ವಿಷಯದ ವಿವರಗಳಿಗೆ ದಾಟಿರಿ

ಜನವರಿ 3, 2016

1

ಹಣದ ಹೊಳೆ ನಿಲ್ಲಿಸಿ, ಮೇಲ್ಮನೆ ಮಾನ ಉಳಿಸಿ

‍ನಿಲುಮೆ ಮೂಲಕ

– ಎಸ್‌. ಸುರೇಶ್‌ ಕುಮಾರ್‌, ಮಾಜಿ ಸಚಿವರು,ಹಿರಿಯ ಬಿಜೆಪಿ ನಾಯಕ

ಎಸ್‌. ಸುರೇಶ್‌ ಕುಮಾರ್‌ಕರ್ನಾಟಕದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ 25 ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಮುಗಿದು ಫ‌ಲಿತಾಂಶಗಳೂ ಪ್ರಕಟವಾಗಿವೆ. ಈಗೇನಿದ್ದರೂ ಆಯಾ ಪಕ್ಷ ಎಷ್ಟು ಸ್ಥಾನಗಳನ್ನು ಗೆದ್ದಿದೆ? ಸೋತಿರುವ ಕ್ಷೇತ್ರಗಳಲ್ಲಿ ಕಾರಣಗಳೇನು? ಎಂಬುದರ ಲೆಕ್ಕಾಚಾರ ನಡೆಯುವ ಸಮಯ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ನನ್ನದೊಂದು ಈ ಮನವಿ ಪತ್ರ.

ಕೆಲವು ವರ್ಷಗಳ ಹಿಂದೆ ನನ್ನ ಮೊಬೈಲ್‌ಗೆ ಒಂದು ವಿಚಿತ್ರವಾದ, ಆದರೆ ಅರ್ಥಗರ್ಭಿತ ಸಂದೇಶ ಬಂದಿತ್ತು. ‘ಸ್ನೇಹಿತರೇ. ನಾನು ಮಹಾತ್ಮಾ ಗಾಂಧೀಜಿಯವರ ಫೋಟೋಗಳನ್ನು ಸಂಗ್ರಹಿಸುತ್ತಿದ್ದೇನೆ. ನನ್ನ ಈ ಸಂಗ್ರಹ ಕಾರ್ಯದಲ್ಲಿ ನೀವು ಸಹಕರಿಸಿ. ನಿಮ್ಮ ಕೊಡುಗೆಯನ್ನು ನೀಡಿ. ಆದರೆ ಒಂದು ಷರತ್ತು. ನನಗೆ ಸಂಗ್ರಹವಾಗಬೇಕಿರುವ ಮಹಾತ್ಮಾ ಗಾಂಧೀಜಿ ಪೋಟೋಗಳು ಒಂದು ಸಾವಿರ ರೂಪಾಯಿ ನೋಟುಗಳ ಮೇಲೆ ಇರಬೇಕು.’ ಇದು ಆಘಾತಕಾರಿ ಎನಿಸಿದರೂ ಇಂದಿನ ಅತ್ಯಂತ ಕಟು ಸತ್ಯವನ್ನು ಬಿಂಬಿಸುತ್ತದೆ.

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಹಣದ ಬಲ ವಹಿಸುವ ಪಾತ್ರ ಎಲ್ಲರಿಗೂ ತಿಳಿದಿದೆ. ಟಿ. ಎನ್‌.ಶೇಷನ್‌ ಅವರು ಭಾರತದ ಮುಖ್ಯ ಚುನಾವಣಾಧಿಕಾರಿ ಆಗಿದ್ದಾಗ ಈ ಕುರಿತು ಕೈಗೊಂಡ ಕೆಲವು ಕಠಿನ ಕ್ರಮಗಳು ಚುನಾವಣಾ ಸುಧಾರಣೆಯ ಪಥದಲ್ಲಿ ಮಹತ್ವ ಪಡೆದುಕೊಂಡಿದ್ದವು. ಆದರೆ, ದಿನೇ ದಿನೇ ಚುನಾವಣೆಗಳಲ್ಲಿ ಹಣದ ಪಾತ್ರ ಹೆಚ್ಚಾಗುತ್ತಿದೆ ಎಂಬುದು ಎಲ್ಲರ ಅನುಭವ. ನಗರ ಪಾಲಿಕೆ ಚುನಾವಣೆಗಳಲ್ಲಿಯೂ ಹಲವಾರು ಕೋಟಿ ರೂ. ಖರ್ಚು ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಂದೊಮ್ಮೆ ಮಹಾತ್ಮ ಗಾಂಧೀಜಿ, ಅಬ್ದುಲ್‌ ಕಲಾಂ ಅಥವಾ ಅಣ್ಣಾ ಹಜಾರೆಯಂಥವರು ನಿಲ್ಲಲು ಬಯಸಿದರೆ ಅವರ ಬಳಿ ಹಣವಿಲ್ಲವೆಂಬ ಅಂಶವೇ ದೊಡ್ಡ ತೊಡಕೆಂದು ಇಂದಿನ ರಾಜಕಾರಣದಲ್ಲಿ ಆಗಾಗ ಕೇಳಿ ಬರುವ ಮಾತು.

ಮೊನ್ನೆ ನಡೆದ ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಮತದಾರರಾಗಿದ್ದವರೆಲ್ಲರೂ ಚುನಾಯಿತ ಪ್ರತಿನಿಧಿಗಳೇ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ನಗರ ಪಾಲಿಕೆ ಮತ್ತು ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನ ಮಂಡಲದ ಹಾಗೂ ಸಂಸತ್ತಿನ ಉಭಯ ಸದನಗಳ ಸದಸ್ಯರುಗಳು. ಈ ರೀತಿಯ ಚುನಾಯಿತ ಪ್ರತಿನಿಧಿಗಳಿಂದಲೇ ವಿಧಾನ ಪರಿಷತ್ತಿಗೆ ಮತದಾನ ನಡೆಯುವಾಗ ಹಣದ ಪ್ರಭಾವ ಅತ್ಯಂತ ಕನಿಷ್ಠವಿರಬೇಕಿತ್ತು. ಆದರೆ ದುರ್ದೈವವಶಾತ್‌ ಈ ಚುನಾವಣೆಯಲ್ಲಿ ಪ್ರಭಾವ ಬೀರಿದ ಭಾರಿ ಪ್ರಮಾಣದ ಹಣಬಲದ ಬಗ್ಗೆ ಈಗ ಆಗಿರುವಷ್ಟು ಚರ್ಚೆಯನ್ನು ಹಿಂದಿನ ಯಾವುದೇ ಚುನಾವಣೆಗಳಲ್ಲಿ ನಾವು ಕಂಡಿರಲಿಲ್ಲ.

ಜಿಲ್ಲೆಯೊಂದಕ್ಕೆ ಮತ ಯಾಚಿಸಲು ಓರ್ವ ಅಭ್ಯರ್ಥಿ ಹೋಗಿ ಮತದಾರರೊಂದಿಗೆ ಸಂವಾದ ನಡೆಸುತ್ತಿದ್ದಾಗ ‘ಮಾತು ನಿಲ್ಲಿಸ್ರೀ, ರೊಕ್ಕ ಎಷ್ಟು ಕೊಡುತ್ತಿರಾ ಹೇಳ್ರಿ…’ ಎಂಬ ಧ್ವನಿ ಜೋರಾಗಿಯೇ ಕೇಳಿ ಬಂದದ್ದು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಈ ಚುನಾವಣಾ ಪ್ರಚಾರದ ಅವಧಿಯಲ್ಲಿ ಟಿ.ವಿ. ಚಾನೆಲ್‌ಗ‌ಳಲ್ಲಿ ನಾನು ಭಾಗವಹಿಸಿದ ಎಲ್ಲಾ ಚರ್ಚೆಗಳಲ್ಲಿ ಈ ಚುನಾವಣಾ ವೈಖರಿಯ ಅಧೋಗತಿ ಕುರಿತು ಎಲ್ಲಾ ಪಕ್ಷದ ಪ್ರತಿನಿಧಿಗಳು ಒಕ್ಕೊರಲಿನಿಂದ ತಮ್ಮ ಜಿಗುಪ್ಸೆಯನ್ನು ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡುವವರೇ ಅಭ್ಯರ್ಥಿಯಾಗಲು ಸಾಧ್ಯ ಎಂಬ ವಾತಾವರಣ ಬಲವಾಗಿ ಬಿಂಬಿತವಾಯಿತು. ಏಕೆಂದರೆ ಹಣವಿದ್ದವರೇ ಈ ಚುನಾವಣೆಗಳಲ್ಲಿ ಗೆಲ್ಲಲಿಕ್ಕೆ ಸಾಧ್ಯ ಎಂಬುದನ್ನು ಬಹಿರಂಗವಾಗಿ ಯಾರೂ ಹೇಳದಿದ್ದರೂ ಅಂತರಂಗವಾಗಿ ಎಲ್ಲರೂ ಒಪ್ಪಿಕೊಂಡುಬಿಟ್ಟಿರುವ ಪರಿಸ್ಥಿತಿಯನ್ನು ನಾಡು ಗಮನಿಸಿದೆ.

ನಾನು ಈ ಕುರಿತು ಬಹಳಷ್ಟು ಹಿರಿಯರೊಂದಿಗೆ ಮಾತನಾಡಿದ್ದೇನೆ. ಮಾಧ್ಯಮಗಳು ಹೇಗೆ ತಮ್ಮ ರೇಟಿಂಗ್‌ ವೃದ್ಧಿಸಿಕೊಳ್ಳಲು ಸತ್ಯಕ್ಕೆ ಅಪಚಾರವಾದರೂ ಎಂತಹ ಸುದ್ದಿಯನ್ನಾದರೂ ಬಿತ್ತರಿಸುವ ಮನಸ್ಥಿತಿ ಹೊಂದಿವೆಯೋ, ಅದೇ ರೀತಿ ರಾಜಕೀಯ ಪಕ್ಷಗಳು ಚುನಾವಣೆಗಳಿಂದ ತಮ್ಮ ರಾಜಕೀಯ ಟಿ.ಆರ್‌.ಪಿ ವೃದ್ಧಿಸಿಕೊಳ್ಳಲು ಸಮಾಜದ ಸ್ವಾಸ್ಥ್ಯವನ್ನು ಸಂಪೂರ್ಣ ಕಡೆಗಣಿಸುತ್ತಿವೆ ಎಂಬುದು ಈ ಎಲ್ಲಾ ಹಿರಿಯರು ಹೇಳಿದ ಮಾತು. ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಸಾಕಷ್ಟು ಅನುಭವವುಳ್ಳ 1980ರ ದಶಕದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಯಶಸ್ವೀ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ, ಮಾಜಿ ಸಂಸತ್‌ ಸದಸ್ಯ ನಾರಾಯಣಸ್ವಾಮಿಯವರು ಮತ್ತೂಂದು ಕಳವಳವನ್ನು ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ವಿಧಾನ ಪರಿಷತ್‌ಗೆ ಸದಸ್ಯರಾಗಿದ್ದವರು ಕಳೆದ ಆರು ವರ್ಷಗಳಲ್ಲಿ ವಿಧಾನ ಪರಿಷತ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಸಮಸ್ಯೆ ಕುರಿತು ಚರ್ಚಿಸಿದ್ದಾಗಲಿ ಅಥವಾ ಪರಿಹಾರದೆಡೆಗೆ ಶ್ರಮಿಸಿದ್ದಾಗಲಿ ಕಾಣಲೇ ಇಲ್ಲ ಎಂಬುದು ನಾರಾಯಣಸ್ವಾಮಿಯವರ ನೈಜ ಕೊರಗು. ವಿಧಾನ ಪರಿಷತ್ತನ್ನು ಮೇಲ್ಮನೆೆ, ಹಿರಿಯರ ಮನೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಭವ ಪಡೆದ ಚಿಂತಕರ ವೇದಿಕೆ ಎಂದು ಕರೆಯುವುದರ ಮೂಲಕ ಅದು ವಿಧಾನಸಭೆಗೆ ಮಾರ್ಗದರ್ಶನ ನೀಡುವಷ್ಟು ಸಾಮರ್ಥ್ಯವಿರುವ ವೇದಿಕೆಯಾಗಬೇಕು ಎಂಬುದು ವಿಧಾನ ಪರಿಷತ್‌ ರಚನೆಯ ಹಿಂದೆ ಇದ್ದ ಮೂಲ ಆಶಯ. ನಮ್ಮ ಕರ್ನಾಟಕ ವಿಧಾನ ಪರಿಷತ್‌ ಎಂತೆಂತಹ ಘಟಾನುಘಟಿಗಳನ್ನು ಮೇಧಾವಿಗಳನ್ನು ಹೊಂದಿರುವ ಅದೃಷ್ಟ ಪಡೆದಿತ್ತು! ಡಾ|ಹೆಚ್‌.ನರಸಿಂಹಯ್ಯ, ಪ್ರೊ|ಎಂ.ಪಿ.ಎಲ್‌.ಶಾಸ್ತ್ರಿ, ಎ.ಕೆ.ಸುಬ್ಬಯ್ಯ, ಎಂ.ಸಿ.ನಾಣಯ್ಯ, ಕೃ.ನರಹರಿ… ಹೀಗೆ ಹೇಳುತ್ತಾ ಹೋಗಬಹುದು. ಇವತ್ತು ಅದೇ ಪರಂಪರೆಯಲ್ಲಿ ಸೂಕ್ತ ಉತ್ತರಾಧಿಕಾರಿಗಳನ್ನು ಕಳುಹಿಸುವ ಬಗ್ಗೆ ರಾಜಕೀಯ ಪಕ್ಷಗಳು ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ವಿಶೇಷವಾಗಿ ಈ ಚುನಾವಣೆಗಳಲ್ಲಿ ಎಲ್ಲರೂ ಒಪ್ಪಿಕೊಂಡಂತೆ ಆಗಿರುವ ಅಗಾಧ ಪ್ರಮಾಣದ ಹಣದ ಚಲಾವಣೆಯ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇರುವ ವ್ಯಕ್ತಿಗಳೇ ಮತ್ತು ರಾಜಕೀಯ ಪಕ್ಷಗಳೇ ವ್ಯವಸ್ಥೆ ಹಾಳಾಗಲಿಕ್ಕೆ ಧಾರಾಳವಾಗಿ ಕೈ ಜೋಡಿಸಿ ವ್ಯವಸ್ಥೆ ಹಾಳಾಗಿದೆ ಎಂದು ದೂರುವುದರಲ್ಲಿ ಅಥವಾ ಕಾರಣ ಹುಡುಕುವುದರಲ್ಲಿ ಏನಾದರೂ ಅರ್ಥ ಇದೆಯೇ? ಅಭ್ಯರ್ಥಿಗಳು ಹಣ ಕೊಡಲೇಬೇಕು ಎಂಬ ಮನಸ್ಥಿತಿಗೆ ಮತದಾರರಾಗಿದ್ದ ಚುನಾಯಿತ ಪ್ರತಿನಿಧಿಗಳೇ ತಲುಪಿಬಿಟ್ಟಿದಾರೆಯೇ? ಅಥವಾ ನಾವು ಹಣ ಕೊಟ್ಟರೆ ಮಾತ್ರ ನಮಗೆ ಓಟು ಸಿಗುವುದು ಎಂಬ ಅವಸ್ಥೆ ಅಭ್ಯರ್ಥಿಗಳಿಗೆ ಬಂದುಬಿಟ್ಟಿದೆಯೇ? ಯಥಾ ಪ್ರಕಾರ ಬೀಜದಿಂದ ವೃಕ್ಷವೋ ಅಥವಾ ವೃಕ್ಷದಿಂದ ಬೀಜವೋ ಎಂದು ಪರಸ್ಪರ ಪ್ರಶ್ನಿಸುವ ವಾತಾವರಣದಲ್ಲಿ ನಾವಿದ್ದೇವೆಯೇ?.

ಈ ಚುನಾವಣೆಗಳಲ್ಲಿ ನಮ್ಮ ರಾಜ್ಯದ ಅತ್ಯಂತ ಪ್ರಮುಖ ವ್ಯಕ್ತಿ ಹೇಳಿರುವ ಮಾತು ಗಮನಾರ್ಹ. ‘ಏನು ಚುನಾವಣೆಗಳ್ಳೋ ಇವು, ನಿಂತಿರುವವರೆಲ್ಲರೂ ದುಡ್ಡು ಕೊಡುವವರೇ, ಮತದಾರರೆಲ್ಲರೂ ತಮ್ಮ ಮತಕ್ಕೆ ಬೆಲೆ ನಿಗದಿಪಡಿಸಿರುವವರೇ. ಎಲ್ಲರೂ ದುಡ್ಡು ಕೊಟ್ಟ ಮೇಲೆ ಯಾರು ಯಾರಿಗೆ ಓಟು ಕೊಡುತ್ತಾರೋ, ಏನೂ ಅರ್ಥವಾಗುತ್ತಿಲ್ಲ.’ ಈ ಮಾತು ಬಂದದ್ದು ರಾಜ್ಯದ ಆಳುವ ಪಕ್ಷದ ಪ್ರಮುಖ ನಾಯಕನಿಂದ.

ನಾನು ಕೇವಲ ಈ ಚುನಾವಣೆಗಳಲ್ಲಿನ ಮತದಾರರ ಬಗ್ಗೆ ಕೇಳಿಬರುತ್ತಿರುವ ಮಾತುಗಳನ್ನು ಮಾತ್ರ ಉಲ್ಲೇಖೀಸುತ್ತಿಲ್ಲ. ನಾಡಿನ ಖ್ಯಾತ ಮದ್ಯ ದೊರೆಯೊಬ್ಬರು ರಾಜ್ಯಸಭಾ ಚುನಾವಣೆಗೆ ನಿಂತಿದ್ದಾಗ ಅವರನ್ನು ಆಯ್ಕೆ ಮಾಡಬೇಕಿದ್ದ ಶಾಸಕರ ಮತಗಳು ಮಾರಾಟವಾದವು ಎಂಬುದು ಈ ಹಿಂದೆ ದೊಡ್ಡ ವಿದ್ಯಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಹೀಗೆಯೇ ಮತ್ತಷ್ಟು ಅವನತಿಯತ್ತ ಸಾಗಿದರೆ ಮುಂದಿನ ಹತ್ತು-ಇಪ್ಪತ್ತು ವರ್ಷಗಳ ನಂತರ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಆಯ್ಕೆಯಲ್ಲಿ ಅನುಸರಿಸಬಹುದಾದ ಮಾನದಂಡವೇನಾಗಬಹುದು?

ರಾಜಕೀಯ ಪಕ್ಷಗಳನ್ನು ಹಣವಂತರು ಕೊಂಡುಕೊಳ್ಳುತ್ತಿದ್ದಾರೆ ಎಂಬ ಮಾತನ್ನು ಮೈಸೂರಿನ ಶಾಸಕರೊಬ್ಬರು ಹೇಳಿದ್ದಾರೆ. ಅದೇ ರೀತಿ ವಿಧಾನಪರಿಷತ್‌ನ ಸದಸ್ಯರೊಬ್ಬರು ಈ ಚುನಾವಣೆಗಳನ್ನೇ ರದ್ದುಗೊಳಿಸಬೇಕೆಂದು ಫ‌ರ್ಮಾನು ಹೊರಡಿಸಿ ಬಿಟ್ಟಿದ್ದಾರೆ. ಈ ಎರಡನ್ನೂ ಕೇಳಿದಾಗ ನನಗೆ ‘ಕಪ್ಪೆಗೂ ನೆಗಡಿಯಾಗ ಹತ್ತಿದೆ’ ಎಂಬ ಆ ಹಳೆಯ ಗಾದೆ ನೆನಪಿಗೆ ಬಂತು.

ಈ ದೃಷ್ಟಿಯಲ್ಲಿ ರಾಜಕೀಯ ಪಕ್ಷಗಳ ನಡುವೆ ‘ಕನಿಷ್ಠ ಸಾಮಾನ್ಯ ಒಪ್ಪಂದ’ ಆಗಬೇಕಿದೆ. ಕೊನೆಯ ಪಕ್ಷ ಚುನಾಯಿತ ಪ್ರತಿನಿಧಿಗಳು ಆಯ್ಕೆ ಮಾಡಿ ಕಳುಹಿಸುವ ವಿಧಾನ ಪರಿಷತ್‌ ಹಾಗೂ ರಾಜ್ಯಸಭಾ ಚುವಾನಣೆಗಳನ್ನಾದರೂ ಈ ಪಿಡುಗಿನಿಂದ ಮುಕ್ತಗೊಳಿಸಬೇಕಿದೆ. ಈ ಎರಡು ವೇದಿಕೆಗಳ ಮಹತ್ವವನ್ನು ಹಾಗೂ ಗೌರವವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ರಾಜಕೀಯ ಪಕ್ಷಗಳು ಕ್ರಮ ಕೈಗೊಳ್ಳಬೇಕಿದೆ.

ಚುನಾವಣಾ ಆಯೋಗವೂ ಈ ನಿಟ್ಟಿನಲ್ಲಿ ‘ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಚುನಾವಣಾ ವೆಚ್ಚಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ’ ಎಂದು ಘೋಷಿಸಿ ತನ್ನ ಮೌನ ಸಮ್ಮತಿ ನೀಡಿರುವುದು ವಿಷಾದನೀಯ. ಪ್ರಾಯಶಃ ಸಂವಿಧಾನ ರಚನೆಯ ಆ ದಿನಗಳಲ್ಲಿ ಮುಂದೊಂದು ದಿನ ಪಕ್ಷದಿಂದ ಪಕ್ಷಕ್ಕೆ ಹಾರಿ ಪಕ್ಷಾಂತರ ಮಾಡುವ ಪಿಡುಗು ವ್ಯಾಪಕವಾಗುವುದನ್ನು ಹೇಗೆ ಆ ಹಿರಿಯರು ಊಹೆಯನ್ನೇ ಮಾಡಿರಲಿಲ್ಲವೋ ಅದೇ ರೀತಿ ಚುನಾಯಿತ ಪ್ರತಿನಿಧಿಗಳೇ ಮತ ಚಲಾಯಿಸುವ ಚುನಾವಣೆಗಳಲ್ಲಿ ಹಣದ ಅಟ್ಟಹಾಸ ಹೀಗೆ ರಾರಾಜಿಸುತ್ತದೆೆ ಎಂದು ಅವರು ಊಹಿಸಿರಲಾರರು.

ನಮ್ಮ ಮುಂದೆ ಈಗ ಒಂದು ದೊಡ್ಡ ಸವಾಲಿದೆ. ಈ ಸವಾಲನ್ನು ಎದುರಿಸಲು ಎಲ್ಲಾ ಪಕ್ಷದ ನಾಯಕರೂ ಒಂದುಗೂಡಿ ಯೋಚಿಸಬೇಕಿದೆ. ಟಿ.ವಿ. ಚರ್ಚೆಯೊಂದರಲ್ಲಿ ನಾನು ತಿಳಿಸಿದಂತೆ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರು ಭಾಗವಹಿಸಬೇಕಾದ ಒಂದು ಪ್ಯಾನೆಲ್‌ ಚರ್ಚೆ ಇಂದು ಅಗತ್ಯವಾಗಿದೆ. ಇಡೀ ನಾಡಿನ ಜನತೆಯ  ಮುಂದೆ ಈ ನಾಯಕರುಗಳು ಈ ಆತಂಕಕಾರಿ ಬೆಳವಣಿಗೆಯ ಬಗ್ಗೆ ಚರ್ಚಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಪರಿಹಾರೋಪಾಯವನ್ನು ಕಂಡು ಹಿಡಿಯುವುದು ಅತ್ಯವಶ್ಯಕ. ವಿಧಾನ ಪರಿಷತ್ತಿನ ಹಿರಿಮೆ ರಾಜಕೀಯ ಪಕ್ಷಗಳ ಲಾಭಗೋಸ್ಕರ ಮಣ್ಣುಪಾಲು ಆಗಬಾರದು. ಈ ದೃಷ್ಟಿಯಿಂದ ರಾಜಕೀಯ ಪಕ್ಷಗಳಲ್ಲಿ ಒಂದು ಗಂಭೀರ ಚಿಂತನೆ ನಡೆದು ಮತ್ತು ವಿಧಾನ ಪರಿಷತ್ತನ್ನು ಗಂಭೀರ ವೇದಿಕೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯ ಮೂಲಕ  ಸರ್ವಪಕ್ಷಗಳೂ  ಕೈಜೋಡಿಸಬೇಕಿದೆ. ಈಗ ಗೆದ್ದಿರುವ ಹೊಸ ಸದಸ್ಯರು ವಿಧಾನ ಪರಿಷತ್‌ನ ಮಹತ್ವ ಅರಿತುಕೊಂಡು ತಮ್ಮನ್ನು ಆಯ್ಕೆ ಮಾಡಿರುವ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಒಳಿತಿಗೋಸ್ಕರ ಕಾರ್ಯಮಗ್ನರಾಗಲಿ ಎಂಬುದು ಎಲ್ಲರ ಆಶಯ.

1 ಟಿಪ್ಪಣಿ Post a comment
  1. ಜನ 3 2016

    nimma anisike correct but anustana kasta

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments