ಸುಳ್ಸುದ್ದಿ – ಪ್ರಶಸ್ತಿ ವಾಪಸ್ ಪ್ರಹಸನ : ಬೇಸ್ತುಬಿದ್ದ ಸಾಹಿತಿಗಳು
– ಪ್ರವೀಣ್ ಕುಮಾರ್,ಮಾವಿನಕಾಡು
ಘಟನೆ ಒಂದು:
ಅವರೊಬ್ಬ ಹಳೆಯ ಸಾಹಿತಿ.ಹಲವಾರು ವರ್ಷಗಳ ಹಿಂದೆ ಅವರಿಗೆ ಎರಡು ಲಕ್ಷ ನಗದಿನ ಜೊತೆಗೆ ಅಕಾಡೆಮಿ ಪ್ರಶಸ್ತಿ ಕೂಡಾ ದೊರಕಿತ್ತು.ಕೆಲ ದಿನಗಳ ಹಿಂದೆ ಟೌನ್ ಹಾಲ್ ಬಳಿ ಅವರನ್ನು ಭೇಟಿಯಾದ ವ್ಯಕ್ತಿಯೊಬ್ಬ,ವಿಚಾರವಾದಿಗಳ ಹತ್ಯೆಯನ್ನು ಖಂಡಿಸಿ, ಅರವತ್ತು ವರ್ಷದಲ್ಲಿ ದೇಶದಲ್ಲಿ ಎಂದೂ ಇಂತಹಾ ಘಟನೆ ನಡೆದಿಲ್ಲ ಎಂದು ಬಿಂಬಿಸುವ ಸಲುವಾಗಿ ಅದೇ ಕಾರಣವನ್ನು ನೀಡಿ ನಿಮಗೆ ನೀಡಲಾದ ಪ್ರಶಸ್ತಿ ಮತ್ತು ಪ್ರಶಸ್ತಿಯ ಜೊತೆ ದೊರೆತ ಹಣವನ್ನು ಅಕಾಡೆಮಿಗೆ ಮರಳಿಸಿದರೆ ಮುಂದೆ ರಚಿಸಲ್ಪಡುವ “ಗಂಜಿ ಗಿರಾಕಿಗಳ ಉದ್ಧಾರ ಸಮಿತಿ”ಗೆ ನಿಮ್ಮನ್ನೇ ಅಧ್ಯಕ್ಷರಾಗಿಸಲಾಗುವುದು ಮತ್ತು ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡಲಾಗುವುದು ಎಂದು ಪುಸಲಾಯಿಸಿದ್ದಾನೆ.ಪ್ರಮುಖ ಪಕ್ಷವೊಂದರ ಹಿರಿಯ ನಾಯಕನೆಂದು ಹೇಳಿಕೊಂಡಿದ್ದ ಆತನ ಮಾತು ಕೇಳಿ 5 ಪರ್ಸೆಂಟ್ ಬಡ್ಡಿಗೆ ಹಣ ತಂದು ತಮ್ಮ ಬ್ಯಾಂಕ್ ಖಾತೆಗೆ ತುಂಬಿ ಚೆಕ್ ನ ಜೊತೆಗೆ ಪ್ರಶಸ್ತಿಯನ್ನೂ ತೆಗೆದುಕೊಂಡು ಹೋಗಿ ಅಕಾಡೆಮಿಗೆ ಮರಳಿಸಿ ಇಂದಿಗೆ ಹದಿನೈದು ದಿನವಾಯಿತು.ಇದುವರೆಗೂ ಆತನ ಕಡೆಯಿಂದ ಯಾವುದೇ ಸುದ್ದಿಯೂ ಇಲ್ಲ! ಆ ನಾಯಕನ ಮಾತು ಕೇಳಿ ಸಾಲ ಮಾಡಿ ಪ್ರಶಸ್ತಿ ಮರಳಿಸಿದ ಸಾಹಿತಿ ಈಗ,ಅತ್ತ ಹುದ್ದೆಯೂ ಇಲ್ಲ,ಇತ್ತ ಪ್ರಶಸ್ತಿ ಮತ್ತು ಹಣವೂ ಇಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ!!
ಘಟನೆ ಎರಡು:
ಅವರೊಬ್ಬ ಕನ್ನಡದ ಪ್ರಸಿದ್ಧ ಚಿಂತಕ,ಸಂಶೋಧಕ ಹಾಗೂ ಬುದ್ದಿಜೀವಿ.ಅವರಿಗೂ ಸಹಾ ಎಡಪಂಥೀಯ ಸಾಹಿತ್ಯದಲ್ಲಿನ ಅವರ ಸಾಧನೆಗಾಗಿ ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯೊಂದು ಹತ್ತು ಲಕ್ಷದ ನಗದಿನೊಂದಿಗೆ ದೊರಕಿತ್ತು! ತಿಂಗಳ ಹಿಂದೆ ಅವರ ಮನೆಯ ಸ್ಥಿರ ದೂರವಾಣಿಗೆ ಪದೇ ಪದೇ ಕರೆ ಮಾಡಿದ ದೆಹಲಿ ಮೂಲದ ಪಕ್ಷವೊಂದರ ನಾಯಕರೊಬ್ಬರು,ಉತ್ತರ ಭಾರತದ ರಾಜ್ಯವೊಂದರಲ್ಲಿ ಇತ್ತೀಚಿಗೆ ನಡೆದ ಘಟನೆಯಂಥಾ ಘಟನೆಗಳು ಸ್ವಾತಂತ್ರೋತ್ತರ ಭಾರತದಲ್ಲಿ ಎಂದೂ ನಡೆದಿಲ್ಲ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಸಲುವಾಗಿ ನಿಮ್ಮ ಪ್ರಶಸ್ತಿಯನ್ನು ಸರಕಾರಕ್ಕೆ ಮರಳಿಸಿ ಎಂದು ದುಂಬಾಲು ಬಿದ್ದಿದ್ದರು.ತಾವು ಹಾಗೆ ಮಾಡಿದಲ್ಲಿ ಹದಿನೈದು ದಿನಗಳ ಒಳಗಾಗಿ ನಿಮ್ಮ ಖಾತೆಗೆ ಒಂದು ಕೋಟಿ ರೂಗಳನ್ನು ಹಾಕುವುದಾಗಿಯೂ ಅವರು ಭರವಸೆ ನೀಡಿದ್ದರು.ಅವರ ಮಾತಿನಂತೇ ಆ ಸಾಹಿತಿ ಪ್ರಶಸ್ತಿ ಮರಳಿಸಿ ಇಂದಿಗೆ ಒಂದು ತಿಂಗಳ ಮೇಲಾಯಿತು.ದೆಹಲಿಗೆ ಕರೆ ಮಾಡಿ ವಿಚಾರಿಸಿದರೆ,ತಾವು ಹೇಳಿದ ಹೆಸರಿನ ಯಾವ ವ್ಯಕ್ತಿಯೂ ನಮ್ಮ ಪಕ್ಷದಲ್ಲಿಲ್ಲ ಎಂಬ ಉತ್ತರ ದೊರೆತಿದೆ.ಇತ್ತ ಈ ಸಾಹಿತಿ ತನ್ನ ಹತ್ತು ಲಕ್ಷ ಹಣದ ಜೊತೆಗೆ ಪ್ರಶಸ್ತಿ ಸ್ಮರಣಿಕೆಯನ್ನೂ ಕಳೆದುಕೊಂಡು ಆ ನೋವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲೂ ಆಗದೇ ಒಳಗೊಳಗೆ ರೋದನೆ ಅನುಭವಿಸುತ್ತಿದ್ದಾರೆ!
ಅಷ್ಟಕ್ಕೂ ‘ಪ್ರಶಸ್ತಿ ವಾಪಸ್’ ಎಂಬ ಮೋಸದ ವ್ಯವಹಾರ ಇಲ್ಲಿಗೇ ನಿಂತಿಲ್ಲ! ತಮಗೆ ನೇರವಾಗಿ ಯಾವುದೇ ಭರವಸೆಯನ್ನು ಯಾರೂ ನೀಡಿರದಿದ್ದರೂ ಒಂದಕ್ಕೆ ಹತ್ತು ಪಟ್ಟು ದಕ್ಕಿಯೇ ದಕ್ಕುತ್ತದೆ ಎಂದು ನಂಬಿ ಇನ್ನೂ ಹಲವಾರು ಮರಿ,ಕಿರಿ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಸಮೂಹ ಸನ್ನಿಗೊಳಗಾದವರಂತೆ ಮರಳಿಸಿ ಬಂದಿದ್ದಾರೆ. ಒಂದು ಮೂಲದ ಪ್ರಕಾರ ಪ್ರಶಸ್ತಿ ಮರಳಿಸಿದ ಪ್ರತಿಯೊಬ್ಬರಿಗೂ ಹತ್ತು ಲಕ್ಷದಿಂದ ಒಂದು ಕೋಟಿಯವರೆಗೂ ನೀಡುವುದಾಗಿ ಹೇಳಲಾಗಿತ್ತೆನ್ನುವ ವದಂತಿ ಹರಿದಾದುತ್ತಿದ್ದರೂ,ಈ ಬಗ್ಗೆ ಮೋಸ ಹೋದ ಸಾಹಿತಿಗಳ್ಯಾರೂ ಇದುವರೆಗೆ ಸ್ಪಷ್ಟವಾಗಿ ಬಾಯಿ ಬಿಟ್ಟಿಲ್ಲ!
ಇನ್ನು ಪ್ರಕರಣದ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಪಕ್ಷವೊಂದರ ಖಜಾಂಚಿ ಶಾಂತೀಲಾಲ್ ಕ್ರೂರಾ;ಸದ್ಯಕ್ಕೆ ನಮ್ಮ ಪಕ್ಷ ಆರ್ಥಿಕವಾಗಿ ದಿವಾಳಿಯ ಅಂಚನ್ನು ತಲುಪಿದ್ದು,ನಾವೇ ನಮ್ಮ ಪಕ್ಷದ ಉಳಿವಿಗಾಗಿ ಪ್ರತಿಯೊಬ್ಬ ಕಾರ್ಯಕರ್ತನಿಂದ 500 ರೂಗಳನ್ನು ಸಂಗ್ರಹಿಸುವ ಹಂತಕ್ಕೆ ಬಂದು ನಿಂತಿದ್ದೇವೆ.ಇಂತಹಾ ಸಂದರ್ಭದಲ್ಲಿ ನಮ್ಮ ಪಕ್ಷ ಸಾಹಿತಿಗಳಿಗೆ ಲಕ್ಷ ಲಕ್ಷ ಹಣದ ಆಮಿಷವೊಡ್ಡಲು ಸಾಧ್ಯವೇ ಎಂದು ಮರುಪ್ರಶ್ನಿಸಿದರು. ಆದ್ದರಿಂದ ನಮ್ಮ ಪಕ್ಷಕ್ಕೂ,ಈ ಪ್ರಶಸ್ತಿ ವಾಪಸ್ ಪ್ರಹಸನಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈ ಮಧ್ಯೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಮರಳಿಸಿದ ಸಾಹಿತಿಗಳ ನಿಯೋಗವೊಂದು ಇಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆಯನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದೆ.ಪ್ರಶಸ್ತಿ ಫಲಕ ಹೋದರೆ ಹೋಗಲಿ,ಕನಿಷ್ಠ ನಾವು ಮರಳಿಸಿದ ಹಣ ಅಥವಾ ಚೆಕ್ಕನ್ನಾದರೂ ನಮಗೆ ಮರಳಿಸಿ ಎಂದು ನಿಯೋಗ ಸಚಿವರನ್ನು ಆಗ್ರಹಿಸಿತು.ಇದಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ ಸಚಿವೆ,ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಅದನ್ನು ಅಕಾಡೆಮಿಗೆ ನೀಡಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ.ಆದರೆ ಖಾಸಗಿ ಮೀಟರ್ ಬಡ್ಡಿಯವರಿಂದ ತಾವುಗಳು ಸಾಲ ತಂದು ಅದನ್ನು ಅಕಾಡೆಮಿಗೆ ಮರಳಿಸಿದ್ದರೆ ಕನಿಷ್ಠ ಆ ಸಾಲದ ಮೇಲಿನ ಬಡ್ಡಿಯನ್ನಾದರೂ ಸರ್ಕಾರ ತುಂಬಿಕೊಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆದರೆ ಇದನ್ನೆಲ್ಲಾ ಮೊದಲೇ ಅರಿತಿದ್ದ ಕೆಲ ಹಿರಿಯ ಬುದ್ದಿವಂತ ಸಾಹಿತಿಗಳು ಮಾತ್ರ ತಮಗಿರುವ ರಾಜಕೀಯ ಸಂಪರ್ಕವನ್ನು ಬಳಸಿಕೊಂಡು ತಾವು ಕೊಟ್ಟ ಚೆಕ್ ಅನ್ನು ವಾಪಸ್ ಪಡೆಯುವಲ್ಲಿ,ಮತ್ತೆ ಕೆಲವರು ಚೆಕ್ ಪಾಸ್ ಆಗದಂತೆ ತಡೆ ಹಿಡಿಯುವಲ್ಲಿಯೂ ಯಶಸ್ವಿಯಾಗಿದ್ದಾರೆ ಎನ್ನುವ ಸುದ್ದಿಯೂ ಕೇಳಿ ಬರುತ್ತಿದೆ! ಅಲ್ಲದೇ ತಮಗೆ ನೀಡಲ್ಪಟ್ಟ ದೊಡ್ಡ ಮೊತ್ತದ ಪ್ರಶಸ್ತಿಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಚಿಕ್ಕ ಮೊತ್ತದ ಪ್ರಶಸ್ತಿಗಳನ್ನು ಪ್ರಚಾರಕ್ಕಾಗಿ ಮರಳಿಸಿದ ಸಾಹಿತಿಗಳ ಬಗ್ಗೆಯೂ ಜನ ಮಾತಾಡಿಕೊಳ್ಳುತ್ತಿದ್ದಾರೆ.ಇದೆಲ್ಲದರ ನಡುವೆ ನಿನ್ನೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಾಲಯದ ಮುಂಬಾಗದಲ್ಲಿ ಹಲವು ಸಾಹಿತಿಗಳು ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ತಾವು ಮರಳಿಸಿದ ಪ್ರಶಸ್ತಿಯನ್ನು ತಮಗೇ ಮರಳಿಸಬೇಕೆಂದು ಪ್ರತಿಭಟಿಸಿದ್ದು,ಅವರು ಅದಕ್ಕಾಗಿ ಅಕಾಡೆಮಿಗೆ ಒಂದು ವಾರದ ಗಡುವನ್ನೂ ನೀಡಿದ್ದಾರೆ!
ಒಟ್ಟಿನಲ್ಲಿ ಕೆಲ ಸಾಹಿತಿಗಳ ಸದ್ಯದ ಪರಿಸ್ಥಿತಿ,ಹೊಸಾ ಅಂಗಿ ಬರುತ್ತದೆ ಎಂದು ಹಳೇ ಅಂಗಿಯನ್ನೂ ಹರಿದುಕೊಂಡು ನಿಂತಂತಾಗಿರುವುದಂತೂ ಸುಳ್ಳಲ್ಲ!
*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಇತ್ತೀಚಿಗೆ ಯಾವಾಗಲೂ ನಡೆಯದಿರುವ ಘಟನೆಗಳು ಈಗ ಮಾತ್ರ ನಡೆಯುತ್ತಿವೆಯೇನೋ ಎನ್ನುವ ರೀತಿಯಲ್ಲಿ ನಾಟಕೀಯವಾಗಿ ತಾವು ಪಡೆದುಕೊಂಡಿದ್ದ ಪ್ರಶಸ್ತಿಗಳನ್ನು ಮರಳಿಸುತ್ತಿರುವ ಸಾಹಿತಿಗಳನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.