ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 19, 2015

6

ಸರ್ಕಾರದ ವಶವಾಗುವುದೆಂದರೆ ಜನರಿಗೆ ಪರಕೀಯವಾಗುವುದೇ?

‍CSLC Ka ಮೂಲಕ

downloadವಿನುತಾ ಎಸ್ ಪಾಟೀಲ್, ಕುವೆಂಪು ವಿಶ್ವವಿದ್ಯಾನಿಲುಯ.

ಪ್ರಸ್ತುತ ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕೆಂಬುದು. ಈ ಹಿಂದೆಯು ಉಡುಪಿ ಕೃಷ್ಣ ದೇವಾಲಯಕ್ಕೆ ಸಂಬಂಧಿಸಿದಂತೆ ಈ ರೀತಿಯ ಚರ್ಚೆ ನಡೆದಿತ್ತು. ಆದರೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಪ್ಪಿಸುವ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಹೀಗೆ ವಿರೋಧಿಸುವವರು ನೀಡುವ ಕೆಲವು ಸಮರ್ಥನೆಗಳೆಂದರೆ, ಮುಜರಾಯಿ ಇಲಾಖೆ ಈಗಾಗಲೆ ವಶಪಡಿಸಿಕೊಂಡ ದೇವಸ್ಥಾನಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಕೇವಲ ಆ ದೇವಸ್ಥಾನದಿಂದ ಬರುವ ಹಣದ ಮೇಲೆ ಮಾತ್ರ ಇಲಾಖೆಗೆ ಆಸಕ್ತಿ ಎಂಬ ವಾದವನ್ನು ಮಾಡುತ್ತಾರೆ. ಹಾಗೆಯೇ ಸರ್ಕಾರದ ಸುರ್ಪದಿಗೆ ಒಪ್ಪಿಸಿದರೆ, ದೇವಾಯಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಂತಹ ಆಚರಣೆಗಳು ಮಾಯವಾಗುವ ಬೀತಿಯು ಇದೆಯೆಂಬುದಾಗಿ ಹೇಳುತ್ತಾರೆ. ಉದಾ: ಶ್ರೀ ಕೃಷ್ಣ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕೆಂಬ ಚರ್ಚೆ ಸಂದರ್ಭದಲ್ಲಿ ಅಲ್ಲಿನ ಪುರೋಹಿತರು ಹೇಳಿದ ಮಾತೆಂದರೆ, ‘ಮುಜರಾಯಿ ಇಲಾಖೆಗೆ ಒಪ್ಪಿಸಿದರೆ ಇಲ್ಲಿ ನಡೆಯುವ ದಾಸೋಹ ನಿಂತು ಹೊಗುತ್ತದೆಯೆಂಬುದು’. ಇದೇ ರೀತಿ ಧರ್ಮಸ್ಥಳ ದೇವಾಲಯದಲ್ಲಿ ವೀರೆಂದ್ರ ಹೆಗಡೆ ಅವರ ಮೇಲುಸ್ತುವಾರಿಗೆ ಒಳಪಟ್ಟಂತಹ ಉತ್ತಮ ನಿರ್ವಹಣೆ ಇದೆ ಎಂಬ ಅಭಿಪ್ರಾಯಗಳೂ ಇವೆ.

ಚರ್ಚೆ ಸಂದರ್ಭದಲ್ಲಿ, ದೇವಾಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಹಾಗೂ ಜೀರ್ಣೋದ್ಧಾರ ಮಾಡಲು ಮುಜರಾಯಿ ಇಲಾಖೆಗೆ ಒಪ್ಪಿಸುವ ಅಗತ್ಯತೆ ಇದೆಯೆಂಬ ಅಭಿಪ್ರಾಯಗಳು ಕಂಡುಬರುತ್ತವೆ. ಹಾಗಾದರೆ ಈ ಮೊದಲು ಸರ್ಕಾರದ ಮಧ್ಯಪ್ರವೇಶ ಇಲ್ಲದಿದ್ದಾಗ ದೇವಾಲಯಗಳ ಸ್ಥಿತಿ ಹೇಗಿತ್ತು? ಮುಜರಾಯಿ ಇಲಾಖೆಗೆ ಒಪ್ಪಿಸಿದರೆ ಮಾತ್ರ ಉತ್ತಮ ನಿರ್ವಹಣೆ ಸಾಧ್ಯವೇ? ಈ ಹಿಂದೆ ಅವುಗಳ ಸ್ಥಿತಿ ಉತ್ತಮವಾಗಿರಲಿಲ್ಲವೇ? ಎಂಬಂತಹ ಕುತೂಹಲಗಳು ಮೂಡುತ್ತವೆ. ಈ ಕುತೂಹಲಕ್ಕೆ ನಮ್ಮ ಗ್ರಾಮೀಣ ಜೀವನ ಕ್ರಮ ಉತ್ತರವನ್ನು ನೀಡುತ್ತದೆ. ಹೇಗೆಂದರೆ, ಭಾರತೀಯರ ಜೀವನಕ್ರಮ ಸಹಕಾರಿತತ್ವಕ್ಕೆ ಮಾದರಿಯಾದಂತದ್ದು. ಇಲ್ಲಿನ ಜನರ ಬದುಕು ನಡೆಯುತ್ತಿದ್ದದ್ದೇ ಪರಸ್ಪರ ಸಹಕಾರ, ಹೊಂದಾಣಿಕೆಗಳ ಮೂಲಕ. ಉದಾಹರಣೆಗೆ: ಒಂದು ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ಮಾಡಬೇಕಾದರೆ, ಅಂದರೆ ಊರಿನ ದೇವಾಲಯಗಳ ನಿರ್ವಹಣೆ, ಕೆರೆಗಳ ನಿರ್ವಹಣೆ, ರಸ್ತೆಗಳ ನಿರ್ವಹಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ಗ್ರಾಮದ ಜನರೇ ಒಟ್ಟಾಗಿ ಸೇರಿ ಕೆಲಸ ಮಾಡುವ ಪದ್ಧತಿ ಇತ್ತು. ಇಂದು ಕೂಡ ಕೆಲವೆಡೆ ಈ ರೀತಿಯಾದ ಭಾಗವಹಿಸುವಿಕೆಯನ್ನು ನೋಡಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಲಖನೌದಲ್ಲಿ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಸರ್ ವಿಲಿಯಂ ಸ್ಲೀಮನ್ ಅವರು ಹೇಳುವುದೆನೆಂದರೆ, ‘ಇಲ್ಲಿನ ಜನ ಸ್ವಯಂ ಪ್ರೇರಣೆ ಮತ್ತು ಸಹಕಾರದಿಂದ ಗ್ರಾಮಗಳಲ್ಲಿನ ಅವಶ್ಯಕತೆಗಳನ್ನು ಪುರೈಸಿಕೊಳ್ಳುತ್ತಿದ್ದಾರೆಂಬುದನ್ನು ಕೆರೆ ನಿರ್ವಹಣೆ ವಿಷಯವನ್ನಿಟ್ಟುಕೊಂಡು ವಿವರಿಸುತ್ತಾರೆ.’ ಅಂದರೆ ಸಾಮುದಾಯಿಕವಾಗಿ ಪಾಲ್ಗೊಂಡು ಕಾರ್ಯನಿರ್ವಹಣೆ ಮಾಡಿಕೊಳ್ಳುವಂತಹ ಪದ್ಧತಿ ಇತ್ತು ಎಂಬುದು ತಿಳಿಯುತ್ತದೆ.

ಈ ರೀತಿಯಾಗಿ ಊರಿನ ಜನರೆಲ್ಲಾ ಸೇರಿ ತಮ್ಮ ಗ್ರಾಮದ ದೇವಸ್ಥಾನಗಳ ನಿರ್ವಹಣೆಯನ್ನು ಮಾಡುತ್ತಿದ್ದರು. ಇದು ಈಗ ಮಾಯವಾಗುತ್ತಿದೆ ಇದಕ್ಕೆ ಪ್ರಮುಖವಾದ ಕಾರಣವೆಂದರೆ ಸರ್ಕಾರದ ಹಸ್ತಕ್ಷೇಪ ಎನ್ನಬಹುದು. ನೆಹರು ಅವರು ಈ ನಿಟ್ಟಿನಲ್ಲಿ ತಮ್ಮ ಅಭಿಪ್ರ್ರಾಯವನ್ನು ವ್ಯಕ್ತಪಡಿಸಿದ್ದರು. ಅವರದೇ ಮಾತಿನಲ್ಲಿ ಹೇಳುವುದಾದರೆ, ‘ಬ್ರಿಟಿಷ್ ಗವರ್ನರುಗಳು ಇಂಗ್ಲೆಂಡಿನ ಮಾದರಿಯ ಪದ್ಧತಿಯನ್ನು ಇಲ್ಲಿ ಜಾರಿಗೆ ತಂದರು ಇದರಿಂದ ಗ್ರಾಮ ಜೀವನದಲ್ಲಿದ್ದ ಒಗ್ಗಟ್ಟು, ಸಮಷ್ಟಿ ಜೀವನ, ಗ್ರಾಮೋದ್ಯೋಗಗಳಲ್ಲಿ, ಗ್ರಾಮ ಸೇವೆಯಲ್ಲಿ ಇದ್ದ ಸಹಕಾರ ಎಲ್ಲವಕ್ಕೂ ಸಂಚಕಾರ ಬಂದಿತು’ ಅಂದರೆ ಈ ಮೂಲಕ, ಸರ್ಕಾರ ಹಸ್ತಕ್ಷೇಪ ಗ್ರಾಮೀಣ ಸಹಕಾರ ಜೀವನಕ್ಕೆ ತೊಡಕಾಗುತ್ತದೆ ಎಂಬುದಂತು ಸ್ಪಷ್ಟವಾಗುತ್ತದೆ.

ನಮ್ಮ ಸುತ್ತಮುತ್ತಲಿನ ಉದಾಹರಣೆಗಳನ್ನು ಇಟ್ಟುಕೊಂಡೇ ವಿವರಿಸುವುದಾದರೆ, ನೇರಲಿಗಿಯ ವೀರಭದ್ರೇಶ್ವರ ದೇವಾಲಯವು ಒಂದೆರೆಡು ವರ್ಷಗಳಿಂದೀಚೆಗೆ ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಸರ್ಕಾರದ ವಶಕ್ಕೆ ಒಳಪಡುವ ಮೊದಲು ದೇವಾಲಯಕ್ಕೆ ಸಂಬಂಧ ಪಟ್ಟಂತಹ ಜಾತ್ರೆ, ದೇವಾಲಯದ ವಸ್ತುಗಳನ್ನು ರಕ್ಷಿಸುವುದು, ದೇವಾಲಯದ ಆವರಣವನ್ನು ಸುಚಿಯಾಗಿಡುವುದು ಇನ್ನು  ಮುಂತಾದ ಕೆಲಸಗಳನ್ನು  ಆ ಊರಿನ ಜನರೇ ಪರಸ್ಪರ ಹಂಚಿಕೊಂಡು ಮಾಡುತ್ತಿದ್ದರು.  ಆದರೆ ಇಂದು, ಈ ಎಲ್ಲಾ ಕೆಲಸಗಳು ಸರ್ಕಾರ ಮಾಡಬೇಕಾದ ಕೆಲಸಗಳಾಗಿರುವುದರಿಂದ ಜನರಿಗೆ ಆ ದೇವಾಲಯದೊಂದಿಗೆ ಹೇಗೆ ಸಂಬಂಧವನ್ನು ರೂಪಿಸಿಕೊಳ್ಳಬೇಕು ಎಂಬ ಸಮಸ್ಯೆ ಎದುರಾಗುತ್ತಿದೆ. ಹಳೆಯ ರೀತಿಯಲ್ಲಿ ದೇವಸ್ಥಾನವನ್ನು ಒಳಗೊಳ್ಳುವುದು ಆ ಊರಿನ ಜನರಿಗೆ ಸಾಧ್ಯವಾಗುತ್ತಿಲ್ಲ. ಇದು ಒಂದು ದೃಷ್ಟಾಂತ. ಇಂತಹ ಹಲವು ನಿದರ್ಶನಗಳು ನಮ್ಮ ಮುಂದಿವೆ.

ಜನರ ಸಾಮುದಾಯಿಕ ಬದುಕಿನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವ ಪೂರ್ವದಲ್ಲಿ ಜನರಲ್ಲಿ, ಇದು ಖಾಸಗಿ ಕೆಲಸ ಇದು ಸಾರ್ವಜನಿಕ ಕೆಲಸವೆಂಬ ಭೇದವಿರಲಿಲ್ಲ. ಊರ ದೇವಸ್ಥಾನದ ಕೆಲಸವೆಂದರೆ ಎಲ್ಲರೂ ಒಟ್ಟಿಗೆ ಸೇರಿ ಕೆಲಸಗಳನ್ನು ಹಂಚಿಕೊಂಡು ತಮ್ಮ ಮನೆಯ ಕೆಲಸವೆಂಬಂತೆ ಮಾಡಿ ಮುಗಿಸುತ್ತಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಕೆಲಸವು ಆಗುತ್ತಿತ್ತು ಜೊತೆಗೆ ಕೆಲಸದಲ್ಲಿ ತೊಡಗಿದವರ ನಡುವೆ ಒಂದು ಸಾಮರಸ್ಯವು ಮೂಡುತ್ತಿತ್ತು. ಆದರೆ ಯಾವಾಗ ಸರ್ಕಾರ ದೇವಸ್ಥಾನಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿತೊ ಅಂದಿನಿಂದ ಈ ರೀತಿಯ ನಂಟು ಮಾಯವಾಗುತ್ತಿರುವುದನ್ನು ನೋಡಬಹುದು.  ದೇವಸ್ಥಾನಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಕೆಲಸಗಳಿಗೂ ನಿರ್ಲಕ್ಷ್ಯ ತೊರುವ ಮನಸ್ಥಿತಿ ಬಂದಿದೆ. ಅದೇ  ಸರ್ಕಾರದ ನಿಯಂತ್ರಣವಿಲ್ಲದೆ ಇರುವ ದೇವಸ್ಥಾನಗಳ ಕೆಲಸಕಾರ್ಯಗಳಲ್ಲಿ ಜನರ ಭಾಗವಹಿಸುವಿಕೆಯನ್ನು ನೋಡಬಹುದು.

ಇದರ ಜೊತೆಗೆ ಈ ದೇವಸ್ಥಾನಗಳು ಇಲ್ಲಿಯ ಸಾಮುದಾಯಗಳ ಬದುಕಿನಲ್ಲಿ ವಿಶಿಷ್ಠಪಾತ್ರಗಳನ್ನೂ ವಹಿಸುತ್ತಾ ಬರುತ್ತಿವೆ.  ಜನರು ಈ ದೇವಾಲಯಗಳನ್ನು ಪರಿಭಾವಿಸುವ ರೀತಿಯು ಭಿನ್ನವಾಗಿದೆ. ನಮ್ಮ ದೇವಾಯಗಳು ಒಂದೊಂದು ರೀತಿಯ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿವೆ. ಉದಾಹರಣೆಗೆ, ಯಾವುದೇ ಜಗಳ, ವಿವಾದಗಳಿಗೆ ಸಂಬಂಧಿಸಿದಂತೆ ಆಣೆ, ಪ್ರಮಾಣ ಮಾಡಬೇಕಾದರೆ ಧರ್ಮಸ್ಥಳಕ್ಕೆ ಹೋಗುತ್ತಾರೆ. ಅದೇ ರೀತಿ ಯಾವುದೇ ಕಳ್ಳತನ ಮಾಡಿದ್ದಲ್ಲಿ, ತಪ್ಪೊಪ್ಪಿಗೆ ನೀಡಲು ಕದರಮುಂಡಿಯಲ್ಲಿನ ಆಂಜನೇಯ ದೇವಾಲಯಕ್ಕೆ ಹೋಗುತ್ತಾರೆ. ಇಂತಹ ಹಲವು ಉದಾಹರಣೆಗಳು ನಮ್ಮ ಮುಂದಿವೆ.  ಅಂದರೆ ಜನರ ಸಾಮುದಾಯಿಕ ಬದುಕಿನ ಆಗು-ಹೋಗುಗಳಿಗೆ ದೇವಸ್ಥಾನಗಳೊಂದಿಗೆ ನಿಕಟ ಸಂಬಂಧ ಹೊಂದುವ ಮೂಲಕ ತಮ್ಮ ಸಂಕಷ್ಟ ಮತ್ತು ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇಲ್ಲಿ ಪ್ರಭುತ್ವ ಹಸ್ತಕ್ಷೇಪ ಮಾಡುವುದರಿಂದ ಈ ದೇವಾಲಯಗಳು ತಮ್ಮ ಈ ‘ವೈಶಿಷ್ಠತೆ’ ಯನ್ನೆಲ್ಲಾ ಕಳೆದುಕೊಳ್ಳುತ್ತದೆ. ಈ ವಿಶಿಷ್ಠತೆಯ ಕಾರಣಕ್ಕೇ ಇಂತಹ ದೇವಾಲಯಗಳು ಜನರ ನಡುವೆ ಮಹತ್ವವನ್ನು ಪಡೆದಿರುತ್ತವೆ. ಅವೇ ಇಲ್ಲವಾದ ಮೇಲೆ ಜನರು ಅವುಗಳೊಂದಿಗೆ ಹೊಂದಿದ್ದ ಸಂಬಂಧವೂ ನಿಧಾನವಾಗಿ ಕಳಚಿಹೋಗುತ್ತದೆ.

 ಸಾಮುದಾಯಿಕ ಸಹಕಾರದಿಂದ ಬದುಕನ್ನು ಸಾಗಿಸುವಂತಹ ಗುಣವನ್ನು ಹೊಂದಿರುವ ಈ ನೆಲದಲ್ಲಿ, ದೇವಾಲಯಗಳ ಪಾತ್ರ ಮತ್ತು ಅವುಗಳ ನಿರ್ವಹಣೆ ಒಂದಕ್ಕೊಂದು ಪೂರಕವಾದಂತದ್ದು. ದೇವಾಲಯಗಳನ್ನು ಸರ್ಕಾರ ತನ್ನ ತಕ್ಕೆಗೆ ತೆಗೆದುಕೊಳ್ಳುವುದರಿಂದ, ಅಲ್ಲಿನ ಜನರ ಮತ್ತು  ದೇವಾಲಯದ ನಡುವಿನ ಭಾವನಾತ್ಮಕ ಸಂಬಂಧ, ದೇವಾಲಯಕ್ಕೆ ಸಂಬಂಧಿಸಿದಂತೆ ಜನರು ಸ್ವಯಂ ಆರೋಪಿಸಿಕೊಂಡಂತಹ ಕೆಲವು ಅಧಿಕಾರ ಜವಾಬ್ದಾರಿಗಳು ಇಲ್ಲದಂತಾಗುತ್ತವೆ. ಜನರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಒಟ್ಟುಗೂಡಿ ಕೆಲಸ ಮಾಡುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳುವಂತಹ ಪ್ರವೃತ್ತಿ ಇತ್ತು, ಆ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ. ಅಂದರೆ ಒಂದು ಸಾಂಸ್ಥಿಕ ರೂಪವನ್ನು ನೀಡಲು ಹೋದಾಗ ಅಲ್ಲಿ ಸಾಂಪ್ರದಾಯಿಕ ನಿರ್ವಹಣೆ ಮಾಯವಾಗುತ್ತದೆ. ಆ ಸಾಂಸ್ಥಿಕ ರೂಪವೇ ಜನರಲ್ಲಿ ಸಾರ್ವಜನಿಕ ಮತ್ತು ಖಾಸಗಿಯೆಂಬ ಭೇದ ಬೆಳೆಸುತ್ತದೆ. ಅದರ ಪರಿಣಾಮವಾಗಿಯೇ ಜನರು ಸಾರ್ವಜನಿಕಯೆಂಬುದು (ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯವಾಗಿರಬಹುದು) ಸರ್ಕಾರದ ನಿರ್ವಹಣೆಗೆ ಒಳಪಡುವಂತದ್ದು, ನಮ್ಮ ಪಾತ್ರವೆನಿಲ್ಲಾ ಎಂಬಂತಹ ನಿರ್ಣಯಕ್ಕೆ ಬರುತ್ತಾರೆ. ಅಂದರೆ ಸರ್ಕಾರದ ಹಸ್ತಕ್ಷೇಪ ಹೆಚ್ಚಾದಂತೆ ಅಲ್ಲಿನ ಜನರು ಆ ದೇವಾಯದಿಂದ ಹೆಚ್ಚೆಚ್ಚು ಪರಕೀಯರಾಗುತ್ತಾರೆ. ದೇವಾಲಯಗಳು ಜನರಿಗೋಸ್ಕರ ಇರುವುದೆಂದಾದರೆ, ಜನರಿಂದ ಅವುಗಳನ್ನು ಪರಕೀಯವಾಗಿಸುವುದು ಸರಿಯಾದ ಕ್ರಮವೇ?

Read more from ಲೇಖನಗಳು
6 ಟಿಪ್ಪಣಿಗಳು Post a comment
  1. hemapathy
    ಆಕ್ಟೋ 20 2015

    ಇದೊಂದು ದ್ವಂದ್ವಗಳಿಂದ ಕೂಡಿದ ವಿಷಯವಾಗಿದೆ. ಈಗ ಇತ್ತೀಚಿನ ದಿನಗಳಲ್ಲಿ ಜನಗಳಿಗೆ ಇಂತಹ ವಿಷಯಗಳಲ್ಲಿ ಆಸಕ್ತಿ ಕಡಿಮೆಯಾಗಿದೆ. ಸರ್ಕಾರ ವಹಿಸಿಕೊಂಡರೂ ಕೂಡ ವ್ಯವಸ್ಥಾಪಕರುಗಳು ಮುತುವರ್ಜಿಯಿಂದ ತಮ್ಮ ಕೆಲಸಗಳನ್ನು ನಿರ್ವಹಿಸದೇ ಇರುವುದೂ ಕೂಡ ಕಾರಣವಾಗಿದೆ.

    ಉತ್ತರ
  2. Goutham
    ಆಕ್ಟೋ 20 2015

    ವಿನುತಾ ಮೇಡಮ್, ಸಕಾ೯ರದ ಹಸ್ತಕ್ಷೇಪ ಹೆಚ್ಚಾದಂತೆ ಜನರು ದೇವಾಲಯದಿ೦ದ ಪರಕೀಯರಾಗುತ್ತಾರೆ ಎಂದಿರುವಿರಿ. ಸಕಾ೯ರ ಎಂದರೆ ಜನರದ್ದೇ ಅಲ್ಲವೇ. ಹಾಗಿರುವಾಗ ಸಕಾ೯ರದ ಹಸ್ತಕ್ಷೇಪ ಹೆಚ್ಚಾದ೦ತೆ ಜನರು ಹೇಗೆ ಪರಕೀಯವಾಗುತ್ತಾರೆ ? ದೇವಾಲಯಗಳು ಜನರಿಗೋಸ್ಕರ ಇರುವುದೆಂದಾರೆ ಅವುಗಳು ಜನರ ಅಂದರೆ ಸಕಾ೯ರದ ವಶದಲ್ಲಿರುವುದೕ ಸರಿಯಾದ ಕ್ರಮವಲ್ಲವೇ ?

    ಉತ್ತರ
    • vinutha s patil
      ನವೆಂ 3 2015

      ಸರ್ಕಾರದ ಹಸ್ತಕ್ಷೇಪ ಹೆಚ್ಚಾದಂತೆ ಜನರು ದೇವಾಲಯಗಳಿಂದ ಹೇಗೆ ಪರಕೀಯರಾಗುತ್ತಾರೆ? ಎಂಬ ನಿಮ್ಮ ಪ್ರಶ್ನೆಗೆ ಲೇಖನದಲ್ಲಿಯೇ ಉತ್ತರವಿದೆ. ನಿಮ್ಮ ಎರಡನೆ ಪ್ರಶ್ನೆಯಲ್ಲಿ, ದೇವಾಲಯಗಳು ಜನರ ವಶದಲ್ಲಿ ಇರುವುದಕ್ಕು ಮತ್ತು ಸರ್ಕಾರದ ವಶದಲ್ಲಿರುವುದಕ್ಕೂ ವ್ಯತ್ಯಾಸವಿಲ್ಲ ಎಂಬ ಧೋರಣೆ ಕಂಡುಬರುತ್ತಿದೆ. ಆದರೆ ಜನರು ಮತದಾನ ಮೂಲಕ ಸರ್ಕಾವನ್ನು ಆಯ್ಕೆ ಮಾಡುತ್ತಾರೆಂಬ ಕಾರಣಕ್ಕೆ ಸರ್ಕಾರ ಮತ್ತು ಜನರು ಒಂದೇ ಎಂದು ವಾದಿಸಲಿಕ್ಕೆ ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ವಾದ ಸತ್ಯವಾದಲ್ಲಿ ಜನರೇ ಮಾಡಿದ ಕಾನೂನುಗಳನ್ನು ಜನರೇ ಏಕೆ ಮುರಿಯುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತೆದೆ. ಸರ್ಕಾರದ ಆಡಳಿತದ ವಿರುದ್ಧ ದಿನನಿತ್ಯ ಮುಷ್ಕರ, ಪ್ರತಿಭಟನೆ ಏಕೆ ನಡೆಯುತ್ತವೆ ಎಂಬ ಪ್ರಶ್ನೆಗೂ ಉತ್ತರವಿಲ್ಲ. ಹಾಗಾಗಿ ಈ ಲೇಖನದಲ್ಲಿ ದೇವಾಲಯದ ವಿಷಯಕ್ಕೆ ಸಂಬಂಧಪಟ್ಟಂತೆ, ಸರ್ಕಾರದ ನಿರ್ವಹಣೆ ಹಾಗೂ ಜನರ ನಿರ್ವಹಣೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಲಾಗಿದೆ. ಉದಾಹರಣೆಗೆ ಒಂದು ಊರಿಗೆ ಸಂಬಂಧಪಟ್ಟ ದೇವಾಲಯದಲ್ಲಿ ಆ ಊರಿನ ಜನರೆಲ್ಲಾ ಒಟ್ಟಾಗಿ ಸೇರಿ ಆ ದೇವಾಲಯದ ಕೆಲಸಗಳನ್ನು ನಿರ್ವಹಿಸುತ್ತಿದ್ದದನ್ನು ನೋಡಬಹುದು. ಅದೇ ರೀತಿ ಮುಜರಾಯಿ ಇಲಾಖೆಯ ನಿರ್ವಹಣೆ ವ್ಯಾಪ್ತಿಗೆ ಒಳಪಟ್ಟಂತಹ ದೇವಾಯಗಳು ಇವೆ. ಇಲ್ಲಿ ಈ ಎರೆಡು ದೇವಾಲಯಳಿಗೆ ಸಂಬಂಧಿಸಿದಂತೆ ಜನರ ಭಾಗವಿಸುವಿಕೆಯನ್ನು ಆಧಾರವನ್ನಾಗಿಸಿಕೊಂಡು ವ್ಯತ್ಯಾಸವನ್ನು ಗುರುತಿಸಲಾಗಿದೆ. ಅಂದರೆ ಜನರ ನಿರ್ವಹಣೆಯಲ್ಲಿ ಇರುವ ದೇವಾಲಯಗಳಲ್ಲಿನ ಜನರ ಭಾಗವಹಿಸುವಿಕೆಗೆ ಹೋಲಿಸಿದರೆ, ಮುಜರಾಯಿ ಇಲಾಖೆಯ ಹಿಡಿತದಲ್ಲಿರುವ ದೇವಾಯಗಳಲ್ಲಿ ಜನರ ಭಾಗವಹಿಸುವಿಕೆಯ ಕೊರತೆಯು ಕಂಡುಬುತ್ತದೆ.

      ಉತ್ತರ
  3. hemapathy
    ನವೆಂ 3 2015

    ಹಾಗಾದರೆ, ಸರ್ಕಾರಗಳೇಕೆ ಬೇಕು? ಯಾರನ್ನೂ ಚುನಾಯಿಸುವುದೂ ಬೇಡ, ನಂತರ ಬೇಡದ ವಾದ ವಿವಾದಗಳೂ ಬೇಡ.

    ಉತ್ತರ
  4. hemapathy
    ನವೆಂ 3 2015

    ಎಲ್ಲವನ್ನೂ ಜನರೇ ನಿರ್ಧರಿಸಿ, ನಿರ್ವಹಿಸಲಿ.

    ಉತ್ತರ
  5. ನವೆಂ 5 2015

    ದೇವಾಲಯಗಳು ಪರಂಪರಾನುಗತವಾಗಿ ಹಲವಾರು ಪಾತ್ರಗಳನ್ನು ಸಮಾಜದಲ್ಲಿ ನಿರ್ವಹಿಸಿಕೊಂಡು ಬಂದಿವೆ, ನಮಗೆ ತಿಳಿದಿರುವ ಮತ್ತು ಓದಿಸಲ್ಪಟ್ಟಿರುವ ಸಾಮಾನ್ಯ ಚರಿತ್ರೆಯನ್ನು ಬದಿಗಿರಿಸಿ ಭಾರತವನ್ನು ಅರ್ಥೈಸಿಕೊಳ್ಳ ಹೊರಡುವವರಿಗೆ ಸಾಂಘಿಕ ಜೀವನ ಪದ್ಧತಿಯ ರೂಪುರೇಷೆಗಳನ್ನು ಸ್ಪಷ್ಟವಾಗಿ ಕಾಣಸಿಗುತ್ತವೆ. ಸರ್ಕಾರಗಳು ಏಕೆ ಬೇಕು ಏಕೆ ಬೇಡ ಎಂಬುದು ಲೇಖನದ ವಾದವಲ್ಲ, ಬದಲಿಗೆ ಅದರ ಹಸ್ತಕ್ಷೇಪವಾದಲ್ಲೆಲ್ಲಾ ಹೇಗೆ ಸಂಗತಿಗಳು ತೋಪಾಗುತ್ತವೆ ಎನ್ನುವುದು ಲೇಖನದ ವಾದ. ಹಾಗಾಗಿ ಮುಜರಾಯಿ ಇಲಾಖೆಗೆ ಒಂದೊಮ್ಮೆ ಸೇರಿಸಿದರೆ ಅದು ಸಮಾಜದಲ್ಲಿ ನಿರ್ವಹಿಸುತ್ತಿರುವ ಪಾತ್ರವನ್ನು ಕಿತ್ತು ಹೊರಗಿಟ್ಟಂತಾಗುತ್ತದೆ. ಬಹುತೇಕರು ದೇವಾಲಯಗಳು ಕೇವಲ ಭಕ್ತಿಯ ಮತ್ತು ಭಕ್ತರ ಸಂಕೇತ ಎಂದು ಭಾವಿಸುವಿದಿದೆ. ಆದರೆ ಅಲ್ಲಿ ನಡೆಯುವ ಆಚರಣೆಗಳು, ನ್ಯಾಯದಾನ ಪದ್ಧತಿಗಳು, ಸಮಸ್ಯೆಗಳನ್ನು ಪರಿಹರಿಸುವ ಕ್ರಮಗಳು ಅವುಗಳ ಕುರಿತಂತೆ ಮತ್ತೊಂದು ಆಯಾಮವನ್ನು ತೆರೆದಿಡುತ್ತವೆ.

    ಈ ಚರ್ಚೆಯನ್ನು ಮುಂದೊತ್ತಬೇಕಾದರೆ, ಸರ್ಕಾರದ ಪಾತ್ರವನ್ನು ಬದಿಗಿರಿಸಿ ದೇವಾಲಯಗಳ ಪಾತ್ರಗಳೇನು ಎಂದು ಅವಲೋಕಿಸಿದರೆ ಲೇಖನದ ಸಂದರ್ಭ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತದೆ..ಹೇಮಾಪಥಿ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments