ಅಸಹಿಷ್ಣುತೆ: ಕನ್ನಡ ಜನ-ಮನದ ದೃಷ್ಟಿ
ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ,
ಈಗೀಗ ಮಾಧ್ಯಮ ಚರ್ಚೆಗಳಲ್ಲಿ ನಮ್ಮ ಕಿವಿಗೆ ಮತ್ತೆ ಮತ್ತೆ ಬೀಳುತ್ತಿರುವ ಪದ ‘ಅಸಹಿಷ್ಣುತೆ’. ವಸಾಹತುಶಾಹಿಗಳ ಕಾಲದಿಂದ ಈ ಪದ ನಮ್ಮಲ್ಲಿ ಬಳಕೆಯಾಗುತ್ತಿದೆ. ಇಂಗ್ಲಿಷಿನ ‘ಇಂಟಾಲರನ್ಸ್’ ಎಂಬ ಪದಕ್ಕೆ ಇದನ್ನು ಸಂವಾದಿಯಾಗಿ ಬಳಸಲಾಗುತ್ತಿದೆ. ಒಂದು ರೀತಿಯಲ್ಲಿ ಇದು ಇಂಗ್ಲಿಷ್ ಪದದ ಅನುವಾದವಷ್ಟೇ ಅಲ್ಲ, ಯೂರೋಪಿನ, ಕ್ರಿಶ್ಚಿಯಾನಿಟಿಯ ಅಸಹಿಷ್ಣುತೆಯ ಪರಿಕಲ್ಪನೆಯ ಅನುವಾದವೂ ಹೌದು. ಇಂಟಾಲರನ್ಸ್ಗೆ ನಿಜವಾದ ಅರ್ಥ ‘ಅನ್ಯ ಧರ್ಮ, ಇತರರ ಅಭಿಪ್ರಾಯ ಮೊದಲಾದವುಗಳನ್ನು ಸೈರಿಸದಿರುವಿಕೆ’. ಕನ್ನಡ ಜನ-ಮಾನಸಕ್ಕೆ, ಇನ್ನೂ ವಿಸ್ತರಿಸಿ ಹೇಳುವುದಾದರೆ ಭಾರತೀಯ ಪಾರಂಪರಿಕ ಮನೋಧರ್ಮಕ್ಕೆ ಈ ಪರಿಕಲ್ಪನೆ ವಸಾಹತುವಿನಂತೆಯೇ ಹೊಸದು. ಯಾಕೆಂದರೆ ನಮ್ಮ ಪರಂಪರೆಯಲ್ಲಿ ಇರುವುದು ‘ಇಂಡಿಫರನ್ಸ್’ ಅಂದರೆ ತಮ್ಮ ಅಭಿಪ್ರಾಯ, ಮತ-ಸಂಪ್ರದಾಯಗಳಿಂದ ಬೇರೆಯಾದ ವಿಷಯದಲ್ಲಿ ತಾಟಸ್ಥ್ಯ. ಕನ್ನಡ ಜನ ಮನದ ದಾಖಲೆಗಳನ್ನು ಗಮನಿಸಿದಾಗ ಈ ಸಂಗತಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಎರಡು ಪದಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ. ಅಸಹಿಷ್ಣುತೆ ಎಂಬುದರ ಮೂಲ ಚೂಲವನ್ನು ತಿಳಿಯದೇ ಎಲ್ಲರೂ ಇದನ್ನು ಬಳಸತೊಡಗಿದ್ದಾರೆ. ಜನರ ನಿಜವಾದ ದೃಷ್ಟಿ ಧೋರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಇದು ಗೊಂದಲಕ್ಕೆ ಕಾರಣವಾಗುತ್ತದೆ. ಈಗ ಆಗಿರುವುದೂ ಇದೇ.
ಸಣ್ಣ ನಿದರ್ಶನ ನೋಡುವುದಾದರೆ ರಿಲಿಜನ್ ಎಂಬುದನ್ನು ಧರ್ಮ ಎಂದೂ ಮಾರಲ್ ಎಂಬುದನ್ನು ನೈತಿಕ ಎಂದೂ ಗಾಡ್ ಎಂಬುದನ್ನು ದೇವರು ಅನುವಾದಿಸಿದಂತೆಯೇ ಇಂಟಾಲರನ್ಸ್ ಎಂಬುದು ಅಸಹಿಷ್ಣುತೆಯಾಗಿ ನಮ್ಮಲ್ಲಿ ಚಾಲ್ತಿಗೆ ಬಂದಿದೆ. ನಿಜವಾಗಿ ಇವುಗಳ ಮೂಲಾರ್ಥವನ್ನು ಗಮನಿಸಿದರೆ ಇವೆಲ್ಲ ಪರಿಕಲ್ಪನಾತ್ಮಕವಾಗಿ ಬೇರೆಯೇ ಆಗಿವೆ ಎಂದು ತಿಳಿದು ಬರುತ್ತದೆ. ವಸಾಹತುಶಾಹಿ ಕಾಲದಲ್ಲಿ ಯೂರೋಪಿನ ವಿದ್ವಾಂಸರು, ಆಡಳಿತಗಾರರು ತಮ್ಮ ಆಡಳಿತಾನುಕೂಲಕ್ಕೆ ಸ್ಥಳೀಯ ಜನರ ಆಚಾರ ವಿಚಾರವನ್ನು ತಿಳಿಯಲು ಭಾಷೆ, ಆಚಾರ-ವಿಚಾರಗಳು ಹಾಗೂ ಜನಪದ ಸಾಮಗ್ರಿ ಸಂಗ್ರಹಣೆಗೆ ಮುಂದಾದಾಗ ತಮ್ಮ ಕ್ರಿಶ್ಚಿಯನ್ ಅನುಭವಕ್ಕೆ ಸರಿಹೊಂದುವಂತೆ ಕಂಡ ಸಂಗತಿಗಳನ್ನು ತಮ್ಮ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿದರು. ಆ ಪದಗಳನ್ನು ನಮ್ಮ ಭಾಷೆಗೆ ಮತ್ತೆ ತರುವಾಗ ಇವೆಲ್ಲ ತಮ್ಮೊಳಗೆ ಏನೇನನ್ನೋ ಅಡಗಿಸಿಟ್ಟುಕೊಂಡು ಏನೇನೋ ರೂಪಗಳನ್ನು ಪಡೆದು ಚಾಲ್ತಿಗೆ ಬಂದವು. ನಮಗೆ ಅಪರಿಚಿತವಾದ ಸಂಗತಿಯೊಂದನ್ನು ಮೊದಲ ಬಾರಿ ಕಂಡಾಗ ನಾವು ನಮಗೆ ಪರಿಚಿತ ಸಂಗತಿಯ ಹಿನ್ನೆಲೆಯಲ್ಲಿಯೇ ಅರಿತುಕೊಳ್ಳಲು ಮುಂದಾಗುತ್ತೇವೆ. ನಮ್ಮ ದೇಶದಲ್ಲಿ ಅಸಂಖ್ಯ ರೀತಿ, ಸಂಪ್ರದಾಯಗಳಿವೆ. ಬ್ರಾಹ್ಮಣ ಸಂಪ್ರದಾಯದ ಶವ ಸಂಸ್ಕಾರ ರೀತಿ ಪರಿಚಯವಿರುವಾತ ಸೋಲಿಗ ಅಥವಾ ಕಾಡುಗೊಲ್ಲರ ಅಥವಾ ಶೈವರ ಶವ ಸಂಸ್ಕಾರ ರೀತಿಯನ್ನು ಮೊದಲ ಬಾರಿ ಕಂಡಾಗ ಇದೇನು ಹೀಗೆ ಮಾಡುತ್ತಾರಲ್ಲಾ ಎಂದುಕೊಳ್ಳಬಹುದು. ಆತನಿಗೆ ಅದು ವಿಚಿತ್ರವಾಗಿ ಕಾಣಬಹುದು, ಇವರು ಸರಿಯಾದ ಕ್ರಮ ಅನುಸರಿಸುತ್ತಿಲ್ಲ ಅನಿಸಬಹುದು. ಆತ ಅದನ್ನು ತನ್ನದೇ ಶಬ್ದಗಳಲ್ಲಿ ಅರ್ಥಮಾಡಿಕೊಳ್ಳುತ್ತಾನೆ. ಎಲ್ಲ ಅಪರಿಚಿತ ರೀತಿ, ನೀತಿ, ಸಂಪ್ರದಾಯಗಳ ವಿಷಯದಲ್ಲೂ ಇದೇ ಮಾತು ಅನ್ವಯ. ಅರ್ಥವಾದರಷ್ಟೇ ಸಾಲದು. ತನ್ನ ಅಭಿಪ್ರಾಯದಲ್ಲಿ ಕಾಣಿಸುತ್ತಿರುವ ಗೊಂದಲದ ಕಾರಣವನ್ನು ಆತ ಪ್ರಾಮಾಣಿಕವಾಗಿ ಬೇರ್ಪಡಿಸಿ ನೋಡಲೂ ಸಿದ್ಧನಿರಬೇಕು ಹಾಗೂ ಇದೂ ‘ಒಂದು ರೀತಿ’ ಎಂದು ಭಾವಿಸಬೇಕು. ಭಿನ್ನ ಅಭಿಪ್ರಾಯ, ದೃಷ್ಟಿ ಇತ್ಯಾದಿಗಳ ವಿಷಯದಲ್ಲೂ ಇದೇ ಮಾತು ಅನ್ವಯ. ಅಸಹಿಷ್ಣುತೆಯ ಮಾತನ್ನು ಈ ದೃಷ್ಟಿಯಿಂದ ನೋಡಬಹುದು.
ಓಲ್ಡ್ ಟೆಸ್ಟಮೆಂಟ್ನಲ್ಲಿ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಎನ್ನುವಂತೆ ಇಂಟಾಲರನ್ಸ್ ಬಳಕೆಯಾಗುತ್ತಿತ್ತು. ಹದಿನೈದನೇ ಶತಮಾನದಲ್ಲಿ ಕೊಲಂಬಸ್ನ ಭೂಪಟ ಸಿದ್ಧವಾಗಿ ಪ್ರಪಂಚಾದ್ಯಂತ ವಸಾಹತುಗಳು ಸ್ಥಾಪನೆಯಾಗತೊಡಗಿದ ಮೇಲೆ ಇಂಟಾಲರನ್ಸ್ ಪರಿಕಲ್ಪನೆ ಯೂರೋಪಿನಲ್ಲಿ ವಿಶೇಷವಾಗಿ ಸಾಮಾಜಿಕವಾಗಿ ಕಾಣಿಸಿಕೊಳ್ಳತೊಡಗಿತು. ಇಂಟಾಲರನ್ಸ್ ಎಂಬುದು ಎಂಡುರನ್ಸ್ (ಸಹಿಸಿಕೋ) ಮತ್ತು ಫಾಟರ್ಿಟ್ಯೂಡ್ (ನೋವು, ಸೋಲುಗಳಲ್ಲಿ ಧೃತಿಗೆಡದಿರು) ಎಂಬ ಎರಡು ಪದಗಳ ಸಂಯೋಜನೆಯಿಂದ ಹುಟ್ಟಿದ ಪರಿಕಲ್ಪನೆಯಾಗಿದೆ. ಇದಕ್ಕೂ ಯೂರೋಪಿನ ಸಾಮಾಜಿಕ, ರಾಜಕೀಯ ಇತಿಹಾಸಕ್ಕೂ ನೇರ ಸಂಬಂಧವಿದೆ. ತಮಾಷೆ ಎಂದರೆ ಇಂಟಾಲರನ್ಸ್ ಪದ ಮೂಲತಃ ವೈದ್ಯಕೀಯ ಪರಿಭಾಷೆ. ಕಾಯಿಲೆ, ನೋವಿಗೆ ಮದ್ದು, ಗಾಯ ಚಿಕಿತ್ಸೆಗಳ ನೋವು ಸಹಿಸುವುದು ಇದರ ಅರ್ಥ! ಅದೇ ಅರ್ಥದಲ್ಲಿ ಈ ಪರಿಕಲ್ಪನೆಯನ್ನು ಬಯಾಲಜಿ, ಸೈಕಾಲಜಿ, ಸಾಮಾಜಿಕ, ರಾಜಕೀಯ, ಮಾಧ್ಯಮ, ರಿಲೀಜಿಯಸ್ ಹಾಗೂ ಎತ್ನಿಕ್ ವಿಷಯಗಳಲ್ಲಿಯೂ ಬಳಸಲಾಗುತ್ತದೆ. ಇಲ್ಲೆಲ್ಲ ಮೂಲತಃ ಕಾಣಿಸುವ ಅರ್ಥ ತನಗೆ ಕಷ್ಟವಾಗುತ್ತಿದ್ದರೂ ಒಟ್ಟಾರೆ ಸಹಿಸಿಕೊಳ್ಳುವುದು, ಸುಮ್ಮನಿರುವುದು ಎಂಬ ಅರ್ಥವೇ. ಇಲ್ಲಿ ಮಾತಿನ ಮೂಲಕ ಕೂಡ ಭಿನ್ನತೆಯನ್ನು ತೋರಿಸುವಂತಿಲ್ಲ! ಅಲ್ಲಿಂದ ಮುಂದೆ ಮಿಲ್ಟನ್, ವಾಲ್ಟೇರ್, ಸ್ಪಿನೋಜ ಮೊದಲಾದವರ ಚಿಂತನೆಯಿಂದ ಅದು ತಳೆದ ರೂಪವೇ ಬೇರೆ. ಆಗಲೂ ಅದು ರಿಲಿಜನ್ನಿನ ಹಿಡಿತದಿಂದ ತಪ್ಪಿಸಿಕೊಳ್ಳಲಿಲ್ಲ. ರಿಲೀಜನ್ನಿಗೂ ಫೇಯ್ತ್ ಹಾಗೂ ಇಂಟಾಲರನ್ಸ್ಗೂ ಅಷ್ಟು ನೇರ ಸಂಬಂಧವಿದೆ. ‘ರಿಲಿಜಿಯಸ್’ ಆಗಬೇಕಾದರೆ ರಿಲಿಜಿಯಸ್ ಅಲ್ಲದವರೊಂದಿಗೆ ಅಸಹಿಷ್ಣುತೆಯನ್ನು ತೋರಲೇ ಬೇಕಾಗುತ್ತದೆ. ಒಂದು ನಿರ್ದಿಷ್ಟ ರಿಲಿಜನ್ನಿನಲ್ಲಿರುವ ಬಲವಾದ ನಂಬಿಕೆ (ಫೈಯ್ತ್) ಮತ್ತು ಅಸಹಿಷ್ಣುತೆ (ಇಂಟಾಲರನ್ಸ್) ಗಳು ಒಂದೇ ನಾಣ್ಯದ ಎರಡು ಮುಖಗಳು. ಒಂದರ ಹೊರತು ಇನ್ನೊಂದು ಇರುವುದಕ್ಕೆ ಸಾಧ್ಯವೇ ಇಲ್ಲ. ರಿಲಿಜನ್ನಿನ ಸ್ವರೂಪದಲ್ಲಿಯೇ ಅಸಹಿಷ್ಣುತೆ ಎನ್ನುವುದು ಹೇಗೆ ಬೆಳೆದು ಬಂದಿದೆ ಮತ್ತು ಹೇಗೆ ಅವಶ್ಯಕತೆಯಾಗುತ್ತದೆ ಎಂಬುದನ್ನು ಐತಿಹಾಸಿಕ ಆಧಾರಗಳಿಂದ ಬಾಲಗಂಗಾಧರ್ ಅವರು ತೋರಿಸಿದ್ದಾರೆ (ಡು ಆಲ್ ರೋಡ್ಸ್ ಲೀಡ್ ಟು ಜೆರುಸಲೇಂ, 2014).
ವೈದ್ಯಕೀಯ ಪರಿಭಾಷೆಯ ಕೋಲ್ಡ್ ಇಂಟಾಲರನ್ಸ್, ಡ್ರಗ್ ಇಂಟಾಲರನ್ಸ್, ಫುಡ್ ಇಂಟಾಲರನ್ಸ್ ಮೊದಲಾದ ಅರ್ಥಗಳಿಗೂ ಈಗ ಬಳಕೆಯಾಗುತ್ತಿರುವ ಸಾಮಾಜಿಕ ಪರಿಕಲ್ಪನೆಯ ಹಿಂದೂ ಇಂಟಾಲರನ್ಸ್, ಮುಸ್ಲಿಂ ಇಂಟಾಲರನ್ಸ್ ಇತ್ಯಾದಿಗಳಿಗೂ ಗ್ರಹಿಕೆಯ ಅರ್ಥದಲ್ಲಿ ಏನೂ ವ್ಯತ್ಯಾಸವಿಲ್ಲ!
ಕನ್ನಡ ಜನ-ಮನದಲ್ಲಿ ಪಾರಂಪರಿಕವಾಗಿ ಇದೇ ಅರ್ಥವೇ ಇತ್ತೇ? ಎಂಬುದು ಸದ್ಯದ ಪ್ರಶ್ನೆ. ಉತ್ತರ-ಇಲ್ಲ. ಆದರೆ ವಸಾಹತುಗಳು ಬರುವ ಮುಂಚೆ ನಮ್ಮಲ್ಲಿ ಭಿನ್ನ ಮತದವರು ಪರಸ್ಪರ ಕಚ್ಚಾಡಿಕೊಳ್ಳಲಿಲ್ಲವೇ ಅಂದರೆ ಉತ್ತರ-ಹೌದು. ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳಲ್ಲಿ ವೀರಶೈವ ಮತದ ಚಳವಳಿ ತೀವ್ರವಾಗಿ ನಡೆದಿತ್ತು. ಜೈನ ಮತ್ತು ವೀರಶೈವ ಮತಗಳ ನಡುವೆ ಘರ್ಷಣೆಗಳೂ ನಡೆಯುತ್ತಿದ್ದವು. ವಿಜಾಪುರ ಜಿಲ್ಲೆಯ ತಾಳಿಕೋಟೆಯ ಶಾಸನದಲ್ಲಿ (ಪಗರಟಿಗೆ 300 ಹಾಗೂ ವಿರುಪರಸನ ಶಾಸನಗಳು) ಜೈನರ ರಕ್ತ ಕಕ್ಕಿಸಿದ, ನಾಲಗೆ ಕಿತ್ತ, ಚರ್ಮ ಸುಲಿದ, ಜೈನ ದೇಗುಲಗಳನ್ನು ನೆಲಸಮ ಮಾಡಿದ ವಿವರಗಳಿವೆ. (ಈ ಬಗ್ಗೆ ಹಂಪನಾ ಅವರ ಲೇಖನ ಗಮನಿಸಬಹುದು- ಜನ್ನ- ಒಂದು ಮರು ಚಿಂತನೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2008, ಪುಟ 1-10) ವೀರಶೈವರ ದಾಳಿಗೆ ಸಿಲುಕಿ ತತ್ತರಿಸಿದ ಜೈನರು ಉತ್ತರ ಭಾಗವನ್ನು ತೊರೆದು ದಕ್ಷಿಣದ ಹೊಯ್ಸಳರ ಆಶ್ರಯಕ್ಕೆ ಬಂದರು.
ಅಂದಿನ ಕಾಲಘಟ್ಟದಲ್ಲಿ ಗಂಡ ಹೆಂಡತಿ ಕೂಡ ಅನ್ಯ ಮತಾವಲಂಬಿಗಳಾಗಿದ್ದುಕೊಂಡು ಸಂಸಾರ ನಡೆಸುವ ಸಾಧ್ಯತೆಯೂ ಇತ್ತು. ಬ್ರಹ್ಮಶಿವನ ಸಮಯಪರೀಕ್ಷೆಯಲ್ಲಿ ಬರುವ ಪೆಂಡತಿ ಮಾಹೇಶ್ವರಿ ಗಡ! ಗಂಡಂ ಜೈನಂ ಗಡ! ಎಂಬ ಮಾತು ಹಾಗೂ ಸ್ವತಃ ಬಸವಣ್ಣನವರ ವಚನದಲ್ಲಿ ಬರುವ ಗಂಡ ಶಿವಲಿಂಗದೇವರ ಭಕ್ತ! ಹೆಂಡತಿ ಮಾರಿ ಮಸಣಿಯ ಭಕ್ತೆ ಎಂಬ ಸಾಲುಗಳು ಈ ಮಾತನ್ನು ಪುಷ್ಟೀಕರಿಸುತ್ತವೆ. ಸ್ವತಃ ಹೊಯ್ಸಳ ರಾಜ ವಿಷ್ಣುವರ್ಧನನ ತಂದೆ ಎರೆಯಂಗ, ತಾಯಿ ಏಚಲದೇವಿ. ತಮ್ಮ ಮೊದಲನೆಯ ಬಲ್ಲಾಳ. ಬಲ್ಲಾಳ ಪರಮ ಶಿವಭಕ್ತ, ವಿಷ್ಣುವರ್ಧನ ಜೈನನಾಗಿದ್ದು ನಂತರ ವೈಷ್ಣವನಾದನೆಂದೂ ಹೇಳುತ್ತಾರೆ. ವಿಷ್ಣುವರ್ಧನನ ಪತ್ನಿ ಶಾಂತಲೆಯ ತಂದೆ ಮಾರಸಿಂಗ ಶೈವ, ತಾಯಿ ಮಾಚಿಕಬ್ಬೆ ಜೈನ ಮತಾವಲಂಬಿ. ಇವರೇನೂ ಪರಸ್ಪರ ಹಿಂಸೆಗೆ ಇಳಿಯಲಿಲ್ಲ. ಒಂದೇ ಕುಟುಂಬದಲ್ಲಿ ಸಾಮರಸ್ಯದಿಂದ ಸಂಸಾರ ನಡೆಸುವ ಪರಿಸ್ಥಿತಿ ಇದ್ದ ಅಂದಿನ ಕಾಲದಲ್ಲಿ ಸಮಾಜದಲ್ಲಿ ಮಾತ್ರ ಸಮುದಾಯಗಳ ನಡುವೆ ಕಚ್ಚಾಟ ಆಗಾಗ ನಡೆಯುತ್ತಿತ್ತು. ಇವೆಲ್ಲ ಮತೀಯ ಮೇಲಾಟಗಳು. ಇಂಥ ಸಂದರ್ಭಗಳಲ್ಲಿ ಯಾರು ಏನಾದರೂ ಮಾಡಿಕೊಳ್ಳಲಿ, ನಮ್ಮ ಮಾರ್ಗ ನಮಗೆ ಅನ್ನುವ, ಅಂತಿಮವಾಗಿ ಆನಂದ ನೀಡುವ ಎಲ್ಲ ಮಾರ್ಗಗಳೂ ಒಂದೇ ಎನ್ನುವ ಔದಾರ್ಯವೇ ಇಲ್ಲಿ ಮರು ಸ್ಥಾಪನೆಯಾಗುತ್ತದೆ. ಬೇಲೂರಿನ ಶಾಸನವೊಂದು ಯಂ ಶೈವಾ ಸಮುಪಾಸತೇ ಶೀವ ಇತಿ ಬ್ರಹ್ಮೇತಿ ವೇಂದಾಂತಿನೋ; ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕತರ್ೇತಿ ನೈಯಾಯಿಕಾಃ; ಅರ್ಹನ್ನಿತ್ಯಥ ಜೈನ ಶಾಸನ ರತಾಃ ಕರ್ಮೇತಿ ಮೀಮಾಂಸಕಾಃ; ಸೋಯಂ ವೋ ವಿಧಧಾತು ವಾಂಛಿತ ಫಲಂ ಶ್ರೀಕೇಶವಸ್ಸದಾಃ ಎಂದು ಹೇಳುತ್ತದೆ. ಇದನ್ನು ಧಾರ್ಮಿಕ ಸಹಿಷ್ಣುತೆ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ ಇಲ್ಲಿನ ಧಾಟಿ ನಾಮ ರೂಪಗಳು ಬೇರೆ, ವಿಶ್ವಚೈತನ್ಯ ಒಂದೇ ಅನ್ನುತ್ತಿದೆ, ಒಬ್ಬೊಬ್ಬರ ಮಾರ್ಗ ಒಂದೊಂದು ಅನ್ನುತ್ತಿದೆಯೇ ವಿನಾ ಸಹಿಸಿಕೊಳ್ಳಿ ಅನ್ನುತ್ತಿಲ್ಲ. ಆದರೆ ಸಂದ ಶಿವಂಗೆ ವಿಷ್ಣು ರೂಪಮಾದುದು, ವಿಷ್ಣುವಿಗೆ ಶಿವರೂಪಮಾದುದು ಎಂಬಂಥ ಮಾತುಗಳೂ ಬರುತ್ತವೆ. ಇವು ನಾವು ನೀವೆಲ್ಲ ಒಂದೇ ಅನ್ನುತ್ತವೆಯೇ ‘ಎಷ್ಟೇ ಕಷ್ಟವಾಗಲಿ ಸಹಿಸಿಕೊಳ್ಳಿ’ ಅನ್ನುತ್ತಿಲ್ಲ.
‘ಸಹಿಸಿಕೊಳ್ಳುವ’ ಪ್ರಕ್ರಿಯೆಗೆ ಸಹನೆಯ ಮಿತಿಯನ್ನು ನಿಗದಿಮಾಡಲಾಗಿರುತ್ತದೆ. ಅದು ಮೀರಿದಾಗಲೇ ಅಸಹಿಷ್ಣುತೆಯ ಮಾತು ಬರುವುದು. ನಿಜವಾಗಿ ಕನ್ನಡ ಜನ ಮನದಲ್ಲಿ ಇಂಥ ‘ಮಿತಿ’ಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆಧುನಿಕ ಸಹಿಷ್ಣುತೆಯ ಮಾತಿಗೆ ಮಿತಿ ಎಲ್ಲಿದೆ? ಎಲ್ಲ ದೃಷ್ಟಿಯಲ್ಲೂ ಅಮೆರಿಕದ ಅನುಕರಣೆ ಮಾಡುವ ಇಂದಿನ ನಾವು ಸಹಿಷ್ಣುತೆಯಲ್ಲೂ ಅಮೆರಿಕದ ಮಾತನ್ನು ಒಪ್ಪಿ ಅಸಹಿಷ್ಣುತೆಯನ್ನು ಆ ದೃಷ್ಟಿಯಿಂದಲೇ ವ್ಯಾಖ್ಯಾನಿಸುತ್ತಿದ್ದೇವೆ. ಅಮೆರಿಕ ಏನು ಹೇಳಿದೆ? ‘ಮೇಕ್ ನೋ ಲಾ ರೆಸ್ಪೆಕ್ಟಿಂಗ್ ಆನ್ ಎಸ್ಟಾಬ್ಲಿಷ್ಮೆಂಟ್ ಆಫ್ ರಿಲಿಜನ್, ಆರ್ ಪ್ರಾಹಿಬಿಟಿಂಗ್ ದಿ ಫ್ರೀ ಎಕ್ಸ್ಸೈಸ್ ದೇರ್ಆಫ್’ ಅಂದರೆ ಚರ್ಚೆ ಮತ್ತು ಸರ್ಕಾರದ ನಡುವೆ ಅದು ಗೋಡೆ ನಿರ್ಮಿಸಿ, ‘ಎಲ್ಲಿಯವರೆಗೆ ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ’ ಇವನ್ನೆಲ್ಲ ಸಹಿಸಿಕೊಳ್ಳಲಾಗುತ್ತದೆ ಎಂದು ವ್ಯಾಖ್ಯಾನಿಸುತ್ತದೆ. ‘ರಾಷ್ಟ್ರದ ಹಿತ’ ಯಾವುದು? ಯಾವುದೆಲ್ಲ ಧಕ್ಕೆ ತರುತ್ತದೆ ಎಂಬುದು ಅಲ್ಲಿ ಸ್ಪಷ್ಟವಾಗಿದೆ. ಇದೇ ಸಹಿಷ್ಣುತೆಯ ಮಿತಿ. ನಮ್ಮಲ್ಲಿ? ಭಾಷೆ, ಜಾತಿ, ಮತ, ರಿಲಿಜನ್ನುಗಳ ಹೆಸರಿನ ಗಲಭೆಯನ್ನು ರಾಷ್ಟ್ರದ ಹಿತದ ದೃಷ್ಟಿಯಿಂದ ಇವುಗಳಿಗೆ ಮಿತಿ ಯಾವುದು ಎಂದು ವ್ಯಾಖ್ಯಾನವನ್ನೇ ಮಾಡಿಲ್ಲ! ಮಾತಿನ ಅಸಹನೆ, ಗಲಭೆ, ಹತ್ಯೆ ಯಾವ ಪ್ರಮಾಣದಲ್ಲಾದರೆ ಸಹಿಸಿಕೊಳ್ಳಬಹುದು ಎಂಬುದನ್ನೂ ಹೇಳಿಲ್ಲ. ಏನೇ ಮಾತಾಡಿದರೂ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಗೆ ಬರಬಹುದು! ಯಾವುದೇ ರೀತಿಯ ಗಲಭೆ ಅಸ್ತಿತ್ವದ ಹಕ್ಕಿನ ಹೋರಾಟ ಎನಿಸಿಕೊಳ್ಳಬಹುದು! ಯೂರೋಪ್ ಹಾಗೂ ಅಮೆರಿಕದಂಥ ಸಮಾಜದಲ್ಲಿ ಇವೆಲ್ಲ ಸ್ಪಷ್ಟವಾಗಿವೆ, ಕಟ್ಟುನಿಟ್ಟಾಗಿವೆ. ಹಾಗಾಗಿ ಅವರು ವ್ಯಾಖ್ಯಾನಿಸುವ ಸಹಿಷ್ಣುತೆ, ಅಸಹಿಷ್ಣುತೆಯ ವ್ಯಾಖ್ಯಾನ ನಮಗೆ ಅರ್ಥವಾಗಬಹುದು, ಅದನ್ನು ನಮ್ಮ ಸಂದರ್ಭದಲ್ಲಿಟ್ಟು ಹೋಲಿಸಿ ಚರ್ಚಿಸಬಹುದೇ ವಿನಾ ಸಾಂಪ್ರದಾಯಿಕವಾಗಿ ಇವು ಒಂದೇ ಆಗಿಲ್ಲ ಎಂಬುದನ್ನು ಗಮನಿಸಬೇಕೆಂದು ಸಂಸ್ಕೃತಿ ಕುರಿತು ಅಧ್ಯಯನ ಮಾಡುತ್ತಿರುವ ಎಂ ಎಸ್ ಚೈತ್ರ ಅಭಿಪ್ರಾಯಪಡುತ್ತಾರೆ. ಇದು ನಿಜ ಎನಿಸುತ್ತದೆ.
ಇನ್ನೂ ಒಂದು ಮಾತನ್ನು ಗಮನಿಸಬೇಕು. ನಮ್ಮ ಸುತ್ತಮುತ್ತ ಸದ್ಯ ನಡೆಯುತ್ತಿರುವ ವಿದ್ಯಮಾನವನ್ನು ಅವಲೋಕಿಸಿ. ಪ್ರಶಸ್ತಿ ವಾಪಸಾತಿಯಿಂದ ಹಿಡಿದು ಬಿಹಾರ ಫಲಿತಾಂಶದವರೆಗೆ ಹೊರಬಂದ ಕ್ರಿಯೆ-ಪ್ರತಿಕ್ರಿಯೆಗಳು ಅದು ಇಲ್ಲವೇ ಇದು ಐಡಿಯಾಲಜಿಯನ್ನೇ ಆಧರಿಸಿವೆ. ಟಿಪ್ಪೂ ವಿವಾದವೂ ಇಂಥ ಐಡಿಯಾಲಜಿಯ ಹೊರತಾಗಿಲ್ಲ. ಹೀಗಾಗಿಯೇ ಮೋದಿ ಸೋತರೆಂದು ಏನೇನೋ ತಿಂದೆ, ಕುಡಿದೆ ಎಂದು ಸಂಭ್ರಮಿಸುವುದು; ಮತ್ಯಾರೋ ಬಿಹಾರ ಫಲಿತಾಂಶ ನೋಡಿ ಜೀವನದಲ್ಲಿ ಇಷ್ಟು ಸಂತೋಷ ಎಂದೂ ಆಗಿರಲಿಲ್ಲ ಎನ್ನುವುದು-ಇವೆಲ್ಲ ತಮಗೇ ಗೊತ್ತಿಲ್ಲದೆ ತಮ್ಮನ್ನೇ ತಾವು ಐಡಿಯಾಲಜಿಗೆ ಮಾರಿಕೊಂಡಿದ್ದರ ಪರಿಣಾಮವೇ. ಇದಕ್ಕೂ ಸಹಿಷ್ಣುತೆ-ಅಸಹಿಷ್ಣುತೆಗಳಿಗೂ ನೇರ ಸಂಬಂಧವಿದೆ. ‘ಎಲ್ಲಿಯವರೆಗೆ ತಮ್ಮ ಐಡಿಯಾಲಜಿಗೆ ಮತ್ತೊಂದು ಅಡ್ಡಬರುವುದಿಲ್ಲವೋ ಅಲ್ಲಿಯವರೆಗೆ ನಾವು ಸಹಿಷ್ಣುಗಳು’ ಎಂಬುದೇ ಇಲ್ಲಿ ಅಸಹಿಷ್ಣುತೆಗೆ ಇರುವ ಮಿತಿ. ಆದರೆ ತಟಸ್ಥವಾಗಿರುವ, ಯಾವುದೇ ಪಕ್ಷದ ಕಾರ್ಯಕರ್ತರೂ ಯಾವುದೇ ಐಡಿಯಾಲಜಿಯ ಚಿಂತಕರೂ ಪ್ರತಿಪಾದಕರೂ ಅಲ್ಲದ, ತಮ್ಮ ಪಾಡಿಗೆ ತಾವು ಬದುಕು ಸಾಗಿಸುತ್ತಿರುವ ಜನಸಾಮಾನ್ಯರ ವರ್ತನೆ ನೋಡಿ. ಅವರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ, ಸಂಭ್ರಮಿಸುವುದೂ ಇಲ್ಲ, ದುಃಖಿಸುತ್ತ ಕಾಲ ಕಳೆಯುವುದೂ ಇಲ್ಲ. ಇಲ್ಲಿ ಸಹಿಷ್ಣುತೆ-ಅಸಹಿಷ್ಣುತೆಯ ಪ್ರಶ್ನೆಯೇ ಇಲ್ಲ. ಇಲ್ಲಿರುವುದು ‘ಅಯ್ಯೋ ಇವೆಲ್ಲ ನಡೆಯುತ್ತಿರುತ್ತೆ, ಯಾರೋ ಏನೋ ಹೇಳಿಕೊಳ್ತಾರೆ ಬಿಡಿ’ ಎನ್ನುವ ತಾಟಸ್ಥ್ಯ. ಜನಸಾಮಾನ್ಯರಲ್ಲಿರುವ ಈ ಗುಣ ದೇಶದ ಸಾಂಪ್ರದಾಯಿಕ ತಟಸ್ಥ ಮನೋಭಾವಕ್ಕೆ ನಿದರ್ಶನ. ಸದ್ಯ ನಮಗೆ ಬೇಕಾದುದು ಇದು.
ನಮ್ಮ ದೇಶದಲ್ಲಿ ಬಲವಾಗಿ ಹಬ್ಬಿರುವ ಮೂಢ ನಂಬಿಕೆಗಳು, ನಾವೇ ವಿನಾಕಾರಣ ಸೃಷ್ಟಿಸಿರುವ ಮುಕ್ಕೋಟಿ ದೇವತೆಗಳು, ಅರ್ಥವಿಲ್ಲದ ನಿರುಪಯೋಗಿಯಾದ ನೂರಾರು ಜಾತಿಗಳು, ಇವೆಲ್ಲವುಗಳು ನಾಶವಾಗದ ಹೊರತು ನಮ್ಮ ದೇಶ ಉದ್ಧಾರವಾಗುವುದು ಸಾಧ್ಯವೇ ಇಲ್ಲ.
ನೀವು ಉದ್ಧಾರವಾಗಲು ಮುಕ್ಕೋಟಿ ದೇವತೆಗಳು ಅಡ್ಡಿವುಂಟು ಮಾಡಿದ್ದಾರೆಯೇ?!!
ನೀವು ಎಂದಿರುವುದೇಕೆ? ದಯಮಾಡಿ ಕುಚೋದ್ಯ ನಿಲ್ಲಿಸಿ.
ತಮಗೆ ಧನ್ಯವಾದಗಳು!
ಹಾಗಾದರೆ ನೀವು ಉದ್ಧಾರವಾಗಲು ಯಾವ ದೇವರ ಹಿಂದೆ ಹೋಗಿದ್ದೀರಿ ಅನಾಮಧೇಯರೇ?! ನನಗೆ ನನ್ನ ಮೆದುಳೇ ಸರಸ್ವತಿ, ನನ್ನ ವೇತನವೇ ಲಕ್ಷ್ಮಿ. ನಾನು ಯಾವ ದೇವರ ಹಿಂದೆಯೂ ಹೋಗುವಷ್ಟು ಅವಿವೇಕಿಯಲ್ಲ. ನಾನು ಜಾತಿವಾದಿಯೂ ಅಲ್ಲ, ಧರ್ಮಾಂಧನೂ ಅಲ್ಲ, ಪರಭಾಷಾ ದ್ವೇಷಿಯೂ ಅಲ್ಲ. ನಿಮ್ಮಂತೆ ಅವಿವೇಕಭರಿತ ಕುಚೋದ್ಯ ಮಾಡುವ ವಿಕೃತ ಮನಸ್ಕನೂ ಅಲ್ಲ. ನಾನು ವಿಶ್ವಮಾನವತಾ ವಾದಿ.
@ಮಾದರೇಟರ್: ಟ್ರೊಲ್ ಅಲರ್ಟ್.
ಉಮಾಪತಿಯವರೇ “ನಮ್ಮ ದೇಶದಲ್ಲಿ ಬಲವಾಗಿ ಹಬ್ಬಿರುವ ಮೂಢ ನಂಬಿಕೆಗಳು, ನಾವೇ ವಿನಾಕಾರಣ ಸೃಷ್ಟಿಸಿರುವ ಮುಕ್ಕೋಟಿ ದೇವತೆಗಳು, ಅರ್ಥವಿಲ್ಲದ ನಿರುಪಯೋಗಿಯಾದ ನೂರಾರು ಜಾತಿಗಳು, ಇವೆಲ್ಲವುಗಳು ನಾಶವಾಗದ ಹೊರತು ನಮ್ಮ ದೇಶ ಉದ್ಧಾರವಾಗುವುದು ಸಾಧ್ಯವೇ ಇಲ್ಲ” ಅಂದಿದ್ದೀರಿ. ಇಲ್ಲಿ ನೀವು ಬಳಸಿರುವ ಒಂದೊಂದು ಪದಕ್ಕೂ ಸಮಂಜಸ ಸಮರ್ಥನೆ ಕೊಡುತ್ತೀರಾ? ೧. ಬಲವಾಗಿ ಹಬ್ಬಿರುವ ಮೂಢನಂಬಿಕೆಗಳು-ಯಾವವು? ಯಾವುದು ಮೌಢ್ಯ? ಯಾರ ದೃಷ್ಟಿಯಲ್ಲಿ ಮೌಢ್ಯ? ನನ್ನ ದೃಷ್ಟಿಯಲ್ಲಿ ಯಾವುದೇ ಮಾತು, ಕೃತಿ, ನಂಬಿಕೆ ಮತ್ತೊಂದು ಜೀವವನ್ನು ಯಾವುದೇ ರೀತಿಯಲ್ಲಿ ನೋಯಿಸದಿದ್ದರೆ ಅದು ಮೌಢ್ಯವಲ್ಲ. ನಿಮಗೆ ಸರಿಬಾರದ ನಂಬಿಕೆ ಅಷ್ಟೇ. “ಮೂಢ ನಂಬಿಕೆ” ಎನ್ನುವ ನಿಮ್ಮ ಆಶಯವೂ “ನಂಬಿಕೆಯೇ”.
೨. ವಿನಾಕಾರಣ ಸೃಷ್ಟಿಸಿದ ಮುಕ್ಕೂಟಿ ದೇವತೆಗಳು-ಇದೇ ನಮ್ಮ ದೇಶದ ವೈಶಿಷ್ಟ್ಯ, ಬಹುತ್ವ ಉಳಿಸಿದ ಸಂಗತಿ. ವಿನಾ ಕಾರಣ ಅಲ್ಲ. ತಟಸ್ಥ ಸ್ವಭಾವದಿಂದ ಹುಟ್ಟಿದ್ದು. ನಾನು ಶಿವನನ್ನು ಆರಾಧಿಸಿದರೆ ನೀವು ಅಣ್ಣಮ್ಮನೋ ಪಟಾಲಮ್ಮನನ್ನೋ ಪೂಜಿಸಿ, ನನಗೇನೂ ಸಂಬಂಧವಿಲ್ಲ ಎಂಬ ಭಾವ ಇದು. ಮಲೆನಾಡಿನ ಅಥವಾ ಕಾಡಿನ ನಿರ್ಜನ ಪ್ರದೇಶದಲ್ಲಿ ನೀವು ಎಂದಾದರೂ ಒಂದು ಕಾರ್ಗತ್ತಲ ರಾತ್ರಿಯನ್ನು ಒಂಟಿಯಾಗಿ ಕಳೆದಿದ್ದೀರಾ? ಆ ಅನುಭವ ಪಡೆದು ದೇವರ ಸೃಷ್ಟಿ ಬಗ್ಗೆ ಮಾತಾಡಿ. ನಿಸರ್ಗದ ರಹಸ್ಯ ಅರಿವಾಗದೇ ಮನುಷ್ಯ ದೇವರ ಕಲ್ಪನೆ ಸೃಷ್ಟಿಸಿಕೊಂಡಿದ್ದಾನೆ-ವಿನಾಕಾರಣ ಅಲ್ಲ.
೩. ಅರ್ಥವಿಲ್ಲದ ನೂರಾರು ನಿರುಪಯೋಗಿ ಜಾತಿಗಳು-ಹಾಗಾದರೆ ಜಾತಿ ಸಮೀಕ್ಷೆ ಮಾಡುವಾಗ ತಾವೇನಾದರೂ ಆಕ್ಷೇಪಿಸಿದ್ದಿರಾ? ಪ್ರತಿ ಜಾತಿಗೂ ಅರ್ಥವಿದೆ. ಅದನ್ನು ಬಿಟ್ಟು ಈ ಸಮಾಜದಲ್ಲಿ ರಾಜ್ಕೀಯವೂ ಇಲ್ಲ, ಉದ್ಯೋಗವೂ ಇಲ್ಲ. ಇದನ್ನು ಜಾತಿಗಳು ಕೇಳಿರಲಿಲ್ಲ, ಉಳಿಸಿ ಬೆಳೆಸುತ್ತಿರುವ ವ್ಯವಸ್ಥೆ ಯಾವುದು ಹೇಳಿ. ಪ್ರತಿ ಜಾತಿಯೂ ತನ್ನ ಸದಸ್ಯರಿಗೆ ಸಂಪ್ರದಾಯವನ್ನು ಕಲಿಸಲು ಇದೆ. ಅದರಲ್ಲಿ ಇಂದಿನ ಸಂದರ್ಭದಲ್ಲಿ ನಾವು ಒಪ್ಪುವ ನಿರಾಕರಿಸುವ ಸಂಗತಿಗಳು ಇವೆ. ಅವನ್ನು ಸರಿಪಡಿಸಬೇಕಲ್ಲದೇ ಜಾತಿ ನಾಶಕ್ಕೆ ಕೈಹಾಕುವುದು ವಿಫಲ ಯತ್ನ. ಇದು ಮತ್ತೆ ಮತ್ತೆ ಸಾಬೀತಾಗಿದೆ-ವಾಸ್ತವ.
೪. ಇವೆಲ್ಲ ನಾಶವಾದಗ ಹೊರತೂ ದೇಶದ ಉದ್ಧಾರವಿಲ್ಲ- ತಮ್ಮ ದೃಷ್ಟಿಯಲ್ಲಿ ‘ಉದ್ಧಾರ’ ಅಂದರೇನು? ಆಚಾರ, ಸಂಪ್ರದಾಯ, “ನಂಬಿಕೆ” ದೇವರು-ದಿಂಡರನ್ನೆಲ್ಲ ಅತ್ತ ತೂರಿ ಒಟ್ಟಾರೆ ಮನುಷ್ಯ ನಿಸರ್ಗದ ಲೂಟಿ ಮಾಡಿ, ಶಾಪಿಂಗ್ ಅದೂ ಇದು ಮಾಡುತ್ತ, ಐಭೋಗ ಅನುಭವಿಸುತ್ತ “ಊಮಾಹೇ” ಮಾಡಿಕೊಂಡಿರುವುದಾ?
-ಇಷ್ಟೆಲ್ಲ ಆದ ಮೇಲೆ ನಮ್ಮ ದೇಶದ “ಬಹುತ್ವ”ವನ್ನು ತಾವು ಹೇಗೆ ವ್ಯಾಖ್ಯಾನಿಸುವಿರಿ? ಗಮಕ, ಯಕ್ಷಗಾನ, ನೃತ್ಯ, ಸಂಗೀತ, ಕಲೆ ಎಲ್ಲದಕ್ಕೂ ನೀವು ಆಕ್ಷೇಪಿಸಿದ ಸಂಗತಿಗಳೊಂದಿಗೆ ನೇರ ಸಂಬಂಧವಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
@ ಹೇಮಾಪತಿ, ಉಮಾಪತಿ ಎಂದು ಬರೆದಿದ್ದೆ, ಕ್ಷಮಿಸಿ.