ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 14, 2015

ಆಪರೇಷನ್ ವ್ರಾತ್ ಆಫ್ ಗಾಡ್ ಮತ್ತು ಉಕ್ಕಿನ ಮಹಿಳೆ ಗೋಲ್ಡಾ ಮೈಯರ್

‍ನಿಲುಮೆ ಮೂಲಕ

– ತಾರಾನಾಥ್ ಎಸ್.ಎನ್

ಗೋಲ್ಡಾ ಮೈಯರ್” ನಾನು ಸಮಯವನ್ನು ಆಳುತ್ತೇನೆ ಹೊರತು ಸಮಯ ನನ್ನನಲ್ಲ.”

ಇಸ್ರೇಲ್ ಎಂದರೆ ತಕ್ಷಣ ನೆನಪಾಗುವುದು ಯುದ್ದ-ಹೋರಾಟ ಅಥವಾ ಅದರ ರಾಷ್ಟ್ರಭಕ್ತಿ.2000 ವರ್ಷಗಳಿಂದ ತಾಯಿನೆಲೆ ಬಿಟ್ಟು ಅಲೆಮಾರಿಯಾದ ಯಹೂದಿ ಜನಾಂಗ ಇಂದು ನೆಲೆಸಿರುವ ನಾಡು. 20 ಶತಮಾನಗಳು ಅವರಿವರಿಂದ ತುಳಿತಕ್ಕೆ ಒಳಗಾಗಿ ವಿಶ್ವದಾದ್ಯಂತ ಹಂಚಿ ಹೋದ ಜನಾಂಗ ಮತ್ತೆ ಒಂದುಗೂಡಿದ ದೇಶ. ಜರ್ಮನಿ ಸರ್ವಾಧಿಕಾರಿ ಹಿಟ್ಲರನ ವಿಷಾನೀಲಕ್ಕೆ ತಮ್ಮವರನ್ನು ಕಳೆದುಕೊಂಡ ನೋವಲ್ಲಿ ಮತ್ತೆ ದೇಶಕಟ್ಟಿದ ಛಲಗಾರರ ದೇಶ. ಸಿಕ್ಕ ಸ್ವಾತಂತ್ಯವನ್ನು ಉಳಿಸಿಕೊಳ್ಳಲು,ಸುತ್ತ ನೆರೆದಿರುವ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸದಾ ಎಚ್ಚರಿಕೆಯಿಂದ ಇರುವ ದೇಶ. ಮರುಭೂಮಿಯಲ್ಲಿ ಹಸಿರು ಬೆಳೆದ ಮಾಯಗಾರರ ನಾಡು.ಇಂಥಹ ನಾಡಿನ ಧೀರ ಮಹಿಳೆಯೇ ಗೋಲ್ಡಾ ಮೈಯರ್.

ಗೋಲ್ಡಾ ಮೈಯರ್ ಇಂದಿನ ಉಕ್ರೇನ್ ದೇಶದಲ್ಲಿರುವ ಕೀವ್ ಪಟ್ಟಣದಲ್ಲಿ ಮೇ 3 1898ರಲ್ಲಿ ಜನಿಸಿದರು. ತಂದೆ ಮೋಶೆ ಮಬೋವಿಚ್ಚ್ ಒಬ್ಬ ಬಡಗಿ. ಅವರು ನಂತರ ಉದ್ಯೋಗ ಹುಡುಕಿ ಅಮೆರಿಕಕ್ಕೆ ಹೊರಟರು.ಅಮೇರಿಕಾದಲ್ಲಿ ಓದು ಮುಗಿಸಿದ ಗೋಲ್ಡಾ ಕೆಲಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. 1917ರಲ್ಲಿ ಮಾರಿಸ್ ಮೆಯೇರ್ಸೋನ್ ಎನ್ನುವರನ್ನು ಮದುವೆಯಾದರು. 1921ರಲ್ಲಿ ಪ್ಯಾಲೆಸ್ಟೈನ್ನಲ್ಲಿ ನೆಲೆಯಾದರು. ಅಲ್ಲಿ ಕೃಷಿ ಮಾಡಿ ನೆಲೆಸುವುದು ಅವರ ಇಚ್ಛೆಯಾಗಿತ್ತು ಅವರಿಗೆ 2 ಜನ ಮಕ್ಕಳು ಜನಿಸಿದವು. ಇಲ್ಲಿಗೆ ಗೋಲ್ಡಾಳ ಬದುಕಿನ ಒಂದು ಘಟ್ಟ ಮುಗಿದಿತ್ತು. ಮತ್ತೆ ಅಮೇರಿಕಕ್ಕೆ ಹೋದ ಗೋಲ್ಡಾ ತಮ್ಮ ಬದುಕನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು. ಮೊದಲಿಗೆ ಪ್ಯಾಲೆಸ್ಟೈನ್ ನಲ್ಲಿ ಯಹೂದಿಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು.

ಬದಲಾದ ಸನ್ನಿವೇಶದಲ್ಲಿ ಹಿಟ್ಲರನ ಕಿರುಕುಳಕ್ಕೆ ನಲುಗಿದ ಯಹೂದಿಗಳಿಗೆ ಅಮೇರಿಕಾ ದೇಶ ಕಟ್ಟುವ ಭರವಸೆ ನೀಡಿತು. 1946ರಲ್ಲಿ ಗೋಲ್ಡಾ ಯಹೂದಿ ಹೋರಾಟ ವೇದಿಕೆಯ ರಾಜಕೀಯ ವಿಭಾಗದ ಮುಖ್ಯಸ್ಥರಾದರು. ದೇಶ ರಚಿಸುವ ಮಾತುಕತೆಗೆ ಹೋರಾಟಗಾರರು ಹಾಗು ಬ್ರಿಟನ್ ನಡುವಿನ ಕೊಂಡಿಯಾದರು. ಜೂನ್ 1948ರ ಹೊತ್ತಿಗೆ ಹೊಸ ದೇಶ ಇಸ್ರೇಲ್ ರಚನೆಗೆ ನೀಲನಕ್ಷೆ ಸಿದ್ದವಾದವು. ಸುತ್ತಮುತ್ತ ಶತ್ರುಗಳನ್ನು ಹೊಂದಿರುವ ಕಾರಣ ರಕ್ಷಣಾ ಉಪಕರಣಗಳ ಖರೀದಿಗೆ ಅಗತ್ಯವಾಗಿ 8 ಮಿಲಿಯನ್ ಡಾಲರ್ ಬೇಕಾಗಿತ್ತು. ಇದಕ್ಕಾಗಿ ಇಸ್ರೇಲ್ ನಾಯಕ ಬೆನ್ ಗುರಿಯನ್ ಅಮೇರಿಕಾಕ್ಕೆ ಹೋಗಲು ಯೋಚಿಸಿದರು. ಯುದ್ದ ನಡೆಯುವ ಸಂದರ್ಭ ಇರುವುದರಿಂದ ಅವರು ದೇಶ ಬಿಟ್ಟು ಹೋಗುವುದು ತರವಲ್ಲ ಎಂದು ಯೋಚಿಸಿದ ಗೋಲ್ಡಾ ತಾವು ಹೋದರು. ಅಮೇರಿಕಾದಲ್ಲಿ ನೆಲೆಸಿರುವ ಯಹೂದಿಗಳಿಂದ ಧನ ಸಂಗ್ರಹಿಸಲು ನಿರ್ಧರಿಸಿದರು.ತಾಯಿನೆಲಕ್ಕೆ ಒದಗಿದ ದುಸ್ಥಿತಿಯನ್ನು ಮನ ಮಿಡಿಯುವಂತೆ ವಿವರಿಸಿ 50 ಮಿಲಿಯನ್ ಡಾಲರ್ ಸಂಗ್ರಹಿಸಿ ನಾಡಿಗೆ ಮರಳಿದಾಗ ಅವರಿಗೆ ಭವ್ಯ ಸ್ವಾಗತ ಸಿಕ್ಕಿತ್ತು. ಸ್ವತಹ ಬೆನ್ ಗುರಿಯನ್ ಅವರೇ “ಇಸ್ರೇಲ್ ಎನ್ನುವ ದೇಶವನ್ನು ಸಾಧ್ಯವಾಗಿಸಿದ ಮಹಿಳೆ” ಎಂದು ಘೋಷಿಸಿದರು. ಮೇ 14, 1948 ರಲ್ಲಿ ಇಸ್ರೇಲ್ ಸ್ವಾತಂತ್ರ ಘೋಷಣೆಗೆ ಸಹಿ ಹಾಕಿದ 24 ಮಂದಿಯಲ್ಲಿ ಗೋಲ್ಡಾ ಒಬ್ಬರಾಗಿದ್ದರು. ಮರುದಿನವೇ ಅರಬ್ ದೇಶಗಳು ಇಸ್ರೇಲ್ ನತ್ತ ದಾಳಿಯಿಕ್ಕಿದವು. ಇಸ್ರೇಲಿಗರು ಸಾಹಸದಿಂದ ಅರಬ್ಬರನ್ನು ಸೋಲಿಸಿ 2000 ವರ್ಷಗಳಿಂದ ಕಳೆದುಹೋಗಿದ್ದ ತಾಯಿನೆಲವನ್ನು ಮತ್ತೆ ಪಡೆದರು.

ಗೋಲ್ಡಾ ಕೆಲಕಾಲ ರಷ್ಯಾದಲ್ಲಿ ಇಸ್ರೇಲ್ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. 1949 ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಕಾರ್ಮಿಕ ಮಂತ್ರಿಯಾದರು ಮತ್ತು ಹೊಸದೇಶ ಕಟ್ಟಲು ಶ್ರಮವಹಿಸಿದರು. 1956 ರಲ್ಲಿ ವಿದೇಶಾಂಗ ಮಂತ್ರಿಯಾಗಿ ಆಯ್ಕೆಯಾಗಿ ಇಸ್ರೇಲ್ಗೆ ವಿಶ್ವ ಮಾನ್ಯತೆ ಸಿಗಲು ಕಾರಣರಾದರು. 1966 ರವರೆಗೆ ಇದೇ ಹುದ್ದೆಯಲ್ಲಿ ಮುಂದುವರೆದ ಗೋಲ್ದಾರಿಗೆ ದೊಡ್ಡ ಹೊಣೆಗಾರಿಕೆಯೊಂದು ಸಿಕ್ಕಿತ್ತು. 1969 ರ ಫೆಬ್ರವರಿ 26 ರಂದು ಪ್ರಧಾನಿ ಲೆವಿ ಇಷ್ಕೊಲ್ ನಿಧನದ ನಂತರ 17 ಮಾರ್ಚ್ 1969 ರಂದು ಇಸ್ರೇಲ್ನ ನಾಲ್ಕನೆ ಪ್ರಧಾನಿಯಾಗಿ ಆಯ್ಕೆಯಾದರು. ಇವರ ನಾಯಕತ್ವ ಗುಣ ವಿಶ್ವಕ್ಕೆ ಪರಿಚಯವಾದದು 1972 ರಲ್ಲಿ. ಅಂದು ಸೆಪ್ಟೆಂಬರ್ 4 ಜರ್ಮನಿಯ ಮ್ಯುನಿಚ್ ಬೇಸಿಗೆ ಓಲಂಪಿಕ್ ಕ್ರೀಡಾಂಗಣ. ಬ್ಲಾಕ್ ಸೆಪ್ಟೆಂಬರ್  ಎಂಬ ಪ್ಯಾಲೆಸ್ಟೈನ್ ಹೋರಾಟಗಾರರು ಇಸ್ರೇಲ್ನ 11 ಜನ ಕ್ರೀಡಾಳುಗಳನ್ನೂ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡರು. ಜರ್ಮನಿ ಪೋಲಿಸ್ ಕಾರ್ಯಾಚರಣೆಗೆ ಒತ್ತೆಯಾಳುಗಳು,ಉಗ್ರರು ಬಲಿಯದರು.ತಮ್ಮ ದೇಶಕ್ಕೆ ಒದಗಿದ ಅಪಮಾನಕ್ಕೆ ಕ್ರುದ್ಧರಾದ ಪ್ರಧಾನಿ ಈ ಧಾಳಿ ಹಿಂದೆ ಇರುವ ತಲೆಗಳನ್ನು ರಹಸ್ಯವಾಗಿ ಉರುಳಿಸಲು ಅದೇಶಿಸಿದರು. ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ವಿಶ್ವದಾದ್ಯಂತ ಹರಡಿರುವ ಈ ಧಾಳಿಯ ಸೂತ್ರದಾರರನ್ನು ಕೊಲ್ಲಲು ಆರಂಭಿಸಿತು.ಆಪರೇಷನ್ ವ್ರಾತ್ ಆಫ್ ಗಾಡ್ (Operation Wrath of God)ಎನ್ನುವ ಕಾರ್ಯಾಚರಣೆ 1988 ರವರೆಗೆ ನಡೆಯಿತು. 1979 ರಲ್ಲಿ ಧಾಳಿಯ ಸೂತ್ರಧಾರ ಅಲಿ ಹಸನ್ ಸಲಿಂ ಹತನಾದ. ಹೊರಜಗತ್ತಿಗೆ ತಿಳಿಯದಂತೆ ಇಂಥ ಕೆಲಸಕ್ಕೆ ಕೈ ಹಾಕಿದ್ದು ಗೋಲ್ಡಾ ಅವರ ಎದೆಗಾರಿಕೆಯೇ ಸರಿ.

1973 ಅಕ್ಟೋಬರ್ ತಿಂಗಳು ಇಸ್ರೇಲ್ ಪಾಲಿಗೆ ಕಷ್ಟದ ದಿನಗಳು. ಸಿನಾಯ್ ಕಡೆಯಿಂದ ಈಜೀಪ್ಟ್ ಹಾಗು ಗೋಲ್ಡನ್ ಹೈಟ್ ಕಡೆಯಿಂದ ಸಿರಿಯಾ ಜಂಟಿ ಧಾಳಿಯಿಕ್ಕಿದವು. 1966ರ 6 ದಿನಗಳ ಯುದ್ದದಲ್ಲಿ ಇಸ್ರೇಲ್ ಗಳಿಸಿದ್ದ ಪ್ರದೇಶಗಳಿವು . “ಈಜೀಪ್ತಿಯನ್ನರು ಈಜೀಪ್ತಿನವರೆಗೆ ಹಿಂದೆ ಓಡಬಹುದು.ಸಿರಿಯನ್ನರು ಸಿರಿಯಾ ತನಕ ಹೋಗಬಹುದು,ನಮಗೆ ಕೇವಲ ಸಮುದ್ರ ಉಳಿದಿದೆ.ಸೋಲುವ ಮೊದಲು ಹೊರಡುವ ” ಎನ್ನುತ್ತಾ,ಶತ್ರುವಿನ ಮೇಲೆ ಎರಗಿ ದೇಶವನ್ನು ಮುನ್ನಡೆಸಿದ್ದು ಅಲ್ಲದೆ ಸೂಯೆಜ್ ಕಾಲುವೆಯವರೆಗೆ ಸೈನ್ಯ ನುಗ್ಗಿಸಿ ಗೆಲುವು ಸಾಧಿಸಿದರು. ಯೊಂ-ಕಿಪ್ಪೂರ್ ವಾರ್ ಎನ್ನುವ ಈ ಯುದ್ದದಲ್ಲಿ ಅಕ್ಟೋಬರ್ 5 ರಿಂದ 25 ರವರೆಗೆ ಅರಬ್ಬಿಗಳಿಗೆ ಮರೆಯಲಾಗದ ಹೊಡೆತ ನೀಡಿದರು.ಮುಂದೆ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದು 1974 ರ ಏಪ್ರಿಲ್ 11 ರಂದು ಗೋಲ್ಡಾ ಮೈಯರ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇವರು ಪ್ರಧಾನಿ ಇಂದಿರಾ ಗಾಂಧಿ ಸಮಕಾಲೀನರಾಗಿ ಭಾರತ-ಪಾಕ್ ನ 1971 ರ ಯುದ್ದದಲ್ಲಿ ಭಾರತಕ್ಕೆ ಯುದ್ದೋಪಕರಣ ನೀಡಿ ಸಹಕರಿಸಿದರು.

ಇಸ್ರೇಲ್ ದೇಶದ ತಾಯಿಯಾಗಿದ್ದ ಗೋಲ್ಡಾ 1978 ರ ಡಿಸೆಂಬರ್ 8 ರಂದು ನಿಧನರದರು. ಅವರ ಭೌತಿಕ ಶರೀರದ ಅಂತ್ಯಸಂಸ್ಕಾರ ಡಿಸೆಂಬರ್ 12 ರಂದು ನಡೆಯಿತು. ಇಸ್ರೇಲ್ನ ಉಕ್ಕಿನ ಮಹಿಳೆ (IRON LADY) ಇಂದು ಇಲ್ಲವಾದರೂ ಅವರ ಕೆಚ್ಚು, ಧೈರ್ಯ ಇಂದಿಗೂ ಇಸ್ರೇಲ್ಗಿದೆ .ಬಗಲಲ್ಲಿರುವ ಹತ್ತಾರು ಶತ್ರುಗಳು ಇಂದಿಗೂ ಗೆಲ್ಲಲಾಗದ ಇಸ್ರೇಲ್ ಮಣ್ಣೇ ಇದಕ್ಕೆ ಸಾಕ್ಷಿ.

ಚಿತ್ರಕೃಪೆ : ಜೀವ್ಸ್ ನ್ಯೂಸ್.ಕೋ.ಐಎಲ್

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments