ಗೂಢಚರ್ಯದ ಅಂತ’ರಾ’ಳ
– ಸಂತೋಷ್ ತಮ್ಮಯ್ಯ
ಕಾಲೇಜು ದಿನಗಳ ರಸಪ್ರಶ್ನೆಯಲ್ಲಿ ಅದರ ಬಗ್ಗೆ ಪ್ರಶ್ನೆಗಳು ಬಂದಿರಬಹುದು. ಪತ್ರಿಕೆಗಳ ವರದಿಗಳು ಅವುಗಳ ಕುತೂಹಲವನ್ನು ಬೆಳೆಸಿರಬಹುದು. ಸಿನೆಮಾಗಳು ಆ ಕುತೂಹಲವನ್ನು ಕೆರಳಿಸಿರಬಹುದು. ದೇಶ ದ್ರೋಹಿ ISI ಪ್ರಸ್ಥಾಪವಾದಾಗಲೆಲ್ಲಾ ಅದು ನೆನಪಾಗಿರಬಹುದು, ಬಾಂಡ್ ಸಿನೆಮಾಗಳು ನೋಡುವಾಗಲೆಲ್ಲಾ ಅದು ನೆನಪಾಗಿರಬಹುದು. ಅದರ ಬಗ್ಗೆ ಹೆಮ್ಮೆ ಹುಟ್ಟಿರಬಹುದು. ಇಸ್ರೇಲಿನ ಮೊಸಾದ್‌ನಂತೆ, ಅಮೇರಿಕಾದ ಸಿಐಎನಂತೆ, ಇಂಗ್ಲೆಂಡಿನ MI-6 ನಂತೆ ನಮ್ಮ Research and Analysis Wing ಎಂದುಕೊಂಡಿರಲೂಬಹುದು.
ನಿಜ ಆ ಹೆಸರಲ್ಲಿ ಆಕರ್ಷಣೆಯಿದೆ. ಹಾಗಾಗಿ RAW ಎಂದರೆ ಎಲ್ಲರಿಗೂ ಗೊತ್ತಿದೆ. ಆ ಹೆಸರಿನೊಂದಿಗೆ ನಿಗೂಢತೆ ಮೆತ್ತಿಕೊಂಡಿದೆ. ಎಲ್ಲರಿಗೂ ಅದರ ಬಗ್ಗೆ ಕುತೂಹಲ ಇದ್ದೇ ಇದೆ. ಏಕೆಂದರೆ ಪ್ರತಿಯೊಬ್ಬ ಭಾರತೀಯನಿಗೂ RAW ಎಂದರೆ ಗೂಢಾಚಾರಿಕೆ ನೆನಪಾಗುತ್ತದೆ. ಪಾಕಿಸ್ಥಾನ ನೆನಪಾಗುತ್ತದೆ. ರೋಚಕ ಕಥೆಗಳು ನೆನಪಾಗುತ್ತವೆ. ಜೇಮ್ಸ್ ಬಾಂಡ್ ಸಿನೆಮಾಗಳಂತಹ ಸಾಹಸಗಳು ನೆನಪಾಗುತ್ತವೆ. ಶತ್ರು ದೇಶದೊಳಗೆ ನುಗ್ಗಿ ರಹಸ್ಯಗಳನ್ನು ಭೇದಿಸುವ ಪರಾಕ್ರಮಿ, ಯಾವುದೋ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಏಜೆಂಟ್ ನೆನಪಾಗುತ್ತದೆ. ಭಾರತದ ‘ರಾ’ ಅಂಥದ್ದು. ಸಿಕ್ಕಿ ಹಾಕಿಕೊಂಡು ವರ್ಷಾನುಗಟ್ಟಲೆ ಪಾಕಿಸ್ಥಾನದ ಜೈಲುಗಳಲ್ಲಿ ಕೊಳೆಯುವ ಅಥವಾ ಗಲ್ಲಿಗೇರಿಸಲ್ಪಡುವ ಆತನಿಗಾಗಿ ದೇಶ ಮರುಗಿದೆ. ದೇಶದ ರಹಸ್ಯಗಳು ಸೋರಿಕೆಯಾಗದಂತೆ ತಡೆಯುವುದು ಮತ್ತು ಶತ್ರುಗಳ ಆಗುಹೋಗುಗಳನ್ನು ಅರಿಯುವುದು ಈ ‘ರಾ‘ ದ ಕೆಲಸ.
ಆದರೆ ‘ರಾ’ ದ ಬಗ್ಗೆ ತಿಳಿಯಲು ಆಸಕ್ತರಾಗಿದ್ದರೂ ಅದರ ಬಗ್ಗೆ ಬಂದ ನಂಬಿಗಸ್ಥ ಪುಸ್ತಕಗಳು ಕಡಿಮೆ. ವಿಚಿತ್ರ ಎಂದರೆ ‘ರಾ’ ಬಗ್ಗೆ ಭಾರತೀಯರು ಬರೆದಿರುವುದಕ್ಕಿಂತಲೂ ಪಾಕ್ ನ ಐಎಸ್‌ಐ ಏಜೆಂಟರು, ಸಾಹಿತಿಗಳು ಬರೆದಿರುವುದೇ ಹೆಚ್ಚು! ನಿಂದಾಸ್ತುತಿಗಳಿಂದ ಕೂಡಿದ, ಸತ್ಯಕ್ಕೆ ದೂರವಾದ ಸಂಗತಿಗಳು ಮತ್ತು ಊಹೆಗಳಿಂದ ತುಂಬಿದ ಪಾಕಿಸ್ತಾನಿ ಪುಸ್ತಕಗಳು ತಮ್ಮ ಮೂಗಿನ ನೇರಕ್ಕೆ ‘ರಾ’ವನ್ನು ಚಿತ್ರಿಸಿವೆ. ಭಾರತದ ಕೆಲವು ಪುಸ್ತಕಗಳಲ್ಲಿ ಕೂಡ ಕೇವಲ ರೋಮಾಂಚಕಾರಿ ಕಥನಗಳಿಗೆ ಪ್ರೇಮವನ್ನು ತುರುಕಿ ಸತ್ಯವನ್ನು ಲಗಾಡಿ ಎಬ್ಬಿಸಿಲಾಗಿದೆ.ಒಟ್ಟು ‘ರಾ’ ವನ್ನು ಹೊರಗಿನಿಂದ ನೋಡಿ ಬರೆದವರೇ ಹೆಚ್ಚು. ಆದರೂ ಭಾರತೀಯ ಸಾಹಿತ್ಯದಲ್ಲಿ ಅಶೋಕ್ ರೈನಾ ಅವರ ಪುಸ್ತಕ ಮತ್ತು ‘ರಾ’ದ ಎಡಿಶನಲ್ ಸಕ್ರೇಟರಿಯಾಗಿದ್ದ ಬಿ. ರಾಮನ್ ಅವರ ಪುಸ್ತಕಗಳು ‘ರಾ’ ದ ನೈಜ ಮುಖವನ್ನು ಚಿತ್ರಿಸುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ ‘ರಾ’ಬಗ್ಗೆ ಬರೆಯುವುದಕ್ಕಿಂತ ಸಿಐಎ ಬಗ್ಗೆ ಬರೆಯುವುದೇ ಸುಲಭ ಎಂಬಂತಹ ಪರಿಸ್ಥಿತಿ ಇದೆ. ಏಕೆಂದರೆ ಅವುಗಳ ಬಗ್ಗೆ ಅಧಿಕೃತ ವೆಬ್‌ಸೈಟುಗಳಿವೆ.ಅದರೆ ಭಾರತದಲ್ಲಿ ಇಲ್ಲ. ಜೊತೆಗೆ ಭಾರತದ ೧೯೨೩ರ ಭಾರತೀಯ ರಹಸ್ಯ ಕಾಯ್ದೆ ಸುರಕ್ಷತೆಯ ಹೆಸರಲ್ಲಿ ಕೆಲವು ಅಂಶಗಳನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ಭಾರತೀಯರಿಗೆ ‘ರಾ’ ಬಗ್ಗೆ ತಿಳಿಯಬೇಕೆಂದು ಹೊರಟಷ್ಟೂ ಪಾಕಿಸ್ತಾನದ RAW ಕಾಣುತ್ತಾ ಹೋಗುತ್ತದೆ.
ಈ ಹಿನ್ನೆಲೆಯಲ್ಲಿ ಮೆ.ಜ.(ನಿ.) ವಿ.ಕೆ ಸಿಂಗ್ ಅವರ India’s External Intelligence – Secrets of RAW ವಿಭಿನ್ನ ಹೆಜ್ಜೆ. ಈ ಪುಸ್ತಕ ಬಿಡುಗಡೆಯಾಗಿ ನಾಲ್ಕು ವರ್ಷಗಳಾದರೂ ಅಷ್ಟಾಗಿ ಸುದ್ಧಿಯಾಗಲಿಲ್ಲ. ‘ರಾ’ ಬಗ್ಗೆ ಬರೆದರೂ ಅಷ್ಟೊಂದು ಚರ್ಚೆಯಾಗಲಿಲ್ಲ. ಜನರಲ್ ವಿ. ಕೆ ಸಿಂಗ್ ‘ನಾಯಿ’ ಎಂದರೆ ‘ನನಗೇ ಅಂದರು’ ಎಂದುಕೊಳ್ಳುವ ಮಹಾ ಬುದ್ಧಿವಂತ ಪ್ರಜೆ ಇರುವ ದೇಶದಲ್ಲಿ ಮೇಜರ್ ಜನರಲ್ ವಿ.ಕೆ ಸಿಂಗರು ಪುಸ್ತಕ ಬರೆದರೂ ಚರ್ಚೆ ನಡೆಯಲಿಲ್ಲ.ಅಷ್ಟಕ್ಕೂ ಪುಸ್ತಕ ಏಕೆ ಚರ್ಚೆಯಾಗಬೇಕು? ‘ರಾ’ಅಂಥ ಸಂಘಟನೆಯ ಬಗ್ಗೆ ಚರ್ಚೆಯಾದರೂ ಏಕೆ ಎಂಬ ಪ್ರಶ್ನೆ ಬರುತ್ತದೆ. ಅಸಲು ಸಂಗತಿಯಿರುವುದೇ ಇಲ್ಲಿ. ಈ ಪುಸ್ತಕ ಇದುವರೆಗಿನ ‘ರಾ’ ಬಗೆಗಿನ ಭಾವನೆಗಳನ್ನು ನೀಗಿಸುತ್ತದೆ. ದೂರದಿಂದ ಕಂಡಾಗ ಹಗ್ಗ ಹಾವಾಗಿ, ಹಾವೂ ಹಗ್ಗವಾಗಿ ಕಾಣುತ್ತದೆ. ಕಳೆದ ನಾಲ್ಕೈದು ದಶಕಗಳಿಂದ ಭಾರತೀಯ ಗೂಢಾಚಾರ ವ್ಯವಸ್ಥೆಯ ಅಂತರಂಗವನ್ನು ಲೇಖಕರು ಇಲ್ಲಿ ‘ರಾ’ವನ್ನು ವಿವರಿಸುತ್ತಾ ಮಾಡಿದ್ದಾರೆ. ‘ರಾ’ ಎಂದಾರೆ ಕೇವಲ ಅಕ್ಷಯ್ ಕುಮಾರನ ಚಿತ್ರಗಳಂತೆ ಎನ್ನುವ ಭ್ರಮೆಗಳನ್ನು, ಹಿಂದಿನ ಅಡಳಿತಗಾರರು ದೇಶವನ್ನು ಇಟ್ಟಿದ್ದ ಸ್ಥಿತಿಯನ್ನು ಈ ಪುಸ್ತಕ ಬಿಚ್ಚಿಡುತ್ತದೆ. ‘ರಾ’ದ ಉನ್ನತ ಹುದ್ದೆಯಲ್ಲಿದ್ದ ಲೇಖಕರ ಅಗಾಧ ಜೀವನಾನುಭವ ಇಲ್ಲಿ ಹರಳುಗಟ್ಟಿದೆ. ಗೂಢಚರ‍್ಯೆ ಮತ್ತು ಆಡಳಿತದ ನಡುವಿನ ತಿಕ್ಕಾಟ, ವಿದೇಶಿ ಸಂಸ್ಥೆಗಳ ಅವಲಂಬನೆ, ಸಮರ್ಥ ನಾಯಕತ್ವದ ಕೊರತೆ, ಇವೆಲ್ಲವುಗಳಿಂದ ದೇಶದ ಸುರಕ್ಷತೆಯ ಮೇಲಾಗುವ ಪರಿಣಾಮಗಳ ಕೂಲಂಕಷ ವಿವರಣೆಗಳು India’s External Intelligence – Secrets of RAW ನಲ್ಲಿವೆ. ಹೇಗೆ ‘ರಾ’ವಿದೇಶಗಳಿಂದ ತರಿಸಲ್ಪಡುವ ಸರಕುಗಳ ಮೇಲೆ ಹತ್ತುಪಟ್ಟು ಹೆಚ್ಚಿನ ಬೆಲೆಯನ್ನು ತೆರುತ್ತದೆ. ಅಥವಾ ನುಂಗಲಾಗುತ್ತದೆ. ಹೇಗೆಲ್ಲಾ ಸಣ್ಣಪುಟ್ಟ ಸಂಗತಿಗಳಿಗೆ ನಮ್ಮ ಸುರಕ್ಷತೆಯನ್ನು ಮರೆಯಲಾಗುತ್ತಿದೆ. ಒಮ್ಮೆ ಹೇಗೆ ಒಂದು ತುಂಡು ಬೆಳ್ಳಿಗಾಗಿ ಪ್ರಧಾನಮಂತ್ರಿಗಳ ರಕ್ಷಣೆಯನ್ನೇ ಮರೆಯಲಾಯಿತು, ಪ್ರತಿಭಾವಂತ ‘ರಾ’ ಅಧಿಕಾರಿ ವಿಪಿನ್ ಹಂಡಾ ಹೇಗೆ ಸತ್ತರು, ದೇಶದ ಪ್ರಮುಖ ಗೂಢಚರ್ಯ ಸಂಸ್ಥೆಗಳ ನಡುವಿನ ಶೀತಲ ಸಮರಗಳನ್ನು ಮೆ.ಜ.ವಿ.ಕೆ ಸಿಂಗ್ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ಇವನ್ನೆಲ್ಲಾ ಹೇಳಬೇಕಾದ ಅವಶ್ಯಕತೆಯೇನಿದೆ? ಇವನ್ನು ಪುಸ್ತಕದಲ್ಲಿ ಬರೆದು ನೀವು ಸಾಧಿಸುವುದಾದರೂ ಏನನ್ನು ಎಂದು ಸ್ವತಃ ವಿ.ಕೆ ಸಿಂಗರನ್ನೂ ಜನ ಕೇಳಿದ್ದಾರೆ. ಅದಕ್ಕೆ ವಿ. ಕೆ ಸಿಂಗರು “ತೆರಿಗೆ ಪಾವತಿಸುವ ಭಾರತೀಯ ಪ್ರಜೆಗೆ ಇದನ್ನು ತಿಳಿಯಲು ಹಕ್ಕಿದೆ. ನನ್ನ ದೇಶದ ಗೂಢಚರ‍್ಯೆ ವ್ಯವಸ್ಥೆ ಹೇಗಿದೆ ಎಂಬುದನ್ನು ಆತ ತಿಳಿದುಕೊಳ್ಳಲು ಅರ್ಹ. ಈಗ ಆತ ತಿಳಿದುಕೊಂಡಿರುವುದು ಬರೀ ಸುಳ್ಳನ್ನು ಮಾತ್ರ”ಎಂದಿದ್ದಾರೆ
೩೫ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ ವಿ.ಕೆ ಸಿಂಗ್ ‘ರಾ’ ಸಂಸ್ಥೆಗೆ ಬದಲಿ ನಿಯೋಜನೆಗೊಳಪಡುತ್ತಾರೆ. ಆ ಹೊತ್ತಿಗೆ ಸಿಂಗ್ ಸೈನ್ಯದಲ್ಲಿ ಮೇಜರ್ ಜನರಲ್ ನ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. ಮಿಲಿಟರಿಯ ತಾಂತ್ರಿಕ ವಿಭಾಗ ಮತ್ತು ಸಿಗ್ನಲ್ ಇಂಟಲಿಜನ್ಸ್ ವಿಭಾಗಗಳಲ್ಲಿ ಕೆಲಸ ಮಾಡಿದ ಅಗಾದ ಅನುಭವ ಅವರಿಗಿರುತ್ತದೆ. ಮಿಲಿಟರಿಯಲ್ಲಿ ಸಿಗ್ನಲ್ ಕೋರ್‌ನ ಅನುಭವ ಎಂದರೆ ‘ರಾ’ಕ್ಕೆ ಅದು ಮತ್ತಷ್ಟು ಶಕ್ತಿಯನ್ನು ತುಂಬಬಲ್ಲದು ಎಂದು ಮನಗಂಡು ಸಿಂಗ್ ಅವರನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಮತ್ತು ಅವರನ್ನು ‘ರಾ’ ಉನ್ನತ ಶ್ರೇಣಿಯ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಸಿಂಗ್ ನೇಮಕವಾದ ಕೆಲವೇ ದಿನಗಳಲ್ಲಿ ‘ರಾ’ಕ್ಕೆ ಒಗ್ಗಿಕೊಂಡರು. ಪ್ರತಿ ಮಂಗಳವಾರ ‘ರಾ’ ಕಛೇರಿಯಲ್ಲಿ ಸಮಾಲೋಚನಾ ಸಭೆ ನಡೆಯುತ್ತದೆ. ಆ ಸಭೆಗೆ ಸಿಂಗ್ ಮತ್ತು ಮತ್ತೊಬ್ಬ ಜಂಟಿ ಕಾರ್ಯದರ್ಶಿ ಯಾದವ್ ಎಂಬ ಅಧಿಕಾರಿ ಎಲ್ಲಾ ತಯಾರಿಯನ್ನು ನಡೆಸಿಕೊಂಡಿದ್ದರು. ಅದರೆ ಆ ಸಭೆಗೆ ಇವರಿಬ್ಬರನ್ನು ಆಮಂತ್ರಿಸಲೇ ಇಲ್ಲ.‘ರಾ’ ಈ ಸಭೆಯಲ್ಲಿ ಅವರ ಅಗತ್ಯವನ್ನು ಮನಗಾಣಲಿಲ್ಲ. ಅಂದರೆ ‘ರಾ’ ತನ್ನ ಕಾರ್ಯಯೋಜನೆಯಲ್ಲಿ ಟೆಲಿಕಮ್ಯುನಿಕೇಶನ್ ವಿಭಾಗವನ್ನು ಮೊದಲಿನಿಂದಲೂ ಪ್ರಮುಖ ಅಂಗ ಎಂದು ಪರಿಗಣಿಸುತ್ತಿಲ್ಲ ಎಂಬುದು ಸಿಂಗ್ ಅವರಿಗೆ ಮನವರಿಕೆಯಾಯಿತು. ಸಿಂಗ್ ಅವರಿಗೆ ಆಘಾತವಾಯಿತು. ಏಕೆಂದರೆ ಇಂಥ ವಿಷಯಗಳಲ್ಲಿ ಮಿಲಿಟರಿ ನೂರು ಕೆರೆಯ ನೀರು ಕುಡಿದಿರುತ್ತದೆ.ಇಂಥ ಎಷ್ಟೋ ತಜ್ಞರಿಗೆ ಸ್ವತಃ ಸಿಂಗ್ ತರಬೇತಿಯನ್ನೂ ನೀಡಿದ್ದರು. ಅದರೆ ‘ರಾ’ದಲ್ಲಿ ಅದಕ್ಕೆ ಬೆಲೆಯೇ ಇರಲಿಲ್ಲ.ಮಿಲಿಟರಿಯಲ್ಲಿ ಟೆಲಿಕಮ್ಯುನಿಕೇಶನ್ ವಿಭಾಗ ಬಹುಮುಖ್ಯ ಅಂಗ. ಅಲ್ಲಿ ಟೆಲಿಕಮ್ಯುನಿಕೇಶನ್ ವಿಭಾಗದ ಸಹಯೋಗವಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ. ಹಾಗಾಗಿ ಆರ್ಮಿ ಹಾಗಿದೆ. ‘ರಾ’ ಹೀಗಿದೆ ಎಂಬ ತೀರ್ಮಾನಕ್ಕೆ ಬಂದರು ಮೆ.ಜ.ವಿಕೆ ಸಿಂಗ್.
ನಮಗೆ ಕಾಣುವ ಕಲರ್ ಕಲರ್ ‘ರಾ’ದಲ್ಲಿ ಹೀಗೂ ಇದೆ.ಇನ್ನೂ ಇದೆ.
ಈ ಪುಸ್ತಕದಲ್ಲಿ ಸಿಂಗ್ ‘ರಾ’ ಬಗ್ಗೆ ಹೇಳುವುದಿಷ್ಟು.
೧೯೯೯ರ ಕಾರ್ಗಿಲ್ ಪ್ರಕರಣದ ನಂತರ ಕಾರ್ಗಿಲ್ ತನಿಖಾ ತಂಡ ನೇಮಕವಾಗಿತು. ಡಾ| ಸುಬ್ರಹ್ಮಣ್ಯಂ ನೇತೃತ್ವದ ಈ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೀಗೆ ಉಲ್ಲೇಖವಿತ್ತು. “ರಾ ದ ಅಂಗ ಸಂಸ್ಥೆ ARC (Aviation Research Centre) ಆ ಹೊತ್ತಲ್ಲಿ ಟಿಬೆಟ್‌ನತ್ತ ಗಮನ ಕೇಂದ್ರೀಕರಿಸಿತ್ತು. ಕಾರ್ಗಿಲ್‌ನ ಯೋಚನೆ ಅದಕ್ಕೆ ಬರಲೇ ಇಲ್ಲ” ಅಂದರೆ ಭಾರತೀಯ ಗೂಢಚರ‍್ಯೆ ಸಂಸ್ಥೆಗಳ ಬುದ್ಧಿ, ಎಚ್ಚರ ಎಲ್ಲಿತ್ತು? ಅದಕ್ಕೆ ದೇಶ ತೆತ್ತ ಬೆಲೆ ಎಷ್ಟು?
ಇದೇ ರೀತಿ ಸಿಕ್ಖ್ ಭಯೋತ್ಪಾದನೆ ವ್ಯಾಪಿಸಲು ಕೂಡಾ ‘ರಾ’ ದ ವೈಫಲ್ಯವೇ ಕಾರಣ ಎಂಬುದನ್ನು ಸಿಂಗ್ ಹೇಳುತ್ತಾರೆ. “ಬಿಂದ್ರನ್ ವಾಲೆ ಕೊಬ್ಬಲು ಆತನ ಶಕ್ತಿ ಕಾರಣವಲ್ಲ. ‘ರಾ’ ದ ವೈಫಲ್ಯಗಳೇ ಕಾರಣ ಎನ್ನಲು ಹಲವು ಸಾಕ್ಷಿಗಳಿವೆ. ಏರ್ ಇಂಡಿಯಾದ ವಿಮಾನ ಪಂಜಾಬಿನಿಂದ ಕೆನಡಾಕ್ಕೆ ಹಾರಿಸಿ ಸಿಕ್ಖ್ ಹೋರಾಟಗಾರರನ್ನು ಕರೆತಂದಿತ್ತು. ಆದರೆ ಅದು ‘ರಾ’ಕ್ಕೆ ಗೊತ್ತೇ ಆಗಲಿಲ್ಲ! ಕಾಶ್ಮೀರಿ ಪಂಡಿತರ ಕಗ್ಗೊಲೆಯನ್ನು ಮುಂಜಾಗರೂಕತೆ ವಹಿಸಿದ್ದರೆ ತಪ್ಪಿಸಬಹುದಿತ್ತು. ಆದರೆ ನರಮೇಧ ನಡೆಯಿತು. ಪಾಕಿಸ್ಥಾನದ ಹುನ್ನಾರ ಯಶಸ್ವಿಯಾಯಿತು. ಅದಕ್ಕೆ ಕಾರಣ ಪಾಕಿಸ್ಥಾನಿ ಟೆಲಿಕಮ್ಯುನಿಕೇಶನ್ ವಿಭಾಗದ ಯಶಸ್ಸು ಎಂದು ನಾವು ಹೇಳುತ್ತೇವೆ. ಆದರೆ ನಿಜವಾದ ವೈಫಲ್ಯ ನಮ್ಮ ಗೂಢಚರ‍್ಯೆ ವ್ಯವಸ್ಥೆಯದ್ದು. ‘ರಾ‘ದ ಆಡಳಿತವನ್ನು ಹತ್ತಿರದಿಂದ ಕಂಡ ನನಗೆ ಅಲ್ಲಿನ ಅಂತರಂಗ ಅರ್ಥವಾಗಿದೆ. ಅಲ್ಲಿ ಸಾಕಷ್ಟು ಯಶಸ್ಸಿನ ಕಥೆಗಳಿದ್ದರೂ ಅದಕ್ಕೆ ಪ್ರತಿಭಾವಂತ ಏಜೆಂಟ್‌ಗಳೇ ಕಾರಣ ಎಂದು ನನ್ನ ಅನಿಸಿಕೆ. ಅದರ ಹೊರತಾಗಿ ಸಾಕಷ್ಟು ವೈಫಲ್ಯಗಳ ಮೂಟೆಗಳೇ ಅಲ್ಲಿವೆ. ಗೂಢಚರ್ಯೆಯ ಬಗೆ ನಮ್ಮ ನಿರ್ಲಕ್ಷಕ್ಕೆ ಕಾರ್ಗಿಲ್ ಪ್ರಕರಣವೊಂದೇ ಸಾಕು. ಜೊತೆಗೆ ಐಬಿ ಮತ್ತು ರಾ ನಡುವಿನ ಭಿನ್ನಾಭಿಪ್ರಾಯ ದೇಶವನ್ನು ಸಾಕಷ್ಟು ಕಿತ್ತು ತಿಂದಿದೆ. ಕೇಂದ್ರ ಗೃಹ ಇಲಾಖೆಯ ಅಧೀನ ಸಂಸ್ಥೆಯೆಂಬ ಐಬಿಯ ಅಹಮ್ಮು ಮತ್ತು ಅಲ್ಲಿನ ಅಧಿಕಾರಿಗಳ ದರ್ಪ, ಏಕಪಕ್ಷೀಯ ನಿರ್ಣಯಗಳು ಈ ಎರಡೂ ಸಂಸ್ಥೆಗಳ ನಡುವೆ ಜುಗಲ್ ಬಂಧಿಯನ್ನು ಆಗಾಗ್ಗ ಉಂಟುಮಾಡುತ್ತವೆ. ಕೆಲವು ಅಧಿಕಾರಿಗಳ ಭ್ರಷ್ಟಾಚಾರವಂತೂ ಮನಸ್ಸು ಹಾಳು ಮಾಡುತ್ತವೆ. ರಾ ದ ಒಬ್ಬ ಅಧಿಕಾರಿ ಸಾಕಷ್ಟು ವರ್ಷಗಳಿಂದ ವಿದೇಶಕ್ಕೆ ಹಣವನ್ನು ಕಳುಹಿಸುವ ಹೊಣೆಯನ್ನು ಹೊತ್ತುಕೊಂಡಿದ್ದ. ಯೂರೋಪಿನ ಒಬ್ಬ ಏಜೆಂಟ್‌ಗಾಗಿ ಇದನ್ನು ಮಾಡುತ್ತಿದ್ದೇನೆ ಎಂದು ಆತ ಹೇಳುತ್ತಿದ್ದ. ಆದರೆ ವಾಸ್ತವವಾಗಿ ಅದು ಇಂಗ್ಲೆಂಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಓದುತ್ತಿದ್ದ ಆತನ ಮಗಳಿಗೆ ಹೋಗುತ್ತಿತ್ತು!”
ಅಸಮರ್ಥರ ಕೈಯಲ್ಲಿನ ಅಧಿಕಾರಕ್ಕೆ ಸಿಲುಕಿ ಭಾರತೀಯ ಗೂಡಚರ್ಯೆ ಇಲಾಖೆ ಶಕ್ತಿ ಕುಂದಿದೆ. ಪ್ರಬಲ ರಕ್ಷಣಾ ಸಲಹೆಗಾರರಿಲ್ಲದೆ ಗೂಢಚರ‍್ಯೆ ಓತಪ್ರೋತವಾಗಿ ಸಾಗುತ್ತಿದೆ, ವಿವಿಧ ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆ ಪ್ರತೀ ಹಂತದಲ್ಲೂ ಕಂಡುಬರುತ್ತದೆ ಎನ್ನುತ್ತಾರೆ ವಿ.ಕೆ ಸಿಂಗ್. ಐಬಿ ಆಂತರಿಕ ಗೂಡಚರ್ಯೆಯ ಬಗ್ಗೆ ಗಮನ ಹರಿಸುತ್ತದೆ. ರಾ ಬಾಹ್ಯ ಗೂಡಚರ್ಯೆಯ ಬಗ್ಗೆ ಗಮನ ಹರಿಸುತ್ತದೆ. ಆದರೆ ಎರಡೂ ಸಂಸ್ಥೆಗಳು ಆಂತರಿಕ ಮತ್ತು ಬಾಹ್ಯ ಆಕ್ರಮಣಗಳ ಹೊತ್ತಲ್ಲಿ ಪ್ರತ್ಯಾಕ್ರಮಣ ನಡೆಸುತ್ತವೆ. ಇಂಥ ಹೊತ್ತಲ್ಲಿ ಅವೆರಡೂ ಕಿತ್ತಾಡುತ್ತವೆ. ಹಲವು ಬಾರಿ ಇವು ಒಂದೇ ವಿಷಯದ ಬಗ್ಗೆ ಗೂಡಚರ್ಯೆ ನಡೆಸುತ್ತವೆ. ವಿಚಿತ್ರವೆಂದರೆ ಎರಡೂ ಸಂಸ್ಥೆಗಳು ಅಲ್ಲೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎರಡು ಖರ್ಚು, ಎರಡು ತಂಡ, ಎರಡು ಮಾರ್ಗ. ಆದರೆ ಒಂದೇ ಉದ್ದೇಶ!
India’s External Intelligence – Secrets of RAW ಓರ್ವ ದೇಶವನ್ನು ಪ್ರೀತಿಸುವ ಯೋಧನ ಧ್ವನಿ. ಅಲ್ಲಿ ಎಲ್ಲೂ ‘ರಾ’ಬಗ್ಗೆ ಆರೋಪಗಳಿಲ್ಲ. ಅಧಿಕಾರಶಾಹಿಯ ಬಗ್ಗೆ ವಿಷಾದವಿದೆ. ಸರಿಹೋಗಬೇಕೆಂಬ ಆಕಾಂಕ್ಷೆಯಿದೆ. ‘ರಾ’ಸಿನೆಮಾ ಕಥೆಗಿಂತಲೂ ಭಿನ್ನವಾದುದು ಎಂಬ ಸಾರವಿದೆ.
nice article about RAW…and that book is really excellent…
sir,as a common person what we can do for changing, improving or developing of our mindset of the ‘intelligent representatives and administratives?”