ವಿಶ್ವರೂಪಂ,ಶಾರುಕ್ ಖಾನ್ ಮತ್ತು ಪಾಕಿಸ್ತಾನ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
(ಮುಸ್ಲಿಂ ಸಮುದಾಯದ ಕುರಿತು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಭಾಷಣ ಬಿಗಿಯುವ ಬುದ್ದಿಜೀವಿಗಳಿಗೆ 2013 ರಲ್ಲಿ ಬರೆದ ನನ್ನ ಈ ಲೇಖನ ಒಂದು ಪ್ರತಿಕ್ರಿಯೆಯಾಗಿ)
ಕಳೆದ ತಿಂಗಳು ಕಮಲ್ ಹಾಸನ್ ಚಿತ್ರ ಬದುಕಿನ ಮಹತ್ವಾಕಾಂಕ್ಷೆ ಸಿನಿಮಾ ‘ವಿಶ್ವ ರೂಪಂ’ ದೇಶದಾದ್ಯಂತ ಬಿಡುಗಡೆಯಾಗಬೇಕಿತ್ತು. ಪ್ರೇಕ್ಷಕರೂ ಸಹ ಸಿನಿಮಾ ವೀಕ್ಷಣೆಗಾಗಿ ಕಾತುರದಿಂದಲೇ ಕಾಯುತ್ತಿದ್ದರು. ಸಿನಿಮಾ ಏನೋ ಬಿಡುಗಡೆಯಾಯಿತು ಆದರೆ ಅದು ಕಮಲ್ ಹಾಸನ್ ತವರು ರಾಜ್ಯ ತಮಿಳುನಾಡೊಂದನ್ನು ಹೊರತುಪಡಿಸಿ. ಕಮಲ್ ಹಾಸನ್‍ಗೆ ಅತಿ ಹೆಚ್ಚಿನ ಅಭಿಮಾನಿಗಳಿರುವುದು ಮತ್ತು ಆತ ಅತ್ಯಂತ ಜನಪ್ರಿಯತೆ ಪಡೆದಿರುವುದು ತಮಿಳುನಾಡಿನಲ್ಲೇ. ಜೊತೆಗೆ ತನ್ನ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕಾಗಿ ಆತ ತನ್ನ ಸಿನಿಮಾ ಬದುಕಿನುದ್ದಕ್ಕೂ ದುಡಿದು ಗಳಿಸಿರುವುದನ್ನೆಲ್ಲ ಖರ್ಚು ಮಾಡಿರುವನು. ಆದ್ದರಿಂದ ಆತ ‘ವಿಶ್ವ ರೂಪಂ’ ನಿಂದ ಅತಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಿದ್ದು ಈ ತಮಿಳುನಾಡು ರಾಜ್ಯದಿಂದಲೇ. ಏಕಾಏಕಿ ಹೀಗೆ ‘ವಿಶ್ವ ರೂಪಂ’ ಸಿನಿಮಾ ಬಿಡುಗಡೆಗೆ ಆ ರಾಜ್ಯದಲ್ಲಿ ನಿಷೇಧ ಹೇರಿದಾಗ ಸಹಜವಾಗಿಯೇ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿದ ನಟ, ನಿರ್ಮಾಪಕ ಮತ್ತು ನಿರ್ದೇಶಕ ಕಮಲ್ ಹಾಸನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂಥ ಪರಿಸ್ಥಿತಿ ಎದುರಾಯಿತು. ಈ ಚಿತ್ರದ ನಿರ್ಮಾಣದಿಂದಾದ ಸಾಲ ತೀರಿಸಲು ತನ್ನ ಮನೆಯನ್ನೇ ಕಳೆದುಕೊಳ್ಳಬೇಕಾಯಿತು ಎಂದು ಹೇಳಿಕೊಂಡ ಆ ಹಿರಿಯ ನಟ ಒಂದು ಹಂತದಲ್ಲಿ ದೇಶವನ್ನೇ ಬಿಟ್ಟು ಹೋಗುವುದಾಗಿ ನುಡಿದ. ಇದು ಆ ಕ್ಷಣಕ್ಕೆ ನುಡಿದ ಆಕ್ರೋಶದ ಮಾತು ಎಂದೆನಿಸಿದರೂ ಒಂದು ಸೃಜನಶೀಲ ಮನಸ್ಸು ಸರ್ಕಾರದ ಮತ್ತು ಒಂದು ಧರ್ಮದ ಪಿತೂರಿಗೆ ಘಾಸಿಗೊಂಡು ವ್ಯಕ್ತಪಡಿಸಿದ ಸಾತ್ವಿಕ ಸಿಟ್ಟು ಅದಾಗಿತ್ತು.
ತಮಿಳುನಾಡಿನಲ್ಲಿ ‘ವಿಶ್ವ ರೂಪಂ’ ಚಿತ್ರ ಪ್ರದರ್ಶನವನ್ನು ನಿಷೇಧಿಸಿದ ಮೇಲೆ ಆ ಸಿನಿಮಾ ಬಿಡುಗಡೆಯಾದ ಬೇರೆ ರಾಜ್ಯಗಳಲ್ಲೂ ನಾಟಕೀಯ ಬೆಳವಣಿಗೆಗಳು ಕಾಣಿಸತೊಡಗಿದವು. ಕರ್ನಾಟಕದ ಕೆಲವು ನಗರಗಳಲ್ಲೂ ಒಂದಿಷ್ಟು ಜನ ಗುಂಪಾಗಿ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಗಳ ಮೇಲೆ ಕಲ್ಲೆಸೆದು ಪ್ರತಿಭಟಿಸಿದರು. ಮುಂಬೈನಲ್ಲೂ ಚಿತ್ರದ ವಿರುದ್ಧ ಅಪಸ್ವರದ ಮಾತುಗಳು ಕೇಳಿಬಂದವು. ಉತ್ತರ ಪ್ರದೇಶದಲ್ಲಿ ‘ವಿಶ್ವ ರೂಪಂ’ ಸಿನಿಮಾ ಬಿಡುಗಡೆಗೆ ಅವಕಾಶವೇ ನೀಡಕೂಡದೆಂದು ಅಲ್ಲಿನ ಮುಖ್ಯಮಂತ್ರಿಯ ಮೇಲೆ ಒತ್ತಡ ಹೇರಲಾಯಿತು. ಹೀಗೆ ಆ ಸಿನಿಮಾ ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರತಿಭಟನೆಯ ಕಾವನ್ನು ಎದುರಿಸಬೇಕಾಯಿತು.
ಅಷ್ಟಕ್ಕೂ ಈ ಸಿನಿಮಾದ ವಿರುದ್ಧ ಒಂದು ಧರ್ಮದ ಜನ ಅಷ್ಟೊಂದು ಉಗ್ರವಾಗಿ ಪ್ರತಿಭಟಿಸಲು ಕಾರಣವಾದರೂ ಏನು ಎಂದು ಹುಡುಕಲು ಹೊರಟರೆ ಆ ಒಂದು ಪ್ರತಿಭಟನೆಗೆ ಪೂರಕವಾಗುವ ಯಾವ ಪುರಾವೆಗಳೂ ದಕ್ಕುವ ಸಾಧ್ಯತೆ ನಿಚ್ಚಳವಾಗಿ ಇಲ್ಲ. ಆ ಸಿನಿಮಾದಲ್ಲಿ ತಾಲಿಬಾನಿ ಉಗ್ರರನ್ನು ಉಗ್ರರಾಗಿ ಚಿತ್ರಿಸಿದ್ದೆ ನಟ, ನಿರ್ದೇಶಕ ಕಮಲ್ ಹಾಸನ್ ಮಾಡಿರುವ ಬಹುದೊಡ್ಡ ತಪ್ಪೆನ್ನುವಂತೆ ಪ್ರತಿಭಟನಾಕಾರರು ವರ್ತಿಸುತ್ತಿರುವರು. ಹೀಗೆ ಸಿನಿಮಾದಲ್ಲಿ ಉಗ್ರರಾಗಿ ಕಾಣಿಸುವ ತಾಲಿಬಾನಿಗಳು ‘ಮುಸ್ಲಿಂ’ ಧರ್ಮಕ್ಕೆ ಸೇರಿದವರೆನ್ನುವುದು ಸಿನಿಮಾದ ವಿರುದ್ಧದ ಪ್ರತಿಭಟನೆಗೆ ಮೂಲ ಕಾರಣಗಳಲ್ಲೊಂದು. ಒಂದು ಧರ್ಮದ ಒಬ್ಬ ಉಗ್ರನನ್ನು ಉಗ್ರನೆಂದು ತೋರಿಸುವುದರಿಂದಾಗಲಿ ಇಲ್ಲವೇ ಕರೆಯುವುದರಿಂದಾಗಲಿ ಇಡೀ ಧರ್ಮಕ್ಕೆ ಅವಮಾನ ಮಾಡಿದಂತೆ ಎನ್ನುವ ಅತಾರ್ಕಿಕ ನಿಲುವಿಗೆ ಬಂದು ನಿಲ್ಲುವುದು ಅತ್ಯಂತ ಮೂರ್ಖತನ. ಜೊತೆಗೆ ನೆರೆಯ ರಾಷ್ಟ್ರದ ಅನೇಕ ಮುಸ್ಲಿಂ ಸಂಘಟನೆಗಳು ಭಾರತದ ವಿರುದ್ಧ ಜಿಹಾದ್ ಘೋಷಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ (ಸಿನಿಮಾದಲ್ಲಿ ತಾಲಿಬಾನಿಗಳು ತಮ್ಮ ವಿಧ್ವಂಸಕ ಕೃತ್ಯಕ್ಕಾಗಿ ಅಮೆರಿಕಾ ದೇಶವನ್ನು ಆಯ್ದುಕೊಳ್ಳುತ್ತಾರೆ). ಅಂಥದ್ದೊಂದು ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಡುವ ನಿರ್ದೇಶಕ ಸಹಜತೆಗೆ ಒತ್ತು ಕೊಡುವುದು ಸಾಮಾನ್ಯ ಸಂಗತಿಗಳಲ್ಲೊಂದು. ಇಲ್ಲಿ ಕಮಲ್ ಹಾಸನ್ ಮಾಡಿದ್ದು ಕೂಡ ಅದನ್ನೆ. ಸಿನಿಮಾದ ಕಥೆ ವಾಸ್ತವಿಕತೆಗೆ ಹತ್ತಿರವಾಗಿರಲಿ ಎನ್ನುವ ಕಾರಣದಿಂದ ಆತ ಸಹಜತೆಗೆ ಒತ್ತು ನೀಡಿದ.
ಆದರೆ ಕೆಲವು ಕರ್ಮಠರು ಈ ವಿಷಯವನ್ನೇ ದೊಡ್ಡದಾಗಿಸಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಬೇಕೆಂದು ಪ್ರತಿಭಟಿಸುತ್ತಿರುವುದು ಸರಿಯಲ್ಲ. ಹೀಗೆ ಪ್ರತಿಭಟಿಸುತ್ತಿರುವವರು ಕಾಶ್ಮೀರದಲ್ಲಾಗಲಿ ಇಲ್ಲವೇ ನೆರೆಯ ರಾಷ್ಟ್ರದಲ್ಲಾಗಲಿ ಅಲ್ಲಿನ ಹಿಂದುಗಳ ಮೇಲೆ ಆಗುತ್ತಿರುವ ಅಮಾನವೀಯ ಕೃತ್ಯಗಳ ವಿರುದ್ಧ ಎಂದಾದರೂ ಧ್ವನಿ ಎತ್ತಿರುವರೆ?. ಕಸಬ್ ಎನ್ನುವ ಪಾಪಿ ಭಾರತಕ್ಕೆ ಕಾಲಿಟ್ಟು ಇಲ್ಲಿನ ನೂರಾರು ಅಮಾಯಕರನ್ನು ನಿರ್ದಯವಾಗಿ ಗುಂಡಿಟ್ಟು ಹತ್ಯೆಗೈದಾಗ ಅವನನ್ನು ಮುಸ್ಲಿಂ ಎಂದು ಕರೆಯುವುದು ತಪ್ಪೆ? ಹಾಗೆಂದು ಕರೆದ ಮಾತ್ರಕ್ಕೆ ಇಡೀ ಮುಸ್ಲಿಂ ಧರ್ಮವೇ ಅನ್ಯಾಯಕ್ಕೋ ಇಲ್ಲವೇ ಅವಮಾನಕ್ಕೋ ಒಳಗಾಯಿತು ಎಂದುಕೊಳ್ಳುವುದು ಅದು ನಮ್ಮ ಸಂಕುಚಿತ ಮನಸ್ಸಿಗೆ ಹಿಡಿದ ಕೈಗನ್ನಡಿ. ಜೊತೆಗೆ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ ಬಿಡುಗಡೆಗೆ ಅನುಮತಿ ನೀಡಿದೆ. ಹಾಗೊಂದುವೇಳೆ ಸಿನಿಮಾದಲ್ಲಿ ಆಕ್ಷೇಪಾರ್ಹ ದೃಶ್ಯಗಳಿದ್ದರೆ ಇಲ್ಲವೇ ಯಾವುದಾದರೂ ಧರ್ಮಕ್ಕೆ ನೋವುಂಟು ಮಾಡುವಂತಹ ಸನ್ನಿವೇಶಗಳಿದ್ದರೆ ಸೆನ್ಸಾರ್ ಮಂಡಳಿಯೇಸಿನಿಮಾದ ಬಿಡುಗಡೆಗೆ ತಡೆಯೊಡ್ಡುತ್ತಿತ್ತು. ಹಿಂದೆಯೆಲ್ಲ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಅನೇಕ ಉದಾಹರಣೆಗಳಿವೆ. ಮಂಡಳಿಯೇ ಅನುಮತಿ ನೀಡಿರುವಾಗ ಧರ್ಮವೊಂದರ ಸಂಘಟನೆ ಸಿನಿಮಾದ ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳುವುದಿದೆಯಲ್ಲ ಅದು ರಾಷ್ಟ್ರದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದದ್ದು.
ಸಿನಿಮಾ ನಮ್ಮ ಬದುಕಿನ ಮತ್ತು ನಮ್ಮ ಸುತ್ತಮುತ್ತಲಿನ ಸಮಾಜದ ದರ್ಪಣ. ಸಿನಿಮಾವೊಂದು ಸಮಾಜದ ಗುಣಾವಗುಣಗಳಿಗೆ ಕನ್ನಡಿ ಹಿಡಿದು ತೋರಿಸುವ ಕೆಲಸ ಮಾಡುತ್ತದೆ. ಬ್ರಾಹ್ಮಣ ಸಮುದಾಯದಲ್ಲಿನ ವಿಧವಾ ಸಮಸ್ಯೆ ಕುರಿತು ಎಪ್ಪತ್ತರ ದಶಕದಲ್ಲೇ ‘ಫಣಿಯಮ್ಮ’ ಎನ್ನುವ ಸಿನಿಮಾ ನಿರ್ಮಾಣವಾಯಿತು. ಈ ದೇಶದಲ್ಲಿನ ಜಾತಿಸಮಸ್ಯೆ, ಭ್ರಷ್ಟಾಚಾರ, ಕೋಮುಗಲಭೆ, ಕೆಟ್ಟ ರಾಜಕೀಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಅನೇಕ ಸಿನಿಮಾಗಳು ಭಾರತದ ವಿವಿಧ ಭಾಷೆಗಳಲ್ಲಿ ನಿರ್ಮಾಣಗೊಂಡಿವೆ. ಹೀಗೆ ಪ್ರತಿಸಂದರ್ಭದಲ್ಲಿ ನಾವುಗಳು ಪ್ರತಿಭಟನೆ ಮಾಡುತ್ತ ಕುಳಿತರೆ ಸಿನಿಮಾ ಎನ್ನುವ ಸೃಜನಶೀಲ ಮಾಧ್ಯಮ ಕೇವಲ ಮನೋರಂಜನೆಗೆ ಸೀಮಿತವಾಗುವ ಅಪಾಯ ಎದುರಾಗುತ್ತದೆ.
ಈ ನಡುವೆ ನಟ ಶಾರುಕ್ ಖಾನ್ ಭಾರತದಲ್ಲಿ ತನ್ನನ್ನು ಅನುಮಾನದಿಂದ ಕಾಣುತ್ತಿರುವರು ಎನ್ನುವ ಹೇಳಿಕೆ ನೀಡಿ ಮಾಧ್ಯಮದ ಮತ್ತು ಅಭಿಮಾನಿಗಳ ಅನುಕಂಪಗಳಿಸಲು ಪ್ರಯತ್ನಿಸುತ್ತಾನೆ. ಮಾತನಾಡುವ ಉತ್ಸಾಹದಲ್ಲಿ ಈ ನೆಲದಿಂದ ತಾನು ಪಡೆದದ್ದೇನು ಎನ್ನುವ ಕಿಂಚಿತ್ ಉಪಕಾರ ಸ್ಮರಣೆಯೂ ಆ ನಟನಲ್ಲಿ ಸುಳಿಯುವುದಿಲ್ಲ. ಸರ್ಕಸ್ ಎನ್ನುವ ಧಾರಾವಾಹಿಯಿಂದ ಸಿನಿಮಾ ಜಗತ್ತಿಗೆ ಕಾಲಿಟ್ಟವನು ಈ ಶಾರುಕ್ ಖಾನ್. ಹಿಂದಿ ಚಿತ್ರರಂಗದ ಸ್ಟಾರ್ ನಿರ್ದೇಶಕರ ಕೈಗೆ ಸಿಕ್ಕ ಆತ ನಂತರದ ದಿನಗಳಲ್ಲಿ ಜನಪ್ರಿಯ ನಟನಾಗಿ ಬೆಳೆದು ನಿಂತ. ಅವನಲ್ಲಿನ ಪ್ರತಿಭೆಯ ಜೊತೆಗೆ ಆ ನಟನನ್ನು ಆರಾಧಿಸುವ ಅಭಿಮಾನಿಗಳ ಪಡೆಯೇ ಹುಟ್ಟಿಕೊಂಡ ಪರಿಣಾಮ ಆತ ಹಂತ ಹಂತವಾಗಿ ಯಶಸ್ಸಿನ ಉತ್ತುಂಗಕ್ಕೇರಿದ. ಆವತ್ತೇ ಶಾರುಕ್ ಖಾನ್ ಒಂದು ಧರ್ಮಕ್ಕೆ ಸೇರಿದವನೆಂದು ಆತನನ್ನು ಅನುಮಾನದಿಂದ ನೋಡಿದ್ದರೆ ಹೀಗೆ ಎರಡು ದಶಕಗಳಿಂದ ಭಾರತದ ಸಿನಿಮಾ ಪ್ರೇಕ್ಷಕರ ಡಾರ್ಲಿಂಗ್ ನಟನಾಗಿ ಜನಪ್ರಿಯತೆಯ ಉತ್ತುಂಗದಲ್ಲಿರಲು ಸಾಧ್ಯವಾಗುತ್ತಿರಲಿಲ್ಲ.
ಈ ಸಿನಿಮಾವನ್ನು ಭಾರತೀಯ ಪ್ರೇಕ್ಷಕರು ಪ್ರೀತಿಸುವಷ್ಟು ಪ್ರಪಂಚದ ಬೇರೆ ಯಾವ ದೇಶದ ಪ್ರೇಕ್ಷಕರು ಪ್ರೀತಿಸಲಾರರು. ಭಾರತೀಯ ಪ್ರೇಕ್ಷಕರಿಗೆ ರಾಜ್ ಕಪೂರ್, ದಿಲೀಪ ಕುಮಾರ, ಅಮಿತಾಬ್ ಬಚ್ಚನ್, ಅಮೀರ್ ಖಾನ್, ಶಾರುಕ್ ಖಾನ್ ಈ ನಟರ ಸಿನಿಮಾ ಮತ್ತು ಅಭಿನಯ ಮುಖ್ಯವೇ ವಿನ: ಅವರ ಧರ್ಮ ಮತ್ತು ಜಾತಿಯಲ್ಲ. ಅದಕ್ಕೆಂದೇ ಅನ್ಯ ದೇಶದ ಅನ್ಯ ಧರ್ಮದ ಜಾಕಿಚಾನ್ ಕೂಡ ಭಾರತದ ನೆಲದಲ್ಲಿ ಜನಪ್ರಿಯ ನಟನೆಂಬ ಅಭಿಮಾನಕ್ಕೆ ಪಾತ್ರನಾಗುತ್ತಾನೆ. ಇಲ್ಲಿನ ಸಿನಿಮಾ ಪ್ರೇಕ್ಷರು ತೀರ ಧರ್ಮಾಭಿಮಾನಿಗಳಾಗಿದ್ದರೆ ದಿಲೀಪ ಕುಮಾರ್, ಅಮೀರ ಖಾನ್, ಅಮ್ಜದ್ ಖಾನ್, ಖಾದರ್ ಖಾನ್, ನರ್ಗೀಸ್, ಶಾರುಕ್ ಖಾನ್, ವಹೆದಾ ರೇಹಮಾನ್ ಇವರುಗಳೆಲ್ಲ ಜನಪ್ರಿಯ ಕಲಾವಿದರುಗಳಾಗಿ ಭಾರತೀಯರ ಮನೆ ಮತ್ತು ಮನಸ್ಸುಗಳಲ್ಲಿ ನೆಲೆಯೂರಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಇನ್ನೊಂದು ಮಾತು ಕೆಲವು ವರ್ಷಗಳ ಹಿಂದೆ ಇದೇ ಶಾರುಕ್ ಖಾನ್ ಅಭಿನಯದ ‘ಮೈ ನೇಮ್ ಈಜ್ ಖಾನ್’ ಸಿನಿಮಾ ಬಿಡುಗಡೆಯಾದಾಗ ಭಾರತದ ಎಲ್ಲ ಪ್ರೇಕ್ಷಕ ವರ್ಗ ಚಿತ್ರವನ್ನು ವೀಕ್ಷಿಸಿ ಆತನ ಅಭಿನಯವನ್ನು ಮೆಚ್ಚಿ ಮಾತನಾಡಿದರು. ಆ ಸಿನಿಮಾದುದ್ದಕ್ಕೂ ಮುಸ್ಲಿಂ ಧರ್ಮದ ನಾಯಕನನ್ನು ಸಮಾಜ ಹೇಗೆ ಅನುಮಾನದಿಂದ ನೋಡುತ್ತದೆ ಎನ್ನುವುದನ್ನೇ ತೋರಿಸಲಾಗಿತ್ತು. ಆದರೂ ಸಿನಿಮಾ ಪ್ರೇಕ್ಷಕರಿಗೆ ಶಾರುಕ್ ಅಭಿನಯ ಇಷ್ಟವಾಗಿ ಚಿತ್ರ ಪ್ರಚಂಡ ಯಶಸ್ಸು ಪಡೆಯಿತು.
ಶಾರುಕ್ ಖಾನನ ಈ ಹೇಳಿಕೆಯನ್ನು ದೇಶದಾದ್ಯಂತ ಖಂಡಿಸುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನ ರಾಷ್ಟ್ರದ ಮಂತ್ರಿಯೋರ್ವರು ಭಾರತದಲ್ಲಿ ಶಾರುಕ್ ಖಾನ್‍ಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಹೇಳಿ ಎಡಬಿಡಂಗಿಯಂತೆ ವರ್ತಿಸುತ್ತಾರೆ. ಶಾರುಕ್ ಖಾನ್ ಭಾರತೀಯ ಮತ್ತು ಇದು ಭಾರತದ ಆಂತರಿಕ ವಿಚಾರ. ಭಾರತದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಿ ಮಾತನಾಡುವ ರೆಹಮಾನ್ ಮಲೀಕ್‍ಗೆ ಮೊದಲು ತನ್ನ ರಾಷ್ಟ್ರದ ಪ್ರಜೆಗಳ ಸುರಕ್ಷತೆಯ ಬಗ್ಗೆ ಕಾಳಜಿ ಇರಲಿ. ಏಕೆಂದರೆ ಆತನದು ಭಯೋತ್ಪಾದಕರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸಾಕುತ್ತಿರುವ ರಾಷ್ಟ್ರ. ಪ್ರಪಂಚದ ಪರಮ ಪಾತಕಿ ಬಿನ್ ಲಾಡೆನ್‍ಗೆ ತನ್ನ ಸೇನಾ ತರಬೇತಿ ಶಿಬಿರದ ಅನತಿ ದೂರದಲ್ಲೇ ರಾಜಾಶ್ರಯ ನೀಡಿದ ನೆಲವದು. ಭಾರತದ ಮೇಲೆ ದಾಳಿಮಾಡುವ ಉಗ್ರರನ್ನು ಆ ರಾಷ್ಟ್ರ ಸದಾಕಾಲ ಬೆಂಬಲಿಸುತ್ತ ಬಂದಿದೆ. ದಾವೂದ್ ಇಬ್ರಾಹಿಂ, ಅಜರ್ ಮಸೂದ್‍ರಂಥ ಅಂತರಾಷ್ಟ್ರೀಯ ಭಯೋತ್ಪಾದಕರು ಪಾಕಿಸ್ತಾನದ ನೆಲದಲ್ಲಿ ಕುಳಿತುಕೊಂಡು ಭಾರತದ ವಿರುದ್ಧ ದಾಳಿಯ ಸಂಚು ರೂಪಿಸುತ್ತಾರೆ. ಭಾರತದ ಮೇಲೆ ಭಯೋತ್ಪಾದಕರ ದಾಳಿಯನ್ನು ಹೆಚ್ಚಿಸಲು ಅಗತ್ಯವಾದ ಯಾವ ಅವಕಾಶವನ್ನೂ ಪಾಕಿಸ್ತಾನ ಕೈಬಿಡುವುದಿಲ್ಲ. ಮೇಲಾಗಿ ಇಡೀ ಪಾಕಿಸ್ತಾನವೇ ಇವತ್ತು ತಾಲಿಬಾನಿಗಳ ನಿಯಂತ್ರಣದಲ್ಲಿದೆ. ಉಗ್ರರಿಂದಾಗಿ ಅಲ್ಲಿನ ನಾಗರಿಕರ ಬದುಕು ಅಸ್ತವ್ಯಸ್ತಗೊಂಡಿದೆ. ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಅರಾಜಕತೆ ಮನೆ ಮಾಡಿದೆ. ಎಲ್ಲರಿಗೂ ನೆನಪಿರುವಂತೆ ಕಳೆದ ವರ್ಷ ಅಕ್ಟೋಬರ್ ತಿಂಗಳ ಒಂದು ದಿನ ತಾಲಿಬಾನಿಗಳು ಅಲ್ಲಿನ ಮಲಾಲಾ ಎನ್ನುವ ಶಾಲಾ ಬಾಲಕಿಯನ್ನು ಹತ್ಯೆಗೈಯಲು ಪ್ರಯತ್ನಿಸಿದ ಸಂಗತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲ್ಪಟ್ಟಿತು. ಎಲ್ಲ ರಾಷ್ಟ್ರಗಳು ಈ ಅಮಾನವೀಯ ಕೃತ್ಯವನ್ನು ಖಂಡಿಸಿದವು. ಪಾಕಿಸ್ತಾನಿ ನಾಗರಿಕರಿಗೆ ಉಗ್ರರ ಉಪಟಳದ ನಡುವೆ ದಿನನಿತ್ಯದ ಬದುಕು ನಡೆಸುವುದೇ ಕಷ್ಟವಾಗಿದೆ. ಶಾರುಕ್ ಖಾನ್ ಭದ್ರತೆಯ ವಿಷಯವಾಗಿ ಹೇಳಿಕೆ ನೀಡುವ ಮೊದಲು ತನ್ನ ರಾಷ್ಟ್ರದಲ್ಲಿನ ಪ್ರಜೆಗಳ ಸುರಕ್ಷತೆಯ ಬಗ್ಗೆ ರೆಹಮಾನ್ ಮಲ್ಲೀಕ್ ಚಿಂತಿಸಬೇಕಿತ್ತು.
ಭಯೋತ್ಪಾದನೆಯೊಂದು ಆ ರಾಷ್ತ್ರದಲ್ಲಿ ಯಾವ ಪರಿ ಅಲ್ಲಿನ ಜನರ ಬದುಕನ್ನು ಅಸಹಾಯಕತೆಯ ಅಂಚಿಗೆ ತಂದುನಿಲ್ಲಿಸಿದೆ ಎನ್ನುವುದನ್ನು ಕುರಿತು ಪಾಕಿಸ್ತಾನಿ ಸಹೋದರಿಯೊಬ್ಬಳು ಇಂಗ್ಲಿಷ್ ದೈನಿಕಕ್ಕೆ ಬರೆದ ಪತ್ರ ಹೀಗಿದೆ,
ಮುಂಬೈ ನಾಗರಿಕರಿಗೆ ನನ್ನ ಸಹಾನುಭೂತಿ,
“ಮುಂಬೈನ ಎಲ್ಲ ನಾಗರಿಕರಿಗೆ ವಿಶೇಷವಾಗಿ ಉಗ್ರರ ದಾಳಿಯಲ್ಲಿ ಗಾಯಗೊಂಡವರಿಗೆ ಮತ್ತು ತಮ್ಮ ಬಂಧುಗಳು, ಸ್ನೇಹಿತರನ್ನು ಕಳೆದುಕೊಂಡವರಿಗೆ ನನ್ನ ಹೃದಯಾಂತರಾಳದ ಸಹಾನುಭೂತಿ. ಸಾವಿರಾರು ಮೈಲಿ ದೂರದಲ್ಲಿ ಕುಳಿತು ಟೆಲಿವಿಜನ್ ಪರದೆಯ ಮೇಲೆ ನೂರು ವರ್ಷ ಹಳೆಯದಾದ ತಾಜ್ ಹೋಟೆಲ್‍ನಲ್ಲಿ ನಡೆದ ಕಮಾಂಡೋ ಪಡೆಯ ಕಾರ್ಯಾಚರಣೆ ನೋಡುತ್ತಿರುವಾಗ ಮನಸ್ಸು ರೋಧಿಸುತ್ತದೆ. ಮುಂಬೈನ ಈ ಘಟನೆ ನನಗೆ ಕಳೆದ ವರ್ಷ 2007 ಡಿಸೆಂಬರ್ 28 ರಂದು ಕರಾಚಿಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಿದೆ. ಆ ದಿನ ಉಗ್ರರು ನಮ್ಮ ನಾಯಕಿ ಬೆನಜೀರ್ ಭುಟ್ಟೊರನ್ನು ಹತ್ಯೆಗೈದರು. ಇಡೀ ಕರಾಚಿ ಪಟ್ಟಣ ಹೊಗೆಯಿಂದ ತುಂಬಿಕೊಂಡಿತ್ತು.ಈ ಉಗ್ರರು ಪಾಕಿಸ್ತಾನಿ ಪ್ರಜೆಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವರು. ಇಲ್ಲಿಯ ಕಟ್ಟಡಗಳು ಉಗ್ರರ ವಿಧ್ವಂಸಕ ಕೃತ್ಯಗಳಿಗೆ ಧ್ವಂಸಗೊಂಡಿವೆ. ರೈತರ ಬೆಳೆಗಳು ನಾಶಗೊಂಡಿವೆ. ಮಕ್ಕಳಿಗೆ ಕಲಿಯಲು ಶಾಲೆಗಳಿಲ್ಲ. ಲಾಹೋರ್‍ನಲ್ಲಿ ಪತ್ರಿಕೆ ನಡೆಸುತ್ತಿರುವ ನನ್ನ ಸಹೋದರಿ ಮತ್ತವಳ ಪತಿ ಭಯೋತ್ಪಾದಕರ ಬೆದರಿಕೆಯಿಂದ ಪ್ರತಿನಿತ್ಯ ಪೆÇಲೀಸರ ರಕ್ಷಣೆಯಲ್ಲಿ ಬದುಕು ಸಾಗಿಸುತ್ತಿರುವರು.
ನಿಜ ಹೇಳುತ್ತಿದ್ದೇನೆ ಭಾರತೀಯರು ನೀವು ಎಷ್ಟು ದ್ವೇಷಿಸುತ್ತಿರೋ ಅದಕ್ಕಿಂತ ಹೆಚ್ಚು ನಾನು ಈ ಉಗ್ರರನ್ನು ದ್ವೇಷಿಸುತ್ತೇನೆ. ಸಾವಿರಾರು ಪಾಕಿಸ್ತಾನಿಯರನ್ನು ಕೊಂದ ಇವರು ದಿನನಿತ್ಯ ನಮ್ಮನ್ನು ಸಾಯಿಸುತ್ತಿರುವರು. ಬೇರೆ ರಾಷ್ಟ್ರದೊಂದಿಗೆ ಯುದ್ಧ ಮಾಡಿ ಸಾಯುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವರು.
ಮುಂಬೈ ನಮಗೆ ದಿಲೀಪ ಕುಮಾರ, ಅಮಿತಾಬ್ ಬಚ್ಚನ್, ಶಾರುಕ್ ಖಾನ್‍ರಂಥ ಸೆಲೆಬ್ರಿಟಿಗಳನ್ನು ನೀಡಿದ ನಗರ. ಅದು ನಮ್ಮ ಕನಸುಗಳ ಮಾಯಾನಗರ. ನಿಮ್ಮ ಧೈರ್ಯಕ್ಕೆ ನನ್ನ ಸಲಾಂಗಳು. ಈ ಘಟನೆಗೆ ಕಾರಣರಾದವರನ್ನು ಖಂಡಿಸುತ್ತೇನೆ. ನಡೆದ ಅಸಂಗತ ಘಟನೆಯಿಂದ ಬಹುಬೇಗ ಚೇತರಿಸಿಕೊಳ್ಳಿರೆಂದು ಹಾರೈಸುವೆ.
ಇಂತಿ ನಿಮ್ಮ
ಪಾಕಿಸ್ತಾನಿ ಸಹೋದರಿ”
ಅಸಹಿಷ್ಣುತೆ ಕುರಿತು ಮಾತನಾಡಿದವರಿದ್ದಾರೆ. ಆದರೆ ನೀವು ಬರೆದಿರುವಂತೆ “ಮುಸ್ಲಿಂ ಸಮುದಾಯದ ಕುರಿತು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ” ಎಂದು ಮಾತನಾಡಿದ್ದಾರೆ ?