ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 7, 2015

2

ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಲೇಖನ – ಡಾ.ಅನಂತರಾಮ ಭಟ್ಟರ ದುರಂತ ಕಥನ

‍ನಿಲುಮೆ ಮೂಲಕ

ಮಹಾಪಂಡಿತ ರಾಹುಲ ಸಾಂಕೃತ್ಯಾಯನ (1893-1963)ರ ಬದುಕು ಮತ್ತು ಬರಹ ಒಬ್ಬ ಲೇಖಕನ ಸಾಧ್ಯತೆಗಳ ಬಗ್ಗೆ ಇರುವ ಇದುವರೆಗಿನ ಕಲ್ಪನೆಗಳಿಗೊಂದು ದೊಡ್ಡ ಸವಾಲು. ಈ ಜಗತ್ತು ಕಂಡ ಅಪರೂಪದ ‘ಮಹಾಕಾವ್ಯಾತ್ಮಕ’ ವ್ಯಕ್ತಿತ್ವ ಅವರದು. ಧರ್ಮ-ದರ್ಶನ, ರಾಜಕೀಯ, ಇತಿಹಾಸ, ಪುರಾತತ್ವ, ಸಾಹಿತ್ಯ ಭಾಷೆ, ಸಂಶೋಧನೆ-ಇತ್ಯಾದಿ ನಾನಾ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆಯನ್ನಿತ್ತ ರಾಹುಲ್ ಒಂದು ಮಹಾವಿಸ್ಮಯ. ಅವರಿಗೆ ಮುವತ್ತಾರು ಭಾಷೆಗಳು ತಿಳಿದಿದ್ದುವು. ನೂರೈವತ್ತಕ್ಕೂ ಮಿಕ್ಕಿ ಅವರ ಕೃತಿಗಳು ಪ್ರಕಟವಾಗಿದ್ದರೆ, ಅಪ್ರಕಟಿತ ಸಾಕಷ್ಟಿವೆ. ಒಬ್ಬ ವ್ಯಕ್ತಿಯಾಗಿ ಒಂದು ವಿಶ್ವವಿದ್ಯಾಲಯಕ್ಕೂ ಅಸಂಭವವೆನಿಸುವಂತೆ ನಾಲ್ಕು ಕೋಶಗ್ರಂಥಗಳನ್ನು ರಚಿಸಿದವರು ರಾಹುಲರು (ಶಾಸನ ಶಬ್ದಕೋಶ, ಟಿಬೇಟ್ ಹಿಂದಿಕೋಶ್, ಟಿಬೇಟ್ ಸಂಸ್ಕೃತಕೋಶ್, ರಾಷ್ಟ್ರ ಭಾಷಾಕೋಶ್). ತ್ರಿಪಿಟಕಗಳ ಹಾಗೂ ಬೌದ್ಧದಾರ್ಶನಿಕ ಕೃತಿಗಳ ಮಹಾನ್ ಸಂಪಾದಕರು. ‘ದರ್ಶನ ದಿಗ್ದರ್ಶನ’ ಅವರು ಬರೆದ ತತ್ವಶಾಸ್ತ್ರದ ಮೇರುಕೃತಿ. ಕಾಶಿಯ ವಿದ್ಯಾಪೀಠವೇ ಇವರ ಅಗಾಧ ಸಂಸ್ಕೃತ ಪಾಂಡಿತ್ಯಕ್ಕೆ ‘ಮಹಾಪಂಡಿತ’ ಎಂಬ ಬಿರುದನ್ನಿತ್ತಿದೆ. ಶ್ರೀಲಂಕಾ ಬೌದ್ಧ ವಿಶ್ವವಿದ್ಯಾಲಯ ‘ತ್ರಿಪಿಟಕಾಚಾರ್ಯ’ ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿತ್ತು. ಮಹಾನ್ ಪರ್ಯಟಕ, ಪುರಾತತ್ವವೇತ್ತ, ಸಾಹಿತ್ಯ ವಾಚಸ್ಪತಿ, ಪದ್ಮವಿಭೂಷಣ, ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಕೃತಿಗಳ ಸಂಖ್ಯೆ ಅಗಾಧ. 1994ರಲ್ಲಿ ಡೆಲ್ಲಿಯ ರಾಧಾಕೃಷ್ಣ ಪ್ರಕಾಶನವು ದೊಡ್ಡ ಗಾತ್ರದ ಐವತ್ತು ಖಂಡಗಳಲ್ಲಿ ರಾಹುಲರ ಕೃತಿಗಳನ್ನು ಪ್ರಕಟಿಸಿದೆ. ಆದರೆ, ಅಪ್ರಕಟಿತ ಇನ್ನೂ ಸಾಕಷ್ಟಿವೆ. ಖೇದದ ವಿಷಯವೆಂದರೆ ಪ್ರಕಟಿತ ಖಂಡಗಳಲ್ಲಿ ಹಲವು ಈಗ ಉಪಲಬ್ಧವಿಲ್ಲ.

ಪ್ರಸ್ತುತ ಲೇಖನ ಖಂಡ 2 ಭಾಗ 1 (ಜೀವನ ಚರಿತ್ರೆ ಮತ್ತು ಸಂಸ್ಮರಣ)ದ “ಜಿನ್‍ಕಾ ಮೈ ಕೃತಜ್ಞ್” ಮಾಲೆಯಲ್ಲಿ 34ನೇ ಲೇಖನ ಡಾ| ಅನಂತರಾಮ ಭಟ್ಟರ ದುರಂತ ಕಥನ. ಇದು ಪುಟ 685 ರಿಂದ 692ರಲ್ಲಿದೆ. ಅದರ ಪೂರ್ತಿ ಕನ್ನಡ ಅನುವಾದ ತಮ್ಮ ಮುಂದಿದೆ.

ಹಿಂದಿ ಮೂಲ: ಮಹಾಪಂಡಿತ ರಾಹುಲ ಸಾಂಕೃತ್ಯಾಯನ
ಕನ್ನಡಕ್ಕೆ : ಡಾ| ಜಿ. ಭಾಸ್ಕರ ಮಯ್ಯ

ಮಹಾಪಂಡಿತ ರಾಹುಲ ಸಾಂಕೃತ್ಯಾಯನಕೊಡವೂರು ಶ್ರೀ ಅನಂತರಾಮ ಭಟ್ಟರನ್ನು ನಾನು ಮೊದಲು ಭೇಟಿಯಾದದ್ದು 1928ನೆಯ ಇಸವಿಯಲ್ಲಿ. ಕೊಲೊಂಬೋದಲ್ಲಿ. ಒಬ್ಬ ಪಂಡಿತ ಭಿಕ್ಷು ನನ್ನೊಡನೆಂದ – ‘ನಮ್ಮಲ್ಲಿ ಜಂಬೂ ದ್ವೀಪದ ಒಬ್ಬ ಪಂಡಿತರು ಇದ್ದಾರೆ.’ ಇದನ್ನು ಕೇಳಿ ನಾನು ಅಲ್ಲಿಗೆ ಹೋದೆ. ಇಪ್ಪತ್ತು ವರ್ಷದ ಒಬ್ಬ ತರುಣನೊಂದಿಗೆ ನನ್ನ ಭೇಟಿಯಾಯ್ತು – ಅನಂತರಾಮ ಹುಟ್ಟಿದ್ದು ಫೆಬ್ರವರಿ 7, 1908. ಆತ ಸಂಸ್ಕೃತವನ್ನು ಮಾತೃಭಾಷೆಯ ಹಾಗೆ ಮಾತನಾಡುತ್ತಿದ್ದ. ಆನಂತರ ಪರಸ್ಪರ ಭೇಟಿಯಾಗುತ್ತಿದ್ದೆವು. ಅದು ಆಳವಾದ ಮೈತ್ರಿಯನ್ನೇ ಉಂಟುಮಾಡಿತು.

ಅನಂತರಾಮ ಮದ್ರಾಸಿನ ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯವರಾಗಿದ್ದರು.ಅವರ ಮಾತೃಭಾಷೆ ಕನ್ನಡ. ಮಾಧ್ವ ಸಂಪ್ರದಾಯದ ವೈಷ್ಣವ ಬ್ರಾಹ್ಮಣ. ಅವರು ಬಾಲ್ಯದಿಂದಲೇ ಸಂಸ್ಕೃತ ಓದಿದವರು. ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯ ಪಡೆದವರು. ಮೈಸೂರಿನಲ್ಲಿ ಓದು ಮುಗಿಸಿದ ನಂತರ ಅವರಿಗೆ ಅನ್ನಿಸಿದ್ದೇನೆಂದರೆ ಸಂಸ್ಕೃತ ವಿದ್ವಾಂಸನಿಗೆ ಮಾರುಕಟ್ಟೆಯಲ್ಲಿ ಯಾವ ಬೆಲೆಯೂ ಇಲ್ಲ. ಇಂಗ್ಲಿಷ್ ಓದಿದರೆ ಬೆಲೆ ಹೆಚ್ಚಾಗುತ್ತದೆ. ಇಂಗ್ಲಿಷ್ ಓದಿ ಮೆಟ್ರಿಕ್ ಪರೀಕ್ಷೆಗೆ ಕುಳಿತರು. ಆದರೆ ತೇರ್ಗಡೆಯಾಗಲಿಲ್ಲ. ಮುಂದಿನ ವರ್ಷವೂ ಇದೇ ಗತಿ ಎಂದು ಅನ್ನಿಸಿತು. ಯಾರೋ ಹೇಳಿದರು … ಸಿಲೋನಿನಲ್ಲಿ ನೇರವಾಗಿ ಲಂಡನ್ ಯುನಿವರ್ಸಿಟಿಯ ಪರೀಕ್ಷೆಗೆ ಕುಳಿತುಕೊಳ್ಳಲಿಕ್ಕಾಗುತ್ತದೆ. ಅದರ ಬೆಲೆ ಭಾರತೀಯ ಡಿಗ್ರಿಗಳಿಗಿಂತ ಹೆಚ್ಚು. ಹೇಗೋ ಮಾಡಿ ಅವರು ಸಿಲೋನಿಗೆ ಬಂದರು. ಸಿಲೋನಿನ ಮಹಾಸ್ಥವಿರ ಧರ್ಮಸ್ಕಂಧರನ್ನು ಭೇಟಿ ಮಾಡಿದರು. ಅವರು ಅನಂತರಾಮ ಅವರನ್ನು ತಮ್ಮ ಬಳಿ ಸೇರಿಸಿಕೊಂಡರು. ಮಹಾಸ್ಥವಿರರದ್ದು ಒಂದು ಸಣ್ಣ ವಿಹಾರ. ಅದರಲ್ಲಿ ನಾಲ್ಕಾರು ಭಿಕ್ಷುಗಳು ವಾಸಿಸುತ್ತಿದ್ದರು. ಭಟ್ಟರ ವಿದ್ಯೆಯ ಪೂರ್ಣ ಉಪಯೋಗ ಅಲ್ಲಿ ಆಗುತ್ತಿರಲಿಲ್ಲ. ಆದರೆ, ಅಲ್ಲಿ ಇರುವುದರಿಂದ ವಾಸ ಮತ್ತು ಊಟದ ಚಿಂತೆ ನೀಗಿತು. ಮಹಾಸ್ಥವಿರರು ಆಗಾಗ್ಗೆ ಒಂದು ನಾಲ್ಕು ಪುಟದ ಸಂಸ್ಕೃತದ ಪತ್ರಿಕೆ ಪ್ರಕಟಿಸುತ್ತಿದ್ದರು. ಭಟ್ಟರು ಅದರಲ್ಲಿ ಬರೆಯ ತೊಡಗಿದರು.

1928ರ ಕೊನೆಯಲ್ಲಿ ನಾನು ಟಿಬೇಟಿಗೆ ಹೊರಡುವ ತಯಾರಿಯಲ್ಲಿದ್ದೆ. ನನಗನ್ನಿಸಿತು; ಭಟ್ಟರು ವಿದ್ಯಾಲಂಕಾರ ವಿಹಾರಕ್ಕೆ ಬಂದರೆ ಅಲ್ಲಿ ಸಂಸ್ಕೃತ ಪಠಣ-ಪಾಠಣ ಸುಸೂತ್ರವಾಗಿ ನಡೆಯಬಲ್ಲುದು. ಅವರನ್ನು ಕೇಳಿದಾಗ ತಿಳಿದುಬಂದದ್ದೆಂದರೆ ಅವರು ಸ್ವಾವಲಂಬಿಯಾಗಿ ಓದಲು ಬಂದವರು ಹಾಗೂ ಇಷ್ಟರ ತನಕ ಯಾವುದೇ ಖಾಯಂ ನೌಕರಿ ಸಿಕ್ಕಿರಲಿಲ್ಲ.ಅವರಿಗೆ ವಿದ್ಯಾಲಂಕಾರ ಪರಿವೇಣದಲ್ಲಿ ವಾಸ ಮತ್ತು ಸಂಬಳದ ವ್ಯವಸ್ಥೆ ಮಾಡಿಸುವುದಾಗಿ ನಾನು ಹೇಳಿದೆ. ಅಂತೆಯೆ ನಾನೆಂದೆ – ‘ಮೆಟ್ರಿಕ್ ಮತ್ತು ಲಂಡನ್ನಿನ ಪರೀಕ್ಷೆಯ ಭ್ರಮೆಗೆ ಒಳಗಾಗಬೇಡ. ದಾರಿಕರ್ಚಿಗೆ ಸ್ವಲ್ಪ ದುಡ್ಡು ಒಟ್ಟು ಮಾಡಿಕೊಂಡು ಜರ್ಮನಿಗೆ ಹೋದರೆ ನೀನು 2-3 ವರ್ಷದಲ್ಲಿ ಪಿಎಚ್.ಡಿ. ಪಡೆಯುವೆ. ಅದರ ಬೆಲೆ ಲಂಡನ್ನಿನ ಬಿ.ಎ.ಗಿಂತ ಹೆಚ್ಚು’. ಅವರು ವಿದ್ಯಾಲಂಕಾರ ವಿಹಾರಕ್ಕೆ ಸೇರಿಕೊಂಡರು.

ನಾನು ಟಿಬೇಟಿನಿಂದ ಬಹಳ ಬೇಗ ವಾಪಾಸಾದೆ. ಅಂದರೆ ಜೂನ್ 1930ರ ಮೂರನೆಯವಾರ ಶ್ರೀಲಂಕೆಗೆ ಬಂದೆ. ಭಟ್ಟರು ಅಲ್ಲಿ ಪಾಠ ಮಾಡುತ್ತಾ ಇದ್ದರು. ನನಗೆ ಬಹಳ ಖುಷಿಯಾಯಿತು. ನಾನು ಹಿಂತಿರುಗುತ್ತಲೇ ಭಿಕ್ಷುವಾದೆ. ಅಧ್ಯಾಪನ ಕಾಯಕವೂ ಸಾಗಿತ್ತು. ನಾನು ಭಟ್ಟರಿಗೆ ಹೇಳಿದೆ – ‘ನೀವು ಈ ಪರೀಕ್ಷೆಗಳ ಗೊಂದಲಕ್ಕೆ ಬೀಳಬೇಡಿ’. ಆದರೆ, ಅವರು ಈ ವರ್ಷವೂ ಲಂಡನ್ನಿನ ಮೆಟ್ರಿಕ್ ಪರೀಕ್ಷೆಗೆ ಕುಳಿತರು. ಪಾಸಾಗಲಿಲ್ಲ. ಈಗ ನಾನು ಹೇಳಿದ್ದನ್ನು ಕಿವಿಗೊಟ್ಟು ಕೇಳತೊಡಗಿದರು. ನನಗೆ ಜರ್ಮನಿಯಲ್ಲಿ ಕೆಲವು ಮಿತ್ರರಿದ್ದಾರೆ. ಮಾರಾವುರ್ಗ್‍ನ ಸಂಸ್ಕೃತ ಅಧ್ಯಾಪಕ ರುಡೋಲ್ಫ್ ಓಡೊ ನನಗೆ ಸಿಲೋನಿನಲ್ಲಿ ಸಿಕ್ಕಿದ್ದರು. ನಮ್ಮಿಬ್ಬರ ಮಿತ್ರತ್ವ ಗಾಢವಾಗಿ ಬೆಳೆದಿತ್ತು. ನಾನು ಅವರಿಗೆ ಬರೆದೆ – “ಇವರು ಸಂಸ್ಕೃತದ ಬಹಳ ಶ್ರೇಷ್ಠ ವಿದ್ವಾಂಸರು. ಜರ್ಮನಿಗೆ ವಿಶೇಷ ಅಧ್ಯಯನ ಮಾಡಲು ಬರಲು ಇಚ್ಛಿಸುತ್ತಾರೆ. ಅಲ್ಲಿ ಅವರಿಗೆ ಅಧ್ಯಯನದ ಜತೆಗೆ ಜೀವನೋಪಾಯದ ವ್ಯವಸ್ಥೆ ಮಾಡಿಕೊಡಬಹುದೆ?” ಅವರು ತಮ್ಮ ಮಿತ್ರರನ್ನು ಕೇಳಿದರು. ಟುವಿಂಗ್‍ನ ಸಂಸ್ಕೃತಾಧ್ಯಾಪಕ ‘ನಾವು ಫೀಸನ್ನು ಮಾಫಿ ಮಾಡುತ್ತೇವೆ. ಹಾಗೂ 70-80 ಮಾರ್ಕ್ ಮಾಸಿಕ ಸ್ಟೈಫೆಂಡ್ ಕೊಡುವ ವ್ಯವಸ್ಥೆ ಮಾಡುತ್ತೇವೆ’ ಎಂದು ಆಶ್ವಾಸನೆ ಕೊಟ್ಟರು. ಅಂತೂ 22 ವರ್ಷದ ಅನಂತರಾಮುಗೆ ಜರ್ಮನಿಯಲ್ಲಿ ವ್ಯವಸ್ಥೆಯಂತೂ ಆಯಿತು. ಸರಿ ಲಂಕೆಯಿಂದ ಜರ್ಮನಿಗೆ ತಲುಪುವುದು ಹೇಗೆ? ಪಾಸ್‍ಪೋರ್ಟ್ ಪಡೆಯಲು ಅವರು ಭಾರತಕ್ಕೆ ಹೋಗಬೇಕಾಗಿತ್ತು. ಅವರು ಭಾರತಕ್ಕೆ ಹೋದರು. ಪಾಸ್‍ಪೋರ್ಟ್ ಪಡೆಯುವಲ್ಲಿ ಸಫಲರಾದರು. ಆದರೆ ಮಗಳಿಗೆ ಅನಿಷ್ಠವಾಗುವ, ತನ್ನ ಅಳಿಯ ಸಮುದ್ರ ದಾಟಿ ಜಾತಿಯಿಂದ ಬಹಿಷ್ಕಾರ ಹೊಂದುವ, ಪರಿಸ್ಥಿತಿಗೆ ಒಳಗಾಗುವುದಕ್ಕೆ ಧರ್ಮಭೀರು ಮಾವ ಒಪ್ಪಲಿಲ್ಲ. ಅಂತೂ, ಹೇಗೊ ಕೆಲವು ತಿಂಗಳುಗಳ ನಂತರ ಭಟ್ಟರು ಸಿಲೋನಿಗೆ ವಾಪಸ್ಸಾದರು.

ಜರ್ಮನಿ ತಲುಪಲು ಅವರ ಹತ್ತಿರ ಸಾಕಷ್ಟು ಹಣ ಇರಲಿಲ್ಲ. ಅದೇ ಸಮಯ ನನಗೆ ಯಾವುದಕ್ಕೋ 150 ರೂ.ದೊರೆತಿತ್ತು. ಅದನ್ನು ಸೇರಿಸಿ ನಾನು ಭಟ್ಟರಿಗೆ ಪಂಪ್ ಮಾಡಲು ತೊಡಗಿದೆ. ಲಂಡನ್ನಿನ ಡಿಗ್ರಿ ಬಹಳ ದೂರದ ಮಾತು. ಜರ್ಮನಿಯದ್ದು ನಿಜಕ್ಕೂ ಆಕರ್ಷಕ. ಆದರೆ, ಸಮುದ್ರ ದಾಟಿ ಧರ್ಮದಿಂದ ಪತಿತವಾಗುವ ಪ್ರಶ್ನೆಯಿತ್ತು. ಲಂಕೆಗೂ ಸಮುದ್ರದಾಟಿಯೇ ಬರಬೇಕಾಗಿತ್ತು; ಆದರೆ ಅದು ಮನೆಬಾಗಿಲ ಹಾಗಿನ ವಿಚಾರವಾಗಿತ್ತು. ಅವರೆಂದೂ ವಿದೇಶಕ್ಕೆ ಹೋಗಿರಲಿಲ್ಲ. ಸಂಸ್ಕೃತದ ವಿದ್ಯಾರ್ಥಿಯಾಗಿದ್ದುದರಿಂದ ಕೂಪಮಂಡೂಕತನ ಸಾಕಷ್ಟು ಇತ್ತು. ಪರದೇಶಕ್ಕೆ ಲಕ್ಷ್ಮಿಯ ಕೃಪೆಯಿಲ್ಲದೆ ಹೋಗುವುದು ಅತ್ಯಂತ ಅಪಾಯಕಾರಿ. ನನ್ನೆಲ್ಲಾ ಯಾತ್ರಾನುಭವ ಜ್ಞಾನವನ್ನೆಲ್ಲಾ ಒಟ್ಟುಗೂಡಿಸಿ ಹೇಳಿದೆ :- ಮನುಷ್ಯ ಸಮುದ್ರಕ್ಕೆ ಬಿದ್ದರೆ ಅವನನ್ನು 99ಶೇ. ಉಳಿಸುವವರು ಯಾರೂ ಇರುವುದಿಲ್ಲ. ನೀವು ಏಕೆ ನೂರಕ್ಕೆ ನೂರು ಶೇಕಡಾ ಯೋಚಿಸುತ್ತೀರಿ? ನೀವು ಸಮುದ್ರಕ್ಕೋ ನಿರ್ಜನ ಮರುಭೂಮಿಗೋ ಹೋಗುತ್ತಿಲ್ಲ. ಮನುಷ್ಯರಿರುವ ಜಾಗಕ್ಕೆ ತಾನೆ ನೀವು ಹೋಗುತ್ತಿದ್ದೀರಿ. ಮನುಷ್ಯತ್ವ ಎಲ್ಲ ಸ್ಥಳಗಳಲ್ಲೂ ಮನುಷ್ಯನನ್ನು ರಕ್ಷಿಸಲು ಸಿದ್ಧವಾಗಿರುತ್ತದೆ” ನಾನು ಅವರಿಗೆ ಯುರೋಪಿಗೆ ಹೋಗಲು ಹೇಳುತ್ತಿದ್ದೆ; ಸತ್ಯವಿಚಾರವೆಂದರೆ ನಾನು ಈವರೆಗೆ ಯುರೋಪಿಗೆ ಹೋಗಿರಲಿಲ್ಲ. ಹೀಗೆ ನಿಧಾನವಾಗಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆ.

ಊಟ ತಿಂಡಿಯ ಪ್ರಶ್ನೆ ಬಂತು. ವಿದೇಶದಲ್ಲಿ ಯಾವುದೇ ಮನುಷ್ಯನ ಹತ್ತಿರ ಬೇಕಾದಷ್ಟು ಹಣ ಇದ್ದರೆ ಆತ ತನ್ನ ಸಸ್ಯಾಹಾರದ ನಿಯಮಕ್ಕೆ ಬದ್ಧನಾಗಿಯೇ ಬದುಕಬಹುದು. ಆದರೆ, ಭಟ್ಟರಂಥವರ ಪರಿಸ್ಥಿತಿ ಸಸ್ಯಾಹಾರಕ್ಕೆ ಪೂರಕವಾಗಿಲ್ಲ ನಾನೆಂದೆ – “ಅಲ್ಲಿಗೆ ಹೋದ ಮೇಲೆ ವೈಷ್ಣವ ಪಂಥದ ಗೀಳಿಗೆ ಒಳಗಾಗಬೇಡ. ಮಾಂಸ ತಿನ್ನಲು ಶುರುಮಾಡು. ಇಲ್ಲಿಂದಲೇ ಮೊಟ್ಟೆ ತಿನ್ನಲು ಶುರುಮಾಡು”. ಪ್ರಾಯಃ ಅವರು ಶುರುಮಾಡಿದರು. ಎರಡು ವರ್ಷಗಳ ನಂತರ ಅಂದರೆ 1933ರಲ್ಲಿ ನಾನು ಇಂಗ್ಲೆಂಡಿನಲ್ಲಿರುವಾಗ ಅವರ ಪತ್ರದಿಂದ ತಿಳಿದುಬರುತ್ತಿತ್ತು – ‘ಹೆಂಡತಿಯನ್ನು ಮಾರಿಯಾದರೂ ನಾನು ಮೊಟ್ಟೆ ತಿನ್ನಲು ತಯಾರು”. ಆದರೆ, ಇನ್ನೂ ಮಾಂಸದ ತನಕ ತಲುಪಿರಲಿಕ್ಕಿಲ್ಲ.

ಯುರೋಪಿಗೆ ಹೋಗಲು ಬಟ್ಟೆ ಬರೆಗಳ ಅವಶ್ಯಕತೆಯಿತ್ತು. ಅವರ ಹತ್ತಿರ ಕುರ್ತಾ ಧೋತಿ ಇತ್ತು. ಸೂಟು ಹೊಲಿಸಲು 150 ರೂಪಾಯಿ ಬೇಕಾಗುತ್ತಿತ್ತು. ನಾನು ಟಿಬೇಟಿನಿಂದ ಬರುವಾಗ ಒಂದು ಬೆಲೆ ಬಾಳುವ ಉಲ್ಲನ್ ಕ್ಲಾತ್ ತಂದಿದ್ದೆ. ಭಟ್ಟರು ಅಂಥ ಫ್ಯಾಶನ್ ಪ್ರಿಯರೇನಲ್ಲ. ಅದರಿಂದಲೇ ಕೊಲೊಂಬೋದ ದರ್ಜಿಯ ಬಳಿ ಕೋಟು ಪ್ಯಾಂಟ್ ಹೊಲಿಸಿದೆ. ನಾನೆಂದೆ – ‘ನೋಡವುದಕ್ಕೆ ಅಷ್ಟೇನೂ ಚಂದ ಕಾಣಿಸದಿದ್ದರೂ, ಈ ಸೂಟು ಇಪ್ಪತ್ತು ವರ್ಷಕ್ಕೆ ಸಾಕು. ಜರ್ಮನಿಯ ಮೂಳೆ ಕೊರೆಯುವ ಚಳಿಯಲ್ಲಿ ಇದರಿಂದ ಆಗುವಷ್ಟು ಅನುಕೂಲ 400 ರೂಪಾಯಿ ಸೂಟಿನಿಂದಲೂ ಆಗುವುದಿಲ್ಲ.” ಒಂದು ಫ್ರಾನ್ಸಿನ ಹಡಗು ಕಂಪೆನಿಯಿಂದ 250 ರೂಪಾಯಿಯಲ್ಲಿ ‘ಮೋರ್‍ಸೇಯಿ’ಗೆ ಟಿಕೇಟ್ ಸಿಕ್ಕಿತು. ಸ್ವಲ್ಪ ಹಣ ಜೇಬಿನಲ್ಲಿತ್ತು. ಟುವಿಂಗ್‍ನ ತಲುಪಿದ ಮೇಲೆ ಸ್ವಲ್ಪ ಅಚ್ಚುಕಟ್ಟು ಮಾಡಿದರೆ ಒಂದು ತಿಂಗಳು ಕಳೆಯಬಹುದಿತ್ತು.

ಅಂತೂ ನಾನು ಅನಂತರಾಮನನ್ನು ಸಮುದ್ರಕ್ಕೆ ದೂಡಿದೆ. ಅವರು ಟುವಿಂಗನ್ ತಲುಪಿ ಪ್ರೊಫೆಸರ್ ಮಿತ್ರರಿಗೆ ಸಂಸ್ಕೃತ ಸಂಶೋಧನೆಗೆ ಸಹಾಯ ಮಾಡುತ್ತಾ ಸ್ವತಃ ಡಾಕ್ಟರೇಟ್‍ಗೆ ತಯಾರಿ ನಡೆಸತೊಡಗಿದರು. ಪ್ರೊಫೆಸರೊಡನೆ ಅವರು ಸಂಸ್ಕೃತದಲ್ಲೇ ಸಂಭಾಷಿತಬಲ್ಲವರಾಗಿದ್ದರು. ಇದು ಅವರನ್ನೆಲ್ಲಾ ಹೆಚ್ಚು ಪ್ರಭಾವಿಸಿತು. 1932ರನ್ನು ನಾನು ಇಂಗ್ಲೆಂಡಿನಲ್ಲಿರುವಾಗಲೇ ಅವರ ಒಂದು ಪತ್ರದಿಂದ ತಿಳಿದು ಬಂದ ವಿಚಾರ – ಅವರು ಡಾಕ್ಟರೇಟ್‍ಗೆ ಆರಿಸಿಕೊಂಡ ವಿಚಾರ 10 ವರ್ಷಗಳಲ್ಲಿ ಮುಗಿಯುವುದೂ ಕಷ್ಟವಿತ್ತು. ನಾನು ಪತ್ರ ಬರೆದೆ – “ನೀನು ಹೀಗೇಕೆ ಮಾಡಿದಿ? ಒಂದು-ಎರಡು ವರ್ಷದೊಳಗೆ ಪಿಎಚ್.ಡಿ. ಮುಗಿಸಲು ಸಾಧ್ಯವಾಗುವ ವಿಷಯ ತೆಗೆದುಕೊಳ್ಳಬೇಕಿತ್ತು. ಸಂಶೋಧನೆಯ ಕೆಲಸ ಜೀವನದುದ್ದಕ್ಕೂ ಮಾಡಲಿಕ್ಕಿದೆ. ಅದನ್ನು ಮತ್ತೆ ಮಾಡಬಹುದಿತ್ತು”. ಅಂತೂ ಅದೇ ರೀತಿ ಮಾಡಿ ಭಟ್ಟರು ಟುವಿಂಗ್‍ನ ಪಿಎಚ್.ಡಿ. ಪಡೆದರು. ಭಾಷೆ ಕಲಿಯುವ ಆಸಕ್ತಿ ಅವರ ಸ್ವಾಭಾವಿಕ ಪ್ರವೃತ್ತಿಯೇ ಆಗಿತ್ತು. ಹಾಗಾಗಿ ಜರ್ಮನ್ ಭಾಷೆಯ ಮೇಲೆ ಬಹುಬೇಗನೆ ಹಿಡಿತ ಸಾಧಿಸಿದರು. ಅನಂತರ ಅರ್ಥಶಾಸ್ತ್ರದಲ್ಲಿ ಅವರು ಡಿ.ಎಸ್ಸಿ ಪದವಿ ಗಳಿಸಿದರು. ಅವರ ಪರಿಚಯದವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅವರ ‘ಯೋಗ್ಯತೆ’ ಪ್ರಚಾರಕ್ಕೆ ಬರತೊಡಗಿತು. ಭಟ್ಟರು ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಶಾಸ್ತ್ರದ ಪ್ರೊಫೆಸರ್ ಆದರು. ಇವರ ಅಂತಃಸತ್ವ ಇನ್ನೊಂದು ಕ್ಷೇತ್ರದಲ್ಲೂ ಬೆಳಗಿತು. ಅವರು ಭಾಷಣ ಮಾಡುತ್ತಲೇ ಜರ್ಮನ್ ಭಾಷೆಯಲ್ಲಿ ಉತ್ಕೃಷ್ಟ ಲೇಖನಗಳನ್ನೂ ಬರೆಯತೊಡಗಿದ್ದರು. ಭಾರತದ ಪರಿಚಯಕ್ಕೆ ಸಂಬಂಧಿಸಿದ ಸಾಕಷ್ಟು ಅಂಕಿಅಂಶಗಳಿರುವ ಅವರ ಒಂದು ಪುಸ್ತಕ ಲಕ್ಷಗಟ್ಟಲೆ ಪ್ರತಿಗಳಲ್ಲಿ ಮುದ್ರಣ ಕಂಡಿತು.ಹಣ ಮತ್ತು ಕೀರ್ತಿ ಎರಡೂ ಅವರ ಕಾಲಿಗೆ ಎರಗಿದವು.

ಜರ್ಮನಿಯಲ್ಲಿ ಹಿಟ್ಲರ್‍ನ ರಣಕಹಳೆ ಮೊಳಗಿತು. ಭಾರತದಿಂದ ಹೊರಡುವಾಗ ಭಟ್ಟರಿಗೆ ರಾಜಕೀಯದ ಜ್ಞಾನ ಏನೇನೂ ಇರಲಿಲ್ಲ. ಹೆಚ್ಚೆಂದರೆ ‘ನಮ್ಮ ದೇಶದ ಗುಲಾಮಗಿರಿ ನನಗೆ ಏನೇನೂ ಇಷ್ಟವಾಗುವುದಿಲ್ಲ’ – ಎಂದು ಹೇಳುವಷ್ಟು ಮಾತ್ರ. ಉದಯದಿಂದ ಅಸ್ತದ ತನಕ ಎಲ್ಲೆಲ್ಲೂ ಇಂಗ್ಲಿಷ್‍ರದ್ದೇ ಸಾಮ್ರಾಜ್ಯವೆಂದು ಭಟ್ಟರು ತಿಳಿದಿದ್ದರು. ಇಂಗ್ಲಿಷ್‍ರ ಎದುರಿಗೆ ಇಡೀ ಜಗತ್ತಿನ ರಾಷ್ಟ್ರಗಳು ಕಸಕ್ಕೆ ಸಮಾನ. ತನ್ನೆದುರಿಗೆ ಭಟ್ಟರು ಮಲಗಿದ್ದ ಜರ್ಮನಿಯು ಎದ್ದು ನಿಂತಿದ್ದನ್ನು ಕಂಡರು. ಅದರ ವಿಶಾಲ ಶರೀರದ ಎದುರುಗಡೆ ಇಂಗ್ಲಿಷ್‍ರು ಕುಬ್ಜರಾಗಿ ಕಾಣಿಸತೊಡಗಿದರು. ಹೆಜ್ಜೆ ಹೆಜ್ಜೆಗೂ ಹಿಟ್ಲರ್ ಅವರಿಗೆ ಒದೆಕೊಡುತ್ತಿದ್ದ. ಇಂಗ್ಲಿಷ್‍ರು ಬಾಲ ಮುದುಡಿಕೊಂಡು ಕುಂಯಿಗುಡುತ್ತಿದ್ದರು. ಭಟ್ಟರಿಗೂ ತನ್ನ ಗುಲಾಮ ದೇಶದ ಚಿಂತೆ ಕಾಡಿತು. ಅವರ ಮೇಲೆ ದೇಶಭಕ್ತಿಯ ಅಮಲೇರಿತು.

ಎರಡನೆಯ ಮಹಾಯುದ್ಧ ಆರಂಭವಾಯಿತು. ಜರ್ಮನಿಯ ವಿಜಯವಾಹಿನಿ ಇಡೀ ಯುರೋಪನ್ನು ತುಳಿದು ಹಾಕಿತು. ಭಟ್ಟರು ಆಗ ಕೇವಲ ಪ್ರೊಫೆಸರ್ ಮಾತ್ರವಲ್ಲ; ಓರ್ವ ಕುಶಲ ಪತ್ರಕರ್ತರೂ ಆಗಿದ್ದರು.

ನೇತಾಜಿ ಕಲ್ಕತ್ತಾದ ತಮ್ಮ ಮನೆಯಿಂದ ಮಾಯವಾದರು. ತಲೆಯನ್ನು ಅಂಗೈಯಲ್ಲಿ ಇಟ್ಟುಕೊಂಡು ಜರ್ಮನಿ ತಲುಪಿದರು. ಹಿಟ್ಲರನು ಇಂಗ್ಲಿಷರ ವಿರುದ್ಧ ಯಾವುದೇ ಅಸ್ತ್ರ ಉಪಯೋಗಿಸಲೂ ತಯಾರಿದ್ದನು. ಅವನು ನೇತಾಜಿಯನ್ನು ಭಾರತದ ‘ಪುರೇರ್’ (ಸರ್ವೇ ಸರ್ವಾ ನೇತಾರ) ಎಂದು ಸ್ವೀಕರಿಸಿದನು. ಅದಕ್ಕನುಸಾರವಾಗಿಯೇ ಅವರಿಗೆ ಗೌರವಾದರಗಳನ್ನು ನೀಡಲಾಯಿತು. ನೇತಾಜಿ ಬರ್ಲಿನ್‍ನಿಂದ ತಮ್ಮ ವಿಚಾರಗಳನ್ನು ಪ್ರಚಾರ ಮಾಡಲು ಒಂದು ಪತ್ರಿಕೆಯನ್ನು ಹೊರ ತರಲು ಇಚ್ಚಿಸಿದರು. ಅದಕ್ಕೆ ಇಂಗ್ಲಿಷ್ ಹಾಗೂ ಜರ್ಮನಿ ಭಾಷೆಯ ಮೇಲೆ ಪೂರ್ಣ ಪ್ರಭುತ್ವವಿರುವ ಸಂಪಾದಕನೊಬ್ಬನ ಅಗತ್ಯವಿತ್ತು. ಆಗ ಕೊಡವೂರು ಅನಂತರಾಮ ಭಟ್ಟರ ಹೆಸರು ಅವರ ಕಿವಿಗೆ ಬಿತ್ತು. ಅವರನ್ನೇ ಪತ್ರಿಕೆಯ ಮುಖ್ಯ ಸಂಪಾದಕರನ್ನಾಗಿ ಆರಿಸಿಕೊಳ್ಳಲಾಯಿತು. ಅನಂತರಾಮ ಭಟ್ಟರು ಆ ಮೂಲಕ ನೇತಾಜಿಯ ಅತ್ಯಂತ ನಿಕಟವರ್ತಿಗಳಾದರು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅವರು ‘ಆಜಾದ್ ಹಿಂದ್’ ಪತ್ರಿಕೆಯನ್ನು ಅತ್ಯಂತ ಸಮರ್ಪಕವಾಗಿ ಮನ್ನಡೆಸಿದರು. ಬರ್ಲಿನ್‍ನ ವಿಂಟೇನ್ ಬರ್ಗ್ ಪ್ಲಾಜಾ 2-111ರ ವಿಶಾಲ ಕಟ್ಟಡದಲ್ಲಿ ಪ್ರೊಫೆಸರ್ ಹಾಗೂ ಸಂಪಾದಕರಾದ ಕೆ.ಎ. ಭಟ್ಟರ ಕಛೇರಿಯಿತ್ತು.

ನೇತಾಜಿಯವರ ಅಗತ್ಯತೆ ಪೂರ್ವದ ಕಡೆಗೆ ಅತ್ಯವಶ್ಯವಾದ ಕಾಲ ಬಂತು. ಯಾವ ರೀತಿ ಪವಾಡ ಸದೃಶವಾಗಿ ನೇತಾಜಿ ಭಾರತದಿಂದ ಅಂತರ್ಧಾನರಾಗಿ ಬರ್ಲಿನ್‍ಗೆ ಬಂದರೊ ಅದೇ ರೀತಿ ಬರ್ಲಿನ್‍ನಿಂದ ಮಲಯಾ ತಲುಪಿದರು. ಭಟ್ಟರು ಬರ್ಲಿನ್‍ನಲ್ಲಿ ಅವರ ಕೆಲಸವನ್ನು ನಿರ್ವಹಿಸುತ್ತಿದ್ದರು. 30 ಜೂನ್, 1943 ಡಿ ಹೋಫ್ಟ್ ಶಿಫ್ಟಾ ಲಾಯಿಟುಂಗ್ ‘ಆಜಾದ್ ಹಿಂದ್’ ಬರ್ಲಿನ್ ವ 85 ಅಖಡೆನ್ ಸ್ಟಾನೋಲಿ 2’ ಮುಹರು ಹೇಳುವ ಪ್ರಕಾರ ಆ ಕಾಲದಲ್ಲಿ ಭಟ್ಟರು ಓರ್ವ ಗೌರವಾನ್ವಿತ ಸಂಪಾದಕರಾಗಿ ಬರ್ಲಿನ್ನಿನಲ್ಲಿ ಇದ್ದರು.

ಜರ್ಮನಿ ಸಂಪೂರ್ಣವಾಗಿ ಪರಾಜಯ ಹೊಂದುತ್ತದೆಂದು ಯಾರಿಗೆ ತಾನೆ ಗೊತ್ತಿತ್ತು? ಹಿಟ್ಲರ್ ಹುಚ್ಚುನರಿ ಊರಿನೆಡೆಗೆ ಓಡುವಂತೆ ರಷ್ಯಾದ ಕಡೆಗೆ ಧಾವಿಸಿದ. ಅದರ ಪರಿಣಾಮ ಸರ್ವನಾಶ. ಜರ್ಮನಿ ಶಸ್ತ್ರ ಸನ್ಯಾಸ ಮಾಡುವಾಗ ಭಟ್ಟರು ಅಲ್ಲಿಯೇ ಇದ್ದರು. ಅವರು ‘ಆಜಾದ್ ಹಿಂದ್’ ಮೂಲಕ ಮಿತ್ರರಾಷ್ಟ್ರಗಳ ವಿರುದ್ಧ ಬಹಳಷ್ಟು ಬರೆಯುತ್ತಿದ್ದರು. ಅವರನ್ನು ಮಿತ್ರರಾಷ್ಟ್ರಗಳು ಕ್ಷಮಿಸುವುದು ಸಾಧ್ಯವೇ ಇರಲಿಲ್ಲ. ಈಗ ಭಟ್ಟರು ಹಳೆಯ ಕಾಲದ ಸಂಸ್ಕೃತಪಂಡಿತರಾಗಿರಲಿಲ್ಲ. 17 ವರ್ಷ ಜರ್ಮನಿಯಲ್ಲಿರುತ್ತಾ ರಾಜಕೀಯದ ವರಸೆಗಳನ್ನು, ಪಟ್ಟುಗಳನ್ನು ಚೆನ್ನಾಗಿ ತಿಳಿದಿದ್ದರು. ಯುರೋಪಿಯನ್ ದೇಶಗಳ ಸಂಪೂರ್ಣ ಜ್ಞಾನ ಅವರಿಗಿತ್ತು. ಈಗ ತನ್ನನ್ನು ರಕ್ಷಿಸಿಕೊಳ್ಳಲು ಅವರು ಏನನ್ನಾದರೂ ಮಾಡಲೇ ಬೇಕಿತ್ತು. ಅವರು ಬರ್ಲಿನ್‍ನಿಂದ ಬಹುದೂರ ಇರುವ ಬವೇರಿಯಾ ಪ್ರದೇಶಕ್ಕೆ ಹೋದರು. ಅಲ್ಲಿ ಅವರು ತಮ್ಮನ್ನು ಓರ್ವ ಜಿಪ್ಸಿ (ರೋಮನ್) ಎಂಬುದಾಗಿ ಪರಿಚಯಿಸಿಕೊಂಡು ಓರ್ವ ರೈತನ ಬಳಿ ಕೆಲಸಕ್ಕೆ ಸೇರಿಕೊಂಡರು. ಮನುಷ್ಯ ತನ್ನ ಜ್ಞಾನವನ್ನು ಮುಚ್ಚಿಟ್ಟು ಅಜ್ಞಾನಿಯ ರೂಪವನ್ನು ಧರಿಸಬಲ್ಲ; ಏಕೆಂದರೆ, ಮೊದಲು ಆತ ಅಜ್ಞಾನಿಯಾಗಿದ್ದ. ಆದರೆ ಅಜ್ಞಾನಿಯೋರ್ವ ಜ್ಞಾನಿಯ ವೇಷ ಧರಿಸುವುದು ಸಾಧ್ಯವಿಲ್ಲ. ಆದರೆ, ಧಾರ್ಮಿಕ ಕ್ಷೇತ್ರದಲ್ಲಿ ಇದಕ್ಕೆ ಅಪವಾದ ಖಂಡಿತವಾಗಿಯೂ ಸಿಗುತ್ತದೆ! ಭಟ್ಟರು ಕುಳ್ಳರೂ, ಆರೋಗ್ಯಪೂರ್ಣರೂ ಹಾಗೂ ತೆಳ್ಳಗಿನ ಶರೀರವುಳ್ಳವರೂ ಆಗಿದ್ದರು. ಯುರೋಪಿನವರ ಹೋಲಿಕೆಯಲ್ಲಿ ಅವರ ಬಣ್ಣ ಕಪ್ಪು; ನಮ್ಮ ದೃಷ್ಟಿಯಲ್ಲಿ ಗೋಧಿ ಬಣ್ಣ. ಜಿಪ್ಸಿಗಳು ಹಲವಾರು ಶತಮಾನಗಳಿಗೂ ಮುಂಚೆ ಭಾರತದಿಂದ ಯುರೋಪಿಗೆ ನಡೆದಿದ್ದರು. ಶತಮಾನಗಳ ಪ್ರಭಾವ ಇಷ್ಟಂತೂ ಖಂಡಿತಾಯಿದೆ; ಏನೆಂದರೆ ನಾವು ಭಾರತೀಯರು ಯಾರನ್ನು ಕಪ್ಪೆಂದು ಕರೆಯುತ್ತೇವೋ ಅಂತವರು ಅಲ್ಲಿ ಯಾರೂ ಇಲ್ಲ. ನಮ್ಮಲ್ಲಿಗೆ ಬಂದರೆ ನಾವು ಅವರನ್ನು ಬಿಳಿಯರು ಎನ್ನುತ್ತೇವೆ. ಆದರೆ, ಯುರೋಪಿನವರು ಅವರನ್ನು ಕರಿಯರೆಂದೇ ತಿಳಿಯುತ್ತಾರೆ. ಜಿಪ್ಸಿ ತರುಣಿಯರು ತಮ್ಮ ಸೌಂದರ್ಯಕ್ಕೆ ಅಲ್ಲಿ ಪ್ರಖ್ಯಾತರು; ಆದರೆ, ಅವರ ಕೂದಲು ಮಾತ್ರ ಇದ್ದಲಿನಷ್ಟೇ ಕಪ್ಪು. ಬವೇರಿಯಾದ ಹಳ್ಳಿಯಲ್ಲಿ 36 ವರ್ಷದ ಈ ಯುವಕ ಜಿಪ್ಸಿಯಲ್ಲ; ಬೇರೆ ಯಾವುದೊ ಜಾತಿಯವನೆಂಬುದು ಕನಸಿನಲ್ಲೂ ತಿಳಿದುಬರಲಿಲ್ಲ. ಯಾರಾದರೂ ಇಂಗ್ಲಿಷರು ಮತ್ತು ಅಮೇರಿಕನ್ನರು ತಮ್ಮ ವೈರಿಗೆ ಶರಣು ಕೊಟ್ಟವರೆಂಬುದು ತಿಳಿದರೆ ಅವರ ಕತೆ ಮುಗಿದಂತೆಯೇ.

ಇಲ್ಲಿರುವಾಗ ಯಾವ ಭಟ್ಟರು ‘ಮೊಟ್ಟೆ’ ತಿನ್ನಲು ಆರಂಭಿಸುವುದಕ್ಕೆ ನಡುಗುತ್ತಿದ್ದರೊ ಅವರು ಇಂದು ಭೋಜನದಲ್ಲಿ ಪಾಗ್ವೈದಿಕ ಪೂರ್ವಜರನ್ನು ಸಂಪೂರ್ಣವಾಗಿ ಅನುಕರಿಸುತ್ತಿದ್ದರು. ಪೀಳಿಗೆ ಪೀಳಿಗೆಗಳಿಂದ ಅವರ ಮಾಧ್ವ ವೈಷ್ಣವ ಪರಿವಾರ ಶರಾಬನ್ನು ನೋಡಿಯೂ ಇರಲಿಕ್ಕಿಲ್ಲ. ಆದರದು ಇಂದು ಭಟ್ಟರ ಸಾಮಾನ್ಯ ಪೇಯ. ತಮ್ಮ ಮಾಲಿಕರೆದಿರು ಅವರು ತಮ್ಮ ‘ಸಂಸ್ಕೃತ ವ್ಯಕ್ತಿತ್ವವನ್ನು ಹೇಗೆ ಮುಚ್ಚಿಟ್ಟಿದ್ದರೆಂಬುದು ನಿಜಕ್ಕೂ ಆಶ್ಚರ್ಯದ ಸಂಗತಿ. ಆದರೆ, ಯಾರ ತಲೆಯ ಮೇಲೆ ಮೃತ್ಯುವು ನರ್ತಿಸುತ್ತಿರುತ್ತದೋ ಆತ ಯಾವುದೇ ಅಭಿನಯವನ್ನು ಅರೆಮನಸ್ಸಿನಿಂದ ಮಾಡುವುದಿಲ್ಲ. ಅಂತೆಯೇ ಭಟ್ಟರು ‘ಜಿಪ್ಸಿ’ಯ ಅಭಿನಯವನ್ನು ಪರಿಪೂರ್ಣವಾಗಿಯೇ ನಿಭಾಯಿಸಿದರು. ಉಡುಪಿಯಲ್ಲಿ ಅವರು ಕುದುರೆಯನ್ನು ಕಂಡಿರಬಹುದು. ಅದೆಲ್ಲೊ ಬೆರಳಣಿಕೆಯಲ್ಲಿರಬಹುದು; ಅದರ ಬಳಿ ಹೋಗಲೂ ಅವರ ಧೈರ್ಯ ಮಾಡಿರಲಾರರು. ಆದರಿಲ್ಲಿ ರೈತರ ವಿಭಿನ್ನ ತಳಿಯ ದೊಡ್ಡ ದೊಡ್ಡ ಕುದುರೆಗಳಿದ್ದವು. ಅವುಗಳನ್ನು ಕಟ್ಟುವುದು, ಬಿಡುವುದು, ಮೇಯಿಸುವುದು, ನೇಗಿಲಿಗೆ ಕಟ್ಟುವುದು ಎಲ್ಲಾ ಕೆಲಸವನ್ನು ಮಾಡಬೇಕಾಗಿತ್ತು. ಕುದುರೆ ಸವಾರಿ ಪ್ರಾಯಃ ಮೊದಲೇ ಕಲಿತಿರಬೇಕು; ಏಕೆಂದರೆ ಯುದ್ಧಕ್ಕೆ ಅವರು ತಮ್ಮನ್ನು ಅಣಿಗೊಳಿಸಿಕೊಳ್ಳಬೇಕಾಗಿತ್ತು. ಸರಿಸುಮಾರು ನಾಲ್ಕು ವರ್ಷ ಅವರು ಆ-ಈ ಗ್ರಾಮಗಳಲ್ಲಿ ಜಿಪ್ಸಿಯಾಗಿ ಕಳೆದರು. ಕುದುರೆ ಓಡಿಸುವಾಗ ಒಮ್ಮೆ ಬಿದ್ದಿದ್ದರು. ಆಗ ಅವರ ಎದೆಗೆ ಆಘಾತವಾಗಿತ್ತು; ಅನಂತರ ಅವರಿಗೆ ಹೃದ್ರೋಗ ಪೀಡಿಸತೊಡಗಿತು. ಇದನ್ನು ಅವರು ಹೇಗೊ ಅನುಭವಿಸಿಕೊಂಡು, ಸಹಿಸಿಕೊಂಡು ಬರುತ್ತಿದ್ದರೊ ಏನೋ. ಆದರೆ 1947ರ ಆಗಸ್ಟ್ ಮಧ್ಯದಲ್ಲಿ ಇಂಗ್ಲಿಷರು ಭಾರತ ಬಿಟ್ಟು ಹೋದ ಸುದ್ದಿ ಅವರಿಗೆ ತಲುಪಿತು. ಜರ್ಮನಿಯ ರೈತರು ನಮ್ಮ ರೈತರ ಹಾಗೆ ಅನಕ್ಷರಸ್ಥರಲ್ಲ. ಅವರು ಸುಶಿಕ್ಷಿತರೂ, ಸುಸಂಸ್ಕೃತರೂ ಆಗಿದ್ದರು. ಎದೆ ನೋವಿನೊಡನೆ ಅವರಿಗೆ ಇನ್ನೊಂದು ನೋವು ಆರಂಭವಾಯಿತು. ನನ್ನ ಸ್ವತಂತ್ರ ದೇಶಕ್ಕೆ ನಾನು ಹೋಗಲೇ ಬೇಕು. “ಆಜಾದ್ ಹಿಂದ್” ಸಂಪಾದಕನಿಗೆ ಈಗ ನಿದ್ರೆ ಮಾಯವಾಗಿ ಹೋಯಿತು. ಇಲ್ಲಿಂದ ಹೇಗೆ ಹೋಗಲಿ ಎಂಬುದೇ ಅವರ ಯೋಚನೆಯಾಗಿತ್ತು. ನಾಲ್ಕೂ ಕಡೆ ಅಮೆರಿಕಾದ ಸೈನ್ಯ.ಹಳ್ಳಿಯಿಂದ ಹೊರಹೊರಟರೆ ಯಾವನಾದರೂ ಅಮೇರಿಕನ್ ಸೈನಿಕನ ಕೈಗೆ ಸಿಕ್ಕಿ ಬೀಳುತ್ತಾರೆ; ಎಲ್ಲಾದರೂ ಈತ ಜಿಪ್ಸಿ ವೇಷದಲ್ಲಿರುವ ಬೇರೆ ಮನುಷ್ಯ ಎಂದು ತಿಳಿದರೆ ಯಮನ ದವಡೆಯಿಂದ ಆತನನ್ನು ಯಾರೂ ಉಳಿಸಲೊಲ್ಲರು.

ಆದರೆ ಅವರ ಎರಡೂ ಬಗೆಯ ಹೃದಯ ಬೇನೆಗೆ ಔಷಧಿ ಒಂದೇ ಮಾರ್ಗದಲ್ಲಿ ಸಿಗುವ ಸಾಧ್ಯತೆಯಿತ್ತು. ಜರ್ಮನಿಯಲ್ಲಿ ಜನರ ಆರೋಗ್ಯದ ಬಗ್ಗೆ ಗಮನ ಹರಿಸುವವರ್ಯಾರು? ಲಕ್ಷಾಂತರ ಜನ ಯುದ್ಧದಲ್ಲಿ ಸತ್ತಿದ್ದರು; ಸಹಸ್ರಾರು ಜನ ಕಾಯಿಲೆಯಿಂದ ಸತ್ತಿದ್ದರು. ಅವರ ಹೃದಯರೋಗಕ್ಕೆ ಔಷಧಿ ಖಂಡಿತಾ ಅಗತ್ಯವಿತ್ತು. ಬವೇರಿಯಾದ ಗಡಿ ಸ್ವಿಝರ್‍ಲೆಂಡ್‍ಗೆ ಸೇರುತ್ತದೆ. ಅವರು ತಮ್ಮೆರಡೂ ಹೃದಯ ರೋಗಗಳಿಗೆ ಔಷಧಿಗಾಗಿ ಗಡಿಯತ್ತ ಓಡುತ್ತಾ ಗಡಿ ದಾಟಿದರು. ಅಲ್ಲಿ ಸ್ವಿಸ್ ಸಿಪಾಯಿಯೊಬ್ಬ ಅವರನ್ನು ಹಿಡಿದ. ಅವರೆಂದರು – “ನಾನು ಭಾರತೀಯ. ನನ್ನನ್ನು ಭಾರತೀಯ ಧೂತಾವಾಸ ಬಳಿ ಕರೆದೊಯ್ಯಿರಿ”. ಆದರೆ ಹಾಗಾಗಲಿಲ್ಲ – ಗಡಿ ದಾಟಿ ಒಳ್ಳೆಯ ಡಾಕ್ಟರ್ ಬಳಿ ಅವರು ಬಂದರು. ಡಾಕ್ಟರ್ ಅವರ ಭಯಾನಕ ರೋಗವನ್ನು ಕಂಡರು. ಡಾಕ್ಟರ್ ಫೀಸ್ ಕೊಡಲು ಅವರ ಬಳಿ ಹಣವೆಲ್ಲಿತ್ತು? ಆದರೆ, ಸಹೃದಯ ಡಾಕ್ಟರ್ ಅವರಿಗೆ ಔಷಧಿ ನೀಡಿದ. ಅವರೊಂದಿಗೆ ಮಾತನಾಡಿದ ಡಾಕ್ಟರ್ ಕೂಡಾ ಅವರಿಂದ ಪ್ರಭಾವಿತರಾದರು. ಭಟ್ಟರು ತಮ್ಮ ಕತೆ ಹೇಳಿದರು – ‘ನನ್ನ ದೇಶ ಸ್ವತಂತ್ರವಾಗಿದೆ; ನಾನು ಅಲ್ಲಿಗೆ ಹೋಗಲು ಬಯಸುತ್ತೇನೆ’. ಭಟ್ಟರ ಸೂಚನೆಯನ್ನು ಸ್ವಿಸ್ ಅಧಿಕಾರಿಗಳು ಭಾರತೀಯ ಕೌನ್ಸಿಲ್ ಜನರಲ್‍ಗಳಿಗೆ ಕಳುಹಿಸಿದರು. ಕೌನ್ಸಿಲ್ ಜನರಲ್ ಬಳಿ ಅವರು ತಮ್ಮ ಪರಿಚಯವನ್ನು ಬಹು ಸುಲಭವಾಗಿ ಕೊಡಬಲ್ಲವರಾಗಿದ್ದರು. ಹೀಗೆ, ಅಲ್ಲಿ ಅವರು ಕೆಲವು ದಿನ ಇದ್ದರು.

ಸ್ವಿಝರ್‍ಲೇಂಡಿನಲ್ಲಿ ಅವರಿಗೆ ಎಷ್ಟು ಒಳ್ಳೆಯ ಚಿಕಿತ್ಸೆ ಸಿಕ್ಕಿತ್ತೊ ಅದು ಭಾರತದಲ್ಲಿ ಖಂಡಿತಾ ಸಾಧ್ಯವಿಲ್ಲ ಎಂಬುದು ಅವರಿಗೆ ಹೇಗೆ ತಾನೆ ಗೊತ್ತಿರಲು ಸಾಧ್ಯ? ಸಂಸ್ಕೃತದ ಇಂಥ ದಿಗ್ಗಜ ಪಂಡಿತನಿಗೆ ಸ್ವಿಜರ್‍ಲ್ಯಾಂಡಿನಲ್ಲಿ ಕೆಲಸ ಸಿಕ್ಕುವುದು ಏನೇನೂ ಕಷ್ಟಸಾಧ್ಯವಲ್ಲ. ಆದರೆ, ಅವರು ಸ್ವತಂತ್ರ ಭಾರತದ ಹುಚ್ಚಿನಲ್ಲಿದ್ದರು. ಅವರು ಕೌನ್ಸಿಲ್ ಜನರಲ್ ಅವರೊಡನೆ ಭಾರತಕ್ಕೆ ಕಳುಹಿಸಿಕೊಡಲು ಕೇಳಿಕೊಂಡರು. ಅವರ ಬಳಿ ಕಾಗದ ಪತ್ರ ದಸ್ತಾವೇಜುಗಳಿದ್ದವು. ಲಕ್ಷಗಟ್ಟಲೆ ಮಾರ್ಕ್‍ಗಳು ಜರ್ಮನಿಯ ಬೇಂಕಿನಲ್ಲಿತ್ತು. ಇದನ್ನು ಮಿತ್ರಶಕ್ತಿಗಳ ಮೂಲಕ ಹಿಂದಕ್ಕೆ ಪಡೆದುಕೊಳ್ಳಲು ಅವರಿಗೆ ಅಧಿಕಾರವಿತ್ತು. ಆದರೆ, ಈ ಸಮಯದಲ್ಲಿ ಆ ಮಾರ್ಕ್‍ಗಳು ಬರೇ ಕಾಗದದ ಚೂರುಗಳಾಗಿದ್ದವು. ಕೌನ್ಸಿಲ್ ಜನರಲ್ ಅವರು ಭಾರತ ಸರ್ಕಾರದ ಖರ್ಚಿನಲ್ಲಿ ಅವರನ್ನು ಭಾರತಕ್ಕೆ ಕಳುಹಿಸಿತು.

ಮೊದಲ ವಿಶ್ವಯುದ್ಧದ ಮೊದಲು ದೇಶದಿಂದ ಹೊರಗೆ ಹೋಗಲು ಪಾಸ್‍ಪೋರ್ಟ್ ಅಗತ್ಯವಿರಲಿಲ್ಲ. ನೀವು ಎಲ್ಲಿಗೆ ಬೇಕಾದರೂ ಹೋಗಬಹುದಿತ್ತು. ಯುದ್ಧಾನಂತರ ಆಂಗ್ಲರು ಇಡೀ ಭಾರತವನ್ನು ಜೈಲನ್ನಾಗಿ ಮಾಡಿಬಿಟ್ಟಿದ್ದರು. ಅವರ ಆಜ್ಞೆಯಿಲ್ಲದೆ ಯಾರೂ ಜೈಲಿನಿಂದ ಹೊರಹೋಗುವಂತಿರಲಿಲ್ಲ. ಈ ಆಜ್ಞೆಯ ಹೆಸರೇ ಪಾಸ್‍ಪೋರ್ಟ್. ಇಂಗ್ಲಿಷ್‍ರ ಒಟ್ಟು ಆಡಳಿತ ವ್ಯವಸ್ಥೆಯಲ್ಲಿ ಪಾಸ್‍ಪೋರ್ಟ್ ಸಿಗುವುದು ಕಷ್ಟಸಾಧ್ಯವಾಗಿತ್ತು. ಪೋಲಿಸರಿಂದ ಆತ ತಮ್ಮ ಆಡಳಿತಕ್ಕೆ ವಿರೋಧಿಯೇ ಎಂಬುದನ್ನು ತನಿಖೆ ಮಾಡಿಸಲಾಗುತ್ತಿತ್ತು. ಆಗಸ್ಟ್ 15, 1947ರಂದು ಬ್ರಿಟಿಷರು ಭಾರತ ಬಿಟ್ಟು ಹೋದರು. ಇದರಿಂದ ದೇಶದ ನಾಲ್ಕೂ ಸುತ್ತಲಿನಲ್ಲಿ ಎದ್ದು ನಿಂತಿರುವ ಗೋಡೆಗಳು ಉರುಳಿ ಬೀಳುತ್ತವೆಯೆಂದು ಎಲ್ಲರಿಗೂ ಆಸೆಯಿತ್ತು; ನಂಬಿಕೆಯಿತ್ತು. ಆದರೆ, ಅವು ಉರುಳಿ ಬೀಳುವುದು ಹೋಗಲಿ, ಮತ್ತೆ ನಾಲ್ಕು ಮೀಟರ್ ಎತ್ತರವಾಯಿತು. ಇಂದು, ಪಾಸ್‍ಪೋರ್ಟ್ ಪಡೆಯಲು ಮೊದಲಿನಂತೆಯೇ ಪೋಲೀಸು ತನಿಖೆ ಅತ್ಯವಶ್ಯಕ. ಪೊಲೀಸು ರಿಪೋರ್ಟ್ ಅನುಕೂಲಕರವಾಗಿದ್ದರೂ ಯಾವನಾದರೂ ಪ್ರಾಮಾಣಿಕ ಶ್ರೀಮಂತ ಮನುಷ್ಯನಿಂದ 12 ರೂ. ಕಾಗದದ ಮೇಲೆ ಜಾಮೀನು ಪತ್ರದಲ್ಲಿ ವಿದೇಶದಲ್ಲಿ ಸರಕಾರದ ವತಿಯಿಂದ ಆಗುವ ಖರ್ಚುಗಳಿಗೆ ತಾನು ಜವಾಬುದಾರ ಎಂದು ಒಕ್ಕಣೆ ಬರೆಸಿ ಸಹಿ ಮೊಹರು ಆದ ಹೊರತು ನಿಮಗೆ ಪಾಸ್‍ಪೋರ್ಟ್ ದೊರಕುವುದಿಲ್ಲ. 1948ರ ವಿಚಾರ. ನಾನು ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಪೊಲೀಸು ಮತ್ತು ಗುಪ್ತಚರ ಇಲಾಖೆ ತನಿಖೆ ನಡೆಸಿತು. ಇಂಗ್ಲಿಷ್‍ರ ಕಾಲದ ನನ್ನ ವಿರುದ್ಧವಿದ್ದ ಎಲ್ಲಾ ಫೈಲ್‍ಗಳೂ ಇದ್ದವು. ಸ್ವತಂತ್ರ ಭಾರತದಲ್ಲೂ ಗುಪ್ತಚರ ಪೊಲೀಸು ಸದಾ ನನ್ನ ಬೆನ್ನ ಹಿಂದಿರುತ್ತಿದ್ದರು. ಪ್ರತಿಯೊಂದು ಕಾಗದವೂ ಅವರ ದೃಷ್ಟಿಗೆ ಬಿದ್ದ ಮೇಲೆಯೇ ನನಗೆ ಸಿಗುತ್ತಿತ್ತು. ಮಸೂರಿಯಲ್ಲಿರುವ ಸೆನ್ಸಾರ್ ಸಾಹೇಬನಿಗೆ ಎರಡೆರಡು ಮೂರು ಮೂರು ದಿನ ನನ್ನ ಕಾಗದ ನೋಡಲು ಪುರುಸೊತ್ತು ಸಿಗುತ್ತಿರಲಿಲ್ಲ. ಆತನ ಕೃಪೆಯಿಂದ ಕೆಲ ಪತ್ರಗಳು ಕಳೆದು ಹೋದರೂ ಆಶ್ಚರ್ಯವಿಲ್ಲ. ಇಂತಹ ಪೊಲೀಸರಿಂದ ಅನುಕೂಲ ವರದಿ ಹೇಗೆ ತಾನೆ ಸಿಗಲು ಸಾಧ್ಯ. ಇನ್ನೊಮ್ಮೆ ಪಾಸ್‍ಪೋರ್ಟ್ ಸಿಗುವ ಭರವಸೆಯ ಮೇರೆಗೆ ಮತ್ತೆ ಅರ್ಜಿ ಗುಜರಾಯಿಸಿದೆ. 12 ರೂಪಾಯಿ ಸ್ಟಾಂಪ್ ಪೇಪರಿನಲ್ಲಿ ಒಕ್ಕಣೆ ಸಹಿ ಮೊಹರು ಕೂಡಾ ಮಾಡಿ ಕಳಿಸಿದೆ. ಕೆಲವು ತಿಂಗಳ ಮೇಲೆ ಪತ್ರ ಬಂತು – “ಜಾಮೀನು ಕೊಟ್ಟ ವ್ಯಕ್ತಿ ನಿಮಗೆ ವಿದೇಶದಲ್ಲಿ ತಗಲುವ ಖರ್ಚಿಗೆ ಜವಾಬ್ದಾರನಾಗುವನೆಂಬುದಕ್ಕೆ ಸಾಕ್ಷಿಯೇನಿದೆ? ಆ ಜವಾಬ್ದಾರಿ ಹೊರಲು ಆತನೊಡನೆ ಅಷ್ಟು ಸಂಪತ್ತು ಇದೆಯೆಂಬುದಕ್ಕೆ ದಾಖಲೆ ಸಲ್ಲಿಸುವುದು” ಸಾಮಾನ್ಯವಾಗಿ ಸರಕಾರಕ್ಕೆ ವಿದೇಶ ಯಾತ್ರೆಯಲ್ಲಿ ‘ಅಂತೇಷ್ಟಿ ಕ್ರಿಯೆ’ಯ ಖರ್ಚಿನದ್ದೇ ಪ್ರಧಾನ ಭಯ. ಆರು ತಿಂಗಳು ಕಳೆಯಿತು. ಪಾಸ್‍ಪೋರ್ಟ್ ಸಿಗುತ್ತೊ ಇಲ್ಲವೊ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಇದು ಸ್ವತಂತ್ರ ಭಾರತ!

‘ಆಜಾದ್ ಹಿಂದ್’ನ ಸುದ್ದಿ ಕೇಳಿ ಭಟ್ಟರ ಕಣ್ಣುಗಳು ಮಿಂಚತೊಡಗಿದವು. 20 ವರ್ಷ ಸಾಕಷ್ಟು ದೀರ್ಘವಾದ ಕಾಲವೆ. ಮಾತೃಭೂಮಿ ತೊರೆಯುವಾಗ ಅವರಿಗೆ 22 ವರ್ಷ. ಈಗ 40 ವರ್ಷ ಪ್ರಾಯ ದಾಟಿದೆ. ದೇಶಕ್ಕೆ ಹಿಂತಿರುಗಲು ಹುಚ್ಚಾಗಿದ್ದರು. ಖರ್ಚು ಹಿಂತಿರುಗಿಸುವ ಪತ್ರಕ್ಕೆ ಸಹಿ ಮಾಡಿ ಸ್ವಿಝರ್‍ಲೇಂಡಿನಿಂದ ಭಾರತಕ್ಕೆ ಬಂದರು.

ನವೆಂಬರ್ 8, 1948ರಂದು ದಿಲ್ಲಿಯಲ್ಲಿ ಒಂದು ಸಭೆಯಲ್ಲಿ ನನ್ನ ಭಾಷಣವಿತ್ತು. ಅದರ ಸುದ್ದಿ ದಿಲ್ಲಿಯ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನಾನು ವೇದಿಕೆಯ ಮೇಲೆ ಕುಳಿತಿದ್ದೆ. ಆಗ ಕೋಟು ಪ್ಯಾಂಟು ಧರಿಸಿದ ಪ್ರೌಢ ವ್ಯಕ್ತಿಯೊಬ್ಬ ನನ್ನ ಕಾಲಿಗೆರಗಿದ. ಸಂಸ್ಕೃತ ಮಾತು ಕೇಳುತ್ತಲೇ ನನಗೆ ಅನಂತರಾಮನ ನೆನಪಾಯಿತು. ಹೌದು; ಅವರೇ, 18 ವರ್ಷಗಳ ನಂತರ ನನ್ನ ಮಿತ್ರನನ್ನು ಭೇಟಿಯಾಗುವ ಆ ಸಂತಸ ಎಷ್ಟೆಂದು ಹೇಳಬೇಕಾಗಿಲ್ಲ. ನಾನು ಇರುವ ಜಾಗ ತಿಳಿಸಿದೆ. ಮಾರನೆಯ ದಿನ ಭಟ್ಟರು ಬಂದರು. ಮಹಾಯುದ್ಧಕ್ಕೆ ಮೊದಲೇ ನಮ್ಮ ಪತ್ರ ವ್ಯವಹಾರ ನಿಂತು ಹೋಗಿತ್ತು. ಅವರು ತಮ್ಮ ಜೀವನಗಾಥೆಯನ್ನು ಸಂಕ್ಷೇಪದಲ್ಲಿ ತಿಳಿಸಿದರು. ಮತ್ತೆ ಅವರೆಂದರು – “ಒಂದು ತಿಂಗಳಿಂದ ಎಲ್ಲಿಯೂ ಕೇಳುವವರಿಲ್ಲ. “ಅವರೊಂದು ಹೊಟೇಲಿನಲ್ಲಿ ತಂಗಿದ್ದರು. ಅದರ ಖರ್ಚು ಕೊಡಲು ಅವರ ಹತ್ತಿರ ಹಣವಿರಲಿಲ್ಲ. ಹೊಟೇಲ್ ಸಾಧಾರಣ ದರ್ಜೆಯದ್ದು. ಆದರೆ, ವಾಸ ಊಟದ ಖರ್ಚು ಸಾಕಷ್ಟಾಗುತ್ತದೆ. ಹೊಟೇಲ್ ಮಾಲಿಕ ಒಬ್ಬ ಸಜ್ಜನ. ಆತ ಭಟ್ಟರ ಯೋಗ್ಯತೆ ಕಂಡು ಬೀದಿಗಂತೂ ಹಾಕಲಿಲ್ಲ. ಭಟ್ಟರ ಮೊತ್ತ ಮೊದಲ ಸಮಸ್ಯೆ ಊಟ ಉಪಹಾರಕ್ಕೆ ಏನಾದರೊಂದು ವ್ಯವಸ್ಥೆ. ನನ್ನ ಶಿಫಾರಸ್ಸು ಕೂಡಾ ದೊಡ್ಡ ವ್ಯಕ್ತಿಗಳ ತನಕ ಮುಟ್ಟುತ್ತಿರಲಿಲ್ಲ. ಹಾಗಾಗಿ ಕೆಲಸ ಕೊಡಿಸುವ ವಿಚಾರದಲ್ಲಿ ನನಗೇನು ಮಾಡುವುದು ಸಾಧ್ಯವಿರಲಿಲ್ಲ. ಆ ಕಾಲದಲ್ಲಿ ‘ಹಿಂದೀ ಸಾಹಿತ್ಯ ಸಮ್ಮೇಳನದ ವತಿಯಿಂದ ಪಾರಿಭಾಷಿಕ ಶಬ್ದಾವಳಿಗಳ ಕೋಶ ನಿರ್ಮಾಣದ ಜವಾಬ್ದಾರಿ ನನ್ನ ಮೇಲಿತ್ತು. ನನಗನ್ನಿಸಿತು – ಖಂಡಿತಾ ಭಟ್ಟರು ಈ ದಿಕ್ಕಿನಲ್ಲಿ ಉಪಯುಕ್ತರಾಗುತ್ತಾರೆ. ಅವರ ಸಂಸ್ಕೃತ ಮತ್ತು ಜರ್ಮನ್ ಭಾಷೆಯ ಗಂಭೀರ ಜ್ಞಾನ ಪಾರಿಭಾಷಿಕ ಶಬ್ದನಿರ್ಮಾಣಕ್ಕೇ ಹೇಳಿ ಮಾಡಿಸಿದಂತಿತ್ತು. ಆದರೆ, ಅವರ ಯೋಗ್ಯತೆಗೆ ತಕ್ಕಂತೆ ಸಂಬಳ ಕೊಡಿಸುವುದು ಸಾಧ್ಯವಾಗುತ್ತಿರಲಿಲ್ಲ. ನಾನು ಆಗ ಇಷ್ಟೇ ಹೇಳಿದೆ – ನೋಡೋಣ, ಪ್ರಯತ್ನ ಮಾಡುತ್ತೇನೆ. ಯಾವುದೇ ಕೆಲಸ ಸಿಗದಿದ್ದರೆ ಪಾರಿಭಾಷಿಕ ಶಬ್ದಾವಳಿ ರಚನೆಯ ಕಾರ್ಯ ನಮ್ಮ ಬಳಿಯಿದೆ. ಆದರೆ, ಅದರಲ್ಲಿ 350ಕ್ಕಿಂತ ಹೆಚ್ಚಾಗಿ ಸಂಬಳ ಕೊಡಿಸುವುದು ಸಾಧ್ಯವಾಗುವುದಿಲ್ಲ.

ಜರ್ಮನಿಯಲ್ಲಿ 18 ವರ್ಷವಿದ್ದು ಅವರು ಬಹಳಷ್ಟು ಅವಗುಣಗಳನ್ನು ಕಲಿತಿದ್ದರು. ಗುಣಗಳ ವಿಚಾರ ತೆಗೆದುಕೊಂಡರೆ ಕೇವಲ ಅರ್ಥಶಾಸ್ತ್ರ ಮಾತ್ರವಲ್ಲ, ಭಾರತೀಯ ಸಾಹಿತ್ಯ ಮತ್ತು ಇತಿಹಾಸದ ವಿಶೇಷ ಜ್ಞಾನ ಮಾತ್ರವಲ್ಲದೆ ಆರ್ಕಿವ್ (ಪ್ರಾಚೀನ ಶಾಸನ, ಅಭಿಲೇಖ ಜ್ಞಾನ) ಬಗೆಗೆ ವಿಶೇಷ ತಿಳುವಳಿಕೆ ಅವರಿಗಿತ್ತು. ಹತ್ತಾರು ಸಾವಿರ ವಿಸ್ತೀರ್ಣದ ಗೊಂಡಾರಣ್ಯದಲ್ಲಿ ಬೇಕಾದ ವಸ್ತುವನ್ನು ಕೆಲವೇ ನಿಮಿಷಗಳಲ್ಲಿ ಹುಡುಕಿ ತೆಗೆಯುವ ಸಾಮರ್ಥ್ಯ ಭಟ್ಟರದು. ಭಾರತ ಸ್ವತಂತ್ರವಾಗುತ್ತಲೇ ಹೊಗಳು ಭಟರ ರಾಜ್ಯ ನಿರ್ಮಾಣವಾಯಿತು. ಗುಣವಂತರನ್ನು ಯಾರು ಗಮನಿಸುತ್ತಾರೆ? ಭಟ್ಟರಿಗೆ ಯಾವುದೇ ಕೆಲಸ ಸಿಗಲಿಲ್ಲ, ಮಾರ್ಚ್ ತನಕ ಅವರು ಅಲ್ಲಲ್ಲಿ ಅಲೆದಾಡುತ್ತಲೇ ಇದ್ದರು. ಹೊಟೇಲ್ ಮಾಲಿಕರ ಋಣ ಅವರ ತಲೆ ಮೇಲೆ ಮಣ ಭಾರವಾಗುತ್ತಾ ಇತ್ತು. ಅಂತೂ, ಕೊನೆಗೆ ಏಪ್ರಿಲ್ ಒಂದರಂದು (1949) ಪಾರಿಭಾಷಿಕ ಕಾರ್ಯಕ್ಕೆ ದಿಲ್ಲಿಯಿಂದ ಪ್ರಯಾಗಕ್ಕೆ ಅವರು ತಲುಪಿದರು.

ಭಟ್ಟರು ಏನು ಅವಗುಣಗಳನ್ನು ಕಲಿತಿದ್ದರೊ ಅದು ಯುರೋಪ್ ಮತ್ತು ಜರ್ಮನಿಯಲ್ಲಿ ದೋಷವಾಗಿರಲಿಲ್ಲ. ಮೊದಲು ಅವರು ಭಾರತೀಯತೆಯ ಸಾಕಾರ ಮೂರ್ತಿಯಾಗಿದ್ದರು. ಯುರೋಪಿನಲ್ಲಿದ್ದು ಅವರ ಭಾರತಭಕ್ತಿ ಮತ್ತಷ್ಟು ವೃದ್ಧಿಸಿತು. ಆದರೆ, ಅವರು ಆಧುನಿಕತೆಯ ಬಣ್ಣದಲ್ಲಿ ಸಂಪೂರ್ಣವಾಗಿ ವರ್ಣಮಯವಾದರು. ಪ್ರತಿಯೊಂದು ವಿಚಾರದಲ್ಲೂ ಅವರು ಚೊಕ್ಕಟ ಮತ್ತು ವ್ಯವಸ್ಥೆಯನ್ನು ಬಯಸುತ್ತಿದ್ದರು. ಆದರೆ, ಭಾರತದ ಸಹಸ್ರಾರು ವರ್ಷಗಳ ಕೊಳಚೆ ಹೇಗೆ ತಾನೆ ಅಷ್ಟು ಬೇಗ ಸರಿ ಹೋದೀತು! ಅವರಿಗೆ ಈ ಸ್ಥಿತಿ ಬಗ್ಗೆ ಅತ್ಯಂತ ತಿರಸ್ಕಾರವಿತ್ತು. ಒಂದು ಕಾಲದಲ್ಲಿ ಅವರು ಜರ್ಮನಿಯಿಂದ ಕನ್ನಡ ಪತ್ರಿಕೆಗಳಲ್ಲಿ ಲೇಖನವನ್ನೂ ಬರೆದಿದ್ದರು. ಲಕ್ಷಗಟ್ಟಳೆ ಪ್ರತಿಗಳಲ್ಲಿ ಮುದ್ರಣವಾಗುವ ಜರ್ಮನ್ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದಾಗ ಕನ್ನಡದ ಒಂದೆರಡು ಸಾವಿರ ಪ್ರತಿಗಳ ಪತ್ರಿಕೆಯವರಿಗೆ ಏನೇನೂ ಖುಷಿ ಕೊಡಲಿಲ್ಲ. ಆದರೆ, ಎಷ್ಟೇ ಕಡಿಮೆ ಸಂಖ್ಯೆಯಲ್ಲಿ ಮುದ್ರಣ ಹೊಂದಿದರೂ, ಕನ್ನಡದ ಪತ್ರಿಕೆಗಳ ಮೂಲಕವೇ ತಾನು ತನ್ನ ಜನರನ್ನು ತಲುಪಬಲ್ಲೆ ಎಂಬ ಸತ್ಯ ಮಾತ್ರ ಅವರಿಗೆ ತಿಳಿಯಲಿಲ್ಲ. ಯುರೋಪಿನಲ್ಲಿರುವಾಗ ಅವರು ತಮ್ಮನ್ನು ಕೇವಲ ಭಾರತೀಯ ನಾಗರಿಕ ಎಂದು ತಿಳಿದಿದ್ದರು. ಭಾರತದ ಯಾವುದೇ ಪ್ರದೇಶದಲ್ಲಿ ಕಾಲೂರದೇ ಆತ ಭಾರತೀಯನಾಗಲಾರ ಎಂಬ ಸತ್ಯವನ್ನು ಅವರು ಯೋಚಿಸಲಿಲ್ಲ. ಕರ್ನಾಟಕದ ನೆಲ ಅವರ ಕಾಲುಗಳನ್ನು ತನ್ನ ಮಡಿಲಲ್ಲಿಟ್ಟುಕೊಳ್ಳಲು ಸಿದ್ಧವಿತ್ತು, ಆದರೆ ಪ್ರಾಂತೀಯತೆಯ ಮಾತು ಕೇಳಿದರೇ ಅವರು ಉರಿದು ಬೀಳುತ್ತಿದ್ದರು. ನಾನು ಅವರಿಗೆಂದೆ -‘ನೀವು ಕರ್ನಾಟಕವನ್ನು ಮತ್ತೆ ಅಪ್ಪಿಕೊಂಡರೆ ಎಲ್ಲಾ ದಾರಿಗಳೂ ಸುಗಮವಾಗುತ್ತವೆ. ಕನ್ನಡ ಭಾಷೆಯ ಪತ್ರಿಕೆಗಳಲ್ಲಿ ನೀವು ನಿಮ್ಮ ಜರ್ಮನಿಯ ಅನುಭವವನ್ನು ಲೇಖನ ಮಾಲೆಯಾಗಿ ಬರೆಯುವುದನ್ನು ಆರಂಭಿಸಿ. ಆದರೆ, ನನ್ನ ಮಾತು ಅವರಿಗೆ ಒಪ್ಪಿಗೆಯಾಗಲಿಲ್ಲ. ಶ್ರೀ ಶರತ್ ಬೋಸ್‍ರವರು ತಮ್ಮ ದೈನಿಕವನ್ನು ಆರಂಭಿಸಿದ್ದರು. ಆಗ ಭಟ್ಟರು ತಮ್ಮ ಸಂದೇಶವನ್ನು ಆ ಪತ್ರಿಕೆಗೆ ಕಳುಹಿತ್ತಾ ತನ್ನ ಮತ್ತು ನೇತಾಜಿಯವರ ಸಂಬಂಧವನ್ನು ಉಲ್ಲೇಖಿಸಿದ್ದರು. ಶರತ್‍ಬಾಬು ಸಂತೋಷದಿಂದ ಧನ್ಯವಾದ ಸಮರ್ಪಿಸುತ್ತಾ ಅವರಿಗೆ ಪತ್ರ ಬರೆದಿದ್ದರು. ಇಂಥ ವಿಚಾರಗಳೇ ಭಟ್ಟರಿಗೆ ಖುಷಿಕೊಡುತ್ತಿದ್ದವು.

ನಿಮ್ಮ ಊರು, ಕೇರಿ ಮನೆಯ ಬಗ್ಗೆ ಅವರನ್ನು ಪ್ರಶ್ನಿಸಿದರೆ – ‘ಅವರಿಗೂ ನನಗೂ ಏನು ಸಂಬಂಧ? ಅವರು ನನ್ನನ್ನು ಪತಿತ ಮತ್ತು ಸತ್ತು ಹೋಗಿದ್ದೇನೆಂದು ನನ್ನ ಶ್ರಾದ್ಧವನ್ನೂ ಮಾಡಿಬಿಟ್ಟಿದ್ದಾರೆ’. ಅವರ ಮಾವ ಶ್ರಾದ್ಧಕರ್ಮ ಆಚರಣೆ ಮಾಡಿಸಿರಬಹುದು; ಆದರೆ, ಅವರ ಪತ್ನಿ ಹೇಗೆ ಅವರ ಶ್ರಾದ್ಧ ಮಾಡಿಯಾರು? ಕರ್ನಾಟಕ ಭೂಮಿ ಹೇಗೆ ತಾನೆ ತನ್ನ ಈ ಮಹಾನ್ ಪುತ್ರನನ್ನು ಬದುಕಿರುವಾಗಲೇ ಸತ್ತನೆಂದು ತಿಳಿಯಲು ಸಾಧ್ಯ? ಇದು ಅವರ ಅವಗುಣ. 18 ವರ್ಷದ ನಂತರ ದೇಶಕ್ಕೆ ಬರುವಾಗ ತಂದ ಬಳುವಳಿ.

3 ಏಪ್ರಿಲ್, 1949ಕ್ಕೆ ಭಟ್ಟರು ನಮ್ಮೊಂದಿಗೆ ಕಲಿಂಪೊಂಗ್‍ಗೆ ಬಂದರು. ಹೃದಯದ ಕಾಯಿಲೆ ಬಹಳ ಕಠಿಣವಾಗಿರುತ್ತದೆ. ಕೆಲವೊಮ್ಮೆ ಅದು ನೋವನ್ನು ಹೆಚ್ಚಿಸುತ್ತದೆ. ತಮ್ಮೆಲ್ಲಾ ಸಮಯವನ್ನು ಅವರು ಪಾರಿಭಾಷಿಕದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಮ್ಮಲ್ಲಿ ಮಹಾಕೂಪಮಂಡೂಕಗಳು ಇಂಗ್ಲಿಷ್ ಮಾತ್ರವೇ ಏಕಮೇವ ಅಂತಃರಾಷ್ಟ್ರೀಯ ಭಾಷೆಯೆಂದು ತಿಳಿದಿರುತ್ತವೆ. ಭಟ್ಟರಿಗೆ ಈ ಕೂಪಮಂಡೂಕಗಳ ಮಾತು ಕೇಳಿ ನಗು ಬರುತ್ತಿತ್ತು. ಜರ್ಮನ್ ಸಮುದಾಯ ವಿಜ್ಞಾನದಲ್ಲಿ ಯಾವ ದೇಶಕ್ಕೂ ಕಡಿಮೆಯಿಲ್ಲ. ವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆ ಅಪೂರ್ವ. ಅವರು ಸಾವಿರ ಅಲ್ಲ; ಲಕ್ಷಗಟ್ಟಳೆ ಪಾರಿಭಾಷಿಕ ಪದಗಳನ್ನು ಸೃಷ್ಟಿಸಿದ್ದಾರೆ. ಅದೆಂತಹ ಪಾರಿಭಾಷಿಕ ಪದಗಳೆಂದರೆ ಜನರು ಅತ್ಯಂತ ಸುಲಭವಾಗಿ ಅವುಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಸಾಯನ್ಸ್ ಅಥವಾ ಸಿಯಾಂಸ್ ಎಂದರೆ ಓರ್ವ ಜರ್ಮನಿಯವನಿಗೆ ಏನೂ ಅರ್ಥವಾಗುವುದಿಲ್ಲ. ‘ವಿಜನ್ ಶಾಫ್ಟ್’ ಯಾ ವಿಜ್ಞಾನವನ್ನು ಅವನು ತಿಳಿದುಕೊಳ್ಳಬಲ್ಲ. ಆದ್ದರಿಂದಲೇ ಜರ್ಮನಿಯು ತನ್ನ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ರಚಿಸಿತು. ಈ ಕಾರ್ಯದಲ್ಲಿ ಭಟ್ಟರು ಅತ್ಯಂತ ಮಹತ್ವದ ಕೆಲಸ ಮಾಡಿದರು. ಖೇದದ ವಿಚಾರವೆಂದರೆ ‘ಸಮ್ಮೇಳನ’ದ ಅಧಿಕಾರಿಗಳ ಶೈಥಿಲ್ಯದಿಂದಾಗಿ ಆ ಕಾರ್ಯ ವೇಗವಾಗಿ ಮುಂದುವರಿಯಲಿಲ್ಲ. ಅವರು ಚೆನ್ನಾಗಿ ಸಹಕರಿಸಿದ್ದರೆ ಇಷ್ಟರಲ್ಲಿಯೇ ಪಾರಿಭಾಷಿಕ ಪದಾವಳಿಗಳಲ್ಲಿ ಹಿಂದಿ ಮತ್ತು ಭಾರತದ ಇತರ ಭಾಷೆಗಳು ನಿಶ್ಚಿಂತವಾಗಿರಬಹುದಿತ್ತು. ಡಾ| ಭಟ್ಟರಂತಹ ಇನ್ನೋರ್ವ ಪ್ರತಿಭಾಶಾಲಿ ಪುರುಷ ಶ್ರೀ ಸುರೇಶ್ಚಂದ್ರ ಸೇನಗುಪ್ತ ಈ ಕೆಲಸಕ್ಕೆ ಒದಗಿದ್ದರು. ಕಲಿಂಪೋಂಗ್‍ನಲ್ಲಿ ಪ್ರಾಯಃ 60 ಸಾವಿರಗಳಿಗಿಂತ ಹೆಚ್ಚು ಪದಾವಳಿಗಳನ್ನು ನಾವು ರಚಿಸಿದ್ದೆವು.

22 ಫೆಬ್ರವರಿಗೆ ನಮ್ಮ ಎಲ್ಲಾ ಸಾಮಾನು ಸರಂಜಾಮುಗಳನ್ನು ಒಟ್ಟುಗೂಡಿಸಿಕೊಂಡು ಡಾ| ಭಟ್ಟರು ಮತ್ತು ಸೇನಗುಪ್ತರೊಂದಿಗೆ ನಾವು ಪ್ರಯಾಗದಿಂದ ಹೊರೆಟೆವು. ಕಟಿಹಾರದಲ್ಲಿ ಗಾಡಿ ಬದಲಿಸಬೇಕಿತ್ತು. ಅಲ್ಲಿ ಓರ್ವ ಸಹೃದಯ ಕೈಗಾರಿಕೋದ್ಯಮಿ ಶ್ರೀ ಮಹಾವೀರಪ್ರಸಾದ ಮಾವಂಡಿಯಾ ಅವರ ಪರಿಚಯವಾಯಿತು. ಅವರು ಬಹಳ ಸತ್ಕಾರ ಮಾಡಿದರು. ನಾವೊಂದು ಟ್ರೇನ್ ಬಿಟ್ಟೆವು. ಮಾರನೆಯ ದಿನ ಮಾವಂಡಿಯಾ ಕಾರ್ ಡ್ರೈವ್ ಮಾಡಿಕೊಂಡು ನಮ್ಮನ್ನು ರೈಲ್ವೆ ಸ್ಟೇಶನ್‍ಗೆ ಬಿಟ್ಟರು. ರೈಲ್ವೆ ಲೈನ್ ದಾಟುತ್ತಾ ಸೇನಗುಪ್ತನರು ಭಟ್ಟರನ್ನು ನೋಡಿ ಹೀಗೆಂದರು -“ಅಚ್ಛಾ, ನೀವು ನಿದ್ರಿಸ ಬಯಸುವುದಾದರೆ ನಿದ್ರಿಸಿ”. ಸ್ಟೇಶನ್ ಬಳಿ ಕಾರ್ ನಿಂತಿತ್ತು. ನೋಡಿದರೆ ಭಟ್ಟರು ನಿದ್ರಿಸಿರಲಿಲ್ಲ; ಬದಲಿಗೆ ಮೂರ್ಛೆ ಹೋಗಿದ್ದರು. ಸೆಕೆಂಡ್ ಕ್ಲಾಸ್ ರಿಸರ್ವ್ ಆಗಿತ್ತು. ಅಲ್ಲಿಗೆ ಕೊಂಡೊಯ್ದೆವು. ಅವರ ಪರಿಸ್ಥಿತಿ ಕಂಡು ಗಾಬರಿಯಾಯ್ತು. ಮಾವಂಡಿಯಾ ಓಡಿ ಹೋಗಿ ಡಾ| ರಾಮಪ್ರಸಾದ್ ಸೂದ್ ಅವರನ್ನು ಕರೆತಂದರು. ಸೂದ್ ಅವರೆಂದರು -“ಈ ಟ್ರೇನ್‍ನಲ್ಲಿ ಇವರನ್ನು ಮುಂದೆ ಕರೆದುಕೊಂಡು ಹೋಗಲಾಗದು” ಸ್ವಲ್ಪವೂ ಪ್ರಜ್ಞೆಯಿಲ್ಲ. ಅವರ ಸ್ಥಿತಿ ಕಂಡು ಎದೆ ಕಂಪಿಸಿತು. ಅವರಿಗೆ ಹಲವು ಬಾರಿ ವಾಂತಿಯಾಯಿತು. ಡಾಕ್ಟರ್ ಇಂಜೆಕ್ಷನ್ ಕೊಟ್ಟರು. ಆಸ್ಪತ್ರೆಯಲ್ಲಿ ಔಷಧಿಗಳು ಇರಲಿಲ್ಲ. ಡಾಕ್ಟರ್ ಹೇಳಿದರು -“ಇವರಿಗೆ ಲಕ್ವಾ ಹೊಡೆದಿದೆ” ಹೃದಯದ ಕಾಯಿಲೆ ಮೊದಲೇ ಇತ್ತು. ನಾವು ಕಟಿಹಾರದಲ್ಲಿ ಉಳಿಯಲೇ ಬೇಕಾಯ್ತು. ಮಾರನೆಯ ದಿನವೂ ಭಟ್ಟರ ಪರಿಸ್ಥಿತಿ ಹಾಗೆಯೇ ಇತ್ತು. ಕಣ್ಣು ಬಹಳ ಕಡಿಮೆ ತೆರೆಯುತ್ತಿದ್ದರು. ಒಮ್ಮೆ ಪ್ರಜ್ಞೆ ಬಂದರೆ ಮರುಗಳಿಗೆ ಪ್ರಜ್ಞೆ ತಪ್ಪುತ್ತಿದ್ದರು. ಇದನ್ನು ಕಂಡು ನನ್ನ ಹೃದಯ ವಿಲವಿಲ ಒದ್ದಾಡಿತು. 1930ರಲ್ಲಿ ಈ ತರುಣ ಹಡುಗು ಏರಿದ್ದ ನೆನಪು ನನಗೆ ಕಾಡತೊಡಗಿತು. ಮತ್ತ ಎಣಿಸಿದೆ. ಈ ಕಳೆದ 18 ವರ್ಷಗಳಲ್ಲಿ ಈತ ಎಷ್ಟೊಂದು ಜ್ಞಾನ, ಅನುಭವವನ್ನು ಗಳಿಸಿದ-ಇಂಥವನು ಆತನ ದೇಶಕ್ಕೆ ಎಷ್ಟೊಂದು ಅಗತ್ಯವಿತ್ತು; ಅವನ್ನೆಲ್ಲಾ ಆತ ತನ್ನೊಂದಿಗೇ ಕೊಂಡೊಯ್ದು ಬಿಡುತ್ತಾನೆಯೆ!

25 ಫೆಬ್ರವರಿ ಡಾ| ಸೂದ್ ಮತ್ತು ಡಾ| ಕುಂಡೂರವರು ಭಟ್ಟರನ್ನು ಪರೀಕ್ಷಿಸಿದರು. ಇಬ್ಬರೂ ಔಷಧಿ ಬರೆದು ಕೊಟ್ಟರು. ಮತ್ತೆ ಅವರು ಹೇಳಿದರು. ಯಾರಾದರೂ ಡಾಕ್ಟರೊಂದಿಗೆ ತಾವು ಪ್ರಯಾಣಿಸಬಹುದು. ಕಟಿಹಾರದಲ್ಲಿ ಡಾಕ್ಟರ್ ಶ್ರೀ ಕಾಲೀ ಪ್ರಸಾದ್ ದಾಸ್ ಸಂತೋಷದಿಂದ ನಮ್ಮೊಂದಿಗೆ ಬರಲು ಒಪ್ಪಿದರು. ಕಟಿಹಾರದಲ್ಲಿದ್ದರೂ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಯಿರಲಿಲ್ಲ. ಮೊದಲ ದಿನ ಮೂರು ಬಾರಿ ಕಿತ್ತಳೆ ರಸ ಅವರಿಗೆ ಕೊಡಲಾಯಿತು. ಮೂರು ಬಾರಿ ಅವರು ವಾಂತಿ ಮಾಡಿಕೊಂಡರು. ಕೇವಲ ಗ್ಲೂಕೋನ್ ಇಂಜೆಕ್ಷನ್‍ನಿಂದ ಮಾತ್ರ ಅವರ ಶರೀರದಲ್ಲಿ ಶಕ್ತಿ ಇರುವಂತೆ ಇಡಬಹುದಾಗಿತ್ತು. 26 ಫೆಬ್ರವರಿ ಸಂಜೆ ಕತ್ತಲಾಗುತ್ತಿದ್ದಂತೆ ನಾವು ಪ್ರಯಾಗ ತಲುಪಿದೆವು. ಮೊದಲೇ ತಂತಿ ಕಳಿಸಿದ್ದೆವು. ರಾಮಬಾಗ್ ಸ್ಟೇಶನ್ ಬಳಿ ಆಸ್ಪತ್ರೆಯ ಎಂಬುಲೆನ್ಸ್ ಕಾರ್ ನಿಂತಿತ್ತು. ಅವರನ್ನು ಮೋತಿಲಾಲ್ ಮೆಮೊರಿಯಲ್ ಆಸ್ಪತ್ರೆಗೆ ಕೊಂಡೊಯ್ದೆವು. ಡಾ| ಪಾರ್ಟರ್‍ಕರ್ ಚೆನ್ನಾಗಿ ಪರೀಕ್ಷಿಸಿದರು. ಒಳ್ಳೆಯ ಆಸ್ಪತ್ರೆ, ಒಳ್ಳೆಯ ಡಾಕ್ಟರ್ ಮತ್ತು ನರ್ಸ್‍ಗಳನ್ನು ಕಂಡು ನಮಗೆ ಸಂತೋಷವಾಯಿತು. ಆದರೆ, ಭಟ್ಟರ ಸ್ಥಿತಿ ಈಗಲೂ ಚಿಂತಾಜನಕವಾಗಿತ್ತು. ಎಷ್ಟೊ ದಿನಗಳ ನಂತರ ಅವರು ಸಾವಿನ ದವಡೆಯಿಂದ ಪಾರಾಗಿ ಬಂದರು; ಆದರೆ, ಲಕ್ವಾದ ಪ್ರಭಾವ ಏನಿತ್ತೊ ಅದು ಒಂದು ವರ್ಷ ಅವರನ್ನು ಕಾಡಿಸಿತು.

ನಾನು ಮತ್ತೆ ಮತ್ತೆ ಪ್ರಯಾಗದಲ್ಲಿ ಇರಲಾರದಾದೆ. ‘ಸಮ್ಮೇಳನ’ದ ಅಧಿಕಾರಿಗಳು, ವಿಶೇಷವಾಗಿ ಟಂಡನ್ ಅವರು, ರಾಮ್‍ಚರಣಲಾಲ್, ಡಾ| ಉದಯನಾರಾಯಣ ತಿವಾರಿ ಭಟ್ಟರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಕೆಲವು ತಿಂಗಳ ನಂತರ ಆಸ್ಪತ್ರೆಯವರು ಇವರನ್ನು ಇನ್ನೂ ಇಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿಲ್ಲವೆಂದರು. ಅಪಾಯದಿಂದ ಅವರ ಹೊರಬಂದಿದ್ದಾರೆ. ಶಕ್ತಿ ಸಾಮರ್ಥ್ಯ ಪಡೆಯಲು ಅವರಿಗೆ ಇನ್ನು ಕೆಲವು ತಿಂಗಳುಗಳು ಬೇಕು. ಅದು ನಮ್ಮ ಆಸ್ಪತ್ರೆಯಲ್ಲಿ ಸಾಧ್ಯವಿಲ್ಲ. ದೊಡ್ಡ ಚಿಂತೆ ಹುಟ್ಟಿಕೊಂಡಿತು. ಭಟ್ಟರನ್ನು ಎಲ್ಲಿ ಕೊಂಡೊಯ್ಯುವುದು? ನಾನು ಸದ್ಯ ಮಸೂರಿಯಲ್ಲಿದ್ದೆ. ಮಸೂರಿ 6ಳಿ ಸಾವಿರ ಅಡಿ ಎತ್ತರದ ಪ್ರದೇಶ; ಅವರ ಕಾಯಿಲೆಗೆ ಪ್ರತಿಕೂಲ ಹವಾಮಾನವೆಂದು ಹೇಳುತ್ತಿದ್ದರು. ಹಾಗಾಗಿ ನಾನು ನನ್ನ ಮಿತ್ರನನ್ನು ನನ್ನ ಬಳಿ ಇರಿಸಿಕೊಳ್ಳದಾದೆ. ಟಂಡನ್ ಕಾರ್ಯದರ್ಶಿಯವರಿಗೆ ಪತ್ರ ಬರೆದರು ಅಂತೂ ಅವರನ್ನು ಅಲ್ಲಿ ಉಳಿಸಿಕೊಳ್ಳಲಾಯಿತು.

ಅದೇ ವರ್ಷ (1951) ಮಿತ್ರರಿಂದ ಪತ್ರ ಬರುತ್ತಿತ್ತು. ಸಾಹಿತ್ಯ ಸಮ್ಮೇಳನವೂ ಸರಿಯಾಗಿ ಸಂಬಳ ವಿತರಿಸುತ್ತಿರಲಿಲ್ಲ. ನಾನು ಚಡಪಡಿಸುತ್ತಿದ್ದೆ. ಯಾವ ಕಾರ್ಯದರ್ಶಿ ಬಳಿ ರೇಡಿಯೊ ಇತ್ತೊ ಅದು ಭಟ್ಟರ ಪ್ರದೇಶದ್ದೇ ಆಗಿತ್ತು. ಅದರಲ್ಲಿ ನಾನು ಹೀಗೆ ಹೇಳಿದೆ – “ಜಗತ್ತಿನ ಎಷ್ಟೊ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಸಲ್ಪಡುತ್ತಿದೆ. ಭಾರತದಲ್ಲಿ ಸಂಸ್ಕೃತ ಅದ್ಭುತವಾಗಿದೆ. ಅದನ್ನು ತಿಳಿಯಲು ಜನ ಉತ್ಸುಕರಾಗಿದ್ದಾರೆ. ತಾವು ರೆಡಿಯೋದಲ್ಲಿ ಸಂಸ್ಕೃತದ ಕಾರ್ಯಕ್ರಮ ಇಟ್ಟುಕೊಳ್ಳಬೇಕು. ಅಂತೆಯೇ ಈ ಕೆಲಸಕ್ಕೆ ಭಟ್ಟರಿಗೆ ಅದ್ಭುತ ಯೋಗ್ಯತೆಯಿದೆ”. ಹೀಗೆ ಹೇಳಿ ನಾನು ಏನಾದರೂ ಆಗುತ್ತದೆ; ಯಾರಾದರೂ ಏನಾದರೂ ಸಹಾಯ ಮಾಡಿಯಾರು ಎಂದುಕೊಂಡೆ. ಆದರೆ, ಭಟ್ಟರಂಥಹ ಅನರ್ಘ್ಯ ರತ್ನ ಈ ನಮ್ಮ ಸ್ವತಂತ್ರ ಭಾರತದಲ್ಲಿ ಒಂದು ಕವಡೆ ಕಾಸಿಗೂ ಬೆಲೆ ಬಾಳಲಿಲ್ಲ. ಕೊನೆಗೂ ಭಟ್ಟರು ಎಲ್ಲಿಗೆ ಹೋದರು. ವರ್ಷಗಟ್ಟಳೆ ಅವರ ಸುಳಿವೇ ಸಿಗಲಿಲ್ಲ. ಮತ್ತೆ ಮತ್ತೆ ನನ್ನ ಎದೆಯಲ್ಲಿ ಮುಳ್ಳಿನಂತೆ ಚುಚ್ಚಿ ಚುಚ್ಚಿ ಭಟ್ಟರ ವಿಚಾರ ನೋವನ್ನುಂಟು ಮಾಡುತ್ತಿದೆ.

2 ಟಿಪ್ಪಣಿಗಳು Post a comment
 1. vasu
  ಡಿಸೆ 7 2015

  ಲೇಖನ ಅಪೂರ್ಣವಾಗಿದೆ. ಪೂರ್ಣಗೊಳಿಸಿವುದು ಅಗತ್ಯ.

  ಉತ್ತರ
 2. ಡಿಸೆ 10 2015

  What happened to Dr. Anantharama Bhat at the end?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments