ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 9, 2015

ಕೇಂದ್ರದ ನೆರಳಿನಲ್ಲಿ ವಿಕೇಂದ್ರೀಕರಣದ ಸ್ವರೂಪ

‍CSLC Ka ಮೂಲಕ

images (2)ಸಂತೋಷ. ಈ. ಕುವೆಂಪು ವಿಶ್ವವಿದ್ಯಾನಿಲಯ

  ಭಾರತವು ಹಳ್ಳಿಗಳಿಂದ ಕೂಡಿದ ದೇಶ. ಸ್ವಯಂ ಆಡಳಿತವೇ ಅದರ ಜೀವಾಳ. ಗ್ರಾಮದ ಜನರ ಸಮುದಾಯಿಕ  ಭಾವನೆ ಸ್ವಯಂ ಆಡಳಿತದ ಪ್ರಧಾನವಾದ ಬಲವಾಗಿತ್ತು. ಗ್ರಾಮದ ಜನರ ನಡುವಿನ ಪರಸ್ಪರಾವಲಂಬನೆ ಮತ್ತು ತಮ್ಮ ದೈನಂದಿನ ಅವಶ್ಯಕತೆಗಳಲ್ಲಿ ಸ್ವಾವಲಂಬಿಗಳಾಗಿರುವುದು, ಗ್ರಾಮದ ಸ್ವಯಂ ಆಡಳಿತ ವ್ಯವಸ್ಥೆಯು ಸಾವಿರಾರು ಕಾಲ ಅಖಂಡವಾಗಿ ಮತ್ತು ಸ್ವಸಂಪೂರ್ಣವಾಗಿ ಉಳಿದುಕೊಂಡು ಬರಲು ಸಹಾಯವಾಗಿತ್ತು. ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿ ಅನೇಕ ರಾಜಕೀಯ ಬದಲಾವಣೆಗಳು ಸಂಭವಿಸಿದ್ದರೂ ಗ್ರಾಮಗಳ ಸ್ವಯಮಾಡಳಿತ ವ್ಯವಸ್ಥೆ ಪ್ರಕ್ಷುಬ್ಧಗೊಳ್ಳದಷ್ಟು ಸ್ವತಂತ್ರವಾಗಿದ್ದವು. ಆದರೆ ಭಾರತದಲ್ಲಿ ಬ್ರಿಟಿಷ್ ಆಡಳಿತದ ಆಗಮನದಿಂದ ಗ್ರಾಮದ ಸ್ವಯಮಾಡಳಿತ ಪದ್ಧತಿ ಕ್ಷೀಣಿಸುತ್ತ ಬಂದಿತು. ಏಕೆಂದರೆ ಭಾರತದಲ್ಲಿ ತಮ್ಮ ಆಡಳಿತದ ಪ್ರಾರಂಭಿಸಿದ ಬ್ರಿಟಿಷರಿಗೆ ಗ್ರಾಮಗಳನ್ನು ತಮ್ಮ ವ್ಯವಸ್ಥೆಗೆ ಒಳಪಡಿಸಿಕೊಳ್ಳದೆ ಇಡೀ ದೇಶವನ್ನು ಪರಿಣಾಮಕಾರಿಯಾಗಿ ಆಳಲು ಸಾಧ್ಯವಿಲ್ಲ ಎಂದು ತಿಳಿದಿತ್ತು. ಅದರ ಸಲುವಾಗಿ ‘ಗ್ರಾಮಗಳ ಕೈಯಲ್ಲಿದ್ದ ಹಿಂದಿನ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡು ಅದನ್ನು ಬ್ರಿಟಿಷ್ ಅಧಿಕಾರಿಯ ಅಧೀನಕ್ಕೆ ಬರುವಂತೆ ಕಾನೂನುಗಳನ್ನು ಜಾರಿಗೆ ತಂದರು’. ಆದರೆ ಬ್ರಿಟಿಷರ ಆಡಳಿತದಲ್ಲಿ ಗ್ರಾಮ ಸಮುದಾಯ ಪಾಲ್ಗೊಳ್ಳಲೇ ಇಲ್ಲ. ಅವರ ನೀರಿಕ್ಷೆ ಮಟ್ಟಕ್ಕೆ ಗ್ರಾಮೀಣ ಜನರು ಸಹಕಾರ ತೋರಲಿಲ್ಲ. ಗ್ರಾಮಗಳು ಈ ರೀತಿ ಪ್ರತಿಭಟಿಸಿದ್ದರಿಂದ ಕಾಲಕ್ರಮೇಣ ಬ್ರಿಟಿಷರು ಗ್ರಾಮಗಳ ಮೇಲಿನ ತಮ್ಮ ಅಧಿಕಾರವನ್ನು ಮೊಟುಕುಗೊಳಿಸುತ್ತ ಬಂದರು. ಆದರೆ ಬ್ರಿಟಿಷರ ಆಡಳಿತ ಗ್ರಾಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದಂತು ನಿಜ.

  ಸ್ವಾತಂತ್ರದ ನಂತರ, ಭಾರತದ ರಾಷ್ಟ್ರೀಯ ಆಂದೋಲನದಲ್ಲಿ ಗ್ರಾಮ ಪಂಚಾಯತಿಯು ಕೇಂದ್ರಬಿಂದುವಾಗಿದ್ದರಿಂದ  ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಇರುವಂತೆ ಗ್ರಾಮೀಣ ಮಟ್ಟದಲ್ಲೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಯು ಕಾರ್ಯಪ್ರವೃತ್ತವಾಗಬೇಕು ಎನ್ನುವುದು ಬಹುತೇಕರ ಉದ್ದೇಶವಾಗಿತ್ತು. ಆದರೆ ಸಂವಿಧಾನ ರಚನಕಾರರಿಗೆ ಭಾರತಕ್ಕೆ ಸಶಕ್ತ ಕೇಂದ್ರವಿದ್ದು, ಅದರ ಸುತ್ತ ಇಡೀ ವ್ಯವಸ್ಥೆ ರೂಪುಗೊಳ್ಳಬೇಕೆಂದು ಬಯಸಿದ್ದರು. ಅದರಲ್ಲಿ ಯಶಸ್ವಿ ಕೂಡ ಅದರು.

  ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರಿಂದ ಸರ್ಕಾರದ ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಪಾಲ್ಗೊಳ್ಳುವಿಕೆ ಅತ್ಯವಶ್ಯಕವಾಗಿತ್ತು. ಆದರೆ ಕೇಂದ್ರ ರೂಪಿಸಿದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಜನರ ಹಿತಾಸಕ್ತಿಗಳಿಗೆ ಮನ್ನಣೆ ಇಲ್ಲದಾಗಿದ್ದರಿಂದ ಗ್ರಾಮೀಣ ಜನರು ಪಾಲ್ಗೊಳ್ಳಲೇ ಇಲ್ಲ. ಪರಿಣಾಮ, ಜನಸಮುದಾಯವು ಭಾಗವಹಿಸಿದಾಗ ಮಾತ್ರ ಅಭಿವೃದ್ಧಿಯ ಯೋಜನೆಗಳು ಯಶಸ್ವಿಯಾಗುತ್ತವೆ ಎಂಬ ಭಾವನೆ ನೀತಿ ನಿರೂಪಕರಲ್ಲಿ ಬೆಳೆಯಲಾರಂಭಿಸಿತು.

  ‘ಜವಾಬ್ದಾರಿ ಮತ್ತು ಅಧಿಕಾರವಿಲ್ಲದೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ’ ಎಂದು ತಿಳಿದ ‘ಕೇಂದ್ರ’ದ ನಿರೂಪಕರು ಗ್ರಾಮದ ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಮತ್ತು ಅವರ ಅವಶ್ಯಕತೆಗಳನ್ನು ಪೂರೈಸಬೇಕಾದರೆ ನಾವು ಗ್ರಾಮಗಳಿಗೆ ಸ್ವಾಯತ್ತತೆ ನೀಡಬೇಕು. ಅ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮದ ಜನರೇ ಭಾಗವಹಿಸುವಂತೆ ಮಾಡುವುದು ಸೂಕ್ತವೆಂದು ಬೇರೆ ಬೇರೆ ರೂಪದಲ್ಲಿ ಭಾರತದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಹುಟ್ಟುಹಾಕಿದ್ದರು.

  ಭಾರತವು ಸ್ವಾತಂತ್ರ್ಯ ಪಡೆದು 68 ವರ್ಷ ಕಳೆದಿದೆ, ವಿಕೇಂದ್ರೀಕರಣ ವ್ಯವಸ್ಥೆಯ ಉತ್ತಮ ಕಾರ್ಯನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಸೂಚಿಸಲು ಐದಾರು ಕಮಿಟಿಗಳು ರಚನೆ ಆದವು. ಈ ಕಮಿಟಿಗಳು ಅಧಿಕಾರ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಚಟುವಟಿಗೆಗಳಲ್ಲಿ ಜನಸಮುದಾಯದ ಪಾಲ್ಗೊಳ್ಳುಲು  ವಿಕೇಂದ್ರೀಕರಣ  ವ್ಯವಸ್ಥೆ ಒಂದು ಪ್ರಮುಖ ವ್ಯವಸ್ಥೆಯೆಂದು ಗುರುತಿಸುತ್ತಾರೆ. ಅ ಕಮಿಟಿಗಳ ಪ್ರಮುಖ ಶಿಫಾರಸ್ಸುಗಳೆಂದರೆ

 1. ಗ್ರಾಮಗಳಿಗೆ ಹೆಚ್ಚು ಅಧಿಕಾರವನ್ನು ಕೊಡಬೇಕು.
 2. ಆಡಳಿತಾಧಿಕಾರವನ್ನು ಮತ್ತು ಹಣಕಾಸು ಅಧಿಕಾರವನ್ನು ಕೊಡಬೇಕು. ಹಳ್ಳಿಯ ಜನಕೋಟಿ ನೇರವಾಗಿ ಆಡಳಿತದಲ್ಲಿ ಭಾವಹಿಸುವತೆ ಆಗಬೇಕು.
 3. ತಮ್ಮ ಅಭಿವೃದ್ಧಿಗೆ ತಾವೇ ಹೊಣೆಗಾರರಾಗುವಂತೆ ಮಾಡಬೇಕು

 ಮೇಲಿನಶಿಫಾರಸ್ಸಿನ ಆಧಾರದ ಮೇಲೆ ಸರ್ಕಾರ ಕೆಲವೊಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಪರಿಣಾಮವಾಗಿ ಗ್ರಾಮಗಳಲ್ಲಿ ಕೆಲವೊಂದು ಅಭಿವೃದ್ಧಿಗಳಾದವು. ಉದಾ:- ಹಳ್ಳಿಗಳಲ್ಲಿ ರಸ್ತೆಯಾದವು, ಕುಡಿಯುವ ನೀರಿಗಾಗಿ ಬಾವಿಗಳನ್ನು ತೋಡಿಸಲಾಯಿತು. ಗ್ರಾಮಗಳು ವಿದ್ಯುಧೀಕರಣಗೊಂಡಿತು. ಸಹಕಾರ ಸಂಘಗಳು ಆರಂಭಿಸಿಲಾಯಿತು. ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಿದರು ಮತ್ತು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಾದವು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಯಿತು. ಈ ಮೇಲಿನ ರೀತಿಯಲ್ಲಿ ಹಳ್ಳಿಗಳಲ್ಲಿ ಅಭಿವೃದ್ಧಿಯಾಗಿದ್ದರು ಸಹ ವಿಕೇಂದ್ರಿಕರಣದ ಆಶಯ ಈಡೇರಿದೇಯೆ?

  ನನ್ನ ಪ್ರಕಾರ, ವಿಕೇಂದ್ರಿಕರಣದ ಆಶಯ ಈಡೇರಿಲ್ಲ ಎಂಬುದು. ಏಕೆಂದರೆ, ವಿಕೇಂದ್ರೀಕರಣದ ಮುಖ್ಯ ಉದ್ದೇಶ ಪ್ರತಿಯೊಂದು ಗ್ರಾಮಗಳಿಗೂ ಅಧಿಕಾರವನ್ನು ನೀಡುವುದರ ಮೂಲಕ ಅದರ ಸ್ವಾಯುತ್ತತೆ ಗುರುತಿಸುವುದು. ಆದರೆ ‘ಕೇಂದ್ರ’ವು ಗ್ರಾಮಗಳಿಗೆ ಸ್ವಾಯುತ್ತ ಅಧಿಕಾರ ಕೊಡುವುದರ ಬದಲಾಗಿ ಅಧಿಕಾರವನ್ನು ತನ್ನಲ್ಲಿ ಇಟ್ಟುಕೊಂಡು ಅದನ್ನು ಗ್ರಾಮಗಳ ಹಂತದಲ್ಲಿ ಪುನರುತ್ಪಾಧನೆ ಮಾಡುತ್ತಿದೆ.   ಈ ವಾದ ಹೆಚ್ಚು ಸ್ಪಷ್ಟಗೊಳ್ಳಬೇಕಾದರೆ ಈ ಕೆಳಗಿನ ಅಂಶಗಳ ಕಡೆ ಗಮನಹರಿಸಲೇ ಬೇಕು.

 • ಶಾಸನ ಮಾಡುವ ಅಧಿಕಾರ ಯಾರಿಗೆ ಇದೆ. ಕೇಂದ್ರಕ್ಕೋ? ಇಲ್ಲ ಗ್ರಾಮಕ್ಕೋ?
 • ಗ್ರಾಮಗಳಲ್ಲಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳನ್ನ ನೇಮಿಸುವವರು ಯಾರು? ಅವರು ತಪ್ಪು ಮಾಡಿದಾಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರು? ಕೇಂದ್ರವೋ? ಇಲ್ಲ ಗ್ರಾಮವೋ?
 • ಗ್ರಾಮಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವವರು ಯಾರು? ಅವುಗಳಿಗೆ ಹಣವನ್ನು ನೀಡುವವರು ಯಾರು? ಅಷ್ಟೇ ಏಕೆ ವಾರ್ಷಿಕವಾಗಿ ಗ್ರಾಮಸಭೆಯ ಬಜೆಟ್ ನ್ನು ನಿರ್ಧರಿಸುವವರು ಯಾರು? ಕೊನೆಗೆ ಅದರ ಖರ್ಚಿನ ಲೆಕ್ಕವನ್ನು ತೋರಿಸುವುದು ಯಾರಿಗೆ? ಕೇಂದ್ರಕ್ಕೋ? ಇಲ್ಲ ಗ್ರಾಮಕ್ಕೋ?
 • ಗ್ರಾಮದ ಜನರು ತೆರಿಗೆ ಕಟ್ಟುವುದು ಯಾರಿಗೆ? ಇದರ ಜೊತೆಗೆ ಗ್ರಾಮದ ನೆಲ, ಜಲ, ಅರಣ್ಯ ಹಾಗೂ ಖನಿಜ ಮುಂತಾದ ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅಧಿಕಾರ ಇರುವುದು ಯಾರಿಗೆ? ಕೇಂದ್ರಕ್ಕೋ? ಇಲ್ಲ ಗ್ರಾಮಕ್ಕೋ?

  ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಮಾತ್ರ ಒಂದೇ: ‘ಕೇಂದ್ರ’. ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದರೆ, ವಿಕೇಂದ್ರೀಕರಣದಿಂದಾಗಿ ಗ್ರಾಮಗಳಿಗೆ ಅಧಿಕಾರ ಸಿಗುವುದರ ಬದಲಾಗಿ ಅವು ಕೇಂದ್ರದಲ್ಲಿ ಕೇಂದ್ರಿಕೃತವಾಗಿರುವಾಗೆ ಕಾಣಿಸುತ್ತದೆ. ಒಟ್ಟಿನಲ್ಲಿ ವಿಕೇಂದ್ರೀಕರಣ  ವ್ಯವಸ್ಥೆ ಗ್ರಾಮಗಳ ಮೇಲೆ ಎರಡು ರೀತಿಯ ಪರಿಣಾಮಗಳು ಬೀರಿತು.

 1. ಇವತ್ತಿನ ಗ್ರಾಮಗಳೆಲ್ಲ ‘ಕೇಂದ್ರ’ಗಳ ಪ್ರತಿಬಿಂಬಗಳಾಗಿ ಗೋಚರವಾಗುತ್ತಿರುವುದು. .
 2. ಗ್ರಾಮಗಳ ಸಾಮುದಾಯಿಕ ಬದುಕಿನೊಳಗೆ ಆಗಿರುವಂತಹ ಬದಲಾವಣೆ.                                                                                                                     
 1. ಮೊದಲನೆ ಪರಿಣಾಮಕ್ಕೆ ಸಂಬಂಧಿಸಿದಂತೆ, ಕೇಂದ್ರಕ್ಕೆ ಸೀಮಿತವಾಗಿದ್ದ ಪಕ್ಷ ರಾಜಕೀಯ, ಭ್ರಷ್ಟಚಾರ, ದ್ವೇಷ. ಮತ್ತು ಪಕ್ಷಪಾತ, ಇವುಗಳು ಗ್ರಾಮಗಳಿಗೂ ವ್ಯಾಪಿಸಿರುವುದನ್ನು ಕಾಣಬಹುದಾಗಿದೆ.
 • ದೇಶದ ಎಲ್ಲಾ ಪಂಚಾಯತಿಗಳು ಸರ್ಕಾರದ ಕಾನೂನುಗಳ ಹತೋಟಿಗೆ ಒಳಪಡುವುದರಿಂದ ಅವು ತನ್ನ ತನವನ್ನು ಕಳೆದುಕೊಂಡಿತು. ಜೊತೆಗೆ ಎಲ್ಲಾ ಕೆಲಸಕಾರ್ಯಗಳಿಗೂ ಸರ್ಕಾರದ ಮುಂದೆ ಕೈ ಒಡ್ಡಿ ನಿಲ್ಲುವಂತಾಯಿತು.
 • ಕೇಂದ್ರದಲ್ಲಿ ಇರುವ ರಾಜಕೀಯ ಪಕ್ಷಗಳು ಗ್ರಾಮಗಳಿಗು ಬಂದವು. ಅವು ತನ್ನ ಅಸ್ಥಿತ್ವವನ್ನು ಬಲಪಡಿಸಿಕೊಂಡಿದ್ದರಿಂದ ಗ್ರಾಮಗಳಲ್ಲಿ ಪಕ್ಷಗಳ ಹೆಸರಿನಲ್ಲಿ ಕೇಂದ್ರದ ರಾಜಕೀಯ ಹೆಚ್ಚಾಯಿತು. ಅದರ ಪರಿಣಾಮ ಗ್ರಾಮದ ಜನರ ನಡುವೆ ಸಂಘರ್ಷಗಳು ಹೆಚ್ಚಾದವು. ಅಷ್ಟೇ ಏಕೆ? ಇಂದು ಗ್ರಾಮದ ಒಂದು ಮನೆಯಲ್ಲಿ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ. ಅಣ್ಣ, ತಮ್ಮ, ಹೀಗೆ ಒಬ್ಬಬ್ಬರೂ ಒಂದೊಂದು ಪಕ್ಷವನ್ನು ಸೇರಿಕೊಂಡಿರುವುದರಿಂದ ಮನೆಯೊಳಗೆ ಪಕ್ಷ ರಾಜಕೀಯ ಮತ್ತು ಸಂಘರ್ಷ ನಡೆಯುತ್ತಲೇ ಇವೆ. ಕೇವಲ ಸಂಸತ್ತಿನಲ್ಲಿ ನಡೆಯುತ್ತಿದ್ದ ರಾಜಕೀಯ ಪಕ್ಷಗಳ ನಡುವಿನ ಜಗಳ ಗ್ರಾಮದ ಮನೆಯವರಿಗೂ ವಿಸ್ತರಿಸಿದ ಕೀರ್ತಿ ವಿಕೇಂದ್ರೀಕರಣ ವ್ಯವಸ್ಥೆಗೆ ಸಲ್ಲುತ್ತದೆ.
 • ವಿಕೇಂದ್ರೀಕರಣ ವ್ಯವಸ್ಥೆಯ ಮತ್ತೊಂದು ಪರಿಣಾಮ ಭ್ರಷ್ಟಚಾರ. ಇಂದು ಎಲ್ಲಾ ಗ್ರಾಮಗಳಲ್ಲೂ ಅಭಿವೃದ್ಧಿ ಹೆಸರನಲ್ಲಿ ಭ್ರಷ್ಟಚಾರವು ಸರಾಗವಾಗಿ ನಡೆಯುತ್ತಿದೆ. ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹಣ ಕೇಂದ್ರದಿಂದ ಬರುತ್ತದೆ. ಪಂಚಾಯಿತಿಯ ಸದಸ್ಯನು ಅಥವಾ ಸರ್ಕಾರಿ ಅಧಿಕಾರಿಯು, ಕಳಪೆ ಕಾಮಗಾರಿ ಮಾಡಿ, ಅಥವಾ ಕೆಲಸವನ್ನು ನಿರ್ವಹಿಸದೇ ಸುಳ್ಳು ಲೆಕ್ಕ ತೋರಿಸುವುದರ ಮೂಲಕ ಭ್ರಷ್ಟಚಾರದ ಕೂಪಗಳಾಗಿವೆ ಎಂಬ ಕೂಗುಗಳು ಇವೆ. ಅಷ್ಟೇ ಅಲ್ಲದೇ, ಕೇಂದ್ರದಿಂದ ಬಿಡುಗಡೆಯಾಗುವ ಹಣವು ಮಂತ್ರಿಗಳಿಗೆ, ಶಾಸಕರಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ಷೇರು ಮತ್ತು ಕಮೀಷನ್ ಹೆಸರಿನಲ್ಲಿ ಹಂಚಿಕೆಯಾಗಿ ಉಳಿದ ಹಣ ಗ್ರಾಮದ ಅಭಿವೃದ್ಧಿಗೆ ಬರುತ್ತಿರುವುದ್ದರಿಂದ ಭ್ರಷ್ಟಚಾರದಲ್ಲು ಗ್ರಾಮಗಳಿಗೆ ಸ್ವಾಯತ್ತತೆ ಇಲ್ಲದಂತಾಗಿದೆ.
 • ವಿಕೇಂದ್ರೀಕರಣದ ಮತ್ತೊಂದು ಪರಿಣಾಮ ಚುನಾವಣಾ ವ್ಯವಸ್ಥೆ. ಅಂದಾಜಿನ ಪ್ರಕಾರ 20 ಲಕ್ಷ ಜನಸಂಖ್ಯೆ ಹೊಂದಿರುವ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು 20-25 ಕೋಟಿ ರೂ ಖರ್ಚು ಮಾಡುತ್ತಿದ್ದಾರೆ. ಇವರ ಹಾದಿಯನ್ನೆ ಅನುಸರಿಸುತ್ತಿರುವ ನಮ್ಮ ಗ್ರಾಮದ ಜನರು 700 ಜನರು ಇರುವ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ 5-10 ಲಕ್ಷ ರೂಗಳನ್ನು ಖರ್ಚು ಮಾಡುತ್ತಿದ್ದಾರೆ. ಎಷ್ಟೇ ಆದರೂ ಇವತ್ತಿನ ಗ್ರಾಮಗಳು ಕೇಂದ್ರೀಕರಣದ ಕೂಸು ತಾನೆ.
 • ವಿಕೇಂದ್ರೀಕರಣ ಮುಖ್ಯ ಉದ್ದೇಶ ಅಧಿಕಾರ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದು. ಅದರೆ ಅಷ್ಟೊಂದು ಹಣವನ್ನು ಖರ್ಚು ಮಾಡಿ ಇಂದಿನ ಚುನಾವಣೆಗಳಲ್ಲಿ ಗೆಲ್ಲುತ್ತಿರುವುದು ಯಾರು? ಅಧಿಕಾರ ಹಿಡಿಯುತ್ತಿರುವವರು ಯಾರು? ಶ್ರೀಮಂತರೇ ತಾನೆ. ಹಾಗಾದರೆ ವಿಕೇಂದ್ರೀಕರಣದ ಫಲವನ್ನು ಅನುಭವಿಸುತ್ತಿರುವುದು ಕಟ್ಟ ಕಡೆಯ ವ್ಯಕ್ತಿಯೇ?
 • ಅಧಿಕಾರಕ್ಕಾಗಿ ಕೇಂದ್ರದಲ್ಲಿ ನಡೆಯುವ ಪ್ರತಿನಿಧಿಗಳ ಹೈಜಾಕ್, ಕುದುರೆ ವ್ಯಾಪಾರ ವಿಕೇಂದ್ರೀಕರಣದಿಂದ ಗ್ರಾಮಗಳಿಗೂ ವಿಸ್ತರಿಸಿದೆ.
 • ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷ ತನ್ನ ಅಜೆಂಡದಲ್ಲಿ ಇರುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತುಕೊಡುತ್ತದೆ. ಹಾಗೆ ಪಕ್ಷದ ಸದಸ್ಯರು ಗೆದ್ದಿರುವ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತವೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಒತ್ತು ಕೊಡುತ್ತವೆ. ಈ ಪ್ರಕ್ರಿಯೆ ಗ್ರಾಮಗಳಲ್ಲೂ ಮುಂದುವರಿಯುತ್ತಿದೆ. ಪಂಚಾಯಿತಿಗಳಲ್ಲಿ ಗೆದ್ದ ಅಭ್ಯರ್ಥಿ ತನ್ನ ಬೆಂಬಲಿಗರಿಗೆ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಯನ್ನು ಕೊಡುತ್ತಾನೆ. ಹಾಗಾದರೆ ವಿಕೇಂದ್ರೀಕರಣದ ಫಲವೇನು? ಅಧಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾಗುವುದರ ಜೊತೆಗೆ ಅಭಿವೃದ್ಧಿ ವಿಷಯದಲ್ಲಿ ಗ್ರಾಮದ ಜನರಲ್ಲೆ ಪಕ್ಷಪಾತ ಮಾಡುತ್ತದೆ. ಇದು ಕೇಂದ್ರದ ಪ್ರತಿರೂಪವೇ ಹೊರತು ಬೇರೇನೂ ಅಲ್ಲ.
 1. ಎರಡನೇ ಪರಿಣಾಮ ಪ್ರಮುಖವಾದದ್ದು. ವಿಕೇಂದ್ರೀಕರಣ ವ್ಯವಸ್ಥೆಯಿಂದಾಗಿ ಸರ್ಕಾರ ಗ್ರಾಮದ ಸಾಮುದಾಯಿಕ ಬದುಕಿನ ಮೇಲೆ ಹಸ್ತಕ್ಷೇಪ ಮಾಡುತ್ತ ಬಂದಿರುವುದನ್ನು ಕಾಣಬಹುದಾಗಿದೆ. ಪರಿಣಾಮ ಇಡೀ ಗ್ರಾಮೀಣ ಜನರ ಜೀವನವೇ ಅಸ್ತವ್ಯಸ್ತಗೊಂಡಿದೆ. ಉದಾ:-
 • ಪ್ರಸ್ತುತ ಗ್ರಾಮಗಳಲ್ಲಿ ಜಾತಿ ಜಗಳ ಹೆಚ್ಚಾಗುತ್ತಿದೆ. ಅ ಜಾತಿ ಸಂಘರ್ಷದಿಂದೆ ರಾಜಕೀಯ ಪಕ್ಷಗಳ ಹಿನ್ನೆಲೆಯಿರುವುದು ಗ್ರಾಮಗಳಲ್ಲಿ ಸರ್ವೆಸಾಮಾನ್ಯವಾಗಿವೆ. ವಿವಿಧ ಜಾತಿಯ ಜನರು ಒಂದಲ್ಲೊಂದು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದರಿಂದ ಗ್ರಾಮಗಳಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿವೆ. ರಾಜಕೀಯ ಪಕ್ಷಗಳು ತಮ್ಮ ನಡುವಿನ ಸಂಘರ್ಷವನ್ನು ಜಾತಿಯ ಹೆಸರಿನಲ್ಲಿ ನಡೆಸುತ್ತಿರುವುದರಿಂದ ಗ್ರಾಮೀಣ ಜನರ ಮಾನವೀಯ ಸಂಬಂಧಗಳು ಹಾಳಾಗುತ್ತಿವೆ.
 • ಹಿಂದೆ ಹಳ್ಳಿಯ ಏನೇ ಕೆಲಸವಿರಲಿ, ರಕ್ಷಣೆ, ಗೋಮಾಳ, ದೇವಾಲಯ. ಕೆರೆಕಟ್ಟೆ. ಕಾಲುವೆ ಮುಂತಾದ ಗ್ರಾಮ ಕಾರ್ಯಗಳನ್ನು ಎಲ್ಲವನ್ನು ಜನರು ಸೇವಾ ರೂಪದಲ್ಲಿ ಮಾಡುತ್ತಿದ್ದರು. ಆದರೆ ಇವೆಲ್ಲವನ್ನು ಸರ್ಕಾರ ತನ್ನ ಅಧೀನಕ್ಕೆ ಒಳಪಡಿಸಿಕೊಂಡು ಇದನ್ನು ಬಳಸಿಕೊಳ್ಳುವ ಜನರ ಮೇಲೆ ತೆರಿಗೆ ಹಾಕಿದರ ಪರಿಣಾಮ  ಜನರಲ್ಲಿ ಇವೆಲ್ಲಾವು ಸರ್ಕಾರದ ಕೆಲಸ ನನಗೇಕೆ ಉಸಾಬರಿ ಎನ್ನುವ ಪರಿಸ್ಥಿತಿ ಉಂಟಾಯಿತು. ಇವತ್ತು ಎಷ್ಟು ಹಳ್ಳಿಗಳಲ್ಲಿ ಗೋಮಾಳವೇ ಇಲ್ಲದಂತಾಗಿದೆ. ದೇವಾಲಯಗಳು ಪಾಲುಬಿದ್ದಿವೆ. ಕೆರೆಕಟ್ಟೆ ಮಾಯವಾಗಿವೆ.

  ಹೀಗೆ ಭಾರತದ ಗ್ರಾಮಗಳು ವಿಕೇಂದ್ರೀಕರಣ ಹೆಸರಿನಲ್ಲಿ ‘ಕೇಂದ್ರ’ದ ನಿಯಂತ್ರಣದಲ್ಲಿ ಇದೆ. ಪರಿಣಾಮವಾಗಿ ಗ್ರಾಮಗಳಲ್ಲೂ ಪಕ್ಷ ರಾಜಕೀಯ, ಭ್ರಷ್ಟಚಾರ, ಮತ್ತು ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹಾಗೆ ಗ್ರಾಮೀಣ ಜನರ ನಡುವಿನ ಅಂತರ ಹೆಚ್ಚಾಗಿ ಸಹಕಾರ, ಸಹಬಾಳ್ವೆಯ ಜೀವನ ಕಣ್ಮರೆಯಾಗುತ್ತಿದೆ. ವಿಕೇಂದ್ರೀಕರಣದ 60 ವರ್ಷಗಳ ಸಾಧನೆ ಎಂದರೆ, ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಭ್ರಷ್ಟಗೊಳಿಸಿ ಗ್ರಾಮಗಳ ವ್ಯಾವಹಾರಿಕ ರಚನೆಗಳನ್ನೇ ನಾಶಮಾಡುತ್ತಿರುವುದು ಕಂಡುಬರುತ್ತಿದೆ. ಈ ನಡುವೆ ಬಹುತೇಕ ರಾಜಕೀಯ ಪಕ್ಷಗಳು ಮತ್ತು ಚಿಂತಕರು, ಭಾರತದಲ್ಲಿ ಸ್ವಾತಂತ್ರ್ಯ ನಂತರ ಗಾಂಧೀಜಿಯವರ ಗ್ರಾಮಸ್ವರಾಜ್ಯದ’ ಪರಿಕಲ್ಪನೆಯಿಂದ ಪ್ರೇರಣೆಗೊಂಡು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ ಎಂದು ವಾದಿಸುತ್ತಾರೆ. ಹಾಗಾದರೆ ಗಾಂಧೀಜಿಯ ಗ್ರಾಮ ಸ್ವರಾಜ್ಯ’ ಪರಿಕಲ್ಪನೆ ಹಾಗೂ ಪ್ರಸ್ತುತ ‘ವಿಕೇಂದ್ರೀಕರಣ’ ಪರಿಕಲ್ಪನೆಗಳೆರಡೂ ಒಂದೆಯೇ? ಅಥವಾ ಬೇರೆ ಬೇರೆಯೆ? ಒಂದು ವೇಳೆ, ಎರಡು ಪರಿಕಲ್ಪನೆಗಳು ಬೇರೆ ಬೇರೆ ಎನ್ನುವುದಾದರೆ, ಗಾಂಧೀಜಿಯವರ ಪ್ರಕಾರ ‘ಸ್ವರಾಜ್ಯ’ ಎಂದರೇನು? ಪ್ರಸ್ತುತ ವಿಕೇಂದೀಕರಣದ ವ್ಯವಸ್ಥೆಯಿಂದ ಉಂಟಾಗಿರುವ ಸಮಸ್ಯೆಗಳಿಗೆ ಇದು ಪರಿಹಾರ ಆಗುಬಹುದೇ? ಗಾಂಧೀಜಿಯವರ ಸ್ವರಾಜ್ಯ ಪರಿಕಲ್ಪನೆಯ ಅಡಿಯಲ್ಲಿ ಗ್ರಾಮಗಳ ಅಭಿವೃದ್ಧಿ ರೂಪರೇಷೆಗಳ ಕುರಿತು ಯೋಚಿಸಲು ಸಾಧ್ಯವೇ? ಹಾಗಾಗಿ ಮೊದಲು ಗಾಂಧೀಜಿಯವರ  ಗ್ರಾಮಸ್ವರಾಜ್ಯ’ ಬಗ್ಗೆ ತಿಳಿಯುವ ಜರೂರು ನಮ್ಮ ಮುಂದಿದೆ.

 (ಈ ಮೇಲಿನ ಲೇಖನ ಬರೆಯಲು ಪ್ರೋತ್ಸಾಹಿಸಿದ ಮತ್ತು ತಪ್ಪುಗಳನ್ನು ತಿದ್ಧಿ, ಹಲವು ಸಲಹೆ ಸೂಚನೆಗಳನ್ನು ನೀಡಿದ ನನ್ನ ನೆಚ್ಚಿನ ಗುರುಗಳಾದ ಪ್ರೊ. ರಾಜಾರಾಮ ಹೆಗಡೆ ಅವರಿಗೆ ಋಣಿಯಾಗಿದ್ದೇನೆ.)

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments