ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 4, 2015

ಹೆಚ್ಚುತ್ತಿರುವುದು ಅಸಹಿಷ್ಣುತೆಯೋ?ಗೊಡ್ಡು ವಿಚಾರವಾದಿಗಳ ಹತಾಶೆಯೋ?

‍ನಿಲುಮೆ ಮೂಲಕ

– ಶ್ರೀವತ್ಸ ಭಟ್

ಅಸಹಿಷ್ಣುತೆ2014ರ ಲೋಕಸಭಾ ಚುನಾವಣೆಗೂ ಮುಂಚಿನ ಭಾರತವನ್ನು,ಅಂದರೆ ಸ್ವಾತಂತ್ರ್ಯೋತ್ತರದ ಆರು ದಶಕಗಳ ವೈಚಾರಿಕ ಭಾರತವನ್ನು ಓಮ್ಮೆ ಅವಲೋಕಿಸಿ ನೋಡಿ.ನಿಜವಾದ ವಿಚಾರವಾದಿಗೆ ಸ್ಥಾನವಿತ್ತೆ?ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ,ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು,ರಾಜಾರಾಮ ಮೋಹನರಾಯರು,ವಿದ್ಯಾಸಾಗರರಂತಹ ಅಪ್ರತಿಮ ಮೇಧಾವಿಗಳನ್ನೂ,ಮಹಾನ್ ವಿಚಾರವಾದಿಗಳನ್ನು ಕಂಡಿದ್ದ ಭಾರತರಾಷ್ಟ್ರ ಕೇವಲ ಕೆಲವು ದಶಕಗಳಲ್ಲಿ ಎಂತಹ ಜಾಢ್ಯತೆಯ ಕೂಪಕ್ಕೆ ಜಾರಿಹೋಗಿದೆಯಲ್ಲವೇ?  1947ರಲ್ಲಿ ಅನ್ಯರ ದಾಸ್ಯದಿಂದ ಮುಕ್ತರಾದೆವು ನಿಜ.ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದ, ಆ ಮಹೋನ್ನತ ವಿಚಾರವಾದವು, ನಮ್ಮಯಾವ ವಿಚಾರಗಳಿಂದ ಪರಂಗಿಗಳು ನಮಗೆ ಹೆದರಿದ್ದರೋ, ಅದೇ ವಿಚಾರಶಕ್ತಿಯು ಅತಿ ಕಡಿಮೆ ಕಾಲದಲ್ಲಿ ಕ್ಷುದ್ರಗತಿಗೆ ಜಾರಿದ್ದು ನಮ್ಮ ದುರ್ದೈವವಲ್ಲವೇ?

2014 ಹೂಸ ಯುಗದ ಆರಂಭ, ವೋಟ್ ಬ್ಯಾಂಕ್ ರಾಜಕಾರಣದಿಂದ ಅಭಿವೃದ್ದಿ ರಾಜಕೀಯದೆಡೆಗೆ ಹೆಜ್ಜೆಯಿಡಲಾರಂಭಿಸಿದ ದಿನಗಳು. ತುಕ್ಕುಹಿಡಿದ ಆಲೋಚನೆಗಳಿಂದ, ನವನವೀನವಾದ, ಅಷ್ಟೇ  ಶ್ರೇಷ್ಠವಾದ,ಸಮೃದ್ದ ಭಾರತದ ನಿರ್ಮಾಣಕ್ಕೆ ಪೂರಕವಾದ,ವಿದ್ಯುತ್ ಪ್ರವಾಹದಂತಹ ಶಕ್ತಿಯುತ ಆಲೋಚನಾ ಕ್ರಮಕ್ಕೆ ಹೊರಳಿದ ಸಂಧಿಕಾಲ. ಈ ಬದಲಾವಣೆಯೆಂಬ ಉತ್ಕರ್ಷದ ಚಾಟಿಯ ಏಟು ಮೂದಲು ಬಿದ್ದಿದ್ದು ಗೊಡ್ಡು ವಿಚಾರವಾದದ ಮೇಲೆ. ಪರಿಣಾಮ! ಅಂಗಡಿಯಲ್ಲಿ ದುಡ್ಡುಕೊಟ್ಟು ಹೊಸ ಬಟ್ಟೆ ಖರೀದಿಸಿ ತೊಟ್ಟುಕೊಂಡು ಖುಷಿಪಡುವ ಹಾಗೆ,ಅಧಿಕಾರಿಗಳಿಗೆ ಲಂಚನೀಡೀಯೋ…ಇಲ್ಲವೇ ರಾಜಕೀಯದ ಪ್ರಭಾವ ಬಳಸಿಯೋ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದವರಿಗೂ,ಬುದ್ಧಿಜೀವಿಗಳ ಸೋಗು ಹಾಕಿಕೊಂಡು ಮೆರೆಯುತ್ತಿದ್ದ ಅರ್ಧಂಬದ್ದ ಓದಿಕೊಂಡಿದ್ದವರಿಗೂ,ಬುಡಕ್ಕೆ ಬೆಂಕಿಯಿಟ್ಟಂತಾಯಿತು.ಏನೂ ಮಾಡಲಾಗದೆ ಹತಾಶರಾದರು…ಎಷ್ಟಾದರೂ ಸತ್ಯ ಕಹಿಯಲ್ಲವೇ?

ಆರು ದಶಕಗಳಿಂದ, ಭಾರತವನ್ನು ಕತ್ತಲೆಯ ಕೂಪಕ್ಕೆ ತಳ್ಳಿದ್ದ ಮಂಕು ವಿಚಾರಗಳಿಂದ ಹೊರಬನ್ನಿ, ಭವಿಷ್ಯತ್ತನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿ, ಹೊಸ ಹೊಸ ವಿಚಾರಧಾರೆಗಳನ್ನು ಬೆಳೆಸಿಕೊಳ್ಳಿ ಎಂಬ ಮೋದಿಯವರ ಕರೆ, ಭಾರತವನ್ನು ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸಿದ್ದು, ಬದಲಾವಣೆಯ ಸಂಧಿಕಾಲದಲ್ಲಿ ಸಹಜವಾಗಿ ಉಂಟಾಗುವ ತಾತ್ವಿಕ ಸಂಘರ್ಷದಲ್ಲಿ ಸನಾತನ, ವಿನೂತನಗಳ(ಸತ್ವಯುತವಾದ ಪುರಾತನ) ಎದುರು ಪೊಳ್ಳು ವಿಚಾರಗಳ ಸೋಲು, ಅದರಿಂದ ಉಂಟಾದ ಅಸೂಯೆ,ಹತಾಶೆಗಳು,ಸ್ವಘೋಷಿತ ಬುದ್ಧಿಜೀವಿಗಳ ಆಂತರ್ಯದಲ್ಲಿ ಆತಂಕದ ಛಾಯೆ ಮೂಡಲು ಕಾರಣವಾಯ್ತು.ಆತಂಕ? ಯಾವ ಆತಂಕ? ತಮ್ಮ ಪೊಳ್ಳು ಸಿದ್ದಾಂತಗಳು ಜಾರಿ ಹೋಗುತ್ತಿವೆ. ಹೊಟ್ಟೆತುಂಬಿಸಿದ್ದ ಸುಳ್ಳಿನ ಸಿಹಿ, ಸತ್ಯದ ಕಹಿಯೆದುರು ಕಳೆದುಹೋಗುತ್ತಿದೆ ಎಂಬ ಆತಂಕ,ನಮ್ಮ ದುರಾದೃಷ್ಟ…ಇಂದು ಸತ್ಯದ ಕಹಿಯನ್ನುಂಡರೆ ಮುಂದೊಂದು ದಿನ ಭವ್ಯ ಭಾರತವೆಂಬ ಸಿಹಿಯನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಅನುಭವಿಸಬಹುದು ಎಂಬ ದೂರದೃಷ್ಟಿ ಇಲ್ಲವಾಗಿದೆಯಲ್ಲ!ಎಷ್ಟಾದರೂ ಕ್ಷುದ್ರ ಮಾನವನ ಮನಸ್ಸು ಹಾತೊರೆಯುವುದು ಕ್ಷಣಿಕ ಸುಖಕ್ಕಲ್ಲವೇ? ಅಶಾಶ್ವತವಾದ ಭೋಗೈಶ್ವರ್ಯಗಳಿಗಲ್ಲವೇ? ಶಾಶ್ವತ  ಸಂತೃಪ್ತಿಯನ್ನು ಬಯಸಲು,ಅದಕ್ಕೋಸ್ಕರವಾಗಿ,ಸಿಕ್ಕ ಕ್ಷಣಿಕ ಸುಖವನ್ನೂ,ಮಾನ ಮರ್ಯಾದೆಗಳನ್ನೂ ಕಾಲ್ಕೆಳಗಿನ ಕಸ ಎಂದು ಭಾವಿಸಲು ನಾವೇನು ಯೋಗಿಗಳೇ? ಕಷ್ಟದಿಂದ ಸುಖಪಡೆಯಲು ಇಚ್ಛಿಸುವವರು ನಾವಲ್ಲ,ಸುಖದಿಂದಲೇ ಮತ್ತಷ್ಟು ಸುಖಸಿಗುತ್ತದಯೇ ಎಂದು ಆಸೆಪಡುವ ಮುಟ್ಟಾಳರಲ್ಲವೇ?

ಮೇಲಿನದು ಬದಿಗಿರಲಿ,ಸದ್ಯದ ಪರಿಸ್ಥಿತಿಯತ್ತ ಹೊರಳೋಣ…ಒಬ್ಬನ ಪ್ರಕಾರ ಭಗವದ್ಗೀತೆಯನ್ನು ಸುಡಬೇಕಂತೆ,ಮತ್ತೊಬ್ಬನ ಪ್ರಕಾರ ಮನುಸ್ಮೃತಿಯನ್ನು ಸುಡಬೇಕಂತೆ.ಭಗವದ್ಗೀತೆ,ಮನುಸ್ಮೃತಿಗಳು ಜೀವನಾದರ್ಶಗಳು ಎಂದು ಸಾರಿ ಸಾರಿ ಹೇಳಿದ ಸ್ವಾಮಿ ವಿವೇಕಾನಂದರಂತಹವರನ್ನು ಜನ ಪೂಜ್ಯಭಾವದಿಂದ ಕಂಡರು.ಆದರೆ ಇಲ್ಲಿನೋಡಿ ಈ ಮೂರ್ಖ ಶಿಖಾಮಣಿಗಳನ್ನು, ವಿಚಾರಹೀನರನ್ನು ಯಾರಾದರೂ ವಕ್ರದೃಷ್ಟಿಯಿಂದ ಬಿಟ್ಟರೆ ಬೇರಾವ ದೃಷ್ಟಿಯಿಂದಲೂ ನೋಡುತ್ತಿಲ್ಲವಲ್ಲ!!

ಆದರೆ ಒಂದು ಮಾತ್ರ ಸತ್ಯ.ಇಂತಹ ಹೇಳಿಕೆಗಳು ಬಹುಸಂಖ್ಯಾತ ಹಿಂದೂಗಳ ಮನಸ್ಸನ್ನು ನೋಯಿಸಿತು, ಆದರೆ ಆತ ಸೌಮ್ಯವಾಗಿ ಪ್ರತಿಭಟಿಸಿದ.ಎಷ್ಟಾದರೂ ಹಿಂದೂ ಇತರರಂತೆ ಧರ್ಮ ಪ್ರಚಾರಕನಲ್ಲ,ತನ್ನ ಸಿದ್ದಾಂತಗಳನ್ನು ಇತರರ ಮೇಲೆ ಹೇರುವವನಲ್ಲವಲ್ಲ.ಆತ ಜ್ಞಾನ ಪ್ರಸಾರಕ. ಆದರೆ ಇಷ್ಟಕ್ಕೇ ಮುಗಿಯೀತೇ ಬುದ್ಧಿಗೇಡಿಗಳ ಕೂಗು ಗೋಮಾಂಸ ಭಕ್ಷಣೆಯನ್ನು ಮಾಡುವ ಮೂಲಕ ಹಿಂದೂವಿನ ಎದೆಗೆ ಒದ್ದರು. ಆದರೂ ಸಹಿಷ್ಣು ಹಿಂದೂ ಸಹಿಸಿಕೊಂಡ.ಸಹಿಸಿಕೊಳ್ಳುತ್ತಲೇ ಇದ್ದಾನೆ.ಸಹನೆ ಹಿಂದೂಗಳ ಪರಮೋಚ್ಛ ಸಂಸ್ಕೃತಿಯಲ್ಲವೇ?ಸಹಸ್ರಾರು ವರ್ಷಗಳಿಂದ,ನೂರಾರು ಪರಕೀಯರ ಆಕ್ರಮಣವನ್ನು ಎದುರಿಸಿ ನಿಂತು, ತನ್ನತನವನ್ನು ಉಳಿಸಿಕೊಂಡು ಬರಲು ಆತ ಉಪಯೋಗಸಿದ ಅಸ್ತ್ರ ಸಹನೆ.

ಇನ್ನು ಪ್ರಶಸ್ತಿ ವಾಪ್ಸಿ,ಕೊಟ್ಟ ಗೌರವ, ಸಮ್ಮಾನಗಳನ್ನು ಹಿಂದಿರುಗಿಸುವುದು. ಇಲ್ಲಿ ಒಂದು ವಿಷಯ ನೆನಪಿಗೆ ಬರುತ್ತದೆ, ಭಾರತದ ನಾಲ್ಕು ದಿಸೆಗಳಲ್ಲಿ ಒಂದೊಂದು ಧರ್ಮಸಂಸ್ಥಾನಗಳನ್ನು ಸ್ಥಾಪಿಸಿ ,ಭಾರತೀಯರನ್ನು ಧಾರ್ಮಿಕವಾಗಿ, ವೈಚಾರಿಕವಾಗಿ ಬೆಸೆದ,ಅದ್ವೈತ ಸಿದ್ದಾಂತದ ಪ್ರತಿಪಾದಕ,ಆಚಾರ್ಯ ಶ್ರೇಷ್ಠ ಶಂಕರರು.ಕುಸಿದು ಬೀಳುತ್ತಿದ್ದ ಹಿಂದೂ ಧರ್ಮವನ್ನು ಮತ್ತೆ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದರು…ಹೇಗೆ?  ಇತರ  ಧರ್ಮಗಳನ್ನ ಮನಬಂದಂತೆ ನಿಂದಿಸುವ ಮುಖೇನವೇ…? ಅಲ್ಲ! ಇತರ ಮತ-ಪಂಥಗಳನ್ನು ವಾದದಲ್ಲಿ ಗೆದ್ದರು, ನಿಮ್ಮ ಸಿದ್ದಾಂತಗಳೆಲ್ಲ ಪೂಳ್ಳು ಎಂದು ತೋರಿಸುವ ಮೂಲಕ… ಪ್ರಶಸ್ತಿ ವಾಪಸ್ಸು ನೀಡುತ್ತಿರುವವರಿಗೆ ನಾನು ಹೇಳುವುದಿಷ್ಟೆ.ನಿಮ್ಮ ತತ್ವ ಸಿದ್ದಾಂತಗಳೇ ಸತ್ಯ ಎಂದಾದಲ್ಲಿ ಅವನ್ನು ರುಜುವಾತು ಪಡಿಸಿ ,ನಿಮ್ಮ ಬರವಣಿಗೆಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸಿ , ಅದು ಬಿಟ್ಟು ಸಾಹಿತ್ಯೋತ್ಸವಗಳನ್ನು ಬಹಿಷ್ಕರಿಸುವುದು, ದೇಶ ಬಿಟ್ಟು ಹೋಗುತ್ತೇನೆ,ಈ ದೇಶ ಅಸಹಿಷ್ಣು,ನನಗೆ ಇಲ್ಲಿರಲು ಭಯ ಎಂಬೆಲ್ಲ ಪಲಾಯನವಾದವನ್ನು ತೋರಿಸಬೇಡಿ. ಸೋತರೆ ಪ್ರಶಸ್ತಿ,ಗೌರವ,ಸಮ್ಮಾನಗಳನ್ನು ಹಿಂದಿರುಗಿಸಿ ಯಾಕೆಂದರೆ ಅನರ್ಹರ ಕೈಯಲ್ಲಿದ್ದರೆ ಅವುಗಳ ಶ್ರೇಷ್ಟತೆಗೆ ಧಕ್ಕೆಬರುತ್ತದಲ್ಲ!

ಇನ್ನೊಂದು ಮಾತು,ಇತ್ತೀಚಿಗೆ ನೆಡೆದ ಕೆಲವು ಘಟನೆಗಳ ಬಗೆಗೆ, ಪನ್ಸರೆ,ಕಲ್ಬುರ್ಗಿ,ದಾಬೋಲ್ಕರರಂತಹ ಮೇಧಾವಿಗಳ ಹತ್ಯೆ. ನಿಜಕ್ಕೂ ಅಮಾನವೀಯ,ಪ್ರತಿಯೊಬ್ಬ ಭಾರತೀಯನೂ ಖಂಡಿಸಲೇಬೇಕಾದ ವಿಷಯ.ಇದು ತಪ್ಪು ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಬೇಕಂಬ ಕೂಗಿಗೆ ನನ್ನದೂ ಬೆಂಬಲವಿದೆ.ಅವರನ್ನು ಕೊಂದವರು ಯಾರೇ ಇರಬಹುದು ಸಮಾಜದ ದೃಷ್ಟಿಯಲ್ಲಿ ಅಪರಾಧಿಯೇ. ಆದರೆ ಈ ಘಟನೆಗಳಿಗೆ ಹಿಂದೂ ಧರ್ಮವನ್ನು, ಎಲ್ಲ ಹಿಂದೂಗಳನ್ನು ಗುರಿಯಾಗಿಸುತ್ತಿರುವುದನ್ನು ನೋಡಿದರೆ, ಗಾಂಧೀಜಿಯವರನ್ನು ಹತ್ಯೆಗೈದ ನಾಥೂರಾಮ್ ಗೂಡ್ಸೆ ಒಬ್ಬ ಬ್ರಾಹ್ಮಣ ಎಂಬ ಕಾರಣಕ್ಕೆ ಅಮಾಯಕ ಬಡ ಬ್ರಾಹ್ಮಣರ ಮನೆಗಳ ಮೇಲಾದ ದಾಳಿಗಳು, ಆರೆಸ್ಸೆಸ್ ನಂತಹ ದೇಶಭಕ್ತ ಸಂಘಟನೆಯನ್ನ ನಿಷೇಧಿಸಿದ್ದು, ಎಪ್ಪತ್ತರ ದಶಕದಲ್ಲಿ ಸಿಖ್ಖರ ಮೇಲಾದ ದಾಳಿಗಳನ್ನು ನೆನಪಿಸುವಂತಿವೆ.ಒಂದು ಘಟನೆಗೆ ಸಂಪೂರ್ಣ ಜನಾಂಗವನ್ನೇ  ಹೊಣೆಯಾಗಿ ಮಾಡುವುದು,ಒಂದು ಸಿದ್ಧಾಂತವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ತಪ್ಪು. ನೆಗಡಿಯಾದರೆ ನೆಗಡಿಗೆ ಮದ್ದನ್ನು ಪ್ರಯೋಗಿಸಬೇಕೇ ಹೊರತು  ಮೂಗನ್ನು ಕುಯ್ಯುವುದು ಮೂರ್ಖತನವಲ್ಲವೇ?

“ಎಲ್ಲವೂ ವಿಫಲವಾದಾಗ, ತಾಳ್ಮೆಯು ಸಫಲವಾಗುವುದು” ಎಂಬಂತೆ ನಾನು ಪ್ರತಿಯೊಬ್ಬ  ಪ್ರಜ್ಞಾವಂತ ಭಾರತೀಯನಲ್ಲಿ ವಿನಂತಿಸಿ ಕೊಳ್ಳುವುದೇನೆಂದರೆ…ನಮ್ಮ ಗುರಿ ದೇಶದ ಸಮಗ್ರತೆ ,ಏಕತೆ, ಸ್ವಚ್ಛ, ಸಮೃದ್ಧ, ಶ್ರೇಷ್ಠ, ಸುಸಂಸ್ಕೃತ ಭಾರತದ ನಿರ್ಮಾಣವೇ ಹೊರತು ಸಹನೆಗೆಟ್ಟು ವರ್ತಿಸುವುದಲ್ಲ. ಸ್ವಾತಂತ್ರ್ಯಕ್ಕೋಸ್ಕರ ಇನ್ನೂರು ವರ್ಷಗಳ ಕಾಲ ಕಾದವರು ನಾವು……ಇನ್ನು ಇದೇನು ಮಹಾ!!…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments