ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 3, 2015

2

ವಾಲ್ಮೀಕಿ ರಾಮಾಯಣದ ಕ್ಷೇಪಕಗಳು

‍ನಿಲುಮೆ ಮೂಲಕ

– ಡಾ| ಜಿ. ಭಾಸ್ಕರ ಮಯ್ಯ

ವಾಲ್ಮೀಕಿ ರಾಮಾಯಣಕ್ಷೇಪಕವೆಂದರೆ ನಂತರ ಸೇರಿಸಿದ್ದು.ಒಂದೊ ನಿಂದಿಸಲು ಅಥವಾ ವೈಭವೀಕರಿಸಲು ಅಥವಾ ಮೌಖಿಕ ರೂಪದಲ್ಲಿರುವ ಕಾವ್ಯವು ಸಹಜವಾಗಿಯೇ ಕಾಲಧರ್ಮಪ್ರಭಾವದಿಂದ ಜನರ ರುಚಿಸ್ವಾದ ಮತ್ತು ವಾಚಕರ ಪ್ರತಿಭೆಗನುಸರಿಸಿ ಭಾವಧರ್ಮಪರಿವರ್ತನೆಗಳಾಗುತ್ತಾ ಇರುತ್ತವೆ. ಐತಿಹಾಸಿಕ ಕಾಲಗಣನೆಯ ಪ್ರಕ್ರಿಯೆಯಲ್ಲಿ ಇಂಥವುಗಳಲ್ಲಿ ವಿದ್ವಾಂಸರು ಸಾಧಾರಣವಾಗಿ ಯಾವುದು ಪ್ರಕ್ಷಿಪ್ತ ಮತ್ತು ಯಾವುದು ಮೂಲವೆಂಬುದನ್ನು ಶೋಧಿಸುತ್ತಾರೆ.

ರಾಮಾಯಣದಲ್ಲಿರುವ ಒಟ್ಟು 7 ಕಾಂಡಗಳಲ್ಲಿ ಮೊದಲ ಮತ್ತು ಕೊನೆಯದು (1 ಮತ್ತು 7) ನಂತರ ಸೇರಿಸಲ್ಪಟ್ಟವುಗಳೆಂದು ಇಂದು ನಿರ್ವಿವಾದವಾಗಿ ವಿದ್ವತ್‍ವಲಯದಲ್ಲಿ ಸಿದ್ಧವಾದ ವಿಚಾರ. ಮೂಲಭಾರತವು ರಾಮಾಯಣಕ್ಕಿಂತ ಹಳೆಯದು. ವೇದದಲ್ಲಿ ರಾಮಾಯಣದ ಸುದ್ದಿಯೇ ಇಲ್ಲ; ಭಾರತದ ಸುಳಿವಿದೆ. ತ್ರಿಪಿಟಕಗಳಲ್ಲಿ ರಾಮಾಯಣದ ಪ್ರಸ್ತಾಪವಿಲ್ಲ. ಪಾಣಿನಿಯೂ ರಾಮಾಯಣವನ್ನು ಉದಾಹರಿಸುವುದಿಲ್ಲ. ಹಾಗಾಗಿ ಕ್ರಿ.ಪೂ. 3ನೆಯ ಶತಮಾನಕ್ಕಿಂತ ಹಿಂದೆ ರಾಮಾಯಣದ ರಚನೆಯಾಗಿರುವ ಸಂಭವವೇ ಇಲ್ಲ.

ರಾಮಾಯಣವು ಮೌಖಿಕ ಕಾವ್ಯ. ಅದು ಬರವಣಿಗೆಗೆ ಬಂದುದು ಕ್ರಿಸ್ತಶಕದ ನಂತರ.ಆ ಮುಂಚೆಯೂ ಆನಂತರವೂ ಎಷ್ಟೆಷ್ಟೋ ಅಂಶಗಳು ಅದರಲ್ಲಿ ಸೇರ್ಪಡೆಯಾಗಿವೆ. ವಾಲ್ಮೀಕಿಯದ್ದೆಂದು ಹೇಳಲಾಗುವ ಪ್ರಖ್ಯಾತ ಸಂಸ್ಕೃತ ರಾಮಾಯಣವು ಕ್ರಿ.ಪೂ. 2-3ರಲ್ಲಿ ರಚಿಸಲ್ಪಟ್ಟಿರಬಹುದು; ಬರೆಯಲ್ಪಟ್ಟಿರುವುದಿಲ್ಲ. ಹೊಸ ಸೇರ್ಪಡೆಗಳು ಅಂದರೆ ಪ್ರಕ್ಷಿಪ್ತಗಳು ಹೇರಳವಾಗಿ ತುಂಬಿಸಲ್ಪಟ್ಟು ಇಂದು ಉಪಲಬ್ಧ ವಾಲ್ಮೀಕಿ ರಾಮಾಯಣ ಒಂದಾದರೆ, ಬೇರೆ ಸಾವಿರಾರು ರಾಮಾಯಣಗಳೂ ಅಸ್ತಿತ್ವದಲ್ಲಿವೆ. ರಾಮನ ತಂಗಿ ಸೀತೆ ಎಂಬ ರಾಮಾಯಣವೂ ಇದೆ. ರಾವಣನನ್ನು ಕೊಂದವ ರಾಮನಲ್ಲ, ಲಕ್ಷ್ಮಣನೆಂತಲೂ ಇದೆ. ಅದಕ್ಕಾಗಿ ಆತ ನರಕಕ್ಕೆ ಹೋಗುತ್ತಾನೆ ಎಂತಲೂ ಜೈನ ‘ಪವುಮ ಚರಿತ’ ಹೇಳುತ್ತದೆ. ಎ.ಕೆ. ರಾಮಾನುಜನ್ ಸಂಗ್ರಹಿಸಿಕೊಟ್ಟ 300 ರಾಮಾಯಣಗಳಲ್ಲಿ ಒಂದು ಜಾನಪದ ರಾಮಾಯಣದಲ್ಲಿ ಸೀತೆ ರಾವಣನನ್ನು ಎಷ್ಟು ಮೋಹಿಸಿದ್ದಳೆಂದರೆ ಆಕೆ ಆತನ ಚಿತ್ರವನ್ನೂ ಬಿಡಿಸಿ ಅನಾಹುತ ಮಾಡಿಕೊಳ್ಳುತ್ತಾಳೆ. ಹೀಗಾಗಿ ರಾಮಾಯಣ ಯಾರ ಆಸ್ತಿಯೂ ಅಲ್ಲ, ಹಾಗೆಯೇ ಎಲ್ಲರ ಆಸ್ತಿಯೂ ಹೌದು.

ಏನೇ ಇರಲಿ, ವಾಲ್ಮೀಕಿ ರಾಮಾಯಣವನ್ನು ನಾವು ಒಂದು ಶ್ರೇಷ್ಠ ಮಹಾಕಾವ್ಯವೆಂದು ಭಾವಿಸುವುದಾದರೆ ಅದರಲ್ಲಿ ರಾಮನ ಉಜ್ವಲ ವ್ಯಕ್ತಿತ್ವಕ್ಕೆ ಕಳಂಕವನ್ನುಂಟು ಮಾಡುವ ಅಂಶಗಳನ್ನು ಪ್ರಕ್ತಿಪ್ತವೆಂದು ಕಿತ್ತೊಗೆಯಲೇ ಬೇಕು.
1) ಸೀತಾಪರಿತ್ಯಾಗ 2) ಶಂಬೂಕವಧ ಮತ್ತು 3) ಲವಕುಶರೊಡನೆ ರಾಮನ ಯುದ್ಧ – ಈ ಮೂರು ಅಸಂಬದ್ಧ ಮತ್ತು ಪ್ರಕ್ಷಿಪ್ತವೆಂದು ವೈದಿಕ ಜ್ಞಾನ ವಿಜ್ಞಾನ ಕೋಶದಲ್ಲೇ ಸ್ಪಷ್ಟೀಕರಿಸಲಾಗಿದೆ (ವೈದಿಕ ಜ್ಞಾನ ವಿಜ್ಞಾನ್ ಕೊಷ್: ಡಾ|| ಮನೋದತ್ತ ಪಾಠಕ್, ಪುಟ 252-254) :-

ಈಗ ಮೊದಲಿನದ್ದನ್ನು ನೋಡೋಣ. ತಪಸ್ಸಿನಲ್ಲಿ ಲೀನವಾಗಿದ್ದ ಶೂದ್ರ ಶಂಭೂಕನನ್ನು ರಾಮ ವಧಿಸಿದ ಪ್ರಸಂಗ. ಇದು ರಾಮನ ವ್ಯಕ್ತಿತ್ವಕ್ಕೆ ಹೊಂದುವುದೇ ಇಲ್ಲ. ಏಕೆಂದರೆ ವನವಾಸಕ್ಕೆ ಹೋಗುವಾಗ ರಾಮಸೀತೆ ಲಕ್ಷ್ಮಣರು ಒಂದು ರಾತ್ರಿ ಶೂದ್ರ ನಿಷಾದನ ಅತಿಥಿಗಳಾಗಿದ್ದರು. ಕಾಡಿನಲ್ಲಿ ಶೂದ್ರ ಶಬರಿಯ ಎಂಜಲು ಮಿಶ್ರಿತ ಹಣ್ಣನ್ನು ರಾಮ ಸಂತೋಷದಿಂದ ತಿಂದಿದ್ದ. ಅಂಥ ರಾಮ ಶಂಭೂಕನ ವಧೆ ಮಾಡುವುದಾದರೂ ಹೇಗೆ ಸಾಧ್ಯ? ಮೂರ್ಖ ವಿದ್ವಾಂಸರು ಈ ಪ್ರಕ್ಷಿಪ್ತವನ್ನೆತ್ತಿಕೊಂಡು ರಾಮನ ವ್ಯಕ್ತಿತ್ವವನ್ನು ಕುಲಗೆಡಿಸಿದ್ದಾರೆ.

ಇನ್ನು ಸೀತಾಪರಿತ್ಯಾಗದ ಪ್ರಶ್ನೆ. ಮೇಲಿನ ಪ್ರಸಂಗದಂತೆಯೇ ಇದೂ ಕೂಡಾ ಉತ್ತರಕಾಂಡದ ಪ್ರಕ್ಷಿಪ್ತ. ನಾಲ್ಕನೆಯ ಶತಮಾನದ ಜೈನ ವಿಮಲಸೂರಿ ಬರೆದ ರಾಮಾಯಣ ‘ಪವುಮ ಚರಿತ’ದಲ್ಲಿ ಈ ಕತೆ ಹುಟ್ಟಿಕೊಂಡಿದೆ. ಕ್ರಮೇಣ ವಾಲ್ಮೀಕಿ ರಾಮಾಯಣಕ್ಕೆ ಇದನ್ನು ಅಂಟಿಸಲಾಯಿತು. ಲಂಕಾ ವಿಜಯಕ್ಕೇನೇ ರಾಮಾಯಣ ಮುಗಿದು ಹೋಗುತ್ತದೆ. ವಾಲ್ಮೀಕಿಯ ನಂತರದ ಕಾಲದ ‘ಮಹಾಭಾರತದ ರಾಮೋಪಖ್ಯಾನ’, ಹರಿವಂಶಪುರಾಣ, ವಾಯುಪುರಾಣ, ನೃಸಿಂಹ ಪುರಾಣ – ಇಲ್ಲೆಲ್ಲಾ ರಾಮಕಥೆ ಬರುತ್ತದೆ. ಆದರೆ ಎಲ್ಲಿಯೂ ಸೀತಾಪರಿತ್ಯಾಗದ ಸುದ್ಧಿಯೇ ಇಲ್ಲ. ಹೆಚ್ಚೇಕೆ, ಭಕ್ತಿಕಾವ್ಯದಲ್ಲೂ ಇದರ ಉಲ್ಲೇಖವಿಲ್ಲ. ಗುಪ್ತರ ಕಾಲದ ದೇವಗಢದ ಮತ್ತು ಕರ್ನಾಟಕದ ಭಿತ್ತಿ ಚಿತ್ರಗಳಲ್ಲಿ ಈ ವರ್ಣನೆಯ ಚಿತ್ರಗಳಿಲ್ಲ. ಆಧ್ಯಾತ್ಮ ರಾಮಾಯಣ, ಕಂಬನ್ ಬರೆದ ತಮಿಳು ರಾಮಾಯಣದಲ್ಲಿ ಕೂಡಾ ಇದರ ಪ್ರಸ್ತಾಪವೇ ಇಲ್ಲ. ಮಹಾಕವಿ ತುಳಸೀದಾಸರ ಲೋಕ ವಿಖ್ಯಾತ ಕಾವ್ಯ (ಉತ್ತರಭಾರತದಲ್ಲಿ ಮನೆಮನೆಯಲ್ಲೂ ಪಾರಾಯಣ ಮಾಡುವ ಗ್ರಂಥ) ‘ರಾಮಚರಿತ ಮಾನಸ’ದಲ್ಲಿ ರಾಮ ಸೀತೆಯನ್ನು ಕಾಡಿಗಟ್ಟಿದ ಕತೆಯಿಲ್ಲ.

ಮೂಲ ರಾಮಾಯಣದಲ್ಲಿ ಅಗ್ನಿಪರೀಕ್ಷೆಯ ನಂತರ ಸ್ವತಃ ಅಗ್ನಿದೇವ – ‘ವಿಶುದ್ಧ ಪವಿತ್ರ ಭಾವನೆಯುಳ್ಳ ನಿಷ್ಪಾಪಿಯಾದ ಸೀತೆಯನ್ನು ನೀನು ಸ್ವೀಕರಿಸು.ಈ ವಿಷಯದಲ್ಲಿ ಸೀತೆಗೆ ನೀನು ಏನೂ ಹೇಳಕೂಡದು; ಇದು ನನ್ನ ಆಜ್ಞೆ’ ಅದಕ್ಕೆ ರಾಮ ಹೇಳುತ್ತಾನೆ. “ಸೀತೆ ಮೂರು ಲೋಕಗಳಲ್ಲೂ ಪವಿತ್ರಳು. ಕೀರ್ತಿವಂತ ಮನುಷ್ಯ ತನ್ನ ಕೀರ್ತಿಯನ್ನು ಹೇಗೆ ತ್ಯಜಿಸಲಾರನೋ, ಹಾಳುಗೆಡಹನೊ ನಾನು ಹಾಗೆಯೇ ಅವಳನ್ನೆಂದೂ ತ್ಯಜಿಸಲಾರೆ”

ಸತ್ಯವ್ರತ ಮಹಾಪುರುಷ ರಾಮನು ತನ್ನ ಪ್ರತಿಜ್ಞೆಯನ್ನೇ ಮುರಿಯುತ್ತಾನೆನ್ನುವುದು ತೀರಾ ಅಸಂಬದ್ಧ. ಇದಾವುದರ ಅರಿವಿಲ್ಲದ ಹುಚ್ಚರ ಪರಂಪರೆಯ ವಿಕಾರವಾದಿಯು ಇಂದು ಇಂಥ ವಿಷಯವನ್ನು ಎತ್ತಿಕೊಂಡು ಟಿ.ವಿ. ಚ್ಯಾನಲ್‍ಗಳಲ್ಲಿ, ಭಾಷಣಗಳಲ್ಲಿ ವಿಷಕಾರುತ್ತಿರುತ್ತಾರೆ. ಇಂತವರಿಗೆ ಪೊಲೀಸು ರಕ್ಷಣೆ ಬೇರೆ!

ಇನ್ನು ಲವಕುಶರ ಪ್ರಶ್ನೆ. ಸೀತೆಯ ಪರಿತ್ಯಾಗವೇ ಆಗದಿದ್ದ ಮೇಲೆ ಲವಕುಶರೊಂದಿಗೆ ರಾಮನ ಯುದ್ಧವಾಗುವುದಾದರೂ ಹೇಗೆ! ವಾಲ್ಮೀಕಿಯು ಯುದ್ಧಕಾಂಡದ ಅಂತ್ಯದಲ್ಲಿ ರಾಮಕಥೆಯನ್ನು ಕೊನೆಗೊಳಿಸುತ್ತಾ, ರಾಮರಾಜ್ಯವನ್ನು ಒಂದು ಆದರ್ಶ ರಾಜ್ಯದ ರೀತಿಯಲ್ಲಿ ಸಮಾಪನಗೊಳಿಸುತ್ತಾನೆ. ಮೇಲ್ಕಾಣಿಸಿದ ಕಲ್ಪಿತ ಕಥೆಗಳು ರಾಮಾಯಣಕ್ಕೆ ಕಳಂಕತರುವ ಕಥಾನಕಗಳು. ಹಿಂದಿಯ ವಿಖ್ಯಾತ ಮಹಾಕವಿ ಡಾ| ರಾಮ ಕುಮಾರ್ ವರ್ಮಾ ಮಾರ್ಮಿಕವಾಗಿ ಹೇಳಿದ ಈ ಮಾತುಗಳನ್ನು ನೋಡಿ:-

“ಸೀತಾ ನಿರ್ವಾಸನ್ ಹೆ ಅಸತ್ಯ, ಫಿರ್ ರಾಮಾಯಣ ಕ್ಯೋಂ ದೇ ಪ್ರಮಾಣ್ |
ಮೈ ಕಹತಾ ಹ್ಞೂಂ, ಯ ರಾಮಾಯಣ ಕೆ ಕೋಮಲ ವುರ್ ಮೆ ಚುಭಾ ಬಾಣ್ ||”
(ಸೀತಾಪರಿತ್ಯಾಗದ ಕತೆಯೇ ಸುಳ್ಳು. ಅದಕ್ಕೆ ರಾಮಾಯಣದ ಪ್ರಮಾಣವೇಕೆ ಬೇಕು. ನಾನು ಹೇಳುತ್ತೇನೆ-ಇದು ರಾಮಾಯಣದ ಕೋಮಲ ಎದೆಗೆ ಇರಿದ ಬಾಣ)

ರಾಮಾಯಣದ ಆರಂಭದಲ್ಲಿ ಯಾವುದೇ ದೇವತಾ ಪ್ರಾರ್ಥನೆಯಿಲ್ಲ. ಕಾವ್ಯದ ವಿಷಯ ದೇವರಲ್ಲ. ಅನೇಕ ಮಾನವ ಗುಣಗಳಿಂದ ಕೂಡಿದ ಓರ್ವ ಮಾನವನ ಬಗ್ಗೆ ವಾಲ್ಮೀಕಿ ತಿಳಿಯಬಯಸುತ್ತಾನೆ. “ತೈರ್ಯುಕ್ತ: ಶ್ರೂಯತಾಂ ನರಃ”-ನಾರದ ಕೊಡುವ ಉತ್ತರವೂ ನರನ ಬಗೆಗೇ ಇದೆ. ದೇವತ್ವದ ಬಗೆಗೆ ಇಲ್ಲ. ಸೀತೆಯೂ ಸ್ತ್ರೀಯರಲ್ಲಿ ಉತ್ತಮ ಮಗಳು. “ನಾರೀಣಾಂ ಉತ್ತಮೋ ವಧೂಃ”

ರಾಮಾಯಣದ ವಿಶೇಷತೆಯೆಂದರೆ ಮನುಷ್ಯ ಇಲ್ಲಿ ಕುಗ್ಗಿ ಹೋದವನಲ್ಲ. ಆತ್ಮವಿಶ್ವಾಸದಿಂದ ತುಂಬಿ ತುಳುಕುವವ. ಸಾಮಾಜಿಕ ಹಾಗೂ ಕೌಟುಂಬಿಕ ಸಂಬಂಧಗಳೆಲ್ಲವೂ ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಆಧರಿಸಿ ಇದೆ. ಸೀತೆ ರಾಮನೊಂದಿಗೆ ಕಾಡಿಗೆ ಬರಲು ಬಯಸುತ್ತಾಳೆ. ಹಠ ಹಿಡಿಯುತ್ತಾಳೆ. ಅವಳ ಹೇಳಿಕೆ ಎಷ್ಟೊಂದು ಸ್ವತಂತ್ರ ವ್ಯಕ್ತಿತ್ವದ್ದೆಂದರೆ – “ಅಗ್ರಸ್ತೇ ಗಮಿಷ್ಯಾಮಿ ಮೃದ್ನಂತೀ ಕುರಕಂಟಕಾನ್”-ಮುಳ್ಳು ದರ್ಭೆಗಳನ್ನೆಲ್ಲಾ ದೂರತಳ್ಳಿ ನಾನೇ ಮುಂದೆ ಹೋಗುತ್ತೇನೆ. (ಅಯೋಧ್ಯಾ 27.6) ಆಗಲೂ ರಾಮ ಆಕೆಯ ವನಗಮನಕ್ಕೆ ಒಪ್ಪದಿದ್ದಾಗ ಸೀತೆ ಹೇಳುತ್ತಾಳೆ:

“ಕಿಂತ್ವಾಮನ್ಯತ ವೈದೇಹ: ಪಿತಾ ಮೇ ಮಿಥಿಲಾಧಿಪ:
ರಾಮ ಜಾಮಾತರಂ ಪ್ರಾಪ್ಯ ಸ್ತ್ರಿಯ ಪುರುಷವಿಗ್ರಹಮ್”
“ಎಲೇ ರಾಮ, ನನ್ನ ತಂದೆ ಮಿಥಿಲೇಶನಿಗೆ ನೀನು ಆಕಾರ ಮಾತ್ರದಿಂದ ಗಂಡಸು ಎಂದು ತಿಳಿದಿದ್ದರೆ ನನ್ನ ಮದುವೆಯನ್ನು ನಿನ್ನೊಡನೆ ಮಾಡಿ ತನ್ನ ಅಳಿಯನನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ”

ಅಂದರೆ ಮೂಲ ರಾಮಾಯಣದ ಕಾಲದಲ್ಲಿ ಸ್ತ್ರೀಗೆ ಸಮಾನತೆ, ಸ್ವಾತಂತ್ರ್ಯ ಸಂಪೂರ್ಣವಾಗಿತ್ತು. ಒಂದು ರೀತಿಯಲ್ಲಿ ಅದು ಜನಯುಗ. ಪಾಳೇಗಾರಿ ಸಮಾಜ ಆಗ ಉದಯಿಸಿರಲಿಲ್ಲ. ಪಾಳೇಗಾರಿ ಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆ ಬೆಳೆಯುತ್ತಲೇ ‘ಸ್ತ್ರೀ’ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಳು. ಸೀತಾಪರಿತ್ಯಾಗದಂತಹ ಪ್ರಕ್ಷೇಪಗಳಿಗೆ ಇದುವೇ ಕಾರಣ. ಈಗ ರಾಮಾಯಣದಲ್ಲಿ 24000 ಶ್ಲೋಕಗಳಿದ್ದರೆ, ಮೂಲದಲ್ಲಿ ಅದರ ಅರ್ಧದಷ್ಟೂ ಇರಲಿಲ್ಲ. ತಮ್ಮ ವಿಶ್ವವಿಖ್ಯಾತ ಸಂಶೋಧನಾ ಗ್ರಂಥ ‘ರಾಮಕಥಾ’ದಲ್ಲಿ ಕಾಮುಲ್ ಬುಲ್ಕೆ ಹೇಳುತ್ತಾರೆ:-

“ಮೂರನೆಯ ಶತಮಾನದ ಉತ್ತರಾರ್ಧದಲ್ಲಿ ರಚನೆಯಾದ ಅಭಿಧರ್ಮ ಮಹಾವಿಭಾಷಾದಲ್ಲಿ ರಾಮಾಯಣದ ಉಲ್ಲೇಖವಿದೆ. ಇದರ ಚೀನೀ ಅನುವಾದ ಸುರಕ್ಷಿತವಾಗಿದೆ. ಅದರಲ್ಲಿ ರಾಮಾಯಣವೆಂಬ 12000 ಶ್ಲೋಕಗಳ ಒಂದು ಗ್ರಂಥವಿದೆ. ಅದರಲ್ಲಿ ಇರುವ ಮುಖ್ಯ ವಿಷಯ ಎರಡೇ 1. ರಾವಣನಿಂದ ಸೀತೆಯ ಅಪಹರಣ ಮತ್ತು 2. ರಾಮನಿಂದ ಸೀತೆಯ ಪುನರ್‍ಪ್ರಾಪ್ತಿ ಹಾಗೂ ಅಯೋಧ್ಯೆಗೆ ಪ್ರತ್ಯಾಗಮನ. ಇದರರ್ಥ ಇಂದಿರುವ ರಾಮಾಯಣದ ಅರ್ಧಾಂಶವಷ್ಟೇ ಹಿಂದಿತ್ತು”

ಒಂದೇ ವ್ಯಕ್ತಿಯಲ್ಲಿ ಜೀವನವಿಡೀ ಪ್ರೇಮವೆಂಬುದು ಮಾನವ ಇತಿಹಾಸದಲ್ಲಿ ನಿಜಕ್ಕೂ ಕ್ರಾಂತಿಕಾರಕವಾದುದು. ರಾಮ ಮತ್ತು ಸೀತೆ ಇದಕ್ಕೆ ಜ್ವಲಂತ ಉದಾಹರಣೆ. ವನಗಮನದ ಸಂದರ್ಭದಲ್ಲಿ ಸೀತೆಯ ಹಠಕ್ಕೆ ಮಣಿಯದ ರಾಮನಿಂದ ದುಃಖಿತಳಾದ ಸೀತೆಯನ್ನು ತನ್ನ ಎರಡೂ ಬಾಹುಗಳಿಂದ ಬಂಧಿಸಿ – “ನಿನಗೆ ನೋವಾಗುವುದಾದರೆ ನನಗೆ ಸ್ವರ್ಗವೂ ಬೇಡ. ಬ್ರಹ್ಮನಿಗೆ ಸಮನಾದ ನನಗೆ ಯಾರ ಅಂಜಿಕೆಯೂ ಇಲ್ಲ” ಎಂದು ಅವಳನ್ನು ಸಾಂತ್ವನ ಪಡಿಸುತ್ತಾನೆ. ವನವಾಸದಲ್ಲಿ ರಾಮನೊಂದಿಗೆ ಆಕೆ ಎಲ್ಲಾ ಕಷ್ಟಗಳಲ್ಲೂ ಭಾಗಿಯಾಗುತ್ತಾಳೆ. ಸೀತೆಯ ಅಪಹರಣವಾದಾಗ ಆತ ಪ್ರಾಣತ್ಯಾಗಕ್ಕೂ ಸಿದ್ಧನಾಗುತ್ತಾನೆ.

“ಮೃತೇ ಮಯಿ, ಪ್ರಾಣಾಂಸ್ಯಕ್ತ್ಯಾಮಿ ವಿನಷ್ಯಾಮಿ”
(ಅರಣ್ಯ 58 7, 9, 10) ಪರ್ಣಕುಟಿಯಲ್ಲಿ ಸೀತೆಯಿಲ್ಲದುದನ್ನು ಕಂಡು “ಶೋಕ ರಕ್ತೇಕ್ಷಣಃ ಶೋಕಾತ್ ಉನ್ಮತ್ತಃ ಇವ ಲಕ್ಷ್ಮತೆ” ಡಾ| ರಾಮವಿಲಾಸ ಶರ್ಮಾ ಹೇಳುವಂತೆ “ರಾಮನ ಪ್ರೇಮವೆಂದರೆ ಒಂದೊ ಸೀತೆ, ಇಲ್ಲವೇ ಸಾವು. ಸೀತೆಯ ಪ್ರೇಮವೆಂದರೆ ಒಂದೊ ರಾಮ ಇಲ್ಲವೇ ಸಾವು”

ಇನ್ನೊಮ್ಮೆ ಅಯೋಧ್ಯೆಯ ಪ್ರಸಂಗವನ್ನು ನೆನಪಿಸಿಕೊಂಡರೆ –
“ಯದಿ ಮಾಂ ದು:ಖತಾಂವೇವಂ ವನಂನೇತುನಚೇಚ್ಛಸಿ |
ವಿಷಮಗ್ನಿಂ ಜಲಂ ವಾಹಮ್ ಆಸ್ಥಾಸ್ಯೆ ಮೃತ್ಯು ಕಾರಣಾತ್”
(ಈ ದುಃಖಿನಿಯಾದ ನನ್ನನ್ನು ನೀನು ನಿನ್ನೊಡನೆ ಕರೆದುಕೊಂಡು ಹೋಗದಿದ್ದರೆ, ನಾನು ವಿಷ ಕುಡಿದೊ, ಬೆಂಕಿಗೆ ಹಾರಿಯೊ ಅಥವಾ ನೀರಿನಲ್ಲಿ ಮುಳುಗಿಯೊ ಪ್ರಾಣ ಬಿಡುತ್ತೇನೆ)

ಇಂಥ ಅದ್ಭುತ ಪ್ರೇಮ ಕಥಾನಕದಲ್ಲಿ ‘ಸಂಶಯ, ಪರಿತ್ಯಾಗ’ದ ಕಥೆಗಳೆಲ್ಲಾ ‘ಸ್ತ್ರೀ’ಯು ಹೀನಾಯವಾದ ಪರಿಸ್ಥಿತಿಗೆ ಬಂದ ಕಾಲಘಟ್ಟದ ಅಸಂಭವ ಕಲ್ಪನೆಗಳು.

ಬಾಲ್ಯವಿವಾಹ, ಪರಸ್ತ್ರೀಯರ ಕಾಲುಗಳನ್ನು ಮಾತ್ರ ನೋಡುವ ಪದ್ಧತಿ ಪುರುಷ ಪ್ರಧಾನ ವ್ಯವಸ್ಥೆಯ ಆದರ್ಶಗಳು. ಹಾಗಾಗಿ ಮೂಲ ರಾಮಾಯಣದಲ್ಲಿ
“ತಾಮಾರ್ತರೂಪಾಂ ವಿಮನಾ ರುದಂತೀ
ಸೌಮಿತ್ರಿರಾಲೋಕ್ಯ ವಿಶಾಲ ನೇತ್ರಾಮ್ |
ಲಕ್ಷ್ಮಣನು ದುಃಖಿಯಾದ ಕಾತರಳಾದ, ವಿಶಾಲನೇತ್ರೆಯಾದ ಸೀತೆಯನ್ನು ಮತ್ತೆ ಮತ್ತೆ (ಆರ್ತನಾಗಿ) ನೋಡುತ್ತಾ ರಾಮನೆಡೆಗೆ ಹೋದ. (ಅರಣ್ಯ 45 40-41)

ಆದರೆ, ಪ್ರಕ್ಷಿಪ್ತ ರಾಮಾಯಣದಲ್ಲಿ ಸೀತೆಯನ್ನು ಕಾಡಿಗೆ ಬಿಡುವಾಗ-
“ನಾನು ಇದೂವರೆಗೂ ನಿನ್ನ ರೂಪವನ್ನು ನೋಡಿಲ್ಲ. ನನ್ನ ದೃಷ್ಟಿ ಸದಾ ನಿನ್ನ ಚರಣಗಳ ಮೇಲಷ್ಟೇ ಇತ್ತು” (ಉತ್ತರ 146-21) ಪ್ರಕ್ಷಿಪ್ತಗಳನ್ನು ಗುರುತಿಸಲು ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಒಂದು ಉತ್ಕೃಷ್ಟ ಮಹಾಕಾವ್ಯದ ಪರಿಪೂರ್ಣ ಜ್ವಲಂತ ಸೂರ್ಯನನ್ನು ಕಾರ್ಮೋಡಗಳು ಆವರಿಸಿದಂತೆ ಈ ಕಲ್ಪಿತ, ಅಸಂಭವ ಪ್ರಕ್ಷಿಪ್ತಾಂಶಗಳು ಸೇರಿಕೊಂಡು ಕಾವ್ಯದ ಮೂಲ ಸೌಂದರ್ಯವನ್ನೇ ಕುರೂಪಗೊಳಿಸಿವೆ. ಶಂಭೂಕ ವಧೆಯಂತೂ ಬ್ರಾಹ್ಮಣರ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಸೇರಿಸಿದ ಕಟ್ಟುಕತೆ.

ಎಡಪರ ಸಿದ್ಧಾಂತವೇ ಇರಲಿ, ಬಲಪರ ಸಿದ್ಧಾಂತವೇ ಇರಲಿ ‘ವಾಸ್ತವ’ವನ್ನು ಗಮನಿಸದಿದ್ದರೆ ಅದು ಬರೇ ಕೆಸರನ್ನು ಎಬ್ಬಿಸುತ್ತದೆಯೇ ಹೊರತು ನವನೀತವನ್ನಲ್ಲ.ಈ ನಿಟ್ಟಿನಲ್ಲಿ ನಾನು ಇ.ಎಮ್.ಎಸ್. ಅವರು ರಾಮಾಯಣದ ಬಗ್ಗೆ ಹೇಳಿದ ಮಾತುಗಳನ್ನು ನಾನು ಭರತವಾಕ್ಯದಂತೆ ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ:

“ರಾಮಾಯಣ, ಮಹಾಭಾರತ ಮತ್ತಿತರ ಎಲ್ಲಾ ಶ್ರೇಷ್ಠ ಕೃತಿಗಳ ಮೂಲಬೇರುಗಳು ಸಮಷ್ಟಿ ಜನತೆಯಲ್ಲಿತ್ತು. ಆದರೆ ವರ್ಗ ಸಮಾಜದಲ್ಲಿ ಸಾಧಾರಣ ಜನತೆಗೆ ತನ್ನದೇ ಆದ ಮಿತಿಗಳಿದ್ದುವಾದ್ದರಿಂದ ಅವರು ಈ ಸಾಂಸ್ಕೃತಿಕ ಕೃತಿಗಳಿಗೆ ಅಂತಿಮ ಪರಿಷ್ಕೃತ ರೂಪವನ್ನು ಕೊಡಲಾರದಾದರು…
ಆ ಎಲ್ಲಾ ಶ್ರೇಷ್ಠ ಕಲಾತ್ಮಕ ಅಥವಾ ರಚನೆಗಳ ಸೃಷ್ಟಿ ಪ್ರಥಮತಃ ಜನರೇ ಮಾಡಿದ್ದು. ಆದರೆ ಅವರದನ್ನು ಪರಿಷ್ಕರಿಸಲಾರರು, ಒನಪುಗೊಳಿಸಲಾರರು. ಅದಕ್ಕೆ ವಿಶೇಷ ಪ್ರತಿಭೆಯುಳ್ಳ ವ್ಯಕ್ತಿಗಳ ಅವಶ್ಯಕತೆಯಿದೆ. ಮತ್ತು ಒಂದು ವರ್ಗ ಸಮಾಜದಲ್ಲಿ ವಿಶೇಷ ಪ್ರತಿಭೆಯು ಹೆಚ್ಚಾಗಿ ಆಳುವ ವರ್ಗದೊಂದಿಗೆ ಸಂಬಂಧಿಸಿಯೇ ಇರುತ್ತದೆ”

ಆದ್ದರಿಂದ ವರ್ಗದ ಪ್ರಶ್ನೆಯನ್ನು ಬಿಟ್ಟು ಜಾತಿಯ ಪ್ರಶ್ನೆಯಿಂದ ಮಹಾಕೃತಿಗಳನ್ನು ಸಮೀಕ್ಷಿಸಿದರೆ ಅವರ ಕುರುಡುದೃಷ್ಟಿ “ಪ್ರಕ್ಷೇಪ”ಗಳನ್ನು ಅರ್ಥೈಸುವ ಗೋಜಿಗೇ ಹೋಗದೆ ಕೇವಲ ಅವೈಚಾರಿಕ ಅತಾರ್ಕಿಕ ಹಾಗೂ ವಿಕೃತ ಸಂದೇಶವನ್ನಷ್ಟೇ ನೀಡುತ್ತಾ ಹೋಗುತ್ತದೆ.

2 ಟಿಪ್ಪಣಿಗಳು Post a comment
  1. murari krishna
    ಡಿಸೆ 3 2015

    WE must first get out of this “PURITAN” approach to Ramayana based on your current values. Please try to appreciate Ramayana as an epic. Then you can give suggestions about what to be kept and what needs to be thrown out. If you do not like some portions of Ramayana, you please do not read them. It is none of your business to tel we readers about what needs to be kept and what needs to be rejected. We have not given that right to you. Thanks.

    ಉತ್ತರ
  2. ಡಿಸೆ 4 2015

    ರಾಮಾಯಣ ಅಥವಾ ಮಹಾಭಾರತಗಳನ್ನು ಬರೆದಿರುವ ಉದ್ದೇಶವೇನೆಂಬುದೇ ಅರ್ಥವಾಗುವುದಿಲ್ಲ. ಬ್ರಾಹ್ಮಣರನ್ನೂ, ಇವರ ಜೊತೆಗೆ ಇತರ ನೂರೆಂಟು ಜಾತಿಗಳನ್ನು ಸೃಷ್ಟಿಸಿದವರು ಯಾರು, ಏಕೆ ಸೃಷ್ಟಿಸಿಕೊಂಡರು, ಅವುಗಳಿಂದ ಯಾರಿಗೆ ಅನುಕೂಲವಾಯಿತು, ಅನಾನುಕೂಲವಾಯಿತು, ಮೂಢ ನಂಬಿಕೆಗಳನ್ನು ಸೃಷ್ಟಿಸಿದವರು ಯಾರು, 33 ಕೋಟಿ ದೇವರುಗಳನ್ನು ಸೃಷ್ಟಿಸಿದವರು ಯಾರು, ಏಕೆ? ಬ್ರಾಹ್ಮಣರು ಮಾತ್ರ ಮಾಂಸ ತಿನ್ನಬಾರದು, ಇತರರು ಮಾತ್ರ ಪ್ರಾಣಿ ವಧೆ ಮಾಡಬೇಕು, ಮಾಂಸಾಹಾರ ತಿನ್ನಬೇಕು, ಇವುಗಳನ್ನೆಲ್ಲಾ ಜಾರಿಗೆ ತಂದವರು ಯಾರು? ಇತ್ಯಾದಿಗಳ ಬಗ್ಗೆ ಭಾಸ್ಕರಮಯ್ಯನವರು ಹೇಳಬೇಕು. ಜಾತಿಗಳನ್ನು ವರ್ಜಿಸಿ ವಿಶ್ವಮಾನವರಾಗಲು ಪ್ರಯತ್ನಿಸಬೇಕೇ ಹೊರತು ಅವುಗಳನ್ನು ಹೀಯಾಳಿಸುವುದರಿಂದ ಏನೂ ಉಪಯೋಗವಿಲ್ಲ. ನಮ್ಮ ದೇಶದಲ್ಲಿರುವಷ್ಟು ಧರ್ಮಗಳು, ಜಾತಿಗಳು, ಮೂಢ ನಂಬಿಕೆಗಳು ಇನ್ನೆಲ್ಲೂ ಇಲ್ಲವೇನೊ? ನಮ್ಮ ದೇಶ ಹಾಳಾಗಲು ಇಷ್ಟು ಸಾಲದೆ? ಹೊಟ್ಟೆ ಹಸಿವಿನ ಮುಂದೆ ಯಾವ ಜಾತಿ, ಧರ್ಮಗಳೂ, ದೇವರುಗಳೂ ಕೆಲಸಕ್ಕೆ ಬರುವುದಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments