ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 16, 2015

2

ಬೌದ್ಧಿಕ ಅಸಹಿಷ್ಣು ಪಾಕಿಸ್ತಾನ ಕರ್ನಾಟಕಕ್ಕಿಂತ ವಾಸಿ!

‍ನಿಲುಮೆ ಮೂಲಕ

– ಪ್ರೇಮಶೇಖರ

ಅಸಹಿಷ್ಣುತೆಎರಡು ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ (ಸಿಎಸ್‌ಎಲ್‌ಸಿ) ವಚನಸಾಹಿತ್ಯದ ಬಗ್ಗೆ ಇದುವರೆಗೂ ಪೋಷಿಸಿಕೊಂಡು ಬಂದಿರುವ ತಪ್ಪುಕಲ್ಪನೆಗಳನ್ನು ದೂರಮಾಡಲು ನಿಖರ ಸಂಶೋಧನೆಯ ಮಾರ್ಗ ಹಿಡಿದಾಗ ಕಂಗೆಟ್ಟ ನಮ್ಮ ಪಟ್ಟಭದ್ರ ವಿಚಾರವಾದಿಗಳು ಸಂಸ್ಥೆಯ ವಿರುದ್ಧ ವೈಚಾರಿಕ ಗೂಂಡಾಗಿರಿ ನಡೆಸಿದ್ದು, ಅವರ ಉಗ್ರ ಬೌದ್ಧಿಕ ಅಸಹಿಷ್ಣುತೆಗೆ ಪ್ರಮುಖ ಕನ್ನಡ ದೈನಿಕವೊಂದು ವೇದಿಕೆಯಾಗಿ ಪತ್ರಿಕಾಧರ್ಮವನ್ನು ಗಾಳಿಗೆ ತೂರಿದ್ದು, ಕೊನೆಗೆ ಇವರೆಲ್ಲರ ಪಿತೂರಿಯಿಂದ ರಾಜ್ಯದ ಪರಮ ಸೆಕ್ಯೂಲರ್ ಕಾಂಗ್ರೆಸ್ ಸರ್ಕಾರ ಸಂಶೋಧನಾ ಕೇಂದ್ರವನ್ನು ಮುಚ್ಚಿದ್ದು ನೆನಪಿದೆಯೇ? ಇದಕ್ಕಿಂತ ಸ್ವಲ್ಪ ಕಡಿಮೆ ಅಸಹ್ಯಕರ ಹಾಗೂ ಪ್ರತಿಗಾಮಿ ಘಟನೆ ಇದೇ ಡಿಸೆಂಬರ್ 3ರಂದು ಪಾಕಿಸ್ತಾನದಲ್ಲಿ ಘಟಿಸಿದೆ. ಅಂದು ಇಸ್ಲಾಮಾಬಾದ್‌ನ ಕಾಯದ್- ಎಫ್ ಆಜಂ ವಿಶ್ವವಿದ್ಯಾಲಯದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹಿಸ್ಟಾರಿಕಲ್ ಆಂಡ್ ಕಲ್ಚರಲ್ ರೀಸರ್ಚ್ (ಎನ್‌ಐಎಚ್‌ಸಿಆರ್) ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಯೀದ್ ವಖಾರ್ ಅಲಿ ಶಾ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಯಿತು.

ಅವರು ಮಾಡಿದ ಅಪರಾಧ ಇಷ್ಟೇ- ನವೆಂಬರ್ 25ರಂದು ಸಿಂಧ್ ಪ್ರಾಂತ್ಯದ ಖಾಯರ್ಪುರ್‌ನಲ್ಲಿರುವ ಶಾ ಅಬ್ದುಲ್ ಲತೀಫ್ ವಿಶ್ವವಿದ್ಯಾಲಯ ಮತ್ತು ಎನ್‌ಐಎಚ್ಸಿಆರ್ ಜಂಟಿಯಾಗಿ ‘ಸಿಂಧ್: ಇತಿಹಾಸ ಮತ್ತು ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ವಿಚಾರಸಂಕಿರಣವೊಂದನ್ನು ಆಯೋಜಿಸಿದವು. ಅಲ್ಲಿ ತಮ್ಮ ಪ್ರಬಂಧ ಮಂಡಿಸುತ್ತ ಪ್ರೊ. ಶಾ, ಪಾಕಿಸ್ತಾನದ ಅಧಿಕೃತ ಇತಿಹಾಸದಲ್ಲಿ ದಾಖಲಾಗಿಲ್ಲದ ಹಲವು ಹೆಸರುಗಳನ್ನು ಪ್ರಸ್ತಾಪಿಸಿದರು. ಭಗತ್ ಸಿಂಗ್‌ರಂತಹ ಸ್ವಾತಂತ್ರ್ಯ ಹೋರಾಟಗಾರರು, ಜಿ. ಎಂ. ಸಯೀದ್, ಬಚ್ಚಾ ಖಾನ್, ವಲೀ ಖಾನ್ ಮುಂತಾದ ಸ್ವಾತಂತ್ಯ್ರೋತ್ತರ ಪಾಕಿಸ್ತಾನದ ಪ್ರಾಂತೀಯ ನಾಯಕರೂ ಪಾಕಿಸ್ತಾನದ ಇತಿಹಾಸದ ಪುಸ್ತಕಗಳಲ್ಲಿ ಸ್ಥಾನ ಪಡೆಯಬೇಕು ಎಂದು ವಾದಿಸಿದರು. ಅವರ ಮಾತುಗಳು ಪಠ್ಯಕ್ರಮಗಳ ಮೇಲೆ ನಿಗಾ ವಹಿಸುವುದಕ್ಕೆಂದೇ ಇರುವ ಸರ್ಕಾರದ ಉನ್ನತ ಶಿಕ್ಷಣ ಆಯೋಗದ ಕೆಂಗಣ್ಣಿಗೆ ಗುರಿಯಾದವು.

ಆ ಆಯೋಗದ ಪ್ರಕಾರ ಪ್ರೊ. ಶಾ ಅವರ ಅಭಿಪ್ರಾಯಗಳು ಐತಿಹಾಸಿಕ ಸತ್ಯಗಳಿಗೆ ದೂರವಾಗಿದ್ದವು. ಹಾಗಿದ್ದರೆ ಪಾಕಿಸ್ತಾನ ಸರ್ಕಾರದ ಪ್ರಕಾರ ಐತಿಹಾಸಿಕ ಸತ್ಯಗಳು ಯಾವುವು? ಎಂಭತ್ತರ ದಶಕದ ನನ್ನ ವಿದ್ಯಾರ್ಥಿ ದಿನಗಳಲ್ಲಿ ನಾನು ನೋಡಿದ ಪಾಕಿಸ್ತಾನದ ಶಾಲೆಗಳ ಇತಿಹಾಸದ ಪಠ್ಯಪುಸ್ತಕವೊಂದರ ಸಿಲಬಸ್ ಅನ್ನು ನಿಮಗೆ ಪರಿಚಯಿಸುವುದರ ಮೂಲಕ ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುತ್ತೇನೆ.ಆ ಇತಿಹಾಸ ಪಠ್ಯಪುಸ್ತಕದ ಮೊದಲ ಅಧ್ಯಾಯದಲ್ಲಿ ಸಿಂಧೂ ಕಣಿವೆ ನಾಗರಿಕತೆಯನ್ನು ಪಾಕಿಸ್ತಾನಿ ನಾಗರಿಕತೆಯೆಂದು ಬಣ್ಣಿಸಲಾಗಿತ್ತು. ಅದರ ಪ್ರಕಾರ ಪಾಕಿಸ್ತಾನ ಪ್ರಪಂಚದ ಅತ್ಯಂತ ಹಳೆಯ ಹಾಗೂ ಭವ್ಯ ನಾಗರಿಕತೆಯೊಂದರ ತೊಟ್ಟಿಲು.

ಎರಡನೆಯ ಅಧ್ಯಾಯದಲ್ಲಿ ಪಾಕಿಸ್ತಾನದ ಸ್ಥಾಪನೆಯ ವಿವರಗಳಿದ್ದವು. ಕ್ರಿ.ಶ. 711-12ರಲ್ಲಿ ಅರಬ್ ದಂಡನಾಯಕ ಮಹಮದ್ ಬಿನ್ ಖಾಸಿಂ ಸಿಂಧ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡಾಗ ಪಾಕಿಸ್ತಾನದ ಸ್ಥಾಪನೆಯಾಯಿತಂತೆ! ನಂತರದ ಅಧ್ಯಾಯಗಳಲ್ಲಿ ಮಹಮದ್ ಘಜನಿ, ಮಹಮದ್ ಘೋರಿ ಪ್ರಾಚೀನ ಪಾಕಿಸ್ತಾನದ ಪ್ರಮುಖ ಅರಸರು ಎಂದು ಚಿತ್ರಿತರಾಗಿದ್ದರು. ನೆರೆಯ ಹಿಂದೂಸ್ತಾನವನ್ನು ಗೆದ್ದು ಪಾಕಿಸ್ತಾನಕ್ಕೆ ಸೇರಿಸಿಕೊಂಡದ್ದಲ್ಲದೆ ಹಿಂದೂಸ್ತಾನದ ರಾಜಧಾನಿಯಾಗಿದ್ದ ದೆಹಲಿಯನ್ನು ಪಾಕಿಸ್ತಾನದ ರಾಜಧಾನಿಯನ್ನಾಗಿಸಿದ ಕೀರ್ತಿ ಮಹಮದ್ ಘೋರಿಯದಾಗಿತ್ತು. ಮೊಘಲರ ಬಗೆಗಿನ ಅಧ್ಯಾಯದಲ್ಲಿ ಅಕ್ಬರ್ ಎಂಬ ಅರಸನು ಹಿಂದುಗಳನ್ನು ಉದಾರತೆಯಿಂದ ಕಂಡ ಪರಿಣಾಮವಾಗಿ ತನ್ನ ಪ್ರಜೆಗಳಿಗೆ ಅಪ್ರಿಯನಾದನು ಎಂದಿತ್ತು.

ಆ ‘ಇತಿಹಾಸ’ದ ಪ್ರಕಾರ ಪಾಕಿಸ್ತಾನದ ಮಹಾನ್ ಸಾಮ್ರಾಟನೆಂದರೆ ಔರಂಗಜೇಬ್ ಅಲಂಗೀರ್ ಘಾಜಿ ಹಾಗೂ ಅವನ ಆಳ್ವಿಕೆಯಲ್ಲಿ ಪಾಕಿಸ್ತಾನದ ದಕ್ಷಿಣ ಮೇರೆಗಳು ಕಾವೇರಿ ನದಿಯನ್ನು ಮುಟ್ಟಿದ್ದವು! ನಂತರ ಬಂದ ಯೂರೋಪಿಯನ್ನರ ವಿರುದ್ಧ ಕಾಯದ್-ಎ ಆಜಂ (ಮಹಾನಾಯಕ) ಮಹಮದ್ ಅಲಿ ಜಿನ್ನಾ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಹಾಗೂ ಅವರ ಹೋರಾಟದಲ್ಲಿ ಹಿಂದು ನಾಯಕ ಎಂ. ಕೆ. ಗಾಂಧಿ ಸಹಕರಿಸಿದರು ಎಂದು ಆ ಇತಿಹಾಸ ಪುಸ್ತಕ ಸಾರುತ್ತಿತ್ತು! ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ನಮ್ಮ ಹಲವಾರು ಪ್ರದೇಶಗಳನ್ನು ನೆರೆಯ ಭಾರತ ಆಕ್ರಮಿಸಿಕೊಂಡಿತು ಎಂದು ಕೊನೆಯ ಅಧ್ಯಾಯ ಹೇಳಿತ್ತು. ‘ಭಾರತ ಆಕ್ರಮಿಸಿಕೊಂಡ ಪ್ರದೇಶ’ಗಳ ಪಟ್ಟಿಯಲ್ಲಿದ್ದದ್ದು ಪಶ್ಚಿಮದಲ್ಲಿ ಕಾಶ್ಮೀರದ ಜತೆ ಹರಿಯಾಣ, ಹಿಮಾಚಲಪ್ರದೇಶ ಹಾಗೂ ದೆಹಲಿಯೂ ಸೇರಿದಂತೆ ಇಡೀ ಅವಿಭಜಿತ ಪಂಜಾಬ್; ಪೂರ್ವದಲ್ಲಿ ಕೋಲ್ಕತವೂ ಸೇರಿದಂತೆ ಇಡೀ ಬಂಗಾಳ ಹಾಗೂ ಇಡೀ ಪೂರ್ವೋತ್ತರ ರಾಜ್ಯಗಳು, ಪೂರ್ವ ಮತ್ತು ಪಶ್ಚಿಮಗಳೆರಡನ್ನೂ ಸೇರಿಸಲು ಉತ್ತರಪ್ರದೇಶ ಮತ್ತು ಬಿಹಾರಗಳ ಉತ್ತರ ಭಾಗಗಳನ್ನು ಸೇರಿಸಿ ಎಳೆದ ಒಂದು ಅಗಲ ಪಟ್ಟೆ. ಹೀಗೆ ಕಳೆದುಹೋದ ಕೆಲಭಾಗಗಳನ್ನು ವೀರ ಪಾಕಿಸ್ತಾನಿ ಯೋಧರು 1947-48ರಲ್ಲಿ ಹಾಗೂ 1965ರಲ್ಲಿ ಗೆದ್ದು ತಾಯ್ನಾಡಿಗೆ ಸೇರಿಸಿದರೆಂದೂ ಅಲ್ಲಿ ದಾಖಲಾಗಿತ್ತು. ಇತ್ತೀಚಿನ ದಿನಗಳಲ್ಲಂತೂ ಈ ವಿಕೃತ ಇತಿಹಾಸ ಜಿಹಾದಿ ಕಾರ್ಖಾನೆಗಳಾಗಿರುವ ಮದ್ರಸಾಗಳ ಪಠ್ಯಕ್ರಮದಲ್ಲಿ ಮತ್ತಷ್ಟು ಉಗ್ರವಾಗಿ ಕಾಣಿಸಿಕೊಂಡಿದೆ ಎಂದು ನನ್ನ ಪಾಕಿಸ್ತಾನಿ ಸ್ನೇಹಿತರು ಹೇಳುತ್ತಾರೆ.

ಇಂತಹ ಇತಿಹಾಸವನ್ನು ಸೃಷ್ಟಿಸಿ ಅದನ್ನು ತನ್ನ ಪ್ರಜೆಗಳ ಮನಸ್ಸಿನಲ್ಲಿ ಎಳೆವಯಸ್ಸಿನಿಂದಲೇ ಬಿತ್ತುವ ಅಗತ್ಯ ಪಾಕಿಸ್ತಾನಕ್ಕೆ ಇರುವುದಾದರೂ ಏಕೆ? ಪಾಕಿಸ್ತಾನಿ ಆಳರಸರ, ಸೇನೆಯ ಮತ್ತು ಧರ್ಮಗುರುಗಳ ಈ ಕೃತ್ಯದ ಹಿಂದಿರುವುದು ಭವಿಷ್ಯದ ಬಗ್ಗೆ ಅವರ ಮನದಲ್ಲಿರುವ ಆತಂಕ. ಇದಕ್ಕೆ ಸ್ಪಷ್ಟ ಕಾರಣಗಳಿವೆ. ಈಗ ಪಾಕಿಸ್ತಾನವಾಗಿರುವ ಪ್ರದೇಶಗಳಲ್ಲಿ ಸಿಂಧ್ ಒಂದನ್ನುಳಿದು ಬೇರ‍್ಯಾವ ಪ್ರಾಂತ್ಯದ ಜನತೆಯೂ ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ಸೃಷ್ಟಿಸುವ ಮುಸ್ಲಿಂಲೀಗ್‌ನ ಪ್ರಯತ್ನವನ್ನು 1947ರವರೆಗೂ ಬೆಂಬಲಿಸಿರಲಿಲ್ಲ. (ಪಾಕಿಸ್ತಾನದ ಬೇಡಿಕೆ ಉಗ್ರವಾಗಿದ್ದದ್ದು ಪೂರ್ವ ಬಂಗಾಲ ಅಥವಾ ಈಗಿನ ಬಾಂಗ್ಲಾದೇಶದಲ್ಲಿ).

ಕೊನೆಗೂ ಪಾಕಿಸ್ತಾನದ ಸೃಷ್ಟಿಯನ್ನು ಅತ್ಯಗತ್ಯವಾಗಿ ಬಯಸಿದ್ದ ಬ್ರಿಟಿಷ್ ಸರ್ಕಾರ ಮತ್ತದರ ಕೈಗೊಂಬೆಯಾಗಿದ್ದ ಮುಸ್ಲಿಂ ಲೀಗ್ ಪಂಜಾಬ್‌ನಲ್ಲಿ ಮುಸ್ಲಿಮರು ಮತ್ತು ಸಿಖ್ಖರ ನಡುವಿನ ಕೋಮುಸೌಹಾರ್ದವನ್ನು ಕದಡಿ ಹಿಂಸೆಯನ್ನು ಭುಗಿಲೇಳುವಂತೆ ಮಾಡುವುದರಲ್ಲಿ ಯಶಸ್ವಿಯಾದರೂ ವಿಭಜನೆಯ ಕೆಲವೇ ವರ್ಷಗಳಲ್ಲಿ ಈ ವೈಮನಸ್ಯ ನಿಧಾನವಾಗಿ ತಗ್ಗತೊಡಗಿ ಪಂಜಾಬೀ ಸೌಹಾರ್ದತೆಯ ಭಾವನೆ ಮತ್ತೆ ಮೇಲೆದ್ದುಬಂತು. ಎರಡೂ ಪಂಜಾಬ್‌ಗಳ ನಡುವೆ ಸಾಂಸ್ಕೃತಿಕ ಹೊಕ್ಕುಬಳಕೆ ಆರಂಭವಾಯಿತು. ಇತ್ತೀಚೆಗಂತೂ ಅದು ಕ್ರೀಡಾಕ್ಷೇತ್ರಕ್ಕೂ ವ್ಯಾಪಿಸಿದೆ. ಹದಿನೈದು ವರ್ಷಗಳ ಹಿಂದೆಯೇ ಝೀಲಂ ನಗರದ ಪುಸ್ತಕ ಭಂಡಾರವೊಂದಕ್ಕೆ ನಮ್ಮ ಮನಮೋಹನ್ ಸಿಂಗ್ ಅವರ ಹೆಸರಿಡಲಾಗಿತ್ತು. ಅವರು ಪಂಜಾಬಿಗಳಲ್ಲೇ ಅತ್ಯಂತ ಹಿರಿಯ ಗೌರವಾನ್ವಿತ ವ್ಯಕ್ತಿ ಎನ್ನುವುದು ಅದಕ್ಕಿದ್ದ ಕಾರಣ. ಇತರ ಪ್ರಾಂತ್ಯಗಳ ಬಗ್ಗೆ ಹೇಳುವುದಾದರೆ ಜಿಯಾ-ಉಲ್-ಹಕ್ ಕಾಲದಲ್ಲಿ ಸಿಂಧ್ ಮತ್ತು ಬಲೂಚಿಸ್ತಾನಗಳಲ್ಲಿ ಪಾಕಿಸ್ತಾನ-ವಿರೋಧಿ ಭಾವನೆಗಳು ಉಗ್ರವಾಗಿ, ಪ್ರತ್ಯೇಕತಾ ನಾಯಕರು ತಮ್ಮೆರಡೂ ಪ್ರಾಂತ್ಯಗಳನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಭಾರತದೊಡನೆ ಒಗ್ಗೂಡಿಸಿ ಒಂದು Confederation  (ಸಂಯುಕ್ತರಾಷ್ಟ್ರ) ಸ್ಥಾಪಿಸುವ ಮಾತುಗಳನ್ನಾಡತೊಡಗಿದ್ದರು. ಈ ಬೆಳವಣಿಗೆಗಳಿಂದಾಗಿ ಪಾಕಿಸ್ತಾನದ ಅಸ್ತಿತ್ವಕ್ಕೇ ಧಕ್ಕೆಯೊದಗಿತ್ತು.

ಆಗ ಪಾಕಿಸ್ತಾನದ ಉಳಿವಿಗೆ ಮುಂದಾದದ್ದು ಅಮೆರಿಕ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ಸೋವಿಯೆತ್ ಯೂನಿಯನ್ ವಿರುದ್ಧದ ತನ್ನ ಯುದ್ಧದಲ್ಲಿ ಅಮೆರಿಕಕ್ಕೆ ಪಾಕಿಸ್ತಾನದ ಸಹಕಾರ ಅತ್ಯಗತ್ಯವಾಗಿತ್ತು. ಪಾಕಿಸ್ತಾನವೇನಾದರೂ ಭೂಪಟದಿಂದ ಮಾಯವಾದರೆ ಸೋವಿಯೆತ್ ಯೂನಿಯನ್ ಮತ್ತದರ ಮಿತ್ರ ಭಾರತಕ್ಕೆ ಅನುಕೂಲವಾಗುವ ಸಾಧ್ಯತೆಯನ್ನು ಮನಗಂಡ ರೀಗನ್ ಸರ್ಕಾರ ಚುನಾವಣೆಗಳನ್ನು ನಡೆಸಿ ಜವಾಬ್ದಾರಿಯುತ ಸರ್ಕಾರವನ್ನು ನಿರ್ಮಿಸಿ ತನ್ನ ಮಿಲಿಟರಿ ಸರ್ವಾಧಿಕಾರವನ್ನು ಮಿತಿಗೊಳಿಸುವ ಸಲಹೆಯನ್ನು ಜಿಯಾಗೆ ನೀಡಿತು. ಅದನ್ನು ಪಾಲಿಸಿದ ಚಾಣಾಕ್ಷ ಜಿಯಾ ಇಸ್ಲಾಮಾಬಾದ್ ವಿರುದ್ಧ ಭುಗಿಲೇಳುತ್ತಿದ್ದ ಭಾವನೆಗಳನ್ನು ಯಶಸ್ವಿಯಾಗಿ ತಹಬಂದಿಗೆ ತಂದು ಪ್ರತ್ಯೇಕತಾವಾದಿ ನಾಯಕರ ಗಮನವನ್ನು ಪಾಕಿಸ್ತಾನದೊಳಗೇ ರಾಜಕೀಯ ಅಧಿಕಾರಕ್ಕಾಗಿ ಪ್ರಯತ್ನಿಸುವುದರತ್ತ ತಿರುಗಿಸಿದರು.ಹೀಗೆ ಆರೂವರೆ ದಶಕಗಳಿಗೂ ಮೀರಿದ ಸ್ವತಂತ್ರ ಇತಿಹಾಸದಲ್ಲಿ ಪಾಕಿಸ್ತಾನ ತನ್ನ ಅಸ್ತಿತ್ವದ ಬಗ್ಗೆ ಹಲವು ಸಲ ಸೂಕ್ಷ್ಮ ಪರಿಸ್ಥಿತಿಯನ್ನೆದುರಿಸಿದೆ.

ಈ ಹಿನ್ನೆಲೆಯಲ್ಲಿ,ಮುಂದೆಯೂ ಇಂತಹ ಸಂದರ್ಭ ಒದಗಬಹುದೆಂಬ ಆತಂಕ ಪಾಕಿಸ್ತಾನಿ ನಾಯಕರನ್ನು ಕಾಡುತ್ತಿದೆ. ಪಾಕಿಸ್ತಾನೀಯರು ಭಾಷಿಕವಾಗಿ, ಸಾಂಸ್ಕೃತಿಕವಾಗಿ ತಮಗೆ ತೀರಾ ಹತ್ತಿರವಾದ ಭಾರತವನ್ನು ಸಾರಾಸಗಟಾಗಿ ಪ್ರೀತಿಸಲು ತೊಡಗಿದರೆ ಅಲ್ಲಿಗೆ ಪಾಕಿಸ್ತಾನದ ಪ್ರತ್ಯೇಕ ಅಸ್ತಿತ್ವದ ಬುನಾದಿ ಕುಸಿದುಹೋಗುತ್ತದೆ. ಪಾಕಿಸ್ತಾನವೆಂಬ ದೇಶ ಭೂಪಟದಿಂದ ಮಾಯವಾಗುತ್ತದೆ. ಪರಿಣಾಮವಾಗಿ ಪಾಕಿಸ್ತಾನಿ ಸೇನೆ ಅಸ್ತಿತ್ವ ಕಳೆದುಕೊಳ್ಳುತ್ತದೆ ಹಾಗೂ ಮೌಲ್ವಿಗಳಿಗೆ ‘ಧರ್ಮನಿರಪೇಕ್ಷ ಭಾರತ’ದಲ್ಲಿ ಯಾವ ಸ್ಥಾನವೂ ಇರುವುದಿಲ್ಲ. ಇಂಥದೊಂದು ಪರಿಸ್ಥಿತಿ ಪಾಕಿಸ್ತಾನಿ ಸೇನೆ ಹಾಗೂ ಮೌಲ್ವಿಗಳನ್ನು ಒಂದು ದುಃಸ್ವಪ್ನದಂತೆ ಕಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನಗಳ ಜನತೆಯ ನಡುವೆ ಶಾಶ್ವತ ಸ್ನೇಹ ಸೌಹಾರ್ದ ಉಂಟಾಗಬಾರದೆಂದೂ, ತನ್ಮೂಲಕ ತಮ್ಮ ಅಸ್ತಿತ್ವ ಮಣ್ಣುಪಾಲಾಗಬಾರದೆಂದೂ ಅವರು ಅಹರ್ನಿಶಿ ಶ್ರಮಿಸುತ್ತಿದ್ದಾರೆ.

ಇಸ್ಲಾಮಾಬಾದಿನಲ್ಲಿ ಅಧಿಕಾರ ಹಿಡಿಯುವ ಯಾವುದೇ ಸರ್ಕಾರವನ್ನು ತಮ್ಮ ಕಪಿಮುಷ್ಟಿಯಲ್ಲಿರಿಸಿಕೊಳ್ಳುವ ಸೇನೆ ಮತ್ತು ಧರ್ಮಗುರುಗಳು ತಮ್ಮ ಭಾರತ-ವಿರೋಧಿ ನೀತಿಗಳಿಗಾಗಿ ಆ ಸರ್ಕಾರಗಳನ್ನು ಬಳಸಿಕೊಳ್ಳುತ್ತವೆ. ಅವುಗಳ ಇಂಗಿತದಂತೆ ಸರ್ಕಾರಿ ನೀತಿಗಳು ರೂಪಿತವಾಗುತ್ತವೆ ಮತ್ತು ಶಾಲೆಗಳಲ್ಲಿನ ಪಠ್ಯಕ್ರಮಗಳು ತಯಾರಾಗುತ್ತವೆ. ಇದರ ಪ್ರಕಾರ ಪಾಕಿಸ್ತಾನಕ್ಕೆ ಭಾರತದಿಂದ ಪ್ರತ್ಯೇಕವಾದ ಐತಿಹಾಸಿಕ ಅಸ್ತಿತ್ವ ನೀಡುವುದು ಅಂದರೆ ಪಾಕಿಸ್ತಾನವೆಂದೂ ಭಾರತದ ಭಾಗವಾಗಿರಲಿಲ್ಲ, ಅದು ಸಾವಿರದ ಮುನ್ನೂರು ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ. ಅಷ್ಟೇ ಅಲ್ಲ, ಅದೆಷ್ಟೋ ಕಾಲದವರೆಗೆ ಭಾರತದ ಮೇಲೆ ಅಧಿಕಾರ ನಡೆಸಿದೆ ಎಂದು ಜನರನ್ನು ನಂಬಿಸುವುದರ ಮೂಲಕ ಅವರು ಭಾರತದ ಬಗ್ಗೆ ಎಂದೂ ಪ್ರೀತ್ಯಾದರ ಬೆಳೆಸಿಕೊಳ್ಳದಂತೆ ತಡೆಯುವುದೇ ಈ ಇತಿಹಾಸ ಪಠ್ಯಕ್ರಮದ ಉದ್ದೇಶ.ಜತೆಗೇ ಧರ್ಮದ ಕಂದರವನ್ನೂ ಆಳವಾಗಿಸಲಾಗುತ್ತಿದೆ. ಮುಸ್ಲಿಮರಿಂದ, ಮುಸ್ಲಿಮರಿಗಾಗಿ, ಮುಸ್ಲಿಮರು ಸೃಷ್ಟಿಸಿದ ದೇಶ ಪಾಕಿಸ್ತಾನ; ಇದರ ಧಾರ್ಮಿಕ ನೆಲೆಗಟ್ಟು ಹಿಂದು ಭಾರತಕ್ಕಿಂತ ಸಂಪೂರ್ಣ ಭಿನ್ನ ಎಂದೂ ಬಿಂಬಿಸಲಾಗುತ್ತಿದೆ.

ಇದರ ಅಂಗವಾಗಿಯೇ, ಐದು ಸಲ ಪ್ರಾರ್ಥನೆ ಮಾಡದ, ಮದ್ಯ ಹಾಗೂ ಹಂದಿಮಾಂಸ ಸೇವಿಸುತ್ತಿದ್ದ, ಪಾರ್ಸಿ ಸ್ತ್ರೀಯನ್ನು ವಿವಾಹವಾಗಿದ್ದ ಜಿನ್ನಾರನ್ನು ನಿಷ್ಠಾವಂತ ಮುಸಲ್ಮಾನನಂತೆ ಚಿತ್ರಿಸುವ ಸಂಚೂ ನಡೆಯಿತು. ಜಿನ್ನಾ ಯಾವಾಗಲೂ ತೊಡುತ್ತಿದ್ದುದು ಪಾಶ್ಚಾತ್ಯ ಉಡುಗೆ. ಆದರೆ ಅದನ್ನು ಮರೆಮಾಚಿ, ಅವರು ಎಂದೋ ಒಂದು ಸಲ ಧರಿಸಿದ ಶೇರ್ವಾನಿ ಮತ್ತು ಟೋಪಿಯ ಚಿತ್ರವನ್ನೇ ಅಂಚೆಚೀಟಿಗಳು, ಕರೆನ್ಸಿ ನೋಟುಗಳು ಮತ್ತು ಪಠ್ಯಪುಸ್ತಕಗಳಲ್ಲಿ ಮುದ್ರಿಸಿ ಜಿನ್ನಾ ಒಬ್ಬ ಸಂಪ್ರದಾಯಸ್ಥ ಮುಸ್ಲಿಂ ಎಂಬ ನಂಬಿಕೆ ಪಾಕಿಸ್ತಾನಿಯರಲ್ಲಿ ಮೂಡುವಂತೆ ಮಾಡಲಾಯಿತು.

ಇಷ್ಟಾಗಿಯೂ, ತಮ್ಮ ನಿಜವಾದ ಇತಿಹಾಸವನ್ನು ತಿಳಿಯುವ ಆಸಕ್ತಿ ಮತ್ತು ಕುತೂಹಲ ಪಾಕಿಸ್ತಾನಿಯರಲ್ಲಿ ಮೂಡುತ್ತಿದೆ. ನಿವೃತ್ತ ಇತಿಹಾಸ ಪ್ರಾಧ್ಯಾಪಕ ಮುಬಾರಕ್ ಅಲಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಉಪಖಂಡದ ಇತಿಹಾಸದ ಬಗ್ಗೆ ಭಾರತ ಮತ್ತು ಬ್ರಿಟನ್‌ನಲ್ಲಿ ಪ್ರಕಟವಾದ ಹಲವು ಕೃತಿಗಳನ್ನು ಉರ್ದು ಭಾಷೆಗೆ ಅನುವಾದಿಸಿದ್ದಾರೆ. ಜಿನ್ನಾ ತೀರಿಕೊಳ್ಳುವ ಮೊದಲು ನೀಡಿದ ಕೊನೆಯ ಸಂದರ್ಶನ ಭಾರತದ ರಾಯಭಾರಿ ಶ್ರೀನಿವಾಸ ಅಯ್ಯರ್ ಅವರಿಗೆ. ಪಾಕಿಸ್ತಾನವನ್ನು ಸೃಷ್ಟಿಸಿದ್ದು ತನ್ನ ಬದುಕಿನ ಅತಿದೊಡ್ಡ ತಪ್ಪು ಎಂದು ಜಿನ್ನಾ ಆ ಸಂದರ್ಶನದಲ್ಲಿ ಹೇಳಿದರಂತೆ. ಇದನ್ನು ಅಯ್ಯರ್ ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ. ಈ ಕೃತಿಯನ್ನೂ ಸಹ ಪ್ರೊ.ಅಲಿ ಉರ್ದುಗೆ ಅನುವಾದಿಸಿದ್ದಾರೆ. ಈ ಅನುವಾದಗಳೆಲ್ಲ ಪಾಕಿಸ್ತಾನದಾದ್ಯಂತ ಬಿಸಿದೋಸೆಯಂತೆ ಬಿಕರಿಯಾಗುತ್ತಿವೆ. ಇದರರ್ಥ, ಪಾಕಿಸ್ತಾನಿ ಆಳರಸರ ಎಲ್ಲ ಸಂಚನ್ನೂ ಮೀರಿ ಇತಿಹಾಸದ ಸತ್ಯವನ್ನು ಅರಿಯುವ ಪ್ರಯತ್ನದಲ್ಲಿ ಪಾಕಿಸ್ತಾನೀಯರು ತೊಡಗಿದ್ದಾರೆ. ಇದೊಂದು ಬೆಳ್ಳಿರೇಖೆ.ಈಗ ಲೇಖನದ ಪ್ರಾರಂಭಕ್ಕೆ ಹಿಂತಿರುಗೋಣ. ನಮ್ಮ ಕರ್ನಾಟಕದಲ್ಲಿ ಇಂತಹ ಬೆಳ್ಳಿರೇಖೆ ಕಾಣಿಸಿಕೊಳ್ಳುವುದು ಯಾವಾಗ?

ಕೃಪೆ : ವಿಜಯವಾಣಿ

2 ಟಿಪ್ಪಣಿಗಳು Post a comment
  1. Rajaram Hegde
    ಡಿಸೆ 16 2015

    ಪ್ರೇಮ ಶೇಖರ ಅವರ ವಿಜಯವಾಣಿ ಅಂಕಣಗಳನ್ನು ನಾನು ತಪ್ಪದೇ ಓದುತ್ತಿರುತ್ತೇನೆ. ಅವರ ಅಂಕಣಗಳು ಉಪಯುಕ್ತ ಮಾಹಿತಿಗಳಿಂದ ಕೂಡಿದ್ದು ಪ್ರಚಲಿತ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಕಟು ವಿಮರ್ಶೆಗೊಡ್ಡುತ್ತವೆ. ಕೆಲವು ಅಂಕಣಗಳಂತೂ ಅತ್ಯುತ್ತಮವಾಗಿವೆ. ಇಂಥ ಅಂಕಣಗಳು ಕನ್ನಡ ಬೌದ್ಧಿಕ ಕ್ಷೇತ್ರದ ರಾಡಿಯನ್ನು ತೊಳೆಯಲಿಕ್ಕೆ ಅತ್ಯಗತ್ಯ. ಆದರೆ ಇಂಥ ಅಂಕಣಕಾರರು ವಿಜಯವಾಣಿಯಂಥ ಪತ್ರಿಕೆ ಇಲ್ಲದಿದ್ದರೆ ಕನ್ನಡ ಓದುಗರಿಗೆ ಮರೀಚಿಕೆಗಳಾಗಿರುತ್ತಿದ್ದರು. ಹಾಗಾಗಿ ಹರಿಪ್ರಕಾಶ ಕೋಣೆಮನೆ ಹಾಗೂ ಅವರ ಸಂಪಾದಕ ಬಳಗವು ನಿಜಕ್ಕೂ ಅಭಿನಂದನಾರ್ಹ. ಈ ಮಾತನ್ನು ಪ್ರೇಮಶೇಖರ ಅವರು ಸಿಎಸ್ಎಲ್ ಸಿ ಕುರಿತು ಬರೆದ ಕಾರಣದಿಂದ ಹೇಳಿದ್ದಲ್ಲ. ಇದೊಂದು ನೆಪವಾಯಿತು ಅಷ್ಟೆ.

    ಉತ್ತರ
  2. ಹಲವಾರು ದೇಶಭಕ್ತ ಹಾಗೂ ಪ್ರಾಮಾಣಿಕ ಬರಹಗಾರರನ್ನು, ವಿಜಯವಾಣಿ ಪತ್ರಿಕೆ ಕನ್ನಡಿಗರಿಗೆ ಪರಿಚಯಿಸಿದೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments