ಅಕ್ಷರದ ಜಾಗದಲ್ಲಿ ಅಸಹನೆ ಬಿತ್ತುವುದು ನಿಜವಾದ ಕೇಡುಗಾಲ ಮಹಾದೇವ ಅವರೇ
– ರಾಕೇಶ್ ಶೆಟ್ಟಿ
ಹಿರಿಯರಾದ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು,
ನೀವು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂದಿರುಗಿಸಿ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಓದಿದೆ.ಇಷ್ಟು ದಿವಸ ಪ್ರಶಸ್ತಿಗಳನ್ನು ಹಿಂತಿರುಗಿಸಿದವರು ಬರೆದಂತೆಯೇ ಯಾವುದೇ “ನಿರ್ದಿಷ್ಟ ಕಾರಣ”ಗಳಿಲ್ಲದೇ ವಿರೋಧಿಸಲೇಬೇಕು ಎಂಬ ಹಟಕ್ಕೆ ಬಿದ್ದ ಪತ್ರಗಳ ಸಾಲಿಗೇ ನಿಮ್ಮ ಪತ್ರವೂ ಸೇರುತ್ತದೆ.ಪತ್ರದ ಸಾರಾಂಶ,ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಭಾರತದಲ್ಲಿ ಭೂಮಿ ಬಾಯಿ ತೆರೆದು ಕುಳಿತಿದೆ ಎಂಬಂತಿದೆ.ಅದೇನೋ ಇದ್ದಕ್ಕಿದ್ದಂತೆ ದೇಶದಲ್ಲಿ ಅಸಹಿಷ್ಣುತೆಯ ವಾತವರಣ ಮೂಡಿದೆ ಎನ್ನುತ್ತೀರಿ.ಆದರೆ,ಅದನ್ನು ಸ್ಪಷ್ಟವಾಗಿ ವಿವರಿಸಿಲ್ಲ.ನಿಜವಾಗಿಯೂ ಅಂತದ್ದೊಂದು ವಾತವರಣ ಇದ್ದಿದ್ದೇ ಆದರೆ ನಿಮಗೇಕೆ ವಿವರಿಸಲಾಗಿಲ್ಲ?
ದಾದ್ರಿ ಘಟನೆ,ಕಲ್ಬುರ್ಗಿ ಹತ್ಯೆಯಂತ ಘಟನೆಗಳು ಆಯಾ ರಾಜ್ಯದ ಕಾನೂನು ಸುವ್ಯವಸ್ಥೆಯ ಹೊತ್ತವರ ಹೊಣೆಯೆಂದು ಕೇಂದ್ರ ಸರ್ಕಾರ ಹೇಳುವುದರಲ್ಲಿ ತಪ್ಪೇನಿದೆ? ಒಂದು ವೇಳೆ ರಾಜ್ಯ ಸರ್ಕಾರಗಳೇ ತಮ್ಮಿಂದ ಕಾನೂನು-ಸುವ್ಯವಸ್ಥೆ ನಿರ್ವಹಿಸಲಾಗುತ್ತಿಲ್ಲ ಎಂದು ಹೇಳಿಕೊಂಡ ಮೇಲೂ ಕೇಂದ್ರ ಕೈ ತೊಳೆದುಕೊಂಡಿದ್ದರೇ,ನೀವು ಹೇಳಿದಂತೆ “ದುರಂತ”ವಾಗುತಿತ್ತು.ಆದರೇ,ಸಂವಿಧಾನ ಬದ್ಧವಾಗಿ ಹೇಗೆ ನಡೆದುಕೊಳ್ಳಬೇಕಿತ್ತೋ ಅದೇ ರೀತಿಯೇ ಕೇಂದ್ರ ನಡೆದುಕೊಂಡಿದೆಯಲ್ಲವೇ ಮಹಾದೇವರೇ? ಹಾಗಿದ್ದ ಮೇಲೆ ನಿಮ್ಮ ಆಕ್ಷೇಪಕ್ಕೇನಾದರೂ ತರ್ಕವುಂಟೇ?ನಿಮ್ಮ ಪ್ರಕಾರ ಕೇಂದ್ರವೇನು ಮಾಡಬೇಕಿತ್ತು? ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನೇರಿ ಕಾನೂನು-ಸುವ್ಯವಸ್ಥೆಯನ್ನು ಪಾಲಿಸಬೇಕಿತ್ತೇ? ಸಂವಿಧಾನವೇ ಧರ್ಮಗ್ರಂಥವೆನ್ನುವ ಪ್ರಗತಿಪರರಿಗೆ ಪ್ರಸ್ತುತ ಕೇಂದ್ರ ಸರ್ಕಾರವೂ ಅದೇ ಸಂವಿಧಾನದ ಅನುಸಾರವೇ ಕಾರ್ಯ ನಿರ್ವಹಿಸುತ್ತಿದೆಯೆಂಬುದು ಮರೆತು ಹೋಗಿದೆಯೇ?
ಪ್ರಶಸ್ತಿ ಹಿಂತಿರುಗಿಸುವಿಕೆಗೆ ನೀವು ನೀಡಿರುವ ಬಹುಮುಖ್ಯವಾದ ಕಾರಣವೆಂದರೆ,ಪ್ರಶಸ್ತಿ ಹಿಂತಿರುಗಿಸುತ್ತಿರುವವರ ನಡೆಯನ್ನು ಕೆಲ ಲೇಖಕ-ಕಲಾವಿದರು ವಿರೋಧಿಸಿದ್ದು.ಆಳುವ ಸರ್ಕಾರದ ಪರ ಅವರು ನಿಂತದ್ದು ತಮಗೇ ಕೇಡಿನ ಲಕ್ಷಣದಂತೆ ಕಾಣಿಸಿತು ಎಂದಿದ್ದೀರಿ.ಅಂದರೇ,ನಿಮ್ಮ ಪ್ರಕಾರ ಯಾವುದೇ ಲೇಖಕರು-ಕಲಾವಿದರು ಅವರ ಐಡಿಯಾಲಜಿಗೆ ಹೊಂದಿಕೊಳ್ಳುವ ಪಕ್ಷ ಅಧಿಕಾರಕ್ಕೇರಿ ಸರ್ಕಾರ ರಚಿಸಿದ ಮೇಲೆ ಅದನ್ನು ಬೆಂಬಲಿಸುವುದು ಪ್ರಜಾಪ್ರಭುತ್ವದಲ್ಲಿ ಕೇಡಿನ ಲಕ್ಷಣವೆಂದಾಗುತ್ತದೆಯಲ್ಲವೇ?
ಇದೇ ಲಾಜಿಕ್ ನಮ್ಮ ರಾಜ್ಯದಲ್ಲಿಯೂ ಅನ್ವಯವಾದರೇ,ಈ ರಾಜ್ಯದ ಪ್ರಗತಿಪರರು-ಬುದ್ಧಿಜೀವಿಗಳು ನಿಂತಿರುವುದು ಸರ್ಕಾರದ ಪರವಾಗಿಯೋ? ಅಥವ ವಿರುದ್ಧವಾಗಿಯೋ?
ಒಂದು ವೇಳೆ ವಿರುದ್ಧವಾಗಿದಿದ್ದರೇ,ಮೊನ್ನೆ ಮೊನ್ನೆ ಟಿಪ್ಪು ಜಯಂತಿಯ ಹೆಸರಿನಲ್ಲಿ ಇದೇ ಸರ್ಕಾರ ೪ ಜನ ಅಮಾಯಕರ ಸಾವಿಗೆ ಕಾರಣವಾಗಿ ಹಲವು ಜಿಲ್ಲೆಗಳಲ್ಲಿ ಅಶಾಂತಿಯ ವಾತವರಣ ಸೃಷ್ಟಿಯಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದ್ದನ್ನು ನೀವು ಪ್ರಶ್ನಿಸಬೇಕಿತ್ತು.ಸಾಲು ಸಾಲು ರೈತರ ಆತ್ಮಹತ್ಯೆಗಳಾದವಲ್ಲ,ಆಗಲಾದರೂ ನೀವು ಸರ್ಕಾರವನ್ನು ಪ್ರಶ್ನಿಸಬೇಕಿತ್ತು.ಕೇವಲ ಅಹಿಂದ ಮಕ್ಕಳಿಗೇ ಮಾತ್ರ ಟೂರ್ ಎಂದು ತಲೆಕೆಟ್ಟ ನಿರ್ಧಾರವನ್ನು ಈ ಸರ್ಕಾರ ತೆಗೆದುಕೊಂಡಾಗ ನೀವು ಪ್ರಶ್ನಿಸಬೇಕಿತ್ತು.ಆದರೆ ನೀವು ಪ್ರಶ್ನಿಸಲಿಲ್ಲವಲ್ಲ ಮಹಾದೇವ್ ಅವರೇ! ಯಾಕೇ? ನೀವು ಮತ್ತು ನಿಮ್ಮಂತವರು ಆಳುವ ಸರ್ಕಾರದ ಪರ ಮೃಧು ಧೋರಣೆ ಹೊಂದಿರುವುದು ಕಾರಣವಲ್ಲವೇ? ಹಾಗಿದ್ದರೇ ಇದು ಕೇಡಿನ ಲಕ್ಷಣವಾಗುವುದಿಲ್ಲವೇ?
ಯಾವುದೇ ಸರ್ಕಾರದ ಒಳ್ಳೆ ಕೆಲಸಗಳನ್ನು ಮೆಚ್ಚಿ ಬೆನ್ನು ತಟ್ಟುವುದರಿಂದ,ದೇಶದ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ವಿನಾಕಾರಣ ಹಾಳಾಗುವುದನ್ನು ತಪ್ಪಿಸಲು ಮುಂದೆ ಬರುವುದರಿಂದ ಯಾವುದೇ ಕೇಡು ಸಂಭವಿಸುವುದಿಲ್ಲ. ಆದರೆ,ಸರ್ಕಾರವೊಂದು ತಮ್ಮ ಐಡಿಯಾಲಜಿಗೆ ತಕ್ಕಂತೇ ಕುಣಿಯುತ್ತಿದೆ ಎಂಬ ಕಾರಣವೊಡ್ಡಿಕೊಂಡು ಆದರ ತಪ್ಪುಗಳೆಡೆಗೆ ಧೃತರಾಷ್ಟ್ರ ಪ್ರೇಮ ಹರಿಸುವುದು ಕೇಡಿನ ಲಕ್ಷಣ.ನಮ್ಮ ರಾಜ್ಯದಲ್ಲಿ ಆಗುತ್ತಿರುವ ಕೇಡು ಇದೇ ತೆರನಾದದ್ದು.
ಉದಾಹರಣೆಗೆ,ಶಿವಮೊಗ್ಗದ ಕುವೆಂಪು ವಿವಿಯಲ್ಲಿದ್ದ “ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ (CSLC)”ವನ್ನು ರಾಜ್ಯ ಸರ್ಕಾರ ಮುಚ್ಚಿಸಿದಾಗ ಮಾತನಾಡದಿದ್ದು ಈ ರಾಜ್ಯದ ವೈಚಾರಿಕತೆಗೆ ಕೇಡಿನ ಲಕ್ಷಣವಾಗಿತ್ತು.ಆಗ ನೀವು ಮೌನವಾಗಿಯೇ ಇದ್ದಿರೇ ಹೊರತು ಸರ್ಕಾರದ ಕಿವಿ ಹಿಂಡಲಿಲ್ಲ! ಯಾಕೆ? ಆ ಕೇಂದ್ರದ ಜೊತೆಗೆ ನಿಮಗಿದ್ದ ವೈಚಾರಿಕ ಭಿನ್ನಾಭಿಪ್ರಾಯ ನಿಮ್ಮನ್ನು ಮೌನವಾಗಿರಿಸಿತೇ? CSLC ಸಂಶೋಧನಾ ಕೇಂದ್ರವನ್ನು ಮುಚ್ಚಿಸಲು ಕಾರಣವಾಗಿದ್ದು “ಅಸಹಿಷ್ಣುತೆ”ಯೇ ಹೊರತು ಮತ್ತೇನು ಕಾರಣವಲ್ಲ ಮಹಾದೇವ ಅವರೇ.ವಚನ ಸಾಹಿತ್ಯದ ಅವರ ಚರ್ಚೆಯಲ್ಲಿ ಭಾಗವಹಿಸಿ ನೀವು ಬರೆದಿದ್ದ “ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ? (ಪ್ರಜಾವಾಣಿ Mon, 04/29/2013)” ಲೇಖನದ ಕೆಲವು ಸಾಲುಗಳನ್ನು ಇಲ್ಲಿ ಹೇಳಲೇಬೇಕು.
· ಇವರ ಚಲನವಲನಗಳ ಮೇಲೆ ಕಣ್ಣಿಡಬೇಕಾಗಿದೆ.
· ಚತುರ ಚೋರರ ಸಂಚಿನ ಜಾಲದಂತೆ ಈ ಬಾಲಗುಂಪಿನ ಕೃತ್ಯ ಗೋಚರಿಸುತ್ತದೆ.
· ಈಗ ಇವರು ಆರಂಭಿಸಿರುವ ಕ್ರಿಶ್ಚಿಯನ್ ವಸಾಹತುಶಾಹಿ ಮುಗಿದು,ಮುಂದೆ ಈ ಸಂಶೋಧಕರು ಇಸ್ಲಾಂ ವಸಾಹತುಶಾಹಿಗೆ ಬಂದು ಅಬ್ಬರಿಸಿ,ಈ ಪರಿಪಾಠ ಮುಂದುವರೆದರೆ ಅದು ಎಲ್ಲಿಗೆ ತಲುಪುತ್ತದೆ? ಈ ನವಗೋಸುಂಬೆ ವೈದಿಕಶಾಹಿಯ ಕುತ್ತಿಗೆಗೆ ಕವೆಗೋಲು ಬೀಳುವಲ್ಲಿಗೆ ಬಂದು ನಿಲ್ಲುತ್ತದೆ.
· ಮನುಧರ್ಮಶಾಸ್ತ್ರದ ಹೆಣದೊಳಗಿಂದ ಉತ್ಪತ್ತಿಯಾದ ಹುಳುಗಳಂತಾಡುತ್ತಿರುವ ಈ ಬಾಲೂಗ್ಯಾಂಗ್ ಅನ್ನು ಯಾರು ಕಾಪಾಡಬೇಕೋ ತಿಳಿಯದಾಗಿದೆ.
ಈ ಮೇಲಿನ ವಾಕ್ಯಗಳಲ್ಲಿ ಯಾವ ಸೀಮೆಯ ವೈಚಾರಿಕತೆ/ಬೌದ್ಧಿಕತೆಯಿದೆ ಹೇಳಿ? ಹೋಗಲಿ ಅದು ನಿಮ್ಮ ಸಾತ್ವಿಕ ಸಿಟ್ಟು ಅಂತ ಹೇಳಲಿಕ್ಕಾದರೂ ಆಗುತ್ತದೆಯೇ? ಇವು ಅಸಹನೆಯ ಮಾತುಗಳಲ್ಲವೇ? ಈ ರೀತಿ ಅಸಹನೆ ಹೊರಹಾಕಿದ್ದು ನೀವೊಬ್ಬರೇ ಅಲ್ಲ.ಪ್ರೊ.ರಾಜೇಂದ್ರ ಚೆನ್ನಿಯವರಂತೂ “… ಸಂಕಷ್ಟವಿರುವುದು ಕನ್ನಡ ಬುದ್ಧಿಜೀವಿಗಳ ನಡುವೆಯೇ ಸಂಬಳಪಡೆಯಬೇಕಾದ ಅವರ (ಬಾಲಗಂಗಾಧರರ) ಗಿಂಡಿಮಾಣಿಗಳಿಗೆ” ಎನ್ನುವ ಮೂಲಕ ಅದು ಹೇಗೆ ನೀವು ನಮ್ಮ ನಡುವೆ ಬದುಕುತ್ತೀರಿ ಅಂತಲೇ ಕೇಳಿದ್ದರಲ್ಲ,ಅದು ಅಸಹಿಷ್ಣುತೆಯಲ್ಲವೇ?
ಹೀಗೆ ಪ್ರಗತಿಪರರೆಲ್ಲ ಒಟ್ಟುಗೂಡಿ CSLCಯನ್ನು ವಿರೋಧಿಸುವುದಕ್ಕೂ,ಆ ನಂತರ ಅಲ್ಲಿನ ಕುಲಪತಿಗಳ ಮೇಲೆ ಬೇರೆ ಬೇರೆ ಮೂಲಗಳ ಮೂಲಕ ಸಂಶೋಧನಾ ಕೇಂದ್ರವನ್ನು ಮುಚ್ಚಿಸುವಂತೆ ಒತ್ತಡ ತಂದ ಕುರಿತು ವಿವಿಯಲ್ಲೇ ಮಾತುಗಳು ಕೇಳಿ ಬಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲವೆಂದರೆ ಜನ ನಂಬುತ್ತಾರೆಯೇ? ಅದು ಅಸಹನೆಯಾಗಿರಲಿಲ್ಲವೇ? ಅಂತಿಮವಾಗಿ ಸಂಶೋಧನಾ ಕೇಂದ್ರಕ್ಕೆ ಬೀಗ ಹಾಕಿಸಿದ್ದನ್ನು ಪ್ರಗತಿಪರರ ಅಸಹಿಷ್ಣುತೆಯೆನ್ನೋಣವೇ ಅಥವಾ ವೈಚಾರಿಕ ಕೇಡುಗಾಲವೆನ್ನೋಣವೇ?
ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ಪ್ರಗತಿಪರರಿಂದ ಆಗಿರುವ ಅಸಹಿಷ್ಣುತೆಯ ಘನ ಕಾರ್ಯಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವ ಕೆಲಸವಲ್ಲ ಮಹಾದೇವರೇ.ಮೋದಿ ಬರುವ ಮೊದಲು ಈ ದೇಶದಲ್ಲಿ ಹತ್ಯಾಕಾಂಡಗಳಾಗಿಲ್ಲವೇ? ಕೇವಲ ಈ ಎರಡು ವರ್ಷಗಳೊಳಗಿನ ಅವಧಿಯಲ್ಲಿ ಮಾತ್ರವೇ ಭಾರತದಲ್ಲಿ ಭೂಮಿ ಬಾಯ್ತೆರೆದುಕೊಂಡು ಕುಳಿತಿದೆ ಎಂಬ ಮೌಢ್ಯವನ್ನು ಪ್ರಗತಿಪರರು ಹರಡುತ್ತಾ,ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರಿಗೆ ಮಸಿ ಬಳಿಯಲು ಹೊರಟಾಗ ಜವಬ್ದಾರಿಯುತ ನಾಗರೀಕರು, ಲೇಖಕರು,ಕಲಾವಿದರು ಬೀದಿಗಿಳಿದಿದ್ದಾರೆ.ಅದು ನಿಮಗೆ ಕೇಡಿನ ಲಕ್ಷಣವೆನಿಸಿದರೆ,ನಮ್ಮಂತ ಜನಸಾಮಾನ್ಯರಿಗೆ ಈ ದೇಶ ಪ್ರಜಾಪ್ರಭುತ್ವ ಮಾರ್ಗದಲ್ಲಿ ಗಟ್ಟಿಯಾಗಿ ಸಾಗುತ್ತಿರುವ ಲಕ್ಷಣವಾಗಿ ಕಾಣಿಸುತ್ತಿದೆ.ನಿಮ್ಮ ಪತ್ರದ ಕೊನೆಯಲ್ಲಿ,ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಜನರಲ್ ಮುಶ್ರಫನನ್ನು ನೆನೆಸಿಕೊಂಡಿದ್ದೀರಿ.ಅದೇ ರೀತಿ ಕಾಂಗ್ರೆಸ್ಸಿನ ಹರುಕು ಬಾಯಿಯ ಮಣಿಶಂಕರ್ ಅಯ್ಯರ್ ಅದೇ ಪಾಕಿಸ್ತಾನದ ನೆಲದಲ್ಲಿ ನಿಂತು, ಭಾರತದ ಪ್ರಧಾನಿಯನ್ನು ಕಿತ್ತೊಗೆಯಲು ಪಾಕಿಗಳ ಬೆಂಬಲವನ್ನು ಖುಲ್ಲಂ ಖುಲ್ಲಾ ಕೇಳುವುದು ನಿಮ್ಮಂತವರಿಗೆ ಕೇಡಿನ ಲಕ್ಷಣವೆನ್ನಿಸುತ್ತಿಲ್ಲವಲ್ಲ!
ರಬೀಂದ್ರನಾಥ ಟ್ಯಾಗೋರರು,ಶಿವರಾಮ ಕಾರಂತರು ಪ್ರಶಸ್ತಿ ಹಿಂತಿರುಗಿಸಿದಾಗ ಅದಕ್ಕೊಂದು ಘನತೆಯಿತ್ತು.ಆದರೆ ಈಗೀನ ರಾಜಕೀಯ ಪ್ರೇರಿತ ಪ್ರಸಸ್ತಿ ವಾಪಸಾತಿ ಚಳುವಳಿಗೇ ಯಾವುದೇ ಕಿಮ್ಮತ್ತಿಲ್ಲ ಎಂಬುದಕ್ಕೇ ದೇಶದ ಮಹಾನಗರಗಳಲ್ಲಿ ನಡೆದ ಪ್ರತಿಭಟನೆಗಳೇ ಸಾಕ್ಷಿ. ಅಕ್ಷರ ಬಿತ್ತಬೇಕಾದ ಜಾಗದಲ್ಲಿ ಅಸಹನೆ ಬಿತ್ತುವುದು ನಿಜವಾದ ಕೇಡುಗಾಲ ಮಹಾದೇವ ಅವರೇ.ಸಾಧ್ಯವಾದರೇ ಮತ್ತೊಮ್ಮೆ ನಿರ್ಧಾರವನ್ನು ಮರುಪರಿಶೀಲಿಸಿ.ಇಲ್ಲ ಪ್ರಶಸ್ತಿ ಹಿಂತಿರುಗಿಸಿಯೇ ಸಿದ್ದವೆಂದರೇ, ನಮ್ಮದೇನೂ ಅಡ್ಡಿಯಿಲ್ಲ.ಇನ್ನೂ ಅದ್ಯಾರೆಲ್ಲ ಹಿಂದಿರುಗಿಸಬೇಕೆಂದಿದ್ದಿರೋ ಹಿಂದಿರುಗಿಸಿಕೊಳ್ಳಿ.ಕೇವಲ ಬೆರಳೆಣಿಕೆಯಷ್ಟು ಜನರ ಗುಂಪು ಸೃಷ್ಟಿಸುತ್ತಿರುವ ಈ ಸಮೂಹ ಸನ್ನಿಯೆದುರು ಭಾರತ ಮಂಡಿಯೂರುವುದಿಲ್ಲವೆಂಬುದನ್ನು ಜನಸಾಮಾನ್ಯರಾದ ನಾವೂ ತೋರಿಸುತ್ತೇವೆ.
ಚಿತ್ರಕೃಪೆ : ದಿ.ಹಿಂದೂ
ವಿದ್ಯಾವಂತ ಕ್ರೂರಿಗಳು ಮತ್ತು ಅವಿದ್ಯಾವಂತ ಮುಠ್ಠಾಳರಿಂದ ತುಂಬಿ ಹೋಗಿರುವ ನಮ್ಮ ದೇಶಕ್ಕೆ ಅಕಾಲ ಸ್ವಾತಂತ್ರ್ಯ ಬಂದಿದ್ದೇ ತಪ್ಪಾಗಿ ಹೋಯಿತು. ಸ್ವಾತಂತ್ರ್ಯವೆಂದರೇನೆಂಬುದರ ಅರ್ಥ ನಮ್ಮ ದೇಶಲ್ಲಿರುವ ಯಾವ ರಾಜಕಾರಣಿಗೂ ಕಿಂಚಿತ್ತೂ ತಿಳಿಯದು. ಸಾಮಾನ್ಯ ಜನರಿಗೆ ಅಸಹನೆ, ಅಸಹಿಷ್ಣುತೆ ಇವುಗಳನ್ನು ತಿಳಿದುಕೊಂಡು ಮಾಡಬೇಕಾದ್ದೇನೂ ಇಲ್ಲ. ಹೊಟ್ಟೆ ಹಸಿವಾದಾಗ ಅವರಿಗೆ ತಿನ್ನಲು ಆಹಾರ ಬೇಕೇ ಹೊರತು ಜಾತಿ, ಮತ, ಧರ್ಮ ಇವುಗಳಿಂದ ತಮ್ಮ ಹಸಿವು ನೀಗುವುದಿಲ್ಲವೆನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಇವನ್ನೆಲ್ಲ ಹುಟ್ಟು ಹಾಕುತ್ತಿರುವವರು ಹೊಟ್ಟೆ ತುಂಬಿದ ಅವಿವೇಕೀ ರಾಜಕಾರಣಿಗಳು ಮಾತ್ರ.
“ಸಾಮಾನ್ಯ ಜನರಿಗೆ ಹೊಟ್ಟೆ ಹಸಿವಾದಾಗ ಅವರಿಗೆ ತಿನ್ನಲು ಆಹಾರ ಬೇಕೇ ಹೊರತು”
You’re trivializing Indians. What gives you the authority to do so?
ದೇವನೂರ ಮಹಾದೇವ ಕನ್ನಡದ ಒಬ್ಬ ಪ್ರತಿಭಾವಂತ ಕತೆಗಾರ. ಎಂಭತ್ತರ ದಶಕದ ಈಚೆಗೆ ಕತೆ ಬರೆಯುವ ಕಾಯಕ ಮುಂದುವರೆಸಿಕೊಂಡು ಬಂದಿದ್ದರೆ ಕನ್ನಡದ ಅತ್ಯುತ್ತಮ ಕತೆಗಾರರಲ್ಲಿ ಒಬ್ಬರಾಗುತ್ತಿದ್ದರೋ ಏನೋ! ಆದರೆ ದಲಿತ ಸಾಹಿತಿ ಎಂಬ ಕಾರಣಕ್ಕೆ ಮಿಕ್ಕ ಪ್ರತಿಭಾವಂತ ಕತೆಗಾರರಿಗೆ ಸಿಗದ ಮಹತ್ವ ಪ್ರಚಾರ ಹಾಗೂ ವೈಭವೀಕರಣ ಮಹಾದೇವ ಅವರಿಗೆ ಸಿಕ್ಕಿತು. ಸಾಹಿತಿಯಷ್ಟೇ ಅಲ್ಲ ದಾರ್ಶನಿಕ ಎಂಬ ಭ್ರಮೆ ಅವರ ಬಗ್ಗೆ ಬೆಳೆಯಿತು. ಜೊತೆಗೆ ರಾಜಕೀಯ ಮಹತ್ವಾಕಾಂಕ್ಷೆಯೂ ಹುಟ್ಟಿತು. ತಮಾಷೆ ಎಂದರೆ ದೇವನೂರ ಅವರ ಸಾಹಿತ್ಯದ ಪ್ರಭೆ ಕನ್ನಡದ ಸೋ ಕಾಲ್ಡ್ ಪ್ರಗತಿಪರ ಸಾಹಿತಿಗಳ ವಲಯದ ಹೊರಗೆ ಬೆಳೆಯಲೇ ಇಲ್ಲ! ವಿಪರ್ಯಾಸವೇನೆಂದರೆ ಇಂದಿಗೂ ಮಹಾದೇವ ಅವರ ಕೃತಿಗಳ ಚರ್ಚೆ ಮಾಡುತ್ತಿರುವವರು ಬ್ರಾಹ್ಮಣ ಸಾಹಿತ್ಯಾಸಕ್ತರು, ಏಕೆಂದರೆ ಮಹಾದೇವ ಅವರ ಸಾಹಿತ್ಯದ ಪರಿಚಯ ನಾಡಿನ ವಿದ್ಯಾವಂತ ದಲಿತರಿಗೇ ಇಲ್ಲ. ಒಟ್ಟಿನಲ್ಲಿ ಮಹಾದೇವ ಒಂದು ಹಂತದ ಬೆಳವಣಿಗೆಯ ನಂತರ ಕತೆಗಾರನಾಗಿ ಬೆಳೆಯಲೇ ಇಲ್ಲ. ಚಿಕ್ಕ ವಯಸ್ಸಿನಲ್ಲೇ ಅವರಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಅವರ ಬೆಳವಣಿಗೆಗೆ ಮಾರಕವಾಯಿತು ಎನ್ನಬಹುದೇನೋ. ಬಹುಶಃ ಇದರ ಅರಿವು ಅವರಿಗೂ ಇದೆ, ಆದುದರಿಂದಲೇ ಅಸಹಿಷ್ಣುತೆಯ ನೆಪದಲ್ಲಿ ಪ್ರಶಸ್ತಿ ಹಿಂದಿರುಗಿಸಿ ತಮ್ಮ ಅಮಿತ ಪ್ರತಿಭೆಯ ಉಜ್ವಲ ವಿಕಾಸಕ್ಕೆ ಅನುವು ಮಾಡಿಕೊಂಡಿದ್ದಾರೆ ಎನ್ನಬಹುದು.
LOL 😁
ಸಮ ತೂಕದ ಉತ್ತಮ ಬರಹ.
ಎದೆಗೆ ಬಿದ್ದ ಅಕ್ಷರಗಳು ಯಾವತ್ತೋ ಒಣಗಿ ಹೋಗಿವೆ.
“ಚಿಕ್ಕ ವಯಸ್ಸಿನಲ್ಲೇ ಅವರಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಅವರ ಬೆಳವಣಿಗೆಗೆ ಮಾರಕವಾಯಿತು ಎನ್ನಬಹುದೇನೋ”
ನಿಜ,ಅವರು ನಿರ್ಧಿಷ್ಟ ಕಾರಣ ನೀಡದಿದುದು.ಮತ್ತು ರೈತರ ಆತ್ಮಹತ್ಯೆಗಳಾದಾಗ ಸರಕಾರವನ್ನು ಎಚ್ಚರಿಸದುದು ನನಗೂ ಬೇಸರವಾಯ್ತು.
ಐಡಿಯಾಲಜಿ ಸ್ವಾಮಿ, ಐಡಿಯಾಲಜಿ! ಕಾರಂತರಂಥ ನಿಷ್ಠುರವಾದಿ ಎಲ್ಲಿದ್ದಾರೆ ಹೇಳಿ?
ಪ್ರತಾಪ್ ಸಿಂಹಾರ ಬರವಣಿಗೆ ಥರಾನೆ ಇದೆ ,ಸೂಪರ್ .
ಮಂದಗಾಮಿಗಳಿಗೆ ಇವೆಲ್ಲ ಅರ್ಥ ಆಗಲ್ಲ .
ಹಾಗಾದರೆ ಅಸಹಿಷ್ಣುತೆ ಕುರಿತು ಇನ್‌ಫೋಸಿಸ್ ನಾರಾಯಣಮೂತಿ೯, ಭಾರತೀಯ ರಿಸವ್೯ ಬ್ಯಾಂಕಿನ ಗವನ೯ರ್ ಮುಂತಾದವರ ಹೇಳಿಕೆಗಳಲ್ಲಿ ಸತ್ಯವಿಲ್ಲವೆ ರಾಕೇಶ್ ಶೆಟ್ಟರೆ ? ಸಾಹಿತಿಗಳು ಸಾತ್ವಿಕ ಸಿಟ್ಟು ಪ್ರದಶಿ೯ಸಿದರೆ ಅಕ್ಷರ ಜಾಗದಲ್ಲಿ ಅಸಹನೆಯ ಬಿತ್ತನೆ ಎನ್ನುತ್ತೀರಿ. ಪಾಕಿಸ್ಥಾನದಲ್ಲಿ ಮಣಿಶಂಕರ್ ಅಯ್ಯರ್ ಹೇಳಿರುವುದು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿದೇಶಗಳಲ್ಲಿ ಯಾರನ್ನೆಲ್ಲಾ ಮತ್ತು ಹೇಗೆಲ್ಲಾ (ಮೋದಿಯಾಗಿ ಅಲ್ಲ, ಈ ದೇಶದ ಪ್ರಧಾನಿಯಾಗಿ ಟೀಕಿಸಿದ್ದಾರೆ ರಾಕೇಶ್ ಶೆಟ್ಟರೆ) ಟೀಕಿಸಿದ್ದಾರೆ ಎನ್ನುವುದು ತಮಗೆ ತಿಳಿಯದ ವಿಷಯವೇನಲ್ಲ. ಮಣಿಶಂಕರ್ ಅಯ್ಯರ್ ಅವರನ್ನು ಹರಕು ಬಾಯಿ ಎನ್ನುವ ನೀವು ಮೋದಿಯವರ ಬಗ್ಗೆ ತಮ್ಮ ಲೇಖನದಲ್ಲಿ ಏನನ್ನೂ ಹೇಳುವುದಿಲ್ಲ. ಇರಲಿ. ಆದರೆ ನೀವು ಕೇಳಿರುವ ಕೆಲವು ಪ್ರಶ್ನೆಗಳು ನಿಜಕ್ಕೂ ಚಿಂತನಾಹ೯ವಾಗಿವೆ. ಈ ಲೇಖನವನ್ನು ಪ್ರಮುಖ ದಿನಪತ್ರಿಕೆಗಳಿಗೆ ಕಳುಹಿಸುವಿರಾ? ಪ್ರಕಟಿಸುವವರು ಪ್ರಕಟಿಸಲಿ. ಹೆಚ್ಚು ಜನರನ್ನು ತಲುಪಲಿ.
“ಭಾರತೀಯ ರಿಸವ್೯ ಬ್ಯಾಂಕಿನ ಗವನ೯ರ್ ಮುಂತಾದವರ ಹೇಳಿಕೆಗಳಲ್ಲಿ ಸತ್ಯವಿಲ್ಲವೆ ರಾಕೇಶ್ ಶೆಟ್ಟರೆ ”
Have you really read Rajan’s speech? Or reacting to what the main stream media reported?
ಕೊನೆಗೂ ದೇವನೂರರರು ತಾವು ಜಾತಿವಾದಿ ಜಾತ್ಯತೀತರು ಎಂದು ಸಾರಿಕೊಂಡಿದ್ದಾರೆ.
“ಜಾತಿವಾದಿ ಜಾತ್ಯತೀತರು”
Meaningless accusation. What is casteist in DM’s letter?
ದೇವನೂರ ಮಹಾದೇವ ಕನ್ನಡದ ಸೃಜನಶೀಲ ಬರಹಗಾರರಲ್ಲಿ ಒಬ್ಬರು. ಆದರೆ ಅವರು ಬರೆದದ್ದು ತೀರ ಕಡಿಮೆ. ಬರವಣಿಗೆಗಿಂತ ಈ ಚಳವಳಿ ಮತ್ತು ಹೋರಾಟಗಳೊಂದಿಗೆ ಅವರು ಗುರುತಿಸಿಕೊಂಡಿದ್ದೆ ಹೆಚ್ಚು. ವಿಪರ್ಯಾಸಸ ಸಂಗತಿ ಎಂದರೆ ಮಹಾದೇವ ಹೋರಾಟಗಳಲ್ಲೂ ಮುಂದಾಳತ್ವವಹಿಸಿದ್ದು ಕಡಿಮೆ. ಕೆಲವರು ಹೇಳುವಂತೆ ಸಣ್ಣ ವಯಸ್ಸಿನಲ್ಲೇ ಸಿಕ್ಕ ಗೌರವ ಮತ್ತು ಪುರಸ್ಕಾರ ಅವರನ್ನು ಈ ಬರವಣಿಗೆ ಮತ್ತು ಹೋರಾಟಗಳಿಂದ ವಿಮುಖರನ್ನಾಗಿಸಿರಬಹುದು. ಜೊತೆಗೆ ಕೆಲವು ಸಂದರ್ಭಗಳಲ್ಲಿ ಸಮ್ಮೇಳನದ ಅಧ್ಯಕ್ಷಸ್ಥಾನ ಹಾಗೂ ಕೆಲವು ಪ್ರಶಸ್ತಿಗಳನ್ನು ನಿರಾಕರಿಸುತ್ತಲೇ ಅವರು ಜನಪ್ರಿಯತೆಯ ಮುಂಚೂಣಿಗೆ ಬಂದು ನಿಂತರು. ರೈತರ ಆತ್ಮಹತ್ಯೆ, ಆಹಾರ ಧಾನ್ಯಗಳ ಬೆಲೆ ಏರಿಕೆ ಇತ್ಯಾದಿ ಸಂದರ್ಭಗಳಲ್ಲಿ ಪ್ರತಿಕ್ರಿಯಿಸದಿದ್ದ ಮಹಾದೇವ ಈಗ ಇದ್ದಕ್ಕಿಂದ್ದಂತೆ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸುವ ಮಾತನಾಡಿರುವುದು ಆಶ್ಚರ್ಯದ ಸಂಗತಿ. ಮಹಾದೇವಂಥ ಸಂವೇದನಾಶೀಲ ಬರಹಗಾರ ಸಮಾಜದ ಎಲ್ಲ ಸಮಸ್ಯೆಗಳಿಗೂ ಧ್ವನಿಯಾಗಬೇಕು. ಆದರೆ ಅದು ಏಕೋ ಅವರು ಸಮುದಾಯದ ಸಮಸ್ಯೆಗಳಿಗೆ ಧ್ವನಿಯಾಗುತ್ತಿರುವುದು ಮತ್ತು ಸರ್ಕಾರದ ತಪ್ಪು ನಡೆಯನ್ನು ಪ್ರಶ್ನಿಸುತ್ತಿಲ್ಲದಿರುವುದು ಮಹಾದೇವರೊಳಗಿನ ಸಂವೇಡನೆ ತನ್ನ ಕಾವನ್ನು ಕಳೆದುಕೊಂಡಿರುವಂತೆ ಭಾಸವಾಗುತ್ತ್ದದೆ.
“ಮಹಾದೇವಂಥ ಸಂವೇದನಾಶೀಲ ಬರಹಗಾರ ಸಮಾಜದ ಎಲ್ಲ ಸಮಸ್ಯೆಗಳಿಗೂ ಧ್ವನಿಯಾಗಬೇಕು.”
ಹೌದು, ಆದರೆ ಎಲ್ಲ ಸಮಸ್ಯೆಗಳಿಗೂ ಧ್ವನಿಯಾಗಲು ಅವರೇನು ವೃತ್ತಿನಿರತ ಹೋರಾಟಗಾರರೇನಲ್ಲ. ೨೪ ಗಂಟೆ ಹೋರಾಟದಲ್ಲೇ ಮುಳುಗಿದ್ದರೆ ಅವರ ಅನ್ನವನ್ನು ಯಾರು ಸಂಪಾದಿಸಿಕೊಡುತ್ತಾರೆ? ಮಹಾದೇವ ಅವರು ಸರಕಾರೀ ನೌಕರಿ ಬಿಟ್ಟು ಎಷ್ಟೋ ಸಮಯವಾಯಿತು. ತಮ್ಮ ತೋಟದಲ್ಲಿ ಹಣ್ಣು ತರಕಾರಿ ಬೆಳೆಸಿ ಮಾರಿ ಜೀವನ ನಡೆಸುತ್ತಾ ಬಂದಿದ್ದಾರೆ. ತೋಟಗಾರಿಕೆಯ ಬಿಡುವಿಲ್ಲದ ಕೆಲಸಗಳ ನಡುವೆ ಕೆಲವು ಸಮಸ್ಯೆಗಳಿಗೆ ಸ್ಪಂದಿಸಿ ಧ್ವನಿಯಾಗಿದ್ದಾರೆ. ಉದಾ: ತ್ರಿಜ ದೀಕ್ಷೆ.
“ಹೌದು, ಆದರೆ ಎಲ್ಲ ಸಮಸ್ಯೆಗಳಿಗೂ ಧ್ವನಿಯಾಗಲು ಅವರೇನು ವೃತ್ತಿನಿರತ ಹೋರಾಟಗಾರರೇನಲ್ಲ”
-ಇದು ಪ್ರಗತಿಪರರ ಸಿದ್ಧ ಉತ್ತರಗಳಲ್ಲೊಂದು. ಬೇರೆಯವರು ಬೇಡ, ಯಾವುದೇ ಬುದ್ಧಿಜೀವಿಯನ್ನು ನೇರವಾಗಿ ನೀವು ಮುಂಬೈ ದಾಳಿ, ಫ್ರಾನ್ಸ್ ದಾಳಿ, ಐಸಿಸ್, ಬೋಕೋಹರಾಂ, ಮುಜಾಹಿದೀನ್, ಅಲ್ ಖೈದಾ ಮೊದಲಾದವುಗಳ ಬಗ್ಗೆ, ನಮ್ಮ ರಾಜ್ಯದ ರೈತ ಆತ್ಮಹತ್ಯೆ ಬಗ್ಗೆ ಯಾಕೆ ಮಾತಾಡಲ್ಲ ಎಂದು ಪ್ರಶ್ನಿಸಿದರೆ… “ಎಲ್ಲದಕ್ಕೂ ನಾನು ಹೇಳಬೇಕು ಎಂದೇನಿಲ್ಲ!” ಎಂಬ “ಸ್ವಾತಂತ್ರ್ಯದ” ಉತ್ತರವೇ ಬರುತ್ತದೆ, ಅಥವಾ ನೂರಾರು ನೆಪಗಳು ಸಿಗುತ್ತವೆ! “ಈ ಸೂಕ್ಷ್ಮ ಮನಸ್ಸುಗಳಿಗೆ” ಯಾವುದು ತಾಗುತ್ತದೆ, ಯಾವುದು ತಾಗುವುದಿಲ್ಲ ಎಂಬುದು ಜಗತ್ತಿಗೆ ಅರ್ಥವಾಗಿದೆ ಬಿಡಿ.
ನಿನ್ನೆ ಸಂವಾದ ಕಾರ್ಯಕ್ರಮದಲ್ಲಿ ‘ಸಾಹಿತಿಗಳು ಪ್ರಶಸ್ತಿಗಳ ಜೊತೆಗೆ ಸರ್ಕಾರ ಕೊಟ್ಟ ನಿವೇಶನಗಳನ್ನೂ ಹಿಂತಿರುಗಿಸುತ್ತಿಲ್ಲವೇಕೆ?’ ಎಂದು ಬಿ.ಟಿ.ಲಲಿತಾನಾಯಕರನ್ನು ಪ್ರಶ್ನಿಸಿರುವರು. ಹೌದಲ್ಲ ಸ್ವಾಮಿ ನಾವುಗಳು ಈ ಬಗ್ಗೆ ವಿಚಾರವನ್ನೇ ಮಾಡಿಲ್ಲವಲ್ಲ. ನಮ್ಮ ಗೌರವಾನ್ವಿತ ಸಾಹಿತಿಗಳು ದಯವಿಟ್ಟು ಸರ್ಕಾರ ಕೊಟ್ಟ ನಿವೇಶನಗಳನ್ನು ಹಿಂತಿರುಗಿಸಿದಲ್ಲಿ ಒಂದಿಷ್ಟು ಉಪಕಾರವಾದಿತು.
ಈ ಸೋಕಾಲ್ಡ್ ಬುದ್ಧಿಜೀವಿ, “ಪ್ರಗತಿಪರ ಚಿಂತಕರ” ಮಾತಿಗೆ ತೆರಬೇಕಾದ ಬೆಲೆ ಎಷ್ಟು, ಜನ ಇವರ ಮಾತಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದನ್ನು ಚುನಾವಣೆಯಲ್ಲಿ ಇಂಥವರನ್ನೇ ನಂಬಿ ಠೇವಣಿಯನ್ನೂ ಕಳೆದುಕೊಂಡು ರಾಜಕೀಯದಲ್ಲಿ ಎಲ್ಲೂ ಸದ್ಯ ಮುಖತೋರಿಸದ ಮಾನ್ಯ ‘ಆಧಾರ್ ನೀಲೇಕಣಿ’ ಯವರನ್ನು ಕೇಳಬೇಕು!