ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 15, 2015

ಅಜ್ಜನ ಮಾವಿನ ಮರ!

‍ನಿಲುಮೆ ಮೂಲಕ

– ಮುರಳೀ ಮೋಹನ

ಮಾವಿನ ಮರನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಮುಂದೊಂದು ಬೃಹತ್ತಾದ ಮಾವಿನ ಮರವಿತ್ತು. ಕೇವಲ ಗಾತ್ರದಲ್ಲಷ್ಟೇ ಅಲ್ಲ ಪಾತ್ರದಲ್ಲೂ ಅದು ಬೃಹತ್ತಾದುದೇ. ಕಬಂಧ ಬಾಹುಗಳಂತೆ ಅದರ ಹತ್ತಾರು ರೆಂಬೆ ಕೊಂಬೆಗಳು ಸುತ್ತಲೂ ಹರಡಿದ್ದವು. ಆ ಮರದ ಅಡಿಯಲ್ಲಿನ ಒಂದು ಭಾಗದ ಸಮತಟ್ಟಾದ ನೆಲವೇ ನಮ್ಮ ಆಟದ ಮೈದಾನವಾಗಿತ್ತು. ಮಟಮಟ ಮಧ್ಯಾಹ್ನದಲ್ಲೂ ಸೂರ್ಯಕಿರಣಗಳು ಅಲ್ಲಿ ನೆಲಕ್ಕೆ ತಾಕುತ್ತಿರಲಿಲ್ಲ. ಬಿರುಬೇಸಿಗೆಯಲ್ಲೂ ತಂಪಾದ ಗಾಳಿಗೆ ಕೊರತೆಯಿರಲಿಲ್ಲ. ಚಿನ್ನಿ-ದಾಂಡು, ಲಗೋರಿ, ಕ್ರಿಕೆಟ್ ಹೀಗೆ ಎಲ್ಲ ಆಟಗಳಿಗೂ ಆಶ್ರಯ ನೀಡಿದ್ದಿದ್ದು ಆ ಮರದ ನೆರಳು. ದೊಡ್ಡವರಿಗೆ ಹೇಳಿ ಹಗ್ಗ ಕಟ್ಟಿಸಿಕೊಂಡು ದಿನಗಟ್ಟಲೆ ನಾವು ಜೋಕಾಲಿ ಆಡುತ್ತಿದ್ದುದೂ ಅಲ್ಲೇ.

ನಮಗೆ, ಮಕ್ಕಳಿಗೆ ಮಾತ್ರ ಅಂತಲ್ಲ, ಆ ಮರದ ಮೇಲೆ ಆಶ್ರಯ ಪಡೆದ ಹಕ್ಕಿಗಳೆಷ್ಟೊ! ಅದೂ ಹತ್ತಾರು ಜಾತಿಯ, ಹತ್ತಾರು ಬಣ್ಣದ, ಬಾಗು ಕೊಕ್ಕಿನ, ಉದ್ದ ಬಾಲದ, ಬಣ್ಣಬಣ್ಣದ ಗರಿಗಳ ಜುಟ್ಟಿನ ಹಕ್ಕಿಗಳಿಂದ ಹಿಡಿದು ಕಪ್ಪುಕಾಗೆಯವರೆಗೆ ಎಲ್ಲವಕ್ಕೂ ಆ ಮರವೇ ಆಶ್ರಯತಾಣ. ಅವುಗಳ ಕೂಗು, ಚಿಲಿಪಿಲಿ ನೆನಪಿಸಿಕೊಂಡಾಗಲೆಲ್ಲ ಈಗಲೂ ಕಿವಿಗಳಲ್ಲಿ ಅನುರಣಿಸುತ್ತದೆ. ಮಾವಿನ ಮರ ಚಿಗುರತೊಡಗಿದಾಗಲಂತೂ ನಿತ್ಯ ಬೆಳ್ಳಂಬೆಳಗ್ಗೆಯೇ ಕೋಗಿಲೆಗಳ ದಿಬ್ಬಣ; ಇನ್ನು ಕಾಯಿ ಬಲಿತು, ಹಸಿರು ಹಳದಿಯಾಗಿ ಮಾವು ಹಣ್ಣಾಗುವ ಸಮಯಕ್ಕಂತೂ ದಿನವಿಡೀ ಕೆಂಪು ಕೊಕ್ಕಿನ, ಹಳದಿ ಕೊಕ್ಕಿನ ಗಿಣಿಗಳದೇ ಸಾಮ್ರಾಜ್ಯ.ನಮಗೋ ಅವುಗಳನ್ನು ನೊಡುತ್ತಿದ್ದರೆ ದಿನವೂ ಕಾಡುತ್ತಿದ್ದುದು ಒಂದೇ ಡೌಟು: ಮಾವಿನ ಹಣ್ಣು ತಿಂದಿದ್ದರಿಂದಲೇ ಆ ಗಿಳಿಗಳ ಕೊಕ್ಕು ಹಳದಿಯೂ ಕೆಂಪೂ ಆಗಿದ್ದಿರಬೇಕು! ಎಂದು.

ಹಕ್ಕಿಗಳಷ್ಟೇ ಅಲ್ಲ, ಒಂದೊಂದು ದಿನ ಬೆಳ್ಳಂಬೆಳಗ್ಗೆಯೇ ಉದ್ದ ಬಾಲದ ಅಳಿಲುಗಳೂ ಮಾವಿನ ಮರದ ಮೇಲೆ ದಾಳಿಯಿಡುತ್ತಿದ್ದವು. ಹೂ ಕೊಯ್ಯಲೆಂದೊ ತುಳಸೀಗಿಡಕ್ಕೆ ಪ್ರದಕ್ಷಿಣೆ ಹಾಕಲೆಂದೊ ಅಂಗಳಕ್ಕಿಳಿದವರು ಅಳಿಲನ್ನು ಕಂಡು,ಸದ್ದು ಮಾಡದೆ ಮನೆಯೊಳಗೆ ಬಂದು ಪಿಸುಗುಟ್ಟಿದರೆ ಸಾಕು, ಸಿಗ್ನಲ್ಲಿನ ಹಸಿರು ದೀಪ ಹೊತ್ತಿದಾಕ್ಷಣ ವಾಹನಗಳು ನುಗ್ಗುವಂತೆ ಎಲ್ಲರದೂ ಓಟ, ಮಾವಿನಮರದ ಕಡೆಗೆ. ಕೈಯಲ್ಲಿರುವ ಪಾತ್ರೆ, ನೀರಿನ ಚೊಂಬು, ಜಪಕ್ಕೆ ಕುಳಿತುಕೊಳ್ಳಲು ಹೊರಟವರ ಕೈಯಲ್ಲಿನ ಗಿಂಡಿ, ದೋಸೆ ಎರೆಯಲು ಕುಳಿತವರ ಕೈಯಲ್ಲಿನ ಬಂಡುಳಿ (ಮಗುಚುವ ಕೈ) – ಹೀಗೆ ಅವುಗಳನ್ನು ಇಡಲೂ ಪುರಸೊತ್ತಿಲ್ಲದೆ, ಒಂದೇ ಉಸಿರಿಗೆ ಎಲ್ಲರೂ ಮರದಡಿಗೆ ಬಂದು ನಿಲ್ಲುತ್ತಿದ್ದೆವು. ಆ ನಮ್ಮ ಗಡಿಬಿಡಿಯನ್ನು ಗೌಜನ್ನು ಸಂಭ್ರಮವನ್ನು ಕಂಡು ಬೆಚ್ಚುತ್ತಿದ್ದ ಅಳಿಲು ಮತ್ತೆ ತಿಂಗಳು ಕಳೆದರೂ ಇತ್ತ ತಲೆ ಹಾಕುತ್ತಿರಲಿಲ್ಲ.ಆದರೆ ಇಣಚಿಗಳು ಹಾಗಲ್ಲ. ಅವು ಯಾರನ್ನಾದರೂ ಕಂಡರೆ ಒಂದರೆಕ್ಷಣ ನಿಂತು ಗಮನಿಸಿ, ಬಾಲ ಕುಣಿಸಿ, ಚಂಗನೆ ಹಾರಿ ಮಾಯವಾಗುತ್ತಿದ್ದವು. ಬಹುಷಃ ದಿನವೂ ನಾಲ್ಕಾರು ಬಾರಿ ಕಾಣುತ್ತಿದ್ದುದರಿಂದ ಅವುಗಳಿಗೆ ನಮ್ಮ ಭಯ ಅಷ್ಟಾಗಿ ಇರಲಿಲ್ಲ. ಕೆಲವೊಮ್ಮೆ ನಾವೂ ಸದ್ದು ಮಾಡದೆ, ಅವುಗಳ ಅತಿಸನಿಹಕ್ಕೂ ಹೋಗಿಬಿಡುತ್ತಿದ್ದೆವು. ಅವು ಬಾಲವನ್ನೆತ್ತಿ ನೆಲಕ್ಕೆ ಕುಳಿತು, ಮುಂಗಾಲುಗಳಲ್ಲಿ ಮಾವಿನ ಹಣ್ಣಿನ ಚೂರುಗಳನ್ನು ಹಿಡಿದೆತ್ತಿ ತಿನ್ನುತ್ತಿದ್ದುದನ್ನು ನೋಡುತ್ತ ನೋಡುತ್ತ ನಾವೂ ನಮಗರಿವಿಲ್ಲದಂತೆ ಅವುಗಳಷ್ಟೇ ವೇಗವಾಗಿ ಬಾಯಿ ಚಪ್ಪರಿಸಲು ತೊಡಗುತ್ತಿದ್ದುದನ್ನು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ.

ಹೀಗೆ, ನಮಗೆ ಸಾರ್ವಕಾಲಿಕ ಆಟದ ಅಂಗಳವಾಗಿ, ಹತ್ತಾರು ಪಕ್ಷಿಗಳಿಗೆ ಆಶ್ರಯತಾಣವಾಗಿ ಶೋಭಿಸುತ್ತಿರುವ ಮಾವಿನ ಮರ ನಮ್ಮ ಮನೆಯ ಮುಂದೆ ಇದೆ ಎಂಬುದೇ ನಮಗೆಲ್ಲ ಅಭಿಮಾನದ ಸಂಗತಿಯಾಗಿತ್ತು.ಅದರ  ಹಣ್ಣಿನ ರುಚಿಯ ಕುರಿತು ಹೇಳುವುದೇ ಬೇಡ. ಅಷ್ಟೊಂದು ಸಿಹಿಯಾದ, ಪರಿಮಳದಿಂದ ಕೂಡಿದ ಮಾವಿನಹಣ್ಣನ್ನು ನಾನಂತೂ ಇದುವರೆಗೂ ಮತ್ತೆಲ್ಲೂ ತಿಂದಿಲ್ಲ. ಈ ವಿಷಯದಲ್ಲಿ ನಮ್ಮ ಊರಿನವರೆಲ್ಲರ ಅಭಿಪ್ರಾಯವೂ ಇದೇ ಆಗಿದ್ದುದು ಅಭಿಮಾನದ ಜೊತೆಗೆ ನಾವು ಮರದ ವಿಷಯವಾಗಿ ಗರ್ವವನ್ನೂ ತಾಳುವಂತೆ ಮಾಡಿತ್ತು.

ಅಜ್ಜನಿಗಂತೂ ಆ ಮರವೆಂದರೆ ಪಂಚಪ್ರಾಣಕ್ಕಿಂತಲೂ ಹೆಚ್ಚಿನದು. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಅವರು ಮರದ ಬಳಿ ಬಂದು, ಅದರ ಮೈಸವರಿಯೇ ಮುಂದಿನ ಕೆಲಸ ಮಾಡುತ್ತಿದ್ದುದು. ಅದಕ್ಕೆ ಕಾರಣವೂ ಇತ್ತು. ಅಜ್ಜ ಹದಿನೈದು-ಹದಿನಾರು ವರ್ಷದವರಾಗಿದ್ದಾಗ ಅವರ ಅಪ್ಪ ಮತ್ತು ದೊಡ್ಡಪ್ಪ ಹಿಸೆಯಾದರಂತೆ. ಆ ಅಜ್ಜನ ಅಪ್ಪ ತಮ್ಮ ಪಾಲಿಗೆ ಬಂದ ಜಮೀನಿನ ಪಕ್ಕದಲ್ಲಿ ಮನೆ ಕಟ್ಟಿಕೊಂಡರು. ಈಗ ನಾವಿರುವ ಮನೆಯೇ ಅದು. ಮೊದಲೇ ಮೂಲಮನೆಯಿಂದ ತುಂಬಾ ದೂರದಲ್ಲಿದ್ದ ಜಮೀನು. ಅದು ಅಷ್ಟಾಗಿ ಅಭಿವೃದ್ಧಿ ಹೊಂದಿರಲಿಲ್ಲ. ಬಹುತೇಕ ಭಾಗ ಪಾಳು ಬಿದ್ದಿತ್ತು. ಹಾಗಾಗಿ ಅಲ್ಲಿ ಹಣ್ಣಿನ ಗಿಡಗಳಾಗಲೀ ಹೂವಿನ ಗಿಡಗಳಾಗಲೀ ಒಂದೂ ಇರಲಿಲ್ಲ. ಎಲ್ಲವನ್ನೂ ಹೊಸದಾಗಿ ಮಾಡಬೇಕು. ಆಗ ಅಜ್ಜ ಹತ್ತಾರು ಗಿಡ ನೆಡುವುದಕ್ಕಿಂತ ಒಂದೇ ಒಂದು ಉತ್ತಮ ಮರ ಬೆಳೆಸಬೇಕು ಎಂದುಕೊಂಡು, ದೂರದ ಅಂಕೋಲಾಕ್ಕೆ ಹೋಗಿ, ಹತ್ತಾರು ಕಡೆ ಹುಡುಕಿ, ಯಾರದೊ ಮನೆಯಲ್ಲಿನ ಒಂದು ಮಾವಿನ ಮರಕ್ಕೆ ಕಸಿ ಕಟ್ಟಿಸಿ ಬಂದರಂತೆ. ಅದು ಕೂಡಾ ಅಲ್ಲಿನ ಹತ್ತಾರು ಹಿರೀಕರ ಬಳಿ ಮಾತಾಡಿಯೇ ಕಸಿ ಕಟ್ಟಬೇಕಾದ ಮರವನ್ನು ನಿರ್ಧರಿಸಿದ್ದು. ಹಾಗೆ ಕಸಿ ಕಟ್ಟಿ ಬಂದ ಗಿಡವನ್ನು ಮರುವರ್ಷ ಚೌತಿಯ ಸಮಯಕ್ಕೆ ಹೋಗಿ ತಂದು, ಮನೆಯ ಮುಂದೆ ನೆಟ್ಟರಂತೆ. ಅದು ಹೀಗೆ ನಲವತ್ತು ಐವತ್ತು ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಬೆಳೆದು ನಿಂತಿತ್ತು.

ಐದಾರು ದಶಕಗಳಲ್ಲಿಯೇ ಮರ ಈ ಪ್ರಮಾಣಕ್ಕೆ ಬೆಳೆದು ಏನಿಲ್ಲವೆಂದರೂ ಒಂದೆರಡು ಎಕರೆಯಷ್ಟು ಹರಡಿ ನಿಂತಿದ್ದಕ್ಕೂ ಕಾರಣವಿತ್ತು. ಅಜ್ಜ ಎಲ್ಲರೂ ಗಿಡ ನೆಡುವಂತೆ ನೆಟ್ಟು ಬಿಟ್ಟವರಲ್ಲ. ದಿನವೂ ಅದಕ್ಕೆ ಯಥೇಷ್ಟವಾಗಿ ನೀರನ್ನೂ ಕೊಟ್ಟರು. ಪ್ರತೀ ಮೂರು ತಿಂಗಳಿಗೊಮ್ಮೆ ಕೊಟ್ಟಿಗೆಯ ಹಸಿ ಸಗಣಿಯನ್ನು ಹತ್ತಾರು ಹೆಡಿಗೆಗಳಷ್ಟು ತಂದು ಸುರಿಯುತ್ತಿದ್ದರು. ಇದಲ್ಲದೆ ವರ್ಷಕ್ಕೊಮ್ಮೆ ಹತ್ತಿಪ್ಪತ್ತು ವಜ್ಜೆ ಸೊಪ್ಪು ಹಾಕುತ್ತಿದ್ದುದು ಬೇರೆ. ನೋಡುವವರಿಗೆ ಇದು ಅತಿಯಾಯಿತು ಎನ್ನುವಷ್ಟರಮಟ್ಟಿಗಿನ ಆರೈಕೆ, ಅಜ್ಜನದು. ಗಿಡ ದಿನದಿಂದ ದಿನಕ್ಕೆ ಸೊಂಪಾಗಿ ಬೆಳೆಯಿತು. ಮೂರೇ ವರ್ಷಕ್ಕೆ ಹೂ ಬಿಟ್ಟಿತು. ಬೆರಳೆಣಿಕೆಯಷ್ಟು ಕಾಯಿಗಳೂ ನಿಂತವು. ಕೊನೆಗೆ ಸಿಕ್ಕ ಒಂದೆರಡು ಹಣ್ಣುಗಳನ್ನು ತಂದು, ಅಜ್ಜ ದೇವರಪೀಠದ ಮುಂದಿಟ್ಟು ಸಾಷ್ಟಾಂಗವೆರಗಿದರು. ಅಸಾಧ್ಯವಾದುದನ್ನೇನೋ ಸಾಧಿಸಿದೆನೆಂಬ ಗರ್ವ; ಸಾಧ್ಯವಾಗುವಂತೆ ಮಾಡಿದೆಯಲ್ಲಾ ಭಗವಂತ!- ಎಂಬ ಭಾವ. ಅಂದಿನಿಂದ ಅಜ್ಜನ ಆರೈಕೆ ಮತ್ತಷ್ಟು ಹೆಚ್ಚಾಯಿತು. ಹೀಗೆ ಸಸಿ ಗಿಡವಾಯಿತು; ಗಿಡ ಮರವಾಯಿತು; ಮರ ಹೆಮ್ಮರವಾಯಿತು.

ಅಜ್ಜ ಬೆಳಗ್ಗೆ ಎದ್ದು ಮರದ ಬಳಿ ಹೋಗಿ, ಅದರ ಮೈಸವರಿ ಬರುತ್ತಿದ್ದವರು, ಈಗ ಮಧ್ಯಾಹ್ನ ಉಟವಾದ ಮೇಲೆ ಮರದಡಿಯಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು- ಒಂದು ಕವಳ ಹಾಕುವಷ್ಟು ಕಾಲ; ಒಂದರ್ಧ ಗಂಟೆ. ಹಾಗೆ ಮಾಡದಿದ್ದಲ್ಲಿ ಅವರಿಗೆ ಸಮಾಧಾನವಿಲ್ಲ. ಒಮ್ಮೊಮ್ಮೆ ಅವರು ಕವಳ ಹಾಕಲೆಂದು ಸಂಚಿಯನ್ನು ಹಿಡಿದು ಮರದಡಿ ಹೋಗಿ ಕುಳಿತಾಗ ನಾವೆಲ್ಲ ನಾಲ್ಕೈದು ಮಕ್ಕಳು ಹೋಗಿ ಮುಕುರುತ್ತಿದ್ದುದೂ ಇತ್ತು. ನಮಗೊ ಅಜ್ಜನ ಸಂಚಿಯಲ್ಲಿ ಮಾತ್ರ ಇರುತ್ತಿದ್ದ ಕಾಚು, ಬಡೆಸೊಪ್ಪು, ಗೋಡಾಕಾಷ್ಠಗಳ ಮೇಲೆ ಕಣ್ಣು. ಅದರೆ ಅದನ್ನು ಕೊಡಲು ಅಜ್ಜನದೊಂದು ಷರತ್ತು: ಸ್ವಲ್ಪ ಹೊತ್ತು ತಾನು ಹೇಳುವ ಕಥೆಯನ್ನು ಕೇಳಿದರೆ ಮಾತ್ರ ಅವನ್ನೆಲ್ಲ ಕೊಡುತ್ತೇನೆ, ಎಂದು! ಅಜ್ಜನ ಕಥೆ ಎಂದೂ ಮುಗಿಯುತ್ತಿರಲಿಲ್ಲ; ನಮಗೂ ಅದನ್ನು ಕೇಳದೆ ಗತ್ಯಂತರವಿರುತ್ತಿರಲಿಲ್ಲ.

ನಮ್ಮನ್ನೆಲ್ಲ ಗಂಟೆಗಳ ಕಾಲ ಕೂರಿಸಿಕೊಂಡು ಅಜ್ಜ ಹೇಳುತ್ತಿದ್ದ ಕಥೆಯಾದರೂ ಯಾವುದು? ಅದು ಮಾವಿನಮರದ್ದು! ತನ್ನ ಅಪ್ಪ ದೊಡ್ಡಪ್ಪ ಹಿಸೆಯಾದದ್ದು, ಆ ಸಮಯದಲ್ಲಿ ದೊಡ್ಡಪ್ಪ ಹಾಳು ಜಮೀನನ್ನು ಕೊಟ್ಟು ತನ್ನ ಅಪ್ಪನಿಗೆ ಮೋಸ ಮಾಡಿದ್ದು, ಮೂಲ ಮನೆಯ ಸುತ್ತಲೂ ಇದ್ದ ಹತ್ತಾರು ಮಾವಿನಮರಗಳಲ್ಲಿ ರುಚಿಯಾದ ಹಣ್ಣು ಬಿಡುತ್ತಿದ್ದುದು, ಅವುಗಳಲ್ಲಿ ಒಂದೇ ಒಂದು ಮರವನ್ನೂ ದೊಡ್ಡಪ್ಪ ತನ್ನ ಅಪ್ಪನ ಪಾಲಿಗೆ ಕೊಡದೇ ಇದ್ದುದು, ಆ ಬೇಸರವೇ ಜಿದ್ದಾಗಿ ತಾನು ಅಂಕೋಲಾಕ್ಕೆ ಹೋಗಿ ಬಂದಿದ್ದು, ಅಲ್ಲಿಂದ ತಂದು ಕಸಿ ಕಟ್ಟಿದ ಗಿಡವನ್ನು ಬೇರಾರೂ ಇದುವರೆಗೆ ಬೆಳೆಸಿರದ-ಮುಂದೆ ಯಾರೂ ಬೆಳೆಸಲಾರದ ರೀತಿಯಲ್ಲಿ ತಾನು ಬೆಳೆಸಿದ್ದು, ಕೇವಲ ನಲವತ್ತು ಐವತ್ತು ವರ್ಷಗಳಲ್ಲೇ ಈ ಮರ ನೂರಾರುವರ್ಷದ ಹಳೆಯ ಮರವೇನೋ-ಎನಿಸುವಂತೆ ಬೃಹತ್ತಾಗಿ ಬೆಳೆದು ನಿಂತಿದ್ದು-ಈ ಮರದ ಹಣ್ಣಿಗಾಗಿ ಊರವರೆಲ್ಲ ಆಸೆಪಡಲು ತೊಡಗಿದ್ದು, ತನ್ನಪ್ಪನಿಗೆ ಮೋಸ ಮಾಡಿದ ದೊಡ್ಡಪ್ಪನ ಮಕ್ಕಳೂ ಮೊಮ್ಮಕ್ಕಳೂ ಮರಿಮಕ್ಕಳೂ ಈಗ ಮರದ ಹಣ್ಣಿಗಾಗಿ ಹಲ್ಲು ಕಿಸಿದುಕೊಂಡು ತನ್ನೆದುರು ಬಂದು ನಿಲ್ಲಲು ಶುರು ಮಾಡಿದ್ದು- ಹೀಗೆ, ಅಜ್ಜ ಕಥೆ ಹೇಳುತ್ತಿದ್ದರೆ ಅದರಲ್ಲಿ ದುಃಖವಿರುತ್ತಿತ್ತು, ಹತಾಶೆ ಉಕ್ಕಿ ಬರುತಿತ್ತು, ಕ್ಷಾತ್ರದ ತೇಜಸ್ಸು ಮಿಂಚುತ್ತಿತ್ತು, ರೋಷ ಉಕ್ಕುತ್ತಿತ್ತು. ಆಯಾ ಭಾವನೆಗಳಿಗೂ ಸಂದರ್ಭಕ್ಕೂ ತಕ್ಕಂತೆ ಅಜ್ಜನ ಧ್ವನಿಯಲ್ಲೂ ಏರಿಳಿತಗಳು ಉಂಟಾಗಿ ನಮಗೆಲ್ಲ ರೋಮಾಂಚವಾಗುತ್ತಿತ್ತು. ಕಥೆ ಹೇಳುತ್ತಿದ್ದ ಅಜ್ಜ ಒಮ್ಮೊಮ್ಮೆ ಪುರಾಣ ಪಾತ್ರಧಾರಿಯಂತೆ, ಕೆಲವೊಮ್ಮೆ ಎರಡೂ ಕೈಗಳಲ್ಲಿ ಬಿಚ್ಚುಗತ್ತಿಗಳನ್ನು ಹಿಡಿದು ನಿಂತ ಕ್ಷತ್ರಿಯವೀರನಂತೆ, ಮತ್ತೊಮ್ಮೆ ಪ್ರೇಕ್ಷಕರೆಲ್ಲ ನಿದ್ದೆಗೆ ಜಾರುವ ಸಮಯದಲ್ಲಿ ಇದ್ದಕ್ಕಿದ್ದಂತೆ ಅವತರಿಸಿ, ಅಬ್ಬರಿಸಿ ಬೊಬ್ಬಿರಿವ ಯಕ್ಷಗಾನದ ರಕ್ಕಸನಂತೆ, ಮಗದೊಮ್ಮೆ ಅಪರೂಪದ ವಸ್ತು ಕೈಗೆ ಸಿಕ್ಕಾಗ ಕುಣಿದು ಕುಪ್ಪಳಿಸುತ್ತಿದ್ದ ನಮ್ಮಂಥ ಹುಡುಗರಂತೆ ತೋರುತ್ತಿದ್ದರು. ಕಥೆ ಕೇಳುತ್ತ ಕೇಳುತ್ತ ನಮಗೆ ಕಾಚು, ಬಡೆಸೊಪ್ಪು, ಗೋಡಾಕಾಷ್ಠ್ಠಗಳೂ ಮರೆತುಹೋಗುತ್ತಿದ್ದವು!

ಇಂತಿದ್ದ ಅಜ್ಜ, ಈಗ ಈ ಮಾವಿನಮರದ ವಿಷಯ ಬಂದಾಗಲೆಲ್ಲ ಮೌನಕ್ಕೆ ಶರಣಾಗುತ್ತಾರೆ. ಮುಖದ ಮೇಲೆ ನೋವಿನ ವೇದನೆಯ ಸಣ್ಣ ಛಳುಕು ಮಿಂಚಿ ಮಾಯವಾಗುತ್ತದೆ. ಸ್ವಲ್ಪ ಬಲವಂತ ಮಾಡಿ ಕೇಳಿದರೆ ‘ನಾನೆರೆದ ನೀರು ಗೊಬ್ಬರ ಜಾಸ್ತಿಯಾಯಿತು. ಏನು ಮಾಡುವುದು?’ ಎಂದು ನಿಡುಸುಯ್ಯುತ್ತಾರೆ.

ಅಜ್ಜನ ಈ ದುಃಖಕ್ಕೂ ಕಾರಣವಿದೆ. ಅತಿಕಡಮೆ ಅವಧಿಯಲ್ಲಿ ಅಗಲಗಲಕ್ಕೆ ಬೆಳೆದ ಮರ ಒಂದೆರಡು ಎಕರೆಗಿಂತಲೂ ಹೆಚ್ಚು ವಿಸ್ತಾರ ಪಡೆದದ್ದು ನಿಜ. ಹತ್ತಾರು ರೆಂಬೆಕೊಂಬೆಗಳನ್ನೂ ಹೊಂದಿ ಹರಡಿಕೊಂಡಿದ್ದೂ ನಿಜ. ಆದರೆ, ಮರದ ಮೂಲಕಾಂಡ, ತನ್ನೆಲ್ಲ ರೆಂಬೆಕೊಂಬೆಗಳನ್ನೂ ಧಾರಣ ಮಾಡುವ ಸಾಮರ್ಥ್ಯ ಪಡೆಯಲೇ ಇಲ್ಲ. ಗೊಬ್ಬರ ಹಾಕಿದಂತೆಲ್ಲ ರೆಂಬೆಕೊಂಬೆಗಳು ಬೆಳೆದವೇ ವಿನಾ, ಕಾಂಡ ಬೆಳೆಯಲೇ ಇಲ್ಲ! ನೋಡಲು ಸರ್ವಾಂಗಸುಂದರವಾಗಿ ಕಾಣುತ್ತಿದ್ದ ಮರ ಒಳಗೊಳಗೇ ಪೊಳ್ಳಾಯಿತು, ಟೊಳ್ಳಾಯಿತು. ಒಂದೊಂದು ರಂಬೆ ಕೊಂಬೆಯೂ ಮೂಲಕಾಂಡದಿಂದ ಸಿಕ್ಕಿದ್ದನ್ನೆಲ್ಲ ಹೀರಿದವು, ಆದರೆ ತಿರುಗಿ ಅವು ಏನನ್ನೂ ಕೊಡಲೇ ಇಲ್ಲ. ಬದಲಾಗಿ, ಕಾಂಡದ ಮೇಲೆ ಏನೆಲ್ಲ ಪರಿಣಾಮವಾಗಬಹುದು ಎಂಬುದನ್ನೂ ಲೆಕ್ಕಿಸದೆ, ತಮ್ಮ ತಮ್ಮ ಸಂಸಾರಗಳನ್ನೂ ಸಾಮ್ರಾಜ್ಯಗಳನ್ನೂ ತಮತಮಗೆ ತೋಚಿದಂತೆ ಬೆಳೆಸಿಕೊಂಡವು.

ಇದೇ ಸಮಯದಲ್ಲಿ ಪೊಳ್ಳಾದ ಕಾಂಡದೊಳಗೆ ಗೆದ್ದಲುಗಳೂ ಹುಳುಹುಪ್ಪಟೆಗಳೂ ವಿಷಸರ್ಪಗಳೂ ಸೇರಿಕೊಂಡವು. ಯಾವ ಕೊಂಬೆಯಿಂದ ತಮಗೆ ಹೆಚ್ಚು ಆಹಾರ ದೊರೆಯುತ್ತದೆಯೋ ಆ ರೆಂಬೆ ಕೊಂಬೆಗಳಿಗಾಗಿ ಒಳಗೊಳಗೇ ಮಸಲತ್ತು ನಡೆಸುತ್ತ, ಬೇರೆ ರೆಂಬೆ ಕೊಂಬೆಗಳನ್ನು ಕೊರೆಯತೊಡಗಿದವು. ಪರಿಣಾಮವಾಗಿ, ಮರದ ಮೂಲಕಾಂಡದ ಧಾರಣ ಶಕ್ತಿ ಕಡಮೆಯಾಯಿತು. ಸರ್ವಾಂಗಸುಂದರ ಮೈಯ್ಯಲ್ಲಿ ಬಿರುಕುಗಳು ಕಾಣಿಸಿಕೊಂಡವು. ದಾರಿಹೋಕರು ಕೆಲವರು ಆ ಬಿರುಕುಗಳನ್ನು ನೋಡಿ ನಕ್ಕರು; ಇನ್ನು ಕೆಲವರು ಬಿರುಕುಗಳೊಳಗೆ ಇಣುಕಿ ನೋಡಲು ಯತ್ನಿಸಿದರು; ಮತ್ತಷ್ಟು ಮಂದಿ ಆ ಬಿರುಕುಗಳೊಳಗೆ ಬೆರಳು ತೂರಿಸಿ, ನೆಕ್ಕಲು ಏನಾದರೂ ಸಿಗಬಹುದೇ ಎಂದು ಹವಣಿಸಿದರು!

ಇನ್ನು, ಮರದಿಂದುದುರಿದ ಹಣ್ಣುಗಳು ಕೊಳೆತವು. ಬೀಜಗಳು ಮೊಳಕೆಯೊಡೆದರೂ ಗಿಡಗಳಲ್ಲಿ ಬಲಿಕೆ ಇರಲಿಲ್ಲ, ಬಾಡಿದವು. ಅತ್ತಿತ್ತ ಸ್ವಲ್ಪದೂರ ಸಿಡಿದುಬಿದ್ದ ವಾಟೆಗಳು ಮೊಳೆತವಾದರೂ ಮೂಲ ಮರದ ಆಕಾರವಾಗಲೀ ಗುಣವಾಗಲೀ ಹಣ್ಣಿನ ರುಚಿಯಾಗಲೀ ಪರಿಮಳವಾಗಲೀ ಅವಕ್ಕೆ ಬರಲಿಲ್ಲ. ಹಾಗಾಗಿ ಮೊದಲು ಒಂದೆರಡು ವರ್ಷ ನೀರು ಗೊಬ್ಬರ ಹಾಕಿದವರೂ ಈಗ ಅತ್ತ ಮುಖ ಮಾಡುವುದನ್ನು ನಿಲ್ಲಿಸಿದರು.

ನಾವೆಲ್ಲ ಆಡಿದಂತೆ ಆ ಮರದಡಿಯಲ್ಲಿ ದಿನವಿಡೀ ಆಡುವುದು ಹಾಗಿರಲಿ, ಒಂದೆರಕ್ಷಣ ನಿಲ್ಲಲೂ ಈಗ ಯಾರೂ ತಯಾರಿಲ್ಲ. ಎಷ್ಟು ಹೊತ್ತಿಗೆ ಯಾವ ಕೊಂಬೆ ಮುರಿದು ಬೀಳುವುದೋ ಎಂಬ ಭಯ! ಬಿರುಕುಗಳೇ ಪೊಟರೆಗಳಾಗಿ ಅಲ್ಲಿಂದ ಇಣುಕುವ, ನಾಲಿಗೆ ಹೊರಚಾಚುವ ವಿಷಸರ್ಪಗಳು ಎಲ್ಲಿ ಕಚ್ಚುವುವೋ ಎಂಬ ಆತಂಕ! ಹಾಗಾಗಿ ಹಣ್ಣು ಬಿಡುವ ಸಮಯದಲ್ಲೂ ಯಾರೂ ಮರದಡಿಗೆ ಹೋಗುವುದಿಲ್ಲ. ದೂರದಲ್ಲೇ ನಿಂತು, ಉದ್ದ ಕೋಲು ಹಿಡಿದು, ಹಣ್ಣನ್ನು ಬಡಿದು, ಅದು ತಮ್ಮ ಬಳಿಗೇ ಬಂದು ಬೀಳುವಂತೆ ಎಲ್ಲರೂ ಪ್ರಯತ್ನಿಸುತ್ತಾರೆ. ಮರ ಏನಾದರೂ ಆಗಲಿ, ಸಿಗುವ ಹಣ್ಣನ್ನೇಕೆ ಬಿಡಬೇಕು?

ಅಜ್ಜ, ಮನೆಯ ಹೊಸಿಲು ದಾಟಿ ಹೊರಗೇ ಬರುವುದಿಲ್ಲ. ಮರದ ಬಗ್ಗೆ ಮಾತೇ ಆಡದ ಮನೆ ಮಂದಿ, ಊರವರು ಎಲ್ಲ ತಮ್ಮ ತಮ್ಮ ಪಾಲಿಗೆ ಸಿಕ್ಕ ಒಂದೆರಡು ಹಣ್ಣುಗಳನ್ನೇ ತಿಂದು, ಚಪ್ಪರಿಸಿ ವರುಷವಿಡೀ ಅದರ ಗುಣಗಾನ ಮಾಡುತ್ತಾರೆ. ಊರಿನವರಿಗೆ, ಪರಊರಿನವರಿಗೆ, ಅವರು ಬಂದಾಗ, ತಾವೇ ಅಲ್ಲಿಗೆ ಹೋದಾಗ ಹೇಳಿಕೊಂಡು ಸಂಭ್ರಮಿಸುತ್ತಾರೆ. ಮೊದಲೆಲ್ಲ ಅಜ್ಜ ತಮ್ಮ ಬಳಿ ಬಂದವರಿಗೆ ಮೊದಲು ಮರದ ಬಗ್ಗೆ ವಿವರವಾಗಿ ಹೇಳಿ ಕೊನೆಗೆ ಹಣ್ಣಿನ ಬಗ್ಗೆ ಒಂದೆರಡು ಮಾತು ಹೇಳುತ್ತಿದ್ದರು. ಈಗ, ಮರದ ಬಗ್ಗೆ ಮಾತೇ ಇಲ್ಲ, ಏನಿದ್ದರೂ ಹಣ್ಣಿನ ಬಗ್ಗೆ ಮಾತ್ರ ಚರ್ಚೆ. ಹಣ್ಣಿನ ಗುಣಗಾನ ಮಾಡುವುದಕ್ಕಾಗಿಯೇ ವ್ಯವಸ್ಥಿತವಾದ ಕಾರ್ಯತಂತ್ರ, ಅದಕ್ಕಾಗಿ ಹಗಲೂ ರಾತ್ರಿ ಎನ್ನದೆ ಯೋಚನೆ, ಯೋಜನೆ. ಕೆಲವು ಸಲ ಈ ಯೋಚನೆ-ಯೋಜನೆಯಲ್ಲಿಯೆ ಹಣ್ಣು ಕೊಳೆತುಹೋದದ್ದೂ ಇದೆ. ಇದೆಲ್ಲ ನಮಗೆ, ಮನೆಮಂದಿಗೆ ಗೊತ್ತಿಲ್ಲದ್ದೇನಲ್ಲ. ಆದರೆ, ಅಜ್ಜ ಹತ್ತಾರು ವರ್ಷ ಹೇಳಿದ್ದನ್ನೇ ನಾವು ಈಗಲೂ ಹೇಳುವುದೇನಿದೆ?

ಅದಕ್ಕೆಂದೇ ನಾವೀಗ-ಅಜ್ಜ ಹೊಸಿಲು ದಾಟುವುದನ್ನು ಬಿಟ್ಟ ಮೇಲೆ- ಹಾಡಲು ಪ್ರಾರಂಭಿಸಿದ್ದೇವೆ: “ಮಾವಿನ ಸಸಿಯಿದು ಹೆಮ್ಮರವಾಗಿದೆ, ಅಜ್ಜಾ, ನೀನೇ ನೋಡಲು ಬಾ” !!

ನಮಗೆ, ಕೇವಲ ಹಣ್ಣಿನ ಮೇಲೆ ಕಣ್ಣಿಟ್ಟು ಕುಳಿತವರಿಗೆ ಮರ ಬೇಕಾಗಿಲ್ಲ, ಮರ ಬೆಳೆದ ರೀತಿ ಬೇಕಿಲ್ಲ, ಮರದ ಬೇರು ಎಷ್ಟು ಆಳಕ್ಕಿಳಿದಿದೆಯೆಂಬುದರ ಯೋಚನೆಯಿಲ್ಲ. ಮರಕ್ಕೆ ಕಾಲಕಾಲಕ್ಕೆ ನೀರು-ಗೊಬ್ಬರ ಕೊಡಬೇಕೆಂಬುದರ ಕಲ್ಪನೆಯೂ ಇಲ್ಲ. ಬೆಳೆದಿರುವ, ಬೆಳೆಯುತ್ತಲೇ ಇರುವ ಪರಿವಾರದೊಳಗೇ ಭ್ರಮೆಯಲ್ಲಿ ಪರಿಭ್ರಮಿಸುತ್ತ, ಗೋತ್ರಪ್ರವರವನ್ನೂ ಮರೆತಿದ್ದೇವೆ. ಕೇವಲ ಅಜ್ಜನಿಗಾಗಿ, ಅಜ್ಜನಿಗೆ ಸಮಾಧಾನವಾಗುತ್ತದೆಯೆಂಬ ಯೋಚನೆಯಲ್ಲಿ ಮರದ ಬಿರುಕುಗಳನ್ನು ಮುಚ್ಚಿಟ್ಟು, ಹುಳಹುಪ್ಪಟೆ ವಿಷಸರ್ಪಗಳನ್ನೆಲ್ಲ ದೊಡ್ಡ ದೊಡ್ಡ ಉಪಾಧಿಗಳಿಂದ ಅಲಂಕರಿಸಿ, ಘೋಷಣೆಗಳನ್ನು ಕೂಗುತ್ತ ಹಣ್ಣಿನ ರುಚಿಯನ್ನು ಹಾಡುತ್ತೇವೆ, ಹಾಡಿ ಕುಣಿಯುತ್ತೇವೆ.

ಅಜ್ಜ, ತಾನೇ ಕೈಯಾರೆ ನೀರು ಗೊಬ್ಬರ ಹಾಕಿ ಬೆಳೆಸಿದ ಮರದ, ಮನುಷ್ಯರ ಟೊಳ್ಳುತನವನ್ನೂ ಪೊಳ್ಳುತನವನ್ನೂ ನೋಡುತ್ತ ಮೌನಕ್ಕೆ, ಗಾಢ ಮೌನಕ್ಕೆ, ಗಾಢಾತಿಗಾಢ ಮೌನಕ್ಕೆ ಜಾರುತ್ತಿದ್ದಾನೆ.

ಆ ಗಾಢಾತಿಗಾಢ ಮೌನದೊಳಗಿಂದಲೇ ಓಂಕಾರ ಮೊಳಗಬೇಕು. ಅದಕ್ಕೆ ಇನ್ನೆಂಥ ‘ಕಾಯ’ ಬೇಕೋ! ಸೂಕ್ತ ‘ಕಾಯ’ ಸಿಗುವಲ್ಲಿಯವರೆಗೂ ನಾವು ಕಾಯಬೇಕು….!

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments