ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 22, 2015

ಡಾ. ಸೂರ್ಯನಾಥ ಕಾಮತ್ ಸಂದರ್ಶನ

‍ನಿಲುಮೆ ಮೂಲಕ

ಸಂದರ್ಶಕ: ವಿಕಾಸ್ ಕಾಮತ್
ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ಡಾ. ಸೂರ್ಯನಾಥ ಕಾಮತ್ಕರ್ನಾಟಕದ ಅತ್ಯಂತ ಪ್ರಮುಖ ಇತಿಹಾಸತಜ್ಞ ಡಾ ಸೂರ್ಯನಾಥ ಕಾಮತ್ ಇನ್ನಿಲ್ಲ. ಕರ್ನಾಟಕದ ಸಮಗ್ರ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದವರು ಕಾಮತರು. ಕರ್ನಾಟಕ ರಾಜ್ಯ ಗೆಝೆಟಿಯರ್‍ನ ಅಧ್ಯಕ್ಷರೂ ಆಗಿದ್ದವರು. ಡಾ. ಕಲ್ಬುರ್ಗಿಯವರ ನಂತರ ಕರ್ನಾಟಕ, ತನ್ನ ಬಹುಪ್ರಮುಖ ಪ್ರಾಜ್ಞನೊಬ್ಬನನ್ನು ಕಳೆದುಕೊಂಡಿದೆ. ಕಳೆದ ಹಲವು ತಿಂಗಳುಗಳಿಂದ ವೃದ್ಧಾಪ್ಯಸಹಜ ಸಮಸ್ಯೆಗಳಿಂದ ಕಾಮತರು ಬಳಲುತ್ತಿದ್ದರು.

ಇಲ್ಲಿ ಪ್ರಕಟವಾಗಿರುವ ಸಂದರ್ಶನ ನಡೆದದ್ದು 2000ನೇ ಇಸವಿಯ ಡಿಸೆಂಬರ್ ಇಪ್ಪತ್ತೊಂದರಂದು. ಕೀಟವಿಜ್ಞಾನಿ ಮತ್ತು ಕನ್ನಡದ ವಿಜ್ಞಾನ ಲೇಖಕರಾಗಿದ್ದ ಡಾ. ಕೃಷ್ಣಾನಂದ ಕಾಮತ ಹಾಗೂ ಇತಿಹಾಸ ತಜ್ಞೆ – ಲೇಖಕಿ ಡಾ. ಜ್ಯೋತ್ಸ್ನಾ ಕಾಮತರ ಪುತ್ರ ವಿಕಾಸ್ ಕಾಮತ್ ನಡೆಸಿದ ಸಂದರ್ಶನ ಇದು. ಸೂರ್ಯನಾಥ ಕಾಮತರು ಕೃಷ್ಣಾನಂದ ಕಾಮತರ ಸಂಬಂಧಿಯಲ್ಲದಿದ್ದರೂ ಅದಕ್ಕೂ ಮೀರಿದ ಬಾಂಧವ್ಯವನ್ನಿಟ್ಟುಕೊಂಡಿದ್ದರು. ಒಂದು ಕಾಲದಲ್ಲಿ ಪತ್ರಕರ್ತರು ಮತ್ತು ಓದುಗರು ಈ ಇಬ್ಬರು ಕಾಮತರ ನಡುವೆ ಗೊಂದಲ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಈ ಗೊಂದಲಗಳ ಬಗ್ಗೆ ಜ್ಯೋತ್ಸ್ನಾ ಕಾಮತರು ಒಂದು ಹಾಸ್ಯಲೇಖವನ್ನೂ ಬರೆದದ್ದುಂಟು. ಜ್ಯೋತ್ಸ್ನಾ ಅವರು ಇತಿಹಾಸ ಸಂಶೋಧನೆಯಲ್ಲಿ ಸಾಕಷ್ಟು ಕೆಲಸ ಮಾಡಲಿಕ್ಕೂ ಸೂರ್ಯನಾಥ ಕಾಮತರ ಒತ್ತಾಸೆ, ಸಹಾಯ ಇದ್ದವು.

***

ವಿಕಾಸ್: ಹಲವು ಸಂದರ್ಭಗಳಲ್ಲಿ ಜನ ನಿಮ್ಮನ್ನು ನನ್ನ ತಾಯಿಯ ಪತಿ ಎಂದೇ ಮಿಸ್ಟೇಕ್ ಮಾಡಿಕೊಂಡಿದ್ದಾರೆ. ಯಾಕೆಂದರೆ ನನ್ನ ತಂದೆಯವರ ಹೆಸರು (ಡಾ. ಕೃಷ್ಣಾನಂದ ಕಾಮತ) ಮತ್ತು ನಿಮ್ಮ ಹೆಸರಿನ ಸಾಮ್ಯ ಜನರಿಗೆ ಗೊಂದಲ ಮೂಡಿಸಿದೆ. ಆಗೆಲ್ಲ ಜನರಿಗೆ, ನೀವಿಬ್ಬರೂ ಬೇರೆಬೇರೆ ವ್ಯಕ್ತಿಗಳು; ಸಂಬಂಧಿಕರಲ್ಲ ಎಂದು ತಿಳಿಹೇಳುವುದೇ ನನಗೆ ದೊಡ್ಡ ಕೆಲಸವಾಗಿಬಿಡುತ್ತದೆ. ಈ ಬಗೆಯ ಅನುಭವ ನಿಮಗೇನಾದರೂ ಆಗಿದ್ದುಂಟಾ?

ಸೂರ್ಯನಾಥ ಕಾಮತ್: (ನಗುತ್ತ) ನಿಮ್ಮ ತಾಯಿ (ಜ್ಯೋತ್ಸ್ನಾ ಕಾಮತ) ಈ ಗೊಂದಲದ ಪ್ರಸಂಗಗಳ ಬಗ್ಗೆಯೇ ಒಮ್ಮೆ ಹಾಸ್ಯ ಲೇಖನವೊಂದನ್ನು ಬರೆದದ್ದುಂಟು. ನಿಮ್ಮ ತಂದೆ, “ಅದ್ಯಾಕೆ ಎಲ್ಲರೂ ನನ್ನನ್ನು ಸೂರ್ಯನಾಥ ಕಾಮತ ಅಂತ ಮಿಸ್ಟೇಕ್ ಮಾಡಿಕೊಳ್ತಾರೆ. ಆದರೆ ಅವರನ್ನು ಕೃಷ್ಣಾನಂದ ಅಂತ ಯಾಕೆ ಯಾರೂ ಮಿಸ್ಟೇಕ್ ಮಾಡಿಕೊಳ್ಳೋದಿಲ್ಲ? ಈ ತೊಂದರೆ ನನಗೆ ಮಾತ್ರ ಬರುವುದು ನ್ಯಾಯವಾ?” ಅಂತ ಕೇಳ್ತಿದ್ದರು. ಅವರೊಮ್ಮೆ ಹಾಗೆ ನನ್ನಲ್ಲಿ ಹೇಳಿ ಒಂದೇ ವಾರದಲ್ಲಿ ನನಗೊಂದು ಪತ್ರ ಬಂತು ರಾಜ್ಯದ ಗಝೆಟಿಯರ್ ಡಿಪಾರ್ಟ್‍ಮೆಂಟಿಂದ. ಅದರಲ್ಲಿ ಡಾ. ಕೃಷ್ಣಾನಂದ ಕಾಮತ, ನಿರ್ದೇಶಕರು, ಕರ್ನಾಟಕ ರಾಜ್ಯ ಗೆಝೆಟಿಯರ್ ಅಂತ ಬರೆದಿದ್ರು ವಿಳಾಸಾನ!

ವಿಕಾಸ್: ನೀವು ಒಬ್ಬ ಶಿಕ್ಷಕನಾಗಿ, ಪತ್ರಕರ್ತನಾಗಿ, ಕಾದಂಬರಿಕಾರನಾಗಿ ಕೆಲಸ ಮಾಡಿದಿರಿ. ಇತಿಹಾಸವನ್ನು ಅಧ್ಯಯನ ಮಾಡಿದಿರಿ. ಮಿಥಿಕ್ ಸೊಸೈಟಿಯಂಥ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಪ್ರಮುಖರು ನೀವು. ದೊಡ್ಡದೊಡ್ಡ ಸರಕಾರೀ ಸಂಸ್ಥೆಗಳನ್ನು, ಇಲಾಖೆಗಳನ್ನು ಮುನ್ನಡೆಸಿದಿರಿ. ಈಗಂತೂ ದೇಶದ ಅತ್ಯಂತ ದೊಡ್ಡ ಸರಸ್ವತೀ ಭಂಡಾರವನ್ನು (ರಾಜಾರಾಮ್ ಮೋಹನ್ ರಾಯ್ ಲೈಬ್ರರಿ, ಕೋಲ್ಕತ) ನಿರ್ದೇಶಕರಾಗಿ ಮುನ್ನಡೆಸುತ್ತಿದ್ದೀರಿ. ನಿಮ್ಮ ಈ ಎಲ್ಲ ಸಾಧನೆಗಳಿಗೆ ಪ್ರೇರಕಶಕ್ತಿ ಯಾವುದು?

ಸೂರ್ಯನಾಥ ಕಾಮತ್: ನಾನು ಈ ಎಲ್ಲ ಕೆಲಸಗಳನ್ನು ಮಾಡಿದರೂ ಇತಿಹಾಸವೇ ನನ್ನ ಮುಖ್ಯ ಕಾರ್ಯಕ್ಷೇತ್ರವಾಗಿತ್ತು. ಇತಿಹಾಸ ಅಂದರೆ ಅದು ಯಾವುದೂ ಆಗಬಹುದು – ಆರ್ಥಿಕ, ಸಾಮಾಜಿಕ, ಧಾರ್ಮಿಕ ಇತ್ಯಾದಿ. ಕರ್ನಾಟಕದ ಇತಿಹಾಸ ಕೂಡ ನನ್ನ ಇಷ್ಟದ ಕ್ಷೇತ್ರವೇ. ಆದರೆ ಎಲ್ಲಕ್ಕಿಂತ ನನ್ನನ್ನು ಹೆಚ್ಚು ಸೆಳೆದಿದ್ದು ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆ. ಅದರಲ್ಲೇ ನಾನು ಹೆಚ್ಚುಹೆಚ್ಚು ಕೆಲಸ ಮಾಡುತ್ತಹೋದೆ. ನಿಮಿತ್ತವಾಗಿ ಉಳಿದೆಲ್ಲ ಕೆಲಸಕಾರ್ಯಗಳು ನನ್ನ ಹೆಗಲೇರುತ್ತಾ ಹೋದವು.

ವಿಕಾಸ್: ನೀವು ಇತಿಹಾಸದಲ್ಲಿ ಆಸಕ್ತರಾಗಲು ಕಾರಣ ಏನು?

ಸೂರ್ಯನಾಥ ಕಾಮತ್: ನಾನು ಚಿಕ್ಕಂದಿನಿಂದಲೂ ಇತಿಹಾಸವನ್ನು ಇಷ್ಟಪಟ್ಟು ಓದಿದವನು. ಮೂಲತಃ ಧಾರವಾಡದಲ್ಲಿ ಓದುತ್ತಿದ್ದಾಗ ನಾನು ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದೆ. ಅಲ್ಲಿ ಪ್ರೊಫೆಸರ್ ಸಾಲೆತೊರೆಯಂಥ ಮಹಾನ್ ಇತಿಹಾಸತಜ್ಞರು ನನಗೆ ಗುರುಗಳಾಗಿ ಒದಗಿ ಬಂದದ್ದರಿಂದ, ನನ್ನ ಬದುಕಿನ ದಿಕ್ಕು ಬದಲಾಯಿತು. ಅರ್ಥಶಾಸ್ತ್ರದಲ್ಲಿ ಮುಂದುವರಿಯದೆ ಇತಿಹಾಸವನ್ನು ಆರಿಸಿಕೊಂಡೆ.ಕರ್ನಾಟಕದ ಇತಿಹಾಸ ನನ್ನನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು. ಈ ರಾಜ್ಯದ ಚರಿತ್ರೆಯನ್ನು ಹಿಂದೆ ಯಾರೂ ಸಮಗ್ರವಾಗಿ ಕೈಗೆತ್ತಿಕೊಂಡಿಲ್ಲವೆಂದು ತಿಳಿದ ಮೇಲೆ ನನ್ನ ದಾರಿ ಸ್ಪಷ್ಟವಾಯಿತು. ಬದುಕಿನಲ್ಲಿ ಎದುರಾದ ಯಾವೆಲ್ಲ ಸ್ಥಿತ್ಯಂತರಗಳು ನನ್ನನ್ನು ರೂಪಿಸುತ್ತ ಹೋದವು ಎನ್ನುವುದನ್ನು “ಹಿಂದಿರುಗಿ ನೋಡಿದಾಗ” ಎಂಬ ಪ್ರಬಂಧದಲ್ಲಿ ದಾಖಲಿಸಿದ್ದೇನೆ.

ವಿಕಾಸ್: ನಾನು ನೀವು ಬರೆದ ಕೊಂಕಣಿಗರ ಇತಿಹಾಸ, ಸ್ವಾತಂತ್ರ್ಯದ ಕತೆ, ರಾಜವಂಶಗಳ ಚರಿತ್ರೆಗಳ ಬಗ್ಗೆ ಓದಿದ್ದೇನೆ. ಇತಿಹಾಸದ ಅಧ್ಯಯನದಲ್ಲಿ ನಿಮಗಿಷ್ಟವಾದ ಪ್ರಕಾರ ಯಾವುದು? ಹಾಗೆಯೇ, ನೀವು ಇತಿಹಾಸವನ್ನು ನೋಡುತ್ತಿದ್ದ ಬಗೆ ಯಾವುದು, ಅದರ ಬಗ್ಗೆ ಸ್ವಲ್ಪ ಹೇಳಿ.

ಸೂರ್ಯನಾಥ ಕಾಮತ್: ನನಗೆ ಬಹುಮೆಚ್ಚಿಕೆಯಾದ ವಿಭಾಗ ಎಂದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕತೆ. ಯಾಕೆಂದರೆ, ಈ ಹೋರಾಟದಲ್ಲಿ ಅಕ್ಷರಸ್ಥರು, ಅಕ್ಷರ ತಿಳಿಯದವರು, ಶ್ರೀಮಂತರು, ಬಡವರು, ಗಂಡಸರು ಹೆಂಗಸರೆನ್ನದೆ ಎಲ್ಲರೂ ಒಮ್ಮನಸ್ಸಿನಿಂದ ಭಾಗವಹಿಸಿದರು. ಪ್ರತಿಯೊಬ್ಬರ ಮನಸ್ಸಿನಲ್ಲೂ ಅನುರಣಿಸುತ್ತಿದ್ದ ಮಂತ್ರ ಒಂದೇ – ಸ್ವರಾಜ್ಯ. ನಾನು ನನ್ನ ಸಂಶೋಧನೆಗಾಗಿ ನೂರಾರು ಜನ ಸತ್ಯಾಗ್ರಹಿಗಳನ್ನು ಮುಖತಃ ಭೇಟಿಯಾಗಿ ವಿವರಗಳನ್ನು ಕಲೆ ಹಾಕಬೇಕಾಗಿ ಬಂತು. ಆಗ ಪಡೆದ ಅನುಭವ ಅನನ್ಯ.
ಎಷ್ಟೋ ಜನ ಇತಿಹಾಸತಜ್ಞರು ಯಾವುದಾದರೂ ಕಾಲಘಟ್ಟದ ಬಗ್ಗೆ ಅಧ್ಯಯನ ಮಾಡುವಾಗ ಆಯಾ ಕಾಲದಲ್ಲಿ ಬಂದ ಶಾಸನಗಳು ಮತ್ತು ಸಾಹಿತ್ಯಭಾಗಗಳನ್ನು ಮಾತ್ರ ಪರಿಗಣಿಸುತ್ತಾರೆ. ಆದರೆ ನಾನು ಆ ಕಾಲದಲ್ಲಿ ದಾಖಲಾದ ಪ್ರತಿಯೊಂದು ವಿಷಯವನ್ನೂ ಗಮನಿಸಲು ಶುರುಮಾಡಿದೆ. ಒಂದು ದೇವಸ್ಥಾನದ ವಾರ್ತಾಪತ್ರ ಇರಬಹುದು, ಮನೆಗಳ ಅಟ್ಟದಲ್ಲಿ ದೂಳು ತಿನ್ನುತ್ತ ಬಿದ್ದ ಯಾವುದೋ ಮನೆಪತ್ರಗಳ ಕಟ್ಟುಗಳಿರಬಹುದು, ಅವೆಲ್ಲವನ್ನೂ ಓದಿ ಪರಿಶೀಲಿಸಿ ಮಾಹಿತಿ ಕಲೆಹಾಕುವ ಕೆಲಸ ಶುರುಮಾಡಿದೆ. ಮೌಖಿಕ ದಾಖಲಾತಿ ಪ್ರಾರಂಭಿಸಿದೆ. ಇತಿಹಾಸ ಎನ್ನುವುದು ರಾಜಮಹಾರಾಜರ ಕತೆ ಮಾತ್ರ ಅಲ್ಲ; ಜನಜೀವನದ ಕತೆಯೂ ತಾನೆ? ಹಾಗಾಗಿ ರಾಜರಿಂದ ಹಿಡಿದು ರಸ್ತೆಬದಿಯ ಚಮ್ಮಾರನವರೆಗಿನ ಎಲ್ಲ ಮಾಹಿತಿಯನ್ನೂ ಕ್ರೋಢೀಕರಿಸಿ ಸಮಗ್ರ ಚಿತ್ರ ಪಡೆಯಲು ಪ್ರಯತ್ನಿಸಿದೆ. ಸಾಮಾಜಿಕ ಬದಲಾವಣೆಗಳಿಗೆ ಕಾರಣ ಏನು ಎನ್ನುವ ಹುಡುಕಾಟ ನಡೆಸಿದೆ.

ವಿಕಾಸ್: ಸಾಮಾಜಿಕ ಬದಲಾವಣೆಗಳಿಗೆ ಏನು ಕಾರಣ?

ಸೂರ್ಯನಾಥ ಕಾಮತ್: ಬಹಳಿವೆ. ರಾಜಕೀಯ ಹಿತಾಸಕ್ತಿಗಳು, ಆರ್ಥಿಕ ಸಂಕಷ್ಟಗಳು ಸಾಮಾಜಿಕ ಬದಲಾವಣೆಗಳನ್ನು ತರಬಹುದು. ಸಂಕಷ್ಟ ಮಾತ್ರವಲ್ಲ; ಆರ್ಥಿಕವಾದ ಉತ್ಥಾನ ಕೂಡ ಆ ಬದಲಾವಣೆಗಳಿಗೆ ಕಾರಣ ಆಗಬಹುದು. ಯಾವುದೇ ದೊಡ್ಡ ಮಟ್ಟದ ಬದಲಾವಣೆ ಬರಬೇಕಾದರೆ ಅಲ್ಲೊಬ್ಬ ದೃಢ ನಾಯಕನ ಅಗತ್ಯವಿದೆ. ಆದರೆ, ಅದಕ್ಕಿಂತ ಮಿಗಿಲಾಗಿ ಆ ಕಾಲಘಟ್ಟದಲ್ಲಿ ಜನಸಮೂಹವೇ ಒಂದಾಗಿ ಇತಿಹಾಸವನ್ನು ಮುಂದೆ ಕೊಂಡೊಯ್ಯುವ ಚಮತ್ಕಾರವನ್ನು ನಾವು ನೋಡಬಹುದು. ಹಾಗಾಗಿ, ದೊಡ್ಡ ಬದಲಾವಣೆಗಳ ಹಿಂದಿರುವುದು ನಾಯಕರಿಗಿಂತ ಹೆಚ್ಚಾಗಿ ಜನಶಕ್ತಿ ಮತ್ತು ಅದರ ಸಂಕಲ್ಪಬಲ.

ವಿಕಾಸ್: ಭಾರತದಲ್ಲಿ ಇತಿಹಾಸದ ಅಧ್ಯಯನಕ್ಕೆ ಭವಿಷ್ಯ ಇದೆಯೇ? ಈಗಿನ ವಿದ್ಯಾರ್ಥಿಗಳಲ್ಲಿ ಈ ಕ್ಷೇತ್ರದ ಬಗ್ಗೆ ಆಸಕ್ತಿ ಇದೆ ಎನ್ನುತ್ತೀರಾ?

ಸೂರ್ಯನಾಥ ಕಾಮತ್: ನಮ್ಮಲ್ಲಿ ಸಿವಿಲ್ ಪರೀಕ್ಷೆಗಳಿಗೆ ಉತ್ತರಿಸಲು ಎಷ್ಟು ಬೇಕೋ ಅಷ್ಟು ಇತಿಹಾಸದ ಪರಿಜ್ಞಾನ ಇದ್ದರೆ ಸಾಕು ಎಂಬ ಮನೋಭಾವ ಬೆಳೆಯುತ್ತಿದೆ. ಹಾಗಾಗಿ ನಿಜವಾದ ಆಸಕ್ತಿ ಇದ್ದು ಈ ಕ್ಷೇತ್ರಕ್ಕೆ ಕಾಲಿಡುತ್ತಿರುವವರ ಸಂಖ್ಯೆ ಕಡಿಮೆ. ಇನ್ನು ಈ ಜ್ಞಾನಕ್ಷೇತ್ರದಲ್ಲಿ ನಿಜವಾದ ಸಂಶೋಧನೆ ನಡೆಯುತ್ತದೆ ಎಂದೂ ಹೇಳುವಂತಿಲ್ಲ. ಇಲ್ಲಿ ಜಾತಿ ರಾಜಕೀಯ ವಿಪರೀತ. ಆಳುವ ವರ್ಗವನ್ನು ಅಥವಾ ಯಾವುದಾದರೂ ನಿರ್ಧಿಷ್ಟ ಜಾತಿ / ಪಂಗಡವನ್ನು ಮೆಚ್ಚಿಸಲಿಕ್ಕಾಗಿ ಇತಿಹಾಸವನ್ನು ತಿರುಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಾವು ಯೂನಿವರ್ಸಿಟಿಗಳಲ್ಲಿ ಡಾಕ್ಟರೇಟ್‍ಗಳ ಹುಲುಸಾದ ಬೆಳೆ ಬೆಳೆಯುತ್ತಿದ್ದೇವೆ. ಆದರೆ ಅವುಗಳ ಗುಣಮಟ್ಟ ಪರೀಕ್ಷಿಸಲು ಹೋದರೆ ಕಾಳಿಗಿಂತ ಜೊಳ್ಳೇ ಜಾಸ್ತಿ. ಇದು ಇಂದು ಭಾರತದ ಇತಿಹಾಸ ಸಂಶೋಧನೆಯ ಘೋರ ಚಿತ್ರ.

ವಿಕಾಸ್: ಯಾಕೆ ಹಾಗಾಗಿದೆ? ಈ ಸಮಸ್ಯೆ ಪರಿಹರಿಸಲು ಏನು ಮಾಡಬಹುದು?

ಸೂರ್ಯನಾಥ ಕಾಮತ್: ನಾನು ಬೆಳೆಯುವಾಗ ನಮಗೆ ಬಡತನ ಇತ್ತು. ಆದರೆ ನಮ್ಮನ್ನು ಬೆಳೆಸುವ, ಸರಿ ದಾರಿ ತೋರಿಸಿ ಹುರಿದುಂಬಿಸುವ ಮಾರ್ಗದರ್ಶಕರ ದೊಡ್ಡ ಪಡೆಯೇ ಇತ್ತು. ಜ್ಞಾನವನ್ನು ಉಳಿದ ಯಾವ ಪ್ರಲೋಭನೆಗಳಿಗೂ ಬಲಿ ಕೊಡದ ಮಹಾನ್ ವ್ಯಕ್ತಿಗಳು ಕಿರಿಯರನ್ನು ಬೆಳೆಸುವುದರಲ್ಲಿ ಆಸಕ್ತಿ ತೋರಿಸುತ್ತಿದ್ದರು. ಆದರೆ ಈಗಿನ ಯುವಕರಿಗೆ ಹಾಗೆ ದಾರಿ ತೋರಿಸುವ ಹಿರಿಯರ ಕೊರತೆ ಇದೆ ಅನಿಸುತ್ತದೆ. ವಿಪರ್ಯಾಸವೆಂದರೆ ಇಂದು ನಮ್ಮ ಸಂಶೋಧನೆಗಳನ್ನು ಸುಲಭ ಮಾಡಿಕೊಳ್ಳಲು ನಮಗೆ ಎಲೆಕ್ಟ್ರಾನಿಕ್ ಉಪಕರಣಗಳ ಸೌಲಭ್ಯ ಇದೆ. ಆದರೆ, ಮಾನವ ಸಂಬಂಧಗಳು ಕ್ಷೀಣಿಸಿವೆ. ಯುವಜನರಿಗೆ ಜ್ಞಾನದ ಹೆಬ್ಬಾಗಿಲು ತೆರೆಯಲು ಮಿಥಿಕ್ ಸೊಸೈಟಿಯಂಥ ಸಂಸ್ಥೆಗಳನ್ನು ನಾವು ಉಳಿಸಿ ಬೆಳೆಸಬೇಕು. ಆರ್‍ಎಸ್‍ಎಸ್‍ನಂಥ ಸಂಘಟನೆಗಳು ಕೂಡ ಯುವ ಮನಸ್ಸುಗಳಲ್ಲಿ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಹೆಚ್ಚುಹೆಚ್ಚಾಗಿ ಕೈಗೆತ್ತಿಕೊಳ್ಳಬೇಕು. ಶಾಲಾ ಶಿಕ್ಷಕರ ಪಾತ್ರವನ್ನು ಕೂಡ ಇಲ್ಲಿ ಸ್ಮರಿಸಬೇಕು.

ವಿಕಾಸ್: ಸಂದರ್ಶನದಲ್ಲಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಸರ್.

ಕೃಪೆ : ಕಾಮತ್.ಕಾಂ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments