ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 29, 2015

4

ಫತ್ವಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಎ.ಆರ್ ರೆಹಮಾನ್ಮಾಜಿದ್ ಮಾಜಿದಿ, ಇರಾನಿನ ಬಹುಪ್ರಸಿದ್ಧ ಚಿತ್ರ ನಿರ್ದೇಶಕ. ಕಲರ್ಸ್ ಆಫ್ ಪ್ಯಾರಡೈಸ್, ಚಿಲ್ಡ್ರನ್ ಆಫ್ ಹೆವನ್-ನಂತಹ ಕಲಾತ್ಮಕ ಚಿತ್ರಗಳ ಮೂಲಕ ಜಗತ್ತಿನೆಲ್ಲ ಚಿತ್ರರಸಿಕರ ಮನಗೆದ್ದ ಹೃದಯವಂತ ಕುಸುರಿ ಕೆಲಸಗಾರ. ಇರಾನಿನ ನೂರಾರು ಕಾನೂನು ಕಟ್ಟಳೆಗಳನ್ನು ಒಪ್ಪಿಕೊಂಡು, ತನ್ನ ತಲೆ ಉಳಿಸಿಕೊಳ್ಳುವ ಸಲುವಾಗಿ ಮಕ್ಕಳ ಚಿತ್ರಗಳ ಮೂಲಕ ಅಲ್ಲಿನ ಕ್ರೌರ್ಯದ ಮುಖಗಳನ್ನು ತಣ್ಣಗೆ ನಮ್ಮೆದುರು ಹಿಡಿದು ದಿಗಿಲುಗೊಳಿಸುವ ಮಾಜಿದಿ ಏಳು ವರ್ಷಗಳ ತಪಸ್ಸಿನ ನಂತರ ಒಂದು ಚಿತ್ರ ಮಾಡಿದ. ಅದರ ಹೆಸರು ಮುಹಮ್ಮದ್: ದ ಗಾಡ್ಸ್ ಮೆಸೆಂಜರ್ (ದೇವರ ದೂತ) – ಎಂದು. ಇಂಥದೊಂದು ಚಿತ್ರ ಮಾಡಿದರೆ ಅರಬ್ ಜಗತ್ತಿನಲ್ಲಿ ಏನೇನು ಪ್ರಳಯಗಳಾಗುತ್ತವೆ ಎನ್ನುವುದು ಆ ಜಗತ್ತನ್ನು ಸೂಕ್ಷ್ಮವಾಗಿ ನೋಡಿದವರಿಗೆ ಗೊತ್ತಿರುತ್ತದೆ. ಹಾಗೆಯೇ ಆಗಿದೆ. ಮುಂಬೈಯ ರಾಝಾ ಅಕಾಡೆಮಿ ಎಂಬ ಸುನ್ನಿ ಸಂಸ್ಥೆ ನಿರ್ದೇಶಕ ಮಾಜಿದಿ ಮತ್ತು ಚಿತ್ರಕ್ಕೆ ಸಂಗೀತ ಕೊಟ್ಟ ಎ.ಆರ್.ರೆಹಮಾನ್ ಇಬ್ಬರ ಮೇಲೂ ಫತ್ವಾ ಜಾರಿಗೊಳಿಸಿದೆ. “ನಮಗೆ ಈ ಚಿತ್ರದ ಶೀರ್ಷಿಕೆಯ ಮೇಲೆಯೇ ತಕರಾರಿದೆ. ಇದನ್ನು ನಾಳೆ ಪ್ರವಾದಿ ಮುಹಮ್ಮದರನ್ನು ವಿರೋಧಿಸುವ ಯಾರು ಬೇಕಾದರೂ ದುರುಪಯೋಗ ಪಡಿಸಿಕೊಳ್ಳಬಹುದು. ಅಲ್ಲದೆ, ಈ ಚಿತ್ರದಲ್ಲಿ ನಟಿಸಿದವರು ತಮ್ಮ ಕೆಲಸಕ್ಕೆ ಸಂಭಾವನೆ ಪಡೆದಿದ್ದಾರೆ. ಮುಹಮ್ಮದರ ಪಾತ್ರ ಮಾಡಿದವರು ನಿಜ ಜೀವನದಲ್ಲಿ ಬೇರೆಯದೇ ರೀತಿಯಲ್ಲಿ ಬದುಕುತ್ತಿರಬಹುದು. ಹಾಗಿರುವಾಗ ಅವರು ಪ್ರವಾದಿಯ ಪಾತ್ರ ಮಾಡುವುದನ್ನು ಒಪ್ಪುವುದು ಹೇಗೆ? ನಾವು ಮುಸ್ಲಿಮರು ಇದನ್ನೆಲ್ಲ ಸಹಿಸಿಕೊಳ್ಳುವುದು ಹೇಗೆ?” ಎಂಬುದು ಅದರ ಸಮಸ್ಯೆ.

ಫತ್ವಾ ಎಂಬ ಪದವನ್ನು ಇತ್ತೀಚೆಗೆ ಮತ್ತೆಮತ್ತೆ ಕೇಳುತ್ತಿದ್ದೇವೆ. ಹಲವು ವರ್ಷಗಳ ಹಿಂದೆ ಅರಬ್ ಟೆಲಿವಿಶನ್ ನೆಟ್ವರ್ಕ್‍ನಲ್ಲಿ ಮಿಕ್ಕಿಮೌಸ್ ಮತ್ತು ಪೋಕೆಮಾನ್ ಕಾರ್ಟೂನ್ ಪಾತ್ರಗಳ ಮೇಲೆ ಫತ್ವಾ ಹಾಕಲಾಗಿತ್ತು (ಮಿಕ್ಕಿ, ಸೈತಾನನ ಸೈನಿಕ ಎನ್ನುವುದು ಅವರು ಕೊಟ್ಟ ಕಾರಣ!). ಹೆಂಗಸರು ತಮ್ಮ ಗಂಡಂದಿರ ಜೊತೆ ಐಕ್ಯವಾಗಬೇಕೆಂದು ಬಯಸುವುದರಿಂದ, ಹಸಿದ ಗಂಡಸರು ತಮ್ಮ ಹೆಂಡತಿಯರನ್ನು ತಿನ್ನಬಹುದು ಎಂದು ಸೌದಿ ಅರೇಬಿಯದ ಅಬ್ದುಲ್ ಅಝೀಜ್ ಬಿನ್ ಅಬ್ದುಲ್ಲ ಎಂಬವನು ಫತ್ವಾ ಹೊರಡಿಸಿದ್ದ. ಖುರಾನ್‍ನಲ್ಲಿ ಪರಿಹಾರ ಸಿಗದ ಪ್ರಶ್ನೆಗಳಿಗೆ ಫತ್ವಾ ಮೂಲಕ ಮಂಗಳ ಹಾಡಬಹುದು ಎನ್ನುವ ಮಾತಿದೆ. ಖುರಾನ್ ಬರೆದಿಟ್ಟದ್ದು ಆ ಕಾಲದ ಜೀವನಕ್ರಮಕ್ಕೆ ತಕ್ಕಂತಹ ನೀತಿ-ಕಟ್ಟಳೆಗಳನ್ನು ರೂಪಿಸಿದ ಸಂದರ್ಭದಲ್ಲಿ. ಇಂದು ನಾವು ಎದುರಿಸುತ್ತಿರುವ ಹಲವು ಹೊಸ ಸವಾಲುಗಳಿಗೆ ಖುರಾನಲ್ಲಿ ಉತ್ತರ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಧಾರ್ಮಿಕ ನಾಯಕರಿಗೆ ಫತ್ವಾ ಹೊರಡಿಸುವ ಅಧಿಕಾರ ಕೊಡಲಾಗಿದೆ. ಇಸ್ಲಾಮ್ ನ್ಯಾಯಕಟ್ಟಳೆಗಳು (ಇವನ್ನು ಫಿಖ್ ಎನ್ನುತ್ತಾರೆ) ಗೊಂದಲಮಯವಾಗಿದ್ದಾಗ ಧರ್ಮರಕ್ಷಕನೊಬ್ಬ ಮುಂದೆಬಂದು ಫತ್ವಾ ಹೊರಡಿಸಿ ಸಮಸ್ಯೆಯನ್ನು ಇತ್ಯರ್ಥ ಮಾಡಬಹುದು ಎಂದು ಹೇಳಲಾಗಿದೆ. ಹಾಗಾಗಿ ಫತ್ವಾಗಳನ್ನು ಈ ಕಾಲದ ಹೈಕೋರ್ಟ್, ಸುಪ್ರೀಂ ಕೋರ್ಟ್‍ಗಳ ನ್ಯಾಯತೀರ್ಮಾನಕ್ಕೆ ಹೋಲಿಸಬಹುದು. ಫತ್ವಾ ಹೊರಡಿಸುವವರನ್ನು ಆಲಿಮ್ ಉಲಾಮರು ಎಂದು ಕರೆಯುತ್ತಾರೆ. ಇವರು ಖುರಾನ್‍ನಲ್ಲಿ ಪಾರಂಗತರಾಗಿರಬೇಕು; ಫತ್ವಾ ಕೊಡುವುದಕ್ಕೆಂದೇ ಇರುವ ಫತಾವಾ ಎಂಬ ಶಿಕ್ಷಣ ಪಡೆದಿರಬೇಕು; ಮಾತ್ರವಲ್ಲ ಸ್ವಲ್ಪಕಾಲ ನುರಿತ ಉಲಾಮರ ಕೈಕೆಳಗೆ ದುಡಿದಿರಬೇಕು; ಹತ್ತುಹಲವು ನ್ಯಾಯತೀರ್ಮಾನಗಳನ್ನು ಹತ್ತಿರದಿಂದ ನೋಡಿರಬೇಕು; ಹದಿತ್ ಎಂಬ ಪ್ರವಾದಿಗಳ ಸಂದೇಶಗಳನ್ನು ಆಳವಾಗಿ ತಿಳಿದುಕೊಂಡಿರಬೇಕು; ಅರೇಬಿಕ್ ಭಾಷೆ, ಅದರ ವ್ಯಾಕರಣ, ಖುರಾನ್ ರಚನೆಯಾದ ಕಾಲದ ಹಳೆ ಅರೇಬಿಕ್ ಭಾಷೆ, ಮತ್ತು ಆ ಕಾಲದ ಅರೇಬಿಕ್ ಕಾವ್ಯ – ಇವಿಷ್ಟರಲ್ಲೂ ಪ್ರವೀಣರಾಗಿರಬೇಕು. ಈ ನಿಯಮಗಳಲ್ಲಿ ಯಾವೊಂದರಲ್ಲಿ ಊನವದ್ದರೂ ಅಂಥವರನ್ನು ಉಲಾಮರೆಂದು ಕರೆಯುವುದಾಗಲೀ ಅವರ ಫತ್ವಾಗಳನ್ನು ಮಾನ್ಯ ಮಾಡುವುದಾಗಲೀ ಮಾಡಬಾರದು ಎಂಬ ನಿಯಮ ಇದೆ. ಇಸ್ಲಾಂನಲ್ಲಿ ಯಾವುದು ಸ್ವೀಕಾರಾರ್ಹವೋ ಅದನ್ನು ಹಲಾಲ್ ಎಂದೂ ಯಾವುದು ನಿಷಿದ್ಧವೋ ಅದನ್ನು ಹರಾಮ್ ಎಂದೂ ಕರೆಯುತ್ತಾರೆ. ಈ ಎರಡೂ ಸಂಗತಿಗಳು ಯಾವುವು ಎನ್ನುವುದನ್ನು ಉಲಾಮ ತಿಳಿದಿರಬೇಕಾಗುತ್ತದೆ.

ಫತ್ವಾ ಎಂದರೆ ಈಗಿನ ಅನೇಕರು ಕೊಲೆ ಮಾಡಲು ಹೊರಡಿಸಿದ ಫರ್ಮಾನು ಎಂದು ತಿಳಿದಿದ್ದಾರೆ. ಇದಕ್ಕೆ ಭಾಗಶಃ ಮುಸ್ಲಿಮರೇ ಕಾರಣ. ಸಲ್ಮಾನ್ ರಷ್ದಿ “ಸೆಟಾನಿಕ್ ವರ್ಸಸ್” ಬರೆದಾಗ ರಷ್ದಿ ಮೇಲೆ ಫತ್ವಾ ಹೊರಡಿಸಲಾಯಿತು. ಆತನನ್ನು ಕೊಲ್ಲಲೇಬೇಕೆಂದು ಇಸ್ಲಾಂ ಮೂಲಭೂತವಾದಿಗಳು ಎದ್ದುನಿಂತಾಗ ಕೊನೆಗೆ ಇಂಗ್ಲೆಂಡ್ ಆತನ ಜೀವರಕ್ಷಣೆಗೆ ನಿಲ್ಲಬೇಕಾಯಿತು. ಬಾಂಗ್ಲಾದೇಶದ ತಸ್ಲೀಮಾ ನಸ್ರೀನ್ ಮೇಲೂ ಫತ್ವಾ ಹೊರಡಿಸಲಾಗಿದೆ. ಆಕೆ ಹಲವು ವರ್ಷಗಳಿಂದ ಜೀವಬೆದರಿಕೆಯನ್ನು ನೆರಳಿನಂತೆ ಬೆನ್ನಮೇಲೆ ಹೊತ್ತು ಭಾರತದಲ್ಲಿ ದಿನಗಳೆಯುತ್ತಿದ್ದಾಳೆ. ಯಾರ ಮೇಲೆ ಫತ್ವಾ ಬಿದ್ದಿದೆಯೋ ಅವರು ಇಸ್ಲಾಂ ಮತಕ್ಕೆ ವಿರುದ್ಧವಾದ ಕೆಲಸ ಮಾಡಿದ್ದಾರೆ; ಹಾಗಾಗಿ ಅವರನ್ನು ಪರಿಹರಿಸಿದರೆ ದೇವರು ಸಂತುಷ್ಟನಾಗುತ್ತಾನೆ ಎಂದು ಮೂಲಭೂತವಾದಿ ಕೊಲೆಗಡುಕರು ತಿಳಿದಿರುವುದರಿಂದ ಈ ಗೊಂದಲ ಸೃಷ್ಟಿಯಾಗಿದೆ. ರೆಹಮಾನ್ ಮೇಲೂ ಫತ್ವಾದ ಒಜ್ಜೆ ಬಿದ್ದಾಗ ನಮ್ಮಲ್ಲಿ ಬಹುತೇಕರು ಕನಲಿಹೋದರು. ಮುಸ್ಲಿಂ ಓಲೈಕೆಯಲ್ಲಿ ತಮ್ಮ ಗಂಜಿ ಕಂಡುಕೊಳ್ಳುವ ಬುದ್ಧಿಜೀವಿಗಳಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ! ರೆಹಮಾನ್ ಅಭಿಮಾನಿಗಳಿಗಂತೂ ತಮ್ಮ ಆರಾಧ್ಯದೇವರ ಕೊಲೆ ಆಗಿಯೇಹೋಯಿತೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಲವತ್ತುಕೊಂಡರು. ಒಟ್ಟಲ್ಲಿ, ಕೆಲವೇ ಕೆಲವು ಮಹತ್ವದ ಸಂದರ್ಭಗಳಲ್ಲಿ ಮಾತ್ರ ಸರಿಯಾಗಿ ತರ್ಕಬದ್ಧವಾಗಿ ಬಳಕೆಯಾಗಬೇಕಿದ್ದ ಫತ್ವಾವನ್ನು ಉಲಾಮರು ಬೇಕಾಬಿಟ್ಟಿ ಬಳಸತೊಡಗಿರುವುದರಿಂದ ಅದು ಸಿದ್ಧರಾಮಯ್ಯ ಸರಕಾರದ ಭಾಗ್ಯ ಯೋಜನೆಯಂತಾಗಿದೆ.

ಫತ್ವಾದ ವಿಚಾರ ಬಿಟ್ಟು ಇಸ್ಲಾಂ ಮತದ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸೋಣ. ಇಸ್ಲಾಂನಲ್ಲಿ ಕೆಲವೊಂದು ವಿಷಯಗಳನ್ನು ಪ್ರಶ್ನೆ ಮಾಡುವಂತಿಲ್ಲ. ಉದಾಹರಣೆಗೆ, ಪ್ರವಾದಿ ಪೈಗಂಬರರ ಚಿತ್ರ ಬರೆಯುವಂತಿಲ್ಲ; ಅವರಿಗೆ ಯಾವ ಸಂಕೇತವನ್ನೂ ಬಳಸುವಂತಿಲ್ಲ; ದೇವರಿಗೆ ಆಕಾರ, ರೂಪ ಕೊಡುವಂತಿಲ್ಲ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇವಾವುದನ್ನೂ “ಏಕೆ” ಎಂದು ಪ್ರಶ್ನಿಸುವಂತಿಲ್ಲ! ಪ್ರವಾದಿಯ ಬಗ್ಗೆ ಯಾವುದೇ ಕತೆ-ಕಾದಂಬರಿ ಬರೆಯುವಂತಿಲ್ಲ; ಸಿನೆಮ ತೆಗೆಯುವಂತಿಲ್ಲ. ಮುಹಮ್ಮದರ ಹೆಸರನ್ನು ಬರೆಯುವಾಗ ಕೂಡ ಸ್ವಲ್ಲಲ್ಲಾಹು ಅಲೈಹವ ಸ್ವಲ್ಲಮ್ ಎಂಬ ನುಡಿನಮನ ಸಲ್ಲಿಸಬೇಕು; ಒಮ್ಮೆಯಲ್ಲ ಪ್ರತಿಬಾರಿಯೂ! ಖುರಾನ್ ಅರೇಬಿಕ್ ಭಾಷೆ ಬಿಟ್ಟು ಬೇರಾವುದರಲ್ಲೂ ಬರಬಾರದು ಎಂದು ಧಾರ್ಮಿಕ ಮುಖಂಡರು ನೂರಾರು ವರ್ಷ ಪಟ್ಟುಹಿಡಿದಿದ್ದರು. ನಂಬುತ್ತೀರೋ ಬಿಡುತ್ತೀರೋ ಖುರಾನ್‍ನ ಮೊತ್ತಮೊದಲ ಕನ್ನಡ ಅವತರಣಿಕೆ ಬಂದದ್ದು 1978ರಲ್ಲಿ! ಅಲ್ಲಿಯೂ ಕೂಡ ಮೂಲಕ್ಕೆ ಅನುವಾದಕರು ಎಷ್ಟೊಂದು ನಿಷ್ಟರಾಗಿದ್ದಾರೆಂದರೆ ಎಷ್ಟೋ ಶ್ಲೋಕಗಳ ಅರ್ಥವೇ ತಿಳಿಯುವುದಿಲ್ಲ. ಮಾತು ಗೊಂದಲಮಯವಾಗಿದೆ. ಮತ್ತು ಇಂಥ ಗೊಂದಲಗಳೇ ಮೂಲಭೂತವಾದಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಗತ್ಯ ನೀರು-ಬೆಂಕಿಗಳಾಗಿ ಒದಗಿಬಂದಿವೆ.

ಅತ್ತ ಮಾಜಿದಿ ಪೈಗಂಬರ್ ಜೀವನದ ಮೇಲೆ ಸಿನೆಮ ಮಾಡಿದರೆ ಇಲ್ಲಿ ನಮ್ಮವರೇ ಆದ ಬೋಳುವಾರು ಮಹಮ್ಮದ್ ಕುಂಞ ತನ್ನ ಮತದ ಪ್ರವಾದಿಯ ಕುರಿತು 250 ಪುಟಗಳ ಒಂದು ಐತಿಹಾಸಿಕ ಕಾದಂಬರಿ “ಓದಿರಿ” ಬರೆದಿದ್ದಾರೆ.ಅವರ ಉದ್ಧೇಶ ಸ್ಪಷ್ಟ. ಕೃಷ್ಣನ ಪ್ರೇಯಸಿ, ರಾಮನ ಅಪ್ಪ, ಹನುಮಂತ ಹೊತ್ತುಹಾರಿದ ಪರ್ವತದಲ್ಲಿದ್ದ ಗಿಡದ ಹೆಸರು, ಯೇಸು ಹುಟ್ಟಿದ ಜಾಗ – ಮುಂತಾದ ಎಲ್ಲ ಸಂಗತಿಗಳ ಬಗ್ಗೆಯೂ ಸಂಶಯವಿಲ್ಲದೆ ಮಾತಾಡಬಲ್ಲ ನಮಗೆ ಪೈಗಂಬರ್ ಬಗ್ಗೆ ಗೊತ್ತಿರುವುದು ದೊಡ್ಡಸೊನ್ನೆಯಷ್ಟೇ. ಅವರ ಜೀವನ, ನಮ್ಮೆಲ್ಲ ಮುಸ್ಲಿಂ ಗೆಳೆಯರ ಖಾಸಗಿ ಬದುಕಿನಂತೆ ನಮಗೆ ಅಪರಿಚಿತವಾಗಿಯೇ ಉಳಿದುಬಿಟ್ಟಿದೆ. ಇಂದಿಗೂ ಮುಸ್ಲಿಂ ಜನಾಂಗ ಎಂದೊಡನೆ ನಮಗೆ ಅವೇ ಬಾಂಬು, ಭಯೋತ್ಪಾದಕರು, ನಾಲ್ಕು ಜನ ಹೆಂಡಿರು, ಮನೆತುಂಬ ಮಕ್ಕಳು, ಹಬ್ಬಕ್ಕೆ ಕಡಿಯುವ ಕುರಿ ಇಂಥಾ ಚಿತ್ರಗಳೇ ಕಣ್ಣಮುಂದೆ ಹಾಯುತ್ತವೆ. ಇದೊಂದು ನಿಗೂಢ ಪ್ರಪಂಚವಾಗಿ ನಮ್ಮೆದುರು ನಿಂತಿದೆ. ಇಸ್ಲಾಂ ಮತದ ಉಸಿರುಗಟ್ಟಿಸುವಂಥ ಕಾನೂನುಕಟ್ಟಳೆಗಳಿಂದಾಗಿ ಅವರ ಪ್ರವಾದಿ ಹೊರಜಗತ್ತಿಗೆ ಅಜ್ಞಾತವ್ಯಕ್ತಿಯಾಗಿದ್ದಾರೆ. ಇದನ್ನು ಸರಿಪಡಿಸುವವವರು ಯಾರು? ಇಸ್ಲಾಂ ಜಗತ್ತಿನ ಬಗ್ಗೆ ಹೊರಜಗತ್ತಿನ ಅನ್ಯಧರ್ಮೀಯರಿಗೆ ಯಾವ ಬಗೆಯ ಅಸಹನೆ ಮತ್ತು ಅಜ್ಞಾನವಿದೆಯೋ ಅಂಥಾದ್ದೇ ಒಂದು ತಳಮಳ, ಸಿಟ್ಟು ಅದರೊಳಗೆ ನಿತ್ಯ ಬೇಯುತ್ತ, ಅಪರಾಧಿಗಳಂತೆ ಬಿಂಬಿತರಾಗುತ್ತ ನರಳುವವರಲ್ಲೂ ಇದೆ. “ಈ ಕಾದಂಬರಿ ಬರೆಯಬೇಕೆಂಬ ಒತ್ತಡವನ್ನು ಇನ್ನು ತಡೆಹಿಡಿಯುವುದು ನನ್ನಿಂದ ಸಾಧ್ಯವಿಲ್ಲ” ಎಂಬ ಜ್ವಾಲಾಮುಖಿಯಾಗಿ ಬೋಳುವಾರು ತನ್ನ ಮತದ ಪ್ರವಾದಿಯ ಕತೆ ಬರೆದಿದ್ದಾರೆ. ಅವರು ಕಾದಂಬರಿ ಬರೆಯುತ್ತಿದ್ದ ಸಂದರ್ಭದಲ್ಲಿ, “ಇದನ್ನು ಅದೃಷ್ಟ ಅನ್ನುತ್ತೀರೋ ದುರದೃಷ್ಟ ಅನ್ನುತ್ತೀರೋ, ಆದರೆ ನೀವು ಈಗ ಈ ಕತೆ ಬರೆಯದೆ ಹೋದರೆ ಮುಂದಿನ ನೂರು ವರ್ಷಗಳವರೆಗೆ ಬೇರಾರೂ ಕನ್ನಡದಲ್ಲಿ ಈ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎನ್ನುವ ನಿರಾಶಾಭಾವ ನನಗಿದೆ” ಎಂದು ನಾನು ಅವರಲ್ಲಿ ಹೇಳಿದ್ದೆ. ಇಸ್ಲಾಂ ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನ ಎಲ್ಲ ಧರ್ಮ, ಮತಗಳೂ ಇಂಥ ಕೆಟ್ಟ ಅಸಹನೆಯ ಹೊದಿಕೆ ಹೊದ್ದು ನರಳುತ್ತಿವೆ. ಇವರನ್ನೆಲ್ಲ ನಾವು “ಸಾಕೆ ಇಷ್ಟೊಂದಂಗಿ? ಅದರ ಮೇಲೂ ಶಾಲೆ? ನೀನೇನು ಕೋತಿಯೋ ಕರಡಿಯೋ ಮಹರಾಯ?” ಎಂದು ಕೇಳಬೇಕಾಗಿದೆ. ಮಾಜಿದ್ ಮಾಜಿದಿಗೂ ತನ್ನ ಬೆನ್ನಹಿಂದಿನ ಕೊಲೆಪಾತಕರ ಭಯ ಬಿಟ್ಟಿಲ್ಲ. ತಮಾಷೆ ಮತ್ತು ದುರಂತವೆಂದರೆ, ಪೈಗಂಬರ್ ಬಗ್ಗೆ, 40 ಮಿಲಿಯ ಡಾಲರುಗಳಷ್ಟು ದುಡ್ಡು ವ್ಯಯಿಸಿ ಮಾಡಿರುವ ಈ 171 ನಿಮಿಷಗಳ ಸಿನೆಮದಲ್ಲಿ ಪೈಗಂಬರ್ ಮುಖವನ್ನೇ ತೋರಿಸಿಲ್ಲ! ಪಾಪ, ನಾಯಕನ ಮುಖ ಮರೆಮಾಚಿ ಕತೆಹೇಳುವುದಕ್ಕೇ ನಿರ್ದೇಶಕ ತನ್ನ ಶ್ರಮದ ಮುಕ್ಕಾಲುಪಾಲು ವ್ಯಯಿಸಿದ್ದಾನೆ ಎನ್ನುವುದು ಸಿನೆಮ ನೋಡಿದವರಿಗೆ ಅರ್ಥವಾಗುತ್ತದೆ. ಒಬ್ಬನ ಜೀವನದ ಕತೆ ಹೇಳುತ್ತಲೇ, ಅದರ ಹಿಂದೆ ತನ್ನ ಜೀವಕ್ಕೆ ಇರುವ ಭಯವನ್ನು ಮಾಜಿದಿ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. ತನ್ನ ದೇವರ ಬಗ್ಗೆ ತಾನು ಇಷ್ಟೊಂದು ಭಯಪಡುತ್ತ ಸ್ತುತಿಸಬೇಕಿದೆ ಎಂಬ ಸ್ಥಿತಿ ಯಾವ ಮತ-ಧರ್ಮದ ಅನುಯಾಯಿಗೂ ಬರಬಾರದು.

ಇವೆಲ್ಲ ಹಿನ್ನೆಲೆಯಲ್ಲಿ ಬೋಳುವಾರು ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅವರು ಬರೆದಿರುವ “ಓದಿರಿ” ಕಾದಂಬರಿ ಈಗಾಗಲೇ ಲೋಕಾರ್ಪಣೆಯಾಗಿದೆ.ಅವರನ್ನು ಮೆಚ್ಚುವ ನನ್ನಂಥ ಹಿಂದೂಗಳು ಇಂದು ಆ ಕಾದಂಬರಿಯ ಬೆಂಬಲಕ್ಕೆ ನಿಂತರೆ ಬೋಳುವಾರರು ತನ್ನದೇ ಮತದೊಳಗಿನ ಕಟ್ಟಾಧರ್ಮೀಯರ ಹಗೆ ಕಟ್ಟಿಕೊಳ್ಳಬೇಕಾದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಪಾರ್ಟಿ ಡ್ಯಾನ್ಸ್ ಮಾಡುತ್ತಿರುವ ಗಣೇಶ, ಸೈನಿಕ ಬೆನಕ, ಶಿವಲಿಂಗವನ್ನು ಭುಜದ ಮೇಲೆ ಹೊತ್ತ ಬಾಹುಬಲಿ ಗಣಪ, ಕಾಲು ಮೇಲೆ ತಲೆ ಕೆಳಗಾಗಿ ನಿಂತ ಉಪ್ಪಿ-2 ವಕ್ರದಂತ ಇವರೆಲ್ಲರ ಬಣ್ಣಬಣ್ಣದ ಮೆರವಣಿಗೆನೋಡುತ್ತ ಮಾಜಿದಿ, ಬೋಳುವಾರು ಮುಂತಾದ ಪ್ರತಿಭಾವಂತ ಹೃದಯಶೀಲರ ದುರ್ಭರ ಸ್ಥಿತಿ ನೆನೆಯುತ್ತ ವಿಚಿತ್ರ ದುಃಖ ಅನುಭವಿಸುತ್ತಿದ್ದೇನೆ. ಹಿಂದೂ ದೇವತೆ ಸರಸ್ವತಿಯನ್ನು ನಗ್ನರೂಪಸಿಯಾಗಿ ಚಿತ್ರಿಸಿಯೂ ಈ ದೇಶದಲ್ಲಿ ಸುಖವಾಗಿ ಬಾಳಿ ಸಂಧ್ಯಾಕಾಲದಲ್ಲಿ ದುಬೈಯಲ್ಲಿ ಶೋಕಿಲಾಲನಾಗಿ ಜೀವನ ಕಳೆದ ಎಂ.ಎಫ್.ಹುಸೇನ್ ಒಂದೆಡೆ ಇದ್ದಾರೆ; ತನ್ನ ಜೀವನಚರಿತ್ರೆಯಲ್ಲಿ ತನ್ನ ಪತ್ನಿಯ ಒಂದೇ ಒಂದು ಸಾಲೂ ಎಲ್ಲೂ ಕಾಣಿಸಿಕೊಳ್ಳಬಾರದು ಎಂದು ಕಟ್ಟಪ್ಪಣೆ ಮಾಡುವಷ್ಟು ಕಟ್ಟಾಮುಸ್ಲಿಮನಾಗಿ ಮತಾಂತರನಾದರೂ ಪೈಗಂಬರ್ ಸಿನೆಮಕ್ಕೆ ಸಂಗೀತ ನೀಡಿದ ತಪ್ಪಿಗೆ ಫತ್ವಾ ಹೊತ್ತು ಕೂತಿರುವ ರೆಹಮಾನ್ ಇನ್ನೊಂದೆಡೆ ಇದ್ದಾನೆ. ಇವರಿಬ್ಬರ ಮಧ್ಯೆ ಒಂದೆಡೆ ಮೂಲಭೂತವಾದಿಗಳನ್ನೂ ಇನ್ನೊಂದೆಡೆ ಮಾಜಿದಿಯಂಥ ಅಸಹಾಯಕ ರೆಕ್ಕೆಸುಟ್ಟ ಚಿಟ್ಟೆಗಳನ್ನೂ ಹುಟ್ಟಿಸುತ್ತಿರುವ ಇಸ್ಲಾಂ ನನ್ನಂಥವರಿಗೆ ಮತ್ತಷ್ಟು ಒಗಟಾಗುತ್ತ ನಡೆದಿದೆ.

ಮೊನ್ನೆಮೊನ್ನೆಯಷ್ಟೆ ಸಿರಿಯದ ಗಲಾಟೆಯಲ್ಲಿ ಸಮುದ್ರದ ತೀರದಲ್ಲಿ ತಲೆಕೆಳಗಾಗಿ ಸತ್ತುಮಲಗಿದ್ದ ಮಗು ಇವಕ್ಕೆಲ್ಲ ರೂಪಕದಂತೆ ಕಾಣುತ್ತಿದೆ.

ಬೋಳುವಾರು ಅವರ ಕಾದಂಬರಿಯ ಕೊನೆಯ ಸಾಲುಗಳು ಬಹುಶಃ ನನ್ನ ಮಾತುಗಳಿಗೆ ನಾಲಿಗೆ ಕೊಡುತ್ತವೋ ಏನೋ.ಅವು ಹೀಗಿವೆ:
“ನಿಮ್ಮ ಕಪಟಯುದ್ಧಕ್ಕೆ ಸಣ್ಣ ಮಕ್ಕಳನ್ನು ಬಳಸದಿರಿ. ಹೆಣ್ಣುಮಗು ಎಂಬ ಕಾರಣಕ್ಕೆ ಮಕ್ಕಳನ್ನು ಜೀವಂತ ಹೂಳದಿರಿ. ಯಾರನ್ನೂ ಕೊಲ್ಲದಿರಿ. ಕೊಲ್ಲುವ ಅಧಿಕಾರವಿರುವುದು ಸೃಷ್ಟಿಸಿದವನಿಗೆ ಮಾತ್ರ” – ತನ್ನ ಮಾತುಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದವರತ್ತ, ಹೂವು ಅರಳುವಂತೆ ಮುಗುಳುನಗೆ ಚೆಲ್ಲಿದ ಮುಹಮ್ಮದರು ಕೊನೆಯ ಬಾರಿಗೆಂಬಂತೆ ಹೇಳಿದ್ದರು: “ನನ್ನ ಮರಣದ ಬಗ್ಗೆ ದುಖಿಸದಿರಿ. ಅದು ಹಾಗೆಯೇ ಆಗುತ್ತದೆ. ಮರಣದ ಬಳಿಕ ನನ್ನ ದೇಹವನ್ನು ಮಾತ್ರ ದಫನ ಮಾಡಿರಿ. ಆದರೆ ತಪ್ಪು ವ್ಯಾಖ್ಯಾನಗಳೊಂದಿಗೆ ನನ್ನ ಮಾತುಗಳನ್ನು ಹಾಗೆಯೇ ಮಾಡದಿರಿ.” ಎಲ್ಲರೂ ಆಯಿತು ಎಂದರು. ಮತ್ತು, ಅದು ಹಾಗೆಯೇ ಆಯಿತು.

Read more from ಲೇಖನಗಳು
4 ಟಿಪ್ಪಣಿಗಳು Post a comment
 1. WITIAN
  ಆಕ್ಟೋ 29 2015

  ಎಲ್ಲರಂತೆ ರೋಹಿತ್ ಚಕ್ರತೀರ್ಥರೂ ಮರಳುಗಾಡಿನ ಶಾಂತಿಯ ಮತದ ಪ್ರವಾದಿಗಳ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತಾ ಲೇಖನ ಮುಗಿಸಿದ್ದಾರೆ. ಎಲ್ಲ ಪುರುಷರಿಗೆ ನಾಲ್ಕು ಮದುವೆಗಳ ಅವಕಾಶ ನೀಡಿದ ಪ್ರವಾದಿಯವರು ತಾವು ಮಾತ್ರ ಹಲವು ಮದುವೆಗಳನ್ನೂ ಮಾಡಿಕೊಂಡರು. ಅವರ ಕೊನೆಯ ಹೆಂಡತಿಯನ್ನವರು ಮದುವೆ ಆದಾಗ ಅವರ ವಯಸ್ಸು ೬೫, ವಧುವಿನ ವಯಸ್ಸು ೮ ವರ್ಷ!

  ಉತ್ತರ
  • ವಿಠಲ ಕಟ್ಟಿ
   ಜನ 4 2016

   Rationalist Speaks ಎಂಬ ಪುಸ್ತಕದಲ್ಲಿ ಈ ಬಗ್ಗೆ ವಿವರಣೆ ಇದೆ. ನ್ಯಾಯಮೂರ್ತಿ ಆರ್. ಎ. ಜಹಾಗಿರ್ದಾರರ ಪುಸ್ತಕ rationalist Foundation ನಿಂದ ಪ್ರಕಟವಾಗಿದೆ.

   ಉತ್ತರ
 2. yogish shetty
  ನವೆಂ 3 2015
 3. Sunilkumar H Maliwader
  ನವೆಂ 10 2015

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments