ಹೆಚ್ಚುತ್ತಿರುವುದು ಅಸಹಿಷ್ಣುತೆಯೋ ಅಥವಾ ಅಭದ್ರತೆಯೋ…?
-ಡಾ. ಪ್ರವೀಣ್ ಟಿ. ಎಲ್. ಕುವೆಂಪು ವಿಶ್ವವಿದ್ಯಾನಿಲಯ
ಕಳೆದ ಕೆಲವು ದಿನಗಳಿಂದಲೂ ನಮ್ಮ ಸುತ್ತ ಒಂದು ಗಂಭೀರ ಚರ್ಚೆ/ ವಿವಾದ/ಹೋರಾಟ ನಡೆಯುತ್ತಿದೆ. ಅದೆಂದರೆ “ಅಸಹಿಷ್ಣುತೆಯು ಹೆಚ್ಚುತ್ತಿರುವ ಕಾರಣಕ್ಕೆ ಪ್ರಶಸ್ತಿ ವಾಪಸು ಮಾಡುತ್ತಿರುವುದು ಮತ್ತು ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿರುವುದು”. ಆದರೆ ಹೀಗೆ ಹೇಳುತ್ತಿರುವವರೆಲ್ಲರೂ ಪ್ರಗತಿಪರ, ಎಡಪಂಥೀಯ ಚಿಂತನೆಯ ಪಾಲುದಾರರೇ ಆಗಿರುವುದು ಆಶ್ಚರ್ಯ. ಯಾವುದೇ ಒಂದು ವಾದವನ್ನು ಮಂಡಿಸಬೇಕಾದರೆ ತಾರ್ಕಿಕತೆ ಮತ್ತು ವಾದವನ್ನು ಬಲಪಡಿಸುವ ಫ್ಯಾಕ್ಟ್ ಗಳು ಮುಖ್ಯವಾಗುತ್ತದೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳುತ್ತಿರುವ ಸಾಹಿತಿಗಳಾಗಲೀ, ರಾಜಕಾರಣಿಗಳಾಗಲೀ, ಸಿನಿಮಾ ಸ್ಟಾರ್ ಗಳಾಗಲೀ ಅದನ್ನು ಸಾಭೀತು ಪಡಿಸುವ ಗೋಜಿಗೆ ಹೋಗದಿರುವುದು ಅವರ ವಾದದ ಟೊಳ್ಳುತನಕ್ಕೆ ಹಿಡಿದ ಕನ್ನಡಿ. ಆದರೆ ತಮ್ಮ ಟೊಳ್ಳುತನದ ಪ್ರದರ್ಶನಕ್ಕೆ ಈ ಮಟ್ಟದ ಪೈಪೋಟಿಗೆ ಬಿದ್ದಿರುವುದು ಮಾತ್ರ ವಿಪರ್ಯಾಸ. ಅದೇನೆ ಇರಲಿ ಈ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಬೇಕಿರುವುದು ನಮ್ಮ ಕರ್ತವ್ಯ.
ಯಾವ ಆಧಾರದ ಮೇಲೆ ನೀವು ಈ ವಾದವನ್ನು ಮಾಡುತ್ತಿದ್ದೀರಿ ಎಂದು ಗಟ್ಟಿಯಾಗಿ ಕೇಳಿದರೆ, ತಡಬಡಾಯಿಸುವ ಇವರುಗಳು ತೊದಲುತ್ತಾ ದಾದ್ರಿ ಮತ್ತು ಕಲ್ಬುರ್ಗಿ ಹತ್ಯೆಯಂತಹ ಎರಡು ಘಟನೆಗಳನ್ನು ಹೇಳುತ್ತಾರೆ. ಕಲ್ಬುರ್ಗಿಯವರ ಹತ್ಯೆಗೆ ‘ಅಸಹಿಷ್ಣುತೆ’ ಹೇಗೆ ಕಾರಣ? ಅದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವಲ್ಲವೇ? ಎಂಬುದನ್ನು ಕೇಳಿದರೆ, ಮಾತನಾಡಲು ಬಾರದ ಮೂಕರಾಗಿಬಿಡುತ್ತಾರೆ. ಹೋಗಲಿ ದಾದ್ರಿ ಘಟನೆಯೊಂದು ‘ಅಸಹಿಷ್ಣುತೆ’ ಹೆಚ್ಚಾಗುತ್ತಿದೆ ಎಂಬ ಇವರ ಅಂತರಾಷ್ಟ್ರೀಯ ಮಟ್ಟದ ವಾದಕ್ಕೆ ಸಾಕ್ಷಿಯಾಗುತ್ತದೆಯೇ? ಎಂದು ಕೇಳಿದರೆ, ಹಾಗಾದರೆ ಇನ್ನೆಷ್ಟು ಜನರು ಬಲಿಯಾಗಬೇಕೆಂದು ಬಯಸುತ್ತೀರಿ? ಎಂದು ಮರುಪ್ರಶ್ನೆಯನ್ನು ಹಾಕಿ ಪ್ರಶ್ನೆ ಕೇಳಿದವರನ್ನು demoralize ಮಾಡಲು ಪ್ರಯತ್ನಿಸುತ್ತಾರೆ. ಒಂದು ಘಟನೆಯನ್ನು ಆಧರಿಸಿ, ಭಾರತದಾದ್ಯಂತ ‘ಅಸಹಿಷ್ಣುತೆ’ ಹೆಚ್ಚುತ್ತಿದೆ ಎಂದರೆ ಅದೊಂದು ಆತುರದ ನಿರ್ಧಾರವಾಗುತ್ತದೆ. ಅಂದರೆ ಬಹುಮುಖ್ಯ ತಾರ್ಕಿಕ ದೋಷದ(hasty generalisation) ವಾದವಾಗುತ್ತದೆ. ಹಾಗಾದರೆ ಅವರು ತಮ್ಮ ವಾದವನ್ನು ಸಾಭೀತು ಮಾಡಲು ಇರುವ ಸಾಧ್ಯತೆಗಳ್ಯಾವುವು? ಕಳೆದ ಒಂದೂವರೆ- ಎರಡು ವರ್ಷಗಳ ಹಿಂದಿನ ಘಟನೆಗಳನ್ನು(ಅಂದರೆ ಯು.ಪಿ.ಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ) ಮತ್ತು ಮೋದಿ ನೇತೃತ್ವದ ಎನ್. ಡಿ. ಎ ಸರ್ಕಾರವು ಅಧಿಕಾರಕ್ಕೆ ಬಂದ ನಂತರದ ಘಟನೆಗಳನ್ನು ತಾಳೆ ಹಾಕಿ, ಹೇಗೆ ಸಹಿಷ್ಣುವಾಗಿದ್ದ ಭಾರತವು ಅಸಹಿಷ್ಣುವಾಗುತ್ತಿದೆ ಎಂದು ತೋರಿಸಬೇಕಾಗುತ್ತದೆ. ಎನ್. ಡಿ. ಎ ಕಾಲಾವಧಿಯಲ್ಲಿ ನಡೆದ ಪ್ರೊ. ಕಲ್ಬುರ್ಗಿಯವರ ಹತ್ಯೆಯು ಅಸಹಿಷ್ಣುತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗುವುದಾದರೆ, ದಾಬೋಲ್ಕರ್ ಹತ್ಯೆಯು ಯು.ಪಿ.ಎ ಕಾಲಾವಧಿಯ ಅಸಹಿಷ್ಣುತೆಗೆ ಏಕೆ ಸಾಕ್ಷಿಯಾಗುವುದಿಲ್ಲ? ಹೀಗೆ ಕೇಳಿದರೆ “ತರ್ಕದ ಟಗರ ಹೋರಾಟ”ವೆಂದು ಮೂದಲಿಸುವ ಸಂತರಿದ್ದಾರೆ.
ಹಾಗಾದರೆ ಇಷ್ಟು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವ ‘ಹೋರಾಟ’ಕ್ಕೆ ತಳಪಾಯವೇ ಇಲ್ಲವೇ? ಖಂಡಿತವಾಗಿಯೂ ಇದೆ. ಅದನ್ನು ವಿವರಿಸುವ ಸಣ್ಣ ಪ್ರಯತ್ನವೇ ಈ ಬರಹ. ಮೋದಿಯವರು ಪ್ರದಾನಿ ಅಭ್ಯರ್ಥಿ ಎಂದು ಘೋಷಿಸಿದ ತಕ್ಷಣವೇ ಭಾರತದಾದ್ಯಂತ ನಕಲಿ ಭಯವನ್ನು ಸೃಷ್ಟಿಸುವ ದೊಡ್ಡ ಪ್ರಯತ್ನಗಳು ನಡೆದವು. ಕೆಲವರಂತೂ “ಮೋದಿಯವರನ್ನು ಪ್ರಧಾನಿ ಮಾಡುವುದು ಭಾರತವನ್ನು ತಾಲಿಬಾನಿಗಳ ಕೈಗೊಪ್ಪಿಸುವುದಕ್ಕಿಂತ ಘೋರಪಾತಕವೆಂದು; ಅಂತಹ ಭಾರತವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ” ಎಂಬಂತಹ ಹೇಳಿಕೆಗಳನ್ನು ನೀಡಿದರು. ಸಾಹಿತಿಗಳು, ಬುದ್ಧಿಜೀವಿಗಳು ಬಹಿರಂಗವಾಗಿಯೇ ಅದನ್ನು ಹೊರಹಾಕಿ, ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ಮಾತ್ರವಲ್ಲ ಬಿ.ಜೆ.ಪಿ ಮಿತ್ರಪಕ್ಷಗಳನ್ನು ಚುನಾವಣೆಯಲ್ಲಿ ಬೆಂಬಲಿಸದಂತೆ ದಂಡಯಾತ್ರೆಗಳನ್ನೇ ಕೈಗೊಂಡರು. ಆದರೆ ಚುನಾವಣಾ ಫಲಿತಾಂಶ ಇವರ ಪ್ರಯತ್ನಗಳೆಲ್ಲವೂ ನೀರಿನಲ್ಲಿ ಹೋಮವಾಗಿದ್ದನ್ನು ಸಾರಿಹೇಳುತ್ತಿತ್ತು. ಆಗಲೇ ಅರ್ಧ ಕುಸಿದು ಹೋಗಿದ್ದ ಇವರುಗಳು ತಾವು ಹೇಳಿದ ಭವಿಷ್ಯವಾದರೂ ನೆರವೇರುವುದೇನೋ ಎಂಬ ನಿರೀಕ್ಷೆಯಲ್ಲಿದ್ದರು. ಅಂದರೆ “ಭಾರತ ತಾಲಿಬಾನ್ ಆಗುತ್ತದೆ” ಎಂಬ ನಿರೀಕ್ಷೆಯು ಒಂದು ವರ್ಷವಾದರೂ ಈಡೇರಲೇ ಇಲ್ಲ. ಆಗ ಇನ್ನಷ್ಟು ಕಂಗಾಲಾದರು. ಹಾಗಾಗಿ ಯಾವುದಾದರೂ ನಕಲಿ ಹೋರಾಟವನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಅವರ ಹೆಗಲ ಮೇಲಿತ್ತು. ಅದರ ಪರಿಣಾಮವೇ ಈ “ಅಸಹಿಷ್ಣುತೆಯ ಕಥೆ ಮತ್ತು ಪ್ರಶಸ್ತಿ ವಾಪಾಸು ಮಾಡುವ ಪ್ರಹಸನಗಳು”. ಹಾಗಾದರೆ ಇಂತಹ ‘ಗಂಭೀರ ಪ್ರಹಸನ’ಗಳ ಅಗತ್ಯವಿತ್ತೇ?
ಈ ಸಂದರ್ಭದಲ್ಲಿ ನನ್ನ ಊಹೆಗೆ ನಿಲುಕಿದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಒಂದು ಊರಿನಲ್ಲಿ ದೊಡ್ಡ ಮರವೊಂದಿತ್ತು. ಆ ಮರದಲ್ಲಿ ಹಲವಾರು ಪಕ್ಷಿಗಳು, ಕ್ರಿಮಿಕೀಟಗಳು ವಾಸವಾಗಿದ್ದವು. ಆ ಮರದ ಹಣ್ಣುಗಳನ್ನು ತಿಂದು, ಅದರ ಪೊಟರೆಗಳನ್ನೇ ಮನೆಮಾಡಿಕೊಂಡಿದ್ದ ಪಕ್ಷಿಗಳು, ಕೀಟಗಳು ಆರಾಮದಾಯಕವಾಗಿ, ನಿರ್ಭಯವಾಗಿ ಕಾಲಕಳೆಯುತ್ತಿದ್ದವು. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ ಸಿಡಿಲು ಬಡಿತಕ್ಕೆ ಬಲಿಯಾದ ಆ ಮರವು ನೆಲಕ್ಕುರುಳಿತ್ತು, ಮತ್ತು ನಿರ್ಜೀವವಾಗುತ್ತಾ ಹೋಯಿತು. ಆಗ ಅಲ್ಲಿದ್ದ ಹಕ್ಕಿ ಪಕ್ಷಿಗಳು ವಿಚಿತ್ರವಾಗಿ ಕೂಗಾಡಲು ಶುರುವಿಟ್ಟುಕೊಂಡವು. ಕೀಟಗಳಂತೂ ಕೇಳುವವರ ಕಿವಿ ತೂತಾಗುವಂತೆ ಕಿರುಚಲು ಆರಂಭಿಸಿದವು. ಅಷ್ಟೇ ಅಲ್ಲ ಕೆಲವು ಪಕ್ಷಿಗಳು ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದವರ ಮೇಲೆ ಎರಗಿದವು. ತಮಗೆ ಆಶ್ರಯ ನೀಡಿದ ಮರದ ಈ ಪರಿಸ್ಥಿತಿಗೆ ನೀವೇ ಕಾರಣರು ಎಂಬಂತೆ. ಅವುಗಳಲ್ಲಿ ಅಭದ್ರತೆಯ ಭಾವನೆ ಎದ್ದುಕಾಣುತ್ತಿತ್ತು.
ಈಗಿನ ನಮ್ಮ ಪ್ರಶಸ್ತಿ ‘ವಾಪಾಸಿಗರು’ ಹಾಗೂ ಅಸಹಿಷ್ಣುತೆಯ ‘ಹರಿಕಾರರುಗಳು’ ಈ ಪಕ್ಷಿ, ಕೀಟಗಳಂತೆಯೇ ಅಭದ್ರತೆಯ ಭಾವನೆಯಲ್ಲಿದ್ದಾರೆ. ಅಂದರೆ ಎಡಪಂಥೀಯರು ಹಾಗೂ ಪ್ರಗತಿಪರ ನಿಲುವಿನವರು ಕಾಂಗ್ರೇಸ್ ಮತ್ತದರ ಮಿತ್ರ ಪಕ್ಷಗಳನ್ನು ಆಶ್ರಯಿಸಿದ್ದರು. ಆಶ್ರಯಿಸಿದ್ದರೂ ಎಂಬುದಕ್ಕಿಂತ ತಾವು ನಂಬಿದ ವಿಚಾರಗಳನ್ನು ಪ್ರತಿನಿಧಿಸುವ ಸರ್ಕಾರಕ್ಕೆ ಸಂಕಷ್ಟ ಎದುರಾಗಿತ್ತು. ಎಡಪಂಥೀಯ ವಿಚಾರಗಳನ್ನೇ ಪಕ್ಷದ ಐಡಿಯಾಲಜಿಯನ್ನಾಗಿ ಮಾಡಿಕೊಂಡಿದ್ದ ಪಕ್ಷಗಳು 2014ರ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ಮುಗ್ಗರಿಸಿದ್ದು, ಅದನ್ನೇ ನೆಚ್ಚಿಕೊಂಡಿರುವ ಸಾಹಿತಿಗಳಿಗೆ, ರಾಜಕಾರಣಿಗಳಿಗೆ, ಕೆಲವು ಬುದ್ಧಿಜೀವಿ ಸಿಮಿಮಾ ಸ್ಟಾರ್ ಗಳಿಗೆ ಅಭದ್ರತೆಯ ಭಾವನೆಯನ್ನು ಹೆಚ್ಚಿಸಿರುವುದಂತೂ ನಿಜ. ಅಷ್ಟೇ ಅಲ್ಲ ಒಂದು ವರ್ಷ ಕಳೆದರೂ ಅವರು ನಿರೀಕ್ಷಿಸಿದ ಕೋಮುಗಲಭೆಗಳು ನಡೆಯದಿದ್ದುದು ಇವರ ದಿಕ್ಕುತಪ್ಪುವಂತೆ ಮಾಡಿದ್ದೂ ಅಷ್ಟೇ ಸತ್ಯ. ಅಂತಹ ಸಂದರ್ಭದಲ್ಲಿ ಕಲಬುರ್ಗಿ ಹತ್ಯೆ ನಡೆಯಿತು. ಆ ಹತ್ಯೆಯನ್ನೇ ನೆಪಮಾಡಿಕೊಂಡ ಇವರುಗಳು ಇಲ್ಲದ “ಅಸಹಿಷ್ಣತೆಯ ಕಥೆಯನ್ನೂ, ಪ್ರಶಸ್ತಿ ವಾಪಾಸು ಮಾಡುವ ಪ್ರಹಸನ”ವನ್ನು ಆರಂಭಿಸಿದರು. ಅದನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿನಯಿಸಿ ತೋರಿಸುತ್ತಿದ್ದಾರೆ. ಅಭಿನಯಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಿನಿಮಾ ಸ್ಟಾರ್ ನಟರು ಸೇರಿಕೊಳ್ಳುತ್ತಿರುವುದು ಪ್ರಹಸನಕ್ಕೆ ಹೊಸ ಕಳೆ ಬಂದಿದೆ. ಹಾಗೆಯೇ ಇದರ ಬೆಂಬಲಕ್ಕೆ ಕಾಂಗ್ರೇಸ್ ಮತ್ತು ಎಡಪಂಥೀಯ ಪಕ್ಷಗಳು ನಿಂತಿರುವುದು ನನ್ನ ವಿವರಣೆಯನ್ನು ಮತ್ತಷ್ಟು ಪುಷ್ಠೀಕರಿಸುತ್ತವೆ. ಉದಾ. ಅಮೀರ್ ಖಾನ್ ರ ಹೇಳಿಕೆಗೆ ಭಾರತದಾದ್ಯಂತ ಟೀಕೆಗಳು ಎದುರಾಗುತ್ತಿದ್ದರೆ, ಅವರನ್ನು ಬೆಂಬಲಿಸುವವರಲ್ಲಿ ರಾಹುಲ್ ಗಾಂಧಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಇದಕ್ಕೆ ಪೂರಕವಾಗಿರುವ ಮತ್ತೊಂದು ವಿಚಾರವೆಂದರೆ, ಕಳೆದ ಹಲವು ವರ್ಷಗಳಿಂದ ಎಡಪಂಥೀಯ ಚಿಂತನೆಗಳು ಯಾವುದೇ ಪ್ರತಿರೋಧವಿಲ್ಲದೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿವೆ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಆ ಚಿಂತನೆಗಳು ತೀವ್ರವಾದ ವಿಮರ್ಶೆಗೆ, ಟೀಕೆಗೆ ಗುರಿಯಾಗುತ್ತಿವೆ. ಆ ಟೀಕೆಗಳು ಕೇವಲ ಐಡಿಯಾಲಾಜಿಕಲ್ ಎಂಬುದಕ್ಕಿಂತ ಸೈದ್ಧಾಂತಿಕವಾಗಿ ಹೆಚ್ಚು ಪ್ರಬಲವಾಗಿದೆ. ಅಂತಹ ಸಂಕಷ್ಟದ ಸ್ಥಿತಿ ಸಹ ಅವರನ್ನು ಹತಾಶರನ್ನಾಗಿಸಿರುವುದು ಸುಳ್ಳಲ್ಲ. ಹಾಗಾಗಿ ಹೆಚ್ಚುತ್ತಿರುವುದು ಹತಾಶೆಯೋ, ಅಭದ್ರತೆಯೋ ಅಥವಾ ಅಸಹಿಷ್ಣತೆಯೋ ಎಂಬುದನ್ನು ಓದುಗರೇ ತೀರ್ಮಾನಿಸಬೇಕಿದೆ. ಈಗಾಗಲೇ ಹಲವರು ಭಾರತೀಯ ಸಂದರ್ಭದಲ್ಲಿ (ರಿಲಿಜನ್ನಿನ) ಅಸಹಿಷ್ಣುತೆ ಸಾಧ್ಯವಿಲ್ಲ ಎಂಬುದನ್ನು ವಿವರಿಸಿದ್ದಾರೆ. ಹಾಗಾಗಿ ನಮ್ಮಲ್ಲಿರುವ ಆಯ್ಕೆಗಳು ಹತಾಶೆಯೋ, ಅಭದ್ರತೆಯೋ, ಎಂಬುದಷ್ಟೇ.
ಇಲ್ಲಿ ಪ್ರಶಸ್ತಿ ವಾಪಾಸು ಮಾಡುತ್ತಿರುವವರನ್ನು, ಹಾಗೂ ಹೇಳಿಕೆ ಕೊಡುವವರನ್ನು ದೂಷಿಸುವುದಾಗಲೀ, ಅಗೌರವ ತೋರಿಸುವುದಾಗಲೀ ಬರಹದ ಉದ್ದೇಶವಲ್ಲ. ಆದರೆ ಅವರು ಸಕಾರಣಗಳನ್ನು ನೀಡಿ, ತಮ್ಮ ಅಸಹಿಷ್ಣುತೆಯ ವಾದವನ್ನು ಸಾಭೀತುಮಾಡದೇ ಇದ್ದುದರಿಂದ ಆ ವಿವಾದವನ್ನು ಸಮರ್ಪಕವಾಗಿ ವಿವರಿಸುವ ಅನಿವಾರ್ಯತೆ ಇತ್ತು. ಅದನ್ನು ಈ ನನ್ನ ವಿವರಣೆಯು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಭಾವಿಸಿದ್ದೇನೆ. ಹಾಗೆಂದು ಕಾಂಗ್ರೇಸ್ ಪಕ್ಷದ ವೈರಿಯಾಗಲೀ, ಅಥವಾ ಬಿ.ಜೆ.ಪಿ ಯ ಕಟ್ಟಾ ಬೆಂಬಲಿಗನಾಗಲೀ ನಾನಲ್ಲ. ಹಾಗೆಯೇ ಮೋದಿಯ ಪರಮ ಭಕ್ತನೋ, ಬಲಪಂಥೀಯನೋ ಎಂದು ತೀರ್ಮಾನಿಸಿದರೆ ಅದು ನನ್ನ ತಪ್ಪಲ್ಲ. ನಿಮ್ಮದೇ ಆಗಲಿದೆ. ‘ಎಡ’ವನ್ನು ಕುರಿತು ಮಾತನಾಡಿದರೆ, ಬಲಪಂಥೀಯನೆಂದು, ‘ಬಲ’ದ ಬಗ್ಗೆ ಮಾತನಾಡಿದರೆ ಎಡಪಂಥೀಯನೆಂದು ತೀರ್ಮಾನಿಸುವುದು ಸಹಜವಾಗಿ ಬಿಟ್ಟಿದೆ. ಆದರೆ ಹಾಗೆ ಮಾಡುವುದು ಪ್ರಮಾದವಲ್ಲದೇ ಮತ್ತೇನಲ್ಲ. ಅದೇನೆ ಇರಲಿ ಈ ಪ್ರಹಸನದ ಮುಖ್ಯಪಾತ್ರದಾರಿಗಳು ಎಡಪಂಥೀಯ ಅಥವಾ ಸೋ ಕಾಲ್ಡ್ ಪ್ರಗತಿಪರ ಚಿಂತಕರೇ ಆಗಿರುವುದರಿಂದ ಪ್ರಸ್ತುತ ವಿಶ್ಲೇಷಣೆಯು ಅವರನ್ನು ಉದ್ದೇಶಿಸಿದೆ. ಅಲ್ಲದೇ ಕೊನೆಯದಾಗಿ ಹೇಳುವುದಾದರೆ, ಈ ರೀತಿಯಾಗಿ ವಿನಾಕಾರಣ ಅಭದ್ರತೆಯ ಭಾವನೆಯನ್ನು ಹೊಂದುವ ಅಗತ್ಯವಿಲ್ಲ. ಏಕೆಂದರೆ ಎಡಪಂಥೀಯ ಚಿಂತಕರನ್ನು, ಚಿಂತನೆಯನ್ನು ಹೊರಗಿಟ್ಟು ದೇಶನಡೆಸುವ ಧೈರ್ಯ ಸದ್ಯಕ್ಕೆ ಬಿಜೆಪಿಗಾಗಲೀ ಹಾಗೂ ಅದರ ಮಿತ್ರಪಕ್ಷಗಳಿಗಾಗಲೀ ದಕ್ಕಿಲ್ಲ ಎಂದು ಮಾತ್ರ ಹೇಳಬಲ್ಲೆ.
Well said.