ರೋಗಗ್ರಸ್ತ ಮನಸ್ಥಿತಿಯಾಗಿ ನೋಡುವುದಿಲ್ಲ. ಸಂದರ್ಶನದಲ್ಲಿ ಆಕೆ ಈತ “ದೇಶದ ಬಹುತೇಕ ಪುರುಷರ” ಪ್ರತಿನಿಧಿ ಎನ್ನುವಂತೆಯೂ “ನಿರ್ದಿಷ್ಟ ರೀತಿಯಲ್ಲಿ” ಅವರು ಸಿದ್ಧವಾಗಿರುವಂತೆಯೂ ಬಿಂಬಿಸುತ್ತಾಳೆ. ಈ ಸಮಾಜವೇ ಇಂಥ ಅತ್ಯಾಚಾರಿಗಳನ್ನು ಸೃಷ್ಟಿಸಿ ಉತ್ತೇಜಿಸುತ್ತದೆ ಎಂದೂ ಹೇಳುತ್ತಾ, ಇದು ಹೇಗೆ ದೊಡ್ಡ ಕಾಯಿಲೆ ಮತ್ತು ಸಂಸ್ಕೃತಿಯ ಭಾಗವಾಗಿದೆ ಎಂದು ಬಾಲಿವುಡ್ ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗವಸ್ತುವಾಗಿ ಕಾಣುವುದನ್ನು ತೆರೆದಿಡುತ್ತಾಳೆ.

ಇದಕ್ಕೆ ಬಹಳಷ್ಟು ಭಾರತೀಯರು ಆಘಾತದಿಂದ ಪ್ರತಿಕ್ರಿಯಿಸಿದರು. ಬಹುತೇಕರು ಆಕ್ರೋಶದಿಂದಲೂ ಪ್ರತಿಕ್ರಿಯಿಸಿದರು. ಇನ್ನು ಕೆಲವರು ಇದೊಂದು ದೇಶಕ್ಕೆ ಅಪಖ್ಯಾತಿ ತರುವ ಅಂತಾರಾಷ್ಟ್ರೀಯ ಪಿತೂರಿ ಎಂದೂ ಚಿತ್ರವನ್ನು ನಿಷೇಧಿಸುವಂತೆಯೂ ಹೇಳಿದರು.ಭಾರತದಲ್ಲಿನ ಅತ್ಯಾಚಾರದ ವಾಸ್ತವ ಮತ್ತು ಸ್ತ್ರೀದ್ವೇಷಗಳನ್ನು ಅರ್ಥಮಾಡಿಕೊಳ್ಳದೇ ದೇಶದ ಹೆಮ್ಮೆಗೆ ಹಾನಿ ತರುವ ಇಂಥ ಕೆಲಸಗಳ ಬಗ್ಗೆ ಉಂಟಾಗುವ ಈ ಎಲ್ಲ ಭಾವನೆಗಳನ್ನು ನಿರಾಕರಿಸುವುದು ಅಥವಾ ಇದನ್ನು ಒಂದು ಬಗೆಯ ಸಾಂಸ್ಕೃತಿಕ ವೈಕಲ್ಯ ಎಂದು ಸೀಮಿತಗೊಳಿಸುವುದು ತುಂಬ ಸುಲಭ. ಆದರೆ ಹೀಗೆ ಭಾವಿಸುವ ಬಹಳಷ್ಟು ಭಾರತೀಯರು ಚಿತ್ತವೈಕಲ್ಯರೂ ಅಲ್ಲ, ಮೂರ್ಖರೂ ಅಲ್ಲ. ವಾಸ್ತವವಾಗಿ ಇಂಥದ್ದೊಂದು ಅಂತಾರಾಷ್ಟ್ರೀಯ ಪಿತೂರಿ ನಡೆಯುತ್ತಿದೆ ಎಂಬ ವ್ಯಾಪಕ ಭಾವನೆಯನ್ನು ಮೂಡಿಸಬೇಕಾದ ಅಗತ್ಯವಿದೆ.

ಯಾವುದು ಆತಂಕದಲ್ಲಿದೆ ಎಂಬುದನ್ನು ಅರಿಯಲು ಯೂರೋಪಿನ ನಾಡಿಮಿಡಿತವನ್ನು ಗಮನಿಸೋಣ. ಇಲ್ಲಿ ಚಿತ್ರ ನಿರ್ಮಾಪಕರ ಮಾತನ್ನು ಮಾಧ್ಯಮ ಒಪ್ಪುತ್ತದೆ. ಭಾರತದಲ್ಲಿ ವ್ಯಾಪಕವಾಗಿರುವ ಅಭಿಪ್ರಾಯ ಎಂದು ಪರೋಕ್ಷವಾಗಿ ಸೂಚಿಸುವಂತೆ “ಅತ್ಯಾಚಾರವಾಗುವಾಗ ಹುಡುಗಿಯು ಸುಮ್ಮನಿದ್ದುಬಿಡಬೇಕು” ಎಂದು ಒಂದು ಮಾಧ್ಯಮದ ಶೀರ್ಷಿಕೆ ಹೇಳುತ್ತದೆ. ಆ ಪತ್ರಕರ್ತ ಬರೆಯುತ್ತಾನೆ: “ವಿಶೇಷವಾಗಿ ಉತ್ತರಭಾರತದಲ್ಲಿ ಲೈಂಗಿಕ ವಿಚಾರ ಬಂದಾಗ ಮಹಿಳೆಯರಿಗೆ ಯಾವ ಕಾನೂನೂ ಅನ್ವಯಿಸುವುದಿಲ್ಲ ಎಂದು ತಿಳಿಯಲಾಗಿದೆ”. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ಯಾವುದೇ ಶಿಕ್ಷೆಯ ಭಯವಿಲ್ಲದೇ ಮಹಿಳೆಯರನ್ನು ಪುರುಷ ಅನುಭವಿಸಬಹುದು. ಆದರೆ, ಮಹಿಳೆಯೊಬ್ಬಳಿಗೆ ತಂದೆ, ಸಹೋದರ, ಮತ್ತು ಮಗನೂ ಆದ ಭಾರತೀಯ ಪುರುಷನೊಬ್ಬ ಮಹಿಳೆಯರು ಅತ್ಯಾಚಾರಕ್ಕೆ ಸುಲಭವಾಗಿ ಲಭಿಸುವ ವಸ್ತುವಾಗಿದ್ದಾರೆ ಎಂದು ಹೇಗೆ ನೋಡಲು ಸಾಧ್ಯ? ತಮ್ಮ ಗಂಡುಮಕ್ಕಳು ಅತ್ಯಾಚಾರಿಗಳಾಗುವಂತೆ ಮಗನನ್ನು ಬೆಳೆಸುವ ತಂದೆ ತಾಯಿಗಳು ಕೇವಲ ನೈತಿಕ ಅಧ:ಪತನ ಹೊಂದಿರುವ ಸಂಸ್ಕೃತಿಯಲ್ಲಿ ಮಾತ್ರವೇ ಇರಲು ಸಾಧ್ಯವಾಗಬಹುದು. ಭಾರತದಲ್ಲಿನ ಅತ್ಯಾಚಾರ ಕುರಿತ ಸಂವಾದದ ಅಂತರ್ಗತ ಸಂದೇಶ ಇದೇ ಆಗಿದೆ.

ಭಾರತ ಗುರುಗಳ, ಹಾವಾಡಿಗರ ಮತ್ತು ಫಕೀರರ ದೇಶವಾಗಿತ್ತು. ಅದು ಜಾತಿ, ಹಸುಗಳು ಮತ್ತು ಮಸಾಲೆ ಪದಾರ್ಥದ ನಾಡಾಗಿತ್ತು. ಈಚಿನ ದಿನಗಳಲ್ಲಿ ಪಾಶ್ಚಾತ್ಯರ ಕಲ್ಪನೆಯಲ್ಲಿ ಅದು ಅತ್ಯಾಚಾರಿಗಳ ದೇಶವಾಗಿದೆ. “ಅಲ್ಲಿನ ಅತ್ಯಾಚಾರಿಗಳ ಬಗ್ಗೆ ಜಾಗೃತೆಯಿಂದಿರಿ” ಎಂದು ಭಾರತ ಪ್ರವಾಸ ಕೈಗೊಳ್ಳುವ ಮಹಿಳೆಯರಿಗೆ ಮತ್ತೆ ಮತ್ತೆ ಎಚ್ಚರಿಕೆ ನೀಡಲಾಗುತ್ತದೆ. ಅತ್ಯಾಚಾರ ಎನ್ನುವುದು ನಿತ್ಯ ಜೀವನದ ಭಾಗವಾಗಿದೆಯೇನೋ ಎನಿಸುವ ಸಂಸ್ಕೃತಿಯ ಬಗ್ಗೆ ಎಲ್ಲ ವರ್ಗದ ಜನತೆ ಹೇವರಿಕೆ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮವೂ ಇದರಲ್ಲಿ ಸೇರಿಕೊಳ್ಳುತ್ತದೆ: “ಭಾರತ ಹೇಗೆ ಸಾಮೂಹಿಕ ಅತ್ಯಾಚಾರದ ದೇಶವಾಯಿತು”, “ಭಾರತದಲ್ಲಿನ ಅತ್ಯಾಚಾರದ ಕಠೋರ ಸತ್ಯ”, “ಗ್ರಾಮೀಣ ಭಾರತದಲ್ಲಿ ಅತ್ಯಾಚಾರ ತೀರಾ ಸಾಮಾನ್ಯವೇ ವಿನಾ ಸಂತ್ರಸ್ಥರಿಗೆ ನ್ಯಾಯವಿಲ್ಲ”, “ಭಾರತದಲ್ಲಿ ಅತ್ಯಾಚಾರವೇಕೆ ‘ಸಾಮಾನ್ಯ’ವಾಗಿದೆ?”-ಇವು ಕೆಲವು ಮಾಧ್ಯಮಗಳ ಪ್ರಾತಿನಿಧಿಕ ಶೀರ್ಷಿಕೆಗಳಷ್ಟೆ. ಈ ಎಲ್ಲ ಹೇಳಿಕೆಗಳಲ್ಲಿ ಎದ್ದು ಕಾಣುವ ಸಂಗತಿ ಇದು: ಕೆಲವರ ಅನೈತಿಕ ಚಟುವಟಿಕೆಯನ್ನು ಇವು ಇಡೀ ಸಂಸ್ಕೃತಿ ಮತ್ತು ಅದರ ಮೌಲ್ಯದ ಅಭಿವ್ಯಕ್ತಿಯಾಗಿ ಪರಿವರ್ತಿಸುತ್ತಿವೆ.

ಈ ರೀತಿಯ ಹೇಳಿಕೆಗಳ ವಾಸ್ತವ ನೆಲೆಗಳನ್ನೊಮ್ಮೆ ಪರಿಶೀಲಿಸೋಣ. ಬೆಲ್ಜಿಯಂನಲ್ಲಿ ಪ್ರತಿ ವಾರ ನಾಲ್ಕರಿಂದ ಐದು ಸಾಮೂಹಿಕ ಅತ್ಯಾಚಾರಗಳು ನಡೆಯುತ್ತವೆ. ಪ್ರತಿ ನಿತ್ಯ ಎಂಟು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ. ಯೂರೋಪಿನ ಎಲ್ಲ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಜನ ತಮ್ಮ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುತ್ತಾರೆಂದು ಐರೋಪ್ಯ ಒಕ್ಕೂಟದ ಮೂಲಭೂತ ಹಕ್ಕುಗಳ ಏಜನ್ಸಿಯೊಂದರ ಅಧ್ಯಯನ ಹೇಳುತ್ತದೆ. ತಮ್ಮ ಎಳವೆಯಲ್ಲೇ ವಯಸ್ಕರಿಂದ ಇಂಥ ದೌರ್ಜನ್ಯಕ್ಕೆ ಅವರು ಒಳಗಾದರೆಂಬ ವರದಿಗಳೂ ಸಾಕಷ್ಟಿವೆ. ಒಟ್ಟೂ ಮಹಿಳೆಯರಲ್ಲಿ ಶೇ 55 ಜನ ಲೈಂಗಿಕ ಭೀತಿಗೆ ಒಳಗಾಗಿದ್ದಾರೆ. ಆದರೆ, “ಬೆಲ್ಜಿಯಂ ಹೇಗೆ ಸಾಮೂಹಿಕ ಅತ್ಯಾಚಾರದ ದೇಶವಾಯಿತು” ಎನ್ನುವ ವರದಿಯುಳ್ಳ ಎಷ್ಟು ಸುದ್ದಿಗಳನ್ನು ದಿನನಿತ್ಯ ಪತ್ರಿಕೆಗಳಲ್ಲಿ ನೋಡಬಲ್ಲೆವು? “ಯೂರೋಪಿನಲ್ಲಿ ಲೈಂಗಿಕ ದೌರ್ಜನ್ಯ ಏಕೆ ‘ಸಾಮಾನ್ಯ’ ಎಂದೋ ”ಅಥವಾ “ಐರೋಪ್ಯ ಒಕ್ಕೂಟದಲ್ಲಿ ಲೈಂಗಿಕ ವಿಚಾರ ಬಂದಾಗ ಮಹಿಳೆಯರಿಗೆ ಕಾನೂನು ನೆರವಿಲ್ಲ ಎಂದೋ” ಎಷ್ಟು ಪತ್ರಕರ್ತರು ವಿವರಿಸಲು ಯತ್ನಿಸಿದ್ದಾರೆ? ನಿಮ್ಮ ಅನಿಸಿಕೆ ಸರಿ. ಒಬ್ಬರೂ ಇಲ್ಲ.

“ಭಾರತದಲ್ಲಿ ಪ್ರತಿ ಗಂಟೆಗೆ ಮೂವರು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ” ಎಂದು ಈಚೆಗೆ ಯೂರೋಪಿನ ಪತ್ರಿಕೆಯೊಂದು ಕೂಗಿಕೊಂಡಿತು. ಆದರೆ ಇದು 1.25 ಶತಕೋಟಿ ಜನಸಂಖ್ಯೆಗೆ ಎಂಬುದನ್ನು ಉಲ್ಲೇಖಿಸಲು ಅದು ಮರೆತಿತ್ತು. 11 ದಶಲಕ್ಷ ಜನಸಂಖ್ಯೆಯುಳ್ಳ ಬೆಲ್ಜಿಯಂನಲ್ಲಿ ಪ್ರತಿ ಮೂರು ತಾಸಿಗೆ ಒಂದು ಅತ್ಯಾಚಾರ ನಡೆಯುತ್ತದೆ. 56 ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಇಂಗ್ಲೆಂಡ್ ಮತ್ತು ವೇಲ್ಸ್‍ನಲ್ಲಿಯೇ ಪ್ರತಿ ವರ್ಷ ಸುಮಾರು 78,000 ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ ಎಂಬ ಅಂದಾಜಿದೆ. ಇದು ಪ್ರತಿ ಗಂಟೆಗೆ 9ಕ್ಕೂ ಹೆಚ್ಚು ಅತ್ಯಾಚಾರದಷ್ಟಾಗುತ್ತದೆ. ನೀವೇ ಲೆಕ್ಕಹಾಕಿ ನೋಡಬಹುದು ಅಥವಾ ವಿಶ್ವಸಂಸ್ಥೆಯ 2010ರ ವರದಿಯನ್ನೇ ಗಮನಿಸಬಹುದು. ಭಾರತದಲ್ಲಿ ಆ ವರ್ಷ ಪ್ರತಿ 100,000 ಜನಸಂಖ್ಯೆಗೆ 1.8 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೆಲ್ಜಿಯಂನಲ್ಲಿ ಈ ಪ್ರಮಾಣ ಹೆಚ್ಚೂಕಡಿಮೆ 30. ಅಮೆರಿಕದಲ್ಲಿ ಇದು 27.3 ಆಗಿದ್ದರೆ ಇಂಗ್ಲೆಂಡ್‍ನಲ್ಲಿ ಸುಮಾರು 28.

ಭಾರತದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ ಎಂಬುದು ನಿರೀಕ್ಷಿಸಬಹುದಾದ ಪ್ರತಿಕ್ರಿಯೆ. ಆಯಿತು, ಬೆಲ್ಜಿಯಂನಂಥ ದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ 10ರಲ್ಲಿ 1 ಪ್ರಕರಣ ಮಾತ್ರ ದಾಖಲಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದಲ್ಲಿನ ಸಂಖ್ಯೆ 100ರಲ್ಲಿ 1 ಆದರೂ ಅದನ್ನು ಮೀರಿಸುವ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಮಾಣ ಬೆಲ್ಜಿಯಂ, ಅಮೆರಿಕ ಅಥವಾ ಇಂಗ್ಲೆಂಡ್‍ಗಳಲ್ಲಿದೆ. ಅತ್ಯಾಚಾರ ಹತ್ತಿಕ್ಕುವಲ್ಲಿ ಭಾರತೀಯ ಪೊಲೀಸರು ಮಹಾ ಭ್ರಷ್ಟರಾಗಿದ್ದಾರೆಂದೂ ಹೆಚ್ಚಿಸಿದ ಈ ಪ್ರಮಾಣ ಕೂಡ ವಾಸ್ತವ ಸಂಖ್ಯೆಗೆ ಸರಿಯಾಗದು ಎಂದೂ ಹೇಳಬಹುದು. ಆದರೆ, ಈ ಎಲ್ಲ ನಿರಾಕರಣೆಗಳು ಕೇವಲ ಭಾರತ ಅತ್ಯಾಚಾರಿಗಳ ದೇಶ ಎಂಬ ಕಲ್ಪನೆಯನ್ನು ಒಪ್ಪಲು ನಮ್ಮ ಮುಂದಿರುವ ಯಾವುದೇ ವಾಸ್ತವಾಂಶವನ್ನು ಯಾರಾದರೂ ಹೇಗೆಬೇಕಾದರೂ ಅಲ್ಲಗಳೆಯಬಹುದು ಎಂಬುದನ್ನು ಮಾತ್ರ ಇದು ಸೂಚಿಸುತ್ತವೆ. ಇದು ನಿಜವಾಗಿಯೂ ಒಂದು ಸಮಸ್ಯೆಯನ್ನು ಪರಿಶೀಲನೆಗೊಳಪಡಿಸುವ ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಭಾರತದ ಬಗೆಗಿನ ಅತ್ಯಾಚಾರ ಕುರಿತಾದ ವರದಿಗಳು ಅಜ್ಞಾನದ ಪರಮಾವಧಿಗೆ ಹಿಡಿದ ಕೈಗನ್ನಡಿಯಾಗಿವೆ. ಈ ವರದಿಗಳು ಭಾರತದ ಬಗೆಗಿನ ಪಾಶ್ಚಾತ್ಯರ ದೃಷ್ಟಿಯನ್ನು ದೃಢೀಕರಿಸುವ ವಿಷಯದಲ್ಲಿ ತಜ್ಞರಾದ ನಿರ್ದಿಷ್ಟ ವರ್ಗದ ಪತ್ರಕರ್ತರು ಮತ್ತು ಬುದ್ಧಿಜೀವಿಗಳು ಹೇಳಿದ ಕತೆಯನ್ನು ಕಣ್ಣುಮುಚ್ಚಿ ಸ್ವೀಕರಿಸುತ್ತವೆ. ಹೀಗಾಗಿ, ಮೇ 2014ರಲ್ಲಿ ಭಾರತದ ಹಳ್ಳಿಯೊಂದರಲ್ಲಿ ಇಬ್ಬರು ಹುಡುಗಿಯರು ಮರಕ್ಕೆ ನೇಣು ಹಾಕಿಕೊಂಡಿದ್ದು ಪತ್ತೆಯಾದಾಗ ಯೂರೋಪಿನ ಮಾಧ್ಯಮಗಳು ಭಾರತದಲ್ಲಿರುವ ದುಷ್ಟ ಸಾಮಾಜಿಕ ಜಾತಿ ವ್ಯವಸ್ಥೆಯ ಕಾರಣದಿಂದ ಅತ್ಯಾಚಾರಕ್ಕೊಳಗಾಗಿ ಈ ಹೆಣ್ಣುಮಕ್ಕಳು ಕೊಲೆಯಾಗಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿದ್ದವು. “ದಲಿತ ಹೆಣ್ಣುಮಗಳನ್ನು ಅತ್ಯಾಚಾರವೆಸಗಿ ಕೊಲ್ಲಬಹುದು” ಎಂದಿತ್ತು ಪತ್ರಿಕೆಯೊಂದರ ಶೀರ್ಷಿಕೆ. ಈ ಇಬ್ಬರೂ ಹೆಣ್ಣುಮಕ್ಕಳು “ಜಾತಿ ವ್ಯವಸ್ಥೆಯಲ್ಲಿ ಹೊರಗುಳಿದ ಸಾಮಾಜಿಕ ಶ್ರೇಣಿಯಲ್ಲಿ ಅತ್ಯಂತ ಕೆಳಗಿನ ದಲಿತ ಸಮುದಾಯದವರಾಗಿದ್ದರು” ಎಂದು ಮತ್ತೊಂದು ಲೇಖನ ವರದಿ ಮಾಡಿತ್ತು. ಕೆಳಜಾತಿಯನ್ನು ಶೋಷಿಸಲು ಮೇಲ್ಜಾತಿಯು ಲೈಂಗಿಕ ದೌರ್ಜನ್ಯವನ್ನು ಬಳಸಿಕೊಂಡಿದೆ ಎಂದು ಇಬ್ಬರೂ ಪತ್ರಕರ್ತರು ತುತ್ತೂರಿ ಊದಿದ್ದರು.

ವಾಸ್ತವ ಹೊರಬರುತ್ತಿದ್ದಂತೆ ಈ ಮಾಧ್ಯಮಗಳು ತೆಪ್ಪಗೆ ಕುಳಿತವು. “ದಲಿತ ಸಮುದಾಯ” ಎಂಬುದು ನಿಶ್ಚಿತವಾಗಿ ಯಾವ ಜಾತಿ ಅಥವಾ ಸಮುದಾಯದ ಕುರಿತ ಸಂಗತಿ ಅಥವಾ ಆ ರೀತಿಯ ಸಮುದಾಯವೊಂದಿದೆಯೆ ಅಥವಾ ಅದು ಆಧುನಿಕ ಕಲ್ಪನೆಯೇ ಎಂಬಿತ್ಯಾದಿ ವಿಷಯಗಳ ಸುಳಿವೇ ಅವರಿಗೆ ಇಲ್ಲದಿರುವುದು ಸ್ಪಷ್ಟ. ‘ಮೇಲ್ಜಾತಿ’ ಪುರುಷರು ‘ಕೆಳಜಾತಿ’ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಅತ್ಯಾಚಾರವೆಸಗುತ್ತಾರೆ ಎಂಬ ಮಾತಿಗೆ ಯಾವ ಪುರಾವೆಯೂ ಇರಲಿಲ್ಲ, ಏಕೆಂದರೆ ಅಂಥ ಯಾವುದೇ ಸಾಕ್ಷಿ ಲಭಿಸಿರಲಿಲ್ಲ. ತಪ್ಪೆಸಗಿದ ಆರೋಪಿಗಳು ಮೇಲ್ಜಾತಿಯವರಾಗಿರಲಿಲ್ಲ, ಹೆಣ್ಣುಮಕ್ಕಳೂ ಅಸ್ಪೃಶ್ಯರಾಗಿರಲಿಲ್ಲ. ಇಬ್ಬರೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರು. ಅತ್ಯಾಚಾರ ಅಥವಾ ಕೊಲೆಯಾಗಿರುವ ಯಾವ ಪುರಾವೆಯೂ ಇಲ್ಲವೆಂದೂ ಪ್ರಮುಖ ಆರೋಪಿಯ ಜೊತೆ ಇವರಲ್ಲಿ ಒಬ್ಬಾಕೆ ಪ್ರೇಮ ವ್ಯವಹಾರ ಇಟ್ಟುಕೊಂಡಿದ್ದಳೆಂದೂ ಪೋಷಕರು ಹೇಳಿಕೆ ಬದಲಿಸುತ್ತಿದ್ದಾರೆಂದೂ ಸಾಕ್ಷಿಗಳಿಗೆ ಆಮಿಷ ಒಡ್ಡಿರುವಂತೆ ಕಾಣುತ್ತದೆ ಎಂದೂ ಸಿಬಿಐ ಅಭಿಪ್ರಾಯಪಟ್ಟಿದೆ ಎಂಬುದನ್ನು ಗುರುತಿಸುವುದು ಇವುಗಳಿಗೆ ಇನ್ನೂ ನೋವಿನ ಸಂಗತಿಯಾಗಿತ್ತು. ಬದಲಾಗಿ ಅಪರಾಧವನ್ನು ಮುಚ್ಚಿಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆಂಬುದು ಇವರೆಲ್ಲರ ಒಕ್ಕೊರಲಿನ ಆಕ್ರಂದನವಾಗಿತ್ತು. ಭಾರತದ ಬಗೆಗಿನ ಸಾಮಾನ್ಯ ಕತೆ (ಈಗಾಗಲೆ ನಮ್ಮ ಅಕಾಡೆಮಿಕ್ ಮತ್ತು ಸಾರ್ವಜನಿಕ ಪಂಡಿತರ ನಡುವೆ ಚಾಲತಿಯಲ್ಲಿರುವ ಹಳೆಯ ಸರಕು)ಗೆ ಇದು ಸೂಕ್ತವಾಗಿ ಹೊಂದಿಕೆಯಾಯಿತು; ವಾಸ್ತವಕ್ಕಲ್ಲ.

ಯೂರೋಪಿನಲ್ಲಿ, (ಮತ್ತು ಭಾರತದ ಕೆಲವು ಬುದ್ಧಿಜೀವಿಗಳಲ್ಲಿ) ಭಾರತದ ಕುರಿತ ಕೆಲವು ಕ್ಲೀಷೆಗಳು (ಚರ್ವಿತಚರ್ವಣ) ಎಲ್ಲ ನಿರ್ದಿಷ್ಟ ಮತ್ತು ಸರಿಯಾದ ವಿವರಣೆಗಳನ್ನು ಮುಚ್ಚಿಹಾಕಿಬಿಡುತ್ತವೆ. ಈ ಸಮಾಜದಲ್ಲಿ ಮಹಿಳಾ ದ್ವೇಷ ಆಳವಾಗಿ ಬೇರೂರಿದೆ ಎಂದು ಪತ್ರಕರ್ತರು ಹೇಳುತ್ತಾರೆ. ಯೂರೋಪಿನ ಸಮಾಜ ಮತ್ತು ಅದರ ಮಹಿಳಾ ವಿಮೋಚನೆಯ ದೃಷ್ಟಿಯೊಂದಿಗೇ ಇದರ ತುಲನೆ ಅಂತರ್ಗತ ಎಂಬುದು ಸ್ಪಷ್ಟ. ಸರಿ, ಭಾರತದ ರಾಜಕೀಯ ವಲಯದಲ್ಲಿನ ಮಹಿಳಾ ಪಾತ್ರವನ್ನು ಬೆಲ್ಜಿಯಂನಂಥ ದೇಶದ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡೋಣ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅತ್ಯಂತ ಬಲಿಷ್ಠ ವ್ಯಕ್ತಿ ಒಬ್ಬ ಮಹಿಳೆಯೇ ಆಗಿದ್ದಾಳೆ. ಅಂತೆಯೇ ರಾಜ್ಯ ಮಟ್ಟದ ಸರ್ಕಾರಗಳಲ್ಲೂ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ವ್ಯಕ್ತಿಗಳಲ್ಲಿ ಅನೇಕ ಮಹಿಳೆಯರಿದ್ದಾರೆ. ಮೇಯರ್‍ಗಳ ಮತ್ತು ವಿಶ್ವವಿದ್ಯಾನಿಲಯಗಳ ಕುಲಪತಿಗಳ ವಿಷಯದಲ್ಲೂ ಇದೇ ಅನ್ವಯ. 1966ರಲ್ಲಿ ಭಾರತಕ್ಕೆ ಮೊದಲ ಮಹಿಳಾ ಪ್ರಧಾನಮಂತ್ರಿ ಲಭಿಸಿದರು. ಐವತ್ತು ವರ್ಷಗಳ ಅನಂತರ ಬೆಲ್ಜಿಯಂನಲ್ಲಿ ನಾವಿನ್ನೂ ಕಾಯುತ್ತಲೇ ಇದ್ದೇವೆ. ಇದುವರೆಗೆ ಯಾವ ಮಹಿಳೆಯೂ ಬೆಲ್ಜಿಯಂ ಒಕ್ಕೂಟದ ಪ್ರಧಾನಿಯಾಗಿಲ್ಲ. ಯಾವ ಪ್ರಾದೇಶಿಕ ಆಡಳಿತದಲ್ಲೂ ಇನ್ನೂ ಮಂತ್ರಿಸ್ಥಾನ ಪಡೆದಿಲ್ಲ. ಇದುವರೆಗೂ ಯಾವ ನಗರವೂ ಮಹಿಳಾ ಮೇಯರ್ ಕಂಡಿಲ್ಲ. ಅದ್ಭುತ ಎಂಬಂತೆ ನಮ್ಮ ವಿಶ್ವವಿದ್ಯಾನಿಲಯಕ್ಕೆ ಸುಮಾರು 200 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಕುಲಪತಿಯೊಬ್ಬರ ನೇಮಕವಾಗಿದೆ.

ಯೂರೋಪಿನ ಎಲ್ಲ ವರದಿಗಳೂ ಭಾರತದ ಬಗ್ಗೆ ಕಲ್ಪಿತವಾಗಿವೆ ಎಂದಲ್ಲ. ಪುರುಷ ಮತ್ತು ಮಹಿಳಾ ಸಂಬಂಧದ ವಿಷಯ ಬಂದಾಗ ದೇಶದಲ್ಲಿ ಸಮಸ್ಯೆಗಳು ಕಾಣಿಸುತ್ತವೆ. ಮೂರ್ಖ ಮಾತ್ರ ಇದನ್ನು ಅಲ್ಲಗಳೆಯಬಲ್ಲ. ಬೇರೆಡೆ ಇರುವಂತೆಯೇ ಅಲ್ಲಿಯೂ ಮಹಿಳೆಯ ವಿಷಯದಲ್ಲಿ ಸಾಕಷ್ಟು ಅನ್ಯಾಯವಾಗಿದೆ. ದೆಹಲಿಯಂಥ ನಗರಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಪ್ರಮುಖ ಸಮಸ್ಯೆಗಳಾಗಿವೆ. ಭಾರತದ ಕೆಲವು ಭಾಗಗಳಲ್ಲಿ ರಾಜಕಾರಣಿಗಳು ಮತ್ತು ಗೂಂಡಾಗಳ ನಡುವಿನ ಸಲುಗೆ ವೀಕ್ಷಕರಿಗೆ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಆದರೆ ನಮ್ಮ ನಡುವಿನ ಪ್ರಬಲ ಕತೆಗಳು ಭಾರತೀಯ ಸಮಾಜದ ಇಂಥ ಯಾವುದೇ ಆಯಾಮವನ್ನು ಅರಿಯಲು ಬಿಡುವುದಿಲ್ಲ. ಇವೇನಿದ್ದರೂ ದೇಶದ ಬಗ್ಗೆ ಭ್ರಮನಿರಸನ ಉಂಟುಮಾಡುತ್ತವೆ.
ನಿಜ, 1.25 ಶತಕೋಟಿ ಜನಸಂಖ್ಯೆಯ ದೇಶದಲ್ಲಿ 11 ದಶಲಕ್ಷ ಜನಸಂಖ್ಯೆಯ ದೇಶದಲ್ಲಿರುವುದಕ್ಕಿಂತ ಹೆಚ್ಚು ವಿಕೃತರು, ರೋಗಿಗಳು ಕಾಣುತ್ತಾರೆ. ಆದರೆ ಬಹಳಷ್ಟು ಭಾರತೀಯರು ಮಹಿಳೆಯರು ಅತ್ಯಾಚಾರದ ವಸ್ತುಗಳೆಂಬಂತೆಯೇ ಸಿದ್ಧವಾಗಿರುತ್ತಾರೆ ಎನ್ನುವುದು ಅವಸರದ ಕಲ್ಪಿತ ತೀರ್ಮಾನದ ನಿದರ್ಶನವಾಗುತ್ತದೆ. “ಎಲ್ಲ ಭಾರತೀಯ ಪುರುಷರೂ ಹೀಗೆಯೇ ಯೋಚಿಸುವುದಿಲ್ಲ, ವರ್ತಿಸುವುದಿಲ್ಲ” ಎಂದು ವಿವರಣೆಕಾರನೊಬ್ಬ ಆಗಾಗ ಒಪ್ಪುತ್ತಾನೆ. ಆದರೆ, ಈ ದೃಷ್ಟಿ ಎಷ್ಟು ಅನುಚಿತ ಮತ್ತು ತಿರುಚಿದ್ದು ಎಂಬುದನ್ನು ಇದು ದೃಢಪಡಿಸುತ್ತದೆ. ವಿಕೃತರನ್ನು ಭಾರತೀಯ ಸಮಾಜದ ಸಹಜ ಭಾಗವೆಂಬಂತೆಯೂ ನೈತಿಕವಾಗಿ ಸರಿಯಾಗಿ ಬದುಕುವವರನ್ನು ಅಪವಾದವೆಂಬಂತೆಯೂ ಚಿತ್ರಿಸಲಾಗುತ್ತಿದೆ. ನಿಜವಾಗಿ ಇದು ಅದಲು ಬದಲಾಗಬೇಕು.

ಈ ಸಂವಾದದಲ್ಲಿ ಎಷ್ಟು ನ್ಯೂನತೆಗಳಿವೆ ಎಂಬುದನ್ನು ಅರಿಯಲು ಇನ್ನೊಂದು ವಾಸ್ತವ ಸಂಗತಿಗಳನ್ನು ಗಮನಿಸಬಹುದು. ಈಗಿರುವ ಅಭಿಪ್ರಾಯಕ್ಕೆ ತದ್ವಿರುದ್ದವಾದ ನಿರ್ಣಯಕ್ಕೆ ಬರಲು ಇದು ಉಪಯುಕ್ತವಾಗುತ್ತದೆ. ಮಹಿಳಾ ರಾಜಕಾರಣಿಗಳು, ಲೆಕ್ಕವಿಡಲಾರದಷ್ಟು ಸಂಖ್ಯೆಯಲ್ಲಿರುವ ಮತ್ತ ದೇಶಾದ್ಯಂತ ಪೂಜಿಸಲ್ಪಡುವ ದೇವಿಯರು, ಅಸಂಖ್ಯಾತ ಅನುಯಾಯಿಗಳಿರುವ ಅಮ್ಮನಂಥ ಗುರುಗಳು, ಭಾರತೀಯ ಸಮಾಜದಲ್ಲಿ ತಾಯಿಗಿರುವ ಮಹತ್ತ್ವವನ್ನು ತೋರಿಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಅಸಾಧಾರಣ ಸ್ಥಾನ ಪಡೆದಿದ್ದಾಳೆ ಎಂಬುದನ್ನು ಸಾಧಿಸಲು ಈ ಸಂಗತಿಗಳನ್ನು ಬಳಸಬಹುದು. ಗಂಭೀರ ಸಂಶೋಧನೆಗಳಿಲ್ಲದೇ ಇದ್ದರೆ ಇದು ಕೂಡ “ಆಳವಾಗಿ ಬೇರೂರಿದ ಮಹಿಳಾ ದ್ವೇಷ”ದಷ್ಟೇ ಮಹತ್ತ್ವ ಪಡೆಯುತ್ತದೆ. ಆದರೆ ಇದು ಭಾರತದ ಅತ್ಯಾಚಾರ ಸಂಸ್ಕೃತಿ ಕುರಿತ ಮಾತುಗಳು ಎಷ್ಟು ಅಸಂಬದ್ಧವಾಗಿವೆ ಎಂಬುದನ್ನು ತೋರಿಸುತ್ತದೆ.

ಅವಸರದ ಕುತರ್ಕವನ್ನು ಸಾಮಾನ್ಯವಾಗಿ ನಿರ್ದಿಷ್ಟ ಪ್ರಚಾರದ ಉದ್ದೇಶ ಮತ್ತು ಭೀತಿಯ ರಾಜಕಾರಣಕ್ಕೆ (ಗೋಬೆಲ್ಸ್‍ನನ್ನು ನೆನಪಿಸಿಕೊಳ್ಳಿ) ಬಳಸಿಕೊಳ್ಳಲಾಗುತ್ತದೆ. ಸದ್ಯ, ಇದು ಭಾರತದಲ್ಲಿನ ಅತ್ಯಾಚಾರದ ಬಗೆಗಿನ ಸಂವಾದದ ಅವಿಭಾಜ್ಯ ಅಂಗವಾಗಿದೆ. ಹೀಗಿರುವಾಗ ಇದರಲ್ಲಿ ತಮ್ಮ ದೇಶದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ಅಡಗಿದೆ ಎಂದು ಬಹಳಷ್ಟು ಭಾರತೀಯರು ಭಾವಿಸಿದ್ದರೆ ಅಚ್ಚರಿ ಇಲ್ಲ. ಭಾರತೀಯ ಸಂಸ್ಕೃತಿಯ ಬಗ್ಗೆ ಅಂತಾರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯ ಶತಮಾನಗಳಿಗೂ ಹಳೆಯದಾದ ಸರಕನ್ನು ಸತ್ಯವೆಂದು ಪ್ರತಿಪಾದಿಸಿದೆ. ಈ ಅಭಿಪ್ರಾಯಗಳ ಕಬಂಧ ಬಾಹುಗಳಲ್ಲಿ ಸಿಲುಕಿ ಅವುಗಳ ವಿರುದ್ಧ ಸತ್ಯ ಪ್ರತಿಪಾದನೆ ಮಾಡುವ ಯಾವ ದ್ವನಿಗೂ ಇಲ್ಲಿ ಸ್ಥಳಾವಕಾಶವಿದ್ದಂತೆ ತೋರುವುದಿಲ್ಲ. ಈ ಹಿನ್ನಲೆಯಲ್ಲಿ ಸಿನಿಮಾ ಮತ್ತು ಪುಸ್ತಕಗಳ ನಿಷೇಧದ ಕರೆ ಸರಿಯಾದ ಕ್ರಮವಲ್ಲದಿದ್ದರೂ ಇದು ಇಂದಿಗೂ ಬೌದ್ಧಿಕÀ ವಲಯದ ಮೇಲೆ ಹಿಡಿತ ಸಾಧಿಸಿರುವ ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ಹಳಸಲು ಸಂವಾದಗಳ ವಿರುದ್ಧ ಇರುವ ಹತಾಶೆಯ ಅಭಿವ್ಯಕ್ತಿಯಾಗಿದೆ. ಅನೈತಿಕ ನಿಯಮಗಳನ್ನೇ ನೈತಿಕ ಎಂದು ಪಾಲಿಸುವಂತೆ ಸಂಸ್ಕೃತಿಯೊಂದು ತನ್ನ ಜನರನ್ನು ತಯಾರು ಮಾಡುತ್ತದೆ ಎಂಬಂತೆ ಭಾರತವನ್ನು ಚಿತ್ರಿಸಿ, ಬೌದ್ಧಿಕ ವರ್ಗ ತನ್ನ ಕುಯುಕ್ತಿಗಳ ಮೂಲಕ ಭಾರತದಲ್ಲಿ ಕೇವಲ ಅನೈತಿಕತೆಯೇ ತುಂಬಿರುವಂತೆ ಬಿಂಬಿಸುತ್ತಿದೆ.

ಯೂರೋಪಿಯನ್ನರಾಗಿ ನಾವು ಉದಯೋನ್ಮುಖ ದೇಶವೊಂದು ಬಡತನದಿಂದ ಬಳಲುತ್ತಿರುವ ರೀತಿ ಮತ್ತು ಶತಮಾನಗಳ ಕಾಲ ವಸಾಹತುಶಾಹಿಯಿಂದ ಘಾಸಿಗೊಂಡ ಸಂಸ್ಕೃತಿಯೊಂದು ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು ತಾದಾತ್ಮ್ಯ ಹೊಂದಬಹುದು. ನಮ್ಮಿಬ್ಬರಿಗೂ ಸಾಧಾರಣವಾಗಿ ಕಾಡುವ ಸಮಸ್ಯೆಗಳಿಗೆ ಒಟ್ಟಿಗೇ ಪರಿಹಾರವನ್ನೂ ಹುಡುಕಬಹುದು. ಅದನ್ನೆಲ್ಲ ಬಿಟ್ಟು ಭಾರತೀಯ ಸಂಸ್ಕೃತಿಯೇ ಅನೈತಿಕ ಎಂಬ ವಸಾಹತುಶಾಹಿ ಕಾಲದ ಹಳಸಲು ಕತೆಯನ್ನೇ ನಾವು ಮತ್ತೆ ಹೇಳುತ್ತಿದ್ದೇವೆ. ಭಾರತದ ಜನರೊಂದಿಗೆ ಇದು ಉತ್ತಮ ಬಾಂಧವ್ಯ ಉಂಟುಮಾಡುವುದಿಲ್ಲ. ಒಂದೆಡೆ ನಾವು ‘ಸ್ಥಳೀಯ ಜ್ಞಾನ’ಕ್ಕಾಗಿ ಇದೇ ವರ್ಗದ ಭಾರತೀಯ ಪತ್ರಕರ್ತರು, ಹೋರಾಟಗಾರರು, ಮತ್ತು ಬುದ್ಧಿಜೀವಿಗಳತ್ತ ನೋಡುತ್ತೇವೆ. ಆದರೆ ಈ ಸ್ಥಳೀಯ ಮಾಹಿತಿದಾರರು ಪಾಶ್ಚಾತ್ಯರು ಹೇಳಿದ ಮಾತನ್ನೇ ಪಾಶ್ಚಾತ್ಯರಿಗೆ ಹೇಳುತ್ತಿದ್ದಾರೆ. ಮತ್ತೊಂದೆಡೆ, ಹೆಚ್ಚು ಹೆಚ್ಚು ಭಾರತೀಯರು ತಮ್ಮ ದೇಶದ ಬಗ್ಗೆ ಯೂರೋಪಿನ ಜನ ಅನುಕಂಪ ತೋರುವ ಕ್ರಮದ ಕುರಿತು ಜುಗುಪ್ಸೆಗೊಂಡಿದ್ದಾರೆ. ಅವರ ಈ ಜುಗುಪ್ಸೆಯನ್ನು ತಮ್ಮ ರಾಷ್ಟ್ರಾಭಿಮಾನಕ್ಕೆ ಧಕ್ಕೆಯೆಂಬ ಹೆಸರಿನಲ್ಲಿ ತಿರಸ್ಕರಿಸುತ್ತಿದ್ದಾರೆ. ಇಂದಿನ ಹೊಸ ಯುಗದಲ್ಲಿ ಎರಡು ಸಂಸ್ಕೃತಿಯ ಜನರನ್ನು ಒಗ್ಗೂಡಿಸಲು ನಾವು ಬಯಸುವುದಾದರೆ ಕಾರಣ (ರೀಸನ್) ಮತ್ತು ತಾದಾತ್ಮ್ಯ(ಎಂಪಥಿ)ಗಳೆರಡೇ ನಮ್ಮ ಆಶಾಕಿರಣ. ಭಾರತದ ಬಗೆಗಿನ ಸದ್ಯದ ಸಂವಾದದ ಹುಚ್ಚುತನ ಆದಷ್ಟು ಬೇಗ ಕೊನೆಗಾಣಲೇಬೇಕು.

ಚಿತ್ರಕೃಪೆ :http://www.indiatvnews.com

1 ಟಿಪ್ಪಣಿ Post a comment
  1. Shripad
    ಆಕ್ಟೋ 12 2015

    ಯಾರದ್ದೋ ಮನೆಗೆ ಬೆಂಕಿ ಬಿದ್ದರೆ ಕಂಡವರು ಬೇಳೆ ಬೇಯಿಸಿಕೊಳ್ಳುವುದು, ಚಳಿ ಕಾಯಿಸಿಕೊಳ್ಳೋದು ಸಾಮಾನ್ಯ ಬಿಡಿ. ಆದರೆ, ಅದೇ ಮನೆಯ ಕೆಲ ಸದಸ್ಯರೇ ಅಂಥ ಕೆಲಸಕ್ಕೆ ಇಳಿಯುವುದಕ್ಕೆ ಏನು ಹೇಳುವುದು? ಅತ್ಯಾಚಾರದಂಥ ಹೀನಾತಿಹೀನ ಕೃತ್ಯದಲ್ಲೂ ರಾಜಕೀಯ ಮಾಡುವ ಪಟ್ಟ ಭದ್ರರು, ಸ್ವಾರ್ಥಿಗಳನ್ನು ಕುರಿತು ರೂವರ್ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ…ಅನುವಾದವೂ ಅಷ್ಟೇ ಚೆನ್ನಾಗಿದೆ. ಇಂಥ ಲೇಖನಗಳಿಗೆ ಇತರೆ ಮಾಧ್ಯಮಗಳಲ್ಲಿ ‘ಜಾಗವಿಲ್ಲ’ ಎಂಬುದು ಸುಳ್ಳಲ್ಲ. ಅವರ ಮಹಾ ಗುಣವನ್ನು ಲೇಖಕರೇ ವಿವರಿಸಿದ್ದಾರೆ ಅನ್ನಿ. ಈ ಬಗೆಯ ಒಳನೋಟ ನೀಡಲು ಈ ವೇದಿಕೆಯಾದರೂ ಇದೆಯಲ್ಲ…ನಿಲುಮೆಗೆ ಅಭಿನಂದನೆಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments