ಜನಸಾಮಾನ್ಯರಿಗಾಗಿ ಕಾವ್ಯ ಮತ್ತು ಕಾವ್ಯದಲ್ಲಿ ಸರಳತೆ
– ನಾಗೇಶ ಮೈಸೂರು
ಕೆಲವೊಮ್ಮೆ ನನಗನಿಸುತ್ತದೆ – ಚಲನಚಿತ್ರ ಗೀತೆಗಳಿಗೆ ಸಿಕ್ಕಷ್ಟು ಹೆಸರು, ಪ್ರಾಮುಖ್ಯತೆ ಒಳ್ಳೆಯ ಕಾವ್ಯ- ಕವಿತೆಗಳಿಗೆ ದೊರಕುತ್ತಿಲ್ಲವೆಂದು. ಎಲ್ಲಾ ಸ್ತರಗಳ ಹೆಚ್ಚು ಮನಸುಗಳನ್ನು ಚಲನಚಿತ್ರ ಗೀತೆಗಳು ತಲುಪುತ್ತದೆ ಎನ್ನುವುದು ನಿರ್ವಿವಾದ. ಆದರೆ ಅವುಗಳ ರೀತಿಯಲ್ಲೆ ಕವನಗಳ ಶ್ರೇಷ್ಠತೆ ಮುಖ್ಯವಾಹಿನಿಗೆ ಮುಟ್ಟುತ್ತಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ.
ಕಾವ್ಯಕ್ಕು ಭಾವಕ್ಕು ಅವಿನಾಭಾವ ಸಂಬಂಧ. ಭಾವ ಜೀವಿಯೊಬ್ಬ ಬರಹಗಾರನಾಗಿರಲಿ, ಬಿಡಲಿ – ಅಂತರಂಗದ ಬಡಿತ ಝೇಂಕರಿಸಿದಾಗ ಸ್ಪುರಿಸುವ ಭಾವನೆ ಪದಗಳಾಗಿ ಹೊರಬಿದ್ದಾಗ ಕಾವ್ಯ ರೂಪದಲ್ಲಿರುವುದೆ ಹೆಚ್ಚು. ಭಾವನೆಯ ನವಿರು ಮತ್ತು ನಾವೀನ್ಯತೆಯನ್ನು ಪರಿಗಣಿಸಿ ಹೇಳುವುದಾದರೆ ಅದು ಕಾವ್ಯ ರೂಪದಲ್ಲಿರುವುದೆ ಸಹಜ ಗುಣ ಧರ್ಮ. ಈ ಭಾವ ಕೆಲವರಲ್ಲಿ ಕ್ಲಿಷ್ಠ ಕವನದ ರೂಪತಾಳಿದರೆ ಮತ್ತೆ ಕೆಲವರಿಗೆ ಸರಳ ಪದ ಕುಣಿತದ ಹಾಡಾಗಬಹುದು. ಮತ್ತಿತರರಿಗೆ ಎರಡು ಅಲ್ಲದ ನಡುವಿನ ಗಡಿಯ ತ್ರಿಶಂಕುವೂ ಆಗಬಹುದು. ಭಾವ ಗಣಿತದಲ್ಲಿ ಗಣನೆಗೆ ಬರುವುದು ಅದು ಆ ಗಳಿಗೆಯಲ್ಲಿರುವ ಮನಸ್ಥಿತಿಗನುಸಾರವಾಗಿ ಅಂಕೆಗಿಲ್ಲದೆ ಪ್ರಸ್ತಾವಗೊಳ್ಳುವ ರೀತಿಯೆ ಹೊರತು ಯಾವುದೆ ನೀತಿ ನಿಯಮಾವಳಿಗೊಳಪಟ್ಟ ನಿರ್ಬಂಧಿತ ಸರಕಲ್ಲ. ಹೀಗಾಗಿ ಅದು ಅದ್ಬುತವೂ ಆಗಿಬಡಿಬಹುದು, ಅನಾಥವೂ ಅನಿಸಿಬಿಡಬಹುದು.
ಇಷ್ಟಾದರೂ ಇಲ್ಲೊಂದು ವಿಲಕ್ಷಣ ವಿಪರ್ಯಾಸವಿದೆ. ಮೇಲ್ನೋಟಕ್ಕೆ ಇದು ಎದ್ದು ಕಾಣಿಸದಿದ್ದರು, ಸ್ವಲ್ಪ ಒಳಹೊಕ್ಕು ಆಳ ನೋಡಿ ಈಜಲು ಬಯಸಿದವರಿಗೆ ಇದು ಚಿರಪರಿಚಿತವೇ ಎನ್ನಬಹುದು. ಇದನ್ನು ಅರ್ಥ ಮಾಡಿಕೊಳ್ಳಲ್ಲು ಒಂದು ಉದಾಹರಣೆಯ ಮುಖೇನ ಯತ್ನಿಸುವುದು ಸೂಕ್ತವೆನಿಸುತ್ತದೆ. ಉತ್ತಮವಾಗಿಯೆ ಬರೆಯುವ ಸಾಮರ್ಥ್ಯವಿರುವ ಉದಯೋನ್ಮುಖ ಕವಿಯೊಬ್ಬ, ತಾನು ಬರೆದುದು ಹೆಚ್ಚು ಜನರಲ್ಲಿ ತಲುಪಲಿ ಎಂಬ ಅಶೆಯಿಂದ ಒಂದು ಪುಸ್ತಕವಾಗಿ ಪ್ರಕಟಿಸಲು ಬಯಸುತ್ತಾನೆ ಎಂದಿಟ್ಟುಕೊಳ್ಳೋಣ. ಅಲ್ಲಿಂದಲೆ ಆರಂಭ ತೊಂದರೆ. ಮೊದಲಿಗೆ ಅದನ್ನು ಪ್ರಕಟಿಸುವ ಇಚ್ಛೆಯಿರುವ ಪ್ರಕಾಶಕ ದೊರಕುವುದೆ ಕಷ್ಟ. ಸಿಗುವವರೆಲ್ಲ ಆ ಕ್ಷೇತ್ರದಲ್ಲಿ ಹೆಸರು ಮಾಡಿರುವವರ ಮೇಲಷ್ಟೆ ಬಂಡವಾಳ ಹಾಕಲು ಸಿದ್ದರಿರುತ್ತಾರೆಯೆ ಹೊರತು, ಹೊಸಬರ ಮೇಲಲ್ಲ. ಎಷ್ಟೊ ಸಲ ಬರೆದವರ ಪ್ರಕಟಿಸಬೇಕೆಂಬ ಹಂಬಲ, ಸ್ವಂತವಾಗಿ ಎಲ್ಲಾ ವೆಚ್ಚ ಭರಿಸಿ ಪುಸ್ತಕವಾಗಿಸುವುದರಲ್ಲಿ ಪರ್ಯಾವಸಾನವಾಗುವ ಪ್ರಕರಣಗಳು ಕಡಿಮೆಯೇನಲ್ಲ. ಆದರೆ ಅಲ್ಲಿಯೂ ಹೆಚ್ಚು ಜನರನ್ನು ತಲುಪೀತೆಂಬ ಆಶಯ ಕೈಗೂಡುವುದೆಂದು ಹೇಳುವಂತಿಲ್ಲ – ಮಾರುಕಟ್ಟೆಗೆ ತಲುಪಿಸುವ ರೀತಿ, ನೀತಿ, ವಿಧಾನಗಳ ಕೊರತೆಯಿಂದಾಗಿ. ಜತೆಗೆ ಕಥೆಯೊ, ಕಾದಂಬರಿಯೊ ಆದರೆ ಪ್ರಕಟಿಸಲು ಯಾರಾದರೂ ಸಿಕ್ಕಿದರೂ ಸಿಗಬಹುದು ; ಆದರೆ ಕಾವ್ಯವೆಂದ ತಕ್ಷಣ ಅರ್ಧಕರ್ಧ ಆಸಕ್ತಿಯೆ ತಗ್ಗಿ ಹೋಗುತ್ತದೆ. ಆ ಕಡಯಿಂದ ಫಕ್ಕನೆ ಬರುವ ಉತ್ತರ – ‘ಈ ದಿನಗಳಲ್ಲಿ ಕಾವ್ಯ, ಕವನ ಕೊಂಡು ಓದುವವರು ಕಮ್ಮಿ’ ಎಂಬುದಾಗಿ.
ನಿಜ ಹೇಳುವುದಾದರೆ ಆ ಮಾತಿನಲ್ಲಿ ಹುರುಳಿಲ್ಲದಿಲ್ಲ. ಕೊಂಡು ಓದುವವರಿಲ್ಲದಾಗ ಮುದ್ರಿಸಿ ತಾನೆ ಏನುಪಯೋಗ? ಹೇಳಿ ಕೇಳಿ ವಾಣಿಜ್ಯದ ದೃಷ್ಟಿಯಿಂದ ಲಾಭ ತರುವಂತಿರದಿದ್ದರು, ನಷ್ಟವಾಗಿಸದ ಮಟ್ಟಿಗಾದರೂ ಇರಬೇಕಲ್ಲವೆ? ಆದರೆ ಇಲ್ಲಿ ಪ್ರಶ್ನೆ ಅದಲ್ಲ – ಯಾಕೆ ಕಾವ್ಯ, ಕವನಗಳಿಗೆ ಈ ರೀತಿಯ ಪಾಡು, ಅನಾದರ? ಅದರದೊಂದು ವಿಶ್ಲೇಷಣಾತ್ಮಕ ಯತ್ನವನ್ನು ಮಾಡಿ ಕಾರಣ ಹುಡುಕ ಹೊರಟರೆ ಕೆಲವು ಅಚ್ಚರಿಯ ಸಂಗತಿಗಳು ಹೊಳೆಯದೇ ಇರದು.
ಮೊದಲನೆಯದಾಗಿ ಕಾವ್ಯ ಪ್ರಕಾರದ ಹಿನ್ನಲೆಯನ್ನು ಗಮನಿಸಿದರೆ ಎರಡು ಸ್ಪಷ್ಟ ಹಾಗು ವಿಭಿನ್ನ ಮಾರ್ಗಗಳು ಗೋಚರಿಸುತ್ತವೆ. ಮೊದಲನೆಯದು ಉನ್ನತ ಸ್ತರದ ಕಾವ್ಯ ಸಾಮಗ್ರಿ. ಇದು ಸಾಮಾನ್ಯರಿಗೆ ಸುಲಭದಲ್ಲಿ ನಿಲುಕದ ಸ್ತರ. ಇದರ ಗ್ರಾಹಕರು ತುಸು ಹೆಚ್ಚಿನ ಕಾಠಿಣ್ಯತೆಯ ಸ್ತರದಲ್ಲಿ, ಕಬ್ಬಿಣದ ಕಡಲೆಯಾದರೂ ಅಗಿದು ಅರಗಿಸಿಕೊಂಡು ಆಸ್ವಾದಿಸುವವರು. ಆ ಕಠಿಣತೆಯ ಬೀಜವನ್ನು ಮುರಿದು ಒಡಪನ್ನರಿಯುವ ಪ್ರಕ್ರಿಯೆಯಲ್ಲೆ ಆನಂದವನ್ನನುಭವಿಸುವವರು. ಆದರೆ ಈ ರೀತಿಯ ಉನ್ನತ ಸ್ತರದ ಕಾವ್ಯ ರಸಿಕರ ಸಂಖ್ಯೆ ಸಣ್ಣದು ಮತ್ತು ಸೀಮಿತ ಪ್ರಯೋಗಕಷ್ಟೆ ನಿಲುಕುವಂತಾದ್ದು. ಹಳೆಗನ್ನಡ-ನಡುಗನ್ನಡ ಶ್ರೇಣಿಯ ಕವನಗಳಾಗಲಿ, ಹೊಸಗನ್ನಡದ ಸಾಲುಗಳ ಅಂತರಾರ್ಥ, ಪ್ರತಿಮೆ, ಇಂಗಿತಗಳನ್ನು ಮಥಿಸಿ ಅರಿಯಬೇಕಾದ ಕಾವ್ಯಗಳಾಗಲಿ, ತೀರಾ ಹೆಚ್ಚಿನ ಗೋಜಿಲ್ಲದೆ ಅರ್ಥಗ್ರಹಿಸಿ ಆಸ್ವಾದಿಸಬಯಸುವ ಓದುಗ ಸಮೂಹಕ್ಕೆ ಸುಲಭ ಗ್ರಹಿಕೆಗೆ ನಿಲುಕುವುದಿಲ್ಲ. ಹೀಗಾಗಿ, ಅದನ್ನು ಮತ್ತಷ್ಟು ಪ್ರಯತ್ನಿಸಿ ಅರಿಯುವ ಯತ್ನಕ್ಕಿಂತ, ಪಕ್ಕಕ್ಕಿಟ್ಟು ಮತ್ತೇನಕ್ಕೊ ಗಮನ ಹರಿಸುವುದು ಸಾಧಾರಣ ಪ್ರತಿಕ್ರಿಯೆಯಾಗಿಬಿಡುತ್ತದೆ.
ಈ ಸಂಕೀರ್ಣತೆಯ ಸಂಪೂರ್ಣ ವಿರುದ್ಧ ದಿಕ್ಕಿನ ಮತ್ತೊಂದು ಆಯಾಮವಾದ ಸರಳತೆಯೆನ್ನುವ ಮತ್ತೊಂದು ತುದಿಯನ್ನು ನೋಡಿದಾಗ ಕಾಣಬರುವ ಗುಂಪು – ಜನಸಾಮಾನ್ಯರಿಗೂ ಯಾವುದೆ ತಿಣುಕಾಟವಿಲ್ಲದೆ ನೇರವಾಗಿ ಸುಲಭವಾಗಿ ಅರ್ಥವಾಗುವ ಸರಳ ಬರಹಗಳು. ಸರಳ ಪದ್ಯಗಳಿಂದ ಹಿಡಿದು, ಭಕ್ತಿಗೀತೆ, ಕೆಲವು ಭಾವಗೀತೆ , ಅಷ್ಟೆ ಏಕೆ – ಈ ಗುಂಪಿನವರಿಗೆ ಹೆಚ್ಚಿನ ಶ್ರಮವಿಲ್ಲದೆ ಅರ್ಥವಾಗುವ ಚಲನ ಚಿತ್ರದ ಹಾಡುಗಳು ಸಹ ಸೇರಿಕೊಳ್ಳುತ್ತವೆ. ಈ ಗುಂಪು ಪಡೆಯುವ ಪ್ರಚಾರ, ಗಳಿಸುವ ಹಣ, ಪ್ರಖ್ಯಾತಿಗಳನ್ನೆಲ್ಲ ಗಮನಿಸಿದರೆ ‘ಯಾಕೆ ಇಲ್ಲಿಂದ ಮೇಲ್ಮಟ್ಟಕ್ಕೆ ಹೋದರೆ ಪರಿಸ್ಥಿತಿಯೆ ತಿರುವು ಮುರುವಾಗಿ ಹೋಗುತ್ತದಲ್ಲ ?’ ಅನಿಸದಿರದು.
ನನಗನಿಸುವಂತೆ ಈ ಎರಡು ತುದಿಗಳ ವಿಪರೀತ ವಿಪರ್ಯಾಸಕ್ಕೆ ಕಾರಣ – ಈ ಎರಡು ಕೊನೆಗಳ ನಡುವಿನಲ್ಲಿರುವ ಅಗಾಧ ವ್ಯಾಪ್ತಿಯನ್ನು ಸಮರ್ಥವಾಗಿ ಮತ್ತು ಹಂತ ಹಂತವಾಗಿ ತುಂಬಬಲ್ಲ ಸರಕು ಹೆಚ್ಚಾಗಿ ಇಲ್ಲದಿರುವುದು ಅಥವ ಇದ್ದರೂ ಅದಕ್ಕೆ ಸಿಗಬೇಕಾದ ಪ್ರಾಮುಖ್ಯತೆ ದೊರಕದೆ ಇರುವುದು. ಹೀಗಾಗಿ ಸಿನಿಮಾ ಹಾಡಿಗೆ ಆನಂದಿಸುವ ರಸಿಕನೊಬ್ಬ ಅಲ್ಲಿಂದಾಚೆಗೆ ದಾಟಿ ತುಸು ಎತ್ತರದ ಸ್ತರವನ್ನು ಅವಲೋಕಿಸಿದರೆ ಅವನ ಕೈಗೆ ಸಿಗುವುದು ನೇರ ಕಬ್ಬಿಣದ ಕಡಲೆಯ ಸರಕು. ಅದಕ್ಕೆ ಇನ್ನು ಸಿದ್ದನಿರದವನಿಗೆ ಆ ಸ್ತರವನ್ನು ನೋಡಿಯೆ ನಿರಾಸೆಯುಂಟಾಗಿ ಮುಟ್ಟುವ ಯತ್ನವನ್ನೆ ಕೈಬಿಟ್ಟು ಮತ್ತೆ ತನ್ನ ‘ಸುಲಭದ ದಾರಿಯ’ ಪ್ರಪಂಚಕ್ಕೆ ವಾಪಸಾಗಿಬಿಡಬಹುದು. ಹೀಗಾಗಿ ಹೊಸ ಬಳಗವನ್ನು ತಯಾರು ಮಾಡಿ ಮೇಲಿನ ಹಂತಕ್ಕೆ ಮುಟ್ಟಿಸುವ ಪ್ರಕ್ರಿಯೆಗೆ ಚಾಲನೆಯೆ ಸಿಕ್ಕುವುದಿಲ್ಲ. ಸಿಕ್ಕಿದರು ಅದಕ್ಕೆ ಬೇಕಾದ ಸಲಕರಣೆ, ಸಾಮಾಗ್ರಿಗಳಿಲ್ಲದೆ, ಎಲ್ಲಿ ಹಾಸಿದ್ದು ಅಲ್ಲೆ ಬಿದ್ದಂತಹ ಸ್ಥಿತಿಯಾಗಿಬಿಡುತ್ತದೆ. ಪ್ರಾಯಶಃ ಇವೆರಡು ಅತೀವ ಅಂತಿಮಗಳ ನಡುವೆ ಮೆಟ್ಟಿಲು ಮೆಟ್ಟಿಲಾಗಿ ಸಾಗಿಸಬಲ್ಲ ಮತ್ತಷ್ಟು ಕಾವ್ಯ ಪ್ರಕಾರಗಳಿದ್ದರೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಜಿಗಿಸಲು ಸಾಧ್ಯವಾಗುತ್ತಿತ್ತೊ ಏನೊ?
ಅದಕ್ಕೆ ಸ್ಥೂಲವಾಗಿ – ಸರಳದಿಂದ ಹಿಡಿದು ಕಠಿಣತೆಯ ಹಂತದಿಂದ ತುಸು ಕೆಳಮಟ್ಟದಲ್ಲಿರುವ ವಿಸ್ತಾರದಲ್ಲಿ ಹೆಚ್ಚು ಹೆಚ್ಚು ಕಾವ್ಯ ಕೃಷಿ ನಡೆದರೆ ಈ ಅಗಾಧ ಅಂತರ ತುಂಬಲು ಸಾಧ್ಯವಾಗುತ್ತದೆ. ಅಂತೆಯೆ , ಈ ಕೃಷಿಯಲ್ಲಿ ಸಾಮಾನ್ಯ ಬದುಕಿನ ಸಾಮಾನ್ಯ ಘಟನೆಗಳಿಗೂ ಕಾವ್ಯದ ಅಂತಃಸತ್ವ ತುಂಬಿ ಬೆಳೆಸುತ್ತಾ ಬಂದರೆ ಆರಂಭಿಕ ಆಸಕ್ತಿಯನ್ನು ಹುಟ್ಟಿಸಲು ಸಾಧ್ಯವಾಗುತ್ತದೆ. ಆ ಆಸಕ್ತಿ ಹುಟ್ಟಿದಾಗ ಕೊಳ್ಳುವ, ಕೊಂಡು ಓದುವ ಬಳಗವು ಬೆಳೆಯಲು ಸಾಧ್ಯವಾಗುತ್ತದೆ – ಆ ಸಾಮಾನ್ಯ ಸ್ತರದಲ್ಲಿ ತಮ್ಮ ಬದುಕನ್ನೆ ಸುಲಭವಾಗಿ ಗುರುತಿಸಿಕೊಳ್ಳಬಲ್ಲ ಸರಳತೆಯಿಂದಾಗಿ. ಇದು ತೀರಾ ಬಾಲಿಶ ಉಪಾಯ ಎಂದು ಪಕ್ಕಕ್ಕೆ ಸರಿಸಿಬಿಡಿವ ಅಪಾಯವೂ ಇಲ್ಲದಿಲ್ಲ. ಆದರೆ ಕೆಳ ಪ್ರಕಾರದ ಜನಪ್ರಿಯತೆ ಗಮನಿಸಿದರೆ ಸೂಕ್ತ ಪ್ರಯತ್ನ, ಸರಿಯಾದ ರೂಪುರೇಷೆಗಳಿಂದ ಬೆಂಬಿಡದೆ ಯತ್ನಿಸಿದರೆ ಇದು ಖಂಡಿತಾ ಸಾಧ್ಯವೆಂದು ನನ್ನ ನಂಬಿಕೆ.
ನಾನಂತೂ ಆ ಕಾರಣದಿಂದಲೆ ಹೆಚ್ಚೆಚ್ಚು ಸರಳ ಕವಿತೆಗಳನ್ನು ಬರೆಯಲು ಪ್ರಯತ್ನಿಸುತ್ತಲೆ ಇದ್ದೇನೆ – ಈ ಅಗಾಧ ಅಂತರದ ನಡುವಿನ ಏಣಿಗೆ ಕೆಲ ಮೆಟ್ಟಿಲುಗಳಾದರೂ ಆಗುವ ಆಶಯದಿಂದ. ಅನಿಸಿಕೆ ನಿಜವೊ ಸುಳ್ಳೊ, ಆಶಯ ಕೈಗೂಡುವುದೊ ಬಿಡುವುದೊ ಎನ್ನುವುದು ಕಾಲ ಪುರುಷನ ಬಸಿರಲಿ ಅಡಗಿರುವ ರಹಸ್ಯವಾದರು, ಕೊನೆಗೆ ಸುಳ್ಳೆ ಆಗುವುದಾದರೂ ಯತ್ನ ಮಾಡಿ ನೋಡುವುದರಲ್ಲಿ ತಪ್ಪೇನು ಇಲ್ಲವೆಂದು ನನ್ನ ಅನಿಸಿಕೆ. ಯಾಕೆಂದರೆ ಸರಳತೆ ಸಾಮಾನ್ಯರ ಮನದ ಕದ ತಟ್ಟಲು ಹೆಚ್ಚಿನ ಶ್ರಮ ಬೇಕಾಗುವುದಿಲ್ಲ. ಅಂತೆಯೆ ಸರಳ ಸ್ತರದಲ್ಲಿ ಬರೆದು ನಿಭಾಯಿಸುವುದು ಆ ಮಟ್ಟದ ಒಡನಾಟದಲ್ಲಿ ತೊಳಲಾಡಿ ಬಂದವರ ಹೊರತು ಎಲ್ಲರಿಗು ಸುಲಭ ಸಾಧ್ಯವೂ ಅಲ್ಲ.
‘ಸತ್ಯಂ ಶಿವಂ ಸುಂದರಂ’ ಅನ್ನುವ ಹಾಗೆ ‘ಸರಳಂ ಶಿವಂ ಸುಂದರಂ’ ಈ ಪ್ರಯತ್ನದ ಮೂಲಮಂತ್ರವಾಗಬೇಕು ಎನ್ನೋಣವೆ?