ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 16, 2015

4

ಬುದ್ಧಿಜೀವಿಗಳ ಪ್ರಶಸ್ತಿದಾಹ ಮತ್ತು ಪ್ರಶಸ್ತಿ ಹಿಂದಿರುಗಿಸುವಿಕೆ ಎಂಬ ಪ್ರಹಸನ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ಪ್ರಶಸ್ತಿವಸಾಹತುಪೂರ್ವ ಭಾರತದಲ್ಲಿ ಕ್ರಿಯಾಜ್ಞಾನವೇ ತುಂಬಿಕೊಂಡಿದ್ದ ಕಾಲವದು. ಆಗ ಒಬ್ಬ ಜ್ಞಾನಿಗೆ ಪ್ರಮಾಣಪತ್ರವಾಗಲೀ, ಸರ್ಟಿಫಿಕೇಟ್ ಆಗಲೀ ಅಗತ್ಯವೇ ಇರದ ಪರಿಸ್ಥಿತಿ. ಕಾರಣ ಕ್ರಿಯಾಜ್ಞಾನಿಗೆ ಸರ್ಟಿಫಿಕೇಟ್ ಅಗತ್ಯತೆ ಬೀಳುವದಿಲ್ಲ. ಉದಾಹರಣೆಗೆ ಹಿಂದೆ ಒಬ್ಬಾನೊಬ್ಬ ಬಂದು ತಾನು ಸಾಕ್ಷಾತ್ ಜಕಣಾಚಾರಿಯಿಂದ ಶಿಲ್ಪಶಾಸ್ತ್ರ ಕಲಿತು ಬಂದಿದ್ದೇನೆ ಎಂದು ಹಳ್ಳಿಗರ ಮುಂದೆ ಹೇಳಿಕೊಂಡರೆ, ಜನರು ಅದಕ್ಕೆ ಸಾಕ್ಷಿಯಾಗಿ ಪ್ರಮಾಣಪತ್ರವನ್ನೇನೂ ಕೇಳುತ್ತಿರಲಿಲ್ಲ. ಬದಲಿಗೆ, ಬೇಲೂರಿನ ಸೂಕ್ಷ್ಮಕೆತ್ತನೆಯ ಮಾದರಿಯಲ್ಲಿಯೇ ಈತ ಒಂದು ಕಲ್ಲನ್ನು ಕೆತ್ತಿ ಕೊಟ್ಟರಾಯಿತು, ಜನರು ನಂಬುತ್ತಿದ್ದರು. ಕಾರಣ, ಕ್ರಿಯಾಜ್ಞಾನದಲ್ಲಿ ಏನು ಕಲಿತೆ, ಎಷ್ಟು ಕಲಿತೆ ಎಂಬುದಷ್ಟೇ ಮುಖ್ಯವಾಗುತ್ತದೆಯೇ ಹೊರತು ಯಾರಿಂದ ಕಲಿತೆ, ಎಲ್ಲಿ ಕಲಿತೆ, ಎಷ್ಟು ವರ್ಷ ಕಲಿತೆ, ಇವೆಲ್ಲ ಮುಖ್ಯವಾಗುವದಿಲ್ಲ. ಹೀಗಾಗಿ ಏಕಲವ್ಯನಂಥ ಸ್ವಂತ ಬಲದಿಂದ ಕಲಿತವರೂ ನಮಗೆ ಸಂಪ್ರದಾಯಗಳಲ್ಲಿ ಕಾಣ ಸಿಗುತ್ತಾರೆ.

ಹೀಗಾಗಿ ಹಿಂದಿನ ನಾಟಿ ವೈದ್ಯರಲ್ಲಿ, ಧನುರ್ವೇದಿ ಪಂಡಿತರಲ್ಲಿ ಯಾರೂ ಪ್ರಮಾಣಪತ್ರವನ್ನು ಅಪೇಕ್ಷಿಸುತ್ತಿರಲಿಲ್ಲ. ಬಂದ ರೋಗವು ವಾಸಿಯಾಗುವಂತೆ ಮಾಡುವದೊಂದೇ ಅವರ ವಿದ್ಯೆಯನ್ನು ದೃಢೀಕರಿಸುವ ವಿಷಯವಾಗಿತ್ತು. ಹೆಚ್ಚು ಹೆಚ್ಚು ಕುಶಲ ಜ್ಞಾನಿಗಳನ್ನು ಸೃಷ್ಟಿಸುವ ಗುರುಕುಲಗಳು ಹೆಚ್ಚು ಪ್ರಸಿದ್ಧವಾಗುತ್ತಿದ್ದವು. ವೇದಪಂಡಿತನಿಂದ ಹಿಡಿದು ಕುಂಬಾರ, ಕಮ್ಮಾರರ ತನಕ ಎಲ್ಲ ಕ್ರಿಯಾಜ್ಞಾನಿಗಳ ಜ್ಞಾನವನ್ನು ಅವರ ಕ್ರಿಯೆಗಳಿಂದಲೇ ಅಳೆಯಲಾಗುತ್ತಿತ್ತು. ಹೀಗಾಗಿ ಪ್ರಮಾಣಪತ್ರವಾಗಲೀ, ಸರ್ಟಿಫಿಕೇಟ್ ಆಗಲೀ ಅಗತ್ಯವೇ ಇರಲಿಲ್ಲ. ಏಕೆಂದರೆ ನಾನು ಇಂಥಿಂಥ ಜ್ಞಾನವನ್ನು ಪಡೆದುಕೊಂಡು ಬಂದಿದ್ದೇನೆ ಎಂದು ಒಬ್ಬ ಸುಳ್ಳು ಹೇಳಿದರೂ ಆ ಸುಳ್ಳನ್ನು ಬಹಳ ದಿನ ಮುಚ್ಚಿಟ್ಟುಕೊಳ್ಳಲು ಆಗುತ್ತಲೂ ಇರಲಿಲ್ಲ.

ಒಬ್ಬನಿಗೆ ತನ್ನ ಕ್ರಿಯಾಜ್ಞಾನದಲ್ಲಿನ ವಿಶೇಷತೆಯನ್ನು ಮನಗಂಡು ಆತನಿಗೆ ವಿಶೇಷ ಉಪಾಧಿಗಳಿಂದ ಬಿರುದುಗಳಿಂದ ಸನ್ಮಾನಿಸುವದೂ ಆಗಿನ ಸಂಪ್ರದಾಯವಾಗಿತ್ತು. ಕೆಲವೊಮ್ಮೆ ರಾಜರು ಇಂಥ ಬಿರುದುಗಳನ್ನು ನೀಡುತ್ತಿದ್ದರೆ, ಇನ್ನು ಕೆಲವೊಮ್ಮೆ ಜನರೇ ಆತನನ್ನು ವಿಶೇಷ ಬಿರುದಿನಿಂದ ಗುರುತಿಸುತ್ತಿದ್ದರು. ಆ ರೀತಿಯ ಬಿರುದುಗಳು ಅವರ ಕ್ರಿಯೆಯನ್ನು ಮೆಚ್ಚಲೆಂದೇ ಹುಟ್ಟಿಕೊಳ್ಳುತ್ತಿದ್ದವೇ ಹೊರತು, ಅಂಥದೊಂದು ಬಿರುದನ್ನು ಮೊದಲೇ ರೆಡಿ ಮಾಡಿಟ್ಟು ಇದಕ್ಕಾಗಿ ನೀವೆಲ್ಲ ಸ್ಪರ್ಧೆಯನ್ನು ಮಾಡಿ ಎಂಬ ಪರಿಪಾಠವಿರಲಿಲ್ಲ. ಶಸ್ತ್ರಾಭ್ಯಾಸದ ಅಥವಾ ಶಾಸ್ತ್ರಾಭ್ಯಾಸದ ಪಂದ್ಯಗಳನ್ನೇರ್ಪಡಿಸಿ ಗೆದ್ದವರಿಗೆ ಬಹುಮಾನಗಳನ್ನು ನೀಡುವ ಪದ್ಧತಿ ಇದ್ದರೂ, ಹಾಗೆ ಗೆದ್ದವರು ಬಂಗಾರವನ್ನೋ, ರಾಜಕುಮಾರಿಯರನ್ನೋ ಗಳಿಸಿಕೊಳ್ಳುತ್ತಿದ್ದರೇ ಹೊರತು ಅದಕ್ಕಿಂತ ವಿಶೇಷವಾದ ಬಿರುದು ಅಥವಾ ಉಪಾಧಿಗಳೇನೂ ಲಭಿಸುತ್ತಿರಲಿಲ್ಲ. ಆದರೆ ಒಂದಾನೊಂದು ಉಪಾಧಿಯನ್ನು ಬಿರುದನ್ನು ಒಬ್ಬ ಗಳಿಸಬೇಕಾದರೆ ಆತನ ಕ್ರಿಯಾಜ್ಞಾನವು ಜನರ ಮನಮುಟ್ಟುವ ಕೆಲಸ ಮಾಡಿರಲೇಬೇಕಾಗುತ್ತಿತ್ತು.

ದಸರೆಯ ಸಮಯದಲ್ಲಿ ರಾಜ ಏರ್ಪಡಿಸುವ ಬಿಲ್ವಿದ್ಯೆ, ತೋಳ್ಬಲದ ಪಂದ್ಯಗಳಲ್ಲಿ ಗೆದ್ದವರಿಗೆ ಒಳ್ಳೆಯ ಬಹುಮಾನವೋ, ಇನ್ನೇನೋ ಸಿಗುತ್ತಿತ್ತು. ಆದರೆ ಒಬ್ಬ ಸೈನಿಕನಿಗೆ ಮಹಾನ್ ಯೋಧನೆಂಬ ಬಿರುದು ಅಥವಾ ಉಪಾಧಿ ಸಿಗಬೇಕಾದರೆ ಆತ ರಣರಂಗದಲ್ಲಿ ತನ್ನ ಕೆಚ್ಚೆದೆಯನ್ನು ತೋರಿಸಬೇಕಾಗುತ್ತಿತ್ತು. ಹೀಗಾಗಿ ಜನರ ಮನಸ್ಸನ್ನು ಸೂರೆಗೊಳ್ಳುವಂತೆ ಸಾಹಿತ್ಯ, ಸಂಗೀತ ಮುಂತಾದ ಕಲೆಗಳಲ್ಲಿ ನುರಿತ ಪರಿಣಿತಿ ಸಾಧಿಸಿದವರಿಗೆ ಮಾತ್ರ ಈ ರೀತಿಯ ಉಪಾಧಿಗಳನ್ನು ನೀಡಲಾಗುತ್ತಿತ್ತು. ಈ ರೀತಿ ಬಿರುದುಗಳನ್ನು ಪಡೆದ ಸಾಹಿತಿಗಳನ್ನು, ಕಲಾಕಾರರನ್ನು, ಯೋಧರನ್ನು ನಾವು ಚರಿತ್ರೆಯಲ್ಲಿ ಕಾಣಬಹುದಾಗಿದೆ.

ಕಾಳಿದಾಸನ ಕಾವ್ಯವನ್ನು ಮೆಚ್ಚಿಯೇ ಆತನಿಗೋಸ್ಕರ ಕವಿಕುಲಗುರು ಎಂಬ ಉಪಾಧಿಯೊಂದನ್ನು ಕೊಡಲಾಯಿತೇ ಹೊರತು ಈ ಕವಿಕುಲಗುರು ಎಂಬ ಉಪಾಧಿಯನ್ನು ಮೊದಲೇ ಸೃಷ್ಟಿಸಿಕೊಂಡು, ಈ ಉಪಾಧಿಯನ್ನು ಪ್ರಸಕ್ತ ವರ್ಷದಲ್ಲಿ ನಾವು ಯಾರಿಗೆ ಕೊಡೋಣ ಎಂದು ಚರ್ಚಿಸಲು ಸಲಹಾ ಸಮಿತಿಯೊಂದನ್ನು ರಚಿಸಿ, ನಂತರ ಈ ಬಿರುದನ್ನು ಕಾಳಿದಾಸನಿಗೆ ನೀಡುವಂತೆ ರಾಜಸಭೆಯು ನಿರ್ಣಯ ಕೈಗೊಂಡಿದೆ ಎಂದು ಯಾವ ರಾಜನೂ ಡಂಗುರ ಹೊಡೆಸಿರಲಿಲ್ಲ. ಕರ್ನಾಟಕ ಸಂಗೀತ ಪಿತಾಮಹ ಎಂಬ ಬಿರುದಾಂಕಿತ ಪುರಂದರದಾಸರಿಗೂ ಇದು ಅನ್ವಯವಾಗುತ್ತದೆ. ಮಿಯಾ ತಾನಸೇನನಿಗೂ ಇದೇ ಅನ್ವಯವಾಗುತ್ತದೆ.

ತನಗೆ ಬಂದ ಉಪಾಧಿ, ಬಿರುದುಗಳನ್ನು ಹಿಂದಿರುಗಿಸವದೂ ನಮ್ಮ ಸಂಪ್ರದಾಯಗಳಲ್ಲಿ ಕಂಡುಬರುತ್ತವೆ. ಒಬ್ಬ ಕ್ರಿಯಾಜ್ಞಾನಿ, ತನ್ನದೇ ಕ್ಷೇತ್ರದಲ್ಲಿ ಇನ್ನೊಬ್ಬ ಕ್ರಿಯಾಜ್ಞಾನಿಗೆ ಸೋತಾಗ ತನ್ನ ಬಿರುದುಗಳನ್ನು ಗೆದ್ದವನಿಗೆ ನೀಡುವದು ಕಂಡುಬರುತ್ತದೆ. ಇದು ಸಾಹಿತ್ಯ, ಸಂಗೀತ, ನಾಟ್ಯ, ಶಿಲ್ಪಕಲೆಗಳಲ್ಲೆಲ್ಲ ಕಂಡು ಬಂದಿದೆ. ಹೀಗೆ ಒಬ್ಬ ಕ್ರಿಯಾಜ್ಞಾನಿ, ತನಗಿಂತ ಹೆಚ್ಚು ಪರಿಣಿತನೊಡನೆ ಹೋರಾಡಿ ಸೋತಾಗ, ತನ್ನೆಲ್ಲ ಉಪಾಧಿಗಳನ್ನು ಗೆದ್ದವನಿಗೆ ನೀಡುತ್ತಿದ್ದನು. ಇಲ್ಲವೇ ಒಬ್ಬ ಕ್ರಿಯಾಜ್ಞಾನಿ, ತಾನು ಸವಾಲಾಗಿ ಸ್ವೀಕರಿಸಿದ ಕ್ರಿಯೆಯನ್ನು ಮಾಡುವಲ್ಲಿ  ಅಸಫಲನಾದರೂ, ತನ್ನ ಉಪಾಧಿಗಳನ್ನು ತ್ಯಜಿಸುತ್ತಿದ್ದನು.

ಈಗಿನ ನಮ್ಮ ದೇಶದ ಶಿಕ್ಷಣ ಕ್ಷೇತ್ರವು ಕ್ರಿಯಾಜ್ಞಾನದಿಂದ ಬಹುದೂರ ಸಾಗಿ ಬಂದಿದೆ. ರಿಲಿಜನ್ ಲೋಕದಲ್ಲಿ ಹೇಗೆ ನಿಮ್ಮ ನಂಬಿಕೆಯೊಂದಕ್ಕೆ ಸಾಕ್ಷಿಯಾಗಿ, ಡಾಕ್ಟ್ರಿನ್ನಿನ ವಾಕ್ಯವೊಂದು ಬೇಕೇ ಬೇಕೋ, ಹಾಗೆಯೇ ಸೆಕ್ಯುಲರ್ ಲೋಕದಲ್ಲಿ, ನಿಮ್ಮ ಪ್ರಾವೀಣ್ಯತೆಗೆ ಸಾಕ್ಷಿಯಾಗಿ ದೃಢೀಕೃತ ಪ್ರಮಾಣಪತ್ರವೊಂದು ಬೇಕೇ ಬೇಕು. ರಿಲಿಜನ್ನಿನ ಕಲ್ಪನೆಯಿರುವ ಸಮಾಜದಲ್ಲಿ ಮಾತ್ರ ಸರ್ಟಿಫಿಕೇಟ್ ಎಂಬ ಕಲ್ಪನೆ ಹುಟ್ಟಿಬರಲು ಸಾಧ್ಯ. ಇದನ್ನು ನಾವು ಪ್ರಮಾಣಪತ್ರ ಎಂದು ಅನುವಾದಿಸಿಕೊಂಡಿದ್ದೇವೆ. ನಾನೊಬ್ಬ ಕಟ್ಟಡ ಕಟ್ಟುವ ಮೇಸ್ತ್ರಿ ಎಂದು ಹೇಳಿಕೊಂಡರೆ, ಅಥವಾ ಚಿಕ್ಕದೊಂದು ಮಾದರಿ ಕಟ್ಟಡದ ನಕ್ಷೆ ಹಾಕಿಕೊಟ್ಟರೆ ಅದು ಪ್ರಮಾಣವಾಗುವದಿಲ್ಲ. ಒಂದು ಲ್ಯಾಮಿನೇಟೇಡ್ ಹಾಳೆಯ ಮೇಲೆ, ನನ್ನ ಹೆಸರಿದ್ದು, ಈತ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗವನ್ನು ಮಾಡಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ ಎಂಬ ವಾಕ್ಯಕ್ಕೆ ಅದ್ಯಾರದೋ ವೈಸ್ ಚಾನ್ಸೆಲರ್ ಎಂಬ ನನ್ನನ್ನೆಂದೂ ನೋಡದವನ, ಅರಿಯದವನ ಸಹಿಯೊಂದು ಬಿದ್ದಿದ್ದರೆ ನನಗೆ ಕಟ್ಟಡ ಕಟ್ಟುವ ಅರ್ಹತೆ ಇದೆ ಎಂದು ಅರ್ಥ. ಮಾರ್ಕ್ಸ್ ಕಾರ್ಡುಗಳು ಮತ್ತು ಸರ್ಟಿಫಿಕೇಟುಗಳು ವಿದ್ಯಾರ್ಥಿಯ ಕೌಶಲ್ಯವನ್ನು ಅಳೆಯುವ ಮಾನದಂಡಗಳು. ಹೀಗಾಗಿಯೇ ನಮ್ಮ ದೇಶದಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಮತ್ತು ನಕಲಿ ಸರ್ಟಿಫಿಕೇಟುಗಳ ಹಾವಳಿಯೂ ಹೆಚ್ಚು.

ರಿಲಿಜನ್ನಿನ ಛತ್ರದಡಿಯಲ್ಲಿಯೇ ಅವಾರ್ಡ್ ಪರಿಕಲ್ಪನೆಯೂ ಕಂಡು ಬರುತ್ತವೆ. ಸ್ವರ್ಗದಲ್ಲಿ ಇಂಥಿಂಥ ಸುಖಗಳು ಕೇವಲ ಕೆಲವರಿಗಷ್ಟೇ ನೀಡಲಾಗುತ್ತದೆ. ಅದರ ನಿರ್ಣಯಕ್ಕಾಗಿ ನಿಯಮಗಳೂ ಇವೆ. ಅಂಥಂಥ ವಿಶೇಷ ಸವಲತ್ತಿಗಾಗಿ ಇಹದಲ್ಲಿ ಅಂಥ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಆಗ ಮಾತ್ರ ಗಾಡ್ ಸ್ವರ್ಗದಲ್ಲಿ ಅಂಥ ಅವಾರ್ಡ್ ಸ್ಥಾನಗಳನ್ನು ನೀಡುತ್ತಾನೆ. ಇದು ಸೆಕ್ಯುಲರ್ ಲೋಕದಲ್ಲೂ ಅನುವಾದಗೊಂಡಿದೆ. ಅವಾರ್ಡುಗಳು, ಮೊದಲೇ ನಿರ್ಮಿಸಲ್ಪಟ್ಟಿವೆ. ನೊಬೆಲ್ ಮುಂತಾದ ಪ್ರಶಸ್ತಿಗಳು ಮೊದಲೇ ಹುಟ್ಟಿಕೊಂಡಿರುತ್ತವೆ, ಅದನ್ನು ಪಡೆಯಲು ಸೆಕ್ಯುಲರ್ ಲೋಕದಲ್ಲಿ ಜನರು ಸಾಧನೆಗೈಯಬೇಕಾಗುತ್ತದೆ. ಪಾಶ್ಚಿಮಾತ್ಯ ಲೋಕದಲ್ಲಿ ಈ ಪ್ರಕ್ರಿಯೆ ಹೆಚ್ಚು ಸಫಲವಾಗಿದೆ. ಇಂಥ ಪ್ರಶಸ್ತಿಗಳು ಸಾಧ್ಯವಾದಷ್ಟು ಯೋಗ್ಯರನ್ನೇ ಸೇರಿಕೊಂಡಿವೆ. ತಮಗೆ ಇಷ್ಟವಾಗದ ಬೆಳವಣಿಗೆಗಳು ಕಂಡು ಬಂದಲ್ಲಿ, ಪ್ರಶಸ್ತಿಯನ್ನು ಹಿಂದಿರುಗಿಸುವ ಪದ್ಧತಿಯೂ ಪಾಶ್ಚಿಮಾತ್ಯರಲ್ಲಿ ಜಾರಿಯಲ್ಲಿದೆ.

ನಮ್ಮ ಸಂಪ್ರದಾಯಗಳಲ್ಲಿಯೂ ಅವಾರ್ಡಿನ ಕಲ್ಪನೆ ಇದೆಯಲ್ಲ ಎಂದು ಇಲ್ಲಿ ಅನಿಸಬಹುದು. ೧೦೦ ಅಶ್ವಮೇಧ ಮಾಡಿದವರಿಗೆ ಸ್ವರ್ಗದಲ್ಲಿ ಇಂದ್ರಪದವಿ ಸಿಗುತ್ತದೆ ಎಂಬ ಮಾತಿದೆಯಲ್ಲ ಎಂದು ಕೇಳಬಹುದು. ಹೌದು ನಿಜ. ಆದರೆ ಇದು ಅವಾರ್ಡ್ ಕಲ್ಪನೆಯಲ್ಲ ಎಂಬುದು ಸ್ಪಷ್ಟ. ನಮ್ಮ ಸಂಪ್ರದಾಯಗಳು ಎಂದಿಗೂ ಅನಂತ ಸ್ವರ್ಗವನ್ನು ಪ್ರತಿಪಾದಿಸುವದಿಲ್ಲ. ೧೦೦ ಅಶ್ವಮೇಧ ಮಾಡಿದರೂ ಸಿಗುವ ಇಂದ್ರಪದವಿಯೇನೂ ಶಾಶ್ವತವಲ್ಲ. ಆದರೆ ರಿಲಿಜನ್ನಿನ ಸ್ವರ್ಗದಲ್ಲಿ ಸಿಗುವ ಅವಾರ್ಡ್ ಸ್ವರ್ಗದಷ್ಟೇ ಶಾಶ್ವತ. ಅಲ್ಲದೇ ರಿಲಿಜನ್ನಿನಲ್ಲಿ ಮನುಷ್ಯನ ಪ್ರಯತ್ನವೊಂದೇ ಅಲ್ಲ ಗಾಡ್ ಕೃಪೆ ಮತ್ತು ಆತನ ನಿರ್ಧಾರವೂ ಅವಾರ್ಡ್ ಪಡೆಯಲು ಬೇಕು. ಹೀಗಾಗಿ ರಿಲಿಜನ್ನಿನ ಅವಾರ್ಡ್ ಕಲ್ಪನೆ ನಮ್ಮಲ್ಲಿ ಇಲ್ಲ ಎಂದೇ ಹೇಳಬೇಕಾಗುತ್ತದೆ.

ಕಾಳಿದಾಸನಿಗೆ ರಾಜನು ಕವಿಕುಲಗುರು ಎಂಬ ಉಪಾಧಿಯನ್ನು ನೀಡುವ ಕ್ರಿಯೆಗೂ, ಕುವೆಂಪುರವರಿಗೆ ಸಮಿತಿಯು ಜ್ಞಾನಪೀಠವನ್ನು ನೀಡುವ ಕ್ರಿಯೆಗೂ ವ್ಯತ್ಯಾಸವಿದೆ. ಜ್ಞಾನಪೀಠಕ್ಕೆ ಸಮಿತಿಯಿದೆ, ಸ್ಪರ್ಧಿಗಳಿದ್ದಾರೆ, ಕುವೆಂಪುರವರನ್ನು ಆರಿಸುವಲ್ಲಿ, ಕೇವಲ ಕುವೆಂಪುರವರ ಸಾಧನೆ ಮಾತ್ರವಲ್ಲ, ಅವರನ್ನೇ ಏಕೆ ಪರಿಗಣಿಸಬೇಕು, ಉಳಿದವರನ್ನು ಏಕೆ ಬಿಡಬೇಕು ಎಂಬ ಜ್ಞಾನಪೀಠ ಸಮಿತಿಯ ನಿರ್ಧಾರವೂ ಸೇರಿಕೊಂಡಿದೆ. ಆದರೆ ಕವಿಕುಲಗುರು ಎಂಬ ಉಪಾಧಿಗೆ ಅಲ್ಲಿ ಸ್ಪರ್ಧಿಗಳಿಲ್ಲ. ಅದು ಕಾಳಿದಾಸನಿಗಾಗಿಯೇ ಹುಟ್ಟಿಕೊಂಡಿದ್ದು. ಹೀಗಾಗಿ ಪ್ರಶಸ್ತಿ ಎನ್ನುವದು ಪಾಶ್ಚಿಮಾತ್ಯರ ರಿಲಿಜನ್ನಿನಿಂದ ಹುಟ್ಟಿಕೊಂಡಿದ್ದು ಎಂದು ಊಹಿಸಬಹುದು. ಆರಂಭದಲ್ಲಿ ಈ ಪ್ರಶಸ್ತಿಗಳು ನಮ್ಮ ದೇಶದಲ್ಲಿ ಸಾಧ್ಯವಾದಷ್ಟು ಯೋಗ್ಯರನ್ನೇ ಸೇರಿತು ಎಂಬುದು ಸತ್ಯವಾದರೂ, ಈಗ ಪ್ರಶಸ್ತಿ ಮತ್ತು ಯೋಗ್ಯತೆ ಎಂಬುದು ಎರಡು ಬೇರೆ ಬೇರೆ ಧ್ರುವಗಳಾಗಿರುವದೂ ಅಷ್ಟೇ ಸತ್ಯ.

ನಮ್ಮ ಘನ ಸರ್ಕಾರಗಳು ಈ ಪಾಶ್ಚಿಮಾತ್ಯರ ಪ್ರಶಸ್ತಿಯ ಕಲ್ಪನೆಯನ್ನು ಹಾಗೆಯೇ ಉಳಿಸಿಕೊಂಡು ಬಂದಿವೆ. ಭಾರತರತ್ನ, ಕರ್ನಾಟಕರತ್ನ, ಪದ್ಮಭೂಷಣ, ಮುಂತಾದ ನಾಗರೀಕ ಪ್ರಶಸ್ತಿಗಳು, ಪರಮವೀರಚಕ್ರ ಮುಂತಾದ ಸೈನಿಕ ಪ್ರಶಸ್ತಿಗಳನ್ನು ನೀಡುತ್ತ ಸಾಗಿದೆ. ಸದ್ಯಕ್ಕೆ ನಾವು ನಾಗರೀಕ ಸೇವಾ ಪ್ರಶಸ್ತಿಗಳನ್ನು ಮಾತ್ರ ಗಮನಕ್ಕೆ ತೆಗೆದುಕೊಳ್ಳೋಣ. ಈ ಎಲ್ಲ ಪ್ರಶಸ್ತಿಗಳು ಅರ್ಹರ ಜೊತೆಗೆ, ಅನರ್ಹರಿಗೂ ಪ್ರಾಪ್ತವಾಗಿವೆ. ದೇಶದ ಪ್ರಧಾನಿಗಳು ತಮಗೇ ತಾವೇ ಭಾರತರತ್ನವನ್ನು ಕೊಟ್ಟುಕೊಂಡಿದ್ದಾರೆ. ವಿಚಾರವಾದಿಗಳು, ತಮ್ಮ ವಿಚಾರಧಾರೆಗೆ ಬಂದವರಿಗೆಲ್ಲ ಲಾಬಿ ಮಾಡಿಸಿ, ಸಾಹಿತ್ಯಕ್ಷೇತ್ರದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಜ್ಞಾನಪೀಠವನ್ನು ಪರಸ್ಪರ ಹಂಚಿಕೊಂಡಿದ್ದಾರೆ.

ವಾಸ್ತವವಾಗಿ ಪ್ರಶಸ್ತಿಯ ಕಲ್ಪನೆ ಸಮಾಜದಲ್ಲಿ ಹೆಚ್ಚು ಹೆಚ್ಚು ಪಕ್ವವಾದ ಸಾಹಿತ್ಯವನ್ನು ಹೊರತರಬೇಕಿತ್ತು. ಆದರೆ ಸಾಹಿತ್ಯವು ಬರಬರುತ್ತ ಬತ್ತುತ್ತಿದೆ. ರಸಹೀನವಾಗುತ್ತಿದೆ. ಎಲ್ಲೋ ಕೆಲವು ನಿಜವಾದ ಸಾಹಿತಿಗಳಿಗೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಲಂಕರಿಸಿಕೊಂಡಿದೆಯೆಂಬುದನ್ನು ಬಿಟ್ಟರೆ ಬಹುತೇಕರು ಇವುಗಳನ್ನು ಲಾಬಿಯಿಂದಲೇ ಎತ್ತಿದ್ದಾರೆ. ತಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾದಾಗ, ಸರ್ಕಾರಗಳು ತಮ್ಮ ವೈಚಾರಿಕತೆಗೆ ವಿರುದ್ಧವಾಗಿ ನಡೆದಾಗ, ಪ್ರಶಸ್ತಿಗಾಗಿ ರಾತ್ರಿಯಿಡೀ ಲಾಬಿ ಮಾಡಿದವರೇ, ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುವದಾಗಿ ಬೆದರಿಕೆ ಹಾಕುತ್ತಾರೆ. ಇನ್ನು ಕೆಲವರು ಕೇವಲ ಪ್ರಶಸ್ತಿ ಪತ್ರವನ್ನು ಮಾತ್ರ ಹಿಂದಿರುಗಿಸುತ್ತಾರೆ. ಹೀಗೆ ಪ್ರಶಸ್ತಿ ಎಂಬ ಆಸೆ, ಅದನ್ನು ಹಿಂದುರಿಗಿಸುವಿಕೆಯ ಪ್ರಹಸನಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ನಡೆದ ಕೋಮುಗಲಭೆ ವಿರೋಧಿಸಿ ಬುದ್ಧಿಜೀವಿಗಳು ಪ್ರಶಸ್ತಿ ಹಿಂದಿರುಗಿಸುತ್ತಿರುವದು ಜನಸಾಮಾನ್ಯರಿಗೆ ಅಸಹಜವೆನಿಸುತ್ತಿದೆ. ಜನರ ವರ್ತನೆಗೆ ಅವರೇಕೆ ಪ್ರಶಸ್ತಿ ಹಿಂದಿರುಗಿಸಬೇಕು? ಅವರ ನಿರ್ಧಾರದಿಂದ ಎಚ್ಚೆತ್ತ ಜನರು ಬದಲಾದರೇ?

ವಸಾಹತುಪೂರ್ವದಲ್ಲಿಯೂ ಪಂದ್ಯಗಳಿರುತ್ತಿದ್ದವು. ಅವುಗಳು ಸಹಸ್ರಾರು ಜನರ ನಡುವೆಯೇ ನಡೆಯುತ್ತಿದ್ದವು. ಸಾವಿರ ಜನರ ಮಧ್ಯೆ ಸಾಹಿತ್ಯವನ್ನು ಮಂಡಿಸಿ, ಸಂಗೀತ ಹಾಡಿ, ಯುದ್ಧಕಲೆ ಪ್ರದರ್ಶಿಸಿ, ಜನರ ಮೆಚ್ಚುಗೆಗಳಿಸಿ ಬಹುಮಾನ ಪಡೆಯುತ್ತಿದ್ದರು. ಹಾಗೆ ಅಪಾರ ಮೆಚ್ಚುಗೆ ಪಡೆದ ಕಲಾಕಾರನಿಗೆ ರಾಜ ಸ್ವ ಇಚ್ಛೆಯಿಂದ ಒಂದು ಹೊಸ ಬಿರುದನ್ನೋ, ಉಪಾಧಿಯನ್ನೋ ನೀಡುತ್ತಿದ್ದನು. ಜನರೂ ಅವನನ್ನು ಅದೇ ಬಿರುದಿನಿಂದ ಕರೆದು ಅಭಿನಂದಿಸುತ್ತಿದ್ದರು. ಆಗಿನ ಸಾಹಿತಿಗಳೂ, ಹೆಚ್ಚು ಜನರನ್ನು ಮುಟುವಂತೆಯೇ ಸಾಹಿತ್ಯವನ್ನು ರಚಿಸುತ್ತಿದ್ದರು. ಏಕೆಂದರೆ ತಾನು ಬರೆದ ಸಾಹಿತ್ಯವನ್ನು ರಕ್ಷಿಸಿಕೊಳ್ಳಲು ಅದೊಂದೇ ಮಾರ್ಗವಾಗಿತ್ತು. ಹೀಗಾಗಿ ಸಾಹಿತ್ಯಗಳು ರಸಪ್ರಧಾನವಾಗಿತ್ತೇ ಹೊರತು ಐಡಿಯಾಲಜಿ ಅವುಗಳಲ್ಲಿ ಕಂಡುಬರುತ್ತಿರಲಿಲ್ಲ. ಆದರೆ ಇದಾವದೂ ಈಗ ನೀಡುವ ಪ್ರಶಸ್ತಿಯ ಕಲ್ಪನೆಗೆ ಸಮಾನಾಂತರವಾದ ಪರಿಕಲ್ಪನೆಯಲ್ಲ. ಒಂದಾನೊಂದು ಪ್ರಶಸ್ತಿಯನ್ನು ಮೊದಲೇ ಸೃಷ್ಟಿಸಿಕೊಂಡು, ವರ್ಷ ವರ್ಷ, ಅದನ್ನು ನೀಡಲು ತಮ್ಮ ಐಡಿಯಾಲಜಿಯನ್ನು ಪಾಲಿಸುವ ವ್ಯಕ್ತಿಗಳನ್ನು ಅರಸುವದು ನಮ್ಮ ಸಮಾಜಕ್ಕೆ ಅಪರಿಚಿತ ಪದ್ಧತಿ. ಹಾಗೆಯೇ ಒಂದು ಪ್ರಶಸ್ತಿಯ ದಾಹಕ್ಕಾಗಿ ಒಂದಾನೊಂದು ಐಡಿಯಾಲಜಿಯನ್ನು ತಲೆಯಲ್ಲಿ ತುಂಬಿಕೊಂಡು, ಅದನ್ನು ಸಾಹಿತ್ಯದಲ್ಲೆಲ್ಲ ಕಾರಿಕೊಳ್ಳುತ್ತ, ರಸಪ್ರಾಧಾನ್ಯತೆಯನ್ನು ಸಂಪೂರ್ಣ ಬದಿಗಿಟ್ಟು, ಸಾಹಿತ್ಯ ರಚಿಸುವದೂ ನಮ್ಮ ಸಮಾಜಕ್ಕೆ ಅಪರಿಚಿತ ಪದ್ಧತಿ. ತನ್ನ ಐಡಿಯಾಲಜಿ ಸಮಾಜದಲ್ಲಿ ಸೋಲುತ್ತಿದ್ದಂತೆಯೇ, ಮನನೊಂದು ತನ್ನ ಪ್ರಶಸ್ತಿಗಳನ್ನೆಲ್ಲ ಹಿಂದಿರುಗಿಸುವ ಪ್ರಹಸನವೂ ನಮ್ಮ ಸಮಾಜಕ್ಕೆ ಅಪರಿಚಿತ ಪದ್ಧತಿ.

ಈಗ ಪ್ರಶಸ್ತಿಗಳ ಆಯ್ಕೆಯಲ್ಲಿ ಪಾರದರ್ಶಕತೆಯಿಲ್ಲ. ಒಂದು ಕಮಿಟಿಯು ಕೋಣೆಯೊಳಗೆ ಕುಳಿತು ನಿರ್ಧರಿಸುತ್ತದೆ. ಸಾಹಿತಿಯ ಸಾಹಿತ್ಯವು ಜನರಲ್ಲಿ ಎಷ್ಟು ಮನೆಮಾಡಿದೆ ಎಂಬುದು ಪ್ರಶಸ್ತಿಯ ಆಯ್ಕೆಗೆ ನಿರ್ಣಾಯಕವಾಗುವದಿಲ್ಲ. ಒಬ್ಬ ಸಾಹಿತಿ ಒಂದು ಪುಸ್ತಕ ಬರೆದು ಪ್ರಕಟಿಸುತ್ತಿದ್ದಂತೆಯೇ ಬಿಸಿ ದೋಸೆಯಂತೆ ಭರಭರನೆ ಖಾಲಿಯಾಗುತಿದ್ದರೆ, ಸರ್ಕಾರದ ಪ್ರಾಯೋಜಿತ ಯಾವ ಪ್ರಶಸ್ತಿಯೂ ಅಂಥ ಪ್ರಕಾಂಡ ಸಾಹಿತಿಯ ಹತ್ತಿರವೂ ಸುಳಿಯುವದಿಲ್ಲ. ಅಲ್ಲದೇ, ಜನಮಾನಸದಲ್ಲಿ ಮನೆಮಾಡಿರುವ ಅಂಥ ಸಾಹಿತಿಗಳು ಪ್ರಶಸ್ತಿ ಎಂದಾಕ್ಷಣ ಮಾರುದ್ದ ದೂರ ಓಡುವದೇ ಹೆಚ್ಚು ಶ್ರೇಯಸ್ಕರವೆನಿಸತೊಡಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬೋರ್ಡಿನಲ್ಲಿ ಇರುವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಲಿಸ್ಟೇ ಬೇರೆ, ಸಾಮಾನ್ಯ ಕನ್ನಡಿಗನೊಬ್ಬನ ಹೃದಯದಲ್ಲಿ ಮನೆಮಾಡಿರುವ ಸಾಹಿತಿಗಳ ಲಿಸ್ಟೇ ಬೇರೆ. ಇದೇಕೆ ಹೀಗೆ ಆಗುತ್ತಿದೆ? ಇವೆಲ್ಲ ವೈರುದ್ಧ್ಯಗಳು ಏಕೆ ನಮ್ಮ ಸಮಾಜದಲ್ಲಿಯೇ ಕಾಣಿಸುತ್ತಿದೆ? ಕಾರಣ ಇಷ್ಟೇ, ಈ ಪ್ರಶಸ್ತಿ ಎಂಬ ಪಾಶ್ಚಿಮಾತ್ಯ ಪದ್ಧತಿ ನಮ್ಮ ಸಮಾಜಕ್ಕೆ ಒಗ್ಗಿಯೇ ಇಲ್ಲ. ಅಷ್ಟೇ.

ಆಧಾರ:
೧. ಬೌದ್ಧಿಕ ದಾಸ್ಯದಲ್ಲಿ ಭಾರತ (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ)
೨. ಬುದ್ಧಿಜೀವಿಗಳ ಮೂಢನಂಬಿಕೆಗಳು (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ)

4 ಟಿಪ್ಪಣಿಗಳು Post a comment
  1. ಆಕ್ಟೋ 16 2015

    ಯಾರನ್ನೂ ಯೋಚಿಸುವಂತೆ ಮಾಡುವ ಲೇಖನ. ದುರದ್ರಷ್ಟವಶಾತ್ ಇಂಥ ವಿಚಾರಗಳು ಪತ್ರಿಕೆಗಳಲ್ಲಿ ಚರ್ಚೆಗೆ ಬರದಿರುವದು ವಿಷಾದನೀಯ. ದಯವಿಟ್ಟು ಅಧಿಕ ಮಂದಿಯ ಗಮನಕ್ಕೆ ಬರುವಂತೆ ಪ್ರಯತ್ನಿಸಿ. ನಿಮ್ಮ ಎಲ್ಲ ವೈಚಾರಿಕ ಚಟುವಟಿಕೆಗಳಿಗೂ ನನ್ನ ಸಮರ್ಥನೆ ಹಾಗು ಶುಭಾಕಾಮನೆಗಳು.

    ಉತ್ತರ
  2. Goutham
    ಆಕ್ಟೋ 18 2015

    Mr.Vinayak,
    Returning awards is their way of protest. Why r u expressing intolerance by writing like this ?

    ಉತ್ತರ
  3. ಆಕ್ಟೋ 19 2015

    @ನಿಲುಮೆ ಅಡ್ಮಿನ್,
    ನಿಲುಮೆ ಎನ್ನುವದು ‘ಎಲ್ಲ ತತ್ವಗಳ ಎಲ್ಲೇ ಮೀರಿ’ ಎಂಬ ಧ್ಯೇಯ ವಾಖ್ಯವನ್ನಿರಿಸಿಕೊಂಡು ಮುನ್ನಡೆದು ಬಂದಿದೆ. ಈ ನಿಟ್ಟಿನಲ್ಲಿ ನಿಲುಮೆಯ ಬಗ್ಗೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದ ನನಗೆ ಮೊದಲ ಸಲ ಭ್ರಮನಿರಸವಾಗಿದೆ. ಈ ಲೇಖನದ ದೋಷವನ್ನು ಎತ್ತಿ ತೋರಿಸಿದ ನನ್ನ ಕಮೆಂಟ್ ಅನ್ನು ಡಿಲೀಟ್ ಮಾಡಲಾಗಿದೆ. ನಿಲುಮೆಯ ಫೇಸ್ ಬುಕ್ ಗ್ರುಪ್ಪಿಗೆ ಕಳುಹಿಸಿದ ಬರಹವನ್ನು ಪ್ರಕಟಿಸಲಿಲ್ಲ. ಸಂತೋಶ್ ಶೆಟ್ಟಿಯವರು, ‘ಸೆಕ್ಯುಲರಿಸಂ ವರ್ಸಸ್ ಮೂಲಭೂತವಾದ…?’ ಲೇಖನದ ಚರ್ಚೆಯಲ್ಲಿ ‘naani’ ಬಳಸಿದ ಭಾಷೆಯನ್ನು ವಿರೋಧಿಸಿ ಕಮೆಂಟಿಸಿದ್ದರು. ಅದು ಡಿಲಿಟ್ ಮಾಡಲಾಗಿತ್ತು. ಅದರ ಬಗ್ಗೆ ಸ್ಪಷ್ಟನೆಯನ್ನು ಅಲ್ಲೇ ಕೇಳಿದ್ದೆ, ಆದರೆ ಉತ್ತರ ಸಿಗಲಿಲ್ಲ. ನನ್ನ ಮಾತಿನಲ್ಲಿ ಏನಾದರೂ ಅಸಭ್ಯತೆ ಇದ್ದರೆ ವಾರ್ನಿಂಗ್ ಆದರೂ ಮಾಡಬಹುದಿತ್ತು. ಇದರ ಮರ್ಮ ಏನು? ದ್ವನಿಯನ್ನು ಹತ್ತಿಕ್ಕುವಿಕೆಯನ್ನು ವಿರೋಧಿಸುವ ನಿಲುಮೆ ತಾನೇ ಯಾಕೆ ಈ ಕಾರ್ಯಕ್ಕೆ ಇಳಿದಿದೆ?
    ಒಂದು ವೇಳೆ ನಿಲುಮೆಯ ನಿಲುವು ಬಾಲಗಂಗಾಧರ್ ಅಥವಾ ಅದನ್ನು ಬೆಂಬಲಿಸುವವರ ಪರ, ಹಾಗೂ ಅವರ ಥಿಯರಿಯನ್ನು ವಿರೋಧಿಸಲೇಬಾರದು ಎಂದು ಸ್ಪಷ್ಟಪಡಿಸಿದರೆ ಸುಮ್ಮನೆ ಜೈಕಾರ ಹಾಕುವವರ ಜೊತೆ ನಾನು ವಾದಕ್ಕಿಳಿಯದೆ ಹಿಂದೆ ಸರಿಯುತ್ತೇನೆ. ಹೌದು ಜಗತ್ತಿನಲ್ಲಿ ನಾನು ವಿರೋಧಿಸುವ ಎಷ್ಟೊ ಅಭಿಪ್ರಾಯಗಳಿವೆ, ಸಿದ್ಧಾಂತಗಳಿವೆ. ಆದರೆ ಸಿದ್ಧಾಂತಕ್ಕೆ ಗಂಟುಬಿದ್ದವರನ್ನು (ಕಮ್ಯುನಿಷ್ಟರಿರಲಿ, ರಿಲಿಜಿಯನ್ನಿನ ಅಮಲೆರಿಸಿಕೊಂದವರಿರಲಿ), ಹಾಗೂ ಸೂಕ್ತ ಸಿದ್ಧಾಂತವೆ ಇರದ ಬುದ್ಧಿಜಿವಿಗಳಿರಲಿ, ಅವರನ್ನು ವೈಜ್ಞಾನಿಕವಾಗಿ ವಿರೋಧಿಸುವದು ಅಸಾಧ್ಯ ಎಂಬುದೇ ನನ್ನ ಅಭಿಪ್ರಾಯ. ಆದರೆ ಇವೆಲ್ಲಕ್ಕೂ ಭಿನ್ನವಾಗಿ ಗುರುತಿಸಿಕೊಂಡಿದ್ದು ನಿಲುಮೆಯ ನಿಲುವು ಎಂದು ನಾನು ಅಂದುಕೊಂಡಿದ್ದೆ. ಆದರೆ ನಿಲುಮೆಯ ಬದಲಾದ ಈ ನಿಲುವು ಆಘಾತಕಾರಿ. ಬಹುಷಃ ಈ ಕಮೆಂಟ್ ಅನ್ನೂ ನಿಲುಮೆ ಡಿಲೀಟ್ ಮಾಡಬಹುದು, ಆದರೆ ಇದು ಸತ್ಯವನ್ನು ಬಚ್ಚಿಟ್ಟಷ್ಟೆ ಸತ್ಯ.

    ಉತ್ತರ
    • Anonymous
      ಆಕ್ಟೋ 19 2015

      Prof. Batni, what’s wrong with you? you’re still using porn star’s picture as your profile picture!! You should seriously consult a sex therapist and/or psychiatrist for your identity crisis. Stop frequenting online forums and do what’s absolutely necessary for solving your formidable and enduring crisis. Good luck.

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments