ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 11, 2015

ಇವರೆಲ್ಲ ಭಾರತೀಯ ಮುಸ್ಲಿಮರ ಹಿತಚಿಂತಕರೆ?

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಭಾರತೀಯ ಮುಸ್ಲಿಮರುಇತ್ತೀಚೆಗೆ ಯಾಕೂಬ್ ಮೆಮನ್ ಗಲ್ಲಿಗೇರಿದ ನಂತರ ದೇಶಾದ್ಯಂತ ಬಂದ ಪ್ರತಿಕ್ರಿಯೆಗಳಲ್ಲಿ ಒಂದು ಅಸಹಜತೆಯಿತ್ತು. ಮೊದಲನೆಯದಾಗಿ, ಕೆಲವರು ಮರಣ ದಂಡನೆ ಇರಬೇಕೇ ಬೇಡವೆ? ಎಂಬ ನೆಲೆಯಲ್ಲಿ ಚರ್ಚಿಸಿದರು. ಇದಕ್ಕೂ ಹಿಂದೆ ಎಷ್ಟೋ ಮರಣದಂಡನೆಗಳಾಗಿವೆ, ಇಷ್ಟು ಗಂಭಿರವಾಗಿ ನಾಗರಿಕರು ಚರ್ಚೆಯನ್ನೆತ್ತಿದ್ದು ನನ್ನ ಗಮನಕ್ಕೆ ಬಂದಿಲ್ಲ.  ಸ್ವತಂತ್ರ ಭಾರತದಲ್ಲಿ ನಾಥೂರಾಮ ಗೋಡ್ಸೆಯ ಪ್ರಕರಣದಿಂದಲೇ  ಇಂಥ ಉದಾಹರಣೆಗಳು ಪ್ರಾರಂಭವಾದವು. ಅವನ ಮರಣದಂಡನೆಯನ್ನು ತಡೆಯಬಹುದಿತ್ತೆಂದು ಈ ಮಾನವ ಹಕ್ಕುಗಳ ವಕ್ತಾರರಿಗೆ ಎಂದಾದರೂ ಅನ್ನಿಸಬಹುದೆ? ಹಾಗಾಗಿ ಈ ಕುರಿತು ಚರ್ಚೆ ನಡೆಸಬಯಸುವವರು ಇಂಥ ಕ್ಷುದ್ರತನದಿಂದ ಮೇಲೆ ಏರಬೇಕಾಗುತ್ತದೆ. ಎರಡನೆಯದಾಗಿ, ಯಾಕೂಬ್ ಅಪರಾಧಿಯಾಗಿದ್ದನೆ? ಎಂಬ ನೆಲೆಯಲ್ಲಿ ಕೂಡ ಹಲವರು ಚರ್ಚೆ ನಡೆಸಿದರು. ಈ ಚರ್ಚೆ ಕೂಡ ಈ ಸಂದರ್ಭದಲ್ಲೇ ಎದ್ದಿದ್ದು ಕುತೂಹಲಕಾರಿಯಾಗಿದೆ. ಏಕೆಂದರೆ ಅದು ನಮ್ಮ ನ್ಯಾಯದಾನದ ಕಾರ್ಯಕ್ಷಮತೆಯ ಕುರಿತ ಪ್ರಶ್ನೆ. ಆದರೆ ಯಾಕೂಬನಿಗೆ ಸಂಬಂಧಿಸಿದಂತೆ ನಡೆದಷ್ಟು ಅಳೆದು ತೂಗುವ ಕೆಲಸ ಹಿಂದೆಂದೂ ಇಂಥ ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲಿ ನಡೆದಿರಲಿಲ್ಲ.

ಈ ಚರ್ಚೆಯನ್ನು ಗಮನಿಸಿದರೆ ಕೇವಲ ನ್ಯಾಯ ಅನ್ಯಾಯಗಳಷ್ಟೇ ಇಲ್ಲಿನ ಸಮಸ್ಯೆಯಲ್ಲ ಎಂಬುದಂತೂ ಸ್ಪಷ್ಟ. ಇದಕ್ಕೆ ಮುಸ್ಲಿಂ ಜನಾಂಗವನ್ನು ತಳಕುಹಾಕುತ್ತಿರುವುದು ಆತಂಕಕಾರಿ. ಕೆಲವರು, ರಾಜೀವಗಾಂಧಿ, ಇಂದಿರಾ ಗಾಂಧಿ ಹಂತಕರು ಹಿಂದೂಗಳು ಎಂಬ ಕಾರಣಕ್ಕಾಗಿ ರಕ್ಷಿಸಿ, ಯಾಕೂಬ್ ಮುಸ್ಲಿಮನೆಂಬ ಕಾರಣಕ್ಕೆ ಗಲ್ಲಿಗೆ ಏರಿಸುತ್ತಿದ್ದಾರೆ ಎಂದರು. ಅವರಿಗೆ ಗಾಂಧಿ ಹಂತಕರಿಗೆ ಏನಾಯಿತೆಂಬುದು ಮರೆತೇ ಹೋದಂತಿದೆ.  ಇನ್ನೂ ಕೆಲವರು ಅಹಮದಾಬಾದ ಗಲಭೆಯ ರೂವಾರಿಗಳಿಗೆ ಪ್ರಧಾನ ಮಂತ್ರಿ ಪಟ್ಟದ ಸನ್ಮಾನ, ಬಾಂಬೆ ಗಲಭೆಯ ರೂವಾರಿಗೆ ಮರಣದಂಡನೆ ಎಂಬುದಾಗಿ ವಿಷಾದ ವ್ಯಕ್ತಪಡಿಸಿದರು. ಇವರಿಗೆಲ್ಲ  ಅಹಮದಾಬಾದ ಗಲಭೆಯ ಹಿಂದೆ ಗೋಧ್ರಾದಲ್ಲಿನ ನೂರಾರು ಜನ ಹಿಂದೂ ಕರಸೇವಕರ ಜೀವಂತ ದಹನದ ಘಟನೆ ಇತ್ತೆನ್ನುವುದು ಮರೆತೇ ಹೋಗಿದೆ. ಅದಕ್ಕಿಂತ, ತದನಂತರ ಮುಸ್ಲಿಂ ಭಯೋತ್ಪಾದಕರಿಂದ ಇಂಥದ್ದೇ ಇತರ ಅನೇಕ ಹಿಂಸಾಕಾಂಡಗಳ ಸಂದರ್ಭದಲ್ಲಿ ಹಿಂದೂಗಳು ಹೀಗೇನೂ ಪ್ರತಿಕ್ರಿಯಿಸದೇ ಸಂಯಮಿಸಿಕೊಂಡಿದ್ದು ಮರೆತೇ ಹೋಗಿದೆ.  ಆಶ್ಚರ್ಯವೆಂದರೆ ಮೋದಿಯನ್ನು ವಿರೋಧಿಸುವ ಭರದಲ್ಲಿ ಅನೇಕ ಸೆಕ್ಯುಲರ್ ಚಿಂತಕರೂ ಇಂಥ ಅಪಾಯದ ಹಾದಿಯನ್ನು ತುಳಿಯುತ್ತಿದ್ದಾರೆ.

ರಾಜೀವ ಹಾಗೂ ಇಂದಿರಾ ಹಂತಕರನ್ನು ರಾಜಕೀಯ ಕಾರಣಗಳಿಗಾಗಿ ಗಲ್ಲಿಗೇರಿಸಲಿಲ್ಲ ಎಂದು ದೂರುವವರಿಗೆ ರಾಜಕೀಯ ಕಾರಣದಿಂದಾಗಿ ಮುಸ್ಲಿಮರಿಗೆ ಭಾರತದಲ್ಲಿ ಏನೇನು ಸಂರಕ್ಷಣೆ ಹಾಗೂ ಸವಲತ್ತುಗಳು ಸಿಕ್ಕಿವೆ ಎಂಬುದು ಮರೆತುಹೋಗಿದೆ. ಮುಸ್ಲಿಮರಿಗಾಗೇ ಪ್ರತ್ಯೇಕ ಭಾಗವನ್ನು ಅವರು ತೆಗೆದುಕೊಂಡು ಅದನ್ನು ಇಸ್ಲಾಂ ರಾಷ್ಟ್ರವನ್ನಾಗಿ ಬದಲಾಯಿಸಿಕೊಂಡ ನಂತರವೂ ಭಾರತವು ಮುಸ್ಲಿಮರ ಹಿತರಕ್ಷಣೆಗಾಗಿ ಸೆಕ್ಯುಲರ್ ಸಂವಿಧಾನವಾಗೇ ಉಳಿದುಕೊಂಡು ಬಂದಿದೆ, ಅವರನ್ನು ಅಲ್ಪಸಂಖ್ಯಾತ ರಿಲಿಜನ್ನು ಎಂಬುದಾಗಿ ಪರಿಗಣಿಸಿ ಅವರ ರಕ್ಷಣೆಗೆ ಹಾಗೂ ಅಭಿವೃದ್ಧಿಗೆ ವಿಶೇಷ ಕಾನೂನುಗಳನ್ನು ಮಾಡಿದೆ. ಹಿಂದುತ್ವದ ಸರ್ಕಾರಗಳಿಗೂ ಕೂಡ ಮುಸ್ಲಿಮರನ್ನು ಓಲೈಸದೇ ಅದರ ರಾಜಕೀಯ ನಡೆಯುವುದಿಲ್ಲ. ಇಲ್ಲಿರುವ ಬಹುಸಂಖ್ಯಾತ ಇತರರಲ್ಲಿ ಏಳಬಹುದಾದ ಪ್ರಶ್ನೆಗಳು, ಪ್ರತಿರೋಧಗಳ ತಲ್ಲಣದ ನಡುವೆ, ಕೆಲವೊಮ್ಮೆ ಅದನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿ ಕೂಡ ಭಾರತ ಸರ್ಕಾರವು ತನ್ನ ಸೆಕ್ಯುಲರ್ ನೀತಿಗೆ ಬದ್ಧತೆಯನ್ನು ತೋರಿಸಿದೆ. ಅಷ್ಟೇ ಅಲ್ಲ, ಈ ಮುಸ್ಲಿಂ ಪರ ಸೆಕ್ಯುಲರ್ ನೀತಿಯನ್ನು ಬೆಂಬಲಿಸುವ ಹಿಂದೂ ಬುದ್ಧಿಜೀವಿ ವರ್ಗವೊಂದು ಎಷ್ಟು ಪ್ರಬಲವಾಗಿದೆಯೆಂದರೆ ಕಳೆದ ಕೆಲವು ದಶಕಗಳಲ್ಲಿ ಹಿಂದುತ್ವದ ವಿರುದ್ಧ ಪ್ರತ್ಯಕ್ಷವಾಗಿ ಹೋರಾಡಿದ್ದು ಹಾಗೂ ಇಂದೂ ಹೋರಾಡುತ್ತಿರುವವರು ಇವರೇ. ಅಷ್ಟೇ ಅಲ್ಲ, ಭಾರತದಲ್ಲಿ ಉನ್ನತ ಹುದ್ದೆಗಳಲ್ಲೆಲ್ಲ ಮುಸ್ಲಿಮರು ರಾರಾಜಿಸುತ್ತಿರುವುದನ್ನು ಜನರು ಸಹಜವಾಗೇ ನೋಡುತ್ತಾರೆ. ಅದೊಂದೇ ಅಲ್ಲ ಮೌಲಾನಾ ಆಝಾದ್, ಅಬ್ದುಲ್ ಕಲಾಂ ಅಂಥ ಅನೇಕ ಮುಂದಾಳುಗಳನ್ನು ಹಿಂದುಗಳು ಮನಸಾರೆ ಗೌರವಿಸುತ್ತಾರೆ.

ಇವೆಲ್ಲ ಭಾರತದಲ್ಲಿ ಮುಸ್ಲಿಮರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ ಎಂಬುದಾಗಿ ಆರೋಪಿಸುವವರ ಲೆಕ್ಕಕ್ಕೇ ಇಲ್ಲ. ಹೀಗೆ ವಾದಿಸುವವರು ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿಯೇನು ಎಂಬುದರ ಕುರಿತು ಸೊಲ್ಲೆತ್ತುವುದಿಲ್ಲ. ಆದರೆ ಪಾಕಿಸ್ತಾನದ ಹಿಂದೂ ನೀತಿ ಕೂಡ ಭಾರತೀಯ ಹಿಂದೂ ಮುಸ್ಲಿಂ ಸಂಬಂಧಕ್ಕೆ ನಿರ್ಣಾಯಕವಾದುದು. ಏಕೆಂದರೆ ಭಾರತದ ವಿಭಜನೆ ನಡೆದಾಗ ಭಾರತದಲ್ಲಿ ಮುಸ್ಲಿಮರಿದ್ದಂತೆ ಪಾಕಿಸ್ತಾನ ಬಾಂಗ್ಲಾದೇಶಗಳಲ್ಲೂ ಹಿಂದೂಗಳಿದ್ದರು. ಆ ಸರ್ಕಾರಗಳಲ್ಲಿ ಹಿಂದೂಗಳನ್ನು ಹತ್ತಿಕ್ಕಲಾಗಿದೆ. ಹಿಂದೂ ಅಲ್ಪಸಂಖ್ಯಾತರಿಗಾಗಿ ಅಲ್ಲಿ ಯಾವುದೇ ನೀತಿಗಳನ್ನು ರೂಪಿಸಿಕೊಂಡಿದ್ದಾಗಲೀ, ನಾಗರಿಕ ಹೋರಾಟಗಳಾಗಲೀ ಇದ್ದುದೂ ಕೂಡ ಕಾಣಿಸುವುದಿಲ್ಲ. ಅಲ್ಪಸಂಖ್ಯಾತರನ್ನು ರಕ್ಷಿಸುವ ಈ ಹೊಣೆಗಾರಿಕೆ ಕೇವಲ ಭಾರತಕ್ಕೆ ಹಾಗೂ ಹಿಂದೂಗಳಿಗೆ ಮಾತ್ರ ಏಕೆ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಹಾಗೇ ಉಳಿದುಕೊಳ್ಳುತ್ತದೆ. ಹೀಗಿರುವಾಗ ಭಾರತೀಯ ನ್ಯಾಯಾಲಯಗಳಲ್ಲಿ ಪಾತಕಿಗಳ ಕುರಿತು ನೀಡಿದ ತೀರ್ಪುಗಳನ್ನು ಕೂಡ ಮುಸ್ಲಿಂ ಸಮಸ್ಯೆಯನ್ನಾಗಿ ಪರಿವರ್ತಿಸುವುದು ಹಿಂದೂಗಳ ಮೇಲೆ ಯಾವ ಪರಿಣಾಮವನ್ನು ಬೀರಬಹುದು?

ವಿಭಜನೆಯ ಕಾಲದ ಹಿಂಸೆ ಮಾರಣ ಹೋಮಗಳು ಹಿಂದೂ ಹಾಗೂ ಮುಸ್ಲಿಮರಿಬ್ಬರ ನೆನಪನ್ನೂ ಕಾಡುತ್ತಿವೆ.ಈ ಹಿಂಸೆಯ ಹೊಣೆಯನ್ನು ಮುಸ್ಲಿಂ ಪ್ರತ್ಯೇಕತಾವಾದಿಗಳ ಹೆಗಲಿನಿಂದ ಜಾರಿಸುವುದು ಸಾಧ್ಯವಿಲ್ಲ. ಅವರಿಗೆ ಕಾರಣಗಳೇನೇ ಇದ್ದಿರಬಹುದು, ಅದರಲ್ಲಿ ಇಸ್ಲಾಂ ನಿರ್ಣಾಯಕವಾಗಿದ್ದುದಂತೂ ಸುಳ್ಳಲ್ಲ. ಈ ಮುಂದಾಳುಗಳು ಮುಸ್ಲಿಂ ಸಮುದಾಯದ ಹಿತಚಿಂತಕರು ಆಗಿದ್ದೇ ಹೌದಾದಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನಿಡುವಾಗ ಭಾರತದಲ್ಲಿನ ಮುಸ್ಲಿಮರ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು.  ಆದರೆ ಮುಸ್ಲಿಮ್ ಜನಾಂಗದ ಏಳ್ಗೆಯು ಪ್ರತ್ಯೇಕ ಧಾರ್ಮಿಕ ರಾಷ್ಟ್ರದಲ್ಲೇ ಇದೆ ಎಂದು ಘೋಷಿಸಿದ ಪ್ರತ್ಯೇಕತಾವಾದಿಗಳು ಪಾಕಿಸ್ತಾನದಲ್ಲಿದ್ದುದಕ್ಕಿಂತ ಹೆಚ್ಚು ಮುಸ್ಲಿಮರನ್ನು ಭಾರತದಲ್ಲಿ ಬಿಟ್ಟು ಹೋದದ್ದೇಕೆ? ಅದೂ ಹೋಗಲಿ, ಪ್ರತ್ಯೇಕ ರಾಷ್ಟ್ರವಾದ ಮೇಲೆ ಅವರಿಗೆ ಭಾರತೀಯ ಮುಸ್ಲಿಮರ ಕುರಿತು ಏನಾದರೂ ಕಾಳಜಿ ಇದೆಯೆ? ತಮ್ಮದನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಿಕೊಂಡು ಭಾರತ ವಿರೋಧವನ್ನು ತಮ್ಮ ನೀತಿಯನ್ನಾಗಿ ಮಾಡಿಕೊಂಡರು. ಭಾರತದಲ್ಲಿ ಮುಸ್ಲಿಂ ಭಯೋತ್ಪಾದನೆಯನ್ನು ಪೋಷಿಸಿಕೊಂಡು ಬಂದರು. ಭಾರತ ಪಾಕಿಸ್ತಾನಗಳ ಇಂಥ ಸಂಬಂಧವು ಭಾರತೀಯ ಮುಸ್ಲಿಮರಲ್ಲಿ ಏನೇನು ತಳಮಳಗಳನ್ನು, ಅಸ್ಥಿರತೆಯನ್ನು ಸೃಷ್ಟಿಸಬಹುದು ಎಂಬುದು ಅವರಿಗೆ ಬೇಡ. ಬದಲಾಗಿ ಭಾರತೀಯರ ಮನದಲ್ಲಿ ಒಂದು ಐತಿಹಾಸಿಕ ಅನ್ಯಾಯದ ಭಾವನೆಯನ್ನು ಹಾಗೂ ಮುಸ್ಲಿಂ ವಿರೋಧೀ ಭಾವನೆಯು ಜಾಗೃತವಾಗಿರುವಂತೆ ಗಾಳಿ ಹಾಕುತ್ತಿದ್ದಾರೆ. ಇಲ್ಲಿ ಭಯೋತ್ಪಾದನೆ ನಡೆಸಿದವರಿಗೆ ತಮ್ಮಲ್ಲಿ ಆಶ್ರಯ ಕೊಟ್ಟು ಅವರ ಹೆಗಲಿನ ಮೇಲೆ ಬಂದೂಕನ್ನಿಟ್ಟು  ಹೆದರಿಸುತ್ತಿದ್ದಾರೆ.

ಭಾರತದಲ್ಲಿ ಹಿಂದುತ್ವದ ಸಂಘಟನೆಗಳು ಹುಟ್ಟಿರುವುದೇ ಈ ಮುಸ್ಲಿಂ ಪ್ರತ್ಯೇಕತೆಯ ರಾಜಕೀಯಕ್ಕೆ ಪ್ರತಿಕ್ರಿಯೆಯಾಗಿ. ಅವು ಬೆಳೆಯುತ್ತಿರುವುದಕ್ಕೆ ಈ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯೂ ಕಾರಣ. ಇದರ ಜೊತೆಗೆ ಕೆಲವು ಭಾರತೀಯ ಮುಸ್ಲಿಂ ಮತೀಯ ಮುಂದಾಳುಗಳ ನಿಲುವು ಹಾಗೂ ಪಾಕಿಸ್ತಾನ, ಬಾಂಗ್ಲಾದೇಶಗಳಂಥ ಮುಸ್ಲಿಂ ರಾಷ್ಟ್ರಗಳ ನೀತಿಗಳೂ ಕಾರಣವಾಗಿವೆ. ಇದು ಸಾಲದೆಂಬಂತೆ ವಸಾಹತು ಕಾಲದ ಚರಿತ್ರೆ ಬರವಣಿಗೆಯು ಮಧ್ಯಕಾಲದಲ್ಲಿ ಮುಸ್ಲಿಮರ ಮತೀಯ ದೌರ್ಜನ್ಯಗಳನ್ನು ದಾಖಲಿಸಿ ಇಟ್ಟಿದೆ. ಇಂಥ ಐತಿಹಾಸಿಕ ಕಗ್ಗಂಟುಗಳನ್ನು ಸರಿಪಡಿಸಿ ಸಹಬಾಳ್ವೆಯನ್ನು ಸಾಧಿಸುವುದು ಹೇಗೆ? ಇಲ್ಲಿ ಬಾಂಬ್ ಸಿಡಿಸಿ ಓಡಿಹೋಗಿ ಪಾಕಿಸ್ತಾನದಲ್ಲಿ ಅಡಗಿ ಕೂತು ಇಲ್ಲಿನ ಮುಸ್ಲಿಮರಿಗೆ ಮೆರವಣಿಗೆಗಳನ್ನು ಮಾಡಲು, ಭಯೋತ್ಪಾದನೆ ಮಾಡಲು ಪ್ರೇರೇಪಿಸುವುದೆ? ತಾವು ಯಾಕೂಬನ ಮರಣದಂಡನೆಯ ಸೇಡನ್ನು ತೀರಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದಾಕ್ಷಣ ಭಾರತೀಯ ಮುಸ್ಲಿಮರ ಯಾವ ಸಮಸ್ಯೆಗಳು ಬಗೆಹರಿದವು?  ಇಂಥ ಕೃತ್ಯಗಳಿಂದ ಒಂದಿಷ್ಟು ಮುಗ್ಧ ಮುಸ್ಲಿಮರೂ ಸಾಯುವುದು ಬಿಟ್ಟರೆ ಭಾರತೀಯ ಸೆಕ್ಯುಲರ್ ರಾಜಕಾರಣದ ಯಾವ ಸಮಸ್ಯೆಗಳನ್ನೂ ಅವು ಪರಿಹರಿಸಲಾರವು. ಬದಲಾಗಿ ಇಲ್ಲಿನ ಮುಸ್ಲಿಮರ ಜೀವನ ಮತ್ತಷ್ಟು ದುರ್ಭರವಾಗುತ್ತದೆ ಅಷ್ಟೆ. ಇಂಥ ಅಪರಾಧಿಗಳು ಹಾಗೂ ಅವರ ಬೆಂಬಲಿಗರು ಭಾರತೀಯ ಮುಸ್ಲಿಮರ ಹಿತಸಾಧಕರಂತೂ ಖಂಡಿತಾ ಅಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments