ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 3, 2015

5

ದಲಿತ ಸಮಸ್ಯೆಗಳಿಗೆ ‘ಮತಾಂತರ’ ಪರಿಹಾರವೇ?

‍CSLC Ka ಮೂಲಕ

12208103_1670761999803921_1900851134_nರಘು, ಎಸ್. ಕುವೆಂಪು ವಿಶ್ವವಿದ್ಯಾನಿಲಯ

  ಪ್ರಸ್ತುತ ಕಾಲಘಟ್ಟದಲ್ಲಿ ದಲಿತರಿಗೆ ಸಂಬಂಧಿಸಿದ ಚರ್ಚೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ದಲಿತ ಸಮಸ್ಯೆಯ ಕುರಿತ ಇಂಥ ಚರ್ಚೆಯನ್ನು ಪರಿಶೀಲಿಸಿದರೆ ದಲಿತರ ಸಮಸ್ಯೆಗಳಿಗೆ ‘ಹಿಂದೂಯಿಸಂ’ ಮೂಲ ಕಾರಣವಾಗಿದ್ದು, ‘ಮತಾಂತರ’ವೇ ಅದರ ನಿವಾರಣೆಗೆ ಇರುವ ಅಂತಿಮ ಪರಿಹಾರ ಎಂಬ ವಾದವನ್ನು ಮುಂದಿಡುವುದು ಕಂಡುಬರುತ್ತದೆ. ಒಂದೊಮ್ಮೆ ‘ದಲಿತ ಸಮಸ್ಯೆ’ಯ ಮೂಲ ‘ಹಿಂದೂಯಿಸಂ’ ಆಗಿದ್ದ ಪಕ್ಷದಲ್ಲಿ ಮತಾಂತರಗೊಂಡ ದಲಿತರಲ್ಲಿ ಈ ಹಿಂದೆ ಇದ್ದ ‘ಸಮಸ್ಯೆ’ಗಳನ್ನು ಗುರುತಿಸಲು ಸಾಧ್ಯವಾಗಬಾರದು. ಆದರೆ ಮತಾಂತರಗೊಂಡ ದಲಿತರ ಕುರಿತ ಪ್ರಚಲಿತವಾದಗಳು ಇದಕ್ಕೆ ತದ್ವಿರುದ್ಧವಾಗಿವೆ. ಇದು ಮತಾಂತರದ ಕುರಿತ ಚರ್ಚೆಯನ್ನೇ ಮರುಪರಿಶೀಲಿಸುವ ಅನಿವಾರ್ಯತೆಯನ್ನು ಸೃಷ್ಠಿಸುತ್ತದೆ.

ದಲಿತ ಸಮಸ್ಯೆಯ ಕುರಿತ ಚಿತ್ರಣಗಳಲ್ಲಿ ವಸಾಹತು ಕಾಲಘಟ್ಟದ ಜನಾಂಗೀಯ, ಮಾನವಶಾಸ್ತ್ರೀಯ ಅಧ್ಯಯನಗಳಿಂದ ಹಿಡಿದು ಇಂದಿನ ಚಿಂತನೆಗಳವರೆಗೂ ಒಂದು ನಿರಂತರತೆಯನ್ನು ಗುರುತಿಸಬಹುದು. ಅವುಗಳು ವೈಜ್ಞಾನಿಕ ಸತ್ಯದ ಸ್ಥಾನಮಾನವನ್ನು ಪಡೆದುಕೊಂಡಿವೆ. ಆ ನಿರಂತರತೆಯ ಎಳೆಯು ಈ ರೀತಿಯಾಗಿದೆ: ‘ಹಿಂದೂಯಿಸಂ’ನಲ್ಲಿ ಕೆಳಮಟ್ಟದ ಸ್ಥಾನದಲ್ಲಿರುವ ದಲಿತರು ಸಾವಿರಾರು ವರ್ಷಗಳಿಂದಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಶ್ರೇಣಿಕರಣಗೊಂಡಿರುವ ಜಾತಿವ್ಯವಸ್ಥೆಯು ‘ಹಿಂದೂಯಿಸಂ’ನ ಭಾಗವಾಗಿದೆ. ಈ ಶ್ರೇಣಿಕರಣದಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಬ್ರಾಹ್ಮಣರು ‘ಹಿಂದೂಯಿಸಂ’ನ ಪ್ರೀಸ್ಟ್ಗಳಾಗಿದ್ದಾರೆ. ಆ ವರ್ಗದವರು ದಲಿತರನ್ನು ಸದಾ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಇಂಥ ಶೋಷಣೆಗೆ ‘ಹಿಂದೂಯಿಸಂ’ ತಾತ್ವಿಕ ನೆಲೆಗಟ್ಟನ್ನು ಒದಗಿಸುತ್ತಾ ಬಂದಿದೆ. ದಲಿತರ ಮೇಲಿನ ಈ ರೀತಿಯ ಶೋಷಣೆಯು ‘ಹಿಂದೂಯಿಸಂ’ಗೆ ಮಾತ್ರ ಸೀಮಿತವಾಗಿದ್ದು, ದಲಿತರ ಸಮಸ್ಯೆಗಳಿಗೆ ಅದರ ಒಳಗೆ ಯಾವುದೇ ಪರಿಹಾರಗಳಿಲ್ಲ.

  ಈ ಹಿನ್ನೆಲೆಯಲ್ಲಿ ‘ದಲಿತ ಸಮಸ್ಯೆ’ಯ ಕುರಿತು ಮಾತನಾಡುವ ಚಿಂತಕರು ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅನೇಕ ಪರಿಹಾರ ಕ್ರಮಗಳನ್ನು ಸೂಚಿಸುತ್ತಿದ್ದಾರೆ. ಹಲವು ಚಿಂತಕರು ಗುರುತಿಸುವಂತೆ ‘ಮತಾಂತರ’ವು ಬಹುಮುಖ್ಯ ಪರಿಹಾರಗಳಲ್ಲೊಂದು. ಅಂದರೆ ‘ದಲಿತ ಸಮಸ್ಯೆ’ಗೆ ಮೂಲ ಕಾರಣ ‘ಹಿಂದೂಯಿಸಂ’ ಆಗಿದ್ದು ಇದನ್ನು ತೊರೆಯುವುದು ಅಥವಾ ‘ಮತಾಂತರ’ವಾಗುವುದೇ ಅದರ ನಿವಾರಣೆಗೆ ಇರುವ ಅತ್ಯಂತಿಕ ಪರಿಹಾರ ಎನ್ನುತ್ತಾರೆ. ಮೀಸಲಾತಿಯತಂಹ ಸಾಂವಿಧಾನಿಕ ಪರಿಹಾರ ಕ್ರಮದಲ್ಲಿ ನಂಬಿಕೆ ಇಟ್ಟಿದ್ದ/ಅದನ್ನು ಪ್ರಬಲವಾಗಿ ಸಮರ್ಥಿಸುತ್ತಿದ್ದ ಅಂಬೇಡ್ಕರ್ ಅವರು ಕಾಲನಂತರದಲ್ಲಿ ‘ಮತಾಂತರ’ದ ಕಡೆ ಒಲವು ತೋರಿಸುವುದು ಇದಕ್ಕೆ ನಿದರ್ಶನ. ಅಂದರೆ ಅಸ್ಪೃಶ್ಯರು ಹಿಂದೂಧರ್ಮದಲ್ಲಿರುವವರೆಗೂ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯು ನಾಶವಾಗಲಾರದು ಹಾಗಾಗಿ ಇದಕ್ಕೆ ಮತಪರಿವರ್ತನೆ ಒಂದೇ ಮದ್ದು ಎಂಬುದು ಅಂಬೇಡ್ಕರ್ ಅವರ ವಾದ (ಅಂಬೇಡ್ಕರ್.ಬಿ.ಆರ್. ಸಂಪುಟ-5, 425).

  ಒಂದುಕಡೆ ಮತಾಂತರವನ್ನು ದಲಿತ ಸಮಸ್ಯೆಯ ನಿವಾರಣೆಗೆ ಇರುವ ಅತ್ಯಂತಿಕ ಪರಿಹಾರ ಎಂದು ವಾದಿಸುವವರಿದ್ದರೆ, ಮತ್ತೊಂದುಕಡೆ ಇದನ್ನು ವಿರೋಧಿಸುವವರೂ ಸಿಗುತ್ತಾರೆ. ಇವರ ವಾದದ ಪ್ರಕಾರ, ‘ದಲಿತ ಸಮಸ್ಯೆ’ಯು ಹಿಂದೂಧರ್ಮದ ಒಂದು ಕೊಳೆತ ಭಾಗ. ಇದು ಯಾವಗಲೋ ನಿವಾರಣೆಯಾಗಬೇಕಿತ್ತು. ಆದರೆ ಆಗದೆ ಉಳಿದುಬಿಟ್ಟಿದೆ. ಹಾಗಂತ ಇದಕ್ಕೆ ಮತಾಂತರವೊಂದೆ ಪರಿಹಾರ ಎಂದು ಹೇಳುವುದು ತಪ್ಪು. ಹಿಂದೂಧರ್ಮದಲ್ಲಿದ್ದುಕೊಂಡೆ ಆ ಸಮಸ್ಯೆಯನ್ನು ತೊಡೆದುಹಾಕಬಹುದು. ಇದಕ್ಕೆ ಭಾರತೀಯರೆಲ್ಲರು ಒಟ್ಟಾಗಿ ಪ್ರಯತ್ನಿಸಬೇಕು. ದಲಿತರ ಶೋಷಣೆಯನ್ನು ಬೆಂಬಲಿಸುವ ಧಾರ್ಮಿಕ ನಿಯಮಗಳನ್ನು ತಿರಸ್ಕರಿಸಬೇಕು ಎನ್ನುತ್ತಾರೆ.

  ಮೇಲ್ನೋಟಕ್ಕೆ ಕಾಣುವಂತೆ ಮೇಲಿನ ಎರಡು ಗುಂಪಿನವರು(ಮತಾಂತರವನ್ನು ಬೆಂಬಲಿಸುವ ಮತ್ತು ಅದನ್ನು ವಿರೋಧಿಸುವ) ಪರಸ್ಪರ ವಿರೋಧಿಗಳಂತೆ ಕಾಣುತ್ತಾರೆ. ಆದರೆ, ‘ದಲಿತ ಸಮಸ್ಯೆ’ಯ ಕುರಿತು ಒಂದು ಸಾಮಾನ್ಯ ಚೌಕಟ್ಟನ್ನು ಹಂಚಿಕೊಳ್ಳುವ ಮೂಲಕ ಒಂದೇ ಪರಿದಿಗೆ ಬಂದು ನಿಲ್ಲುತ್ತಾರೆ. ಅಂದರೆ, ‘ದಲಿತ ಸಮಸ್ಯೆ’ಗೆ ‘ಹಿಂದೂಯಿಸಂ’ ಅಥವಾ ಅದರ ‘ನಿಯಮ’ಗಳು ಕಾರಣ ಎನ್ನುವುದಕ್ಕೆ ಈ ಎರಡು ಗುಂಪಿನಲ್ಲಿಯೂ ಯಾವುದೇ ತಕರಾರಿಲ್ಲ. ‘ಮತಾಂತರ’ವನ್ನು ವಿರೋಧಿಸುವ ಗಾಂಧೀಜಿಯವರ ಮುಂದಿನ ಹೇಳಿಕೆಯು ಇದಕ್ಕೆ ಉತ್ತಮ ಉದಾಹರಣೆ, ‘ಅಸ್ಪೃಶ್ಯತೆ ಹಿಂದೂ ಧರ್ಮದ ಅಂಗವಾಗಿ ಉಳಿದಿರುವವರೆಗೂ ಅದು ಹೊರಗಿನ ದಾಳಿಗೆ ತುತ್ತಾಗುತ್ತಲೇ ಇರುತ್ತದೆ. ಅಸ್ಪೃಶ್ಯತೆಯ ಸಮಗ್ರ ನಿವಾರಣೆಯ ರೂಪದಲ್ಲಿ ಶುದ್ಧೀಕರಣದ ಮಜಬೂತಾದ ಮತ್ತು ಅಚಲವಾದ ಗೋಡೆಯ ನಿರ್ಮಾಣವಾದಾಗ ಇದನ್ನು ತಪ್ಪಿಸಲು ಸಾಧ್ಯ (ಗಾಂಧೀಜಿ, ಉದೃತ:ಅಂಬೇಡ್ಕರ್. ಸಂಪುಟ-5, 479).

  ಗಾಂಧೀಜಿಯವರಂತೆಯೇ ಬಹುತೇಕ ಚಿಂತಕರು ‘ದಲಿತ ಸಮಸ್ಯೆ’ಗೆ ಹಿಂದೂಯಿಸಂ ಕಾರಣ ಎಂಬುದನ್ನು ಒಪ್ಪಿಕೊಂಡೆ ಮತಾಂತರವನ್ನು ವಿರೋಧಿಸುತ್ತಾರೆ. ದಲಿತ ಸಮಸ್ಯೆಯ ಮೂಲ ‘ಹಿಂದೂಯಿಸಂ’ ಆಗಿದ್ದರೆ ಅದನ್ನು ಬಿಡುವುದರಲ್ಲಿ ತಪ್ಪೇನಿದೆ? ದಲಿತರ ಸಮಸ್ಯೆಗಳಿಗೆಲ್ಲ ‘ಹಿಂದೂಯಿಸಂ’ ಕಾರಣವಾಗಿದ್ದ ಪಕ್ಷದಲ್ಲಿ ಅದರಿಂದ ಬಿಡುಗಡೆ ಹೊಂದುವುದು ಸೂಕ್ತ ಮಾರ್ಗ ಎನ್ನುವುದರಲ್ಲಿ ಯಾವ ಅನುಮಾನವು ಇಲ್ಲ. ಹಾಗೆಯೇ ಈ ನಿರ್ಣಯದ ಜೊತೆಗೆ ಮತ್ತೊಂದು ನಿರ್ಣಯಕ್ಕೂ ಬರಬೇಕಾಗುತ್ತದೆ. ಅದೆಂದರೆ, ಮತಾಂತರವು ದಲಿತ ಸಮಸ್ಯೆಯ ಪರಿಹಾರ ಮಾರ್ಗವಾಗಿದ್ದಲ್ಲಿ ದಲಿತರು ಈ ಹಿಂದೆ ಎದುರಿಸುತ್ತಿದ್ದ ಸಮಸ್ಯೆಗಳು ಮತಾಂತರದ ನಂತರ ಕಾಣಿಸಿಕೊಳ್ಳಬಾರದು. ಅಂದರೆ ‘ಹಿಂದೂಯಿಸಂ’ನ ಭಾಗವಾಗಿರುವ ಕಾರಣಕ್ಕೆ ಪ್ರಾಪ್ತವಾಗಿರುವ ಕೆಲವು ವಿಶಿಷ್ಟ ಸಮಸ್ಯೆಗಳು ‘ಹಿಂದೂಯಿಸಂ’ ನಿಂದ ಹೊರಬಂದ ದಲಿತರಲ್ಲಿ ಗುರುತಿಸಲು ಸಾಧ್ಯವಾಗಬಾರದು. ಆದರೆ ಮತಾಂತರಗೊಂಡ ದಲಿತರ ವಾಸ್ತವ ಸ್ಥಿತಿಯನ್ನ ತೆರೆದಿಡುವ ಕೆಲವು ವಾದಗಳು ಇದಕ್ಕೆ ವ್ಯತಿರಿಕ್ತವಾಗಿವೆ.

  ಮತಾಂತರಗೊಂಡ ದಲಿತರ ವಾಸ್ತವ ಸ್ಥಿತಿಗತಿಯ ಕುರಿತು ಪ್ರಚಲಿತದಲ್ಲಿರುವ ವಾದಗಳು ಹೇಳುವಂತೆ, ‘ಮತಾಂತರ’ಗೊಂಡ ದಲಿತರು ವಾಸ್ತವದಲ್ಲಿ ಯಾವುದೇ ರೀತಿಯ ಗಮನರ್ಹ ಬದಲಾವಣೆ ಹೊಂದಿಲ್ಲ. ಅಂದರೆ ದಲಿತರು ಹಿಂದೆ ಯಾವ ಯಾವ ಸಮಸ್ಯೆಗೆ ಒಳಗಾಗಿದ್ದರೊ ಅವೇ ಸಮಸ್ಯೆಗಳು ಮತಾಂತರದ ನಂತರವೂ ಮುಂದುವರೆಯುತ್ತಿವೆ. ಅಲ್ಲಿಯೂ ಅವರನ್ನು ಚಚರ್್ಗಳಿಂದ ಹೊರಗಿಡಲಾಗುತ್ತಿದೆ. ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರಂತೆ ಅವರು ಭಾಗವಹಿಸುವಂತಿಲ್ಲ. ಹಾಗೆಯೇ ಮೂಲ ರಿಲಿಜನ್ನಿನವರು ಇವರನ್ನು ಕೀಳಾಗಿ ಕಾಣುವುದರ ಜೊತೆಗೆ ತಮ್ಮ ಮೂಲ ಜಾತಿಯವರು ಇವರನ್ನು ಸೇರಿಸಿಕೊಳ್ಳುವುದಿಲ್ಲ. ಹೀಗೆ ಮತಾಂತರಗೊಂಡ ದಲಿತರು ಮೂಲ ರಿಲಿಜನ್ನಿನವರಿಂದಲೂ ಹಾಗೂ ತಮ್ಮ ಮೂಲ ಜಾತಿಯವರಿಂದಲೂ ಇಬ್ಬಗೆಯ ಯಾತನೆಗೆ ಒಳಗಾಗಿದ್ದಾರೆ’ [John C.B.Webster (2001), James Massey (1995), Godwin Shiri (1997), Satish Deshpande (2008), Joshva Raja. (2009)}.

  ಒಂದು ಕಡೆ ಮತಾಂತರವೇ ದಲಿತ ಸಮಸ್ಯೆಯ ನಿವಾರಣೆಗೆ ಇರುವ ಅಂತಿಮ ಪರಿಹಾರ ಎಂಬ ವಾದ. ಮತ್ತೊಂದುಕಡೆ ಮತಾಂತರದಿಂದ ಯಾವುದೇ ಪ್ರಯೋಜನವಿಲ್ಲ ಎಂಬ ವಾದ. ಈ ಎರಡು ವಾದಗಳು ಈ ಮುಂದಿನ ಕೆಲವು ಪ್ರಶ್ನೆಗಳನ್ನು ನಮ್ಮೆದುರಿಡುತ್ತವೆ. ಮತಾಂತರವೆಂಬುದು ಮುಕ್ತಿಯ ಸಂಕೇತವೇ ಆಗಿದ್ದರೆ ಇಡೀ ದಲಿತ ಸಮೂಹವು ಅದನ್ನು ಒಪ್ಪಿಕೊಳ್ಳದಿರಲು ಕಾರಣವೇನು? ದಲಿತ ಸಮಸ್ಯೆಯ ಮೂಲ ‘ಹಿಂದೂಯಿಸಂ’ ಆಗಿದ್ದ ಪಕ್ಷದಲ್ಲಿ ‘ಮತಾಂತರ’ಗೊಂಡ ನಂತರವು ಅವೇ ‘ಸಮಸ್ಯೆ’ಗಳು ಮುಂದುವರೆಯಲು ಹೇಗೆ ಸಾಧ್ಯ? ‘ಹಿಂದೂಯಿಸಂ’ಗೆ ಸೀಮಿತವಾಗಿವೆ ಎಂದು ಹೇಳಲಾಗುವ ಕೆಲವು ಲಕ್ಷಣಗಳನ್ನು ಬೇರೆ ರಿಲಿಜನ್ಗಳಲ್ಲ್ಲಿಯೂ ಗುರುತಿಸಲು ಸಾಧ್ಯವೇ? ‘ಹಿಂದೂಯಿಸಂ’ಗೆ ಹೊರತಾದ ರಿಲಿಜನ್ಗಳು ಸಮಾನತೆಯ ತತ್ವವನ್ನು ಹೊಂದಿದ್ದರೆ ಮತಾಂತರಗೊಂಡ ದಲಿತರನ್ನು ಪ್ರತ್ಯೇಕವಾಗಿಡಲು ಕಾರಣವೇನು? ಮತಾಂತರದಿಂದ ದಲಿತರಿಗೆ ಯಾವ ಪ್ರಯೋಜನವು ಇಲ್ಲ ಎಂದಾದಮೇಲೆ ಇಂದಿಗೂ ಮತಾಂತರವನ್ನೇ ಪರಿಹಾರ ಎಂದು ನಂಬಿಕೊಂಡಿರಲು ಕಾರಣವೇನು? ಇಂತಹ ಹಲವು ಪ್ರಶ್ನೆಗಳು ಎದುರಾಗುತ್ತವೆ.

  ಇಂಥ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಚಿಂತಕರು ದಲಿತರನ್ನು ಅಜ್ಞಾನಿಗಳ ಸ್ಥಾನದಲ್ಲಿ ತಂದು ನಿಲ್ಲಿಸುತ್ತಾರೆ. ಹಾಗೂ ‘ಹಿಂದೂಯಿಸಂ’ ಮತ್ತು ‘ಜಾತಿವ್ಯವಸ್ಥೆ’ಯು ಬೇರೆ ರಿಲಿಜನ್ಗಳ ಮೇಲೆಯೂ ಪ್ರಭಾವ ಬೀರಿದೆ, ಹಾಗಾಗಿ ಅಲ್ಲಿಯೂ ಈ ಮತದ ತತ್ವಗಳು ವ್ಯಾಪಿಸಿದೆ ಎಂಬ ಉತ್ತರವನ್ನು ನೀಡಿ ಕೈತೊಳೆದುಕೊಳ್ಳುತ್ತಾರೆ. ಆದರೆ ಇಂಥ ಉತ್ತರಗಳಿಂದ ಯಾವ ಪ್ರಯೋಜನವು ಇಲ್ಲ. ಅಂದರೆ, ಒಂದುಕಡೆ ದಲಿತರು ಇನ್ನೂ ಹಿಂದೂಧರ್ಮದಲ್ಲಿ ಉಳಿದುಕೊಂಡಿರಲು ಕಾರಣ ಅವರ ಅಜ್ಞಾನ. ದಲಿತರ ಸಮಸ್ಯೆಯ ನಿವಾರಣೆಗೆ ಮತಾಂತರದ ಆಯ್ಕೆಯೊಂದೇ ಸೂಕ್ತ ಮಾರ್ಗ ಎಂದು ಹೇಳಿ, ಮತ್ತೊಂದುಕಡೆ ‘ಮತಾಂತರ’ದಿಂದ ಯಾವ ಪ್ರಯೋಜನವು ಇಲ್ಲ. ಬೇರೆ ರಿಲಿಜನ್ಗಳಲ್ಲಿಯೂ ‘ಜಾತಿಶ್ರೇಣಿಕರಣ’ ಇದೆ ಎಂದು ಹೇಳುವುದು ಕೇವಲ ಗೊಂದಲಗಳನ್ನು ಮಾತ್ರ ಮುಂದಿಡುತ್ತದೆ. ಇಂಥ ಗೊಂದಲಗಳು ಅಂತಿಮವಾಗಿ ನಮ್ಮನ್ನು ‘ದಲಿತ ಸಮಸ್ಯೆ’ಯ ನಿವಾರಣೆಯೇ ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ತಂದು ನಿಲ್ಲಿಸುತ್ತವೆಯೇ ಹೊರತು ಸಮಸ್ಯೆಗೆ ಯಾವ ಪರಿಹಾರವು ಸಿಗುವುದಿಲ್ಲ. ಈ ಕಾರಣಕ್ಕೆ ‘ದಲಿತ ಸಮಸ್ಯೆ’ಗೆ ‘ಮತಾಂತರ’ವನ್ನು ಪರಿಹಾರ ಎಂದು ಸೂಚಿಸುವ ವಾದವನ್ನು ಮರುಪರಿಶೀಲಿಸುವುದು ಸೂಕ್ತವೆನಿಸುತ್ತದೆ.

(ಕೃಪೆ: ಶಂಕರಪ್ಪ.ಎನ್.ಎಸ್. ದಲಿತ ಚಳುವಳಿಗಳ ಸ್ವರೂಪ ಮತ್ತು ಸಮಸ್ಯೆಗಳು. ಪಿಹೆಚ್ಡಿ ಮಹಾಪ್ರಬಂಧ. ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟ).

Read more from ಲೇಖನಗಳು
5 ಟಿಪ್ಪಣಿಗಳು Post a comment
 1. Goutham
  ನವೆಂ 3 2015

  ‘ದಲಿತ ಸಮಸ್ಯೆ’ಗೆ ‘ಮತಾ೦ತರ’ವನ್ನು ಪರಿಹಾರ ಎ೦ದು ಸೂಚಿಸುವ ವಾದಕ್ಕೇಕೆ ಮಹತ್ವ?

  ಉತ್ತರ
  • Goutham
   ನವೆಂ 7 2015

   ರಜತ್ ರವರೆ, ನಮಸ್ಕಾರಗಳು. ದಯವಿಟ್ಟು ವ್ಯಂಗ ಅಥವಾ ಪರಿಹಾಸs ಪ್ರತಿಕ್ರಿಯೆಗಳನ್ನು ನೀಡಬೇಡಿ. ಇದು ನಿಮಗೆ ನನ್ನ ಮನವಿ.

   ಉತ್ತರ
   • Vignesh
    ನವೆಂ 7 2015

    ಅವರ ಪ್ರಶ್ನೆಯಲ್ಲಿ ವ್ಯಂಗ್ಯ ಎಲ್ಲಿದೆ? ಇಲ್ಲದ್ದನ್ನು ಆರೋಪಿಸ ಬೇಡಿ. ಅದೊಂದು ಪ್ರಶ್ನೆ. ಉತ್ತರ ಇದ್ದರೆ ಕೊಡಿ. ನೈತಿಕ ಸಲಹೆಗಳು ಮತ್ತು ಸಂಶೋಧನೆ ಒಂದೇ ಅಲ್ಲ.

    ಉತ್ತರ
 2. ಪೂಜಾ ಶರತ್ ಕುಮಾರ್
  ನವೆಂ 10 2015

  Rajat avara comment delete maadiddu yaaru mattu yaake? Nilumeyalli asahane yaake belyeuttide?

  ಉತ್ತರ

Trackbacks & Pingbacks

 1. ದಲಿತ ಸಮಸ್ಯೆಗಳಿಗೆ ‘ಮತಾಂತರ’ ಪರಿಹಾರವೇ? | Nanna Kanasina Bharat

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments