ಆಳ್ವಾಸ್ ನುಡಿಸಿರಿ : ನಮ್ಮ ಸಮೃದ್ಧ ಸಾಂಸ್ಕೃತಿಕ ಜೀವನದ ಅನಾವರಣ
– ಡಾ.ಎಂ.ಮೋಹನ್ ಆಳ್ವ
(ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ ಹಾಗೂ ಸವದತ್ತಿ ತಾಲೂಕುಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು. ಈ ಘಟಕಗಳ ಕಾರ್ಯಕ್ರಮದಲ್ಲಿ ಡಾ.ಎಂ.ಮೋಹನ್ ಆಳ್ವರು ಆಳ್ವಾಸ್ ನುಡಿಸಿರಿಯ ಉದ್ದೇಶ, ಪ್ರಾಮುಖ್ಯತೆಗಳನ್ನು ಜನರೊಡನೆ ಮನಃಪೂರ್ವಕವಾಗಿ ಹಂಚಿಕೊಂಡರು. ಅವರ ಮನದಾಳದ ಮಾತುಗಳು ಹೀಗಿದ್ದವು )
ಭಾರತ ಎಲ್ಲಾ ವಿಧದಿಂದಲೂ ಸಂಪದ್ಭರಿತವಾದ ದೇಶ. ಈ ದೇಶದ ಸಾಂಸ್ಕೃತಿಕ ಹಿನ್ನೆಲೆ ಈ ಮಾತಿನಿಂದ ಹೊರತಾದುದಲ್ಲ. ಸಾಂಸ್ಕೃತಿಕವಾಗಿ ಅತ್ಯಂತ ಸಮೃದ್ಧವಾದ ದೇಶ ನಮ್ಮದು. ನಮಗಿರುವ ಸಾಂಸ್ಕೃತಿಕ ಹಿನ್ನೆಲೆ ಬೇರಾವ ದೇಶಕ್ಕೂ ಇಲ್ಲ. ಆದರೆ ಇಂದು ಈ ಎಲ್ಲಾ ಚಟುವಟಿಕೆಗಳ ಭಾರತೀಯರಾದ ನಮ್ಮಿಂದ ಎಲ್ಲೋ ದೂರ ಸರಿಯುತ್ತಿವೆ. ನಮ್ಮಿಂದ ಮರೆಯಾಗುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಉಳಿಸಿ, ಬೆಳೆಸಿ, ಆದರಿಸುವ ಕಾರ್ಯ ನಮ್ಮಿಂದಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ಆರಂಭಿಸಿರುವ ಸಾಂಸ್ಕೃತಿಕ ಉತ್ಸವಗಳೇ `ಆಳ್ವಾಸ್ ನುಡಿಸಿರಿ’ ಹಾಗೂ `ಆಳ್ವಾಸ್ ವಿರಾಸತ್’ ಕಾರ್ಯಕ್ರಮಗಳು.
ಆಳ್ವಾಸ್ ನುಡಿಸಿರಿ ಕನ್ನಡ ಭಾಷೆಯ ಕುರಿತಾದ ರಾಷ್ಟ್ರೀಯ ನಾಡು-ನುಡಿಯ ಉತ್ಸವ. ಇದು ಆರಂಭವಾಗಿ 12 ವರ್ಷ ಸಂದಿವೆ. ಇನ್ನು ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ. ವಿರಾಸತ್ ಆರಂಭವಾಗಿ 22 ವರ್ಷ ಕಳೆದಿವೆ. ದೇಶ-ವಿದೇಶಗಳಲ್ಲಿರುವ ಕಲಾ ರಸಿಕರನ್ನು ಒಂದುಗೂಡಿಸುವ ಕಾರ್ಯ ಇದಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳು ಅತೀ ಮುಖ್ಯ
ನಾವು ಈ ಕಾರ್ಯಕ್ರಮಗಳನ್ನು ಮಾಡುವಾಗ ಸಾಕಷ್ಟು ಹಣ ಖರ್ಚಾಗುತ್ತದೆ. ನೀವು ವ್ಯರ್ಥ ಹಣ ಪೋಲು ಮಾಡುತ್ತೀರಿ ಎನ್ನುವವರೂ ಇದ್ದಾರೆ. ಆದರೆ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಕಾಪಾಡುವಾಗ ಇದು ಅನಿವಾರ್ಯ ಹಾಗೂ ಅವಶ್ಯಕ. ಇಂದು ಅನೇಕ ಜಾಗತಿಕ ಸವಾಲುಗಳು ನಮ್ಮೆದುರಿಗಿವೆ. ವಿದ್ಯಾರ್ಥಿಗಳು ಅವನ್ನು ಎದುರಿಸಲು ಯಾವಾಗಲೂ ತಯಾರಾಗಿರಬೇಕು. ಹಾಗಿರುವಾಗ ಕೇವಲ ಶೈಕ್ಷಣಿಕವಾಗಿ ಬಲವಾಗಿದ್ದರೆ ಸಾಲದು; ಮಾನಸಿಕವಾಗಿ, ಬೌದ್ದಿಕವಾಗಿ ಆ ಸವಾಲುಗಳನ್ನೆದುರಿಸುವ ಪ್ರೌಢಿಮೆ ನಮ್ಮ ಮಕ್ಕಳಿಗಿರಬೇಕು. ಮಸ್ಯೆಗಳಿಗೆ ಪರಿಹಾರ ಹುಡುಕುವ, ಕಾಲಕ್ಕೆ ತಕ್ಕಂತೆ ಬದಲಾಗುವ ಮಾನಸಿಕ ಸ್ಥಿತಿ ಇರಲೇಬೇಕು. ಈ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಶ ಇರಬೇಕಾದುದು ಅತಿ ಮುಖ್ಯ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಮಹತ್ವದ್ದೆನಿಸುತ್ತವೆ. ನಮ್ಮ ಸಸ್ಥೆಯಲ್ಲಿರುವ 22,000 ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಶ ನೀಡುವ ಕಾರ್ಯ ನಡೆದೇ ಇರುತ್ತದೆ. ನಮ್ಮ ವಿದ್ಯಾರ್ಥಿಗಳು ಎಲ್ಲ ರೀತಿಯಿಂದಲೂ ಸದೃಢರಾಗಿರಬೇಕೆಂಬ ಇರಾದೆ ನಮ್ಮದು.
ಇಂದಿನ ಮಕ್ಕಳು ವಿಶೇಷ ಪ್ರತಿಭೆ ಹಾಗೂ ಬುದ್ಧಿಮತ್ತೆಯನ್ನುಳ್ಳವರು. ಅವರ ಸಾಮರ್ಥ್ಯದ ಮುಂದೆ ಹಿರಿಯರಾದ ನಮ್ಮ ಸಾಮರ್ಥ್ಯ ಏನೂ ಅಲ್ಲ. ಮಕ್ಕಳಿಗೆ ತರಬೇತಿ ನೀಡಿದರೆ ಅವರು ಏನನ್ನೂ ಸಾಧಿಸಬಲ್ಲರು. ಉತ್ತಮ ತರಬೇತಿಯಿಂದ ಅತ್ಯುತ್ತಮವಾದುದನ್ನೇ ಸಾಧಿಸಬಹುದು. ಇಂದು ನಿಮ್ಮ ಮುಂದೆ ಪ್ರದರ್ಶನ ನೀಡುತ್ತಿರುವ ವಿದ್ಯಾರ್ಥಿಗಳೇ ಇದಕ್ಕೆ ನಿದರ್ಶನ. ಇಂದಿನ ಪ್ರಸ್ತುತತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸುವ ಅವಶ್ಯಕತೆಯಿದೆ. ಹಾಗೆ ಬದಲಾದರೆ ಮಾತ್ರ ನಾವು ಚಲಾವಣೆಯಲ್ಲಿರುವ ನಾಣ್ಯಗಳಾಗುತ್ತೇವೆ, ಇಲ್ಲದಿದ್ದರೆ ಯಾವುದಕ್ಕೂ ಉಪಯೋಗಿಸಲಾಗದ ಸವಕಲು ನಾಣ್ಯಗಳಂತಾಗುತ್ತೇವೆ.
ಇತ್ತೀಚಿನ ದಿನಗಳಲ್ಲಿ ಮೌಲ್ಯದ ಅಧಃಪತನವಾಗುತ್ತಿದೆ. ಹಣದ ಮೇಲಿನ ವ್ಯಾಮೋಹದಿಂದಾಗಿ ಜನ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ಮುನ್ನಡೆಸಬೇಕಾದುದು ಹಿರಿಯರ ಕರ್ತವ್ಯವಾಗಿದೆ. ನಾವಿಂದು ನೀಡುತ್ತಿರುವ ಈ ಕಾರ್ಯಕ್ರಮದ ಮುಖ್ಯ ಉದ್ದೇಶವೂ ಇದೇ ಆಗಿದೆ. ನಮ್ಮ ದೇಶದ ಸಮೃದ್ಧ ಸಾಂಸ್ಕೃತಿಕ ಜೀವನವನ್ನು ಇಂದಿನ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದು ಹಾಗೂ ಇದನ್ನು ಸದಾ ಕಾಲ ಮುಂದುವರೆಸಿಕೊಂಡು ಹೋಗುವುದು. ವಿದ್ಯಾರ್ಥಿಗಳಿಗೆ ಸಂಸ್ಕೃತಿ ಹಾಗೂ ಮನರಂಜನೆಯ ನಡುವಿನ ವ್ಯತ್ಯಾಸ ಯಾವಾಗಲೂ ತಿಳಿದಿರಬೇಕು. ಸಂಸ್ಕೃತಿ ಮನರಂಜನೆ ನೀಡಬಹುದು ಆದರೆ ಇಂದಿನವರು ಮಾಡುವ ಎಲ್ಲ ಮನರಂಜನೆಗಳೂ ಸಂಸ್ಕೃತಿಯಾಗಲಾರವು. ಅವರು ಕಲಾವಿದರಾಗದಿದ್ದರೂ ತೊಂದರೆಯಿಲ್ಲ ಆದರೆ ಒಳ್ಳೆಯ ಸೌಂದರ್ಯಪ್ರಜ್ಞೆಯಿರುವವರಾಗಬೇಕು. ಕ್ರೀಡಾಪಟುಗಳಾಗದಿದ್ದರೂ ತೊಂದರೆಯಿಲ್ಲ ಕ್ರೀಡಾ ಮನೋಭಾವವನ್ನು ಹೊಂದಿರುವವರಾಗಬೇಕು. ಇಂತಹ ಮನೋಭಾವ ಇರದ ವಿದ್ಯಾರ್ಥಿ ಈ ದೇಶದ ಅತೀ ಅಪಾಯಕಾರಿ ವ್ಯಕ್ತಿಯಾಗಬಹುದು.
ಕನ್ನಡ ಮಾಧ್ಯಮದ ಸೋಲು ಶ್ರೀಸಾಮಾನ್ಯನ ಸೋಲು
ಕನ್ನಡ ಭಾಷೆ ಸದಾಕಾಲ ಉಳಿಯಬೇಕು, ಬೆಳೆಯಬೇಕು. ಕನ್ನಡ ಮಾಧ್ಯಮಕ್ಕೆ ಯಾವಾಗಲೂ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿ ಹೊಂದಿರುವ ರಾಷ್ಟ್ರಗಳಲ್ಲಿಯೆಲ್ಲಾ ಪ್ರಾಮುಖ್ಯತೆಯಿರುವುದು ಅವರ ಮಾತೃಭಾಷೆಗೇ. ಚೀನಾ, ಜಪಾನ್ ಮೊದಲಾದ ರಾಷ್ಟ್ರಗಳ ಜನರಿಗೆಲ್ಲಾ ಇಂಗ್ಲೀಷ್ ಮುಖ್ಯ ಭಾಷೆಯಲ್ಲ ಆದರೂ ಆ ದೇಶಗಳು ಮುಂದೆ ಬಂದಿಲ್ಲವೇ? ನಮ್ಮಲ್ಲಿ ಮಾತ್ರ ನಾವು ಯಾಕೆ ಆಂಗ್ಲ ಭಾಷೆಗೆ ಮಣೆ ಹಾಕಬೇಕು?
ನಮ್ಮ ಕನ್ನಡ ಶಾಲೆಗಳು ಹೆಚ್ಚೆಚ್ಚು ಬೆಳೆಯಬೇಕು. ನಮ್ಮ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸಬೇಕು. ನಮ್ಮ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಗಾಘಿ ನಾವು ಈ ಪ್ರಯತ್ನ ಮಾಡಿದ್ದೇವೆ. ಅಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ, ಶಾಲಾ ವಾತಾವರಣವನ್ನು ಸಂಪೂರ್ಣ ಸಾಂಸ್ಕೃತಿಕಮಯವಾಗಿಸಿದ್ದೇವೆ. ಪಠ್ಯ ಶಿಕ್ಷಣ ಮಾತ್ರವಲ್ಲದೇ ವಿದ್ಯಾರ್ಥಿಗಳ ಇತರೆ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡಲಾಗುತ್ತದೆ. ಈ ಸಲನಮ್ಮ ಶಾಲೆಗೆ 6000 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಒಂದು ಶಾಲೆಯನ್ನು ಮಾದರಿಶಾಲೆಯನ್ನಾಗಿಸಿದರೆ ಏನಾಗಬಹುದು ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಇದು. ಕನ್ನಡ ಂಆಧ್ಯಮ ಶಾಲೆಗಳು ಎಂದಿಗೂ ಸೋಲಬಾರದು. ಕನ್ನಡ ಶಾಲೆಗಳ ಸೋಲು ಕರ್ನಾಟಕದ ಶ್ರೀ ಸಾಮಾನ್ಯನ ಸೋಲಿದ್ದಂತೆ. ಅದನ್ನು ನಾವೆಂದಿಗೂ ಒಪ್ಪಿಕೊಳ್ಳಬಾರದು.
ಬಾಳುವುದೇತಕೆ ನುಡಿ ಎಲೆ ಜೀವ
ಸಿರಿಗನ್ನಡದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೇ
ಕನ್ನಡ ತಾಯಿಯ ಸೇವೆಯ ಮಾಡೆ.
ಕು.ವೆಂ.ಪು.