ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 20, 2015

4

ವಾಲ್ಮೀಕಿ ಯಾರು?

‍ನಿಲುಮೆ ಮೂಲಕ

– ಡಾ| ಜಿ. ಭಾಸ್ಕರ ಮಯ್ಯ

ವಾಲ್ಮೀಕಿ ಯಾರುಇಂದು ಕನ್ನಡ ಸಾಹಿತ್ಯದ ಅದಮ್ಯ ಚೇತನಗಳಾದ ಮಹಾಕವಿಗಳನ್ನು ಜಾತಿಯ ಗೂಟಕ್ಕೆ ಕಟ್ಟಿ ಬಲಿ ಕೊಡುತ್ತಿರುವ ಪದ್ಧತಿ ಈಗ ಸರಿಸುಮಾರು ನಾಲ್ಕು-ಐದು ದಶಕಗಳಿಂದ ನಡೆಯುತ್ತಿದೆ. ಇದರ ಐತಿಹಾಸಿಕ ದುರಂತವೆಂದರೆ ನವೋದಯದ ನಂತರ ಎಡವುತ್ತಾ ಬಂದ ಅರೆಬರೆ ಪ್ರಕಾರವಾದ ನವ್ಯ ಸಾಹಿತ್ಯ. ಅದು ಬೆಳೆಯುವ ಮುಂಚೆಯೇ ಕಮರಿ ಹೋಯ್ತು. ಅಡಿಗ, ಲಂಕೇಶ್ ಅದಕ್ಕೊಂದು ಅಪವಾದ. ನವೋದಯದ ಪತನಶೀಲ ಕಾಲದ ಕೆಲವು ಜಾತೀಯ ವಿಷಬೀಜಗಳು ಬಂಡಾಯದ ಕಾಲದಲ್ಲಿ ಅಲ್ಲಲ್ಲಿ ಮೊಳಕೆಯೊಡೆದವು. ಈ ಬಂಡಾಯದ ರೂವಾರಿಗಳಲ್ಲಿ ಅನೇಕ ಪ್ರಮುಖರು ಅಲ್ಪವಿದ್ಯಾ ಅಪ್ರಬುದ್ಧ ಹುಸಿ ಕ್ರಾಂತಿಕಾರರು. ಇವರು ನವೋದಯದ ಪತನಶೀಲ ಮತ್ತು ನವ್ಯದ ಗೊಬ್ಬರದಿಂದಲೇ ಬೆಳೆದವರು. ಭಾರತದಾದ್ಯಂತ ಹಿಂದಿ, ಬಂಗಾಳಿ ಮೊದಲಾದ ಭಾಷೆಗಳಲ್ಲಿ ಸರಿಸುಮಾರು ಪ್ರಗತಿಶೀಲ ಜನವಾದಿ ಸಾಹಿತ್ಯಪ್ರಕಾರವು ಆರೋಗ್ಯಕರವಾಗಿ ಬೆಳೆದು ಬಂದರೆ ಕರ್ನಾಟಕದಲ್ಲಿ ಮುಖ್ಯವಾಗಿ ರೂಲಿಂಗ್ ಐಡಿಯಾಗಳನ್ನು ಬಿಂಬಿಸುವ ಹುಸಿ ಬಂಡಾಯಗಾರರೇ ‘ರೂಲಿಂಗ್’ ಆದರು. ರೂಲಿಂಗ್ ಕ್ಲಾಸಿನ ಉತ್ಪನ್ನವಾದ ಈ ‘ರೂಲಿಂಗ್’ ಐಡಿಯಾದವರು ಇಂದು ಕೂಡಾ ರೂಲಿಂಗ್ ಪಕ್ಷದ ಬಹುದೊಡ್ಡ ಪರಾಕುದಾರರು.

ಇದರ ಪರಿಣಾಮವಾಗಿ ಇಂದು ಕನಕದಾಸರು ಕುರುಬನಾಗಿದ್ದಾರೆ.ಬಸವಣ್ಣ ಲಿಂಗಾಯತನಾಗಿದ್ದಾರೆ.ಕುವೆಂಪು ಗೌಡರಾಗಿದ್ದಾರೆ.ಅಂತೆಯೇ ಹಲವಾರು ಶ್ರೇಷ್ಠಲೇಖಕರು ಬ್ರಾಹ್ಮಣ-ಶೂದ್ರ ಇತ್ಯಾದಿ ವಿಧ ವಿಧ ಜೈಲುಗಳಲ್ಲಿ ಬಂಧಿತರಾಗಿದ್ದಾರೆ. ಹಿಂದೆಂದೂ ಇಲ್ಲದ ಜಾತಿವಾದ ಇಂದು ಸಾಹಿತ್ಯ ಮತ್ತು ಸಂಸ್ಕೃತಿಯ ವಲಯದಲ್ಲಿ ವ್ಯಾಪಿಸಿದೆ. ಈ ದುರಂತಕ್ಕೆ ಇತ್ತೀಚೆಗಿನ ಸೇರ್ಪಡೆ ವಾಲ್ಮೀಕಿ.

ವಾಲ್ಮೀಕಿ ಜನಾಂಗದ ವ್ಯಕ್ತಿಯೊಬ್ಬರು ಸರ್ಕಾರದಲ್ಲಿ ಪ್ರಭಾವಶಾಲಿಯಾಗಿದ್ದ ಕಾಲದಲ್ಲಿ ಆದಿಕವಿ ವಾಲ್ಮೀಕಿಗೆ ಹಠಾತ್ ಲಾಟರಿ ಹಾರಿತು.ವಾಲ್ಮೀಕಿ ಜಯಂತಿ ಆಚರಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತು.ಆ ದಿನ ಕರ್ನಾಟಕದಲ್ಲಿ ರಜಾದಿನವೆಂದು ಘೋಷಿಸಲಾಯಿತು. ಹೀಗೆ ಭಾರತದ ರಾಷ್ಟ್ರೀಯ ಮಹಾಕವಿಯೊಬ್ಬನಿಗೆ ಕರ್ನಾಟಕದಲ್ಲಿ ಈ ಪರಿ ಮರಣೋತ್ತರ ಗೌರವ ಸಂದಿತು. ಕರ್ನಾಟಕದಾದ್ಯಂತ ಸಭೆಸಮಾರಂಭಗಳು, ವಾಲ್ಮೀಕಿ ಭವನ ನಿರ್ಮಾಣದ ಯೋಜನೆ – ಇತ್ಯಾದಿಗಳು ವಿಜ್ರಂಭಿಸಿದವು.

ಹೀಗೆ ಮಹಾಕವಿಯೊಬ್ಬ ಜಾತಿಗೆ ಸೀಮಿತವಾಗುತ್ತಿದ್ದಂತೆಯೇ ವಾಲ್ಮೀಕಿಯ ಜಾತಿಗೆ ಸಂಬಂಧಿಸಿ ಪರ-ವಿರೋಧಗಳು ಸಂದಣಿಸಿದವು. ಎಡಪಂಥೀಯ ಮತ್ತು ಬಲಪಂಥೀಯ ಎಂಬ ಶಬ್ದಗಳು ಅಮೂರ್ತವೂ ಅಸ್ಪಷ್ಟವೂ ಆಗಿದ್ದರೂ, ಇದೇ ರೀತಿ ಇಲ್ಲೂ ಎರಡು ಬಣಗಳಾದುವು. ವಾಲ್ಮೀಕಿ ಜನಾಂಗಕ್ಕೆ ವಾಲ್ಮೀಕಿಯನ್ನು ಕಟ್ಟಿ ಹಾಕಿದವರು ತಮ್ಮನ್ನು ವಿರೋಧಿಸುವವರನ್ನು ಪ್ರತಿಗಾಮಿಗಳು, ಪುರೋಹಿತಶಾಹಿಗಳು ಮತ್ತು ಬ್ರಾಹ್ಮಣಶಾಹಿಗಳೆಂದು ಈ ಚಾಲ್ತಿಯಲ್ಲಿರುವ ಸವಕಲು ಶಬ್ದಗಳಿಂದ ಜರೆದರು.

ಈ ವಿರೋಧಿ ಬಣದಲ್ಲಿರುವ ಪ್ರಮುಖರು. ಡಾ| ಕೆ.ಎಸ್. ನಾರಾಯಣಾಚಾರ್ಯರು. 1933ರಲ್ಲಿ ಜನಿಸಿದ ಇವರು ಪ್ರಕಾಂಡ ಪಂಡಿತರು. ಬಿ.ಎಸ್ಸಿ., ಬಿ.ಎ. (ಆನರ್ಸ್) ಇಂಗ್ಲೀಷ್ ಎಂ.ಎ., ಪಿಎಚ್.ಡಿ ಪದವೀಧರರು. ಇವರು ಐವತ್ತು ವರ್ಷಗಳಿಂದ ರಾಮಾಯಣದ ಪ್ರವಚನ ಮಾಡುತ್ತಾ ರಾಮಾಯಣಾಚಾರ್ಯ ಎಂದೇ ಪ್ರಖ್ಯಾತರು. ಇವರು ‘ವಾಲ್ಮೀಕಿ ಯಾರು?’ ಎಂಬ 12 + 155 ಪುಟಗಳ ಪುಸ್ತಕ ಬರೆದಿದ್ದಾರೆ. ಅದು ಮೂರು ನಾಲ್ಕು ಮುದ್ರಣಗಳನ್ನು ಕಂಡಿದೆ. ಅದನ್ನು ಸರ್ಕಾರಿ ವಲಯದಿಂದ ಪ್ರತಿಬಂಧಿಸುವ ವಿಫಲ ಪ್ರಯತ್ನವೂ ನಡೆಯಿತು.

ಈ ಪುಸ್ತಕದಲ್ಲಿ ಪ್ರಮುಖವಾಗಿ ಮೂರು ಲೇಖನಗಳಿವೆ.(93 ಪುಟಗಳು) ಮಿಕ್ಕುಳಿದವು. ಆಕ್ಷೇಪಗಳಿಗೆ ಸಮಾಧಾನವನ್ನೊಳಗೊಂಡ ಏಳು ಬಿಡಿ ಲೇಖನಗಳು. ವಾಲ್ಮೀಕಿ ಬೇಡನಲ್ಲ ಎಂಬುದಕ್ಕೆ ಅವರು ಮುಖ್ಯವಾಗಿ ಕೊಡುತ್ತಿರುವ ಸಮರ್ಥನೆ ಮೂರು.

ವಾಲ್ಮೀಕಿ ಬೇಡನೆಂಬುದಕ್ಕೆ ವಾಲ್ಮೀಕಿ ರಾಮಾಯಣದಲ್ಲಿ ಎಲ್ಲಿಯೂ ಆಧಾರವಿಲ್ಲ.
ಆತ ಬೇಡನೆಂದು ವರ್ಣಿಸುವ ಕಥೆ ಸ್ಕಂದ ಪುರಾಣದ್ದು. ಸ್ಕಂದ ಪುರಾಣ ಹತ್ತನೆಯ ಶತಮಾನದ ನಂತರದ್ದು.
ಮರಾ-ಮರಾ’ ಎಂಬ ಮಂತ್ರದ ಪ್ರಸ್ತಾಪ ಆನಂದ ರಾಮಾಯಣದ್ದು. ಅದರ ಕಾಲ 16ನೆಯ ಶತಮಾನ.

ಹೀಗೆ ವಾಲ್ಮೀಕಿ ‘ಬೇಡ’ ಎಂಬುದು ಅರ್ವಾಚೀನ ಕಲ್ಪನೆ. ಎಲ್ಲಾ ಮಹಾವ್ಯಕ್ತಿಗಳ ಬಗೆಗೂ ಕಾಲಾನುಕಾಲಕ್ಕೆ ಚಿತ್ರ ವಿಚಿತ್ರ ದಂತಕತೆಗಳು ಹುಟ್ಟಿಕೊಳ್ಳುತ್ತವೆ. ಕೇವಲ ಐನೂರು ವರ್ಷಗಳ ಹಿಂದೆ ಹುಟ್ಟಿದ ಕಬೀರ – ಕರದಿಂದ ಹುಟ್ಟಿದ ವೀರ-ಕರ-ವೀರ, ಕಬೀರ ಆಗಿದ್ದಾನೆ. ಹೀಗೆ ವಾಲ್ಮೀಕಿ ‘ಬೇಡ’ನೆಂಬುದು ಅರ್ವಾಚೀನ ದಂತಕತೆಯೆಂಬುದನ್ನು ನಾರಾಯಣಾಚಾರ್ಯರು defensive argument ಮಾಡಿದ ನಂತರ ಪ್ರಶ್ನೆಯೆತ್ತುತ್ತಾರೆ- ಆತ ಬೇಡನಲ್ಲವಾದರೆ; ಆತ ಯಾರು? ರಾಮಾಯಣದಲ್ಲೇ ಇರುವ ಉಲ್ಲೇಖ ತಾನು ಪ್ರಚೇತಸನ ಹತ್ತನೆಯ ಮಗ-ಅಂದರೆ ಬ್ರಾಹ್ಮಣ. ಆನಂದ ರಾಮಾಯಣದ ‘ಜಾತಿಯಿಂದ ಬ್ರಾಹ್ಮಣ. ಮೊದಲು ವೃತ್ತಿಯಿಂದ ವ್ಯಾಧನಾಗಿದ್ದ’ ಎಂಬ ಕತೆಯನ್ನು ಉಲ್ಲೇಖಿಸುತ್ತಾರೆ. ಇದನ್ನು ಬಿಟ್ಟು ಅವರು ಕೊಡುವ ಎರಡನೆಯ ಕಾರಣ: ಲವಕುಶರು ಶ್ರೀರಾಮನೆದಿರೆ ರಾಮಾಯಣವನ್ನು ಹಾಡಿದಾಗ ರಾಮನು ಪ್ರಶ್ನಿಸುತ್ತಾನೆ. ಆಗ ಲವಕುಶರು ಕೊಡುವ ಉತ್ತರ:- “ವಾಲ್ಮೀಕಿ ಇದನ್ನು ಬರೆದ. ಅವನು ಭಾರ್ಗವ ಗೋತ್ರದ ಮಹರ್ಷಿ”.

ಈ ಮೇಲ್ಕಂಡ ಎರಡು ಅಂಶಗಳ ಸುತ್ತ ಹುತ್ತದಂತೆ ಈ ಕೃತಿ ಇಷ್ಟೊಂದು ಬೆಳೆದು ನಿಂತಿದೆ. ಆದರೆ, ಇವರ ಸಮರ್ಥನೆಗಳೆಲ್ಲವೂ ಲವಕುಶರನ್ನು ಕೇಂದ್ರವಾಗಿರಿಸಿಕೊಂಡ ಉತ್ತರಕಾಂಡ ಅಥವಾ ಉತ್ತರ ರಾಮಾಯಣ. ರಾಮಾಯಣವನ್ನು ಅಧ್ಯಯನ ಮಾಡಿದ ಬಹುತೇಕ ಎಲ್ಲಾ ಗಂಭೀರ ಇತಿಹಾಸಕಾರರು ಉತ್ತರ ರಾಮಚರಿತೆಯನ್ನು ಪ್ರಕ್ಷಿಪ್ತವೆಂದು ಬಗೆಯುತ್ತಾರೆ. ಅದು ವಾಲ್ಮೀಕಿಯ ರಚನೆ ಅಲ್ಲ ಎಂಬುದು ಇಂದು ಸಿದ್ಧವಾಗಿದೆ. ಹಾಗಿದ್ದ ಮೇಲೆ ನಾರಾಯಣಾಚಾರ್ಯರ ವಾದ ಹೇಗೆ ನಿಲ್ಲುತ್ತದೆ? ಅಂತೆಯೇ ಕೆ.ಎಸ್. ಭಗವಾನ್ ರಾಮನ ಬಗ್ಗೆ ಮಾಡುವ ಈ ಗಂಭೀರ ಆರೋಪವನ್ನು ಗಮನಿಸಿ:-

“ಈ ಎರಡು ಘೋರ ಪ್ರಸಂಗಗಳು (ಸೀತಾಪರಿತ್ಯಾಗ ಮತ್ತು ಶಂಭೂಕ ವಧೆ) ಬ್ರಾಹ್ಮಣಶಾಹಿ ಸಂಸ್ಕೃತಿಯ ಪ್ರತಿನಿಧಿಯಾದ ರಾಮನ ಕ್ರೂರ ವ್ಯಕ್ತಿತ್ವವನ್ನು ಚೆನ್ನಾಗಿ ಪ್ರಕಟಿಸುತ್ತದೆ. (ಪುಟ 146, ಶಂಕರಾಚಾರ್ಯ ಮತ್ತು ಪ್ರತಿಗಾಮಿತನ)” ವಿಚಾರವಾದ ಹಾಗೂ ಮಾನವತಾವಾದದ ಡೋಲು ಬಾರಿಸುವ ಭಗವಾನರಂತವರೂ ಈ ಪ್ರಕ್ಷಿಪ್ತ ರಾಮಾಯಣವನ್ನು ತಮ್ಮ ವಾದಮಂಡನೆಗೆ ಉಪಯೋಗಿಸುತ್ತಾರೆ! ರೋಚಕವಾದ ವಿಚಾರವೆಂದರೆ ಅವರ ಪ್ರಕಾರ ರಾಮ ಅತ್ಯಂತ ಕ್ರೂರಿ. ಮಾತ್ರವಲ್ಲದೆ ಅವರ ಈ ಕೆಳಗಿನ ಮಾತುಗಳನ್ನು ಗಮನಿಸಿ:-

ರಾಮ ಮರೇಯಕ ಎಂಬ ಮದ್ಯಪಾನ ಮಾಡಿ ಅದನ್ನು ಸೀತೆಗೂ ಕುಡಿಸಿ ಅಪ್ಸರೆಯರ ಜೊತೆ ಕಾಲಕಳೆಯುತ್ತಿದ್ದನೆಂದು ಅವನ ಸಮಕಾಲೀನ. ಅದನ್ನೆಲ್ಲಾ ಕಣ್ಣಾರೆ ಕಂಡಿದ್ದ ವಾಲ್ಮೀಕಿ ತನ್ನ ಮಹಾಕಾವ್ಯದಲ್ಲಿ ಬರೆದಿಟ್ಟಿದ್ದಾನೆ (ಪುಟ 146, ಅದೇ)
ರಾಮರಾಜ್ಯವೆಂದರೆ ಬ್ರಾಹ್ಮಣರ ದರ್ಬಾರು ಮತ್ತು ಅಟ್ಟಹಾಸದ ರಾಜ್ಯ. ಅದು ಸಮತೆಯ ಸರ್ಕಾರವಲ್ಲ; ಸಮಾನತೆಯ ರಾಜ್ಯವಲ್ಲ. ರಾಮರಾಜ್ಯ ಶೂದ್ರರನ್ನು ಕೊಲ್ಲುವ ರಾಜ್ಯ. (ಯಾರ್ಯಾರು ಜನಿವಾರ ಹಾಕಿಕೊಳ್ಳುವುದಿಲ್ಲವೊ ಅವರೆಲ್ಲಾ ಶೂದ್ರರು) ಸ್ತ್ರೀಯರನ್ನು ತುಳಿಯುವ ರಾಜ್ಯ. ದಲಿತರನ್ನು ಹತಮಾಡುವ ರಾಜ್ಯ. ರಾಮರಾಜ್ಯ ಶೂದ್ರ ವಿರೋಧಿ ರಾಜ್ಯ. (ಪುಟ 147, ಅದೇ)

ಇಂತಹ ರಾಮಾಯಣವನ್ನು ಶೂದ್ರಾತಿಶೂದ್ರ, ಅದರಲ್ಲೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಹೇಗೆ ತಾನೆ ಬರೆಯಲು ಸಾಧ್ಯ? ದಲಿತರನ್ನು ಹತಮಾಡುವ, ಸ್ತ್ರೀಯರನ್ನು ತುಳಿಯುವ ಬ್ರಾಹ್ಮಣರ ದರ್ಬಾರು ನಡೆಸುವ ವಾಲ್ಮೀಕಿಯನ್ನು ಹೇಗೆ ತಾನೆ ಶೋಷಿತ, ದಲಿತ, ಪರಿಶಿಷ್ಟ ಜನಾಂಗದ ನಾಯಕರು ತಮ್ಮ ‘ಮಹಾತ್ಮ’ ಎಂದು ಜಯಂತಿ ಆಚರಿಸುತ್ತಾರೆ? ಹಾಗಾಗಿ ವಾಲ್ಮೀಕಿ ಜನಾಂಗದವರ ಏಕೈಕ ಮಹಾನುಭಾವ ವಾಲ್ಮೀಕಿಯನ್ನು ವಿರೋಧಿಸುವವರು ನಾರಾಯಣಾರ್ಚಾರಲ್ಲ; ಬದಲಿಗೆ ಕೆ.ಎಸ್. ಭಗವಾನ್ ಎಂಬುದನ್ನು ವಿರೋಧಾಭಾಸಗಳ ನೆಲೆಯಾದ, ‘ಪ್ರಗತಿಶೀಲ’ವೆಂದು ಉದ್ವೇಷಿಸಿಕೊಳ್ಳುವ ಪ್ರಪಂಚವು ಅರ್ಥ ಮಾಡಿಕೊಳ್ಳದಿರುವುದನ್ನು ಕಂಡರೆ ಈ ಸದರಿ ಜಗತ್ತಿಗೆ ವಲ್ಮೀಕ-ಗೆದ್ದಲು ಹಿಡಿದಿದೆ ಎಂಬುದು ಸುಸ್ಪಷ್ಟವಾಗುತ್ತದೆ.

ಇರಲಿ, ವಾಲ್ಮೀಕಿ ಶೂದ್ರ-ಪರಿಶಿಷ್ಟ ಎಂದೇ ತಿಳಿಯುವ. ವೇದಗಳಿಂದ ಹಿಡಿದು ಮನುಸ್ಮೃತಿಯೂ ಸೇರಿದಂತೆ ಸಂಸ್ಕೃತವು ಬ್ರಾಹ್ಮಣರ ಹಿಡಿತದಲ್ಲಿತ್ತು; ಆ ಬ್ರಾಹ್ಮಣಶಾಹಿ ಶೂದ್ರನನ್ನು ತುಳಿದು ಕೊಚ್ಚಿ ಹಾಕಿತ್ತು ಎಂದು – ಅಂಬೇಡ್ಕರ್, ರಾಮತೀರ್ಥ, ಪೆರಿಯಾರ್ ಇತ್ಯಾದಿ ನೂರಾರು ಪ್ರಗತಿಪರರು ಲಾಗಾಯ್ತಿನಿಂದ ಹೇಳುತ್ತಿದ್ದುದು ಇಂದೂ ಚಾಲ್ತಿಯಲ್ಲಿದೆ. ಇಂತಹ ಭಯಾನಕ ಪರಿಸ್ಥಿತಿಯಲ್ಲಿ ವಾಲ್ಮೀಕಿ ಅಷ್ಟೊಂದು ಅಗಾಧ ಸಂಸ್ಕೃತ ಪಾಂಡಿತ್ಯ ಪಡೆದುದು ಹೇಗೆ? ಮಹರ್ಷಿಯಾದುದು ಹೇಗೆ? ತನ್ನ ಮಹಾಕಾವ್ಯದ ನಾಯಕನಿಂಲೇ ಶೂದ್ರ ಶಂಭೂಕನನ್ನು ಆತ ಕೊಲ್ಲಿಸಿದ್ದು ಹೇಗೆ? ಲೋಕೋತ್ತರ ರಾಮಾಯಣವೆಂಬ ಮಹಾಕಾವ್ಯವನ್ನು ರಚಿಸಿದ್ದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?

ಅಂತೆಯೇ ಕುರುಬ ಕಾಳಿದಾಸ ಮಹಾಕವಿಯಾದದ್ದು ಏನು ವಿಚಿತ್ರ! ಮೀನು ಹಿಡಿಯುವಳ ಮಗ ವ್ಯಾಸ ಮಹಾಭಾರತವನ್ನೇ ರಚಿಸಿದ! ಇದೆಲ್ಲಾ ಸತ್ಯವೇ ಆದರೆ, ‘ಪುರೋಹಿತಶಾಹಿ’ ‘ಬ್ರಾಹ್ಮಣಶಾಹಿ’ಗೆ ಹೊಸ ವ್ಯಾಖ್ಯಾನ ಬರೆಯಬೇಕಲ್ಲವೆ? ಹೀಗಾದರೆ ಈ ಶಬ್ದಗಳನ್ನೇ ಬಂಡವಾಳ ಮಾಡಿಕೊಂಡವರ ವ್ಯಾಪಾರ ವಹಿವಾಟಿನ ಗತಿಯೇನು?

ಇನ್ನು ಡಾ| ಕೆ.ಎಸ್. ನಾರಾಯಣಾಚಾರ್ಯರ ಕೃತಿಯನ್ನು ಓದಿದ ನನಗೆ ಅನ್ನಿಸಿದ್ದು ಇಷ್ಟು: ಅವರ ಗ್ರಂಥದ ‘ವಾಲ್ಮೀಕಿ ಯಾರು?’ ಎಂಬ 30 ಪುಟದ ಲೇಖನ ಬರೇ ಅಸಂಬದ್ಧ ಪ್ರಲಾಪ.’ವಾಲ್ಮೀಕಿ’ ಎಂಬ 45 ಪುಟಗಳ ಅಧ್ಯಾಯವಂತೂ ಕಾರ್ಟೂನ್ ನೆಟ್‍ವರ್ಕ್‍ನ ಒಂದು ಬಾಲಿಶ ಶಬ್ದರೂಪ. ಇನ್ನು ವಾಲ್ಮೀಕಿ ದರ್ಶನ ಎಂಬ ಕೊನೆಯ ಅಧ್ಯಾಯವಂತೂ ಭಯಾನಕ ಪೂರ್ವಾಗ್ರಹಗಳ ಅನಾವರಣವನ್ನೊಳಗೊಂಡಿದೆ. ಅದರ ಸಾರಾಂಶ ಹೀಗಿದೆ:

ಈ ಅಧ್ಯಾಯದಲ್ಲಿ ಅಯೋಧ್ಯಾ ಸಂಸ್ಕೃತಿ, ಲಂಕಾ ಸಂಸ್ಕೃತಿ ಮತ್ತು ಕಿಷ್ಕಂದಾ ಸಂಸ್ಕೃತಿಯೆಂದು ಮೂರು ವಿಭಾಗ ಮಾಡಿ-ಅಯೋಧ್ಯೆಯದು ಅತೀ ಶ್ರೇಷ್ಠ ಸಂಸ್ಕೃತಿಯೆಂದು ವೈಭವೀಕರಿಸಿ, ಲಂಕೆಯದು ಪುಂಡರ ಸಂಸ್ಕೃತಿಯೆಂದು ಆಚಾರ್ಯರು ಜರೆದಿದ್ದಾರೆ. ಇವೆರಡರ ನಡುವಿನ ‘ಕಿಷ್ಕಿಂದಾ ಸಂಸ್ಕೃತಿ’ ಎಡವಟ್ಟಿನ ಸಂಸ್ಕೃತಿಯೆಂದು ಹೀಗಳೆದಿದ್ದಾರೆ. ಈ ವಿಶ್ಲೇಷಣೆ ಅತ್ಯಂತ ಅವೈಜ್ಞಾನಿಕ ಮತ್ತು ಕುತ್ಸಿತ ಮನೋಧರ್ಮದ ಪ್ರತೀಕ.

ನಾರಾಯಣಾಚಾರ್ಯರು ರಾವಣನನ್ನು ಪುಂಡನೆನ್ನುತ್ತಾರೆ. ‘ಹೆಂಡಕುಡಿ, ಬೇಕಾದ ಭೋಗ ಅನುಭವಿಸು, ಸಿಕ್ಕಲ್ಲಿ ಸುತ್ತಾಡು’ ಎಂಬ ಸಿದ್ದಾಂತದವನೆಂದು ನಿರೂಪಿಸುತ್ತಾರೆ. ಆದರೆ,

“ಲಂಕೆಯಲ್ಲಿ ವೇದಪಾಠಿ ಬ್ರಾಹ್ಮಣರಿದ್ದರು, ವಿಭೀಷಣ ರಾವಣನ ಭವನಕ್ಕೆ ಬಂದ. ಭವನದ ಒಳಗಡೆ ವೇದಜ್ಞ ಬ್ರಾಹ್ಮಣರು ಆತನ ಅಣ್ಣನ ವಿಜಯಕ್ಕಾಗಿ ಪುಣ್ಯಾಹವಾಚನ ಮಾಡುತ್ತಿದ್ದರು. ವೇದ ಮಂತ್ರವನ್ನು ತಿಳಿದ ಬ್ರಾಹ್ಮಣರು ಪುಷ್ಪ, ಅಕ್ಷತೆ, ಘೃತ ಮತ್ತು ಮೊಸರಿನಿಂದ ಪೂಜಿಸುವುದನ್ನು ಕಂಡ. ಅವರು ರಾಕ್ಷಸರಿಗೆ ಯಜ್ಞ ಮಾಡಿಸುತ್ತಿದ್ದರು. ಆದರೆ ರಾಕ್ಷಸರು ಇವರಿಲ್ಲದೆಯೂ ಯಜ್ಞ ಮಾಡುತ್ತಿದ್ದರು. “ಇದು ಮೂಲ ವಾಲ್ಮೀಕಿ ರಾಮಾಯಣದಲ್ಲಿರುವ ವಿಚಾರ. ಇಂಥ ಲಂಕೆಯ ರಾವಣನನ್ನು ಪುಂಡನೆಂದೂ, ಲಂಕೆಯಲ್ಲಿ ದುಡಿದು ತಿನ್ನುವ ಜನರಾರೂ ಇರಲಿಲ್ಲ; ಅವರೆಲ್ಲಾ ದರೋಡೆ ಮಾಡಿ ಬದುಕುತ್ತಿದ್ದವರು ಎಂದು ಹೇಳುವ ನಾರಾಯಣಾಚಾರ್ಯರು 50 ವರ್ಷ ರಾಮಾಯಣದ ಪಾರಾಯಣ ಮಾಡಿದ್ದಾದರೂ ಏನನ್ನು? ಎಂಬ ಪ್ರಶ್ನೆ ಉದ್ಭವಿಸುತ್ತದೆ!

ಬರೇ ‘ಸಿಂಪಲ್ಲಾಗಿ’ ಒಂದು ಲೌ ಮಾಡುವ ಶೂರ್ಪನಖಿಯನ್ನು ಆಚಾರ್ಯರು ಕಾಮಪಿಪಾಸಿ, ಲಂಕೆಯನ್ನು ಹಾಳು ಮಾಡಿದವಳು ಎಂದು ಜರೆಯುತ್ತಾರೆ.
ಒಟ್ಟಿನಲ್ಲಿ ಕೆ.ಎಸ್. ನಾರಾಯಣಾಚಾರ್ಯರ ಕೃತಿ ರಾಮಾಯಣದ ಒಂದು ಮಿಶನರೀ ವಿಮರ್ಶೆ, ಇತಿಹಾಸ ವಿರೋಧೀ ಧೋರಣೆಗಳ ಸಂಗಮ ಮತ್ತು ಮಹಾಕಾವ್ಯದ ಸಮಾಜಶಾಸ್ತ್ರೀಯ ಅಪವ್ಯಾಖ್ಯಾನ ಎಂದೇ ನನ್ನ ಅಭಿಮತ.

4 ಟಿಪ್ಪಣಿಗಳು Post a comment
 1. rajaram hegde
  ನವೆಂ 20 2015

  ಈ ಲೇಖನವನ್ನು ಬರೆದ ಭಾಸ್ಕರ ಮಯ್ಯ ಅವರಿಗೆ ಅಭಿನಂದನೆಗಳು.

  ಉತ್ತರ
 2. hemapathy
  ನವೆಂ 20 2015

  ವಾಲ್ಮೀಕಿಯೊಬ್ಬ ಊಹಾಜನಿತ ವ್ಯಕ್ತಿ ಎಂದು ನಾನು ಹೇಳುತ್ತೇನೆ.

  ಉತ್ತರ
 3. vasu
  ನವೆಂ 20 2015

  ಕೇವಲ ಲಂಕೆಯಲ್ಲ. ಕಿಷ್ಕಿಂದೆಯಲ್ಲಿರುವವರೂ ಸಹ ವೇದಜ್ಞರಾಗಿದ್ದರು. ಕಿಷ್ಕೆಂದೆಯ ನಿವಾಸಿ ಆಂಜನೇಯನು ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದನು. ಇವನ ಮಾತನಾಡುವ ರೀತಿಯನ್ನು ಕಂಡು ಶ್ರೀರಾಮ ಆಶ್ಚರ್ಯಗೊಳುತ್ತಾನೆ. ವೇದಗಳನ್ನು ಓದಿದವರಿಗೆ ಮಾತ್ರ ಇಂತಹ ಭಾಷಾ ಪ್ರಭುತ್ವ ಸಾಧ್ಯವೆಂದು ರಾಮನು ಹೇಳಿ ಆಂಜನೇಯನು ವೇದ ವಿಶಾರದ ನಾಗಿರಬೇಕೆಂದು ತನ್ನ ತಮ್ಮಲಕ್ಷ್ಮಣನಿಗೆ ಹೇಳುತ್ತಾನೆ. ಹೀಗಿರುವಾಗ ಕಿಷ್ಕೆಂದೆಯ ಜನ ಎಡವಟ್ಟು ಸಂಸ್ಕೃತಿಯ ಆರಾಧಕರು ಹೇಗೆ ಆಗಲು ಸಾಧ್ಯ? ಹನುಮಂತ ಮತ್ತು ಪುರುಷರಿಗೆ ಬಾಲಗಳನ್ನು ತೊಡಿಸಿದ ಇವರು ಅವರ ಸ್ತ್ರೀಯರಿಗೆ ಬಾಲಗಳನ್ನು ಏಕೆ ತೊಡಿಸಿಲ್ಲ? ಸಂಕ್ಷಿಪ್ತವಾಗಿ ಹೇಳುವುದಾದರೆ, ಲಂಕೆಯಿರಲಿ ಅಥವಾ ಕಿಷ್ಕೆಂದೆಯಿರಲಿ ಅವರೆಲ್ಲರೂ ವೇದಗಳನ್ನು ಮಾನ್ಯ ಮಾಡುತ್ತಿದ್ದು ವೇದ ಗಳ ಅನುಯಾಯಿಗಳೇ ಆಗಿದ್ದರು. ರಾವಣ ಕೆಟ್ಟವನಿರಬಹುದು. ಆದರೆ ಅವನೂ ಸಹ ವೇದಗಳ ಅನುಯಾಯಿಯಾಗಿದ್ದನು ಎನ್ನುವುದನ್ನು ವಾಲ್ಮೀಕಿ ರಚಿತ ರಾಮಾಯಣದಲ್ಲಿ ಕಾಣಬಹುದು. ಉತ್ತರ ರಾಮಾಯಣ ಪೂರ್ಣವಾಗಿ ಪ್ರಕ್ಷಿಪ್ತ. ಆದರೆ ಇದನ್ನು ದುರುದ್ದೇಶದಿಂದ ವಾಲ್ಮೀಕಿ ಬರೆದ ನೆಂದು ಹೇಳಿ ರಾಮನನ್ನು ಧೂಷಿಸುವ ಪ್ರಯತ್ನ ನಡೆದಿದೆ. ದುರದೃಷ್ಟವಶಾತ್ ಡಾ| ಅಂಬೇಡ್ಕರ್ ರವರು ಸಹ ಈ ಉತ್ತರ ರಾಮಾಯಣವನ್ನು ಆದರಿಸಿ the riddle of Hinduism ಎನ್ನುವ ಪುಸ್ತಕ ಬರದಿದ್ದಾರೆ. ಇದು ನಿಜವಾಗಲೂ ಖೇದಕರ.
  ರಾಮಾಯಣ ಮತ್ತು ಮಹಾಭಾರತಗಳು ಅಪಾರ ಪ್ರಕ್ಷಿಪ್ತತೆಗೆ ಒಳಗಾಗಿದ್ದು ಸದರಿ ಪ್ರ ಕ್ಷಿಪ್ತ ಘಟನೆಗಳನ್ನು ಆಧರಿಸಿ,ತಥಾಕತಿತ ಬುದ್ಧಿಜೀವಿಗಳು ಇವುಗಳ ಖಂಡನೆಯನ್ನು ಮಾಡುತ್ತಿದ್ದಾರೆ. ಇಲ್ಲಿ ಒಂದು ಗಮನಿಸಬೇಕು ಡಾ|| ಕುವೆಂಪುರವರು ವಿಚಾರವಾದಿಗಳಾಗಿದ್ದರು .ಅವರು ರಾಮಾಯಣ ದರ್ಶನಂ ಮತ್ತು ಸಚಿತ್ರ ವಾಲ್ಮೀಕಿ ರಾಮಾಯಣ ಪುಸ್ತಕಗಳನ್ನು ಬರಿದಿದ್ದಾರೆ. ಅವರು ಎಲ್ಲಿಯೂ ರಾಮನನ್ನು ಅವಹೆಳನ ಮಾಡಲಿಲ್ಲ. ಆದರೆ ಅವರೂ ಸಹ ಉತ್ತರ ರಾಮಾಯಣದ ಘಟನೆಯನ್ನು ಆಧರಿಸಿ ಶೂದ್ರ ತಪಸ್ವಿ ಎಂಬ ನಾಟಕ ರಚಿಸಿದ್ದಾರೆ. ಇದು ರಾಮಾಯಣದ ವಿರೋಧಿಗಳಿಗೆ ರಾಮನನ್ನು ಖಂಡಿಸಲು ಒಂದು ಆಯುಧವಾಗಿದೆ
  ರಾಮಾಯಣ ಮತ್ತು ಮಹಾಭಾರತ ವನ್ನು ಪ್ರಕ್ಷಿಪ್ತತೆಯಿಂದು ವಿಮೋಚನೆಗೊಳಿಸಬೇಕು. ಈ ನಿಟ್ಟಿನಲ್ಲಿಇ ಆರ್ಯಸಮಾಜದ ಕೆಲವು ವಿದ್ವಾಂಸರು ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಆರ್ಯಸಮಾಜದ ಪ್ರಭಾವ ದಕ್ಷಿಣ ಭಾರತದಲ್ಲಿ ಕಡಿಮೆಯಿರುವ ಕಾರಣ ಈ ಎರಡೂ ಕಾವ್ಯಗಳನ್ನು ಪ್ರಕ್ಷಿಪ್ತತೆಯಿಂದ ದೂರಮಾಡಿ ಅವುಗಳನ್ನು ವಸ್ತು ನಿಷ್ಠವಾಗಿ ವಿಮರ್ಶಿಸುವ ಅವಕಾಶ ಇಲ್ಲದಿರುವುದು ತುಂಬಾ ಶೋಚನೀಯ.

  ಉತ್ತರ
 4. Hampanna bk
  ಆಕ್ಟೋ 23 2018

  ವಾಲ್ಮೀಕಿ ಯಾರು?!
  ಇದೊಂದು ಉತ್ತಮ ವಿಮರ್ಶಾ ಲೇಖನ. ಇಂದಿನ ರೂಲಿಂಗ ಲೇಖಕರು, ತಮ್ಮನ್ನೇ ಪಂಡಿತರು ಎಂದು ತಮ್ಮನ್ನು ತಾವೇ ಕರೆದು ಕೊಳ್ಳುವ ಈ ಮೇಧಾವಿಗಳು, ಆ ಪಂಥ ಈ ಪಂಥ ಎಂದು ಯುವಕರ ದಾರಿ ತಪ್ಪಿಸುವ ಈ ಸಂದರ್ಭದಲ್ಲಿ ಡಾ| ಜಿ. ಭಾಸ್ಕರ ಮಯ್ಯ ಅವರ ಈ ವಿಮರ್ಶಾ ಲೇಖನ ತುಂಬಾನೇ ಪರಿಣಾಮ ಬೀರುತ್ತದೆ. ಇವತ್ತು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಸ್ವ ಘೋಷಿತ ದೇವಮಾನವರು, ಬದ್ದೀಜೀವೀಗಳು, ಧರ್ಮ ರಕ್ಷಣೆ ಹೆಸರಲ್ಲಿ ಹೇಸಿಗೆ ಕೆಲಸ ಮಾಡುವ ಹೇಡಿಗಳು ಹೆಚ್ಚಾಗಿದ್ದರೆ. ಇವತ್ತಿನ ಈ ಪರಸ್ಥಿತಿಗೆ ಈ ರೀತಿಯ ವಿಮರ್ಶೆ, ಬರಹಗಳು ಅವಶ್ಯಕ.
  ನಿಜಕ್ಕೂ ಈ ಲೇಖನ ಪ್ರತಿಯೊಬ್ಬರೂ ಓದಲೇ ಬೇಕು.
  ಲೇಖಕರಾದ ಶ್ರೀ – ಡಾ| ಜಿ. ಭಾಸ್ಕರ ಮಯ್ಯ ಅವರಿಗೆ ದನ್ಯವಾದಗಳು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments