ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 31, 2015

3

ಉಕ್ಕಿನ ಮನುಷ್ಯನಿಗೆ ಸಿಗಲಿ ತಕ್ಕ ಗೌರವ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ಸರ್ದಾರ್ ವಲ್ಲಭಾಯ್ ಪಟೇಲ್1909ರ ಒಂದು ದಿನ. ನ್ಯಾಯಾಲಯದಲ್ಲಿ ಕ್ರಾಸ್ ಎಕ್ಸಾಮಿನೇಶನ್ ನಡೆಯುತ್ತಿದೆ. ನಿರಪರಾಧಿಯೊಬ್ಬ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾನೆ. ವಕೀಲರು ಪಾಟೀಸವಾಲು ಹಾಕುತ್ತಿರುವಾಗಲೇ ಮಧ್ಯದಲ್ಲಿ ಅವರಿಗೊಂದು ಟೆಲಿಗ್ರಾಂ ಬಂತು. ಆ ಕಾಲದಲ್ಲಿ ಯಾರಿಗಾದರೂ ತಂತಿ ಸಂದೇಶ ಬಂತೆಂದರೆ ಅದು ಸಾವಿನ ಸುದ್ದಿಯೆಂದೇ ಲೆಕ್ಕ. ಚೀಟಿಯತ್ತ ಒಮ್ಮೆ ಕಣ್ಣುಹಾಯಿಸಿ, ಕ್ಷಣಕಾಲ ಕಣ್ಣುಮುಚ್ಚಿ ದೀರ್ಘವಾಗಿ ಉಸಿರೆಳೆದು, ಅವರು ಆ ಚೀಟಿಯನ್ನು ತನ್ನ ಕೋಟಿನ ಜೇಬಿನೊಳಗಿಳಿಸಿ ವಾದ ಮುಂದುವರಿಸಿದರು. ಕೊನೆಗೆ ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿ ನಿರಪರಾಧಿಯೆಂದು ಸಾಬೀತಾಯಿತು. ಕೋರ್ಟಿನ ಕಲಾಪಗಳು ಮುಗಿದ ನಂತರ ನ್ಯಾಯಮೂರ್ತಿಗಳು ಟೆಲಿಗ್ರಾಂ ವಿಷಯ ಪ್ರಸ್ತಾಪಿಸಿದಾಗ ವಕೀಲರು, “ಅದು ನನ್ನ ಪತ್ನಿಯ ಸಾವಿನ ಸುದ್ದಿ. ನಾನು ಆ ಕೂಡಲೇ ನ್ಯಾಯಾಲಯದಿಂದ ಹೊರಟುಬಿಡುತ್ತಿದ್ದರೆ ಇಲ್ಲಿ ನಿರಪರಾಧಿಯ ಪರವಾಗಿ ವಾದಿಸುವವರು ಯಾರೂ ಇಲ್ಲದೆ ಅವನು ಶಿಕ್ಷೆಗೆ ಗುರಿಯಾಗುತ್ತಿದ್ದನೇನೋ. ಒಂದು ಪ್ರಾಣ ಹೇಗೂ ಹೋಗಿಯಾಗಿದೆ. ಇಲ್ಲಿಂದ ಹೊರನಡೆದಿದ್ದರೆ ಈ ದಿನ ನಾನು ಎರಡನೇ ಸಾವನ್ನೂ ನೋಡಬೇಕಾಗಿತ್ತಲ್ಲ” ಎಂದರು. ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯುವುದು ಸುಮ್ಮನೇ ಅಲ್ಲ ಎನ್ನುವುದಕ್ಕೆ ಇದೊಂದು ದೃಷ್ಟಾಂತ ಸಾಕು.

ಪಟೇಲರು 1875ನೇ ಇಸವಿ ಅಕ್ಟೋಬರ್ 31ರಂದು ಗುಜರಾತ್‍ನಲ್ಲಿ ಜನಿಸಿದರು. ಪಟೇಲ್ ಸಮುದಾಯದ ಸಂಪ್ರದಾಯದಂತೆ ಹುಡುಗನಿಗೆ 18ರ ಹರೆಯದಲ್ಲೇ ಮದುವೆಯಾಯಿತು. ಕುಟುಂಬ ದೊಡ್ಡದು. ಜೀವನ ನಿರ್ವಹಣೆಗೆ ಶಕ್ತಿಮೀರಿ ದುಡಿಯುವುದು ಅನಿವಾರ್ಯ ಕರ್ಮವಾಗಿದ್ದ ಕಾಲ. ಪಟೇಲರು ಸ್ವಂತ ಪರಿಶ್ರಮದಿಂದ ಓದಿ, ಪದವಿ ಪಡೆದು, ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಹೋಗುವ ಕನಸು ಕಂಡಿದ್ದರು. ಅವರ ಕನಸಿಗೆ ನೀರೆರೆಯುವಂತೆ ಇಂಗ್ಲೆಂಡಿನಿಂದ ವಕೀಲಿ ವ್ಯಾಸಂಗದ ಪ್ರವೇಶಾತಿಯ ಕಾಗದಪತ್ರಗಳೂ ಪ್ರಯಾಣದ ಟಿಕೇಟೂ ಬಂದವು. ಆ ಎಲ್ಲ ದಾಖಲೆಗಳಲ್ಲೂ ಪಟೇಲರ ಹೆಸರನ್ನು ವಿ.ಜೆ. ಪಟೇಲ್ ಎಂದು ನಮೂದಿಸಲಾಗಿತ್ತು. ಆಗ, ಇಂಗ್ಲೆಂಡಿಗೆ ಹೋಗಿ ಕಲಿಯಲು ತನಗೂ ಆಸೆಯಿದೆ ಎಂದು ಸೋದರ ವಿಠಲಭಾಯಿ ಝಾವೆರ್‍ಬಾಯಿ ಪಟೇಲ್ ಮುಂದೆ ಬಂದು ಅಣ್ಣನ ಬಳಿ ಹೇಳಿಕೊಂಡ. ಅಣ್ಣ ವಲ್ಲಭಭಾಯಿ ತಮ್ಮನ ಆಸೆ ಮನ್ನಿಸಿ ಆತನಿಗೆ ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟು ತಾನು ಭಾರತದಲ್ಲೆ ಉಳಿದರು. ವಜ್ರದಂಥ ವ್ಯಕ್ತಿಯ ಮನಸ್ಸು ಹೂವಿನಷ್ಟು ಮೃದುವೂ ಆಗಿತ್ತೆನುವುದಕ್ಕೆ ಈ ಘಟನೆ ಸಾಕ್ಷಿ.

ಪಟೇಲ್ ಮುಂದೆ ನ್ಯಾಯವಾದಿಯಾಗಿ ಸಮಾಜಸೇವಕನಾಗಿ ರಾಜಕೀಯ ವ್ಯಕ್ತಿಯಾಗಿ ಬೆಳೆಯುತ್ತಾಹೋದದ್ದು ಒಂದು ಸ್ಫೂರ್ತಿದಾಯಕ ಕತೆ. 1940ರ ಸುಮಾರಿಗೆ ಅವರು ಕಾಂಗ್ರೆಸ್‍ನ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದರು. ಆದರೂ ತನಗಿಂತ ಆರು ವರ್ಷ ಹಿರಿಯನಾದ ಮಹಾತ್ಮಾಗಾಂಧಿಯನ್ನು ಗುರುವಿನ ಸ್ಥಾನದಲ್ಲಿಟ್ಟಿದ್ದರು. 1946ರ ಕಾಂಗ್ರೆಸ್‍ನ ಅಧ್ಯಕ್ಷೀಯ ಚುನಾವಣೆಯ ಸಂದರ್ಭವನ್ನಿಲ್ಲಿ ಉಲ್ಲೇಖಿಸಬೇಕು. ಮೌಲಾನಾ ಆಝಾದ್ 1940ರಿಂದ 46ರವರೆಗೆ ಕಾಂಗ್ರೆಸ್‍ನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ 46ರಲ್ಲಿ ಎರಡನೇ ಅವಧಿಗೆ ಮುಂದುವರಿಯುವ ಆಸೆ ತೋರ್ಪಡಿಸಿದರು. ಆದರೆ ಗಾಂಧಿಯ ಯೋಚನೆಗಳೇ ಬೇರೆ ಇದ್ದವು. ಇನ್ನೊಂದು-ಒಂದೂವರೆ ವರ್ಷದಲ್ಲಿ ಭಾರತ ಸ್ವಾತಂತ್ರ್ಯ ಪಡೆಯುತ್ತದೆ ಎನ್ನುವುದು ಅದಾಗಲೇ ಖಚಿತವಾಗಿದ್ದರಿಂದ, ಕಾಂಗ್ರೆಸ್‍ನ ಅಧ್ಯಕ್ಷರು ಯಾರಾಗುತ್ತಾರೋ ಅವರೇ ಮುಂದೆ ದೇಶದ ಪ್ರಧಾನಿಯಾಗುವುದು ಎನ್ನುವುದೂ ಖಚಿತವಾಗಿತ್ತು. ಹಾಗಾಗಿ ಆ ಸ್ಥಾನಕ್ಕೆ ನೆಹರೂರನ್ನು ತರಬೇಕೆಂದು ಗಾಂಧೀಜಿ ಬಯಸಿದ್ದರು. ಚುನಾವಣೆಯ ಸಾಮಾನ್ಯ ಪ್ರಕ್ರಿಯೆಯಾಗಿ ಪ್ರಾದೇಶಿಕ ಕಾಂಗ್ರೆಸ್ ಕಮಿಟಿಗಳು ನಾಮನಿರ್ದೇಶನ ಮಾಡಿದವು. ರಾಷ್ಟ್ರೀಯ ಅಧ್ಯಕ್ಷರನ್ನು ಸೂಚಿಸುವ ಅಧಿಕಾರವಿದ್ದ ಒಟ್ಟು 12 ಸಮಿತಿಗಳು ಪಟೇಲರ ಹೆಸರನ್ನು ಸೂಚಿಸಿದವು. ಹೆಸರು ಸೂಚಿಸಲು ಎಪ್ರೀಲ್ 29 ಕೊನೆಯ ದಿನವಾಗಿತ್ತು. ಪಟೇಲ್ ಅವಿರೋಧವಾಗಿ ಆಯ್ಕೆಯಾಗುವುದು ನೂರಕ್ಕೆ ನೂರು ಖಚಿತವಾದಾಗ ಗಾಂಧಿ ಕಾಂಗ್ರೆಸ್ ನಿಯಮಗಳನ್ನು ಗಾಳಿಗೆ ತೂರಿ, ಮರುದಿನ ಅಂದರೆ ಎಪ್ರೀಲ್ 30ರಂದು ಜೆ.ಬಿ. ಕೃಪಲಾನಿಯವರಿಂದ ನೆಹರೂ ಹೆಸರನ್ನು ನೋಂದಾಯಿಸಿದರು! “ನೆಹರೂ ಎರಡನೇ ಸ್ಥಾನವನ್ನು ಎಂದೂ ಬಯಸುವುದಿಲ್ಲ” ಎಂಬ ಸಂದೇಶ ಹೋದಮೇಲೆ ಪಟೇಲ್, ಗಾಂಧಿಗೆ ಗೌರವ ಕೊಟ್ಟು ತನ್ನ ಹೆಸರನ್ನು ಹಿಂಪಡೆದರು. ಅಳಿದ ಊರಿಗೆ ಉಳಿದವನೇ ಗೌಡ ಎಂಬಂತೆ ನೆಹರೂ ಕಾಂಗ್ರೆಸ್ ಎಂಬ ಸಾಮ್ರಾಜ್ಯದ ಅನಭಿಷಿಕ್ತ ದೊರೆಯಾದರು!

ಬಹುಶಃ ನಾವೆಲ್ಲ ನಮ್ಮ ಶಾಲಾಪಠ್ಯದಲ್ಲಿ, ವಲ್ಲಭಭಾಯಿ ಪಟೇಲರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ – ಎಂಬ ಸಾಲನ್ನು ಓದಿಯೇ ಇರುತ್ತೇವೆ. ತಮಾಷೆಯೆಂದರೆ ನಮ್ಮ ಪಠ್ಯಗಳಲ್ಲಿ ಬಿಸ್ಮಾರ್ಕ್ ಯಾರೆಂದೂ ಕೊಟ್ಟಿಲ್ಲ; ಪಟೇಲರ ಸಾಧನೆಗಳನ್ನೂ ವಿವರಿಸಿಲ್ಲ. ಹಾಗಾಗಿ ಇವರಿಬ್ಬರೂ ಹೋಲಿಕೆಯಿರುವ ಅದ್ಯಾವುದೋ ಮಹಾನ್ ಕೆಲಸಗಳನ್ನು ಮಾಡಿರಬೇಕು. ಬಿಸ್ಮಾರ್ಕನ ಕೆಲಸಕ್ಕಿಂತ ಪಟೇಲರ ಕೆಲಸ ಕಿರಿದಾಗಿರಬಹುದು ಎಂದೇ ನಾವು ಭಾವಿಸುತ್ತೇವೆ. ಬಿಸ್ಮಾರ್ಕ್, ಸದ್ಯಕ್ಕೆ ನಮ್ಮ ಬಗಲಿನ ಬಾಂಗ್ಲಾದೇಶದಷ್ಟು ದೊಡ್ಡ ಜರ್ಮನಿಯನ್ನು ಏಕೀಕರಣ ಮಾಡಿದವನು ಎಂದು ಇತಿಹಾಸ ಹೇಳುತ್ತದೆ. ಜರ್ಮನಿಯ ಒಟ್ಟು 39 ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ದೇಶದ ರೂಪು ಕೊಡಬೇಕಾದರೆ ಒಟ್ಟು ಹತ್ತು ಸಾವಿರ ಜನ ಪ್ರಾಣ ತೆರಬೇಕಾಯಿತು; ಮಾತ್ರವಲ್ಲ ಒಂಬತ್ತು ವರ್ಷ ಹೆಣಗಾಡಬೇಕಾಯಿತು. ಇಟೆಲಿಯನ್ನು ನೋಡಿ – ಕೇವಲ ಒಂಬತ್ತು ಪ್ರಾಂತ್ಯಗಳನ್ನು ಒಟ್ಟುಸೇರಿಸಿ ದೇಶ ಎಂದು ಕರೆಯಬೇಕಾದರೆ 23 ವರ್ಷಗಳೇ ಹಿಡಿದವು. ಆದರೆ, ಭಾರತದಲ್ಲಿ ಒಟ್ಟು 565 ಸಂಸ್ಥಾನಗಳನ್ನು ಕೇವಲ ಹದಿನೆಂಟು ತಿಂಗಳ ಅವಧಿಯಲ್ಲಿ ಗಣರಾಜ್ಯದ ಅಡಿ ತರಲಾಯಿತು! ದೇಶ ಸ್ವತಂತ್ರವಾಗುವುದಕ್ಕೆ ಮೂರು ತಿಂಗಳ ಮೊದಲೇ ಪಟೇಲರು ದೇಶದ ಸಂಸ್ಥಾನಗಳನ್ನು ಒಟ್ಟು ಸೇರಿಸುವ ಕೆಲಸವನ್ನು ಪ್ರಾರಂಭಿಸಿದರು. ಮೇ 6ನೇ ತಾರೀಖು ದೇಶದ ಹಲವು ಪ್ರಮುಖ ರಾಜರುಗಳನ್ನು ಒಟ್ಟುಗೂಡಿಸಿ ಪಟೇಲರು ದೇಶದ ಭವಿಷ್ಯದ ಬಗ್ಗೆ ತಿಳಿಹೇಳುವ ಕೆಲಸವನ್ನು ಮಾಡಿದರು. ಭಾರತ ಸ್ವತಂತ್ರವಾದ ಮೇಲೆ ಯಾವೆಲ್ಲ ಸಂಸ್ಥಾನಗಳು ನಮ್ಮ ಕೈಯಡಿ ಬರುವುದಿಲ್ಲವೋ ಅವೆಲ್ಲವನ್ನೂ ನಮ್ಮ ಶತ್ರುಗಳೆಂದೇ ಪರಿಗಣಿಸುತ್ತೇವೆ ಎನ್ನುವುದು ನೆಹರೂ ನುಡಿಯಾಗಿತ್ತು. ಆದರೆ, ಪಟೇಲ್ ಭಿನ್ನದಾರಿ ತೆಗೆದುಕೊಂಡರು. 1947ರ ಜುಲೈ 7ನೇ ತಾರೀಖು ಹೊರಡಿಸಿದ ಮನವಿಯಲ್ಲಿ ಪಟೇಲ್ ಸರ್ಕಾರದ ನಿಲುವನ್ನು ಅತ್ಯಂತ ಸ್ಪಷ್ಟಭಾಷೆಯಲ್ಲಿ ಮಂಡಿಸಿದರು. ಯಾವ ರಾಜನಿಗೂ ಬೆದರಿಕೆ ಹಾಕದೆ, ಅವರ ಮನವೊಲಿಸಿ ರಾಷ್ಟ್ರಭಕ್ತಿಯ ಬಾವುಟ ಹಾರಿಸಿ, ಸಮ್ಮೋಹನದ ರೀತಿಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿದರು. ಮನವೊಲಿಕೆಗೆ ಬಗ್ಗದ ಕೆಲವರನ್ನು ಒಡೆದು ಆಳುವ ತಂತ್ರ ಹೂಡಿ ಬುಟ್ಟಿಗೆ ಹಾಕಿಕೊಳ್ಳಬೇಕಾಯಿತು. ರಾಜತಂತ್ರದಲ್ಲಿ ನಿಸ್ಸೀಮರಾಗಿದ್ದ ಪಟೇಲರಿಗೆ ಒಮ್ಮೆ ಗಾಂಧಿಯೇ ಹೇಳಿದ್ದುಂಟು: ಈ ಸಂಸ್ಥಾನಗಳನ್ನು ಒಟ್ಟುಗೂಡಿಸುವ ಕೆಲಸ ತಂತಿಯ ಮೇಲಿನ ನಡಿಗೆ. ನೀನೊಬ್ಬನಲ್ಲದೆ ಮತ್ಯಾರೂ ಅದನ್ನು ಸಾಧಿಸಲಾರರು.

ರಾಜ್ಯಗಳ ಏಕೀಕರಣದ ಕೆಲಸದಲ್ಲಿ ಸವಾಲಾಗಿ ನಿಂತ ಎರಡು ಸಂಸ್ಥಾನಗಳೆಂದರೆ ಜುನಾಗಢ ಮತ್ತು ಹೈದರಾಬಾದ್. ಜುನಾಗಢವನ್ನು ಭಾರತದೊಳಗೆ ಸೇರಿಸಿಕೊಳ್ಳುವುದು ಪಟೇಲರಿಗೆ ಬಹುಮುಖ್ಯವಾಗಿತ್ತು. ಏಕೆಂದರೆ ಅದು ಅವರ ತವರು ಗುಜರಾತಿನಲ್ಲಿರುವ ಸಂಸ್ಥಾನ. ಮೇಲಾಗಿ ಘಜನಿಯಿಂದ ಹದಿನೇಳು ಬಾರಿ ದಾಳಿಗೊಳಗಾದ ಹಿಂದೂಗಳ ಶ್ರದ್ಧಾಕೇಂದ್ರ ಸೋಮನಾಥ ದೇವಾಲಯ ಇರುವ ನಾಡು ಅದು. ಅಲ್ಲಿನ 80% ಜನ ಹಿಂದೂಗಳು. ಸರ್ ಷಾ ನವಾಜ್ ಭುಟ್ಟೋ ಬೆಂಬಲದಿಂದ ನೆಲಬಿಟ್ಟು ಹಾರಾಡುತ್ತಿದ್ದ ಅಲ್ಲಿನ ನವಾಬನನ್ನು ಕಟ್ಟಿಹಾಕಲು ಕೊನೆಗೆ ಪಟೇಲರು ಅಲ್ಲಿ ಜನಮತಸಂಗ್ರಹ ಮಾಡಬೇಕಾಯಿತು. ಆ ಅಭಿಪ್ರಾಯಸಂಗ್ರಹದಲ್ಲಿ 99.5%ರಷ್ಟು ಜನ ತಾವು ಭಾರತದ ತೆಕ್ಕೆಗೆ ಬರಲು ಬಯಸುವುದಾಗಿ ಹೇಳಿದರು. ಈ ಅಭಿಪ್ರಾಯಕ್ಕೆ ವಿರುದ್ಧವಾಗಿ ನಡೆದರೆ ಶಕ್ತಿಪ್ರದರ್ಶಿಸಿ ಅದನ್ನು ಭಾರತದ ಬಗಲಿಗೆ ಹಾಕಿಕೊಳ್ಳಬೇಕಾಗುತ್ತದೆ ಎಂದು ಪಟೇಲ್ ಎಚ್ಚರಿಕೆ ಕೊಟ್ಟಮೇಲೆ ನವಾಬ ಮತ್ತು ಭುಟ್ಟೋ ಇಬ್ಬರೂ ಕರಾಚಿಗೆ ಪಲಾಯನ ಮಾಡಿದರು. ಜುನಾಗಢ ಭಾರತ ಗಣರಾಜ್ಯದೊಡನೆ ವಿಲೀನವಾಯಿತು. ಈ ಉದಾಹರಣೆಯನ್ನಿಟ್ಟುಕೊಂಡು ಪಟೇಲರು ಪ್ರಧಾನಿ ನೆಹರೂ ಮತ್ತು ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿಯವರಿಗೆ ಹೈದರಾಬಾದಿನ ಪರಿಸ್ಥಿತಿಯನ್ನೂ ವಿವರಿಸಿ, ಯೇನಕೇನ ಪ್ರಕಾರೇಣ ಅದನ್ನು ಭಾರತದ ಜೊತೆ ವಿಲೀನಗೊಳಿಸಲೇಬೇಕೆಂದು ವಾದಿಸಿದರು. ದೇಶದ ನಡುಭಾಗದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ದೊಡ್ಡ ಸಂಸ್ಥಾನವೊಂದು ಇರುವುದು ಮುಂದೆ ಏನೆಲ್ಲ ಸಮಸ್ಯೆಗಳನ್ನು ತಂದೊಡ್ಡಬಹುದೆಂದು ಪಟೇಲರಿಗೆ ಚೆನ್ನಾಗಿಯೇ ತಿಳಿದಿತ್ತು. ಆದರೆ ಹೈದರಾಬಾದಿನ ಮೇಲೆ ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿದ್ದ ನೆಹರೂ ನಡೆ ಪಟೇಲರಿಗೆ ಕಿರಿಕಿರಿ ಮಾಡಿತು. ಕೊನೆಗೆ ದೇಶದ ಪ್ರಧಾನಿ ಯುರೋಪಿನ ಪ್ರವಾಸದಲ್ಲಿದ್ದಾಗ ಪಟೇಲ್ ತನ್ನ ಅಧಿಕಾರ ಬಳಸಿಕೊಂಡು ಆಪರೇಷನ್ ಪೋಲೋ ನಡೆಸಿಯೇಬಿಟ್ಟರು. ಒಂದೇ ಸಲಕ್ಕೆ ಭಾರತದ ಸೇನೆ ತನ್ನ ರಾಜ್ಯದೊಳಗೆ ಪ್ರವೇಶಿಸಿದಾಗ ಕಂಗಾಲಾದ ನಿಜಾಮ ಕೊನೆಗೆ ರಜಾಕರ ಸೇನೆಯೊಂದಿಗೆ ಸಂಪೂರ್ಣವಾಗಿ ಶರಣಾಗತನಾಗಬೇಕಾಯಿತು. ಅಂತೂಇಂತೂ ಮಗ್ಗುಲಮುಳ್ಳು ಹೈದರಾಬಾದ್ ಭಾರತದೊಳಗೆ ಸೇರಿಕೊಂಡಿತು.

ಪಟೇಲ್ ಈ ದೇಶ ಕಂಡ ಅತ್ಯಂತ ಹತಭಾಗ್ಯ ನಾಯಕ; ಒಂದು ರೀತಿಯಲ್ಲಿ ದುರಂತ ನಾಯಕ ಎಂದೂ ಹೇಳಬಹುದೇನೋ. ಅವರನ್ನು ಬದುಕಿರುವಷ್ಟು ಕಾಲ ಮಾತ್ರ ಅಲ್ಲ, ತೀರಿಕೊಂಡ ಮೇಲೂ ಇತಿಹಾಸದಿಂದ ಅತ್ಯಂತ ವ್ಯವಸ್ಥಿತವಾಗಿ ಅಳಿಸಿಹಾಕುವ ಕೆಲಸವನ್ನು ನೆಹರೂ ಮತ್ತವರ ಭಟ್ಟಂಗಿ ಇತಿಹಾಸಕಾರರ ಪಡೆ ಮಾಡಿತು. ಗಾಂಧಿ ಮತ್ತು ನೆಹರೂ ವಂಶವೃಕ್ಷಗಳ ರೆಂಬೆರೆಂಬೆಗಳ ಬಗ್ಗೆಯೂ ಚರಿತ್ರೆಯಲ್ಲಿ ಓದಿರುವ ನಮಗೆ ಪಟೇಲ್‍ರಂಥ ಅತ್ಯದ್ಭುತ ನಾಯಕನ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇಲ್ಲದಂತೆ ಶಿಕ್ಷಣಪದ್ಧತಿಯನ್ನು ರೂಪಿಸಲಾಗಿದೆ. ಪಟೇಲ್ 1950ರ ಡಿಸೆಂಬರ್ 15ರಂದು ತೀರಿಕೊಂಡರು. ಆದರೆ, ಸ್ವತಂತ್ರ ಭಾರತ ಎಂದೆಂದೂ ನೆನಪಿಡಬೇಕಾದ ಕೆಲಸವನ್ನು, ಸ್ವಾತಂತ್ರ್ಯ ಸಿಕ್ಕಿದ ಕೇವಲ ಎರಡು ವರ್ಷಗಳಲ್ಲೇ ಮಾಡಿಮುಗಿಸಿದರು ಎನ್ನುವುದನ್ನು ನಾವು ನೆನಪಿಡಬೇಕು. ಭಾರತದ ಏಕೀಕರಣದಲ್ಲಿ ಕೇವಲ ಒಂದು ಸಣ್ಣ ತುಂಡಿನ ಉಸ್ತುವಾರಿಯನ್ನಷ್ಟೇ ವಹಿಸಿಕೊಂಡು ನೆಹರೂ ಎಷ್ಟು ಅಧ್ವಾನಗಳನ್ನು ಮಾಡಿಹಾಕಿದರು ಎನ್ನುವುದನ್ನು ನಾವು ಕಾಶ್ಮೀರದಲ್ಲಿ ಇಂದಿಗೂ ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ಜೆ. ಆರ್. ಡಿ. ಟಾಟಾ ಅವರು ಹೇಳಿದ ಮಾತುಗಳು ಮನನೀಯ: “ಪ್ರತಿಬಾರಿ ಪಟೇಲರ ಜೊತೆ ಮಾತುಕತೆ ಮಾಡಿ ಹೊರಬರುವಾಗಲೂ ನನಗೆ ಈ ದೇಶದ ಉಜ್ವಲ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿದೆ. ಪಟೇಲರು ನೆಹರೂಗಿಂತ ಕಿರಿಯರಾಗಿದ್ದರೆ, ದೇವರು ಇನ್ನೊಂದಷ್ಟು ವರ್ಷಗಳನ್ನು ಅವರ ಜೀವನಕ್ಕೆ ಜಮೆ ಮಾಡಿದ್ದರೆ ಮತ್ತು ಪಟೇಲರ ಉಕ್ಕಿನ ಕೈಗಳಿಗೆ ಈ ದೇಶದ ಚುಕ್ಕಾಣಿ ಸಿಕ್ಕಿದ್ದರೆ ನಾವು ನೋಡುವ ಭಾರತ ಖಂಡಿತವಾಗಿಯೂ ಬೇರೆ ರೂಪದಲ್ಲಿರುತ್ತಿತ್ತು ಮತ್ತು ಜಗತ್ತಿನ ಆರ್ಥಿಕದೈತ್ಯನಾಗುತ್ತಿತ್ತು ಎಂದು ಯಾವತ್ತೂ ಅನ್ನಿಸಿದೆ”.

(“ಮಲೆನಾಡು ಮಿತ್ರ” ಪತ್ರಿಕೆಯಲ್ಲಿ ಪ್ರಕಟವಾದ ಅಂಕಣದ ಪೂರ್ಣಪಾಠ)

3 ಟಿಪ್ಪಣಿಗಳು Post a comment
  1. yogish shetty
    ನವೆಂ 1 2015
  2. Venu
    ನವೆಂ 1 2015

    ಸರ್ದಾರ್ ಪಟೇಲರನ್ನು ನೆನೆದು ಕಣ್ಣು ತೇವವಾಯಿತು. ರಾಷ್ಟ್ರದ ಹಿತಕ್ಕಾಗಿ ಸರ್ದಾರರು ಗಾಂಧೀಜಿಯ ಮಾತನ್ನು ಒಪ್ಪಬಾರದಿತ್ತು ಎನಿಸುತ್ತೆ.

    ಉತ್ತರ
  3. ನವೆಂ 1 2015

    ಉತ್ತಮ ಲೇಖನ ಸರ್ ಧನ್ಯವಾದ,ಪಟೇಲ್‍ರ ಕುರಿತಾಗಿ ಹೆಚ್ಚಿಗೆ ತಿಳಿಯದ ನನಗೆ ಸ್ವಲ್ಪ ಮಾಹಿತಿ ಕೊಟ್ಟಿದ್ದೀರಿ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments