ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 22, 2015

29

ವೈಚಾರಿಕತೆ, ನಾಸ್ತಿಕತೆ ಮತ್ತು ಬುದ್ಧಿಜೀವಿಗಳ ದುರಂತ ಕತೆ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ನಕಲಿ ಮೆದುಳು“ನಾವು ವಿಚಾರವಾದಿಗಳಾಗಿ ನಾಸ್ತಿಕರಾಗೋಣ” ಎಂಬ ಮಾತನ್ನು ಒಬ್ಬ ಲೇಖಕ ಇತ್ತೀಚೆಗೆ ಬುದ್ಧಿಜೀವಿಗಳೆ ತುಂಬಿದ್ದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹೇಳಿದರಂತೆ. ಬಹುಶಃ ಅವರು ಪ್ರತಿಯೊಬ್ಬ ವಿಚಾರವಾದಿಯೂ ನಾಸ್ತಿಕನಾಗಿರಲೇಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿರಬಹುದು. ಈ ಮಾತಿನ ಒಳಗಿಳಿಯಲು, ಮೊದಲು, ನಾವು “ವಿಚಾರವಾದ” ಅಂದರೆ ಏನು ಎನ್ನುವುದನ್ನು ನೋಡಬೇಕಾಗಿದೆ.

ವಿಚಾರವಾದಕ್ಕೆ ಕನ್ನಡದಲ್ಲಿರುವ ಅರ್ಥ: ವಿಚಾರ ಮಾಡುವ ಶಕ್ತಿ; ಚಿಂತನೆಯ ಶಕ್ತಿ ಎಂದು. ಇನ್ನೂ ಮುಂದುವರಿದು ತಾತ್ವಿಕ ದೃಷ್ಟಿ ಎಂದೂ ಹೇಳಬಹುದು. ಇಂಗ್ಲೀಷಿನಲ್ಲಿ Intellectual attitude, Ideological stance ಎಂದೆಲ್ಲ ಹೇಳುತ್ತಾರೆ. ಅಂದರೆ ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ, ಅದರ ಅಂತರಾರ್ಥವನ್ನು ಅರಿತು ಅದರಂತೆ ನಡೆಯುವವರು ವೈಚಾರಿಕತೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ವಿಚಾರವಾದ ಅಥವಾ ವೈಚಾರಿಕತೆ ಎಂಬುದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಬಳಕೆಯಾಗುವ “Intellectualism” ಎಂಬುದಕ್ಕೆ ಇರುವ ಅರ್ಥ: The exercise of the intellect at the expense of the emotions. ಅಂದರೆ, ಒಂದು ವಿಷಯವನ್ನು ಸರಿಯಾಗಿ ಗ್ರಹಿಸಲು ಹೋಗುವಾಗ ಅದಕ್ಕೆ ಸುತ್ತಿಕೊಂಡಿರುವ ಭಾವನಾತ್ಮಕ ಅಂಶಗಳನ್ನೆಲ್ಲ ಬದಿಗಿಟ್ಟು ಸತ್ಯವನ್ನಷ್ಟೇ ಎತ್ತಿ ಹಿಡಿಯುವುದು ಎಂದು ಅರ್ಥ. ಮಗ ಕಳ್ಳತನ ಮಾಡಿದ್ದಾನೆ. ಅದು ತಾಯಿಗೂ ಗೊತ್ತಿದೆ. ಆತನನ್ನು ಸೆರೆಮನೆಗೆ ಹಾಕಿದರೆ ತಾಯಿ ಅನಾಥೆಯಾಗುತ್ತಾಳೆ; ಆದರೆ ಆತನನ್ನು ಶಿಕ್ಷಿಸದೆ ಬಿಟ್ಟರೆ ದೇಶದ ಕಾನೂನಿಗೆ ಅಪಚಾರ. ಅಲ್ಲದೆ ಇದೇ ಉದಾಹರಣೆಯನ್ನು ನೋಡಿ ನೂರಾರು ಜನ ಕಳ್ಳತನಕ್ಕೆ ಇಳಿಯಬಹುದು. ಹಾಗಾಗಿ, ತಾಯಿಯ ಕಣ್ಣೀರನ್ನು ಕಷ್ಟಪಟ್ಟು ಅಲಕ್ಷಿಸಿ ಮಗನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಕಾನೂನನ್ನು ಎತ್ತಿಹಿಡಿಯುವುದು ಇಂಟಲೆಕ್ಚುಲಿಸಮ್ ಅಥವಾ ವೈಚಾರಿಕತೆಯ ಒಂದು ಮುಖ.

ವೈಚಾರಿಕತೆ – ಈಗೇನೋ ಬಹಳ ಪರಿಚಿತವಾದ ಭಾರತೀಯ ಶಬ್ದ ಅನ್ನಿಸಿದರೂ ಅದರ ಉಗಮವಾದದ್ದು ಭಾರತದಲ್ಲಲ್ಲ. ಇದು ಮಧ್ಯ ಯುರೋಪಿನಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಹುಟ್ಟಿದ ಪದ ಮತ್ತು ಪರಿಕಲ್ಪನೆ. ಇದರ ಹುಟ್ಟಿನ ಹಿನ್ನೆಲೆ ತಿಳಿಯಲು ನಾವು ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ. ಕ್ರಿಸ್ತ ಹುಟ್ಟಿ ಒಂದೂವರೆ ಸಾವಿರ ವರ್ಷಗಳಾದರೂ ಯುರೋಪಿಯನ್ನರು ಬೈಬಲ್ಲಿನ ಭಾಗಗಳನ್ನು ಪ್ರಶ್ನೆ ಮಾಡಲು ಹೋಗಿರಲಿಲ್ಲ. ಚರ್ಚು ಅತ್ಯಂತ ಪ್ರಬಲವಾಗಿದ್ದ ವ್ಯವಸ್ಥೆ. ಅದನ್ನು ಎದುರುಹಾಕಿಕೊಳ್ಳುವವರಿಗೆ ಸಿಗುತ್ತಿದ್ದ ಪ್ರತಿಫಲ ಮರಣ. ಬೈಬಲ್ಲಿನ ವಿರುದ್ಧ ಮಾತಾಡಿದವರನ್ನು ಒಂದೋ ಜೀವಮಾನವೆಲ್ಲ ಸೆರೆಯಲ್ಲಿ ಹಾಕಿ ಭೀಕರ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು ಇಲ್ಲವೇ ಹಲವು ಹತ್ಯಾರಗಳ ಮೂಲಕ ದೇಹವನ್ನು ಹಾಯಿಸಿ ಕೊಲ್ಲಲಾಗುತ್ತಿತ್ತು. ಪ್ರಭುತ್ವ ಯಾವತ್ತೂ ತನ್ನ ವಿರುದ್ಧ ಮಾತಾಡುವವನನ್ನು ಬದುಕಗೊಡುವುದಿಲ್ಲ ಅಥವಾ ಆತನನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೊನೆಗೆ ತಾನಾಗಿ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗುವಂತೆ ಮಾಡುತ್ತದೆ. ಗ್ರೀಸ್, ರೋಮ್ ನಾಗರಿಕತೆಗಳಲ್ಲಿ ಆ ಕಾಲದಲ್ಲಿ ರಾಜರಾಗಿದ್ದವರು, ಜೊತೆಗೆ ಅವರ ಆಸ್ಥಾನ ಪಂಡಿತರಾಗಿದ್ದವರು ಜನ ನಂಬಬೇಕಾದ ಮಾತುಗಳನ್ನು ಹೇಳುತ್ತಿದ್ದರು, ಬರೆದಿಡುತ್ತಿದ್ದರು. ಅವುಗಳು ಸರಿಯಿಲ್ಲ; ಸುಳ್ಳಿನ ಕಂತೆ ಎಂದವರನ್ನು ಅಲಕ್ಷಿಸಿ ದೂರಕ್ಕೆಸೆಯುತ್ತಿದ್ದರು. ಹಾಗಾಗಿ ಸೂರ್ಯ ಭೂಮಿಗೆ ಸುತ್ತು ಬರುತ್ತಾನೆ ಎಂದು ಹೇಳಿದ ಟಾಲೆಮಿ, ಅರಿಸ್ಟಾಟಲ್ ಮೊದಲಾದವರ ತಪ್ಪು ಚಿಂತನೆಗಳು ನೂರಾರು ವರ್ಷಗಳ ಕಾಲ ನಿಂತವು. ಟಾಲೆಮಿ ರಾಜನಾಗಿದ್ದ, ಅರಿಸ್ಟಾಟಲ್ ಅಸ್ಥಾನ ಪಂಡಿತನಾಗಿದ್ದ ಎನ್ನುವುದೇ ಇದಕ್ಕೆ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಅವರ ಕಾಲದಲ್ಲಿ ಹೇಳಿದ ಅರಿಸ್ಟಾರ್ಕಸ್‍ನ ದನಿ ಪ್ರಭುತ್ವದ ಧ್ವನಿವರ್ಧಕದ ಕೆಳಗೆ ಉಡುಗಿಯೇ ಹೋಯಿತು.

ಗ್ರೀಸ್ ನಾಗರಿಕತೆಯಲ್ಲಿ ಪ್ರಭುತ್ವಕ್ಕಿದ್ದ ಶಕ್ತಿ ಮತ್ತು ನಿಯಂತ್ರಣ ಮುಂದೆ ಯುರೋಪಿನಲ್ಲಿ ಚರ್ಚ್ ವ್ಯವಸ್ಥೆಗೆ ಸಿಕ್ಕಿತು. ಪ್ರಜೆಗಳನ್ನು ಧಾರ್ಮಿಕ ಕುಣಿಕೆ ಹಾಕಿ ಹಿಡಿದಿಟ್ಟುಕೊಂಡ ಚರ್ಚ್‍ನ ಪ್ರಾಬಲ್ಯಕ್ಕೆ ದೊರೆ ಕೂಡ ಹೆದರುತ್ತಿದ್ದ. ಹಾಗಾಗಿ ಪ್ರೀಸ್ಟ್‍ಗಳು ರಾಜರನ್ನೂ ತಮ್ಮ ಕಾಲಡಿ ಬೀಳುವಂತೆ ಮಾಡುತ್ತಿದ್ದರು. ಬೈಬಲ್ ರಾಜಗ್ರಂಥವಾಯಿತು. ರಾಜರ ನ್ಯಾಯ ತೀರ್ಮಾನ ಬೈಬಲ್ ಅನುಸಾರ ನಡೆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಆ ಕಾಲದ ವಿಜ್ಞಾನವನ್ನು ಕೂಡ ಬೈಬಲ್, ತನ್ಮೂಲಕ ಚರ್ಚಿನ ಮುಖ್ಯಸ್ಥರು, ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ನೀವು ನಂಬುತ್ತೀರೋ ಇಲ್ಲವೋ, ಹದಿನೆಂಟನೇ ಶತಮಾನದ ಅಂತ್ಯದವರೆಗೂ ಯುರೋಪಿನ ಯಾವ ವಿಶ್ವವಿದ್ಯಾಲಯದಲ್ಲೂ ಸೂರ್ಯ ಸಿದ್ಧಾಂತವನ್ನು ಬೋಧಿಸುತ್ತಿರಲಿಲ್ಲ. ಜೀವವಿಕಾಸದ ಪಾಠಗಳಿರಲಿಲ್ಲ. ಹುಟ್ಟಿ ಮುನ್ನೂರು ವರ್ಷಗಳು ಕಳೆದರೂ ಕೇಂಬ್ರಿಡ್ಜ್, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನದ ಪ್ರಾಯೋಗಿಕ ತರಗತಿಗಳಿರಲಿಲ್ಲ. ಬೈಬಲ್ ಮತ್ತು ಚರ್ಚ್ ವ್ಯವಸ್ಥೆಯನ್ನು ಪ್ರಶ್ನಿಸುವುದೇ ಒಂದು ಕ್ರಾಂತಿ ಎಂಬ ಸನ್ನಿವೇಶ ಇತ್ತು. ಗೆಲಿಲಿಯೋನನ್ನು ಆತ ಬೈಬಲ್‍ಗೆ ವಿರುದ್ಧವಾದ ಹೇಳಿಕೆಗಳನ್ನು ಕೊಟ್ಟ ಎಂದು ಶೋಷಿಸಲಾಯಿತು. ಆ ಹಣ್ಣುಮುದುಕ ವಿಜ್ಞಾನಿ ಚರ್ಚಿನ ವಿಚಾರಣೆಗಳಿಗಾಗಿ ಓಡಾಡಿ ಹೈರಾಣಾಗಿ ತಪ್ಪೊಪ್ಪಿಗೆ ಹೇಳಿಕೆಗಳನ್ನು ಕೊಡಬೇಕಾಯಿತು. ಹಾಗೆ ತನ್ನ ಸಂಶೋಧನೆಯ ಸತ್ಯಗಳಿಗೆ ವಿರುದ್ಧವಾದ ಮಾತುಗಳನ್ನು ಒಪ್ಪಿಕೊಂಡು ಹೊರಬಂದ ಗೆಲಿಲಿಯೋ “ನಾನು ಹೇಳಿದ ಮಾತ್ರಕ್ಕೆ ಭೂಮಿಯ ಸುತ್ತ ಸೂರ್ಯ ತಿರುಗುತ್ತಾನೆಯೇ!” ಎಂದು ಹೇಳಿ ಚರ್ಚನ್ನು ಗುಟ್ಟಾಗಿ ಕಿಚಾಯಿಸಿದ್ದ. ಸೂರ್ಯ ಸಿದ್ಧಾಂತದ ಮತ್ತೊಬ್ಬ ಪ್ರಬಲ ಪ್ರತಿಪಾದಕನೂ ಚರ್ಚಿನ ಆಡಳಿತ ಮಂಡಳಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವನೂ ಆಗಿದ್ದ ನಿಕೋಲಾಸ್ ಕೋಪರ್ನಿಕಸ್ ತನ್ನ ಸಂಶೋಧನೆಯನ್ನು ಐವತ್ತು ವರ್ಷಗಳ ಕಾಲ ಪ್ರಕಟಿಸದೆ ಗುಪ್ತವಾಗಿಡಬೇಕಾಯಿತು ಎಂದರೆ ನಮಗೆ ಆ ಕಾಲದ ಪರಿಸ್ಥಿತಿ ಅರ್ಥವಾದೀತು. ಕೋಪರ್ನಿಕಸ್‍ನ ಪುಸ್ತಕ ಆತನಿನ್ನೇನು ಕೊನೆಕ್ಷಣಗಳನ್ನು ಎಣಿಸುತ್ತಿದ್ದಾನೆ ಎಂಬಂತಿದ್ದಾಗ ಪ್ರಕಟವಾಯಿತು. ಅದರಲ್ಲಿ ಪ್ರಕಾಶಕ “ಇದು ಕೇವಲ ಕಲ್ಪನಾವಿಲಾಸದ ಬೊಂತೆ. ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಬಾರದು” ಎಂದು ಟಿಪ್ಪಣಿ ಬರೆದಿದ್ದ. ಲೇಖಕನೇನೋ ಹೋದ, ತನಗಿನ್ನೂ ಒಂದಷ್ಟು ವರ್ಷ ಬದುಕಬೇಕಿದೆಯಲ್ಲ ಅಂದುಕೊಂಡಿರಬೇಕು ಆತ!

ಒಟ್ಟಲ್ಲಿ ಹದಿನಾರನೇ ಶತಮಾನದಲ್ಲಿ ಹುಟ್ಟಿದ ತಾರ್ಕಿಕ ಭಿನ್ನಾಭಿಪ್ರಾಯ 19ನೇ ಶತಮಾನದ ಮಧ್ಯಭಾಗದವರೆಗೂ ಮುಂದುವರಿದವು. ಚರ್ಚು ಇಂಥ ವಿಜ್ಞಾನಿಗಳು ಬರೆಯುತ್ತಿದ್ದ ಎಲ್ಲಾ ಪುಸ್ತಕಗಳನ್ನೂ “ನಿಷೇಧಿತ ಕೃತಿಗಳ ಪಟ್ಟಿ”ಗೆ ಸೇರಿಸುತ್ತಿತ್ತು. ನಿಷೇಧಿತ ಪುಸ್ತಕಗಳನ್ನು ಪ್ರಕಟಿಸುವಂತಿರಲಿಲ್ಲ. ಹಸ್ತಪ್ರತಿಯಾಗಲೀ ಮುದ್ರಿತ ಪ್ರತಿಯನ್ನಾಗಲೀ ಯಾರೂ ತಮ್ಮ ಬಳಿ ಇಟ್ಟುಕೊಳ್ಳುವಂತಿರಲಿಲ್ಲ. ಅವುಗಳಲ್ಲಿರುವ ವಿಚಾರವನ್ನು ಪ್ರಚಾರಪಡಿಸುವಂತಿರಲಿಲ್ಲ. ಹಾಗೆ ಮಾಡುವವರನ್ನು ಕಾನೂನು ನಿಂದನೆ ಆರೋಪದಲ್ಲಿ ಸೆರೆಮನೆಗೆ ಅಟ್ಟಲಾಗುತ್ತಿತ್ತು. 1835ರವರೆಗೂ ಸೂರ್ಯ ಸಿದ್ಧಾಂತದ ಬಗ್ಗೆ ಬರೆಯಲ್ಪಟ್ಟ ಎಲ್ಲಾ ಪುಸ್ತಕಗಳೂ ಈ “ನಿಷೇಧಿತ” ಪಟ್ಟಿಯಲ್ಲಿದ್ದವು. ಹತ್ತೊಂಬತ್ತನೆ ಶತಮಾನದ ಮಧ್ಯಭಾಗಕ್ಕೆ ಬರುವ ಹೊತ್ತಿಗೆ ಚರ್ಚಿನ ಪ್ರಭಾವ ತುಸು ಕಮ್ಮಿಯಾಯಿತು. ಅದರ ಎಲ್ಲ ಅಡೆತಡೆಗಳನ್ನೂ ಮೀರಿ ವಿಜ್ಞಾನದ ಸತ್ಯಗಳನ್ನು ವಿದ್ವಾಂಸರು ಹೇಳತೊಡಗಿದ್ದರು. ಭೂಮಿ ಹುಟ್ಟಿದ್ದು ಮೂರು ಸಾವಿರ ವರ್ಷಗಳ ಹಿಂದೆ ಅಲ್ಲ; ಅದಕ್ಕೆ ಹಲವು ಲಕ್ಷ ವರ್ಷಗಳ ಇತಿಹಾಸ ಇದೆ ಎಂದು ಭೌತವಿಜ್ಞಾನಿಗಳು ಹೇಳಿದರು. ಮನುಷ್ಯ ದೇವರ ಕೈಯಿಂದ ಕೆಳಬಿದ್ದ ಪ್ರಸಾದವಲ್ಲ; ಅವನು ಮಂಗನಂಥ ಪ್ರಾಣಿಗಳ ಸಾಲಿನಲ್ಲಿದ್ದ ಯಾವುದೋ ಪೂರ್ವಜನಿಂದ ವಿಕಾಸವಾದ ಜೀವಿ ಎಂದು ಡಾರ್ವಿನ್, ವಾಲೇಸ್ ಹೇಳಿದರು. ಭೂಮಿಯೇ ವಿಶ್ವದ ಕೇಂದ್ರ ಎಂಬ ಭ್ರಮೆ ಕಳಚಿತು. ಚಂದ್ರನೂ ನಕ್ಷತ್ರಗಳೂ ಒಂದೇ ಬೋಗುಣಿಗೆ ಅಂಟಿಕೂತ ಚಿತ್ರಗಳಲ್ಲ ಎನ್ನುವುದು ತಿಳಿಯಿತು. ಸೂರ್ಯ ಮತ್ತು ಚಂದ್ರ ಇಬ್ಬರೂ ಭೂಮಿಗೆ ಸಮಾನ ದೂರದಲ್ಲಿದ್ದಾರೆ ಎಂದು ನಂಬಿದ್ದವರನ್ನು ಹೊಸಬರು ಗೇಲಿ ಮಾಡಿದರು. ಹೋಲಿಬುಕ್ ಅನ್ನು ಪ್ರಶ್ನಿಸಬಾರದು ಎಂಬ ಅಂಜಿಕೆ ಕಳಚಿಬಿದ್ದು, ಅದನ್ನೂ ಪ್ರಶ್ನಿಸಿ ಸತ್ಯಗಳನ್ನು ಮಾತ್ರ ಒಪ್ಪಬೇಕು ಎಂಬ ಪ್ರಜ್ಞೆ ಜಾಗೃತವಾಯಿತು. ಹೀಗೆ ಹಳೆಯ ಕಂದಾಚಾರಗಳನ್ನು ಪ್ರಶ್ನಿಸಿದವರು ಉಳಿದವರಿಗಿಂತ ಹೆಚ್ಚು ಪ್ರಾಜ್ಞರು, ಬುದ್ಧಿವಂತರು ಎಂದು ಜನ ಭಾವಿಸತೊಡಗಿದರು. ಅವರಿಗೆ “ಇಂಟಲೆಕ್ಚುವಲ್ಸ್” ಎಂಬ ಬಿರುದು ಬಿತ್ತು.

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ವೈಚಾರಿಕತೆಯ ಉತ್ತುಂಗದ ಕಾಲ. ಯುರೋಪಿನಲ್ಲಿ ಹಲವು ಸಂಶೋಧಕರು ಹುಟ್ಟಿದ್ದು ಈ ಕಾಲದಲ್ಲಿ. ಬೈಬಲ್ ಅಥವಾ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳನ್ನು ಪ್ರಶ್ನಿಸುವ ಮನೋಭಾವ ಜಾಗೃತವಾಗಿ ಅದು ವಿಜ್ಞಾನಕ್ಕೆ ವರದಾನವಾಯಿತು. “ನಾನು ಯೋಚಿಸುತ್ತೇನೆ, ಹಾಗಾಗಿ ನನ್ನ ಅಸ್ತಿತ್ವಕ್ಕೆ ಅರ್ಥ ಇದೆ” ಎಂದು ಹೇಳಿದ ರೀನೆ ದೆಕಾರ್ತೆ ಫ್ರಾನ್ಸಿನಲ್ಲಿ ವೈಚಾರಿಕ ಕ್ರಾಂತಿಯನ್ನು ಹದಿನೇಳನೇ ಶತಮಾನದ ಆರಂಭದಲ್ಲೇ ಬಿತ್ತಿದ. ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ಮುಂತಾದ ಯುರೋಪಿಯನ್ ದೇಶಗಳಲ್ಲಿ ವೈಚಾರಿಕತೆ ಎಂದರೆ ಚರ್ಚನ್ನು ವಿರೋಧಿಸಿ ಮುನ್ನಡೆಯುವುದು ಎಂಬ ಅರ್ಥವೇ ಇತ್ತು. ಚರ್ಚು ಇಂಥವರನ್ನು ದಮನ ಮಾಡಲು ನೋಡಿದಂತೆಲ್ಲ ಇವರು ಹೀರೋಗಳಾದರು. ಬಂಡಾಯಗಾರರಾದರು. ಕ್ರಾಂತಿಗಳನ್ನು ಮಾಡಿದರು. ಒಟ್ಟಾರೆಯಾಗಿ, ತಾವು ಮನುಷ್ಯರು, ಯೋಚಿಸುವ ಪ್ರಾಣಿಗಳು, ಹಾಗಾಗಿ ತಮ್ಮ ಯೋಚನೆಗಳನ್ನು ಚರ್ಚಾಗಲೀ ರಾಜ ವ್ಯವಸ್ಥೆಯಾಗಲೀ ತಡೆಹಿಡಿಯುವುದು ತಪ್ಪು ಎಂಬ ಅಭಿಪ್ರಾಯ ಜನರಲ್ಲಿ ತೀವ್ರಗೊಂಡಿತು. ಯುರೋಪಿನಲ್ಲಿ ನಡೆದ ರಾಜಕೀಯ ದಂಗೆಗಳಲ್ಲಿ ನಾವು ಹೆಚ್ಚು ವಿಚಾರವಾದಿಗಳನ್ನು ನೋಡುವುದು ಇದೇ ಕಾರಣಕ್ಕೆ. ನ್ಯೂಟನ್ ಬರೆದ ಪುಸ್ತಕವನ್ನು ಆಧರಿಸಿ ಲಾಪ್ಲಾಸ್ ಎಂಬ ವಿಜ್ಞಾನಿ-ಗಣಿತಜ್ಞ “ವಿಶ್ವವು ಹೇಗೆ ನಡೆಯುತ್ತಿದೆ?” ಎಂಬ ಹೆಸರಿನ ಪುಸ್ತಕ ಬರೆದ. ಆತನ ಪುಸ್ತಕವನ್ನು ಆದ್ಯಂತ ಓದಿದ ನೆಪೋಲಿಯನ್ ಬೋನಪಾರ್ಟೆ “ವಿಷಯವೆಲ್ಲ ಸರಿ; ಆದರೆ ನ್ಯೂಟನ್ ತನ್ನ ಪುಸ್ತಕದಲ್ಲಿ ದೇವರ ಪ್ರಸ್ತಾಪ ಮಾಡಿದ್ದಾನೆ. ವಿಶ್ವವು ದೇವರ ದಯೆಯಿಂದ ನಡೆಯುತ್ತಿದೆ ಎಂದಿದ್ದಾನೆ. ನಿನ್ನ ಪುಸ್ತಕದಲ್ಲಿ ದೇವರ ಉಲ್ಲೇಖ ಒಂದೇ ಒಂದು ಬಾರಿಯೂ ಬಂದಿಲ್ಲವಲ್ಲ?” ಎಂದು ಕೇಳಿದ. ಉತ್ತರವಾಗಿ ಲಾಪ್ಲಾಸ್ “ನನಗೆ ಆ (ದೇವರೆಂಬ) ನಂಬಿಕೆಯ ಅಗತ್ಯವಿಲ್ಲ” ಎಂದುಬಿಟ್ಟ. ಈ ಮಾತುಕತೆ ನಡೆದದ್ದು 1802ರಲ್ಲಿ. ಅಂದರೆ ಅಲ್ಲಿಯವರೆಗೂ ಫ್ರಾನ್ಸಿನಂಥ ಮುಂದುವರೆದ ದೇಶದ ರಾಜನೂ ವಿಶ್ವವನ್ನು ದೇವರು ಎತ್ತಿ ಹಿಡಿದಿದ್ದಾನೆ ಎಂದು ನಂಬಿದ್ದ ಮತ್ತು ರಾಜರ ಅಂಥ ನಂಬಿಕೆಯನ್ನು ತಿರಸ್ಕರಿಸುವುದು ವಿಜ್ಞಾನಿಗಳ ಕೆಲಸವಾಗಿತ್ತು. ದೇವರನ್ನು – ಆ ಮೂಲಕ, ಹೋಲಿಬುಕ್ ಹೇಳಿದ್ದ ಎಲ್ಲ ಸಂಗತಿಗಳನ್ನು ಧಿಕ್ಕರಿಸಿ ತಾನು ವಿಜ್ಞಾನದ  ಸತ್ಯಗಳನ್ನು ಹೇಳುತ್ತಿದ್ದೇನೆ ಎಂಬ ಧಿಮಾಕು (ಅಹಂಕಾರ ಅಲ್ಲ, ಆಡೇಸಿಟಿ) ಆ ಕಾಲದ ವಿಚಾರವಾದಿಯಲ್ಲಿತ್ತು.

ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪಿನಿಂದ ಪ್ರಪಂಚದ ಹಲವು ಭಾಗಗಳಿಗೆ ಹೋದ ಬಿಳಿಯರಲ್ಲಿ ವಿಚಾರವಾದಿಗಳೂ ಇದ್ದರು. ಭಾರತಕ್ಕೆ ಬಂದ ಈ ಪಡೆ ಮೊದಲು ಮಾಡಿದ ಕೆಲಸವೇನೆಂದರೆ ತಾವು ಕಲಿತ ಜ್ಞಾನದ ಬೆಳಕಲ್ಲಿ ಇಲ್ಲಿನ ಗ್ರಂಥಗಳನ್ನು ವಿಶ್ಲೇಷಿಸತೊಡಗಿದ್ದು. ಉದಾಹರಣೆಗೆ, ನ್ಯಾಯಶಾಸ್ತ್ರ, ತರ್ಕಶಾಸ್ತ್ರಗಳನ್ನು ಕಲಿತು ವಿದ್ವಾಂಸನಾಗಿ 1783ರಲ್ಲಿ ಭಾರತಕ್ಕೆ ಬಂದಿಳಿದ ವಿಲಿಯಂ ಜೋನ್ಸ್, ಭಾರತದಲ್ಲಿ ನ್ಯಾಯವ್ಯವಸ್ಥೆ ಹೇಗಿದೆ ಎಂಬುದರ ಅಧ್ಯಯನದಲ್ಲಿ ತೊಡಗಿದ. ಇಂಗ್ಲೆಂಡಿನಲ್ಲಾದರೆ ದೇಶಕ್ಕೇ ಅನ್ವಯಿಸುವ ಒಂದು ಕಾನೂನಿದೆ. ಅದನ್ನು ಮುರಿದವನು ಅತ್ತ ಎಡಿನ್‍ಬರ್ಗ್‍ನಲ್ಲಿರಲಿ ಇತ್ತ ಲಂಡನ್ನಿನಲ್ಲಿರಲಿ ಒಂದೇ ಬಗೆಯ ಶಿಕ್ಷೆಗೆ ಗುರಿಯಾಗುತ್ತಾನೆ. ಅಂಥ ಏಕರೂಪಿ ನ್ಯಾಯವ್ಯವಸ್ಥೆ ಭಾರತದಲ್ಲಿ ಇದೆಯೇ ಎನ್ನುವುದನ್ನು ಹುಡುಕುವ ಕೆಲಸಕ್ಕೆ ಜೋನ್ಸ್ ಇಳಿದ. ಆಗ ಆತನಿಗೆ ಇಲ್ಲಿನ ಪಂಡಿತರು, “ಹಾಗೆ ಇಲ್ಲಿ ನ್ಯಾಯಕ್ಕೆ ಒಂದೇ ಪುಸ್ತಕವನ್ನು ಬಳಸುವ ಕ್ರಮ ಇಲ್ಲ. ಒಂದೊಂದು ರಾಜ್ಯಕ್ಕೂ ಅಲ್ಲಿನದ್ದೇ ಆದ ವ್ಯವಸ್ಥೆ ಇದೆ. ಸ್ಥಳೀಯ ಪಂಚಾಯಿತಿಗಳಿವೆ; ಊರ ಮುಖಂಡನಿದ್ದಾನೆ. ಇವರೆಲ್ಲ ತಮ್ಮ ಪ್ರಾಂತ್ಯಗಳಲ್ಲಿ ಆಗಬೇಕಾದ ನ್ಯಾಯತೀರ್ಮಾನವನ್ನು ಮಾಡಿಮುಗಿಸುತ್ತಾರೆ. ಹಿಂದೆಯೂ ಹಾಗೆಯೇ; ಎಲ್ಲೋ ಅಪರೂಪದ ಪ್ರಕರಣಗಳು ಮಾತ್ರ ರಾಜನವರೆಗೆ ಹೋಗುತ್ತಿದ್ದವು. ಆತ ಎಲ್ಲವನ್ನೂ ಕೂಲಂಕಷವಾಗಿ ವಿಶ್ಲೇಷಿಸಿ ಆ ಸಮಯ-ಸಂದರ್ಭಕ್ಕೆ ತಕ್ಕ ಹಾಗೆ ನ್ಯಾಯವನ್ನು ಕೊಡುತ್ತಿದ್ದ. ತನಗೆ ಗೊಂದಲಗಳೆದ್ದರೆ ತನ್ನ ರಾಜಸಭೆಯಲ್ಲಿ ಕೂತ ಪಂಡಿತರನ್ನು ಕೇಳುತ್ತಿದ್ದ. ಮಂತ್ರಿಯೊಡನೆ ಸಮಾಲೋಚಿಸುತ್ತಿದ್ದ. ಯಾವ ಸಮಸ್ಯೆಯನ್ನೂ ವರ್ಷಾನುಗಟ್ಟಲೆ ಎಳೆಯುವ ಪ್ರಮೇಯವೇ ಇರಲಿಲ್ಲ” ಎಂದರು. ಜೊತೆಗೆ, “ಅಂಥದೊಂದು ನ್ಯಾಯಗ್ರಂಥವನ್ನು ಹುಡುಕಲೇಬೇಕೆಂದರೆ ಸದ್ಯಕ್ಕೆ ಮನುಸ್ಮೃತಿಯನ್ನು ಪರಿಗಣಿಸಬಹುದು” ಎಂದರು. ಅದೇ ಸಮಯದಲ್ಲಿ ಜೋನ್ಸ್ ಮೇಲೆ ಇನ್ನೊಂದು ಹೊಣೆಗಾರಿಕೆಯೂ ಬಿದ್ದಿತ್ತು. ಬ್ರಿಟಿಷ್ ಸರಕಾರದ ಆಜ್ಞೆಯಂತೆ, ಇಡೀ ಭಾರತಕ್ಕೆ ಸಲ್ಲುವಂಥ ಒಂದು ಏಕರೂಪಿ ನ್ಯಾಯಪುಸ್ತಕವನ್ನು ಅವನು ಬರೆಯಬೇಕಾಗಿತ್ತು. ಆಗ ಆತ ಮನುಸ್ಮೃತಿಯನ್ನು ಸಂಗ್ರಹಿಸಿ ಇಂಗ್ಲೀಷಿಗೆ ಅನುವಾದಿಸಿ, ಇದು ಹಿಂದೂಗಳಿಗೆ ಅನ್ವಯವಾಗುವ ನ್ಯಾಯಪುಸ್ತಕ ಎಂದ. ಅವನ ನಂತರ ಭಾರತಕ್ಕೆ ಬಂದವರಿಗೆ ಈ ಪುಸ್ತಕವೊಂದೇ ಕಂಡದ್ದಕ್ಕೆ ಕಾರಣವೇನೆಂದರೆ, ಅವರು ಸಂಸ್ಕøತ ಕಲಿತಿರಲಿಲ್ಲ. ಜೊತೆಗೆ, ಭಾರತದ ನ್ಯಾಯವ್ಯವಸ್ಥೆ ಬೇರೆ ರೀತಿಯಲ್ಲಿ ನಡೆಯುತ್ತದೆ ಎನ್ನುವುದೂ ಗೊತ್ತಿರಲಿಲ್ಲ. ಯುರೋಪಿನಲ್ಲಿ ದೇಶದ ನ್ಯಾಯವ್ಯವಸ್ಥೆಯನ್ನು ಬರೆದವರು ಬೈಬಲ್‍ಅನ್ನು ಬಲಗೈಯಲ್ಲಿ ಹಿಡಿದಿದ್ದ ಪಾದರಿಗಳಾದ್ದರಿಂದ, ಇಲ್ಲೂ ನ್ಯಾಯಕ್ಕೂ ಧರ್ಮಕ್ಕೂ ಸಂಬಂಧವಿದೆ ಎಂದು ವಿಚಾರವಾದಿಗಳು ಭಾವಿಸಿದರು. ಧರ್ಮಕ್ಕೆ ಸಂಬಂಧಿಸಿದ ಎಲ್ಲವನ್ನೂ ವಿರೋಧಿಸುವುದು ವಿಚಾರವಾದಿಯ ಕರ್ತವ್ಯವಾದ್ದರಿಂದ ಮನುಸ್ಮೃತಿಯನ್ನು ವಿರೋಧಿಸುವುದು ಭಾರತಕ್ಕೆ ಬಂದ ಬಿಳಿಯ ಪಂಡಿತರ ಅಜೆಂಡಾದಲ್ಲಿ ಸೇರಿತು.

ಮುಂದೆ ಈ ವಿಚಾರವಾದಿಗಳು ಬೈಬಲ್‍ನಂತಹ ಹೋಲಿಬುಕ್ ಇಲ್ಲಿ ಯಾವುದು ಎನ್ನುವುದನ್ನು ಹುಡುಕತೊಡಗಿದರು. ಹೋಲಿಬುಕ್ ಎಂದ ಮೇಲೆ ಅಲ್ಲಿ ಪ್ರವಾದಿಯ ಕತೆ ಇರಬೇಕು. ಪ್ರವಾದಿ ತೋರಿಸಿದ ಪವಾಡಗಳ ವಿವರಗಳಿರಬೇಕು. ಮತ್ತು ಆತನ ಮೂಲಕ ದೇವರು ಜನರಿಗೆ ವಿಧಿಸಿದ ಕಟ್ಟಳೆಗಳ ಪಟ್ಟಿ ಇರಬೇಕು. ಇಂಥ ಸಂಗತಿಗಳು ಯಾವುದರಲ್ಲಿ ಸಿಗುತ್ತವೆ ಎಂದು ಹುಡುಕಿದಾಗ ಅವರಿಗೆ ಸಿಕ್ಕಿದ್ದು ರಾಮಾಯಣ, ಮಹಾಭಾರತಗಳು! ಎರಡರಲ್ಲೂ ಅವತಾರಗಳ ಕತೆ ಇದೆ. ಒಂದೇ ದೇವರು ಹಲವು ರೂಪಗಳನ್ನೆತ್ತಿ ಭೂಮಿಗೆ ಬಂದ ಕತೆಯನ್ನು ಇವು ಹೇಳುತ್ತವೆ. ಆದರೆ ಇಲ್ಲಿ ದೇವರ ಸಂದೇಶವನ್ನು ಜನರಿಗೆ ಹೇಳುವ ಪ್ರವಾದಿ ಇಲ್ಲ. ಎರಡು ಕಾವ್ಯಗಳಲ್ಲೂ ದೇವರು ಜನರಿಗೆ ಕಟ್ಟಳೆಗಳನ್ನು ವಿಧಿಸುವುದಿಲ್ಲ. ಮೋಸೆಸ್‍ನಿಗೆ ಬೆಟ್ಟದ ಮೇಲೆ ಕೂತ ದೇವರು ಹತ್ತು ಕಟ್ಟಳೆಗಳನ್ನು ಬೋಧಿಸಿ, ಇವೆಲ್ಲವನ್ನೂ ನಿನ್ನ ಜನರು ಅನುಸರಿಸಲೇ ಬೇಕು ಎಂದನಲ್ಲ? ಅಂಥ ವಿವರಗಳು ರಾಮಾಯಣ ಮಹಾಭಾರತ ಎರಡರಲ್ಲೂ ಕಾಣುವುದಿಲ್ಲ. ಅಲ್ಲದೆ ಹೋಲಿಬುಕ್ ಅನ್ನು ಬದಲಾಯಿಸಬಾರದು; ಒಂದೇ ಒಂದು ಶಬ್ದವನ್ನೂ ಕಳಚಬಾರದು ಜೊತೆಗೆ ಸೇರಿಸಬಾರದು ಎಂಬ ಕಟ್ಟುನಿಟ್ಟಾದ ಆಜ್ಞೆ ಇದೆ. ಆದರೆ ಭಾರತದಲ್ಲಿ ಒಂದಲ್ಲ ಎರಡಲ್ಲ ಮುನ್ನೂರು ರಾಮಾಯಣಗಳು ಹುಟ್ಟಿದವು. ವ್ಯಾಸರ ಭಾರತವನ್ನು ಓದಿದ ನಾರಣಪ್ಪ ತಾನೇ ಕುಮಾರವ್ಯಾಸನಾಗಿ ಹೊಚ್ಚಹೊಸ ಭಾರತಕತೆಯನ್ನು ಬರೆದ. ಕೃಷ್ಣನ ಮಹಿಮೆಯನ್ನು ವ್ಯಾಸರಿಗಿಂತ ಹಿಗ್ಗಿಸಿ ಬರೆದ ನಾರಣಪ್ಪನನ್ನು ಯಾರೂ ಧರ್ಮವಿರೋಧಿ ಕೆಲಸಕ್ಕೆ ಬಹಿಷ್ಕಾರ ಹಾಕಲಿಲ್ಲ! ಇಂಥ ಕೆಲವು ಗೊಂದಲಗಳು ಭಾರತದ ಹೋಲಿಬುಕ್‍ಅನ್ನು ಹುಡುಕುತ್ತಿದ್ದ ವಿಚಾರವಾದಿಗಳಿಗೆ ಇದ್ದೇ ಇತ್ತು. ಕೊನೆಗೆ ಅವರು ಆ ಕಾವ್ಯಗಳನ್ನು ಬದಿಗಿಟ್ಟು ಭಗವದ್ಗೀತೆಯನ್ನು ಎತ್ತಿಕೊಂಡರು! ಕನಿಷ್ಠ ಪಕ್ಷ ಭಗವದ್ಗೀತೆಯಲ್ಲಿ ತಮಗೆ ಕಾಣಸಿಗಬೇಕಿದ್ದ ಅಂಶಗಳು ಹೆಚ್ಚು ಇವೆ ಎಂದು ಸಮಾಧಾನಪಟ್ಟರು.

ಯುರೋಪಿನ ವಿಚಾರವಾದಿಗಳಿಗೆ ರಿಲಿಜನ್‍ಅನ್ನು ವಿರೋಧಿಸಲು ಕಾರಣಗಳಿದ್ದವು. ರಿಲಿಜನ್ ಒಂದೇ ದೇಶದ ರಾಜಕೀಯ, ಕಾನೂನು, ವಿಜ್ಞಾನ, ಚರಿತ್ರೆಗಳನ್ನು ನಿಯಂತ್ರಿಸುತ್ತಿತ್ತು. ಹಾಗಾಗಿ ಆ ಎಲ್ಲ ಬಂಧನಗಳಿಂದ ಹೊರಬರುವ ಸಂಕಲ್ಪ ಮಾಡಿದವರು ಮೊದಲು ಮಾಡಬೇಕಾದದ್ದು ರಿಲಿಜನ್‍ಅನ್ನೇ ವಿರೋಧಿಸುವುದು. ಚಂದಮಾಮನ ಕತೆಗಳಲ್ಲಿ, ರಾಕ್ಷಸನೊಬ್ಬ ಹಲವುಹತ್ತು ಕಡೆಗಳಲ್ಲಿ ದುಷ್ಟಕಾರ್ಯ ಮಾಡುತ್ತಿದ್ದರೆ ಆತನ ಜೀವವನ್ನು ಹುದುಗಿಸಿಟ್ಟ ಗಿಳಿಯನ್ನು ಕೊಂದು ನಾಯಕ ಎಲ್ಲರನ್ನು ರಕ್ಷಿಸುತ್ತಿದ್ದನಲ್ಲ; ಅಂಥದೊಂದು ಸಾಹಸವನ್ನು ಬುದ್ಧಿವಂತರು ಮಾಡಬೇಕಾಗಿತ್ತು. ಹಾಗಾಗಿ ಧರ್ಮದ ಬಂಧನವನ್ನು ಕಡಿದುಕೊಂಡು ಬಂದವರು ನಿಜವಾಗಿಯೂ ಹೀರೋಗಳೇ ಆಗಿದ್ದರು. ಅದುವರೆಗೆ ತಡೆಹಿಡಿದಿಟ್ಟಿದ್ದ ನೀರನ್ನು ಗೇಟು ತೆರೆದು ಹೊರಬಿಟ್ಟಾಗ ಅದು ತನ್ನೆಲ್ಲ ಶಕ್ತಿಯೊಡನೆ ಹೊರಚಿಮ್ಮುವಂತೆ ವಿಚಾರವಾದಿಗಳು ರಿಲಿಜನ್ನಿನ ಕಟ್ಟಿಂದ ಹೊರಬಂದು ವಿಜ್ಞಾನ, ರಾಜಕೀಯ, ಸಾಮಾಜಿಕ ಸುಧಾರಣೆಗಳಲ್ಲಿ ದೊಡ್ಡ ಸಾಧನೆಯನ್ನೇ ಮಾಡಿದರು. ಈ ವಿಚಾರವಾದಿಗಳಲ್ಲಿ ಹಲವು ವಿಜ್ಞಾನಿಗಳಿದ್ದರು. ಸಮಾಜ ಸುಧಾರಕರಿದ್ದರು. ತತ್ವಜ್ಞಾನಿಗಳಿದ್ದರು. ಎಲ್ಲವನ್ನೂ ಸಮಚಿತ್ತದಿಂದ ನೋಡಿ ಅಳೆದುತೂಗಿ ವಿಶ್ಲೇಷಣಾತ್ಮಕ ಅಭಿಪ್ರಾಯ ಕೊಡುವವರಿದ್ದರು. ಆದರೆ ಭಾರತದ ಸಂದರ್ಭದಲ್ಲಿ ಹುಟ್ಟಿದ ವಿಚಾರವಾದಿಗಳಿಗೆ ಅಂಥ ಯಾವ ಬಂಧನವೂ ಇರಲಿಲ್ಲ. ಇಲ್ಲಿನ ಧರ್ಮ ಯಾವುದೆಂದೇ ಮೊದಲು ಗೊತ್ತಿರಲಿಲ್ಲ! ಕ್ರಿಸ್ತಪೂರ್ವ 3000 ವರ್ಷದಿಂದ ಹುಡುಕುತ್ತಬಂದರೂ ಅವರಿಗೆ ಅಲ್ಲೆಲ್ಲೂ ಭಾರತದ ಧರ್ಮದ ಹೆಸರೇ ಸಿಗಲಿಲ್ಲ! ಕೊನೆಗೆ, ಅರಬ್ಬರು ಭಾರತವನ್ನು ಹೇಗೆ ಕರೆಯುತ್ತಿದ್ದರೋ ಅದೇ ಹೆಸರಲ್ಲಿ ಹಿಂದೂ ಎಂದು ಕರೆಯತೊಡಗಿದರು. ನೆನಪಿಡಿ – ಹಿಂದೂ ಎಂದೂ ಜಾತಿಸೂಚಕ ಅಥವಾ ಧರ್ಮಸೂಚಕ ಪದವಾಗಿರಲಿಲ್ಲ. “ಸಿಂಧೂ ನದಿಯಾಚೆಗೆ ಇರುವವರು” ಎಂಬುದೇ ಸಿಂಧ್ ಆಗಿ, ಅರಬಸ್ತಾನದಲ್ಲಿ ಹಿಂದ್ ಎಂದಾಗಿ ಕೊನೆಗೆ ಹಿಂದೂ ಎಂಬ ರೂಪಕ್ಕೆ ಬಂದಿತ್ತು. ಕೇವಲ 137 ವರ್ಷಗಳ ಹಿಂದೆಯೂ ಮದರಾಸಿನಲ್ಲಿ ಪತ್ರಿಕೆ ಶುರು ಮಾಡುವವರು “ಹಿಂದೂ” ಎಂಬ ಹೆಸರಿಡುವಾಗ ಇಡಿಯ ದೇಶದ ಕಲ್ಪನೆ ಇಟ್ಟುಕೊಂಡಿದ್ದರೇ ಹೊರತು ಒಂದು ಜಾತಿ ಯಾ ಧರ್ಮಕ್ಕಾಗಿ ಪತ್ರಿಕೆ ಶುರುಮಾಡಿರಲಿಲ್ಲ.

ಅದರೆ ಭಾರತಕ್ಕೆ ಬಂದಿಳಿದಿದ್ದ ವಿಚಾರವಾದಿಗಳಿಗೆ ತಮ್ಮ ವೈಚಾರಿಕತೆಯ ಪ್ರಖರತೆಯನ್ನು ತೋರಿಸಬೇಕಾಗಿತ್ತು. ತಮ್ಮ ಸಂಬಂಧಿಗಳು ಅಲ್ಲಿ ಯುರೋಪಿನಲ್ಲಿ ಕ್ರಾಂತಿಕಾರಿಗಳಾಗಿ ಮಿಂಚುವಾಗ, ಇವರಿಗಿಲ್ಲಿ ಹೊಸ ಸಂಸ್ಕೃತಿಯನ್ನು ಮೊದಲಿಂದ ಅಧ್ಯಯನ ಮಾಡಿ ನಂತರ ತಪ್ಪುಗಳನ್ನು ಹುಡುಕಿ ತೆಗೆಯುವಷ್ಟು ಸಮಯವೂ ವ್ಯವಧಾನವೂ ಇರಲಿಲ್ಲ. ರಿಲಿಜನ್ನಿನ ಕಣ್ಣಿ ಹರಿದುಕೊಂಡು ಬೌದ್ಧಿಕ ಸ್ವಾತಂತ್ರ್ಯ ಪಡೆಯುವುದೇ ಗುರಿಯಾಗಿರುವ ವಿಚಾರವಾದಿಗಳಿಗೆ ಭಾರತದಲ್ಲಿ ಅಂಥ ಸ್ವಾತಂತ್ರ್ಯ ಅದಾಗಲೇ ಇದ್ದದ್ದು ಬಿಸಿತುಪ್ಪವಾಯಿತು. ಇಲ್ಲಿನ ಧರ್ಮ ಎಂದೂ ಏಕದೇವನ ಕಲ್ಪನೆಯನ್ನು ಬೋಧಿಸಿರಲಿಲ್ಲ. ದೇವರನ್ನು ನಂಬಬೇಕೆಂಬ ಕಟ್ಟಪ್ಪಣೆಯೂ ಇರಲಿಲ್ಲ. ದೇವರನ್ನು ನಂಬದವರು ಚಾರ್ವಾಕರೆಂದು ಕರೆಸಿಕೊಳ್ಳುತ್ತಿದ್ದರು. ಅದೂ ಒಂದು ದರ್ಶನ ಎಂದು ಮಾನ್ಯವಾಗಿತ್ತು. ತಮ್ಮ ಬಾಳ್ವೆಗಾಗಿ ಇಲ್ಲಿನವರು ಯಾವ ಪ್ರವಾದಿಯನ್ನೂ ನೆಚ್ಚಿಕೊಂಡಿರಲಿಲ್ಲ. ಹೋಲಿಬುಕ್ ಇರಲಿಲ್ಲ. ದೇವರು ಪ್ರವಾದಿಯ ಮೂಲಕ ಹೇಳಿಸಿದ ಕಮಾಂಡ್‍ಮೆಂಟುಗಳು ಕಾಣಿಸಲಿಲ್ಲ. ಇನ್ನು ಧರ್ಮಕ್ಕೂ ನ್ಯಾಯವ್ಯವಸ್ಥೆಗೂ ಸಂಬಂಧವೇ ಇರಲಿಲ್ಲ! ಧಾರ್ಮಿಕರು ಎಂದೂ ಊರಿನ ಜನರಿಗೆ ದೇವಸ್ಥಾನಕ್ಕೆ ಹೋಗಲೇಬೇಕು, ಪ್ರಾರ್ಥನೆ ಮಾಡಲೇಬೇಕು ಎಂಬ ಹುಕುಂ ಹಾಕಿರಲಿಲ್ಲ. ವಿಜ್ಞಾನವಾದರೂ ಸುಳ್ಳು ಎನ್ನೋಣವೆಂದರೆ ಇಲ್ಲಿ “ಸೂರ್ಯನೇ ಕೇಂದ್ರ, ಅವನನ್ನು ಮುಖ್ಯಬಿಂದುವಾಗಿಟ್ಟುಕೊಂಡು ಖಗೋಳವನ್ನು ಅಭ್ಯಾಸ ಮಾಡಬೇಕು” ಎಂಬ ಸಾಲುಗಳು ಪ್ರಾಚೀನ ಗ್ರಂಥಗಳಲ್ಲಿ ಕಂಡವು. ಇಲ್ಲಿನ ಯೋಗ, ಆಯುರ್ವೇದ, ಪಂಚಾಯ್ತಿ ಕಟ್ಟೆಯ ನ್ಯಾಯತೀರ್ಮಾನಗಳು, ಕಾವ್ಯ-ನಾಟಕಗಳು ಇತ್ಯಾದಿ ಯಾವ ಕ್ಷೇತ್ರದಲ್ಲೂ ಜನರಿಗೆ ಧರ್ಮ ಒಂದು ತೊಡಕಿನಂತೆ ಮುಖಾಮುಖಿಯಾಗುವ ಸಂದರ್ಭವೇ ಉದ್ಭವಿಸುತ್ತಿಲ್ಲವಲ್ಲ ಎಂದು ವಿಚಾರವಾದಿಗಳು ಖಿನ್ನರಾದರು. ತಮ್ಮ ಆಘಾತಕ್ಕೆ ಪರಿಹಾರವೆನ್ನುವಂತೆ ಅವರು ರಾಮಾಯಣ, ಮಹಾಭಾರತ, ಭಗವದ್ಗೀತೆ, ಮನುಸ್ಮೃತಿ ಇತ್ಯಾದಿಗಳಲ್ಲಿ ತಪ್ಪುಗಳನ್ನು ಎತ್ತೆತ್ತಿ ತೋರಿಸುವ ಕೆಲಸ ಶುರುಮಾಡಿದರು. ಪಾಶ್ಚಾತ್ಯ ಜಗತ್ತಿನಲ್ಲಿ ವಿಜ್ಞಾನದ ಸಾಧನೆಗಳನ್ನು ಮಾಡಲು ಬಿಡುಗಡೆಯ ದಾರಿಯಂತೆ ಒದಗಿಬಂದ ವೈಚಾರಿಕತೆ ಭಾರತದಲ್ಲಿ ಇಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಹಳಿಯಲು ಬಳಕೆಯಾಯಿತು!

ಈಗಿನ ಪರಿಸ್ಥಿತಿ ಹೇಗಾಗಿದೆಯೆಂದರೆ, ಭಾರತದ ವಿಚಾರವಾದಿಗಳು ಅರ್ಥಾತ್ ಬುದ್ಧಿಜೀವಿಗಳಿಗೆ ಜಾತಿಯೇ ಅಕ್ಕಿ-ಬೇಳೆ. ಜಾತಿಗಳ ನಡುವೆ ಶ್ರೇಣೀಕೃತ ವ್ಯವಸ್ಥೆ ಇತ್ತು, ಅದನ್ನು ತೊಡೆದುಹಾಕುವುದರಲ್ಲೇ ಎಲ್ಲರ ಶ್ರೇಯಸ್ಸು ಇದೆ ಎಂದು ಅವರು ಭಾವಿಸಿದ್ದಾರೆ. ಅದನ್ನು ಯಾವ ಮಹಾಕೃತಿಗಳ ಉದಾಹರಣೆ ಕೊಡದೆಯೂ ಮಾಡಬಹುದು. ಭಾರತದಲ್ಲಿರುವ ಎಲ್ಲ ಜಾತಿಗಳೂ ಸರ್ವಸಮಾನತೆಯಿಂದ ಬದುಕಬೇಕು ಎನ್ನುವುದು ಅತ್ಯಂತ ಆದರ್ಶವಾದ ಕಲ್ಪನೆ. ಅದನ್ನು ನಾವೆಲ್ಲರೂ ಸಂತೋಷದಿಂದಲೇ ಸ್ವಾಗತಿಸೋಣ. ಆದರೆ, ನಮ್ಮ ವಿಚಾರವಾದಿಗಳಿಗೆ ಹಾಗೆ ನೇರಾನೇರ ಸಮಸ್ಯೆಯನ್ನು ಚರ್ಚಿಸಲು ಸಾಧ್ಯವಿಲ್ಲ. ಎಲ್ಲಾ ಸಮಸ್ಯೆಗಳಿಗೂ ಮಹಾಕಾವ್ಯಗಳಲ್ಲಿ ರೆಫರೆನ್ಸ್‍ಗಳು ಇರಲೇಬೇಕು; ಸಮಸ್ಯೆಗಳು ಆ ಕಾವ್ಯಗಳಿಂದಲೇ ಶುರುವಾಗಿರಬೇಕು ಎಂದು ಇವರು ಆಶಿಸುತ್ತಾರೆ. ಸಮಸ್ಯೆಗಳೆಲ್ಲಕ್ಕೂ ಹೋಲಿಬುಕ್ ಮೂಲ ಎನ್ನುವ ಪಾಶ್ಚಾತ್ಯ ಬುದ್ಧಿಜೀವಿಗಳ ನೆರಳು ಇದು! ಇನ್ನು ಅಲ್ಲಿನವರು ರಿಲಿಜನ್‍ನ ಮೂಗುದಾರ ಹಿಡಿದಿದ್ದ ಪ್ರೀಸ್ಟ್‍ಗಳ ವಿರುದ್ಧ ತಿರುಗಿಬಿದ್ದರೆ ಇಲ್ಲಿನ ಬುದ್ಧಿಜೀವಿಗಳು ದೇವಸ್ಥಾನದಲ್ಲಿ ಆರತಿ ಎತ್ತುತ್ತಿದ್ದ ಬಡಪಾಯಿ ಬ್ರಾಹ್ಮಣ ಅರ್ಚಕರ ಮೇಲೆ ಹರಿಹಾಯ್ದರು. ಅವರನ್ನು ಪುರೋಹಿತಶಾಹಿ ಎಂದು ಕರೆದರು! ಇಲ್ಲೊಂದು ಸ್ವಾರಸ್ಯವಿದೆ. ಪುರೋಹಿತಶಾಹಿ ಎಂಬುದು ಪಾಶ್ಚಾತ್ಯ ಪ್ರೀಸ್ಟ್ ವ್ಯವಸ್ಥೆಯನ್ನು ಸೂಚಿಸುವ ಪದ. ಆದರೆ ಇಲ್ಲಿ ಬರುವ “ಪುರೋಹಿತ” ಅಪ್ಪಟ ಭಾರತದ ಸನಾತನಿಗಳ ಪದ. “ಶಾಹಿ” ಎನ್ನುವುದು ಆದಿಲ್‍ಶಾಹಿಗಳ ಪ್ರಭಾವದಿಂದ ಹುಟ್ಟಿಕೊಂಡ ಉರ್ದು ಪದ! ಹಾಗಾಗಿ, ಪುರೋಹಿತಶಾಹಿ ನೂರಕ್ಕೆ ನೂರು ಸೆಕ್ಯುಲರ್ ಶಬ್ದ ಆಯಿತಲ್ಲವೆ?! ಪಾಶ್ಚಾತ್ಯ ಜಗತ್ತಲ್ಲಿ ಇಡೀ ದೇಶವನ್ನು, ರಾಜನನ್ನೂ ಸೇರಿಸಿ, ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದ್ದವರು ಪ್ರೀಸ್ಟ್‍ಗಳು. ಆದರೆ ಭಾರತದಲ್ಲಿ ಅಂಥದೊಂದು ವ್ಯವಸ್ಥೆ ಇತ್ತೇ ಎಂದೂ ವಿಚಾರವಾದಿಗಳು ಯೋಚಿಸಲಿಲ್ಲ! ಅಲ್ಲಿನ ಸಮೀಕರಣವನ್ನೇ ಇಲ್ಲೂ ಬರೆಯಲುಹೋಗಿ ಎಲ್ಲವನ್ನೂ ಕಲಸುಮೇಲೋಗರ ಮಾಡಿಕೊಂಡರು.

ಇನ್ನೊಂದು ಕತೆ ಕೇಳಿ. ಪಾಶ್ಚಾತ್ಯ ಜಗತ್ತಿನಲ್ಲಿ, ಆಗಲೇ ಹೇಳಿದ ಹಾಗೆ, ಹೋಲಿಬುಕ್‍ಅನ್ನು ವಿರೋಧಿಸದೆ ವಿಜ್ಞಾನ ಮುಂದುವರಿಯುವಂತೆಯೇ ಇರಲಿಲ್ಲ. ಕೊನೆಗೆ ವಿಜ್ಞಾನದ ಸತ್ಯಗಳು ಬೆಳಕುಕಂಡು ಬೈಬಲ್‍ನ ಹಲವು ಮಾತುಗಳು ತಪ್ಪೆಂದು ಸಾಧಿತವಾದ ಮೇಲೆ, ಆ ಹಳೆಯ ವಿಚಾರಗಳನ್ನೇ ನಂಬುತ್ತಿದ್ದವರು ಮೂಢರೆಂದು ಕರೆಸಿಕೊಂಡರು. ಅವರು ನಂಬಿದ ತಪ್ಪು ವಿಚಾರಗಳು ಮೂಢನಂಬಿಕೆಗಳು, ಅಥವಾ ಮೌಢ್ಯಗಳಾದವು. ಜನರ ಮೌಢ್ಯ ತೊಡೆಯುವುದು ಬಹಳ ಮುಖ್ಯ ಎಂಬ ಮಾತು ಪ್ರಚಲಿತಕ್ಕೆ ಬಂತು. ಯಾಕೆಂದರೆ ಅಲ್ಲಿ “ಮೌಢ್ಯ” ಎನ್ನುವುದು ವೈಜ್ಞಾನಿಕವಾಗಿ ತಪ್ಪು ಎಂದು ಸಾಧಿಸಲ್ಪಟ್ಟ ಸಂಗತಿಗಳಷ್ಟೇ ಆಗಿದ್ದವು. ಉದಾಹರಣೆಗೆ, ಸೂರ್ಯ ಭೂಮಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾನೆ – ಎಂಬ ಸಂಗತಿ ಅಲ್ಲಿ ಮೌಢ್ಯ ಎಂಬ ಹಣೆಪಟ್ಟಿ ಕಟ್ಟಿಕೊಂಡಿತು. ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕಾದರೆ ಇಂಥ ಮೌಢ್ಯಗಳನ್ನು ತೊಡೆದುಹಾಕುವುದು ಅಗತ್ಯವಾಗಿತ್ತು. ಆದರೆ ಭಾರತದ ಸಂದರ್ಭದಲ್ಲಿ ಈ ಮೌಢ್ಯದ ಪರಿಕಲ್ಪನೆ ಸಂಪೂರ್ಣ ಬದಲಾಯಿತು. ಇಲ್ಲಿನ ಜನ ಇದುವರೆಗೆ ಮಾಡಿಕೊಂಡುಬಂದಿದ್ದ ಆಚರಣೆಗಳನ್ನೇ ವಿಚಾರವಾದಿಗಳು ಮೌಢ್ಯ ಎಂದು ಕರೆದರು. ಏಕೆಂದರೆ, ಇಲ್ಲಿನ ಒಬ್ಬ ದಾರಿಹೋಕನಿಗೆ “ಸೂರ್ಯ ಭೂಮಿಗೆ ಸುತ್ತುಬರುತ್ತಿಲ್ಲವಯ್ಯಾ! ಭೂಮಿಯೇ ಸೂರ್ಯನಿಗೆ ಪರಿಭ್ರಮಣವಾಗುತ್ತಿರುವುದು” ಎಂದು ಹೇಳಿದ್ದರೆ ಆತ “ಹೌದೇ? ಬಹಳ ಸಂತೋಷ. ಈಗ ಅದಕ್ಕೆ ನಾನೇನು ಮಾಡಬೇಕು?” ಎಂದು ಕೇಳುತ್ತಿದ್ದ! ಪಾಶ್ಚಾತ್ಯ ಜಗತ್ತಿನಲ್ಲಿ ಜನರನ್ನು ಆಘಾತದ ಮೂಲಕ ಕಣ್ತೆರಿಸಿದ ಸತ್ಯಗಳು ಭಾರತದಲ್ಲಿ ಕಿಂಚಿತ್ ಪರಿಣಾಮವನ್ನೂ ಉಂಟು ಮಾಡಲಿಲ್ಲ. ಹಾಗಾಗಿ, ಜನರಿಗೆ ನಿಜವಾಗಿಯೂ ಶಾಕ್ ಕೊಡುವಂಥ ಸಂಗತಿಗಳನ್ನು ವಿಚಾರವಾದಿಗಳು ಹೆಣೆದು ತರಬೇಕಾಗಿತ್ತು. ಅದಕ್ಕೆ ಅವರಿಗೆ ಒದಗಿಬಂದದ್ದೇ ಆಚರಣೆಗಳು. ಸೂರ್ಯ-ಭೂಮಿಗಳ ಚಲನೆಯ ಬಗ್ಗೆ ತಲೆಕೆಡಿಸಿಕೊಳ್ಳದ ಜನಸಾಮಾನ್ಯನಿಗೆ ಕೂಡ “ನೀನು ಗೋವನ್ನು ದೇವರು ಅಂತ ಪೂಜಿಸುತ್ತಿ. ಆದರೆ ಅದರ ಮೈಮೇಲೆ ಒಂದೂ ದೇವರಿಲ್ಲ. ನಾವು ಅದನ್ನೇ ಕೊಂದು ತಿನ್ನುತ್ತೇವೆ” ಎಂದಾಗ ಆಘಾತವಾಗುತ್ತದೆ. “ನೀನು ಕಲ್ಲಿನ ನಾಗನಿಗೆ ಹಾಲು ಹಾಕುತ್ತೀಯೆ. ಆದರೆ ಅದು ದೇವರೇ ಆಗಿದ್ದರೆ ನಾನು ಕೋಲಿಂದ ಹೊಡೆದಾಗ ಸಾಯಬಾರದಿತ್ತಲ್ಲ!” ಎಂದಾಗ ಆತ ಮಮ್ಮಲ ಮರುಗುತ್ತಾನೆ.

ವಿಚಾರವಾದದ ಅಂತಿಮಘಟ್ಟವಾಗಿ ಜನರಿಗೆ “ದೇವರನ್ನು ನಂಬಬೇಡಿ” ಎಂದು ಹೇಳಬೇಕು. ಈ ಮಾತು ಕೂಡ ಪಾಶ್ಚಾತ್ಯ ಮತ್ತು ಭಾರತೀಯ ವ್ಯವಸ್ಥೆಗಳಲ್ಲಿ ಉಂಟುಮಾಡುವ ಪರಿಣಾಮಗಳು ವಿಭಿನ್ನ. ಪಾಶ್ಚಾತ್ಯ ಜಗತ್ತಲ್ಲಿರುವುದು “ಒಬ್ಬನೇ ದೇವರು”. ಹಾಗಾಗಿ ದೇವರನ್ನು ನಂಬಬೇಡ ಎಂದೊಡನೆ, ಆತ ತನ್ನ ರಿಲಿಜನ್ನಿನ ಎಲ್ಲಾ ಬಂಧಗಳನ್ನೂ ಕಳಚಿಕೊಂಡು ಹೊರಬರಬೇಕು ಎಂದು ಅರ್ಥ. ಆದರೆ ಭಾರತದಲ್ಲಿ ದೇವರನ್ನು ನಂಬುವುದು ಎಂದರೆ “ನೋಡು, ನಾನೇ ದೇವರು. ನಾನು ದೇವರೆಂದು ನೀನು ನಂಬಬೇಕು. ನಾನಲ್ಲದೆ ಬೇರೆ ಯಾವ ದೇವರನ್ನೂ ನಂಬಬಾರದು” ಎಂದು ದೇವರು ಹೇಳಿದ ಮಾತಲ್ಲಿ ವಿಶ್ವಾಸ ಇರಿಸುವುದು ಅಂತ ಅರ್ಥ ಅಲ್ಲ. ಇಲ್ಲಿನ ಜನ ಕಲ್ಲು, ಹಸು, ನದಿ, ಮರ, ಗಿಡ, ಕೋತಿ, ಹಾವು, ಹಕ್ಕಿ, ಅನ್ನ ಈ ಎಲ್ಲದರಲ್ಲೂ ದೇವರನ್ನು ಪೂಜಿಸುವವರು. ಲೇಖಕ ದಿವಂಗತ ಅನಂತಮೂರ್ತಿಯವರ ಉಪನಯನ ತಿರುಪತಿಯಲ್ಲಾಯಿತು. ಅದಾಗಿ ಹಲವು ವರ್ಷಗಳ ನಂತರ ಒಂದು ಸಂದರ್ಶನದಲ್ಲಿ ಅವರು ಹೇಳಿದ್ದು: “ತಿರುಪತಿಯ ಚಿನ್ನ ಹೇರಿಕೊಂಡ ದೇವರನ್ನು ಕಂಡಾಗ ನನಗೆ ಇದು ದೇವರಲ್ಲ ಅನ್ನಿಸಿತು. ಆದರೆ ನಮ್ಮ ಊರಲ್ಲಿ ಕಾಡಿನ ಮಧ್ಯೆ ಪ್ರಶಾಂತವಾದ ಪರಿಸರದಲ್ಲಿ ಗುಡಿಯೊಂದಿತ್ತು. ಅಲ್ಲಿ ನಾನು ಭಕ್ತಿಯ ಅನುಭೂತಿ ಪಡೆದಿದ್ದೆ”. ರಿಲಿಜನ್‍ಅನ್ನು ಅಪ್ಪಿಕೊಂಡ ಒಪ್ಪಿಕೊಂಡ ವ್ಯಕ್ತಿ ಹೀಗೆ ಮಾತಾಡಲು ಸಾಧ್ಯವೇ? ವ್ಯಾಟಿಕನ್ನಿನ ಏಸು ದೇವರಲ್ಲ; ನಮ್ಮೂರ ಚರ್ಚಿನಲ್ಲಿರುವವನೊಬ್ಬನೇ ಏಸು – ಎಂದಾಗ ಆಗುವ ಪರಿಣಾಮಗಳೇನು, ಯೋಚಿಸಿ! ಆದರೆ ಭಾರತದಲ್ಲಿ ತನಗೆ ಬೇಕಾದ ದೇವರನ್ನು ನಂಬುವ, ಪೂಜಿಸುವ, ಬೈದಾಡುವ, ತಿರಸ್ಕರಿಸುವ ಎಲ್ಲ ಹಕ್ಕುಗಳನ್ನೂ ಜನ ಕಾಯ್ದುಕೊಂಡಿದ್ದರು! ದೇವರನ್ನು ನಂಬುವುದನ್ನು ಬಿಟ್ಟ ಮರುಕ್ಷಣ ಆತ ಹಾವು, ಹಕ್ಕಿ, ಹಸುಗಳಲ್ಲಿರುವ ದೈವಾಂಶವನ್ನೂ ನಿರಾಕರಿಸುತ್ತಾನೆಯೇ? ಇಲ್ಲ.

ಹಲವು ವರ್ಷ ಹಸುಗಳನ್ನು ಸಾಕಿದವನು ಕೂಡ ಏಕಾಏಕಿ ನಾಸ್ತಿಕನಾದ ಮರುದಿನ ತನ್ನ ಹಸುವನ್ನು ಕೊಂದು ತಿನ್ನಲಾರ. ಹಸುವಿನ ದೈವಿಕತೆಯನ್ನು ಅವನು ಇನ್ನೂ ಒಪ್ಪುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಲ್ಲಿನ ವಿಚಾರವಾದಿಗಳು ನಾಸ್ತಿಕತೆಯನ್ನು ಪ್ರಚೋದಿಸುವುದಕ್ಕೆ ಯಾವ ತಾರ್ಕಿಕ ಕಾರಣಗಳೂ ಇಲ್ಲ. ಆಸ್ತಿಕತೆಯನ್ನು ಒಪ್ಪಿಕೊಂಡದ್ದರಿಂದ ಭಾರತದಲ್ಲಿ ಯಾವ ಸಮಸ್ಯೆಗಳೂ ಉದ್ಭವಿಸಿಲ್ಲ. ಭೌತವಿಜ್ಞಾನಿಯೂ ಇಲ್ಲಿ ಮನೆಯಲ್ಲಿ ದೇವರ ಪೂಜೆ ಮಾಡುತ್ತಾನೆ. ವೃತ್ತಿಯಿಂದ ವೈದ್ಯನಾದವನೂ ಶಸ್ತ್ರಚಿಕಿತ್ಸೆ ಶುರು ಮಾಡುವ ಮುನ್ನ “ದೇವರೇ, ಎಲ್ಲ ಚೆನ್ನಾಗಿ ಮುಗಿಯಲಪ್ಪ” ಎಂದು ಮನಸ್ಸಲ್ಲೇ ಒಂದು ಮನವಿಯನ್ನು ಸಲ್ಲಿಸಬಹುದು. ವಿಜ್ಞಾನಿಯಾದವನು ದೇವರ ಅಸ್ತಿತ್ವವನ್ನು ಒಪ್ಪಬಾರದು ಎನ್ನುವ ವಿಚಾರವಾದಿಗಳಿಗೆ ಅದು ತಮ್ಮ ವೈಚಾರಿಕತೆಗೆ ಎಂದು ಮತ್ತು ಹೇಗೆ ತೊಡಕಾಗಿದೆ ಎನ್ನುವುದು ಗೊತ್ತಿಲ್ಲ. “ದೇವರನ್ನು ನಾವು ಯಾವ ಪ್ರಯೋಗದಿಂದಲೂ ಸಾಬೀತು ಪಡಿಸಲು ಸಾಧ್ಯವಿಲ್ಲ. ಹಾಗಾಗಿ ದೇವರನ್ನು ನಂಬಬಾರದು” ಎಂದು ಅವರು ಹೇಳಿಯಾರು. ಆದರೆ ಭಾರತದ ಬಹುಸಂಖ್ಯಾತ ಜನಕ್ಕೆ ದೇವರು ಎನ್ನುವುದೊಂದು ನಂಬಿಕೆ. ಸತ್ಯ, ಪ್ರಾಮಾಣಿಕತೆ, ಪ್ರೀತಿ, ಮತ್ಸರ, ಕಾಮಗಳಂತೆಯೇ ಅದೊಂದು ನಂಬಿಕೆ. ಚುನಾವಣೆ ಸಮಯದಲ್ಲಿ ಪ್ರತಿಪಕ್ಷವೂ ತಾನು ಅಧಿಕಾರಕ್ಕೆ ಬಂದರೆ ಒಳ್ಳೊಳ್ಳೆಯ ಕೆಲಸಗಳನ್ನು ಮಾಡಿ ದೇಶವನ್ನು ಸ್ವರ್ಗ ಮಾಡುತ್ತೇನೆಂಬ ಭರವಸೆ ಕೊಡುತ್ತದೆ. ನಾವು ಯಾವುದೋ ಸರಿಕಂಡ ಪಕ್ಷಕ್ಕೆ ಮತ ಹಾಕುತ್ತೇವೆ. ನಮ್ಮ ಮತ ಪಡೆಯುವ ಪಕ್ಷ ನೂರಕ್ಕೆ ನೂರರಷ್ಟು ಮಾತಿನಂತೆ ನಡೆದುಕೊಳ್ಳುತ್ತದೆ ಎಂದು ನಾವೇನಾದರೂ ವೈಜ್ಞಾನಿಕ ಫಲಿತಾಂಶ ಪಡೆದಿದ್ದೇವೆಯೆ? ಅದು ಕೇವಲ ನಂಬಿಕೆ ಪ್ರಶ್ನೆ ತಾನೆ? ಈ ಸರಳಸತ್ಯ ಅರ್ಥವಾದರೆ, ಭಾರತದಲ್ಲಿ ಇಂತಿಂಥಾ ವಾರಗಳಂದು ಬಂದು ಪ್ರಾರ್ಥಿಸಲೇಬೇಕು ಎಂಬ ಕಡ್ಡಾಯ ಮಾಡದೆ ಇದ್ದರೂ ಜನ ದೇವಸ್ಥಾನಗಳಿಗೆ ಯಾಕೆ ಹೋಗುತ್ತಾರೆ ಎನ್ನುವುದು ಅರ್ಥವಾಗುತ್ತದೆ. ನಂಬಿಕೆಯನ್ನು ಪ್ರಯೋಗಗಳ ಮೂಲಕ ಸಿದ್ಧ ಮಾಡಿ ತೋರಿಸಬೇಕು; ಹಾಗಾಗದಿದ್ದರೆ ಅದು ಮೌಢ್ಯದ ಪಟ್ಟಿಗೆ ಸೇರುತ್ತದೆ – ಎಂದು ಹೇಳುವುದೇ ನನ್ನ ಪ್ರಕಾರ ದೊಡ್ಡ ಮೂಢನಂಬಿಕೆ.

ಇಷ್ಟು ಹೇಳಿದ ಮೇಲೆ ನಾನು ನನ್ನ ಬಗ್ಗೆಯೇ ಒಂದಷ್ಟು ಮಾತುಗಳನ್ನು ಹೇಳಿ ಲೇಖನ ಮುಗಿಸುವುದು ಯುಕ್ತ ಅನ್ನಿಸುತ್ತದೆ. ನಾನು ದೇವರನ್ನು ಭಕ್ತಿಯಿಂದ ಆರಾಧಿಸುವ ಆಸ್ತಿಕನೇನೂ ಅಲ್ಲ. ಪರಿಶುದ್ಧವಾದ ಭಾವನೆಗಳಲ್ಲಿ ಭಕ್ತಿಯೂ ಒಂದು. ಅಂಥ ಉತ್ಕಟವಾದ ಭಾವನೆ ನನಗೇಕೆ ಸಾಧ್ಯವಾಗುವುದಿಲ್ಲ ಎಂದು ಕೆಲವೊಮ್ಮೆ ಅನನ್ಯ ಭಕ್ತರನ್ನು ಕಂಡು ಕರುಬಿದ್ದೇನೆ ಕೂಡ. ಹಾಗೆಂದಮಾತ್ರಕ್ಕೆ ನಾನು ನಾಸ್ತಿಕನೂ ಅಲ್ಲ. ಯಾಕೆಂದರೆ ಆಸ್ತಿಕ ಮತ್ತು ನಾಸ್ತಿಕ ಎಂಬ ಹಣೆಪಟ್ಟಿ, ದೇವರು ಇದ್ದೇ ಇದ್ದಾನೆ ಎಂದು ಘೋಷಿಸುವ ಮತ್ತು ಇಲ್ಲೇ ಇಲ್ಲ ಎಂದು ನಿರಾಕರಿಸುವ ವ್ಯಕ್ತಿಗಳಿಗೆ ಮಾತ್ರ ಮಾನ್ಯವಾಗುತ್ತವೆ. ನಾನು ಇದ್ದೇ ಇದ್ದಾನೆ ಎನ್ನುವವನೂ ಅಲ್ಲ; ಇಲ್ಲೇ ಇಲ್ಲ ಎಂದು ಸಾಧಿಸಿಯೂ ಇಲ್ಲ. ಯಾಕೆಂದರೆ ನನಗೆ ದೇವರ ಅಸ್ತಿತ್ವ ಎಂದೂ ಒಂದು ಪ್ರಶ್ನೆಯಾಗಿ, ಸಮಸ್ಯೆಯಾಗಿ ಕಾಡಿಲ್ಲ. ನಾನು ದೇವಸ್ಥಾನಗಳಿಗೆ ಹೋದದ್ದುಂಟು; ಹಬ್ಬಗಳನ್ನು ಖುಷಿಖುಷಿಯಾಗಿ ಆಚರಿಸಿದ್ದುಂಟು; ಪ್ರಾಚೀನ ಕಾವ್ಯಗಳನ್ನೂ ಆಗೀಗ ಆಸ್ವಾದಿಸಿದ್ದುಂಟು. ಇಂಥದೊಂದು ನಡುರೇಖೆಯಲ್ಲಿ ನಿಂತರೂ ನನ್ನ ವೈಚಾರಿಕತೆಗೆ ಯಾವ ಕುಂದೂ ಬಂದಿಲ್ಲ. ಯಾವುದೇ ವಿಷಯವನ್ನು ಸ್ಪಷ್ಟವಾಗಿ ವಿಶ್ಲೇಷಿಸುವ ಸಾಮರ್ಥ್ಯ ನನಗೆ ಖಂಡಿತಾ ಇದೆ ಎಂದು ನಂಬಿದ್ದೇನೆ. ದೇವರನ್ನು ಒಪ್ಪುವ ಪಂಥದಲ್ಲಿದ್ದರೂ ನನ್ನ ಈ ವಿಶ್ಲೇಷಣಾಶಕ್ತಿಗೆ ಯಾವ ಕುಂದೂ ಇರುವುದು ಸಾಧ್ಯವಿರಲಿಲ್ಲ. ಯಾಕೆಂದರೆ ದೇವರ ಕಲ್ಪನೆಯನ್ನು ನಡುವೆ ತರದೇ ಇದ್ದಾಗ್ಯೂ ವಿಜ್ಞಾನ, ವಿಚಾರ, ತರ್ಕ, ಸಂವಾದಗಳು ಸಾಧ್ಯ ಎನ್ನುವುದನ್ನು ನನ್ನ ದೇಶದ ಸಂಸ್ಕೃತಿ ನನಗೆ ಕಲಿಸಿಕೊಟ್ಟಿದೆ. ವೈಚಾರಿಕತೆ ಎನ್ನುವುದು ಯಾರ ಆಸ್ತಿಯೂ ಅಲ್ಲ; ಆಸ್ತಿಕನಿಗೂ ಅಲ್ಲಿ ಸಮಪಾಲಿದೆ ಎಂದು ಈ ದೇಶ ಹೇಳಿಕೊಟ್ಟಿದೆ. ಭಾರತದ ಧರ್ಮ ಕೊಟ್ಟ ಸ್ವಾತಂತ್ರ್ಯ ನನ್ನನ್ನೊಬ್ಬ “ಫ್ರೀ ಥಿಂಕರ್”ನನ್ನಾಗಿ ಮಾಡಿದೆ. ವ್ಯಕ್ತಿ ನಾಸ್ತಿಕನಾಗಿ ಗುರುತಿಸಿಕೊಂಡರೆ ಮಾತ್ರ ಆತ ವಿಚಾರವಾದಿ ಎಂದು ಕರೆಸಿಕೊಳ್ಳಲು ಅರ್ಹ – ಎಂಬ ಮಾತು ಎಷ್ಟು ಅಸಂಗತ ಎಂದು ಹೇಳಲು ಹೋಗಿ ನಾನು ಇಷ್ಟೆಲ್ಲ ವಿಷಯಗಳನ್ನಿಲ್ಲಿ ಹಂಚಿಕೊಳ್ಳಬೇಕಾಯಿತು.

29 ಟಿಪ್ಪಣಿಗಳು Post a comment
  1. Aparna Rao
    ಡಿಸೆ 22 2015

    nimma vichaaraatmaka lekhana nanage aasaktidaayaka annisitu.

    ಉತ್ತರ
  2. ಅನ್ ಷಾದ್ ಪಾಳ್ಯ
    ಡಿಸೆ 22 2015

    ವಿಚಾರವಾದಿಗಳೆಲ್ಲ ಪಾಶ್ಚಾತ್ಯ ದೇಶದ ತಳಹದಿಯ ಮೇಲೆ ಬಂದವರು ಎಂಬ ನಿಮ್ಮ ಕಲುಷಿತ ವಾದ ಭಾರತದ ಬಹುತ್ವ ಪರಂಪರೆಗೆ ವಿರೋಧವಾಗಿರುವಂತದ್ದು. ನಾನೊಬ್ಬ ವಿಚಾರವಾದಿ ಎಂದರೆ ಅದಕ್ಕೆ ಯಾವ ವಾದಗಳ ಹಿನ್ನಲೆ ಬೇಕಾಗಿಲ್ಲ. ಸತ್ಯವನ್ನು ಹುಡುಕಾಡುವ ಪ್ರಕ್ರಿಯೆ ವಿಚಾರವಾದವೇ ಹೊರತು ಪಾಶ್ಚಾತ್ಯ ಅಕ್ಷರಗಳ ಬಿಡಿ ಮಾಲೆಯ ಅರ್ಥ ವಿವರಣೆಯಲ್ಲ.. ನ್ಯೂಟನ್ ತಿಯರಿ ಅವನ ಆಲೋಚನೆಯ ಬುದ್ಧಿ ಮಟ್ಟದ ಉನ್ನತ ಹಂತದ ಒಂದು ಅಭಿಪ್ರಾಯವಾಗಿತ್ತು ಮತ್ತು ಅದಕ್ಕೆ ಅನೇಕ ಸಂಶೋಧನೆಗಳು ಕಾರಣವಾಗಿತ್ತು. ಕೇವಲ ಪಾಶ್ಚಿಮಾತ್ಯ ಬಿಳಿ ವಿಚಾರವಾದಿಗಳು ಯಾವನ್ನೂ ನಮಗೆ ಹೇರಿ ಹೋಗಿಲ್ಲ. ಸುಲಭದಲ್ಲಿ ಹೇಳುವುದಾದರೆ ನೀವು ಹಾಕಿದ ಕನ್ನಡ ಭಾಷೆಯ ಈ ಲೇಖನಕ್ಕೆ ಅವರ ತೆರೆಮರೆಯ ಸಾರ್ವತ್ರಿಕ ಶಿಕ್ಷಣದ ಕೊಡುಗೆ ಇದೆ. ಹಾಗೆಂದು ಅವರನ್ನು ಸಮರ್ಥಿಸುತ್ತಿಲ್ಲ. ಆದರೆ ಕೇವಲ ತೆಗಳುವ ಮನಃಸ್ಥಿತಿಯಲ್ಲಿ ವಿಚಾರವಾದಿಗಳನ್ನು ಪಾಶ್ಚಾತ್ಯರ ಗುಲಾಮರೆನ್ನುವ ನಿಮ್ಮ ಆಲೋಚನೆಗೆ ಭಾರತೀಯ ಸಮಾಜದ ಅರಿವೆಯ ಕೊರತೆ ಇದೆ ಎಂದೆನಿಸುತ್ತದೆ.

    ಉತ್ತರ
    • ಡಿಸೆ 22 2015

      ವಾದ ಪ್ರಾರಂಭಿಸುವಾಗಲೇ ನನ್ನದು ಕಲುಷಿತ ವಾದ ಎಂಬ ಹಣೆಪಟ್ಟಿ ಹಚ್ಚಿಬಿಟ್ಟಿರಿ! ಇದು ಇಂದಿನ ಬುದ್ಧಿಜೀವಿಗಳ ಲಕ್ಷಣ.

      ವಿಚಾರ, ವೈಚಾರಿಕತೆ – ಇವೆಲ್ಲವೂ ಎಲ್ಲ ಕಾಲಕ್ಕೂ ಎಲ್ಲ ದೇಶಗಳಲ್ಲೂ ಕಂಡುಬರುವವೇ ಆಗಿವೆ. ಭಾರತದಲ್ಲೂ ಸಹಸ್ರಾರು ಪ್ರಬುದ್ಧ ವೈಚಾರಿಕರು ಆಗಿಹೋಗಿದ್ದಾರೆ. ವಿಚಾರ ಮಾಡುವ ಶಕ್ತಿ ಇದೆ ಎಂದರೆ ಆತ/ಆಕೆ ವೈಚಾರಿಕರು ಎಂದೇ ಅರ್ಥ.

      ಆದರೆ, ನಾನು ಇಲ್ಲಿ ಇತ್ತೀಚೆಗೆ ಬೆಳೆಯುತ್ತಿರುವ “ಇಂಟಲೆಕ್ಚುಯಲ್”, “ಬುದ್ಧಿಜೀವಿ”, “ವಿಚಾರವಾದಿ” ಎಂಬ ನಿರ್ಧಿಷ್ಟ ಅರ್ಥ-ಮಿತಿಗಳಿರುವ ಪದಗಳ ಹಿಂದಿರುವ ಚರಿತ್ರೆಯನ್ನು ಮಾತ್ರ ವಿಶ್ಲೇಷಣೆಗೆ ಒಳಪಡಿಸುತ್ತಿದ್ದೇನೆ. ವೈಚಾರಿಕತೆಗೆ ಇರುವ ವಿಶಾಲಾರ್ಥ ಮತ್ತು ನಾನು ಚರ್ಚೆಗೆ ಎತ್ತಿಕೊಂಡಿರುವ ಒಂದು ನಿರ್ಧಿಷ್ಟ ಪಾರಿಭಾಷಿಕ ಪದದ ಸೀಮಿತಾರ್ಥ – ಇವುಗಳ ವ್ಯತ್ಯಾಸ, ಲೇಖನವನ್ನು ಓದಿದವರಿಗೆ ಸ್ಪಷ್ಟವಾಗುತ್ತದೆ.

      ಉತ್ತರ
    • Anonymous
      ಡಿಸೆ 22 2015

      “ನಾನೊಬ್ಬ ವಿಚಾರವಾದಿ ಎಂದರೆ ಅದಕ್ಕೆ ಯಾವ ವಾದಗಳ ಹಿನ್ನಲೆ ಬೇಕಾಗಿಲ್ಲ”

      ಕೊಳೆತ ಕೋಳಿಯ ಹಳಸಿದ ಸಾರಿಗೆ “ಮುರ್ಗಿ ಕಿ ಶೋರ್ಬ” ಅಂತ ಹೆಸರಿಟ್ಟರೆ ಅದು ನಾರುವುದನ್ನು ನಿಲ್ಲಿಸುತ್ತದೆಯೇ ಬಾಟ್ನಿಸಾರ್? ಅಲ್ಲ ಅಲ್ಲ ಅನ್ ಷಾದ್ ಪಾಳ್ಯ ಸಾಬ್! ;-P ತಮ್ಮ ಆತ್ಮರತಿಗೆ ಮಿತಿಯೇ ಇಲ್ಲವೇ?

      ಉತ್ತರ
  3. ಡಿಸೆ 22 2015

    Well the article is AGAINST the statement given by a laureate who said that if you are (branded as) an intellectual you need to become an atheist and I completely agree with this article which is so well articulated.

    When Nirbhaya gets gang raped, where is our Lord Krishna to save her? and our reasoning for the very existence of GOD fails there. But still we believe in his existence. Despite loosing their daughter, the parents of Nirbhaya still believe in GOD at the same time they are fighting for our constitution to change the Juvenile Justice. It doesn’t mean that they cannot reason, they do but in a totally different dimension. In a dimension that if they do not put their faith in the almighty, by now all of them would have perished, there would be no peace of mind for them and all of us would end as terrorists who do not have any faith in any religion but killing.

    Becoming an intellectual doesn’t have to make anybody a nonbeliever of GOD, some call it science, some call it GOD. We do reason on everything, we know science and we do reason but we cannot ignore the fact that, that a power out there exists which is beyond human reach and thought which we call it GOD, and some call it SCIENCE.

    The then intellectuals of the west researched, discovered, invented but never did they say much against the religion hurting the sentiments of the masses, not because they were afraid of the prosecution they had to face but for their concern to not hurt the sentiments of the masses. They also had and have the presentation skills, with humbleness that they tried and will try to reach the people with reasoning.

    When Mr. S.L. Bhairappa wrote “Parwa”, there was criticism, but still the reasoning was so well written that it reached the masses and was/is accepted, and Mr Bhairappa is still respected for his reasoning skills. But the other so called fake intellectuals, like Girish Karnad or Bhagvan and many others instead or reasoning and making people to understand their reasoning, they resort to the atrocities with false reasoning, accusing, abusing and hurting the sentiments of a community, and that they are banking on these, these days, hurting the sentiments of a community to get popularity and other benefits from the government. Hurting the sentiments of the people who believe in GOD is become a fashion and they try to project themselves as if they are akin to the western intellectuals, but they are wrong because the western intellectuals were never like that. I agree with Mr Rohit that he is right in saying that our todays fake intellectuals are being influence by these fake western intellectuals who came to India to defame our epics and vedas pre-independence.

    Mr Salman Rushdie one such Radical thinker in Islam is not accepted in his community, because he too could not reach the masses by humble reasoning and opposing. Being intellectual is not enough but you should also have presentation skills. But one day even Muslims will start reasoning and will know what is right from wrong.

    And me believing in GOD doesn’t stop me from being an intellectual. And this message is well articulated. Kudos to Mr Rohit for this article.

    ಉತ್ತರ
  4. veena
    ಡಿಸೆ 22 2015

    ಒಂದು ಕಾಲದಲ್ಲಿ ಇಂಗ್ಲೀಷ್ ಮೇಷ್ಟ್ರು ಅಂದ್ರೆ ವಿಪರೀತ ಮರ್ಯಾದೆ. ಆಗ ಇಂಗ್ಲೀಷ್ ಎಮ್.ಎ ಓದಿದವರಿಗೆ ತಕ್ಷಣ ಕೆಲಸ ಸಿಗುತಿದ್ದ ಕಾಲ. ಈಗ ಗಲಾಟೆ ಮಾಡುತ್ತಿರುವ ಕಾರ್ನಾಡರು ಭಗವಾನರಾದಿ ವಿಚಾರವಾದಿಗಳು ಆ ಕಾಲದ ಲಾಭ ಪಡೆದವರು ಅಥವಾ ಅಂಥವರ ಮಕ್ಕಳು. ಹಾಗಾಗಿ ಇವರಿಗೆಲ್ಲ ಅನ್ನ-ನೆಲಕ್ಕೆ ದಾರಿ ಮಾಡಿಕೊಟ್ಟಅದಕ್ಕಿಂತ ಹೆಚ್ಚಿನದಾಗಿ ಹೆಸರು ತಂದುಕೊಟ್ಟ ಭಾಷೆ ಎಂಬ ಕೃತಜ್ಞತೆ ಅದರ ಹಿನ್ನೆಲೆ ಒಳಹುರುಳುಗಳನ್ನೆಲ್ಲ ತಮ್ಮ ರಕ್ತಕ್ಕೆ ಸೇರಿಸಿಕೊಂಡು ಸ್ಥಳೀಯತೆಯನ್ನು ಕೆಡುಗೆಡಹುವ ಸ್ವಭಾವವನ್ನು ತಂದಿದೆಯೋ ಎಂದು ನನ್ನ ಅನುಮಾನ. ಅದೂ ಅಲ್ಲದೆ ಇವರೆಲ್ಲ ಜನರ ಕಾಳಜಿ ಮಾಡಲು ಶುರು ಹಚ್ಕೊಂಡಿದ್ದೆ ನಿವೃತ್ತಿ ಹೊಂದಿ ರೆಗ್ಯುಲರ್ ಆಗಿ ಉಘೇ ಉಘೇ ಅನ್ನೋ ಶಿಷ್ಯವೃಂದಗಳನ್ನು miss ಮಾಡ್ಕೊಳಕ್ಕೆ ಪ್ರಾರಂಭ ಆದಾಗ. ಅವರನ್ನು ಬೆಂಬಲಿಸೋವ್ರಿಗೂ ಊಟ ನಿದ್ದೆಗೆ ಚಿಂತೆ ಇಲ್ಲ, ನಾನು ಓದಿರುವ ಸುದ್ದಿಗಳ ಮಟ್ಟಿಗೆ. ಪಾಠ ಮಾಡುವುದು, ಸಾಹಿತ್ಯ ಸೃಷ್ಟಿಯ ಉಪ ಉತ್ಪನ್ನ ಹೆಸರುಗಳಿಕೆ. ಇವರೆಲ್ಲ ಮೂಲ ಉತ್ಪನ್ನ ಪಿಂಚಣಿ ರೂಪ ಪಡೆದ ಮೇಲೆ ಈ ಉಪ ಉತ್ಪನ್ನದ ವ್ಯಸನಕ್ಕೆ, ತೆವಲಿಗೆ ಬಿದ್ದವರು. ಇಷ್ಟರ ಮಟ್ಟಿನ ವೈಚಾರಿಕತೆ ನನ್ನಲ್ಲಿದೆ. ಆಸ್ತಿಕಳೋ ನಾಸ್ತಿಕಳೋ ಓದಿದವರಿಗೆ ಬಿಟ್ಟಿದ್ದು. ನಾನು ಇಲ್ಲಿ ಹಿನ್ನೆಲೆ ಅಂತ ಕರೆದಿರೋದನ್ನು ನೀವು ಬಿಡಿಸಿ ಇಟ್ಟಿದೀರಿ ರೋಹಿತ್ ರವರೇ. ಧನ್ಯವಾದಗಳು.

    ಉತ್ತರ
  5. ಡಿಸೆ 23 2015

    Excellent writeup.

    ಉತ್ತರ
  6. laxmikanth
    ಡಿಸೆ 24 2015

    it seems Shri Chakrathirth is suggesting that everything was ( is) alright here and the people from outside pointed out and displayed the loopholes/faults which were not existied. He has very cleverly tried to split the word “Purohitashahi” and tried advocate this it was was secular..It is just playing with words and the same was done by Manu as well…

    Questioning of meaningless rituals… questioning of provisions of Legal doctrine ” Manusmrithi” was stated in India long before these white skinned people came here.. The birth of Buddhism, Jainism, Basavanna.. etc were results of such “intellectualism” which opposed the doctrines and rituals of “Manu” which had extensive support of “Purohitashahi”

    It gives an impression that “Vicharavadi” just opposes everything in “Dharma” … It is so because the “Purohitashai” and the gang of Manuvadis has given such a definition to “Dharma” to protect their interest and made it so hopeless and meaningless…

    ಉತ್ತರ
    • Anonymous
      ಡಿಸೆ 24 2015

      ಲಕ್ಷ್ಮೀಕಾಂತ್, ಬೆಳಿಗ್ಗೆ ಬಹಿರ್ದೆಶೆಗೆ ಹೋಗಲಿಲ್ಲವೆ ನೀವು?

      ಉತ್ತರ
      • laxmikanth
        ಡಿಸೆ 24 2015

        Yaake Mahaswamy??

        ಉತ್ತರ
        • Anonymous
          ಡಿಸೆ 24 2015

          ಮತ್ತೇನಿಲ್ಲ, ಮನುವಾದ ಪುರೋಹಿತಶಾಹಿ ಅಂತೆಲ್ಲ ಸಿಕ್ಕಾಪಟ್ಟೆ ಲದ್ದಿ ಹಾಕಿದ್ದೀರಿ ಇಲ್ಲಿ, ಅದಕ್ಕೆ ಅನುಮಾನ ಬಂತು ಕೇಳಿದೆ.

          ಉತ್ತರ
          • Dheemanta
            ಡಿಸೆ 25 2015

            He he! Well said. How many times we have heard Ambedkarites peddling the same old sterile stash of Manuvada and Purohitashahi!

            ಉತ್ತರ
    • Dheemanta
      ಡಿಸೆ 25 2015

      “The birth of ..Basavanna.. etc were results of such “intellectualism” which opposed the doctrines and rituals of “Manu” ”

      He he! Ranjan Darga will surely be enlightened by this great discovery about Basavanna’s birth.

      ಉತ್ತರ
  7. vasu
    ಡಿಸೆ 24 2015

    ವಿಚಾರ ಪರತೆ ಗೆ ಒತ್ತು ನೀಡಿ ಪ್ರೋತ್ಸಾಹವಿತ್ತುದು ವೇದಗಳು. ವೇದ ಎಂದರೆ ಜ್ಞಾನ. ಮನುಷ್ಯನು ಜ್ಞಾನಿಯಾಗಬೇಕು. ಕುರುಡು ಕುರುಡಾಗಿ ಯಾವುದನ್ನೂ ಒಪ್ಪಬಾರದೆಂದು ವೇದ ಹೇಳುತ್ತದೆ. ವೇದದಲ್ಲಿ ಸಂಪ್ರಶ್ನ ಎಂಬ ಶಬ್ಧವಿದೆ. ಎಂದರೆ ಎಲ್ಲವನ್ನೂ ಸರಿಯಾಗಿ ತರ್ಕಿಸಿ ಸತ್ಯವನ್ನು ಕಂಡು ಹಿಡಿದು ಅದರ ಪಾಲನೆ ಮಾಡಬೇಕು. ಬೈಬಲ್, ಕುರಾನ್ ಇತ್ಯಾದಿ ಪುಸ್ತಕಗಳಲ್ಲಿ ಭೂಮಿಯನ್ನು ಚಪ್ಪಟೆ ಎಂದು ಹೇಳಲಾಗಿದೆ. ಆದರೆ ವೇದಗಳು ಭೂಮಿಯನ್ನು ಭೂಗೋಳ ವೆಂದು ಕರೆದು ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ಹೇಳಿದೆ. ವೇದದ ಮಂತ್ರ ಒಂದು ಹೀಗಿದೆ. ” ಯೂಯಂ ತತ್ ಸತ್ಯ ಶವಸ| ಻ಅವಿಷ್ಕರ್ತಾ ಮಹಿತ್ವನಾ| ವಿಧ್ಯತಾ ವಿಧ್ಯುತಾ ರಕ್ಷಃ” ಎಂದರೆ ಸತ್ಯವನ್ನು ಶಕ್ತಿಯಾಗಿ ಹೊಂದಿರುವ ಧೀರರೇ! ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧನ್ಯ ಜೀವರೇ! ನಿಮ್ಮ ಸ್ವಂತ ಮಹಿಮೆಯಿಂದಲೇ ಆಸತ್ಯವನ್ನು ಅವಿಷ್ಕರಿಸಿರಿ. ಬೆಳಕಿಗೆ ತನ್ನಿರಿ. ದುಷ್ಕಾಮನೆಯನ್ನು ನಿಮ್ಮ ಜ್ಞಾನ ಜ್ಯೋತಿಯಿಂದ ಸೀಳಿಹಾಕಿರಿ.
    ಇಲ್ಲಿರುವ ಒಂದೊಂದು ಮಾತು ಸತ್ಯಕ್ಕೆ ವಿಚಾರತ್ವಕ್ಕೆ ಇಂಬುಕೊಡುತ್ತದೆ. ಆದುದರಿಂದಲೇ ವೇದ ವನ್ನು ಆಶ್ರಯಿಸಿ ಅದರ ಻ಆಧಾರದ ಮೇಲೆ ವಿಶ್ವ ಸಮಾಜವನ್ನು ಕಟ್ಟ ಬೇಕೆಂಬ ಹಂಬಲದೊಂದಿಗೆ ಸ್ವಾಮಿ ದಯಾನಂದ ಸರಸ್ವತಿ [1924-1883] ವೈಚಾರಿಕ ನೆಲೆಯಲ್ಲಿ ಆರ್ಯಸಮಾಜವನ್ನು ಹುಟ್ಟು ಹಾಕಿದರು. ಅವರು ಬರೆದ ಻ಅಮೋಘ ಕೃತಿ ” ಸತ್ಯಾರ್ಥ ಪ್ರಕಾಶ” ಗ್ರಂಥವನ್ನು ಎಲ್ಲ ವಿಚಾರಪರರೂ ಓದಬೇಕು ಡಾ|| ಎಸ್ ಎಲ್ ಭೈರಪ್ಪನವರು ಈ ಪುಸ್ತಕದ ಮಹಾನ್ ಅಭಿಮಾನಿಗಳು. ನಾಸ್ತಿಕರಿಗೂ ಸಹ ಈ ಪುಸ್ತಕವು ತಮ್ಮ ನಾಸ್ತಿಕತೆ ಸರಿಯೇ ತಪ್ಪೇ ಎನ್ನುವುದುನ್ನು ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ. ನಮ್ಮ ಸಮಾಜದ ಎಲ್ಲ ಮೂಢನಂಬಿಕೆಗಳನ್ನು ಸಾಧಾರವಾಗಿ ಬಯಲಿಗೆಳೆದಿದ್ದು ಇದೊಂದೇ ಗ್ರಂಥ. ಅಂತೆಯೇ ಅನ್ಯ ಸಮಾಜಗಳಲ್ಲಿ, ಅವರರವರ ಮತೀಯ ಪುಸ್ಕಕಗಳಲ್ಲಿ ಇರುವ ಎಲ್ಲಾ ಅವೈಜ್ಞಾನಿಕ, ಅಮಾನವೀಯ ವಿಚಾರಗಳನ್ನು ಬಯಲಿಗೆಳೆದು ಜಗಜಾಗೃತಿ ಮೂಡಿಸಿದ್ದು ಈ ಗ್ರಂಥ. ಲಿಯೋ ಟಾಲ್ ಸ್ಟಾಯಿ, ಗಾಂಧೀಜಿ ಏಕೆ ಎಲ್ಲ ಬುದ್ಧಿಜೀವಿಗಳಿಗೆ ಒಂದು ಚೇತೋಹಾರಿಯಾಗಿ. ಈ ಪುಸ್ತಕವಿದೆ. ವೈಚಾರಿಕರು ಎಂದು ಹೇಳಿಕೊಳ್ಳುವ ವಿಚಾರಕರು ಒಮ್ಮೆಯಾದರೂ ಈ ಪುಸ್ತಕವನ್ನು ಓದಬೇಕು. ಮನುವಿನ ಬಗ್ಗೆ ಕಲಬೆರೆಕೆ ಪುಸ್ತಕಗಳನ್ನು ಓದಿ ಅದನ್ನು ಖಂಡಿಸುವ ಅನ್ ಷದ್ ಪಾಳ್ಯ ಅಂತಹವರೂ ಸಹ ವಿಶುದ್ಧ ಮನುವಿನ ಸ್ವರೂಪವನ್ನು ಈ ಪುಸ್ತಕದಲ್ಲಿ ಕಾಣಬಹುದು. ಅಂದಹಾಗೆ ಇಂದು ನಮಗೆ ಸಿಗುವ ಮನುಸ್ಮೃತಿಯಲ್ಲಿ ಕಲಬೆರೆಕೆ ಪ್ರಮಾಣ ಶೇ 40/- ರಷ್ಟಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಇದನ್ನು ಗಮನಿಸದೆಯೇ ಮನುವನ್ನು ಹಳಿಯುವರು ನಿಜಕ್ಕೂ ಅಜ್ಞಾನಿಗಳು.

    ಉತ್ತರ
  8. laxmikanth
    ಡಿಸೆ 25 2015

    Hi…Anonymous… You agreed that Manuvada…Purohitashahi…etc are Laddi… Congratulations…for realization…even it was late…

    ಉತ್ತರ
    • Anonymous
      ಡಿಸೆ 26 2015

      “Manuvada…Purohitashahi…etc are Laddi”

      ಖಂಡಿತ ಲದ್ದಿ. ಆದರೆ ಅದನ್ನೇ ಲಡ್ಡು ಎಂದು ಭಾವಿಸಿ ತಿಂದು ಇಲ್ಲಿ ಉಂಡೆ ಉರುಳಿಸುವ ನಿಮ್ಮಂತಹವರಿಗೆ realization ಆಗೋದು ಯಾವಾಗ?

      ಉತ್ತರ
  9. laxmikanth
    ಡಿಸೆ 25 2015

    In my view “Religion” is a “way of living”… To have harmony among all the living beings there has to be certain set rules…a..system. that is Dharma…Or “Jeeavana Dharma”.

    The rules…system which was right at one point of time may not suit at a different time…and may not be right at a different context. Hence many provisions…once felt right may prove absolute non-sense at a different time…

    Every religion should be subjected to introspection…to discard those rules/systems which are non-sense and to adopt new which are more suitable for the prevailing time. Criticizing something which is incorrect in the present context ( which was correct at some point of time) is not looked as criticizing whole religion or Dharma.

    The religion which does not get subjected to this introspection and self review is very dangerous to entire mankind… TALIBAN and ISIS are the burning examples!!

    ಉತ್ತರ
  10. ದಿನಕರ ಸಿ ಕೋರಿಶೆಟ್ಟರ. ಹಾವೇರಿ.
    ಡಿಸೆ 26 2015

    ಲೇಖನ ಕುರಿತು ನನ್ನ ಕೆಲವು ಅನಿಸಿಕೆಗಳು…

    1) ವೈಚಾರಿಕತೆ ಎಂದರೆ ಧರ್ಮಗ್ರಂಥಗಳು ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ವಿರೋಧಿಸುವುದಷ್ಟೇ ಎಂಬರ್ಥ ಬರುವಂತೆ ಬರೆದಿರುವುದು ಮೊದಲ ತಪ್ಪು.

    2) ಭಾರತದಲ್ಲಿ ವೈಚಾರಿಕತೆಯ ಬೀಜ ಮೊಳಕೆಯೊಡೆದಿದ್ದು ಕ್ರಿ. ಶ. 12 ನೇ ಶತಮಾನಕ್ಕೂ ಮುಂಚೆ ಅಂದರೆ 5 ನೇ ಶತಮಾನದ ಈಚೆಗೆ. ಪೂರ್ಣ ಪ್ರಮಾಣದಲ್ಲಿ ಫಲ ನೀಡಿದ್ದು 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲಿ ವಿಶ್ವದ ಪ್ರಪ್ರಥಮ ಸಂಸತ್ತಾದ ಅನುಭವ ಮಂಟಪದ ಮುಖಾಂತರ.

    3) ವಿಚಾರವಾದಿಗಳಿಗೆ ಇಂಥವನ್ನೇ ವಿರೋಧಿಸಬೇಕೆಂಬ ಪೂರ್ವಾಗ್ರಹ ಪೀಡಿತ ಸೂತ್ರಗಳೇನೂ ಇರುವುದಿಲ್ಲ. ಆದರೆ ಮೇಲಿನ ಲೇಖನದಲ್ಲಿ ಲೇಖಕರು ವೈಚಾರಿಕರಿಗೆ ಇಂಥವೇ ಸೂತ್ರಗಳಿದ್ದವೆಂಬಂತೆ ಬಿಂಬಿಸಿ ಬರೆದಿದ್ದಾರಾದ್ದರಿಂದ ಇದು ಸತ್ಯಕ್ಕೆ ದೂರವಾಗಿದೆ.

    4) ಧರ್ಮಕ್ಕೂ ನ್ಯಾಯವ್ಯವಸ್ಥೆಗೂ ಸಂಬಂಧವೇ ಇರಲಿಲ್ಲವೆಂಬುದು ಲೇಖಕರ ಶುದ್ಧ ತಪ್ಪು ಕಲ್ಪನೆಯೆಂಬುದು ಮೇಲ್ನೋಟಕ್ಕೇನೆ ತಿಳಿದುಬರುತ್ತದೆ. ಏಕೆಂದರೆ ಅನೇಕ ರಾಜರುಗಳು ಅಂದಿನ ಗುರುಕುಲದಲ್ಲಿ ಬ್ರಾಹ್ಮಣ ಗುರುಗಳು ತಮಗೆ ಧರ್ಮಗ್ರಂಥವೆಂದು ನಂಬಿಸಿದ ಗ್ರಂಥಗಳನ್ನು ನ್ಯಾಯಶಾಸ್ತ್ರಕ್ಕೆ ಆಧಾರವಾಗಿ ಬಳಸುತ್ತಿದ್ದರು.

    ಈ ಕೆಲವು ಕಾರಣಗಳಿಂದ ಅರ್ಧ ಸತ್ಯವಾಗಿರುವ ಮೇಲ್ಕಂಡ ಲೇಖನದಲ್ಲಿನ ತಪ್ಪಿರುವ ಭಾಗಗಳನ್ನು ಅಲ್ಲಗಳೆಯುತ್ತಿದ್ದೇನೆ. ಇವನ್ನು ಹೊರತು ಪಡಿಸಿ ಉಳಿದಂತೆ ಲೇಖನ ಉತ್ತಮವಾಗಿ ಮೂಡಿ ಬಂದಿದೆ.

    ಶರಣು ಶರಣಾರ್ಥಿಗಳು.

    –> ದಿನಕರ ಸಿ ಕೋರಿಶೆಟ್ಟರ. ಹಾವೇರಿ.

    🌹🌷🙏😇🙏🌷🌹

    ಉತ್ತರ
    • Anonymous
      ಡಿಸೆ 27 2015

      ಹಲ್ಲೋ ಕೋರಿ ಶೆಟ್ಟರ, ತಾವು ಮಾನ್ಯ ರಂಜಾನ್ ದರ್ಗಾ ಅವರ ಶಿಷ್ಯರೇ?

      ಉತ್ತರ
      • Anonymous
        ಡಿಸೆ 27 2015

        “ಆನು ಹೇಳುವುದೇ ಸರಿಯೆಂಬ ಭಾವದಲಿ;
        ಅನ್ಯರ ನಡೆಯ ಠೀಕಿಸುತ್ತ ಸ್ವಪ್ರತಿಷ್ಟೆಯಲಿ,
        ಬರಿಯೇ ವೈಚಾರಿಕತೆಯ ಮಾತನಾಡಿದೆಡೆ,
        ಅರೆಹುಚ್ಚಲ್ಲದೇ ಮತ್ತಿನ್ನೇನು ವಚನಬಸವ.?”

        ಇದನ್ನು ಓದಿದ ಮೇಲೆ ತಾವು ಅವರ ಶಿಷ್ಯರು ಅಲ್ಲ ಅಂತ ಅನ್ನಿಸುತ್ತಿದೆ.

        ಉತ್ತರ
  11. laxmikanth
    ಡಿಸೆ 29 2015

    ಓ ನನ್ನ ಚೇತನ, ಆಗು ನೀ ಅನಿಕೇತನ
    ರೂಪರೂಪಗಳನು ದಾಟಿ, ನಾಮಕೊಟ್ಟಿಗಳನು ಮೀಟಿ,
    ಎದೆಯ ಬಿರಿಯ ಭಾವ ಬೀಸಿ,
    ಓ ನನ್ನ ಚೇತನ, ಆಗು ನೀ ಅನಿಕೇತನ

    ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ,
    ನಿರ್ದಿಗಂತವಾಗಿ ಏರಿ,
    ಓ ನನ್ನ ಚೇತನ, ಆಗು ನೀ ಅನಿಕೇತನ

    ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು,
    ಕೊನೆಯನೆಂದು ಮುಟ್ಟದಿರು,
    ಓ ಅನಂತವಾಗಿರು,
    ಓ ನನ್ನ ಚೇತನ, ಆಗು ನೀ ಅನಿಕೇತನ

    ಅನಂತ ತಾನ್ ಅನಂತವಾಗಿ, ಆಗುತಿಹನೆ ನಿತ್ಯಯೋಗಿ,
    ಅನಂತ ನೀ ಅನಂತವಾಗು, ಆಗು ಆಗು ಆಗು,
    ಓ ನನ್ನ ಚೇತನ, ಆಗು ನೀ ಅನಿಕೇತನ

    ಉತ್ತರ
    • Anonymous
      ಡಿಸೆ 29 2015

      “ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟದಿರು” ಅಂತ ಅಂದವರೇ ದೊಡ್ಡ ಮನೆ ಕಟ್ಟಿ ಅಲ್ಲೇ ಅನೇಕ ದಶಕಗಳ ಕಾಲ ನೆಲೆ ನಿಂತು ಕೊನೆಗೆ ಮಗಳ ಹೆಸರಿಗೆ ಬರೆದು ಹೋದರು. ಈಗ ಮಗಳು ಅಳಿಯ ಆ ಮನೆಯಲ್ಲಿದ್ದಾರೆ. ಅವರೂ ಅನಿಕೇತನ ಆಗುವ ಲಕ್ಷಣ ಕಾಣುತ್ತಿಲ್ಲ!

      ಉತ್ತರ
  12. laxmikanth
    ಡಿಸೆ 29 2015

    .
    ಲದ್ದಿಯನ್ನೆ ಲಡ್ಡು ಎನ್ದು ತಿನ್ದು ಲದ್ದಿ ಉರುಳಿಸುವವರ ಸಾಹಿತ್ಯ ಜ್ನಾನಕ್ಕೆ
    ಎಣೆಯು೦ಟೆ……

    ಉತ್ತರ
    • Anonymous
      ಡಿಸೆ 29 2015

      ಲದ್ದಿಯನ್ನೆ ಲಡ್ಡು ಎನ್ದು ತಿನ್ದು ಲದ್ದಿ ಉರುಳಿಸುವ ಕೆಲಸವನ್ನು ಬೇಕಿದ್ದರೆ ಲಡಾಯಿ ಬ್ಲಾಗಿನಲ್ಲಿ ಮಾಡಿ, ಇಲ್ಲಿ ಬೇಡ.

      ಉತ್ತರ
  13. Devu Hanehalli
    ಆಕ್ಟೋ 22 2017

    Mr. Chakrateertha, though there are some points where I disagree, the article is very nice. One thing I do not understand is why do you use the word DHARMA as a synonym to RELIGION? If at all you want an Indian equivalent, it is MATA, not DHARMA.
    Yours Devu Hanehalli

    ಉತ್ತರ
  14. Devu Hanehalli
    ಆಕ್ಟೋ 22 2017

    Mr. Chakrateertha, though there are some points where I disagree, the article is very nice. One thing I do not understand is why do you use the word DHARMA as a synonym to RELIGION? If at all you want an Indian equivalent, it is MATA, not DHARMA.

    Yours Devu Hanehalli

    ಉತ್ತರ
  15. ಮೇ 11 2020

    ವೈಚಾರಿಕತೆಯ ಲೇಖನ ಚೆನ್ನಾಗಿದೆ.

    ಉತ್ತರ
  16. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ಉತ್ತರ

ನಿಮ್ಮದೊಂದು ಉತ್ತರ Devu Hanehalli ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments