ಅಸಹಿಷ್ಣುತೆ ಎಂಬ ಅರ್ಥವಾಗದ ಸುಳಿಯಲ್ಲಿ..
– ಚೈತ್ರ, ಕುವೆಂಪು ವಿಶ್ವವಿದ್ಯಾನಿಲಯ.
ಇತ್ತೀಚೆಗೆ ಅಸಹಿಷ್ಣುತೆ ಎಂಬ ಶಬ್ಧ ಎಲ್ಲೆಡೆಯಲ್ಲಿಯೂ ಪ್ರಭಾವಿಯಾಗಿ ಚರ್ಚೆಗೊಳಗಾಗುತ್ತಿದೆ. ಈ ವಿಚಾರದ ಕುರಿತಾಗಿ ವಿವಿಧ ವಲಯಗಳಲ್ಲಿನ ಪ್ರಭಾವಿ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ನೀಡುತ್ತಿದ್ದಾರೆ. ಇವುಗಳನ್ನೆಲ್ಲ ಗಮನಿಸಿದರೆ 12ನೆ ಶತಮಾನದ ನಂತರ ಮತ್ತೊಂದು ಬೃಹತ್ ಚಳುವಳಿಯಾಗುತ್ತಿದೆ ಎಂದೇನಾದರೂ ಭಾವಿಸಿದರೆ ಅದು ಮಾಯೆ. ಪ್ರಸ್ತುತದಲ್ಲಿ ಕೆಲವು ಪಂಥಕ್ಕೆ ಮತ್ತು ಪಕ್ಷಕ್ಕೆ ಸೇರಿದ ಕೆಲವು ಸಾಹಿತಿಗಳು ಮತ್ತು ಪ್ರಶಸ್ತಿ ವಿಜೇತರು ತಮ್ಮ ಅಸಮಧಾನದಿಂದ ಕೆಲವು ಗಂಭೀರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತಿದೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬ ಕಾರಣದಿಂದ ವಿಭಿನ್ನ ಚಟುವಟಿಕೆಗಳು ವಿಭಿನ್ನ (ಒಂದೇ ಎಂದರೂ ತಪ್ಪಾಗಲಾರದು) ಗುಂಪುಗಳಿಂದ ಬಿರುಸಾಗಿ ನಡೆಯುತ್ತಿವೆ. ಅಂದರೆ, ಕಂಡಕಂಡಲ್ಲಿ ತಮ್ಮ ಹೇಳಿಕೆಗಳನ್ನು ನೀಡುವುದು, ರಾಷ್ಟ್ರಪತಿಯವರನ್ನು ಭೇಟಿ ಮಾಡುವುದು ಹಾಗೂ ತಮಗೆ ಸಿಕ್ಕಿರುವ/ದಕ್ಕಿಸಿಕೊಂಡ ಪ್ರಶಸ್ತಿಗಳನ್ನು ಮರಳಿ ವಾಪಸ್ ಕಳುಹಿಸುತ್ತಿರುವುದು ಪ್ರಧಾನವಾಗಿ ಕಂಡುಬರುತ್ತಿರುವ ಕ್ರಿಯೆಗಳಾಗಿವೆ. ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಧೂಳೆಬ್ಬಿಸುತ್ತಿರುವವರು ತಾವು ತೊಡಗಿಸಿಕೊಂಡಿರುವ ಚಟುವಟಿಕೆಗಳಿಗೂ ಹಾಗೂ ಅವುಗಳಿಗೆ ನೀಡುತ್ತಿರುವ ಕಾರಣ ಸಮರ್ಥನೆಗಳಿಗೂ ಏನಾದರೂ ಸಂಬಂಧವಿದೆಯೇ? ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೆ? ಎಂದು ನೋಡಿದರೆ, ಖಂಡಿತ ಇಲ್ಲ. ಏಕೆಂದರೆ ಸಹಿಷ್ಣುತೆ ಎಂದರೇನು? ಎಂಬುದೇ ಸರಿಯಾಗಿ ತಿಳಿದಿಲ್ಲದಿರುವುದು ವಾಸ್ತವವಾಗಿದೆ.
ಇಲ್ಲಿ ಪ್ರಮುಖವಾಗಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳನ್ನು ಬದಿಗಿಟ್ಟು ನೋಡೋಣ. ಏಕೆಂದರೆ ಎಷ್ಟೇ ನಿಷ್ಪಕ್ಷಪಾತವಾಗಿ ಆಲೋಚಿದರೂ ಕಡೆಗೆ ಯಾವುದಾದರೂ ಒಂದು ಪಕ್ಷಕ್ಕೆ ಗಂಟುಹಾಕುವ ಮೂಲಕ ಟೀಕೆ ಟಿಪ್ಪಣಿ ಪ್ರಾರಂಭವಾಗುತ್ತವೆ. ಇತ್ತೀಚೆಗೆ ನಡೆಯುತ್ತಿರುವ ಅಸಹಿಷ್ಣುತೆ ಮತ್ತು ಪ್ರಶಸ್ತಿ ಹಿಂದಿರುಗಿಸುವಿಕೆ ಎರಡು ಬೇರೆ ಬೇರೆಯದೆ ಆದ ಸಂಗತಿಗಳಾಗಿವೆ. ಆದರೆ ಅವೆರಡನ್ನೂ ಒಂದಕ್ಕೊಂದು ಸಂಬಂಧ ಕಲ್ಪಿಸುವ ಮೂಲಕ ತಮ್ಮ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಮೊದಲಿಗೆ ಪ್ರಶಸ್ತಿ ಹಿಂದಿರುಗಿಸುತ್ತಿರುವುದರ ಔಚಿತ್ಯವನ್ನು ನೋಡಬೇಕಾಗುತ್ತದೆ. ದಿ.ಡಾ.ಕಲ್ಬುರ್ಗಿಯವರ ಹತ್ಯೆಯಿಂದ ಪ್ರಾರಂಭವಾದ ಪ್ರಶಸ್ತಿ ಹಿಂದಿರುಗಿಸುವಿಕೆಯ ಕಾರ್ಯವು ಇಂದು ರಾಷ್ಟ್ರಮಟ್ಟದಲ್ಲಿ ಸರೋದ್ ವಾದಕರಿಂದ ಹಿಡಿದು ಸಾಮಾನ್ಯ ಪ್ರಶಸ್ತಿಗಳನ್ನು ಪಡೆದವರವರೆಗೂ ಹಬ್ಬಿದೆ. ಹಿಂದಿರುಗಿಸುತ್ತಿರುವರೆಲ್ಲರಿಗೂ ಅವರವರದೇ ಆದ ಕಾರಣಗಳಿವೆ. ಆದರೂ ಅವೆಲ್ಲವಕ್ಕೂ ಅಸಹಿಷ್ಣುತೆಯ ಬಣ್ಣವನ್ನು ಹಚ್ಚಲಾಗುತ್ತಿದೆ.
ಕಲ್ಬುರ್ಗಿಯವರ ಹತ್ಯೆಯನ್ನು ನೆಪವಾಗಿರಿಸಿಕೊಂಡು ಪ್ರಶಸ್ತಿ ಹಿಂದಿರುಗಿಸುವುದಕ್ಕೆ ವೈಯುಕ್ತಿಕ ಕಾರಣಗಳಿಂದಾಚೆಗೆ ಯಾವುದೇ ಸಕಾರಣಗಳಿಲ್ಲ. ಠಾಗೋರ್ ರಂತಹ ಮಹಾನ್ ಕವಿಯೇ ಬ್ರಿಟೀಷ್ ಸರ್ಕಾರಕ್ಕೆ ಪ್ರಶಸ್ತಿ ವಾಪಾಸ್ ನೀಡಿದ್ದು ಮಾದರಿ ಎಂದು ಭಾವಿಸಿದರೆ ನಮ್ಮ ಆಲೋಚನೆಯ ತಪ್ಪಾಗುತ್ತದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರಧಾನ ರುವಾರಿಗಳು ಬ್ರಿಟೀಷರೇ ಆಗಿದ್ದರಿಂದ ಠಾಗೋರ್ರವರು ಬಿಟೀಷ್ರು ನೀಡಿದ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರಲ್ಲಿ ಅರ್ಥವಿದೆ ಎನ್ನಬಹುದು, ಏಕೆಂದರೆ ಪ್ರಭುತ್ವದಿಂದಲೇ ಹಿಂಸೆ ನಡೆದಿದ್ದು ಅದರ ಮೇಲೆ ಕೋಪಕಾರಲು ಸಕಾರಣ ದೊರಕುತ್ತದೆ. ಆದರೆ ಅದನ್ನೇ ರೋಲ್ ಮಾಡೆಲ್ ಎಂದು ಭಾವಿಸಿ ಅದನ್ನೆ ಹೇಳುತ್ತಿರುವವರು, ಇಂದಿನ ಪ್ರಭುತ್ವದ ಮೇಲೆ ಕೋಪಗೊಳ್ಳಲು ಏನು ಕಾರಣ? ಸಾಹಿತಿಯ ಹತ್ಯೆಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭುತ್ವವೇ ಮಾಡಿಸಿದೆ ಎಂದೆ? ಅಥವಾ ಅಂತಹ ಹತ್ಯಗೆ ಪ್ರಭುತ್ವವು ಸಹಕಾರ ನೀಡಿದೆ ಎಂದೆ? ಇವೆರಡನ್ನೂ ಪ್ರಭುತ್ವ ಅಥವಾ ಸರ್ಕಾರ ಮಾಡಿರಲು ಸಾಧ್ಯವಿಲ್ಲ ಎಂದು ಕನಿಷ್ಠಮಟ್ಟದ ತಿಳುವಳಿಕೆ ಇರುವ ಸಾಮಾನ್ಯ ಮನುಷ್ಯನಿಗೆ ಗೊತ್ತಾಗುತ್ತದೆ. ಆದರೆ ಪ್ರಶಸ್ತಿ ಹಿಂದಿರುಗಿಸುತ್ತಿರುವ ಪಂಡಿತರುಗಳಿಗೆ ಇಂತಹ ಸಾಮಾನ್ಯ ವಿಷಯ ಅರ್ಥವಾಗುತ್ತಿಲ್ಲ. ಹತ್ಯೆಯಾಗಿರುವುದು ಸಾಮಾನ್ಯ ವ್ಯಕ್ತಿಯಲ್ಲ ಬದಲಿಗೆ ಹಿರಿಯ ಸಂಶೋಧಕ ಹಾಗಾಗಿ ತನಿಖೆಯನ್ನು ಚುರುಕುಗೊಳಿಸಿ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು ಎಂದು ತಾಕೀತು ಮಾಡುವುದು ಬೇರೆ, ಆದರೆ ನೀವೇ ಏನೋ ಮಾಡಿದ್ದೀರಿ ಎಂದು ಅವರಿಗೆ ವಾಪಾಸು ನೀಡುವುದು ಬೇರೆ. ಆದ್ದರಿಂದ ಪ್ರಶಸ್ತಿ ವಾಪಾಸು ನೀಡುತ್ತಿರುವವರು ಒಂದು ಯಾವುದೋ ವೈಯುಕ್ತಿಕ ದೌರ್ಬಲ್ಯದಿಂದ ನೀಡುತ್ತಿರಬೇಕು ಅಥವಾ ಪ್ರಭುತ್ವದ ಮೇಲಿನ ಅನುಮಾನದಿಂದ ನೀಡುತ್ತಿರಬೇಕು, ಇದರಲ್ಲಿ ಯಾವುದು ಸತ್ಯ ಎಂಬುದು ತನಿಖೆಯ ಮೂಲಕವೇ ಬೆಳಕಿಗೆ ಬರಬೇಕಿದೆ.
ಭಾರತದ ಕೆಲವು ರಾಜ್ಯಗಳಲ್ಲಿಯೂ ಇಂತಹುದೆ ಹುಸಿ ಪ್ರಹಸನಗಳು ನಡೆಯುತ್ತಿದೆ. ಬಾಲಿವುಡ್ ನಟರಿಂದ ಹಿಡಿದು ಕೆಲವಾರು ಸಾಮಾನ್ಯ ಜನಗಳವರೆಗೂ ಅಸಹಿಷ್ಣುತೆಯ ಮಂತ್ರ ಪಠಣವಾಗುತ್ತಿದೆ. ಈ ನೆಲದಲ್ಲಿ ಸೆಕ್ಯುಲರ್ ಆಗಿ ಇರುವುದೇ ಕಷ್ಟವಾಗುತ್ತಿದೆ, ಅದಕ್ಕೋಸ್ಕರವೇ ಕೆಲವಾರು ಗುಂಪುಗಳು ಅಸಹಿಷ್ಣುಗಳಾಗಿವೆ ಎಂಬುದು ಇಂತಹ ಪ್ರಹಸನದಲ್ಲಿ ಭಾಗಿಯಾಗಿರುವವರ ಮುಖ್ಯ ಪ್ರತಿಪಾದನೆಯಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಸಹಿಷ್ಣುತೆ ಎಂಬುದನ್ನು ಸೆಕ್ಯುಲರ್ಗೆ ವಿರುದ್ಧವಾಗಿ ಇಡುತ್ತಿರುವುದಾಗಿದೆ. ಇಷ್ಟುದಿನ ಸೆಕ್ಯುಲರ್ಗೆ ಪ್ರತಿಸ್ಪರ್ಧಿಯಾಗಿ ಕೋಮುಶಕ್ತಿ, ಮೂಲಭೂತವಾದಗಳೆಂದು ಹೇಳುತ್ತಿದ್ದ ಮಾರ್ಗಕ್ಕೆ ಅಸಹಿಷ್ಣುತೆಯು ಹೊಸಸೇರ್ಪಡೆಯಾಗಿದೆ. ಪ್ರಶಸ್ತಿ ಹಿಂದಿರುಗಿಸುತ್ತಿರುವವರ ರಾಜಕೀಯ ನಿಷ್ಠೆ ಮತ್ತು ಕಾರಣಗಳನ್ನು ಬದಿಗಿರಿಸಿ ಅವರು ನೀಡುತ್ತಿರುವ ಸಮರ್ಥನೆಗಳು ಎಷ್ಟರ ಮಟ್ಟಿಗೆ ಸಮಂಜಸವಾದವು ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.
ಸೆಕ್ಯುಲರ್ ಮತ್ತು ಅಸಹಿಷ್ಣುತೆ ಒಂದಕ್ಕೊಂದು ವಿರುದ್ಧ ಎಂಬುದು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವವರು ಬೌದ್ಧಿಕವಾಗಿ ನೀಡುತ್ತಿರುವ ಬಹುದೊಡ್ಡ ಸಮರ್ಥನೆಯಾಗಿದೆ. ಆದರೆ ಅದು ಸರಿಯಾದುದೆ ಅಥವಾ ಅಲ್ಲವೆ ಎಂಬುದನ್ನು ಮೊದಲು ನಾವು ನೋಡಬೇಕಾಗಿದೆ. ಅಸಹಿಷ್ಣುತೆಯ ಅಸಲಿತನ ಅರ್ಥವಾಗುವುದು ರಿಲಿಜನ್ಗಳನ್ನು ತಳಹದಿಯಾಗಿ ಹೊಂದಿರುವ ಸಮಾಜಗಳಲ್ಲಿ ಮಾತ್ರ. ಹೇಗೆಂದರೆ, ಸೆಮಟಿಕ್ ರಿಲಿಜನ್ಗಳಾದ ಇಸ್ಲಾಂ, ಕ್ರಿಶ್ಚಿಯಾನಿಟಿ ಹಾಗೂ ಜ್ಯೂಡಾಯಿಸಂಗಳು ತಮ್ಮದು ಸತ್ಯವಾದ ಮಾರ್ಗ ಉಳಿದವು ಮಿಥ್ಯವಾದವು ಎಂದು ಸಾರಿಕೊಳ್ಳುತ್ತವೆ ಮತ್ತು ಸಮರ್ಥಿಸಿಕೊಳ್ಳುತ್ತವೆ. ಜಗತ್ತಿನ ಮತ್ತು ದೇವರ(ಗಾಡ್) ಕುರಿತಾದ ಆಯಾ ರಿಲಿಜನ್ಗಳ ವಿವರಣೆಗಳು ಮಾತ್ರ ಪ್ರಶ್ನಿಸಲಾರದ ಸತ್ಯಗಳಾಗಿರುತ್ತವೆ. ಹಾಗೆಯೇ ಅವುಗಳೇ ಅತ್ಯಂತಿಕ ಎಂದು ಕೂಡ ಪ್ರತಿಯೊಂದು ರಿಲಿಜನ್ಗಳು ನಂಬುತ್ತವೆ. ಕ್ರಿಶ್ಚಿಯಾನಿಟಿಗೆ ಅದರ ಮಾರ್ಗ ಸರಿಯಿದ್ದರೆ, ಇಸ್ಲಾಂ ಅದರ ಮಾರ್ಗ ಸರಿ ಎಂದು ನಂಬುತ್ತದೆ. ತನ್ನ ಮಾರ್ಗ ಸರಿ ಇದೆಯೋ ಇಲ್ಲವೋ ಎಂಬ ಅನುಮಾನ ಅವುಗಳಲ್ಲಿ ಮೂಡಿದ್ದೇಯಾದರೆ ಅವುಗಳು ರಿಲಿಜನ್ಗಳಾಗಿ ಉಳಿಯುವುದಿಲ್ಲ. ಆದ್ದರಿಂದ ಸೆಮಟಿಕ್ ರಿಲಿಜನ್ಗಳು ಒಂದನ್ನೊಂದು ಪ್ರತಿಸ್ಪರ್ಧಿಯಂತೆ ನೋಡಿಕೊಳ್ಳುತ್ತವೆ, ಹಾಗೂ ಮತಪ್ರಚಾರವನ್ನು ವ್ಯವಸ್ಥಿವಾಗಿ ಹೆಚ್ಚುಗೊಳಿಸಲು ಪ್ರಯತ್ನಿಸುತ್ತವೆ. ಇಲ್ಲಿ ಸತ್ಯದ ಪ್ರತಿಪಾದನೆ ಮತ್ತು ಸ್ಪರ್ಧಿಗಳು ಇರುವಾಗ, ಸಹಿಷ್ಣುತೆ ಮತ್ತು ಅಸಹಿಷ್ಣುತೆ ಎಂಬ ಪರಿಕಲ್ಪನೆಗಳು ಮುನ್ನಲೆಗೆ ಬರುತ್ತವೆ.
ತನ್ನದು ಸತ್ಯವಾಗಿದ್ದರೂ ಮತ್ತೊಂದನ್ನು ಸಹಿಸಿಕೊಳ್ಳಬೇಕು ಎಂದಾದರೆ ಆಗ ಒಂದು ರಿಲಿಜನ್ ಮತ್ತೊಂದು ರಿಲಿಜನ್ ಕುರಿತು ಸಹಿಷ್ಣುತೆಯನ್ನು ಅಥವಾ ಸಹಿಸಿಕೊಳ್ಳುವುದನ್ನು ಅನುಸರಿಸಬೇಕಾಗುತ್ತದೆ. ಏಕೆಂದರೆ ತಮ್ಮದೆ ಸತ್ಯ ಎಂದು ಪ್ರತಿಪಾದಿಸುವ ಸೆಮೆಟಿಕ್ ರಿಲಿಜನ್ಗಳು ಮತ್ತೊಂದು ರಿಲಿಜನ್ ಕೂಡ ಸತ್ಯವಾದುದು ಎಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಿದ್ದುಕೂಡ ಅವುಗಳು ಒಟ್ಟಿಗೆ ಇರುವ ಸಂದರ್ಭಗಳಲ್ಲಿ ಸಮಾಜದ ಶಾಂತಿಗಾಗಿ ಆ ಸಮಾಜಕ್ಕೆ ಸಹಿಷ್ಣುತೆ ಅಗತ್ಯವಾಗುತ್ತದೆ. ಆ ಸಮಾಜದಲ್ಲಿ ಅದು ಅರ್ಥಪಡೆದುಕೊಳ್ಳುತ್ತದೆ. ಸಮಾನತೆ, ಸಹಿಷ್ಣುತೆ, ಸ್ವಾತಂತ್ರ್ಯ ಮುಂತಾದ ಮೌಲ್ಯಗಳು ಅಥವಾ ಪರಿಭಾಷೆಗಳು ರಿಲಿಜನ್ ಕ್ಷೇತ್ರದಲ್ಲಿ ಜನ್ಮ ಪಡೆದುಕೊಂಡಿರುತ್ತವೆ. ಈ ರಿಲಿಜನ್ ಕ್ಷೇತ್ರಕ್ಕೆ ಸಂಬಂದಿಸಿದಂತೆ ಪ್ರಭುತ್ವವು ಆ ಸಮಾಜದ ಶಾಂತಿಗಾಗಿ ಅಂತಹ ನೀತಿಗಳನ್ನು ಜಾರಿಗೆ ತರುತ್ತದೆ. ಹೀಗೆ ಅಸಹಿಷ್ಣುತೆ ಮತ್ತು ಸಹಿಷ್ಣುತೆಗಳು ರಿಲಿಜನ್ನ ಹಿನ್ನೆಲೆಯಲ್ಲಿ ಮಾತ್ರ ಅರ್ಥವಾಗುತ್ತವೆ, ಅಂತೆಯೇ ಅವೆರಡೂ ಒಂದಕ್ಕೊಂದು ಪೂರಕವಾಗಿರುತ್ತವೆ.
ಇನ್ನು ನಾವು ಬದುಕುತ್ತಿರುವ ವಿಧಾನವನ್ನು ಮತ್ತು ನಮ್ಮ ಸಂಸ್ಕೃತಿಯ ಸ್ವರೂಪ ವನ್ನು ಅವಲೋಕಿಸಿದರೆ ಈ ಅಸಹಿಷ್ಣುತೆ ಮತ್ತು ಸಹಿಷ್ಣುತೆಯ ವ್ಯಾಖ್ಯಾನಗಳಾಗಲಿ, ಅಂತಹ ಪರಿಕಲ್ಪನೆಗಳಾಗಲಿ ನಮಗೆ ಅರ್ಥವಾಗುತ್ತವೆಯೇ ಎಂದು ನೋಡಿದರೆ, ಅದಕ್ಕೆ ನಕಾರಾತ್ಮಕ ಉತ್ತರ ದೊರಕುತ್ತದೆ. ಏಕೆಂದರೆ, ಭಾರತದಲ್ಲಿರುವ ಸಮಾಜಗಳು ಸೆಮಟಿಕ್ ರಿಲಿಜನ್ನ ಮಾದರಿಯಲ್ಲಿ ರೂಪುಗೊಂಡಿರುವಂತವುಗಳಲ್ಲ. ಬದಲಿಗೆ ರಿಲಿಜನ್ಗಳ ಅನುಪಸ್ಥಿತಿ ಇಲ್ಲಿ ಕಂಡುಬರುತ್ತದೆ ಎನ್ನುವುದನ್ನ ಈಗಾಗಲೇ ಸಂಶೋಧನೆಗಳು ತೋರಿಸಿಕೊಟ್ಟಿವೆ. ಇಲ್ಲಿರುವ ಸಮುದಾಯಗಳು ಸಮಾಜಗಳು ರಿಲಿಜನ್ನ್ನು ಹೊಂದಿರುವ ಸಮಾಜಕ್ಕಿಂತ ವಿಭಿನ್ನವಾಗಿಯೇ ಬದುಕುತ್ತಿರುತ್ತವೆ.
ಮುಕ್ಕೋಟಿ ದೇವರುಗಳನ್ನು ಪೂಜಿಸುವ ವೈವಿಧ್ಯಮಯ ಆಚಾರ ವಿಚಾರಗಳನ್ನು ಹೊಂದಿರುವ ಭಾರತೀಯರಲ್ಲಿ ಹಲವಾರು ಸಂಪ್ರದಾಯಗಳನ್ನು ಮತ್ತು ಅವುಗಳ ಅನುಕರಣೆಯನ್ನು ಗುರುತಿಸಬಹುದು. ಇವುಗಳು, ತಮ್ಮದು ಸತ್ಯ ಇತರರದು ಸುಳ್ಳಾಗಿದೆ ಆದ್ದರಿಂದ ಅವರನ್ನು ನಾಶಮಾಡಬೇಕೆಂದಾಗಲಿ ಅವರನ್ನು ಸತ್ಯದ ಹಾದಿಗೆ ತರಬೇಕೆಂದಾಗಲಿ ಮತ ಪ್ರಚಾರ ಮಾಡುವುದು ಎಲ್ಲಿಯೂ ಕಂಡುಬರುವುದಿಲ್ಲ. ಆ ರೀತಿಯಲ್ಲಿ ಎಂದು ಬದುಕನ್ನು ನಡೆಸುವುದಿಲ್ಲ. ಹಾಗೆಯೇ ಒಂದು ಸಂಪ್ರದಾಯ ಇತರ ಸಂಪ್ರದಾಯಗಳನ್ನು ಪ್ರತಿಸ್ಫರ್ಧಿಗಳೆಂದಾಗಲಿ ಅಥವಾ ವೈರಿಗಳೆಂದಾಗಿ ಭಾವಿಸುವುದಿಲ್ಲ. ಪ್ರತಿಯೊಂದು ಸಂಪ್ರದಾಯವು ಇನ್ನೊಂದು ಸಂಪ್ರದಾಯದೊಂದಿಗೆ ಭಿನ್ನತೆಯನ್ನು ಉಳಿಸಿಕೊಂಡು ತಾನು ಮುಂದುವರೆದುಕೊಂಡು ಬರುತ್ತಿರುತ್ತದೆ. ಅಂತೆಯೇ ಬೇರೆ ಸಂಪ್ರದಾಯ ಆಚರಣೆಗಳೊಂದಿಗೆ ನಿರಾಸಕ್ತಿಯ ಗುಣವನ್ನು ಹೊಂದಿರುತ್ತದೆ, ಯಾವುದೇ ಸಂಪ್ರದಾಯವು ಸತ್ಯದ ಪ್ರತಿಪಾದನೆಯನ್ನಾಗಲಿ ದ್ವೇಷವನ್ನಾಗಲಿ ಮಾಡುವುದಿಲ್ಲ. ಬದಲಿಗೆ ಸಂಪ್ರದಾಯಗಳು ಹೊಂದಾಣಿಕೆಯ ಗುಣವನ್ನು ಹೊಂದಿರುತ್ತವೆ. ಹೀಗೇ ಇಲ್ಲಿಯ ಸಂಪ್ರದಾಯಗಳ ಸ್ವರೂಪವು ಸೆಮಟಿಕ್ ರಿಲಿಜನ್ಗಳಿಗಿಂತ ಭಿನ್ನವಾಗಿರುವುದನ್ನು ಕಾಣಬಹುದು. ಹೀಗೆ ಸಂಪ್ರದಾಯಗಳನ್ನೆ ತಳಹದಿಯಾಗಿಸಿಕೊಂಡು ರಚನೆಗೊಂಡ ಸಮಾಜದಲ್ಲಿ ಸಹಿಷ್ಣುತೆಯ ಪ್ರಶ್ನೆಯೇ ಏಳುವುದಿಲ್ಲ. ನಮ್ಮ ಸಂಪ್ರದಾಯಗಳಿಗೆ ಸಹಿಷ್ಣತೆ ಮತ್ತು ಅಸಹಿಷ್ಣತೆ ಎಂಬ ಸಂಗತಿಗಳು ಪರಕೀಯವಾದ ಪರಿಕಲ್ಪನೆಗಳಾಗಿವೆ.
ಈ ನಿಟ್ಟಿನಲ್ಲಿ ಭಾರತೀಯ ಸಮಾಜಕ್ಕೆ ಅನ್ವಯವಾಗದ ಮತ್ತು ನಮಗೆ ಅರ್ಥವೇ ಆಗದ ಪರಿಕಲ್ಪನೆಗಳನ್ನು ಹಿಡಿದುಕೊಂಡು ಸಾಹಿತ್ಯವಲಯದಲ್ಲಿ, ರಾಜಕೀಯ ವಲಯದಲ್ಲಿ, ಬೌದ್ಧಿಕವಲಯದಲ್ಲಿ ಅಷ್ಟೇಯಾಕೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ವಾದ ಪ್ರತಿವಾದಗಳು ಬೆಳೆಯುತ್ತಿವೆ. ಈ ರೀತಿ ಅರ್ಥವಾಗದ ಪರಿಭಾಷೆಗಳನ್ನು ಇಟ್ಟುಕೊಂಡು ವಾದ ಪ್ರತಿವಾದಗಳನ್ನು ಮಾಡುವುದರಿಂದ ಏನು ಅನುಕೂಲವಾಗುತ್ತದೆ? ಯಾವ ಸಮಸ್ಯೆಗಳಿಗೆ ಪರಿಹಾರಗಳು ಸಿಗುತ್ತವೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಾಣದಾಗಿದೆ. ಆದರೆ ಇಲ್ಲಿ ನಡೆಯುವ ಘಟನೆಗಳನ್ನು ವಿಚಾರಗಳನ್ನು ಅಸಹಿಷ್ಣತೆಗೆ ತಂದು ಜೋಡಿಸುತ್ತಿರುವುದರಿಂದ ಎರಡು ರೀತಿಯ ಪರಿಣಾಮಗಳನ್ನು ಗುರುತಿಸಬಹುದು. ಒಂದು ಸಹಿಷ್ಣುತೆ ಅಸಹಿಷ್ಣುತೆ ಎಂದರೇನು ಎನ್ನುವುದೇ ಗೊತ್ತಾಗದೆ ಉಳಿಯುವುದು,. ಇನ್ನೊಂದು ನಮ್ಮ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಪ್ರತಿಕ್ರಿಯೆಗಳನ್ನು ಮತ್ತು ಅವುಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲಿಕ್ಕೆ ಅಸಮರ್ಥರಾಗುವುದು. ಹೀಗೆ ಯಾವುದನ್ನು ಸ್ಪಷ್ಟವಾಗಿ ಅರಿತುಕೊಳ್ಳದಿರುವುದರಿಂದ ಸಮಸ್ಯೆ ಏನು ಅದರ ಸ್ವರೂಪ ಯಾವುದು ಎನ್ನುವುದೇ ತಿಳಿಯದಾಗಿದೆ. ಆದರೆ ಇದರ ಪ್ರತಿಫಲ ಮಾತ್ರ ಸಮಾಜದಲ್ಲಿ ಗಲಭೆ ಅಶಾಂತಿಗಳಾಗಿವೆ.
ಅಸಹಿಷ್ಣತೆ ಎನ್ನುವ ಪರಿಕಲ್ಪನೆಯೇ ಭಾರತೀಯ ಸಂದರ್ಭದಲ್ಲಿ ಅರ್ಥಪಡೆದುಕೊಳ್ಳಲು ಸೋತಿದೆ ಎಂದ ಮೇಲೆ ಸಾಹಿತಿಗಳು ಕೆಲವು ಜನರು ಮಾಡುತ್ತಿರುವ ಹೋರಾಟಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಪ್ರಶಸ್ತಿಗಳನ್ನು ಹಿಂದಿರಿಗಿಸುತ್ತಿರುವುದರ ಉದ್ದೇಶವೇನು? ಯಾವ ಹಿನ್ನೆಲೆಯಲ್ಲಿ ಈ ಕ್ರಿಯೆಗಳು ನಡೆಯುತ್ತಿವೆ? ಪ್ರಶಸ್ತಿಗಳನ್ನು ವಾಪಸು ಮಾಡುತ್ತಿರುವುದಕ್ಕು ಅಸಹಿಷ್ಣುತೆಗು ಏನು? ಅವುಗಳಿಗೆ ಸರಿಯಾದ ಕಾರಣಗಳೇನು ಎಂಬುದು ತೋಚದ ಉತ್ತರಗಳಾಗಿವೆ.
” ‘ಸೆಕ್ಯುಲರ್ಗಳು’ ಅಥವಾ ‘ಸಿಕ್ಯುಲರ್ಗಳು’, ‘ವಿಚಾರವಾದಿಗಳು’ ಯಾನೆ ‘ಬುದ್ಧಿಜೀವಿಗಳು’, ‘ಕಾಂಗ್ರೆಸ್ಸಿಗಳು’ ಅಥಾವಾ ‘ಎಡಪಂಥೀಯರು’ ಎಂಬಿತ್ಯಾದಿಯಾಗಿ ಕರೆಯಲ್ಪಡುವ ಗುಂಪಿನವರು ‘ಅಸಹಿಷ್ಣುತೆ’ ಎಂಬಿತ್ಯಾದಿ ಹಳೇಪದಗಳ ಅರ್ಥಗಳನ್ನು ಸಂಕರಗೊಳಿಸಿ, ಅವಕ್ಕೆ ಭಾರತದಲ್ಲಿ ಇಲ್ಲದ-ಸಲ್ಲದ ಅರ್ಥಗಳನ್ನೂ ಸಂಯೋಜಿಸಿ, ಇವೆ-ಸಲ್ಲುತ್ತಿವೆ ಎಂದು ಹುಯಿಲೆಬ್ಬ್ಬಿಸಿ, ಒಂದು ರಾಜಕೀಯ ಅಜೆಂಡಾತ್ಮಕ ಚಳುವಳಿಯನ್ನು ಮಾಡಲಾಗುತ್ತಿದ್ದಾರೆ” ಎಂಬುದು ‘ಬಲಪಂಥೀಯರು’, ‘ಬಾಲು-ಪಂಥೀಯರು’, ‘ಸಂಘಿಗಳು’,’ನಮೋದಿಗರು’ ಎಂಬಿತ್ಯಾದಿಯಾಗಿ ಕರೆಯಲ್ಪಡುವ ಇನ್ನೊಂದು ಗುಂಪಿನವರ ಇಲ್ಲಿನ ಗೋಳು.
ಈ ಇನ್ನೊಂದು ಗುಂಪಿನವರು ಮಾಡುತ್ತಿರುವುದಾದರೂ ಏನು? ” ‘ಭಾರತೀಯ ಅನುಭವ’ ಎಂಬಿತ್ಯಾದಿ ಹಳೇಪದಗಳಿಗೆ ಅನುಕೂಲಸಿಂಧುವಾಗುವಂತೆ ಹೊಸ ಅರ್ಥಗಳನ್ನು ಸಂಕಲ್ಪಿಸಿ, ಹಳೇ ಕಥೆಗಳ ಜಾಗಕ್ಕೆ ಹೊಸಾ ಕಥೆಗಳನ್ನು ‘ಸಂಕಥಿಸಿ’, ‘ಭಾರತೀಯ ಅನುಭವ’ಕ್ಕೆ ಹೊರತಾದದ್ದನ್ನು ಭಾರತದಲ್ಲಿ ಸಹಿಸಲಾಗದು ಎಂಬಿತ್ಯಾದಿಯಾಗಿ ಕೂಗಾಡುತ್ತಾ ಓಡಾಡಿಕೊಂಡಿರುವುದು” -ಅಷ್ಟೇ!
ಇಲ್ಲಿ ಅಜೆಂಡಾತ್ಮಕ ರಾಜಕೀಯ ಮಾಡದ ಶುದ್ಧಸಂಪನ್ನರು ಯಾರೂ ಇಲ್ಲ ಹಾಂ…
ಭಾರತೀಯ ಅನುಭವಕ್ಕೆ ಹೊರತಾದುದನ್ನು ಸಹಿಸಬಹುದು – ಅದು ವಿಧ್ವಂಸಕವಾಗಿರದಿದ್ದಲ್ಲಿ.
ಹಾಂ… ಅಂದಹಾಗೆ ರಿಲಿಜನ್ನು, ಅಸಹಿಷ್ಣುತೆ,ಅವಾರ್ಡು ವಾಪ್ಸಿ, ಅಮೀರುಕಾನು, ಇತ್ಯಾದಿಗಳು ಮಾಡುತ್ತಿರುವ ಹಳವಂಡಗಳು ಪ್ರಾಮಾಣಿಕ ಕಾಳಜಿಗಳಲ್ಲ …ಹಾಂ, ಹಾಗಾಗಿ ನಾವುಗಳು ‘ಹೂಂ’ ಕರಿಸಬೇಕಾಗಿದೆ ಹಾಂ.
ಹಾಂ,ಹೂಂ ಹೀಂ.
ಹೂಂಹೂಂಹಾಹಾಂ…೬೨ ವರ್ಷಗಳಿಂದ ‘ಕ್ಯಾತ’ ಚಿಂತಕರು ಸರ್ಕಾರದ ಮುಂದೆ ಹೀಗೆ ಬಕೆಟ್ ಇಟ್ಟೇ ಹೀಗಾಗುವುದು ಹಾಂ.
ಇದುವರೆಗೂ ಬರೀ ತಳ ಬುಡವಿಲ್ಲದ ಕಥೆಗಳನ್ನೇ ಕೇಳಿ ಕೇಳಿ ಹಾಂ ಹಾಂ ಎಂದು ತಲೆದೂಗಿದವರಿಗೆ, ಅಜೆಂಡಾಗಳನ್ನೇ ಸಮಾಜವೆಂದು ಹೇಳಿ ಹೇಳಿ ದುಂಡಗಾದವರಿಗೆ, ತಮ್ಮನ್ನು ತಾವು ಪಂಥವೊಂದಕ್ಕೆ ಬಲಿಕೊಟ್ಟುಕೊಂಡವರಿಗೆ ಉಳಿದೆಲ್ಲವೂ ಹಾಂ ಅವು ನಮ್ಮಂತದ್ದೇ ಅಜೆಂಡಾ ಇಟ್ಕೊಂಡಿರೋ ಕಥೇನೇ ಅಂತನಿಸೋದು ಸಹಜ!!
ಹೂಂ, ಈ ಅಸಮಧಾನ ಕೂಡ ಲೇಖನದ ವಾದಕ್ಕಾಗಲೀ, ಅದರ ಪ್ರಶ್ನೆಗಾಗಲೀ ಸಂಬಂಧಿಸಿದ್ದಲ್ಲ! ತಾವು ತಗುಲಿಸಿಕೊಂಡಿರುವ ಅಜೆಂಡಾ ಕಂಡುಹಿಡಿಯುವ ಐಡಿಯಾಲಜಿಯದ್ದಷ್ಟೇ! ಹಾಗಾಗಿ ಇಂತಹ ವ್ಯಂಗ್ಯ ವಿನೋದಗಳಲ್ಲದೇ ಇನ್ನೇನು ತಾನೆ ಪ್ರತಿಕ್ರಿಯಿಸಬಲ್ಲರು!!
ಅನೂಕೂಲಾರ್ಥ ಕಲ್ಪಿಸುವುದುಕ್ಕೆ ಇದು ಕಾದಂಬರಿಯೂ ಅಲ್ಲ, ಸಣ್ಣ ಕಥೆಯೂ ಅಲ್ಲ, ಇಲ್ಲಿ ‘ಕವಿ ಸಮಯ’ವೂ ಇಲ್ಲ, ಬರೆದವರು ಕವಿಗಳೂ ಅಲ್ಲ. ಹಳೇ ಕಥೆ ಜಾಗಕ್ಕೆ ಹೊಸ ಕಥೆ ಬಂದರೆ ಹಳೆ ಕಥೆ ಬೇಕಾದ್ರೆ ಉಳ್ಕೋಬಹುದು. ಆದ್ರೆ ಹೊಸ ವಾದ ಬಂದ್ರೆ ಹಳೆಯದನ್ನ ಮೂಲೆಗೆ ಸರಿಸಿಯೇ ಬರೋದು! ವಾದವೊಂದು ಸಮಾಜವನ್ನು ಅರ್ಥಮಾಡಿಕೊಳ್ಳೋಕೆ ಇದೆ ಅಂತಾದ್ರೆ ಹಳೆ ವಾದ ಬದಿಗಿಟ್ಟು ಹೊಸ ವಾದವನ್ನು ಒಪ್ಕೊಳ್ಳಬೇಕಾಗಾತ್ತೆ! ಆದ್ರೆ ಅದೂ ಕೂಡ ಅದನ್ನ ತೆರೆಗೆ ಸರಿಸೋ ಅದಕ್ಕಿಂತ ಸಮರ್ಪಕ ವಾದ ಮತ್ತೊಂದು ಬರೋವರೆಗೆ! ಇದು ಇಂತಹ ವಾದದ ಕೆಟಗರಿಗೆ ಸೇರಿದ್ದು.
ಹಾಗಾಗಿ ಕಥೇ ಕೇಳಿ ಹಾಂ ಎನ್ನುವುದಷ್ಟೇ ಕಲಿತು ಆ ಕಥೆಗಳ ಅವುಗಳ ಐಡಿಯಾಲಜಿಯ ಅಜೆಂಡಾವನ್ನೇ ಎಲ್ಲೆಲ್ಲೂ ನೋಡುವವರಿಗೆ ಇದು ರುಚಿಸದಿದ್ರೆ ಹಾಂಂ ಆಶ್ಚರ್ಯವೇನಿಲ್ಲ !!
BJP MP from Dibrugarh Lok Sabha constituency of Assam Rameswar Teli in a sensational revelation alleged that noted writer, columnist and journalist Homen Borgohain returned the Sahitya Akademi Award in exchange of a hefty amount paid by the Congress.
The MP further alleged that Homen Borgohain accepted Rs 10-15 lakh for returning the honour. “Borgohain took rupees 10-15 lakhs from Congress party and returned the award worth rupees 1 lakh,” Teli said in a press meet in Dibrugarh on Tuesday.
Responding to the nationwide protest of Sahitya Akademi award winning authors against the government’s silence over the growing religious intolerance in the country Borgohain had returned the Sahitya Akademi award he was accorded in 1978 for his novel ‘Pita Putra’.
ಇದು Northeast Today ಎಂಬ ಜಾಲಪತ್ರಿಕೆಯಿಂದ ಸಂಪಾದಿಸಿದ ಸುದ್ದಿ!
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿಲ್ಲ. ಮೋದಿಯ ಜನಪ್ರಿಯತೆಗೆ ಕಾಂಗ್ರೆಸ್ನ ಅಸಹಿಷ್ಣುತೆ ಹೆಚ್ಚುತ್ತಿದೆ. ಕಾಂಗ್ರೆಸ್ ಮಾಡಿರುವ ಹಲ್ಕಾ ಕೆಲಸ ಲೆಕ್ಕವಿಲ್ಲ.
ನಮ್ಮ ಈ ಬುದ್ದಿಜೀವಿಗಳು, ಸಾಹಿತಿಗಳು ಮತ್ತು ಕಲಾವಿದರು ಪ್ರತಿಭಟಿಸುತ್ತಿರುವುದು ಮತ್ತು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ಅಸಹಿಷ್ಣುತೆ ವಿಷಯವಾಗಿ ಎನ್ನುವುದಕ್ಕಿಂತ ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಎಂದರೆ ಸರಿಹೋದಿತು. ಏಕೆಂದರೆ ಹಲವು ವರ್ಷಗಳಿಂದ ಆಯಕಟ್ಟಿನ ಸ್ಥಳದಲ್ಲಿ ಕುಳಿತು ಅಧಿಕಾರದ ಸವಿ ಉಣ್ಣುತ್ತಿರುವ ಈ ಎಡಪಂಥೀಯ ವಿಚಾರಧಾರಿಗಳಿಗೆ ಈಗ ತಾವು ನಿರಾಶ್ರಿತರಾಗಬಹುದೆನ್ನುವ ಭಯ ಕಾಡುತ್ತಿರಬಹುದು. ಅದಕ್ಕೆಂದೆ ಅವರು ಅಸಹಿಷ್ಣುತೆಯ ನೆಪದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿರುವರು. ಅಚ್ಚರಿಯ ಸಂಗತಿ ಎಂದರೆ ಇದೇ ಬುದ್ಧಿಜೀವಿಗಳು ಕಳೆದ ಹತ್ತುವರ್ಷಗಳಲ್ಲಿ ಯಾವ ಅನ್ಯಾಯದ ವಿರುದ್ಧವಾಗಲಿ ಇಲ್ಲವೆ ಆಗಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಲಿ ಧ್ವನಿ ಎತ್ತಿರಲಿಲ್ಲ.
ಅಥ೯ ಮಾಡಿಕೊಳ್ಳುವ ಮನಸ್ಸಿಲ್ಲವಾದರೆ ಇದು ಖಂಡಿತವಾಗಿ ಅಥ೯ವಾಗದ ಸುಳಿ.