ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 18, 2015

4

ಒಬ್ಬಳೇ ಒಬ್ಬಳು ಓಬವ್ವ…

‍ನಿಲುಮೆ ಮೂಲಕ

– ಗಿರಿಪ್ರಸಾದ್

ಓಬವ್ವಅರಮನೆಯ ಒಡ್ಡೋಲಗದಲ್ಲಿ ಸಿಂಹಾಸನದಲ್ಲಿ ಕುಳಿತು, ಮದಕರಿನಾಯಕ ಸಭೆಯನ್ನುದ್ದೇಶಿಸಿ ನುಡಿದಿದ್ದ.”ನಲಿವೂ ಇದೆ, ನೋವೂ ಇದೆ ನಿನ್ನೆಯ ಘಟನಾವಳಿಗಳ ಸುತ್ತ. ಹೈದರಾಲಿಯನ್ನು ಮಣಿಸಿದ್ದಕ್ಕೆ ನಲಿವು, ಕೋಟೆಯ ನಿಜದತಾಯಿ ಓಬವ್ವಳನ್ನು ಕಳೆದುಕೊಂಡಿದ್ದಕ್ಕೆ ಅಗಾಧ ನೋವು. ಕಾಲನಾಯಕಾ….”..

ಕಾಲನಾಯಕ ತಲೆತಗ್ಗಿಸಿ ನಿಂತಿದ್ದ. ಅನ್ಯಮನಸ್ಕನಾಗಿದ್ದ, ಅಂಜಲೀಬದ್ಧನಾಗಿದ್ದ. ಯಾವುದೇ ಗುಣಗಾನ ಅವನಿಗೆ ಬೇಕಿರಲಿಲ್ಲ. ನಾಯಕ ಮುಂದುವರೆಸಿದ “ಕಾಲನಾಯಕಾ, ಧನ್ಯ ನೀನು ನಾಯಕಾ. ಧನ್ಯ ಈ ಹೆಬ್ಬುಲಿಯನ್ನು ನಮ್ಮ ಕೋಟೆ ಪಡೆದಿದ್ದಕ್ಕೆ. ನಮ್ಮ ಕನ್ನಡ ನಾಡು ಹಡೆದಿದ್ದಕ್ಕೆ”. ಕಾಲನಾಯಕನಿಗೆ ತಡೆಯಲಾಗಲಿಲ್ಲ, ಕಣ್ಣೀರ ಕಟ್ಟೆಯೊಡೆದಿತು, ಗದ್ಗದಿಸಿದ “ಎಲ್ಲಿಯಿನ್ನು ನನ್ನ ಓಬವ್ವ…ನೀರು ತರಲೆಂದು ಹೋದವಳು ಚರಿತ್ರೆಯಲ್ಲಿ ನೀರಾಗಿ ಹೋದಳು”. ಮೌನಿಯಾದ. ಮದಕರಿನಾಯಕನಿಗೆ ಚುರುಕ್ಕೆಂದಿತು, ನುಡಿದ “ನೀರಾಗಲಿಲ್ಲ ಓಬವ್ವ, ಕಲ್ಲಾದಳು. ಮುಂದೆ ಶತಮಾನಗಳನೇಕ ಕನ್ನಡಿಗರು ಸವರುವ ಕಲ್ಲಾದಳು”. ಸಭಿಕರು ಓಬವ್ವಳನ್ನು ನೆನೆದು ಮಾತನಾಡಲಾರಂಭಿಸಿದರು.ಕಾಲನಾಯಕ ಕಿವಿಯಾಗಲಿಲ್ಲ. ಅವನ ಮನಸ್ಸು ತುಂಬಿಕೊಂಡಿದ್ದು ಓಬವ್ವ…ಓಬವ್ವ…ಓಬವ್ವ…

ತನ್ನಲ್ಲಿಯೇ ಮಾತಾಗಿದ್ದ ಕಾಲನಾಯಕ. “ಓಬವ್ವಳ ಸಾವು, ಗೆಲುವಿನ ಹರ್ಷವನ್ನು ನುಂಗಿದೆ. ಇಲ್ಲಿ ಕೋಟೆ ಉಳಿದಿದೆ, ಅಲ್ಲಿ ಬದುಕು ಒಡೆದಿದೆ. ನನ್ನ ಕಹಳೆಯ ಕೂಗಿಗಿಂತ ಓಬವ್ವ, ಆಕೆಯ ಒನಕೆ ಇಂದು ಕೋಟೆಯನ್ನುಳಿಸಿದೆ.”. ತನ್ನ ಗುಡಿಸಲಿಗೆ ಮರಳಿದ ಕಾಲನಾಯಕನಿಗೆ ನಿದ್ದೆಯಿರಲಿಲ್ಲ. ಓಬವ್ವಳ ಚಿತ್ರವೇ, ಆಕೆಯ ಶೌರ್ಯವೇ ಮನದಲ್ಲಿ ಸುಳಿದಿತ್ತು.

ಮರುದಿನ ಬೆಳ್ಳಂಬೆಳಗ್ಗೆ ಮತ್ತೆ ಕಿಂಡಿಯೆಡೆ ಹೊರಟ. ರಕ್ತದ ಕಲೆಯೆಲ್ಲಾ ಹಾಗೆಯೇ ಹರಡಿತ್ತು. ಒನಕೆ ಅಲ್ಲೇ ಬಿದ್ದಿತ್ತು. ಒನಕೆಯ ಮೇಲೆಲ್ಲಾ ರಕ್ತ ಹೆಪ್ಪುಗಟ್ಟಿತ್ತು. ಸೂಕ್ಷ್ಮವಾಗಿ ಗಮನಿಸಿದ ಕಾಲನಾಯಕ ಅಂದುಕೊಂಡ “ಒನಕೆಯ ಒಂದು ತುದಿಗಿದ್ದದ್ದು ನಿಷ್ಠೆ, ಭಕ್ತಿ, ಇನ್ನೊಂದೆಡೆಗಿದ್ದದ್ದು ಶೌರ್ಯ, ಸಾಹಸದ ಹೆಗ್ಗುರುತು”. ಮತ್ತೆ ಕಣ್ಣು ಹನಿಯೊಡೆದಿತು ನಾಯಕನಿಗೆ “ಹೇಗಿರಲಿ ಓಬವ್ವಾ, ನಿನ್ನ ಒನಕೆಯೆಡೆ ನೋಡುತ್ತಾ ಹೇಗಿರಲಿ ಓಬವ್ವಾ…” ಅಳು ಕಲ್ಲರಾಶಿಯನ್ನು ಒತ್ತಿ ಇತ್ತ ಪ್ರತಿಧ್ವನಿಸಿತ್ತು. “ಒನಕೆಯ ಜೊತೆ ನಿನ್ನನ್ನು ನೋಡಿದ್ದೇ ಅಪರೂಪ ಓಬವ್ವಾ…ಕಸಬರಿಕೆ ಹಿಡಿದ್ದದ್ದೇ ನಿನ್ನ ಕೈಗಳು.. ಅದಾವ ಶಕ್ತಿ ನಿನ್ನ ಕೈಯಾವರಿಸಿತ್ತೋ, ಅದಾವ ದುರ್ಗೆ ನಿನ್ನನ್ನಾವಾಹಿಸಿದ್ದಳೋ, ದುರ್ಗದಲೊಂದು ಇತಿಹಾಸ ಸೃಷ್ಠಿಸಿದೆ ಓಬವ್ವಾ..ತಾಯ್ನೆಲದ ಒಲವೇ ನಿನ್ನಲ್ಲಿ ಈ ಪರಿಯ ಆವೇಶ ಸೃಷ್ಠಿಸಿತೋ ಕಾಣೆ, ದೂರ ದೂರದ ಶತಮಾನಗಳವರೆಗೂ, ಜನ ನನ್ನ ಮರೆತಾರು, ನಿನ್ನ ಹೆಸರನ್ನಲ್ಲ ಓಬವ್ವಾ..”.ಕುಸಿದು ಬಿದ್ದು ಬಿಕ್ಕಿ ಬಿಕ್ಕಿ ಅತ್ತ.

ಕೆಲವು ತಿಂಗಳುಗಳ ಹಿಂದೆ…..
ಆ ಸುದ್ದಿ ಹೈದರಾಲಿಯ ಕಿವಿಗೆ ಬಿತ್ತು. ಚಿತ್ರದುರ್ಗದ ಪಾಳೆಯಗಾರ ಮದಕರಿ ನಾಯಕ ಗೌಪ್ಯವಾಗಿ ಮರಾಠರೊಂದಿಗೆ ಮೈತ್ರಿ-ಒಪ್ಪಂದ ಮಾಡಿಕೊಂಡಿದ್ದಾನೆ.ತನ್ನ ವಿಶಾಲ ಸಂಸ್ಥಾನಕ್ಕೆ, ಸಾಮ್ರಾಜ್ಯ ವಿಸ್ತರಣೆಯ ತನ್ನ ಹಪಹಪಿಗೆ ಈ ಸುದ್ದಿ ಸಾಧುವಲ್ಲ.ಮರಾಠರು ಜನ್ಮತಃ ವೀರರು, ಯುದ್ಧದಲ್ಲಿ ಪಳಗಿದವರು. ಮೊಗಲರನ್ನು ವಿಂಧ್ಯದಲ್ಲೇ ಹುಟ್ಟಡಗಿಸಿದವರು. ಶಿವಾಜಿಯ ಯುಕ್ತಿಯ ಪರಂಪರೆಯವರು.ತುಸು ಮೈಮರೆತರೂ ಮಧ್ಯ ಕರ್ನಾಟಕ ತನ್ನ ಕೈ ತಪ್ಪೀತೆಂದು ಕಳವಳಗೊಂಡ.ದಕ್ಷಿಣದ ಮೈಸೂರಿನಲ್ಲಿದ್ದುಕೊಂಡು ತಾನು ಪರಿಸ್ಥಿತಿಯನ್ನು ತೆಕ್ಕೆಗೆ ತೆಗೆದುಕೊಳ್ಳಲಾರೆನೆಂಬ ಆತಂಕ ಮನೆಮಾಡಿತು. ಸರಿ, ಮುಂದಿನ ಯೋಜನೆ “ಚಿತ್ರದುರ್ಗದ ಮೇಲೆ ದಂಡಯಾತ್ರೆ”, ಮದಕರಿನಾಯಕ ಸಂಪೂರ್ಣ ಶರಣಾಗತಿಯನ್ನೊಪ್ಪುವವರೆಗೆ ತಾನು ನಿದ್ರ್ರಿಸಲಾರೆ, ಹಠ ಮನೆ ಮಾಡಿತು ಹೈದರನಲ್ಲಿ.ದುರ್ಗದ ಕೋಟೆಯನ್ನು ಭೇದಿಸಿ, ಸಿಂಹಾಸನಕ್ಕೆ ಲಗ್ಗೆಯಿಡುವುದು ಸುಲಭದ ಮಾತಾಗಿರಲಿಲ್ಲ . ಏಳು ಸುತ್ತಿನ ಕೋಟೆಯದು. ಕಗ್ಗಲ್ಲಲ್ಲೇ ನಿರ್ಮಿತವಾದ ಅಭೇದ್ಯ ಕೋಟೆಯದು.ಅಹಂಕಾರಿ ಹೈದರ ಆದರೂ ಲಗ್ಗೆಯಿಟ್ಟ. ಕೋಟೆಯ ಕಲ್ಲುಗಳು ನಿರ್ದಯವಾಗಿದ್ದವು. ಹೈದರನ ತೋಪುಗಳನ್ನು ನುಂಗಿ ನೀರು ಕುಡಿದು ತೇಗಿದ್ದವು ಕಲ್ಲುಗಳು.ಒಬ್ಬೇ ಒಬ್ಬ ಸೈನಿಕ ಕೋಟೆಯನ್ನು ಹತ್ತಿ ಒಳಗಿಳಿಯಲಾಗಲಿಲ್ಲ. ಸುಮಾರು ಒಂಬತ್ತು ಬಾರಿ ಸೋತು ಸುಣ್ಣವಾದ ಹೈದರ ಮೈಸೂರಿಗೆ ಹಿಂದಿರುಗಿದ್ದ.ಪ್ರತಿ ಬಾರಿ ಸೋತಾಗಲೂ ಹಠ ಇನ್ನಷ್ಟು ಹೆಚ್ಚುತ್ತಿತ್ತು. ನಿಜವೇ, ಬರೀ ಸೈನಿಕನಿಂದ ಒಬ್ಬ ಸಾಮ್ರಾಟನಾದ ಹೈದರ್ ಒಬ್ಬ ಸಾಮ್ರಾಜ್ಯದಾಹಿಯೇ.

ಶಕ್ತಿಯಿಂದ ದುರ್ಗವನ್ನು ಗೆಲ್ಲಲಾರದೆ, ಯುಕ್ತಿ ಪ್ರಯೋಗಕ್ಕೆ ಮುಂದಾದ ಹೈದರಾಲಿ. ದೂತನನ್ನು ಗೌಪ್ಯವಾಗಿ ದುರ್ಗಕ್ಕೆ ಕಳುಹಿಸಿದ.ದೂತ ಕೋಟೆಯ ವಿಸ್ತಾರ, ಆಕಾರ, ಕೊರತೆಗಳನ್ನು ತಿಳಿದು ಹೈದರಾಲಿಗೆ ವರದಿಯೊಪ್ಪಿಸಬೇಕಿತ್ತು.

ದೂತ ಬಂದವನೇ ಮಹಾನ್ ದುರ್ಗದ ಸುತ್ತಳತೆಯನ್ನು ಪರೀಕ್ಷಿಸಿದ. ಆನೆ ಕುದುರೆ, ಸೈನಿಕರಿಗೆ ಈ ಕಲ್ಲುಗಳು ಶರಣಾಗಲಾರವೆಂದು ಅವನಿಗೆ ಮನದಟ್ಟಾಯಿತು.ಹಿಂಬಾಗಿಲಿನಲ್ಲೇ ಒಳಪ್ರವೇಶಿಸಬೇಕೆಂಬ ಉಪಾಯ ಹೊಳೆಯಿತು.ಆ ಸಂಜೆ, ಅಲ್ಲೇ ಸುತ್ತಾಡುತ್ತಿದ್ದ ದೂತನಿಗೆ, ಹಾಲು ಮಾರುವವಳು ಅಲ್ಲೇ ಒಳನುಸುಳಿದ್ದು ಕಾಣಿಸಿತು. ಅರೆ, ಇಲ್ಲಿ ಬಾಗಿಲುಗಳೇ ಇಲ್ಲ, ಪಹರೆಯವರೂ ಇಲ್ಲ, ಅದು ಹೇಗೆ ಒಳಗೆ ನುಗ್ಗಿದಳು ಎಂದು ಕಾತರಿಸಿ ಅವಳನ್ನೇ ಹಿಂಬಾಲಿಸಿದ.ಅಲ್ಲಿ ಕಂಡಿದ್ದೇ ಒಂದು ಕಿಂಡಿ, ಸಣ್ಣ ಕಿಂಡಿ. ಒಬ್ಬ ಕಷ್ಟ ಪಟ್ಟು ನುಸುಳಬಹುದಾದ ಕಿರಿದಾದ ಕಿಂಡಿ.ಸಿಕ್ಕಿತು ದಾರಿ, ನಮ್ಮ ಹೈದರ ಸಿಂಹಾಸನಕ್ಕೆ ಲಗ್ಗೆಯಿಡಬೇಕಾದರೆ ಇದೇ ಕಿಂಡಿ ರಾಜಮಾರ್ಗ ಎಂದು ಕ್ಷಣಾರ್ಧದಲ್ಲಿ ತಿಳಿದುಕೊಂಡ ಚತುರ ದೂತ.

ತಡಮಾಡಲಿಲ್ಲ. ಒಡನೆಯೇ ಮೈಸೂರಿಗೆ ಓಡಿ, ನವಾಬನಿಗೆ ವರದಿಯೊಪ್ಪಿಸಿದ.ಹೈದರನಿಗೆ ಇಂತಹ ರಹದಾರಿ ಬೇಕಿತ್ತು. “ಇನ್ನು ಕಾಯುವುದರಲ್ಲಿ ಅರ್ಥವಿಲ್ಲ” ಎಂದೆಣೆಸಿದವನೇ, ಸಾವಿರಾರು ಸೈನಿಕರ ತುಕಡಿಯನ್ನು ನಿಯೋಜಿಸಿ, ದುರ್ಗಕ್ಕೆ ಲಗ್ಗೆಯಿಟ್ಟ. ಎಲ್ಲವೂ ಮರೆಯಲ್ಲಿ ನಡೆಯುತ್ತಿತ್ತು. ದುರ್ಗದ ಪಾಳೆಯಗಾರನಿಗಾಗಲೀ, ಪ್ರಜೆಗಳಿಗಾಗಲೀ ಇದರ ಕಿಂಚಿತ್ತೂ ಕುರುಹು ಸಿಗಲಿಲ್ಲ.
ಇದಾವುದರ ಅರಿವೇ ಇಲ್ಲದೆ, ದುರ್ಗ ನಿರಾತಂಕವಾಗಿತ್ತು. ಜನ ನೆಮ್ಮದಿಯಿಂದಿದ್ದರು. ಅವರಿಗೇನು ಗೊತ್ತು ಅಂತಕ ಅನತಿದೂರದಲ್ಲಿದ್ದಾನೆಂದು, ತಮ್ಮ ಸಿಂಧೂರ, ತಮ್ಮ ಸೂರು, ತಮ್ಮ ರೊಟ್ಟಿಯನ್ನು ಕಸಿದು ರಕ್ತ ಸಿಂಹಾಸನದಲ್ಲಿ ಅಟ್ಟಹಾಸಗೈಯಲು ಕಾಯುತ್ತಿದ್ದಾನೆಂದು.

ಇದೇ ಯುದ್ಧ. ಇಲ್ಲಿ ಎಲ್ಲವೂ ಸರಿ. ತಪ್ಪಾವುದೂ ಇಲ್ಲ. ಮಾರಣಹೋಮ ನಡೆಸಿ, ತನ್ನಾತ್ಮದ ಎಚ್ಚರಿಕೆಯನ್ನು ಮಣಿಸಲು ಒಂದು ಅನುಕೂಲ ನೀತಿ ಬೇಕಲ್ಲ, ಅದಕ್ಕೆ ಕಾಡಿನ ನೀತಿಯೆಂಬ ತಪ್ಪು ಹೆಸರು.ಹೊಟ್ಟೆ ತುಂಬಿದ ಹುಲಿಯ ಗುಹೆಯೊಳಗೆ ಮೇಕೆ ನುಗ್ಗಿ, ಆಟವಾಡಿ ನಿರಾತಂಕವಾಗಿ ಮರಳಬಹುದು. ಮನುಷ್ಯ ಹಾಗಲ್ಲ. ಅವನಿಗೆ ಹಸಿವು ಹೊಟ್ಟೆಯದು ಮಾತ್ರವಲ್ಲ. ಕಣಕಣವೂ ಕ್ಷಣಕ್ಷಣವೂ ಹಸಿವೇ. ತನ್ನ ಜೀವನಮಿತಿ ಇನ್ನು ಹತ್ತು ಶತಮಾನಗಳೆಂಬಷ್ಟು ಸುಳ್ಳುಭ್ರಮೆಯಲ್ಲೇ ಅವನಾಟ.

ಕುಯುಕ್ತಿಯ ಸೈನಿಕರು ಸನ್ನದ್ಧರಾಗಿದ್ದರು. ಕೋಟೆಯ ಉದ್ದಗಲಗಳ ಬಗ್ಗೆ ಮನದಟ್ಟು ಮಾಡಿಕೊಂಡು ಬರಲು ಕಿಂಡಿಯ ಬಳಿ ಸಾಗಿದ್ದರು.ಶತ್ರು ಮೈ ಮರೆತಿರುವಾಗ ಕತ್ತಿ ಹಿರಿದು ಕತ್ತು ಸೀಳಲು.

ಆಗಷ್ಟೇ…..
ಪಹರೆಯ ಕಾಲನಾಯಕ ಬಂಡೆಯ ತುದಿಯಿಂದಿಳಿದು, ತನ್ನ ಗುಡಿಸಲಿನತ್ತ ಮುಖ ಮಾಡಿದ್ದ. ಹೊಟ್ಟೆ ಚುರುಗುಡುತ್ತಿತ್ತು.ಸತಿ ಬಾಗಿಲಲ್ಲೇ ಕಾಯುತ್ತಿದ್ದಳು. ಅಕ್ಕರೆಯ ಓಬವ್ವ. ಮಕ್ಕಳಿಲ್ಲದ ಕೊರಗು ಮನೆಮಾಡಿದ್ದರೂ ಇಬ್ಬರದು ಸುಖೀ ಕುಟುಂಬ.ಬಂದವನೇ ಉಣ್ಣಲು ಕುಳಿತ. ಓಬವ್ವ ಬಡಿಸುತ್ತಿದ್ದಳು. ಮುದ್ದೆ ತಿಂದು ನೀರು ಕುಡಿದು, ಒಂದರೆಘಳಿಗೆ ಸತಿಯೊಂದಿಗೆ ಮಾತನಾಡಿ ಪಹರೆಗೆ ಮರಳುವುದು ನಿತ್ಯ ಕಾಯಕವಾಗಿತ್ತು, ನಾಯಕನಿಗೆ.ಮಡಿಕೆಯೊಳಗೆ ನೀರು ಮುಗಿದಿತ್ತು. ಅಲ್ಲೇ ಕಿಂಡಿಯ ಬಳಿ ಒಂದು ಕೊಳವಿತ್ತು. ಅಲ್ಲಿಂದಲೇ ನಿತ್ಯ ನೀರು ತರುತ್ತಿದ್ದಳು.ಸರಿ, ನೀರು ತರುವೆನೆಂದು ಕೊಳದ ಬಳಿಗೆ ಹೊರಟಳು. ತರಲು ಹೋದದ್ದು ನೀರನ್ನು, ಆದರೆ ನಿರಕ್ಷರಕುಕ್ಷಿ ಓಬವ್ವ ಬರೆದದ್ದು ತ್ಯಾಗದ ಇತಿಹಾಸ. ಕನ್ನಡ ನಾಡು ಎಂದೂ ಮರೆಯಲಾಗದ ಬಲಿದಾನದ ಇತಿಹಾಸ.ಕಿಂಡಿಯ ಬಳಿಗೆ ಬರುವಷ್ಟರಲ್ಲಿ, ಪಿಸುಮಾತು ಕೇಳಿಸಿತು ಓಬವ್ವಳಿಗೆ. ಕಲ್ಲಿಗೆ ಕಿವಿಯಾನಿಸಿದಳು. ಚತುರೆ ಓಬವ್ವಳಿಗೆ ತಿಳಿಯಿತು “ಹೈದರ ಕೋಟೆಯಾಚೆಯಿದ್ದಾನೆ, ಸೈನಿಕರು ನುಸುಳಲು ಸಿದ್ಧರಿದ್ದಾರೆ”.ಯೋಚಿಸಲು ಸಮಯವಿರಲಿಲ್ಲ. ಜೀವ ಮುಡಿಪಿಟ್ಟಾದಾರೂ ಸರಿಯೆ, ಕೋಟೆಯುಳಿಸಿಕೊಂಡೇನು, ಈ ಕೋಟೆ ನನ್ನ ಮಗುವೂ ಹೌದು, ನನ್ನ ತಾಯಿಯೂ ಹೌದು. ಮಹಾದೇವನಾಣೆ, ಹೈದರನಿಗೆ ಕೋಟೆ ಶರಣಾಗುವುದನ್ನು ನೋಡಲಾರೆ.

ತಕ್ಷಣ ತನ್ನ ಒನಕೆಯ ನೆನಪಾಯಿತು. ತಾನು ಭತ್ತ ಕುಟ್ಟುವ ಒನಕೆ. ತಡಮಾಡದೇ ಗುಡಿಸಲಿಗೆ ನುಗ್ಗಿದಳು. ನಾಯಕ ಇನ್ನೂ ಊಟದಲ್ಲಿ ಮಗ್ನನಾಗಿದ್ದ. “ಇಲ್ಲ, ಊಟದ ನಡುವೆ ಭಂಗ ಬೇಡ” ಅಂದುಕೊಂಡವಳೇ, ನಾಯಕನಿಗೆ ಅರಿವಿಲ್ಲದಂತೆ ಒನಕೆಯನ್ನು ಹೊತ್ತೊಯ್ದಳು.

ಅಷ್ಟರಲ್ಲಿ….
ಹೈದರನ ಸೈನಿಕನೊಬ್ಬ ಒಳನುಸುಳಿದ್ದ.ಕೋಟೆಯೊಳಗೆ ಎಲ್ಲವನ್ನೂ ಅಂದಾಜಿಸುತ್ತಿದ್ದ.

ಮತ್ತೆ ಕಿಂಡಿಯ ಬಳಿ ಸಾರಿದ ಓಬವ್ವಳಲ್ಲಿ ಕ್ರೋಧ ಭುಗಿಲೆದ್ದಿತು. ತಾಯ್ನಾಡ ಭಕ್ತಿ ಕಣಕಣದಲ್ಲೂ ಹರಿದಿತ್ತು. ಒನಕೆಯನ್ನು ಹಿಡಿದೆತ್ತಿ “ಜೈ ಭುವನೇಶ್ವರಿ” ಎಂದು ನೆನೆದಳು.

ಒಬ್ಬ ಸೈನಿಕ ನುಸುಳಿದ. ತಲೆ ಎತ್ತುವಷ್ಟರಲ್ಲಿ ಓಬವ್ವ ಬೀಸಿದ ಒನಕೆ ಅವನ ತಲೆಯನ್ನು ಹೋಳಾಗಿಸಿತ್ತು.ಉಸಿರಾಡುವಷ್ಟೂ ಸಮಯ ಕೊಟ್ಟಿರಲಿಲ್ಲ ಓಬವ್ವ. ಅಷ್ಟು ಬಲವಾಗಿತ್ತು ಆಕೆಯ ಏಟು.ಹೆಣವಾದ ಅವನನ್ನು ಎಳೆದು ಒಳಹಾಕಿದಳು. ಇದರ ಅರಿವಿಲ್ಲದೇ ಇನ್ನೊಬ್ಬ ಸೈನಿಕ ನುಸುಳಿದ. ಅವನಿಗೂ ಇದೇ ಗತಿ. ಮನದಲ್ಲೇ ಪ್ರತಿಜ್ಞೆ ಮಾಡಿದಳು “ಮುತ್ತಿದರೂ ಮುಟ್ಟಲಾರೆ ನೀನು, ಹೈದರಾ…ಈ ಕೋಟೆ ನಮ್ಮ ತಾಯಿ”.ಹತ್ತಾಯಿತು, ಇಪ್ಪತ್ತಾಯಿತು ನಲ್ವತ್ತಾದವು ಕಳೇಬರಗಳು. ರಣರಂಗ ಮಾಡಿ ಹಾಕಿದ್ದಳು ಓಬವ್ವ. ರಕ್ತದ ಕಾಲುವೆಯೇ ಹರಿದಿತ್ತು. ಅದೇನು ಆವೇಶ ಮನೆ ಮಾಡಿತ್ತೋ, ಅವಳಲ್ಲಿ ಅದಾವ ನಿಷ್ಠೆ ಆವಾಹಿಸಿತ್ತೋ, ಕನ್ನಡ ಚರಿತ್ರೆ, ಅರೆಕ್ಷಣ ತನ್ನ ಉಸಿರು ನಿಲ್ಲಿಸಿತ್ತು, ಸಮಯವನ್ನೇ ಮರೆತಿತ್ತು.
ಅದಾವ ಪರಿವೆಯಿಲ್ಲದೇ ನಾಯಕ ಉಣ್ಣುತ್ತಿದ್ದ. ಇನ್ನೂ ಓಬವ್ವ ಮರಳದಿದ್ದದ್ದನ್ನು ಗಮನಿಸಿದ. ಸೂಕ್ಷ್ಮ ಪಹರೆಯ ಬುದ್ಧಿ ಜಾಗೃತವಾಯಿತು. ಓಡಿ ಕೊಳದ ಬಳಿ ಬಂದ. ಅಲ್ಲಿ ಕಂಡಿದ್ದು ಆತ ತನ್ನ ಸತಿಯನ್ನಲ್ಲ. ದುರ್ಗದ ದುರ್ಗೆಯನ್ನು. ಆಕೆಯ ಕಣ್ಣು ಕೆಂಡವಾಗಿತ್ತು.ಕ್ಷಣಕಾಲ ಮಾತುಮರೆತ.

ಓಬವ್ವ ತಕ್ಷಣ ಚೇತರಿಸಿ ಕಿರುಚಿದಳು “ಕಹಳೆಯೂದಿ. ಹೈದರ ಆಚೆಯಿದ್ದಾನೆ. ಓಡಿ” ನಿಧಾನಿಸಲಿಲ್ಲ ನಾಯಕ. ಕೂಡಲೇ ಗುಡಿಸಲಿಗೆ ನುಗ್ಗಿ ಕಹಳೆಯೂದಿದ. ತಕ್ಷಣವೇ ಹತ್ತಾರು ಕಹಳೆಗಳು ಮೊಳಗಿದವು.ಅಷ್ಟೇ ಸಾಕಿತ್ತು. ದುರ್ಗದ ಸೈನಿಕರು ಕ್ಷಣಾರ್ಧದಲ್ಲಿ ಹುಲಿಗಳಂತೆ ಮುಗಿಬಿದ್ದರು. ಕೋಟೆಯ ಬಾಗಿಲು ತೆರೆದರು.ಹೈದರನ ಸೈನಿಕರನ್ನು, ಸೇನೆಯನ್ನು ಕಂಡ ಕಂಡಲ್ಲಿ ಕೊಚ್ಚಿದರು. ರಕ್ತ ಪ್ರವಾಹವೇ ಹರಿಯಿತು.ಘೋರ ಕಾಳಗ. ದುರ್ಗದ ಉನ್ಮತ್ತ  ಸೈನಿಕರನ್ನು ತಡೆಹಿಡಿಯುವವರಿರಲಿಲ್ಲ. ಕೈ ಬಾಯಿಗಿಂತ ಹೆಚ್ಚು ಕತ್ತಿ ಗುರಾಣಿಗಳು ಮಾತಾಡಿದವು.ತಮ್ಮದು ವೀರ ಕನ್ನಡಿಗರ ಪರಂಪರೆಯೆಂಬುದನ್ನು ಸಾಬೀತು ಮಾಡಲು ಅವರಿಗೆ ಬೇಕಾದದ್ದು ಬರೆಯ ಒಂದು ಗಂಟೆ.

ಓಬವ್ವಳನ್ನು ಹಿಡಿಯುವವರಿಲ್ಲ. ಒನಕೆ ಇನ್ನೂ ವಿಶ್ರಮಿಸಿರಲಿಲ್ಲ.ಅಲ್ಲೇ ಬಂದ, ಮೊದಲು ನುಸುಳಿದ ಸೈನಿಕ. ಅದಾವ ಮರೆಯೊಳಗೆ ಅವಿತಿದ್ದನೋ, ಕೈಯಲ್ಲಿದ್ದ ಚೂರಿ ಬೀಸಿದ.ದುರದೃಷ್ಟಕ್ಕೆ ಚೂರಿ ತನ್ನ ಗುರಿ ತಪ್ಪಿರಲಿಲ್ಲ. ಬೀಸಿದ ಚೂರಿ ಓಬವ್ವನ ಕಿಬ್ಬೊಟ್ಟೆಯೊಳಗೆ ನೆಟ್ಟಿತ್ತು. ರಕ್ತ ಜಿನುಗುತ್ತಿತ್ತು. ಚೂರಿ ಕಿತ್ತೆಸೆದು ಮತ್ತೆ ಒನಕೆಯೆತ್ತಿದಳು. ಸೈನಿಕರ ರುಂಡ ಮುಂಡ ಚೆಲ್ಲಾಟವಾಡಿದಳು. ತಿಳಿಗೊಳ ಕೆಂಪಾಗಿತ್ತು.

ಆಕೆಯ ಬಾಯಲ್ಲಿ ಒಂದೇ ಮಾತು “ನಮ್ಮ ಕೋಟೆ ಇದು…ಮುತ್ತಿದರೂ ಮುಟ್ಟಲಾರೆ ನೀ ಹೈದರಾ…”. ಅಷ್ಟರಲ್ಲಿ ನಾಯಕನ ಅದಾವುದೋ ಸೈನಿಕ, ಹೈದರನ ಸೈನಿಕನ ಶಿರಚ್ಛೇದ ಮಾಡಿದ್ದ.

ದೇಹ ಸೋಲುತ್ತಿತ್ತು ಓಬವ್ವಳಿಗೆ. ಸಾಕಷ್ಟು ರಕ್ತ ಹರಿದಿತ್ತು.ಒನಕೆ ಕೈಯಿಂದ ದೂರ ಬೀಳುತ್ತಿದ್ದಂತೆ, ಕುಸಿದು ಬಿದ್ದಳು. ಪ್ರಾಣ ಉಳಿಯಲಾರದು, ಅಂತಿಮ ಘಳಿಗೆ ಸನ್ನಿಹಿತವಾಗಿದೆಯೆಂದು ನಿಶ್ಚಯವಾಯಿತು ಅವಳಿಗೆ. ತನ್ನ ಗಂಡನನ್ನು ಹುಡುಕಿದಳು. ಕಾಲನಾಯಕ ಕಾಣ ಸಿಗಲಿಲ್ಲ. ಅದೆಲ್ಲೋ ಕಡೆ ಸೆಣಸುತ್ತಿದ್ದ.

ಕೊನೆಯಬಾರಿ ದುರ್ಗದ ನೆತ್ತಿಯಲ್ಲಿದ್ದ ಪತಾಕೆ ನೋಡಿದಳು.ಕಣ್ಮುಚ್ಚುವ ಮೊದಲು ಅದೆಷ್ಟೋ ವೈರಿಗಳ ಕಣ್ಮುಚ್ಚಿಸಿದ ಕಣ್ಣಲ್ಲಿ ಸಂತೃಪ್ತಿಯಿತ್ತು.ಕಲ್ಲಲ್ಲಿ ಕಲ್ಲಾದಳು ಓಬವ್ವ. ಚರಿತ್ರೆಯಲ್ಲಿ ಶಾಶ್ವತ ಪುಟವಾದಳು ಓಬವ್ವ.

ಮರ್ಮಾಘಾತವಾಗಿತ್ತು ಹೈದರನಿಗೆ. ದುರ್ಗದ ಸೈನಿಕರಿಂದ ಈ ತೆರನಾದ ಆಕ್ರಮಣ ಅನಿರೀಕ್ಷಿತವಾಗಿತ್ತು.ತಾನು ಸೋತಿದ್ದ. ಇನ್ನಿಲ್ಲದಂತೆ ಜಾರಿದ್ದ. ಅಳಿದುಳಿದ ಸೈನಿಕರೊಡಗೂಡಿ ಪಲಾಯನಗೈದ.ಬಲಶಾಲಿ ಸಾಮ್ರಾಟನಿಗೆ ಚಿಕ್ಕ ತುಕಡಿಯ ಪಾಳೆಯಗಾರನಿಂದ ಘೋರಾತಿಘೋರ ಅವಮಾನವಾಗಿತ್ತು.ವೀರ ಕನ್ನಡಿಗರ ಕೆಚ್ಚಿನ ಪರಿಚಯವಾಗಿತ್ತು.

ಅಂದು ಸಂಜೆ…ಅಲ್ಲಿ ಅದೇ ಕಿಂಡಿಯ ಬಳಿ ಎಲ್ಲರೂ ಸೇರಿದ್ದರು.
ಮದಕರಿನಾಯಕನಿಗೆ ಕರುಳು ಚುರ್ರೆಂದಿತು.ಓಬವ್ವಳ ಕಳೇಬರದ ಮುಂದೆ ಮಂಡಿಯೂರಿದ್ದ.ಕಾಲನಾಯಕನಿಗೆ ಎಲ್ಲವೂ ಅಯೋಮಯವಾಗಿತ್ತು. ವೀರ ಮದಕರಿಗೂ ಗಂಟಲು ಕಟ್ಟಿತ್ತು.

ಗದ್ಗದಿಸಿದ
“ಬರೆಯ ಒನಕೆಯ ಮುಂದೆ ತೋಪುಗಳು ಮೊಣಕಾಲೂರಿದವು.ನಿನ್ನ ಒನಕೆಯ ಸದ್ದು ಇನ್ನು ಶಾಶ್ವತವಾಗಿ ಇಲ್ಲಿಯ ಕಲ್ಲುಗಳಲ್ಲಿ ಪ್ರತಿಧ್ವನಿಸುತ್ತವೆ ಓಬವ್ವಾ..ಕಣ್ತೆರೆದು ನೋಡು, ಕಲ್ಲುಗಳೂ ಅಶ್ರು ಮಿಡಿಯುತ್ತಿವೆ, ಒಬ್ಬ ವೀರ ವನಿತೆ ಇಲ್ಲಿ ಹುಟ್ಟಿದ್ದಕ್ಕೆ, ತಾಯ್ನೆಲವನ್ನು ಪೊರೆದದ್ದಕ್ಕೆ, ಕೊನೆಗೆ ತ್ಯಾಗಮೂರ್ತಿಯಾಗಿ ಮಣ್ಣಲ್ಲಿ ಮಣ್ಣಾಗಿದ್ದಕ್ಕೆ.ನಿನ್ನ ಹೆಸರು ಕನ್ನಡ ನಾಡಿನ ಚರಿತ್ರೆಯಲ್ಲಿ ಅಜರಾಮರ…ಇಲ್ಲಿಗೊಬ್ಬಳೇ ಒಬ್ಬಳು ಓಬವ್ವ”

[ಯಂತ್ರಗಳ ನಡುವೆ, ತಂತ್ರಗಳ ನಡುವೆ, ವ್ಯಾಪಾರೀ ಮನಸ್ಸುಗಳ ನಡುವೆ, ಲೆಕ್ಕಾಚಾರದ ಬದುಕಿನ ನಡುವೆ, ಇನ್ನಷ್ಟು ಮತ್ತಷ್ಟು ಬೇಕೆಂಬ ಚಕ್ರಗಳ ನಡುವೆ, ಬರೆಯ ಶಿಷ್ಟಾಚಾರವಾಗುವ ನಿಸ್ತಂತು ಸಂಬಂಧಗಳ ನಡುವೆ, ಕೊನೆಗೆ ಎಲ್ಲರ ಬಾಯಲ್ಲಿ ಹಾಸ್ಯಾಸ್ಪದವಾಗುವ ಶ್ರೀಮಂತ ಭಾಷೆಯ ಅಕ್ಷರಗಳ ನಡುವೆ, ನಿರಕ್ಷರಿ ಓಬವ್ವ ನೆನಪಾಗುತ್ತಾಳೆ..ತ್ಯಾಗ ಬಲಿದಾನ ನಿಷ್ಠೆಗಳ ಪಾಠ ಕಲಿಸುತ್ತಾಳೆ, ಮತ್ತೆ ದುರ್ಗಕ್ಕೆ ಹೋಗಿ ಶಿಲೆಯಾಗುತ್ತಾಳೆ.]

4 ಟಿಪ್ಪಣಿಗಳು Post a comment
  1. G Dakshina Murthy
    ನವೆಂ 19 2015

    ಓಬವ್ವೆಯ ಸಾಹಸಗಾಥೆ – ಮನಮಿಡಿಯುವ ಆ ತಾಯಿಯ ಕಥೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ ಗಿರಿಪ್ರಸಾದರು. ಓದುತ್ತ ಓದುತ್ತ ಹೃದಯ ಆರ್ದ್ರವಾಯಿತು. ಕಣ್ಣು ತೇವಗೊಂಡವು. ಇಂಥ ಒಬ್ಬ ತ್ಯಾಗಮೂರ್ತಿಯನ್ನು ನೆನೆಯಲೂ ಆಗದ, ಆಕೆಯ ಜಯಂತಿಯನ್ನು ಆಚರಿಸಲೂ ಆಗದ ನಿರ್ವೀರ್ಯ ಸಮಾಜವನ್ನು ಕುರಿತು ಧಿಕ್ಕಾರವೆನಿಸುತ್ತದೆ. ಅಸಹ್ಯ ಹುಟ್ಟುತ್ತದೆ.

    ಉತ್ತರ
  2. Nagaraja
    ನವೆಂ 19 2015

    ಈ ಚಿತ್ರಣವನ್ನು ಓದಿದ ಯಾವುದೇ ಕನ್ನಡಿಗನ ಕಣ್ಣಿನಲ್ಲಿ ನೀರಾಡದೆ ಇರಲು ಸಾಧ್ಯವಿಲ್ಲ.

    ಉತ್ತರ
  3. Goutham
    ನವೆಂ 20 2015

    ಚಿತ್ರದುಗ೯ವನ್ನು ಸಲಹಿದ ಆ ತಾಯಿಯನ್ನು ಎಷ್ಟು ನೆನೆದರೂ ಸಾಲದು. ಹೈದರ್ ಚಿತ್ರದುಗ೯ಕ್ಕೆ ಯುದ್ಧಕ್ಕೆ ಬಂದಾಗ, ಮರಾಠಾ ಪೇಶ್ವಗಳು ಶೃಂಗೇರಿಯಲ್ಲಿ ದಾಳಿ ಮಾಡಿದಾಗ ಉಂಟಾದ ಹಾನಿ ಮತ್ತು ಆಘಾತಗಳನ್ನು ನೆನೆಸಿಕೊಂಡರೆ ಕಲ್ಲೆದೆಯವರಿಗೂ ದುಃಖವಾಗುತ್ತದೆ. ಚಿತ್ರದುಗ೯ಕ್ಕೆ ಓಬವ್ವ ಮತ್ತು ಶೃಂಗೇರಿಗೆ ಟಿಪ್ಪು ಆಪತ್ಬಾಂಧವರು.

    ಉತ್ತರ
  4. ನವೆಂ 20 2015

    ಸುಂದರ -ಆಪ್ತವಾದ ಬರಹ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments