ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 4, 2015

18

ವಸಾಹತುಪ್ರಜ್ಞೆಯಲ್ಲಿ ಪುಣ್ಯಯೋನಿ-ಪಾಪಯೋನಿ

‍ನಿಲುಮೆ ಮೂಲಕ

– ವಿನಾಯಕ್ ಹಂಪಿಹೊಳಿ

ಭಗವದ್ಗೀತೆಇತ್ತೀಚೆಗೆ ಕೆ. ಎಸ್. ಭಗವಾನ್ ಎಂಬ ಬುದ್ಧಿಜೀವಿಯೋರ್ವರಿಂದಾಗಿ ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕಗಳು ಭಾರೀ ವಿವಾದಕ್ಕೊಳಗಾದವು. ಆ ಶ್ಲೋಕಗಳಲ್ಲಿ ಕೆಲವೇ ವರ್ಗದ ಜನರನ್ನು ಪುಣ್ಯಯೋನಿಗಳೆಂತಲೂ ಉಳಿದ ಬಹುಸಂಖ್ಯಾತರನ್ನು ಪಾಪಯೋನಿಗಳೆಂತಲೂ ಕೃಷ್ಣ ಕರೆದದ್ದು ಈ ಹಿಂದೂ ರಿಲಿಜನ್ನಿನಲ್ಲಿ ಇರುವ ಸಾಮಾಜಿಕ ಅಸಮಾನತೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಚಿತ್ರಿಸಲಾಯಿತು. ಆ ಎರಡು ಶ್ಲೋಕಗಳನ್ನು ಗದ್ದೆಯಲ್ಲಿನ ಕಳೆಗೆ ಹೋಲಿಸಿ, ಇವುಗಳನ್ನು ತೆಗೆದು ಹಾಕಬೇಕೆಂದು ಅಭಿಪ್ರಾಯಪಟ್ಟರು. ಆ ಎರಡು ಶ್ಲೋಕಗಳು “ಶ್ರುಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ” ಎಂಬ ಉಪನಿಷದ್ವಾಕ್ಯಕ್ಕೆ ವಿರುದ್ಧವಾದ ಆಶಯವನ್ನು ಹೊಂದಿದೆ ಎಂಬುದಾಗಿ ಸಾರಿದರು. ಈ ಹಿಂದೂ ಎಂಬ ಧರ್ಮದಲ್ಲಿ ಎರಡು ಭಾಗಗಳಿವೆ, ಅವು ಸಾಮಾಜಿಕ ಮತ್ತು ಅಧ್ಯಾತ್ಮಿಕ, ಎರಡೂ ಕ್ಷೇತ್ರಗಳಲ್ಲಿ ಅನೇಕ ಕೃತಿಗಳಿವೆ, ಅದರಲ್ಲಿ ಅಧ್ಯಾತ್ಮಿಕ ಕೃತಿಗಳ ಕುರಿತು ಅವರಿಗೆ ಸಮ್ಮತಿಯಿದೆ, ಆದರೆ ಸಾಮಾಜಿಕ ಕೃತಿಗಳ ಕುರಿತು ಅವರಿಗೆ ಭಾರೀ ಆಕ್ಷೇಪವಿದೆ ಎಂಬ ಅವರ ಹೇಳಿಕೆಯನ್ನು ಅವರ ವಾದದ ಸಾರಾಂಶ ಎನ್ನಬಹುದು.

ನಮ್ಮ ಸಂಪ್ರದಾಯಗಳು ಪುನರ್ಜನ್ಮವನ್ನು ನಂಬುತ್ತವೆ. ಮತ್ತು ಜೀವನದಲ್ಲಿ ಕಾಣುವ ಪರಿಣಾಮಗಳಿಗೆ ಪ್ರತ್ಯಕ್ಷವಾಗಿ ಕಾಣದ ಕಾರಣಗಳನ್ನು ಪೂರ್ವಜನ್ಮಕ್ಕೆ ಹೊಂದಿಸಿ ಅರಿಯುವದು ನಮ್ಮಲ್ಲಿ ಮೊದಲಿನಿಂದ ಇರುವ ಪರಂಪರೆ. ತನ್ಮೂಲಕ ಒಬ್ಬ ಜೀವನದಲ್ಲಿ ಪಡೆದಿರುವ ಪ್ರತಿಯೊಂದಕ್ಕೂ ಒಂದು ಕಾರಣವನ್ನು ಹುಡುಕಿಕೊಳ್ಳುವದು ಸಹಜವಾದ ಪ್ರಕ್ರಿಯೆ. ಆತ್ಮಕ್ಕೆ ಲಿಂಗವಿರುವದಿಲ್ಲ, ಲಿಂಗವೆಂಬುದು ಕೇವಲ ದೇಹದ ಒಂದು ಗುಣ ಎಂಬುದು ನಮ್ಮ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿರುವ ವಿಚಾರ. ಹೀಗಾಗಿ ಆತ್ಮ-ಪುನರ್ಜನ್ಮ-ದೇಹಗಳ ಕುರಿತು ಇರುವ ಈ ಆಧ್ಯಾತ್ಮಿಕ ವಿಚಾರಗಳಲ್ಲಿ ಒಂದು ಆತ್ಮ ಒಮ್ಮೆ ಗಂಡಾಗಿ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಮತ್ತೊಂದು ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುವ ಕಲ್ಪನೆಗಳು ಕಥೆಗಳು ಹೇರಳವಾಗಿ ಕಂಡುಬರುತ್ತವೆ. ಹೀಗಾಗಿ ಜನ್ಮದಿಂದ ಜನ್ಮಕ್ಕೆ ಅಲೆಯುವ ಒಂದು ಆತ್ಮ ಗಂಡು ದೇಹ ಪಡೆಯುವದಕ್ಕೋ, ಇಲ್ಲವೇ ಹೆಣ್ಣು ದೇಹ ಪಡೆಯುವದಕ್ಕೋ ಒಂದು ಕಾರಣ ಬೇಕಾಗುತ್ತದೆ.

ಜನನ ಎನ್ನುವದು ಒಂದು ಆತ್ಮದ ಆರಂಭವೆಂದಾಗಲೀ, ಮರಣವನ್ನು ಅಂತ್ಯವಾಗಲೀ ನಮ್ಮ ಸಂಪ್ರದಾಯಗಳು ತಿಳಿಯುವದಿಲ್ಲ. ಜನನ ಮರಣಗಳು ಆತ್ಮದ ಅನಾದಿ ಪ್ರಯಾಣದ ಹಂತಗಳಷ್ಟೇ. ಮನುಷ್ಯ ಜನ್ಮ ಪಡೆಯಲು ಪುಣ್ಯ ಮಾಡಿರಬೇಕು ಎನ್ನಲು ಕಾರಣ ಮನುಷ್ಯ ಜನ್ಮದಲ್ಲಿ ಪುರುಷಾರ್ಥ ಸಾಧನೆ ಮಾಡಬಹುದು ಎಂಬ ಕಾರಣಕ್ಕೆ. ಪುಣ್ಯವಂತ ಮತ್ತು ಪಾಪವಂತ ಎಂದು ಕರೆಯುವಾಗ ಅಲ್ಲಿ ಯಾವುದೋ ಸಂದರ್ಭದ ಆಧಾರವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂಬುದು ಗಮನಾರ್ಹ. ಒಂದಾನೊಂದು ಅಧಿಕಾರವನ್ನು ಪಡೆಯುವಿಕೆಯ ಆಧಾರದ ಮೇಲೆ ಅದನ್ನು ಪಡೆದವನನ್ನು ಪುಣ್ಯಶಾಲಿಯೆಂದು ಕರೆಯುವದು ಅತೀ ಸಾಮಾನ್ಯ ವಿಚಾರ. ೪ ಮಕ್ಕಳ ತಾಯಿಯಾಗಲೂ ಕೂಡ ಹೆಣ್ಣಾದವಳು ಪುಣ್ಯ ಮಾಡಿರಬೇಕು ಎಂಬ ಮಾತು ಹಳ್ಳಿಯ ಜನರಿಂದ ಕೇಳಲ್ಪಡುವದು ಅತೀ ಸಾಮಾನ್ಯ ವಿಚಾರ. ಹೀಗಾಗಿ ಪುಣ್ಯವಂತ, ಅದನ್ನು ಗಳಿಸದ ಪಾಪವಂತ ಎಂಬ ಭೇದಗಳು ಒಂದು ಸಾಂದರ್ಭಿಕ ವಸ್ತುವನ್ನು ಪಡೆದುಕೊಳ್ಳುವಿಕೆ ಇಲ್ಲವೇ ಪಡೆಯದಿರುವಿಕೆ ಎಂಬ ಸಂದರ್ಭದಲ್ಲಿ ಮಾತ್ರ ಅರ್ಥೈಸಲು ಸಾಧ್ಯ. ಬಹಳ ಪುಣ್ಯ ಮಾಡಿದೀಯಪ್ಪ ಎಂದು ಒಬ್ಬ ಹಿರಿಯ ಹೇಳಬೇಕಾದರೆ ಅದರ ಹಿಂದೆ ಸಂದರ್ಭದ ಸಾಂಗತ್ಯ ಬೇಕು.

ಹೀಗೆಯೇ ಸಿಗಬೇಕಾದದ್ದು ಸಿಗದಿದ್ದಾಗ, ಬರಬಾರದಿದ್ದು ಬಂದಾಗ ಅದನ್ನು ಪೂರ್ವಜನ್ಮದ ಪಾಪಕ್ಕೆ ಹಚ್ಚುತ್ತೇವೆ. ಪೂರ್ವಜನ್ಮ ಕೃತಂ ಪಾಪಂ ವ್ಯಾಧಿ ರೂಪೇಣ ಪೀಡತಿ ಎಂದು ನಮ್ಮಲ್ಲಿ ಮಾತಿದೆ. ಪೂರ್ವಜನ್ಮದ ಪಾಪವು ವ್ಯಾಧಿರೂಪದಲ್ಲಿ ಕಾಡುತ್ತದೆ ಎಂದು ಅರ್ಥ. ಮದುವೆಯಾಗಿ ಮಕ್ಕಳಾಗದಿದ್ದಾಗ ಇದು ಯಾವುದೋ ಜನ್ಮದ ಪಾಪ ಎಂದು ಭಾವಿಸುವದು ನಮ್ಮ ಸಮಾಜದಲ್ಲಿ ಕಾಣುವ ಅತ್ಯಂತ ಸಹಜ ಭಾವನೆ. ಹೀಗೆ ಪುಣ್ಯವಂತ, ಪಾಪವಂತ ಎಂಬ ಶಬ್ದಗಳು ಯಾವಾಗಲೂ ಸಾಂದರ್ಭಿಕವಾಗಿಯೇ ಪ್ರಯೋಗವಾಗುತ್ತವೆ. ಆ ಸಂದರ್ಭದಿಂದಾಚೆ ಆ ರೀತಿಯ ಭೇದಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ವೈದಿಕ ಸಂಪ್ರದಾಯಗಳು ಬ್ರಾಹ್ಮಣ ಅಥವಾ ಕ್ಷತ್ರಿಯ ಪುರುಷನಾಗಿ ಹುಟ್ಟಿ ವೈದಿಕ ಕರ್ಮಗಳಲ್ಲಿ ಅಧಿಕಾರ ಪಡೆಯುವದನ್ನೂ ಪುಣ್ಯ ಎಂದು ತಿಳಿಯುತ್ತವೆ. ಮತ್ತು ಅದೇ ಸಂದರ್ಭದಲ್ಲಿ ಆ ಅಧಿಕಾರ ಪಡೆಯದವರು ಪಾಪವಂತರಾಗುತ್ತಾರೆ. ಆದರೆ ಭಕ್ತಿಮಾರ್ಗದಲ್ಲಿ ಎಲ್ಲರಿಗೂ ಸಮಾನಾಧಿಕಾರವಿದೆ. ಪುರಾಣ, ವ್ರತ ಪೂಜೆ ಇವುಗಳಲ್ಲೆಲ್ಲ ಸ್ತ್ರೀಯರು, ಶೂದ್ರರು, ಬ್ರಾಹ್ಮಣರು ಎಲ್ಲರೂ ತೊಡಗಿಕೊಳ್ಳಬಹುದಾಗಿದೆ. ಹೀಗಾಗಿಯೇ ನಮ್ಮ ದೇಶದಲ್ಲಿ ಸಾಹಿತ್ಯ, ಸಂಗೀತ, ನಾಟ್ಯಕಲೆಗಳಲ್ಲೆಲ್ಲ ಎಷ್ಟೆಷ್ಟು ಸಂಪ್ರದಾಯಗಳಿವೆಯೋ ಅವೆಲ್ಲವುಗಳಲ್ಲೂ ಈ ಪೌರಾಣಿಕ ಮತ್ತು ಐತಿಹಾಸಿಕ (ರಾಮಾಯಣ ಮತ್ತು ಮಹಾಭಾರತ) ಕಥೆಗಳು ತುಂಬಿಕೊಂಡಿವೆ. ಕವಿಗಳು ಈ ಕಥೆಗಳನ್ನು ತಮ್ಮದೇ ಕಲ್ಪನೆಯಲ್ಲಿ ಬರೆದಿದ್ದಾರೆ, ಗಾಯಕರು ಹಾಡಿದ್ದಾರೆ, ನರ್ತಕರು ನಟಿಸಿದ್ದಾರೆ. ಮೂರುಸಾವಿರ ವರ್ಷಗಳಲ್ಲಿ ಬೆಳೆದಿರುವ ಎಲ್ಲ ರೀತಿಯ ಕಲೆಗಳಲ್ಲೂ ಹಾಸುಹೊಕ್ಕಾಗಿ ಬೆಸೆದುಕೊಂಡಿದೆ.
ಹೀಗೆ ಸ್ವರ್ಗ ಮುಂತಾದ ಅಭ್ಯುದಯಕ್ಕೆ ಎರಡು ಮಾರ್ಗಗಳು ಮೊದಲನೇದು ವೇದೋಕ್ತ ಕರ್ಮಮಾರ್ಗ ಮತ್ತು ಎರಡನೇಯದು ಪುರಾಣೋಕ್ತ ಭಕ್ತಿಮಾರ್ಗ. ಹಾಗೆಯೇ ಮೋಕ್ಷಕ್ಕೂ ಎರಡು ಮಾರ್ಗಗಳು, ಒಂದು ವೈದಿಕ ಕರ್ಮಗಳ ಸನ್ಯಾಸದಿಂದ ಮತ್ತು ಉಪನಿಷತ್ತಿನಿಂದ ಆತ್ಮಜ್ಞಾನವನ್ನು ಪಡೆಯುವದು, ಇನ್ನೊಂದು ಮಾರ್ಗ, ಫಲಾಪೇಕ್ಷೆಯಿಲ್ಲದೇ ಭಗವಂತನಿಗೆ ಕರ್ಮಗಳನ್ನು ಸಮರ್ಪಿಸಿ ಸತ್ವಶುದ್ಧನಾಗಿ ಪುರಾಣಗಳಿಂದ ಆತ್ಮಜ್ಞಾನವನ್ನು ಪಡೆಯುವದು. ಅಭ್ಯುದಯವನ್ನು ಆಶಿಸುವವರು ಪ್ರವೃತ್ತಿಧರ್ಮೀಯರು. ಮೋಕ್ಷವನ್ನಪೇಕ್ಷಿಸುವವರು ನಿವೃತ್ತಿಧರ್ಮೀಯರು. ಮೋಕ್ಷಕ್ಕಿರುವ ಎರಡು ಹಾದಿಗಳಲ್ಲಿ ಭಕ್ತಿಯ ಮಾರ್ಗದ ಶ್ರೇಷ್ಠತೆಯನ್ನು ಕೃಷ್ಣ ಭಗವದ್ಗೀತೆಯ ರಾಜವಿದ್ಯಾರಾಜಗುಹ್ಯಯೋಗದಲ್ಲಿ ಹೇಳಿದ್ದನ್ನು ನಾವೆಲ್ಲರೂ ಓದಿದ್ದೇವೆ.

ಈ ಹಿನ್ನೆಲೆಯಲ್ಲಿ ಬೆಳೆದು ಬಂದ ನಮಗೆಲ್ಲರಿಗೂ ೯:೩೨ ಮತ್ತು ೯:೩೩ ಶ್ಲೋಕಗಳು ಮತ್ತು ಅದಕ್ಕೆ ಶಂಕರಾಚಾರ್ಯರು ನೀಡಿರುವ ಭಾಷ್ಯ ಸಹಜವಾಗಿ ಅರ್ಥವಾಗುತ್ತದೆ. ಈ ಶ್ಲೋಕಗಳು ಭಕ್ತಿಯ ಹೆಚ್ಚುಗಾರಿಕೆಯನ್ನು ಹೇಳುವದಕ್ಕಾಗಿ ಬಂದಿದೆಯೆಂದು ಶಂಕರಾಚಾರ್ಯರು ೯:೩೦ರ ಭಾಷ್ಯದಲ್ಲಿಯೇ ಸ್ಪಷ್ಟಪಡಿಸಿದ್ದಾರೆ. ಒಮ್ಮೆ ಇವುಗಳನ್ನು ನೋಡಿಕೊಂಡು ಬರೋಣ.

ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಽಪಿ ಸ್ಯುಃ ಪಾಪಯೋನಯಃ | ಸ್ತ್ರೀಯೋ ವೈಶ್ಯಾಸ್ತಥಾ ಶೂದ್ರಾಸ್ತೇಽಪಿ ಯಾಂತಿ ಪರಾಂ ಗತಿಂ
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ | ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್ ||

ಪಾರ್ಥನೇ, ನನ್ನನ್ನು ಆಶ್ರಯಿಸಿದರೆ ಯಾರು ಪಾಪಯೋನಿಗಳಾಗಿರುವರೋ ಅಂಥ ಸ್ತ್ರೀಯರೂ, ಶೂದ್ರರೂ ಪರಗತಿಯನ್ನು ಹೊಂದುವರು. ಹೀಗಿರುವಲ್ಲಿ ಪುಣ್ಯಯೋನಿಗಳೂ ಭಕ್ತರೂ ಆದ ಬ್ರಾಹ್ಮಣರೂ ರಾಜರ್ಷಿಗಳೂ (ಪರಮಗತಿಯನ್ನು ಹೊಂದುವರೆಂದು) ಹೇಳತಕ್ಕದ್ದೇನಿದೆ? ಅನಿತ್ಯವೂ ಅಸುಖವೂ ಆದ ಈ ಲೋಕವನ್ನು ಪಡೆದಿರುವ (ನೀನು) ನನ್ನನ್ನೇ ಭಜಿಸು.
ಈ ಎರಡು ಶ್ಲೋಕಗಳಿಗೆ ಶಂಕರಾಚಾರ್ಯರ ಭಾಷ್ಯ ಹೀಗಿದೆ.

ಕಿಂ ಚ ಮಾಂ ಹಿ ಯಸ್ಮಾತ್ ಪಾರ್ಥ ವ್ಯಪಾಶ್ರಿತ್ಯ ಮಾಮ್ ಆಶ್ರಯತ್ವೇನ ಗೃಹಿತ್ವಾ ಯೇಽಪಿ ಸ್ಯುಃ ಭವೇಯುಃ ಪಾಪಯೋನಯಃ ಪಾಪಾ ಯೋನಿಃ ಯೇಷಾಂ ತೇ ಪಾಪಯೋನಯಃ ಪಾಪಜನ್ಮಾನಃ | ಕೇತೇ ಇತಿ? ಆಹ – ಸ್ತ್ರಿಯಃ ವೈಶ್ಯಾಃ ತಥಾ ಶೂದ್ರಾಃ ತೇಽಪಿ ಯಾನ್ತಿ ಗಚ್ಛಂತಿ ಪರಾಂ ಪ್ರಕೃಷ್ಟಾಂ ಗತಿಮ್ | ೯:೩೨

ಮತ್ತು ನನ್ನನ್ನು ಆಶ್ರಯಿಸಿದರೆ ನನ್ನನ್ನು ಆಶ್ರಯವಾಗಿ ಇಟ್ಟುಕೊಂಡರೆ, ಯಾರು ಯಾರು ಪಾಪಯೋನಿಗಳಾಗಿರುವರೋ ಪಾಪ(ದ ಫಲವಾಗಿರುವ) ಯೋನಿಯು ಯಾರದೋ ಅವರು ಪಾಪಯೋನಿಗಳು; (ಯಾರು) ಪಾಪಜನ್ಮದವರಾಗಿರುವರೋ, ಅಂಥವರು, ಅವರು ಯಾರು? ಎಂದರೆ ಹೇಳುತ್ತಾನೆ. ಹೆಂಗಸರು, ವೈಶ್ಯರು ಮತ್ತು ಶೂದ್ರರು ಅವರು ಕೂಡ ಹೆಚ್ಚಿನ ಉತ್ತಮವಾದ ಗತಿಯನ್ನು ಹೊಂದುವರು, ಸೇರುವರು. (ಹಿ = ಯಸ್ಮಾತ್) ಹೀಗಿರುವದಷ್ಟೇ?

ಕಿಂ ಪುನಃ ಬ್ರಾಹ್ಮಣಾಃ ಪುಣ್ಯಾಃ ಪುಣ್ಯಯೋನಯಃ ಭಕ್ತಾಃ ರಾಜರ್ಷಯಃ ತಥಾ | ರಾಜಾನಶ್ಚ ತೇ ಋಷಯಶ್ಚ ಇತಿ ರಾಜರ್ಷಯಃ | ಯತ ಏವಮ್ ಅತಃ ಅನಿತ್ಯಂ ಕ್ಷಣಭಂಗುರಂ ಅಸುಖಂ ಚ ಸುಖವರ್ಜಿತಮ್ ಇಮಂ ಲೋಕಂ ಮನುಷ್ಯಲೋಕಂ ಪ್ರಾಪ್ಯ ಪುರುಷಾರ್ಥಸಾಧನಂ ದುರ್ಲಭಂ ಮನುಷ್ಯತ್ವಂ ಲಬ್ಧ್ವಾ ಭಜಸ್ವ ಸೇವಸ್ವ ಮಾಮ್ || ೯:೩೩

ಇನ್ನು ಪುಣ್ಯವಾದ ಎಂದರೆ ಪುಣ್ಯಯೋನಿಯಲ್ಲಿ ಹುಟ್ಟಿದ, ಭಕ್ತರಾದ ಬ್ರಾಹ್ಮಣರೂ ರಾಜರ್ಷಿಗಳೂ – ರಾಜರೂ ಋಷಿಗಳೂ ಆಗಿರುವವರು ರಾಜರ್ಷಿಗಳು. (ಅವರು – ಪರಮಗತಿಯನ್ನು ಹೊಂದುವದೆಂದು) ಹೇಳುವದೇನಿದೆ? ಹೀಗಿರುವದರಿಂದ ಈ ಕಾರಣದಿಂದ ಅನಿತ್ಯವಾದ, ಕ್ಷಣದಲ್ಲಿ ನಾಶವಾಗುವಂಥದ್ದೂ, ಅಸುಖವೂ ಸುಖವರ್ಜಿತವೂ ಆಗಿರುವ, ಈ ಲೋಕವನ್ನು ಎಂದರೆ ಮನುಷ್ಯಲೋಕವನ್ನು ಪಡೆದಿರುವ, ಪುರುಷಾರ್ಥವನ್ನು ಸಾಧನ ಮಾಡುವ ದುರ್ಲಭವಾದ ಮನುಷ್ಯತ್ವವನ್ನು ಪಡೆದಿರುವ, (ನೀನು) ನನ್ನನ್ನು ಭಜಿಸು, ಸೇವಿಸು.

ಇಲ್ಲಿ ಸ್ತ್ರೀಯರು, ಶೂದ್ರರು ಮತ್ತು ವೈಶ್ಯರನ್ನು ಸಾರ್ವಕಾಲಿಕ ಪಾಪಿಗಳೆಂದು ಕರೆದಿಲ್ಲ ಎಂಬುದು ಸ್ಪಷ್ಟ. ಅವರು ವೈದಿಕ ಕರ್ಮಗಳನ್ನು ಆಚರಿಸುವ ಅಧಿಕಾರ ಪಡೆದಿಲ್ಲ ಆದರೆ ಬ್ರಾಹ್ಮಣರು ಮತ್ತು ಕ್ಷತ್ರಿಯರು ಪಡೆದಿದ್ದಾರೆ ಎಂಬ ಸಂದರ್ಭದಲ್ಲಿ ಮಾತ್ರ ಪುಣ್ಯಯೋನಿ ಮತ್ತು ಪಾಪಯೋನಿ ಪದಗಳ ಪ್ರಯೋಗವಾಗಿದೆ ಎಂಬುದು ಸಹಜವಾಗಿ ಹೊರಡುವ ಅರ್ಥವಾಗಿದೆ. ಋಗ್ವೇದದಲ್ಲಿ ಸಾವಿತ್ರಿಯಂಥ ಮಂತ್ರದೃಷ್ಟಾರೆಯರಿದ್ದರೂ, ಉಪನಿಷತ್ತಿನಲ್ಲಿ ಗಾರ್ಗಿ ಮೈತ್ರೇಯಿಯರಂಥ ಜ್ಞಾನಿಗಳಿದ್ದರೂ, ಸತ್ಯಕಾಮನಂಥ ದಾಸೀಪುತ್ರರಿಗೆ ವೇದಾಧಿಕಾರವಿದ್ದರೂ, ಸಂಪ್ರದಾಯಗಳು ಬೆಳೆದಂತೆ, ವೈದಿಕ ಕರ್ಮಗಳು ಕೇವಲ ಬ್ರಾಹ್ಮಣ ಮತ್ತು ಕ್ಷತ್ರಿಯ ಪುರುಷರಿಂದ ಮಾತ್ರ ನೇರವೇರಿಸಲ್ಪಡಲಾರಭಿಸಿದವು. ಸಂಪ್ರದಾಯಗಳು ಹೆಚ್ಚಿದಂತೆ, ವಲಸೆಗಳು ಹೆಚ್ಚಿದಂತೆ, ಸ್ತ್ರೀಯರ ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಿದ್ದರಿಂದ, ಸಾಮಾಜಿಕ ಅಗತ್ಯತೆಗಳಿಗನುಗುಣವಾಗಿ ಶೂದ್ರ ಮತ್ತು ವೈಶ್ಯರ ಜವಾಬ್ದಾರಿಗಳು ಹೆಚ್ಚಿದ್ದರಿಂದ ಅವರು ಕರ್ಮಮಾರ್ಗಕ್ಕಿಂತ ಭಕ್ತಿಮಾರ್ಗವೇ ಅನುಕೂಲಕರವೆಂದು ಆಯ್ದುಕೊಂಡಿರಬಹುದು ಅದು ಕ್ರಮೇಣವಾಗಿ ವೈದಿಕ ಕರ್ಮಗಳಲ್ಲಿ ಅವರಿಗೆ ಅನಧಿಕಾರತ್ವವನ್ನು ತಂದಿರಬಹುದು. ಎಲ್ಲ ರೀತಿಯ, ಜಾತಿಗಳು ಉದಯಿಸುತ್ತಿದ್ದಂತೆ, ಆ ಜಾತಿಗಳೇ ಸ್ವತಃ ವೈದಿಕ ಕರ್ಮಗಳ ಬದಲಾಗಿ ಪೌರಾಣಿಕ ವ್ರತ-ಪೂಜೆಗಳ ಭಕ್ತಿಮಾರ್ಗವನ್ನು ಆಯ್ದುಕೊಂಡಿರಬಹುದು.

ಈ ವಿವರಣೆಯನ್ನು ನೀಡಲು ಕಾರಣವೇನೆಂದರೆ, ಸುಮ್ಮಸುಮ್ಮನೇ ಶೂದ್ರರಿಗೆ, ವೈಶ್ಯರಿಗೆ ಸ್ತ್ರೀಯರಿಗೆ ವೇದಾಧಿಕಾರವಿಲ್ಲ ಎಂದು ಒಂದಾನೊಂದು ಸ್ಮೃತಿಯಲ್ಲಿ ಘೋಷಿಸಿ, ಅದನ್ನು ಇಡೀ ಭಾರತದ ಎಲ್ಲ ಸಂಪ್ರದಾಯಗಳ ಮೇಲೂ ರಾಜರುಗಳು ಹೇರಹೊರಡುವದು ವಾಸ್ತವವಾಗಿ ಅಸಂಭವವಾದ ಮಾತು. ಇಷ್ಟೆಲ್ಲ ತಂತ್ರಜ್ಞಾನಗಳನ್ನಿಟ್ಟುಕೊಂಡ ಈಗಿನ ಕಾಲದಲ್ಲಿ ಹಳ್ಳಿಹಳ್ಳಿಗಳಲ್ಲಿ ನಮ್ಮ ಸಂವಿಧಾನವನ್ನೇ ಸರಿಯಾಗಿ ಹೇರಲಾಗದ, ಅರ್ಧಕ್ಕರ್ಧ ಪ್ರದೇಶಗಳನ್ನು ಕಳೆದುಕೊಂಡ ಈಗಿನ ಭಾರತ ಕಣ್ಣ ಮುಂದೇ ಇರುವಾಗ, ಈಗಿರುವದಕ್ಕಿಂತ ಎರಡು ಪಟ್ಟು ವಿಸ್ತಾರವಾದ ಅಖಂಡ ಭಾರತದಲ್ಲಿ, ವೇದ ಕೇಳುವ ಶೂದ್ರ ಕಿವಿಗೆ ಕಾದ ಸೀಸ ಬಿಡುವ ಕಾನೂನನ್ನು ಒಂದಾನೊಂದು ಸ್ಮೃತಿಯಲ್ಲಿ ಸೃಷ್ಟಿಸಿಕೊಂಡು, ಆಸೇತು ಹಿಮಾಚಲದವರೆಗೆ ಪ್ರಚಲಿತದಲ್ಲಿರುವ ಎಲ್ಲ ಸಂಪ್ರದಾಯಗಳಲ್ಲಿ ರಾಜರುಗಳಿಂದ ಕಡ್ಡಾಯವಾಗಿ ಜಾರಿಗೆ ತರುವ ಸಿಸ್ಟಂ ಭಾರತದಲ್ಲಿತ್ತೇ ಎಂಬುದು ನಿಜಕ್ಕೂ ಪ್ರಶ್ನಾರ್ಹ. ಹೀಗಾಗಿ ಅನೇಕ ಜಾತಿಗಳು ವೈದಿಕ ಕರ್ಮಗಳನ್ನು ಸ್ವತಃ ತ್ಯಜಿಸಿ ಭಕ್ತಿ ಮಾರ್ಗವೇ ಅವರ ಜೀವನಶೈಲಿಗೆ ಶ್ರೇಯಸ್ಕರವೆಂದು ನಿರ್ಣಯಿಸಿ ಸಂಪ್ರದಾಯಗಳನ್ನು ರೂಪಿಸಿಕೊಂಡಿರುವದು ಹೆಚ್ಚು ಸಂಭವನೀಯ ವಿವರಣೆ ಎನ್ನಿಸುತ್ತದೆ. ಆ ನಿರ್ಣಯವೇ ವೈದಿಕ ಪರಂಪರೆ ಅನುಸರಿಸುವ ಬ್ರಾಹ್ಮಣ ಕ್ಷತ್ರಿಯ ಸಂಪ್ರದಾಯಗಳಷ್ಟೇ ಅಧಿಕಾರಿ ಎಂಬ ಸ್ಮೃತಿವಾಕ್ಯಗಳಿಗೆ ಕಾರಣವಾಗಿರಬಹುದು. ಹೀಗಾಗಿ ಆ ಅಧಿಕಾರವನ್ನು ಉಳಿಸಿಕೊಂಡ ಸಂಪ್ರದಾಯಗಳು ಪುಣ್ಯವಂತವೆನಿಸಿಕೊಳ್ಳುವದು ವೈದಿಕ ಸ್ಮೃತಿಗಳಲ್ಲಿ ಸಹಜ.

ಗೀತೆಯಲ್ಲಿ ಇರುವ ಈ ಪುಣ್ಯಯೋನಿ-ಪಾಪಯೋನಿ ಶಬ್ದಗಳು, ಕಳೆದ ೨೦೦೦ ವರ್ಷಗಳಲ್ಲಿ ಸೃಷ್ಟಿಸದ ವಿವಾದವನ್ನು ಈಗ ಇದ್ದಕ್ಕಿದ್ದಂತೆ ಸೃಷ್ಟಿಸಿವೆ. ಇದಕ್ಕೆ ಕಾರಣವೂ ಅತ್ಯಂತ ಸ್ಪಷ್ಟವಾಗಿದೆ. ವಸಾಹತುಪ್ರಜ್ಞೆಯಡಿಯಲ್ಲಿ ನಮ್ಮ ಸಂಪ್ರದಾಯಗಳನ್ನು ಹಿಂದೂ ರಿಲಿಜನ್ನು ಎಂದು ಭಾವಿಸಿದಾಗ, ಪಾಪ ಎನ್ನುವದು ಸಿನ್ ಎಂಬ ಶಬ್ದಕ್ಕೆ ಸಮೀಕರಣ ಹೊಂದುತ್ತದೆ. ಹೀಗಾಗಿ ನಮ್ಮ ಬುದ್ಧಿಜೀವಿಗಳು ಪಾಪಯೋನಿ ಶಬ್ದಕ್ಕೆ ಸೆಮೆಟಿಕ್ ರಿಲಿಜನ್ನಿನ ಸಿನ್ನರ್ ಶಬ್ದದ ಅರ್ಥವನ್ನು ಆರೋಪಿಸುತ್ತಾರೆ. ರಿಲಿಜನ್ನಿನಲ್ಲಿ ಸಿನ್ನರ್ ಎನ್ನುವದು ಗಾಡ್ ನಿಂದ ತಿರಸ್ಕೃತನಾದವನು, ಏಕದೇವನ ವಾಣಿಯನ್ನು ಧಿಕ್ಕರಿಸಿದವನು, ಆತ ಪ್ರವಾದಿಯ ಮೂಲಕ ಇಂಥದ್ದನ್ನು ಮಾಡಬಾರದೆಂದು ಹೇಳಿರುವದನ್ನು ಮಾಡಿದವನು ಎಂಬ ಅರ್ಥವನ್ನು ನೀಡುತ್ತದೆ. ಈ ಸಿನ್ನರ್ ನಿರ್ಣಾಯಕ ದಿನದಂದು ಏಕದೇವನಿಂದ ಶಿಕ್ಷಿತನಾಗುವ ವ್ಯಕ್ತಿ. ಸೆಮೆಟಿಕ್ ರಿಲಿಜನ್ನಿನ ಕಲ್ಪನೆಯಲ್ಲಿ ಇಲ್ಲಿ ಗಂಡಾದವನು, ನಿರ್ಣಾಯಕ ದಿನದಂದು ನ್ಯಾಯ ಪಡೆಯುವಾಗಲೂ ಗಂಡೇ ಇರುತ್ತಾನೆ. ಆ ಸಿನ್ನರ್ ಜಡ್ಜಮೆಂಟ್ ದಿನದ ನಂತರ ಅನಂತ ನರಕದಲ್ಲಿ ನರಳಬೇಕಾಗಿರುವ ಸೋಲ್. ಈ ಸಿನ್ನರ್ ಶಬ್ದದ ಅರ್ಥವನ್ನು ಪಾಪಯೋನಿ ಶಬ್ದಕ್ಕೆ ಸಮೀಕರಿಸಿದಾಗ ಮಾತ್ರ ಸಮಾಜದ ಬಹುತೇಕ ಜನರನ್ನು ಪಾಪಯೋನಿ ಎಂದು ಕರೆದಿರುವದು ಆಕ್ಷೇಪಾರ್ಹವಾಗಿ ಕಾಣಲು ಸಾಧ್ಯ.

ಆದರೆ ಕೃಷ್ಣ ಆ ಶ್ಲೋಕದಲ್ಲಿ ಪಾಪಯೋನಿಗಳಿಗೂ ಶ್ರೇಷ್ಠ ಸದ್ಗತಿ ನೀಡುವ ಭರವಸೆ ನೀಡಿದ್ದಾನೆ. ನಮ್ಮಲ್ಲಿ ತಾಯಂದಿರೂ ಅತಿಯಾಗಿ ತುಂಟತನ ಮಾಡುವ ಮಕ್ಕಳನ್ನು ಗದರಿಸಲು ಸುಮ್ಮನಿರೋ ಪಾಪಿ ಎಂದು ಗದರುವದುಂಟು. ಆದರೆ ತನ್ನ ಮಗುವಿನ ತುಂಟಾಟಕ್ಕೆ ಸಿಟ್ಟೆದ್ದು ಮಗುವನ್ನು ಸಿನ್ನರ್ ಎಂದು ಕ್ರಿಶ್ಚನ್ ತಾಯಿ ಕರೆದಾಳೇ? ಖಂಡಿತ ಇಲ್ಲ. ಏಕೆಂದರೆ ಪಾಪ ಎನ್ನುವದು  ಈಗಾಗಲೇ ಲಭಿಸಿರುವ ಒಂದಾನೊಂದು ಫಲಕ್ಕೆ ಅಥವಾ ಘಟಿಸಿರುವ ಪರಿಣಾಮಕ್ಕೆ ಕಾರಣವಾಗಿ ಉಪಯೋಗಿಸಲ್ಪಡುವ ಸಾಂದರ್ಭಿಕ ಯೋಜನೆಯೇ ಹೊರತು ಪುಣ್ಯವಂತ ಪಾಪವಂತ ಎಂಬುದನ್ನು ಸಾರ್ವಕಾಲಿಕ ಸಾರ್ವತ್ರಿಕ ಸತ್ಯವೆಂದು ಪರಿಗಣಿಸುವದು ತಪ್ಪು. ಹೀಗಾಗಿ ಪಾಪಯೋನಿಗೆ ಸಿನ್ನರ್ ಅರ್ಥ ಕಲ್ಪಿಸುವದು ತಪ್ಪು. ಹೀಗಾಗಿ ಪಾಪಯೋನಿ ಮತ್ತು ಪುಣ್ಯಯೋನಿ ಶಬ್ದಗಳನ್ನು ಅರ್ಥೈಸುವಾಗ ವಸಾಹತುಪ್ರಜ್ಞೆಯಿಂದ ಹೊರಬಂದು ಯೋಚಿಸಬೇಕಾಗುತ್ತದೆ.

ಆದರೆ ಈ ವ್ಯತ್ಯಾಸವನ್ನು ಗಣನೆಗೇ ತೆಗೆದುಕೊಳ್ಳದೇ, ಪಾಪಯೋನಿ ಶಬ್ದಕ್ಕೆ ಇರುವ ಸಂದರ್ಭವನ್ನೇ ಗಣನೆಗೇ ತೆಗೆದುಕೊಳ್ಳದೇ, ಸಿನ್ನರ್ ಎಂಬ ಸಾರ್ವತ್ರಿಕ ಅರ್ಥವನ್ನು ಕಲ್ಪಿಸಿ, ಸ್ತ್ರೀಯರ ಶೂದ್ರರ ಸಾಮಾಜಿಕ ಸ್ಥಾನಮಾನಕ್ಕೆ ಹೊಂದಿಸಿಕೊಂಡು ಗೀತೆಯು ಅಸಮಾನತೆಯನ್ನು ಪ್ರತಿಪಾದಿಸುತ್ತದೆ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ. ತಪ್ಪು ಅರ್ಥೈಸುವಿಕೆ ಎಂದು ಹೇಳಲು ಕಾರಣ, ಭಗವದ್ಗೀತೆ ಸಮಾಜವನ್ನು ವ್ಯಾಖ್ಯಾನಿಸುವ ಸಂವಿಧಾನವಲ್ಲ. ಯಾವ ಆಚಾರ್ಯರೂ, ಗೀತೆಯನ್ನು ಸಾಮಾಜಿಕ ಘಟನೆಗಳ ವಿವರಣೆಗೆ ಬಳಸಿಲ್ಲ. ಸ್ವತಃ ಅರ್ಜುನ ಅದನ್ನು ತನ್ನಲ್ಲಿ ಉದಯಿಸಿದ ಆಧ್ಯಾತ್ಮಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಉಪಯೋಗಿಸಿಕೊಂಡಿದ್ದಾನೆ. ಗೀತೆಯು ಆಧ್ಯಾತ್ಮಿಕ ತತ್ತ್ವಗಳ ಪ್ರತಿಪಾದನೆಯಲ್ಲಿಯೇ ಬಳಕೆಯಾಗಿದೆ. ಶಂಕರಾಚಾರ್ಯರು ಗೀತೆಯನ್ನು ಪ್ರವೃತ್ತಿ ಮತ್ತು ನಿವೃತ್ತಿ ಧರ್ಮಗಳ ವಿವರಣೆಗೆ ಬಳಸಿಕೊಂಡಿದ್ದಾರೆ.

ಎದುರಿಗೆ ಬ್ರಾಹ್ಮಣ ಬರುತ್ತಿದ್ದರೆ, ಶೂದ್ರ ಎಲ್ಲಿ/ಹೇಗೆ ಅಡಗಿಕೊಳ್ಳಬೇಕು, ಯಾವ ಯಾವ ಕೆರೆಗಳಲ್ಲಿ ಯಾವ ಯಾವ ಜಾತಿಗಳಿಗೆ ನೀರು ಬಳಸಲು ಅನುಮತಿ ನೀಡಬೇಕು, ಯಾವ ಯಾವ ದೇವಸ್ಥಾನಗಳಲ್ಲಿ ಯಾವ ಯಾವ ಜಾತಿಗೆ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಮಾನವರ ಸಾಮಾಜಿಕ ಸ್ಥಿತಿಗತಿಗಳನ್ನು ನಿರ್ಧರಿಸಲು ಗೀತೆ ಎಲ್ಲಿಯೂ ಯಾರಿಂದಲೂ ಬಳಕೆಯಾಗಿಲ್ಲ. ಗೀತೆ ಉಪಯೋಗವಾಗುವದೇ, ಒಬ್ಬ ತನ್ನ ಜೀವನದಲ್ಲಿ ಆಧ್ಯಾತ್ಮಿಕ ಮೌಲ್ಯವನ್ನು ಅಳವಡಿಸಿಕೊಳ್ಳಲು ಇಲ್ಲವೇ ತನ್ನ ಆಧ್ಯಾತ್ಮಿಕ ಅನುಭವವನ್ನು ಒಂದು ಸಮಂಜಸ ಸಿದ್ಧಾಂತದೊಂದಿಗೆ ವಿವರಿಸಲು. ಆಧ್ಯಾತ್ಮಿಕ ಸನ್ನಿವೇಶದಲ್ಲಿ ಮಾತ್ರ ಈ ಗೀತೆಯನ್ನು ಸಮಂಜಸವಾಗಿ ವಿವರಿಸಲು ಸಾಧ್ಯ. ಗೀತೆಯನ್ನು ಒಂದು ಸಾಮಾಜಿಕ ವ್ಯವಸ್ಥೆಯ ಪ್ರವರ್ತಕವೆಂದು ವಿವರಿಸಹೊರಟರೆ ಎಂದೆಂದಿಗೂ ಒಂದು ಸಮಂಜಸವಾದ ವಿವರಣೆ ಸಿಗಲು ಸಾಧ್ಯವಿಲ್ಲ. ಕಾರಣ ಆ ರೀತಿಯಲ್ಲಿ ವಿವರಿಸಲು ಹೊರಟರೆ, ಗೀತೆಯ ಒಂದು ವಾಕ್ಯವೇ ಇನ್ನೊಂದು ವಾಕ್ಯಕ್ಕೆ ವಿರುದ್ಧವಾಗಿ ನಿಲ್ಲುತ್ತದೆ. “ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್” (ತನ್ನ ಸಲುವಾಗಿ ಅಡುಗೆ ಮಾಡಿಕೊಳ್ಳುವವನು ಅಷ್ಟು ಪಾಪವನ್ನೇ ಉಣ್ಣುತ್ತಾನೆ) ಎಂಬ ಗೀತಾವಾಕ್ಯವು ೨೦ನೇ ಶತಮಾನದವರೆಗೂ ನಮ್ಮ ಸಮಾಜದಲ್ಲಿ ಪ್ರಚಲಿತದಲ್ಲಿದ್ದ ವಾರಾನ್ನದ ಕಲ್ಪನೆಯನ್ನು, ಈಗಲೂ ಇರುವ ಅನ್ನದಾನದ ಕಲ್ಪನೆಯನ್ನು ಸಾಮಾಜಿಕವಾಗಿ ವಿವರಿಸಲು ಸ್ವಲ್ಪ ಸಹಾಯವಾಗಬಹುದು. ಆದರೆ ಆ ಶ್ಲೋಕವಾಗಲೀ, ವಾರಾನ್ನ, ಅನ್ನದಾನದ ಕಲ್ಪನೆಯಾಗಲೀ ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿಯೇ ಸರಿಯಾದ ಮತ್ತು ಸಮಂಜಸವಾದ ವಿವರಣೆಯನ್ನು ಪಡೆಯಲು ಸಾಧ್ಯ.

ಪುಣ್ಯಯೋನಿ-ಪಾಪಯೋನಿ ಶಬ್ದಗಳು ಪೂರ್ವಜನ್ಮದ ಕರ್ಮಗಳೆಂಬ ಸಂದರ್ಭದಿಂದಾಚೆಗೆ ಯಾವ ರೀತಿಯ ಅರ್ಥವನ್ನೂ ಪಡೆಯುವದಿಲ್ಲ. ಹೀಗಾಗಿ ಎಲ್ಲ ಬ್ರಾಹ್ಮಣ, ಕ್ಷತ್ರಿಯ ಪುರುಷರು ಪುಣ್ಯಯೋನಿಗಳು, ಶೂದ್ರರು, ವೈಶ್ಯರು, ಸ್ತ್ರೀಯರೆಲ್ಲರೂ ಪಾಪಯೋನಿಗಳು ಎಂಬುದು ಸಾರ್ವಕಾಲಿಕ ಸಾರ್ವತ್ರಿಕ ಸತ್ಯ ಎಂದು ಹೇಳುವದು, ಸಮಂಜಸ ವಿವರಣೆಯಾಗುವದಿಲ್ಲ. ಏಕೆಂದರೆ ಈ ವಿವರಣೆಯ ಪ್ರಕಾರ ಬ್ರಾಹ್ಮಣ ಪುರುಷ ಪುಣ್ಯಯೋನಿಯಾಗುತ್ತಾನೆ ಆದರೆ ಆತನ ತಾಯಿ ಪಾಪಯೋನಿಯಾಗುತ್ತಾಳೆ. ಪಾಪಯೋನಿಯಲ್ಲಿ ಪುಣ್ಯಯೋನಿಯು ಜನಿಸುವದು ಹೇಗೆ ಸಾಧ್ಯ ಎಂಬ ಪ್ರಶ್ನೆ ಏಳುತ್ತದೆ. ಅಲ್ಲದೇ ಜನ್ಮದಿಂದ ಜನ್ಮಕ್ಕೆ ಲಿಂಗವು ಬದಲಾಗುವದನ್ನು ಒಪ್ಪುವದಾದರೆ, ಪಾಪಯೋನಿಯು ಇದ್ದಕ್ಕಿದ್ದ ಹಾಗೇ ಪುಣ್ಯಯೋನಿಯಾಗಲು ಕಾರಣವೇನು ಎಂಬುದನ್ನು ವಿವರಿಸಬೇಕಾಗುತ್ತದೆ. ಪಾಪಯೋನಿ-ಪುಣ್ಯಯೋನಿಗಳೆಂಬುದು ಸಾರ್ವತ್ರೀಕರಣವಾದರೆ, ಲಿಂಗವು ಆತ್ಮದ ಗುಣವೆಂದು ಒಪ್ಪಲೇಬೇಕಾಗುತ್ತದೆ. ಇದು ನಮ್ಮ ಸಂಪ್ರದಾಯಗಳ ವೈಚಾರಿಕತೆಗೆ ಸಂಪೂರ್ಣ ಭಿನ್ನವಾಗಿದೆ. ಮತ್ತು ಈ ಸಾರ್ವತ್ರೀಕರಣವು ವಸಾಹತುಪ್ರಜ್ಞೆಯಿಂದ ಹುಟ್ಟಿಕೊಂಡ ವಾದವಾಗಿದೆ.

ಭಗವಾನ್ ಅವರು ರಾಮನ ಮತ್ತು ಕೃಷ್ಣನ ಕುರಿತಾಗಿ ಇತಿಹಾಸಗಳಲ್ಲಿ ಸಿಗುವ ವಿವರಗಳ ಆಧಾರದ ಅಡಿಯಲ್ಲಿ ಅವರ ಯೋಗ್ಯತೆಯನ್ನು ಅಳೆಯುವ ಪ್ರಯತ್ನ ಮಾಡಿದ್ದಾರೆ. ಹಾಗೆ ಯೋಗ್ಯತೆ ಅಳೆಯುವದೇ ಉದ್ದೇಶವಾಗಿದ್ದರೆ ಸಾವಿರಾರು ವಿವರಗಳನ್ನೆಲ್ಲವನ್ನೂ ಪರಿಗಣಿಸಬೇಕಿತ್ತು. ಆದರೆ ಕೆಲವೇ ಕೆಲವು ವಿವರಗಳ ಆಧಾರದಲ್ಲಿ ಅಳೆಯುವದರ ಉದ್ದೇಶವೇನೇ ಇರಲಿ. ಅದು ಮುಖ್ಯವಲ್ಲ. ಮುಖ್ಯವಾಗಿರುವದು ರಾಮ ಮತ್ತು ಕೃಷ್ಣನ ಕುರಿತಾಗಿ ಇರುವ ವಿವರಗಳನ್ನು ಹಿಸ್ಟಾರಿಕಲ್ ಎಂದು ಪರಿಗಣಿಸುವದು ಸರಿಯೇ ಎಂಬ ಪ್ರಶ್ನೆ. ಜೀಸಸ್ ಜೊತೆ ಇದ್ದವರು ಗಾಸ್ಪೆಲ್ಲುಗಳನ್ನು ಬರೆದರು. ಮಹಮದ್ ಜೊತೆ ಇದ್ದವರು ಹದೀಸ್ ಗಳನ್ನು ಬರೆದರು. ಇವುಗಳನ್ನು ಹಿಸ್ಟಾರಿಕಲ್ ಎಂದು ಪರಿಗಣಿಸುವದು ಸಹಜ. ಆದರೆ ರಾಮನ ಕುರಿತಾದ ವಾಲ್ಮೀಕಿಯ ಕೃತಿಯನ್ನು ಒಂದಾನೊಂದು ಡಾಕ್ಯುಮೆಂಟರಿಯಂತೆ ಪರಿಗಣಿಸಿವದು ಸಮಂಜಸವೇ? ಕೃಷ್ಣನಿಗೆ ೧೬೦೦೦ ಹೆಂಡಂದಿರು, ೯೦೦೦ ಮಕ್ಕಳು ಇದ್ದರಿಂದ ಅವನು ಯೋಗಿಯಲ್ಲ ಎಂದು ಹೇಳಬೇಕಾದರೆ, ಮಹಾಭಾರತವನ್ನು ಒಂದು ಡಾಕ್ಯುಮೆಂಟರಿ ಎಂದು ಪರಿಗಣಿಸುವದು ಮುಖ್ಯವಾಗುತ್ತದೆ. ಆದರೆ ರಾಮಾಯಣ/ಭಾರತಗಳು ನಾವು ಮುಂಚಿನಿಂದಲೂ ಜಗತ್ತಿನ ಆದಿಕಾವ್ಯಗಳೆಂದು ಪರಿಗಣಿಸುತ್ತಿದ್ದೇವೆ. ಕಾವ್ಯದಲ್ಲಿ ಬರುವ ಪಾತ್ರಗಳನ್ನು ಚಾರಿತ್ರಿಕ ಸತ್ಯವೋ ಎಂಬಂತೆ ಭಾವಿಸುವದು ಕಾವ್ಯದ ಸೌಂದರ್ಯವನ್ನೇ ಹಾಳುಗೆಡವಿದಂತೆ. ಬಹುಶಃ ಅವರ ಈ ನಡೆಯ ಹಿಂದೆಯೂ ವಸಾಹತುಪ್ರಜ್ಞೆಯ ಛಾಯೆ ಕಂಡು ಬರುತ್ತದೆ.

ವಾಲ್ಮೀಕಿಯ ರಾಮಾಯಣವೇ, ನಿಜವಾದ ರಾಮಾಯಣ, ವ್ಯಾಸನ ಭಾರತವೇ ನಿಜವಾದ ಭಾರತ, ಉಳಿದವೆಲ್ಲ ಚಾರಿತ್ರಿಕವಾಗಿ ಎಂದು ಭಾರತೀಯರು ಎಂದಿಗೂ ಭಾವಿಸಿಲ್ಲ. ಹಾಗಿದ್ದರೆ, ವೈದಿಕ ಸಂಹಿತೆಯ ಮಂತ್ರಗಳಂತೆ ಅವುಗಳೂ ಕೂಡ ಪ್ರಯೋಗವಾಗಲ್ಪಡುತ್ತಿದ್ದವು. ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ? ಎಷ್ಟೋ ಜನಪದಗಳಲ್ಲಿ ಪುರಾಣಗಳು ಗಣನೀಯ ಬದಲಾವಣೆಗಳನ್ನು ಹೊಂದಿವೆ, ಇತಿಹಾಸ ಪುರಾಣಗಳು ಕಾಲಕಾಲಕ್ಕೆ ಬೆಳೆಯುತ್ತ ಬಂದಿವೆ. ನಂತರದ ಕವಿಗಳು ರಾಮಾಯಣ, ಭಾರತ ಮತ್ತು ಪುರಾಣಗಳನ್ನು ಬರೆಯುವಾಗ, ಬಹುತೇಕ ಕತೆಗಳನ್ನು ಉಳಿಸಿಕೊಂಡಿದ್ದಾರೆ, ಕೆಲವನ್ನು ಕೈಬಿಟ್ಟಿದ್ದಾರೆ, ಇನ್ನು ಕೆಲವಿಷ್ಟು ಬದಲಿಸಿದ್ದಾರೆ. ಭಾಸ ರಾಮಾಯಣದ ಮೂಲ ಕಥೆಗೆ ಧಕ್ಕೆ ಬಾರದ ರೀತಿಯಲ್ಲಿ ಮಂಥರೆಯನ್ನು ಒಳ್ಳೆಯವಳನ್ನಾಗಿ ಚಿತ್ರಿಸುವ ಕಾರ್ಯ ಮಾಡಿದ್ದಾನೆ. ಕುವೆಂಪುರವರೂ ಕೂಡ ಸೀತೆಯ ಜೊತೆ ರಾಮನನ್ನೂ ಅಗ್ನಿಪರೀಕ್ಷೆಗೆ ದೂಡಿದ್ದಾರೆ. ಸತ್ಯನಾರಾಯಣ ಕಥೆಯನ್ನು ಎಲ್ಲರೂ ಒಂದೇ ಮೂಲವನ್ನೇ ಓದುತ್ತಾರೆಯೇ?
ವಾಲ್ಮೀಕಿ/ವ್ಯಾಸರ ಕೃತಿಗಳನ್ನು ಕಾವ್ಯಗಳೆಂದು ಬುದ್ಧಿಜೀವಿಗಳು ಏಕೆ ಭಾವಿಸುತ್ತಿಲ್ಲ? ಅವುಗಳ ಹಿಸ್ಟಾರಿಕಲ್ ಸತ್ಯಾಸತ್ಯತೆಯು ಸಂಶೋಧನೆಗಳಿಗೆ ಮುಕ್ತವಾಗಿವೆ ನಿಜ. ದ್ವಾರಕೆಯ ಸಮುದ್ರದಡಿಯಲ್ಲಿ ಮುಳುಗಿದ ನಗರದ ಅವಶೇಷಗಳು ಸಿಕ್ಕಿದ್ದು ನಿಜ. ಮಹಾಭಾರತ ಯುದ್ಧವು ಸತ್ಯವಾಗಿರಲೂಬಹುದು. ಧನುಷ್ಕೋಟಿಯ ಸೇತುವೆ ಪ್ರಾಕೃತಿಕವೂ ಇರಬಹುದು ಇಲ್ಲವೇ ಅದರಲ್ಲಿ ಮಾನವನ ಹಸ್ತಕ್ಷೇಪವೂ ಇರಬಹುದು. ಇವೆಲ್ಲವೂ ಅನ್ವೇಷಣೆ, ಸಂಶೋಧನೆಗಳಿಗೆ ಮುಕ್ತವಾಗಿವೆ. ಆದರೆ ಇವುಗಳ ಸತ್ಯಾಸತ್ಯತೆ ಈಗಾಗಲೇ, ನಮ್ಮ ಸಂಪ್ರದಾಯಗಳಲ್ಲಿ ಆವರಿಸಿರುವ ಸ್ಥಾನವನ್ನು ಬದಲಾಯಿಸಿ ಬಿಡುತ್ತವೆಯೇ? ನಾಳೆ ಕೃಷ್ಣನಿಗೆ ೧೬೦೦೦ ಹೆಂಡಂದಿರ ಅಸ್ತಿತ್ವಕ್ಕೆ ಸರಿಯಾದ ಸಾಕ್ಷಿ ಸಿಗದೇ ಇದ್ದರೆ, ಭಾಗವತ ಪುರಾಣಿಕರು ನರಕಾಸುರನ ಕಥೆಯನ್ನು, ನಾರದ ಕೃಷ್ಣನ ಸಂಸಾರದಲ್ಲಿ ಹುಳಿ ಹಿಂಡಿ ವಿನೋದ ನೋಡುವ ಉದ್ದೇಶದಿಂದ ದ್ವಾರಕೆಗೆ ಬಂದು ತಾನೇ ಸ್ವತಃ ಕೃಷ್ಣನ ೧೬೦೦೦ ರೂಪಗಳನ್ನು ನೋಡಿ ಆಶ್ಚರ್ಯಚಕಿತನಾಗುವ ಹಾಸ್ಯಮಯ ಕಥೆಗಳನ್ನು ತಮ್ಮ ಪ್ರವಚನಗಳಿಂದ ಕೈಬಿಡುವರೇ?

ನಿಜವಾದ ರಾಮನನ್ನು ಅರಿಯಲು ವಾಲ್ಮೀಕಿಯನ್ನೇ ಓದಬೇಕು, ನಿಜವಾದ ಕೃಷ್ಣನನ್ನು ಅರಿಯಲು ವ್ಯಾಸನನ್ನೇ ಓದಬೇಕು ಎಂಬ ಆಗ್ರಹ ವಸಾಹತುಪ್ರಜ್ಞೆಯ ಉಡುಗೊರೆ. ರಾಮಾಯಣದ ಸಂಪೂರ್ಣ ವಿವರವನ್ನು ಪಡೆಯುವ ಉದ್ದೇಶದಿಂದ, ಇಲ್ಲವೇ ತಾವೊಂದು ಸ್ವಂತ ರಾಮಾಯಣವನ್ನು ಬರೆಯುವದಕ್ಕಾಗಿ ಮೂಲರಾಮಾಯಣವನ್ನು ಓದುವ ಪರಿಪಾಠ ನಮ್ಮಲ್ಲಿ ಮೊದಲಿನಿಂದಲೂ ಇದೆಯೇ ಹೊರತು, ಒಬ್ಬ ಬರೆದ ರಾಮಾಯಣವನ್ನು ವಾಲ್ಮೀಕಿಯ ರಾಮಾಯಣನೊಡನೆ ಹೋಲಿಸಿ, ವಾಲ್ಮೀಕಿಯ ಈ ಅಂಶವನ್ನು ಲೇಖಕ ಬಿಟ್ಟಿದ್ದಾನೆ, ಈ ಲೇಖಕ ಬರೆದ ಈ ಅಂಶ ಮೂಲರಾಮಾಯಣದಲ್ಲಿಲ್ಲ ಎಂದು ಯಾರೂ ಸಂಶೋಧನೆ ಮಾಡಿಲ್ಲ. ವ್ಯಾಸ ಮತ್ತು ವಾಲ್ಮೀಕಿಯ ಕಾವ್ಯಗಳನ್ನು ಮಾತ್ರ ಡಾಕ್ಟ್ರಿನ್ನಿನಂತೆ ಪರಿಗಣಿಸಿ, ನಂತರದ ಕಾವ್ಯಗಳನ್ನು ಮಾತ್ರ ಕಾವ್ಯದಂತೆ ನೋಡುವದು ವಸಾಹತುಪ್ರಜ್ಞೆಯಡಿಯಲ್ಲಿ ಮಾತ್ರ ಸಾಧ್ಯ. ದ್ರೌಪದಿಯ ವಸ್ತಾಪರಣದಲ್ಲಿ ವ್ಯಾಸರು ಕೇವಲ “ಗೋವಿಂದ, ದ್ವಾರಕಾವಾಸಿಯೇ, ಗೋಪೀಜನಪ್ರಿಯ ಕೃಷ್ಣನೇ” ಎಂದು ದ್ರೌಪದಿ ಕೃಷ್ಣನನ್ನು ಕರೆಯುತ್ತಾಳೆ. ಆದರೆ ಕುಮಾರವ್ಯಾಸ “ಹಲಬುತಪ್ಪಿದ ಹುಲ್ಲೆ ಬೇಡನ ಬಲೆಗೆ ಬಿದ್ದಂತಾದೆನೈ..” ಎಂದೆಲ್ಲ ಮೂಲವ್ಯಾಸ ಭಾರತದಲ್ಲಿ ಇಲ್ಲದ ನಾಲ್ಕಾರು ಹೆಚ್ಚುವರಿ ವಾಕ್ಯಗಳನ್ನೆಲ್ಲ ಹಾಕಿದ್ದಾರೆ. ಎಂದೆಲ್ಲ ಆಕ್ಷೇಪ ಮಾಡಿರುವದನ್ನು ನಾವ್ಯಾರೂ ಓದಿಲ್ಲ.

ಕೊನೆಯಲ್ಲಿ ಹೇಳುವದಾದರೆ, ನಮ್ಮ ಬುದ್ಧಿಜೀವಿಗಳು ಹೊಸದೊಂದು ವೈಚಾರಿಕ ಕಲ್ಪನೆಯನ್ನು ಬಿತ್ತುವದು ಸ್ವಾಗತಾರ್ಹವೇ. ಆದರೆ, ಅವರು ವೈಜ್ಞಾನಿಕ ಸಿದ್ಧಾಂತದ ಪ್ರಕ್ರಿಯಯನ್ನು ಒಪ್ಪುವದೇ ಆದರೆ ಅವರ ವೈಚಾರಿಕತೆಯಲ್ಲಿ ಅಸಮಂಜಸತೆ ಉಂಟಾದಾಗ ಆ ಕಲ್ಪನೆಯಲ್ಲಿ ತಕ್ಕಮಟ್ಟಿನ ಬದಲಾವಣೆ ಮಾಡಿಕೊಂಡು ಪುನಃ ಅದನ್ನು ಮಂಡಿಸುವ ಯತ್ನ ಮಾಡಬೇಕು. ಸಾವಿರಾರು ಅಸಮಂಜಸ ವಿವರಣೆಗಳಿದ್ದರೂ ಅದೇ ವೈಚಾರಿಕತೆಗೇ ಜೋತು ಬೀಳುವದು ಖಂಡಿತ ವೈಜ್ಞಾನಿಕತೆಯ ಲಕ್ಷಣವೇ ಅಲ್ಲ. “ಬುದ್ಧನ ನಂತರ ರಾಮ ಕೃಷ್ಣರುಗಳು ಬಂದರು”, “ಬೌದ್ಧ ಧರ್ಮದ ನಂತರ ಉಪನಿಷತ್ತುಗಳು ಬಂದವು”, ಇಂಥವೆಲ್ಲ ಅರ್ಥವಿಲ್ಲದ ಆರ್ಯ-ದ್ರಾವಿಡ ಸಿದ್ಧಾಂತದ ಅನುಮಾನಗಳಿಗೆ ಇನ್ನೂ ಜೋತು ಬಿದ್ದುಕೊಂಡಿರುವದರಲ್ಲಿ ಯಾವ ಅರ್ಥವೂ ಇಲ್ಲ. ಶ್ರುಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ ಎಂಬ ಉಪನಿಷತ್ತಿನ ಸಂದರ್ಭವನ್ನೂ, ಪುಣ್ಯ-ಪಾಪಯೋನಿಯೆಂದು ಗೀತೆಯಲ್ಲಿ ಹೇಳಿರುವ ಸಂದರ್ಭವನ್ನೂ ಗಮನದಲ್ಲಿಟ್ಟು ಇವೆರಡೂ ಪರಸ್ಪರ ವಿರುದ್ಧವೋ, ಅಥವಾ ಸಮಂಜಸವೋ ಎಂಬುದನ್ನು ಸಾಧಿಸಬೇಕಾಗುತ್ತದೆ. “ಅಸಮಾನತೆಯನ್ನು ಬಿತ್ತುವ ಕೇವಲ ೯:೩೨ ಮತ್ತು ೯:೩೩ ಶ್ಲೋಕಗಳು ಮಾತ್ರ ಗದ್ದೆಯ ಕಳೆಗಳು, ಅವನ್ನು ಕೀಳೋಣ, ಪಂಡಿತರು ಎಲ್ಲವನ್ನೂ ಸಮನಾಗಿ ನೋಡುತ್ತಾರೆ ಎಂಬ ಸಮಾನತೆಯ ಶ್ಲೋಕವನ್ನು ಉಳಿಸಿಕೊಳ್ಳೋಣ, ಅಸಮಾನತೆ ಬಿತ್ತುವ ಸಾಮಾಜಿಕ ಅಂಶಗಳನ್ನೆಲ್ಲ ತೆಗೆಯೋಣ, ಸಮಾನತೆ ಸಾರುವ ಅಧ್ಯಾತ್ಮಿಕ ಅಂಶಗಳನ್ನೆಲ್ಲ ಉಳಿಸಿಕೊಳ್ಳೋಣ” ಎಂದು ಫತ್ವಾ ಹೊರಡಿಸುವದು ಸಾಧ್ಯವಿಲ್ಲ. ಹಾಗೊಂದು ವೇಳೆ ಎಲ್ಲ ಬುದ್ಧಿಜೀವಿಗಳು ಸೇರಿ, ಗೀತೆಯ ಸರ್ಕಾರೀ ಆವೃತ್ತಿಯಲ್ಲಿ ಅದನ್ನು ಪ್ರಕಟಿಸಿ ಜಾರಿಗೊಳಿಸಿದರೂ, ಅದು ಈಗಿರುವ ಸಾಮಾಜಿಕ ಸಂಪ್ರದಾಯಗಳನ್ನಾಗಲೀ, ಇಲ್ಲಿನ ಜನರ ಅಧ್ಯಾತ್ಮಿಕ ಪ್ರಪಂಚವನ್ನಾಗಲೀ ಕಿಂಚಿತ್ತೂ ಅಲುಗಾಡಿಸಲು ಸಾಧ್ಯವಿಲ್ಲ.

ಆಧಾರ:
೧. ಶ್ರೀ ಶಾಂಕರಭಾಷ್ಯ ಸಮೇತ ಶ್ರೀಮದ್ಭಗವದ್ಗೀತೆ – ಅನುವಾದಕರು: ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು
೨. ಬೌದ್ಧಿಕ ದಾಸ್ಯದಲ್ಲಿ ಭಾರತ (ಮೂಲ: ಪ್ರೊ. ಬಾಲಗಂಗಾಧರ. ಅನುವಾದ: ಪ್ರೊ. ರಾಜಾರಾಮ ಹೆಗಡೆ)

18 ಟಿಪ್ಪಣಿಗಳು Post a comment
 1. Murari
  ನವೆಂ 4 2015

  an excellent article.

  ಉತ್ತರ
  • Anonymous
   ನವೆಂ 4 2015

   ಹೌದು! ಭಗವಾನ್ ಅವರೂ ಇದನ್ನು ಓದಿದರೆ ಒಳ್ಳೆಯದು.

   ಉತ್ತರ
 2. ನವೆಂ 4 2015

  ಹೇಗಾದರೂ ಮಾಡಿ ಈ ಲೇಖನವನ್ನು ಭಗವಾನ್‍ಗೆ ತಲುಪಿಸಿ

  ಉತ್ತರ
 3. hemapathy
  ನವೆಂ 5 2015

  ಕೃಷ್ಣನೇ ಭಗವದ್ಗೀತೆಯ ಹರಿಕಾರನೆನ್ನಲು ಯಾವುದೇ ಬಲವಾದ ಸಾಕ್ಷಿಗಳಿಲ್ಲ. ಆತ ದೇವರೋ, ಮನುಷ್ಯನೋ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅವನ ಹೆಸರಿನಲ್ಲಿ ಯಾರೋ ಬರೆದರು. ರಾಮಾಯಣ, ಮಹಾಭಾರತಗಳಂತಹ ಗ್ರಂಥಗಳನ್ನೆಲ್ಲ ಬರೆದವರು ಒಂದು ಕಾಲದಲ್ಲಿ ಕೆಲಸವಿಲ್ಲದೇ ಇದ್ದವರಾಗಿರಬಹುದು. ಹೊಟ್ಟೆ ಬಟ್ಟೆಗೇ ತೊಂದರೆಪಡುತ್ತಿರುವ ಲಕ್ಷಾಂತರ ಮಂದಿ ನಮ್ಮ ದೇಶದಲ್ಲಿದ್ದಾರೆ, ಅವರುಗಳಿಗೆ ಈ ಗ್ರಂಥಗಳನ್ನು ಓದಿ ಆಗಬೇಕಾದ್ದೇನಿದೆ? ಅವರಿಗೆ ಬೇಕಾಗಿರುವುದು ಮೂರು ಹೊತ್ತು ಊಟ, ಕುಡಿಯಲು ನೀರು, ಹಣ ಗಳಿಸಲು ಏನಾದರೊಂದು ಉದ್ಯೋಗ, ಇರಲು ಒಂದು ಸೂರು. ಇದರ ಹೊರತಾಗಿ ಕಣ್ಣಿಗೆ ಕಾಣದ ದೇವರುಗಳನ್ನೂ ನಂಬಿ, ಅರ್ಥವಾಗದ ಗ್ರಂಥಗಳನ್ನೂ ಓದುವುದರಿಂದ ಅವರುಗಳಿಗೆ ಉಪಯೋಗವೇನು?

  ಉತ್ತರ
  • ನವೆಂ 5 2015

   ಅಂದರೆ

   ಕೃಷ್ಣನೇ ಭಗವದ್ಗೀತೆಯ ಹರಿಕಾರನೆನ್ನಲು ಯಾವುದೇ ಬಲವಾದ ಸಾಕ್ಷಿಗಳಿಲ್ಲ. => ಅದರ ಅಗತ್ಯವೂ ಇಲ್ಲ. ಏಕೆಂದರೆ ಅದೇನೂ ಹಿಂದೂ ರಿಲಿಜನ್ನಿನ ಬೈಬಲ್ ಅಲ್ಲ.

   ಆತ ದೇವರೋ, ಮನುಷ್ಯನೋ ಎಂದು ಯಾರೂ ಹೇಳಲು ಸಾಧ್ಯವಿಲ್ಲ =>

   ರಾಮಾಯಣ, ಮಹಾಭಾರತಗಳಂತಹ ಗ್ರಂಥಗಳನ್ನೆಲ್ಲ ಬರೆದವರು ಒಂದು ಕಾಲದಲ್ಲಿ ಕೆಲಸವಿಲ್ಲದೇ ಇದ್ದವರಾಗಿರಬಹುದು. => ಬಹುಶಃ ಸಂಸ್ಕಾರ, ಪರ್ವ, ರಾಮಾಯಣ ದರ್ಶನಂ ನಾಕುತಂತಿ ಗಳನ್ನೆಲ್ಲ ಬರೆದವರೂ ಕೆಲಸವಿಲ್ಲದೇ ಇದ್ಧವರಿರಬಹುದಲ್ಲವೇ?

   ಹೊಟ್ಟೆ ಬಟ್ಟೆಗೇ ತೊಂದರೆಪಡುತ್ತಿರುವ ಲಕ್ಷಾಂತರ ಮಂದಿ ನಮ್ಮ ದೇಶದಲ್ಲಿದ್ದಾರೆ, ಅವರುಗಳಿಗೆ ಈ ಗ್ರಂಥಗಳನ್ನು ಓದಿ ಆಗಬೇಕಾದ್ದೇನಿದೆ? => ಅಂಥ ಲಕ್ಷಾಂತರ ಮಂದಿಗೆ ಸಾಹಿತಿಗಳ ಸಾಹಿತ್ಯದಿಂದಲೂ ಹೊಟ್ಟೆ ತುಂಬುವದಿಲ್ಲ, ನೀರು ಸಿಗುವದಿಲ್ಲ, ಸೂರೂ ಇಲ್ಲ, ಉದ್ಯೋಗವೂ ಸಿಗುವದಿಲ್ಲ. ಏನೂ ಪ್ರಯೋಜನವಿಲ್ಲ. ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತುಗಳನ್ನು ಮುಚ್ಚಿಸೋಣವೇ?

   ಕಣ್ಣಿಗೆ ಕಾಣದ ದೇವರುಗಳನ್ನೂ ನಂಬಿ, ಅರ್ಥವಾಗದ ಗ್ರಂಥಗಳನ್ನೂ ಓದುವುದರಿಂದ ಅವರುಗಳಿಗೆ ಉಪಯೋಗವೇನು? => ಉಪಯೋಗವಿದೆಯೋ ಇಲ್ಲವೋ ಎಂಬ ನಿರ್ಧಾರವನ್ನೂ ಅವರಿಗೇ ಬಿಟ್ಟು ಬಿಡಿ. ಮಧ್ಯಪ್ರವೇಶವೇಕೆ? ನಂಬಿಕೆಯೆನ್ನುವದು ಹೇರುವದರಿಂದ ಉಂಟಾಗವದೂ ಇಲ್ಲ, ಆಗ್ರಹಿಸುವದರಿಂದ ಹೋಗುವದೂ ಇಲ್ಲ ಅಲ್ಲವೇ?

   ಉತ್ತರ
  • ನವೆಂ 5 2015

   ಆತ ದೇವರೋ, ಮನುಷ್ಯನೋ ಎಂದು ಯಾರೂ ಹೇಳಲು ಸಾಧ್ಯವಿಲ್ಲ => ಕೃಷ್ಣ ಮತ್ತು ಆತನ ಕುರಿತಾದ ಎಲ್ಲ ಕಥೆಗಳ ಹಿಸ್ಟಾರಿಕಲ್ ಅಸ್ತಿತ್ವವನ್ನು ನೀವು ಒಪ್ಪುವದಾದರೆ ಮಾತ್ರ ಆತ ಮನುಷ್ಯನಾಗಿದ್ದನೋ, ದೇವನಾಗಿದ್ದನೋ ಎಂಬ ಪ್ರಶ್ನೆ ಉದಯಿಸಲು ಸಾಧ್ಯ. ಕೇವಲ ಪುರಾಣ ಮತ್ತು ಕಥೆಗಳ ಆಧಾರದ ಮೇಲೆ, ಅವೆಲ್ಲವನ್ನೂ ಹಿಸ್ಟಾರಿಕಲ್ ಫಾಕ್ಟ್ ಎಂದು ಒಪ್ಪುವದು ವೈಜ್ಞಾನಿಕತೆಯಾಗುವದಿಲ್ಲ. ಮತ್ತು ನಮ್ಮ ಜನರಿಗೆ ಅದರ ಅಗತ್ಯವೂ ಇಲ್ಲ. ನಮ್ಮ ಜನರ ಪಾಲಿಗೆ ಕೃಷ್ಣನ ಸ್ವರೂಪ ಬೇರೆಯದೇ ಆಯಾಮವನ್ನು ಪಡೆದಿದೆ. ಆ ಆಯಾಮವು ಹಿಸ್ಟಾರಿಕಲ್ ಫಾಕ್ಟ್ ಇಂದ ಪ್ರಭಾವಿತವಾಗಿಲ್ಲ ಮತ್ತು ಆಗುವದೂ ಇಲ್ಲ.

   ಉತ್ತರ
 4. ನವೆಂ 8 2015

  ಲೇಖಕರು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕದಲ್ಲಿ ಪುಣ್ಯಯೋನಿ ಹಾಗೂ ಪಾಪಯೋನಿ ಶಬ್ದವನ್ನು ಹೀಗೆ ವಿವರಿಸುತ್ತಾರೆ: ವೈದಿಕ ಕರ್ಮಗಳನ್ನು ಆಚರಿಸುವವರು ಪುಣ್ಯಯೋನಿಗಳು ಹಾಗೂ ವೈದಿಕ ಕರ್ಮಗಳನ್ನು ಆಚರಿಸದವರು ಪಾಪಯೋನಿಗಳು ಎಂದು ಅರ್ಥೈಸಲಾಗಿದೆಯೆಂದು ಹೇಳುತ್ತಾರೆ. ಹಾಗೂ ಈ ವಿವಾದಕ್ಕೆ ಕಾರಣ ಪಾಪ ಶಬ್ದವನ್ನು ಇಂಗ್ಲಿಷಿನ ‘ಸಿನ್’ ಶಬ್ದಕ್ಕೆ ಬಾಷಾಂತರಿಸಿದ್ದರಿಂದ ವಸಾಹತು ಪ್ರಜ್ಞೆ ಈ ವಿವಾದಕ್ಕೆ ಕಾರಣ ಎಂಬುದು ಒಟ್ಟೂ ಲೇಖನದ ಸಾರಾಂಶ.
  ಆದರೆ ವಾಸ್ತವವೇನೆಂದರೆ(ಹಾಗೂ ಲೇಖಕರು ತಿಳಿದುಕೊಳ್ಳಬೇಕಾದುದೆನೆಂದರೆ) ಭಗವಾನರು ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕವನ್ನು ವಿರೋಧಿಸುವಾಗ ಅದನ್ನು ‘ಸಿನ್’ ಶಬ್ದಕ್ಕೆ ಭಾಷಾಂತರಿಸಿ ಅದರಿಂದ ಹೊರಡುವ ಅರ್ಥಕ್ಕೆ ವಿರೋಧಿಸಿಲ್ಲ, ಬದಲಾಗಿ ಲೇಖಕರು ಇಲ್ಲಿ ‘ಪಾಪ’ ಶಬ್ದಕ್ಕೆ ವಿವರಿಸಿದ ಅರ್ಥವನ್ನೇ ಒಟ್ಟಾರೆಯಾಗಿ ವಿವರಿಸಿದ್ದು. ‘ಸ್ತ್ರೀಯರು ಹಾಗೂ ಶೂದ್ರರು ವೇದಾಧಿಕಾರವನ್ನು ಹೊಂದಿಲ್ಲ’ ಎನ್ನುವದು ಭಗವಾನರು ವಿರೋಧಿಸುವ ಸಮಾನತಾ ವಿರೋಧಿ ತತ್ವವೇ ಅಲ್ಲವೇ? ಇದರಲ್ಲಿ ಇಂಗ್ಲಿಷ್ ತುರ್ಜುಮೆಯಿಂದಾಗಿರುವ ಪ್ರಮಾದವೇನು ಬಂತು?
  ನನ್ನಲ್ಲಿ ಮುಖ್ಯವಾಗಿ ಏಳುವ ಪ್ರಶ್ನೆ. ಅಷ್ಟಕ್ಕೂ ಈ ವಿವಾದ ಶುವಾದ್ದು ಯಾರಿಂದ? ಭಗವಾನರನ್ನು ವಿರೋಧಿಸುವವರಿಂದ. ಯಾಕೆಂದರೆ ಭಗವದ್ಗೀತೆ ಎನ್ನುವದು ಭಾರತೀಯ ಸಂಪ್ರದಾಯಸ್ಥರಿಗೆ ಹಿಸ್ಟಾರಿಕಲ್ ಫಾಕ್ಟ್ ಅಲ್ಲದಿದ್ದರೆ(ಲೇಖಕರು ಹೇಳುವಂತೆ) ಆ ಪುಸ್ತಕದ ಯಾವುದೋ ಸಾಲನ್ನು ಯಾರೋ ಸುಟ್ಟರೆ ಈ ಪರಿ ವಿರೋಧ ಏಕೆ? ಪರ್ವ/ ಸಂಸ್ಕಾರ ಕಾದಂಬರಿಯ ಸಾಲನ್ನು ಸುಟ್ಟರೆ ಇಂತಹ ವಿರೋಧ ಎದುರಾಗುತ್ತಿತ್ತೆ?ಒಬ್ಬ ಆತನಿಗೆ ಒಂದು ಪುಸ್ತಕ ಸರಿಯೇನಿಸದೆ ಇದ್ದರೆ ಅದನ್ನು ಆತ ಎಸೆಯಬಹುದು ಅಥವಾ ಸುಡಬಹುದು, ಅದು ಆತನ ಆಯ್ಕೆಯಾಗಿರುತ್ತದೆ. ಅದರಿಂದ ಯಾವುದೇ ವಿವಾದ ಆಗುವದಿಲ್ಲ. ಆದರೆ ವಿವಾದ ಆಗುವದು ಅದನ್ನು ವಿರೊಧಿಸುವದರಿಂದ ಎನ್ನುವದು ಸ್ಪಷ್ಟ.

  ಉತ್ತರ
  • ನವೆಂ 8 2015

   ‘ಸ್ತ್ರೀಯರು ಹಾಗೂ ಶೂದ್ರರು ವೇದಾಧಿಕಾರವನ್ನು ಹೊಂದಿಲ್ಲ’ ಎನ್ನುವದು ಭಗವಾನರು ವಿರೋಧಿಸುವ ಸಮಾನತಾ ವಿರೋಧಿ ತತ್ವವೇ ಅಲ್ಲವೇ?
   => ನಮ್ಮ ಸಂಪ್ರದಾಯಗಳು ಭಗವಾನರು ಹೇಳುವ ಸಮಾನತೆಯ ಕಲ್ಪನೆಯನ್ನೇ ಹೊಂದಿಲ್ಲವಲ್ಲ? ಹುಟ್ಟೇ ಜೀವನದ ಆರಂಭ ಎಂದು ಭಾವಿಸದ ಹೊರತು ಎಲ್ಲರೂ ಹುಟ್ಟಾ ಸಮಾನರು ಎಂಬ ನಿರ್ಣಯ ಯಾವನೂ ತಾಳಲಾರನು. ಆದರೆ ನಮ್ಮ ಸಂಪ್ರದಾಯಗಳಲ್ಲಿ ವ್ಯಕ್ತಿಯ ಹುಟ್ಟು ಆತನ ಆತ್ಮದ ಅನಾದಿ ಪಯಣದ ಒಂದು ಮಜಲಷ್ಟೇ. ಪೂರ್ವಜನ್ಮವನ್ನು, ಅಲ್ಲಿನ ಕಾರ್ಯಗಳು ಇಲ್ಲಿ ಮಾಡುವ ಪರಿಣಾಮಗಳನ್ನು ಒಪ್ಪುವ ಯಾವ ಸಂಪ್ರದಾಯವೂ ಹುಟ್ಟಾ ಸಮಾನತೆ ಎಂಬ ಕಲ್ಪನೆ ಹೊಂದಿರಲು ಸಾಧ್ಯವಿಲ್ಲ. (ಮತ್ತು ನಮ್ಮಲ್ಲಿ ಸಮಾನತೆ ಅಸಮಾನತೆಗಳೂ ಸಾಂದರ್ಭಿಕವಾಗಿಯೇ ಪ್ರಯೋಗವಾಗುತ್ತವೆ) ಹೀಗಾಗಿ ಭಗವಾನರು ತಾವು ನಂಬಿರುವ “ನಮ್ಮದಲ್ಲದ ಕಲ್ಪನೆ”ಯಿಂದ “ನಮ್ಮದಾಗಿರುವ ಸಂಪ್ರದಾಯ”ಗಳನ್ನು ಅಳೆಯುವದು ತಾರ್ಕಿಕವಾಗಿ ತಪ್ಪು. ಈ ನಮ್ಮದಲ್ಲದ ಕಲ್ಪನೆ ಎಲ್ಲಿಂದ ಬಂತು? ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಿನ್ ಇಂದ ಬಂದಿದ್ದು.

   ನಮ್ಮ ಸಂಪ್ರದಾಯಗಳು ಕೇವಲ ಆತ್ಮಜ್ಞಾನಿಗಳಲ್ಲಿ, ಆತ್ಮವನ್ನರಸುವ ಸಾಧಕರಲ್ಲಿ ಸಮಾನತೆಯನ್ನು ಕಾಣುತ್ತದೆ. ಏಕೆಂದರೆ ಅವರು ಕರ್ಮಗಳನ್ನು ಮಾಡುವದಿಲ್ಲ. ಅಥವಾ ಮಾಡುವ ಕರ್ಮದಲ್ಲಿ ತಾನು ಎಂಬ ಭಾವವಿಡುವದಿಲ್ಲ. ಹೀಗಾಗಿ ಫಲಗಳನ್ನೂ ಆತ್ಮಕ್ಕೆ ಅಂಟಿಸಿಕೊಳ್ಳುವದಿಲ್ಲ. ಹೀಗಾಗಿ ಕರ್ಮಗಳಿಂದುಂಟಾಗುವ ತಾರತಮ್ಯಗಳು ಕರ್ಮಗಳನ್ನು ಮೀರಿದವರಲ್ಲಿರುವದಿಲ್ಲ. ಹೀಗಾಗಿ ಅಲ್ಲಿ ಸಮಾನತೆ ಕಾಣುವದರಿಂದ ಭಗವಾನರಿಗೆ ಅಧ್ಯಾತ್ಮ ಒಪ್ಪಿಗೆಯಾಗಿದೆ.

   ನನ್ನಲ್ಲಿ ಮುಖ್ಯವಾಗಿ ಏಳುವ ಪ್ರಶ್ನೆ. ಅಷ್ಟಕ್ಕೂ ಈ ವಿವಾದ ಶುವಾದ್ದು ಯಾರಿಂದ? ಭಗವಾನರನ್ನು ವಿರೋಧಿಸುವವರಿಂದ.

   =>ಅಲ್ಲ. ಮೊದಲು ಭಗವಾನರಿಂದ ಗೀತೆ/ರಾಮಾಯಣ/ಭಾರತಗಳ ಕುರಿತು ಕನ್ಸಿಸ್ಟೆನ್ಸಿಯಾಗಲೀ, ಜನಸಾಮಾನ್ಯರ ಅನುಭವಕ್ಕೆ ಅನುಗುಣವಾಗಿಯಾಗಲೀ ಇಲ್ಲದಿರುವ ವಿಚಿತ್ರ ತರ್ಕದೊಂದಿಗೆ ವಿವರಿಸಿದ್ದು ವಿವಾದಕ್ಕೆ ಕಾರಣ. (ತರ್ಕಕ್ಕೆ ಪ್ರತಿತರ್ಕ ಇರಬಾರದು ಎಂಬುದು ಸಂವಿಧಾನ ಬಿಡಿ, ನಮ್ಮ ಸಂಪ್ರದಾಯಗಳಲ್ಲೇ ಇಲ್ಲ.)

   ಭಗವದ್ಗೀತೆ ಎನ್ನುವದು ಭಾರತೀಯ ಸಂಪ್ರದಾಯಸ್ಥರಿಗೆ ಹಿಸ್ಟಾರಿಕಲ್ ಫಾಕ್ಟ್ ಅಲ್ಲದಿದ್ದರೆ(ಲೇಖಕರು ಹೇಳುವಂತೆ) ಆ ಪುಸ್ತಕದ ಯಾವುದೋ ಸಾಲನ್ನು ಯಾರೋ ಸುಟ್ಟರೆ ಈ ಪರಿ ವಿರೋಧ ಏಕೆ? ಪರ್ವ/ ಸಂಸ್ಕಾರ ಕಾದಂಬರಿಯ ಸಾಲನ್ನು ಸುಟ್ಟರೆ ಇಂತಹ ವಿರೋಧ ಎದುರಾಗುತ್ತಿತ್ತೆ?

   => ಖಂಡಿತ ವಿರೋಧವೂ ಇರಬಾರದಿತ್ತು. ಮೊಟ್ಟ ಮೊದಲ ಬಾರಿಗೆ ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟಾಗ ೯೯% ಭಾರತೀಯರ ಪ್ರತಿಕ್ರಿಯೆ ಏನಿತ್ತು?? ಏನೇನೂ ಇರಲಿಲ್ಲ. ಕಾರಣ ಆ ಪುಸ್ತಕ ನಮ್ಮ ಪಾಲಿಗೆ ಏನೂ ಆಗಿರಲೇ ಇಲ್ಲ. ಆಗ ಅದನ್ನು ವಿರೋಧಿಸಿದ ಎಲ್ಲೋ ಕೆಲವರು ವಸಾಹತು ಶಿಕ್ಷಣ ಪಡೆದು ಮನುಸ್ಮೃತಿ ನಮ್ಮ ರಿಲಿಜನ್ನಿನ ಡಾಕ್ಟ್ರಿನ್ನು ಎಂದೇ ನಂಬಿದವರಾಗಿದ್ದರು. ವಾಲ್ಮೀಕಿಯ ರಾಮಾಯಣ ಡಾಕ್ಟ್ರಿನ್ನಾಗಿ, ರಾಮಾಯಣ ದರ್ಶನಂ ಕಾವ್ಯವಾಗಿ ಒಬ್ಬನಿಗೆ ಕಾಣಬೇಕಾದರೆ ವಸಾಹತುಪ್ರಜ್ಞೆ ಅನಿವಾರ್ಯ ಎಂದು ಈಗಲೇ ಹೇಳಿದ್ದೇನೆ. ಹೀಗಾಗಿ ಪರ್ವವನ್ನು ಸುಟ್ಟಾಗ ತೀವ್ರ ವಿರೋಧ ಬರುವದಿಲ್ಲ ಎಂಬುದನ್ನು ವಿವರಿಸಲು ಆ ವಾಕ್ಯ ಸಾಕು. ಶಿಕ್ಷಣದ ಮುಖಾಂತರ ನಮ್ಮಲ್ಲಿ ವಸಾಹತುಪ್ರಜ್ಞೆ ಬೆಳೆದಂತೆ ನಮ್ಮದೊಂದು ರಿಲಿಜನ್ನು, ಅದಕ್ಕೆ ಗೀತೆ/ಮನುಸ್ಮೃತಿಗಳು ಡಾಕ್ಟ್ರಿನ್ನು ಎಂಬ ಭಾವನೆ ಬಲವಾದಂತೆ ಸೆಕ್ಯುಲರಿಗಳ ಸುಡುವ ಭಾವನೆಯೂ (ಕ್ರಿಯೆ) ಮತ್ತು ಹಿಂದೂ ರಿಲಿಜನ್ನಿನ ಸನ್ನಿಗೆ ಒಳಗಾಗಿರುವ ಕೋಮುವಾದಿಗಳ ವಿರೋಧ ಕ್ರಿಯೆಯೂ (ಪ್ರತಿಕ್ರಿಯೆ) ಹೆಚ್ಚುತ್ತದೆ. ಈ ಕ್ರಿಯೆ ಪ್ರತಿಕ್ರಿಯೆಗಳೆರಡೂ ನಿವಾರಣೆಯಾಗಬೇಕಾದರೆ ವಸಾಹತುಪ್ರಜ್ಞೆಯಿಂದ ಹೊರಬರುವದು ಅನಿವಾರ್ಯ.

   ಒಬ್ಬ ಆತನಿಗೆ ಒಂದು ಪುಸ್ತಕ ಸರಿಯೇನಿಸದೆ ಇದ್ದರೆ ಅದನ್ನು ಆತ ಎಸೆಯಬಹುದು ಅಥವಾ ಸುಡಬಹುದು, ಅದು ಆತನ ಆಯ್ಕೆಯಾಗಿರುತ್ತದೆ. ಅದರಿಂದ ಯಾವುದೇ ವಿವಾದ ಆಗುವದಿಲ್ಲ. ಆದರೆ ವಿವಾದ ಆಗುವದು ಅದನ್ನು ವಿರೊಧಿಸುವದರಿಂದ ಎನ್ನುವದು ಸ್ಪಷ್ಟ.

   => ನಮ್ಮ ಸಂಪ್ರದಾಯಗಳು ಪ್ರತಿಯೊಂದು ಪರಿಣಾಮಕ್ಕೂ ಕಾರಣವಿದೆ ಎಂದು ಕಲಿಸಿದೆಯಲ್ಲವೇ? ಹೀಗಾಗಿ ಅವರ ಆಯ್ಕೆಹೂ ಒಂದು ಕಾರಣವಿದೆ ಎಂದೇಕೆ ನಾವು ಸಂಶೋಧನೆ ಮಾಡಬಾರದು? ಭಗವಾನರು ಕುಮಾರವ್ಯಾಸನಲ್ಲಿ ಬರುವ ಗೀತೆಯನ್ನೇಕೆ ಸುಡುವದಿಲ್ಲ? ಅಂಬೇಡ್ಕರರು ಮನುಸ್ಮೃತಿಯನ್ನೇ ಏಕೆ ಸುಟ್ಟರು? ಅದೇ ನಮ್ಮ ಸಾಮಾಜಿಕ ಸಂವಿಧಾನ ಎಂದೇಕೆ ಅವರಿಗೆ ಅನಿಸಿತು? ಈ ಆಯ್ಕೆಗಳಿಗೆ ಕಾರಣವೇನು? ಕಾರಣ ವಸಾಹತುಪ್ರಜ್ಞೆ. ವ್ಯಾಸರ ಗೀತೆ ಸುಟ್ಟರಷ್ಟೇ ಹಿಂದೂ ಸಂಘಟನೆಗಳೇಕೆ ಪ್ರತಿಕ್ರಿಯಿಸುತ್ತವೆ? ಯಾಜ್ಞವಲ್ಕ್ಯ ಸ್ಮೃತಿ ಸುಟ್ಟರೆ ಪತ್ರಿಕೆಯ ತುದಿಯಲ್ಲೂ ಬರದ ಸುದ್ದಿ, ಮನುಸ್ಮೃತಿ ಸುಟ್ಟರೆ ಮುಖಪುಟದಲ್ಲಿ ಬರಲು ಕಾರಣ? ಅದಕ್ಕೂ ಕಾರಣ ವಸಾಹತುಪ್ರಜ್ಞೆ.

   ಈ ಲೇಖನವನ್ನೂ ನಾನು ಗೀತೆಯನ್ನು ಸಮರ್ಥಿಸುವದಕ್ಕಾಗಿ ಬಳಸಿಲ್ಲ. ಗೀತೆಯು ಪಾಪಯೋನಿ/ಪುಣ್ಯಯೋನಿ ಶಬ್ದಗಳಿಗೆ ಇರಬಹುದಾದ ಒಂದು ಕಾರಣ ನೀಡಿದ್ದೇನೆ. ಅದನ್ನು ನೀಡಲು ಕಾರಣ ಭಗವಾನರು ಹೇಳಿರುವ ಕಾರಣದಲ್ಲಿ ತಾರ್ಕಿಕ ದೋಷಗಳಿರುವದರಿಂದ, ಮತ್ತು ಆ ದೋಷಗಳನ್ನು ಕನ್ಸಿಸ್ಟೆಂಟ್ ಆಗಿ ನನ್ನ ಕಾರಣವು ವಿವರಿಸುವದರಿಂದ. ಅಷ್ಟೇ. ಗೀತೆಯು ನನ್ನ ಅನುಭವಸಾರಿಯಾದ ತರ್ಕಕ್ಕೆ ಅನುಗುಣವಾಗಿ ನನಗೆ ಕಂಡಿದ್ದರಿಂದ ನಾನು ಅದರ ಪರವಾಗಿ ಬ್ಯಾಟ್ ಮಾಡಿದ್ದೇನೆಯೇ ಹೊರತು, ಅದು ನಾನು ನಂಬಬೇಕಾಗಿರುವ ರಿಲಿಜನ್ನಿನ ಡಾಕ್ಟ್ರಿನ್ನು ಎಂಬ ಕಾರಣಕ್ಕಲ್ಲ.

   ಇಡೀ ಲೇಖನದಲ್ಲಿ ನಾನು ಭಗವಾನ್ ಅವರು ತಾರ್ಕಿಕ ವಿವರಣೆಗಾಗಿ ಆಯ್ದುಕೊಂಡ ಮಾರ್ಗವು ಒಂದು ಕನ್ಸಿಸ್ಟೆಂಟ್ ವಿವರಣೆಯನ್ನು ನೀಡಲು ಸಮರ್ಥವಲ್ಲ ಎಂದು ಹೇಳಿ, ಯಾವ ಮಾರ್ಗವು ಕನ್ಸಿಸ್ಟೆಂಟ್ ವಿವರಣೆ ನೀಡಲು ಸಾಧ್ಯ ಎಂಬುದನ್ನು ವಿವರಿಸಲು ಪ್ರಯತ್ನಿಸಿದ್ದೇನೆಯೇ ಹೊರತು, ಎಲ್ಲಿಯೂ ಭಗವಾನರನ್ನು ವಿರೋಧಿಸಿಲ್ಲ. ನಾನೆಲ್ಲೂ ಅವರನ್ನು ಹಿಂದೂವಿರೋಧಿ, ಧರ್ಮದ್ರೋಹಿ ಎಂದೆಲ್ಲ ಹಿಂದೂ ಸಂಘಟನೆಗಳು ಬಳಸುವ ಪದಗಳನ್ನು ಬಳಸಿಲ್ಲ.

   ಒಬ್ಬ ಆತನಿಗೆ ಒಂದು ಪುಸ್ತಕ ಸರಿಯೇನಿಸದೆ ಇದ್ದರೆ ಅದನ್ನು ಆತ ಎಸೆಯಬಹುದು ಅಥವಾ ಸುಡಬಹುದು, ಅದು ಆತನ ಆಯ್ಕೆಯಾಗಿರುತ್ತದೆ. ಅದರಿಂದ ಯಾವುದೇ ವಿವಾದ ಆಗುವದಿಲ್ಲ. ಆದರೆ ವಿವಾದ ಆಗುವದು ಅದನ್ನು ವಿರೊಧಿಸುವದರಿಂದ ಎನ್ನುವದು ಸ್ಪಷ್ಟ.

   ಉತ್ತರ
  • ನವೆಂ 8 2015

   ಯಾಕೆಂದರೆ ಭಗವದ್ಗೀತೆ ಎನ್ನುವದು ಭಾರತೀಯ ಸಂಪ್ರದಾಯಸ್ಥರಿಗೆ ಹಿಸ್ಟಾರಿಕಲ್ ಫಾಕ್ಟ್ ಅಲ್ಲದಿದ್ದರೆ(ಲೇಖಕರು ಹೇಳುವಂತೆ) => ಕ್ಷಮಿಸಿ, ನಾನು ಹಿಸ್ಟಾರಿಕಲ್ ಫಾಕ್ಟ್ ಹೌದು ಅಥವಾ ಅಲ್ಲ ಎಂಬುದರ ನಿರ್ಣಯ ಅಲ್ಲಿ ಮಾಡಿಯೇ ಇಲ್ಲ. ಅದು ಸಂಶೋಧನೆಗೆ ಮುಕ್ತವಾಗಿರುವ ವಿಷಯ. ಆದರೆ ಸಂಪ್ರದಾಯಗಳಿಗೆ ಅದು ಮುಖ್ಯವೇ ಅಲ್ಲ ಎಂದು ಹೇಳಿದ್ದೇನೆ. ಅದರ ಹಿಸ್ಟಾರಿಕಲ್ ಅಸ್ತಿತ್ವ, ನಾಸ್ತಿತ್ವವಾಗಲೀ ಸಿದ್ಧವಾದರೂ ಸಂಪ್ರದಾಯಗಳು ಹೊಂದಿ ಬಂದಿರುವ ಸಂಬಂಧಗಳು ಬದಲಾಗುವದೂ ಇಲ್ಲ ಎಂಬುದನ್ನು ಹೇಳಿದ್ದೇನೆ. ಹಿಸ್ಟಾರಿಕಲ್ ಅಸ್ತಿತ್ವ/ನಾಸ್ತಿತ್ವಗಳನ್ನು ಮೀರಿಯೂ ಒಂದು ಅಸ್ತಿತ್ವದ ಕಲ್ಪನೆ ನಮ್ಮಲ್ಲಿ ಇದೆ. ವಸಾಹತುಪ್ರಜ್ಞೆಯಿಂದಾಗಿ ಅದು ಮಾಯವಾಗಿದೆ ಅಷ್ಟೇ.

   ಉತ್ತರ
 5. ನವೆಂ 9 2015

  “ಹೀಗಾಗಿ ಭಗವಾನರು ತಾವು ನಂಬಿರುವ “ನಮ್ಮದಲ್ಲದ ಕಲ್ಪನೆ”ಯಿಂದ “ನಮ್ಮದಾಗಿರುವ ಸಂಪ್ರದಾಯ”ಗಳನ್ನು ಅಳೆಯುವದು ತಾರ್ಕಿಕವಾಗಿ ತಪ್ಪು”.
  ನಮ್ಮ ಸಂಪ್ರದಾಯಗಳಲ್ಲಿ ‘ಸಮಾನತೆಯ ಕಲ್ಪನೆ’ ಇತ್ತೋ ಇಲ್ಲವೋ ಎನ್ನುವದು ವರ್ತಮಾನದ ಆವಶ್ಯಕತೆಗೆ ಪ್ರಸ್ತುತವಲ್ಲ. ನೀವು ಹೇಳಿದಂತೆ ನಮ್ಮ ಸಂಪ್ರದಾಯಗಳಲ್ಲಿ ‘ಸಮಾನತೆಯ ಕಲ್ಪನೆ’ ಇರಲಿಲ್ಲವೆಂದುಕೊಳ್ಳೋಣ. ಆದರೆ ಭಗವಾನರಿಗೆ ವರ್ತಮಾನದಲ್ಲಿ ‘ಸಮಾನತೆಯ’ ಅವಶ್ಯಕತೆ ಇದೆ ಎನ್ನಿಸಿರಬಹುದು. ಹಾಗಾಗಿ ಸಮಾನತೆಯಿರದ ಸಂಪ್ರದಾಯವನ್ನು ಅಥವಾ ಅದನ್ನು ಒತ್ತಿ ಹೇಳುವ ಪುಸ್ತಕವು ಅಪ್ರಸ್ತುತ ಎನಿಸಿರಬಹುದು. ಆದರೆ ಅದು ಅತಾರ್ಕಿಕ ಹೆಗನಿಸಿಕೊಳ್ಳುತ್ತದೆ? ‘ಸಮಾನತೆ’ ಎನ್ನುವದು ಇಂದು ಅವಶ್ಯಕವೋ ಇಲ್ಲವೋ ಎನ್ನುವದು ಮುಖ್ಯವೇ ಹೊರತು ಅದು ಪಾಶ್ಚಿಮಾತ್ಯರಿಂದ ಬಂದಿದೆಯೋ ಪೌರಾತ್ಯರಿಂದ ಬಂದಿದೆಯೋ, ಸಿನ್ ಶಬ್ದದಿಂದ ಬಂದಿದೆಯೋ ಎನ್ನುವದು ಮುಖ್ಯವಲ್ಲ. ಅಲ್ಲದೆ ‘ಸಿನ್’ ಶಬ್ದಕ್ಕೂ ‘ಸಮಾನತೆಯ’ ಪರಿಕಲ್ಪನೆಗೂ ಯಾವುದೇ ಸಂಬಂಧ ನನಗೆ ತೋಚುತ್ತಿಲ್ಲ.
  ‘ಸಮಾನತೆ’ ಯ ಪರಿಕಲ್ಪನೆ ನಮ್ಮದಲ್ಲದ ಸಂಸ್ಕೃತಿಯಿಂದ ಬಂದಿದ್ದಾದ್ದರಿಂದ ಅದನ್ನು ನಮ್ಮ ಜೀವನದಲ್ಲಿ ಮಾನದಂಡವನ್ನಾಗಿಸಿಕೊಳ್ಳಬಾರದು ಎಂದಾದರೆ ರಾಷ್ಟ್ರೀಯತೆಯ(Nationalism ) ಕಲ್ಪನೆ ನಮಗ್ಯಾಕೆ ಬೇಕು? ಪ್ರಜಾಪ್ರಭುತ್ವ ನಮಗ್ಯಾಕೆ ಬೇಕು? ಕಾನೂನು, ರಕ್ಷಣಾ ವ್ಯವಸ್ಥೆ ಬೇಡವೆ? ಇವುಗಳು ವಸಾಹತು ಪ್ರಜ್ಞೆಯಿಂದಲೇ ಹುಟ್ಟಿದವಲ್ಲವೆ? ಅಥವಾ ‘ವಸಾಹತುಶಾಹಿ ಪ್ರಜ್ಞೆ’ ನಮ್ಮ ಸಂಪ್ರದಾಯಗಳಲ್ಲಿ ಪ್ರಕ್ಷೇಪ ನಡೆಸಬಾರದೆಂದರೆ ‘ಸತಿ ಸಹಗಮನ’ ದಂತಹ ನಮ್ಮ ಸಂಪ್ರದಾಯದಲ್ಲಿರುವ ಪದ್ದತಿಗಳನ್ನು ತೊಡೆದುಹಾಕುವ ಅಗತ್ಯತೆ ಯಾವ ಪ್ರಜ್ಞೆಯಿಂದ ಬರಬೇಕಿತ್ತು? ಅಥವಾ ಅಂತವುಗಳನ್ನು ತೊಡೆದುಹಾಕುವ ಅಗತ್ಯತೆಯೇ ಇರಲಿಲ್ಲವೇ?

  “ಈ ಕ್ರಿಯೆ ಪ್ರತಿಕ್ರಿಯೆಗಳೆರಡೂ ನಿವಾರಣೆಯಾಗಬೇಕಾದರೆ ವಸಾಹತುಪ್ರಜ್ಞೆಯಿಂದ ಹೊರಬರುವದು ಅನಿವಾರ್ಯ.”
  ಹೌದು ಈ ಅನಿವಾರ್ಯತೆ ಇರುವದು ವಿರೋಧಿಸುವವರಲ್ಲೇ. ಭಗವಾನರು ಭಗವದ್ಗೀತೆಯಲ್ಲಿ ಸಮಾನತೆಯನ್ನು ಅಪೇಕ್ಷಿಸುವದು(ಅದು ವಸಾಹತು ಪ್ರಜ್ಞೆಯೇ ಆಗಿದ್ದರೂ ಕೂಡ), ಅದು ಸಾಂವಿಧಾನಿಕವಾದ್ದರಿಂದ ಅವರು ಅದರಿಂದ ಹೊರಬರುವ ಅಗತ್ಯ ಇಲ್ಲ. ಅವರು ಸಮಾನತೆಯ ಪರಿಕಲ್ಪನೆಯನ್ನು ಬಿಡಬೇಕು ಎಂದು ನೀವೆನ್ನುವಿರಾದರೆ ಮೊದಲು ನೀವು ನಮ್ಮ ಸಂವಿಧಾನವನ್ನೇ ಪ್ರಶ್ನಿಸಬೇಕಾಗುತ್ತದೆ.

  “ನಮ್ಮ ಸಂಪ್ರದಾಯಗಳು ಪ್ರತಿಯೊಂದು ಪರಿಣಾಮಕ್ಕೂ ಕಾರಣವಿದೆ ಎಂದು ಕಲಿಸಿದೆಯಲ್ಲವೇ?”
  ಕ್ಷಮಿಸಿ. ಈ ಬಗ್ಗೆ ಬಾಲಗಂಗಾಧರರು ವ್ಯತಿರಿಕ್ತವಾಗಿ ಹೇಳಿದ್ದಾರೆಂದು ಓದಿದ ನೆನಪು. ನಮ್ಮ ಸಂಪ್ರದಾಯಗಳು ಕಾರಣಗಳನ್ನು ಹುಡುಕುವದು ಮುಖ್ಯವೆಂದು ಬಗೆದಿಲ್ಲ ಎಂದು ಬಾಲಗಂಗಾಧರರು ಸ್ಪಷ್ಟವಾಗಿ ಹೇಳಿದ್ದಾರೆ.

  ಉತ್ತರ
  • ನವೆಂ 9 2015

   ನೀವು ಹೇಳಿದಂತೆ ನಮ್ಮ ಸಂಪ್ರದಾಯಗಳಲ್ಲಿ ‘ಸಮಾನತೆಯ ಕಲ್ಪನೆ’ ಇರಲಿಲ್ಲವೆಂದುಕೊಳ್ಳೋಣ.
   => ನಾನು ಮೇಲಿನ ಕಮೆಂಟಿನಲ್ಲಿ, ಹುಟ್ಟಾ ಸಮಾನತೆ ಎಂಬ ಕಲ್ಪನೆಯನ್ನು ವಿರೋಧಿಸಿದ್ದೇನೆಯೇ ಹೊರತು ಇನ್ನೇನೂ ಇಲ್ಲ. ಹುಟ್ಟಾ ಸಮಾನತೆ ಶಬ್ದವನ್ನು ಬೇಕೆಂದೇ ಪ್ರಯೋಗಿಸಿದ್ದೇನೆ. ಗಮನಿಸಿ..

   ಭಗವಾನರಿಗೆ ವರ್ತಮಾನದಲ್ಲಿ ‘ಸಮಾನತೆಯ’ ಅವಶ್ಯಕತೆ ಇದೆ ಎನ್ನಿಸಿರಬಹುದು. ಹಾಗಾಗಿ ಸಮಾನತೆಯಿರದ ಸಂಪ್ರದಾಯವನ್ನು ಅಥವಾ ಅದನ್ನು ಒತ್ತಿ ಹೇಳುವ ಪುಸ್ತಕವು ಅಪ್ರಸ್ತುತ ಎನಿಸಿರಬಹುದು. ಆದರೆ ಅದು ಅತಾರ್ಕಿಕ ಹೆಗನಿಸಿಕೊಳ್ಳುತ್ತದೆ?
   => ನಾವು ಸಮಾನತೆ ಶಬ್ದವನ್ನು ಪರಂಪರಾಗತವಾಗಿ ಸಾಂದರ್ಭಿಕವಾಗಿಯೇ ಪ್ರಯೋಗಿಸುತ್ತ ಬಂದಿದ್ದೇವೆ. ನಾವೆಂದೂ ಸಾರ್ವತ್ರಿಕ, ಸಾರ್ವಕಾಲಿಕ ಸಾಮಾಜಿಕ ಸಮಾನತೆಯನ್ನು ಒಪ್ಪಿಯೇ ಇಲ್ಲ. ಬುದ್ಧಿಜೀವಿಗಳು ನಂಬಿರುವ ಬುದ್ಧ ಬಸವರೂ ಸಮಾಜದಲ್ಲಿ ಸಾರ್ವತ್ರಿಕ, ಸಾರ್ವಕಾಲಿಕ ಸಮಾನತೆಯನ್ನು ಪ್ರತಿಪಾದಿಸಿಲ್ಲ. ಕೀಳು ಜಾತಿಯ ಶಬ್ದಗಳನ್ನು ನಿಂದನೆಗಾಗಿ ಬಳಸಿರುವ ವಚನಗಳು, ನಿಜವಾದ ಬ್ರಾಹ್ಮಣ್ಯದ ಕುರಿತಾದ ಚರ್ಚೆಗಳು ಶರಣರಲ್ಲೂ, ಸಂಘಗಗಳಲ್ಲೂ (RSS ಅಲ್ಲ, ಬುದ್ಧನ ಸಂಘಗಳು) ನಡೆದಿವೆ. (ಇದರ ಬಗ್ಗೆ ಈಗಾಗಲೇ ಸಾವಿರಾರು ಚರ್ಚೆ ನಡೆದಿದೆ. ಹೀಗಾಗಿ ಇದನ್ನು ಹೆಚ್ಚು ಹೇಳಲು ಹೋಗುತ್ತಿಲ್ಲ) ಹೀಗಾಗಿ ಭಗವಾನರು ಸಮಾನತೆ ಬೇಕು ಎಂದಾಕ್ಷಣ, ಯಾವ ಸಂದರ್ಭದಲ್ಲಿ ಎಂದು ಹೇಳಬೇಕಾಗುತ್ತದೆ, ಮತ್ತು ಆ ಸಂದರ್ಭದಿಂದಾಚೆ ಅದು ಮಹತ್ವವನ್ನೂ ಕಳೆದುಕೊಳ್ಳುತ್ತದೆ. ಈಗ ನಾನೂ, ಮುಖ್ಯಮಂತ್ರಿಯೂ ಸಮಾನರೇ ಎಂಬ ಪ್ರಶ್ನೆ ಕೇಳಿದರೆ ಸಾಂದರ್ಭಿಕವಾಗಿ ಹೌದು/ಇಲ್ಲ ಎಂಬ ಅರ್ಥ ಪಡೆದುಕೊಳ್ಳುತ್ತದೆ, ಕಾನೂನಿನ ದೃಷ್ಟಿಯಲ್ಲಿ ಸಮಾನರು, ಅಧಿಕಾರದ ದೃಷ್ಟಿಯಲ್ಲಿ ಅಸಮಾನರು, ನಾಳೆ ನಾನು ಮಂತ್ರಿಯಾಗಿ ಈಗಿನ ಮಂತ್ರಿ ಸಾಮಾನ್ಯನಾದರೂ ಸಾಂದರ್ಭಿಕವಾಗಿಯೇ ಸಮಾನತೆಯನ್ನು ಚರ್ಚಿಸಬೇಕಾಗುವದು. ಗೀತೆಯಲ್ಲಿಯೂ ಅಧ್ಯಾತ್ಮದ ಸಂದರ್ಭದಲ್ಲಿ ಏಕತ್ವವನ್ನೂ, ಕರ್ಮ-ಫಲಗಳ ಸಂದರ್ಭದಲ್ಲಿ ವೈರುಧ್ಯತೆಯನ್ನೂ ಪ್ರತಿಪಾದಿಸಿದೆ. ನಾನು ಇಲ್ಲಿ ಅತಾರ್ಕಿಕವೆಂದು ಕರೆದಿರುವದು, ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳದೇ ಸಾರ್ವತ್ರೀಕರಿಸುವ ಪದ್ಧತಿಯನ್ನು ಮಾತ್ರ.

   ‘ಸಮಾನತೆ’ ಎನ್ನುವದು ಇಂದು ಅವಶ್ಯಕವೋ ಇಲ್ಲವೋ ಎನ್ನುವದು ಮುಖ್ಯವೇ ಹೊರತು ಅದು ಪಾಶ್ಚಿಮಾತ್ಯರಿಂದ ಬಂದಿದೆಯೋ ಪೌರಾತ್ಯರಿಂದ ಬಂದಿದೆಯೋ, ಸಿನ್ ಶಬ್ದದಿಂದ ಬಂದಿದೆಯೋ ಎನ್ನುವದು ಮುಖ್ಯವಲ್ಲ.
   => ಇಲ್ಲಿಯೂ ಕೂಡ ಯಾವ ಸಂದರ್ಭದಲ್ಲಿ ಸಮಾನತೆ ಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು.

   ಅಲ್ಲದೆ ‘ಸಿನ್’ ಶಬ್ದಕ್ಕೂ ‘ಸಮಾನತೆಯ’ ಪರಿಕಲ್ಪನೆಗೂ ಯಾವುದೇ ಸಂಬಂಧ ನನಗೆ ತೋಚುತ್ತಿಲ್ಲ.
   => ನಾನು ಸಮಾನತೆ ಶಬ್ದವನ್ನು ಲೇಖನದಲ್ಲಿ ಬಳಸಿಲ್ಲ. ಸಿನ್ ಮತ್ತು ಸಿನ್ನರ್ ಶಬ್ದವನ್ನು ಪಾಪ ಮತ್ತು ಪಾಪವಂತ ಶಬ್ದಗಳೊಂದಿಗೆ ಸಂಬಂಧಿಸಿ ಚರ್ಚಿಸಿದ್ದೇನೆ. ಸಮಾನತೆ ಮೊದಲು ನೀವು ಕಮೆಂಟಿನಲ್ಲಿ ಬಳಸಿದಿರಿ. (ಭಗವಾನರ ಸಮಾನತಾ ವಿರೋಧಿ ತತ್ತ್ವವೇ ಅಲ್ಲವೇ?) ನಾನು ಭಗವಾನರ ಸಮಾನತಾ ಕಲ್ಪನೆ ಪಾಶ್ಚಿಮಾತ್ಯರು ಕಲಿಸಿದ ಹುಟ್ಟಾ ಸಮಾನತೆಯಿಂದ ಬಂದಿರುವದು. ಮತ್ತು ಆ ಕಲ್ಪನೆ ನಮ್ಮಲ್ಲಿ ಬರದಿರುವದಕ್ಕೆ ಕಾರಣ ಪೂರ್ವಜನ್ಮದ ಕಲ್ಪನೆ. ಉದಾಹರಣೆಗೆ, ಮಾನಸಿಕವಾಗಿ ಶಕ್ತಳಲ್ಲದ ಹೆಂಡತಿಯಿದ್ದರೆ, ಗಂಡ ಪಶ್ಚಿಮ ದೇಶಗಳಲ್ಲಿ ಡೈವರ್ಸ್ ಕೊಟ್ಟು ತೊಲಗುತ್ತಾನೆ. ಕಾರಣ, ಆತನಿಗೂ ಎಲ್ಲರಂತೆ ನೆಮ್ಮದಿಯ ಜೀವನ ನಡೆಸುವ “ಸಮಾನ” ಹಕ್ಕಿದೆ. ಆದರೆ ನಮ್ಮ ದೇಶದ ಗಂಡಸು, ಇದು ನನ್ನ ಯಾವುದೋ ಜನ್ಮದ ಪಾಪದ ಫಲ. ಅನುಭವಿಸಿ ತೀರಬೇಕು ಎಂದು ಭಾವಿಸುತ್ತಾನೆಯೇ ಹೊರತು, ಆಕೆಯನ್ನು ಬಿಟ್ಟು ತೊಲಗುವದಿಲ್ಲ. (ಇಲ್ಲಿ ನಾನು ಚಿಕ್ಕವನಿದ್ದಾಗ ನೋಡಿದ್ದ ನನ್ನ ಪೂರ್ವಜನೊಬ್ಬನ ಜೀವನವನ್ನೇ ತೆಗೆದುಕೊಂಡಿದ್ದೇನೆ, ಯಾವುದೋ ಕಾಲ್ಪನಿಕ ಕಥೆಯನ್ನಲ್ಲ).

   ‘ಸಮಾನತೆ’ ಎನ್ನುವದು ಇಂದು ಅವಶ್ಯಕವೋ ಇಲ್ಲವೋ ಎನ್ನುವದು ಮುಖ್ಯವೇ ಹೊರತು ಅದು ಪಾಶ್ಚಿಮಾತ್ಯರಿಂದ ಬಂದಿದೆಯೋ ಪೌರಾತ್ಯರಿಂದ ಬಂದಿದೆಯೋ, ಸಿನ್ ಶಬ್ದದಿಂದ ಬಂದಿದೆಯೋ ಎನ್ನುವದು ಮುಖ್ಯವಲ್ಲ.
   => ಈಗ ನಾವು ಪಾಶ್ಚಿಮಾತ್ಯರ ಹುಟ್ಟಾ ಸಮಾನತೆಯನ್ನು ನಮ್ಮಲ್ಲಿ ಹುಟ್ಟಿಸಿಕೊಳ್ಳಬೇಕೆಂದಾದಲ್ಲಿ, ಅದು ಈಗಾಗಲೇ ನಂಬಿ ಬಂದಿರುವ ಪುನರ್ಜನ್ಮದ ಕಲ್ಪನೆಗೆ ತಾರ್ಕಿಕ ವಿರೋಧವನ್ನೊಡ್ಡುವದು, ಪುನರ್ಜನ್ಮದ ಕಲ್ಪನೆಯನ್ನೇಕೆ ಬಿಡಬೇಕು? ಅಥವಾ ನೀವು ಹುಟ್ಟಾ ಸಮಾನತೆಯ ಕುರಿತು ಹೇಳುತ್ತಿಲ್ಲವಾದರೆ ಯಾವ ಸಾಂದರ್ಭಿಕ ಸಮಾನತೆಯ ಕುರಿತು ಹೇಳುತ್ತಿದ್ದೀರಿ ಎಂದು ಸ್ಪಷ್ಟಪಡಿಸಿ.

   ‘ಸಮಾನತೆ’ ಯ ಪರಿಕಲ್ಪನೆ ನಮ್ಮದಲ್ಲದ ಸಂಸ್ಕೃತಿಯಿಂದ ಬಂದಿದ್ದಾದ್ದರಿಂದ ಅದನ್ನು ನಮ್ಮ ಜೀವನದಲ್ಲಿ ಮಾನದಂಡವನ್ನಾಗಿಸಿಕೊಳ್ಳಬಾರದು ಎಂದಾದರೆ ರಾಷ್ಟ್ರೀಯತೆಯ(Nationalism ) ಕಲ್ಪನೆ ನಮಗ್ಯಾಕೆ ಬೇಕು? ಪ್ರಜಾಪ್ರಭುತ್ವ ನಮಗ್ಯಾಕೆ ಬೇಕು? ಕಾನೂನು, ರಕ್ಷಣಾ ವ್ಯವಸ್ಥೆ ಬೇಡವೆ? ಇವುಗಳು ವಸಾಹತು ಪ್ರಜ್ಞೆಯಿಂದಲೇ ಹುಟ್ಟಿದವಲ್ಲವೆ?
   => ಇಲ್ಲಿರುವ ಸಾಮಾಜಿಕ ಸಿಸ್ಟಂ ಬ್ರಿಟೀಷರು ಬಿಟ್ಟು ಹೋಗಿದ್ದಾರೆ, ನಾವು ಮುಂದುವರೆಸಿದ್ದೇವೆ. ಕಾನೂನು/ರಕ್ಷಣಾ ವ್ಯವಸ್ಥೆಯ ಕುರಿತು ಜನಸಾಮಾನ್ಯನಿಗೆ ಯಾವ ಅಭಿಪ್ರಾಯವಿದೆ? ಎಲ್ಲೋ ನೂರರಲ್ಲೊಬ್ಬ ಸಿಂಗಂ, ಉಳಿದವರು ಮಂಗಂ ತಾನೇ? ರಾಜಕಾರಣಿಗಳಲ್ಲಿ ಪರಿಶುದ್ಧರ % ಎಷ್ಟು ಎಂಬ ಪ್ರಶ್ನೆ ಕೇಳಿದರೆ? ರಾಜಕಾರಣಿಗಳನ್ನೂ ನಿಯಂತ್ರಿಸುವ ಕಾನೂನಿನ ಬಲಾಢ್ಯತೆಯನ್ನು ನಮ್ಮ ದೇಶದಲ್ಲಿ ಭಾರೀ ಕಂಡಿದ್ದೇವೆ ಬಿಡಿ.

   ‘ವಸಾಹತುಶಾಹಿ ಪ್ರಜ್ಞೆ’ ನಮ್ಮ ಸಂಪ್ರದಾಯಗಳಲ್ಲಿ ಪ್ರಕ್ಷೇಪ ನಡೆಸಬಾರದೆಂದರೆ ‘ಸತಿ ಸಹಗಮನ’ ದಂತಹ ನಮ್ಮ ಸಂಪ್ರದಾಯದಲ್ಲಿರುವ ಪದ್ದತಿಗಳನ್ನು ತೊಡೆದುಹಾಕುವ ಅಗತ್ಯತೆ ಯಾವ ಪ್ರಜ್ಞೆಯಿಂದ ಬರಬೇಕಿತ್ತು? ಅಥವಾ ಅಂತವುಗಳನ್ನು ತೊಡೆದುಹಾಕುವ ಅಗತ್ಯತೆಯೇ ಇರಲಿಲ್ಲವೇ?
   => ಸತಿಸಹಗಮನವು ಸಾರ್ವತ್ರಿಕವಾಗಿತ್ತೇ? ಎಲ್ಲ ಸಂಪ್ರದಾಯಗಳೂ ಪಾಲಿಸುತ್ತಿದ್ದವೇ? ಇಲ್ಲ. ಸತಿ ಸಹಗಮನವು ಆರಂಭವಾದ ಸಂದರ್ಭವು ನಮಗೆ ಗೊತ್ತೇ ಇದೆ. ಬರ್ಬರ ಹತ್ಯೆಗಳು ನಡೆಯುವ ಸಂದರ್ಭದಲ್ಲಿ ಸಾಲುಸಾಲಾಗಿ ರಜಪೂತ ಹೆಣ್ಣುಮಕ್ಕಳು ಬೆಂಕಿಗೆ ಬಿದ್ದ ಘಟನೆಗಳಿವೆ. ಅಂಥ ಸಂದರ್ಭಗಳು ಈಗಿಲ್ಲವೆಂದು ಖಚಿತವಾದಾಗ ಸಂಪ್ರದಾಯಗಳು ನಿಲ್ಲಿಸಿವೆ. ಅದನ್ನು ವಸಾಹತುಪ್ರಜ್ಞೆಯ ಉಡುಗೊರೆ ಎನ್ನುವದು ಹಾಸ್ಯಾಸ್ಪದ. ಇಲ್ಲವಾದಲ್ಲಿ ಸತಿಪದ್ಧತಿ, ಬಾಲ್ಯವಿವಾಹವು ನಿಂತಂತೆ, ಮನೆಗಳಲ್ಲಿ ಅಂತರ್ಜಾತಿವಿವಾಹ-ವಿರೋಧಗಳೇಕೆ ನಿಂತಿಲ್ಲ ಎಂಬುದನ್ನು ವಿವರಿಸಲು ಸಾಧ್ಯವೇ?

   ಭಗವಾನರು ಭಗವದ್ಗೀತೆಯಲ್ಲಿ ಸಮಾನತೆಯನ್ನು ಅಪೇಕ್ಷಿಸುವದು(ಅದು ವಸಾಹತು ಪ್ರಜ್ಞೆಯೇ ಆಗಿದ್ದರೂ ಕೂಡ), ಅದು ಸಾಂವಿಧಾನಿಕವಾದ್ದರಿಂದ ಅವರು ಅದರಿಂದ ಹೊರಬರುವ ಅಗತ್ಯ ಇಲ್ಲ.
   => ಅವರು ನೆಚ್ಚಿರುವ ಸಿದ್ಧಾಂತದಲ್ಲೇ ಇರುವದಾದರೆ ವಸಾಹತುಪ್ರಜ್ಞೆಯಿಂದ ಹೊರಬರುವದಾದರೆ ಅಗತ್ಯವಿಲ್ಲ. ಆದರೆ ಅವರು ತಮ್ಮ ಊಹಾಸಿದ್ಧಾಂತಕ್ಕೆ ವೈಜ್ಞಾನಿಕ ಸ್ವರೂಪ ಕೊಡುವ ಆಶಯ ಹೊಂದಿದ್ದರೆ, ಅದರಿಂದ ಕನ್ಸಿಸ್ಟಂಟ್ ವಿವರಣೆ ನೀಡುವಲ್ಲಿ ಪ್ರಯತ್ನ ಮಾಡಬೇಕಾದರೆ, ಹೊರಬರುವ ಅಗತ್ಯವಿದೆ. ಲೇಖನದ ಕೊನೆಯ ಪರಿಚ್ಛೆದದಲ್ಲಿ ನಾನು ಅದನ್ನು ಹೇಳಿದ್ದೇನೆ.

   ನಮ್ಮ ಸಂಪ್ರದಾಯಗಳು ಕಾರಣಗಳನ್ನು ಹುಡುಕುವದು ಮುಖ್ಯವೆಂದು ಬಗೆದಿಲ್ಲ ಎಂದು ಬಾಲಗಂಗಾಧರರು ಸ್ಪಷ್ಟವಾಗಿ ಹೇಳಿದ್ದಾರೆ.
   => Come On!!! ನಾವು ಪೂಜೆ ಮಾಡುವಾಗ ಸಂಕಲ್ಪ ಮಾಡುತ್ತೇವಲ್ಲ (ಆಯುರಾರೋಗ್ಯ ಅಭಿವೃಧ್ಯರ್ಥಂ, ಸಮಸ್ತ ಮಂಗಲ ಪ್ರಾಪ್ತರ್ಥ್ಯಂ ಇತ್ಯಾದಿ ಇತ್ಯಾದಿ) ಇವೆಲ್ಲ ನಾವು ಪೂಜೆ “ಯಾಕೆ” ಮಾಡುತ್ತಿದ್ದೇವೆ ಎಂಬ ಕರ್ಮದ ಕಾರಣವನ್ನು ತಾನೇ ಹೇಳುವದು? ಪೂಜೆಗೆ ಕಾರಣವಿದೆ, ಇಷ್ಟಪ್ರಾಪ್ತಿಯೋ, ಅನಿಷ್ಟಪರಿಹಾರವೋ ಇನ್ನೇನೋ ಕಾರಣವಿದ್ದೇ ಇರುತ್ತದೆ. ಅದು ಸಂಕಲ್ಪದಿಂದ ಸಿದ್ಧವಾಗುತ್ತುಅದೆ. ಆದರೆ ಪೂಜಿಸುವಾಗ ಶೋಡಷೋಪಚಾರ ಪೂಜೆಯೇ ಏಕೆ ಮಾಡುತ್ತೇವೆ? ಆ ೧೬ ಪೂಜೆಗಳಿಗೆ ಪುರುಷಸೂಕ್ತದ ೧೬ ಮಂತ್ರಗಳನ್ನೇ ಏಕೆ ಬಳಸುತ್ತೇವೆ? ಪ್ರದಕ್ಷಿಣೆಯೇ ಏಕೆ ಹಾಕುತ್ತೇವೆ? ಅಪ್ರದಕ್ಷಿಣೆ ಏಕಿಲ್ಲ? ಹೆಣ್ಣನ್ನು ಮನೆಗೆ ಕರೆವಾಗ ಬಲಗಾಲನ್ನೇ ಮೊದಲು ಏಕೆ ಇಡುತ್ತೇವೆ? ಇವುಗಳ ಕಾರಣವನ್ನು ಹುಡುಕುವದಿಲ್ಲ. ನಮ್ಮ ಮನೆಯ ಹತ್ತಿರದ ಹೊಲೆಯ ದೇವಸ್ಥಾನದಲ್ಲಿಯೂ ಅವರದೇ ಪೂಜಾಪದ್ಧತಿಯಿದೆ. ಪೂಜೆಗೆ ಕಾರಣವಿದೆ, ಅಲ್ಲಿ ಪೂಜಿಸುವವರು ಒಂದು ಬೇಡಿಕೆಗಾಗಿ ಪೂಜಿಸುತ್ತಾರೆ, ಆ ಬೇಡಿಕೆಯೇ ಪೂಜೆಗೆ ಕಾರಣ. ಆದರೆ ಅವರ ಪೂಜಾಪದ್ಧತಿಯೇಕೆ ಹಾಗಿದೆ ಎಂಬುದಕ್ಕೆ ಕಾರಣವಿಲ್ಲ. ಬಾಲಗಂಗಾಧರರು ಕ್ರಿಯಾವಿಧಾನದ ಕುರಿತು ಹೇಳಿರುವ ಮಾತನ್ನು, ನಾನು ಹೇಳಿರುವ ಕ್ರಿಯಾ-ಸಂಕಲ್ಪಕ್ಕೆ ಅನ್ವಯಿಸಬೇಡಿ. ವಾಕ್ಯಗಳನ್ನು ಸಂದರ್ಭದಿಂದಾಚೆಯೇಕೆ ಎಳೆದು ತರುತ್ತೀರಿ? ಇಷ್ಟಾಗಿಯೂ ಬಾಲಗಂಗಾಧರರು ನಮ್ಮ ಸಂಪ್ರದಾಯಗಳ ಕ್ರಿಯೆಗಳಿಗೆ ಆಧಾರವಾಗಿ ಒಂದಾನೊಂದು ಗ್ರಂಥವನ್ನು ಅವಲಂಬಿಸುವ ಪ್ರವೃತ್ತಿಯನ್ನು ಅಲ್ಲಗಳೆಯುವ ಸಂದರ್ಭದಲ್ಲಿ ಇದನ್ನು ಹೇಳಿದ್ದಾರೆಂಬುದು ನಾನು ಅರ್ಥೈಸಿಕೊಂಡ ರೀತಿ.

   ಉತ್ತರ
   • ನವೆಂ 10 2015

    “ಹೀಗಾಗಿ ಭಗವಾನರು ಸಮಾನತೆ ಬೇಕು ಎಂದಾಕ್ಷಣ, ಯಾವ ಸಂದರ್ಭದಲ್ಲಿ ಎಂದು ಹೇಳಬೇಕಾಗುತ್ತದೆ, ಮತ್ತು ಆ ಸಂದರ್ಭದಿಂದಾಚೆ ಅದು ಮಹತ್ವವನ್ನೂ ಕಳೆದುಕೊಳ್ಳುತ್ತದೆ.”
    ಭಗವಾನರು ಹೇಳುತ್ತಿರುವ ಸಮಾನತೆ ಏನೆಂದರೆ ಧಾರ್ಮಿಕ ವಿಧಿಗಳಲ್ಲಿರುವ “ಹಕ್ಕು”, “ಸ್ವಾತಂತ್ರ್ಯ” ವಿಚಾರದ ಸಮಾನತೆ.

    “ನಾನು ಇಲ್ಲಿ ಅತಾರ್ಕಿಕವೆಂದು ಕರೆದಿರುವದು, ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳದೇ ಸಾರ್ವತ್ರೀಕರಿಸುವ ಪದ್ಧತಿಯನ್ನು ಮಾತ್ರ.”
    ಇಲ್ಲಿ ಅವರು ಯಾವುದನ್ನೂ ಸಾರ್ವತ್ರೀಕರಣಗೊಳಿಸಹೊರಟಿಲ್ಲ. ಧಾರ್ಮಿಕ ವಿಧಿಗಳಲ್ಲಿದ್ದ “ಹಕ್ಕು”, “ಸ್ವಾತಂತ್ರ್ಯ” ವಿಚಾರದಲ್ಲಿದ್ದ ಅಸಮಾನತೆಯನ್ನು ಆ ನಂಬಿಕೆಯನ್ನು ವಿರೋಧಿಸಿದರು ಅಷ್ಟೆ. ಅದರಲ್ಲಿ ಅತಾರ್ಕಿಕವೇನು ಬಂತು? ಭಾರತದಲ್ಲಿಯೂ ಮೊದಲು ಧಾರ್ಮಿಕ ಸುಧಾರಣೆಗಳು ನಡೆದೆ ಇವೆ. ಒಂದು ಪಂಥದವರು ಇನ್ನೊಂದು ಪಂಥವನ್ನು ವಿವಿಧ ನೆಲೆಗಟ್ಟಿನಲ್ಲಿ ವಿರೋಧಿಸಿದ್ದಾರೆ. ಚಾರ್ವಾಕರು ಅವರ ನಂಬಿಕೆಯ ಪ್ರಕಾರ ಆಸ್ತಿಕರನ್ನು ಟೀಕಿಸಿದ್ದರು. ಈ ರೀತಿ ಟೀಕಿಸುವಿಕೆ ನಮ್ಮ ಸಂಪ್ರದಾಯದಲ್ಲೆ ಇದೆ. ಹಾಗಿದ್ದಾಗ ಭಗವಾನರು, ಇಂದಿನ ಕಾಲದ ಅವಶ್ಯಕತೆಗೆ ಭ್ಗವದ್ಗೀತೆಯನ್ನು ವಿಮರ್ಷಿಸಿದ್ದರಲ್ಲಿ ಅತಾರ್ಕಿಕವೆಲ್ಲಿಂದ ಬಂತು? ಅವರು ವಸಾಹತುಶಾಹಿ ಪ್ರಜ್ಞೆಯಿಂದ ಟೀಕಿಸಿದ್ದರೂ ಆ ವಸಾಹತುಶಾಹಿ ಪ್ರಜ್ನೆಯಲ್ಲಿನ ಹಕ್ಕು ಸ್ವಾತಂತ್ರ್ಯ ಸಮಾನತೆಗೆ ನಿಮ್ಮ ವಿರೋಧ ಇದೆಯೇ?

    “ಸಮಾನತೆ ಮೊದಲು ನೀವು ಕಮೆಂಟಿನಲ್ಲಿ ಬಳಸಿದಿರಿ”
    ಹೌದು. ನೀವು ಸಿನ್ ಶಬ್ದವನ್ನು ‘ಪಾಪ’ ಎಂಬಂತೆ ಬಳಸಿದ್ದಕ್ಕಾಗಿ ವಿವಾದ ಉಂಟಾಯಿತು ಎಂದಿದ್ದೀರಿ. ಅದಿಕ್ಕೆ ನನ್ನ ಉತ್ತರ ಇದು ಭಾಷಾಂತರದ ಸಮಸ್ಯೆಯಲ್ಲ, ಎಂದು ಮುಂದೆ ವಿವರಿಸಿದೆ. ‘ಪಾಪಯೋನಿ’ ಎಂಬುದಕ್ಕೆ ನೀವು ಹೇಳಿದ ಅರ್ಥಕ್ಕೆ ಕೂಡ ಭಗವಾನರ ವಿರೋಧ ಇದೆ ಎಂದು ಹೇಳಿದೆ.

    “ಈಗ ನಾವು ಪಾಶ್ಚಿಮಾತ್ಯರ ಹುಟ್ಟಾ ಸಮಾನತೆಯನ್ನು ನಮ್ಮಲ್ಲಿ ಹುಟ್ಟಿಸಿಕೊಳ್ಳಬೇಕೆಂದಾದಲ್ಲಿ, ಅದು ಈಗಾಗಲೇ ನಂಬಿ ಬಂದಿರುವ ಪುನರ್ಜನ್ಮದ ಕಲ್ಪನೆಗೆ ತಾರ್ಕಿಕ ವಿರೋಧವನ್ನೊಡ್ಡುವದು, ಪುನರ್ಜನ್ಮದ ಕಲ್ಪನೆಯನ್ನೇಕೆ ಬಿಡಬೇಕು?”
    ಹುಟ್ಟಾ ಸಮಾನತೆಯನ್ನು ನಿಮ್ಮಲ್ಲಿ ಹುಟ್ಟಿಸಿಕೊಳ್ಳುತ್ತೀರೊ ಬಿಡುತ್ತೀರೊ ಗೊತ್ತಿಲ್ಲ, ಆದರೆ ಮೊದಲೇ ಹೇಳಿದಂತೆ ಹಕ್ಕು ಸ್ವಾತಂತ್ರ್ಯದಲ್ಲಿನ ‘ಸಮಾನತೆಯ’ ಪರಿಕಲ್ಪನೆಯನ್ನು ರೂಢಿಸಿಕೊಳ್ಳಲೆಬೇಕು. ಯಾಕೆಂದರೆ ಅದು ಸಾಂವಿಧಾನಿಕ. ಈ ಸಂವಿಧಾನವೇ ಒಪ್ಪಿಗೆಯಾಗದಿದ್ದರೆ ಅದಕ್ಕೆ ಬೇರೆಯೇ ದಾರಿಯೇ ಇದೆ. ಅದಿರಲಿ, ನಿಮ್ಮ ಪ್ರಕಾರ ನಿಮ್ಮ ಸಂಪ್ರದಾಯದಲ್ಲಿನ ಪುನರ್ಜನ್ಮ ಇತ್ಯಾದಿ ಪರಿಕಲ್ಪನೆಗೆ ತಡೆಯೊಡ್ಡುವ ಯಾವುದನ್ನೇ ಆದರೂ ನಿಮ್ಮಲ್ಲಿ ಹುಟ್ಟಿಸಿಕೊಳ್ಳುವದಕ್ಕೆ ಸಾಧ್ಯವಿಲ್ಲ ಅಲ್ಲವೇ? ಹಾಗಿದ್ದರೆ ಪಾಶ್ಚಿಮಾತ್ಯರ ವಿಜ್ನಾನವೆಕೆ ಕಲಿತಿರಿ? ಪಾಶ್ಚಿಮಾತ್ಯರ ವಿಜ್ಞಾನವು ನಿಮ್ಮ ಕ್ರೈಸ್ತ ಥಿಯಾಲಜಿಯಿಂದ ಬಂದಿದ್ದಲ್ಲವೇ? ಇದನ್ನು ಕಲಿಯುವದೆ ಅತಾರ್ಕಿಕವೆಂದಾಯಿತು. ಅದಕ್ಕಿಂತಲೂ ಮುಖ್ಯವಾಗಿ ನಿಮ್ಮ ಹೇಳಿಕೆ ‘ಸಂಪ್ರದಾಯ’ದ ಗುಣಲಕ್ಷಣವನ್ನೆ ಕಳೆಯುತ್ತದೆ. ಯಾಕೆಂದರೆ ಸಂಪ್ರದಾಯಗಳು ಎಲ್ಲವನ್ನೂ ಒಳಗೊಳ್ಳುತ್ತವೆ. ‘ಇದು ನನ್ನ ಸಂಪ್ರದಾಯದ ನಂಬಿಕೆ/ಕಲ್ಪನೆಗೆ ವಿರುದ್ಧವಾದದ್ದು, ಹಾಗಾಗಿ ನಾನು ಇದನ್ನು ಒಳ ಸೇರಿಸುವದಿಲ್ಲ’ ಎಂದೂ ಯಾವ ಸಂಪ್ರದಾಯಗಳು ಹೇಳುವದಿಲ್ಲ. ಹಾಗೆ ಹೇಳಿದ್ದಲ್ಲಿ ಅದು ರಿಲಿಜಿಯನ್ ಆಗಿಬಿಡುತ್ತದೆ. ನೀವು ರಿಲಿಜಿಯನ್ ನ ಗುಣಲಕ್ಷಣಗಳನ್ನು ನಿಮ್ಮ ಸಂಪ್ರದಾಯಕ್ಕೆ ಆರೋಪಿಸಿಕೊಳ್ಳುತ್ತಿದ್ದೀರಿ.

    “ಇಲ್ಲಿರುವ ಸಾಮಾಜಿಕ ಸಿಸ್ಟಂ ಬ್ರಿಟೀಷರು ಬಿಟ್ಟು ಹೋಗಿದ್ದಾರೆ, ನಾವು ಮುಂದುವರೆಸಿದ್ದೇವೆ. ಕಾನೂನು/ರಕ್ಷಣಾ ವ್ಯವಸ್ಥೆಯ ಕುರಿತು ಜನಸಾಮಾನ್ಯನಿಗೆ ಯಾವ ಅಭಿಪ್ರಾಯವಿದೆ? ಎಲ್ಲೋ ನೂರರಲ್ಲೊಬ್ಬ ಸಿಂಗಂ, ಉಳಿದವರು ಮಂಗಂ ತಾನೇ?”
    ನೀವು ನನ್ನ ಪ್ರಶ್ನೆಗೆ ಉತ್ತರಿಸಿಲ್ಲ. ವಸಾಹತುಶಾಹಿ ಪ್ರಜ್ಞೆಯನ್ನು ನೀವು ಅಲ್ಲಗೆಳೆಯುವದಾದರೆ ‘ರಾಷ್ಟ್ರೀಯತೆ’, ‘ಪ್ರಜಾಪ್ರಭುತ್ವ’, ‘ಸಂವಿಧಾನ’, ‘ಪಾಶ್ಚಿಮಾತ್ಯ ವಿಜ್ಞಾನ’, ಇಂದಿನ ಶಿಕ್ಷಣ ಇವುಗಳೆಲ್ಲವನ್ನೂ ಬಿಟ್ಟು ಹೊರಬಂದು ಬದುಕಬೇಕು. ಈಗ ಹೇಳಿ, ಇವುಗಳಿಂದ ಹೊರತಾದ ನೀವು ಹೇಳಬಯಸುವ ಬದುಕು ಯಾವುದು?

    “ಸತಿಸಹಗಮನವು ಸಾರ್ವತ್ರಿಕವಾಗಿತ್ತೇ? ಎಲ್ಲ ಸಂಪ್ರದಾಯಗಳೂ ಪಾಲಿಸುತ್ತಿದ್ದವೇ?”
    ಭಾರತೀಯ ಸಂಪ್ರದಾಯದಲ್ಲಿ ಇತ್ತು. ಸಾರ್ವತ್ರಿಕವಾಗಿರದಿದ್ದರೆ, ಭಾರತೀಯ ಎಲ್ಲಾ ಸಾಂಪ್ರದಾಯಗಳಲ್ಲಿ ಇರಲಿಲ್ಲವೆಂದರೆ ಅದು ಆಕ್ಷೇಪಾರ್ಹವಲ್ಲವೆ?

    ” ಬರ್ಬರ ಹತ್ಯೆಗಳು ನಡೆಯುವ ಸಂದರ್ಭದಲ್ಲಿ ಸಾಲುಸಾಲಾಗಿ ರಜಪೂತ ಹೆಣ್ಣುಮಕ್ಕಳು ಬೆಂಕಿಗೆ ಬಿದ್ದ ಘಟನೆಗಳಿವೆ. ಅಂಥ ಸಂದರ್ಭಗಳು ಈಗಿಲ್ಲವೆಂದು ಖಚಿತವಾದಾಗ ಸಂಪ್ರದಾಯಗಳು ನಿಲ್ಲಿಸಿವೆ. ಅದನ್ನು ವಸಾಹತುಪ್ರಜ್ಞೆಯ ಉಡುಗೊರೆ ಎನ್ನುವದು ಹಾಸ್ಯಾಸ್ಪದ.”
    ಈ ಹೇಳಿಕೆಗಿಂತಲೂ ಹಾಸ್ಯಾಸ್ಪದ ಇನ್ನೇನಿದೆ? ಈ ಸಂಶೋಧನೆ ಬಾಲುವವರದ್ದೆ? ಬಾಲು ಅವರ ಸಂಶೋಧನೆ ಕುರಿತು ನನ್ನ ತಾರ್ಕಿಕ ವಿರೋಧವೆನೆ ಇದ್ದರೂ ಬಾಲು ಅವರು ‘ಸತಿ ಸಹಗಮನ’ ಪದ್ದತಿಯ ಉಗಮಕ್ಕೆ ಇಂತಹ ಹಾಸ್ಯಾಸ್ಪದ ಸಂಶೋಧನೆಯನ್ನೆನೂ ಮಾಡಲಾರರು ಎಂದುಕೊಳ್ಳುತ್ತೇನೆ. ರಜಪೂತ ಹೆಣ್ಣುಮಕ್ಕಳು ಬೆಂಕಿಗೆ ಬಿದ್ದ ಘಟನೆಗೂ ಗಂಡ ಸತ್ತ ನಂತರ ಪತ್ನಿ ಬೆಂಕಿಗೆ ಆಹುತಿಯಾಗುವ ಪದ್ದತಿಗೂ ಎತ್ತಣ ಸಂಬಂಧ? ರಾಷ್ಟ್ರೀಯ ಚಿಂತಕರು ಕಟ್ಟಿದ ಈ ಕಥೆಗಿಂತ ಪುರಾಣಗಳು ಅದೆಷ್ಟೋ ವಾಸಿ. ‘ಸಂಪ್ರದಾಯಗಳು ನಿಲ್ಲಿಸಿವೆ’ ಎಂದು ಮಾರ್ಮಿಕವಾಗಿ ಹೇಳುತ್ತೀರಲ್ಲ, ರಾಜಾರಾಂ ಮೋಹನರಾಯ್ ಅವರು ಬಾಲ್ಯವಿವಾಹ, ಸತಿ ಪದ್ದತಿಗಳನ್ನು ಅದೇ ‘ವಸಾಹತು ಪ್ರಜ್ಞೆಯಿಂದಲೆ’ ಕಾನೂನಿನ ಮುಖಾಂತರ ನಿಲ್ಲಿಸಿದ್ದು ನಿಮಗೆ ತಿಳಿದಿಲ್ಲವೆ?

    “Come On!!! ನಾವು ಪೂಜೆ ಮಾಡುವಾಗ ಸಂಕಲ್ಪ ಮಾಡುತ್ತೇವಲ್ಲ (ಆಯುರಾರೋಗ್ಯ ಅಭಿವೃಧ್ಯರ್ಥಂ, ಸಮಸ್ತ ಮಂಗಲ ಪ್ರಾಪ್ತರ್ಥ್ಯಂ ಇತ್ಯಾದಿ ಇತ್ಯಾದಿ) ಇವೆಲ್ಲ ನಾವು ಪೂಜೆ “ಯಾಕೆ” ಮಾಡುತ್ತಿದ್ದೇವೆ ಎಂಬ ಕರ್ಮದ ಕಾರಣವನ್ನು ತಾನೇ ಹೇಳುವದು? ”
    ನೀವು ಈ ವಾದವನ್ನು ಬಾಲು ಅವರ ಜೊತೆ ಚರ್ಚಿಸಿದರೆ ಒಳ್ಳೆಯದು.ಸ್ಪಷ್ಟವಾಗಿ ಅವರ ಹೇಳಿಕೆ ಇಲ್ಲಿದೆ. “ಸಂಪ್ರದಾಯವೆಂದರೆ ನಮ್ಮ ಹಿಂದಿನವರ ಆಚರಣೆಗಳನ್ನು ಅನುಕರಿಸಿ ಮುಂದುವರಿಸಿಕೊಂಡು ಹೋಗುವುದಷ್ಟೇ ಆಗಿದೆ. ಅಂಥ ಆಚರಣೆಗಳನ್ನು ಪಾಶ್ಚಾತ್ಯ ಕಥೆಗಳ ಮೂಲಕ ನೋಡಿದಾಗ ಅವುಗಳ ಹಿಂದೆ ಇಲ್ಲದಿರುವ ಒಂದು ವೈಚಾರಿಕ ಪ್ರಪಂಚವು ಇದ್ದಂತೆ ಭಾಸವಾಗುತ್ತದೆ. ಅಂದರೆ ಈ ಆಚರಣೆಗಳ ಹಿಂದೆ ನಿಯಮಗಳಿವೆ, ಅವುಗಳನ್ನು ರಚಿಸಲು ಕಾರಣಗಳಿವೆ, ಅವುಗಳನ್ನು ಸಂಸ್ಕೃತ ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ, ಇತ್ಯಾದಿ. ಆದರೆ ಇದುವರೆಗೆ ನಾವು ನೋಡಿದ ಪ್ರಕಾರ ನಮ್ಮ ದಿನನಿತ್ಯದ ಅನುಭವವು ಇಂಥ ಪ್ರತಿಪಾದನೆಗಳಿಗೆ ವಿರುದ್ಧವಾಗಿದೆಯಷ್ಟೇ ಅಲ್ಲ, ನಾವು ನಮಗೇ ಅರ್ಥವಾಗದ ಶಬ್ದಗಳಿಂದ ಭಾಷಾಂತರಿಸಿಕೊಂಡು ಅದನ್ನು ಇನ್ನೂ ಅರ್ಥವಾಗದಂತೆ ಮಾಡಿಕೊಂಡಿದ್ದೇವೆ.”
    ದಯವಿಟ್ಟು ಈ ಲೇಖನವನ್ನು ಮತ್ತೊಮ್ಮೆ ಓದಿ.
    https://cslcku.wordpress.com/2013/09/14/%E0%B2%85%E0%B2%82%E0%B2%95%E0%B2%A3-%E0%B2%B5%E0%B2%B8%E0%B2%BE%E0%B2%B9%E0%B2%A4%E0%B3%81-%E0%B2%AA%E0%B3%8D%E0%B2%B0%E0%B2%9C%E0%B3%8D%E0%B2%9E%E0%B3%86%E0%B2%AF-%E0%B2%B5%E0%B2%BF%E0%B2%B6-18/#more-722

    ಉತ್ತರ
    • ನವೆಂ 10 2015

     “ಬಾಲಗಂಗಾಧರರು ಕ್ರಿಯಾವಿಧಾನದ ಕುರಿತು ಹೇಳಿರುವ ಮಾತನ್ನು, ನಾನು ಹೇಳಿರುವ ಕ್ರಿಯಾ-ಸಂಕಲ್ಪಕ್ಕೆ ಅನ್ವಯಿಸಬೇಡಿ.”
     ಬಾಲಗಂಗಾಧರರು ಧಾರ್ಮಿಕ ವಿಧಿಗಳು ಕ್ರಿಯಾಜ್ಞಾನ ಎಂದೆ ಹೇಳುತ್ತಾರೆ: “ಧಾರ್ಮಿಕ ವಿಧಿಗಳನ್ನು ಆಚರಿಸುವಾಗ ನಮ್ಮ ಪೂರ್ವಜರ ಆಚರಣೆಗಳನ್ನು ನಾವು ಅನುಸರಿಸುತ್ತಿರುತ್ತೇವೆ. ಇದೊಂದು ಶುದ್ಧ ಕ್ರಿಯಾಜ್ಞಾನವಾಗಿದೆ. ಅಂದರೆ ಮಾಡಿಸುವವರಿಲ್ಲದೆ, ಕ್ರಿಯೆಯನ್ನು ನೋಡಿ ಅನುಕರಿಸದೇ ಇದು ದಾಟಿ ಬರುವುದಿಲ್ಲ. ಅವುಗಳಲ್ಲಿ ಯಾವ ಕ್ರಮದಲ್ಲಿ ಹೇಗೆ ಕ್ರಿಯೆಗಳನ್ನು ಜರುಗಿಸಬೇಕೆಂಬ ನಿರ್ದೇಶನಗಳಿರುತ್ತವೆಯೇ ವಿನಃ ಅವುಗಳನ್ನು ಯಾಕಾಗಿ ಮಾಡಬೇಕೆಂಬ ವಿವರಣೆಗಳಿರುವುದಿಲ್ಲ. ಅದೇ ರೀತಿ, ಅವುಗಳನ್ನು ಆಚರಿಸುವವರೂ ಕೂಡ ಕ್ರಿಯೆಗಳನ್ನು ಜರುಗಿಸುವುದನ್ನು ಕಲಿಯುತ್ತಾರೆಯೇ ವಿನಃ ಅವುಗಳ ಕಾರಣ ಅಥವಾ ಉದ್ದೇಶಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ವಿಶೇಷ ಸಂದರ್ಭದಲ್ಲಿ ಈ ಕ್ರಿಯೆಗಳನ್ನು ಹೇಳಿದ ಕ್ರಮದಲ್ಲಿ ಆಚರಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದೋ, ಒಳ್ಳೆಯದಾಗುತ್ತದೆ ಎಂದೋ ನಂಬಿರುತ್ತಾರೆಯಾದರೂ, ಸಾಧಾರಣವಾಗಿ ರೂಢಿಗತ ಆಚರಣೆಗಳನ್ನು ಹಿಂದಿನವರು ಹೇಳಿಕೊಟ್ಟದ್ದಾರೆ ಎಂಬ ಕಾರಣಕ್ಕೇ ನಡೆಸುತ್ತಿರುತ್ತಾರೆ.
     ಇನ್ನೊಂದು ಲಿಂಕ್ ಇಲ್ಲಿದೆ: https://cslcku.wordpress.com/2013/09/02/%E0%B2%85%E0%B2%82%E0%B2%95%E0%B2%A3-%E0%B2%B5%E0%B2%B8%E0%B2%BE%E0%B2%B9%E0%B2%A4%E0%B3%81-%E0%B2%AA%E0%B3%8D%E0%B2%B0%E0%B2%9C%E0%B3%8D%E0%B2%9E%E0%B3%86%E0%B2%AF-%E0%B2%B5%E0%B2%BF%E0%B2%B6-17/#more-719

     ಉತ್ತರ
     • ನವೆಂ 12 2015

      ನೀವು ಹೇಳುತ್ತಿರುವದನ್ನು ಒಪ್ಪುತ್ತೇನೆ.. ನಾನು ನಿಮಗೆ ಇಲ್ಲಿರುವ ೨ ಸ್ತರಗಳನ್ನು ಹೇಳಲು ಬಯಸುತ್ತೇನೆ. ನಾನು ಮೊದಲನೇ ಸ್ತರದಲ್ಲಿ ನಿಂತು ನೋಡುತ್ತಿದ್ದೇನೆ, ನೀವು ಎರಡನೇ ಸ್ತರದಲ್ಲಿ ಯೋಚಿಸುತ್ತಿದ್ದೀರಿ.

      ಉದಾಹರಣೆಗಾಗಿ ನನ್ನ ತಂದೆ ನನಗೆ ಫೋನಾಯಿಸಿ, “ಮಂಗಳ ಗ್ರಹವು ಇಂಥಿಂಥ ಜಾಗದಲ್ಲಿದೆಯಪ್ಪ, ನೀನೊಂದು ಕುಜಶಾಂತಿ ಮಾಡಿಸು” ಎಂದರೆ ನಾನು ಆಗಲಿ ಎನ್ನುತ್ತೇನೆ. ಮತ್ತೆ ಹಾಗೆ ಮಾಡುತ್ತೇನೆ.

      ಈ ಪ್ರಕರಣದಲ್ಲಿ ಮೊದಲನೇ ಸ್ತರ => ಇಂಥದೊಂದು ಕಾರ್ಯ ಏಕೆ ಮಾಡುತ್ತಿದ್ದೀರಿ ಎಂದು ಕೇಳಿದರೆ ನಾನು ಹೇಳುವ ಉತ್ತರ => ಮಂಗಳ ಇಂಥ ಜಾಗದಲ್ಲಿದೆ, ಮತ್ತು ನನ್ನ ರಾಶಿ ಹೀಗಿದೆ ಅದಕ್ಕೆ ಮಾಡುತ್ತಿದ್ದೇನೆ. ಇದು ಮೊದಲನೇ ಸ್ತರ ಏಕೆಂದರೆ ಒಂದು ನಂಬಿಕೆಯ ಆಧಾರದಡಿ ನಾನು ಈ ಕಾರಣ ನೀಡಿದ್ದೇನೆ. ಈ ಪ್ರಶ್ನೆ ಕೇಳಿದವರೂ ಕೂಡ ನನ್ನ ನಂಬಿಕೆಯನ್ನು ಪ್ರಶ್ನಿಸುವವರಾಗಿರುವದಿಲ್ಲ. ನನ್ನ ನಂಬಿಕೆಯನ್ನು ಗೌರವಿಸುವವರೇ ಆಗಿರುತ್ತಾರೆ. ಬಹುಶಃ ಕಾರಣವನ್ನು ತಿಳಿದು, ತಾನು ಯಾವ ಸಂದರ್ಭದಲ್ಲಿ ಇದನ್ನು ಮಾಡಬೇಕಾಗಿ ಬರಬಹುದು ಎಂಬ ಕುತೂಹಲದಿಂದಲೇ ಕೇಳಿರುತ್ತಾರೆ. ಸಾಂಪ್ರದಾಯಿಕ ಆಚರಣೆಗಳು ಬೆಳೆಯುವದೇ ಹೀಗೆ. ಇದನ್ನು special case ಅನ್ನೋಣ.

      ಎರಡನೇ ಸ್ತರ => ಮಂಗಳಗ್ರಹ ಇಂಥಿಂಥ ಜಾಗದಲ್ಲಿ ಬಂದರೆ ಇಂಥಿಂಥ ರಾಶಿಯವರು ಕುಜಶಾಂತಿ ಏಕೆ ಮಾಡಬೇಕು ಎಂಬ ಪ್ರಶ್ನೆ. ಇಲ್ಲಿ generalization ಪ್ರಕ್ರಿಯೆ ನಡೆದಿದೆ. ಇಂಥಿಂಥ ಪರಿಸ್ಥಿತಿಯಲ್ಲಿ ಇಂಥಿಂಥ ಕಾರ್ಯಗಳನ್ನೇಕೆ ಮಾಡಬೇಕು? ಅದಕ್ಕೆ ಕಾರಣ ಇಲ್ಲ. ನನ್ನ ಮುತ್ತಜ್ಜನೂ ಇಂಥ ಸಂದರ್ಭದಲ್ಲಿ ಕುಜಶಾಂತಿ ಮಾಡಲು ಅಜ್ಜನಿಗೆ ಹೇಳಿದ್ದಿರಬಹುದು. ಹಾಗೆಯೇ ಅಜ್ಜನು ನನ್ನ ತಂದೆಗೆ ಹೇಳಿರಬಹುದು. ಅದೇ ಕ್ರಿಯಾಜ್ಞಾನದಲ್ಲಿ ಬೆಳೆದ ತಂದೆ ನನಗೆ ಹೇಳಿರುತ್ತಾರೆ. ಈ ಉತ್ತರವು ಮುಂಚೆ ಹೇಳಿದ special case ಉತ್ತರಕ್ಕಿಂತ ಭಿನ್ನ. ನನ್ನ ನಂಬಿಕೆಯನ್ನು ಒಪ್ಪದ/ಪ್ರಶ್ನಿಸುವವರನ್ನು ಕುರಿತು ನೀಡಬೇಕಾದ ಉತ್ತರವಾಗಿರುತ್ತದೆ.

      ಎಲ್ಲರೂ ತಮ್ಮತಮ್ಮ ಸಂಪ್ರದಾಯಗಳನ್ನು ಸಹಜವಾಗಿಯೇ ಅನುಸರಿಸುವ ಸ್ವಭಾವದವರಾಗಿದ್ದರೆ, ಅವುಗಳ ಕುರಿತು ಥಿಯರಿಗಳ ಅಗತ್ಯವೇಕೆ? ಸಂಪ್ರದಾಯಗಳು ಉಳಿಯುವದು ಅವುಗಳನ್ನು ಪಾಲಿಸುವದರಿಂದಲೇ ಹೊರತು ಅವುಗಳ ಕುರಿತು ಥಿಯರಿ ಕಟ್ಟುವದರಿಂದಲ್ಲವಲ್ಲ? ಎಂದು ಯಾರಾದರೂ ಕೇಳಬಹುದು. ಆದರೆ ಇಂದು ವಸಾಹತುಪ್ರಜ್ಞೆಯಿಂದಾಗಿ, ಸಂಪ್ರದಾಯಗಳ ಕುರಿತು ನಕಾರಾತ್ಮಕ ಧೋರಣೆ ಬೆಳೆಸಿಕೊಳ್ಳುತ್ತಿದ್ದೇವೆ, ಇಲ್ಲವೇ ಅದು ವೈಜ್ಞಾನಿಕ ಕಾರಣಗಳನ್ನೊಳಗೊಂಡಿರುವ ಶ್ರೇಷ್ಠ ಸಂಪ್ರದಾಯ ಎಂಬ ಇನ್ನೊಂದು ಆಯಾಮವನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಆದರೆ ಇವೆರಡೂ ಅನುಭವವಿರುದ್ಧವಾದ ಥಿಯರಿಗಳನ್ನು ಬಿಟ್ಟು, ಅನುಭವಕ್ಕೆ ಸನಿಹವಿರುವ ಹಾಗೆ, ಸಂಪ್ರದಾಯಗಳ ಕುರಿತು ನಮ್ಮ ಪೂರ್ವಜರ ದೃಷ್ಟಿಕೋಣ ಹೇಗಿತ್ತು, ಎಂಬುದನ್ನು ಅರಿಯಲು ಬಾಲಗಂಗಾಧರರ ಥಿಯರಿಗಳು ಇಂದು ಅವಶ್ಯಕವಾಗಿವೆ.

      ನಾನು ನಿಮ್ಮಂತೆ ಅಥವಾ ಬಾಲಗಂಗಾಧರರಂತೆ ಎಲ್ಲ ಸಂಪ್ರದಾಯಗಳ ಕುರಿತಾದ genaralization ಎಂಬ ಎರಡನೇ ಸ್ತರಕ್ಕೆ ಇನ್ನೂ ಬಂದಿಲ್ಲ. ಮೊದಲನೇ ಸ್ತರದಲ್ಲಿಯೇ ನಿಂತು ಯೋಚಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಅನುಸರಿಸುವ ಪರಂಪರೆಯಲ್ಲಿ ಮನುಷ್ಯನ ಪ್ರತಿ ಕ್ರಿಯೆಗೂ ಇಷ್ಟಪ್ರಾಪ್ತಿ ಇಲ್ಲವೇ ಅನಿಷ್ಟಪರಿಹಾರ ಎಂಬ ಉದ್ದೇಶವಿದ್ದೇ ಇರುತ್ತದೆ ಎಂದು ನಂಬುತ್ತದೆ, ಹುಟ್ಟಿರುವ ಮಗುವಿನ ಅಳುವಿನಿಂದ ಹಿಡಿದು, ಆತ್ಮಹತ್ಯೆಗೆ ಶರಣಾಗುವ ಕ್ರಿಯೆಯ ತನಕ ಎಲ್ಲವೂ ಒಂದೋ ಇಷ್ಟವಾದದ್ದನ್ನು ಪಡೆಯಲು ಇಲ್ಲವೇ ಅನಿಷ್ಟವಾದದ್ದನ್ನು ತ್ಯಜಿಸಲು ಕ್ರಿಯೆಗಳನ್ನು ಎಲ್ಲರೂ ಮಾಡುತ್ತಾರೆ ಎಂದು ನಾನು ನಂಬುವ ಪರಂಪರೆ ತಿಳಿಸುತ್ತದೆ. ಇಂಥದೊಂದು ಕಾರಣವಿಲ್ಲದೇ ಯಾರೂ ಕ್ರಿಯೆಗಳಲ್ಲಿ ತೊಡಗುವದಿಲ್ಲ. ಈ ಸ್ತರದಲ್ಲಿ ಒಬ್ಬ ಮನುಷ್ಯ ತನಗೆ ಪ್ರಾಪ್ತವಾದ ಅನಿಷ್ಟವನ್ನು (effect) ತಾನು ಮಾಡಿರುವ ಪಾಪಕರ್ಮಕ್ಕೆ (cause) ಹೇಗೆ ಹೊಂದಿಸಿಕೊಳ್ಳುತ್ತಾನೆ, ತನಗೆ ಇಂಥದೊಂದು ಇಷ್ಟ (effect) ಪ್ರಾಪ್ತವಾಗಲೆಂದು ಇಂಥದೊಂದು ಪುಣ್ಯಕಾರ್ಯ (cause) ದಲ್ಲಿ ತೊಡಗಿಕೊಳ್ಳುತ್ತಾನೆ ಎಂಬುದರ ಆಧಾರದ ಮೇಲೆ, ಪುಣ್ಯ/ಪಾಪ ಮತ್ತು ಪುಣ್ಯಯೋನಿ/ಪಾಪಯೋನಿ ಇವುಗಳನ್ನು ಅರಿಯಲು ಯತ್ನಿಸಿದ್ದೇನೆ.

      ಈ ದೃಷ್ಟಿಯಿಂದ ನಮ್ಮ ಸಂಪ್ರದಾಯಗಳಲ್ಲಿರುವ ಜನರು ಪಾಪ-ಪುಣ್ಯ ಗಳನ್ನು ತಮ್ಮ ಕರ್ಮದೊಂದಿಗೆ ಹೇಗೆ ಜೋಡಿಸಿಕೊಂಡು cause-effect (ಮೊದಲನೇ ಸ್ತರ) ಎಂಬುದನ್ನು ಅರಿಯುತ್ತಾರೆ ಎಂಬುದನ್ನು ವಿವರಿಸಿದ್ದೇನೆ. ಇನ್ನು ಎರಡನೇ ಸ್ತರವಾಗಿ ಇವೆಲ್ಲವನ್ನೂ generalize ಮಾಡಿ, ನೋಡುವದಾದರೆ, ಜನರು ಏಕೆ ತಮ್ಮ ಜೀವನದಲ್ಲಿ ನಡೆಯುವ effect ಗಳಿಗೆ ತಮ್ಮ ಕರ್ಮಗಳನ್ನು cause ಆಗಿ ನೋಡುತ್ತಾರೆ, ತಮ್ಮ ಜೀವನದಲ್ಲಿನ ಆಗುಹೋಗುಗಳಿಗೆ ತಮ್ಮನ್ನೇ ಏಕೆ ಜವಾಬ್ದಾರಿಯನ್ನಾಗಿ ಪರಿಗಣಿಸುತ್ತಾರೆ ಎಂದು ಚರ್ಚಿಸುವಾಗ, ಬಾಲಗಂಗಾಧರರ ವಾದಸರಣಿ ಸಹಾಯಕ್ಕೆ ಬರುತ್ತದೆ. ಅದೊಂದು ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಪ್ರಕ್ರಿಯೆ ಎಂದೇ ಯೋಚಿಸಬೇಕಾಗುತ್ತದೆ. ತಮ್ಮ ಜೀವನಕ್ಕೆ ತಾವೇ ಜವಾಬ್ದಾರರು ಎಂಬ ಥಿಯರಿಯನ್ನು ಬಹುಶಃ ಪೂವಾಪರ ಜನ್ಮಗಳನ್ನೆಲ್ಲ ಮುಂದಿಟ್ಟುಕೊಂಡು ಸಾಧಿಸಬಹುದೇನೋ. ಆದರೆ ಜನರು ಆ ಸಾಧನೆಯನ್ನು ಅರಿತ ನಂತರ ನಂಬುವದಿಲ್ಲ. ತಮ್ಮ ಜೀವನದ ಘಟನೆಗೆ ತಾವೇ ಜವಾಬ್ದಾರರು ಎಂದು ನಮ್ಮ ಜನರು ಪರಂಪರಾಗತವಾಗಿ ಒಪ್ಪಿಕೊಂಡಿರುವ ಸಂಗತಿ ಅಷ್ಟೇ. ಅದಕ್ಕೆ ಕಾರಣ ಹುಡುಕಲೇಬೇಕೆಂಬ ನಿಯಮವಿಲ್ಲ.

      ಉತ್ತರ
 6. ನವೆಂ 9 2015

  ಹಾಗೆಯೇ ಇನ್ನೊಂದು ಮಾತನ್ನು ಹೇಳಲು ಬಯಸುತ್ತೇನೆ. ಇದು ಈ ಲೇಖನಕ್ಕೆ ಸಂಬಂಧಿಸಿದ್ದಲ್ಲದಿದ್ದರೂ ಚರ್ಚೆಯಲ್ಲಿ ಬಂದಿದ್ದಾದ್ದರಿಂದ ಅವಶ್ಯಕ ಎನಿಸಿತು. ಇಲ್ಲಿ ಚರ್ಚಿಸುವಾಗ ‘ನಮ್ಮ ಸಂಪ್ರದಾಯದಲ್ಲಿ ಅದಿರಲಿಲ್ಲ, ಇದಿರಲಿಲ್ಲ, ಹೀಗಿತ್ತು ಹಾಗಿತ್ತು’ ಎಂದು ನೀವು ಹೇಳುವದನ್ನು ಬಹಳಷ್ಟು ಬಾರಿ ಕೇಳಿದ್ದೇನೆ. ಅಂದರೆ ನಿಮ್ಮ ಹಾಗೂ ಬಾಲುವವರ ವಿಚಾರಗಳು ನಮ್ಮ ಸಂಪ್ರದಾಯದ ಕುರಿತು ನೀಡಿದ ಗುಣಲಕ್ಷಣಗಳು ಒಂದು ಜನರಲೈಸ್ಡ್ ಆದ ಐಡೆಂಟಿಟಿ ಯನ್ನು ಕಲ್ಪಿಸುತ್ತದೆ. ಈ ವಿವರಣೆ ಭಾರತೀಯ ಸಂಪ್ರದಾಯದ ಈ ಗುಣಲಕ್ಷಣಗಳು ಎಲ್ಲಾ ಕಾಲಕ್ಕೂ, ಎಲ್ಲಾ ಪ್ರದೇಶಗಳಲ್ಲೂ ಪ್ರಸ್ತುತವಾಗಿತ್ತು ಎನ್ನುವ ಕಲ್ಪನೆಯನ್ನು ಹುಟ್ಟುಹಾಕುತ್ತದೆ. ಉದಾರಣೆಗೆ, ‘ನಮ್ಮ ಸಂಪ್ರದಾಯಗಳಲ್ಲಿ ಕ್ರಿಯಾಜ್ನಾನವೇ ಅಸ್ತಿತ್ವದಲ್ಲ್ಲಿತ್ತು’ ಎನ್ನುವ ಮಾತನ್ನೇ ತೆಗೆದುಕೊಳ್ಳಿ. ಈ ವಾಖ್ಯ ಏನನ್ನು ಸೂಚಿಸುತ್ತದೆ? ಭಾರತದ ಎಲ್ಲಾ ಭಾಗಗಳಲ್ಲೂ ಎಲ್ಲಾ ಕಾಲದಲ್ಲೂ ಸಮಾಜ ಕ್ರಿಯಾಜ್ನಾನವನ್ನೇ ಅನುಸರಿಸುತ್ತಿತ್ತು ಎಂದು ವಿವರಿಸಿದಂತಾಗುತ್ತದೆ. ಇಂತಹ ವಿವರಣೆಗಳೇ ಭಾರತೀಯ ಸಮಾಜ ನಿಂತ ನೀರಾಗಿತ್ತು ಎಂದು ಗ್ರಹಿಸುವಿಕೆಯಲ್ಲಿ ಪಾತ್ರ ವಹಿಸುತ್ತದೆ. ಆದರೆ ಬಾಲಗಂಗಾಧರರು ಭಾರತದ ಸಮಾಜದ ಬಗ್ಗೆ ಪಾಶ್ಚಾತ್ಯರು ನೀಡಿರುವ ಈ ಗ್ರಹಿಕೆಯನ್ನು ವಿರೋಧಿಸುತ್ತಾರೆ. ಆದರೆ ಭಾರತೀಯ ಸಂಪ್ರದಾಯದ ಬಗ್ಗೆ ಏಕರೂಪ ವಿವರಣೆಯನ್ನು ನೀಡುತ್ತಾ, ನಮ್ಮ ಸಮಾಜ ನಿಂತ ನೀರಿನಂತಾಗಿರಲಿಲ್ಲ ಎಂದು ಏಕಕಾಲಕ್ಕೆ ಹೇಳುವದು ಕಂಟ್ರಾಡಿಕ್ಷನ್ ಎನ್ನುವದು ನನ್ನ ಭಾವನೆ.

  ಉತ್ತರ
  • ನವೆಂ 9 2015

   ಭಾರತದ ಎಲ್ಲಾ ಭಾಗಗಳಲ್ಲೂ ಎಲ್ಲಾ ಕಾಲದಲ್ಲೂ ಸಮಾಜ ಕ್ರಿಯಾಜ್ನಾನವನ್ನೇ ಅನುಸರಿಸುತ್ತಿತ್ತು ಎಂದು ವಿವರಿಸಿದಂತಾಗುತ್ತದೆ. ಇಂತಹ ವಿವರಣೆಗಳೇ ಭಾರತೀಯ ಸಮಾಜ ನಿಂತ ನೀರಾಗಿತ್ತು ಎಂದು ಗ್ರಹಿಸುವಿಕೆಯಲ್ಲಿ ಪಾತ್ರ ವಹಿಸುತ್ತದೆ.
   => ಒಂದು analogy ಕೊಡುತ್ತೇನೆ. mass-energy conversion ಸಮಯದಲ್ಲೂ, ಎಲ್ಲ ಪ್ರಯೋಗಗಳೂ E=mc2 ಸೂತ್ರವನ್ನೇ ಅನುಸರಿಸಿವೆ. ಇನ್ನೂ ಅದಕ್ಕೆ ಅಪವಾದ ಸಿಕ್ಕಿಲ್ಲ. ಎಲ್ಲಾ mass-energy conversion ಕ್ರಿಯೆಗಳೂ ಎಲ್ಲಾ ಕಾಲದಲ್ಲೂ ಎಲ್ಲ ಕಡೆಯಲ್ಲೂ ಒಂದೇ ಸೂತ್ರವನ್ನು ಅನುಸರಿಸುತ್ತಿರುವದರಿಂದ ಅಟಂಬಾಂಬ್ ಸ್ಫೋಟಗಳೂ ಕೂಡ ನಿಂತ ನೀರಿನಂತೆಯೇ ಎಂದು ಗ್ರಹಿಸೋಣವೇ?

   ಸಮಾಜವಿಜ್ಞಾನ ಎಂಬುದು ನಿಂತ ನೀರಲ್ಲ. ನಾವೇನೂ ಬಾಲಗಂಗಾಧರರ ಥಿಯರಿಯೇ ಅಂತಿಮ ಸತ್ಯ ಎಂದೇನೂ ಹೇಳಿಕೊಂಡಿಲ್ಲ. ಭಾರತದಲ್ಲಿ ಕ್ರಿಯಾಜ್ಞಾನವು ಪ್ರಧಾನವಾಗಿತ್ತು ಎಂಬುದರ ಅರಿವು, ನಮ್ಮ ಶಿಕ್ಷಣಕ್ಷೇತ್ರದ ದಿಕ್ಕನ್ನು ಬದಲಿಸಬಲ್ಲದು ಎಂಬುದು ನನ್ನ ಭಾವನೆ. ನಾನು ಸ್ವತಃ ಸಂಗೀತಪ್ರೇಮಿಯಾಗಿ ೨೦ನೇ ಶತಮಾನದ ಪರಂಪರಾಗತವಾಗಿ ಕಲಿತ ಹಿಂದೂಸ್ತಾನಿ ಗಾಯಕರ ಕ್ರಿಯಾಜ್ಞಾನಕ್ಕೂ, ಈಗಿನ ಬಿ.ಮ್ಯೂಸಿಕ್, ಎಂ.ಮ್ಯೂಸಿಕ್ ಡಿಗ್ರಿ ಹೋಲ್ಡರುಗಳ ಸಂಗೀತ ಜ್ಞಾನಕ್ಕೂ ಇರುವ ಆಕಾಶ-ಪಾತಾಳದ ಅಂತರವನ್ನು ಪ್ರತ್ಯಕ್ಷ ಅನುಭವಿಸಿದ್ದೇನೆ. ಗುಹಾಂತರ ದೇವಾಲಯ, ಶೃಂಗೇರಿ ದೇವಾಲಯಗಳಂಥ ವಿಶಿಷ್ಟ ರಚನೆಗಳನ್ನು ಹೊಂದಿದ್ದ, ಬೇಲೂರು ಹಳೆಬೀಡಿನಂಥ ಕುಶಲಾತ್ಮಕ ಕಟ್ಟಡಗಳನ್ನು ಈಗಿನ ಸಿವಿಲ್ ಇಂಜಿನಿಯರುಗಳಿಂದ ಅಪೇಕ್ಷಿಸೋಣವೇ? ಕ್ರಿಯಾಜ್ಞಾನದ ಅಗತ್ಯತೆ ನಮಗೆ ಖಂಡಿತ ಇದೆ.

   ಆದರೆ ಬಾಲಗಂಗಾಧರರು ಭಾರತದ ಸಮಾಜದ ಬಗ್ಗೆ ಪಾಶ್ಚಾತ್ಯರು ನೀಡಿರುವ ಈ ಗ್ರಹಿಕೆಯನ್ನು ವಿರೋಧಿಸುತ್ತಾರೆ. ಆದರೆ ಭಾರತೀಯ ಸಂಪ್ರದಾಯದ ಬಗ್ಗೆ ಏಕರೂಪ ವಿವರಣೆಯನ್ನು ನೀಡುತ್ತಾ, ನಮ್ಮ ಸಮಾಜ ನಿಂತ ನೀರಿನಂತಾಗಿರಲಿಲ್ಲ ಎಂದು ಏಕಕಾಲಕ್ಕೆ ಹೇಳುವದು ಕಂಟ್ರಾಡಿಕ್ಷನ್ ಎನ್ನುವದು ನನ್ನ ಭಾವನೆ.
   => ಬಾಲಗಂಗಾಧರರು ಒಂದು ಸಂಪ್ರದಾಯವನ್ನು ವ್ಯಾಖ್ಯಾನಿಸುವದು ಹೇಗೆ, ಅದಕ್ಕೆ necessary & sufficient conditions ಏನು ಎಂಬುದರ ಕುರಿತು ಚರ್ಚಿಸಿದ್ದಾರೆ. ನಮ್ಮ ಸಂಪ್ರದಾಯಗಳನ್ನು ಅರಿಯಲು ಅವರು ಪಾಶ್ಚಿಮಾತ್ಯರ ವಿಧಾನವನ್ನು ಅನುಸರಿಸಿರುವದು ನಿಜವೇ, ಏಕೆಂದರೆ ವಿಜ್ಞಾನದ ಊಹಾಸಿದ್ಧಾಂತದ ವಿಧಾನದಂತೆ ನಮ್ಮಲ್ಲಿ ಯಾವ ಊಹಾಸಿದ್ಧಾಂತದ ವಿಧಾನವೂ ಇಲ್ಲ. ಬದಲಾವಣೆಗಳೂ ಒಂದು ನಿಯಮವನ್ನೇಕೆ ಅನುಸರಿಸಬಾರದು? ಹೀಗಾಗಿ ಸಮಾಜವಿಜ್ಞಾನದ ಸಿದ್ಧಾಂತಗಳನ್ನು ನಾವು ಕನ್ಸಿಸ್ಟೆನ್ಸಿಯ ಆಧಾರದ ಮೇಲೆಯೇ ಕಟ್ಟಬೇಕಿದೆ. ಹಾಗೆ ಕಟ್ಟಿದಾಗಲೇ ಕ್ರಿಯಾಜ್ಞಾನದಂಥ ವಿವರಣೆಗಳು ಸಿಗಲು ಸಾಧ್ಯ. ಇಂಥ ಕ್ರಿಯಾಜ್ಞಾನದ ಪ್ರಾತ್ಯಕ್ಷಿಕೆಯೂ ಇದನ್ನು ಸಾಬೀತುಪಡಿಸಿದರೆ ಒಳ್ಳೆಯದೇ ಇಲ್ಲವೇ?

   ಉತ್ತರ
   • ನವೆಂ 10 2015

    “ಒಂದು analogy ಕೊಡುತ್ತೇನೆ. mass-energy conversion ಸಮಯದಲ್ಲೂ, ಎಲ್ಲ ಪ್ರಯೋಗಗಳೂ E=mc2 ಸೂತ್ರವನ್ನೇ ಅನುಸರಿಸಿವೆ. ಇನ್ನೂ ಅದಕ್ಕೆ ಅಪವಾದ ಸಿಕ್ಕಿಲ್ಲ. ”

    ಖಂಡಿತಾ ವಿಜ್ಞಾನ E=mc2 ಸೂತ್ರವನ್ನು ಮೀರಿ ಬೆಳೆದಿದೆ. ಅಷ್ಟೆ ಅಲ್ಲ ವಿಜ್ಞಾನದ ಫಿಲಾಸಫಿ ಕೂಡ ಭಿನ್ನತೆಯನ್ನು ಹೊಂದುತ್ತಿದೆ. ನಿಂತ ನೀರು ಎಂದಾದರೆ ಅನ್ವೇಷಣೆಯಲ್ಲಿ ಬೆಳವಣಿಗೆ ಹೊಂದದಿರುವದು.

    ಉತ್ತರ
    • ನವೆಂ 12 2015

     ನಿಂತ ನೀರು ಎಂದಾದರೆ ಅನ್ವೇಷಣೆಯಲ್ಲಿ ಬೆಳವಣಿಗೆ ಹೊಂದದಿರುವದು. => ಬಾಲಗಂಗಾಧರರೇನೂ ಇಲ್ಲಿಗೆ ಅನ್ವೇಷಣೆ ಮುಗಿಯಿತು ಎಂದೇನೂ ಹೇಳಿಲ್ಲವಲ್ಲ. ನಿಮಗೆ ಕ್ರಿಯಾಜ್ಞಾನದ ಊಹಾಸಿದ್ಧಾಂತದಲ್ಲಿ ನ್ಯೂನತೆಗಳು ಕಂಡುಬಂದಲ್ಲಿ, ಅವುಗಳನ್ನು ನಿವಾರಿಸುವಂಥ ಇನ್ನೊಂದು ಥಿಯರಿಯನ್ನು ಮಂಡಿಸಿ. ಆಗ ನಿಂತ ನೀರು ಮತ್ತೆ ಹರಿಯುತ್ತದೆ. ಅಷ್ಟೇ. ನಾನು ಕ್ರಿಯಾಜ್ಞಾನದ ಕುರಿತಾದ ವಿವರಣೆಯನ್ನು ಒಪ್ಪಿದ್ದೇನೆ. ನಾಳೆ ನನಗೆ ಇದರಲ್ಲಿ ಅನುಮಾನಗಳು ಬಂದರೆ, ಅದನ್ನು ಪರಿಹರಿಸಿ ಹೊಸದೊಂದು ಊಹಾಸಿದ್ಧಾಂತ ಮಾಡುವ ನಿಟ್ಟಿನಲ್ಲಿ ಖಂಡಿತ ಪ್ರಯತ್ನಿಸುತ್ತೇನೆ.

     ಉತ್ತರ

ನಿಮ್ಮದೊಂದು ಉತ್ತರ Prajna Anand ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments