ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 18, 2015

ಭಾರತದಲ್ಲಿ ಯಾವ ರೀತಿಯ ಅಸಹಿಷ್ಣುತೆ ಬೆಳೆಯುತ್ತಿದೆ?

‍ನಿಲುಮೆ ಮೂಲಕ

ಮೂಲ: ಪ್ರೊ. ಎಸ್.ಎನ್ ಬಾಲಗಂಗಾಧರ
ಕನ್ನಡಕ್ಕೆ : ಇಂಚರ

ಪ್ರೊ.ಬಾಲಗಂಗಾಧರಇತ್ತೀಚೆಗೆ ಭಾರತದ ಸಾಮಾಜಿಕ ವಾತಾವರಣದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಧ್ವನಿ ಭಾರತದ ಹಲವು ಕಡೆಗಳಿಂದ ಜೋರಾಗಿ ಕೇಳಿಬರುತ್ತಿವೆ. ಪಾಶ್ಚಾತ್ಯ ಮಾಧ್ಯಮಗಳು ಈ ಕೀರಲು ಕೂಗುಗಳನ್ನೇ ಹಿಗ್ಗಿಸಿ, ಬೂದುಗಾಜಿನಿಂದ ನೋಡುತ್ತಿರುವುದೂ ಅಲ್ಲದೆ, ಪ್ರಧಾನಿ ಮೋದಿಯವರ ಬ್ರಿಟನ್ ಭೇಟಿಯ ವಿಚಾರವನ್ನು ಕೂಡ ಇದೇ ನೆಲೆಗಟ್ಟಿನಲ್ಲಿ ವ್ಯಂಗ್ಯ ಮಾಡಲು ಬಳಸುತ್ತಿವೆ. ಭಾರತೀಯರ ಈ ಅಸಹಿಷ್ಣುತೆಯ ಮಂತ್ರವನ್ನು ಒಂದು ಪಕ್ಷ ಅರ್ಥ ಮಾಡಿಕೊಂಡರೂ, ಯುರೋಪಿಯನ್ನರು ಏಕೆ ಇದೇ ಮಂತ್ರವನ್ನು ಪುನರುಚ್ಛರಿಸುತ್ತಿದ್ದಾರೆ? ಎಂಬದನ್ನು ಯೋಚಿಸಬೇಕು. ಈ ಘಟನೆಯನ್ನು ಅವಲೋಕಿಸಿದಾಗ, ಇಲ್ಲಿ ಕಾಡುತ್ತಿರುವ ಅಸಹಿಷ್ಣುತೆಯ ಕುರಿತು ಇರುವ ಅಸ್ಪಷ್ಟತೆ! ಇವೆಲ್ಲವೂ ಒಂದು ಒಗಟಿನ ಹಾಗೆಯೇ ಕಾಣುತ್ತದೆ.

ಬಹುಶಃ ಇಲ್ಲಿ ನಡೆದಿರುವ ಕೆಲವಾರು ಕೊಲೆಗಳ ಕುರಿತು ಪ್ರತಿಭಟಿಸಲು ಅಸಹಿಷ್ಣುತೆಯ ಕೂಗನ್ನು ಒಂದಷ್ಟು ಜನರು ಎಬ್ಬಿಸಿರಬಹುದು. ಹಾಗೆಯೇ ಒಂದಷ್ಟು ಜನರ ಕೊಲೆಗಳಾಗಲು, ಆ ವ್ಯಕ್ತಿಗಳು ಒಂದಷ್ಟು ಜನರ ಅಸಹಿಷ್ಣುತೆಗೆ ಗುರಿಯಾಗಿದ್ದದು ಕೂಡ ಕಾರಣವಿರಬಹುದು. ಆದರೆ ಜನರು ಮಾತ್ರ ಭಾರತದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ಪ್ರತಿಭಟಿಸುತ್ತಿಲ್ಲವೆಂಬುದು ಹಾಗೂ ಭಾರತ ಇಂತಹ ಅಪರಾಧಗಳಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ ಸಂಗತಿ.

ನಿರ್ದಿಷ್ಟ ವ್ಯಕ್ತಿಗಳ ಕೊಲೆಗಳಾದಾಗ ಮಾತ್ರ ದೇಶದಲ್ಲಿ ಅಸಹಿಷ್ಟುತೆ ಹೆಚ್ಚುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಉದಾ: ಕಲ್ಬುರ್ಗಿ ಅವರ ಕೊಲೆ ಈ ಅಸಹಿಷ್ಟುತೆಯ ಕೂಗನ್ನು ಹುಟ್ಟುಹಾಕಿತು. ಆದರೆ ಕಲ್ಬುರ್ಗಿಯವರು ಕೂಡ ಅನೇಕ ವಿಷಯಗಳಲ್ಲಿ ಅಸಹಿಷ್ಣುತೆ ಹೊಂದಿದ್ದವರು. ಸೆಮೆಟಿಕ್ ಥಿಯಾಲಜಿ ಪ್ರಕಾರ ಮೂರ್ತಿ ಪೂಜೆ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳದೆ ಅಥವಾ ಅದು ಪಾಪ ಹೇಗೆ? ಎಂಬುದನ್ನುಅರ್ಥ ಮಾಡಿಕೊಳ್ಳದೆಯೇ ಮೂರ್ತಿ ಪೂಜೆಯ ವಿರುದ್ಧ ಭಾರತದ ಅನೇಕ ಬುದ್ಧಿಜೀವಿಗಳಿಗಿರುವ ಅಸಹಿಷ್ಣುತೆ / ಪೂರ್ವಗ್ರಹ ಕಲ್ಬುರ್ಗಿಯವರಿಗೂ ಇತ್ತು. ಅವರ ಸಿದ್ದಾಂತಗಳಿಗಿಂತ ಭಿನ್ನವಾದ ಸಿದ್ದಾಂತಗಳನ್ನು ಒಪ್ಪದಿರುವಷ್ಟು ಅಸಹಿಷ್ಣುತೆ / ಅಸಹನೆ ಅವರಲ್ಲಿತ್ತು. ಅವರಂತಹುದೇ ಮನಸ್ಥಿತಿಯುಳ್ಳ ಒಂದಷ್ಟು ಜನರನ್ನೊಳಗೊಂಡ ತಂಡದ ಮುಂದಾಳತ್ವ ವಹಿಸಿ ಕಲ್ಬುರ್ಗಿಯವರು, ಕನ್ನಡ ದಿನಪತ್ರಿಕೆಯ ಮಾಲೀಕರನ್ನು ಭೇಟಿ ಮಾಡಿ ಅದರಲ್ಲಿ ಬರುತ್ತಿದ್ದ ಅಂಕಣವನ್ನು ನಿಲ್ಲಿಸಿದ್ದರು!

ಆ ಅಂಕಣವು ಕರ್ನಾಟಕದ ವೀರಶೈವ ಚಿಂತಕರ ಕುರಿತು ಅಸಂಪ್ರದಾಯಿಕ ವಿಚಾರಗಳನ್ನು ಒಳಗೊಂಡಿದ್ದುದರಿಂದ, ಅಸಹಿಷ್ಣುತೆಗೊಳಗಾಗಿತ್ತು. ಹಾಗೆಯೇ ಅವರಿಗಿಷ್ಟವಾಗದ / ಅವರೊಪ್ಪದ ವೈಜ್ಞಾನಿಕ ಸಂಶೋಧನೆಯನ್ನು ನಡೆಸುತ್ತಿತ್ತು ಎಂಬ ಕಾರಣದಿಂದ ಈಗಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಸಂಶೋಧನಾ ಕೇಂದ್ರವನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರು. ಹಂಪೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಕಾಲದಿಂದಲೂ ಅವರು ಬದುಕಿರುವವರೆಗೆ, ಅವರ ಚಿಂತನೆಯಲ್ಲಿನ ಪ್ರಾಮಾಣಿಕತೆ ಹಾಗೂ ನೈತಿಕತೆಯ ಬಗ್ಗೆ ಚೋಟಾ ರಾಜನ್ ನಂತವನಿಗೂ ನಾಚಿಕೆಯಾಗುವಷ್ಟು ಹತ್ತು ಹಲವಾರು ಕಥೆಗಳು ಅವರ ಸುತ್ತಲೂ ಸುತ್ತುತ್ತಿದ್ದವು. ಈಗಲೂ ಅವರ ಕೊಲೆಗೆ ಅವರ ಇಂತಹ ಅಸಹಿಷ್ಣುತೆಯೆ ಕಾರಣವಾಯಿತೇ? ಅಥವಾ ರಾಜ್ಯದ ಎಲ್ಲೆಡೆ ಕೇಳಿಬರುತ್ತಿರುವ ಅವರ ಅನೈತಿಕತೆಯ ಬಗೆಗಿನ ಊಹಾಪೋಹಗಳೇ ಮೃತ್ಯುವಾದವೇ? ಯಾರಿಗೂ ಸ್ಪಷ್ಟತೆಯಿಲ್ಲ. ಅಸಹಿಷ್ಣುತೆಯುಳ್ಳ ಮಂದಿ ಕೊಲೆಯಾಗುತ್ತಿರುವುದು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದರ ಸಂಕೇತವಾದರೆ? ಸಹಿಷ್ಣುತೆಯುಳ್ಳ ಮಂದಿಯ ಕೊಲೆಗಳಾದರೆ ಏನು ಹೇಳಬಹುದು?

ದಾದ್ರಿಯ ಹತ್ಯಾ ಪ್ರಕರಣ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಮತ್ತೊಂದು ಉದಾಹರಣೆಯಾಗಿ ನೀಡುತ್ತಿದ್ದಾರೆ. ಆದರೆ ಮಾಧ್ಯಮಗಳ ನಿರ್ಲಕ್ಷ್ಯಕ್ಕೆ ಗುರಿಯಾದ ಕಥೆ ಏನೆಂದರೆ ಹತ್ಯೆಗೊಳಗಾದ ವ್ಯಕ್ತಿ, ಮತ್ತೊಬ್ಬ ವ್ಯಕ್ತಿಯ ಮನೆಯಿಂದ ಹಸುವನ್ನು ಕದ್ದಿದ್ದ ಎಂಬುದು. ಅಮೇರಿಕಾದಲ್ಲಿ ನೂರಾರು ವರ್ಷಗಳ ಕಾಲ, ಹಸು ಮತ್ತು ಕುದುರೆಗಳ್ಳರನ್ನು ಜನರು ಹತ್ಯೆ ಮಾಡುತ್ತಿದ್ದರು. ಯುಕೆ ಯಲ್ಲಿಯೂ ಕೂಡ ಇಂತಹುದೇ ಕ್ರಮ ಜಾರಿಯಲ್ಲಿತ್ತು. ಇಂತಹ ಹತ್ಯೆಗಳು ಈಗಿನ ನ್ಯಾಯ ವ್ಯವಸ್ಥೆಗೆ ತೊಡಕು ಮತ್ತು ಅಪರಾಧವಾಗಿದ್ದರೂ ಕೂಡ, ಇಂತಹ ಘಟನೆಗಳು ಚರಿತ್ರೆಯ ಭಾಗವೂ ಕೂಡ ಆಗಿರುವುದರಿಂದ, ಇವುಗಳನ್ನು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಉದಾಹರಣೆಯಾಗಿ ಉಲ್ಲೇಖಿಸಲು ಸಾಧ್ಯವಿಲ್ಲ.

ಸಂದರ್ಭ ಹೀಗಿರುವಾಗ, ಮರುದಿವಸ ಮಂಗಳೂರಿನ ಬಳಿ ಹತ್ಯೆಗೀಡಾದ ಹೂವಿನ ವ್ಯಾಪಾರಿಯೊಬ್ಬನ ಸಾವಿಗೆ ನಾವೆಲ್ಲರೂ ಹೇಗೆ ಪ್ರತಿಸ್ಪಂದಿಸಬೇಕಿತ್ತು? ಆತನ ಹತ್ಯೆಯ ಬಗ್ಗೆ ಯಾರೂ ಕೂಡ ಅಸಹಿಷ್ಣುತೆಯ ಸೊಲ್ಲೆತ್ತದೇ ಇದ್ದುದು ಏಕೆಂದರೆ ಆತನೊಬ್ಬ ಹಿಂದುವಾಗಿದ್ದ ಹಾಗೂ ಅವನನ್ನು ಕೊಂದವರು ಮುಸ್ಲಿಮರಾಗಿದ್ದರು. ಬಹುಶಃ ಅವರೆಲ್ಲರಿಗೂ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುವುದು ಮುಸ್ಲಿಮರ ಕೊಲೆಗಳಾದಾಗ ಮಾತ್ರವೆಂದು ಕಾಣುತ್ತದೆ. ಹಾಗಿದ್ದ ಪಕ್ಷದಲ್ಲಿ, ಮುಸ್ಲಿಮರ ದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಏನನ್ನು ಹೇಳಬಹುದು? ಮುಸ್ಲಿಮರು ಪರಸ್ಪರ ತಮ್ಮ ತಮ್ಮಲ್ಲೇ ದ್ವೇಷದಿಂದ ಹೊಡೆದಾಡಿ, ಒಬ್ಬರನ್ನೊಬ್ಬರು ಕೊಚ್ಚಿ ಕೊಲ್ಲುತ್ತಿದ್ದಾರೆ. ಸುನ್ನಿಗಳು ಶಿಯಾರನ್ನು, ಶಿಯಾ ಜನರು ಸುನ್ನಿಗಳನ್ನು ಕೊಂದು ಹಾಕುತ್ತಿದ್ದಾರೆ. ಅಸಹಾಯಕ ಜನರು ಬರ್ಬರವಾಗಿ ಹತ್ಯೆಗೀಡಾಗುತ್ತಿದ್ದಾರೆ. ಹಾಗೂ ಇಂತಹ ಕ್ರೂರ ಕೃತ್ಯಗಳಿಗೆಲ್ಲಾ ಅಲ್ಲಿನ ಸರ್ಕಾರ ಪ್ರತ್ಯಕ್ಷ / ಪರೋಕ್ಷ ಸಹಾಯ ಮಾಡುತ್ತಿದೆ. ಇಂತಹ ಕೃತ್ಯಗಳು ಲೆಬನಾನ್ ನಿಂದ ಹಿಡಿದು ಸೌದಿ ಅರೇಬಿಯಾ ತನಕವೂ ಎಲ್ಲೆಡೆ ನಡೆಯುತ್ತಿದ್ದರೂ ಕೂಡ, ಯಾರೂ ಅಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಘೋಷಿಸುವುದಿಲ್ಲ! ಬದಲಿಗೆ, ಅಲ್ಲಿ ನಡೆಯುತ್ತಿರುವುದು ಕೇವಲ ಭಯೋತ್ಪಾದನೆಯ ವಿರುದ್ಧದ ಯುದ್ಧವೆಂದಷ್ಟೇ ಹೇಳುತ್ತಾರೆ! ಇಲ್ಲೆಲ್ಲಾ ಭಯೋತ್ಪಾದನೆಯ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಮರ ಕಗ್ಗೊಲೆಗಳನ್ನು ಇಡೀ ಪ್ರಪಂಚವೇ ಸಹಿಷ್ಣುತೆಯಿಂದ, ಸಂಭ್ರಮಿಸುತ್ತಾ, ಸ್ವಾಗತಿಸುತ್ತಿದೆ, ಆದರೆ ಭಾರತದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಹತ್ಯೆಗೀಡಾದಾಗ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಕಾಣುವ ಇಲ್ಲಿನ ಉದಾರ ಹೃದಯಿಗಳು, ಆಫ್ಗಾನಿಸ್ತಾನದಲ್ಲೋ ಅಥವಾ ಪಾಕಿಸ್ತಾನದಲ್ಲೋ ನಡೆಯುವ ರಾಶಿ, ರಾಶಿ ಬಾಂಬ್ ಸ್ಪೋಟಗಳ ಬಗ್ಗೆ ಕಣ್ಣು, ಬಾಯಿ ಮುಚ್ಚಿ ಕುಳಿತುಕೊಳ್ಳುತ್ತಾರೆ.

ಹಾಗಿದ್ದರೆ ಹೆಚ್ಚುತ್ತಿರುವ ಅಸಹಿಷ್ಣುತೆ ಎಂದರೆ ಭಿನ್ನಭಿಪ್ರಾಯಗಳನ್ನು ತಡೆದುಕೊಳ್ಳಲಾಗುವುದಿಲ್ಲ ಎಂಬುವುದೇ? ಇದಕ್ಕೆ ಎರಡು ಉದಾಹರಣೆಗಳನ್ನು ನೀಡಬಹುದು. ಮೊದಲನೆಯದು, ಮಾನಸಿಕ ಅಸ್ಥಿರತೆ ಇರುವ ವ್ಯಕ್ತಿಯೊಬ್ಬ (ಹುಚ್ಚ ವೆಂಕಟ್), ಯಾವುದೋ ಟಿವಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರನ್ನು ವಿರೋಧಿಸಿದ. ಆತ ಅಂಬೇಡ್ಕರ್ ಅವರನ್ನು `ಅವನ ಎಕ್ಕಡ’ ಎಂದ. ಆದರೆ ಯಾವ ದಿನಪತ್ರಿಕೆಗಳೂ ಕೂಡ ಆತ ಹೇಳಿದ್ದೇನು? ಎಂಬುದನ್ನು ತಮ್ಮ ಪತ್ರಿಕೆಯಲ್ಲಿ ವರದಿ ಮಾಡದೇ, ಕೇವಲ ಆತ ಅಂಬೇಡ್ಕರ್ ಅವರನ್ನು ಕೆಟ್ಟ ಶಬ್ಧಗಳಿಂದ ಅವಮಾನಿಸಿದ ಎಂದಷ್ಟೇ ಹೇಳಿದರು. ಯಾವುದೇ ವ್ಯಕ್ತಿಯ ವಿಷಯವಾಗಿ ಅವಹೇಳನಾತ್ಮಕ ಮತ್ತು ಹೀಯಾಳಿಸುವ ಪದಗಳನ್ನೇಕೆ ಬಳಸಬಾರದು? ಎಂಬುವ ಸ್ಪಷ್ಟತೆಯೇ ಯಾರಿಗೂ ಕೂಡ ಇಲ್ಲ. ಭಾರತದ ಆಡುಭಾಷೆಗಳಲ್ಲಿ ಬೈಗುಳದ ಪದಗಳು ಸರ್ವೇ ಸಾಮಾನ್ಯವಾಗಿ ಎಲ್ಲರನ್ನೂ ಉದ್ದೇಶಿಸಿ ದೇವರನ್ನು ಕೂಡ ಒಳಪಡಿಸಿ ಬಳಸಲ್ಪಡುತ್ತವೆ. ಹಾಗಿದ್ದರೆ ಅಂಬೇಡ್ಕರ್ ಅವರು ದೇವರಿಗಿಂತ ಶ್ರೇಷ್ಟವಾದರೆ? ಬೆಂಗಳೂರಿನಲ್ಲಿರುವ ಅಂಬೇಡ್ಕರ್ ವಾದಿಗಳು ಈ ವೆಂಕಟ್ ಕಾರಿನಲ್ಲಿ ಹೋಗುತ್ತಿದ್ದಾಗ, ಆತನನ್ನು ಅಶ್ಲೀಲ ಪದಗಳಿಂದ ಹೀಗಳೆದು, ಥಳಿಸಿ, ಆತನ ಮುಖಕ್ಕೆ ಕಪ್ಪು ಟಾರ್ ಮೆತ್ತಿ ಕಳಿಸಿದ್ದರು. ಮತ್ತೊಂದು ಉದಾಹರಣೆ ನನ್ನ ಮಾತಿನ ಕುರಿತದ್ದು. ಇತ್ತೀಚೆಗೆ ಹೈದರಬಾದಿನಲ್ಲಿ ನಡೆದ ಒಂದು ಅಂತರರಾಷ್ಟ್ರೀಯ ಸಮ್ಮೇಳನವೊಂದರಲ್ಲಿ, ನಾನು ಬೌದ್ಧಿಕ ವಿಷಯವೊಂದರಲ್ಲಿ ಅಂಬೇಡ್ಕರ್ ಅವರೊಡನೆ ಭಿನ್ನಭಿಪ್ರಾಯ ಹೊಂದಿದ್ದೆ ಹಾಗಾಗಿ ಅದರ ಬಗ್ಗೆ ಮಾತಾಡುತ್ತಾ ‘ಈಡಿಯಟ್’ ಎಂದು ಹೇಳಿದೆ. (ಈ ವಿಶೇಷಣಾವನ್ನು ಬಳಸಿದ್ದು ನನಗೀಗ ನಿಜವಾಗಿಯೂ ಖೇದವಾಗಿದೆ. ನಾನು “ಅಲಿಯಾ ಭಟ್ ಳ ಬುದ್ಧಿವಂತಿಕೆಯನ್ನು ಅಂಬೇಡ್ಕರ್ ಮೀರಿಸುತ್ತಾರೆ” ಎಂದು ಹೇಳಬೇಕಿತ್ತು ಎಂದೀಗ ಅನಿಸುತ್ತಿದೆ) ಈ “ಬಯ್ಗಳ” (ಅವರ ಪ್ರಕಾರ) ವನ್ನು ನನ್ನ ವಿರುದ್ಧ ಪ್ರಚಾರ ಮಾಡಲು ಅಂಬೇಡ್ಕರ್ ಅನುಯಾಯಿಗಳು ಬಳಸಿಕೊಂಡರು. ಭಾರತದ ರಾಷ್ಟ್ರಪತಿಗಳಿಗೆ ನನ್ನನ್ನು ದೂರುತ್ತಾ, ಪತ್ರವೊಂದನ್ನು ಕಳಿಸಿದರು. ಇನ್ನು ಮುಂದೆ ನಾನು ಭಾರತಕ್ಕೆ ಬರದಂತೆ ತಡೆಯುವಂತೆ ಬ್ರುಸೆಲ್ಸ್ ನ ಭಾರತದ ರಾಯಭಾರಿಗಳ ಕಛೇರಿಗೆ ಪತ್ರವೊಂದನ್ನು ಬರೆದರು. ಬೆಲ್ಜಿಯಮ್ ನ LTTE ಗ್ರೂಪಿಗೆ ಸೇರಿದವನೆಂದು, ನಾನಿರುವ ಬೆಲ್ಜಿಯಂ ವಿಶ್ವವಿದ್ಯಾಲಯದವರು ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದರು. ನನ್ನ ವಿರುದ್ಧ ಪ್ರತಿಯೊಬ್ಬರೂ ವಿಷ ಕಾರುವಂತೆ ಅಂತರ್ಜಾಲದಲ್ಲಿ ಪ್ರಚಾರ ಮಾಡಿದರು. ಅಷ್ಟೆಲ್ಲದರ ಜೊತೆಗೆ ಇಲ್ಲಿನ ಪ.ಜಾ/ಪ.ಪಂ ಆಯೋಗಕ್ಕೆ, ವಿಶ್ವವಿದ್ಯಾಲಯದ ಕುಲಪತಿಗಳಿಗೆ ಹಾಗೂ ಹೈದರಾಬಾದಿನ ರಾಜ್ಯಪಾಲರಿಗೆ ದೂರನ್ನಿತ್ತರು. ಅಶ್ಲೀಲವಾದ ಮಾತುಗಳಿಂದ ವೈಯಕ್ತಿಕವಾಗಿ ನನಗೆ ಬಾಯಿಗೆ ಬಂದಂತೆ ಬೈದರು. ಇಷ್ಟೇ ಅಲ್ಲದೆ ದೈಹಿಕ ಹಲ್ಲೆ ನಡೆಸುವುದಾಗಿ ಎಚ್ಚರಿಕೆಯನ್ನಿತ್ತರು. ಒಂದಷ್ಟು ಕ್ರಿಶ್ಚಿಯನ್ ಅಂಬೇಡ್ಕರ್ ಅನುಯಾಯಿಗಳು (ಇವರಿಗೆ ಎರಡೆರಡು ದೇವರನ್ನು ಪೂಜಿಸುವುದಕ್ಕೆ ಅಭ್ಯಂತರವಿಲ್ಲ!) ಇನ್ನೂ ಮುಂದಕ್ಕೆ ಹೋಗಿ, ನಾನು ಕ್ರೈಸ್ತ ಮತದ ವಿರುದ್ಧ ಏನೇನೋ ಹೇಳಿ ಕೋಮು ಸೌಹಾರ್ದತೆಯನ್ನು ಕೆಡಿಸುತ್ತಿದ್ದೇನೆಂದು ನನ್ನ ವಿರುದ್ಧ ದೂರನ್ನಿತ್ತರು.

ಈ ಎರಡು ಘಟನೆಗಳು ಅಂಬೇಡ್ಕರ್ ವಾದಿಗಳ ಬಗ್ಗೆ ಏನನ್ನು ಸೂಚಿಸುತ್ತವೆ? ಅಂಬೇಡ್ಕರ್ ವಿರುದ್ಧ ಮಾತಾಡುವವರ ಬಗ್ಗೆ ಇವರು ಅಸಹಿಷ್ಣುತೆ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತಿಲ್ಲವೇ? ಇಂತಹ ಅಸಹಿಷ್ಣುತೆಯನ್ನು ಹುಟ್ಟು ಹಾಕಿದ್ದು ಜಗಜೀವನ್ ರಾಮ್ ವಿರುದ್ಧ ಇಂದಿರಾ ಗಾಂಧಿ, ಕೊನೆಗದು ಭಾರತದ ನೀತಿಯಾಗಿಬಿಟ್ಟಿತು. ಇಂದಿರಾಗಾಂಧಿಯವರಿಂದ ಶುರುವಾದ ಈ ಕಾರ್ಯವನ್ನು, ನಂತರ ಬಂದ ಎಲ್ಲಾ ಸರ್ಕಾರಗಳು ಮುಂದುವರೆಸಿ, ಅಂಬೇಡ್ಕರ್ ಅನುಯಾಯಿಗಳನ್ನು ಅಸಹಿಷ್ಣುತೆ ಮತ್ತು ಅಹಂಕಾರದಿಂದ ಕೊಬ್ಬಿಸಿದವು. ಸತ್ಯ, ಅಂಬೇಡ್ಕರ್ ಅವರ ವಿರುದ್ಧ ಏನಾದರೂ / ಯಾರಾದರೂ ಟೀಕಿಸಿದರೆ ಅಸಹಿಷ್ಣುತೆ ಹೆಚ್ಚಾಗುತ್ತಿದೆ.ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷದಿಂದ ಹಿಡಿದು ಎಲ್ಲಾ ಪಕ್ಷಗಳು ತಮ್ಮ ಬಾಗಿಲ ಬಳಿಯಲ್ಲಿಯೇ ಇವನ್ನು ತಡೆಹಿಡಿಯಬೇಕಿದೆ. ಈಗಿನ ಭಾರತದ ಪ್ರಧಾನಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಇವರೆಲ್ಲಾ ಹೆಚ್ಚುತ್ತಿರುವ ಈ ಅಸಹಿಷ್ಣುತೆಯ ಬಗ್ಗೆ ಎಷ್ಟು ಹೆದರಿದ್ದಾರೆ ಎಂದರೆ ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ತಮಗಿರುವ ನಿಷ್ಠೆ ಮತ್ತು ಪ್ರೀತಿಯನ್ನು ಹೊರ ಹಾಕುವ ಯಾವ ಸಂದರ್ಭಗಳನ್ನು ಕೂಡ ಬಿಟ್ಟುಕೊಡಲಾರರು. ಒಬ್ಬನೇ ಒಬ್ಬ ಬುದ್ಧಿಜೀವಿ ಕೂಡಾ ಅಂಬೇಡ್ಕರ್ ವಿರುದ್ಧ ಟೀಕಿಸಲಾರರು ಬಹುಶಃ ಅರುಣ್ ಶೌರಿಯವರನ್ನು ಹೊರತು ಪಡಿಸಿ. ಅಂಬೇಡ್ಕರ್ ವಾದಿಗಳ ಈ ಭಯೋತ್ಪಾದನೆ ಸುಮಾರು ೪ ದಶಕಗಳಿಂದ ನಡೆಯುತ್ತಿದ್ದರೂ, ಆಶ್ಚರ್ಯವಾಗುವುದೇನೆಂದರೆ ಹೆಚ್ಚುತ್ತಿರುವ ಅಸಹಿಷ್ಣುತೆ ಮಾತ್ರ ಈ ಕುರಿತಾಗಿಯಲ್ಲ!

ಹಾಗಿರುವಾಗ, ಕಾಡುವ ಪ್ರಶ್ನೆಗಳು : ಯಾವ ಅಸಹಿಷ್ಣುತೆಯ ಬಗ್ಗೆ ಇವರೆಲ್ಲರೂ ಮಾತಾಡುತ್ತಿರುವುದು? ಇದನ್ನು ಯಾರು, ಯಾಕಾಗಿ ಮಾಡುತ್ತಿದ್ದಾರೆ? ಯಾವ ಬುದ್ಧಿಜೀವಿಯೂ ಕೂಡ ಈಗ ಅಸಹಿಷ್ಣುತೆಯ ಬಗ್ಗೆ ಮಾತನಾಡುವಂತೆ, ಈ ಹಿಂದೆ ಕಾಂಗ್ರೆಸ್ ಪಕ್ಷ ಸಿಖ್ಖರ ಮಾರಣ ಹತ್ಯೆ ಮಾಡಿದಾಗ ಮಾತನಾಡಿಲ್ಲವೇಕೆ? ಕರ್ನಾಟಕದಲ್ಲಿರುವ ಅದೇ ಕಾಂಗ್ರೆಸ್ ಪಕ್ಷ, ಇಲ್ಲಿನ ಕೆಲವು ಯುವ ಜನತೆ / ತಂಡದ ಚಟುವಟಿಕೆಗಳನ್ನು ನಿರ್ಬಂಧಿಸಲು (ಕೇವಲ ಅವರು ಕೆಲವು ಅಂಬೇಡ್ಕರ್ ವಾದಿಗಳನ್ನು ಟೀಕಿಸುವುದರಿಂದ ಹಾಗೂ ಸರ್ಕಾರದ ಕೆಲವು ನೀತಿನಿಯಮಗಳನ್ನು ಪ್ರಶ್ನಿಸುವುದರಿಂದ), ಅವರ ಮೇಲೆ ಕೇಸ್ ಗಳನ್ನು ಹಾಕುತ್ತಿರುವುದೇಕೆ? ಹಾಗಿದ್ದರೆ ಅಸಹಿಷ್ಣುತೆ ಎಂಬುದು ಕೇವಲ ತಮ್ಮ ರಾಜಕೀಯ ವಿರೋಧಿಗಳ ಅಥವಾ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯುವುದಕಷ್ಟೆ ಸೀಮಿತವಾಗಿದೆಯೇ? ಮೋದಿಯವರು ರಾಹುಲ್ ಗಾಂಧಿಯನ್ನು ಆತನ ಅಸಹಿಷ್ಣುತೆಯ ಬಗ್ಗೆ ದಾಳಿ ಮಾಡುವುದು ಅಥವಾ ರಾಜಕಾರಣದಲ್ಲಿ ಮುಂದೆ ಬರಲು ಇಚ್ಛಿಸುವ ರಾಜಕಾರಣಿಯೊಬ್ಬ ಮೋದಿಯವರ ಅಸಹಿಷ್ಣುತೆಯ ಬಗ್ಗೆ ಬೊಬ್ಬೆ ಹೊಡೆಯುವುದು; ಬೇಸರದ ವಿಷಯವೇನೆಂದರೆ ಕೇವಲ ಒಂದಷ್ಟು ಪ್ರತಿಷ್ಟಿತ ಹುದ್ದೆಗಳನ್ನು ಅಲಂಕರಿಸುವುದಕ್ಕಾಗಿ ಜೆ ಎನ್ ಯು ಮತ್ತು ಡಿಯು ನ ಕೆಲವು ಬುದ್ಧಿಜೀವಿಗಳು ಅಸಹಿಷ್ಣುತೆ ಹೆಚ್ಚುತಿದೆ ಎಂದು ಹೇಳುತ್ತಿರುವುದು! ನನಗೆ ಆಶ್ಚರ್ಯವಾಗುವುದೇನೆಂದರೆ, ಯಾವೊಬ್ಬ ಭಾರತದ ಬುದ್ಧಿಜೀವಿಯೂ ಕೂಡ ಹೆಚ್ಚುತ್ತಿರುವ ಅಸಹಿಷ್ಣುತೆ ಎಂದರೇನು? ಎಂಬುದನ್ನೇ ಇಲ್ಲಿಯವರೆಗೂ ವಿಚಾರ ಮಾಡದಿರುವುದು! ಹಾಗಿದ್ದರೆ ಕಳೆದ ಹಲವು ದಶಕಗಳಿಂದ ನಮ್ಮಲ್ಲಿರುವ ಮೀಸಲಾತಿಯ ಪ್ರಭಾವದಿಂದಾಗಿ ದಾಸ್ಯ ಹಾಗೂ ಸ್ವಾರ್ಥ ಮನೋಭಾವದ ಜನರು ಈ ಬುದ್ಧಿಜೀವಿಗಳ ಜಾಗವನ್ನು ತುಂಬಿಬಿಟ್ಟರೇ? ನನ್ನ ಈ ಸಂಶಯವೇ ಅಕಸ್ಮಾತ್ ನಿಜವಾಗಿಬಿಟ್ಟರೆ, ನಮ್ಮ ಭವಿಷ್ಯ ಆತಂಕ ಮೂಡಿಸುವಂತದ್ದು ಎಂದು ಹೇಳಲು ಸಂಕಟವಾಗುತ್ತಿದೆ. ಹಾಗಿಲ್ಲದಿದ್ದಲ್ಲಿ, ನನ್ನ ಈ ಸಂಶಯ ಸುಳ್ಳು ಎಂದು ನಿರೂಪಿಸಬೇಕಾಗುತ್ತದೆ. ಭಾರತದ ಬುದ್ಧಿಜೀವಿಗಳಿಗೆ ನನ್ನದೊಂದು ಛಾಲೆಂಜ್ – ಬಹುಸಂಸ್ಕೃತಿಯ ಬೌದ್ಧಿಕತೆಯ ಮೇಲೆ ಅಂಬೇಡ್ಕರ್ ಅನುಯಾಯಿಗಳಿಂದ ದಾಳಿಯಾಗುವಾಗ ನೀವೆಲ್ಲಿರುವಿರಿ? ರಾಜಕೀಯ ಪ್ರೇರಿತ ವಿಚಾರಗಳನ್ನು ಜನರಿಗೆ ಸ್ಪಷ್ಟವಾಗಿ ಬಿಡಿಸಿ ಹೇಳಲೆಂದೇ ನಿಮ್ಮ ಪೂರ್ವಜರು ಹೋರಾಡಿ ಮಡಿದಿರುವಾಗ, ನೀವು ಬಿಡಿಸಿ ಹೇಳಲು ಸೋಲುತ್ತಿರುವುದಾದರೂ ಏಕೆ? ಕೇವಲ ಒಂದು ಕಪ್ ಮೆಣಸಿನ ಸಾರಿನ ಆಸೆಗೆ, ನಿಮ್ಮ, ನಿಮ್ಮ ಆತ್ಮಗಳನ್ನು ಮಾರಿಕೊಂಡಿರುವಿರೇ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments