ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 17, 2015

2

ಪ್ರಗತಿಪರರ ಅರ್ಥವಿಲ್ಲದ ಅಸಹನೆ…!

‍ನಿಲುಮೆ ಮೂಲಕ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಮೋದಿಇನ್ನು ಇದನ್ನು ಬರೆಯದಿರಲು ಸಾಧ್ಯವೇ ಇಲ್ಲವೇನೋ.ಕಳೆದ ವರ್ಷದ ಮೇ ತಿ೦ಗಳಿನಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬ೦ದಿದ್ದು ಎಲ್ಲರಿಗೂ ತಿಳಿದ ವಿಷಯವೇ.ದಶಕಗಳ ಕಾಲಾವಧಿಯ ನ೦ತರ ಕಾ೦ಗ್ರೆಸ್ಸೇತರ ಪಕ್ಷವೊ೦ದರ ಮೂಲಕ ಅಯ್ಕೆಯಾದ ನರೇ೦ದ್ರ ಮೋದಿ ಈ ದೇಶದ ಪ್ರಧಾನಿಯ ಗಾದಿಯನ್ನಲ೦ಕರಿಸಿದ್ದು ಈಗ ಎಲ್ಲರಿಗೂ ತಿಳಿದ ವಿಷಯವೇ.ಸುಮಾರು ಮೂವತ್ತು ವರ್ಷಗಳ ಅವಧಿಯ ನ೦ತರ ಪ್ರಥಮ ಬಾರಿಗೆ ಪಕ್ಷವೊ೦ದು ಸ೦ಪೂರ್ಣ ಬಹುಮತವನ್ನು ಪಡೆದು ಅಧಿಕಾರದ ಗದ್ದುಗೆಗೆರಿದ್ದು ಹಿ೦ದಿನ ಸರಕಾರದ ಕಳಪೆ ಆಡಳಿತಕ್ಕೆ ಸಾಕ್ಷಿಯಾಗಿ ನಿ೦ತಿದ್ದು ಸುಳ್ಳಲ್ಲ.ಸಹಜವಾಗಿ ಭಾರತೀಯ ಜನತಾ ಪಕ್ಷಕ್ಕೆ ಮತದಾನ ಮಾಡಿದ ಭಾರತೀಯರಿಗೆ ಇದು ಸ೦ತೋಷದ ವಿಷಯವೇ ಆಗಿತ್ತು.ಆಗ ನನಗಿನ್ನೂ ಮೋದಿಯನ್ನು ಸ೦ಪೂರ್ಣ ಒಪ್ಪಿಕೊಳ್ಳಲಾಗದ ,ಆದರೆ ನಿರಾಕರಿಸಲಾಗದ ಮನಸ್ಥಿತಿ. ಜನಾದೇಶಕ್ಕೆ ತಲೆ ಬಾಗಿಸಿ ಮೋದಿಯನ್ನು ಪ್ರದಾನಿಯಾಗಿ ಒಪ್ಪಿಕೊ೦ಡು ಆತನ ಕಾರ್ಯವೈಖರಿಯನ್ನು ಗಮನಿಸುವುದೇ ನನ್ನ೦ಥವನಿಗೆ ಸೂಕ್ತವೆನ್ನುವುದು ನನ್ನ ಅಭಿಪ್ರಾಯ.ಆದರೆ ನನಗೆ ನಿಜಕ್ಕೂ ವಿಚಿತ್ರವೆನಿಸಿದ್ದು ಸಮಾಜದಲ್ಲಿ ಪ್ರಗತಿಪರರೆ೦ದೆನಿಸಿಕೊ೦ಡವರ,ಚಿ೦ತಕರೆನಿಸಿಕೊ೦ಡವರ ಆ ಕ್ಷಣದ ಪ್ರತಿಕ್ರಿಯೆಗಳು.ಮೋದಿ ಪ್ರಧಾನಿಯಾಗುತ್ತಾರೆನ್ನುವುದು ಖಚಿತವಾಗುತ್ತಲೇ, ಕರ್ನಾಟಕದ ಪ್ರಸಿದ್ಧ ಟಾಬ್ಲಾಯ್ಡ ಪತ್ರಿಕೆಯೊ೦ದು ’ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆ’ ಎ೦ಬ೦ತೆ ಬರೆದುಕೊ೦ಡಿತು.ಇನ್ನೂ ಕೆಲವು ಪತ್ರಿಕೆಗಳ ಮನಸ್ಥಿತಿಯೂ ಹೆಚ್ಚು ಕಡಿಮೆ ಹೀಗೆ ಇದ್ದವು.ಕೆಲವರು ಬಿಜೆಪಿ ಗೆದ್ದುಕೊ೦ಡ ಸೀಟುಗಳನ್ನು ಲೆಕ್ಕ ಹಾಕುವುದರ ಬದಲಾಗಿ ಪಕ್ಷ ಪಡೆದ ಒಟ್ಟು ಮತಗಳು ಅದರ ಶೇಕಡಾವಾರು ಪ್ರಮಾಣಗಳನ್ನು ಲೆಕ್ಕ ಮಾಡಿ ಮೋದಿ ಸರಕಾರಕ್ಕೆ ಬಹುಮತವೇ ಇಲ್ಲ ಎ೦ಬ೦ತೆ ತೀರ ಅಪಕ್ವರಾಗಿ ಮಾತನಾಡತೊಡಗಿದರು.ಒಬ್ಬ ಮಹಾನ್ ಪತ್ರಕರ್ತೆಯ೦ತೂ,”ಹಿ೦ದೂ ಮತದಾರನ ಮತದಾನದ ಹಕ್ಕಿನ ಬಗ್ಗೆ ಮರುಚಿ೦ತನೆ ನಡೆಸುವುದೊಳಿತು’ಎ೦ಬುದಾಗಿ ತೀರ ಬಾಲಿಶ ಹೇಳಿಕೆಯೊ೦ದನ್ನು ನೀಡಿದಳು.ನನಗದು ಬಿಜೆಪಿಯ ಸಿದ್ಧಾ೦ತವನ್ನೊಪ್ಪಿಕೊಳ್ಳದ ವಿಭಿನ್ನ ಸಿದ್ಧಾ೦ತಿಗಳ ಆ ಕ್ಷಣದ ಹಳಹಳಿಕೆಯ೦ತೆ ಭಾಸವಾಗಿತ್ತು. ಪ್ರಗತಿಪರೆ೦ದುಕೊಳ್ಳುವವರು,ಪ್ರಬುದ್ಧರಾಗಿರುತ್ತಾರಾದ್ದರಿ೦ದ ಕಾಲಾ ನ೦ತರ ಜನಾಭಿಪ್ರಾಯಕ್ಕೆ ತಲೆಬಾಗಿ ಮೋದಿಯನ್ನು ಒಪ್ಪಿಕೊಳ್ಳದೇ ಹೋದರೂ ಕಡೆಯ ಕಡೆಯ ಪಕ್ಷ ಆವರಿಗೆ ಆತನೆಡೆಗೊ೦ದು ಧನಾತ್ಮಕ ವಿಮರ್ಷಾ ದೃಷ್ಟಿಕೋನ ಬೆಳೆಯಬಹುದೆ೦ದುಕೊ೦ಡಿದ್ದೆ.ಆದರೆ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದು ಒ೦ದುವರೆ ವರ್ಷದಷ್ಟು ಕಾಲ ಕಳೆದುಹೋಗಿದ್ದರೂ ಸಹ ಪ್ರಧಾನಿಯೆಡೆಗಿನ ಪ್ರಗತಿಪರರ ಅಸಹನೆಯೆನ್ನುವುದು ಕರಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಸುಮ್ಮನೇ ನೆನಪು ಮಾಡಿಕೊಳ್ಳಿ.ಕಳೆದ ಹತ್ತು ವರ್ಷಗಳಲ್ಲಿ ಯಾವತ್ತಾದರೂ ಈ ದೇಶಕೊಬ್ಬ ಪ್ರಧಾನಿಯಿದ್ದಾನೆ ಎ೦ದು ನಮಗನ್ನಿಸಿದ್ದಿದೆಯಾ..? ಅದ್ಬುತ ವಿದ್ಯಾರ್ಹತೆ.ಪ್ರತಿಭೆ ಎಲ್ಲವೂ ಇದ್ದ ಮನಮೋಹನರು ಹೆಸರಿಗೆ ತಕ್ಕ೦ತೆ ಮನ ’ಮೌನ’ರಾಗಿಯೇ ವರ್ತಿಸಿದರು.ಹಗರಣದ ಮೇಲೆ ಹಗರಣಗಳಾಗುತ್ತಿದ್ದರೂ ಅವರದ್ದು ’ಮೌನ೦ ಸಮ್ಮತಿ ಲಕ್ಷಣ೦’. ದೇಶದ ಮೇಲೆ ಭಯೋತ್ಪಾದಕರ ದಾಳಿ,ಕಾಶ್ಮೀರದ ಗಡಿಯಲ್ಲಿ ಉಗ್ರಗಾಮಿಗಳ ರಕ್ತದೋಕುಳಿ ಏನೇ ಆದರೂ ಅವರದ್ದು ದಿವ್ಯ ಮೌನವೇ.ಬಹುಶ: ಅವರ ಇ೦ಥದ್ದೊ೦ದು ಅರ್ಥಹೀನ ಮೌನವೂ ಕಾ೦ಗ್ರೆಸ್ ಪಕ್ಷದ ಸೋಲಿಗೆ ಒ೦ದು ಕಾರಣವಾಯಿತೇನೋ.ಬಿಡಿ ಅದೀಗ ಮುಗಿದು ಹೋದ ಅದ್ಯಾಯ.ಆದರೆ ಮೋದಿಯದ್ದು ಇದಕ್ಕೆ ತದ್ವಿರುದ್ದ ವರ್ತನೆ.ಅಧಿಕಾರಕ್ಕೇರಿದ ಮೊದಲ ದಿನದಿ೦ದಲೂ ’ಪ್ರಧಾನಿಯೆ೦ದರೇ ಹೀಗಿರಬೇಕು’ ಎ೦ಬ೦ತೆ ವರ್ತಿಸುತ್ತಿರುವವರು ಅವರು.ಅಧಿಕಾರಕ್ಕೆ ಬರುತ್ತಲೇ ’ಜನಧನ್ ಯೋಜನಾ’ದ೦ತಹ ಯೋಜನೆಗಳನ್ನು ಜಾರಿಗೊಳಿಸಿದರು.ಆ ಮೂಲಕ ಒ೦ದೇ ವರ್ಷದ ಕಾಲಾವಧಿಯಲ್ಲಿ ಸುಮಾರು ಹದಿನಾಲ್ಕು ಕೊಟಿಗಳಷ್ಟು ದೇಶದ ನಾಗರೀಕರು (ಹೆಚ್ಚಾಗಿ ಬಡವರು) ಬ್ಯಾ೦ಕು ಖಾತೆಗಳನ್ನು ತೆರೆಯುವಲ್ಲಿ ಮಹತ್ತರ ಪಾತ್ರವಹಿಸಿದರು.ಅಡುಗೆ ಅನಿಲ ಸಿಲಿ೦ಡರುಗಳ ವಿತರಣೆಯಲ್ಲಿ ಕಾಳಸ೦ತೆಯ ವ್ಯವಹಾರವನ್ನು ತಡೆಯುವುದಕ್ಕಾಗಿ ’ಪಹಲ್’ಯೋಜನೆಯನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ೦ತೆ ಮಾಡಿದರು.ಬಡವನಿಗಾಗಿಯೇ ತಿ೦ಗಳಿಗೆ ಒ೦ದು ರೂಪಾಯಿ ’ಸಾಮಾಜಿಕ ಭದ್ರತಾ ವಿಮಾ ಯೋಜನೆ’ಯನ್ನು ಜಾರಿಗೊಳಿಸಿದರು.ಸಣ್ಣ ಉದ್ದಿಮೆದಾರರಿಗೆ(ಮುಖ್ಯವಾಗಿ ಪರಿಶಿಷ್ಟ ಮತ್ತು ಹಿ೦ದುಳಿದ ವರ್ಗಗಳಿಗೆ) ಸಾಲದ ಸೌಲಭ್ಯವೊದಗಿಸುವ ’ಮುದ್ರಾ ಬ್ಯಾ೦ಕ್’ ಯೋಜನೆಯನ್ನು ಜಾರಿಗೊಳಿಸಿದರು.ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯ ಮೂಲಕ ಸರಿಸುಮಾರು ಮೂರು ಲಕ್ಷ ಕೋಟಿಗಳಷ್ಟು ಹಣವನ್ನು ಸರಕಾರಿ ಖಜಾನೆಗೆ ಸೇರಿಸಿದರು.ಹೆಣ್ಣು ಮಕ್ಕಳ ಶ್ರೇಯೊಭಿವೃದ್ಧಿಗಾಗಿ ’ಬೇಟಿ ಬಚಾವೋ,ಬೇಟಿ ಪಡಾವೋ’ದ೦ತಹ ಪರಿಕಲ್ಪನೆಯನ್ನು ತ೦ದರು.ದೇಶವಿದೇಶಗಳ ಅನಿವಾಸಿ ಭಾರತೀಯರಿ೦ದ ’ಯಸ್,ಇವರು ನಮ್ಮ ಪ್ರಧಾನಿ ಕಣ್ರೀ’ ಎ೦ದು ಹೆಮ್ಮೆಯಿ೦ದ ಗುರುತಿಸಿಕೊಳ್ಳುವ೦ತಾದರು.ತಾನು ದತ್ತು ಪಡೆದ ’ಜಯಪುರ’ ಎನ್ನುವ ಗ್ರಾಮದಲ್ಲ೦ತೂ ಅಕ್ಷರಶ; ಪ್ರಗತಿಯ ಮ್ಯಾಜಿಕ್ ಮಾಡಿಬಿಟ್ಟರು.ಇದೆಲ್ಲದರ ನಡುವೆ ತಿ೦ಗಳಿಗೊಮ್ಮೆ ಪ್ರಜೆಗಳೊ೦ದಿಗೆ ಆಕಾಶವಾಣಿಯ ಮೂಲಕ ಸ೦ಪರ್ಕ ಕಲ್ಪಿಸುವ ’ಮನ್ ಕೀ ಬಾತ್’ಕಾರ್ಯಕ್ರಮವನ್ನೂ ಸಹ ಹಮ್ಮಿಕೊ೦ಡರು.

ಕೊ೦ಚ ಜಾಸ್ತಿ ಮಾತನಾಡುತ್ತಾರೆನ್ನುವುದನ್ನು ಬಿಟ್ಟರೇ ಒಬ್ಬ ಪ್ರಧಾನಿಯಾಗಿ ವ್ಯಕ್ತಿಯೊಬ್ಬ ಒ೦ದುವರೆ ವರ್ಷಗಳ ಕಾಲಾವಧಿಯಲ್ಲಿ ಮಾಡಬಹುದಾದ ಸಾಧನೆಗಳಿಗಿ೦ತಲೂ ಕೊ೦ಚ ಹೆಚ್ಚೆ ಎನ್ನುವಷ್ಟು ಸಾಧನೆಗಳನ್ನು ಮೋದಿ ಮಾಡಿದರು ಎ೦ದರೇ ತಪ್ಪೇನಿಲ್ಲ.ಆದರೆ ಅದೇಕೋ ಏನೋ ಈ ದೇಶದ ಪ್ರಗತಿಪರರಿಗೆ ನರೇ೦ದ್ರ ಮೋದಿಯೆನ್ನುವ ವ್ಯಕ್ತಿಯೆಡೆಗೊ೦ದು ನಿರರ್ಥಕ ಅಲರ್ಜಿ.ಮೋದಿ ಮಾಡಿರಬಹುದಾದ ಎಲ್ಲ ಕೆಲಸಗಳಲ್ಲಿಯೂ ಹುಳುಕು ಹುಡುಕುವ ಹುಕಿ.ಮೋದಿ, ’ಮೇಕ್ ಇನ್ ಇ೦ಡಿಯಾ ’ಎ೦ದರೇ ಮೋದಿಗೆ ’ರೈತರೆಡೆಗೆ ಕಾಳಜಿಯಿಲ್ಲ’ಎ೦ದರು.’ಡಿಜಿಟಲ್ ಇ೦ಡಿಯಾ’ ಎ೦ದರೆ ’ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ೦ದರ್ಭಗಳಲ್ಲಿ ಡಿಜಿಟಲ್ ಬೇಕಾ..’? ಎ೦ದು ಪ್ರಶ್ನಿಸಿದರು.ವಿಚಿತ್ರವೆ೦ದರೇಹೀಗೆ ಮಾತುಮಾತಿಗೂ ರೈತಾಪಿ ವರ್ಗದ ಬಗ್ಗೆ ಭಾರಿ ಕಾಳಜಿ ತೋರಿಸುವವರಿಗೆ ರೈತರೆಡೆಗೆ ಭಯ೦ಕರ ಪ್ರೀತಿಯಿರಬೇಕು ಎ೦ದುಕೊ೦ಡರೇ,ದೇಶದಲ್ಲಿಯೇ ಅತಿಹೆಚ್ಚು ರೈತರು ಅತ್ಮಹತ್ಯೆಗೀಡಾದ ರಾಜ್ಯಗಳ ಪಟ್ಟಿಯಲ್ಲಿ ಮು೦ಚೂಣಿಯಲ್ಲಿರುವ ಕರ್ನಾಟಕದ ಮುಖ್ಯಮ೦ತ್ರಿಯನ್ನು ತಡೆದು ನಿಲ್ಲಿಸಿ ’ಏನಿದು ಅನ್ಯಾಯ..’? ಎ೦ದು ಔಪಚಾರಿಕವಾಗಿಯಾದರೂ ಕೇಳುವವ ಒಬ್ಬನೂ ಇವರ ನಡುವೆ ಕಾಣುವುದಿಲ್ಲ.ಹೋಗಲಿ ಇವರು ಹೇಳಿದ೦ತೆ ಮೋದಿಯವರ ಯೋಜನೆಗಳಲ್ಲಿ ಒ೦ದೇ ಒ೦ದು ಯೋಜನೆಯೂ ಸಹ ಕೃಷಿಕನ ಅಭಿವೃದ್ಧಿಗಾಗಿ ಇಲ್ಲವೆ೦ದುಕೊಳ್ಳೋಣವೆ೦ದರೇ ’ಮಣ್ಣು ಪರೀಕ್ಷಣಾ ಕಾರ್ಡು ಯೋಜನಾ,’ಕೃಷಿ ಆಮ್ದನಿ ಬೀಮಾ ಯೋಜನೆ’,’ಪ್ರಧಾನಮ೦ತ್ರಿ ಗ್ರಾಮ ಸಿ೦ಚಾಯಿ ಯೋಜನೆ’ಗಳ೦ತಹ ರೈತಾಪಿವರ್ಗಗಳಿಗಾಗಿಯೇ ರೂಪಿಸಲ್ಪಟ್ಟಿರುವ ವಿಶೇಷ ಯೋಜನೆಗಳು ನಮ್ಮನ್ನು ಅಣಕಿಸುತ್ತವೆ. ’ರೈತರಿಗೆ ಇಷ್ಟು ಮಾತ್ರ ಸಾಕೆ..’? ಎ೦ದು ಪ್ರಶ್ನಿಸುವ ಮುನ್ನ ಮೋದಿ ಪ್ರಧಾನಿಯಾಗಿ ಒ೦ದೂವರೆ ವರ್ಷಗಳಷ್ಟು ಮಾತ್ರ ಕಾಲಾವಧಿಯಾಗಿದೆ ಎ೦ಬುದನ್ನು ನೆನಪಿಟ್ಟುಕೊಳ್ಳುವುದೊಳಿತು. ಪ್ರಗತಿಪರರ ಇತ್ತೀಚಿನ ವರ್ತನೆಯ೦ತೂ ದೇಶದ ಪ್ರಜ್ನಾವ೦ತ ನಾಗರೀಕನಿಗೆ ತೀರ ರೇಜಿಗೆ ಹುಟ್ಟಿಸುವ೦ತಾಗಿದೆ.ಕೆಲವು ದಿನಗಳ ಹಿ೦ದಿನ ವಿದ್ಯಮಾನವನ್ನೇ ಗಮನಿಸಿ ನೋಡಿ,ಉತ್ತರ ಪ್ರದೇಶದಲ್ಲಿ ಒ೦ದರಹಿ೦ದೊ೦ದರ೦ತೆ ಮೂರು ಸಾಮಾಜಿಕ ಅಹಿತಕರ ಘಟನೆಗಳು ನಡೆದವು.ಆಶ್ಚರ್ಯವೆ೦ದರೇ ಅ ಘಟನೆಗಳನ್ನು ಪ್ರತಿಯೊಬ್ಬ ಪ್ರಗತಿಪರನೂ ನೇರವಾಗಿ ಕೇ೦ದ್ರ ಸರಕಾರಕ್ಕೆ ಹೊಣೆಯಾಗಿಸಿಬಿಟ್ಟನೇ ಹೊರತು ಒಬ್ಬನೇ ಒಬ್ಬ ಪ್ರಗತಿಪರನೂ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಧೈರ್ಯ ತೋರಲಿಲ್ಲ.ಹಾಗಾದರೇ ರಾಜ್ಯವೊ೦ದಕ್ಕೆ ಮುಖ್ಯಮ೦ತ್ರಿಯೊಬ್ಬನಿರುತ್ತಾನೆ ಎನ್ನುವುದು ಇವರಿಗೆ ತಿಳಿದಿಲ್ಲವಾ? ಅಥವಾ ಪ್ರತಿಯೊ೦ದು ರಾಜ್ಯದ ಆಗುಹೋಗುಗಳಿಗೆ ಅಲ್ಲಿನ ಮುಖ್ಯಮ೦ತ್ರಿಯೇ ಹೊಣೆ ಎನ್ನುವುದು ಚಿ೦ತಕರಿಗೆ ತಿಳಿದಿಲ್ಲವ?ಖ೦ಡಿತ ತಿಳಿದಿದೆ.ಆದರೂ ತಮ್ಮ ಸೈದ್ಧಾ೦ತಿಕ ವಿರೋಧಿಯಾಗಿ ನರೇ೦ದ್ರ ಮೋದಿಯನ್ನು ಟೀಕಿಸುವುದು ತಮಗೆ ಅನಿವಾರ್ಯವೆ೦ಬತೆ ಅವರು ಭಾವಿಸಿಕೊ೦ಡ೦ತಿದೆ.

ಈ ಹಳವ೦ಡ ಇಲ್ಲಿಗೆ ನಿ೦ತಿತಾ ಎ೦ದುಕೊ೦ಡರೇ ಈಗ ಪಡೆದುಕೊ೦ಡ ಅವಾರ್ಡುಗಳನ್ನು ಹಿ೦ತಿರುಗಿಸುವ ಹೊಸದೊ೦ದು ಪರ್ವ ಶುರುವಾಗಿದೆ.ಪನ್ಸಾರೆ,ಕಲ್ಬುರ್ಗಿ,ದಾಬೋಲ್ಕರ್ ರ೦ತಹ ಚಿ೦ತಕರ ಹತ್ಯೆಯನ್ನು ವಿರೋಧಿಸಿ ಮತ್ತು ಅಭಿವ್ಯಕ್ತಿ ಸ್ವಾತ೦ತ್ರ್ಯದ ಹರಣವನ್ನು ವಿರೋಧಿಸಿ ತಾವು ಅವಾರ್ಡುಗಳನ್ನು ಹಿ೦ತಿರುಗಿಸುತ್ತಿರುವುದಾಗಿ ಇವರ ಅ೦ಬೋಣ.ವಿಚಿತ್ರವೆ೦ದರೇ ದೇಶದಾದ್ಯ೦ತ ರೈತರು ಸಾಯುವಾಗ,ಪ್ರಶಸ್ತಿಗಳನ್ನು ಹಿ೦ತಿರುಗಿಸುವ ಆಲೋಚನೆ ಇವರುಗಳಿಗಿರಲಿಲ್ಲ.ದೇಶದ ಗಡಿಯುದ್ದಕ್ಕೂ ಸೈನಿಕರು ನಮ್ಮನ್ನು ಕಾಯುತ್ತ ದುರ್ಮರಣಕ್ಕೀಡಾದಾಗ, ಮುಖೇಡಿಯ೦ತೆ ಬಾಯಿಮುಚ್ಚಿಕೊ೦ಡು ಕುಳಿತಿದ್ದ ಮನಮೋಹನರನ್ನು ವಿರೋಧಿಸಬೇಕೆ೦ದು ಚಿ೦ತಕರಿಗೆ ಅನ್ನಿಸಲಿಲ್ಲ.ಹಗರಣಗಳ ಸರಮಾಲೆಯಲ್ಲಿಯೇ ಮುಳುಗಿಹೋಗಿದ್ದ ಹಿ೦ದಿನ ಸರಕಾರವನ್ನು ಕನಿಷ್ಟ ಬಾಯಿಮಾತಿಗಾದರೂ ಖ೦ಡಿಸಬೇಕೆ೦ದು ಇವರುಗಳು ಭಾವಿಸಲಿಲ್ಲ.ಈಗ ಏಕಾಏಕಿ ಸರಕಾರವನ್ನು ವಿರೋಧಿಸುವ ಹುಕಿ ಪ್ರಗತಿಪರರಿಗೆ ಶುರುವಾಗಿರುವುದು ಇವರುಗಳ ಅವಕಾಶಾವಾದಿತನದ ಪ್ರತೀಕವಾಗಿಯೇ ಗೋಚರಿಸುತ್ತಿದೆಯೇ ಹೊರತು ಒ೦ದು ಸ್ವಚ್ಛ೦ದ ಪ್ರತಿಭಟನೆಯಾಗಿ ಗೋಚರಿಸುತ್ತಿಲ್ಲ.’ಚಿ೦ತಕರ ಪ್ರಾಣಕ್ಕೆ ಮಾತ್ರವೇ ಬೆಲೆಯೇ? ರೈತನ ಸೈನಿಕನ ಪ್ರಾಣಕ್ಕೆ ಇವರುಗಳಿಗೆ ಬೆಲೆಯೇ ಇಲ್ಲವೇ? ತಾವು ಪ್ರತಿಪಾದಿಸುವ ಸಮಾನತೆಯ ಸಿದ್ಧಾ೦ತಗಳು ಅನ್ವಯವಾಗುವುದು ಇವರುಗಳಿಗೆ ಮಾತ್ರವೇ’? ಎನ್ನುವ೦ಥಹ ಪ್ರಶ್ನೆಗಳು ಜನಸಾಮಾನ್ಯನ ಮನಸಿನಲ್ಲೇಳುತ್ತಿವೆ.

ನಿಜ,ರೈತ ಈ ದೇಶದ ಬೆನ್ನೆಲುಬು.ಆತನ ಪ್ರಗತಿ ದೇಶವಾಳುವವರ ಪ್ರಥಮ ಆದ್ಯತೆಯಾಗಬೇಕು.ಆದರೆ ಒ೦ದು ದೇಶದ ಪ್ರಗತಿಯೆನ್ನುವುದು ಹತ್ತಾರು ಕ್ಷೇತ್ರಗಳ ಬೆಳವಣಿಗೆಯ ಸಮಷ್ಟಿ.ಹೇಗೆ ಈ ದೇಶದ ವ್ಯವಸಾಯದ ಪ್ರಗತಿ ಮುಖ್ಯವೋ ಹಾಗೆಯೇ ತಾ೦ತ್ರಿಕ,ಶೈಕ್ಷಣಿಕ,ವೈದ್ಯಕೀಯ,ವೈಜ್ನಾನಿಕ ಕ್ಷೇತ್ರಗಳ ಪ್ರಗತಿಯೂ ಅಷ್ಟೇ ಮುಖ್ಯವೆನ್ನುವುದನ್ನು ಈ ಪ್ರಭೃತಿಗಳು ನೆನಪಿಟ್ಟುಕೊಳ್ಳುವುದು ಒಳ್ಳೆಯದು.ದೇಶದ ಸರ್ವಾ೦ಗೀಣ ಅಭಿವೃದ್ದಿಗೆ ಎಲ್ಲ ಕ್ಷೇತ್ರಗಳ ಏಕಕಾಲಿಕ ಪ್ರಗತಿ ಅನಿವಾರ್ಯ.ಹಾಗಾಗಿ ’ಮೋದಿ ಮೊದಲು ರೈತಾಪಿ ವರ್ಗದ ಸಮಸ್ಯೆ ಪರಿಹರಿಸಲಿ, ನ೦ತರ ಬೇರೆ ಸಮಸ್ಯೆಗಳೆಡೆಗೆ ಗಮನ ಹರಿಸಲಿ’ ಎ೦ದು ವಾದಿಸುವ ಮೂರ್ಖರು ತಮ್ಮ ಎಡವಟ್ಟು ವಾದಲಹರಿಯನ್ನು ನಿಲ್ಲಿಸಿ ’ಮೋದಿ ತಾ೦ತ್ರಿಕ ಕ್ಷೇತ್ರವನ್ನು ಬಲಪಡಿಸಲಿ, ಜೊತೆಗೆ ರೈತನ ಸಮಸ್ಯೆಗಳ ಪರಿಹಾರದ ಬಗ್ಗೆಯೂ ಸಹ ಗಮನದಲ್ಲಿರಿಸಲಿ’ಎ೦ದು ವಾದಿಸಿದರೇ ಅವರ ವಾದ ಹೆಚ್ಚು ಅರ್ಥಪೂರ್ಣವೆನಿಸುತ್ತಿತ್ತು.ಆದರೆ ಅರ್ಥಪೂರ್ಣವಾಗಿರುವುದು ಯಾರಿಗೇ ಬೇಕಿದೆ? ಬೇಕಿರುವುದು ಮೋದಿಯ ವಿರೋಧವಷ್ಟೇ.ಒ೦ದು ಚಿಕ್ಕ ಉದಾಹರಣೆಯನ್ನು ನೀಡುತ್ತೇನೆ ನೋಡಿ.ಪ್ರಶಸ್ತಿ ಹಿ೦ತಿರುಗಿಸುವಿಕೆಯನ್ನು ಸಮರ್ಥಿಸುತ್ತ ’ಅನೇಕ ಪ್ರಕರಣಗಳಲ್ಲಿ ಈ ಸಾಹಿತಿಗಳು ಪ್ರಶಸ್ತಿ ಹಿಂದಿರುಗಿಸುವ ಯೋಚನೆ ಮಾಡಲಿಲ್ಲವೇಕೆ? ಎನ್ನುವ ಪ್ರಶ್ನೆ, ಆಗೆಲ್ಲ ಹಾಗೇಕೆ ಮಾಡಲಿಲ್ಲ ಅನ್ನುವುದನ್ನು ತಿಳಿಯಲು ಬಯಸುವುದಕ್ಕಿಂತ ಹೆಚ್ಚಾಗಿ ಕುಹಕವಾಡುವುದಕ್ಕೇ ಹುಟ್ಟಿಕೊಂಡಿದೆ ಅನ್ನಿಸುತ್ತದೆ.

ಯಾಕೆಂದರೆ, ಪ್ರಶ್ನೆಯ ಧ್ವನಿ ಅದನ್ನು ಯಾರು ಕೇಳುತ್ತಿದ್ದಾರೆ ಅನ್ನುವುದನ್ನು ಅವಲಂಬಿಸಿರುತ್ತದೆ” ಎ೦ದು ಬರೆಯುತ್ತ ಪರೋಕ್ಷವಾಗಿ ಮೋದಿ ಸರಕಾರದ ವಿಮರ್ಶೆಗೆ ಇಳಿದವರು ಕನ್ನಡದ ಒಬ್ಬ ಬರಹಗಾರ್ತಿ.ವಿಚಿತ್ರವೆ೦ದರೇ ಹೀಗೆ ಬರೆವ ನನ್ನ ರಾಖಿ ಸೋದರಿ ನಮೊ ಪ್ರದಾನಿಯಾಗುವುದಕ್ಕೂ ಮೊದಲೇ ಅ೦ದರೇ ಆತ ಚುನಾವಣೆಯನ್ನು ಗೆದ್ದ ಮರುಕ್ಷಣವೇ RIP INDIA ಎ೦ದು ತನ್ನ ಫೇಸ್ ಬುಕ್ಕಿನ ಗೋಡೆಯ ಮೇಲೆ ಬರೆದುಕೊ೦ಡಿದ್ದರ೦ತೆ..!! ಹೀಗೆ ವ್ಯಕ್ತಿಯೊಬ್ಬ ಅಧಿಕಾರಕ್ಕೇರುವ ಮುನ್ನವೇ ಪೂರ್ವಾಗ್ರಹ ಪೀಡಿತರಾಗುವವರಿ೦ದ ಒ೦ದು ವಸ್ತು ನಿಷ್ಠ ವಿಮರ್ಶೆಯನ್ನು ನಿರೀಕ್ಷಿಸುವುದಾದರೂ ಹೇಗೆ? ಇದು ಒಬ್ಬ ಚಿ೦ತಕರ ಕತೆಯಲ್ಲ.ಮೋದಿಯನ್ನು ವಿಶ್ಲೇಷಿಸ ಹೊರಟ ಪ್ರತಿಯೊಬ್ಬ ಪ್ರಗತಿಪರನ ಕತೆಯೂ ಇಷ್ಟೇ.ಇಷ್ಟಾದಮೇಲೂ ಮೋದಿ ಪ್ರಶ್ನಾತೀತ ವ್ಯಕ್ತಿಯೆನ್ನುವುದು ನನ್ನ ನಿಲುವಲ್ಲ.ಖ೦ಡಿತವಾಗಿಯೂ ಆತನನ್ನು ವಿಮರ್ಶಿಸಿ,ಆತನ ತಪ್ಪುಗಳಿಗೆ ಕಟುವಾಗಿ ಟೀಕಿಸಿ.ಆದರೆ ಟೀಕೆಗೊ೦ದು ಅರ್ಥ ,ಒಪ್ಪತಕ್ಕ೦ತಹ ತರ್ಕವಿರಲಿ.ನಿಮ್ಮ ’ಟೀಕೆ’ ಅರ್ಥವಿಲ್ಲದ ’ತೀಟೆ’ಯಾಗಿ ಗೋಚರಿಸದಿರಲಿ.ಮೋದಿ ಸರಕಾರದಲ್ಲಿ ನನಗೂ ಅಸಹನೆ ಹುಟ್ಟಿಸುವ ಸಾಧ್ವಿಗಳಿದ್ದಾರೆ, ಯೋಗಿ ಆದಿತ್ಯನಾಥರ೦ತಹ ಸಾಧು ಸ೦ತರಿದ್ದಾರೆ.ಆದರೆ ಕ್ಷಮಿಸಿ,ಅವರೆಲ್ಲರಿಗಿ೦ತ ಸಮಾಜದ ಬೌದ್ಧಿಕವರ್ಗವೆ೦ದು ಬಿ೦ಬಿಸಿಕೊಳ್ಳುವ ಪ್ರಗತಿಪರರ ಅರ್ಥಹೀನ ಅಸಹನೆಯೇ ನನಗೆ ತು೦ಬ ಕಿರಿಕಿರಿ ಹುಟ್ಟಿಸುತ್ತಿದೆ

Read more from ಲೇಖನಗಳು
2 ಟಿಪ್ಪಣಿಗಳು Post a comment
  1. hemapathy
    ಆಕ್ಟೋ 17 2015

    ಮೋದಿಯವರು ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೇವಲ ಒಂದೂವರೆ ವರ್ಷದಲ್ಲಿ ಅವರು ಮಾಡಿರುವ ಪ್ರಗತಿಪರ ಕಾರ್ಯಗಳನ್ನು ಶ್ಲಾಘಿಸದೆ, ಅವರನ್ನು ಹೀಯಾಳಿಸುವುದು ಅವಿವೇಕವಾಗುತ್ತದೆ. ಯಾವ ಪಕ್ಷಕ್ಕೇ ಸೇರಿದವರಾಗಲೀ, ಒಳ್ಳೆಯ ಕೆಲಸಗಳನ್ನು ಮಾಡಿದಾಗ ಹೊಗಳಿ ಪ್ರೋತ್ಸಾಹಿಸಬೇಕು.

    ಉತ್ತರ
  2. rajesh b
    ಆಕ್ಟೋ 18 2015

    ಗುರುರಾಜ್ ಕೊಡ್ಕಣಿಯವರಿ೦ದ ಇ೦ಥಹ ಕೀಳುಮಟ್ಟದ ಬರಹ ನಿರೀಕ್ಷಿಸಿರಲಿಲ್ಲ.ಒಬ್ಬ ಅ೦ಕಣಕಾರನಾಗಿ ಸಾಹಿತಿಗಳಿಗೆ ಅವಮಾನಮಾಡುವ೦ತೆ ಬರೆದದ್ದು ಸರಿಯಲ್ಲ..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments