ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 29, 2015

20

ಬಂಗುಡೆ ಫ್ರೈ ಮತ್ತು ಭಗವದ್ಗೀತೆ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ದೇವನೂರು ಮಹಾದೇವವರ್ಷಕ್ಕೋ ಎರಡು ವರ್ಷಕ್ಕೋ ಒಂದು – ಎರಡಲ್ಲ, ಒಂದೇ – ಸಿನೆಮಾ ಕೊಡುತ್ತಿದ್ದ ಹಿಂದಿಯ ರಾಜ್‍ಕುಮಾರ್ ಮೇಲೆ, ನನ್ನ ತಂದೆಗೆ ಕುತೂಹಲ, ಪ್ರೀತಿ, ಹುಚ್ಚು ಅಭಿಮಾನ ಇದ್ದವು. ಹಾಗೆಯೇ, ಬಹುಕಾಲ ಮೌನವಾಗಿದ್ದು ವರ್ಷಕ್ಕೆ ಒಂದೆರಡು ಮಾತು, ಒಂದೆರಡು ಹಾಳೆ ಸಾಹಿತ್ಯ ಬರೆಯುವವರ ಬಗ್ಗೆ ಹೆಚ್ಚಾಗಿ ಜನರಿಗೆ ಕುತೂಹಲ ಇರುತ್ತದೆ. ಇಂಥವರು ಕಾವಿ ತೊಟ್ಟರೆ, ಮಾತಾಡದೆ ಕೂತರೂ ಜಗತ್ಪ್ರಸಿದ್ಧರಾಗುತ್ತಾರೆ! ಇಂತಹ ಮಿತಾಕ್ಷರಿಗಳ ಪಂಥಕ್ಕೆ ಸೇರಿದ ಕನ್ನಡದ ಸಾಹಿತಿ ದೇವನೂರ ಮಹಾದೇವ, ವರ್ಷಕ್ಕೆ ಒಂದು ಭಾಷಣ ಮಾಡಿದರೆ, ಅದರ ಹಿಂದೆ ಹಲವು ದಿನಗಳ ಚಿಂತನೆ ಇರುತ್ತದೆ; ಇರಬೇಕು ಎಂದು ನಾವೆಲ್ಲ ಬಯಸುತ್ತೇವೆ. ಹಾಗೆಯೇ, ಅವರ ಐನೂರು ಪದಗಳೊಂದು ಲೇಖನ ಪ್ರಕಟವಾದರೂ, ಅದರಲ್ಲೇನೋ ಗಹನವಾದ ಸೂತ್ರರೂಪೀ ಸಂಗತಿಗಳು ಅಡಕವಾಗಿರಬಹುದು ಎಂಬ ಪೂರ್ವಗ್ರಹದಿಂದ ಎರಡೆರಡು ಬಾರಿ ಓದಿನೋಡುವ ಸಾಹಿತ್ಯಪ್ರೇಮಿಗಳಿದ್ದಾರೆ. ಹಾಗಾಗಿ ದಿನಕ್ಕೆ ಸಾವಿರ ಪದಗಳನ್ನು ಕುಟ್ಟುವ ನನ್ನಂಥ ಕೈಬಡುಕರಿಗಿಂತ ದೇವನೂರರ ಮೇಲೆ ಹುಟ್ಟುವ ನಿರೀಕ್ಷೆ ದೊಡ್ಡದು. ಅದನ್ನು ನಿಜ ಮಾಡುವ ಆನೆಯಂಥ ಹೊಣೆಗಾರಿಕೆಯೂ ಅವರ ಹೆಗಲ ಮೇಲೆ ಕೂತಿರುತ್ತದೆ.

ಈ ವರ್ಷ, ನಿಯಮ ತಪ್ಪಿ, ದೇವನೂರ ಎರಡು ಸಲ ಮಾತಾಡಿದರು. ಒಮ್ಮೆ, ಪ್ರಶಸ್ತಿ ಯಾಕೆ ವಾಪಸು ಮಾಡುತ್ತಿದ್ದೇನೆ ಎಂದು ಹೇಳಲು ಪತ್ರ ಬರೆಯುವುದರ ಮೂಲಕ. ಇನ್ನೊಮ್ಮೆ, ಮಂಗಳೂರಲ್ಲಿ ನಡೆದ – ಸಾಹಿತ್ಯವೊಂದು ಬಿಟ್ಟು ಮಿಕ್ಕೆಲ್ಲ ಅಪಸವ್ಯಗಳೂ ಇದ್ದ – ಒಂದು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷಭಾಷಣ ಮಾಡುವ ಮೂಲಕ. ಪ್ರಶಸ್ತಿ ವಾಪಸು ಪ್ರಹಸನದ ನಿಜಬಣ್ಣ ಲೋಕಕ್ಕೇ ಗೊತ್ತಾಗಿರುವುದರಿಂದ, ಆ ಸಂದರ್ಭದ ಮಾತುಗಳನ್ನು ಮತ್ತೆ ಕೆದಕುವುದು ಬೇಡ. ನಕಲು ಸಮ್ಮೇಳನದಲ್ಲಿ ಅವರು ಏನು ಹೇಳಿದರು ಎನ್ನುವುದನ್ನು ಮಾತ್ರ ಈ ಲೇಖನದ ಸೀಮಿತ ಚೌಕಟ್ಟಿಗೆ ಎತ್ತಿಕೊಂಡಿದ್ದೇನೆ.

**
ಇತ್ತೀಚೆಗೆ ರಾಮಾಯಣ, ಮಹಾಭಾರತಗಳ ಕಡೆ ನಮ್ಮ ಸಮಕಾಲೀನ ಲೇಖಕರು ಮತ್ತೆಮತ್ತೆ ಹೊರಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚರ್ಚೆಯ ವಿಷಯವಾಗಿರುವುದರಿಂದ ದೇವನೂರ ಕೂಡ ಆ ಎರಡು ಗ್ರಂಥಗಳನ್ನು ಎತ್ತಿಕೊಂಡಿದ್ದಾರೆ. ಮಿದುಳಿಲ್ಲದ ಧ್ವನಿವರ್ಧಕದಂತೆ ತನ್ನನ್ನು ಬಿಂಬಿಸಿಕೊಂಡು ಪ್ರಚಾರ ಪಡೆದ ಭಗವಾನ್‍ಗಿಂತ ಭಿನ್ನ ಧಾಟಿಯಲ್ಲಿ ಮಾತಾಡಿದ್ದರಿಂದ ದೇವನೂರರ ಮಾತುಗಳು – ಒಪ್ಪುವ ಒಪ್ಪದಿರುವ ಪ್ರಶ್ನೆಗಿಂತ, ಕನಿಷ್ಠ ವಿಶ್ಲೇಷಣೆಗೊಳಪಡಿಸಲು ಅರ್ಹವಾಗಿವೆ. ದೇವನೂರ ಬಹುಶಃ ಮೂರು ಪೂರ್ವಗ್ರಹಗಳಿಂದ ತನ್ನ ಮಾತು-ಚಿಂತನೆಗಳನ್ನು ಶುರುಮಾಡುತ್ತಾರೆ ಎಂದು ಕಾಣುತ್ತದೆ. ಒಂದು – ಭಾರತದಲ್ಲಿ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ಪಡೆಯುವುದೇ ದಲಿತರ ದೊಡ್ಡ ಸವಾಲಾಗಿದೆ. ಎರಡು – ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹಲವು ಭಾಗಗಳು ಸರಿಯಿಲ್ಲ, ಮತ್ತು ಈ ಗ್ರಂಥಗಳೇ ಇಂದಿಗೂ ನಮ್ಮನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಆಳುತ್ತಿವೆ. ಮೂರು – ಜಾತಿ ವರ್ಗ ಕಳೆದು ಎಲ್ಲವೂ ಸಮಾನವಾದರೆ ದೇಶದಲ್ಲಿ ಸರ್ವೋದಯವಾಗುತ್ತದೆ. ನಾನು ನನ್ನ ಸುತ್ತಲಿನ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನಷ್ಟೆ ಹಿನ್ನೆಲೆಯಾಗಿಟ್ಟುಕೊಂಡು ದೇವನೂರರ ಮಾತುಗಳ ವಿಶ್ಲೇಷಣೆ ನಡೆಸುವುದು ಸಾಧ್ಯ. ಹಾಗಾಗಿ ಮುಂದಿನ ಎಲ್ಲ ಮಾತುಗಳನ್ನು ಓದುಗರು ತಂತಮ್ಮ ಜಗತ್ತಿನ ಹಿನ್ನೆಲೆಯಲ್ಲಿಟ್ಟು ತಾಳೆ ನೋಡುವುದಕ್ಕೆ ಸ್ವತಂತ್ರರು.

(1) ಕುವೆಂಪು ಎಪ್ಪತ್ತೊಂದು ವರ್ಷಗಳ ಹಿಂದೆ ಹೇಳಿದ ಮಾತುಗಳನ್ನು ಉದ್ಧರಿಸಿ, ಈಗಲೂ ಪರಿಸ್ಥಿತಿ ಹಾಗೆಯೇ ಇದೆ ಎನ್ನುವ ದೇವನೂರರ ಮಾತುಗಳು ಯಾರನ್ನಾದರೂ ದಂಗುಬಡಿಸುವಷ್ಟು ಸಶಕ್ತ ಅಸತ್ಯಗಳು. ಒಂದಾನೊಂದು ಕಾಲದಲ್ಲಿ ದಲಿತರನ್ನು ದೇವಸ್ಥಾನಗಳ ಒಳಗೆ ಬಿಡುತ್ತಿರಲಿಲ್ಲ ಎನ್ನುವ ಮಾತನ್ನು ಸತ್ಯ ಎಂದಿಟ್ಟುಕೊಂಡೇ ವಾದಕ್ಕೆ ಹೊರಡೋಣ. ದಲಿತರು – ಅವರನ್ನು ಗಾಂಧೀಜಿ ಕರೆದದ್ದು ಹರಿಜನರು ಎಂದು – ಸಮಾಜದ ಬೇರೆ ವರ್ಗಗಳಿಂದ ಬಹಿಷ್ಕೃತರಾಗಿದ್ದರು; ಹಳ್ಳಿಯ ಬಾವಿಯಲ್ಲಿ ಅವರು ನೀರು ಸೇದುವಂತಿರಲಿಲ್ಲ; ಅವರಿಗೆ ಬೇರೆಯವರ ಹಬ್ಬ-ಹರಿದಿನಗಳ ಸಂಭ್ರಮಕ್ಕೆ ಆಹ್ವಾನವಿರಲಿಲ್ಲ – ಎಂಬ ಭೂತಕಾಲಕ್ಕಿಂತ ನಾವು ಮುಂದೆ ಹೋಗಿಯೇ ಇಲ್ಲವೆ? ಹರಿಜನರು ದೇವಸ್ಥಾನಕ್ಕೆ ಪ್ರವೇಶಿಸಿದರೆ ಅವರ ಉದ್ಧಾರವಾಯಿತು, ಅವರಿಗೆ ಮೋಕ್ಷ ಸಿಕ್ಕಿತು ಎಂಬ ಮಟ್ಟಕ್ಕೆ ದಲಿತರನ್ನು ದಾರಿ ತಪ್ಪಿಸಿದವರು ಮೋಹನದಾಸ ಗಾಂಧಿ. ಶಾಲೆ ಸೇರಿ ಶಿಕ್ಷಿತರಾಗುವುದು ಮೊದಲ ಆದ್ಯತೆಯಾಗಬೇಕಿದ್ದ ಹೊತ್ತಿನಲ್ಲಿ, ಗಾಂಧಿ ದಲಿತರಿಗೆ ತಮ್ಮ ದೇವರಿಗಿಂತ ಈ ದೇವಸ್ಥಾನಗಳ ಒಳಗಿನ ದೇವರು ಹೆಚ್ಚು ಎತ್ತರದವನು ಎಂಬ ಮಿಥ್ಯೆ ತುಂಬಿದರು. ದಲಿತರು ದೇವಸ್ಥಾನಕ್ಕೆ ಹೊಕ್ಕರೆ ಮಿಕ್ಕೆಲ್ಲ ಅಭಿವೃದ್ಧಿಗಳೂ ತಾನೇ ತಾನಾಗಿ ನಡೆದುಹೋಗುತ್ತವೆ ಎನ್ನುವುದು ಕಟ್ಟಾಧಾರ್ಮಿಕನಾಗಿದ್ದ ಗಾಂಧೀಜಿಯ ಯೋಚನೆಯಾಗಿತ್ತು. ಅದು ತಪ್ಪೆಂದು ಈಗ ಸಾಧಿತವಾಗಿದೆ. ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತು ವರ್ಷಗಳು ಕಳೆದ ಮೇಲೂ ಮಲ್ಲಿಕಾರ್ಜುನ ಖರ್ಗೆಯಂತಹ ಅಹಿಂದ ನಾಯಕ “ಚುನಾವಣೆಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸುವುದು ದಲಿತರನ್ನು ಚುನಾವಣೆಯಿಂದ ದೂರ ಇಡುವ ಪ್ರಯತ್ನ” ಎಂಬ ಮಾತುಗಳನ್ನು ಹೇಳುವ ಪರಿಸ್ಥಿತಿ ನಮ್ಮ ದೇಶದಲ್ಲಿದೆ. ಒಬ್ಬ ದಲಿತನಿಗೆ ಇನ್ನೂ ಹತ್ತನೇ ತರಗತಿ ಕಲಿಯಲು ಸಾಧ್ಯವಾಗದಂಥ (ನೆನಪಿಡಿ – ಹತ್ತನೇ ತರಗತಿಯವರೆಗೆ ಯಾವ ತರಗತಿಯಲ್ಲೂ ಫೇಲು ಮಾಡುವಂತಿಲ್ಲ ಎನ್ನುವುದು ಸರಕಾರದ ಆಜ್ಞೆ) ಪರಿಸ್ಥಿತಿ ಇದೆ ಎಂದರೆ ಅದಕ್ಕೆ ಕಾರಣ ಯಾರು? ತಮ್ಮ ಪರಿಸ್ಥಿತಿ ಹೀಗಿರುವಾಗ ದಲಿತರು ಇನ್ನೂ ಇನ್ನೂ ದೇವಸ್ಥಾನದ ಪ್ರವೇಶವನ್ನೇ ಜೀವನ್ಮರಣದ ಪ್ರಶ್ನೆಯಾಗಿಟ್ಟುಕೊಳ್ಳುವುದರಲ್ಲಿ ಅರ್ಥ ಇದೆಯೇ? ಈಗ ದೇಶದ ಯಾವ ದೇವಸ್ಥಾನದಲ್ಲಿ ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ; ಎಲ್ಲಿ ಅವರ ಪ್ರವೇಶವನ್ನು ತಡೆಹಿಡಿಯಲಾಗಿದೆ ಎಂಬುದನ್ನು ಪತ್ತೇದಾರರನ್ನಿಟ್ಟು ಹುಡುಕಬೇಕಾದೀತು. ದೇಶದ 99.99% ದೇಗುಲಗಳಲ್ಲಿ ಮುಖ್ಯದ್ವಾರ ದಾಟಿ ಒಳಬರುವವರನ್ನು ಯಾರೂ ಜಾತಿ ಕೇಳುವುದಿಲ್ಲ. ತಿರುವನಂತಪುರದ ಪದ್ಮನಾಭಸ್ವಾಮಿ, ಉಡುಪಿಯ ಶ್ರೀಕೃಷ್ಣ, ತಿರುಪತಿಯ ತಿಮ್ಮಪ್ಪ, ಪುರಿಯ ಜಗನ್ನಾಥ, ಕೊಲ್ಲೂರಿನ ಮೂಕಾಂಬಿಕೆ, ಧರ್ಮಸ್ಥಳದ ಮಂಜುನಾಥ – ಈ ಯಾವ ದೇವರೂ ದಲಿತರನ್ನು ನೋಡುವುದಿಲ್ಲ ಎಂದಿಲ್ಲ. ಇಲ್ಲೆಲ್ಲ ದಲಿತರಿರಲಿ ಬ್ರಾಹ್ಮಣರಿರಲಿ ವಿದೇಶೀಯರೇ ಇರಲಿ, ಎಲ್ಲರಂತೆ ಹೋಗಿ ದೇವರಿಗೆ ಕೈಮುಗಿಯುವ ಮುಕ್ತ ಅವಕಾಶವಿದೆ. ತಡೆಹಿಡಿದರೆ ಅದನ್ನೇ ರಾಷ್ಟ್ರೀಯ ಸುದ್ದಿ ಮಾಡುವ ಸೌಕರ್ಯವೂ ತಡೆಯಲ್ಪಟ್ಟವರಿಗೆ ಇದೆ.

ದಲಿತರಷ್ಟು ಬಹುಶಃ ಯಾವ ಜಾತಿಯೂ ಈ ದೇಶದಲ್ಲಿ ರಾಜಕೀಯವಾಗಿ ಬಳಕೆಯಾಗಿಲ್ಲ ಎನ್ನಬೇಕು. ದಲಿತರನ್ನು ಇತ್ತ ಹಾಕಿ ಅವರನ್ನು ಹಿಂದೂ ಜನಾಂಗದ ಉಳಿದವರಿಗೆ ಸರಿಸಮಾನವಾಗಿ ನಿಲ್ಲಿಸಬೇಕೆಂದು ಒಂದು ಪಕ್ಷ ಬಯಸಿದರೆ, ಅತ್ತ ಕಮ್ಯುನಿಷ್ಟ್ ಪಾಳೆಯದ ಮಂದಿ, ಎಲ್ಲರಿಂದ ಶೋಷಣೆಗೊಳಗಾದ ಜನರನ್ನು ಹುಡುಕುತ್ತಿದ್ದಾಗ ಅನಾಯಾಸವಾಗಿ ಸಿಕ್ಕವರೇ ದಲಿತರು. ಹಾಗಾಗಿ ದಲಿತರಿಗೆ ಆಗಿದ್ದ,ಆಗದೇ ಇದ್ದ ದೌರ್ಜನ್ಯಗಳಿಗೆಲ್ಲ ಅವರನ್ನು ಬಲವಂತವಾಗಿ ಬಾಧ್ಯಸ್ಥರನ್ನಾಗಿಸಲಾಯಿತು. ಯಾರು ಏನೇ ಹೇಳಿದರೂ ಹೋರಾಟ ಮಾಡಿ, ಘೋಷಣೆ ಕೂಗಿ ಎಂದು ಕಿವಿಕಚ್ಚಿ ಕಮ್ಯುನಿಸ್ಟರು ಈ ದಲಿತರನ್ನು ಟೈಮ್‍ಬಾಂಬುಗಳಂತೆ ತಯಾರಿಸಿಬಿಟ್ಟರು. ಘೋಷಣೆ ಕೂಗಿದಾಗೆಲ್ಲ ತಾವು ಸುದ್ದಿಯಾಗುತ್ತೇವೆ, ಪತ್ರಿಕೆಗಳಲ್ಲಿ ವರದಿಯಾಗುತ್ತೇವೆ, ಆಳುವ ಪಕ್ಷದವರು ತಮ್ಮ ಯೋಗಕ್ಷೇಮ ವಿಚಾರಿಸುತ್ತಾರೆ ಎನ್ನುವುದು ಗೊತ್ತಾಗುತ್ತಲೆ ದಲಿತರು ಕಮ್ಯುನಿಷ್ಟರ ಮಾತುಗಳಿಗೆ ತಲೆಯಾಡಿಸತೊಡಗಿದರು. ಹಾಗಾಗಿ ಸಂವಿಧಾನಕ್ಕೆ ಒಪ್ಪಿಗೆಯ ಅಂಕಿತ ಒತ್ತಿದ ಅಂಬೇಡ್ಕರರೇ ಹದಿನೈದು ವರ್ಷಗಳ ನಂತರ ಮೀಸಲಾತಿಯನ್ನು ತೆಗೆದುಬಿಡಬೇಕು ಎಂದರೂ ದಲಿತರು ಅದನ್ನು ಮುಂದುವರಿಸಬೇಕೆಂಬ ಹಕ್ಕೊತ್ತಾಯ ಮಾಡಿದರು. ಸಮಾನತೆ ಬರಬೇಕೆಂಬ ಪ್ರಾಮಾಣಿಕ ಕಾಳಜಿಯಿದ್ದರೆ ಮೊದಲು ಮೀಸಲಾತಿಯನ್ನು ತೆಗೆದು ಎಲ್ಲರನ್ನೂ ಒಂದೇ ಸಾಲಿನಲ್ಲಿ ನಿಲ್ಲಿಸಬೇಕಾಗಿತ್ತು. ಸಮಾಜದಲ್ಲಿ ಒಬ್ಬ ಎಲ್ಲರಿಗಿಂತ ಎತ್ತರದವನು ಎನ್ನುವುದು ಹೇಗೋ ಹಾಗೆಯೇ ಒಬ್ಬ ಎಲ್ಲರಿಗಿಂತ ಕೆಳಗಿನವನು; ಅವನ ಮೌಲ್ಯಮಾಪನಕ್ಕೆ ಬೇರೆಯದೇ ಮಾಪನಗಳನ್ನು ಬಳಸೋಣ ಎನ್ನುವುದೂ ಅಪಾಯಕಾರಿಯೇ. ಹಾಗಾಗಿ ಮೀಸಲಾತಿ ಎಂದಿನವರೆಗೆ ಇರುತ್ತದೋ ಅಲ್ಲಿನವರೆಗೆ ದಲಿತರು ಉದ್ಧಾರವಾಗುವ ಕನಸುಗಳನ್ನು ಕಾಣಲಾರರು.

ರಾಜಕಾರಣಿಗಳು ಬಳಸಿಕೊಂಡಂತೆಯೇ ದಲಿತ ನಾಯಕರೆಂದು ತಮ್ಮನ್ನು ಬಿಂಬಿಸಿಕೊಂಡವರೂ ದಲಿತರನ್ನು ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ದಲಿತ ನಾಯಕನಿಗೆ ಆತನ ಪಂಗಡದ ಉಳಿದ ಮಂದಿ ಹೆರವರ ಜತೆ ಸರ್ವಸಮಾನತೆ ಸಾಧಿಸುವವರೆಗಷ್ಟೇ ನಾಯಕನೆಂಬ ಸ್ಥಾನವಿರುತ್ತದೆ. ಇದು ಆತನಿಗೂ ಚೆನ್ನಾಗಿ ಗೊತ್ತು. ಹಾಗಾಗಿ, ದಲಿತರ ಸಮಸ್ಯೆಗಳು ಎಂದೆಂದೂ ಸಮಸ್ಯೆಗಳೇ ಆಗಿ ಉಳಿಯಲು ಏನೆಲ್ಲ ತಂತ್ರಗಳನ್ನು ಹೆಣೆಯಬೇಕೋ ಅವೆಲ್ಲವನ್ನೂ ಆತ ಮುಲಾಜಿಲ್ಲದೆ ಮಾಡುತ್ತಾನೆ. ಈ ದಲಿತ ನಾಯಕರು, ದೇಗುಲ ಪ್ರವೇಶವನ್ನು ತಮ್ಮ ಅಜೆಂಡಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇಟ್ಟುಕೊಂಡಿದ್ದಾರೆ. ದೇವಸ್ಥಾನ ಪ್ರವೇಶಿಸಿ ದಲಿತರಿಗೆ ಏನು ಲಾಭ ಆಯಿತು? ಅತ್ತ ದೇವರನ್ನೇ ನಂಬಬೇಡ ಎನ್ನುವ ಕೆಂಪು ಬಾವುಟದ ಪಕ್ಷದವರು ಎಳೆದರೆ ಅತ್ತ ಹೋಗುವ, ಇತ್ತ ದೇಗುಲ ಪ್ರವೇಶಿಸುವ ಕ್ರಾಂತಿ ಮಾಡಲು ಇತ್ತ ಬರುವ ಆಟದಿಂದ ತಮ್ಮ ಅಸ್ಮಿತೆಯೇ ಹೊರಟುಹೋಗಿದೆ ಎಂಬುದು ದಲಿತರಿಗೆ ಅರಿವಾಗಿದೆಯೆ? ಇವರು ಒಂದು ಕಾಲದಲ್ಲಿ ಚೌಡಮ್ಮ, ಮಾರಮ್ಮನಂಥ ಅವೈದಿಕ ದೇವರುಗಳನ್ನು ನಂಬುತ್ತಿದ್ದರು. ಆ ದೇವರಿಗೆ ಗುಡಿ ಕಟ್ಟಿಸಿಕೊಂಡಿದ್ದರು. ತಮ್ಮೊಳಗಿನವನನ್ನೇ ಅರ್ಚಕನಾಗಿ ಆರಿಸಿಕೊಳ್ಳುತ್ತಿದ್ದರು. ಆದರೆ ಗಾಂಧಿಯ ತಪ್ಪುನಡೆಯಿಂದಾಗಿ ಅವರು ತಮ್ಮ ದೈವದೇವರುಗಳನ್ನು ಬದಿಗಿಟ್ಟು ವೈದಿಕದೇವರನ್ನು ಕಾಣಲು ತವಕ ಪಡುವಂತಾಯಿತು! ಅಶಿಕ್ಷಿತರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಮಾರ್ಗದಲ್ಲಿ ಜನ ಹುಡುಕುತ್ತಿದ್ದ ಕಮ್ಯುನಿಸ್ಟರು ದಲಿತರನ್ನು ತಮ್ಮ ಪಂಗಡದೊಳಗೆ ಸೇರಿಸಿಕೊಂಡು ನಾಸ್ತಿಕವಾದದ ಬೀಜ ಬಿತ್ತಿದರು. ನಡುವೆ ಒಂದಷ್ಟು ಜನ ನಮ್ಮ ದೇವರು ಬುದ್ಧ ಎಂದು ಆ ಕಡೆ ನಡೆದರು. ಈ ಗೊಂದಲ ಈಗಲೂ ಇವರಲ್ಲಿ ಉಳಿದಿದೆ. ದಲಿತರನ್ನು ದೇವರ ಗುಡಿಗೆ ಹೊಗಿಸಿದರೆ ಎಲ್ಲ ಸಮಸ್ಯೆಯೂ ಶಾಶ್ವತವಾಗಿ ಪರಿಹಾರವಾಗುತ್ತದೆಂದು ಗಾಂಧಿ ಭಾವಿಸಿದಂತೆಯೇ ಅಂಬೇಡ್ಕರ್, ಸರ್ವಸಮಾನತೆ ಇರುವ ಮತಕ್ಕೆ ಮತಾಂತರವಾದರೆ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ಭಾವಿಸಿ ಬೌದ್ಧಮತಕ್ಕೆ ಹೋದರು. ಹೀಗೆ ಹತ್ತುಕಡೆ ಹರಿದುಹೋದ ಜನರಾಗಿ, ತಮ್ಮ ಸ್ಥಿತಿಗೆ ಉತ್ತರ ಕಾಣದೆ ವ್ಯಗ್ರರಾಗುವ ಬಂಡಾಯದ ಕುಡಿಗಳಾಗಿ, ಗಮ್ಯ ತಿಳಿಯದೆ ಹರಿವ ಪ್ರವಾಹವಾಗಿ, ಒಡೆದ ಕನ್ನಡಿಯ ನೂರು ಬಿಂಬಗಳಾಗಿ ದಲಿತರು ಉಳಿದಿದ್ದಾರೆ. ಸರಿಯಾದ ಶಿಕ್ಷಣ, ಗೊಂದಲಗಳನ್ನು ಇನ್ನಷ್ಟು ಹುಟ್ಟಿಸದೆ ಇರುವವುಗಳನ್ನು ಪರಿಹರಿಸುವ ಶಿಕ್ಷಣ, ಛಪ್ಪನ್ನಾರು ಸಿದ್ಧಾಂತಗಳನ್ನು ತುಂಬಿಸಿ ತಲೆಯನ್ನು ಹೊಗೆಗೂಡು ಮಾಡದ ಶಿಕ್ಷಣ ಮಾತ್ರ ಅವರನ್ನು ಈ ಗೊಂದಲದಿಂದ ಹೊರಹಾಕಬಲ್ಲುದು. ಹಾಗಾಗಿ, ದೇವನೂರ ಮಹಾದೇವರು ದೇಗುಲ ಪ್ರವೇಶಿಸಲು ಸಾಧ್ಯವಾಗದ್ದಕ್ಕೆ ದಲಿತರು ತ್ರಿಶಂಕುಗಳಾಗಿದ್ದಾರೆ ಎಂಬರ್ಥದ ಮಾತುಗಳನ್ನು ಹೇಳುವುದು ಬಾಲಿಶವಾಗುತ್ತದೆ.

(2) ಎರಡನೆಯದಾಗಿ,ರಾಮಾಯಣ ಮತ್ತು ಭಗವದ್ಗೀತೆಗಳು ಇನ್ನೂ ನಮ್ಮ ಸಾಹಿತಿಗಳ ಚರ್ಚೆಯ ಆದ್ಯತೆಯಾಗಿದೆ ಎನ್ನುವುದು ತಮಾಷೆ, ಅಷ್ಟೇ ವಿಷಾದದ ಸಂಗತಿ. ದೇವನೂರ, ಪ್ರಾಚೀನ ಕಾವ್ಯಗಳನ್ನು ಸೋಸಿ ಚಿನ್ನವನ್ನಷ್ಟೇ ತೆಗೆಯಬೇಕು ಎಂಬ ಮಾತಾಡಿದ್ದಾರೆ. “ವಾಲ್ಮೀಕಿ ಸ್ವತಃ ಕೆಳಜಾತಿಯವನು. ಅವನು ಶಂಭೂಕನನ್ನು ಕೊಲ್ಲುವಂತೆ ರಾಮನನ್ನು ಚಿತ್ರಿಸಿಯಾನೇ ಎಂಬುದನ್ನೂ ನಾವು ಯೋಚಿಸಿಲ್ಲ” ಎಂದಿದ್ದಾರೆ ದೇವನೂರ. ಆದರೆ, ವಾಲ್ಮೀಕಿ ಶೂದ್ರನಾಗಿದ್ದೂ ಸಂಸ್ಕೃತದ ಅತ್ಯುನ್ನತ ಮಹಾಕಾವ್ಯವನ್ನು ಬರೆದನಲ್ಲ ಎಂಬುದನ್ನೂ ಯೋಚಿಸಿದರೆ ತನ್ನ ವರ್ಣಾಶ್ರಮ ಸಿದ್ಧಾಂತ ಮಕಾಡೆ ಬೀಳುವುದರಿಂದ, ಅವರು ಅಲ್ಲಿಯವರೆಗೆ ಯೋಚಿಸುವ ತಲೆನೋವು ತೆಗೆದುಕೊಂಡಿಲ್ಲ. ರಾಮಾಯಣದಂತಹ ಕೃತಿಯನ್ನು ಯಾವ ದೃಷ್ಟಿಯಿಂದ ನೋಡಬೇಕು ಎಂಬ ಪ್ರಶ್ನೆಯೊಂದಿಗೆ ಈ ಚರ್ಚೆಗೆ ನಾವು ತೆರೆದುಕೊಳ್ಳುವುದು ಒಳ್ಳೆಯದು. ದೇವನೂರರನ್ನೂ ಸೇರಿಸಿಕೊಂಡು, ಇತ್ತೀಚೆಗೆ ಈ ಕೃತಿಯ ಕುರಿತು ಚರ್ಚೆ ಮಾಡುವವರು ಅದನ್ನೊಂದು ಕಾವ್ಯವೆಂದು ಪರಿಗಣಿಸುತ್ತಿಲ್ಲ ಎಂಬುದನ್ನು ನಾವು ಗಮನಿಸಬೇಕು. ಎಲ್ಲರೂ ಅದೊಂದು ಕಮಾಂಡ್‍ಮೆಂಟ್ ಪುಸ್ತಕ; ಅದು ಈ ದೇಶದ ಮೂಗುದಾರ ಹಿಡಿದಿರುವ ನಿಯಂತ್ರಕ; ಇಡೀ ದೇಶ ರಾಮಾಯಣಕ್ಕೆ ತಕ್ಕಂತೆಯೇ ನಡೆಯುತ್ತಿದೆ ಎಂದು ಭಾವಿಸಿದಂತಿದೆ. ರಾಮ ಶಂಭೂಕನನ್ನು ಕೊಂದದ್ದರಿಂದಾಗಿ, ಈ ದೇಶದಲ್ಲಿ ಪ್ರತಿದಿನ ದಲಿತರ ಮಾರಣಹೋಮ ನಡೆಯುತ್ತಿದೆ ಎಂದು ಇವರು ನಂಬಿದ್ದಾರೆ. ಶಂಭೂಕನನ್ನು ಕೊಂದ ರಾಮನೇ ವನವಾಸಕ್ಕೆ ಹೊರಟಾಗ ನಿಷಾದರವನ ಮನೆಯಲ್ಲಿ ಉಳಿದುಕೊಂಡು ಆತಿಥ್ಯ ಸ್ವೀಕರಿಸುತ್ತಾನೆ. ಸೀತೆಯನ್ನು ಅಗ್ನಿಪ್ರವೇಶಕ್ಕೆ ನೂಕುವ ಅದೇ ಶ್ರೀರಾಮ ಕೈಕೆಯಿಯ ಮಾತಿಗೆ ಬೆಲೆಕೊಟ್ಟು ಹದಿನಾಲ್ಕು ವರ್ಷಗಳ ವನವಾಸಕ್ಕೆ ಹೋಗುತ್ತಾನೆ. ವಾಲಿಯನ್ನು ಕೊಲ್ಲುತ್ತಾನೆ; ಸುಗ್ರೀವನನ್ನು ಆದರಿಸುತ್ತಾನೆ. ರಾವಣನನ್ನು ಸಂಹರಿಸುತ್ತಾನೆ, ವಿಭೀಷಣನಿಗೆ ಪಟ್ಟ ಕಟ್ಟುತ್ತಾನೆ. ಇಂಥ ವೈರುಧ್ಯಗಳನ್ನು ರಾಮಾಯಣವೊಂದೇ ಏಕೆ ಭಾರತದ ಎಲ್ಲ ಪ್ರಾಚೀನ ಕಾವ್ಯಗಳಿಂದಲೂ ಹೆಕ್ಕಿ ತೋರಿಸಬಹುದು. ರಾವಣ ದ್ರಾವಿಡನಾಗಿದ್ದ; ಹಾಗಾಗಿ ಆತನನ್ನು ಆರ್ಯಕುಲದ ರಾಮ ಕೊಂದ ಎಂಬ ಎಡಬಿಡಂಗಿ ವಾದಗಳು ಇಂಥ ವೈರುಧ್ಯಗಳನ್ನು ಒಂದಷ್ಟು ಕಲೆಹಾಕಿದ್ದರೆ ಬರುತ್ತಲೇ ಇರಲಿಲ್ಲ. ಹಾಗಿರುವಾಗ ಶಂಭೂಕನನ್ನು ರಾಮ ಕೊಂದ ಕತೆ ಬುದ್ಧಿಜೀವಿಗಳಿಗೆ, ದೇವನೂರರಂಥ ಸಾಹಿತಿಗಳಿಗೆ ಯಾಕೆ ಮುಖ್ಯವಾಗಬೇಕು?

ಪ್ರಾಚೀನ ಕೃತಿಗಳನ್ನು ನಾವು ದೂರ ತಳ್ಳಬಾರದು; ಅವುಗಳನ್ನೂ ನಮ್ಮವಾಗಿಸಿಕೊಳ್ಳಬೇಕು ಎಂಬ ಮಾತುಗಳನ್ನು ಹೇಳುವ ಮೂಲಕ ದೇವನೂರ ತನ್ನ ಓರಗೆಯ ಬುದ್ಧಿಜೀವಿಗಳಿಗಿಂತ ಒಂದಿಷ್ಟಾದರೂ ಪಕ್ಕಕ್ಕೆ ಸರಿದು ನಿಂತಿದ್ದಾರೆ. ಇವರಿಗೆಲ್ಲ ತಮ್ಮ ಪಂಗಡದ ಕುವೆಂಪು ರಾಮಾಯಣ, ಮಹಾಭಾರತಗಳನ್ನು ನೆಚ್ಚಿಕೊಂಡದ್ದು; ಮಹಾಕಾವ್ಯ ಬರೆದದ್ದು ನುಂಗಲಾರದ ತುತ್ತಾಗಿದೆಯೇನೋ. ದೇವನೂರರಿಗೂ ಈ ಕಹಿ ಇರುವುದು ಅಷ್ಟಿಷ್ಟಲ್ಲ. ಹಾಗಾಗಿ ಮಹಾಭಾರತದ ಬಗ್ಗೆ ಕುವೆಂಪು ಬರೆದ ನೂರಾರು ಪುಟಗಳನ್ನು ಪಕ್ಕಕ್ಕಿಟ್ಟು “ಈ ಭಗವದ್ಗೀತೆಯನ್ನು ಅದ್ಯಾರೋ ಹಾರುವನೇ ಬರೆದಿರಬೇಕು” ಎಂಬ ಮಾತನ್ನು ಮಾತ್ರ ಎತ್ತಿಕೊಂಡಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುವಂತಿದೆ. ಈ ಬುದ್ಧಿಜೀವಿಗಳ ವಾದಗಳು ಅದೆಷ್ಟು ಪೇಲವವಾಗಿವೆಯೆಂದರೆ, ಇವರು ವಾಲ್ಮೀಕಿ ಮತ್ತು ವ್ಯಾಸರು ಕೆಳಜಾತಿಯವರು ಎನ್ನುವುದನ್ನು ಒಪ್ಪುತ್ತಾರೆ. (ಒಪ್ಪುತ್ತಾರೆ ಏನು, ಅವರನ್ನೇ ತಮ್ಮ ಜಾತಿನಾಯಕ ಕೂಡ ಮಾಡಿಕೊಂಡಿದ್ದಾರೆ!) ಹೀಗೆ ಭಾರತದ ಮಹಾಕಾವ್ಯಗಳನ್ನು ಬರೆದ ಈರ್ವರೂ ಕೆಳಜಾತಿಯವರೇ ಆದರೂ ಅವರು ಸಂಸ್ಕೃತದಲ್ಲಿ ಬರೆದರು ಎನ್ನುವುದನ್ನು ಯಾಕೋ ಇವರು ಕಷ್ಟದಲ್ಲಿ ಒಪ್ಪಿಕೊಂಡಂತೆ ಕಾಣುತ್ತದೆ. ಭಾರತದಲ್ಲಿ ವರ್ಣಾಶ್ರಮ ಇತ್ತು ಎನ್ನುವ ದೇವನೂರ ಕೂಡ ವಾಲ್ಮೀಕಿ ಹೇಗೆ ಮಹರ್ಷಿಯಾದ ಎನ್ನುವುದನ್ನು ಹೇಳಲಾರರು. ವಾದದ ಸಲುವಾಗಿ, ವರ್ಣಾಶ್ರಮ ವ್ಯವಸ್ಥೆ ಇತ್ತೆಂದೇ ಒಪ್ಪಿಕೊಳ್ಳೋಣ. ಆಗ, ಇನ್ನೂ ಹನ್ನೆರಡು ತುಂಬದ ಬಾಲಕ ರಾಮನನ್ನು ಕಾಡಿಗೆ ಕರೆದೊಯ್ದು “ಋಷಿಗಳಿಗೆ ರಕ್ಷಣೆ ಒದಗಿಸು” ಎಂದು ವಿಶ್ವಾಮಿತ್ರರು ಹೇಳುವ ಕತೆಯೂ ರಾಮಾಯಣದಲ್ಲೇ ಇದೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ವರ್ಣಾಶ್ರಮ ವ್ಯವಸ್ಥೆಯ ತುತ್ತತುದಿಯಲ್ಲಿದ್ದ ಬ್ರಾಹ್ಮಣರಿಗೆ ಕಾಡಿನ ಮಧ್ಯೆ ಗುಡಿಸಲು ಕಟ್ಟಿಕೊಳ್ಳಬೇಕಾದ ಅವಸ್ಥೆ ಏಕೆ ಬಂತು ಎಂಬ ಪ್ರಶ್ನೆ ದೇವನೂರರಿಗೆ ಬಂದಂತಿಲ್ಲ. ತ್ರೇತಾಯುಗದ ಕ್ಷತ್ರಿಯ ರಾಮನನ್ನು ಕಲಿಯುಗದ ಬುದ್ಧಿಜೀವಿಗಳು ಅದೆಂತೋ ವರ್ಣಾಂತರ ಮಾಡಿ ಬ್ರಾಹ್ಮಣನನ್ನಾಗಿ ಮಾಡಿದರಲ್ಲ, ಇದು ಎಂಟನೆಯ ಅದ್ಭುತ!

ಮಹಾಕಾವ್ಯಗಳನ್ನು ಸೋಸಿ ಅಪರಂಜಿ ಚಿನ್ನವನ್ನು ಮಾತ್ರ ಇಳಿಸಿಕೊಳ್ಳಬೇಕೆಂಬ ಮಾತು ಸ್ವಾಗತಾರ್ಹ. ಈ ಸೋಸುವ, ಗಣಿಗಾರಿಕೆ ಮಾಡುವ ಕೆಲಸಕ್ಕೆ ಯಾರು ತಡೆಯೊಡ್ಡಿದ್ದಾರೆ ಎನ್ನುವುದು ಮಾತ್ರ ಅಸ್ಪಷ್ಟ. ಕನಿಷ್ಠ ಎರಡು ಸಾವಿರ ವರ್ಷಗಳಿಂದಲೂ ರಾಮಾಯಣ, ಮಹಾಭಾರತಗಳು ಭಾರತದಲ್ಲಿ ಹತ್ತಲ್ಲ ನೂರಲ್ಲ ಸಾವಿರ ಸಂಖ್ಯೆಯಲ್ಲಿ ಹೊಸದಾಗಿ ಬರೆಯಲ್ಪಟ್ಟಿವೆ. ಈ ಕಾವ್ಯಗಳ ಒಂದೊಂದೇ ಪಾತ್ರಗಳನ್ನು ಹಿಗ್ಗಿಸಿ ಬೆಳೆಸಿ ತಿರುಚಿ ಹೊಸ ಕೃತಿಗಳು ಬಂದಿವೆ. ರಾಮನಲ್ಲ; ರಾವಣನೇ ನಾಯಕ ಎಂದು ಕಂಬನ್ ಬರೆದಾಗಲೂ ಅದನ್ನು ನಾವು ವಿರೋಧಿಸಿದವರಲ್ಲ! ಹಾಗಿರುವಾಗ ಈ ಕಾವ್ಯಗಳನ್ನು ಪ್ರತಿಭೆಯ ಮೂಸೆಯಲ್ಲಿ ಅದ್ದಿತೆಗೆಯಲು ಏಕೆ ಸಂಕೋಚ? ಸಂಸ್ಕೃತ ಬರದೆ ಅರ್ಧಕ್ಕೆ ಓದು ನಿಲ್ಲಿಸಬೇಕಾದ ಪ್ರಮೇಯವೇನೂ ಇಲ್ಲ. ರಾಮಾಯಣ, ಮಹಾಭಾರತಗಳ ಜೊತೆಗೆ ಭಗವದ್ಗೀತೆಯನ್ನು ಅಚ್ಚಕನ್ನಡದಲ್ಲಿ ಅಕ್ಷರಶಃ ಅನುವಾದಿಸಿಯೂ ಹಲವು ಕೃತಿಗಳು ಬಂದಿವೆಯಲ್ಲ! ಬುದ್ಧಿಜೀವಿಗಳ ಪವಿತ್ರಗ್ರಂಥವಾದ ಸಂವಿಧಾನಕ್ಕೇ ನೂರೆಂಟು ತಿದ್ದುಪಡಿಗಳು ಬರೆಯಲ್ಪಟ್ಟಿರುವಾಗ, ವಾರಸುದಾರರಿಲ್ಲದ ಮಹಾಕಾವ್ಯಗಳನ್ನು ತಿರುಚಿ ಸೋಸಿ ಹೊಸದನ್ನು ಬರೆಯಲು ದೇವನೂರರಿಗೆ ಯಾರ ಅಡ್ಡಿ?! “ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಮಿರಿವ ಚಿನ್ನದದಿರು. ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ ಇನ್ನಾದರೂ ಕೊಂಚ ಕಲಿಯಬೇಕು” ಎಂಬ ಅಡಿಗರ ಕವಿತೆಯ ಸಾಲುಗಳನ್ನೇ ದೇವನೂರ ಮಾತಿನಲ್ಲಿ ಹೇಳಿದ್ದಾರೆ ಎಂದು ಭಾವಿಸೋಣವೇ? ದೇವನೂರರ ಮಾತಿನಲ್ಲಿ ನಿಜಕ್ಕೂ ಆ “ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು” ಎಂಬ ತುಡಿತ, ಪ್ರಾಮಾಣಿಕತೆ ಇದೆಯೆ? ಅಥವಾ ಇವರು ಸಮಾಜದಲ್ಲಿ ಇನ್ನಷ್ಟು ಮತ್ತಷ್ಟು ಮುಳ್ಳಿನ ಬೇಲಿಗಳನ್ನೆಳೆಯಲು ಪ್ರಾಚೀನ ಕಾವ್ಯಗಳನ್ನು ಬಗೆಯಬೇಕು ಎಂದು ಹೇಳುತ್ತಿದ್ದಾರೆಯೇ? ರಾಮಾಯಣವೆಂದರೆ ಶಂಭೂಕ; ಭಗವದ್ಗೀತೆಯೆಂದೊಡನೆ ಚಾತುರ್ವರ್ಣ ಎಂದಷ್ಟೇ ಕಾಣುವ ಈ ಸಂಕುಚಿತಕಣ್ಣುಗಳಿಗೆ ಕುವೆಂಪು ಕಂಡ ವಿಶಾಲ ಕಾವ್ಯಹೃದಯ ಕಂಡೀತೇ? ಅನುಮಾನ. ಅದೇನೇ ಇದ್ದರೂ, ಇವರು ಹೀಗೆ ಕಾವ್ಯಗಳಿಂದ ಚಿನ್ನವನ್ನು ತೆಗೆದು ತೊಡಿಸುವುದಾದರೂ ಯಾರಿಗೆ ಎಂಬ ಪ್ರಶ್ನೆ ಬರುತ್ತದೆ. ಯಾಕೆಂದರೆ ಬ್ರಾಹ್ಮಣರನ್ನು ದ್ವೇಷಿಸುವ ಭರದಲ್ಲಿ, ಶೂದ್ರರು ಬರೆದ ಕ್ಷತ್ರಿಯರ ಕತೆಗಳಿರುವ ಮಹಾಕಾವ್ಯಗಳನ್ನು ಬದಿಗಿಟ್ಟ ಜನಾಂಗಕ್ಕೆ ದೇವನೂರ ಅಥವಾ ಅವರಂತೆ ಯೋಚಿಸುವವರ “ಪುರಾಣಗಳಿಂದ ಸೋಸಿ ತೆಗೆದ ಚಿನ್ನ” ಬೇಕಾಗಿದೆಯೆ? ಅದನ್ನು ಅವರು ಸ್ವೀಕರಿಸುತ್ತಾರೆಯೇ? ದೇವನೂರರೇ ತನ್ನ ಮಾತಿಗೆ ಬದ್ಧನಾಗಿ ಪುರಾಣಗಳಿಂದ ಚಿನ್ನ ಸೋಸಿ ಕತೆಗಳನ್ನೋ ಕಾದಂಬರಿಯನ್ನೋ ಬರೆದರೆ ಅವರೂ ಬ್ರಾಹ್ಮಣದ್ವೇಷಿ ಬುದ್ಧಿಜೀವಿಗಳ ವಲಯದಿಂದ ಬಹಿಷ್ಕೃತರಾಗುವ ಸಂಭವವಿದೆ!

(3) ಮೂರನೆಯದಾಗಿ, ದೇವನೂರರು ಎಲ್ಲ ಜಾತಿಗಳೂ ಸಮಾನತೆಯ ಸುಖ ಕಾಣಬೇಕು ಎಂದು ಬಯಸುತ್ತಾರೆ. ಆದರ್ಶ ಕಲ್ಪನೆಯೇ. ಆದರೆ ಜಾತಿಗಳ ಮಾತು ಬಿಟ್ಟುಬಿಡಿ; ಕೇವಲ ಒಂದೇ ಜಾತಿಯೊಳಗಿನ ವ್ಯಕ್ತಿಗಳೂ ಅಭಿಪ್ರಾಯ ಭೇದದಿಂದ ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬುದ್ಧಿಜೀವಿಗಳು ತಮ್ಮದೇ ಪಂಗಡದ ಲೇಖಕರನ್ನು ನುಡಿಸಿರಿಗೆ ಹೋಗದಂತೆ ಹೇಗೆ ತಡೆದರು, ಎಷ್ಟೆಲ್ಲ ಪ್ರೇಮಪತ್ರಗಳನ್ನು ಬರೆದು ಅಂಗಲಾಚಿದರು ಎನ್ನುವುದನ್ನು ನಾವು ನೋಡಿದ್ದೇವೆ. ಕೊನೆಗೆ ಪ್ಯಾರಡಿ ಸಿನೆಮಾಗಳಂತೆ, ನುಡಿಸಿರಿಯನ್ನು ಅನುಸರಿಸಿ ತಮ್ಮ ಸಮ್ಮೇಳನವನ್ನು ಇಟ್ಟುಕೊಂಡು ನಿಟ್ಟುಸಿರು ಬಿಟ್ಟ ಜನಕ್ಕೆ ಸಮಾನತೆಯ ಬಗ್ಗೆ ಪಾಠ ಮಾಡುವ ಯಾವ ನೈತಿಕತೆಯೂ ಉಳಿದಿಲ್ಲ. ಇಂಥ ಸಂಕುಚಿತ ಮನಸ್ಥಿತಿಯವರು ಆಯೋಜಿಸಿದ ಕಾರ್ಯಕ್ರಮದ ವೇದಿಕೆಯಲ್ಲೇ ನಿಂತು, ನಾವೆಲ್ಲ ಒಗ್ಗೂಡಬೇಕು; ಸಮಾನತೆ ಸಾಧಿಸಬೇಕು ಎಂದು ದೇವನೂರ ಕರೆಕೊಡುವುದು ಕಸಾಯಿಖಾನೆಯಲ್ಲಿ ಅಹಿಂಸೆಯ ಪಾಠ ಮಾಡಿದಂತೆ ಹಾಸ್ಯಾಸ್ಪದ! ಈ ಸಮಾಜದಲ್ಲಿ ನಿಜವಾಗಿಯೂ ಅಸಮಾನತೆ ಇರುವುದು ಎಲ್ಲಿ? ಎಲ್ಲ ಶಿಕ್ಷಣಸಂಸ್ಥೆಗಳಲ್ಲಿ ಮೀಸಲಾತಿ ಇದೆ; ಉದ್ಯೋಗದಲ್ಲಿ ಮೀಸಲಾತಿ ಇದೆ. ಹಾಗಿರುವಾಗ ಯಾರು ಯಾರನ್ನು ತುಳಿಯುತ್ತಿದ್ದಾರೆ? ದಲಿತರು ಇಂದು ತಾವೂ ತಮ್ಮ ಕಾಲಿನ ಮೇಲೆ ದೃಢವಾಗಿ ನಿಲ್ಲುವ ಮಟ್ಟಕ್ಕೆ ಬಂದಿದ್ದಾರೆ. ಕಾರ್ಪೊರೇಟ್ ಕಂಪೆನಿಗಳಲ್ಲಂತೂ ಅಕ್ಕಪಕ್ಕದ ಸಹೋದ್ಯೋಗಿಗಳ ಜಾತಿ-ಮತ ಯಾವುದು ಯಾರಿಗೂ ತಿಳಿದಿರುವುದಿಲ್ಲ. ದೇವಸ್ಥಾನಗಳಿಗೆ ಎಲ್ಲರೂ ಹೋಗಿಬರುತ್ತಾರೆ. ಮದುವೆ-ಮುಂಜಿಯ ಸಮಾರಂಭಗಳಿಗೆ ಎಲ್ಲ ಜಾತಿಯ ಆಮಂತ್ರಿತರೂ ಹೋಗಿ ಉಣ್ಣುತ್ತಾರೆ. ಜಾತಿವೈಷಮ್ಯದ ಕುಲುಮೆ ಎಂದೇ ಬುದ್ಧಿಜೀವಿಗಳು ಬಿಂಬಿಸುತ್ತಿರುವ ಕರಾವಳಿಯಲ್ಲಿ ಕೂಡ ಬ್ರಾಹ್ಮಣ, ಬಿಲ್ಲವ, ಮೊಗವೀರ, ದಲಿತ, ಬಂಟ ಸುಮುದಾಯಗಳ ನಡುವೆ ಕತ್ತಿ ಹಿರಿದು ಅಂಕದ ಕೋಳಿಗಳಂತೆ ಕಾದಾಡುವ ಪರಿಸ್ಥಿತಿಯಿಲ್ಲ. ಹಾಗಾದರೆ ದೇವನೂರ ಯಾವ ಸಮಾನತೆಯ ಬಗ್ಗೆ ಮಾತಾಡುತ್ತಿದ್ದಾರೆ? ಇಂದು ನಿಜವಾಗಿಯೂ ಸಮಾನತೆಯ ದಾರಿ ಬಿಟ್ಟು ದೂರ ಹಾರಿರುವ ಮಡಿಬೆಕ್ಕುಗಳು ಯಾರು? ಜಾತಿಗಳೇ ಇಲ್ಲದ ಸಮಾಜ ಊರಿನೆಲ್ಲರೂ ಸತ್ತು ಮಲಗಿದ ಗೋರಿಗಳಿರುವ ಸ್ಮಶಾನಕ್ಕಿಂತ ಬೇರೆ ಬಗೆಯಲ್ಲಿರುವುದು ಸಾಧ್ಯವಿಲ್ಲ. ಎಲ್ಲ ಜಾತಿಗಳಿಂದ ದಲಿತರನ್ನು ಹೊರತರಲು ಹೋಗಿ ಅವರನ್ನು ಎಡಬಿಡಂಗಿ ಸ್ಥಿತಿಯಲ್ಲಿ ನಿಲ್ಲಿಸಿದ್ದೇ ಬುದ್ಧಿಜೀವಿಗಳ ಇದುವರೆಗಿನ ಬಹುದೊಡ್ಡ ಸಾಧನೆಯಾಗಿರುವಾಗ, ಮತ್ತೆಮತ್ತೆ ಎಲ್ಲ ಜಾತಿಗಳನ್ನು ಸವರಿಹಾಕಿ ಏಕಮತ ವ್ಯವಸ್ಥೆ ತರುವ ಹುಚ್ಚು ಯಾಕೆ?

**
ಒಟ್ಟಿನಲ್ಲಿ ದೇವನೂರರು ಮಾತಾಡಿದ್ದಾರೆ. ಬಹುಪಾಲು ಮೌನಿಯೇ ಆಗಿರುವ ಈ ಮನುಷ್ಯ ಮಾತಾಡಿದರು ಎನ್ನುವುದೇ ಸಂಭ್ರಮ. ಆದರೆ ಅವರ ಮಾತಿನ ಅಂತರಾರ್ಥವನ್ನು ಒಡೆದುನೋಡುವ ಕೆಲಸವನ್ನು ಇದುವರೆಗೆ ಯಾರೂ ಮಾಡಿರಲಿಲ್ಲವಾದ್ದರಿಂದ ಅವರ ವೈಚಾರಿಕ ಗೊಂದಲಗಳ ಕಡೆ ನಾವು ಗಮನ ಹರಿಸಿರಲಿಲ್ಲ. ಆದರೆ ಈ ಬಾರಿಯ ಭಾಷಣದಲ್ಲಿ ಮಾತ್ರ ದೇವನೂರ ಮಹಾದೇವರು ಶುರುವಿನಿಂದ ಕೊನೆಯವರೆಗೂ ಗೊಂದಲದಲ್ಲೇ ಮಾತಾಡಿದರು. “ಮಾನವೀಯತೆ ತೋರಿಸಿ ನನ್ನನ್ನು ಬಿಟ್ಟುಬಿಡಿ” ಎಂದು ಅವರು ಕೇಳಿಕೊಂಡರೂ ಬಲಾತ್ಕಾರವಾಗಿ ಎಳೆದುತಂದು ವೇದಿಕೆಯಲ್ಲಿ ನಿಲ್ಲಿಸಿದ್ದೂ ಇದಕ್ಕೆ ಕಾರಣವಿರಬಹುದು. ದೇವನೂರ ತನ್ನ ಎಂದಿನ ತಣ್ಣಗಿನ ಆದರೆ ಪೂರ್ವಗ್ರಹ ಪೀಡಿತ ಮನಸ್ಥಿತಿಯಲ್ಲಿ ಹಲವು ಅಪದ್ಧಗಳನ್ನು ಸಹಜವೆನ್ನುವಂತೆ ಆಡಿದರು. ಜೈನ, ಲಿಂಗಾಯತಗಳು ಇಲ್ಲಿ ಹಿಡ ಮಾಡಿಸಿಕೊಂಡು ಹಿಂದೂಧರ್ಮಕ್ಕೆ ನೇತುಬಿದ್ದವು ಎಂದರು. ಭಗವದ್ಗೀತೆ ಅರ್ಥವಾಗುವುದಿಲ್ಲ; ಆದರೂ ಬೌದ್ಧಮತದ ನೆರಳು ಕಂಡೆ ಅಂದರು. ಮುಸ್ಲಿಂ – ಕ್ರಿಶ್ಚಿಯನ್ ಮತಗಳ ಕಡೆ ಭಾರತೀಯರಿಗೆ ಅಸಹನೆ ಇದೆ ಅಂದರು. ಮತ್ತು ಈ ಅಸಹನೆಗೆ ಆ ಮತೀಯರು ಈ ದೇಶದ ಮೇಲೆ ಮಾಡಿರುವ ಅತ್ಯಾಚಾರವಲ್ಲ; ಬದಲು, ಅವಿನ್ನೂ ಜಾತಿಯ ಮಟ್ಟಕ್ಕೆ ಇಳಿಯದ್ದೇ ಕಾರಣವಿರಬೇಕು ಎಂದರು. ಒಟ್ಟಲ್ಲಿ ಈ ಮನುಷ್ಯ, ಜಾತಿಜಾತಿಗಳ ನಡುವೆ, ಮತ-ಧರ್ಮಗಳ ನಡುವೆ ಅದೆಷ್ಟು ಬೆಂಕಿಯನ್ನು ಮೌನವಾಗಿ ಹಚ್ಚಲು ಸಾಧ್ಯವೋ ಅವೆಲ್ಲವನ್ನು ವೇದಿಕೆಯಲ್ಲಿ ನಿಂತು ಮಾತಿನ ಮೂಲಕ ಹಚ್ಚಿದರು. ಪರಮಜ್ಞಾನಿಗಳು ಮಾತ್ರ ಮೌನಿಗಳಾಗಿರಬೇಕಿಲ್ಲ; ವ್ಯಗ್ರ ತೋಳ ಹೊಂಚುಹಾಕುವಾಗಲೂ ದಿವ್ಯ ಮೌನ ಕಾಯ್ದುಕೊಂಡಿರುತ್ತದೆ ಎಂಬುದನ್ನು ದೇವನೂರರ ಈ ತಣ್ಣಗಿನ ಭಾಷಣ ಅನಾವರಣಗೊಳಿಸಿತು. ಮಾತೆಂತೂ ಆಡಿಯಾಗಿದೆ. ಈಗಲಾದರೂ ಅವರು ಕೇಳಿಕೊಳ್ಳಬೇಕು – ಕುವೆಂಪು ಅವರಿಗೇನೋ ಪ್ರತಿಮಾದೃಷ್ಟಿ ಸಿಕ್ಕಿತು; ಆದರೆ ಇನ್ನೂ ಶಂಭೂಕನನ್ನು ಹಿಡಿದು ಜಗ್ಗಾಡುತ್ತಿರುವ ತನಗೆ ಆ ದೃಷ್ಟಿ ಸಿಗುವುದು ಯಾವಾಗ? ಕುವೆಂಪು ಸಾಂಸ್ಕೃತಿಕ ವಿವೇಕ ಎನ್ನುವ ಭಾಷಣದಲ್ಲೇ ಕುವೆಂಪು ಅವರು ಹೇಳಿದ್ದನ್ನು ಒಪ್ಪಬೇಕಿಲ್ಲ ಎನ್ನುತ್ತೇನಲ್ಲ; ತನ್ನ ಗೊಂದಲ ಪರಿಹಾರ ಎಂದು? ರಾಮಚಂದ್ರನೇ ಸ್ವಯಂ ಬಂದು “ಅಯ್ಯಾ ಇದು ನನ್ನ ಹುಟ್ಟಿದ ಸ್ಥಳವಲ್ಲ” ಎಂದು ಹೇಳುವ ದೃಶ್ಯದಂತೆಯೇ, “ಇಲ್ಲಿ ಏನಿತ್ತೋ ಅದನ್ನು ಕೆಡವಿಹಾಕಿ ಬಾಬರ ಮಸೀದಿ ಎಬ್ಬಿಸಿದ್ದೂ ಅಷ್ಟೇ ನಿಜ” ಎಂದು ಆ ರಾಮ ಹೇಳುವ ಮಾತು ತನ್ನ ನಾಟಕದಲ್ಲಿ ಬಂದೀತೇ? ಭೂತವಾದಿಗಳ ದ್ವೇಷದ ವ್ಯಾಪಾರ ಅಷ್ಟೋಇಷ್ಟೋ ತಗ್ಗುತ್ತಿತ್ತು ಎನ್ನುವ ತಾನೇ ಬಾಲಗಂಗಾಧರ ಮತ್ತಿತರರ ಸಂಶೋಧನೆ ವಿರೋಧಿಸಿ ಮುರಕೊಂಡು ಬಿದ್ದೆನಲ್ಲ; ತನ್ನ ವಿಷ ಇಂಗುವುದು ಯಾವಾಗ? ಏನೇ ಇರಲಿ, ಇಡೀ ಸಮ್ಮೇಳನ ಮಾತುಗಾರರ ಪೈಕಿ ಇವರೊಬ್ಬ ವ್ಯಕ್ತಿಯಾದರೂ ಚರ್ಚೆಗೆ ಅರ್ಹವಾದ ಒಂದಷ್ಟು ಸಂಗತಿ, ಸರಿಯೋ ತಪ್ಪೋ, ಹೇಳಿದರಲ್ಲ ಎನ್ನುವುದೊಂದೇ ಸಮಾಧಾನ.

20 ಟಿಪ್ಪಣಿಗಳು Post a comment
  1. Ishwara Bhat
    ಡಿಸೆ 29 2015

    Very true. Good one boss.

    ಉತ್ತರ
  2. Shivaram
    ಡಿಸೆ 29 2015

    My village is located 60 km far from Bangalore, not much!. SC & ST people are not allowed inside the temple, they have been threatened and penalized for touching the god which was in street to give so called DARSHANA. do you accept this?

    ಉತ್ತರ
    • Hindu nationalist
      ಡಿಸೆ 29 2015

      Will they are ready to stop cow slaughtering, eating cow meat

      ಉತ್ತರ
    • Anonymous
      ಡಿಸೆ 29 2015

      ದಲಿತರಿಗೆ ದರ್ಶನ ನೀಡಲು ರೆಡಿ ಇರದ ಸವರ್ಣೀಯರ ದೇವರ ಉಸಾಬರಿ ಏಕೆ ಬೇಕು? ಸವರ್ಣೀಯರ ದೇವಸ್ಥಾನಗಳಿಗೆ ಧಿಕ್ ಹೇಳಿ ನಿಮ್ಮದೇ ಆದ ಸ್ವತಂತ್ರ ದೇವಸ್ಥಾನಗಳನ್ನು ಕಟ್ಟಿಕೊಳ್ಳಿ. ನಮ್ಮ ಸಿದ್ರಾಮಯ್ಯನವರಿಗೆ ಅಹವಾಲು ತಲುಪಿಸಿದರೆ ಅವರು ನಿಮಗೋಸ್ಕರ ‘ದೇವಸ್ಥಾನ ಭಾಗ್ಯ’ ಯೋಜನೆ ಶುರು ಮಾಡಿ ದೇವಸ್ಥಾನಗಳನ್ನು ಕಟ್ಟಲು ಸರಕಾರ ನೆರವು ನೀಡಿಯಾರು.

      ಉತ್ತರ
      • Goutham
        ಜನ 11 2016

        Anonymous ರವರೆ, “ದಲಿತರಿಗೆ ದರ್ಶನ ನೀಡಲು ರೆಡಿ ಇರದ ಸವರ್ಣಿಯರ ದೇವರ ಉಸಾಬರಿ ಏಕೆ ಬೇಕು? ” ಎಂದು ನೀವು ಕೇಳಿರುವುದು ಸರಿಯಾಗಿಯೇ ಇದೆ. ಹೌದು. ಈ ಉಸಾಬರಿ ಬೇಕಿಲ್ಲ ಎಂದು ಸಮಸ್ತ ದಲಿತರು ನಿಮ್ಮ ಮಾತನ್ನು ಆರ್ಥ ಮಾಡಿಕೊಂಡು, ಸವರ್ಣಿಯರ ಧರ್ಮವನ್ನು ತೊರೆದು, ತಮ್ಮನ್ನು ಸಮಾನವಾಗಿ ಕಾಣುವ ದರ್ಮಕ್ಕೆ ಮತಾಂತರವಾಗುವುದು ಒಳಿತು. ದಲಿತ ಸಮಸ್ಯೆಗಳಿಗೆ ಮತಾಂತರ ಪರಿಹಾರವೇ ಎಂದು ಕೇಳುವವರಿಗೆ ನಿಮ್ಮ ಪ್ರಶ್ನೆಯಲ್ಲಿ ಉತ್ತರವಿದೆ

        ಉತ್ತರ
        • Anonymous
          ಜನ 11 2016

          ” ತಮ್ಮನ್ನು ಸಮಾನವಾಗಿ ಕಾಣುವ ದರ್ಮಕ್ಕೆ ಮತಾಂತರವಾಗುವುದು ಒಳಿತು”

          ಗೌತಮ ಅವರೇ, ನನ್ನ ಮಾತಿನ ಅರ್ಥ ಇದಲ್ಲ. ತಮ್ಮದಲ್ಲದ ಕ್ರಿಶ್ಚಿಯನ್ ಅಥವಾ ಬೌದ್ಧ ಮತಗಳಿಗೆ ದಲಿತರು ಮತಾಂತರವಾಗುವ ಅಗತ್ಯವೇನಿದೆ? ಅದರ ಬದಲು ತಮ್ಮದೇ ಆದ ದೇವಸ್ಥಾನಗಳನ್ನು ಕಟ್ಟಿಸಿಕೊಂಡು ತಮ್ಮದೇ ಆದ ಕ್ರಮದಲ್ಲಿ ತಮಗೆ ಇಷ್ಟವಾದ ದೇವರ ಪೂಜೆ ನಡೆಸಬಹುದಲ್ಲ! ಹಾಗೂ ಅದಕ್ಕೆ ಅಗತ್ಯವಿರುವ ನೆರವನ್ನು ಸರಕಾರ ಹಾಗೂ ಪ್ರಗತಿಪರ ಮನಸ್ಕರು ಕೊಡುವಂತಾಗಲಿ.

          ಉತ್ತರ
  3. ಡಿಸೆ 29 2015

    Mr. Shivaram,Please give the details. VHP will organize Schedule Caste/Tribe people entry into temple. That is not only the issue raised in this article. He has said giving knowledge based education to Schedule Caste/Tribe people is more important.

    ಉತ್ತರ
  4. ಭೀಮಗುಳಿ ಶ್ಯಾಮ್
    ಡಿಸೆ 29 2015

    ಎಲ್ಲಿ ವಿದ್ಯೆ ಇದೆಯೋ ಅಲ್ಲಿ ಜ್ಞಾನ,ವಿವೇಕ ಬಂದು ತುಂಬಿಕೊಳ್ಳುತ್ತದೆ. ಆಗ ಜಾತಿ ಅಸ್ಪೃಶ್ಯತೆ ಇತ್ಯಾದಿ ದೂರವಾಗುತ್ತದೆ . ಆದರೆ ವಿದ್ಯೆಯೇ ಇಲ್ಲದಿದ್ದರೆ ಒಳಿತು ಬಂದು ತುಂಬಿಕೊಳ್ಳಲು ಎಷ್ಟು ಸಾಧ್ಯ . ನಮ್ಮಲ್ಲಿ ಹಿಂದುಳಿದವರು ಹಾಗೆಯೇ ಉಳಿಯಲು ಕಾರಣ,ಮುಂದೆ ಬಂದ ಬಹಳ ಜನ ಹಿಂದುಳಿದವರು, ಹಿಂದೆ ತಿರುಗಿ ನೋಡಲಿಲ್ಲ. ನಮ್ಮವರು ಮುಂದೆ ಬರಲಿ ಎನ್ನುವುದಕ್ಕಿಂತ ಮುಂದುವರಿದವರ ಮೇಲಿನ ಅನಗತ್ಯ ದ್ವೇಷ ಅಸೂಯೆಗಳೇ ಅವರ ಮುಂದುವರಿಕೆಗೆ ಅಡ್ಡಿ ಆಗಿದೆ . ಅದು ಅರ್ಥವಾಗಬೇಕಷ್ಟೇ . ಆದರೆ ಹಲವರಿಗೆ ಅದು ಅರ್ಥವಾಗುವುದು ಬೇಕಾಗಿಲ್ಲ. ಅದು ದುರಂತ

    ಉತ್ತರ

  5. ಇತ್ತೀಚೆಗೆ ಈ ದಲಿತ ಹಾಗೂ ಬಂಡಾಯ ಸಾಹಿತ್ಯ ಅನ್ನುವ ಗುರುತಿ ಚೀಟಿ ಹಿಡಿದುಕೊಂಡ ಅಷ್ಟೂ ಜನರ ಮಾತುಗಳು ಗೊಂದಲಮಯವಾಗಿಯೇ ಕಾಣುತ್ತವೆ ನನಗೆ.

    ತಮಗೆ ಅಥವಾ ತಮ್ಮ ವರ್ಗದವರಿಗೆ ಈ ಸಮಾಜದಿಂದ ಏನಾಗಬೇಕಿದೆ ಅನ್ನುವುದರ ನಿರ್ದಿಷ್ಠ ವ್ಯಾಖ್ಯಾನವನ್ನೇ ಮಾಡಲಾಗದವರು “ಆ ಬೇಕುಗಳನ್ನು” ಪೂರೈಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದು ಬಹು ಕಷ್ಟದ ಸಂಗತಿ.

    ಇವರ ಸ್ಥಿತಿಯೂ ಅದೇ ಆಗಿದೆ.

    ನಲವತ್ತಕ್ಕೂ ಹೆಚ್ಚು ವರ್ಷಗಳಿಂದ, ಒಂದು ಪೀಳಿಗೆಯ ನಂತರ ಇನ್ನೊಂದು ಪೀಳಿಗೆ ಬಂಡಾಯವನ್ನೇ ಅಸ್ತ್ರವನ್ನಾಗಿಸಿಕೊಂಡು ಬಾಳುತ್ತಿದೆಯೆಂದಾದರೆ, ಅದು ಒಂದು ಪೀಳಿಗೆಯ ವೈಫಲ್ಯದ ಸೂಚನೆಯಲ್ಲವೇ?

    ಈಗಿನ ಕಾಲದಲ್ಲಿ ದರ್ಜಿಗಳ ಮಕ್ಕಳು ದರ್ಜಿಗಳಾಗುವುದಿಲ್ಲ, ಕಮ್ಮಾರರ ಮಕ್ಕಳು ಕಮ್ಮಾರರಾಗುವುದಿಲ್ಲ, ಕುಂಬಾರರ ಮಕ್ಕಳು ಕುಂಬಾರರಾಗುವುದಿಲ್ಲ, ಕುರುಬರ ಮಕ್ಕಳು ಕುರುಬರಾಗುವುದಿಲ್ಲ ಹಾಗೂ ಮಾಸ್ತರರ ಮಕ್ಕಳು ಮಾಸ್ತರರಾಗುವುದಿಲ್ಲ. ಹಾಗಿರುವಾಗ ಅಪ್ಪ ನೆಟ್ಟ ಫಲನೀಡದ ಗೊಡ್ಡುವೃಕ್ಷಕ್ಕೆ ನೀರೆರೆಯುವ ನಿಷ್ಪ್ರಯೋಜಕ ಕಾಯಕವನ್ನು ಮಕ್ಕಳು ಮಾಡಿಯಾನೇ?

    ಆದರೆ, ಸಖೇದಾಶ್ಚರ್ಯ ಮೂಡಿಸುವ ಸಂಗತಿ ಏನೆಂದರೆ, ಈಗ ನಡೆಯುತ್ತಿರುವುದು ಅದೇ. ಈ ಪೀಳಿಗೆಯ ಮಂದಿ ಮಾಡುತ್ತಿರುವುದು ಅದನ್ನೇ.

    ಉತ್ತರ
    • ಐದನೇ ವಾಕ್ಯಪುಂಜದ ಕೊನೆಯಲ್ಲಿ “ಮಕ್ಕಳು ಮಾಡಿಯಾನೇ” ಎಂದು ಇರುವುದನ್ನು “ಮಕ್ಕಳು ಮಾಡಿಯಾರೇ” ಎಂದು ಓದಿಕೊಳಬೇಕಾಗಿ ವಿನಂತಿ.

      ಉತ್ತರ
  6. Anonymous
    ಡಿಸೆ 29 2015

    ಈ ಮಹಾದೇವಂಗೆ ಅವರ ಸಮುದಾಯದ ಜನರೇ ಕ್ಯಾರೆ ಅನ್ನಲ್ಲ, ಈತ ಒಬ್ಬ ಪೇಪರ್ ಕ್ರಾಂತಿಕಾರಿಯಷ್ಟೇ.

    ಉತ್ತರ
  7. Sriranga
    ಡಿಸೆ 29 2015

    ರೋಹಿತ್ ಚಕ್ರತೀರ್ಥ ಅವರಿಗೆ—–ನನಗೆ ನನ್ನ ಅಲ್ಪಸ್ವಲ್ಪ ಓದಿನ ದೆಸೆಯಿಂದಲೋ ಅಥವಾ ನಾನು ಹುಟ್ಟಿ ಬೆಳೆದ ಪರಿಸರದ ಕಾರಣದಿಂದಲೋ ದೇವರು, ಧರ್ಮ ಇತ್ಯಾದಿ ಅಮೂರ್ತ ವಿಷಯಗಳ ಬಗ್ಗೆ ಒಲವಿಲ್ಲ. ಹೀಗಾಗಿ ಆ ಬಗ್ಗೆ ಯೋಚಿಸುವುದು, ಓದುವುದು ನನ್ನ ಆಸಕ್ತಿಯ ಚಿಕ್ಕ ಪರಿಧಿಯಲ್ಲಿ ಬರುವುದಿಲ್ಲ. . ತಮ್ಮ ಲೇಖನಗಳನ್ನು ನಾನು ‘ನಿಲುಮೆ’ಯಲ್ಲಿ ಆಗಾಗ ನೋಡುತ್ತಿರುತ್ತೇನೆ. ಈ ಸಲದ ನಿಮ್ಮೀ ಲೇಖನ ನನ್ನ ದೃಷ್ಟಿಯಲ್ಲಿ ಉತ್ತಮ ವಿಶ್ಲೇಷಣಾತ್ಮಕ ಅಂಶಗಳನ್ನು ಹೊಂದಿದ್ದು ಸದ್ಯದ ನಮ್ಮ ಸಾಮಾಜಿಕ,ಸಾಂಸ್ಕೃತಿಕ ವಾತಾವರಣದ ಕೆಲವು ‘ಅವಕಾಶವಾದಿ ಮತ್ತು ಲಾಭದಾಯಕ ಪುರಾತನ’ ಅನಿಸಿಕೆಗಳು ಹಾಗೂ ನಂಬಿಕೆಗಳನ್ನೇ ಪದೇ ಪದೇ ಪ್ರಸ್ತಾಪಿಸುವ ಮತ್ತು ಅದು ಈಗಲೂ ಚಾಲ್ತಿಯಲ್ಲಿದೆ ಎಂದು ಬಿಂಬಿಸುವ ಪ್ರವೃತ್ತಿಯಲ್ಲಿರುವ ಲೋಪದೋಷಗಳನ್ನು ಸರಿಯಾಗಿ ಗುರುತಿಸಿದೆ. ನಿಮಗೆ ನನ್ನ ಅಭಿನಂದನೆಗಳು.

    ಉತ್ತರ
  8. rajaram hegde
    ಡಿಸೆ 29 2015

    ಲೇಖನ ಚೆನ್ನಾಗಿದೆ ಹಾಗೂ ಸಕಾಲಿಕವಾಗಿದೆ ರೋಹಿತ್

    ಉತ್ತರ
  9. ವಿಠಲ ಕಟ್ಟಿ
    ಡಿಸೆ 30 2015

    ದೇವನೂರು ಮತ್ತು ಅವರಂತೆ ಯೋಚಿಸುವ ಕೆಲವರು ಮಾಡುವ, ಮಾಡುತ್ತಿರುವ ತಪ್ಪುಗಳನ್ನು ಅರ್ಥವತ್ತಾಗಿ ವಿವರಿಸಿದ್ದಾರೆ. ಇನ್ನಾದರೂ ದಲಿತರು ಮುಂಚೂಣಿಗೆ ಬಂದು ಎಲ್ಲರ ಜೊತೆ ಸೇರಿಕೊಳ್ಳಲಿ.ಬರಿಯ ದೇವಸ್ಥಾನ ಪ್ರವೇಶವನ್ನೇ ನೆಚ್ಚಿಕೊಂಡು ವಿಷ ಕಾರುವದನ್ನು ನಿಲ್ಲಿಸಲಿ. ಮುಖ್ಯವಾಗಿ ದಲಿತರ ದಾರಿ ತಪ್ಪಿಸುವ ಕೆಲಸ ನಿಲ್ಲಲಿ.

    ಉತ್ತರ
  10. akshith
    ಡಿಸೆ 30 2015

    good one

    ಉತ್ತರ
  11. Devendra
    ಡಿಸೆ 31 2015

    ಲೇಖನ ಸಾಕಷ್ಟು ಹೊಸ ವಿಷಯಗಳನ್ನು ವಿಷ್ಲೇಶಣೆಗಳನ್ನು ಒಳಗೊಂಡಿದೆ. ದೇವನೂರರವರು ಮತ್ತು ಅವರಂತಹ ಚಿಂತಕರು ಪ್ರತಿಕ್ರಿಯೆ ವ್ಯಕ್ತ ಮಾಡಬೇಕು. ಅ ಚಿಂತಕರ ವಿಚಾರಗಳು ೧೦೦, ೧೨೦ ವರ್ಷಗಳಲ್ಲಿ ಯಾವದೇ ತರದಲ್ಲಿ ಮುಂದೆ ಹೋಗಿಲ್ಲ. ಬರೀ ಚರ್ವಿತ ಚರ್ವಣ. ರೋಹಿತರ ಶೈಲಿ ಸ್ವಲ್ಪ ಖಾರ. ಅದರೆ ರುಚಿಯಾಗಿದೆ.
    ದೇವೇಂದ್ರ

    ಉತ್ತರ
  12. Anonymous
    ಡಿಸೆ 31 2015

    ಮಾನ್ಯ ದೇವನೂರ ಮಹಾದೇವ ಅವರೇ, ತಮ್ಮ ಬಗ್ಗೆ ಗೌರವವಿರುವುದರಿಂದಲೇ ತಮಗೆ ಈ ಕೆಳಗಿನ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ದಯವಿಟ್ಟು ಉತ್ತರ ನೀಡಬೇಕು.

    ನಮ್ಮ ಕರ್ನಾಟಕದ, ಬೇಡ ಮೈಸೂರು ಪ್ರಾಂತ್ಯದ ದಲಿತರ ಟಾಪ್ ಟೆನ್ ಸಮಸ್ಯೆಗಳು ಯಾವುವು ಅಂತ ರೆಟಾರಿಕ್ ಇಲ್ಲದೆ ನೇರವಾಗಿ ಹೇಳಿ. ನಿಮ್ಮ ಅದೆಷ್ಟೋ ಭಾಷಣಗಳನ್ನು ಕೇಳಿರುವ ನನಗೆ ಇನ್ನೂ ದಲಿತರ ಮುಖ್ಯ ಸಮಸ್ಯೆಗಳು ಯಾವುವು ಅಂತ ಕ್ಲಿಯರ್ ಆಗಿ ತಿಳಿದಿಲ್ಲ. ತಮ್ಮಿಂದ ತಿಳಿದುಕೊಳ್ಳುವ ಆಸೆ ಇದೆ.

    ಉತ್ತರ
  13. ckvmurthy
    ಜನ 1 2016

    One buddjivi has written today in prajavani1/ 01/2016,a letter which contains lot of explosive materials.He qoutes vedas bhagavadgitaas should be blasted.Mr rohit chkravarthi.can you answer for his views in the same platform of the said news paper.Even if you write ,the said paper will not publish your writings.Anyway please try.

    ಉತ್ತರ
  14. ckvmurthy
    ಜನ 1 2016

    Mr.R.Chakrathitha may not be in the habit of looking back to the feedbacks of his writings in this blog.

    ಉತ್ತರ
  15. R.S. Vidyarthi
    ಜನ 3 2016

    chennaagide saa!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments