ಸೆಕ್ಯುಲರ್ವಾದಿ ಸಂಕಥನದ ವೈರುಧ್ಯಗಳು
ಪ್ರಜಾವಾಣಿಯಲ್ಲಿ ಸೆ.19 ಮತ್ತು 21ರಂದು ಪ್ರಕಟವಾದ ಮುಜಾಫರ್ ಅಸ್ಸಾದಿ ಹಾಗೂ ಆಕಾರ್ ಪಟೇಲ್ ಅವರ ಲೇಖನಗಳನ್ನು ನಾನು ಪ್ರಸ್ತುತ ಭಾರತದ ಸೆಕ್ಯುಲರ್ ಸಾಹಿತ್ಯ ಅಥವಾ ಸಂಕಥನದ ಭಾಗ ಎಂದು ಪರಿಗಣಿಸಿದ್ದೇನೆ. ಇದನ್ನು ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆಯ ವಿದ್ಯಾರ್ಥಿಯಾದ ನಾನು ವಿಮರ್ಶಿಸುವ ನಿಟ್ಟಿನಲ್ಲಿ ಸೆ.26ರ ಪ್ರಜಾವಾಣಿಯಲ್ಲಿ ಕಿರುಲೇಖನ ಬರೆದಿದ್ದೆ. ಇದಕ್ಕೆ ಪ್ರತಿಯಾಗಿ ಡಾ. ಕಿರಣ್ ಎಂ. ಗಾಜನೂರು ಅವರು ಎತ್ತಿದ ಪ್ರಶ್ನೆಗಳಿಗೆ (ಪ್ರಜಾವಾಣಿ ಸೆ.28) ಉತ್ತರವಾಗಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ.
ನಾನು ಬರೆದ ಕಿರುಲೇಖನದ ಉದ್ದೇಶ ಸೆಕ್ಯುಲರ್ವಾದಿ ಸಂಕಥನದಲ್ಲಿ ಇರುವ ವೈರುಧ್ಯಗಳನ್ನು ತೋರಿಸುವುದಾಗಿತ್ತು. ಸಂಘಪರಿವಾರವನ್ನು ವಿರೋಧಿಸುವ ಭರದಲ್ಲಿ ಸೆಕ್ಯುಲರ್ವಾದಿ ಸಂಕಥನವು ತಾನು ಹೆಣೆದ ಬಲೆಯಲ್ಲಿ ತಾನೇ ಸಿಕ್ಕಿಕೊಳ್ಳುತ್ತ ಕಳೆದ ಕೆಲವು ದಶಕಗಳಲ್ಲಿ ಕೋಮುವಾದ ಮತ್ತು ಮೂಲಭೂತವಾದಕ್ಕೆ ಪರಿಹಾರವನ್ನು ಹುಡುಕುವಲ್ಲಿ ವಿಫಲವಾಗಿದೆ ಎಂದು ಸೂಚಿಸುವುದಾಗಿತ್ತು. ಅಸ್ಸಾದಿಯವರ ಮತ್ತು ಆಕಾರ್ ಲೇಖನಗಳಂತೆಯೇ ಕಿರಣ್ ಅವರ ಬರಹವೂ ಇದೇ ಸಂಕಥನದ ಒಂದು ಭಾಗ. ಕಿರಣ್ ಅವರು ನಾನು ತೋರಿಸಿರುವ ಸಮಸ್ಯೆಗಳನ್ನು ಸ್ಪರ್ಶಿಸದೆ, ಅಸ್ಸಾದಿ ಮತ್ತು ಆಕಾರ್ ಲೇಖನಗಳಲ್ಲಿ ಇರುವ, ನಾನು ಕೂಡ ಒಪ್ಪುವ ವಿಚಾರಗಳನ್ನೇ ಪುನರುಚ್ಚರಿಸಿದ್ದಾರೆ.
ಕಿರಣ್ ಅವರ ಲೇಖನ ಓದಿದ ನನ್ನ ಒಂದಿಬ್ಬರು ಸೆಕ್ಯುಲರ್ ಗೆಳೆಯರು, ಕಿರಣ್ ನಿನ್ನ ವಾದಕ್ಕೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಅಂತ ಹೇಳಿದರು. ನಾನೆಂದೆ- ಸೆಕ್ಯುಲರ್ ವಾದದ ಕಡೆಯಿಂದ ಇದುವೇ ಅತ್ಯುತ್ತಮವಾದ ಮತ್ತು ಗಟ್ಟಿಯಾದ ವಾದ ಎಂದಾದರೆ ನಮ್ಮ ದೇಶದ ಅಥವಾ ಕನ್ನಡದ ಸೆಕ್ಯುಲರ್ ವಾದದ ದುಸ್ಥಿತಿಗೆ ಬೇರೆ ಸಾಕ್ಷಿ ಬೇಡ. ಆದರೆ ಇದಕ್ಕಿಂತ ಹೆಚ್ಚು ತರ್ಕಬದ್ಧವಾದ ವಾದಗಳು ಸೆಕ್ಯುಲರ್ ಸಂಕಥನದಲ್ಲಿ ಇವೆ ಎಂದು ನನಗೆ ಗೊತ್ತಿದೆ. ಅದೇ ಹೊತ್ತಿಗೆ, ಪ್ರಜಾವಾಣಿಯ ಚರ್ಚೆಯಲ್ಲಿ ಕಿರಣ್ ಅವರ ಲೇಖನವೇ ‘ಕೊನೆಯ ಮಾತು’ ಅಂತಾದುದು ಮಾತ್ರ ದುಃಖದ ಮತ್ತು ಆಶ್ಚರ್ಯದ ಸಂಗತಿ. ಅದು ಸೆಕ್ಯುಲರ್ ವಾದದ ಆರೋಗ್ಯಕ್ಕೂ ಹಾನಿಕರ. (ಅವರ ಲೇಖನಕ್ಕೆ ನಾನು ಕಳಿಸಿದ ಸಂಕ್ಷಿಪ್ತ ಸೌಮ್ಯ ಉತ್ತರ ಪ್ರಜಾವಾಣಿಯಲ್ಲಿ ಪ್ರಕಟವಾಗಲಿಲ್ಲ.)
ನನ್ನ ಲೇಖನದ ಬಗ್ಗೆ ಆಕ್ಷೇಪ ಎತ್ತುವ ಕಿರಣ್ ಅಲ್ಪಸಂಖ್ಯಾತ ಎಂಬ ವಿಭಾಗವೇ ವಸಾಹತೀಕರಣದ ಭಾಗ ಅಲ್ಲ ಎಂದು ಸಾಧಿಸಿಲ್ಲ. ನನ್ನ ಲೇಖನ ಧರ್ಮರಾಜಕಾರಣದ ಭಾಗವಾಗಿಯೇ ವಿಮರ್ಶೆ ಮಾಡುತ್ತದೆ ಅನ್ನುವ ಕಿರಣ್ , ಅದು ಹೇಗೆ ಅಂತ ಹೇಳುವದಿಲ್ಲ. ಅಲ್ಪಸಂಖ್ಯಾತ ಎಂಬ ವಿಭಾಗವನ್ನು ಧರ್ಮ ಅಥವಾ ರಿಲಿಜನ್ ಆಧಾರದಲ್ಲಿ ಮಾಡುವುದು ಧರ್ಮ ರಾಜಕಾರಣ ಅಲ್ಲವೇ? ನಾನು ಹಿಂದೂ ಮೂಲಭೂತವಾದವನ್ನು ಎಲ್ಲೂ ಪ್ರಶ್ನಿಸುವುದಿಲ್ಲ ಅನ್ನುತ್ತಾರೆ ಕಿರಣ್. ನಿಜ, ಒಂದು ಲೇಖನಕ್ಕೆ ಪ್ರತಿಕ್ರಿಯೆ ನೀಡುವಾಗ ಜಗತ್ತಿನ ಎಲ್ಲ ವಿಷಯಗಳನ್ನೂ ಅಲ್ಲಿ ತರಲಾಗುವುದಿಲ್ಲ. ಲೇಖನದಲ್ಲಿ ಇರುವ ಸಮಸ್ಯೆಗೆ ನಮ್ಮ ಒತ್ತು ಇರುತ್ತದೆ. ಪತ್ರಿಕೆಯ ಪದಮಿತಿ ಕಿರಣರಿಗೆ ಗೊತ್ತಿಲ್ಲದ್ದಲ್ಲ. (ಅವರ ಲೇಖನ ಕೂಡ ಎಡಿಟ್ ಆಗಿರಲೂ ಬಹುದು). ಅದೇನೇ ಇರಲಿ. ಇಲ್ಲಿ ಪದಮಿತಿ ಇಲ್ಲದ್ದರಿಂದ ಘಂಟಾಘೋಷವಾಗಿ ಹೇಳುತ್ತೇನೆ. ನಾನು ಹಿಂದೂ ಮೂಲಭೂತವಾದವನ್ನು ವಿರೋಧಿಸುತೇನೆ. (ಗಂಟೆ ದೇವಾಲಯದಲ್ಲಿ ಇರುವಂತೆ ಚರ್ಚಿನಲ್ಲೂ ಇರುವುದರಿಂದ ಇದು ಸೆಕ್ಯುಲರ್; ಅಲ್ಲದೆ ಚರ್ಚಿನ ಗಂಟೆ ಸಾಮಾನ್ಯವಾಗಿ ದೊಡ್ಡದು ಹಾಗೂ ಹೆಚ್ಚು ದೂರಕ್ಕೆ ಕೇಳಿಸುವುದರಿಂದ ಇದು ಹೆಚ್ಚು ಸೆಕ್ಯುಲರ್ ಘಂಟಾಘೋಷಣೆ.) ಹಿಂದೂ ಮೂಲಭೂತವಾದ ಇರಬಾರದು ಎಂಬ ಕಾರಣದಿಂದ ಸೆಕ್ಯುಲರ್ ವಾದದಲ್ಲಿರುವ ಸಮಸ್ಯೆ ಬಗ್ಗೆ ನನಗೆ ಕಾಳಜಿ. ಹಿಂದೂಮೂಲಭೂತವಾದ ಇಲ್ಲದಂತಿರಬೇಕಾದರೆ ಸೆಕ್ಯುಲರ್ ವಾದ ಹೇಗಿರಬೇಕು ಎಂಬ ಬಗ್ಗೆ ಚಿಂತನೆ ನಡೆಸುವುದು ನನ್ನ ಉದ್ದೇಶ, ಅಲ್ಲದೆ, ಹಿಂದೂ ಮೂಲಭೂತವಾದ ಇರಬೇಕೆಂದುಕೊಳ್ಳುವವರು ಈಗಿನ ನಮೂನೆಯ ಸೆಕ್ಯುಲರ್ ವಾದವನ್ನು ಬೆಂಬಲಿಸಿದರೆ ಅವರಿಗೆ ಹೆಚ್ಚು ಪ್ರಯೋಜನವಾದೀತು. ಯಾಕೆಂದರೆ ಅದೇ ಆ ಬೆಂಕಿಗೆ ತುಪ್ಪ. ಅದು ಹಾಗಿರಲಿ.
ಕಡಿಮೆ ಸಂಖ್ಯೆಯು ದಬ್ಬಾಳಿಕೆಗೆ ಕಾರಣವಾಗುತ್ತದೆ ಎಂಬುದು ಭಾರತೀಯ ಸಂದರ್ಭದಲ್ಲಿ ನಿಜವಲ್ಲ ಎಂಬ ನನ್ನ ಮಾತನ್ನು ಸಮರ್ಥಿಸುವ ಮಾತನ್ನೇ ಕಿರಣ್ ಹೇಳಿದ್ದಾರೆ, ಆದರೆ ನಾನು ವಾಸ್ತವ ಗಮನಿಸಿಲ್ಲ ಎನ್ನುತ್ತಾರೆ!!
ಯಾವ ಸಮಾಜದಲ್ಲಿ ವೈವಿಧ್ಯಗಳೊಂದಿಗೆ ಬದುಕುವುದು ಸಮಸ್ಯೆಯಾಗಿರಲಿಲ್ಲವೋ ಅಲ್ಲಿ ಅನವಶ್ಯಕವಾಗಿ ‘ಬಹುಸಂಖ್ಯಾತ’ ಎಂಬ ಗುಮ್ಮನನ್ನು (ದಬ್ಬಾಳಿಕೆ ಮಾಡುವ ಸಾಮಥ್ರ್ಯವಿರುವ ಗುಂಪು ಎಂಬ ನೆಲೆಯಲ್ಲಿ) ಸೃಷ್ಟಿಸಿದ್ದು ಯಾರು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ಕಿರಣ್ ಸಿದ್ಧರಿಲ್ಲ. ಕಿರಣ ಹೇಳುವಂಥ, ‘ಎಲ್ಲಿ ವೈವಿಧ್ಯಗಳೊಂದಿಗೆ ಬದುಕುವುದು ಸಮಸ್ಯೆಯಾಗಿರಲಿಲ್ಲವೋ’ ಅಲ್ಲಿ ಸಹಿಸುವ (ಟಾಲರೆನ್ಸ್ -ಸಹಿಷ್ಣುತೆ ಇತ್ಯಾದಿ) ಪರಿಕಲ್ಪನೆಯನ್ನು ತಂದವರು ಯಾರು? ಜಾತಿ ತಾರತಮ್ಯ ಇತ್ತೆಂದು ಹೇಳಬಹುದು. ನಿಜ. ಆದರೆ ಸುಧಾರಣಾವಾದ ಹಾಗೂ ಸಂವಿಧಾನ ಮೂಲಕ ಅದು ಸ್ವಲ್ಪವಾದರೂ ಕಡಿಮೆ ಆಗಿದೆಯಲ್ಲ? ಶೂದ್ರ ಜಾತಿಯಲ್ಲಿ ಹುಟ್ಟಿ ನಂತರ ಸಾಧನೆ ಮಾಡಿ ಸ್ವಾಮೀಜಿಗಳಾದವರ ಕಾಲಿಗೆ ಬೀಳುವ ಬ್ರಾಹ್ಮಣರು ಈಗ ಬೇಕಾದಷ್ಟು ಇದ್ದಾರೆ. ಇದು ಸ್ವಾಗತಾರ್ಹ ಅಲ್ಲವೆ? ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಸಂವಿಧಾನದ ಅಂಶಗಳು ಪೂರ್ತಿ ಅಲ್ಲದಿದ್ದರೂ ಸ್ವಲ್ಪವಾದರೂ ಫಲಪ್ರದವಾಗಿವೆ. ಆದರೆ ಕಳೆದ 70 ವರ್ಷಗಳಲ್ಲಿ ಕೋಮುಭಾವನೆಯನ್ನು ಕಡಿಮೆಗೊಳಿಸುವಲ್ಲಿ ಸೆಕ್ಯುಲರ್ ವಾದ ಯಶಸ್ವಿಯಾಗಿದೆಯೇ? ಹೆಚ್ಚುಗೊಳಿಸುವಲ್ಲಿ ಯಶಸ್ವಿಯಾಗಿದೆಯೇ?
ಹಿಂದೂ ಎಂಬ ಏಕರೂಪಿ ಸಮುದಾಯ ಇಲ್ಲವೆಂದಾದರೆ ಹಿಂದೂ ಮೂಲಭೂತವಾದ ಹುಟ್ಟಿದ್ದು ಹೇಗೆ ಎಂದು ಕಿರಣರು ಎತ್ತುವ ಪ್ರಶ್ನೆಗೆ ನನ್ನ ಲೇಖನದಲ್ಲೇ ಉತ್ತರವಿತ್ತು. ಅಲ್ಲದೆ ಹಿಂದೂ ಎಂಬ ಏಕರೂಪಿ ಸಮುದಾಯ ಇಲ್ಲ ಎಂಬುದು ಸೆಕ್ಯುಲರ್ವಾದಿ ಸಂಕಥನದ್ದೇ ಸಾಲು. ಅದೇನೂ ನನ್ನ ಸ್ವಂತದ್ದಲ್ಲ. ಭಾರತದ ಪ್ರಭುತ್ವ ಮತ್ತು ಸೆಕ್ಯುಲರ್ವಾದಿ ಸಂಕಥನವು, ಇಲ್ಲದ ಗುಮ್ಮನನ್ನು ಕಲ್ಪಿಸಿದ್ದೇ ನಿಜವಾದ ಗುಮ್ಮನ ಸೃಷ್ಟಿಗೆ ಕಾರಣವಾಗಿದೆ ಎಂಬುದು ನನ್ನ ಲೇಖನದ ಒಂದು ಮುಖ್ಯ ಅಂಶ.
ಸೆಕ್ಯುಲರ್ ಸಂಕಥನ ಒಂದೆಡೆ, ಹಿಂದೂಗಳು ಎಂಬ ಏಕರೂಪಿ ಸಮುದಾಯ ಇಲ್ಲ; ಸಂಘ ಪರಿವಾರ ಏಕರೂಪೀಕರಣಗೊಳಿಸುತ್ತಿದೆ ಎಂದು ಆಕ್ಷೇಪಿಸುತ್ತದೆ. ಇನ್ನೊಂದೆಡೆ, ಅಸ್ಸಾದಿಯವರು, ಸಿಖ್, ಜೈನರನ್ನು ಜನಗಣತಿಯಲ್ಲಿ ಹಿಂದೂಗಳಾಗಿ ಪರಿಗಣಿಸಬೇಕೆಂದು ಆಶಿಸುತ್ತಾರೆ. ಅಲ್ಲದೆ, ಏಕರೂಪಿಯಲ್ಲದ ಹಿಂದೂಗಳಲ್ಲಿ, ಬಹಳ ಸಣ್ಣ ಪ್ರಮಾಣದ ‘ಫ್ರಿಂಜ್ ಎಲಿಮೆಂಟ್ಗಳು’ ಮಾತ್ರ ಕೋಮುವಾದಿಗಳು ಎಂದು ಹೇಳುವ ಸೆಕ್ಯುಲರ್ ಸಂಕಥನವು ‘ಹಿಂದೂಗಳು ಬಹುಸಂಖ್ಯಾತರು’ ಎಂಬೊಂದು ಪರಿಕಲ್ಪನೆಯನ್ನು ಯಾಕೆ ಒಪ್ಪಿಕೊಳ್ಳುತ್ತದೆ?.
ಹಾಗಾದರೆ ಹಿಂದೂಗಳು ಎನ್ನಲಾಗುವವರಲ್ಲಿ ಸಮಾನಧರ್ಮಗಳಿಲ್ಲವೆ? ಇವೆ. ಇಂದು ಜನಗಣತಿ ಪ್ರಕಾರ ಹಿಂದೂಗಳಾದ ಸಮುದಾಯ-ಸಂಪ್ರದಾಯಗಳಲ್ಲಿ ಇರುವ ಮುಖ್ಯವಾದ ಕೆಲವು ಸಮಾನ ಅಂಶಗಳೆಂದರೆ, ಒಂದು, ಅವುಗಳು ರಿಲೀಜನ್ ಅಲ್ಲದೆ ಇರುವುದು. ಎರಡು, ಸೃಷ್ಟಿಕರ್ತ ಮತ್ತು ಸೃಷ್ಟಿ ಎರಡೂ ಪೂಜ್ಯ ಎಂಬ ನಂಬಿಕೆ. ಮೂರು, ಮನುಷ್ಯರನ್ನು ದೇವರಾಗಿಸುವುದು ಮತ್ತು ದೇವರುಗಳನ್ನು ಮನುಷ್ಯರಾಗಿಸುವುದು. ನಾಲ್ಕು, ಗಂಡು ದೇವರುಗಳಂತೆಯೇ ಹೆಣ್ಣು ದೇವತೆಗಳಿರುವುದು, ಐದು, ಲಿಖಿತ ಮತ್ತು ಜನಪದ ಪುರಾಣಗಳ ಸೃಷ್ಟಿ, ಮರುಸೃಷ್ಟಿ ಮತ್ತು ವಿಮರ್ಶೆಯ ಸಾಧ್ಯತೆ ಇತ್ಯಾದಿ. ಇವೆಲ್ಲವೂ ಒಂದಕ್ಕೊಂದು ಸಂಬಂಧಿಸಿದ ಸಂಗತಿಗಳೂ ಆಗಿವೆ. ಈ ಅಂಶಗಳು ದಲಿತರಿಂದ ಹಿಡಿದು ಬ್ರಾಹ್ಮಣರವರೆಗೆ ಅನ್ವಯಿಸುತ್ತವೆ. ಕಾಡುಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟುಗಳಿಗೂ ಅನ್ವಯಿಸಬಹುದೇನೋ. ಕೆಲವು ಸಮುದಾಯಗಳು ಗ್ರಂಥಗಳನ್ನು ಹೊಂದಿವೆ ಎಂದು ಹೇಳಿದರೂ ಅವು ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಮರುಬಳಕೆ ಆಗುತ್ತವೆ ಅಷ್ಟೆ. ಹುಟ್ಟನ್ನಾಧರಿಸಿದ ಶ್ರೇಷ್ಠ-ಕನಿಷ್ಠ ಎಂಬ ತಾರತಮ್ಯವನ್ನು ಕಟುವಾಗಿ ಖಂಡಿಸಲು ವಿವೇಕಾನಂದರಂಥವರಿಗೆ ಯಾವ ಪ್ರಾಚೀನ ಗ್ರಂಥವೂ ಅಡ್ಡಿಯಾಗಲಿಲ್ಲ. ಬದಲಾಗಿ ಆಧುನಿಕ ಅಗತ್ಯವಾದ ಸಮಾನತೆಯನ್ನು ಹೇಳಲು ವೇದಾಂತ ಬಳಕೆಯಾಯಿತು. ಮೇಲೆ ಹೇಳಿದ ಸಮಾನ ಅಂಶಗಳು ಈ ಗುಂಪುಗಳಿಗೆ ಇತರ ರಿಲಿಜನ್ಗಳು ಅಥವಾ ಕಡಿಮೆ ಸಂಖ್ಯೆಯಲ್ಲಿರುವವರ ಮೇಲೆ ದಬ್ಬಾಳಿಕೆ ಮಾಡುವ ಸಾಮಥ್ರ್ಯವನ್ನು ನೀಡಿರಲಿಲ್ಲ; ಪ್ರೇರಣೆಯನ್ನಂತೂ ನೀಡಲು ಸಾಧ್ಯವೇ ಇಲ್ಲ. ಅದು ಹಿಂದುಗಳ ಔದಾರ್ಯ ಎನ್ನಬೇಕಿಲ್ಲ, ದೌರ್ಬಲ್ಯ ಎನ್ನಿ. ಆದರೆ ಅಂಥ ದುರ್ಬಲರನ್ನು ಬಹುಸಂಖ್ಯಾತ ಗುಂಪು(ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡಬಹುದಾದ ಗುಂಪು) ಎಂದು ನಿರ್ಣಯಿಸಿದ್ದು ವಸಾಹತುಶಾಹಿ ಪ್ರೇರಿತ ದೃಷ್ಟಿ ಅಲ್ಲವೆ? ವಸಾಹತುಶಾಹಿ ಪ್ರೇರಿತ ದೃಷ್ಟಿಕೋನ ಹೊಂದಿದ್ದ ಪ್ರಭುತ್ವ ಮತ್ತು ಸೆಕ್ಯುಲರ್ವಾದವು ‘ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರನ್ನು ರಕ್ಷಿಸುವ ಅಗತ್ಯವಿದೆ’ ಎಂಬ ಭಾವವನ್ನು ಬಿತ್ತಿತು ಮತ್ತು ಕ್ರೈಸ್ತ, ಇಸ್ಲಾಂಗಳಂತೆಯೇ ‘ಹಿಂದೂಗಳನ್ನು’ ಪರಿಗಣಿಸಿತು.
ಧರ್ಮಾಧಾರಿತ ಜನಗಣತಿಯು ಶಕ್ತಿಶಾಲಿ ಮತ್ತು ಶಕ್ತಿಹೀನ ಎಂಬೆರಡು ವರ್ಗಗಳನ್ನು ಸೃಷ್ಟಿಸುತ್ತದೆ ಎನ್ನುವ ಅಸ್ಸಾದಿಯವರು, ಸಂವಿಧಾನವೇ ಮಾಡಿದ ಬಹುಸಂಖ್ಯಾತ-ಅಲ್ಪಸಂಖ್ಯಾತ ಎಂಬ ವರ್ಗೀಕರಣದ ಹಿಂದೆ ಶಕ್ತಿಶಾಲಿ-ಶಕ್ತಿಹೀನ ಎಂಬ ಕಲ್ಪನೆ ಇರುವುದನ್ನು ಗುರುತಿಸುವುದಿಲ್ಲ.
ನನ್ನ, ಪಾಶ್ಚಿಮಾತ್ಯ ಮಾದರಿಯಂತೆ ಗ್ರಹಿಸಿಕೊಂಡ ಓದಿನ ಮಿತಿ ಯ ಬಗ್ಗೆ ಕಿರಣ್ ಹೇಳಿದ್ದಾರೆ. ಹೌದು, ನನ್ನ ಓದಿಗೆ ಹಲವು ಮಿತಿಗಳಿರಬಹುದು. ಆದರೆ, ರಾಜ್ಯಶಾಸ್ತ್ರ ವಿಷಯದಲ್ಲಿ ಸಂಶೋಧನೆ ಮಾಡಿರುವ, ಮಾಡುತ್ತಿರುವ ಕಿರಣ್ ಅವರಿಗೆ, ಪ್ರಭುತ್ವವು ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡಬೇಕು ಎಂಬ ನೀತಿಯನ್ನು ಭಾರತದ ಸಂವಿಧಾನ ತನ್ನದಾಗಿಸಿಕೊಂಡಿದೆ ಎಂಬ ಮಾತು ತುಂಬ ಹಳತಾಗಿಬಿಟ್ಟಿದೆ ಎಂದು ಏಕೆ ಗೊತ್ತಾಗಲಿಲ್ಲವೊ? ಯಾಕೆಂದರೆ, ಹಾಗಿದ್ದರೆ ಕೆಲವು ಧರ್ಮಗಳಿಗೇಕೆ ಪ್ರತ್ಯೇಕ ಸವಲತ್ತುಗಳು? ಮೀಸಲಾತಿ? ಎಂದು ಮುಂತಾಗಿ ಸಂಘ ಪರಿವಾರದವರು ಕೇಳುತ್ತಾರಾದ್ದರಿಂದ ನಮ್ಮದು ಸಾಮಾಜಿಕನ್ಯಾಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ಮತ್ತು ಧರ್ಮಗಳ ನಡುವೆ ತರತಮ ದೃಷ್ಟಿಯನ್ನು ಹೊಂದಿದ ಸೆಕ್ಯುಲರಿಸಂ ಎಂದು ಸೆಕ್ಯುಲರ್ ಬಳಗದ ವಿದ್ವಾಂಸರೇ ಬರೆದಿದ್ದಾರೆ. (ರಾಜೀವ್ ಭಾರ್ಗವ – ಡಿಸ್ಟಿಂಕ್ಟಿವ್ನೆಸ್ ಆಫ್ ಇಂಡಿಯನ್ ಸೆಕ್ಯುಲರಿಸಂ – ಅಂತರ್ಜಾಲದಲ್ಲಿ ಸಿಗಬಹುದು) ಸೆಕ್ಯುಲರ್ ಸಂಕಥನದ ಆ ಮುಖ್ಯ ಲೇಖನ ಕಿರಣರ ವಿಶಾಲ ವ್ಯಾಪ್ತಿಯ ಓದಿನ ಮೂಲೆಯಲ್ಲೆಲ್ಲೋ ಕುಳಿತು ಹೊರಗೆ ಬರದೆ ಹೋಗಿರಬಹುದು. ಇರಲಿ.
ಒಟ್ಟಿನಲ್ಲಿ, ಕೇವಲ ಸಂಘಪರಿವಾರವನ್ನು ಟಾರ್ಗೆಟ್ ಮಾಡಿಕೊಂಡು ಮಾತ್ರ ಚಿಂತನೆಯನ್ನು ಬೆಳೆಸಲು ಯತ್ನಿಸಿದ್ದು ಮತ್ತು ಹಾಗೆ ಮಾಡುವಾಗ ಗೋಲ್ ಪೋಸ್ಟ್ ಶಿಫ್ಟ್ ಮಾಡುವುದು ಅನಿವಾರ್ಯವಾಗುವುದೇ ಸೆಕ್ಯುಲರ್ ವಾದದ ಹಲವು ವೈರುಧ್ಯಗಳಿಗೆ ಕಾರಣ. ಸಮಾನ ನಾಗರಿಕ ಸಂಹಿತೆ ಬಗ್ಗೆಯೇ ನೋಡಿ: ಸಂಘಪರಿವಾರ ಅದಕ್ಕೆ ಒತ್ತಾಯಿಸುವುದರಿಂದ ಸೆಕ್ಯುಲರ್ ವಾದಿಗಳಿಗೆ ಅದು ಅಪಥ್ಯ ಆಗಿದೆ. (ನಾನು ಅದರ ಪರವೂ ಅಲ್ಲ, ವಿರೋಧವೂ ಅಲ್ಲ, ಆ ಬಗ್ಗೆ ಇನ್ನಷ್ಟೇ ನಾನು ಅಧ್ಯಯನ ಮಾಡಬೇಕಾಗಿದೆ). ಈಗ ರೊಮಿಲಾ ಥಾಪರ್ ಸಮಾನ ನಾಗರಿಕ ಸಂಹಿತೆ ಸೆಕ್ಯುಲರ್ ದೇಶದ ಅಗತ್ಯ ಅಂತ ಹೇಳಿದ್ದಾರೆ. ಇದಕ್ಕೆ ಇತರ ಸೆಕ್ಯುಲರರ ಪ್ರತಿಕ್ರಿಯೆ ಏನು ಎಂಬ ಕುತೂಹಲ ನನಗಿದೆ. (ನೋಡಿ: ರೊಮಿಲಾ ಥಾಪರ್, ಲೋಕಜ್ನಾನ ಷಣ್ಮಾಸಿಕ ಪತ್ರಿಕೆ, ಜನವರಿ -ಎಪ್ರಿಲ್ 2015. ಈ ಬಗ್ಗೆ ಚರ್ಚೆಗೆ ನೋಡಿ: ಚಿಂತನ ಬಯಲು ತ್ರೈಮಾಸಿಕ, ಎಪ್ರಿಲ್- ಜೂನ್ 2015).
ಆಕಾರ್ ಪಟೇಲ್ ಅವರ ಲೇಖನದಲ್ಲಿ ನನ್ನ ಮುಖ್ಯ ಆಕ್ಷೇಪ ಇದ್ದದ್ದು ಮುಸ್ಲಿಮರ ಆಧುನಿಕತೆಯಲ್ಲಿ ಹಿಂದೂಗಳಿಗೆ ಉಪಕಾರವಾಗುವಂಥದ್ದು ಏನೂ ಇಲ್ಲ ಎಂಬ ನಿಲುವಿನ ಬಗ್ಗೆ ಮಾತ್ರ. ಮುಸ್ಲಿಂ ವೈಯಕ್ತಿಕ ಕಾನೂನು ಕೇವಲ ಮುಸ್ಲಿಂ ಮಹಿಳೆಯರ ಸಮಸ್ಯೆ ಎಂದು ಬೇರೆ ವಿದ್ವಾಂಸರೂ ಬರೆದದ್ದುಂಟು. (ನೋಡಿ: ಸಿ.ಎನ್.ರಾಮಚಂದ್ರನ್, ಪ್ರಮಾಣ ಮತ್ತು ಪರಿಪ್ರೇಕ್ಷ್ಯ, ಪು.100). ಆದರೆ ರಾಜಿಂದರ್ ಸಚ್ಚಾರ್ ಅಂಥವರು ಮುಸ್ಲಿಮರಿಗೆ ಸಮಾಜವು (ಅಂದರೆ ಬಹುಸಂಖ್ಯಾತ ಹಿಂದೂಗಳು ಎಂದರ್ಥ) ಆಕ್ಸೆಸ್ ನೀಡುತ್ತಿಲ್ಲ ಅಂದರೆ ಅವಕಾಶ ನೀಡುತ್ತಿಲ್ಲ ಎಂದು ಹೇಳುತ್ತಾರಲ್ಲ? (ಈ ಭಾಗಕ್ಕೆ ಪ್ರಜಾವಾಣಿಯ ನನ್ನ ಮೂಲ ಲೇಖನ ಓದಿ). ಕೋಮುಗಳ ನಡುವೆ ಸಂಘರ್ಷ ನಡೆಯಲು ಹಲವು ಕಾರಣಗಳಿರುತ್ತವೆ. ಒಂದು ಅತಿಮುಖ್ಯ ಕಾರಣ ಪ್ರತ್ಯೇಕತೆಯ ಭಾವನೆ. ಅಂಥ ಭಾವನೆ ಬೆಳೆಯಲು ಏನೆಲ್ಲ ಕಾರಣಗಳಿವೆ ಎಂಬುದರ ಶೋಧನೆ ಆಗಬೇಕು. ಅಂಥ ಒಂದು ಕಾರಣ, ಬದಲಾವಣೆ ಅಥವಾ ಆಧುನಿಕತೆಗೆ ತೆರೆದುಕೊಳ್ಳುವ ವೇಗದಲ್ಲಿ ಇರುವ ವ್ಯತ್ಯಾಸ. ಇಷ್ಟನ್ನು ಹೇಳಿದರೆ, ಭಾರತದಲ್ಲಿ ಇದುವರೆಗೂ ನಡೆದಿರಬಹುದಾದ ಒಟ್ಟು ಕೋಮುಗಲಭೆಗಳಿಗೆ ಇದೊಂದೇ ಕಾರಣ ಎಂದಂತಾಯಿತೆ? ನಾನು ಹೇಳದ್ದನ್ನು ನನ್ನ ಬಾಯಲ್ಲಿ ತುರುಕಿ ಅದನ್ನು ತಪ್ಪೆಂದರೆ ನಾನೇನು ಮಾಡಲಿ?!
ಅಸ್ಸಾದಿಯವರ ಲೇಖನವು, ಜನಗಣತಿ ಕಥನಕ್ಕೆ ಹೊಸ ರೂಪ ನೀಡಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತದೆ. ಇದರ ಭಾಗವಾಗಿ ಅವರು ಮಂಡಿಸುವ, ಮುಸ್ಲಿಮರಲ್ಲಿ ಪರಿಶಿಷ್ಟರನ್ನು ಹೊರಗಿಟ್ಟು, ಹಿಂದೂಗಳಲ್ಲಿ ಪರಿಶಿಷ್ಟರ ಜೊತೆ ಸಿಖ್, ಜೈನರನ್ನು ಸೇರಿಸಿ ಜನಗಣತಿ ಮಾಡಬೇಕೆಂಬ ಅಭಿಪ್ರಾಯವು ಬಹುಸಂಸ್ಕೃತಿಗಳನ್ನು ಪ್ರತಿಪಾದಿಸುವ ಸೆಕ್ಯುಲರ್ ಸಂಕಥನಕ್ಕೆ ಹೇಗೆ ಘನತೆಯನ್ನು ತರಬಲ್ಲುದು?
ಕಿರಣ್ ಚರ್ಚೆಯು ಸೆಕ್ಯುಲರ್ವಾದಿ ಸಂಕಥನದಲ್ಲಿರುವ ವೈರುಧ್ಯಗಳನ್ನು ಪರಿಹರಿಸಿಲ್ಲ; ಬದಲಾಗಿ ಮತ್ತಷ್ಟು ಎದ್ದು ಕಾಣುವಂತೆ ಮಾಡಿದೆ. ಅದು ಸಂತೋಷದ ಸಂಗತಿ. ಸತ್ಯಕ್ಕೆ ಹಲವು ಆಯಾಮಗಳಿರುತ್ತವೆ ಎಂದು ಸಂಸ್ಕೃತಿಚಿಂತಕರೆಲ್ಲ ಹೇಳುತ್ತಾರೆ. ಎಷ್ಟೇ ಆಯಾಮಗಳಿರಲಿ, ಸಮಸ್ಯೆಗಳ ಆಳದಲ್ಲಿರುವ ಸತ್ಯಗಳನ್ನು ಆಧರಿಸದೆ ಅಥವಾ ಅವಗಣಿಸಿ, ಸೂಚಿಸುವ ಪರಿಹಾರಗಳು ನಿಷ್ಪ್ರಯೋಜಕವಾಗುತ್ತವೆ. ಮಾತ್ರವಲ್ಲ; ಬಹಳ ಬಾರಿ ದೂರಗಾಮೀ ದುಷ್ಪರಿಣಾಮ ಬೀರುತ್ತವೆ. ಈ ದೇಶದಲ್ಲಿ ಸೆಕ್ಯುಲರ್ವಾದಿ ಸಂಕಥನ ಈವರೆಗೆ ಮಾಡಿದ್ದು ಇದನ್ನೇ.
#################
ದಯಮಾಡಿ ಮೇಲಿನ ನನ್ನ ಲೇಖನದ್ಲ್ಲಿ ಧರ್ಮ ರಾಜಕಾರಣ ಎಂದಿರುವಲ್ಲಿ ಮತೀಯ ರಾಜಕಾರಣ ಎಂದು ಓದಿಕೊಳ್ಳಬೇಕಾಗಿ ಕೋರಿಕೆ.ಮತಪಂಥ ಎಂಬುದಕ್ಕೆ ಬದಲಾಗಿ ಒಂದೆರಡು ಕಡೆ ಧರ್ಮ ಎಂಬ ಶಬ್ದ ಬಳಕೆಯಾಗಿದೆ, ಕ್ಷಮಿಸಿ.- ಅಜಕ್ಕಳ ಗಿರೀಶ.