ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 11, 2015

2

ವಿಜ್ಞಾನ ಮತ್ತು ಕುಜ್ಞಾನ

‍ನಿಲುಮೆ ಮೂಲಕ

– ಡಾ| ಜಿ. ಭಾಸ್ಕರ ಮಯ್ಯ

ವಿಜ್ಞಾನವಿಜ್ಞಾನ ಮತ್ತು ಅಜ್ಞಾನ ಎಂಬ ಎರಡು ಪದಪುಂಜಗಳನ್ನು ನಾನು ಒಂದು ವಿಶೇಷ ಅರ್ಥದಲ್ಲಿ ಬಳಸುತ್ತಿದ್ದೇನೆ. ಇದು ಕಳೆದ ವರ್ಷ (1914) ಜನವರಿ 3ರಿಂದ 7ರ ತನಕ ಮುಂಬೈಯಲ್ಲಿ ನಡೆದ ‘ಇಂಡಿಯನ್ ಸೈನ್ಸ್ ಕಾಂಗ್ರೆಸ್ ಎಸೋಸಿಯೇಶನ್’ನ 102ನೆಯ ಅಧಿವೇಶನದಲ್ಲಿ ನಡೆದ ಚಿತ್ರ ವಿಚಿತ್ರ-ಚಮತ್ಕಾರಗಳ ಹಿನ್ನೆಲೆಯಲ್ಲಿ ನಾನು ವಿಜ್ಞಾನ ಮತ್ತು ಕುಜ್ಞಾನ ಎಂಬ ಪದಪುಂಜಗಳನ್ನು ಪ್ರಯೋಗಿಸುತ್ತಿದ್ದೇನೆ. ಕುಜ್ಞಾನವೆಂದರೆ ಅಜ್ಞಾನವಲ್ಲ; ಬದಲಿಗೆ ವಿಜ್ಞಾನದ ಮುಖವಾಡವನ್ನು ಧರಿಸಿರುವ, ರಾಜಕೀಯ ದುಷ್ಪ್ರೇರಣೆಯಿಂದ ಚಾಲ್ತಿಗೆ ಬಂದ, ಸಮಾಜದ ಪ್ರಗತಿಗೆ ಕಂಟಕವಾದ ಕೆಟ್ಟ ಜ್ಞಾನ.

ಪ್ರತಿ ವರ್ಷವೂ ಭಾರತೀಯ ವಿಜ್ಞಾನ ಸಮ್ಮೇಳನವು ನಡೆಯುತ್ತಿರುತ್ತದೆ. ಆದರೆ, ಹಿಂದೆಂದೂ ಇಲ್ಲದ ಮಹಾಪ್ರಚಾರ ಈ ಸಮ್ಮೇಳನದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದುದು ಮೀಡಿಯಾದ ವರ್ಗ ಚಾರಿತ್ರ್ಯದ ಒಂದು ಸಹಜ ಪ್ರಕ್ರಿಯೆ. ಈ ಸಮ್ಮೇಳನದ ಫಲಶೃತಿಯೆಂದರೆ ಇಡೀ ಜಗತ್ತಿನೆದುರು ಭಾರತ ಬೆತ್ತಲಾದುದು; ಹಾಸ್ಯಾಸ್ಪದವಾದುದು. ಇದಕ್ಕೆ ಕಾರಣ ವಿಜ್ಞಾನದ ಸಮ್ಮೇಳನದಲ್ಲಿ ವಿಜ್ಞಾನವನ್ನು ಕಿತ್ತೆಸೆದು ಅದರ ಸ್ಥಾನದಲ್ಲಿ ‘ಕುಜ್ಞಾನ’ಕ್ಕೆ ಪಟ್ಟಾಭಿಷೇಕ ಮಾಡಿದುದೇ ಆಗಿದೆ.

ಭಾಜಪವು ಸಮ್ಮೇಳನಕ್ಕೆ ಬಹಳ ಮುಂಚೆಯೇ “ವಿಜ್ಞಾನಿ (!) ಆನಂದ ಬೋಡಸ್” ಅವರು ಪ್ರಾಚೀನ ಭಾರತದ ವೈಮಾನಿಕ ಶಾಸ್ತ್ರದ ಬಗ್ಗೆ ಮಾತನಾಡಲಿರುವರೆಂದು ಪ್ರಚಾರ ಕೊಟ್ಟಿತ್ತು. ಸಹಜವಾಗಿಯೇ ವಿಶ್ವದ ದೃಷ್ಟಿ ಈ ಕಡೆಗೆ ಕೇಂದ್ರಿತವಾಗಿತ್ತು. ಆಶ್ಚರ್ಯವೆಂದರೆ, ಕ್ಯಾಲಿಫೋರ್ನಿಯಾದಲ್ಲಿ ನಾಸಾದ ಏಮ್ಸ್ ರಿಸರ್ಚ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ಡಾ| ರಾಮ್‍ಪ್ರಸಾದ್ ಗಾಂಧೀರ್‍ಮನ್ ಅವರು ‘ಬೋಡಸ್’ರವರ ವ್ಯಾಖ್ಯಾನದ ವಿರುದ್ಧ ಒಂದು ಪಿಟಿಶನ್ ಸಲ್ಲಿಸಿದ್ದರು.ಅದಕ್ಕೆ 220 ವಿಜ್ಞಾನಿಗಳು ಹಾಗೂ ಪ್ರೊಫೆಸರುಗಳು ಸಹಿ ಮಾಡಿದ್ದರು.ಭಾರತದಲ್ಲಿ ವಿಜ್ಞಾನ ಮತ್ತು ಪುರಾಣದ ‘ಕಿಚಿಡಿ’ ತಯಾರಾಗುತ್ತಿದೆ; ಇಂಥ ಕೆಟ್ಟ ಅಪವ್ಯಾಖ್ಯಾನಗಳನ್ನು ತಡೆಗಟ್ಟಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ತನ್ನ ಭಾಷಣದಲ್ಲಿ ಗಾಂಧೀರಮನ್ ಮೋದಿ ಭಾಷಣವನ್ನು ಉಲ್ಲೇಖಿಸಿದ್ದರು. ಉದಾ: ‘ಗಣೇಶನ ಆನೆ ತಲೆ ಪ್ರಾಚೀನ ಭಾರತದ ಪ್ಲಾಸ್ಟಿಕ್ ಸರ್ಜರಿ’. 102ನೇ ವಿಜ್ಞಾನದ ಸಮ್ಮೇಳನ ಘನಘೋರವಾಗಿ ಆರಂಭವಾಯಿತು.

ಸಮ್ಮೇಳನದಲ್ಲಿ ಮಹಾವಿಜ್ಞಾನಿ ಬೋಡಸ್ ವ್ಯಾಖ್ಯಾನದ ಸಾರಾಂಶವೇನು?

7000 ವರ್ಷಗಳ ಹಿಂದೆಯೇ ಭಾರದ್ವಾಜ ಮಹರ್ಷಿಗಳು ವೈಮಾನಿಕ ಶಾಸ್ತ್ರವೆಂಬ ಗ್ರಂಥವನ್ನು ಬರೆದಿದ್ದರು ಅದರಿಂದ ತಿಳಿದು ಬರುವ ಸಂಗತಿಯೆಂದರೆ – ಆ ಕಾಲದಲ್ಲಿ ವಿಮಾನಗಳು ಎಡಕ್ಕೂ ಬಲಕ್ಕೂ, ರಿವರ್ಸ್‍ಗೇರಿನಲ್ಲೂ ಸಂಚರಿಸುತ್ತಿದ್ದವು. ಈ ವಿಮಾನಗಳು ಗ್ರಹಗಳಿಂದ ಗ್ರಹಗಳಿಗೆ ಸಂಚರಿಸುತ್ತಿದ್ದವು.

ಅಂದು ಟಿ.ವಿ. ಚಾನಲ್‍ಗಳು ಈ ಪ್ರಸಂಗಕ್ಕೆ ಎಂಥ ಕವರೇಜ್ ಕೊಟ್ಟವೆಂದರೆ ರಮಾನಂದ ಸಾಗರರ ರಾಮಾಯಣದ ವಿಮಾನಗಳನ್ನು ಎಲ್ಲಾ ಚಾನಲ್ಲುಗಳು ಹಾರಿಸಿದ್ದೇ ಹಾರಿಸಿದ್ದು. 7ನೇ ಕ್ಲಾಸಿನವರೆಗೆ ಶಿಕ್ಷಣ ಪಡೆದವನು ತನ್ನ ಶಿಕ್ಷಣವನ್ನು ಚೆನ್ನಾಗಿ ಜೀರ್ಣಮಾಡಿಕೊಂಡಿದ್ದರೆ ಆತನಿಗೆ 7000 ವರ್ಷಗಳ ಹಿಂದೆ ಮನುಷ್ಯ ಶಿಲಾಯುಗದಲ್ಲಿದ್ದ ಎಂಬ ಸಂಗತಿ ಸ್ಪಷ್ಟವಾಗುತ್ತಿತ್ತು. ಆದರೆ, ಇಂದು ಭಾರತದ ಬಹುತೇಕ ವಿಜ್ಞಾನಿಗಳು ಮತ್ತು ವಿಜ್ಞಾನದ ಪ್ರಾಧ್ಯಾಪಕರು ನಿಜವಾದ ಅರ್ಥದಲ್ಲಿ ಏಳನೆಯ ಕ್ಲಾಸ್‍ನ್ನೂ ಪಾಸು ಮಾಡಿಲ್ಲ. ಇದನ್ನೆಲ್ಲಾ ಭಾರತದ ಬಲಪಂಥೀಯ ರಾಜಕೀಯ ಚೆನ್ನಾಗಿಯೇ ಎನ್‍ಕ್ಯಾಶ್ ಮಾಡಿಕೊಳ್ಳುತ್ತಿದೆ, ಮಾತ್ರವಲ್ಲದೆ ಇಂಥ ಕುಜ್ಞಾನಕ್ಕೆ ಗೊಬ್ಬರ ನೀರು ಸುರಿಯುತ್ತಲೇ ಇದೆ.

ಇಷ್ಟಕ್ಕೂ ಬೋಡಸನ ‘ವೈಮಾನಿಕ ಶಾಸ್ತ್ರ’ 7000 ವರ್ಷಗಳ ಹಿಂದೆ ಬರೆದುದಲ್ಲ. ಏಕೆಂದರೆ, ಆ ಕಾಲದಲ್ಲಿ ಬೆತ್ತಲೆ ತಿರುಗುವ ಕಾಡುಮನುಷ್ಯರಿಗೆ ಹೊಟ್ಟೆ ಮತ್ತು ಜೀವ ರಕ್ಷಣೆಯ ಪ್ರಶ್ನೆ ಮಾತ್ರವಿತ್ತು. ಆದರೆ ನಿಜ ಸಂಗತಿಯೆಂದರೆ ಇದನ್ನು ಬರೆದುದು 1900 ರಿಂದ 1922ರ ಅವಧಿಯಲ್ಲಿ ಪಂಡಿತ ಸುಬ್ಬರಾವ್ ಶಾಸ್ತ್ರಿಗಳು. ಈ ವಿಚಾರವನ್ನು 1974ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಇದರಲ್ಲಿ ಕೆಲಸ ಮಾಡುತ್ತಿದ್ದ ಏರೋಸ್ಪೇಸ್ ವಿಜ್ಞಾನಿ ಎಚ್. ಎಮ್. ಮುಕುಂದ ರಾವ್ ಮತ್ತವರ ಸಂಗಡಿಗರು ಮಾಡಿದ ಸಂಶೋಧನೆ ಹೊರಗೆಡಹದೆ ಇದರ ವಿವರ “ಕ್ರಿಟಿಕಲ್ ಸ್ಟಡಿ ಆಫ್ ದಿ ವರ್ಕ್ ವೈಮಾನಿಕ ಶಾಸ್ತ್ರ” ಎಂಬ ಹೆಸರಿನಲ್ಲಿ “ಸೈಂಟಿಫಿಕ್ ಓಪೀನಿಯನ್” ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆದರೆ, ಈ ಯಾವ ವಿಚಾರಗಳೂ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಕಟವಾಗುವುದಿಲ್ಲ; ಏಕೆಂದರೆ ಮಾಧ್ಯಮಗಳು ಜನರ ಮನೋಮಟ್ಟವನ್ನು ಶಿಲಾಯುಗದೆಡೆಗೆ ಕೊಂಡೊಯ್ಯಲು ಬೋಡಸ್ ಮತ್ತು ಮೋದಿಯವರೊಂದಿಗೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿವೆ.

ಇಂಥ ‘ಕುಜ್ಞಾನ’ದ ಗೋದಾಮಿನಲ್ಲಿರುವ ಇನ್ನಿತರ ವಿಚಾರಗಳು ಹೀಗಿವೆ:- ಗಾಂಧಾರಿ ಹೊಟ್ಟೆ ಹೊಸಕಿ ಉದುರಿಸಿದ ನೂರು ಭ್ರೂಣಗಳನ್ನು ಘೃತಕುಂಭದಲ್ಲಿಟ್ಟು ಬೆಳೆಸಿದ ಪುರಾಣದ ಮಿಥ್‍ನ್ನು ಆಧರಿಸಿ ಟೆಸ್ಟ್ ಟ್ಯೂಬ್ ಬೇಬಿ ವಿದ್ಯೆ ಪ್ರಾಚೀನರಿಗೆ ತಿಳಿದಿತ್ತು ಎನ್ನುವುದು ಇನ್ನೊಂದು ದೊಡ್ಡ ಕುಜ್ಞಾನ. ವೇದದಲ್ಲಿ ಗಣಿತ ಪರಾಕಾಷ್ಠೆಗೆ ತಲುಪಿತ್ತು ಎಂದು ಸಾಧಿಸುವ ನೂರಾರು Vedic Mathametics ಗ್ರಂಥಗಳು ಇಂದು ಮಾರುಕಟ್ಟೆಯಲ್ಲಿವೆ. ವೇದ ಸಂಹಿತೆಗಳಲ್ಲಿ ಗಣಿತ ಇಲ್ಲವೇ ಇಲ್ಲ. ಹಾಗಿದ್ದಲ್ಲಿ ಇದು ಎಲ್ಲಿಂದ ಬಂತು? ಅದರ ಜನಕ ಪುರಿಯ ಗೋವರ್ಧನ ಮಠದ ಶಂಕರಾಚಾರ್ಯ ಸ್ವಾಮಿ ಶ್ರೀ ಭಾರತೀಕೃಷ್ಣ ತೀರ್ಥಜೀ ಮಹಾರಾಜ್. 1925ರಿಂದ ವೇದ ಗಣಿತದ ಹೆಸರಿನಲ್ಲಿ ಆ ಸ್ವಾಮೀಜಿ ಅಲ್ಲಲ್ಲಿ Black Board demonstrationsಗಳನ್ನು ಕೊಡುತ್ತಿದ್ದರು. ಅದು 1965ರಲ್ಲಿ ಡಾ| ಎ.ಎಸ್. ಅಗರವಾಲ್ ಸಂಪಾದಕತ್ವದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಅದುವೇ ಈ ವೇದಗಣಿತದ ಮೂಲ. ದಕ್ಷಿಣಕನ್ನಡದಲ್ಲಿ ಭೂತಗಳ ಮೇಲೆ ಹಲವರು ಪಿಎಚ್.ಡಿ. ಪಡೆದ ಹಾಗೆ ವೇದದಲ್ಲೂ ತಮ್ಮದೇ ಗಣಿತ ಹುಡುಕಿ ತೆಗೆದು ಹಲವರು ಡಾಕ್ಟರೇಟ್ ಪಡೆದರು.

ವಾಲ್ಮೀಕಿ ರಾಮಾಯಣದಲ್ಲಿ ಪುಷ್ಪಕ ವಿಮಾನವನ್ನು ಕತ್ತೆಗಳು ಎಳೆಯುತ್ತಿದ್ದವು ಎಂಬ ವಿವರ ಸಿಗುತ್ತದೆ. ಆದರೆ ಅದನ್ನೆಲ್ಲಾ ಓದುವ ಗೊಡವೆ ಈ ಕುಜ್ಞಾನಿಗಳಿಗಿಲ್ಲ.

ಇನ್ನೊಂದೆಡೆ ಪರಂಪರಾಗತ ಕೆಲಸವನ್ನು ಶ್ರೇಷ್ಠವೆನ್ನುತ್ತ ಮಲಹೊರುವುದು ಆಧ್ಯಾತ್ಮಿಕ ಕೆಲಸವೆನ್ನುವುದು,ವಿದೇಶೀ ರಾಷ್ಟ್ರಗಳ ಪ್ರತಿನಿಧಿಗಳಿಗೆ ಭಗವದ್ಗೀತೆಯನ್ನು ನೆನಪಿನ ಕಾಣಿಕೆಯಾಗಿ ನೀಡುವುದು, ಸಂಸತ್‍ನಲ್ಲಿ ಗೀತೆಯನ್ನು ರಾಷ್ಟ್ರೀಯಗ್ರಂಥ ಮಾಡಲು ಮಾತನಾಡುವುದು, ಲವ್ ಜಿಹಾದ್, ಘರ್ ವಾಪಸಿ ಮುಖೇನ ಸಮುದಾಯಗಳ ನಡುವೆ ಘರ್ಷಣೆ ಮಾಡಿಸುವುದು, ಭಾರತೀಯ ವಿಜ್ಞಾನಿಗಳಿಂದ ಪುರಾಣಗಳಿಗೆ ಹೊಸ ವೈಜ್ಞಾನಿಕ ಭಾಷ್ಯ ಬರೆಸುವುದು ಇಂದಿನ ರಾಜಕೀಯ ಪ್ರೇರಿತ ಕುಜ್ಞಾನದ ಕರಾಮತ್ತು.

ಬಂಡವಾಳಶಾಹಿ ವ್ಯವಸ್ಥೆಯ ಒಂದು ಅತ್ಯಂತ ಪ್ರಮುಖ ಸ್ಥಂಭ ಮಾಧ್ಯಮ. ಅದು ತನ್ನ ಧಾರಾವಾಹಿಗಳ ಮೂಲಕ, ವಾರ್ತೆಗಳ ಮೂಲಕ, ನಾನಾ ಬಗೆಯ ಜ್ಯೋತಿಷ್ಯ ವಾಸ್ತುವಿನ ಮೂಲಕ ಹಗಲೂ ರಾತ್ರಿ ಅಸ್ವತಂತ್ರ ಭಾರತದ ನಾಗರಿಕರನ್ನು ಶಿಲಾ ಯುಗದೆಡೆಗೆ ಕೊಂಡೊಯ್ಯುಲು ‘ಭಗೀರಥ’ ಪ್ರಯತ್ನ ಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಮೌಢ್ಯ ವಿರೋಧಿ ಕಾನೂನನ್ನು ಜಾರಿಗೊಳಿಸಲು ಒತ್ತಾಯಿಸುತ್ತಿರುವ ವಿಚಾರವಾದಿಗಳು ಈಗ ಸಾಕಷ್ಟು ರಾಜಿ ಸೂತ್ರವನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಇತ್ತೀಚೆಗೆ ನಿಡುಮಾಮಿಡಿ ಮಠದಲ್ಲಿ ದಿನವಿಡೀ ನಡೆದ ವಿಚಾರವಾದಿಗಳ ಚರ್ಚೆಯಿಂದ ಸ್ಪಷ್ಟವಾಗುತ್ತದೆ. ಅವರು ಫಲಜ್ಯೋತಿಷ್ಯವನ್ನು ಕಾನೂನು ಬಾಹಿರವೆಂದು ಹೇಳಲು ಧೈರ್ಯ ಮಾಡುವುದಿಲ್ಲ; ಬದಲಿಗೆ ಫಲಜ್ಯೋತಿಷ್ಯದಿಂದ ಹಾನಿಗೊಳಗಾದವರಿಗೆ ನಷ್ಟ ಪರಿಹಾರದ ಬಗ್ಗೆ ಮಾತನಾಡುತ್ತಾರೆ. ಫಲಜ್ಯೋತಿಷ್ಯ ಒಂದು ದೊಡ್ಡ ಕುಜ್ಞಾನ. ಇದನ್ನು ಇಟ್ಟುಕೊಂಡು ಕಾನೂನು ಮಾಡುವುದೆಂದರೆ ಹೆಗ್ಗಣವನ್ನು ಗೋಣಿಚೀಲದಲ್ಲಿಟ್ಟು ಬಾಯಿ ಕಟ್ಟಿದಂತೆ. ಆಶ್ಚರ್ಯವೆಂದರೆ ಇನ್ನು ‘ನಂಬಿಕೆಯನ್ನು ಪ್ರಶ್ನಿಸಬಾರದು’ ‘ಮೂಢನಂಬಿಕೆಗಳನ್ನು ಅದರಲ್ಲೂ ಸಮಾಜಕ್ಕೆ ಹಾನಿಯುಂಟು ಮಾಡುವ ಮೂಢನಂಬಿಕೆಗಳನ್ನು ಕಾನೂನಿನ ಚೌಕಟ್ಟಿನ ಒಳಗೆ ತರಬೇಕು’. ಹಾಗಿದ್ದರೆ, ನಂಬಿಕೆಗೂ ಮೂಢನಂಬಿಕೆಗೂ ಏನು ವ್ಯತ್ಯಾಸ? ಎಲ್ಲಾ ನಂಬಿಕೆಗಳೂ ಮೂಢನಂಬಿಕೆಗಳೇ. ‘ನಂಬಿಕೆ’ ಎಂದರೆ ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂಬುದನ್ನು ಆ ಶಬ್ದವೇ ಹೇಳುತ್ತದೆ. ಅದಕ್ಕೆ ಇನ್ನೊಂದು ‘ಮೂಢ’ ಎಂಬ ವಿಶೇಷಣದ ಅಗತ್ಯ ಏನಿದೆ? ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತಹ ನಿಲುವನ್ನು ತಾಳಿರುವವರು ಈ ಸಮಾಜದ ಮುನ್ನೆಡೆಗೆ ವಿಜ್ಞಾನದ ಬಾವುಟವನ್ನು ಹೇಗೆ ತಾನೆ ಎತ್ತಿ ಹಿಡಿದಾರು?

ನಿಡುಮಾಮಿಡಿಯವರು ಮಠಸಂಸ್ಕೃತಿಯಿಂದ ಮೇಲೆದ್ದ ದೊಡ್ಡ ವೈಚಾರಿಕ ವ್ಯಕ್ತಿತ್ವವನ್ನುಳ್ಳವರು ಎಂಬಲ್ಲಿ ಯಾವ ಸಂಶಯವೂ ಇಲ್ಲ. ನಾಡು ಹೆಮ್ಮೆ ಪಡೆಯಬಹುದಾದ ವ್ಯಕ್ತಿತ್ವ ಅವರದು. ಆದರೆ, ಅವರ ‘ಕಾವಿ’ಯೇ ಒಂದು ಮೌಢ್ಯವಲ್ಲವೆ? ಈ ದೇಶಕ್ಕೆ ‘ಕಾವಿ’ಗಳು ಲಾಗಾಯ್ತಿನಿಂದ ಅಂಟಿದ ಕಾಯಿಲೆ. ಅದು ಎಂಡೆಮಿಕ್ ಆಗಿ ಹರಡುತ್ತಿರುವ ವೈರಸ್ಸು. ಈ ವೈರಸ್ಸು ಎಲ್ಲಾ ಜಾತಿಗಳಲ್ಲೂ ಹೊಸ ಹೊಸ ಪೀಠಾಧಿಪತಿಗಳೆಂಬ ಗ್ಯಾಂಗ್ರೇನನ್ನು ಸೃಷ್ಟಿಸಿವೆ ಹಾಗೂ ಸೃಷ್ಟಿ ಮಾಡುತ್ತಲೇ ಇವೆ.

ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೇಳಲು ನಿಜಕ್ಕೂ ನಾಚಿಕೆಯಾಗುತ್ತದೆ. ದಸರಾ ಹೆಸರಿನಲ್ಲಿ ‘ರಾಜವಂಶ’ವನ್ನು ಈ ಬಗೆಯಲ್ಲಿ ವೈಭವೀಕರಿಸುವ ಹುಚ್ಚರು, ಮಾನಗೇಡಿಗಳು ಸರಕಾರದಲ್ಲಿದ್ದಾರೆ, ಮಾಧ್ಯಮಗಳಲ್ಲಿದ್ದಾರೆ ಎಂದರೆ ಈ ಜನ ಶಿಲಾಯುಗದಲ್ಲಿರುವ ‘ಸಮಾನತೆ’ಗೂ ಯೋಗ್ಯರಲ್ಲ.

‘ಅಜ್ಞಾನ’ ಮತ್ತು ‘ಕುಜ್ಞಾನ’ಗಳ ಪ್ರೇತ ಕುಣಿತದಲ್ಲಿ ಸುತ್ತಲೂ ಕಗ್ಗತ್ತಲೂ ಆವರಿಸಿದೆ. ಈ ದೇಶದಲ್ಲಿ ವಿಜ್ಞಾನದ ಸೂರ್ಯ ಎಂದು ಮೂಡುತ್ತಾನೋ ಯಾರು ಬಲ್ಲರು?

ಚಿತ್ರಕೃಪೆ : pttse.com

2 ಟಿಪ್ಪಣಿಗಳು Post a comment
  1. aryaan
    ನವೆಂ 11 2015

    ಅದೆ ಹಳಸಲು ಎಡಪಂಥಿಯ ಸುಳ್ಳಿನ ಸರಮಾಲೆ??

    ಉತ್ತರ
  2. Devu Hanehalli
    ನವೆಂ 12 2015

    Mr. Mayya, you are right. It is very dangerous to cook up and brandish another bunch of lies to counter a bunch of lies created by so-called progressives, leftists etc. Result is a stupid and self-destructive society.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments