ಇಂಧನ ಸಮಸ್ಯೆಯ ಪರಿಹಾರಕ್ಕಾಗಿ ನಡೆಯುತ್ತಿರುವ ಸಂಶೋಧನೆಗಳ ಮತ್ತೊಂದು ಮುಖ…
– ಶ್ರೀವತ್ಸ ಭಟ್
ಒಮ್ಮೆ ಊಹಿಸಿಕೊಳ್ಳಿ ನಮ್ಮ ಮನೆಯ ಬಲ್ಬುಗಳು ವಿದ್ಯುತ್ತಿಲ್ಲದೆಯೇ ಉರಿಯತೊಡಗಿದರೆ,ಮನೆಯಂಗಳದಲ್ಲಿರುವ ಗಿಡಗಳು ಬೆಳಕನ್ನು ಹೊರಸೂಸತೊಡಗಿದರೆ ಹೇಗಿರುತ್ತದೆ ಅಲ್ಲವೇ..! ಹೌದು ಬಲ್ಬುಗಳೇ ಬೆಳಕನ್ನು ಉತ್ಪಾದಿಸಿ ಬೆಳಗುವ,ಸಸ್ಯಗಳು ಬೆಳಕನ್ನು ಸೂಸುವ ಅದ್ಭುತ ಸಂಶೋಧನೆಯೊಂದು ಬಹುತೇಕ ಯಶಸ್ಸಿನ ಹಂತದಲ್ಲಿದೆ.ನೀವು ಮಿಣುಕುಹುಳುಗಳನ್ನು ನೋಡಿರಬಹುದು. ಕತ್ತಲಿನಲ್ಲಿ ಬೆಳಕನ್ನು ಹೊರಸೂಸುತ್ತಾ ಹಾರುವ ಜೀವಜಗತ್ತಿನ ವಿಸ್ಮಯ ಜೀವಿಗಳು. ಹೀಗೆ ಜೀವಿಗಳು ಬೆಳಕನ್ನು ಹೊರಸೂಸುವ ಈ ಪ್ರಕ್ರಿಯೆಗೆ ಜೈವದೀಪ್ತತೆ ಎಂದು ಹೆಸರು.ಇಂಗ್ಲಿಷಿನಲ್ಲಿ ಇದಕ್ಕೆ Bio luminescence ಎಂದು ಕರೆಯುತ್ತಾರೆ.
ಜೈವದೀಪ್ತತೆ ಮನುಷ್ಯನ ಕುತೂಹಲ ಕೆರಳಿಸಿದ್ದು ಇವತ್ತು ನಿನ್ನೆಯ ವಿಷಯವಲ್ಲ. ಮೈಕೆಲೆಂಜಲೋ ಮೆರಿಜಿ (Michelangelo Merisi da Caravaggio) ಎಂಬ ಇಟಲಿಯ ಪ್ರಸಿದ್ಧ ಚಿತ್ರಕಾರನೊಬ್ಬ ಇದೇ ಹುಳುಗಳ ಒಣಗಿದ ಪುಡಿಯನ್ನು ಬಳಸಿಕೊಂಡು ತನ್ನ ಪೇಂಟಿಂಗ್ ಹೊಳೆಯುವಂತೆ ಮಾಡುತ್ತಿದ್ದನಂತೆ. ಇಂತಹ ಬಹುತೇಕ ಜೀವಿಗಳು ಕಾಣಸಿಗುವುದು ಸಮುದ್ರದಲ್ಲಿ. ವಿಶ್ವವಿಖ್ಯಾತ ಜೀವಶಾಸ್ತ್ರಜ್ಞ ಚಾರ್ಲ್ಸ್ ಡಾರ್ವಿನ್ ತನ್ನ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾನೆ…“ ವಿಶಾಲ ಸಾಗರದಲ್ಲಿ ಪಯಣಿಸುತ್ತಿದ್ದೆ, ರಾತ್ರಿಯ ಸಮಯವದು, ತಂಪಾದ ಗಾಳಿ ಬೀಸುತ್ತಿತ್ತು, ಹಗಲಿನಲ್ಲಿ ಸಮುದ್ರದ ಮೇಲೆ ನೊರೆಯಂತೆ ಕಾಣುತ್ತಿದ್ದ ವಸ್ತುಗಳು ರಾತ್ರಿಯ ಸಮಯದಲ್ಲಿ ಹೊಳೆಯುತ್ತಿದ್ದವು.”
ಯೋಚಿಸುವ ಶಕ್ತಿಯನ್ನು ಪಡೆದ ಮನುಷ್ಯ ತನ್ನ ಕುತೂಹಲವನ್ನು ಮೊದಲು ನೆಟ್ಟಿದ್ದು ಪ್ರಕೃತಿಯ ಕಡೆಗೆ. ಅದರ ವಿಸ್ಮಯಗಳ ಹಿಂದಿನ ರಹಸ್ಯಗಳ ಭೇದಿಸಲು ಆತ ತೊಡಗಿದಂತೆಲ್ಲ ಮತ್ತಷ್ಟು ವಿಸ್ಮಯಗಳು ತೆರೆದುಕೊಳ್ಳತ್ತಾ ಹೋದವು. ಇದು ಅವನ ವೈಜ್ಞಾನಿಕ ಜ್ಞಾನವನ್ನು, ಚಿಂತನಾ ಕ್ರಮವನ್ನು ಮತ್ತಷ್ಟು ಸದೃಢಗೊಳಿಸಿತು. 1947ರಲ್ಲಿ ಎಡ್ಮಂಡ್ ನ್ಯೂಟನ್ ಹಾರ್ವೆ ಎಂಬ ಅಮೇರಿಕನ್ ವಿಜ್ಞಾನಿ “Nature of animal light” ಎಂಬ ಸಂಶೋಧನಾ ಪ್ರಬಂಧವೊಂದನ್ನು ಪ್ರಕಟಿಸಿದ. ಮಿಣುಕು ಹುಳುಗಳ ಬಗೆಗೆ,ಬೆಳಕನ್ನು ಹೊರಸೂಸುವ ಎಷ್ಟೋ ಬ್ಯಾಕ್ಟೀರಿಯಾಗಳ ಬಗೆಗೆ, ಕತ್ತಲಿನಲ್ಲಿ ಹೊಳೆಯುವ ಸಮುದ್ರದ ಬಗೆಗೆ ಅದರಲ್ಲಿ ಉಲ್ಲೇಖವಿದೆ.ಫಂಗಸ್ ಗಳಿಗಿಂತ ಮೇಲುಸ್ತರದ ಸಸ್ಯವರ್ಗಕ್ಕೆ Bio luminescence ಸಾಧ್ಯವಿಲ್ಲ,ಅವು ಕೇವಲ ಬೆಳಕನ್ನು ಪ್ರತಿಫಲಿಸುತ್ತವೆ ಎಂಬ ಅಂಶ,ಸತ್ತ ಮೀನಿನ ಚರ್ಮ ಹೊಳೆಯಲು ಬ್ಯಾಕ್ಟೀರಿಯಾಗಳು ಕಾರಣ ಎಂಬುದು ಈ ಪ್ರಬಂಧದಲ್ಲಿರುವ ಮುಖ್ಯ ಅಂಶಗಳು.ಹಿಂದೆ ಇಂಗ್ಲೆಂಡಿನ ಕಲ್ಲಿದ್ದಲು ಗಣಿಗಳಲ್ಲಿ ಸತ್ತ ಮೀನಿನ ಚರ್ಮವನ್ನು ಹಾಗೂ ಮಿಣುಕು ಹುಳುಗಳು ತುಂಬಿದ ಬಾಟಲಿಯನ್ನು ಬೆಳಕಿನ ಮೂಲವಾಗಿ ಬಳಸುತ್ತಿದ್ದರಂತೆ. ಕುತೂಹಲಿಯಾದ ಮನುಷ್ಯ ಜೀವಜಗತ್ತಿನ ಇಂತಹ ಕೌತುಕಗಳಿಗೆ ಮಾರುಹೋಗಿ ಪರ್ವತಗಳ ತುತ್ತ ತುದಿಯಿಂದ ಹಿಡಿದು ಸಮುದ್ರದ ಅತ್ಯಾಳದವರೆಗೂ ತನ್ನ ಹುಡುಕಾಟ, ಸಂಶೋಧನೆಗಳನ್ನು ನೆಡೆಸಿದ. ಇದು ಆತನನ್ನು ವಿಜ್ಞಾನ ಜಗತ್ತಿನ ಮತ್ತೊಂದು ಮಾಯಾಲೋಕಕ್ಕೆ ಎಳೆದುಕೊಂಡು ಹೋಯಿತು.
ಮೊದಮೊದಲು ಜೀವಿಗಳ ಬಾಹ್ಯ ಗುಣಲಕ್ಷಣಗಳನ್ನು ತಿಳಿದುಕೊಂಡ ಅವನು ಅವುಗಳ ಬಗೆಗೆ ಮತ್ತಷ್ಟು ಆಕರ್ಷಿತನಾಗಿ, ಕುತೂಹಲಭರಿತನಾಗಿ ಅವುಗಳ ದೇಹರಚನೆಯ ಬಗೆಗೆ ಸಂಶೋಧಿಸಲು ಮುಂದಾದ. ಸೂಕ್ಷ್ಮದರ್ಶಕಗಳು ಆತನಿಗೆ ಸಸ್ಯಗಳೂ ಸೇರಿದಂತೆ ಜೀವಜಗತ್ತಿನ ಸಹಸ್ರ ಸಹಸ್ರ ಜೀವಿಗಳ ಪ್ರತಿಯೊಂದೂ ಅಂಗಗಳನ್ನೂ ವಿಸ್ತ್ರತವಾಗಿ ಅಭ್ಯಸಿಸಲು ನೆರವಾದವು. ಅಂಗಾಂಗಗಳ ಬಗೆಗೆ ತಿಳಿದುಕೊಂಡ ಮೇಲೆ ಅವುಗಳಲ್ಲಿ ನೆಡೆಯುವ ಜೈವಿಕ ಕ್ರಿಯಗಳ ಅಧ್ಯಯನಕ್ಕೆ ತೊಡಗಿದ. ಇದಕ್ಕಾಗಿ ಆತ ಜೀವರಸಾಯನ ಶಾಸ್ತ್ರದ ಮೊರೆಹೋದ.
ಹೀಗೆ ಬೆಳಕನ್ನು ಹೊರಸೂಸುವ ಜೀವಿಗಳಲ್ಲಿ ನೆಡೆಯುವ ರಸಾಯನಿಕ ಕ್ರಿಯೆಗಳ ಕುರಿತು ಅಧ್ಯಯನ ನೆಡೆಸಿದ ವಿಜ್ಞಾನಿಗೆ ಆಶ್ಚರ್ಯವೊಂದು ಕಾದಿತ್ತು. ಹಗಲಿನ ಬೆಳಕನ್ನು ಹೀರಿಕೊಂಡು ರಾತ್ರಿ ಪ್ರತಿಫಲಿಸುತ್ತವೆ ಎಂದುಕೊಂಡಿದ್ದ ಅವನ ಯೋಚನೆಗಳು ತಲೆಕೆಳಗಾದವು. ಜೈವದೀಪ್ತತೆಗೆ ಅವುಗಳ ದೇಹದ ಗ್ರಂಥಿಗಳಲ್ಲಿ ನೆಡೆಯುವ ರಸಾಯನಿಕ ಕ್ರಿಯೆಯೊಂದು ಕಾರಣ ಎಂಬ ವಿಸ್ಮಯಕಾರಿ ಅಂಶವೊಂದು ಹೊರಬಿತ್ತು. ಇಂತಹ ಜೀವಿಗಳ ದೇಹದಲ್ಲಿರುವ ಲ್ಯೂಕ್ರಿಫೆರಿನ್ ಎಂಬ ವರ್ಣದ್ರವ್ಯವು ಆಮ್ಲಜನಕದ ಕಣಗಳೂಂದಿಗೆ ಲ್ಯೂಕ್ರಿಫೆರೇಸ್ ಎಂಬ ಕಿಣ್ವ ಹಾಗೂ ಮೆಗ್ನೀಶಿಯಂನಿಂದ ಕೂಡಿದ ವಾತಾವರಣದಲ್ಲಿ ಪ್ರತಿಕ್ರಿಯಿಸಿದಾಗ ಬೆಳಕು ಉತ್ಪತ್ತಿಯಾಗುತ್ತದೆ ಎಂಬ ಅಂಶ ತಿಳಿದು ಬಂತು. ವಿಜ್ಞಾನಿ ತಲೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟುಕೊಂಡು ಹುಟ್ಟಿದವ. ಆತ ಇಂತಹ ಅದ್ಭುತ ರಸಾಯನಿಕ ಕ್ರಿಯೆಗಳ ನಿಯಂತ್ರಿಸುವ ಶಕ್ತಿ ಯಾವುದಿರಬಹುದೆಂದು ತಲೆಕೆಡಿಸಿಕೊಳ್ಳಲಾರಂಭಿಸಿದ.
ಗ್ರೆಗರ್ ಮೆಂಡಲ್, ಚಾರ್ಲ್ಸ್ ಡಾರ್ವಿನ್, ಫ್ರೆಡ್ರಿಕ್ ಗ್ರಿಫಿತ್ ಮುಂತಾದ ಸಂಶೋಧಕರ ಅನುವಂಶೀಯತೆ, ಜೈವಿಕ ಸಂರಚನೆಗಳ ಬಗೆಗಿನ ಸಿದ್ಧಾಂತಗಳು ಜೈವದೀಪ್ತತೆಯ ಬಗೆಗೆ ಮತ್ತಷ್ಟು ಸಂಶೋಧನೆಗಳನ್ನು ನೆಡೆಸಲು ಬೇಕಾದ ಸೌಲಭ್ಯಗಳನ್ನು ಒದಗಿಸಿದವು. ಹೀಗೆ ಪ್ರಾರಂಭವಾದ ಅಧ್ಯಯನಗಳು,ಹೊಸ ಹೊಸ ಅನ್ವೇಷಣೆಗಳು ಜೀವಶಾಸ್ತ್ರದ ಮತ್ತೂಂದು ವಿಶಿಷ್ಟ ಜಗತ್ತಿನತ್ತ ನಮ್ಮನ್ನು ಸೆಳೆಯಿತು. ಅದೇ ಜೆನೆಟಿಕ್ಸ್. ಅನುವಂಶೀಯತೆಗೆ ಕಾರಣವಾದ ಡಿಎನ್ಎ, ಪ್ರತಿಯೊಂದು ಜೀವಿಯಲ್ಲಿ ನೆಡೆಯುವ ಜೈವಿಕ ಕ್ರಿಯೆಗಳಿಗೆ ಮೂಲ ಕಾರಣವಾದ ಜೀನ್ಅನ್ನು ಅಧ್ಯಯನ ಮಾಡುವ ವಿಭಾಗ. ಹೀಗೆ ಅಭಿವೃದ್ಧಿ ಹೊಂದುತ್ತಾ ಸಾಗಿದ ಜೆನೆಟಿಕ್ಸ್ ಹೊಸ ಮಜಲನ್ನು ಪಡೆದುಕೊಂಡಿದ್ದು 1950ರ ದಶಕದಲ್ಲಿ. ಅದು 1953ರಲ್ಲಿ ಜೇಮ್ಸ್ ವಾಟ್ಸನ್ ಹಾಗೂ ಫ್ರಾನ್ಸಿಸ್ ಕ್ರಿಕ್ ಎಂಬ ಇಬ್ಬರು ಜೀವಶಾಸ್ತ್ರಜ್ಞರು ಎಕ್ಸ್ ರೇ ಕ್ರಿಸ್ಟಲೋಗ್ರಫಿ ಎಂಬ ತಂತ್ರಜ್ಞಾನವನ್ನು ಕಂಡುಹಿಡಿದಾಗ (ಇವರಿಬ್ಬರ ಮೇಲೆ ತಂತ್ರಜ್ಞಾನವನ್ನು ಕದ್ದ ಆರೋಪವಿದೆ). ಮುಂದೆ ತಂತ್ರಜ್ಞಾನ ಜಗತ್ತಿನಲ್ಲಾದ ಕ್ರಾಂತಿಕಾರಕ ಬದಲಾವಣೆಗಳು, ಇಲೆಕ್ಟ್ರಾನ್ ಮೈಕ್ರೋಸ್ಕೋಪಿನ ಅಭಿವೃದ್ದಿ (ಸಂಶೋಧಿಸಿದ್ದು 1926ರಲ್ಲಿ ), ಡಿಎನ್ಎ ಸಿಕ್ವೆನ್ಸಿಂಗ್ ತಂತ್ರಜ್ಞಾನದ ಅನ್ವೇಷಣೆ(1987), ಕ್ಲೋನಿಂಗ್ ನ ಮೂಲಕ ಉಂಟಾದ ಕುಲಾಂತರಿ ತಳಿಗಳ ಅಭಿವೃದ್ಧಿ ಜೀವಶಾಸ್ತ್ರವನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯಿತು.
ಮಿಣುಕು ಹುಳುಗಳನ್ನು ಬಿಟ್ಟರೆ ಜೈವದೀಪ್ತತೆಯ ಬಗೆಗಿನ ಸಂಶೋಧನೆಗಳಿಗೆ ಆಹಾರವಾಗಿದ್ದು ಸಮುದ್ರ ಜೀವಿಗಳು, ಎಷ್ಟೋ ಬ್ಯಾಕ್ಟೀರಿಯಾಗಳು, ಬೆಳಕನ್ನುಗುಳುವ ಜೆಲ್ಲಿಫಿಶ್ ಗಳು,ವಿಶೇಷವಾಗಿ ಆಲ್ಗೆಗಳು. ಮುಖ್ಯವಾಗಿ ಇವುಗಳು ತಿಳಿಹಸಿರು ಹಾಗೂ ನೀಲಿ ಬಣ್ಣದ ಬೆಳಕನ್ನು ಉತ್ಪಾದಿಸುತ್ತವೆ. ಕೆಂಪು ಬೆಳಕನ್ನು ಉತ್ಪಾದಿಸುವ ಜೀವಿಗಳೂ ಇವೆ. ಕ್ಲೋನಿಂಗ್ (ಕುಲಾಂತರಿ ತಳಿಗಳನ್ನು ಸೃಷ್ಟಿಸುವ ವಿಧಾನ) ಜೈವದೀಪ್ತತೆಯ ಬಗೆಗಿನ ಸಂಶೋಧನೆಗೆ ಹೊಸ ಆಯಾಮವನ್ನು ನೀಡಿತು. ಮನುಷ್ಯನ ಹಾಗೂ ಕೆಲವು ಪ್ರಾಣಿಗಳ ಕರುಳಿನ ಭಾಗದಲ್ಲಿ E.coli ಎಂಬ ಬ್ಯಾಕ್ಟೀರಿಯಾವೊಂದು ವಾಸಿಸುತ್ತದೆ, ಇದು ವಿಟಮಿನ್ ಕೆ2ವನ್ನು ಉತ್ಪಾದಿಸುತ್ತದೆ. ವಿಜ್ಞಾನಿಗಳು ಕರುಳಿನಲ್ಲಿ ಸಿಗುವ ಈ ಬ್ಯಾಕ್ಟೀರಿಯಾವನ್ನು ಜೈವದೀಪ್ತೀಯ ಬ್ಯಾಕ್ಟೀರಿಯಾವೊಂದರ ಜೊತೆ ಪ್ರಯೋಗಾಲಯದಲ್ಲಿ ಕುಲಾಂತರ ಪ್ರಕ್ರಿಯೆಗೊಳಪಡಿಸಿದಾಗ E.coli ಬ್ಯಾಕ್ಟೀರಿಯಾ ಕೂಡ ಬೆಳಗಲು ಶುರುಮಾಡುತ್ತದೆ. ಇದು ಮತ್ತಷ್ಟು ಹೊಸ ಹೊಸ ಪ್ರಯೋಗಗಳಿಗೆ ನಾಂದಿಯಾಯಿತು, ಉತ್ತೇಜನವನ್ನು ನೀಡಿತು. ವಿಜ್ಞಾನಿ ಇಂತಹ ಪ್ರಯೋಗಗಳನ್ನು ಇತರ ಜೀವಿಗಳ ಮೇಲೆ ಪ್ರಯೋಗಿಸಲು ಆರಂಭಿಸಿದ.ಅದರ ಪರಿಣಾಮವೇ ಹತ್ತು ಹಲವು ಅದ್ಭುತ ಸಂಶೋಧನೆಗಳು.ಸ್ವಂತ ಶಕ್ತಿಯಿಂದ ಬೆಳಕನ್ನು ಉತ್ಪಾದಿಸುವ ಇಂತಹ ಕೆಲವು ಸಂಶೋಧನೆಗಳ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.
ಚಿಕ್ಕಂದಿನಲ್ಲಿ ತನ್ನ ತಂದೆ ಹೇಳುತ್ತಿದ್ದ ಹೊಳೆಯುವ ಸಮುದ್ರದ ಬಗೆಗಿನ ಕತೆಗಳಿಂದ ಪ್ರೇರಿತನಾಗಿದ್ದ ಅಮೇರಿಕಾದ ನಿವೃತ್ತ ನೌಕಾಸೇನಾಧಿಕಾರಿಯೊಬ್ಬರ ಮಗ ಕೇಲಬ್ ಕ್ರಾಫ್ಟ್ ಆಲ್ಗೆಗಳಿಂದ ಬಲ್ಬನ್ನು ತಯಾರಿಸುವ ಮಾದರಿಯನ್ನು ಇತ್ತೀಚೀಗೆ ವಿವರಿಸಿದ್ದಾರೆ (ಯೂಟ್ಯೂಬ್ ನಲ್ಲಿ ಇದರ ವಿಡಿಯೋ ಲಭ್ಯವಿದೆ).ಆಲ್ಗೆಗಳು ಹೊಳೆಯಲು ಪ್ರಮುಖ ಕಾರಣ ಅವುಗಳಲ್ಲಿ ನೆಡೆಯುವ ರಂಜಕದ ಉತ್ಕರ್ಷಣ ಕ್ರಿಯೆ.ಆಲ್ಗೆಗಳನ್ನು ನೀರಿನ ಬಾಟಲಿಯೊಂದರಲ್ಲಿ ತುಂಬಿ ರಾತ್ರಿಯ ಸಮಯದಲ್ಲಿ ಅದನ್ನು ಕದಡಿದರೆ ಅವು ಜೈವಿಕ ಕ್ರಿಯೆಗಳನ್ನು ಆರಂಭಿಸುತ್ತವೆ (ವಾಸ್ತವದಲ್ಲಿ ಸಮುದ್ರದ ಅಲೆಗಳಿಂದ ಕದಡುವ ಪ್ರಕ್ರಿಯೆ ನಡೆಯುತ್ತದೆ).ಇದರಿಂದ ರಂಜಕದ ಉತ್ಕರ್ಷಣೆ ನೆಡೆದು ಬೆಳಕು ಉತ್ಪತ್ತಿಯಾಗುತ್ತದೆ.ಉತ್ಕರ್ಷಣ ಕ್ರಿಯೆಗೆ ಬೇಕಾದ ಶಕ್ತಿಯನ್ನು ಆಲ್ಗೆಗಳು ಹಗಲಿನಲ್ಲಿ ಸೂರ್ಯನ ಬೆಳಕಿನಿಂದ ಸಂಗ್ರಹಿಸಿಕೊಳ್ಳುತ್ತವೆ ಎಂಬುದು ಕ್ರಾಫ್ಟ್ ರ ವಿವರಣೆ.ಇದಕ್ಕೆ ಪೂರಕವೆಂಬಂತೆ University of Wisconsin ನ ವಿದ್ಯಾರ್ಥಿಗಳು ಬಯೋಬಲ್ಬ್ ನ್ನು ತಯಾರಿಸುವ ಬಗೆಗೆ ವಿವರಣೆ ನೀಡಿದ್ದಾರೆ.ಕುಲಾಂತರಿ E.coli ಬ್ಯಾಕ್ಟೀರಿಯಾಗಳನ್ನು ಬಲ್ಬೊಂದರಲ್ಲಿ ತುಂಬುವುದು ಹಾಗೂ ಅವುಗಳ ಬೆಳವಣಿಗೆಗೆ ಪೂರಕವಾಗುವ ಹಾಗೂ ಜೈವಿಕ ಕ್ರಿಯೆಗಳನ್ನು ನಡೆಸಲು ಯೋಗ್ಯವಾದ ಒಂದು ಪುಟ್ಟ ಜೈವಿಕ ವ್ಯವಸ್ಥೆಯನ್ನು ಬಲ್ಬಿನೊಳಗೆ ನಿರ್ಮಿಸುವುದು ಅವರ ಉಪಾಯ.ಇಂತಹ ವ್ಯವಸ್ಥೆಗಳನ್ನು “ದೀಪದೂಳಗಿನ ಜೀವ ಜಗತ್ತು” ಎನ್ನಬಹುದು.
“Bio luminescence imaging” ಕಳೆದೂಂದು ದಶಕದಲ್ಲಿ ಅಭಿವೃದ್ಧಿಹೊಂದಿದ ಮತ್ತೂಂದು ಮಹತ್ವದ ಸಂಶೋಧನೆ. ಪ್ರಯೋಗಾಲಯದಲ್ಲಿ ಜೀವಿಗಳ ಜೈವಿಕ ಕ್ರಿಯೆಗಳ ಬಗೆಗಿನ ಅಧ್ಯಯನ ನಡೆಸಲು ಇದನ್ನು ಉಪಯೋಗಿಸಲಾಗುತ್ತಿದೆ. ಇದರ ಇನ್ನೊಂದು ಉಪಯೋಗ ಕ್ಯಾನ್ಸರ್ ರೋಗದ ಅಧ್ಯಯನ,Bio luminescence ಜೀನ್ ಅನ್ನು ರಕ್ತಕಣಗಳೂಡನೆ ಸೇರಿಸಲಾಗುತ್ತದೆ,ಕ್ಯಾನ್ಸರ್ ಪೀಡಿತ ಜೀವಕೋಶಗಳು ಸಾಮಾನ್ಯವಾಗಿ ರಕ್ತಕಣಗಳೊಡನೆ ಬೇರೆ ರೀತಿಯಲ್ಲಿ (abnormal) ವ್ಯವಹರಿಸುತ್ತವೆ.ಹೀಗಾಗಿ ಬೆಳಕು ಸೂಸುವ ರಕ್ತಕಣಗಳು ಇಂತಹ ಜೀವಕೋಶಗಳನ್ನು ಸುಲಭವಾಗಿ ಪತ್ತೆಹಚ್ಚಲು ನೆರವಾಗುತ್ತವೆ.
ಕೊನೆಯದಾಗಿ ನಾನು ಹೇಳ ಹೊರಟಿರುವುದು ಹೊಳೆಯುವ ಗಿಡಗಳ ಬಗೆಗೆ, ಸಸ್ಯಗಳ ಜೀನೋಮನ್ನು bio luminescent ಜೀನುಗಳೊಂದಿಗೆ ಕ್ಲೋನ್ ಮಾಡಿ ಸಸ್ಯಗಳೂ ಕೂಡ ಬೆಳಕನ್ನು ಉತ್ಪಾದಿಸಿ ಹೊರಸೂಸುವಂತೆ ಮಾಡುವ ಪ್ರಯತ್ನಗಳು ಯಶಸ್ಸನ್ನು ಕಂಡಿವೆ.ಅಂದರೆ ಕ್ರಿಸ್ ಮಸ್ ಗಿಡಗಳಿಗೆ ದೀಪದ ಸರ ಹಾಕಬೇಕಾದ ಅವಶ್ಯಕತೆ ಇಲ್ಲ, ಗಿಡಗಳನ್ನೇ ಕ್ಲೋನ್ ಮಾಡಬಹುದು.ಅಪಘಾತಗಳ ತಡೆಗೆ ರಸ್ತೆಯ ಅಂಚುಗಳಿಗೆ ಹೊಳೆಯುವ ಬ್ಯಾಕ್ಟೀರಿಯಾಗಳ ಲೇಪಿಸುವ ಪ್ರಯತ್ನ ನೆದರ್ ಲ್ಯಾಂಡಿನಲ್ಲಿ ನೆಡೆದಿದೆ.
ಇಂಧನ ಸಮಸ್ಯೆಗೆ ಪರಿಹಾರ ಹುಡುಕುವ ಮನುಷ್ಯನ ಪ್ರಯತ್ನ ಎತ್ತಸಾಗುತ್ತಿದೆ ಎಂಬುದರ ಬಗೆಗೆ ಇದೊಂದು ಕಿರುನೋಟವಷ್ಟೇ.ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದ್ಭವಿಸಿರಬಹುದು ಇಂತಹ ಜೀನ್ಗಳನ್ನು ಮನುಷ್ಯನ ಮೇಲೆ ಪ್ರಯೋಗಿಸಿದರೆ? ನಾವೂ ಕೂಡ ಹೊಳೆಯಬಹುದು…! ಮನುಷ್ಯನ ಕ್ಲೋನಿಂಗ್ ಮನುಜಕುಲಕ್ಕೇ ಮಾರಕವಾಗುವ ಪ್ರಯೋಗಗಳಲ್ಲೊಂದು,ಅವು ನಡೆಯದಿರಲಿ ಎಂದು ಆಶಿಸೋಣ.ಅಷ್ಟೇ ಅಲ್ಲದೇ ಇಂತಹ ಎಷ್ಟೋ ಸಂಶೋಧನೆಗಳು ಜೈವಿಕ ವ್ಯವಸ್ಥೆಯ ಸಮತೋಲನವನ್ನು ಹಾಳುಗೆಡಹಬಹುದು.ಅದು ನಮ್ಮನ್ನು ವಿನಾಶದ ಕೂಪಕ್ಕೆ ತಳ್ಳಬಹುದು…. ಹಾಗಾಗಿ ಇಂತಹ ಪ್ರಯೋಗಗಳಿಂದ ದೂರವಿರುವುದೇ ಒಳಿತು. ನಮ್ಮ ಸಂಶೋಧನೆಗಳು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಕ್ಯಾನ್ಸರ್ ನಂತಹ ರೋಗಗಳ ಪತ್ತೆಗೆ ಹೊಸ ಹೊಸ ವಿಧಾನಗಳ ಸಂಶೋಧನೆ ಪ್ರಶಂಸನೀಯವೇ.ಆದರೆ,ಒಂದು ಮಾತು ಇವತ್ತಿನ ರೋಗಗಳಿಗೆ ಮೂಲಕಾರಣ ಯಾವುದೇ ಸೂಕ್ಷ್ಮ ಜೀವಿಗಳಲ್ಲ, ಬ್ಯಾಕ್ಟೀರಿಯಾಗಳಲ್ಲ ಬದಲಿಗೆ ನಮ್ಮ ಜೀವನ ಶೈಲಿ,ನಮ್ಮ ಜೀವನ ಶೈಲಿಯೇ ನಮ್ಮ ಜೀವಕ್ಕೆ ಉರುಳಾಗುತ್ತಿದೆ ಎಂಬುದನ್ನು ನಾವೆಲ್ಲ ಮನಗಾಣುವುದು ಯಾವಾಗ?
ಚಿತ್ರಕೃಪೆ :Doug Perrine (naturepl.com)
Intaha samshodhanegalu belakige bandu janasaamanyarige talupalu, eegagalae baeru bittiruva haleya tantrajannada maele hidita saadhisiruva (upyogisuttiruva) dodda dodda antara raashtreeya samsthegalu biduvudilla. Avarige avara vyaparada hitadhrustiyae mukyavagiruttade.