ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 14, 2015

2

ಪ್ರಶಸ್ತಿ ಬೇಕೆ ಪ್ರಶಸ್ತಿ!

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಪ್ರಶಸ್ತಿಕೇಂದ್ರ ಸಾಹಿತ್ಯ ಅಕಾಡೆಮಿ ಹಿಂದೆ ಕೊಟ್ಟಿದ್ದ ಪ್ರಶಸ್ತಿಗಳನ್ನು “ವ್ಯವಸ್ಥೆಯ ವಿರುದ್ಧ” ಸಿಡಿದೆದ್ದಿರುವ ಲೇಖಕರು ವಾಪಸು ಮಾಡುತ್ತಿದ್ದಾರೆ. ನಯನತಾರಾ, ಅಶೋಕ್ ವಾಜಪೇಯಿ, ಸಾರಾ ಜೋಸೆಫ್, ರೆಹಮಾನ್ ಅಬ್ಬಾಸ್, ರಹಮತ್ ತರೀಕೆರೆ, ಕುಂ. ವೀರಭದ್ರಪ್ಪ, ಅಮನ್ ಸೇಥಿ, ಗುಲಾಮ್ ನಬಿ ಖಯಾಲ್ ಮುಂತಾದ ಹಲವು ಸಾಹಿತಿಗಳು ತಮ್ಮ ಅಕಾಡೆಮಿ ಪ್ರಶಸ್ತಿಗಳನ್ನು ಈಗಾಗಲೇ ವಾಪಸು ಕೊಟ್ಟಿದ್ದಾರೆ ಅಥವಾ ಕೊಡುವುದಾಗಿ ಪತ್ರಿಕಾಹೇಳಿಕೆಗಳನ್ನು ಹೊರಡಿಸಿದ್ದಾರೆ. ಇವರ ಕೆಲವು ಹೇಳಿಕೆಗಳು ಹೀಗಿವೆ: (1) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೂ ನಾವು ಭಯ, ಕಳವಳಗಳ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನಮ್ಮ ಈ ಅತಂತ್ರಸ್ಥಿತಿಯ ಬಗ್ಗೆ ಸಾಹಿತ್ಯ ಅಕಾಡೆಮಿ ಮೂಕವಾಗಿದೆ. ಎಮರ್ಜೆನ್ಸಿ, ಸಿಖ್ ನರಮೇಧ, ಬಾಬ್ರಿ ಮಸೀದಿ ಕೆಡವಿದ ಪ್ರಕರಣ, ಪಂಜಾಬ್ ಭಯೋತ್ಪಾದನೆ, ನಂದಿಗ್ರಾಮ ಹಿಂಸಾಚಾರ, ಗಿರಿಜನರ ಹತ್ಯೆಗಳು, ನಕ್ಸಲೈಟ್ ಹಿಂಸೆ, ಗುಜರಾತ್ ಹತ್ಯಾಕಾಂಡಗಳು ಇವೆಲ್ಲ ಸಮಸ್ಯೆಗಳಿಂದ ದೇಶದ ಏಕತೆ, ಭ್ರಾತೃತ್ವದ ಭಾವನೆಗಳಿಗೆ ಧಕ್ಕೆ ಬಂದಿದೆ. ಕಾಲದ ಸಾಕ್ಷಿಪ್ರಜ್ಞೆಯಾಗಬೇಕಾದ ಸಾಹಿತಿಗಳು ಈಗಲ್ಲವಾದರೆ ಇನ್ನೆಂದು ಎಚ್ಚೆತ್ತುಕೊಳ್ಳಬೇಕು? – ಅಶೋಕ್ ವಾಜಪೇಯಿ (2) ಪ್ರಸ್ತುತ ದೇಶ ಎದುರಿಸುತ್ತಿರುವ ಸಮಸ್ಯೆಗಳು ನಿಜಕ್ಕೂ ಗಂಭೀರವಾಗಿವೆ. ಇದು ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶ – ಸಾರಾ ಜೋಸೆಫ್ (3) ದಾದ್ರಿಯಲ್ಲಿ ನಡೆದ ಹತ್ಯೆ ಇಡೀ ಮನುಕುಲವೇ ದುಃಖ ಮತ್ತು ಆಕ್ರೋಶದಿಂದ ತಲೆ ತಗ್ಗಿಸುವಂಥಾದ್ದು. ಈ ಬಗ್ಗೆ ಪ್ರಧಾನಿಗಳು ಇದುವರೆಗೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ಇದನ್ನು ನಾನು ವಿರೋಧಿಸಲೇಬೇಕಾಗಿದೆ – ರಹಮಾನ್ ಅಬ್ಬಾಸ್ (4) ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ ನಾನು ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ – ರಹಮತ್ ತರೀಕೆರೆ

ಈ ಎಲ್ಲರ ಹೇಳಿಕೆಗಳನ್ನು ನೋಡಿದ ಮೇಲೆ ಪ್ರಶಸ್ತಿ ವಾಪಸು ಮಾಡುತ್ತಿರುವವರನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಬಹುದು ಅನ್ನಿಸುತ್ತದೆ.

(1) ದೇಶದಲ್ಲಿ ಅಶಾಂತಿ, ಅಸಹನೆ ಹೊತ್ತಿ ಉರಿಯುತ್ತಿದೆ ಎನ್ನುವವರು

(2) ಕಲ್ಬುರ್ಗಿ ಕೊಲೆ ಕೇಸಿನಲ್ಲಿ ಪ್ರಧಾನಿ / ಸಾಹಿತ್ಯ ಅಕಾಡೆಮಿ ಮೌನವಾಗಿದೆ ಎನ್ನುತ್ತಿರುವವರು

(3) ದಾದ್ರಿ ಪ್ರಕರಣದ ಬಗ್ಗೆ ಮಾತಾಡುವವರು

(4) ದೇಶದಲ್ಲಿ ಹಿಂದೆ ಆಗಿಹೋಗಿರುವ ಹತ್ಯಾಕಾಂಡಗಳನ್ನೂ ಕೊಲೆ-ಅನಾಚಾರಗಳನ್ನು ಈಗ ಇದ್ದಕ್ಕಿದ್ದಂತೆ ನೆನೆಸಿಕೊಂಡು ಕಣ್ಣೀರು ಹಾಕುತ್ತಿರುವವರು.

ಇವರಲ್ಲಿ ಮೊದಲನೆಯ ಗುಂಪನ್ನು ಎತ್ತಿಕೊಳ್ಳೋಣ. ಇವರು ಹೇಳುವಂತೆ ನಿಜವಾಗಿಯೂ ದೇಶದಲ್ಲಿ ಅಸಹನೆ ಭುಗಿಲೆದ್ದಿದೆಯೆ? ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 17 ತಿಂಗಳು ಕಳೆದವು. ಮೋದಿ ಅಧಿಕಾರಕ್ಕೆ ಬಂದರೆ ಇಲ್ಲಿ ಹತ್ಯಾಕಾಂಡಗಳು ನಡೆಯುತ್ತವೆ; ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತದೆ ಎಂದು ಚುನಾವಣೆ ಸಮಯದಲ್ಲಿ ಒಂದು ಗುಂಪಿನ ಲೇಖಕರು ನಿರಂತರ ಪ್ರಚಾರ ಮಾಡಿದ್ದರು. ಜ್ಞಾನಪೀಠದಂತಹ ಉನ್ನತ ಪ್ರಶಸ್ತಿ ಪಡೆದಿದ್ದ ಲೇಖಕರೊಬ್ಬರು “ಮೋದಿ ಪ್ರಧಾನಿಯಾದ ದೇಶದಲ್ಲಿ ನಾನು ಬದುಕಿರಲು ಇಚ್ಛಿಸುವುದಿಲ್ಲ” ಎಂಬ ಇಮೋಶನಲ್ ಗಾಳ ಎಸೆದಿದ್ದರು. ಅದುವರೆಗೂ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸರ್ಕಾರಗಳಲ್ಲಿ ಪ್ರಶಸ್ತಿ, ಹುದ್ದೆ ಪಡೆದು ಹಾಯಾಗಿದ್ದ ಲೇಖಕರೆಲ್ಲ ಚುನಾವಣೆಯ ಸಮಯದಲ್ಲಿ ಕೈಯಲ್ಲಿ ಕರಪತ್ರ ಹಿಡಿದು ಬೀದಿಗಿಳಿದದ್ದನ್ನೂ ಈ ದೇಶ ನೋಡಿದೆ. ಆದರೆ, ಮೋದಿ ಪ್ರಧಾನಿಯಾದ ನಂತರ ಇವರ ಗಂಜಿಕೇಂದ್ರಗಳಿಗೆ ಕಲ್ಲು ಬಿದ್ದಿದೆ. ಸರಕಾರದಿಂದ ಸರಬರಾಜಾಗುತ್ತಿದ್ದ ಎಲ್ಲ ಬಿಟ್ಟಿಭಾಗ್ಯಗಳನ್ನೂ ನಿಲ್ಲಿಸಲಾಗಿದೆ. ಸಾಹಿತ್ಯ ಅಕಾಡೆಮಿಯಂಥ ಇಲಾಖೆಗಳ ಹೆಸರಿನಲ್ಲಿ; ಸರಕಾರದ ಖರ್ಚಿನಲ್ಲಿ ದೇಶಾದ್ಯಂತ ಓಡಾಡುತ್ತಿದ್ದ ಲೇಖಕರ ಬಳಿ ಅವರ ಪ್ರವಾಸ, ಕೆಲಸಕಾರ್ಯಗಳ ವಿವರವನ್ನು ಸರಕಾರ ಕೇಳತೊಡಗಿದ್ದೇ ತಡ ಅವರೆಲ್ಲರೂ ಈಗ ಸೆಟೆದು ನಿಂತಿದ್ದಾರೆ. ಈ ಸರಕಾರ ತಮ್ಮ ಕೈಗಳನ್ನು ಕಟ್ಟಿಹಾಕಿದೆ ಎನ್ನುವ ಅಸಮಾಧಾನವೇ ಇವರೆಲ್ಲ ಹೋರಾಟ, ಹೇಳಿಕೆಗಳಿಗೂ ಮುಖ್ಯ ಕಾರಣ.

ಎರಡನೆಯದು ಕಲ್ಬುರ್ಗಿ ಪ್ರಕರಣ. ಸಂಶೋಧಕನೆಂದು ಹೆಸರು ಮಾಡಿದ್ದ ಡಾ. ಎಂ. ಎಂ. ಕಲ್ಬುರ್ಗಿಯರವನ್ನು ಧಾರವಾಡದಲ್ಲಿ ಹಣೆಗೆ ಗುಂಡಿಟ್ಟು ದುಷ್ಕರ್ಮಿಗಳು ಹತ್ಯೆ ಮಾಡಿದರು. ಈ ಹತ್ಯೆಯ ವಿಚಾರಣೆಯನ್ನು ಕರ್ನಾಟಕ ಸರಕಾರದ ಅಧೀನದಲ್ಲಿರುವ ಸಿಐಡಿ ಕೈಗೆತ್ತಿಕೊಂಡಿದೆ. ಕಲ್ಬುರ್ಗಿ ಓರ್ವ ಸಂಶೋಧಕರಾದರೂ ಅವರೂ ಎಲ್ಲರಂತೆ ಮನುಷ್ಯ. ಹತ್ಯೆಗೆ ಅವರ ಜೊತೆ ಸೈದ್ಧಾಂತಿಕ ಜಗಳ ಇರುವವರು ಎಷ್ಟು ಕಾರಣರಾಗಬಲ್ಲರೋ ಅಷ್ಟೇ ಅವರ ಕೌಟುಂಬಿಕ ಕಲಹಗಳು ಕೂಡ ಕಾರಣವಾಗಿರಬಹುದು ಎನ್ನುವುದನ್ನು ನಾವು ಮರೆಯುವಂತಿಲ್ಲ. ಒಂದು ತನಿಖಾ ಸಂಸ್ಥೆ ಈಗಾಗಲೇ ಕೊಲೆಯ ಬಗ್ಗೆ ವಿಚಾರಣೆ ನಡೆಸುತ್ತಿರುವಾಗ, ಅದರ ಬಗ್ಗೆ ಸಾಹಿತ್ಯ ಅಕಾಡೆಮಿಯಾಗಲೀ ಪ್ರಧಾನಿಗಳಾಗಲೀ ಹೇಳಿಕೆ ಕೊಡಬೇಕು ಎನ್ನುವುದು ಹಾಸ್ಯಾಸ್ಪದವಾಗುವುದಿಲ್ಲವೆ? ಇನ್ನು ಮಹಾರಾಷ್ಟ್ರದಲ್ಲಿ ನಡೆದಿರುವ ಕೆಲವು ಕೊಲೆಗಳನ್ನೂ ಕಲ್ಬುರ್ಗಿಯವರ ಕೊಲೆಯನ್ನೂ ಸಮೀಕರಿಸಿ ಕೆಲವರು ಮಾತಾಡುತ್ತಿದ್ದಾರೆ. ಈ ಎಲ್ಲ ಕೊಲೆಗಳನ್ನೂ ಒಬ್ಬರೇ ಅಥವಾ ಒಂದು ನಿರ್ಧಿಷ್ಟ ಗುಂಪೇ ಮಾಡಿದೆ ಎಂದು ಇವರಿಗೆ ಖಚಿತವಾದ ಮಾಹಿತಿ ಇದೆಯೆ? ಇದ್ದರೆ ಇವರು ಯಾಕೆ ಸಿಐಡಿಗೆ ಆ ಎಲ್ಲ ವಿವರಗಳನ್ನು ಕೊಟ್ಟು ಸರಕಾರ ಇಟ್ಟಿರುವ ಐದು ಲಕ್ಷ ರುಪಾಯಿಗಳ ಬಹುಮಾನ ಪಡೆಯಬಾರದು? ಕಲ್ಬುರ್ಗಿ ಕೊಲೆಯಾದ ಕೆಲವೇ ನಿಮಿಷಗಳಲ್ಲಿ ಕೆಲವೊಂದು ಕನ್ನಡ ಸಾಹಿತಿಗಳು ಟಿವಿಯಲ್ಲಿ ಕಾಣಿಸಿಕೊಂಡು ಕೊಲೆಯ ವಿವರಗಳನ್ನೂ ಅದಕ್ಕೆ ಇಂತಿಂಥವರೇ ಕಾರಣ ಎಂಬ ಮಾಹಿತಿಗಳನ್ನೂ ನೀಡತೊಡಗಿದರು. ಮೂಲಭೂತವಾದಿಗಳು ಎಂಬಲ್ಲಿಂದ ಹಿಡಿದು ನರೇಂದ್ರ ಮೋದಿ ಎಂಬಲ್ಲಿಯವರೆಗೆ ಎಲ್ಲ ಹೆಸರುಗಳೂ ಕೊಲೆಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡವು! ಅಂದರೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಬೇಕೆಂಬ ಉದ್ಧೇಶಕ್ಕಾಗಿಯೇ ಈ ಕೊಲೆಯನ್ನು ವ್ಯವಸ್ಥಿತವಾಗಿ ಮಾಡಿಸಲಾಗಿದೆ ಎಂಬ ಅನುಮಾನ ಜನರಲ್ಲಿ ಬರುವ ಹಾಗಿದೆ ಇವರ ನಡವಳಿಕೆ. ಕೊಲೆಯ ತನಿಖೆ ನಡೆಸುತ್ತಿರುವುದು ರಾಜ್ಯ ಸರಕಾರ; ಲೇಖಕರ ಆಕ್ರೋಶ ಕೇಂದ್ರದ ಮೇಲೆ. ಯಾಕೆಂದರೆ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವುದು ಇವರಿನ ಮುದ್ದಿನ ಕಾಂಗ್ರೆಸ್ ಅಲ್ಲವೆ!

ಮೂರನೆಯ ಕಾರಣ – ದಾದ್ರಿ ಪ್ರಕರಣ. ಒಬ್ಬ ಮುಸ್ಲಿಮ್ ವ್ಯಕ್ತಿ ಮನೆಯಲ್ಲಿ ದನದ ಮಾಂಸ ತಿಂದಿದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಯಿತು – ಎನ್ನುವುದು ಬುದ್ಧಿಜೀವಿಗಳು ಕೊಡುತ್ತಿರುವ ವಿವರಣೆ. ಆದರೆ, ಉತ್ತರ ಪ್ರದೇಶ ಸರಕಾರ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ದನದ ಮಾಂಸದ ಪ್ರಸ್ತಾಪವೇ ಇಲ್ಲ. ಆ ವ್ಯಕ್ತಿ ಆಗಾಗ ಪಾಕಿಸ್ತಾನಕ್ಕೆ ಹೋಗಿಬರುತ್ತಿದ್ದ; ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ; ಹೀಗಾಗಿ ಅವನ ಮೇಲೆ ಸ್ಥಳೀಯರಿಗೆ (ಮುಸ್ಲಿಮರನ್ನೂ ಒಳಗೊಂಡು) ಸಿಟ್ಟಿತ್ತು – ಎನ್ನುವುದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿರುವ ವರದಿಗಳ ಸಾರಾಂಶ. ಕಾರಣ ಏನೇ ಇರಲಿ, ಜನರು ತಾವೇ ಕಾನೂನನ್ನು ಕೈಗೆತ್ತಿಕೊಂಡು ಆತನನ್ನು ಕೊಂದುಹಾಕಿದ್ದು ಅಕ್ಷಮ್ಯ ಅಪರಾಧ. ಒಪ್ಪೋಣ, ಆದರೆ, ಈ ವಿಷಯವನ್ನು ಮುಂದಿಟ್ಟುಕೊಂಡು ಇದಕ್ಕೂ ಕೇಂದ್ರ ಸರಕಾರವೇ ಹೊಣೆಯೆಂದೂ ಪ್ರಧಾನಿಯವರು ಈ ಬಗ್ಗೆ ಹೇಳಿಕೆ ಕೊಡಬೇಕೆಂದೂ ಬಯಸುವುದು ಸರಿಯೆ? ದೇಶದಲ್ಲಿ ನಡೆಯುವ ಪ್ರತಿಯೊಂದು ಕೊಲೆ, ಸುಲಿಗೆ, ದರೋಡೆ, ಕಳ್ಳತನಗಳಿಗೂ ಪ್ರಧಾನಿಗಳು ಹೇಳಿಕೆ ಕೊಡುತ್ತಾ ಹೋಗುವುದಾದರೆ ತನಿಖಾ ಸಂಸ್ಥೆಗಳು ಇರುವುದು ಯಾತಕ್ಕೆ? ರಾಜ್ಯ ಸರಕಾರಗಳ ಪಾತ್ರ ಏನು? ಬೇಡ, ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲಿ ಗೃಹಇಲಾಖೆಗಳಿವೆ, ಅವುಗಳ ಸ್ಥಾನ ಏನು? ದೇಶದಲ್ಲಿ ಇದುವರೆಗೆ ನಡೆದಿರುವ ಸಾವಿರಾರು ಅಲ್ಲ ಲಕ್ಷಾಂತರ ಕೊಲೆಗಳ ನಡುವೆ ಇದೊಂದು ಕೊಲೆಯನ್ನು ಮಾತ್ರ ಮುನ್ನೆಲೆಯಾಗಿಟ್ಟುಕೊಂಡು ಸಾಹಿತಿಗಳು ಹೇಳಿಕೆ ಕೊಡುತ್ತಿರುವುದರ ಉದ್ಧೇಶ ಏನು?

ಇನ್ನು ನಾಲ್ಕನೆಯದು – ಈ ದೇಶದಲ್ಲಿ ಕಳೆದ 67 ವರ್ಷಗಳಲ್ಲಿ ಆಗಿಹೋಗಿರುವ ಎಲ್ಲಾ ಕಂಟಕಗಳನ್ನೂ ಒಟ್ಟಾಗಿ ಇಟ್ಟುಕೊಂಡು ಅವನ್ನೆಲ್ಲಾ ವಿರೋಧಿಸುತ್ತೇವೆ ಎನ್ನುತ್ತ ಪ್ರಶಸ್ತಿಗಳನ್ನು ವಾಪಸು ಮಾಡುವ ಕಾರ್ಯಕ್ರಮ. 1984ರಲ್ಲಿ ಇಂದಿರಾ ಗಾಂಧಿ ತೀರಿಕೊಂಡಾಗ ಒಂದೇ ದಿನದಲ್ಲಿ ದೆಹಲಿಯಲ್ಲಿ ಐದುಸಾವಿರ ಸಿಕ್ಖರನ್ನು ಕಡಿದು ಕೊಲ್ಲಲಾಯಿತು. ಕಾಶ್ಮೀರದವರೇ ಆದ ಮತ್ತು ಅಲ್ಲಿ ತಲೆತಲಾಂತರಗಳಿಂದ ವಾಸ ಮಾಡುತ್ತ ಬಂದಿದ್ದ ಪಂಡಿತರನ್ನು ಅಲ್ಲಿಂದ ಓಡಿಸಲಾಯಿತು. ಮಿಝೋರಾಂನಲ್ಲಿ ಪ್ರಧಾನಿಗಳೇ ಮುಂದೆ ನಿಂತು ಬಾಂಬ್ ಸಿಡಿಸಿ ಜನರನ್ನು ಕೊಂದರು. 1983ರಲ್ಲಿ ಅಸ್ಸಾಂನಲ್ಲಿ ಅತ್ಯಂತ ಭೀಕರವಾದ ನೆಲ್ಲಿ ಹತ್ಯಾಕಾಂಡ ನಡೆಯಿತು. 1989ರಲ್ಲಿ ಭಾಗಲ್ಪುರದಲ್ಲಿ ಇಂಥಾದ್ದೇ ಕರಾಳ ಘಟನೆ ಮರುಕಳಿಸಿತು. ಭೂಪಾಲದಲ್ಲಿ ಅನಿಲ ದುರಂತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಅದಕ್ಕೆ ಕಾರಣನಾದ ವಾರನ್ ಆಂಡರ್ಸನ್‍ನನ್ನು ಖುದ್ದು ಪ್ರಧಾನಿಗಳೇ ಮುತುವರ್ಜಿ ವಹಿಸಿ ದೇಶದಿಂದ ಪಾರಾಗುವಂತೆ ನೋಡಿಕೊಂಡರು. ಇವೆಲ್ಲಕ್ಕೂ ಕಿರೀಟಪ್ರಾಯವೆನ್ನುವಂತೆ, ಈ ಪ್ರಜಾಪ್ರಭುತ್ವ ದೇಶದಲ್ಲಿ ಅತ್ಯಂತ ಕರಾಳವಾದ ತುರ್ತುಪರಿಸ್ಥಿತಿ ಹೇರಲ್ಪಟ್ಟಿತ್ತು. ಇವೆಲ್ಲ ಘಟನೆಗಳೂ ಕಾಂಗ್ರೆಸ್ ಸರಕಾರಗಳ ಕಾಲದಲ್ಲೇ ನಡೆದವು ಎನ್ನುವುದು ವಿಶೇಷ. ಆಗ ಇಲ್ಲದ ನೋವು, ಸಂಕಟ, ತಳಮಳ ಈ ಲೇಖಕರಿಗೆ ಈಗ ಇದ್ದಕ್ಕಿದ್ದಂತೆ ಕಾಡಲು ಕಾರಣ ಏನು? ಹಿಪಾಕ್ರಸಿಗೂ ಒಂದು ಮಿತಿ ಬೇಡವೆ?

ಇನ್ನು ಇವರು ಹೇಳಿರುವ ಕೆಲವು ಹೇಳಿಕೆಗಳು ಮತ್ತು ಅವುಗಳ ಪೊಳ್ಳುತನಗಳನ್ನು ನೋಡಿದರೆ ಎಂಥವರಿಗೂ ನಗು ಬರುವಂತಿದೆ. ಮೊದಲಾಗಿ ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸು ಮಾಡುತ್ತಿರುವುದು ಏಕೆ ಎನ್ನುವುದು ಪ್ರಶ್ನೆ. “ಅಕಾಡೆಮಿ ಸರ್ಕಾರಿ ಸಂಸ್ಥೆಯಲ್ಲ; ಇದು ಸಂಪೂರ್ಣವಾಗಿ ಸ್ವಾಯತ್ತವಾಗಿರುವ ಸಂಸ್ಥೆ. ಹಾಗಾಗಿ ಸರಕಾರದ ನಡೆಯನ್ನು ವಿರೋಧಿಸಿ ಅಕಾಡೆಮಿ ಪ್ರಶಸ್ತಿಗಳನ್ನು ಹಿಂದಿರುಗಿಸುವುದರಲ್ಲಿ ಅರ್ಥ ಇಲ್ಲ. ಬೇಕಾದರೆ ಅವರು ಪದ್ಮ ಪ್ರಶಸ್ತಿಗಳನ್ನು ಹಿಂದೆ ಕೊಡಲಿ” ಎಂದಿದ್ದಾರೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಿಶ್ವನಾಥ ಪ್ರಸಾದ್ ತಿವಾರಿ. ಈಗ ಪ್ರಶಸ್ತಿ ಹಿಂದಿರುಗಿಸುತ್ತಿರುವ ಬಹುತೇಕ ಎಲ್ಲರೂ ತುರ್ತು ಪರಿಸ್ಥಿತಿಯ ನಂತರ ಪ್ರಶಸ್ತಿ ಪಡೆದವರು. ಅವರಿಗೆ ನಿಜವಾಗಿಯೂ ಈ ದೇಶದ ಪರಿಸ್ಥಿತಿಯ ಬಗ್ಗೆ ಕಾಳಜಿ ಇದ್ದರೆ ಅವರು ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲೇ ಅದನ್ನು ನಿರಾಕರಿಸಬಹುದಿತ್ತು. ಪ್ರಶಸ್ತಿ ಪಡೆದು, ಅದರ ಜೊತೆ ಬರುವ ದುಡ್ಡು, ಸರಕಾರ ಕೊಡಮಾಡುವ ಇನ್ನಿತರ ಎಲ್ಲಾ ಬಗೆಯ ಸವಲತ್ತುಗಳು, ಪ್ರಶಸ್ತಿಯನ್ನು ಎದುರಿಟ್ಟುಕೊಂಡು ಪಡೆದ ಹುದ್ದೆ, ಪ್ರಮೋಶನ್‍ಗಳು – ಇವೆಲ್ಲವನ್ನು ಅನುಭವಿಸಿ ಈಗ ತಮಗೆ ಪ್ರಶಸ್ತಿ ಬೇಡ ಎಂದು ವಾಪಸು ಮಾಡುವುದು ಏನನ್ನು ಸೂಚಿಸುತ್ತದೆ? ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗ ಹಿಡಿದು ಎ ಡಿವಿಜನ್ ನೌಕರನಾಗಿ ದುಡಿದು ನಿವೃತ್ತನಾದ ವ್ಯಕ್ತಿ ತನಗೀಗ ಹತ್ತನೇ ಕ್ಲಾಸಿನ ಸರ್ಟಿಫಿಕೇಟ್ ಬೇಡ ಎಂದು ವಾಪಸು ಮಾಡುವಂತಿಲ್ಲವೆ ಈ ನಡೆ!

ಅಶೋಕ್ ವಾಜಪೇಯಿ “ನಾವ್ಯಾರೂ ರಾಜಕೀಯದಲ್ಲಿ ತೊಡಗಿರುವವರಲ್ಲ. ನಾವು ಅ-ಪೊಲಿಟಿಕಲ್ ವ್ಯಕ್ತಿಗಳು” ಎಂಬ ವಚನ ಉದುರಿಸಿದ್ದಾರೆ. ನಯನತಾರಾ ನೆಹರೂ ಸೋದರಿ ವಿಜಯಲಕ್ಷ್ಮಿ ಪಂಡಿತ್ ಮಗಳು. ತನ್ನ ಜೀವಮಾನದುದ್ದಕ್ಕೂ ಸಂಘಪರಿವಾರವನ್ನು, ಬಿಜೆಪಿಯನ್ನು ಟೀಕಿಸುತ್ತ; ಕಾಂಗ್ರೆಸ್ ಸರಕಾರವನ್ನು ಓಲೈಸುತ್ತ ಬಂದವರು. ಸಿಕ್ಖ್ ನರಮೇಧ ನಡೆದ ಎರಡೇ ವರ್ಷಗಳಲ್ಲಿ ಈಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದರು! ಕಾಶ್ಮೀರ ಪಂಡಿತರ ರಕ್ತ ತನ್ನ ದೇಹದಲ್ಲಿ ಹರಿಯುತ್ತಿದೆ ಎನ್ನುವ ನಯನತಾರಾ, ಅದೇ ಕಾಶ್ಮೀರ ಪಂಡಿತರನ್ನು ಸರಕಾರ ಬಲಾತ್ಕಾರವಾಗಿ ಎತ್ತಂಗಡಿ ಮಾಡಿದಾಗ ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಆಗ ಅವರಿಗೆ ಸರಕಾರದ ಕ್ರಮವನ್ನು ಟೀಕಿಸುವುದಕ್ಕಿಂತಲೂ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಿತ್ತೇನೋ. ಬುದ್ಧಿಜೀವಿಗಳ ಪಟ್ಟಿಯಲ್ಲಿರುವ ಎರಡನೆ ಹೆಸರು ಅಶೋಕ್ ವಾಜಪೇಯಿ, ಯುಪಿಎ ಸರಕಾರದಲ್ಲಿ ಮೂರು ವರ್ಷಗಳ ಅವಧಿಗೆ ಲಲಿತಕಲಾ ಅಕಾಡೆಮಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಸಾರಾ ಜೋಸೆಫ್, 2014ರ ಲೋಕಸಭೆ ಚುನಾಣೆಯಲ್ಲಿ ಆಪ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದವರು. ಆದರೂ ಇವರೆಲ್ಲ ರಾಜಕೀಯ ವ್ಯಕ್ತಿಗಳಲ್ಲ!
ಪ್ರಶಸ್ತಿ ಕೊಡಬೇಡಿ

ದೇಶಾದ್ಯಂತ ಈ ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಪ್ರಶಸ್ತಿ ವಾಪಸು ಮಾಡುವ ಅಭಿಯಾನ ಶುರು ಮಾಡಿದ್ದರೆ, ಕರ್ನಾಟಕದಲ್ಲಿ ಮಾತ್ರ ಪ್ರಶಸ್ತಿ ಕೊಡಬೇಡಿ ಎಂಬ ಅಭಿಯಾನ ನಡೆಯುತ್ತಿದೆ. ಇಲ್ಲಿನ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಪ್ರಶಸ್ತಿ ಪಟ್ಟಿಯಲ್ಲಿ ಅತ್ಯಂತ ಹೊಣೆಗೇಡಿ ವ್ಯಕ್ತಿಗಳ ಹೆಸರಿರುವುದನ್ನು ವಿರೋಧಿಸಿ ಕರ್ನಾಟಕದ ಜನತೆ ಸಿಡಿದೆದ್ದಿದ್ದಾರೆ. ಅಪಾತ್ರರಿಗೆ ಪ್ರಶಸ್ತಿಗಳನ್ನು ದಾನ ಮಾಡಬಾರದು ಎಂದು (ಚೇಂಜ್.ಆರ್ಗ್-ನಲ್ಲಿ) ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇದಕ್ಕೆ ಹನ್ನೊಂದು ಸಾವಿರಕ್ಕೂ ಹೆಚ್ಚು ಜನ ಸಹಿ ಹಾಕಿದ್ದಾರೆ. ಸ್ವಾರಸ್ಯವೆಂದರೆ, ಕರ್ನಾಟಕದ ಸಾಹಿತ್ಯ ಅಕಾಡೆಮಿ ಬಿಡುಗಡೆಗೊಳಿಸಿರುವ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿರುವ ಕೆ.ಎಸ್. ಭಗವಾನ್ ಎಂಬ ವ್ಯಕ್ತಿಯ ಮೇಲೆ ಇದುವರೆಗೆ 35 ಕೇಸುಗಳೂ ಎರಡು ಎಫ್.ಐ.ಆರ್.ಗಳೂ ದಾಖಲಾಗಿವೆ. ಬಹುಶಃ ಜಗತ್ತಿನಲ್ಲಿ ಅತಿಹೆಚ್ಚು ಕೇಸು ಹಾಕಿಸಿಕೊಂಡೂ ಬಂಧಿತನಾಗದ ಕ್ರಿಮಿನಲ್ ಸಾಹಿತಿ ಎಂಬ ಪ್ರಶಸ್ತಿ ಇದ್ದರೆ ಅದನ್ನು ಈ ವ್ಯಕ್ತಿಗೆ ಕೊಡುವುದು ಒಳ್ಳೆಯದೇನೋ! ಅದೇ ಪ್ರಶಸ್ತಿಪಟ್ಟಿಯಲ್ಲಿ ರಹಮತ್ ತರೀಕೆರೆ ಎಂಬ ಲೇಖಕನ ಹೆಸರೂ ಇದೆ. ಇವರು ಕಲ್ಬುರ್ಗಿಯ ಕೊಲೆ ವಿರೋಧಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ 2010ರಲ್ಲಿ ಕೊಟ್ಟಿದ್ದ ಪ್ರಶಸ್ತಿಯನ್ನು ವಾಪಸು ಕೊಟ್ಟಿದ್ದಾರೆ. ಆದರೆ, ಈ ವರ್ಷದ ನವೆಂಬರ್‍ನಲ್ಲಿ ಕೊಡಲಿರುವ ರಾಜ್ಯಪ್ರಶಸ್ತಿಯನ್ನು ಪಡೆಯುತ್ತಾರೆ! ಕಲ್ಬುರ್ಗಿಯ ಕೊಲೆ ನಡೆದಿರುವುದು ಕರ್ನಾಟಕದಲ್ಲಿ. ತನಿಖೆ ನಡೆಸುತ್ತಿರುವುದು ರಾಜ್ಯ ಸರ್ಕಾರ ನಿಯೋಜಿಸಿರುವ ತಂಡ. ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಬಗ್ಗೆ ರಹಮತ್ ಅವರಿಗೆ ಅಸಮಾಧಾನವಿದ್ದರೆ, ಅವರು ರಾಜ್ಯದ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ವಿರೋಧಿಸಬಹುದಿತ್ತು. ಅದುಬಿಟ್ಟು ಈ ಘಟನೆಗೆ ಯಾವ ರೀತಿಯಲ್ಲೂ ಸಂಬಂಧಪಡದ ಕೇಂದ್ರ ಸರ್ಕಾರವನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿಯನ್ನೂ ಗುರಿಮಾಡಿ ಟೀಕಿಸುವ ಇವರ ಬುದ್ಧಿಗೆ ಏನು ಹೇಳಬೇಕು? ಇವರಂತೆಯೇ ಕಲ್ಬುರ್ಗಿ ಕೊಲೆಯ ವಿಚಾರದಲ್ಲಿ ಅರವಿಂದ ಮಾಲಗತ್ತಿ ಎಂಬವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅಕಾಡೆಮಿಯನ್ನು ಟೀಕಿಸಿ ಹೊರಬಂದಿರುವ ಇನ್ನೋರ್ವ ಸಾಹಿತಿ ಚಂದ್ರಶೇಖರ ಪಾಟೀಲ ಅವರ ಮೇಲೂ ಒಂದು ಎಫ್.ಐ.ಆರ್. ದಾಖಲಾಗಿದೆ. ಆದರೆ ಅವರು ತನ್ನ ರಾಜಕೀಯ ಕೈಗಳನ್ನು ಬಳಸಿಕೊಂಡು ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬಂಧನವಾಗದೆ ಆರಾಮಾಗಿದ್ದಾರೆ. ಎಷ್ಟೆಷ್ಟು ಕೇಸುಗಳಿದ್ದರೂ ತಮ್ಮ ರಾಜಕೀಯ ಪ್ರಭಾವ ಬಳಸಿ ಕಾನೂನನ್ನೇ ತಮಗೆ ಬೇಕಾದಂತೆ ಬಗ್ಗಿಸಿಕೊಳ್ಳುವ ಈ ಸಾಹಿತಿಗಳು ಬಾಯಿ ತೆರೆದೊಡನೆ ಉದುರಿಸುವ ಪದಗಳು: ಅಸಹನೆ, ಸಂವಿಧಾನ, ವಾಕ್ ಸ್ವಾತಂತ್ರ್ಯ, ಮೂಲಭೂತವಾದ, ಅಸಹಿಷ್ಣುತೆ, ಕೋಮುವಾದ!
ಸಾಹಿತ್ಯ ಅಕಾಡೆಮಿಯೂ ಕಾರಣ

ಈಗ ನಡೆಯುತ್ತಿರುವ ಪ್ರಶಸ್ತಿ ವಾಪಸು ಅಭಿಯಾನಕ್ಕೆ ಬಹುತೇಕ ಕಾರಣವಾಗಿರುವುದು ಸಾಹಿತ್ಯ ಅಕಾಡೆಮಿಯೇ ಎನ್ನುವುದು ಕಹಿಯಾದರೂ ಸತ್ಯ. ಉದಾಹರಣೆಗೆ, ಸಾಹಿತ್ಯ ಅಕಾಡೆಮಿಗಳಲ್ಲಿ ಯಾರಿಗೆ ಪ್ರಶಸ್ತಿ ಕೊಡಬೇಕು ಎಂಬ ವಿಷಯದಲ್ಲಿ ಸರಿಯಾದ ಸಂವಿಧಾನ, ನಿಯಮಾವಳಿಗಳ ಪಟ್ಟಿ ಇಲ್ಲ. ಕರ್ನಾಟಕದ ರಾಜ್ಯ ಸಾಹಿತ್ಯ ಅಕಾಡೆಮಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ, ಅದರ ರಿಜಿಸ್ಟ್ರಾರ್, ಪ್ರಶಸ್ತಿಗಳಿಗೆ ಮಾನದಂಡ ಇಲ್ಲದಿರುವುದುನ್ನು ಒಪ್ಪಿಕೊಂಡಿದ್ದಾರೆ. ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರು ಜೊತೆ ಸೇರಿ ನಡೆಸುವ ಮೀಟಿಂಗ್‍ನಲ್ಲಿಯೇ ಪ್ರಶಸ್ತಿ ಪಟ್ಟಿ ಸಿದ್ಧ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಅಂದರೆ ಈ ಪಟ್ಟಿ ಸಾಕಷ್ಟು ಪಕ್ಷಪಾತ, ವಶೀಲಿ, ರಾಜಕೀಯ ಪ್ರಭಾವಗಳಿಂದ ತುಂಬಿರುತ್ತದೆಂದು ಯಾರು ಬೇಕಾದರೂ ಹೇಳಬಹುದು. ಒಂದು ಪ್ರತಿಷ್ಠಿತ ಸಂಸ್ಥೆಯ ಪ್ರಶಸ್ತಿಗಳು ಈ ರೀತಿ ಹಂಚಲ್ಪಡುತ್ತವೆ ಎನ್ನುವುದು ಆಘಾತಕಾರಿ ವಾಸ್ತವ. ಹಾಗಿರುವಾಗ ಸಾಹಿತ್ಯಕ್ಕಿಂತ ರಾಜಕೀಯವನ್ನೇ ಹೆಚ್ಚು ಮಾಡಿರುವ ವ್ಯಕ್ತಿಗಳು ಈ ಸಂದರ್ಭಗಳನ್ನು ಚೆನ್ನಾಗಿ ಬಳಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈಗ ಪ್ರಶಸ್ತಿ ಮರಳಿಸುತ್ತಿರುವ ಹಲವರು ಇಂಥ ರಾಜಕೀಯ ವ್ಯಕ್ತಿಗಳೇ ಆಗಿದ್ದಾರೆ. ಇವರಲ್ಲಿ ಬಹುತೇಕರಿಗೆ ಪ್ರಚಾರದ ಗೀಳೂ ಇರುವಂತಿದೆ. ಕಾಂಗ್ರೆಸ್ ಸರಕಾರ ತೆರೆಮರೆಗೆ ಸರಿದ ಮೇಲೆ ಕೆಲಸವಿಲ್ಲದೆ ಕೂತಿರುವ ಹಲವು ಸಾಹಿತಿಗಳು ಈ ಪ್ರಶಸ್ತಿ ಮರಳಿಸುವ ಅಭಿಯಾನದ ನೆಪದಲ್ಲಾದರೂ ಒಂದಷ್ಟು ಪ್ರಚಾರಕ್ಕೆ ಬರೋಣ ಅಂದುಕೊಂಡಿರುವುದು ನಿಜ. ಅಲ್ಲದೆ, ತಾವೂ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದೆವು ಎಂಬುದನ್ನು ಉಳಿದವರಿಗೆ ಜ್ಞಾಪಿಸುವ ಉದ್ಧೇಶವೂ ಇಲ್ಲಿದೆ ಎನ್ನಬಹುದು. ಇವರು ಕೇವಲ ಪ್ರಶಸ್ತಿ ಫಲಕವನ್ನು ಮಾತ್ರ ತ್ಯಾಗ ಮಾಡುತ್ತಾರೆಯೇ ಅಥವಾ ಅದರ ಜೊತೆ ಬಂದಿರುವ ಸಂಭಾವನೆ, ಜಮೀನು, ಉದ್ಯೋಗ ಇತ್ಯಾದಿ ಸವಲತ್ತುಗಳನ್ನೂ ಜೊತೆಗೇ ಹಿಂದಿರುಗಿಸುತ್ತಾರಾ ಎನ್ನುವುದನ್ನು ಜನ ಕುತೂಹಲದಿಂದ ನೋಡುತ್ತಿದ್ದಾರೆ.

ತಮಾಷೆಯೆಂದರೆ, ಈ ಪ್ರಶಸ್ತಿ ಮರಳಿಸುವ ಕಾರ್ಯಕ್ರಮ ಜನರಿಗೆ ಬೇಸರ ತರಿಸುವುದಕ್ಕಿಂತ ಹೆಚ್ಚಾಗಿ ಅವರ ಮುಖದಲ್ಲಿ ನಗು ಅರಳಿಸುತ್ತಿದೆ. ಹೊಗೆ ಹಬ್ಬಿದಾಗ ಬಿಲಗಳಿಂದ ಹೊರಬರುವ ಇಲಿಗಳಂತೆ, ಈಗಿನ ಬಿಜೆಪಿ ಸರಕಾರದಲ್ಲಿ ರಾಜಕೀಯ ಮಾಡಿ ಬೇಳೆ ಬೇಯಿಸಿಕೊಳ್ಳಲು ಆಗದೆ ಕೈಕೈ ಹಿಸುಕಿಕೊಳ್ಳುತ್ತಿದ್ದ ಸಾಹಿತಿಗಳು ತಂತಮ್ಮ ಪ್ರಶಸ್ತಿಗಳನ್ನು ಹಿಡಿದು ಅಕಾಡೆಮಿಯ ಮುಂದೆ ನಿಂತಿದ್ದಾರೆ. ಇದೊಂದು ರೀತಿಯಲ್ಲಿ ಸ್ವಚ್ಛ ಭಾರತ ಅಭಿಯಾನವೂ ಹೌದು. ಹಿಂದಿನ ಸರಕಾರಗಳಲ್ಲಿ ಯಾರ್ಯಾರಿಗೆ ಅಪಾತ್ರದಾನದಂತೆ ಈ ಪ್ರಶಸ್ತಿಗಳು ಬಿಕರಿಯಾಗಿದ್ದವೋ ಅವೆಲ್ಲ ಮತ್ತೆ ಸಾಹಿತ್ಯ ಅಕಾಡೆಮಿಯ ಕಪಾಟುಗಳಿಗೆ ಮರಳುತ್ತಿವೆ. ಅಕಾಡೆಮಿ ಇನ್ನು ಮುಂದಾದರೂ ತನ್ನ ಪ್ರಶಸ್ತಿಗಳಿಗೆ ಒಂದು ಮಾನದಂಡ ರೂಪಿಸಿ, ಒಂದು ಸಂವಿಧಾನ ರಚಿಸಲಿ. ಸರಕಾರದ ಜೊತೆ ಶಾಮೀಲಾಗಿ ರಾಜಕೀಯ ಮಾಡುವವರನ್ನು ದೂರ ಇಟ್ಟು ನಿಜವಾದ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಆಗಲಿ. ಯಾವುದೋ ಪೂರ್ವಗ್ರಹ ಇಟ್ಟುಕೊಂಡು ಯಾವ್ಯಾವುದೋ ಕಾರಣ ಮುಂದೊಡ್ಡಿ ಪ್ರಶಸ್ತಿ ಹಿಂತಿರುಗಿಸುವ ವ್ಯಕ್ತಿಗಳಿಂದ ಆಯಾ ಪ್ರಶಸ್ತಿಗಳ ಅಪಮೌಲ್ಯವಾಗುವುದು ತಪ್ಪಲಿ.

2 ಟಿಪ್ಪಣಿಗಳು Post a comment
  1. ರಜತ್ ಲಿಂಗಾಯತ
    ಆಕ್ಟೋ 15 2015

    ತನ್ನ ಸಾಕಿ ಸಲಹಿದ ದಣಿ ಮುಳುಗುತ್ತಿರುವಾಗ ಕಡೆಗೂ ನಾಯಿಗಳು ಎಚ್ಚೆತ್ತು ಬೊಗಳುತ್ತಿವೆ. ಹಾಕಿದ ಅನ್ನದ ಋಣ ಇಲ್ಲಿಗೆ ತೀರಿತು. ಮತ್ತೆ ಮಲಗಿದರಾಯಿತು ಪ್ರಶಸ್ತಿಗಳ ನಡುವೆ; ವಿದೇಶ ಪ್ರಯಾಣ, ಭತ್ಯೆ ಮುಂತಾದ ಮೂಳೆಗಳ ರಾಶಿಗಳ ಮೇಲೆ. zzz

    ಉತ್ತರ
  2. ವಿಠಲ ಕಟ್ಟಿ
    ಆಕ್ಟೋ 15 2015

    ಅವರು ಹೇಳಿದಂತೆ ಭಗವಾನ ಕ್ರಿಮಿನಲ್ ಸಾಹಿತಿ. ಅಕಾಡೆಮಿ ಇಂಥ ಸಾಹಿತಿಗಳಿಗೆ ಪ್ರಶಸ್ತಿ ನೀಡಬಾರದಿತ್ತು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments