ನಕ್ಷತ್ರಗಳ ಭವಿಷ್ಯಕಾರನ ಆಸಕ್ತಿ-ಅನಾಸಕ್ತಿಗಳು
– ರೋಹಿತ್ ಚಕ್ರತೀರ್ಥ
ಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ, ಭಾರತ ಕಂಡ ಅಪರೂಪದ ವಿಜ್ಞಾನಿ. ಸರ್ ಸಿ.ವಿ. ರಾಮನ್ ಅವರ ಅತ್ಯಂತ ನಿಕಟ ಸಂಬಂಧಿಯಾಗಿಯೂ ಚಂದ್ರ ಅಂತಹ ಸಂಬಂಧಗಳನ್ನು ತನ್ನ ಉತ್ಥಾನಕ್ಕೆ ಎಂದೂ ಬಳಸಿಕೊಳ್ಳಲಿಲ್ಲ. ಆದರ್ಶ ವಿಜ್ಞಾನಿ ಎನ್ನುವುದಕ್ಕೆ ಎಲ್ಲ ವಿಧದಲ್ಲೂ ಅರ್ಹನಾಗಿದ್ದ ಮೆಲುನುಡಿಯ ಕಠಿಣ ದುಡಿಮೆಯ ಅಪಾರ ಬುದ್ಧಿಮತ್ತೆಯ ಈ ನೊಬೆಲ್ ಪುರಸ್ಕೃತ ಪಂಡಿತ ಖಾಸಗಿಯಾಗಿ ಹೇಗಿದ್ದರು? ಅವರ ಬದುಕಿನ ಒಂದಷ್ಟು ಸೀಳುನೋಟಗಳು ಇಲ್ಲಿವೆ. ಅಕ್ಟೋಬರ್ 19, ಚಂದ್ರರ ಬರ್ತ್‍ಡೇ.
ಹೆಚ್ಚಾಗಿ ವಿಜ್ಞಾನಿಗಳು ಎಂದರೆ ಒಂದೇ ಲೆಕ್ಕವನ್ನು ವರ್ಷಾನುಗಟ್ಟಲೆ ಯೋಚಿಸುವ, ಒಂದು ಪ್ರಯೋಗದ ಬೆನ್ನು ಬಿದ್ದು ಹಲವಾರು ದಶಕಗಳ ಬದುಕನ್ನು ತೇಯುವ ತಪಸ್ವಿಗಳು ಎನ್ನುವ ಕಲ್ಪನೆ ಇರುತ್ತದೆ. ನಮ್ಮ ಸುತ್ತಲಿನ ಅನೇಕ ವಿಜ್ಞಾನಿಗಳು ಅದಕ್ಕೆ ಪುಷ್ಟಿ ನೀಡುತ್ತಾರೆ ಎಂದೂ ಹೇಳಬಹುದು. ವಿಜ್ಞಾನಿಗಳಿಗೆ ಅದರ ಹೊರಗೂ ಒಂದು ಬದುಕು ಇರುತ್ತದೆ, ಅವರಿಗೆ ಬೇರೆ ವಿಷಯಗಳಲ್ಲೂ ಆಸಕ್ತಿ ಇದ್ದಿರಬಹುದು ಎನ್ನುವ ಯೋಚನೆ ಬರುವಂತೆ ಅವರ ಬದುಕು ಇರುವುದಿಲ್ಲ. ಇದ್ದರೂ ಅದು ಸಾರ್ವಜನಿಕರಿಗೆ ಅಷ್ಟೊಂದು ತೆರೆದಿರುವುದಿಲ್ಲ. ಹೀಗಾಗಿ, ವಿಜ್ಞಾನಿಗಳ ಬಗ್ಗೆ ನಾವು ಸಾಮಾನ್ಯರು ಅನೇಕ ಪೂರ್ವಗ್ರಹಗಳನ್ನು ಬೆಳೆಸಿಕೊಳ್ಳುತ್ತೇವೆ. ಭಾರತದಲ್ಲಿ ಹುಟ್ಟಿಬೆಳೆದ ವಿಶ್ವಪ್ರಸಿದ್ಧ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಸುಬ್ರಹ್ಮಣ್ಯನ್ ಚಂದ್ರಶೇಖರ ಅವರ ಬಗ್ಗೆಯೂ ಇಂತಹದೊಂದು ಕಲ್ಪನೆ ಬೆಳೆಯಲು ಎಲ್ಲ ಸಾಧ್ಯತೆಗಳೂ ಇವೆ! ಯಾಕೆಂದರೆ ಚಂದ್ರ (ಅವರನ್ನು ಉಳಿದೆಲ್ಲರೂ ಕರೆಯುತ್ತಿದ್ದದ್ದು ಹಾಗೆಯೇ. ಅವರಿಗೂ ಆ ಸಂಕ್ಷಿಪ್ತನಾಮ ಇಷ್ಟ) ತನ್ನ ವೈಯಕ್ತಿಕ ಜೀವನದ ಬಗ್ಗೆ ಹೊರಗೆ ಹೇಳಿಕೊಂಡದ್ದು ಕಡಿಮೆ. ಖಾಸಗಿ ಬದುಕಿನ ಬಗ್ಗೆ ಎಲ್ಲೂ ಹೇಳೇ ಇಲ್ಲ ಎನ್ನಬೇಕು! ಆದರೂ ಅವರ ಕೆಲ ಬರಹಗಳನ್ನು, ಕೆಲವೇ ನಿಮಿಷಗಳಿಗೆ ಮೊಟಕಾದ ಒಂದೆರಡು ಸಂದರ್ಶನಗಳನ್ನು ನೋಡಿದಾಗ, ಈ ಮನುಷ್ಯನಿಗೆ ವಿಜ್ಞಾನದ ಹೊರಗೆಯೂ ಕೆಲವೊಂದು ಆಸಕ್ತಿಗಳು ಇದ್ದವು ಎನ್ನುವುದು ತಿಳಿಯುತ್ತದೆ.
ಚಂದ್ರ ತನ್ನ ಚಿಕ್ಕಪ್ಪ ಸರ್ ಸಿ.ವಿ. ರಾಮನ್‍ರಂತೆ ವಾಚಾಳಿ ಮಾತುಗಾರನಲ್ಲ. ಅಥವಾ ವಿಜ್ಞಾನವನ್ನು ಚಹ ಮಾರುವವನಿಗೂ ಅರ್ಥವಾಗುವಂತೆ ಹೇಳಬಲ್ಲ ರಾಮನ್‍ರ ವಾಕ್ಚಾತುರ್ಯ ತಕ್ಕಮಟ್ಟಿಗೆ ಚಂದ್ರರಿಗೆ ಒಲಿದಿರಲಿಲ್ಲ ಎಂದೂ ಹೇಳಬಹುದೇನೋ. ಚಂದ್ರರದ್ದು ಭೋರ್ಗರೆವ ಜಲಪಾತವಲ್ಲ; ಪ್ರಶಾಂತವಾಗಿ ಆದರೆ ನಿರಂತರವಾಗಿ ಹರಿವ ಝರಿಯಂಥ ಮಾತು. ಮಾತಿನಲ್ಲಿ ಅಬ್ಬರವಿಲ್ಲ; ಆದರೆ ಆಳವಿದೆ. ಏರುದನಿಯಿಲ್ಲ; ಆದರೆ ವಿಷಯದ ಔನ್ನತ್ಯವಿದೆ. ಚಂದ್ರ ತನ್ನ ಇಪ್ಪತ್ತೆರಡರ ಎಳವೆಯಲ್ಲೇ ವಿಶ್ವವಿದ್ಯಾಲಯಗಳಲ್ಲಿ ಭೌತಶಾಸ್ತ್ರದ ಬಗ್ಗೆ ಅತ್ಯಂತ ಪಾಂಡಿತ್ಯಪೂರ್ಣವಾದ ಉಪನ್ಯಾಸಗಳನ್ನು ಕೊಟ್ಟಿದ್ದರು. ಕಾಲೇಜಿನಲ್ಲಿ ಡಿಬೇಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದರು. ಯೆರ್ಕಿಸ್ (ವಿಸ್ಕಿನ್‍ಸನ್‍ನಲ್ಲಿರುವ ಒಂದು ಉನ್ನತ ಅಧ್ಯಯನ ಸಂಸ್ಥೆ. ಶಿಕಾಗೋ ವಿವಿಗೆ ಒಳಪಟ್ಟದ್ದು) ನಲ್ಲಿ ಅವರು ಪಾಠ ಹೇಳಲು ಶುರುಮಾಡಿದಾಗ, ಯುರೋಪಿನ ಮತ್ತು ಅಮೆರಿಕದ ಮಿಚಿಗನ್‍ನಂತಹ ದೂರದೂರುಗಳ ಪ್ರತಿಭಾವಂತ ತರುಣರು ಅವರ ಮಾತುಗಳನ್ನು ಕೇಳಲೆಂದೇ ವಿಸ್ಕಿನ್‍ಸನ್‍ಗೆ ಹೋಗುತ್ತಿದ್ದರಂತೆ.
ಭೌತಶಾಸ್ತ್ರವನ್ನು ಹೊರತುಪಡಿಸಿದರೆ, ಚಂದ್ರ ಅವರ ಬುದ್ಧಿಯನ್ನು ಸದಾ ಪ್ರಚೋದಿಸುತ್ತಿದ್ದ ಇನ್ನೊಂದು ವಿಷಯ ಗಣಿತ. ಜಗತ್ತಿನ ಹೆಸರುವಾಸಿ ವಿಜ್ಞಾನಿಯಾದ ಮೇಲೆ, ಒಮ್ಮೆ ಭಾರತಕ್ಕೆ ಬಂದಿದ್ದಾಗ, ಚಂದ್ರ ತಮ್ಮ ಪತ್ನಿಯೊಂದಿಗೆ ತಾನು ಕಲಿತ ಹಿಂದೂ ಹೈಸ್ಕೂಲಿಗೆ ಭೇಟಿಕೊಟ್ಟರು. ಆಗ, ಅಲ್ಲಿ ಅವರು ಬಾಲಕನಾಗಿದ್ದಾಗ ಪಡೆದ ಮಾರ್ಕುಗಳ ರಿಜಿಸ್ಟರ್ ಪುಸ್ತಕವನ್ನು ತೆರೆದು ನೋಡಿದ ಪತ್ನಿ ಲಲಿತಾರಿಗೆ ಅಚ್ಚರಿ ಮತ್ತು ಖುಷಿಗಳು ಏಕಕಾಲಕ್ಕೆ ಆದವಂತೆ. ಯಾಕೆಂದರೆ ಚಂದ್ರ ಎಲ್ಲೂ 90ಕ್ಕಿಂತ ಕಡಿಮೆ ಮಾರ್ಕು ಪಡೆದ ಇತಿಹಾಸವೇ ಇರಲಿಲ್ಲ! ಅವರಿಗೆ ಅತ್ಯಂತ ಇಷ್ಟವಾಗಿದ್ದ ವಿಷಯಗಳೆಂದರೆ ಜ್ಯಾಮಿತಿ ಮತ್ತು ಬೀಜಗಣಿತ. ಶೈಕ್ಷಣಿಕ ವರ್ಷ ಪ್ರಾರಂಭವಾಗುವುದಕ್ಕೆ ಮೊದಲೇ ಅವರು ಆ ಇಡೀ ವರ್ಷದ ಗಣಿತ ಮತ್ತು ವಿಜ್ಞಾನಪಠ್ಯಗಳನ್ನು ಓದಿ ಮುಗಿಸಿಬಿಡುತ್ತಿದ್ದರು! ಶಿಕಾಗೋಗೆ ಹೊರಟುನಿಂತಾಗ ಅವರು ಪ್ರೀತಿಯಿಂದ ಒಯ್ದ ಸಂಗತಿಗಳಲ್ಲಿ ತನ್ನ ಅಜ್ಜನ ಸಹಿಯಿದ್ದ ಒಂದು ಗಣಿತಪುಸ್ತಕವೂ ಇತ್ತು! ಗಣಿತವನ್ನು ಅದರೆಲ್ಲ ಶಕ್ತಿ-ಸೌಂದರ್ಯಗಳ ಜೊತೆ ಜನರ ಬಳಿಗೆ ಒಯ್ಯಬೇಕು ಎನ್ನುವ ತೀವ್ರ ತುಡಿತ ಚಂದ್ರರಿಗಿತ್ತು. ಅದಕ್ಕೆ ಅವರು ತನ್ನ 85ನೇ ವಯಸ್ಸಿನಲ್ಲಿ ಬರೆದ “ಪ್ರಿನ್ಸಿಪಿಯ ಮ್ಯಾಥಮೆಟಿಕ” ಗ್ರಂಥವೇ ಸಾಕ್ಷಿ. ಇದು ಮೂಲತಃ ಐಸಾಕ್ ನ್ಯೂಟನ್ ತನ್ನ ಜೀವಮಾನದಲ್ಲಿ ಮಾಡಿದ ಗಣಿತ ಸಂಶೋಧನೆಗಳನ್ನೆಲ್ಲ ಒಟ್ಟುಸೇರಿಸಿ ಬರೆದ ಮಹಾಗ್ರಂಥದ ಹೆಸರು. ಯಾರೂ ಕೂಡ ಸುಲಭದಲ್ಲಿ ಊಹಿಸಬಹುದಾದಂತೆ, ಕಬ್ಬಿಣದ ಕಡಲೆ. ಚಂದ್ರ, ತನ್ನ ಜೀವನದ ಮೂವತ್ತಕ್ಕೂ ಹೆಚ್ಚು ವರ್ಷಗಳನ್ನು ನ್ಯೂಟನ್‍ನ ಪುಸ್ತಕದ ಜೊತೆ ಕಳೆದು ಅದರ ಸರಳರೂಪವನ್ನು ಪ್ರಕಟಿಸಿದರು.
ರಾಮಾನುಜನ್ ಭಕ್ತ
ಚಂದ್ರ ಅವರ ಮೇಲೆ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಬೀರಿದ ಪ್ರಭಾವ ಅಪಾರ. ಬಾಲ್ಯದಲ್ಲಿ ಅವರು ತಾನೂ ರಾಮಾನುಜನ್‍ರಂತೆ ಹೆಸರಾಂತ ಗಣಿತಜ್ಞರಾಗುವ ಕನಸು ಕಾಣುತ್ತಿದ್ದರು. ಆದರೆ ಕಾಲೇಜಿನಲ್ಲಿ ಗಣಿತ ಮತ್ತು ಭೌತಶಾಸ್ತ್ರದ ನಡುವೆ ಆಯ್ಕೆ ಮಾಡಬೇಕಾದ ಸನ್ನಿವೇಶ ಬಂದಾಗ ಅಪ್ಪ ಸುಬ್ರಮಣ್ಯನ್‍ರ ಬಲವಂತಕ್ಕೆ ಮಣಿದು ಭೌತಶಾಸ್ತ್ರವನ್ನು ಆರಿಸಬೇಕಾಯಿತು. (ಸಿ.ವಿ.ರಾಮನ್, ಸುಬ್ರಹ್ಮಣ್ಯನ್ ಅವರ ತಮ್ಮ ಮತ್ತು ಚಂದ್ರರ ಚಿಕ್ಕಪ್ಪ. ತನ್ನ ಮಗನೂ ರಾಮನ್‍ರಂತೆ ದೊಡ್ಡ ಭೌತವಿಜ್ಞಾನಿಯಾಗಬೇಕೆಂದು ಅಪ್ಪನ ತುಡಿತ ಮತ್ತು ಹಠ!) ಫಿಸಿಕ್ಸ್ ಅನ್ನು ಆರಿಸಿಕೊಂಡದ್ದು ಅಪ್ಪನ ಒತ್ತಾಸೆಗಷ್ಟೇ. ಚಂದ್ರ ಕಾಲೇಜಿನಲ್ಲಿ ತನ್ನ ಸ್ವಂತ ಕ್ಲಾಸುಗಳಿಗೆ ಚಕ್ಕರ್ ಹಾಕಿ ಗಣಿತದ ತರಗತಿಗಳಿಗೆ ಹೋಗಿ ಕೂರುತ್ತಿದ್ದರು. (ಪುಣ್ಯಕ್ಕೆ ಇದಕ್ಕೆ ಅಧ್ಯಾಪಕರ ವಿರೋಧ ಇರಲಿಲ್ಲ. ಚಂದ್ರರ ಪ್ರತಿಭೆಯ ಬಗ್ಗೆ ಅವರಿಗಾಗಲೇ ತಿಳಿಯತೊಡಗಿತ್ತು ಎಂದು ಭಾವಿಸಬಹುದೇನೋ) ಕಾಲೇಜಿನಲ್ಲಿ ಪದವಿ ಪಡೆದ ಮೇಲೆ ಉನ್ನತವ್ಯಾಸಂಗಕ್ಕೆಂದು ಇಂಗ್ಲೆಂಡಿಗೆ ಹೋದ ಮೇಲೂ ಕೆಲವೊಂದು ಸಲ, ಇವೆಲ್ಲ ಬಿಟ್ಟು ಗಣಿತವನ್ನೇ ಆರಿಸಿಕೊಳ್ಳಬೇಕೆಂದು ತೀವ್ರವಾಗಿ ಅವರಿಗೆ ಅನಿಸಿದ್ದಿದೆ. ಆದರೆ, ಅದು ತಾನು ಅಲ್ಲಿ ಸಂಪಾದಿಸಲೆಂದು ಸೇರಿದ್ದ ಮಾಸ್ಟರ್‍ಡಿಗ್ರಿಗೇ ಸಂಚಕಾರ ತರಬಹುದೆಂಬ ಭಯದಿಂದ ಆಸೆಯನ್ನು ಅದುಮಿಟ್ಟು ಅಭ್ಯಾಸದಲ್ಲಿ ತೊಡಗುತ್ತಿದ್ದರು. ಚಂದ್ರ ಮುಂದೆ ಖಭೌತವಿಜ್ಞಾನದಲ್ಲಿ ಡಾಕ್ಟರೇಟ್ ಸಂಪಾದಿಸಿ, ವೃತ್ತಿಜೀವನ ಆರಂಭಿಸಿದರಾದರೂ ರಾಮಾನುಜನ್ ಮೇಲಿನ ಪ್ರೀತಿ, ಅಭಿಮಾನಗಳು ಹೆಚ್ಚುತ್ತಲೇ ಹೋದವು. 1940ರ ದಶಕದಲ್ಲಿ ಮದರಾಸಿನಲ್ಲಿ ರಾಮಾನುಜನ್ ಇನ್ಸ್ಟಿಟ್ಯೂಟ್ ಸ್ಥಾಪಿಸಬೇಕೆಂಬ ಪ್ರಸ್ತಾಪ ಬಂದಾಗ,ಚಂದ್ರ ಅದಕ್ಕೆ ಎಲ್ಲ ರೀತಿಯ ನೆರವು ನೀಡಿದರು. ಅದೇ ಸಂಸ್ಥೆ ಮುಂದೊಂದು ದಿನ ಸರಕಾರದ ಅನುದಾನ ನಿಂತುಹೋಗಿ ಹಣಕಾಸಿನ ಮುಗ್ಗಟ್ಟಿಗೆ ಸಿಕ್ಕಿದಾಗ, ರಾಜಕೀಯದಿಂದ ಸದಾ ಅಪಾರ ಅಂತರ ಕಾಯ್ದುಕೊಳ್ಳುತ್ತಿದ್ದ ಚಂದ್ರ ಪ್ರಧಾನಿ ನೆಹರೂ ಜೊತೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರು. ರಾಮಾನುಜನ್ ಪತ್ನಿ ಜಾನಕಿಯಮ್ಮಾಳ್‍ರಿಗೆ ಸರಕಾರ ಕೊಡುತ್ತಿದ್ದ ವಿಧವಾವೇತನವನ್ನು ಹೆಚ್ಚಿಸಬೇಕೆಂದು ಮತ್ತೊಮ್ಮೆ ಸರಕಾರದ ಜೊತೆ ಮಾತುಕತೆ ನಡೆಸಿ, ಆಕೆಗೆ ನ್ಯಾಯ ದೊರಕಿಸಿಕೊಟ್ಟರು. ಈ ಜಗತ್ತಿನಲ್ಲಿ ರಾಮಾನುಜನ್ನರ ಮೊತ್ತಮೊದಲ ಕಂಚಿನ ಪ್ರತಿಮೆ ಸ್ಥಾಪಿನೆಯಾದದ್ದು ಚಂದ್ರರ ನೇರವಾದ ಬೆಂಬಲ, ನೆರವು, ಒತ್ತಾಸೆ ಇದ್ದದ್ದರಿಂದ. “ರಾಮಾನುಜನ್ ಜೊತೆ ನನ್ನನ್ನಾಗಲೀ ಯಾರನ್ನೇ ಆಗಲಿ ಹೋಲಿಸಿ ಮಾತಾಡುವುದು ಹಾಸ್ಯಾಸ್ಪದವಾಗುತ್ತದೆ. ಎವರೆಸ್ಟ್ ಬೆಟ್ಟಕ್ಕೆ ಎಲ್ಲಿಯ ಹೋಲಿಕೆ?” ಎಂದು ಚಂದ್ರ ಹೇಳಿದ ಮಾತುಗಳು ಪ್ರಸಿದ್ಧ.
ಸಾಹಿತ್ಯದ ವಿದ್ಯಾರ್ಥಿ
“ವಿಜ್ಞಾನಕ್ಕೆ ಬರದೆ ಹೋದರೆ ಏನಾಗುತ್ತಿದ್ದಿರಿ?” ಎಂದು ಪತ್ರಕರ್ತರು ಕೇಳಿದಾಗ ಚಂದ್ರ ಹೇಳುತ್ತಿದ್ದದ್ದು : “ಇಂಗ್ಲಿಶ್ ಅಧ್ಯಾಪಕನಾಗುತ್ತಿದ್ದೆ”. ಚಿಕ್ಕ ಹುಡುಗನಾಗಿದ್ದಾಗಲೇ ಇಂಗ್ಲೀಶಿನ ಪ್ರಮುಖ ಪುಸ್ತಕಗಳನ್ನು ಚಂದ್ರ ಅರೆದು ಕುಡಿದಾಗಿತ್ತು. ಅಲ್ಲದೆ, ಬಾಲಕನಾಗಿದ್ದಾಗ ಒಮ್ಮೆ ಶೇಕ್ಸ್ಪಿಯರನ ಎಲ್ಲಾ ನಾಟಕಗಳನ್ನೂ ಕಂಠಪಾಠ ಮಾಡಬೇಕು ಎಂದು ಬಗೆದಿದ್ದರಂತೆ! ಈ ಸಾಧನೆ ಮಾಡಿದವನೇ ಜಗತ್ತಿನ ಅತ್ಯಂತ ಪ್ರತಿಭಾವಂತ ಎಂದು ಅಂದುಕೊಂಡಿದ್ದರಂತೆ! ಇಂಗ್ಲೆಂಡಿನಲ್ಲಿರುವಾಗ, ತನ್ನ ವ್ಯಾಸಂಗದ ಮಧ್ಯದಲ್ಲಿ ಒಂದೆರಡು ವಾರಗಳ ಬಿಡುವು ಸಿಕ್ಕಿದರೆ ಸಾಕು, ಇಂಗ್ಲೀಶ್ ಸಾಹಿತ್ಯವನ್ನು ಗುಡ್ಡೆ ಹಾಕಿಕೊಳ್ಳುತ್ತಿದ್ದರು. ರಶ್ಯನ್ ಲೇಖಕರೆಂದರೆ ಚಂದ್ರ ಅವರಿಗೆ ಅಚ್ಚುಮೆಚ್ಚು. ದಾಸ್ತೊವಸ್ಕಿಯ “ಕ್ರೈಮ್ ಅಂಡ್ ಪನಿಶ್‍ಮೆಂಟ್”, “ಬ್ರದರ್ಸ್ ಕರಮಝೋವ್”, “ಪೊಸೆಸ್ಡ್”, ಚೆಕಾವ್‍ನ ಎಲ್ಲ ನಾಟಕ ಮತ್ತು ಕತೆಗಳು, ಟಾಲ್‍ಸ್ಟಾಯ್‍ನ “ಅನ್ನಾ ಕರೆನೀನ”, ಟರ್ಗಿನೆವ್‍ನ ಕಾದಂಬರಿಗಳು – ಹೀಗೆ ಎಲ್ಲವನ್ನೂ ಓದಿಮುಗಿಸಿದ್ದರು. ಇಂಗ್ಲೀಶ್ ಲೇಖಕರಲ್ಲಿ ಅವರಿಗಿಷ್ಟವಾಗಿದ್ದವರು – ವರ್ಜೀನಿಯಾ ವೂಲ್ಫ್, ಟಿ.ಎಸ್.ಎಲಿಯೆಟ್, ಥಾಮಸ್ ಹಾರ್ಡಿ, ಜಾನ್ ಗಾಲ್ಸ್‍ವರ್ದಿ ಮತ್ತು ಬರ್ನಾರ್ಡ್ ಷಾ. ಸಾಹಿತ್ಯ ಬಿಟ್ಟರೆ ಅವರಿಗಿದ್ದ ಇನ್ನೊಂದು ಆಸಕ್ತಿ ಸಂಗೀತ. ಭಾರತೀಯ ಮತ್ತು ಪಾಶ್ಚಾತ್ಯ – ಎರಡೂ ಬಗೆಯ ಸಂಗೀತಗಳಲ್ಲಿ ಚಂದ್ರ ಅವರಿಗೆ ಆಳವಾದ ಪರಿಶ್ರಮವಿತ್ತು. ಬಿಥೋವನ್, ಮೊಝಾರ್ಟ್ ಅವರ ಸಂಗೀತವನ್ನು ಬಹಳ ಇಷ್ಟಪಡುತ್ತಿದ್ದರು. “ಪ್ರತಿಭೆ ಎನ್ನುವುದು ಯಾವ ರೂಪದಲ್ಲೂ ಹೊರಹೊಮ್ಮಬಹುದು. ವಿಜ್ಞಾನಿಯೇ ಎಲ್ಲರಿಗಿಂತ ಶ್ರೇಷ್ಠ ಎಂದಾಗಲೀ ಕವಿಯೇ ಮಾನವೋತ್ತಮ ಎಂದಾಗಲೀ ಸಂಕುಚಿತಭಾವ ತಾಳಬಾರದು” ಎನ್ನುವ ಅರ್ಥ ಬರುವ “ಕ್ರಿಯಾಶೀಲತೆಯ ಪಟ್ಟುಗಳು” ಎಂಬ ವಿಷಯದ ಬಗ್ಗೆ ಚಂದ್ರ ಒಮ್ಮೆ ಉಪನ್ಯಾಸ ಕೊಟ್ಟದ್ದರು. ಇದರಲ್ಲಿ ಶೇಕ್ಸ್‍ಪಿಯರ್, ನ್ಯೂಟನ್ ಮತ್ತು ಬಿಥೋವನ್ – ಈ ಮೂವರು ಪ್ರತಿಭಾವಂತರ ಉದಾಹರಣೆ ತೆಗೆದುಕೊಳ್ಳುತ್ತಾರೆ.
ಅನಾಸಕ್ತಿಯೋಗ
ಚಂದ್ರ ಅವರಿಗೆ ಯಾವುದರಲ್ಲಿ ಆಸಕ್ತಿ ಇರಲಿಲ್ಲ – ಎಂದರೆ ಏನುತ್ತರ? ಅವರಿಗೆ ರಾಜಕೀಯ ಮತ್ತು ಆಡಳಿತದ ಕೆಲಸಗಳಲ್ಲಿ ಆಸಕ್ತಿ ಇರಲಿಲ್ಲ. ಕೇಂಬ್ರಿಜ್‍ನಲ್ಲಿದ್ದಾಗ ಅವರು ಪ್ರತಿಸಲ ತಪ್ಪದೆ ಆಸ್ಟ್ರೋನೋಮಿಕಲ್ ಸೊಸೈಟಿಯ ಸಭೆಗಳಿಗೆ ಹಾಜರಾಗುತ್ತಿದ್ದರೂ ಅಲ್ಲಿನ ವೋಟಿಂಗ್‍ಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಏನೊಂದೂ ಅರಿಯದ ತನ್ನ ಅಭಿಮತ ಲೆಕ್ಕಕ್ಕೆ ಹೋಗಬಾರದು ಎನ್ನುವ ಎಚ್ಚರ ಅವರನ್ನು ಹಿಮ್ಮೆಟ್ಟಿಸುತ್ತಿತ್ತು. ಶಿಕಾಗೋ ವಿವಿಯಲ್ಲಿದ್ದಾಗಲೂ ಅಷ್ಟೇ, ಅವರು ಯಾವ ರಾಜಕೀಯದ ಬಲೆಯೊಳಗೂ ಸಿಕ್ಕಿಕೊಳ್ಳಲು ಬಯಸಲಿಲ್ಲ. 1949ರ ಸಮಯದಲ್ಲಿ ಅವರು ಖಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಬೇಕಾಗಿ ಬಂತು. ಒಂದೇ ವರ್ಷದಲ್ಲಿ ಆ ಹುದ್ದೆಯನ್ನು ಇನ್ನೊಬ್ಬರ ತಲೆಗೆ ಹಾಕಿ ತಾನು ಮತ್ತೆ ಪ್ರೊಫೆಸರ್‍ಗಿರಿಗೆ ಮರಳಿದರು! “ಆಡಳಿತದ ಯಂತ್ರವನ್ನು ನಡೆಸುವ ಗುಣ ಎಲ್ಲರಲ್ಲೂ ಇರುವುದಿಲ್ಲ. ಅದಕ್ಕೆಂದೇ ತರಬೇತಿ ಪಡೆದ, ನೈಪುಣ್ಯ ಇರುವ ಜನರನ್ನು ಅದಕ್ಕೆ ಆರಿಸಬೇಕು. ಸಂಶೋಧನೆ, ಪಾಠಗಳೇ ನನ್ನ ಸರ್ವಸ್ವ. ನನಗೆ ಆಡಳಿತದ ಗೋಜಲು-ಗೊಂದಲಗಳು ಬೇಡ!” ಎಂದು ಚಂದ್ರ ಹೇಳುವಾಗ, ಯಾಕೋ ಬಿ.ಜಿ.ಎಲ್.ಸ್ವಾಮಿ ನೆನಪಾಗುತ್ತಾರೆ.
ಇನ್ನು, ಚಂದ್ರ ಅವರಿಗೆ ಭಾರತೀಯ ಪ್ರಾಚೀನ ಸಾಹಿತ್ಯ ಅಥವಾ ಯಾವುದೇ ಧರ್ಮಗ್ರಂಥಗಳನ್ನು ಎದುರಿಟ್ಟುಕೊಂಡು, ಇವರೆಲ್ಲಾ ಸಾವಿರ ವರ್ಷಗಳ ಹಿಂದೆಯೇ ಖಭೌತಶಾಸ್ತ್ರದ ವಿಚಾರ ಹೇಳಿದ್ದಾರೆ – ಎನ್ನುತ್ತ ವಾದ ಮಾಡುವುದು ಸುತಾರಾಂ ಇಷ್ಟವಿರಲಿಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಏನು ಬರೆದಿದ್ದಾರೋ ಅದನ್ನು ಈಗ ನಡೆಸುತ್ತಿರುವ ಸಂಶೋಧನೆಗೆ ಎಳೆದುತಂದು ತಾಳೆ ನೋಡುವುದು ಸರಿಯಲ್ಲ. ಪ್ರಾಚೀನರು ಹೇಳಿದ್ದಕ್ಕೂ ಆಧುನಿಕ ಖಭೌತಶಾಸ್ತ್ರಕ್ಕೂ ಸಂಬಂಧವಿಲ್ಲ – ಎನ್ನುವುದು ಚಂದ್ರ ಅವರ ಸ್ಪಷ್ಟ ನಿಲುವಾಗಿತ್ತು. “ನಾನು ನಾಸ್ತಿಕ. ಆದ್ದರಿಂದ ದೈವಿಕಲೀಲೆಗಳ ಬಗ್ಗೆ, ಧಾರ್ಮಿಕಗ್ರಂಥಗಳ ಚರ್ಚೆಯಲ್ಲಿ ಭಾಗವಹಿಸಲಾರೆ. ಅದರಲ್ಲಿ ನನಗೆ ಆಸಕ್ತಿಯೂ ಇಲ್ಲ” ಎಂದು ಚಂದ್ರ ಕಡ್ಡಿಮುರಿದಂತೆ ಹೇಳಿಬಿಡುತ್ತಿದ್ದರು.
ಮೂರನೆಯದಾಗಿ, ಅನಗತ್ಯವಾಗಿ ತನ್ನನ್ನು ಇಂದ್ರಚಂದ್ರರ ಪಟ್ಟಕ್ಕೇರಿಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಪ್ರತಿಭೆಯನ್ನು ವಂಶ, ಕುಟುಂಬಗಳ ಜೊತೆ ತಳುಕುಹಾಕುವ ಸಂಪ್ರದಾಯ ನಮ್ಮಲ್ಲಿದೆ. “ಇವರಿಗೆ ಕಲೆ ಎನ್ನುವುದು ರಕ್ತದಲ್ಲೇ ಬಂದಿದೆ” ಎಂದು ಒಬ್ಬರು ಶಿವರಾಮ ಕಾರಂತರನ್ನು ಪರಿಚಯಿಸಿದಾಗ, ಕಾರಂತರು ಸಿಟ್ಟಾಗಿ “ರಕ್ತದಲ್ಲೇ ಬರುವುದು ಕಲೆ ಅಲ್ಲ, ಕಾಯಿಲೆ” ಎಂದದ್ದು ಇತಿಹಾಸ. ಬಹುಶಃ ಚಂದ್ರ ಅವರ ನಿಲುವೂ ಇದೇ ಆಗಿತ್ತೇನೋ. ಯಾಕೆಂದರೆ, ಯಾರಾದರೂ “ನಿಮ್ಮ ಕುಟುಂಬದಲ್ಲೇ ಪ್ರತಿಭೆ ಅಂತರಾಳದಲ್ಲಿ ಹರಿಯುತ್ತಿದೆ” ಎಂದಾಗ ಚಂದ್ರ ಅದನ್ನು ಒಪ್ಪುತ್ತಿರಲಿಲ್ಲ. ತನಗೆ ಯಾವುದೇ ಬಗೆಯ ದೈವದತ್ತ ಅಥವಾ ಹುಟ್ಟಿನಿಂದ ಬಂದ ಅತಿಮಾನುಷ ಪ್ರತಿಭೆ ಇಲ್ಲ ಎಂದು ಘಂಟಾಘೋಷವಾಗಿ ಸಾರುತ್ತಿದ್ದರು. “ಪ್ರತಿಭೆಗೆ ನೀರೆರೆಯುವ ವಾತಾವರಣ ಇದ್ದದ್ದು ನಿಜ. ನನ್ನಜ್ಜ ಗಣಿತದ ಪ್ರೊಫೆಸರ್ ಆಗಿದ್ದರು. ತಂದೆ ಮದರಾಸು ವಿವಿಯಲ್ಲಿ ಡಿಗ್ರಿ ಪಡೆದು ಉನ್ನತ ಹದ್ದೆಯಲ್ಲಿದ್ದರು. ಹೈಸ್ಕೂಲ್ ಶಿಕ್ಷಣ ಮಾತ್ರವೇ ಪಡೆದಿದ್ದರೂ ನನ್ನ ತಾಯಿಗೆ ಸಾಹಿತ್ಯದಲ್ಲಿ ಒಳ್ಳೆಯ ಪ್ರವೇಶ ಇತ್ತು. ರಾಮನ್ ಕೂಡ ಕುಟುಂಬದ ಸದಸ್ಯ. ಹೀಗಾಗಿ, ನಾನೂ ಓದಬೇಕು; ಇವರ ಸಾಲಲ್ಲಿ ನಿಲ್ಲಬೇಕು ಎನ್ನುವ ಸ್ವಯಂಸ್ಫೂರ್ತಿ, ಒತ್ತಡ ಇದ್ದದ್ದು ನಿಜ. ಆದರೆ, ಇಂಥ ಪರಂಪರೆ ಇದೆ ಎಂದ ಮಾತ್ರಕ್ಕೆ ಹುಟ್ಟಿದವರೆಲ್ಲರೂ ಪಂಡಿತರಾಗುವುದು ಸಾಧ್ಯವಿಲ್ಲ” ಎನ್ನುವುದು ಚಂದ್ರ ಅವರ ಅಭಿಪ್ರಾಯ.
ಒಂದೇ ವಂಶವೃಕ್ಷದ ಮೇಲುಕೆಳಗಿನ ಕೊಂಬೆಗಳಾದರೂ ರಾಮನ್ ಮತ್ತು ಚಂದ್ರ ಉತ್ತರದಕ್ಷಿಣಗಳಂತೆ ಇದ್ದರು ಎನ್ನಬಹುದು. ರಾಮನ್ ಅವರದ್ದು ಬಹುಮಟ್ಟಿಗೆ ಭಾರತದಲ್ಲೇ ರೂಪುಗೊಂಡ, ಸಂಪೂರ್ಣ ಭಾರತೀಯ ಎನ್ನಬಹುದಾದ ವ್ಯಕ್ತಿತ್ವ. ಮೈಸೂರು ಪೇಟ ತೊಟ್ಟು ಕೈಯಲ್ಲೊಂದು ಸ್ಟಿಕ್ ಹಿಡಿದುಕೊಂಡು ವಾಕಿಂಗ್ ಹೊರಟರೆ, ರಾಮನ್ ಪಕ್ಕಾ ಹಳ್ಳಿಗನಂತೆಯೇ ಅತ್ತಿತ್ತ ನಡೆಯುತ್ತ, ಕಣ್ಣಿಗೆ ಕಾಣುವ ಹಕ್ಕಿ, ಹೂವು, ಚಿಗುರುಗಳನ್ನೆಲ್ಲ ತನ್ನ ಜೇಬಿನ ಪುಟ್ಟ ಸೂಕ್ಷ್ಮದರ್ಶಕದಲ್ಲಿ ನೋಡುತ್ತ ಹೋಗುತ್ತಿದ್ದರು. ಅವರ ಪರಿಚಯ ಇಲ್ಲದ ಯಾರಿಗೇ ಆದರೂ ಮೊದಲ ನೋಟಕ್ಕೆ ಅವರನ್ನು ವಿಜ್ಞಾನಿ ಎಂದು ಗುರುತಿಸಲು ಕಷ್ಟವಾಗುತ್ತಿತ್ತು. ಆದರೆ, ಚಂದ್ರ ಹಾಗಲ್ಲ; ಎಲ್ಲವನ್ನೂ ಅಳೆದುತೂಗಿ ಮಾಡುವ ಸ್ವಭಾವ ಅವರದ್ದು. ವೇಷಭೂಷಣದಲ್ಲೂ ಅಷ್ಟೇ; ಹಾವಭಾವ, ಮಾತುಕತೆಗಳಲ್ಲೂ ಅಷ್ಟೇ. ಅವರದ್ದು ತುಂಬ ನಾಜೂಕಿನ, ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಭಾವಕ್ಕೊಳಪಟ್ಟ ವ್ಯಕ್ತಿತ್ವ ಎನ್ನಬಹುದು. ತನ್ನ ಬಗ್ಗೆಯಾಗಲೀ, ಕುಟುಂಬದ ಖಾಸಗಿ ವಿವರಗಳ ಬಗ್ಗೆಯಾಗಲೀ ಅವರೆಂದೂ ಎರಡು ಮಾತಿಗಿಂತ ಹೆಚ್ಚು ಹೇಳಿದವರಲ್ಲ! ಆದರೆ, ವಿಜ್ಞಾನದ ವಿಷಯಕ್ಕೆ ಬಂದರೆ ಅವರ ಮಾತುಗಳಿಗೆ ದಣಿವೇ ಇರುತ್ತಿರಲಿಲ್ಲ. ಖಭೌತಶಾಸ್ತ್ರದ ಬಗ್ಗೆ ಹತ್ತಾರು ಪುಸ್ತಕಗಳನ್ನು ಬರೆಯಬಲ್ಲಷ್ಟು ಸರಕು ಇಟ್ಟುಕೊಂಡಿದ್ದ ಚಂದ್ರ ಅವರಲ್ಲಿ, ಒಮ್ಮೆ ಪತ್ರಕರ್ತನೊಬ್ಬ ನಿಮ್ಮ ಜೀವನದ ಕತೆ ಹೇಳಿ ಎಂದು ಒತ್ತಾಯಪಡಿಸಿದಾಗ ಅವರು ಹೇಳಿದ್ದು: “ಅದನ್ನು ಮೂರೇ ವಾಕ್ಯದಲ್ಲಿ ಹೇಳಿಬಿಡಬಹುದು. ನಾನು ಭಾರತವನ್ನು 1930ರಲ್ಲಿ ಬಿಟ್ಟು, ಆರು ವರ್ಷದ ಬಳಿಕ ಹಿಂದಿರುಗಿದೆ. ಅಲ್ಲಿವರೆಗೆ ನನಗಾಗಿ ಕಾದಿದ್ದ ಹುಡುಗಿಯನ್ನು ಮದುವೆಯಾದೆ. ಬಳಿಕ ಶಿಕಾಗೋಗೆ ಬಂದು ಹಾಯಾಗಿ ಬದುಕಿದೆ”.
ಈ ರೋಹಿತ್ ಚಕ್ರತೀರ್ಥ ಎಂಬ ಪಾರ್ಥನನ್ನು ಬುದ್ಧಿ ಜೀವಿಗಳೆಂಬ ಸಂಶಪ್ತಕರು ಸುಖಾಸುಮ್ಮನೆ ದಿಕ್ಕು ತಪ್ಪಿಸಿ ಪರಗತಿಪರ ಎಂಬ ಚಕ್ರವ್ಯೂಹದಲ್ಲಿ ಕನ್ನಡ ಸಾಹಿತ್ಯ ಎಂಬ ಅಭಿಮನ್ಯುವನ್ನು ಹತ್ಯೆಗೈಯುತ್ತಿರುವರಲ್ಲಾ….ಅಕಟಕಟಾ
ಈ ಕುರುಕ್ಷೇತ್ರದ ಕೊನೆ ಯಾವಾಗ?
righto !
Exactly , well said … ಒಳಗೆ ನುಗ್ಗಿದ ಹಾಗೆ ಹೊರ ಬಂದರೆ ಸಾಕು. ಕನ್ನಡ ಸಾಹಿತ್ಯದ ಅರ್ಜುನ 😊
ಇದನ್ನು ಓದಿದ ಮೇಲೆ ರಾಮನ್ ಅವರ ಬಗೆಗೆ ಒಂದು ಸವಿಸ್ತಾರ ಲೇಖನವನ್ನು ನಿಮ್ಮಿಂದ ನಿರೀಕ್ಷಿಸುವಂತಾಗಿದೆ