ಅಸಹಿಷ್ಣುತೆ – ಮನೆ ಮನೆ ಕಥೆ!
– ನಾಗೇಶ ಮೈಸೂರು
ಯಾಕೋ ಗುಬ್ಬಣ್ಣ ಪತ್ತೆಯಿಲ್ಲದೆ ಮಾಯಾವಾಗಿಹೋಗಿದ್ದ ಒಂದು ತಿಂಗಳಿಂದ. ಆಗೀಗ ಮಧ್ಯೆ ಬರಿ ಒಂದೆರಡು ಮೆಸೇಜ್ ಮಾತ್ರ ಕಳಿಸಿ ‘ವೆರಿ ಬಿಜಿ’ ಅಂತೊಂದು ಚೋಟು ಸುದ್ಧಿ ಹಾಕಿ ಇನ್ನು ಕುತೂಹಲ ಜಾಸ್ತಿ ಮಾಡಿಬಿಟ್ಟಿದ್ದ. ‘ಪ್ರಾಜೆಕ್ಟುಗಳೆಲ್ಲ ಕ್ಯಾನ್ಸಲ್ಲಾಗಿ ಇದ್ದಕ್ಕಿದ್ದಂತೆ ಫುಲ್ ಫ್ರೀ ಟೈಮ್ ಸಿಕ್ಕಿಬಿಟ್ಟಿದೆ; ಸ್ವಲ್ಪ ಬ್ರೇಕು ಸಿಕ್ಕಿದಾಗಲೆ ಅಲ್ಲಿ ಇಲ್ಲಿ ಓಡಾಡಿಕೊಂಡು ಬಿಡಬೇಕು ಸಾರ್.. ಈಗಲಾದರು ನೋಡೊ ಜಾಗವೆಲ್ಲ ನೋಡಿಬಿಡಬೇಕು ಅನ್ಕೊಂಡಿದೀನಿ’ ಅಂತಿದ್ದ. ‘ಹೇಳಿದ ಹಾಗೆ ಎಲ್ಲಾದರು ಟೂರು ಹೊಡಿತಿದಾನ ?’ ಅನ್ಕೊಂಡೆ, ಕ್ರಿಸ್ಮಸ್ಸಿನ ರಜೆ ಹತ್ತಿರವಾಗುವಾಗಲಾದರೂ ಸಿಕ್ತಾನ ನೋಡೋಣ ಅನ್ಕೊಂಡು ‘ವಾಟ್ಸಪ್ ಗುಬ್ಬಣ್ಣ ? ಮೆರ್ರಿ ಕ್ರಿಸ್ಮಸ್’ ಎಂದು ಮತ್ತೊಂದು ತುಂಡು ಸುದ್ದಿ ಕಳಿಸಿದೆ.
ಈ ಮೆಸೇಜಿಗೆ ಗುಬ್ಬಣ್ಣ ಖಂಡಿತವಾಗಿ ರೆಸ್ಪಾಂಡ್ ಮಾಡ್ತನೆ ಅಂತ ಭರವಸೆಯಿತ್ತು. ಯಾವ ಹಬ್ಬಹರಿದಿನಕ್ಕು ನಾನು ‘ವಿಷ್’ ಮೆಸೇಜ್ ಕಳಿಸಿದವನಲ್ಲ.. ಗುಬ್ಬಣ್ಣ ಹಬ್ಬ ಹರಿದಿನಕ್ಕೆ ವಿಷಸ್ ಕಳಿಸಿದಾಗಲೂ ಬರಿ ‘ಥ್ಯಾಂಕ್ಸ್’ ಅನ್ನೊ ರಿಪ್ಲೈ ಬರೆದರೆ ಅದೇ ಹೆಚ್ಚು. ಅಂತಹವನಿಗೆ ಅವನು ಆಚರಣೆ ಮಾಡದ ಹಬ್ಬಗಳಿಗೆಲ್ಲ ಬೇಕಂತಲೆ ವಿಷಸ್ ಕಳಿಸಿ ಸ್ವಲ್ಪ ರೇಗುವಂತೆ ಮಾಡುತ್ತಿದ್ದೆ.. ಅವಕ್ಕೆಲ್ಲ ಕಳಿಸಿದ್ದಕ್ಕಲ್ಲ ಅವನಿಗೆ ಕೋಪ ; ‘ನಮ್ಮ ಹಬ್ಬಗಳಿಗೆ ಕಳಿಸದೆ, ಕಳಿಸಿದ್ದಕ್ಕು ರೆಸ್ಪಾಂಡ್ ಮಾಡದೆ ಸಂಬಂಧಿಸದೆ ಇರೋದಕ್ಕೆ ಮಾತ್ರ ಉದ್ದುದ್ದ ಮೆಸೇಜ್ ಕಳಿಸಿ ವಿಷ್ ಮಾಡುವೆನಲ್ಲಾ?’ ಅಂತ. ಹಾಗೆ ಕಳಿಸಿದಾಗೆಲ್ಲ ಉರಿದೆದ್ದು ಬೀಳುವುದು, ರೇಗುವುದು ಮಾಮೂಲಾದ ಕಾರಣ, ಬೇಕೆಂತಲೆ ಆ ಮೆಸೇಜ್ ಕಳಿಸಿದ್ದು!
ಇನ್ನೇನು ‘ಫಟಾಫಟ್’ ಖಾರವಾದ ರಿಪ್ಲೈಯೊ, ಕಾಲೋ ಬರುತ್ತೆ ಅಂದುಕೊಳ್ಳುತ್ತಿರುವಾಗಲೆ ‘ಟ್ರಿನ್’ ಸದ್ದಿನೊಡನೆ ಬಂದಿತ್ತು ಗುಬ್ಬಣ್ಣನ ರಿಪ್ಲೈ ಮೆಸೇಜು. ಏನು ಬೈದಿರಬಹುದೆಂದು ಆತುರದಲ್ಲಿ ನೋಡಿದರೆ, ಅಲ್ಲೇನಿದೆ ? ಬರಿ ‘ಸ್ಮೈಲಿಂಗ್ ಫೇಸ್’ನ ಸ್ಮೈಲಿ ಮಾತ್ರ..! ‘ಯಾಕೊ ಇದು ಗುಬ್ಬಣ್ಣನ ಮಾಮೂಲಿ ಲಾಂಗ್ವೇಜ್ ಇದ್ದಂತಿಲ್ಲವಲ್ಲಾ ?’ ಅಂದುಕೊಂಡೆ ‘ ಕ್ರಿಸ್ಮಸ್ ವಿಷಸ್ ಟು ಯುವರ್ ಫ್ಯಾಮಿಲಿ, ಫ್ರೆಂಢ್ಸ್ ಅಂಡ್ ರಿಲೇಟಿವ್ಸ್ ಟೂ..’ ಎಂದು ಮತ್ತೊಂದು ಉದ್ದದ ಮೆಸೇಜು ಹಾಕಿದೆ ವಾಟ್ಸಪ್ಪಿನಲ್ಲೆ. ಈ ಬಾರಿ ಡೆಫನೈಟ್ಟಾಗಿ’ ರೇಗುತ್ತಾನೆ ಅಂದುಕೊಳ್ಳುತ್ತಿದ್ದಂತೆ ಬಂದಿತ್ತು ಮೆಸೇಜು ಒಂದೆರಡು ಹೂವಿನ ಚಿತ್ರದ ಜೊತೆ..’ ಥ್ಯಾಂಕ್ಯೂ ಅಂಡ್ ಸೇಮ್ ಟು ಯೂ ಸಾರ್..!’ ಅಂತ.
ಇನ್ನು ನನಗೆ ತಡೆಯಲಾಗಲಿಲ್ಲ. ಅಲ್ಲಿಂದಲೆ ನೇರ ಪೋನಾಯಿಸಿ ಮಾತಲ್ಲೆ ಗುರಾಯಿಸಿದೆ, ‘ಗುಬ್ಬಣ್ಣ…ವಾಟ್ಸಪ್ಪ್ ? ಸಮ್ ಥಿಂ ರಾಂಗ್ ವಿಥ್ ಯು ? ಏನೀ ಹೊಸ ವೇಷ ?’ ಎನ್ನುತ್ತ ಅಸಮಾಧಾನದ ದನಿಯಲ್ಲಿ.
ಅತ್ತಕಡೆಯಿಂದ ಗುಬ್ಬಣ್ಣ ನಕ್ಕ ದನಿಯ ಜತೆಗೆ..’ ಏನಿಲ್ಲ ಸಾರ್..ವೇಷ ಗೀಷ ಏನಿಲ್ಲ.. ಜಸ್ಟ್ ಪ್ರಾಕ್ಟೀಸಿಂಗ್ ಟಾಲರೆನ್ಸ್.. ಈಗ ಎಲ್ಲಾ ಕಡೆ ಸಹಿಷ್ಣುತೆ, ಅಸಹಿಷ್ಣುತೆಯದೆ ಟಾಪಿಕ್ ಅಲ್ವಾ ? ‘ ಎಂದ.
ದಟ್ ಇಸ್ ಅನ್ ಬಿಕಮಿಂಗ್ ಆಫ್ ಗುಬ್ಬಣ್ಣ… ಇದ್ಯಾವಾಗಿಂದ ಶುರುನಪ್ಪಾ? ಮೊದಲಿಗೆ ಅಸಹಿಷ್ಣುತೆ ಇದ್ದುದಾದರೂ ಯಾವಾಗ? ಗುಬ್ಬಣ್ಣ ಅವನ್ನೆಲ್ಲ ಆಚರಿಸೊಲ್ಲ ಅಂದ್ರೆ ಅರ್ಥ ಅದನ್ನು ಸಹಿಸೋದಿಲ್ಲ ಅಂತೇನು ಅಲ್ಲ.ಇನ್ ಫ್ಯಾಕ್ಟ್ ಅವನ ಮುಕ್ಕಾಲು ಪಾಲು ಶಾಪಿಂಗ್ ನಡೆಯೋದೆ ಕ್ರಿಸ್ಮಸ್ ಸೀಸನ್ನಿನಲ್ಲಿ – ಆವಾಗಾದ್ರೆ ಬೆಸ್ಟ್ ಡಿಸ್ಕೌಂಟ್ ಸಿಗುತ್ತೆ ಅನ್ನೊ ಆರ್ಗ್ಯುಮೆಂಟಲ್ಲಿ ವರ್ಷದ ಶಾಪಿಂಗಿನ ಮುಕ್ಕಾಲು ಭಾಗ ಡಿಸೆಂಬರಿನಲ್ಲೆ ಮಾಡುವ ಹವ್ಯಾಸ ನನಗೂ ತಗುಲಿಸಿದ ಮಹಾನುಭಾವ ಅವನು. .. ಅರ್ಥಾತ್ ಸಹಿಷ್ಣುತೆ , ಅಸಹಿಷ್ಣುತೆಯ ಲೆಕ್ಕಾಚಾರಕ್ಕಿಂತ ಸುಪರ್ ಡಿಸ್ಕೌಂಟ್ ಸೇಲಿನ ದೃಷ್ಟಿಯಿಂದಾದರು ಯಾವಾಗ ಕ್ರಿಸ್ಮಸ್ ಬರುವುದೋ ಎಂದೇ ಕಾಯುವ ಆಸಾಮಿ. ಅವನಿಗಿರುವ ಪರ ಮತ ಬಾಂಧವ ಮಿತ್ರರಿಗೆಲ್ಲ ತಪ್ಪದೆ ಗ್ರೀಟಿಂಗ್ ಕಳಿಸುತ್ತಾನೆ, ಈ ಮೇಯ್ಲಿನಲಾದರು. ಎಲ್ಲ ಮತಧರ್ಮಗಳತ್ತವೂ ಗೌರವದಿಂದಲೆ ಪ್ರವರ್ತಿಸುವ ಪ್ರವೃತ್ತಿಯಿಂದಾಗಿ ಎಲ್ಲಾ ತರದ ಕಸ್ಟಮರುಗಳಿಗೂ ಅವನು ಚಿರಪರಿಚಿತನೆ. ಅದು ಬಿಟ್ಟರೆ, ಸ್ವಂತದಾಚರಣೆಯ ವಿಷಯಕ್ಕೆ ಬಂದರೆ ಮಾತ್ರ, ಎಷ್ಟು ದೂರ ಬೇಕೊ ಅಷ್ಟು ದೂರದಿಂದಲೆ ವ್ಯವಹಾರ.. ಅಂತಹ ಪರಮ ಸಹಿಷ್ಣುವಾಗಿದ್ದು ‘ರೋಲ್ ಮಾಡೆಲ್’ ನಂತಿದ್ದವನು ಈಗ ಟಾಲರೆನ್ಸ್ ಮಾತಾಡುವನೆಂದರೆ ಏನೊ ಎಡವಟ್ಟೆಂದು ತಾನೆ ಲೆಕ್ಕ ?
‘ಗುಬ್ಬಣ್ಣ.. ಇದು ಸ್ವಲ್ಪ ಅತಿಯಾಯ್ತು.. ನೀನ್ಯಾವಾಗಪ್ಪ ಅಸಹಿಷ್ಣುತೆ ತೋರಿಸಿದ್ದು ? ಸದಾ ಸರ್ವದಾ ಸಹಿಷ್ಣುವಾಗಿ ತಾನೆ ಇರೋದು ? ಈಗ್ಯಾಕೆ ಈ ಹೊಸ ಸ್ಲೋಗನ್ ಪ್ರಾಕ್ಟೀಸ್ ಮಾಡಬೇಕು ನೀನು ..?’
‘ಅಯ್ಯೋ… ಕಾಲ ಪೂರ್ತಿ ಕೆಟ್ಟೋಯ್ತು ಸಾರ್.. ಎಕ್ಕುಟ್ಟೋಗಿದೆ. ಮೊದಲೆಲ್ಲ ಬರಿ ಮಾಮೂಲಿ ಗೆಶ್ಚರು ತೋರಿಸಿದ್ದರೆ ಸಾಕಾಗಿತ್ತು.. ಎಲ್ಲಾ ತಂತಾವೆ ಅರ್ಥ ಮಾಡಿಕೊಂಡು ವ್ಯವಹರಿಸ್ತಾ ಇದ್ರು.. ಆದರೆ ಯಾವಾಗ ನಮ್ಮ ಬುದ್ಧಿ ಜೀವಿಗಳ , ವಿಚಾರವಾದಿ ಸಾಹಿತಿಗಳ ದೆಸೆಯಿಂದ ಈ ಸಹಿಷ್ಣುತೆ ಕಾಂಟ್ರೊವರ್ಸಿ ಶುರುವಾಯ್ತೊ, ಎಲ್ಲಾ ಕಡೆನು ಬರಿ ಅನುಮಾನದಿಂದಲೆ ನೋಡ್ತಾರೆ ಸರ್..’
‘ಅಂದ್ರೆ..?’
‘ ಮೊದಲು ಈ ಡಿಸ್ಕಶನ್ ಇಲ್ದೆ ಇದ್ದಾಗ ಏನೊ ಒಂದು ತರ ‘ಅನ್-ರಿಟನ್ ಅಂಡರಸ್ಟ್ಯಾಂಡಿಂಗ್’ ಮೇಲೆ ಎಲ್ಲಾ ನಡೀತಿತ್ತು ಸಾರ್.. ಬಾಯಿಬಿಟ್ಟು ಹೀಗೆ ಅಂತ ಹೇಳಲಿ, ಬಿಡಲಿ ಎಲ್ಲರೂ ಅವರವರಿಗೆ ತೋಚಿದ ಮಿತಿಲಿ ಗೆರೆ ಹಾಕಿಕೊಂಡು ನಡೆಯೋರು.. ಅದು ನಿಯತ್ತಾಗೆ ನಡ್ಕೊಂಡ್ ಹೋಗ್ತಾ ಇತ್ತು..’
‘ ಈಗ..?’
‘ ಈಗೇನು ಬಿಡಿ ಸಾರ್.. ಈ ಚರ್ಚೆ ಶುರುವಾಗಿದ್ದೆ ಎಲ್ಲಾ ಗಾಬರಿ ಬಿದ್ದು ‘ಎಲ್ಲಾ ಸರಿಯಿದೆಯಾ, ಇಲ್ವಾ? ಯಾಕೆ ಬೇಕು ಗ್ರಾಚಾರ, ಟೈಮು ಸರಿಯಿಲ್ಲ’ ಅಂತ ಸಿಕ್ಕಸಿಕ್ಕಿದ ಕಡೆಯೆಲ್ಲ ಸಹಿಷ್ಣುತೆ-ಅಸಹಿಷ್ಣುತೆ ಹುಡುಕೋಕೆ ಶುರು ಮಾಡ್ಕೊಂಡ್ಬಿಟ್ಟಿದಾರೆ ಸಾರ್.. ಅದಾಗಿದ್ದೆ, ಮೊದಲು ಮಾಮೂಲಾಗಿದ್ದರಲ್ಲು ಈಗ ಏನೊ ಅಸಹಿಷ್ಣುತೆ ಕಾಣೋಕೆ ಶುರುವಾಗಿಬಿಟ್ಟಿದೆ…’
ಗುಬ್ಬಣ್ಣನ ಮಾತು ಕೇಳುತ್ತಿದ್ದಂತೆ ನನ್ನ ಬುದ್ಧಿ ಜೀವಿ, ವಿಚಾರವಾದಿಯ ಟೋಪಿ ಚಕ್ಕನೆ ಮುಂಚೂಣಿಗೆ ಬಂತು. ಹೇಳಿ ಕೇಳಿ ಎಷ್ಟೆ ಲಾಬಿ, ಮಸಲತ್ತಿನ ಉದ್ದೇಶವಿದ್ದರು ಬುದ್ದಿಜೀವಿ ಅನಿಸ್ಕೊಂಡೊರಲ್ಲು ಸ್ವಲ್ಪವಾದರು ನಿಜಾಯತಿ, ಸತ್ಯದ ಕಾಳಜಿ ಇದ್ದೇ ಇರಬೇಕು. ಆ ಸಣ್ಣಗಿನ ಪ್ರಾಮಾಣಿಕ ಧೋರಣೆಯಿರದಿದ್ರೆ ಈ ರೀತಿಯ ಹೋರಾಟಕ್ಕೆ ಚಾಲನೆ ಕೊಡೋಕೆ ನೈತಿಕ ಸ್ಥೈರ್ಯ, ಧೈರ್ಯ ಎರಡೂ ಬರಲ್ಲ. ಕನಿಷ್ಠ ‘ಸೆಲ್ಫ್ ಇಂಟ್ರೆಸ್ಟೂ, ತಾತ್ವಿಕ ಸೈದ್ಧಾಂತಿಕ ನೆಲೆಗಟ್ಟು’ ಎರಡು ಯಾವುದೊ ಒಂದು ಪ್ರೊಪೊಷನ್ನಿನಲ್ಲಿ ಇರಲೆ ಬೇಕು.. ಎಷ್ಟಿರಬಹುದು ಆ ಅನುಪಾತ ಅನ್ನೋದು ಬೇರೆ ವಿಚಾರವಾದರು..
ಅದೇ ಇಂಟಲೆಕ್ಚುವಲ್ ಟೋಪಿ ಹಾಕಿದ ಗತ್ತಿನಲ್ಲೆ ಕೇಳಿದೆ..
‘ ಅಲ್ವೊ ಗುಬ್ಬಣ್ಣ.. ನಿ ಹೇಳ್ತಿರ ತರ ನೋಡಿದ್ರೆ, ಇದುವರೆಗು ಇರದಿದ್ದ ಡೈಮೆನ್ಶನ್ ಒಂದನ್ನ ಈ ಗುಂಪಿನವರೆ ಈಗ ಹುಟ್ಟು ಹಾಕಿದಾರೆ ಅಂತ ಆರೋಪಿಸಿದ ಹಾಗಿದೆಯಲ್ಲೊ ? ಏನೆ ಆಗಲಿ ಅವರಲ್ಲು ತಾವು ಮಾಡ್ತಿರೋದು ಒಂದು ನಿಜವಾದ ಹೋರಾಟ ಅನ್ನೊ ಸ್ವಲ್ಪ ಕನ್ವಿಕ್ಷನ್ ಆದ್ರೂ ಇರ್ಬೇಕಲ್ವಾ? ನಮ್ಮಾ ನಿಮ್ಮಂತಹವರ ಪಾಡು ಬಿಡು, ಅವರಿಗಾದ್ರೆ ನೂರೆಂಟು ಕಡೆ ನೋಡಿ ಆಡೊ ಜನ ಇರ್ತಾರೆ ಗೊತ್ತಾ? ‘
ಗುಬ್ಬಣ್ಣ ಅತ್ತ ಕಡೆಯಿಂದ ನಿಡುಸುಯ್ದದ್ದು ಕೇಳಿಸಿತು..’ ಸಾರ್.. ಅವರದೆಲ್ಲ ಜಿನೈನು ಹೋರಾಟಾನೊ, ಲಾಬಿ ಹೋರಾಟಾನೊ, ಸ್ಪಾನ್ಸರ್ಡ್ ಹೋರಾಟನೊ ನನಗೆ ಗೊತ್ತಿಲ್ಲ.. ಆದರೆ ಇಷ್ಟು ದಿನ ಆ ತರದ ಹುಳ ಇರದವರ ತಲೆಲೂ ಹುಳ ಬಿಡೋದ್ರಲ್ಲಿ ಈ ಡೆವಲಪ್ಮೆಂಟ್ ಸಕ್ಸಸ್ ಆಯ್ತು ಅಂತ ಮಾತ್ರ ಗೊತ್ತು.. ಇದೊಂದು ತರ ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಪರಿಷತ್ತುಗಳ ಎಲೆಕ್ಷನ್ ಬಂದಾಗ ಆದ ಹಾಗೆ ..’ ಅಂದ.
ಗುಬ್ಬಣ್ಣ ಹೀಗೇನೆ..ಆ ಕನ್ಸಲ್ಟಿಂಗ್ ಜಗದ ಇನ್-ಫ್ಲುಯೆನ್ಸಿಂದ ಎಲ್ಲಿಂದೆಲ್ಲಿಗೊ ಕನೆಕ್ಷನ್ ಮಾಡಿ ಕನ್ಫ್ಯೂಸ್ ಮಾಡಿಸಿಬಿಡುತ್ತಾನೆ, ಅವನ ಕಸ್ಟಮರುಗಳನ್ನು ಏಮಾರಿಸಿದ ಹಾಗೆ. ಆದರೆ ನಾನು ಅವನ ಕಸ್ಟಮರ ಅಲ್ಲವಲ್ಲ ?
‘ಗುಬ್ಬಣ್ಣ.. ನೋ ಮೋರ್ ಕನ್ಸಲ್ಟಿಂಗ್ ಟ್ರಿಕ್ಸ್ ಆನ್ ಮೀ ಪ್ಲೀಸ್.. ಏನಿದ್ದರು ಕಮ್ ಸ್ಟ್ರೈಟ್ ಟು ದಿ ಪಾಯಿಂಟು.. ಅಲ್ಲಯ್ಯಾ, ನಾವಾಡ್ತಿರೋದು ಮಾತು ಸಹಿಷ್ಣುತೆ ಬಗ್ಗೆ.. ಅದಕ್ಕೆಲ್ಲಿಂದಲೊ ಪಂಚಾಯ್ತಿ ಪರಿಷತ್ ಅಂತ ಕೊಕ್ಕೆ ಇಡ್ತೀಯಲ್ಲಾ ನೀನು ? ಅದಕ್ಕು ಇದಕ್ಕು ಎಲ್ಲಿದಯ್ಯಾ ಕನೆಕ್ಷನ್ ?’ ದಬಾಯಿಸುತ್ತಲೆ ಸ್ವಲ್ಪ ಜೋರಾಗಿ ಕೇಳಿದೆ.
ಗುಬ್ಬಣ್ಣ ಎಂದಿನ ಶಾಂತ ದನಿಯಲ್ಲೆ, ‘ ಸ್ವಲ್ಪ ಕಾಮ್ ಡೌನ್ ಸಾರ್.. ನೀವು ಯಾಕೊ ಸಹಿಷ್ಣುತೆ ವಾದದ ಪರ-ವಿರೋಧಿ ಬಣಗಳವರ ಹಾಗೆ ಫ್ಯಾಕ್ಟ್, ಬ್ಯಾಕ್ ಗ್ರೌಂಡು ನೋಡದೆ ಪಟ್ಟಂತ ಜಂಪ್ ಮಾಡ್ತೀರಲ್ಲಾ ? ನಾ ಹೇಳಿದ್ದು ಬರಿ ಅನಾಲಜಿ ಅಷ್ಟೆ… ಆ ಕೇಸಲ್ಲಿ ಆದ ಎಫೆಕ್ಟೆ ಈ ಕೇಸಲ್ಲು ಆಗಿದ್ದು ಅಂತ ವಿವರಿಸೋದಕ್ಕೆ..’ ಎಂದ
ನಾನು ಸ್ವಲ್ಪ ಶಾಂತವಾಗಿ, ‘ಅದೇನಪ್ಪಾ ಅಂತ ಅನಾಲಜಿ ? ರೈಸ್ ಪಲಾವ್, ಮೊಸರು ಬಜ್ಜಿಲಿದ್ದೋನು ಪೊಲಿಟಿಕಲ್ ಅನಾಲಜಿ ತನಕ ಬರೋ ಹಾಗೆ ಮಾಡಿದ ಅಂತಹಾ ಸಿಮಿಲಾರಿಟಿ ?’ ಎಂದೆ ಅರ್ಧ ವ್ಯಂಗ್ಯ, ಅರ್ಧ ಕುತೂಹಲ ಬೆರೆತ ದನಿಯಲ್ಲಿ.
‘ ಮತ್ತೇನು ಸಾರ್..? ಈ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಇತ್ಯಾದಿಗಳೆಲ್ಲ ಬರೋಕೆ ಮೊದಲು ಇದ್ದದ್ದೆ ಬರಿ ಸ್ಟೇಟ್ ಎಲೆಕ್ಷನ್ ಮತ್ತೆ ಸೆಂಟ್ರಲ್ ಎಲೆಕ್ಷನ್ ಮಾತ್ರ.. ಅದಕ್ಕೆಂತ ಹೊಡೆದು ಬಡಿದಾಡೊರೇನಿದ್ರೂ ಬರೀ ಆ ಲೆವಲ್ಲಲ್ಲಿ ಮಾತ್ರ ಸೆಣಸಾಡೋರು.. ಅದೇನೆ ಮಾಡಿದ್ರೂ ಎಲೆಕ್ಷನ್ ಆಫೀಸು, ತೋಟದ ಮನೆ, ಎಸ್ಟೇಟ್ ರೆಂಜಲ್ಲಿ ನಡೀತಿತ್ತೆ ಹೊರತು ಮನೆ ತನಕ ಕಾಲಿಡ್ತಿರಲಿಲ್ಲ..’
ವಿಧಾನಸಭಾ, ಲೋಕಸಭಾ ಎಲೆಕ್ಷನ್ನಿನ ಹಿನ್ನಲೆಯಿಟ್ಟುಕೊಂಡು ಅವನಾಡಿದ ಮಾತು ಕೇಳುತ್ತಲೆ ‘ಹೂಂ’ಗುಟ್ಟಿದೆ, ಗುಬ್ಬಣ್ಣ ತನ್ನ ಮಾತು ಮುಂದುವರೆಸಲೆಂದು.
‘ ಅದೇ ನೋಡಿ ಸಾರ್.. ಈ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸಿದ್ದಾಂತ ಬಂದಿದ್ದೆ ಎಲ್ಲಾ ತಳಕಂಬಳಕ ಆಗೋಯ್ತು.. ಅದುವರೆಗು ಮನೆ ಹೊರಗಿದ್ದ ರಾಜಕೀಯ ನೇರ ಮನೆಯೊಳಕ್ಕು ಕಾಲಿಟ್ಟು ತಂದೆ ಮಕ್ಕಳು, ಗಂಡ ಹೆಂಡತಿ, ಅಣ್ಣ ತಮ್ಮ, ಅಕ್ಕ ತಂಗಿ ಅನ್ನೋದನ್ನು ನೋಡದೆ ಒಬ್ಬೊಬ್ಬರನ್ನ ಒಂದೊಂದು ಪಾರ್ಟಿ ಮಾಡಿಸಿ ಅವರವರ ಮಧ್ಯದಲ್ಲೆ ಇನ್ವಿಸಿಬಲ್ ಗೋಡೆ ಏಳೋ ಹಾಗೆ ಮಾಡಿಬಿಡಲಿಲ್ವಾ ಸಾರ್..?’
ನನಗೂ ಅವನ ಮಾತಿನಲ್ಲಿ ನಿಜವಿದೆ ಅನ್ನಿಸ್ತು.. ಆ ಶುರುವಾದ ಮೊದಲ ದಿನಗಳಲ್ಲಿ ಮನೆ ಮನೆಗಳಲ್ಲೆ ನಡೆದ ಹೊಡೆದಾಟ, ಕೊಲೆ, ಹಲ್ಲೆ ಕುರಿತು ಕೇಳಿದ್ದೂ ಅಲ್ಲದೆ ಹೇಗೆ ಒಗ್ಗಟ್ಟಾಗಿದ್ದ ಒಂದೆ ಮನೆ ಹೋಳಾಗಿ ಒಡೆದು ಪಾರ್ಟಿ ಪಂಗಡದ ಹೆಸರಲ್ಲಿ ಹರಿದು ಹಂಚಿಹೋಗಿತ್ತು ಎನ್ನುವ ದೃಷ್ಟಾಂತಗಳನ್ನು ಓದಿದ್ದೆ..
‘ ಹೂ ಕಣೋ ಗುಬ್ಬಣ್ಣ.. ನೀ ಹೇಳೊದು ನಿಜವೆ.. ಅಲ್ಲಿವರೆಗು ಸ್ಟ್ರೀಟ್ ಲೆವೆಲ್ಲಿನಲ್ಲಿದ್ದ ಪಾಲಿಟಿಕ್ಸ್ ನೇರ ಬೆಡ್ ರೂಮು, ಬಾತ್ ರೂಮ್ , ಕಿಚನ್ನು, ಡೈನಿಂಗ್ ಹಾಲಿಗೆ ಬಂದಿದ್ದು ಆವಾಗಿಂದಲೆ ಅನ್ನೋದು ನಿಜ… ಒಂದು ರೀತಿ ಅದು ಇನ್ನೊಂದು ತರದ ಡಿವೈಡ್ ಅಂಡ್ ರೂಲ್ ಅಂತಾಗಿ, ಗಂಡ ಹೆಂಡ್ತೀರನ್ನು ಪಾರ್ಟಿಯಾಗಿಸಿಬಿಡ್ತು ಅಂತ ಕೇಳಿದೀನಿ..’
‘ ಅಯ್ಯೊ ಅಷ್ಟು ಮಾತ್ರವಲ್ಲ ಸಾರ್.. ನಮ್ ಜನಗಳೇನು ಕಮ್ಮಿನಾ? ಅವರೂ ಕಿಲಾಡಿಗಳೆ.. ಮೊದಮೊದಲು ಅವರಿಗು ಕನ್ಫ್ಯುಷನ್ನು ಭಯ ಭೀತಿ ಇತ್ತೇನೊ ? ಆದ್ರೆ ಎಲ್ಲಾ ಸ್ವಲ್ಪ ಹಳೆಯದಾದ್ಮೇಲೆ ಅದರಲ್ಲೆ ಛಾನ್ಸೂ ಕಾಣಿಸಿಬಿಡ್ತು..’
‘ ಛಾನ್ಸೂ ಅಂದ್ರೆ..?’
‘ ಇನ್ನೇನು ಸಾರ್..? ಈಗಿನ ರಾಜಕೀಯದಲ್ಲಿ ಯಾವಾಗ ಯಾವ ಪಾರ್ಟಿ ಅಧಿಕಾರಕ್ಕೆ ಬಂದು ಎಷ್ಟು ದಿನ ರಾಜ್ಯಭಾರ ಮಾಡುತ್ತೊ ಹೇಳದು ಕಷ್ಟ.. ಅಧಿಕಾರದಲ್ಲಿದೆ ಅಂತ ಒಂದುಪಕ್ಷದ ಕಡೆ ವಾಲ್ಕೊಂಡ್ರೆ, ಅಧಿಕಾರ ಹೋದಾಗ ಆಪೋಸಿಷನ್ ಆಗಿರೊ ಎಡವಟ್ಟು , ಇರುಸುಮುರುಸು ..’
‘ಅದಕ್ಕೆ..?’
‘ ಅದಕ್ಕೆ ಮೊದಲೆ ಪ್ರೀ-ಎಲೆಕ್ಷನ್ ಅಲೈಯೆನ್ಸ್ ಮಾಡ್ಕೊಂಡ್ಬಿಡೋದು… ಗಂಡ ಒಂದು ಪಾರ್ಟಿಲಿ ನಿಂತ್ರೆ ಹೆಂಡತಿ ಆಪೋಸಿಷನ್ನಲ್ಲಿ.. ಅಣ್ಣ ಒಂದಾದ್ರೆ ತಮ್ಮ ಇನ್ನೊಂದು.. ಹೀಗೆ ಯಾರೆ ಅಧಿಕಾರಕ್ಕೆ ಬಂದ್ರು ಕುಟುಂಬದ ಯೋಗಕ್ಷೇಮ ಮಾತ್ರ ಸೇಫ್..!’
‘ಅರೆ ಗುಬ್ಬಣ್ಣ.. ಇದೊಂದು ತರ ‘ಸಿಂಧಿಯಾ’ ಫ್ಯಾಮಿಲಿ ವ್ಯವಹಾರ ಇದ್ದ ಹಾಗೆ ಇದೆಯಲ್ಲಾ ? ತಾಯಿದೊಂದು ಪಾರ್ಟಿಯಾದ್ರೆ, ಮಗ ಅದರ ಆಪೋಸಿಟ್… ಸ್ಟೇಟಲ್ಲಾದ್ರು ಸರಿ, ಸೆಂಟ್ರಲ್ಲಾದ್ರೂ ಸರಿ ಯಾರಾದರೊಬ್ಬರ ಪಾರ್ಟಿ ಅಧಿಕಾರದಲ್ಲಿದ್ದೆ ಇರುತ್ತೆ… ಸ್ಮಾರ್ಟ್ ಟ್ರಿಕ್ ಅಲ್ವಾ?’ ಎಂದೆ ಏನೊ ಡಿಸ್ಕವರಿ ಮಾಡಿದ ಎಗ್ಸೈಟ್ ಮೆಂಟಲ್ಲಿ.
‘ ಅದ್ಯಾವ ಮಹಾ ಡಿಸ್ಕವರಿ ಬಿಡಿ ಸಾರ್.. ಅದೊಂದು ಓಪನ್ ಸೀಕ್ರೆಟ್.. ನಾ ಹೇಳಿದ್ದೇನು ಅಂದ್ರೆ ಆವಾಗ ಆದ ಹಾಗೆ, ಅಸಹಿಷ್ಣುತೆ ಅವಾರ್ಡ್ ವಾಪಸಿ ರಾಜಕೀಯದಿಂದ ಈ ಟಾಪಿಕ್ಕು ಕೂಡ ನ್ಯೂಸು ಪೇಪರು, ವಿಧಾನಸಭಾ ಲೋಕಸಭಾ ಲಾಬಿ ಲೆವಲ್ ಬಿಟ್ಟು, ಸ್ಟ್ರೀಟ್ ಲೆವಲ್ ಗೆ ಬಂದು, ಫೆಸ್ಬುಕ್, ವಾಟ್ಸಪ್, ಟ್ವಿಟ್ಟರುಗಳಂತಹ ಸೋಶಿಯಲ್ ಮೀಡಿಯಾಗಳಲ್ಲೆಲ್ಲ ಗಬ್ಬೆಬ್ಬಿಸಿ ಈಗ ನೇರ ಮನೆ ಮನೆಯ ಪೂಜಾ ರೂಮಿನ ಬಳಿ ಬಂದು ಕೂತುಬಿಟ್ಟಿದೆ ಸಾರ್.. ಸಹಿಷ್ಣುತೆ, ಅಸಹಿಷ್ಣುತೆ ಅನ್ನೊ ವಾದದ ಹೆಸರಲ್ಲಿ..’
‘ ಅಯ್ಯೊ.. ಇದೇನು ಹಾಳು ರಾಜಕೀಯಾನೊ ಗುಬ್ಬಣ್ಣ.. ಹಾಗೇನಾದ್ರೂ ಆದ್ರೆ ಅವರು ಅನ್ಕೊಂಡಿರೊ ಪರ್ಪಸ್ಸಿಗೆ ವಿರುದ್ಧವಾಗಿ ನಡೆದ ಹಾಗಲ್ವಾ? ಬೇರೆ ಏನಿರದಿದ್ರೂ ‘ಮನೆ ಮನೆ ಫೈಟು’ ಹುಟ್ಟು ಹಾಕೋದು ಅವರ ಉದ್ದೇಶವಿರಲ್ಲಾ ಅಲ್ವಾ? ಎಲ್ಲಾ ಜನರಿಗು ಅವೇರ್ನೆಸ್ ಬರಲಿ ಅನ್ನೊ ಮೋಟಿವ್ ಇರುತ್ಯೆ ಹೊರತು ಅಸಹಿಷ್ಣುತೆ, ಧರ್ಮದ ಹೆಸರಲ್ಲಿ ಮನೆ ಮನೆ ಜಗಳ ಹುಟ್ಟು ಹಾಕೋದಲ್ಲಾ ಅನ್ಸುತ್ತೆ..’
‘ ಅವರುದ್ದೇಶ ಮೋಟೀವ್ ಏನೇ ಇರ್ಲಿ ಸಾರ್.. ಈಗ ಆ ವಾದದ ಚರ್ಚೆಯ ಹೆಸರಲ್ಲಿ ಯಂಗಿಂದ ಹಿಡಿದು ಒಲ್ಡ್ ಮೈಂಡುಗಳ ತನಕ ಇದ್ದಕ್ಕಿದ್ದಂಗೆ ಈ ಅನುಮಾನದ ಬೀಜ ಬಿತ್ತಿರೋದಂತೂ ನಿಜ ಸಾರ್.. ಈಗ ಇದರಿಂದ ಎಲ್ಲರಿಗು ಒಂತರ ಡೌಟ್ ಬಂದ ಹಾಗೆ ಹಾಗ್ಬಿಟ್ಟಿದೆ, ಅವರೇನು ಸಹಿಷ್ಣುನಾ, ಅಸಹಿಷ್ಣುನಾ ಅಂತ. ಅವೆರಡರ ಬಗ್ಗೇನು ತಲೆ ಕೆಡಿಸಿಕೊಳ್ಳದೆ ಅವರ ಪಾಡಿಗೆ ಅವರಿದ್ದವರೂ ಕೂಡ ಈಗ ಯಾವುದಾದರು ಒಂದು ಕ್ಯಾಂಪಿನಲ್ಲಿ ಐಡೆಂಟಿಫೈ ಮಾಡ್ಕೊಳ್ಳಲೆ ಬೇಕು ಅನ್ನೊ ಹಾಗೆ ಮಾಡಿಬಿಡ್ತಾ ಇದೆ ಈ ಟ್ರೆಂಡ್.. ಈ ಮೊದಲು ಜಾತಿ ಧರ್ಮ ಅಂತೆಲ್ಲ ತಲೇನು ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಮ್ಮ ಡ್ಯೂಟಿ ನಿಭಾಯಿಸ್ತಾ ಇದ್ದೋರಲ್ಲೂ ಈಗೊಂದು ತರ ಹೊಸ ಹುಳಾ ಬಿಟ್ಟ ಹಾಗಾಗಿ ಎಲ್ಲದರಲ್ಲು ಅನುಮಾನ ಹುಟ್ಟು ಹಾಕಿಬಿಡ್ತಾ ಇದೆ.. ಇದು ಪಾಸಿಟೀವ್ ಟ್ರೆಂಡ್ ಅಲ್ಲಾಂತ ನನ್ನ ಫಿಯರು ಸಾರ್..’
ನಾನು ಸ್ವಲ್ಪ ಅವನ ಡೈಮೆನ್ಷನ್ನಲ್ಲೆ ಯೋಚಿಸಿದೆ.. ಒಂದು ವೇಳೆ ಆ ತರದ ಎರಡು ಕ್ಯಾಂಪ್ ಆದರು ಏನಾಗಿಬಿಡಬಹುದು ಅಂತ. ಒಂದು ಕಡೆ ವಿಚಾರವಾದಿ ಥಿಂಕಿಂಗ್ ಅವೇರ್ನೆಸ್ ಹೆಚ್ಚಾಗಿ ಅವರನ್ನ ಫಾಲೋ ಮಾಡೊ ಗುಂಪು ಹೆಚ್ಚಾಗಬಹುದು – ಅದು ವಿಚಾರವಾದಿ ಇಂಟಲೆಕ್ಚುವಲ್ ಪ್ರಟರ್ನಿಟಿಗೆ ಆಪ್ತವಾಗೊ, ಖುಷಿ ಕೊಡೊ ವಿಚಾರ.. ಆದರೆ ಅದೇ ಕತ್ತಿಯ ಮತ್ತೊಂದು ಅಲುಗಿನ ತುದಿ ಅನ್ನೊ ಹಾಗೆ ಅದರ ಆಪೋಸಿಟ್ ಆಗಿ ಥಿಂಕ್ ಮಾಡುತ್ತ ಇನ್ನೊಂದು ಕ್ಯಾಂಪ್ ಸೇರೋರು ಕೂಡಾ ಹೆಚ್ಚಾಗ್ತಾರೆ, ಭಾವನಾತ್ಮಕವಾಗಿ ಆಲೋಚಿಸಿ ತಾರ್ಕಿಕವಾಗಿಯೊ, ಅತಾರ್ಕಿಕವಾಗಿಯೊ ಅಸಹಿಷ್ಣುತೆಗೆ ಕುಮ್ಮುಕ್ಕು ಕೊಡೋರು – ಮೊದಲೆಲ್ಲ ಅದರ ಬಗ್ಗೆ ತಲೆ ಕೆಡಿಸ್ಕೊಳ್ದೆ ಇರೋರು ಈಗ ಒಂದು ಸ್ಟ್ಯಾಂಡ್ ತೊಗೊಳಕೆ ಶುರು ಮಾಡೋದ್ರಿಂದ. ಜನಗಳ ಎಜುಕೇಷನ್ ಲೆವಲ್, ರಾಜಕೀಯದ ನಿಗೂಢ ತಿಳಿಯದ ಮುಗ್ದ ಹಳ್ಳಿ ಜನರ ವಿಚಾರ – ಇವೆಲ್ಲಾ ಲೆಕ್ಕ ಹಾಕಿದ್ರೆ, ಇವರೆಲ್ಲ ಆ ಆಪೊಸಿಟ್ ಕ್ಯಾಂಪಿಗೆ ಸೇರಿಕೊಂಡುಬಿಟ್ರೆ ಈಗಿರೋದಕ್ಕಿಂತ ಹೆಚ್ಚು ಪೋಲರೈಸ್ ಆಗೋದ್ರಲ್ಲಿ ಅನುಮಾನವಿಲ್ಲ.. ಮೊದಲಾದ್ರೆ ಬರಿ ಎಲೆಕ್ಷನ್ ಟೈಮಲ್ಲಿ ಮಾತ್ರ ಪುಂಡು ಪುಢಾರಿ ರಾಜಕಾರಣಿಗಳು ಬಂದು ಮೈಂಡ್ ಕರಪ್ಟ್ ಮಾಡೋರು.. ಈಗ ಈ ಹೊಸ ಡೈಮೆನ್ಷನ್ನಲ್ಲಿ ಇಂಟಲೆಕ್ಚುವಲ್ಲುಗಳೂ, ವಿಚಾರವಾದಿಗಳೂ ಸೇರಿಕೊಂಡಾಗೆ ಆಯ್ತು – ಎಲೆಕ್ಷನ್ ಇರಲಿ ಬಿಡಲಿ, ಎಲ್ಲಾ ಸಮಯದಲ್ಲಿ…
‘ ಸ್ವಲ್ಪ ದೂರಕ್ಕೆ ಆಲೋಚಿಸಿದ್ರೆ ನೀನನ್ನೋದು ನಿಜ ಗುಬ್ಬಣ್ಣ.. ಎಲೆಕ್ಷನ್ ರಾಜಕೀಯ ಮನೆ ಮನೆ ಕಥೆಯಾದ ಹಾಗೆ ಸಹಿಷ್ಣುತೆ – ಅಸಹಿಷ್ಣುತೆ ಮನೆ ಮನೆ ಟಾಪಿಕ್ ಆಗಿಬಿಟ್ರೆ ಈಗ ಮಾಮೂಲಿಯಾಗಿ ಜಾತಿ ಮತ ನೋಡ್ದೆ ಬಂದು ಹೋಗೊ ಜನರೂ ಒಂದು ತರ ಅನುಮಾನದಲ್ಲೆ ಹ್ಯಾಂಡ್ ಶೇಕ್ ಮಾಡೊ ಹಾಗೆ ಆಗಿ ಬಿಡುತ್ತೆ… ಆಗ ಪಾಸಿಟೀವ್ ಆಗಿ ಇನ್-ಫ್ಲುಯೆನ್ಸ್ ಆದಷ್ಟೆ ನೆಗೆಟೀವ್ ಆಗ್ತಾರೆ. ದಟ್ ಇಸ್ ನಾಟ್ ಎ ಗುಡ್ ಡೆವಲಪ್ಮೆಂಟ್.. ಶಾರ್ಟ್ ಟರ್ಮ್ ಗೈನಿಗೆ ಲಾಂಗ್ ಟರ್ಮ್ ಕಾಮ್ಪ್ರೊಮೈಸ್ ಮಾಡ್ಕೊಂಡ ಹಾಗೆ..’ ನನ್ನ ಆಲೋಚನೆಗೊಂದು ಮಾತಿನ ರೂಪ ಕೊಡಲೆತ್ನಿಸುತ್ತ ಹೇಳಿದೆ.
ಒಂದರೆಗಳಿಗೆ ಗುಬ್ಬಣ್ಣ ಮಾತಾಡಲಿಲ್ಲ.. ಅಮೇಲೆ ಪ್ರವಾದಿ, ಪಾದ್ರಿಯ ಅವತಾರದಲ್ಲಿ ಅವನ ದನಿ ಕೇಳಿ ಬಂತು , ‘ಅದೇನೊ ಗೊತ್ತಿಲ್ಲಾ ಸಾರ್ ‘ಅವರೇನು ಮಾಡುತ್ತಿದ್ದಾರೊ ಅವರಿಗೇ ಗೊತ್ತಿಲ್ಲ, ಅವರನ್ನು ಮನ್ನಿಸಿ ಕ್ಷಮಿಸಿ ಬಿಡು ದೇವಾ’ – ಅನ್ನೊ ಹಾಗಾಗ್ಬಿಟ್ಟಿದೆ ಸಾರ್.. ಆದರೆ ವಿಷಾದನೀಯ ಅಂದ್ರೆ ಅದ್ಯಾವುದರ ಬಗ್ಗೆನು ತಲೆ ಕೆಡಿಸಿಕೊಳದಿದ್ದ ನಮ್ಮ, ನಿಮ್ಮಂತಹವರು ಡೈರೆಕ್ಟ್ ಆಗೊ, ಇನ್ಡೈರೆಕ್ಟ್ ಅಗೊ ಈಗ ಇದರಲ್ಲಿ ಇನ್ವಾಲ್ವ್ ಆಗೊ ಹಾಗಾಯ್ತಲ್ಲಾ.. ‘ಅಸಹನೀಯತೆ, ಮನೆ ಮನೆ ಕಥೆ’ ಅನ್ನೊ ಹಾಗೆ..’
ನಾವು ದೇಶದಿಂದ ಹೊರಗಿದ್ದು ನಮಗೆ ಈ ಸಹಿಷ್ಣುತೆ, ಅಸಹಿಷ್ಣುತೆ, ಅವಾರ್ಡ್ ವಾಪ್ಸಿ ಸುದ್ದಿಯ ಬಿಸಿ ಮುಟ್ಟಿದೆಯೆಂದರೆ ಅವನ ಮಾತು ನಿಜವೆ ಅನಿಸಿತು.. ಆದರೂ ಅದು ತೀರಾ ತೀವ್ರಾ ಅನ್ನೊ ತರದ ಇನ್ವಾಲ್ವ್ ಮೆಂಟೇನೂ ಅಲ್ಲವೆನಿಸಿತು.. ಅದೇ ದೃಷ್ಟಿಕೋನದಲ್ಲಿ ಯೋಚಿಸುತ್ತ, ‘ಹೋಗಲಿ ಬಿಡೊ ಗುಬ್ಬಣ್ಣ.. ಔಟ್ ಆಫ್ ಸೈಟ್, ಔಟ್ ಆಫ್ ಮೈಂಡನ್ನೊ ಹಾಗೆ ಈ ಕಾಣದ ದೇಶದಲ್ಲಿರೋದ್ರಿಂದ ನಮಗೆ ಅದರ ಎಫೆಕ್ಟೂ ಕಮ್ಮಿ ಅನ್ಕೋಬೋದು.. ಎಲ್ಲಾ ಜನಾ ನೋಡ್ತಾನೆ ಇರ್ತಾರೆ ಅಲ್ವಾ? ಅವರೆ ಸಮಯ ಸಂಧರ್ಭ ನೋಡಿ ಸರಿ ತಪ್ಪು ವಿವೇಚಿಸಿ ಕಾಲ್ ತೊಗೊತಾರೆ ಬಿಡು. ಸಹಿಷ್ಣುತೆನೊ, ಅಸಹಿಷ್ಣುತೆನೊ – ಯಾವುದರ ಗಾಳಿ ಹೆಂಗೆ ಬೀಸುತ್ತೊ ಹಂಗಾಗುತ್ತೆ..’ ಅಂದೆ.
‘ಅದೇನಾಗುತ್ತೊ ಏನು ಕಥೆಯೊ ಬಿಡಿ ಸಾರ್… ಇನ್ಮೇಲೆ ನಮ್ಮ ಜನರ ಹತ್ರನೂ ಮಾಮೂಲಿಯಾಗಿ ವ್ಯವಹರಿಸೋದೆ ಕಷ್ಟ ಆಗುತ್ತೆ.. ಎಲ್ಲರನ್ನು ಸಹಿಷ್ಣುನಾ, ಅಸಹಿಷ್ಣುನಾ – ಬ್ಯಾಡ್ಜು ಹಾಕಿದಾರೊ ಇಲ್ವೊ ಅಂತ ನೋಡ್ಕೊಂಡೆ ಮಾತಾಡಿಸ್ಬೇಕೊ ಏನೊ – ಒಂದು ತರ ಟೆರರಿಸ್ಟು ಸಸ್ಪೆಕ್ಟುಗಳನ್ನ ಬ್ರಾಂಡ್ ಮಾಡಿದ ಹಾಗೆ.. ಇನ್ಮೇಲೆ ನಾವೂ ಕೂಡ ‘ಸಹಿಷ್ಣು’ ಅಂತ ಸರ್ಟಿಫಿಕೇಷನ್ ಮಾಡಿಸಿ ಹಿಡ್ಕೊಂಡೆ ಓಡಾಡೊ ಕಾಲ ಬಂದರೂ ಬರುತ್ತೆ ಅನ್ಸುತ್ತೆ..!’
‘ ಅಯ್ಯೊ ಅಲ್ಲಿ ತನಕ ಯಾಕೆ ಹೋಗ್ತಿ ಬಿಡು ಗುಬ್ಬಣ್ಣ, ಇಲ್ಲಿ ನಾವಿರೊ ಊರುಗಳಲ್ಲಿ ಅದಾವುದರ ಗಾಳಿನೂ ಬೀಸದೆ ಸ್ವಚ್ಚವಾಗಿರೊ ತರ ನೋಡ್ಕೋಳೋಣ.. ಕನಿಷ್ಠ ನಮಗಾದರೂ ಅದರ ಉಸಾಬರಿ ಇಲ್ಲದ ಹಾಗೆ..’ ಎಂದೆ ಸಂತೈಸುವ ದನಿಯಲ್ಲಿ..
ಈಗ ಮತ್ತೆ ಅತ್ತ ಕಡೆಯಿಂದ ನಿಡುಸುಯ್ದ ಸದ್ದು ಕೇಳಿಸಿತು..’ ಅದೆಲ್ಲಾ ಆಗೋ ಹೋಗೋ ಮಾತಿನ ತರ ಕಾಣ್ತಿಲ್ಲ ಸಾರ್.. ಈಗೆಲ್ಲಾ ಸೋಶಿಯಲ್ ಮೀಡಿಯಾ ಪ್ರಪಂಚ .. ಅಂಟಾರ್ಟಿಕಾಲಿ ಉಸಿರಾಡಿದ್ರೆ, ಅಮೇರಿಕಾಲಿ ಸದ್ದು ಕೇಳಿಸುತ್ತೆ.. ನಾವೆಷ್ಟೆ ಹೊರಗೆ ಅನ್ಕೊಂಡ್ರು ಅದು ಯಾವ್ದೊ ತರದಲ್ಲಿ ಬಂದು ರೀಚ್ ಆಗೆ ಆಗುತ್ತೆ.. ನಮ್ಮನೇಲಿ ಆಗ್ತೀರೊ ಹಾಗೆ..’ ಎಂದ ಗುಬ್ಬಣ್ಣ ನಿರಾಶೆಯ ದನಿಯಲ್ಲಿ.
ಹೀಗೆ ಗುಬ್ಬಣ್ಣನ ಯಾವುದಾದರೊಂದು ಟ್ವಿಸ್ಟು ಸದಾ ಬರುತ್ತಿದ್ದರಿಂದ ನಾನು ಅಚ್ಚರಿಗೊಳ್ಳದೆ, ‘ನಿಮ್ಮ ಮನೇದೇನಪ್ಪ ಹೊಸ ಟ್ವಿಸ್ಟು ?’ ಎಂದೆ.
‘ಇನ್ನೇನಿರುತ್ತೆ ಸಾರ್ ? ಅವರೂ ಫೇಸ್ಬುಕ್ಕು, ವಾಟ್ಸಪ್ಪಲ್ಲಿ ನೋಡ್ತಾ ಇರ್ತಾರಲ್ಲ ? ಆ ನಿಜವಾದ ಸಹಿಷ್ಣುತೆ-ಅಸಹಿಷ್ಣುತೆ ಮೀನಿಂಗ್ ಮತ್ತು ಅಲ್ಲಿ ನಿಜವಾಗಿ ನಡೀತಿರೊ ಎಪಿಸೋಡುಗಳನ್ನೆಲ್ಲ ಕೈ ಬಿಟ್ಬಿಟ್ಟು ಆ ಪದಗಳನ್ನ ಮಾತ್ರ ಹಿಡಿದು ನನ್ನ ಜನ್ಮ ಜಾಲಾಡಿಸೋಕೆ ಶುರು ಮಾಡಿದಾರೆ…’
‘ ನನಗರ್ಥವಾಗ್ಲಿಲ್ಲ ಗುಬ್ಬಣ್ಣ..?’
‘ ಅರ್ಥವಾಗೋಕೇನಿದೆ ಸಾರ್ ಮಣ್ಣು ? ದೇ ಆರ್ ಅಟಾಕಿಂಗು ಡೈರೆಕ್ಟಲಿ ಆನ್ ಮೈ ಟಾಲರೆನ್ಸ್ ಲೆವೆಲ್..’
‘ ಸ್ವಲ್ಪ ಬಿಡಿಸಿ ಹೇಳೊ ಗುಬ್ಬಣ್ಣಾ..?’ ಹೆಚ್ಚುಕಮ್ಮಿ ಬೇಡುವ ದನಿಯಲ್ಲೆ ನುಡಿದೆ..
‘ ಅಲ್ಲಾ ಸಾರ್ ಈ ಮೊದಲು ಒಂದು ಲೋಟ ಕಾಫೀನೂ ಸೇರಿದ ಹಾಗೆ ಏನೆ ಬೇಕಾದರೂ ಗತ್ತಿನಲ್ಲಿ ಆರ್ಡರ್ ಮಾಡಿ ಜಬರ್ದಸ್ತಿನಿಂದ ಕಾಯ್ತಾ ಕೂತಿರ್ತಿದ್ದೆ.. ಒಂದು ಗಳಿಗೆ ತಡವಾದ್ರೂ ಅವಾಜ್ ಹಾಕಿ ಕೈ ಕಟ್ಟಿಕೊಂಡು ಓಡಿ ಬರೋ ಹಾಗೆ ಮಾಡ್ತಿದ್ದೆ.. ಸ್ವಲ್ಪ ಜಾಸ್ತಿ ತಡಾ ಆದ್ರಂತು ಪೂರ್ತಿ ಕೂಗಾಡಿಬಿಡ್ತಿದ್ದೆ..’
‘ ಸರಿ ಅದಕ್ಕು ಸಹಿಷ್ಣುತೆ-ಅಸಹಿಷ್ಣುತೆ ಮ್ಯಾಟರಿಗು ಏನು ಸಂಬಂಧ ? ‘ ನನ್ನನುಮಾನ ಇನ್ನು ಅಲ್ಲೆ ಗಿರಕಿ ಹೊಡೆಯುತ್ತಾ ಇತ್ತು..
‘ ಈ ಎಪಿಸೋಡುಗಳೆಲ್ಲ ಶುರುವಾದ ಮೇಲೆ ತಾಯಿ ಮಗಳಿಬ್ಬರು ನನಗೆ ಬಿಲ್ಕುಲ್ ‘ ಕಾಯುವ ಸಹಿಷ್ಣುತೆಯೆ’ ಇಲ್ಲಾ ಅಂತ ಜಬ್ಬೋದಕ್ಕೆ ಶುರು ಮಾಡ್ಬಿಟ್ಟಿದಾರೆ.. ಸಾರ್. ಕಾಫಿ ಕೇಳಲಿ, ಊಟ ಮಾಡುವಾಗಾಗಲಿ, ಹೊರಗೆ ಹೊರಡೋಕೆ ಅವಸರಿಸಿದಾಗಾಗಲಿ, ಯಾವುದೆ ಮಾತಿಗೆ ದನಿಯೆತ್ತಿದರೂ ಸರಿ, ನನಗೆ ‘ಸಂಸಾರ ಸಹಿಷ್ಣುತೆ’ ಯೆ ಇಲ್ಲಾ ಅಂತ ಬೆಂಡೆತ್ತುತಿದಾರೆ ಸಾರ್..’ ಯಾಕೊ ಗುಬ್ಬಣ್ಣನ ದನಿ ಅಳುತ್ತಿರುವ ಹಾಗೆ ಕೇಳಿಸಿತು ನನಗೆ.. ಅವನ ಹೆಂಡತಿ ಯಾವ ಸೋಶಿಯಲ್ ಮೀಡೀಯಾದಲ್ಲಿರದಿದ್ದರೂ, ಮಗಳು ಅದರಲ್ಲೆಲ್ಲಾ ತುಂಬಾ ಬಿಜಿ. ತಾಯಿ ಮಗಳಿಬ್ಬರೂ ಒಂದು ಟೀಮು ಆದ ಕಾರಣ ಬೇಕಾದ, ಬೇಡದ ಎಲ್ಲಾ ಸುದ್ದಿಗಳು ಅವರಿಬ್ಬರ ನಡುವೆ ಶೀಘ್ರವಾಗಿ ರವಾನೆಯಾಗುವುದಂತು ಚೆನ್ನಾಗಿ ಗೊತ್ತಿರೊ ವಿಷಯವೆ. ಆದರೆ ಇದು ಹೈಟ್ ಆಫ್ ಕ್ರಿಯೇಟಿವಿಟಿ – ಸಹಿಷ್ಣುತೆಯ ಡೆಫನೇಷನ್ನನ್ನೆ ತಮಗೆ ಬೇಕಾದ ಹಾಗೆ ತಿರುಚಿ, ಬೇಕಾದ ಹಾಗೆ ಬಳಸಿಕೊಳ್ಳೊದು…! ಗುಬ್ಬಣ್ಣ ಹೇಳಿದ ಹಾಗೆ ಈ ವಾದದ ಕೊಸರು ಇಲ್ಲಿಗೂ ಕಾಲಿಟ್ಟ ಹಾಗೆ ಕಾಣಿಸುತ್ತಿದೆ, ಯಾವುದೊ ರೂಪಾಂತರದಲ್ಲಿ..
‘ ಆದ್ರೆ ಇದು ಮ್ಯಾನೇಜಬಲ್ ಟಾಲರೆನ್ಸ್ ಬಿಡೊ ಗುಬ್ಬಣ್ಣಾ.. ಆ ಜಾತಿ ಧರ್ಮದ ಸಹಿಷ್ಣುತೆ – ಅಸಹಿಷ್ಣುತೆ ಮಧ್ಯೆ ಹೆಣಗಾಡೋಕಿಂತ ಇದು ನೂರಾರು ಪಾಲು ವಾಸಿ…’
‘ಏನು ವಾಸಿ ತೊಗೊಳ್ಳಿ ಸಾರ್.. ನಾನು ಏನಾದರು ಮಾತಾಡೋಕೆ ಹೋದ್ರು, ದೂರೋಕೆ ಹೋದ್ರು, ಕೊನೆಗೆ ಸಕಾರಣವಾಗಿಯೆ ತಪ್ಪು ಸರಿ ಹೇಳೊಕೆ ಹೋದ್ರು ‘ ವಾದ-ಅಸಹಿಷ್ಣುತೆ’ ಅಂತ ಹೇಳಿ ಹೊಸಹೊಸ ಟೈಟಲ್ ಕೊಟ್ಟು ಬಾಯಿ ಮುಚ್ಚಿಸ್ತಾರೆ.. ಮೊನ್ನೆ ಅವರ ಇಡಿ ತವರು ಮನೆಯವರನ್ನ ನಮ್ಮ ಖರ್ಚಲ್ಲಿ ಇಲ್ಲಿಗೆ ಕರೆಸೊ ಪ್ಲಾನ್ ಹಾಕ್ತಾ ಇದ್ರು.. ಅಲ್ಲೇನೊ ಅಡ್ಡ ಹೇಳೋಕ್ ಹೋದ್ರೆ ಅದಕ್ಕೆ ‘ನಂಟಸ್ತಿಕೆ ಅಸಹಿಷ್ಣುತೆ’ ಅಂತ ಹೇಳಿ ಬಾಯ್ಮುಚ್ಚಿಸ್ತಿದಾರೆ.. ಈ ನಡುವೆ ಏನು ಮಾತಾಡಕು ಹೋದ್ರು ಎಲ್ಲಾದಕ್ಕು ಒಂದು ಅಸಹಿಷ್ಣುತೆ ಥಿಯರಿ ಹಾಕಿ, ನನ್ನ ಮಾತಾಡಬಿಡದೆ ಬಲವಂತ ಮೌನ ವ್ರತ ಹಿಡಿಯೊ ಹಾಗೆ ಮಾಡಿಬಿಟ್ಟಿದಾರೆ ಸಾರ್.. ಒಂತರ ನಾನೀಗ ‘ಬಲವಂತ ಸಹಿಷ್ಣು’ ಆಗ್ಬಿಟ್ಟೀದೀನಿ ಮನೆಯೊಳಗೆ..’
‘ ಇರ್ಲಿ ಬಿಡೊ ಗುಬ್ಬಣ್ಣ..ಇವೆಲ್ಲ ಟೆಂಪರರಿ.. ಈ ವಿವಾದವೆಲ್ಲ ತಣ್ಣಗಾದ ಮೇಲೆ ಅವರೂ ಎಲ್ಲಾ ಮರೆತು ಸ್ವಲ್ಪ ಸಹಿಷ್ಣುತೆ ರೂಢಿಸ್ಕೋತಾರೆ.. ಆಗ ‘ ಗುಬ್ಬಣ್ಣ – ಸಹಿಷ್ಣುತೆ’ ಮತ್ತೆ ವಾಪಸ್ಸು ಬರುತ್ತೆ… ಅಲ್ಲಿ ತನಕ ಸ್ವಲ್ಪ ‘ ಸಹಿಷ್ಣು’ ವಾಗಿರೋದನ್ನ ಅಭ್ಯಾಸ ಮಾಡಿಕೊ..’ ಎಂದು ನಾನೂ ಸ್ವಲ್ಪ ‘ಟಾಲರೆನ್ಸ್’ ಉಪದೇಶ ಮಾಡಿದೆ..
‘ಇನ್ನು ನೀವೊಬ್ಬರು ಬಾಕಿಯಿದ್ರಿ ಇದನ್ನ ಹೇಳೊಕೆ…. ನನಗೀಗ ಅರ್ಥವಾಗ್ತಿದೆ.. ಅಕ್ಬರನಂತಹ ಬಾದಶಹರು ಯಾಕೆ ಒಂದು ಮತ ತರಬೇಕೂಂತ ಆಸೆ ಪಡ್ತಿದ್ರೂ ಅಂತ.. ಹಾಗಾದ್ರೂ ಎಲ್ಲಾ ‘ಸಮಸಹಿಷ್ಣು’ ಗಳಾಗ್ಲಿ ಅಂತ್ಲೆ ಇರಬೇಕು..’
‘ ಅದು ಅವನ ಕಾಲದಲ್ಲು ಆಗ್ಲಿಲ್ಲ, ಈವಾಗಲೂ ಆಗೋದಿಲ್ಲ ಗುಬ್ಬಣ್ಣಾ.. ಅದನ್ನೆಲ್ಲಾ ಬಿಟ್ಟು ಹಾಕು.. ಸಾಯಂಕಾಲ ಮನೆ ಹತ್ರ ಬಾ.. ಲಿಟಲ್ ಇಂಡಿಯಾದಲ್ಲಿ ಸಾಯಂಕಾಲ ಒಂದು ಸೆಮಿನಾರ್ ಇದೆ – ಸಿಂಗಪೂರು ಹ್ಯೂಮನ್ ರಿಸೋರ್ಸು ಮಿನಿಸ್ಟ್ರಿಯವರು ಆರ್ಗನೈಸು ಮಾಡಿರೋದು.. ‘ಹೌ ಟು ಬಿಲ್ಡ್ ಎ ಟಾಲರೆಂಟ್ ಸೊಸೈಟಿ ಇನ್ ಸ್ಪೈಟ್ ಆಫ್ ಅಡ್ವರ್ಸಿಟೀಸ್’ ಅಂತ. ಅಟೆಂಡ್ ಮಾಡೋಣ ಇಬ್ರೂ.. ಇಂತಹ ಸಿಚುಯೇಷನ್ನಲ್ಲಿ ಡೀಲ್ ಮಾಡೋಕೆ ಕ್ಲೂ ಸಿಕ್ರೂ ಸಿಗಬಹುದು..’ ಎಂದೆ..
‘ ಅಯ್ಯೊ.. ಅಲ್ಲೂ ಬರಿ ಟಾಲರೆನ್ಸ್ ಮಾತೇನಾ ? ಸಾರ್ ಬಿಟ್ಬಿಡಿ ನನ್ನ.. ಐ ಯಾಮ್ ಆಲ್ರೆಡಿ ಟೂ ಮಚ್ ಟಾಲರೆಂಟ್ ನೌ’ ಎಂದವನೆ ಪೋನಿಟ್ಟುಬಿಟ್ಟ ಗುಬ್ಬಣ್ಣ…
ಅವನ ಮನಸ್ಥಿತಿ ಅರ್ಥವಾದರೂ, ಡಿಫೆನ್ಸೀವ್ ದೃಷ್ಟಿಯಿಂದ ಯಾವುದಕ್ಕು ನಾನು ಆ ಸೆಮಿನಾರು ಅಟೆಂಡು ಮಾಡುವುದೆ ಒಳ್ಳೆಯದು ಅಂದುಕೊಂಡೆ ನಾನೂ ಅತ್ತ ನಡೆದೆ, ಪ್ರೋಗ್ರಾಮಿಗೆ ಹೆಸರು ರಿಜಿಸ್ಟರ್ ಮಾಡಿಸುವ ಬೂತು ಎಲ್ಲಿಟ್ಟಿದ್ದಾರೆ ಹುಡುಕುತ್ತಾ..
ಚಿತ್ರಕೃಪೆ : ಮಂಜುಲ್
Trackbacks & Pingbacks