ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 10, 2015

6

ಎ ಸ್ಟ್ರೇಂಜ್ ಸ್ಟೋರಿ

‍ನಿಲುಮೆ ಮೂಲಕ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಓ ಹೆನ್ರಿಅಮೆರಿಕಾದ ಟೆಕ್ಸಾಸ್ ರಾಜ್ಯದ ರಾಜಧಾನಿಯಾಗಿರುವ ಆಸ್ಟಿನ್ ಪಟ್ಟಣದ ಉತ್ತರ ಭಾಗದಲ್ಲಿ ವಾಸವಿದ್ದ ಆ ಕುಟುಂಬ ನಗರದ ಸಂಸ್ಕಾರವಂತ ಕುಟುಂಬಗಳಲ್ಲೊಂದು ಎಂದು ಗುರುತಿಸಲ್ಪಡುತ್ತಿತ್ತು. ’ಸ್ಮೂದರ್ಸ್ ಕುಟುಂಬ’ ಎಂದೇ ಕರೆಯಲ್ಪಡುತ್ತಿದ್ದ  ಕುಟುಂಬದಲ್ಲಿದ್ದಿದ್ದು ಜಾನ್ ಸ್ಮೂದರ್ಸ್, ಅವನ ಮಡದಿ ಮತ್ತವನ ಐದು ವರ್ಷದ ಪುಟ್ಟ ಮಗಳು ಮಾತ್ರ.ಪರಿವಾರದಲ್ಲಿದ್ದದ್ದು ಮೂರು ಸದಸ್ಯರೇ ಆಗಿದ್ದರೂ ,ಸರಕಾರಿ ದಾಖಲಾತಿಗಳಲ್ಲಿ ಮಾತ್ರ ಕುಟುಂಬ ಸದಸ್ಯರ ಸಂಖ್ಯೆ ಆರು ಎಂದು ದಾಖಲಾಗಿರುವುದು ಏಕೆನ್ನುವುದು ಸ್ವತ: ಜಾನ್ ಸ್ಮೂದರ್ಸನಿಗೂ ಸಹ ತಿಳಿದಿರಲಿಲ್ಲ.

ಅದೊಂದು ದಿನ ರಾತ್ರಿಯ ಊಟ ಮುಗಿಸಿ ಮಡದಿಯೊಂದಿಗೆ ಹರಟುತ್ತ ಕುಳಿತಿದ್ದ ಜಾನ್,ತನ್ನ ಮಗಳು ಹೊಟ್ಟೆ ನೋವಿನಿಂದ ಒದ್ದಾಡುತ್ತಿರುವುದನ್ನು  ಗಮನಿಸಿದ.ಕ್ಷಣಗಳು ಉರುಳಿದಂತೆ ಮಗಳ ಉದರಶೂಲೆ ಹೆಚ್ಚುತ್ತ ಆಕೆ ಕಿರುಚಾಡುತ್ತಿರುವುದನ್ನು ಕಂಡು ಗಾಬರಿಯಾದ ಆತ ಔಷಧಿಯನ್ನು ತರಲು ತಕ್ಷಣ ಪಟ್ಟಣದತ್ತ ತೆರಳಿದ.ಮಗಳೆಡೆಗೆ ಗಮನವಿರಿಸುವಂತೆ ಮಡದಿಗೆ ತಿಳಿಸಿ,ಔಷಧಿಗಾಗಿ ಹಾಗೆ ಪಟ್ಟಣಕ್ಕೆ ತೆರಳಿದ ಜಾನ್,ಪುನ: ವಾಪಸ್ಸು ಬರಲೇ ಇಲ್ಲ!!ಅವನಿಗಾಗಿ ಕಾಯುತ್ತ ಕುಳಿತಿದ್ದ ಮಡದಿಗೆ ನಿಜಕ್ಕೂ ಇದು ಆಘಾತಕರ ಸಂಗತಿ.ಆದರೆ ಅಂಥದ್ದೊಂದು ಆಘಾತದಿಂದ ಆಕೆ ಬಲುಬೇಗ ಚೇತರಿಸಿಕೊಂಡಳು. ಸರಿಸುಮಾರು ಮೂರು ತಿಂಗಳನಂತರ ಮತ್ತೊಬ್ಬರನ್ನು ಮದುವೆಯಾದ ಆಕೆ ಆಸ್ಟಿನ್ ಪಟ್ಟಣವನ್ನು ತೊರೆದು ಸಾನ್ ಅಂಟೋನಿಯೊ ಪಟ್ಟಣವನ್ನು ಸೇರಿಕೊಂಡಳು.ಕಾಲಚಕ್ರ ಉರುಳುತ್ತ ಸಾಗಿತು.ಅಪ್ಪ ನಾಪತ್ತೆಯಾಗುವಾಗ ಐದು ವರ್ಷವಾಗಿದ್ದ ಬಾಲಕಿಗೆ ಈಗ ಇಪ್ಪತ್ತೈದರ ವಸಂತ.ಮನ ಮೆಚ್ಚಿದ ಹುಡುಗನೊಂದಿಗೆ ವಿವಾಹವಾದ ಅವಳು ಒಂದು ಮುದ್ದಾದ ಹೆಣ್ಣುಮಗುವಿನ ತಾಯಿಯೆನಿಸಿಕೊಂಡಿದ್ದಳು.ಮಗಳಿಗೆ ’ಪನ್ಸಿ’ ಎಂದು ನಾಮಕರಣ ಮಾಡಿದ ಆಕೆ ಕಳೆದು ಹೋದ ಅಪ್ಪನನ್ನು ಮರೆಯಲಾಗದೆ,ಪುನಃ ಆಸ್ಟಿನ್ ಪಟ್ಟಣವನ್ನು ಸೇರಿಕೊಂಡು ತಮ್ಮ ಹಳೆಯ ಮನೆಯಲ್ಲಿಯೇ ಪತಿಯೊಂದಿಗೆ ವಾಸವಾಗಿದ್ದಳು.

ವಿಚಿತ್ರವೆಂದರೆ ಅದೊಮ್ಮೆ ಆಕೆಯ ಮಗಳೂ ಸಹ ಅಸಾಧ್ಯವಾದ ಹೊಟ್ಟೆನೋವು ಎಂದು ಒದ್ದಾಡತೊಡಗಿದಳು.ಸರಿರಾತ್ರಿ ಹೊತ್ತಿನಲ್ಲಿ ಮಗಳ ಒದ್ದಾಟವನ್ನು ಕಂಡ ತಾಯಿಯ ಮನದಲ್ಲೇನೋ ಆತಂಕ.ಕೇವಲ ಮಗಳ ಹೊಟ್ಟೆನೋವು ಮಾತ್ರ ಆಕೆಯ ಆತಂಕಕ್ಕೆ ಕಾರಣವಾಗಿರಲಿಲ್ಲ.ಆದರೆ ತನ್ನಪ್ಪ ಜಾನ್ ಸ್ಮೂದರ್ಸ್ ಕಳೆದುಹೋಗಿದ್ದ ದಿನದಂದೇ ಮಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು ಎನ್ನುವ ಕಾರಣಕ್ಕೆ ಆಕೆಯ ದುಗುಡ ಇಮ್ಮಡಿಯಾಗಿತ್ತು.ಅದೊಂದು ಅಸಾಧ್ಯ ಕಾಕತಾಳೀಯ ಎಂದು ಆಕೆಗನ್ನಿಸಿದ್ದರೂ ಒಂದು ಅವ್ಯಕ್ತ ಭಯ ಆಕೆಯನ್ನಾವರಿಸಿತ್ತು.ಅಪ್ಪ ಇದ್ದಿದ್ದರೆ ಮೊಮ್ಮಗಳನ್ನು ಕಂಡು ಎಷ್ಟು ಸಂತೋಷ ಪಡುತ್ತಿದ್ದನೋ! ತನ್ನ ಮಗಳೂ ಪನ್ಸಿ ಸಹ ’ತಾತ,ತಾತ’ಎನ್ನುತ್ತ ತನ್ನಪ್ಪನ ಹಿಂದೆಯೇ ಓಡಾಡಿಕೊಂಡಿರುತ್ತಿದ್ದಳೇನೋ ಎನ್ನುವ ಆಲೋಚನೆಗಳು ಮೂಡಿದ ಆ ಕ್ಷಣಕ್ಕೆ ಆಕೆಯ ಮನದಲ್ಲೊಂದು ವಿಷಾದಭಾವ ಸುಳಿಯಿತು.’ನೀನು ಕೊಂಚ ಇವಳ ಬಗ್ಗೆ ಗಮನವಿಡು,ನಾನು ಈ ಕೂಡಲೇ ಪಟ್ಟಣಕ್ಕೆ ತೆರಳಿ ಏನಾದರೂ ಔಷಧಿ ಸಿಗುತ್ತದೆಯೇ ಎಂದು ವಿಚಾರಿಸುತ್ತೇನೆ’ ಎಂಬ ಪತಿಯ ಮಾತುಗಳನ್ನು ಕೇಳಿದಾಗಲೇ ಕಲ್ಪನಾ ಲೋಕಕ್ಕೆ ತೆರಳಿದ್ದ ಅವಳ ಪ್ರಜ್ಞೆ ವಾಸ್ತವಕ್ಕೆ ಮರಳಿದ್ದು.ಹಾಗೆ ವಾಸ್ತವಕ್ಕೆ ಮರಳಿದವಳಿಗೆ ಪತಿಯ ಮಾತುಗಳಲ್ಲಿ ಕೇಳಿ ನಿಜಕ್ಕೂ ಗಾಬರಿಯಾಯಿತು.’ಅಯ್ಯೋ..! ಖಂಡಿತ ಬೇಡ ಕಣ್ರೀ,ಈ ಹೊತ್ತಿನಲ್ಲಿ ನೀವು ಪಟ್ಟಣಕ್ಕೆ ತೆರಳುವುದಕ್ಕೆ ನಾನು ಸುತಾರಾಂ ಒಪ್ಪಲಾರೆ,ಇಂಥದ್ದೇ ಒಂದು ನೀರವ ಭಯಾನಕ ರಾತ್ರಿಯಲ್ಲಿಯೇ ನಾನು ನನ್ನ ಅಪ್ಪನನ್ನು ಕಳೆದುಕೊಂಡಿದ್ದು.ನೀವು ಸಹ ಅವರಂತೆಯೇ ಕಾಣೆಯಾಗಿ ಹೋದರೆ ನನ್ನ ಗತಿಯೇನು? ದಯವಿಟ್ಟು ನೀವು ಎಲ್ಲಿಗೂ ಹೋಗಬೇಡಿ’ಎನ್ನುವ ಹೊತ್ತಿಗೆ ಅವಳ ಧ್ವನಿ ಗದ್ಗದ.

ಅವಳ ಮಾತಿಗೊಪ್ಪಿದ ಆಕೆಯ ಪತಿ ಕೊಂಚ ಹೊತ್ತು ಸುಮ್ಮನಾದ.ಆದರೆ ಸಮಯ ಕಳೆದಂತೆ ಮಗಳ ಹೊಟ್ಟೆನೋವು ಹೆಚ್ಚಾಗುತ್ತಿರುವುದನ್ನು ಗಮನಿಸಿದ ಆತ ತಡೆಯದಾದ.ಆದರೆ ಮಡದಿಯದ್ದು ಒಂದೇ ಹಟ.ಯಾವುದೇ ಕಾರಣಕ್ಕೆ ತನ್ನ ಪತಿ ಪಟ್ಟಣದತ್ತ ತೆರಳಬಾರದು.ಮಡದಿಯನ್ನು ಒಪ್ಪಿಸುವ ಅವನ ಎಲ್ಲ ಪ್ರಯತ್ನಗಳೂ ನಿಷ್ಫಲವಾದವು.ಹಾಗೆ ಪಟ್ಟಣಕ್ಕೆ ತೆರಳುವ ಬಗ್ಗೆ ಪತಿಪತ್ನಿಯರ ನಡುವೆ ಮಾತುಕತೆ ನಡೆಯುತ್ತಿರುವಾಗಲೇ ಅವರ ಮನೆಯ ಬಾಗಿಲು ಧಡಾರನೇ ತೆರೆದುಕೊಂಡಿದ್ದು.ಬಾಗಿಲಲ್ಲಿ ಗೂನು ಬೆನ್ನಿನ ಕೃಶಕಾಯದ ವಯೊವೃದ್ಧನೊಬ್ಬ ನಿಂತಿದ್ದ.ತನ್ನನ್ನು ಬಾಧಿಸುತ್ತಿದ್ದ ಹೊಟ್ಟೆನೋವನ್ನೂ ಸಹ ಗಮನಿಸದೆ ’ತಾತ ಬಂದ್ರು,ತಾತ ಬಂದ್ರು’ಎಂದು ಪನ್ಸಿ ಕೂಗಿಕೊಂಡಾಗಲೇ ಆ ದಂಪತಿಗಳಿಗೆ ಬಂದಿದ್ದ ವಯೋವೃದ್ಧ ಯಾರೆಂಬುದು ಸ್ಪಷ್ಟವಾಗಿದ್ದು.ವರ್ಷಗಳ ಹಿಂದೆ ಕಳೆದು ಹೋಗಿದ್ದ ಜಾನ್ ಸ್ಮೂದರ್ಸನನ್ನು ಕಂಡ ದಂಪತಿಗಳು ಗರಬಡಿದವರಂತಾಗಿದ್ದರು.ಅಷ್ಟರಲ್ಲಿ ಜಾನ್,ತನ್ನ ಜೇಬಿನಿಂದ ಔಷಧಿಯ ಬಾಟಲಿಯೊಂದನ್ನು ತೆಗೆದ.ಚಿಕ್ಕದ್ದೊಂದು ಚಮಚೆಯಲ್ಲಿ ಎರಡು ಚಮಚೆಗಳಷ್ಟು ಔಷಧಿಯನ್ನು ಮೊಮ್ಮಗಳ ಬಾಯಿಗಿಳಿಸಿದ.ಕೆಲವೇ ಕ್ಷಣಗಳಲ್ಲಿ ಪನ್ಸಿಯ ಹೊಟ್ಟೆನೋವು ಕಡಿಮೆಯಾಗತೊಡಗಿತು.ತನ್ನನ್ನೇ ಪ್ರಶ್ನಾರ್ಥಕವಾಗಿ ನೋಡುತ್ತ ನಿಂತಿದ್ದ ಮಗಳತ್ತ ತಿರುಗಿದ ಸ್ಮೂದರ್ಸ್ ,’ನಿನ್ನ ಔಷಧಿಗಾಗಿ ಕೊಂಚ ದೂರ ತೆರಳಿದ್ದ ನಾನು ಮನೆಯ ಏರಿಯಾಕ್ಕೆ ಬರುವ ಸ್ಟ್ರೀಟ್ ಕಾರಿಗಾಗಿ ಕಾಯುತ್ತಿದ್ದೆ,ಹಾಗಾಗಿ ಮನೆ ತಲುಪಿಕೊಳ್ಳುವುದು ಕೊಂಚ ತಡವಾಯಿತು ಮಗಳೇ’ಎಂದು ನುಡಿದ..!!

ಹೀಗೆ ಮುಗಿಯುವ ಈ ಕತೆ,ನಾನೋದಿದ ಅತ್ಯಂತ ವಿಲಕ್ಷಣ ಕತೆಯೆಂದರೆ ಖಂಡಿತ ಅತಿಶಯೋಕ್ತಿಯೇನಲ್ಲ.’ಎ ಸ್ಟ್ರೇಂಜ್ ಸ್ಟೋರಿ’ಎನ್ನುವ ಹೆಸರಿನ ಈ ಅರ್ಥವಾಗದಂತಿರುವ ಕತೆಯೆನ್ನಲಾಗದ ಕತೆಯನ್ನು ಬರೆದಿರುವುದು ’ಆಫ್ಟರ್ ಟ್ವೆಂಟಿ ಇಯರ್ಸ್’,’ಗಿಫ್ಟ್ ಆಫ್ ದ ಮೆಜಾಯ್’ಯಂತಹ ಸಾರ್ವಕಾಲಿಕ ಶ್ರೇಷ್ಠ ಕತೆಗಳ ಸೃಷ್ಟಿಕರ್ತ ಓ ಹೆನ್ರಿ.ಬಹುಶ; ಇಂಥದ್ದೊಂದು ಕತೆಯ ಜನಕ ಓ ಹೆನ್ರಿ ಆಗಿರದಿದ್ದರೆ ಇದು ಪ್ರಕಟಣಾಯೋಗ್ಯ ಕತೆಯೇ ಅಲ್ಲ ಎಂದು ನಿಮಗನ್ನಿಸಬಹುದು.ಕೆಲವು ವರ್ಷಗಳ ಹಿಂದೆ ಇದನ್ನೋದಿದ ನನಗೆ ಅರ್ಥವಾಗದ ಕತೆಯ ತಿರುಳು ನಿಜಕ್ಕೂ ಹುಚ್ಚುಹಿಡಿಸುವಂತಾಗಿತ್ತು.ವಿವರಣೆಗಾಗಿ ಕೆಲವು ಇಂಗ್ಲೀಷ್ ಸಾಹಿತ್ಯವನ್ನೋದಿಕೊಂಡ ಉದ್ದಾಮ ಪಂಡಿತರನ್ನು ಕೇಳಿದರೆ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ವಿವರಣೆ. ಹೆಚ್ಚಿನವರ ಪ್ರಕಾರ ಸಹನೆ ಮತ್ತು ಕೌಟುಂಬಿಕ ಪ್ರೇಮವನ್ನು ವಿವರಿಸುವ ಉತ್ಕಟಭಾವದ ಕತೆಯಿದು.ನಿಮ್ಮ ತಲೆಕಾಯುವ ಕುಟುಂಬ ಮತ್ತದರ ಸದಸ್ಯರು ಸಂಕಷ್ಟದ ಕಾಲಕ್ಕೆ ನಿಮ್ಮನ್ನರಿಸಿ ಬರುತ್ತಾರೆ ಎನ್ನುವುದೇ ಈ ಕಥೆಯ ಮೂಲಭಾವ ಎನ್ನುವುದು ಅವರ ವಿವರಣೆ.ಕತೆಯಲ್ಲಿ ಬರುವ ಜಾನ್ ಸ್ಮೂದರ್ಸ್ ನ ಪಾತ್ರ ನಮ್ಮ ಕುರಿತಾಗಿ ಕಾಳಜಿವಹಿಸುವ ಕುಟುಂಬದ ಹಿರಿತನದ ಸಂಕೇತ.ಮೊಮ್ಮಗಳಿಗಾಗಿ ಅಜ್ಜ ತರುವ ಔಷಧಿ ಬದುಕಿನ ಆಶಾಭಾವದ ಮತ್ತು ಸಹನೆಯ
ಶಕ್ತಿಯ ಸಂಕೇತವೆನ್ನುವುದು ಇಂಥವರ ಅಂಬೋಣ.

ಆದರೆ ಓ ಹೆನ್ರಿ ತುಂಬ ಗಂಭೀರ ಕತೆಗಾರನಲ್ಲ.ಆತನ ಹೆಚ್ಚಿನ ಕತೆಗಳು ರೋಮಾಂಚಕ ಪ್ರಧಾನ ಕತೆಗಳು.ತನ್ನ ಕತೆಗಳ ಮೂಲಕ ಸುಲಭಕ್ಕೆ ಅರ್ಥವಾಗದ ಕ್ಲಿಷ್ಟವಾದ ಸಂಕೀರ್ಣ ತತ್ವಜ್ಞಾನಗಳ ಗೊಡವೆಯೂ ಅವನಿಗೆ ಬೇಕಿಲ್ಲ.ಮುಖ್ಯವಾಗಿ ತನ್ನ ಕತೆಯ ಕೊನೆಯ ಸಾಲಿನಲ್ಲಿ ಕತೆಯ ತಿರುಳನ್ನೇ ಬದಲಾಯಿಸುವ ಕಥಾವಸ್ತುಗಳನ್ನು ಬಳಸಿಕೊಂಡು ಕತೆಗಳನ್ನು ರಚಿಸುವುದು ಅವನ ಟ್ರೇಡ್ ಮಾರ್ಕ್ ಶೈಲಿ.ಹಾಗಾಗಿ ನನಗೆ ಸಾಹಿತ್ಯ ಪಂಡಿತರ ವಿವರಣೆ ಸಮಾಧಾನ ನೀಡಲಿಲ್ಲ.ಕತೆಯ ಕೊನೆಯ ಸಾಲು ನನ್ನನ್ನು ಕೊಂಚ ಗೊಂದಲಕ್ಕೆ ಕೆಡವಿತ್ತು.ಅದರಲ್ಲೂ ’ಸ್ಟ್ರೀಟ್ ಕಾರ್’ಎನ್ನುವ ಶಬ್ದ ವಿಶೇಷ ಗಮನ ಸೆಳೆದಿತ್ತು.ಕೆಲವು ದಿನಗಳ ಹಿಂದೆ ಪುನಃ ಈ ಕತೆಯನ್ನು ಓದಿದವನಿಗೆ ಮತ್ತೊಮ್ಮೆ ಅದೇ ಗೊಂದಲ,’ಸ್ಟ್ರೀಟ್ ಕಾರ್’ಶಬ್ದದೆಡೆಗೆ ಮತ್ತದೇ ಆಸಕ್ತಿ.ಹಾಗೆ ಆ ಶಬ್ದದ ಅರ್ಥವನ್ನು ತಡಕಾಡುತ್ತಿದ್ದವನಿಗೆ ಕತೆಯ ಕುರಿತಾಗಿ ಓ ಹೆನ್ರಿಯ ವಿವರಣೆಯೇ ಸಿಕ್ಕರೆ ಹೇಗಾಗಬೇಡ? ಮರಭೂಮಿಯಲ್ಲಿ ಓಯಾಸಿಸ್ ಸಿಕ್ಕಂತಹ ಸಾರ್ಥಕತೆ ನನಗೆ.’ಸ್ಟ್ರೀಟ್ ಕಾರ್’ ಎಂದರೆ ರಸ್ತೆಯ ನಡುವೆ ಹಳಿಗಳ ಮೇಲೆ ಓಡಾಡುವ ರೈಲಿನಂತಹ ಸಂಚಾರಿ ವಾಹನ. ರಸ್ತೆರೈಲು ಎನ್ನುವುದು ಹೆಚ್ಚು ಸೂಕ್ತ.ಭಾರತದಲ್ಲಿ ತೀರ ಅಪರೂಪವಾದರೂ ,’ಟ್ರಾಮ್’ಎನ್ನುವ ಹೆಸರಿನಿಂದ ಕರೆಯಲ್ಪಡುವ ಇಂಥಹ ವಾಹನಗಳು ಕಲ್ಕತ್ತೆಯ ರಸ್ತೆಗಳ ಮೇಲೆ ಇಂದಿಗೂ ಓಡಾಡುತ್ತವೆನ್ನುವುದು ಗಮನಾರ್ಹ.

ಕತೆಯ ವಿಷಯಕ್ಕೆ ಬರುವುದಾದರೆ,ಕತೆಗಾರ ಓ ಹೆನ್ರಿ 188೦ರ ಆಸುಪಾಸಿಗೆ ಆಸ್ಟಿನ್ ಪಟ್ಟಣವನ್ನು ಸೇರಿಕೊಂಡವನು.ಅಂದಿಗೆ ಸ್ಟ್ರೀಟ್ ಕಾರುಗಳು ಆಸ್ಟಿನ್ ಪಟ್ಟಣದ ಸಂಚಾರಿ ವ್ಯವಸ್ಥೆಯ ಬಹುಮುಖ್ಯ ಭಾಗಗಳಾಗಿದ್ದವು.ಆದರೆ ರಸ್ತೆರೈಲುಗಳ ಕ್ಷೇತ್ರದಲ್ಲಿ ನಷ್ಟವೇ ಹೆಚ್ಚೆನ್ನುವ ಕಾರಣಕ್ಕೆ ಎಮ್.ಎಮ್ ಶೈಪ್ ನಂತಹ ಕಂಪನಿಯನ್ನು ಹೊರತುಪಡಿಸಿ ಟ್ರಾಮ್ ಉದ್ದಿಮೆಯಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಉದ್ಯಮಿಗಳು ಆಸಕ್ತಿ ತೋರಿಸುತ್ತಿರಲಿಲ್ಲ. ಹಾಗಾಗಿ ಟ್ರಾಮ್ ವ್ಯವಸ್ಥೆಯೆನ್ನುವುದು ಅಕ್ಷರಶಃ ಹದಗೆಟ್ಟು ಹೋಗಿತ್ತು.ಇದರ ಬಗ್ಗೆ ಬರೆಯುವ,ಓ ಹೆನ್ರಿ,”ಆಸ್ಟಿನ್ ಪಟ್ಟಣದ ಸ್ಟ್ರೀಟ್ ಕಾರುಗಳ ಅವ್ಯವಸ್ಥೆ ಹೇಗಿತ್ತೆಂದರೆ,ನಗರದ ಎಷ್ಟೋ ಪ್ರದೇಶಗಳಿಗೆ ಕಾರುಗಳೇ ಇರಲಿಲ್ಲ.ಇದ್ದ ಕೆಲವೇ ಕೆಲವು ರೈಲುಗಳೂ ಸಹ ಗಂಟೆಗೊಮ್ಮೆ ಬಂದು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿದ್ದವು.ಟ್ರಾಮುಗಳಿಗಾಗಿ ಕಾಯುತ್ತ ನಿಂತರೆ ಬದುಕೆಲ್ಲ ನಿಂತಲ್ಲೇ ನಿಂತಿರಬೇಕಾಗಿ ಬರಬಹುದೇನೋ ಎಂಬ ತಮಾಷೆಯಂತೂ ಪಟ್ಟಣದಲ್ಲಿ ತೀರ ಸಾಮಾನ್ಯ ಹಾಸ್ಯವೆಂಬುದಾಗಿ ಪರಿಗಣಿಸಲ್ಪಟ್ಟಿತ್ತು..ಅಂಥದ್ದೇ ಒಂದು ಸಂದರ್ಭದಲ್ಲಿ ವ್ಯಂಗ್ಯವಾಗಿ ಬರೆದ ಕತೆಯಿದು” ಎಂದು ವಿವರಿಸುತ್ತಾನೆ.ಅವನ ವಿವರಣೆಯನ್ನೋದಿದ ನನಗೇನೋ ನಿರಾಳಭಾವ.ಒಂದು ವಿಡಂಬನಾತ್ಮಕ ಕತೆ ಮತ್ತದರ ಸುತ್ತ ಹುಟ್ಟಿಕೊಂಡ ಅರ್ಥವಿಲ್ಲದ ಅರ್ಥಗಳು ,ಕೊನೆಗೂ ನನಗೆ ಸಿಕ್ಕ ಸ್ಪಷ್ಟ ಉತ್ತರ ಇವೆಲ್ಲವನ್ನು ನಿಮ್ಮೆದುರು ಬಿಚ್ಚಿಡುವ ಮನಸ್ಸಾಗಿ ಹೀಗೆ ಹರವಿಕೊಂಡಿದ್ದೇನೆ.

6 ಟಿಪ್ಪಣಿಗಳು Post a comment
  1. A.Shiva Prakash
    ಡಿಸೆ 10 2015

    Thank You

    ಉತ್ತರ
  2. ಡಿಸೆ 10 2015

    sooper story & a meaningful tributary research!

    ಉತ್ತರ
  3. Raghavendra S
    ಡಿಸೆ 10 2015

    ಅದ್ಭುತವಾದ ಬರಹ ಮತ್ತು ಅನುವಾದ ಕೂಡ..Seriously Mr kodkani..ನೀವು ಪತ್ರಿಕೆಗಳಿಗೂ ಬರೆಯುದೊಳಿತು.ಡಬ್ಬಾ ಅನುವಾದಕರು ,ಬರಹಗಾರರುಗಳಿ೦ದ ಪತ್ರಿಕಾಲೋಕ ಹಾಳಾಗಿ ಹೋಗಿದೆ(ನೀವು ಈಗಾಗಲೇ ಪತ್ರಿಕೆಗಳಿಗೆ ಬರೆಯುತ್ತಿದ್ದರೆ ಕ್ಷಮಿಸಿ)

    ಉತ್ತರ
  4. ಸ್ಪಂದನಾ ರಾಮ್
    ಡಿಸೆ 10 2015

    Good one Mr.Kodkani

    ಉತ್ತರ
  5. harish
    ಡಿಸೆ 11 2015

    Good one

    ಉತ್ತರ
  6. aryaan
    ಡಿಸೆ 11 2015

    ಗುರು, ನೀವಾದರು ಅರ್ಥ ಕೊಡಿಸಬಹುದಿತು

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments