ಅಪ್ಪನ ಪತ್ರ : ಡೆಫೊಡಿಲ್ಸ್‍ಅನ್ನು ಕೈಯಲ್ಲಿ ಹಿಡಿ, ಕನಕಾಂಬರ ತಲೆಯಲ್ಲಿ ಮುಡಿ!
– ರೋಹಿತ್ ಚಕ್ರತೀರ್ಥ
ಪ್ರಿಯ ಅಶ್ವಿನ್,
ನೂರಾರು ಕಿಲೋಮೀಟರ್ ದೂರದಲ್ಲಿರುವ ನಿನ್ನನ್ನು ಒಮ್ಮೆ ಎದುರೆದುರೇ ಕಂಡಂತೆ ಆಗುವ ಅನುಭವ ಇವತ್ತು ಆಯಿತು. ಹಾಗಾಗಿ, ಆ ಉಮೇದನ್ನು ತಡೆಹಿಡಿಯಲಾರದೆ ಪೆನ್ನು ಕೈಗೆತ್ತಿಕೊಂಡು ನಿನಗೀ ಪತ್ರ ಬರೆಯುತ್ತಿದ್ದೇನೆ. ಹಾಗೆಯೇ ನನ್ನೊಳಗೆ ಈ ಕ್ಷಣದಲ್ಲಿ ಹುಟ್ಟಿರುವ ತಳಮಳ, ಕಾತರಗಳಿಗೆ ಮಾತಿನ ರೂಪ ಕೊಡುವ ಪ್ರಯತ್ನ ಇದು ಅಂತಲೂ ಹೇಳಬಹುದು.
ಅಂದಹಾಗೆ, ಇಂದು ಒಂದು ಪ್ರತಿಷ್ಟಿತ ಕಾಲೇಜಿಗೆ ಒಂದು ಸ್ಪರ್ಧೆಯ ನಿರ್ಣಾಯಕನಾಗಿ ಹೋಗಬೇಕಾಗಿ ಬಂತು. ಕಾಲೇಜಿನ ಪ್ರಿನ್ಸಿಪಾಲ್ ನನ್ನ ಪರಿಚಯದವರೇ ಆದ್ದರಿಂದ, ಈ ಒಂದು ಕೆಲಸಕ್ಕೆ ಬಿಡುವು ಮಾಡಿಕೊಂಡು ಬರಲೇಬೇಕು ಅಂತ ಒತ್ತಾಯಿಸಿದ್ದರು. ಈ ಫೈಲು-ಮೀಟಿಂಗು-ಸಂದರ್ಶನಗಳ ತಲೆನೋವಿನಿಂದ ಒಂದಿಷ್ಟಾದರೂ ಮುಕ್ತಿ ಸಿಗುತ್ತಲ್ಲ ಎಂದು ಕಾಲೇಜಿಗೆ ಹೋಗಲು ತಕ್ಷಣ ಒಪ್ಪಿಗೆ ಕೊಟ್ಟಿದ್ದೆ. ಅಲ್ಲದೆ, ನಿನ್ನ ಪ್ರಾಯದ ಹುಡುಗರ ಜೊತೆ ಕಾಲ ಕಳೆಯುವುದೆಂದರೆ ಖುಷಿಯ ಸಂಗತಿಯೇ ತಾನೆ! ಅದೊಂದು ಚರ್ಚಾಸ್ಪರ್ಧೆ. ಟಿವಿಯಲ್ಲಿ ನಿತ್ಯ ನೋಡುವ ಹಲವಾರು ಸಮಸ್ಯೆಗಳಲ್ಲೇ ಕೆಲವನ್ನು ಆಯ್ದು ಚರ್ಚೆಗೆ ಕೊಟ್ಟಿದ್ದರು. ಹುಡುಗರೂ ಯಥಾನುಶಕ್ತಿ ಆ ವಿಷಯಗಳ ಮೇಲೆ ಓದಿಕೊಂಡು ಬಂದು ಚರ್ಚಿಸಲು ಯತ್ನಿಸುತ್ತಿದ್ದರು. ಅವರೇನು ಚರ್ಚಿಸಿದರು ಅನ್ನುವುದೆಲ್ಲ ನಗಣ್ಯ. ನನಗೆ ಅಲ್ಲಿ ತುಂಬ ಮುಖ್ಯ ಎಂದು ಕಂಡ ಕೆಲವು ಸಂಗತಿಗಳನ್ನಷ್ಟೇ, ಅವು ನಿನಗೂ ಅನ್ವಯಿಸುತ್ತವಾದ್ದರಿಂದ, ಎತ್ತಿಕೊಳ್ಳುತ್ತೇನೆ.
ಮೊದಲನೆಯದಾಗಿ, ಚರ್ಚೆಯನ್ನು ಯಾವ ಭಾಷೆಯಲ್ಲೂ ಮಾಡಬಹುದೆಂಬ ಸ್ವಾತಂತ್ರ್ಯ ಕೊಟ್ಟಿದ್ದರೂ, ಹೆಚ್ಚಿನ ಹುಡುಗರು ಆಯ್ದುಕೊಂಡದ್ದು ಇಂಗ್ಲಿಷ್ ಭಾಷೆಯನ್ನೇ. ಹೋಗಲಿ, ಆಯ್ದ ಭಾಷೆಯಲ್ಲಾದರೂ ಆಳವಾದ ಪಾಂಡಿತ್ಯ ಇದೆಯೇ, ಭಾಷೆಯ ಮೇಲೆ ಹಿಡಿತವಿದೆಯೇ ಎಂದರೆ ಅದೂ ಹೇಳಿಕೊಳ್ಳುವಷ್ಟಿರಲಿಲ್ಲ. ಇಡೀ ಸಭಾಂಗಣವೇ ಇಂಗ್ಲಿಷಿನಿಂದ ತುಂಬಿಹೋಗಿತ್ತು ಎನ್ನಬಹುದು. ಎದುರಿಗೆ ಸಿಕ್ಕ ಎಲ್ಲರೂ ಸ್ಥಳೀಯಭಾಷೆಯಲ್ಲಿ ಮಾತಾಡುವುದು ತಮ್ಮ ಘನತೆಗೆ ತಕ್ಕುದಲ್ಲ ಎಂದೇ ಭಾವಿಸಿದ ಹಾಗಿತ್ತು. ಇವರ್ಯಾರೂ ಕುವೆಂಪು, ಬೇಂದ್ರೆ, ಕಣವಿಯ ಹೆಸರನ್ನು ಕೇಳಿದವರಲ್ಲ. ಅತ್ತ, ಬ್ಲೇಕ್, ಬನ್ರ್ಸ್, ಎಲಿಯಟ್‍ರನ್ನೂ ಓದಿಕೊಂಡವರಲ್ಲ! ಈ ಹುಡುಗರಲ್ಲಿ ಹೆಚ್ಚಿನವರು ಓದಿರುವುದು ಚೇತನ್ ಭಗತ್ ಮತ್ತು ಅಮೀಶ್ ತ್ರಿಪಾಠಿಯನ್ನು ಮಾತ್ರ. ಅದೂ, ಆ ಲೇಖಕರು ತಾವೇ ದೇಶದ ನಂಬರ್ 1 ಬರಹಗಾರರು ಎಂದು ಬಿಂಬಿಸಿಕೊಂಡಿರುವುದರಿಂದ ಅದನ್ನು ನಂಬಿ ಓದಿರಬಹುದೋ ಏನೋ. ಒಟ್ಟಲ್ಲಿ, ಇವರ್ಯಾರ ಬುಡವೂ ಅಲುಗಾಡದಷ್ಟು ಗಟ್ಟಿ ಇರಲಿಲ್ಲ ಎನ್ನುವುದು ಸ್ಪಷ್ಟ. ಆದರೂ, ಇಂಗ್ಲಿಷಿನ ಕುರುಡುವ್ಯಾಮೋಹಕ್ಕೆ ಬಿದ್ದು, ಅದು ದಯಪಾಲಿಸುವ ಕೃತಕವ್ಯಕ್ತಿತ್ವವನ್ನು ಹೇರಿಕೊಂಡು ಚರ್ಚೆಯಲ್ಲಿ ಗಂಭೀರವಾಗಿ ಪಾಲ್ಗೊಂಡಿದ್ದರು.
ನಿರ್ಣಾಯಕನ ಕೆಲಸ ಮಾಡುತ್ತಲೇ, ಈ ದೇಶ ಎತ್ತ ಸಾಗುತ್ತಿದೆ ಎಂದು ಮನಸ್ಸಿನ ಮೂಲೆಯಲ್ಲಿ ಯೋಚಿಸುತ್ತಾ ಕುಳಿತಿದ್ದೆ. ನನ್ನ ಯೋಚನೆ ಕನ್ನಡವನ್ನು ಪಾರು ಮಾಡುವುದು ಹೇಗೆ ಎಂಬುದರ ಬಗ್ಗೆ ಖಂಡಿತಾ ಇರಲಿಲ್ಲ. ಕನ್ನಡ ಹೇಗೋ ಬದುಕಿಕೊಳ್ಳುತ್ತದೆ. ಬೆಂಗಳೂರಂಥ ನಗರದಲ್ಲಿ ಅಲ್ಲವಾದರೂ ಬಾಳೆಹೊನ್ನೂರಂತಹ ಸಣ್ಣಪಟ್ಟಣದಲ್ಲಿ, ಕಲ್ಹತ್ತಿಯಂತಹ ಹಳ್ಳಿಯಲ್ಲಿ ಅದನ್ನು ಎತ್ತಿಮುದ್ದಾಡಿಸಿ ರಕ್ಷಿಸುವ ಕನ್ನಡಿಗರು ಇದ್ದೇ ಇರುತ್ತಾರೆ. ನನ್ನ ದುಗುಡವೇನಿದ್ದರೂ ನಾವು ನಮ್ಮ ಸುತ್ತ ಕಟ್ಟಿಕೊಳ್ಳುವ ಕೃತಕತೆಯ ಕೋಟೆಯ ಬಗ್ಗೆ, ಪೊಳ್ಳು ಪರ್ಸನಾಲಿಟಿಯ ಬಗ್ಗೆ, ಹೊಂಚುಹಾಕುವ ಪರಕೀಯ ಹಗ್ಗಗಳನ್ನು ಬಿಗಿದಪ್ಪಿ ಕೊರಳಿಗೆ ಸುತ್ತಿಕೊಳ್ಳುವುದರ ಬಗ್ಗೆ. ಇವತ್ತು ವೇದಿಕೆಯಲ್ಲಿ ಮೇಜು ಗುದ್ದಿ ವಾದ ಮಂಡಿಸಿದ ಹುಡುಗರಲ್ಲಿ ಬಹಳಷ್ಟು ಮಂದಿ, ಫೇಸ್‍ಬುಕ್‍ನಲ್ಲಿ ಬರೆದುಕೊಳ್ಳುವುದೇ ಸಾಹಿತ್ಯ, ಬಾಲಿವುಡ್‍ನಿಂದ ಬರುವುದೇ ಸಂಗೀತ ಎನ್ನುವ ಭ್ರಮೆಯಲ್ಲಿ ಇರುವವರು. ಐಐಎಮ್‍ಗಳಿಗೆ ತಯಾರಿ ಮಾಡುವಾಗಲೂ, ಅವರು ಕಲಿಯಬೇಕಾದ್ದೇನು? ಹೆಚ್ಚು ಶಬ್ದಗಳನ್ನು ಕಲಿ; ಯಾವ ಭಾವನೆಗೆ ಯಾವ ಶಬ್ದ ಹಾಕಿ ಮಾತಾಡುವುದು ಸೂಕ್ತ ಎನ್ನುವುದನ್ನು ನಿರ್ಧರಿಸು; ಕೊಟ್ಟ 300 ಶಬ್ದಗಳ ಪ್ಯಾರಾವನ್ನು ಎರಡೇ ನಿಮಿಷದಲ್ಲಿ ಓದಿ ಅರ್ಥೈಸಿಕೊಳ್ಳುವುದು ಹೇಗೆ ಎನ್ನುವುದನ್ನು ಪ್ರಾಕ್ಟೀಸ್ ಮಾಡು! ನಾಳೆದಿನ ಕೆಲಸಕ್ಕೆ ಸೇರಿದ ಮೇಲೆ, ಅತ್ಯಂತ ನಾಜೂಕಿನಿಂದ, ಬೆಣ್ಣೆಯಿಂದ ಕೂದಲು ತೆಗೆವ ಹಾಗೆ, ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವ ತತ್ವವನ್ನು ಪಾಲಿಸುವ ಹಾಗೆ ಈ-ಮೇಲ್‍ಗಳನ್ನು ಬರೆಯುವುದು ಹೇಗೆ? “ಕಾರ್ಪೋರೇಟ್” ವ್ಯಕ್ತಿತ್ವ ರೂಢಿಸಿಕೊಳ್ಳುವುದು ಹೇಗೆ? – ಇಂತಹ ಸಂಗತಿಗಳನ್ನೇ ಅತಿಮಹತ್ವದ್ದು ಎನ್ನುವಂತೆ ಇವರೆಲ್ಲ ಕಲಿಯುತ್ತಾ ಹೋಗುತ್ತಾರೆ. ಒಟ್ಟಲ್ಲಿ, ಬಾಷೆಯ ಮುಖವಾಡವನ್ನು ಹಾಕಿಕೊಂಡು ನಮ್ಮತನವನ್ನು ಕಳೆದುಕೊಳ್ಳುತ್ತಾ ಹೋಗುವುದು ಹೇಗೆ ಎನ್ನುವುದನ್ನು ನಾವು ಕಲಿಯುತ್ತೇವೆ! ಮತ್ತು ಇದಕ್ಕೆಲ್ಲ ನಮಗೆ ಬೇಕಾದ ಅತಿಮುಖ್ಯ ಸಂಗತಿ ಎಂದರೆ ಇಂಗ್ಲೀಷ್!
ಕಾರ್ಪೋರೇಟ್ ಜಗತ್ತಿನಲ್ಲಿ “ನ್ಯೂಟ್ರಲ್ ಆಕ್ಸೆಂಟ್” ಎಂಬ ವಿಚಾರ ಹೇಳಿಕೊಡುತ್ತಾರೆ. ತಮಿಳರವನು ಮಾತಾಡುವಾಗ ತನ್ನ ಇಂಗ್ಲಿಷ್‍ನಲ್ಲಿ ತಮಿಳಿನ ರಾಗ ಬರದಹಾಗೆ ಎಚ್ಚರ ವಹಿಸಬೇಕಂತೆ. ಪಂಜಾಬಿನ ಮುಂಡಾಹುಡುಗ ತನ್ನ ಇಂಗ್ಲಿಷಿನಲ್ಲಿ ಸರ್ದಾರ್ಜಿ ಸ್ಟೈಲ್ ತೋರಿಸಬಾರದಂತೆ. ಬಂಗಾಳಿ ಹುಡುಗಿ ತನ್ನ ಮಾತೃಭಾಷೆಯನ್ನು ಮಾತಾಡುವಂತೆ ನಾಲಗೆಯನ್ನು ತಿರುಚಿ ಇಂಗ್ಲಿಷ್ ಉಚ್ಚಾರಣೆ ಮಾಡಬಾರದಂತೆ. ನೀವ್ಯಾರೇ ಆಗಿರಿ, ಆದರೆ, ಇಂಗ್ಲಿಷ್ ಮಾತಾಡುವಾಗ, ನಿಮ್ಮ ಸ್ಥಳೀಯತೆಯ ಘಾಟು ಬರದಂತೆ ಎಚ್ಚರ ವಹಿಸಿ – ಎಂದು ಕಿವಿಮಾತು ಹೇಳುತ್ತಾರೆ. ಯಾರಾದರೊಬ್ಬ ತನ್ನ ವೈಯಕ್ತಿಕತೆ ಘಮ ಎದ್ದುಕಾಣುವ ಹಾಗೆ ಇಂಗ್ಲಿಷಿನಲ್ಲಿ ಮಾತಾಡುವಾಗ, ಅವನ ಸುತ್ತಲಿನವರು ಹೊರಗಡೆ ಮೆಚ್ಚುಗೆ ಸೂಚಿಸುತ್ತ ಒಳಗೆ ಮುಸಿಮುಸಿ ನಗುತ್ತ ಮುಖವಾಡಗಳನ್ನು ಭದ್ರವಾಗಿ ಹಾಕ್ಕೊಂಡು ನಿಂತಿರುತ್ತಾರೆ!
ನನಗ್ಯಾಕೋ ಇವೆಲ್ಲ ಅರ್ಥವಾಗುವುದಿಲ್ಲಪ್ಪ! ಈ ದೇಶದ ಹೊರಗೆ ಹೋದಾಗ, ಯುರೋಪಿನಲ್ಲಿ ಸುತ್ತಾಡಿದಾಗ, ಹತ್ತುಹಲವಾರು ದೇಶಗಳನ್ನು, ಅಲ್ಲಿಯ ಜನರನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಸ್ಪಷ್ಟವಾದ ವಿಚಾರ ಇದು – ಅವರ್ಯಾರೂ ನಮ್ಮಂತೆ ಇಂಗ್ಲಿಷಿನ ಹೊದಿಕೆಯೊಳಗೆ ಸೆಕೆಯಾದರೂ ಬಚ್ಚಿಟ್ಟುಕೊಳ್ಳುವ ಪೆದ್ದುತನ ತೋರುವುದಿಲ್ಲ. ಪೊಲೆಂಡಿನ ಜನ ಪೊಲಿಶ್ ಮಾತಾಡಿದಂತೆಯೇ ಇಂಗ್ಲೀಷಲ್ಲೂ ಹರಟುತ್ತಾರೆ. ಜರ್ಮನಿಯ ಜನ ಜರ್ಮನ್ ಆಡುವ ತಾಳ,ಲಯಗಳನ್ನೇ ಇಂಗ್ಲೀಷಿಗೂ ಬಳಸುತ್ತಾರೆ. ಇನ್ನು ಸ್ಪೇನ್, ಫ್ರಾನ್ಸ್, ಪೋರ್ತುಗಲ್‍ನಂತಹ ದೇಶದ ಜನ ಇಂಗ್ಲಿಷ್ ಎನ್ನುವ ಭಾಷೆಗೆ ಕವಡೆಯ ಕಿಮ್ಮತ್ತೂ ಕೊಡುವುದಿಲ್ಲ. ಬೇಕಾದರೆ, ನಮ್ಮ ಭಾಷೆ ಕಲಿತು ಮಾತಾಡಿ; ಕಷ್ಟವಾದರೆ ಡಿಕ್ಷನರಿ ಕೈಯಲ್ಲಿ ಹಿಡಿದುಕೊಂಡು ಅರ್ಥ ತಿಳಿದು ಅವೇ ಪದಗಳನ್ನು ಉಚ್ಚಾರಮಾಡಿ. ಸಂವಹನ ಬೇಕಾಗಿರುವುದು ನಿಮಗೆ, ನಮಗಲ್ಲ! – ಎಂದು ಎಂಥ ಧಿಮಾಕು ತೋರಿಸುತ್ತಾರೆ ಗೊತ್ತ! ಆದರೆ, ನಾವು ಭಾರತದ ಘನಪ್ರಜೆಗಳು ಮಾತ್ರ, ಅಮೆರಿಕನ್ ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಎನ್ನುತ್ತ ಹಗಲುರಾತ್ರಿ ಕನವರಿಸುವುದನ್ನು ನೋಡುವಾಗ ನಿಜವಾಗಿಯೂ ಕನಿಕರ ಹುಟ್ಟುತ್ತದೆ. ನಮಗೆ ಘನತೆ, ಆತ್ಮಗೌರವಗಳೇ ಇಲ್ಲವಾ ಎಂದು ಬೇಜಾರಾಗುತ್ತದೆ. ಹೊಳೆನರಸೀಪುರದಲ್ಲಿ ಶಾಲೆಗೆ ಹೋಗಿ, ಸಕಲೇಶಪುರದಲ್ಲಿ ಕಾಲೇಜು ಓದಿದವನು ಕೂಡ ತನ್ನ ಮೂರು ವರ್ಷದ ಮಗುವಿಗೆ, “ನೋಡು ಇದು ಲೇಡೀಸ್ ಫಿಂಗರ್; ಅದು ಬಿಟ್ಟರ್‍ಗಾರ್ಡ್; ಅಲ್ಲಿರೋದು ಜಾಕ್‍ಫ್ರೂಟ್” ಎಂದು ಓನಾಮ ಕಲಿಸುವುದನ್ನು ನೋಡಿದ್ದೇನೆ. ಯಾಕಪ್ಪ? ನಮ್ಮದೇ ಭಾಷೆಯಲ್ಲಿ ನಮ್ಮ ನೆಲದ ಹಣ್ಣುತರಕಾರಿಗಳನ್ನು ಬೆಂಡೇಕಾಯಿ, ಹಾಗಲಕಾಯಿ, ಹಲಸಿನಹಣ್ಣು ಎಂದರೆ ಅವು ನಾಚಿಕೆಯಿಂದ ಕೊಳೆತುಹೋಗುತ್ತವೆಯಾ?
ಇಷ್ಟೆಲ್ಲ ಉದ್ದಕ್ಕೆ ಬರೆಯುತ್ತಹೋದದ್ದು ಯಾಕೆಂದರೆ, ಮಗೂ, ನಿನಗೂ ಇಂತಹ ಸನ್ನಿವೇಶಗಳು ಬದುಕಿನಲ್ಲಿ ಬಹುಬೇಗ ಬಂದೇಬರುತ್ತವೆ. ಇನ್ನೆರಡುವರ್ಷ ಹೋದರೆ, ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುತ್ತಿ. ಅಥವಾ ಇನ್ನೂ ಕಲಿಯಬೇಕೆಂದು ಎಮ್‍ಬಿಯೇನೋ ಎಮ್‍ಟೆಕ್ಕೋ ಮಾಡುತ್ತಿ. ಅದೇನೆ ಆದರೂ, ಅಲ್ಲೆಲ್ಲ ಈ ಕೃತಕವ್ಯಕ್ತಿತ್ವದ ಗೂಬೆಗಳ ಜೊತೆ ಸಹಜೀವನ ನಡೆಸುವ ಅನಿವಾರ್ಯತೆ ಬಂದೇಬರುತ್ತದೆ. ಆಗೆಲ್ಲ, ನೀನು ನಿನ್ನ ಕನ್ನಡವನ್ನು ಕೀಳು ಎಂದಾಗಲೀ, ಇಂಗ್ಲೀಷೊಂದೇ ನಿನಗೆ ಮೋಕ್ಷ ದೊರಕಿಸಿಕೊಡುವ ಮೆಟ್ಟಿಲೆಂದಾಗಲೀ ಖಂಡಿತ ಭಾವಿಸಬಾರದು! ಕನ್ನಡಮಾಧ್ಯಮದಲ್ಲಿ ಕಲಿತ ಎಲ್ಲ ಹುಡುಗರಿಗೂ ಒಳಗೊಳಗೆ ಇರುವಂತೆ ನಿನಗೂ ಇಂಗ್ಲಿಷಿನ ಅಳುಕು ಮೊದಮೊದಲು ಇರಬಹುದು. ಆದರೆ, ಆ ಅಳುಕನ್ನು ಮೆಟ್ಟಿನಿಲ್ಲುವ ಪ್ರಯತ್ನದಲ್ಲಿ, ಇಂಗ್ಲೀಷನ್ನು ಕುರುಡಾಗಿ ಆಲಂಗಿಸುವುದಾಗಲೀ ಕನ್ನಡವನ್ನು ಅಸ್ಪೃಶ್ಯವೆನ್ನುವಂತೆ ಕಡೆಗಣಿಸುವುದಾಗಲೀ ಮಾಡಬಾರದು. ಇಂಗ್ಲೀಷನ್ನು ಚೆನ್ನಾಗಿ ಕಲಿತು ಅದರ ಭಯವನ್ನು ಮೆಟ್ಟಿನಿಲ್ಲು. ಆದರೆ, ಕನ್ನಡ ನಿನ್ನ ಮೊದಲ ತಾಯಿ ಎನ್ನುವ ಅಭಿಮಾನವನ್ನು ಹೃದಯದಲ್ಲಿ ಉಳಿಸಿಕೋ. ಒಂದು ಭಾಷೆ ನಮ್ಮತನವನ್ನು ಗಟ್ಟಿಮಾಡುವ ಕೆಲಸ ಮಾಡಬೇಕೇ ಹೊರತು, ನಮ್ಮೊಳಗನ್ನು ಅಲ್ಲಾಡಿಸಿ, ಪೊಳ್ಳು-ಸುಳ್ಳುಗಳನ್ನು ತುಂಬಿಸಿ, ನಮ್ಮನ್ನು ಅರಳೆಯ ಗೊಂಬೆಗಳನ್ನಾಗಿ ಮಾಡಬಾರದು ಎನ್ನುವ ಎಚ್ಚರ ನಿನ್ನಲ್ಲಿ ಸದಾ ಇರಲಿ.
ಅಶ್ವಿನ್, ನಾನು ಹೇಳುತ್ತಿರುವ ಮಾತುಗಳಲ್ಲಿ ಎಲ್ಲವೂ ನಿನಗೆ ಅರ್ಥವಾಗದೇ ಹೋಗಬಹುದು. ಆದರೆ, ಅರ್ಥೈಸಿಕೊಳ್ಳುವ ಸಾಮರ್ಥ್ಯ ನಿನಗಿದೆ ಎನ್ನುವ ಧಿಮಾಕಿನಿಂದ ಇವೆಲ್ಲವನ್ನೂ ಬರೆಯುತ್ತಾ ಹೋಗುತ್ತಿದ್ದೇನೆ! ಇಲ್ಲಿ ಬರೆದ ಸಾಲುಗಳು ಕೆಲವೊಮ್ಮೆ ವಿರೋಧಾಭಾಸಗಳ ಹಾಗೆಯೂ ಕಾಣಬಹುದು. ಒಂದು ಭಾಷೆಯನ್ನು ಒಲಿಸಿಕೋ, ಆದರೆ ಅದರಲ್ಲಿ ಕಳೆದುಹೋಗಬೇಡ – ಎನ್ನುವುದರ ಅರ್ಥ ಏನು ಎನ್ನುವ ಗೊಂದಲ ನಿನ್ನೊಳಗೆ ಮೂಡಬಹುದು. ಅಷ್ಟೆಲ್ಲ ಆಳದ ಚಿಂತೆಯನ್ನು ಈಗಲೇ ಮಾಡುವುದಕ್ಕೆ ಹೋಗಬೇಡ. ಸುಮ್ಮನೆ ಓದುತ್ತಾ ಹೋಗು, ಸಾಕು!
ಒಂದು ಭಾಷೆಯನ್ನು ಕಲಿಯುವುದು ಎಂದರೆ ಶಬ್ದಭಂಡಾರ ಹೆಚ್ಚಿಸಿಕೊಳ್ಳುವುದಲ್ಲ. ಭಾಷೆ ಕಲಿಯಲು, ಪ್ರವೀಣನಾಗಲು ವೊಕಾಬುಲರಿ ಖಂಡಿತವಾಗಿಯೂ ಬೇಕು, ನಿಜ. ಆದರೆ, ಭಾಷೆ ಎನ್ನುವುದು ಅದಕ್ಕಿಂತಲೂ ಆಚೆ ಸಂಭವಿಸುವ ಸಂಗತಿ. ಪ್ರತಿದಿನ ಐದೋ ಹತ್ತೋ ಹೊಸ ಶಬ್ದಗಳನ್ನು ಕಲಿಯುತ್ತ ಹೋಗು. ಆದರೆ, ಅದಕ್ಕಾಗಿ ಡಿಕ್ಷನರಿ ಹಿಡಿದುಕೊಂಡು ಕೂರಬೇಡ; ಒಳ್ಳೆಯ ಲೇಖಕರ ಪುಸ್ತಕಗಳನ್ನು ಪ್ರೀತಿಯಿಂದ ಓದತೊಡಗಿದರೆ, ಶಬ್ದಗಳು ಸದ್ದಿಲ್ಲದೆ ನಮ್ಮ ಗೆಳೆತನ ಬೆಳೆಸಿಕೊಳ್ಳುತ್ತವೆ.
ಭಾಷೆಯನ್ನು ಬಳಸುವಾಗ ಮುಜುಗರ ಬೇಡ. ನಿನ್ನ ಉಚ್ಚಾರದ ಶೈಲಿ ಬೇರೆಯಿದೆ ಎನ್ನುವ ಅಳುಕು ಬೇಡ. ಅಯ್ಯೋ, ನನಗೆ ಬರಾಕ್ ಒಬಾಮನ ಹಾಗೆ ಮಾತಾಡಲು ಆಗುತ್ತಿಲ್ಲವಲ್ಲ ಎನ್ನುವ ಹಪಹಪಿ ಬೇಡ! ನಿನ್ನತನಕ್ಕೆ ಹತ್ತಿರದ ಶೈಲಿಯಲ್ಲಿ ಮುಜುಗರವಿಲ್ಲದೆ ಹರಟು. ನಿನ್ನಲ್ಲಿ ಕೀಳರಿಮೆ ಹುಟ್ಟಿಸುವ ಗೆಳೆಯರಿಂದ ಇಂತಹ ಸಂದರ್ಭಗಳಲ್ಲಿ ದೂರವಿರುವುದು ಒಳ್ಳೆಯದು.300 ಶಬ್ದಗಳ ಪ್ರಬಂಧವನ್ನು ಎರಡು ನಿಮಿಷದಲ್ಲಿ ಓದುವುದು ಅಂತಹ ದೊಡ್ಡ ಸಾಧನೆಯೇನೂ ಅಲ್ಲ. ಅಂತಹ ಪಠ್ಯಭಾಗಗಳನ್ನು ಓದದೇ ಇದ್ದರೂ ಬೇಜಾರಿಲ್ಲ. ನಿನ್ನನ್ನು ಕ್ಷಣಕ್ಷಣಕ್ಕೆ ನಿಲ್ಲಿಸುವ, ನಿನ್ನ ವೇಗವನ್ನು ತಡೆಯುವ, ನಿಧಾನಿಸುವ, ಯೋಚನೆಗೆ ಹಚ್ಚುವ ಸಾಹಿತ್ಯವನ್ನು ಹೆಚ್ಚೆಚ್ಚು ಓದು. ಅದು ನಿನ್ನ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸುವುದರ ಜೊತೆಗೆ ನಿನ್ನ ವ್ಯಕ್ತಿತ್ವಕ್ಕೂ ಒಂದಷ್ಟು ತೂಕವನ್ನು ಜಮೆ ಮಾಡುತ್ತದೆ.
ಬುದ್ಧಿವಂತಿಕೆ ಎನ್ನುವುದು ಒಳಉಡುಪು ಇದ್ದಹಾಗಿರಬೇಕು ಅನ್ನುತ್ತಾರೆ. ಭಾಷೆಯ ಮೇಲಿನ ಜ್ಞಾನವೂ ಹಾಗೆಯೇ. ಇರಬೇಕು; ಆದರೆ ಪ್ರದರ್ಶನ ಮಾಡಲು ಹೋಗಬಾರದು! ನಿನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು, ಒಣಜಂಬ ತೋರಿಸಲು ಭಾಷೆಯನ್ನು ಎಂದಿಗೂ ಬಳಸಬೇಡ. ನನಗೂ ಗೊತ್ತು ಎನ್ನುವ ಪ್ರದರ್ಶನ ಮಾಡುವ ಬುದ್ಧಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಂಯಮ ನಿನಗೆ ಬರಲಿ.ಭಾಷೆಯಿಂದ ವ್ಯಕ್ತಿತ್ವವನ್ನು ಮುಚ್ಚಿಕೊಳ್ಳುವುದು ಸುಲಭ. ರಾಜಕಾರಣಿಗಳನ್ನು ನೋಡಿದರೆ ನಿನಗೇ ತಿಳಿಯುತ್ತದೆ. ಅವರ ಜೊತೆ ಅರ್ಧತಾಸು ಮಾತಾಡಿದರೂ, ಅದರಿಂದ ಹೆಕ್ಕಿ ತೆಗೆಯಬಹುದಾದ ಒಂದೆರಡಾದರೂ ವಿಷಯಗಳು ಇರುವುದಿಲ್ಲ! ಯಾವುದೇ ವಿಷಯವನ್ನು ಬಿಟ್ಟುಕೊಡದೆ, ಯಾವೊಂದು ವಿಷಯವನ್ನೂ ಚರ್ಚಿಸದೆ ಸುಮ್ಮನೆ ಕಾಲಹರಣ ಮಾಡುವ ಮಾತುಕತೆಯಿಂದ ಆಗುವ ಪ್ರಯೋಜನ ಏನು? ಸುಮ್ಮನೆ ಬಾಯಾಡಿಸಲು, ಗೊತ್ತಿಲ್ಲದ ವಿಷಯವನ್ನು ಹಿಗ್ಗಾಮುಗ್ಗಾ ಜಗ್ಗಾಡಲು ಭಾಷೆಯನ್ನು ಬಳಸುವುದು ಒಳ್ಳೆಯ ಲಕ್ಷಣವಲ್ಲ. ಭಾಷೆ ನಿನಗೆ ಗೋಸುಂಬೆತನವನ್ನು ಕಲಿಸದಿರಲಿ. ನಿನ್ನ ಕಾಲುಗಳನ್ನು ಸದಾ ನೆಲದ ಮೇಲಿಟ್ಟಿರಲಿ!
ಒಂದು ಭಾಷೆಯನ್ನು ಒಲಿಸಿಕೊಳ್ಳುವುದು ಎಂದರೆ, ಕೈಯಲ್ಲಿರುವದನ್ನೆಲ್ಲ ಬಿಟ್ಟು ಶರಣಾಗತನಾಗುವುದು ಎಂದಲ್ಲ. ಇಂಗ್ಲೆಂಡಿನ ಜನ ಬ್ರೇಕ್‍ಫಾಸ್ಟಿಗೆ ಪೋರಿಡ್ಜ್ ತಿನ್ನುತ್ತಾರೆ ಎನ್ನುವ ಮಾಹಿತಿ ನಮಗೆ ಗೊತ್ತಿರಬೇಕು ನಿಜ; ಆದರೆ, ಅದಕ್ಕಾಗಿ ನಮ್ಮ ನಾಸ್ಟಾದಲ್ಲಿ ಇಷ್ಟುದಿನ ಇರುತ್ತಿದ್ದ ಮಸಾಲೆ ದೋಸೆಯನ್ನು ತ್ಯಾಗ ಮಾಡಬಾರದು! ನನ್ನ ಮಗನಾಗಿ ನೀನು, ಕನ್ನಡತನವನ್ನು ಉಳಿಸಿಕೊಂಡು ಇಂಗ್ಲೀಷನ್ನು ಒಲಿಸಿಕೊಳ್ಳಬೇಕು ಎನ್ನುವುದೇ ನನ್ನ ಆಸೆ.
ಇಂಗ್ಲೀಷ್! ಅದೇನೂ ದೇವಲೋಕದಿಂದಿಳಿದ ಪಾರಿಜಾತವಲ್ಲ. ಇದೇ ಭೂಮಿಯಲ್ಲಿ ನಮ್ಮಂತದ್ದೇ ಜನರಿಂದ ರೂಪಿಸಲ್ಪಟ್ಟ ಭಾಷೆ ಅಷ್ಟೆ! ಐವತ್ತು ದಾಟಿದ ಮೇಲೆ ಬೇರೊಂದು ಭಾಷೆ ಕಲಿತು ಅದರಲ್ಲಿ ಸಾಹಿತ್ಯ ರಚನೆ ಮಾಡಿದವರು ಇರುವಾಗ, ಇದನ್ನು ಕಲಿಯುವುದೇನು ದೊಡ್ಡ ಕಷ್ಟವೇ? ಎಲ್ಲ ರಣೋತ್ಸಾಹ ಇಳಿದು ಶಸ್ತ್ರಗಳನ್ನು ಚೆಲ್ಲಿಕೂತ ಪಾರ್ಥನಿಗೆ ಕೃಷ್ಣ ಕೂಡ ಹೇಳಿಲ್ಲವೇ – JUST DO IT!
ನಿನ್ನ ಅಪ್ಪ.
ಚೆನ್ನಾಗಿ ಹೇಳಿದ್ದಿರಿ ಗುರುಗಳೇ!
ಧನ್ಯವಾದ
He is a reputed, respected Kannada Scholar. He teaches Kannada in a well-known college in Dakshina Kannada. Once he lamented before me saying that `it would be highly relieving if Kannada ceased to exist, seeing what these Kannada intellectuals and Kannada Channels have done to Kannada and Kannada culture.’ He continued in great pain that it was `Papa’ to wish like that but still he wanted to see his children move away from Kannada, totally poisoned by Kannada intellectuals, rulers and mediamen.