ವಿಷಯದ ವಿವರಗಳಿಗೆ ದಾಟಿರಿ

ಜನವರಿ 4, 2016

8

ಕಳೆದುಹೋಗುತ್ತಿರುವ ದಲಿತ ಚಿಂತನೆ

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ

ದಲಿತ ಸಾಹಿತ್ಯ ಸಮ್ಮೇಳನದಲಿತ ಸಾಹಿತ್ಯವಲಯ ಒಂದಿಷ್ಟು ಹೆಚ್ಚೇ ಎನ್ನುವಷ್ಟು ಮುನಿಸಿಕೊಂಡಿದೆ. ಅದಕ್ಕೆಂದೇ ಕಳೆದ ಆರು ವರ್ಷಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಅವರು ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುತ್ತಿರುವರು. ಸಾಹಿತ್ಯದ ಮುಖ್ಯವಾಹಿನಿಯಲ್ಲಿ ನಮಗೆ ಪ್ರವೇಶ ದೊರೆಯುತ್ತಿಲ್ಲ, ಪ್ರಶಸ್ತಿ-ಪುರಸ್ಕಾರ-ಗೌರವಗಳಿಂದ ನಾವು ವಂಚಿತರು, ದಲಿತ ಸಾಹಿತ್ಯ ಮತ್ತು ಬರಹಗಾರರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಕನ್ನಡದ ದಲಿತ ಸಾಹಿತ್ಯವಲಯ ತನ್ನ ಅಸ್ಮಿತೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಿಜಕ್ಕೂ ಕನ್ನಡದ ಒಟ್ಟು ಸಾಹಿತ್ಯ ಕ್ಷೇತ್ರಕ್ಕೆ ಆತಂಕ ತಂದೊಡ್ಡುತ್ತಿರುವ ಬೆಳವಣಿಗೆಯಿದು. ದಲಿತ ಸಾಹಿತ್ಯ ಈಗ ಕನ್ನಡ ಸಾಹಿತ್ಯದ ಬಹುಮುಖ್ಯ ಭಾಗ ಎನ್ನುವ ಮನ್ನಣೆಗೆ ಪಾತ್ರವಾಗಿದೆ. ದಲಿತ ಸಾಹಿತ್ಯವನ್ನು ಹೊರಗಿಟ್ಟು ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಇತಿಹಾಸವನ್ನು ನೋಡುವುದು ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಅಸಾಧ್ಯದ ಸಂಗತಿ. ಹಾಗೆ ನೋಡುವುದು ಕೂಡ ಸಲ್ಲದು. ಹಾಗೊಂದು ವೇಳೆ ದಲಿತ ಸಾಹಿತ್ಯವನ್ನು ಹೊರಗಿಟ್ಟು ನೋಡಿದಲ್ಲಿ ಕನ್ನಡ ಸಾಹಿತ್ಯದ ಒಟ್ಟು ಚಿತ್ರಣ ನಮಗೆ ದಕ್ಕಲಾರದು. ಇಲ್ಲಿ ಕುವೆಂಪು, ಕಾರಂತ, ಬೇಂದ್ರೆ ಅವರಷ್ಟೇ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ ಸಹ ಕನ್ನಡದ ಬಹುಮುಖ್ಯ ಬರಹಗಾರರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ದಲಿತ ಬರಹಗಾರರು ನೀಡಿದ ಕೊಡುಗೆ ತುಂಬ ಮೌಲಿಕವಾದದ್ದು. ಇವತ್ತು ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ಮುಖ್ಯಧಾರೆಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಅನೇಕ ದಲಿತ ಲೇಖಕರ ಸಾಹಿತ್ಯವನ್ನು ಆದರ್ಶವಾಗಿಟ್ಟುಕೊಂಡು ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ದಲಿತೇತರ ಬರಹಗಾರರು ಇಲ್ಲಿರುವರು. ಕಾರಂತರ ‘ಚೋಮನ ದುಡಿ’ಯಷ್ಟೇ ಮಹಾದೇವರ ‘ಕುಸುಮ ಬಾಲೆ’ ಸಹ ಅಸಂಖ್ಯಾತ ಓದುಗರ ಓದಿನ ವ್ಯಾಪ್ತಿಗೆ ದಕ್ಕಿದೆ. ಅನೇಕ ದಲಿತ ಲೇಖಕರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾಗಿರುವರು. ದಲಿತ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುತ್ತಿಲ್ಲ ಎನ್ನುವ ಆಪಾದನೆಯಿಂದ ಕಳಚಿಕೊಳ್ಳುವ ಪ್ರಯತ್ನವಾಗಿ 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಲಿಂಗಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ದಲಿತ ಸಾಹಿತಿಗಳನ್ನು ಆಯ್ಕೆ ಮಾಡಿದ ಉದಾಹರಣೆಗಳಿವೆ. ಹೀಗಿದ್ದೂ ದಲಿತ ಸಾಹಿತ್ಯವಲಯ ಮುನಿಸಿಕೊಂಡಿದೆ.

ಒಂದಿಷ್ಟು ದಲಿತ ಲೇಖಕರು ಜೊತೆಗೂಡಿ ದಲಿತ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿ ಆ ಮೂಲಕ ದಲಿತ ಲೇಖಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯಕ್ಕೆ ಚಾಲನೆ ನೀಡಿರುವರು. ಹೀಗೆ ಅಸ್ತಿತ್ವಕ್ಕೆ ಬಂದ ದಲಿತ ಸಾಹಿತ್ಯ ಪರಿಷತ್ತಿನ ಅತಿ ಮಹತ್ವದ ಚಟುವಟಿಕೆಗಳಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವೂ ಒಂದು. ದಲಿತ ಸಾಹಿತ್ಯ ಪರಿಷತ್ತು ದಲಿತ ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಯೋಜಿಸುವ ಪರಿಪಾಠವನ್ನಿಟ್ಟುಕೊಂಡಿದೆ. ಈಗಾಗಲೇ ಆರು ದಲಿತ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿರುವ ಹೆಮ್ಮೆ ದಲಿತ ಸಾಹಿತ್ಯ ಪರಿಷತ್ತಿನದಾಗಿದೆ. ದಲಿತ ಸಾಹಿತಿಗೆ ಸಮ್ಮೇಳನದ ಸರ್ವಾಧ್ಯಕ್ಷ ಗೌರವ, ದಲಿತ ಸಾಧಕರಿಗೆ ಸನ್ಮಾನ, ದಲಿತ ಲೇಖಕರ ಕೃತಿಗಳಿಗೆ ಪ್ರಶಸ್ತಿ, ಯುವ ದಲಿತ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹ, ದಲಿತರ ಸಮಸ್ಯೆಗಳನ್ನು ಕುರಿತು ಚರ್ಚೆ ಮತ್ತು ಸಂವಾದ, ಸಮ್ಮೇಳನದ ಕೊನೆಯ ದಿನ ನಿರ್ಣಯಗಳ ಅಂಗೀಕಾರ ಹೀಗೆ ಹಲವು ಚಟುವಟಿಕೆಗಳು ಅನಾವರಣಗೊಳ್ಳುತ್ತವೆ. ಕನ್ನಡ ಸಾಹಿತ್ಯದಲ್ಲಿ ಒಂದಿಷ್ಟು ಆಸಕ್ತಿ ಇರುವ ನನಗೆ ದಲಿತ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳನ್ನು ತೀರ ಹತ್ತಿರದಿಂದ ನೋಡುವ ಅವಕಾಶ ಇತ್ತೀಚಿಗೆ ಒದಗಿಬಂತು. ನಾನಿದ್ದ ಊರಿನಲ್ಲೇ ಆರನೇ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದರಿಂದ ಅಂಥದ್ದೊಂದು ಅವಕಾಶವನ್ನು ಕೈಚೆಲ್ಲುವ ಹಾಗಿರಲಿಲ್ಲ. ಜೊತೆಗೆ ಮಹಾದೇವ, ಸಿದ್ಧಲಿಂಗಯ್ಯ, ಬರಗೂರು, ಮೊಗಳ್ಳಿ, ನಾ.ದಿವಾಕರ ಅವರ ಬರಹಗಳನ್ನು ಅತ್ಯಂತ ಆಸಕ್ತಿಯಿಂದ ಓದುವ ನನಗೆ ಲೇಖಕರನ್ನು ನೇರವಾಗಿ ಭೇಟಿಯಾಗಿ ಮಾತನಾಡಿಸುವುದು ಖುಷಿಯ ಸಂಗತಿಯಾಗಿತ್ತು. ದಲಿತ ಚಿಂತನೆ ಸಮ್ಮೇಳನದಲ್ಲಿ ಹೇಗೆ ಅನಾವರಣಗೊಳ್ಳುವುದು ಎನ್ನುವ ಕುತೂಹಲದಿಂದ ಹೋದ ನನಗೆ ಅಲ್ಲಿನ ಚರ್ಚೆ ಮತ್ತು ಭಾಷಣದ ವಿಷಯವಸ್ತು ಅತ್ಯಂತ ನೀರಸವಾಗಿ ಕಂಡಿತು.ಹಿರಿಯ ದಲಿತ ಲೇಖಕರ ಅನುಪಸ್ಥಿತಿ ಸಮ್ಮೇಳನದ ಬಹುಮುಖ್ಯ ಕೊರತೆಯಾಗಿ ಕಾಣಿಸುವುದರ ಜೊತೆಗೆ ಅಸಹನೆ, ನಿಂದನೆ, ಹೊಗಳಿಕೆಯ ಆತ್ಮರತಿ, ವ್ಯಕ್ತಿತ್ವದ ವೈಭವೀಕರಣ, ವ್ಯಂಗ್ಯ ಮಾತುಗಳ ನಡುವೆ ದಲಿತ ಚಿಂತನೆ ಕಳೆದುಹೋಗುತ್ತಿರುವಂತೆ ಭಾಸವಾಯಿತು.

ಗಾಂಧಿ ಮತ್ತು ವಿಶ್ವೇಶ್ವರಯ್ಯ

ದಲಿತರ ಒಂದು ತಲೆಮಾರಿನ ಪೀಳಿಗೆ ಗಾಂಧಿಯನ್ನು ಕಾರಣವಿಲ್ಲದೆ ದ್ವೇಷಿಸುತ್ತಿರುವರು. ಪುಣೆ ಒಪ್ಪಂದವನ್ನು ಆಧಾರವಾಗಿಟ್ಟುಕೊಂಡು ಅಂಬೇಡ್ಕರ್ ಮತ್ತು ಗಾಂಧೀಜಿ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎನ್ನುವ ಭಾವನೆಯನ್ನು ದಲಿತ ಯುವ ಪೀಳಿಗೆಯಲ್ಲಿ ಬಲವಂತವಾಗಿ ಬೇರೂರಲಾಗಿದೆ. ಇಂಥ ಮನಸ್ಥಿತಿಯ ದಲಿತ ಯುವಕರು ದಲಿತ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಗಾಂಧಿಯ ನಿಂದನೆ ಮತ್ತು ಅವಹೇಳನದ ಮಾತುಗಳನ್ನಾಡಲು ಉಪಯೋಗಿಸಿಕೊಂಡರು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಜೊತೆಗೆ ಸಮ್ಮೇಳನದ ವೇದಿಕೆಯ ಹಿಂದೆ ಗಾಂಧಿಯ ಭಾವಚಿತ್ರವನ್ನು ಬಳಸಿಕೊಳ್ಳಲಾರದಷ್ಟು ಅವರಿಗೆ ಗಾಂಧಿಯ ಕುರಿತು ಅಸಹನೆ. ಈ ಸಂದರ್ಭ ನನಗೆ ದೇವನೂರ ಮಹಾದೇವ ನೆನಪಾಗುತ್ತಾರೆ.ಮಹಾದೇವ ಗಾಂಧಿಯನ್ನು ಉತ್ಕಟವಾಗಿ ಪ್ರೀತಿಸುವ ಕನ್ನಡದ ಅನನ್ಯ ಬರಹಗಾರ. ಅವರೇ ಹೇಳುವಂತೆ ‘ಹಿಂದಿನ ತಲೆಮಾರಿನ ದಲಿತರ ಮನೆಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ಚಿತ್ರಗಳು ಇರುತ್ತಿದ್ದವು. ಆದರೆ ಇಂದಿನ ಯುವ ದಲಿತರು ಗಾಂಧಿಯ ಚಿತ್ರವನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಗಾಂಧಿ ಮತ್ತು ಅಂಬೇಡ್ಕರ್ ಮಧ್ಯೆ ಭಿನ್ನಾಭಿಪ್ರಾಯವಿತ್ತೆಂದು ದಲಿತ ಯುವಕರನ್ನು ದಾರಿತಪ್ಪಿಸಲಾಗುತ್ತಿದೆ. ಆದರೆ ಇಬ್ಬರ ದಾರಿ ಬೇರೆ ಬೇರೆಯಾದರೂ ಅವರಿಬ್ಬರೂ ಮಾಡುತ್ತಿದ್ದ ಕೆಲಸ ಒಂದೇ’ ಎನ್ನುತ್ತಾರೆ. ದಲಿತ ಸಂಘರ್ಷ ಸಮಿತಿ ‘ಗಾಂಧಿ’ ಸಿನಿಮಾ ನೋಡದಂತೆ ಬಹಿಷ್ಕರಿಸಿದಾಗ ಮಹಾದೇವ ಗಾಂಧಿ ಮೆಲಿನ ಪ್ರೀತಿಯಿಂದ ಆ ಸಿನಿಮಾ ನೋಡುತ್ತಾರೆ. ಲೇಖಕರೋರ್ವರು ಹೇಳುವಂತೆ ಗಾಂಧಿಯಷ್ಟು ಬುದ್ಧ ಇನ್ನು ದೇವನೂರ ಮಹಾದೇವರ ಒಳಗಿಳಿದಿಲ್ಲ ಎನ್ನುವ ಮಾತು ಗಾಂಧಿ ಮೇಲಿರುವ ದೇವನೂರರ ಪ್ರೀತಿಗೆ ಪುರಾವೆಯಾಗಿದೆ. ದೇವನೂರ ಮಹಾದೇವರಂಥ ಸೂಕ್ಷ್ಮ ಸಂವೇದನೆಯ ದಲಿತ ಸಾಹಿತಿ ಗಾಂಧಿಯನ್ನು ಪ್ರೀತಿಸುತ್ತಿರುವ ಹೊತ್ತಿನಲ್ಲೇ ದಲಿತರ ಯುವಜನಾಂಗ ಗಾಂಧಿಯನ್ನು ಇನ್ನಿಲ್ಲದಂತೆ ದ್ವೇಷಿಸುತ್ತಿರುವರು.

ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಹೀಗೆ ಅಸಡ್ಡೆ ಮತ್ತು ಅವಹೇಳನಕ್ಕೆ ಒಳಗಾದ ಇನ್ನೊಂದು ವ್ಯಕ್ತಿತ್ವ ಅದು ವಿಶ್ವೇಶ್ವರಯ್ಯನವರದು. ವಿಶ್ವೇಶ್ವರಯ್ಯನವರ ನಿಂದನೆಗೆ ಪುರಾವೆಯಾಗಿ ಭಾಷಣಕಾರರು ಅವರು ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಕಾಲದಲ್ಲಿ ಮೀಸಲಾತಿಯನ್ನು ವಿರೋಧಿಸಿದರೆಂದು ಪ್ರಸ್ತಾಪಿಸುತ್ತಾರೆ. ಮೀಸಲಾತಿಯನ್ನು ವಿರೋಧಿಸಿದ ಕಾರಣ ವಿಶ್ವೇಶ್ವರಯ್ಯನವರು ದಿವಾನ ಹುದ್ದೆಯಿಂದ ಕೆಳಗಿಳಿಯಬೇಕಾಯಿತು ಎನ್ನುವುದು ಕೆಲವು ದಲಿತ ಲೇಖಕರ ವಾದವಾಗಿದೆ. ಇಂಥ ಅಪವಾದಗಳಿಗೆ ವಿಶ್ವೇಶ್ವರಯ್ಯನವರು ‘ನನ್ನ ವೃತ್ತಿ ಜೀವನದ ನೆನಪುಗಳು’ ಪುಸ್ತಕದಲ್ಲಿ ವಿವರಣೆಯನ್ನು ನೀಡಿರುವರು. ‘ನನ್ನ ವಿಚಾರವು ಶಿಕ್ಷಣವನ್ನು ಸಾರ್ವತ್ರಿಕವಾಗಿ ಹೆಚ್ಚು ವೇಗವಾಗಿ ಎಲ್ಲಡೆಯೂ ಎಲ್ಲರಿಗೂ ದಕ್ಕುವಂತೆ ಮಾಡುವುದು ಮತ್ತು ಕೈಗಾರಿಕೆಯಲ್ಲಿ ಹೆಚ್ಚು ಉತ್ಪಾದನೆ ಮಾಡಿ ರಾಜ್ಯದ ಎಲ್ಲ ಸಮುದಾಯಗಳು ವೇಗವಾಗಿ ಅಭಿವೃದ್ಧಿ ಹೊಂದುವಂತೆ ಮಾಡುವುದಾಗಿತ್ತು. ಇದುವರೆಗೂ ಯಾವುದೇ ನೇಮಕಾತಿಯಲ್ಲಿ ನಾನು ಯಾವುದೇ ಸಮುದಾಯದ ಕುರಿತು ಪಕ್ಷಪಾತ ತೋರಿದೆನೆಂಬ ಯಾವ ಆಪಾದನೆಯೂ ಇರಲಿಲ್ಲ. ಆದಾಗ್ಯೂ ನಾನು ಮಿಲ್ಲರ್ ಸಮಿತಿಯ ನೇಮಕವನ್ನು ವಿರೋಧಿಸಿದನೆಂದು ಭಾವಿಸಲಾಯಿತು’ ಎಂದು ಬರೆಯುತ್ತಾರೆ. ಶೋಷಿತ ಸಮುದಾಯಗಳ ಕುರಿತು ವಿಶ್ವೇಶ್ವರಯ್ಯನವರು ಹೀಗೆ ಹೇಳುತ್ತಾರೆ ‘ಕೆಲವರ ಪಾಲಿಗೆ ವಿಲಾಸಿ ಜೀವನ ಮತ್ತು ಇನ್ನು ಕೆಲವರ ಪಾಲಿಗೆ ದಾರುಣ ಬಡತನ ಸಮಾಜದಲ್ಲಿಂದು ನಾವು ಕಾಣುತ್ತಿರುವ ವಾಸ್ತವ ಸತ್ಯ. ಇದು ‘ಇರುವವರ’ ಮತ್ತು ‘ಇಲ್ಲದವರ’ ನಡುವೆ ವರ್ಗಭೇದವನ್ನು ಸೃಷ್ಟಿಸುತ್ತಿದೆ. ಆಸ್ತಿವಂತರು ಸಂಖ್ಯಾದೃಷ್ಟಿಯಲ್ಲಿ ಕಮ್ಮಿ ಶ್ರಮಿಕ ವರ್ಗವು ಸಂಖ್ಯಾ ಬಾಹುಳ್ಯವುಳ್ಳವರು ಅವರು ಇತ್ತೀಚಿಗೆ ಒಂದುಗೂಡಲು ಕಲಿತಿದ್ದು ತಮ್ಮ ಒಡೆಯರನ್ನು ಎದುರಿಸಿ ನಿಂತು ರಿಯಾಯಿತಿಗಳನ್ನು ಒತ್ತಾಯಿಸಿ ಪಡೆಯಬಲ್ಲವರಾಗಿದ್ದಾರೆ’ ಹೀಗೆ ಶ್ರಮಿಕ ವರ್ಗ ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ವಿಶ್ವೇಶ್ವರಯ್ಯನವರು ಇಂದು ಅದೇ ಸಮುದಾಯಗಳಿಂದ ಅಪಮಾನ ಮತ್ತು ಅವಹೇಳನಗೊಳಗಾಗುತ್ತಿದ್ದಾರೆ.

ಮೀಸಲಾತಿಯ ಗುಮ್ಮ

ದಲಿತ ಸಮುದಾಯ ಮೀಸಲಾತಿಯನ್ನು ತಮ್ಮ ಪರಂಪರಾಗತವಾದ ಆಸ್ತಿ ಎಂದು ಪರಿಭಾವಿಸಿದೆ. ದಲಿತ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಲೇಖಕರೋರ್ವರು ಮೀಸಲಾತಿ ಅದು ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಿಲ್ಲಿಸುವುದಾಗಲಿ ಇಲ್ಲವೇ ಬೇರೆ ಸಮುದಾಯಗಳು ಈ ಸೌಲಭ್ಯವನ್ನು ಕಸಿದುಕೊಳ್ಳುವುದಾಗಲಿ ಅಸಾಧ್ಯದ ಸಂಗತಿ ಮತ್ತು ಈ ಒಂದು ಸೌಲಭ್ಯ ನಮಗೆಲ್ಲ ಶಾಶ್ವತವಾಗಿ ಸಿಗಲಿದ್ದು ದಲಿತರು ಚಿಂತಿಸುವ ಅಗತ್ಯವಿಲ್ಲವೆಂದು ಭರವಸೆಯ ಮಾತುಗಳನ್ನಾಡಿದರು. ಹಲವು ದಶಕಗಳ ಕಾಲ ಶೋಷಣೆಗೆ ಒಳಗಾದ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯಬೇಕಾದದ್ದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅದೊಂದು ಸರಿಯಾದ ನಡೆ. ಆದರೆ ಇಂಥದ್ದೊಂದು ಸೌಲಭ್ಯ ಎಲ್ಲಿಯವರೆಗೆ ದೊರೆಯಬೇಕು ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಮೀಸಲಾತಿ ಸೌಲಭ್ಯವನ್ನು ಕೊಡಮಾಡಿದ ಆ ಘಳಿಗೆ ಡಾ.ಅಂಬೇಡ್ಕರ್ ಈ ಸೌಲಭ್ಯವನ್ನು ಹತ್ತು ವರ್ಷಗಳ ಅವಧಿಗೆ ಸೀಮಿತಗೊಳಿಸಿ ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಇಷ್ಟು ಅವಧಿ ಸಾಕೆಂದು ನಿರ್ಧರಿಸಿದರು. ಆದರೆ ನಮ್ಮನ್ನಾಳುವ ರಾಜಕಾರಣಿಗಳು ಈ ಮೀಸಲಾತಿ ಸೌಲಭ್ಯವನ್ನು ಆಧಾರವಾಗಿಟ್ಟುಕೊಂಡು ತಮ್ಮ ತಮ್ಮ ವೋಟ್ ಬ್ಯಾಂಕ್‍ನ್ನು ಕಟ್ಟಿಕೊಳ್ಳುತ್ತ ಹೋದ ಪರಿಣಾಮ ಅರವತ್ತು ವರ್ಷಗಳಾದರೂ ಮೀಸಲಾತಿಯ ಸೌಲಭ್ಯವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಜೊತೆಗೆ ಈ ಮೀಸಲಾತಿ ಸೌಲಭ್ಯದಿಂದ ಸಮಾಜದ ಮುಖ್ಯಸ್ತರದಲ್ಲಿ ಗುರುತಿಸಿಕೊಳ್ಳುತ್ತಿರುವ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲರಾದ ದಲಿತ ಸಮುದಾಯದ ಜನ ಇವತ್ತಿಗೂ ಅಂಥದ್ದೊಂದು ಸೌಲಭ್ಯದ ಫಲಾನುಭವಿಗಳಾಗುತ್ತಿರುವುದು ದುರಂತದ ಸಂಗತಿ. ತನ್ನದೇ ಸಮುದಾಯದ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಈ ಮೀಸಲಾತಿಯ ಹೆಚ್ಚಿನ ಸೌಲಭ್ಯ ಸಿಗಲಿ ಎಂದು ಆಶಿಸುವ ಮನಸ್ಥಿತಿ ಇವತ್ತಿನ ಸಬಲರಾದ ದಲಿತರಲ್ಲಿ ಇಲ್ಲವಾಗಿದೆ. ಸ್ವಯಂಪ್ರೇರಣೆಯಿಂದ ಮೀಸಲಾತಿ ಸೌಲಭ್ಯವನ್ನು ನಿರಾಕರಿಸುವ ಸುಶಿಕ್ಷಿತ ಮತ್ತು ಪ್ರಜ್ಞಾವಂತ ದಲಿತರ ಸಂಖ್ಯೆ ತೀರ ವಿರಳ. ಒಂದರ್ಥದಲ್ಲಿ ದಲಿತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯದಿಂದ ನಾವುಗಳು ವಂಚಿತರಾಗಬಹುದೆನ್ನುವ ಭೀತಿ ಕಾಡುತ್ತಿದೆ.

ಹೀಗೆ ಮೀಸಲಾತಿಯ ಮೋಹ ಮತ್ತು ವಾಂಛೆಗೆ ಒಳಗಾದ ದಲಿತ ಬರಹಗಾರರು ಅದನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸುತ್ತಿರುವರೆ ವಿನ: ಅದೊಂದು ನಿರ್ಧಿಷ್ಟ ಅವಧಿಗೆ ಕೊಡಮಾಡಿದ ಸೌಲಭ್ಯ ಎಂದು ಒಪ್ಪಿಕೊಳ್ಳುತ್ತಿಲ್ಲ. ಜೊತೆಗೆ ಅಂಬೇಡ್ಕರ್ ಈ ಮೀಸಲಾತಿ ಸೌಲಭ್ಯವನ್ನು ಹತ್ತು ವರ್ಷಗಳ ಅವಧಿಗೆ ಮಾತ್ರ ಸೀಮಿತಗೊಳಿಸಿ ಎಂದು ಹೇಳಿರುವರೆಂದು ವೇದಿಕೆಯಲ್ಲಿ ನಿಂತು ಮಾತನಾಡುವ ಎದೆಗಾರಿಕೆ ತೋರುತ್ತಿಲ್ಲ. ದಲಿತ ಸಾಹಿತ್ಯ ಸಮ್ಮೇಳನದ ಆ ವೇದಿಕೆಯಲ್ಲಿ ಯಾವ ದಲಿತ ಸಾಹಿತಿಯಾಗಲಿ ಅಥವಾ ದಲಿತ ಚಿಂತಕನಾಗಲಿ ಆರ್ಥಿಕವಾಗಿ ಸಬಲರಾದ ದಲಿತರು ಮೀಸಲಾತಿ ಸೌಲಭ್ಯವನ್ನು ನಿರಾಕರಿಸಿ ಎಂದು ಕರೆಕೊಡುವ ಧೈರ್ಯ ಮಾಡಲಿಲ್ಲ. ಈ ಸಂದರ್ಭ ನಾಡಿನ ಹಿರಿಯ ಸಾಹಿತಿ ಡಾ.ಚೆನ್ನಣ್ಣ ವಾಲಿಕಾರ ಅವರು ಹೇಳಿದ ಮಾತು ಮೀಸಲಾತಿ ಸೌಲಭ್ಯದ ದುರ್ಬಳಕೆಗೆ ಹಿಡಿದ ಕೈಗನ್ನಡಿಯಾಗಿದೆ. ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತ ಹೀಗೆ ಹೇಳಿರುವರು ‘ಇವತ್ತು ಅಸ್ಪೃಶ್ಯರೆಂದು ಕರೆಯುವ ಹಿಂದುಳಿದ ವರ್ಗದವರು ಯಾವ ಮೇಲ್ವರ್ಗದವರೊಂದಿಗೂ ಹೋರಾಟ ಮಾಡಬೇಕಾಗಿಲ್ಲ. ಅವರು ನಿಜವಾಗಿಯೂ ಹೋರಾಟ ಮಾಡಬೇಕಾಗಿರುವುದು ತಮ್ಮದೇ ವರ್ಗದ ಸ್ಥಿತಿವಂತರೊಂದಿಗೆ’.

ಪ್ರಶಸ್ತಿ ಮತ್ತು ಲಾಬಿ

ದಲಿತ ಚಿಂತಕರೊಬ್ಬರು ದಲಿತ ಸಾಹಿತಿಗಳು ಲಾಬಿ ಮಾಡಿ ಪ್ರಶಸ್ತಿ ಪಡೆಯಲಿ ಎಂದು ಹೇಳಿದ ಮಾತು ಕನ್ನಡ ಸಾಹಿತ್ಯದ ಬಹುಮುಖ್ಯ ಬೆಳವಣಿಗೆ ಹಾಗೂ ಭಾಗವೆಂದೇ ಗುರುತಿಸಲ್ಪಟ್ಟ ದಲಿತ ಸಾಹಿತ್ಯಕ್ಕೆ ಮಾಡಿದ ಅಪಚಾರ. ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಕಿ ರಂ ನಾಗರಾಜ, ಆಲನಹಳ್ಳಿ, ಡಿ.ಆರ್.ನಾಗರಾಜ ಅವರಂಥ ದಲಿತ ಸಾಹಿತಿಗಳು ತಮ್ಮ ಮೌಲಿಕ ಬರವಣಿಗೆಯಿಂದ ಕನ್ನಡ ಸಾಹಿತ್ಯದ ವೈಚಾರಿಕ ವಲಯದಲ್ಲಿ ಗುರುತಿಸಿ ಮತ್ತು ಗೌರವಿಸಿಕೊಂಡ ಉದಾಹರಣೆ ನಮ್ಮೆದುರಿಗಿರುವಾಗ ದಲಿತ ಸಾಹಿತಿಗಳು ಪ್ರಶಸ್ತಿ ಗೌರವಕ್ಕಾಗಿ ಲಾಬಿ ಮಾಡುವಷ್ಟು ಕೀಳುಮಟ್ಟಕ್ಕಿಳಿಯುವ ಅಗತ್ಯವಿಲ್ಲ. ಕನ್ನಡ ಸಾಹಿತ್ಯ ಅಕಾಡೆಮಿ ಕಾಲಕಾಲಕ್ಕೆ ದಲಿತ ಬರಹಗಾರರನ್ನು ಗುರುತಿಸಿ ಗೌರವಿಸುತ್ತ ಬಂದಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷತೆ, ಅಕಾಡೆಮಿ ಬಹುಮಾನ, ಸಮ್ಮೇಳನದ ಅಧ್ಯಕ್ಷ ಸ್ಥಾನ, ಗೌರವ ಡಾಕ್ಟರೇಟ್, ನಾಡೋಜ, ಪಂಪ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ ಮತ್ತು ಗೌರವಗಳಿಗೆ ದಲಿತ ಲೇಖಕರು ಭಾಜನರಾಗಿರುವರು. ಜೊತೆಗೆ ಪ್ರಶಸ್ತಿ ಪುರಸ್ಕಾರಗಳೇ ಬರಹಗಾರನ ಬರವಣಿಗೆಯ ಶ್ರೇಷ್ಠತೆಯ ಮಾನದಂಡಗಳು ಎನ್ನುವ ನಿರ್ಧಾರಕ್ಕೆ ಬಂದು ನಿಲ್ಲುವುದು ತಪ್ಪು. ತಾನು ಬದುಕುತ್ತಿರುವ ಸಮಾಜದಲ್ಲಿನ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲುವುದರಲ್ಲೇ ಬರವಣಿಗೆಯ ಮತ್ತು ಬರಹಗಾರನ ಸಾರ್ಥಕತೆ ಅಡಗಿದೆ. ದಲಿತ ಸಾಹಿತ್ಯ ಕೂಡ ಇಂಥದ್ದೊಂದು ಉದ್ದೇಶವನ್ನು ಇಟ್ಟುಕೊಂಡೇ ಸಾಹಿತ್ಯದ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು. ಬರವಣಿಗೆಯ ಒಂದು ಸ್ಥಾಪಿತ ಸೂತ್ರವನ್ನು ಮುರಿದು ಹೊಸ ಶೈಲಿ ಮತ್ತು ಚಿಂತನೆಯನ್ನು ಕನ್ನಡ ಸಾಹಿತ್ಯದಲ್ಲಿ ಹುಟ್ಟುಹಾಕಿದ ಶ್ರೇಯಸ್ಸು ದಲಿತ ಸಾಹಿತ್ಯಕ್ಕೆ ಸಲ್ಲಬೇಕು. ತಾವು ಬದುಕುತ್ತಿರುವ ಸಮುದಾಯದ ಬದುಕಿನ ಸಮಸ್ಯೆಗಳನ್ನು ಅಕ್ಷರಕ್ಕಿಳಿಸಿ ಬಹುದೊಡ್ಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಕ್ಕೆ ಕಾರಣರಾದ ದಲಿತ ಬರಹಗಾರರು ಪ್ರಶಸ್ತಿ ಮತ್ತು ಪುರಸ್ಕಾರಕ್ಕಿಂತ ತನ್ನ ಸಮುದಾಯವನ್ನು ಕೈಹಿಡಿದು ಮೇಲೆತ್ತುವ ವಿಶಾಲ ಅರ್ಥದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವರು. ಇದನ್ನು ನಮ್ಮ ಯುವ ದಲಿತ ಚಿಂತಕರು ಅರ್ಥ ಮಾಡಿಕೊಳ್ಳಬೇಕು.

ದಲಿತ ಮಹಿಳಾ ಸಮಸ್ಯೆಗಳು

ಮೇಲ್ವರ್ಗದವರ ನಿಂದನೆಗೆ ತಮ್ಮ ಚಿಂತನೆಯನ್ನು ಸೀಮಿತಗೊಳಿಸಿಕೊಂಡ ದಲಿತ ಬರಹಗಾರರು ತಮ್ಮದೇ ಸಮುದಾಯದ ಮಹಿಳೆಯರ ಸಮಸ್ಯೆಗಳಿಗೆ ವೇದಿಕೆಯಲ್ಲಿ ಅವಕಾಶ ನೀಡದಿರುವುದು ವಿಪರ್ಯಾಸದ ಸಂಗತಿ. ದಲಿತೇತರ ಮಹಿಳೆಗಿಂತ ಸಮಾಜದಲ್ಲಿ ಹೆಚ್ಚು ಶೋಷಣೆಗೆ ಒಳಗಾದವಳು ದಲಿತ ಮಹಿಳೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಏಕೆಂದರೆ ಆಕೆ ತಾನು ಮಹಿಳೆ ಎನ್ನುವುದಲ್ಲದೆ ದಲಿತಳು ಎನ್ನುವ ಕಾರಣದಿಂದಲೂ ಶೋಷಣೆಗೆ ಒಳಗಾಗುತ್ತಿರುವಳು. ಮಹಿಳಾ ಸಮಸ್ಯೆ ಎನ್ನುವುದು ಸಮುದಾಯದಿಂದ ಸಮುದಾಯಕ್ಕೆ ಬೇರೆ ಬೇರೆಯಾಗಿದೆ. ಒಂದು ವರ್ಗದ ಮಹಿಳಾ ಸಮಸ್ಯೆಯ ಚರ್ಚೆ ಅದು ಎಲ್ಲ ವರ್ಗದ ಮಹಿಳೆಯರ ಸಮಸ್ಯೆಗಳಿಗೆ ಉತ್ತರವಾಗಲಾರದು. ಇಲ್ಲಿ ಮೇಲ್ವರ್ಗದ, ಮಧ್ಯಮ ವರ್ಗದ, ಅಲ್ಪಸಂಖ್ಯಾತ, ಮುಸ್ಲಿಂ, ಹಿಂದುಳಿದ ವರ್ಗ ಮತ್ತು ದಲಿತ ಹೀಗೆ ವಿಭಿನ್ನ ಮಹಿಳಾ ವರ್ಗಗಳಿವೆ. ಅನಂತಮೂರ್ತಿ ಅವರ ‘ಫಣಿಯಮ್ಮ’ನಾಗಲಿ ಇಲ್ಲವೇ ಗೀತಾ ನಾಗಭೂಷಣರ ‘ಬದುಕು’ ಎಲ್ಲ ವರ್ಗದ ಮಹಿಳೆಯರ ಸಮಸ್ಯೆಗಳನ್ನು ಪ್ರತಿನಿಧಿಸಲಾರವು. ಮೇಲ್ವರ್ಗದವರ ನಿಂದನೆ, ಮೀಸಲಾತಿ ಕುರಿತು ಆತಂಕ, ಪ್ರಶಸ್ತಿಗಾಗಿ ಮಾಡಬೇಕಾದ ಲಾಬಿಗಿಂತ ದಲಿತ ಮಹಿಳೆಯರ ಸಮಸ್ಯೆಗಳಿಗೆ ದಲಿತ ಸಾಹಿತ್ಯ ಸಮ್ಮೇಳನದ ವೇದಿಕೆ ಧ್ವನಿಯಾಗಬೇಕು.

ಹಿರಿಯ ಸಾಹಿತಿಗಳ ಅನುಪಸ್ಥಿತಿ

ದಲಿತ ಸಾಹಿತ್ಯ ವಲಯ ಮುನಿಸಿಕೊಂಡು ಪ್ರತ್ಯೇಕತೆಗಾಗಿ ಹಂಬಲಿಸುತ್ತಿರುವ ಹೊತ್ತಿನಲ್ಲಿ ದಲಿತ ಸಮುದಾಯದ ಹಿರಿಯ ಲೇಖಕರು ಈ ಪ್ರತ್ಯೇಕ ಗುಂಪಿನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಿಲ್ಲದಿರುವುದು ಅಚ್ಚರಿಯ ಬೆಳವಣಿಗೆಗಳಲ್ಲೊಂದು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರತ್ಯೇಕವಾದ ದಲಿತ ಸಾಹಿತ್ಯ ಪರಿಷತ್ತು ಮುಂದೊಂದು ದಿನ ಅದು ಊರ ಹೊರಗಿರುವ ಕೇರಿಯಂತಾಗಬಹುದು ಎನ್ನುವ ಆತಂಕ ಈ ಹಿರಿಯ ಲೇಖಕರದಾಗಿರಬಹುದು. ಅವರ ಆತಂಕಕ್ಕೆ ಪುಷ್ಟಿಕೊಡುವಂತೆ ಈ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ದಲಿತೇತರ ಲೇಖಕರಾಗಲಿ ಮತ್ತು ಓದುಗರಾಗಲಿ ಭಾಗವಹಿಸುತ್ತಿಲ್ಲ. ಸಮ್ಮೇಳನದ ವೇದಿಕೆಯಂತೂ ಸಂಪೂರ್ಣವಾಗಿ ದಲಿತ ಲೇಖಕರಿಗೆ ಸೀಮಿತವಾಗಿರುವುದರಿಂದ ಚರ್ಚೆ ಮತ್ತು ಸಂವಾದಗಳಲ್ಲಿ ವಿಷಯ ವೈವಿಧ್ಯತೆಯ ಕೊರತೆ ಎದ್ದು ಕಾಣುತ್ತದೆ. ಲೇಖಕರ ಮಾತುಗಳು ಪದೇ ಪದೇ ಪುನರಾವರ್ತನೆಯಾಗುವುದರಿಂದ ವಿಷಯದ ಏಕತಾನತೆಯಿಂದ ಪ್ರೇಕ್ಷಕ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ಹಿರಿಯ ಸಾಹಿತಿಗಳ ಅನುಪಸ್ಥಿತಿ ಒಂದಿಷ್ಟು ಹೆಚ್ಚೆ ಎನ್ನುವಷ್ಟು ನಿರಾಸೆ ಮೂಡಿಸುತ್ತದೆ. ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪನವರಂಥ ಸಾಹಿತಿಗಳ ಉಪಸ್ಥಿತಿ ಸಮ್ಮೇಳನಕ್ಕೆ ಕಳೆ ತರಬಲ್ಲದು ಮತ್ತು ಆಕ್ರೋಶ ಮತ್ತು ವ್ಯಂಗ್ಯದ ಮಾತುಗಳನ್ನು ಈ ಹಿರಿಯರು ಒಂದಿಷ್ಟು ನಿಯಂತ್ರಿಸಬಲ್ಲರು. ಜೊತೆಗೆ ಈ ಹಿರಿಯ ಬರಹಗಾರರ ಭಾಗವಹಿಸುವಿಕೆಯಿಂದ ಚರ್ಚೆ ಮತ್ತು ಸಂವಾದಗಳ ವಿಷಯ ವಸ್ತುವಿನ ಹರವು ಮತ್ತಷ್ಟು ವಿಸ್ತರಿಸಬಲ್ಲದು. ದಲಿತ ಸಾಹಿತ್ಯ ಪರಿಷತ್ತಿನವರು ದಲಿತೇತರ ಲೇಖಕರಿಗೂ ವೇದಿಕೆಯಲ್ಲಿ ಜಾಗಮಾಡಿ ಕೊಟ್ಟಲ್ಲಿ ದಲಿತರ ಸಮಸ್ಯೆಗಳು ಬೇರೆ ಸಮುದಾಯದವರನ್ನು ಹೋಗಿ  ಮುಟ್ಟಲು ಒಂದಿಷ್ಟು ನೆರವಾಗುವುದು. ಒಟ್ಟಾರೆ ಕನ್ನಡದ ಹಿರಿಯ ಸಾಹಿತಿಗಳ ಅನುಪಸ್ಥಿತಿಯಿಂದಾಗಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮ್ಮೇಳನದಂತೆ ಭಾಸವಾಗುತ್ತಿತ್ತು.

ದಲಿತರ ಹೊಸ ತಲೆಮಾರು

ಸ್ವಾತಂತ್ರ್ಯಾ ನಂತರದ ದಲಿತರ ಎರಡನೇ ಪೀಳಿಗೆ ಸುಶಿಕ್ಷಿತರಾದರೂ ತಾವು ಬೆಳೆದುಬಂದ ಪರಿಸರದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳದೆ ಅದನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದರು. ತಮ್ಮ ಸಮುದಾಯದ ಜನರ ಬದುಕಿನ ಬವಣೆಗಳ ಅರಿವು ಅವರಿಗಿತ್ತು. ತಾವು ಮಾತ್ರವಲ್ಲದೆ ತಮ್ಮವರಿಗೂ ಹೊಸ ಬದುಕನ್ನು ಕಟ್ಟಿಕೊಡಬೇಕೆನ್ನುವ ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕೆನ್ನುವ ಕಾಳಜಿ ಅವರಲ್ಲಿತ್ತು. ಹೀಗೆ ಶಿಕ್ಷಣ ಮತ್ತು ಉದ್ಯೋಗದೊಂದಿಗೆ ನಗರಕ್ಕೆ ವಲಸೆ ಬಂದ ಈ ಎರಡನೆ ತಲೆಮಾರು ಕ್ರಮೇಣ ನಗರ ಬದುಕಿಗೆ ಹೊಂದಿಕೊಂಡು ತನ್ನ ಅಸ್ತಿತ್ವವನ್ನು ತಾನಿದ್ದ ಪರಿಸರದಲ್ಲೇ ಗುರುತಿಸಿಕೊಳ್ಳಲಾರಂಭಿಸಿತು. ಶೋಷಣೆ ಮತ್ತು ಅಸ್ಪೃಶ್ಯತೆಯಿಂದ ಮುಕ್ತವಾದ ನಗರ ಪ್ರದೇಶದ ಬದುಕು ಸಹನೀಯವಾಗುತ್ತ ಹೋದಂತೆ ಈ ತಲೆಮಾರು ಗ್ರಾಮ ಬದುಕಿನಿಂದ ವಿಮುಖವಾಗತೊಡಗಿತು. ಜೊತೆಗೆ ಮೇಲ್ವರ್ಗದವರ ಆಚರಣೆ ಮತ್ತು ಸಂಪ್ರದಾಯಗಳನ್ನು ತಮ್ಮ ಬದುಕಿನಲ್ಲೂ ಅಳವಡಿಸಿಕೊಂಡ ಈ ತಲೆಮಾರು ಗ್ರಾಮಗಳಲ್ಲಿ ವಾಸಿಸುತ್ತಿರುವ ತನ್ನ ಸಮುದಾಯದ ಅನಕ್ಷರಸ್ಥರ ಬದುಕಿನಿಂದ ಸಂಪೂರ್ಣವಾಗಿ ಕಳಚಿಕೊಂಡು ಹೊರಬಂದು ಹೊಸ ಪರಿಸರದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳತೊಡಗಿತು. ಈ ಬದಲಾವಣೆಯ ನೇರ ಪರಿಣಾಮ ಇವರ ನಂತರದ ಮೂರನೆ ತಲೆಮಾರಿನ ದಲಿತರ ಮೇಲಾಯಿತು. ಈ ಮೂರನೆ ತಲೆಮಾರಿನ ಸುಶಿಕ್ಷಿತ ಪೀಳಿಗೆಗೆ ಮೀಸಲಾತಿಯ ಸೌಲಭ್ಯ ಬೇಕೆ ವಿನಃ ದಲಿತ ಸಮುದಾಯದೊಂದಿಗೆ ಗುರುತಿಸಿಕೊಳ್ಳುವುದು ಬೇಕಿಲ್ಲ. ಅಚ್ಚರಿಯ ಸಂಗತಿ ಎಂದರೆ ಈ ಪೀಳಿಗೆಗೆ ಅಂಬೇಡ್ಕರ್ ಸಂವಿಧಾನದ ರಚನಾಕಾರರಾಗಿ ಪರಿಚಿತರೆ ವಿನಃ ದಲಿತ ನಾಯಕರಾಗಿ ಅಲ್ಲ. ಬರಗೂರು, ದೇವನೂರರ ಸಾಹಿತ್ಯಕ್ಕೆ ಇವರುಗಳ ಓದಿನ ವಲಯದಲ್ಲಿ ಪ್ರವೇಶವಿಲ್ಲ. ಹಳ್ಳಿಗಳಲ್ಲಿ ವಾಸಿಸುತ್ತಿರುವ ತನ್ನದೇ ಸಮುದಾಯದ ಅನಕ್ಷರಸ್ಥ ಬಂಧುಗಳನ್ನು ಇವರು ಅಸ್ಪೃಶ್ಯರಂತೆ ನೋಡುತ್ತಾರೆ. ಹೀಗೆ ದಲಿತ ಸಮುದಾಯದ ಒಂದಿಡಿ ಅಕ್ಷರಸ್ಥ ಸಮೂಹ ದಲಿತ ಎನ್ನುವ ಹಣೆಪಟ್ಟಿಯನ್ನು ಕಳಚಿಕೊಂಡು (ಮೀಸಲಾತಿ ಸೌಲಭ್ಯವನ್ನು ಮಾತ್ರ ನಿರಾಕರಿಸುತ್ತಿಲ್ಲ) ತನ್ನದೇ ದಲಿತ ಸಮುದಾಯಕ್ಕೆ ಅಪರಿಚಿತರಾಗಿ ಬದುಕುವುದನ್ನು ರೂಢಿಸಿಕೊಂಡಿದೆ. ಹೀಗಾಗಿ ಇವತ್ತು ಹಳ್ಳಿಗಳಲ್ಲಿ ವಿಶೇಷವಾಗಿ ಅನಕ್ಷರಸ್ಥರು ಮಾತ್ರ ದಲಿತರಾಗಿ ಬದುಕುತ್ತಿರುವರು. ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರೇಕ್ಷಕರಾಗಿ ಪಾಲ್ಗೊಳ್ಳುತ್ತಿರುವವರಲ್ಲಿ ಈ ಗ್ರಾಮೀಣ ಮತ್ತು ಅನಕ್ಷರಸ್ಥ ದಲಿತರ ಸಂಖ್ಯೆಯೇ ಹೆಚ್ಚು. ವಿಪರ್ಯಾಸವೆಂದರೆ ಸಮ್ಮೇಳನದ ವೇದಿಕೆಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವುದು ಮಾತ್ರ ವಿದ್ಯಾವಂತ ದಲಿತರ ಸಮಸ್ಯೆಗಳು.

ಕೊನೆಯ ಮಾತು

ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯಂತ ಆಸಕ್ತಿ ಮತ್ತು ಅಪಾರ ನಿರೀಕ್ಷೆಗಳೊಂದಿಗೆ ಭಾಗವಹಿಸಿದ್ದ ಹಳ್ಳಿಯ ಅನಕ್ಷರಸ್ಥ ವ್ಯಕ್ತಿಯೋರ್ವ ಸಮ್ಮೇಳನದ ಸಭಾಮಂಟಪದ ಹೊರಗೆ ಪರಿಚಿತರೊಂದಿಗೆ ಮಾತನಾಡುತ್ತ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದರು. ‘ನನ್ನ ಗುಡಿಸಿಲಿನೆದುರು ಎರಡಂತಸ್ತಿನ ಮನೆಯಲ್ಲಿ ವಾಸಿಸುತ್ತಿರುವ ನಮ್ಮ ದಲಿತ ಕೇರಿಯ ಯಜಮಾನ ಸಾಕಷ್ಟು ಸ್ಥಿತಿವಂತನಾಗಿದ್ದರೂ ತನ್ನ ಮಕ್ಕಳನ್ನು ಸರ್ಕಾರದ ಖರ್ಚಿನಲ್ಲೆ ಶಾಲೆಗೆ ಸೇರಿಸಿರುವನು.ಅವನದೇ ಜಾತಿಯ ನಮ್ಮ ಮಕ್ಕಳು ಅವನ ಹೊಲದಲ್ಲಿ ಕೂಲಿಗಳಾಗಿ ಬದುಕು ನಡೆಸುತ್ತಿರುವಾಗ ಅವನು ದಲಿತೋದ್ಧಾರದ ಬಣ್ಣ ಬಣ್ಣದ ಮಾತುಗಳನ್ನಾಡುತ್ತ ನಮ್ಮನ್ನು ದಲಿತ ಪ್ರಜ್ಞೆಯ ಸೀಮಿತ ಚೌಕಟ್ಟಿನಲ್ಲೇ ಕಟ್ಟಿಹಾಕಿರುವನು.ನನಗೆ ತಿಳಿದಿರುವಂತೆ ಇಲ್ಲಿ ಮಾತನಾಡುತ್ತಿರುವವರೆಲ್ಲ ಸಾಕಷ್ಟು ಸ್ಥಿತಿವಂತ ದಲಿತರೇ ಆಗಿರುವರು.ಇಲ್ಲಿರುವವರಲ್ಲಿ ಹೆಚ್ಚಿನವರು ದಲಿತ ಬದುಕಿನ ಸಂಕಷ್ಟವನ್ನು ಸ್ವತಹ ಅನುಭವಿಸಿದವರಲ್ಲ.ಅವರ ಮಾತುಗಳಿಗೆ ಅಪ್ಪ ಮತ್ತು ಅಜ್ಜನ ಅನುಭವವೇ ಬಂಡವಾಳ.ಹಳ್ಳಿಗಳಲ್ಲಿನ ದಲಿತರ ಸಮಸ್ಯೆಗಳಿಗೆ ಇವರು ಧ್ವನಿಯಾಗುತ್ತಿಲ್ಲ ಎನ್ನುವ ವೇದನೆ ನನ್ನದು’ ಆ ವ್ಯಕ್ತಿಯ ಅನೌಪಚಾರಿಕ ಮಾತುಗಳ ನಡುವೆ ನುಸುಳಿದ ಸಂಗತಿಯಿದು. ಸಭಾಂಗಣದ ವೇದಿಕೆಯ ಮೇಲೆ ಮೇಲ್ವರ್ಗದವರ ನಿಂದನೆ ಮತ್ತು ತಮ್ಮನ್ನು ತಾವು ಹೊಗಳಿಕೊಳ್ಳುವ ಆತ್ಮರತಿಯಲ್ಲಿ ತೊಡಗಿದ್ದ ನಮ್ಮ ಸೋಕಾಲ್ಡ್ ದಲಿತ ಚಿಂತಕರು ತಮ್ಮದೇ ವರ್ಗದವರ ಅನೇಕ ಸಮಸ್ಯೆಗಳಿಗೆ ಕುರುಡಾಗಿರುವಂತೆ ಆ ಕ್ಷಣ ನನಗೆ ಭಾಸವಾಯಿತು.

8 ಟಿಪ್ಪಣಿಗಳು Post a comment
 1. aryaan
  ಜನ 4 2016

  ನಿಜ ಸ್ಥಿತಿಯನ್ನು ಲೋಪವಿಲ್ಲದೆ ತಿಳಿಸಿದ್ದಿರಿ. ಇಂದಿನ ದಿನಗಳಲ್ಲಿ ಎಲ್ಲಾ ಅನುಕೊಲಗಳು ಸ್ಥಿತಿವಂತ ದಲಿತರು ಮಾತ್ರ ಪಡೆಯುತಿರುವರು. ಬಡ ದಲಿತರಿಗೆ ಏನು ಸಿಗುತ್ತಿಲ ಆದರೆ ದೊರುವುದು ಬ್ರಾಹ್ಮಣ ಅಥವ ಇನ್ನುಳಿದ ಜಾತಿಗಳನ್ನು ಮಾತ್ರ. ಲೇಖನ ಸರಿಯಾಗಿದೆ..

  ಉತ್ತರ
 2. Devu Hanehalli
  ಜನ 4 2016

  Good article. I sincerely appreciate your restraint and clarity in thought.

  ಉತ್ತರ
 3. ವಲವಿ
  ಜನ 4 2016

  ತುಂಬಾ ಉತ್ತಮ ಬರಹ. ದಲಿತರಾದಿಯಾಗಿ ಎಲ್ಲರನ್ನೂ ಚಿಂತನೆಗೆ ಹಚ್ಚುವ ಬರಹ ಇದಾಗಿದೆ. ಉಳ್ಳವರಾದ ದಲಿತರು ಒಮ್ಮೆ ಇದನ್ನು ಓದಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ. ಒಂದು ಚಿಕ್ಕ ತಪ್ಪು ಕಣ್ತಪ್ಪಿನಿಂದ ನುಸುಳಿದೆ. ಅದು ಫಣಿಯಮ್ಮ ಬರೆದವರು ಅನಂತಮೂರ್ತಿ ಅಲ್ಲ. ಎಂ.ಕೆ.ಇಂದಿರಾ

  ಉತ್ತರ
  • valavi
   ಜನ 6 2016

   ರಾಜಾ ಅವರೆ ಉತ್ತಮ ವಿಮರ್ಶಾ ಪುಸ್ತಕದ ಲಿಂಕ್ ನೀಡಿ ಓದಿಸಿದ್ದಕ್ಕೆ ಮೊದಲು ನಿಮಗೆ ಧನ್ಯವಾದಗಳು. ನನ್ನ ಕೆಲವು ಸಂದೇಹಗಳನ್ನು ಶ್ರೀ ಡಂಕಿನ್ ಝಳಕಿ ಅವರಿಗೆ ಕೇಳುತ್ತಿದ್ದೇನೆ. ಅವರು ಈ ಲೇಖನ ಮತ್ತು ಕಮೆಂಟುಗಳನ್ನು ಗಮನಿಸುತ್ತಿದ್ದರೆ ದಯವಿಟ್ಟು ಉತ್ತರಿಸಬೇಕೆಂದು ಆಶಿಸುತ್ತೇನೆ.
   ಝಳಕಿ ಅವರೆ ನೀವು ಗಣೇಶರ ಕಥೆಗಳಲ್ಲಿ ಬರುವ ಕೆಲವು ಘಟನೆಗಳನ್ನು ಹೇಳುತ್ತಾ ಇವನ್ನು ಹೇಗೆ ಅರ್ಥೈಸಿಕೊಳ್ಲಬೇಕೆಂದು ಕೇಳುತ್ತೀರಿ. ಉದಾಹರಣೆಗೆ ಗಣೇಶರ ಎಲ್ಲಾ ಕಥೆಗಳಲ್ಲೂ ದಲಿತರ ದಬ್ಬಾಳಿಕೆ ಶತಮಾನಗಳ ಶೋಷಣೆ ಇತ್ಯಾದಿ ಹೇಳುತ್ತಾ ಅವೇ ಕಥೆಗಳಲ್ಲಿ ಗೌಡ, ಗೌಡತಿ ಮಾಡುವ ಸಹಾಯ, ಹೇಳುವ ಬುದ್ಧಿಮಾತು ಇತ್ಯಾದಿ ಬರೆಯಲ್ಪಟ್ಟಿವೆ. ಶೋಷಕರೇ ಆಗಿದ್ದರೆ ಅವರು ಶಾಲೆ ಕಲಿಯಲು ಏಕೆ ಪ್ರೋತ್ಸಾಹಿಸುತ್ತಿದ್ದರು? ಶೋಷಕರೇ ಆಗಿದ್ದರೆ ಅವರೇಕೆ ಮದುವೆಯಾಗುವ ಬುದ್ದಿಮಾತು ಹೇಳುತ್ತಿದ್ದರು ಎಂದೆಲ್ಲ ಪ್ರಶ್ನೆ ಮಾಡಿದ್ದೀರಿ.
   ಅದೇನೋ ಸರಿ. ಆದರೆ…….
   ಒಬ್ಬಿಬ್ಬರು ಮಾನವೀಯ ಕಾಳಜಿ ಉಳ್ಳವರು ಎಲ್ಲಾ ಕಾಲದಲ್ಲೂ ಎಲ್ಲಾ ಜಾತಿಗಳಲ್ಲೂ ಇದ್ದೇ ಇರುತ್ತಾರೆ. ಅವರ ಪ್ರಮಾಣವೆಷ್ಟು? ಶೋಷಕರ ಪ್ರಮಾಣವೆಷ್ಟು? ಯಾವುದು ಜಾಸ್ತಿ ಇದೆಯೋ ಅದುವೇ ಸ್ಪಷ್ಟ ಚಿತ್ರಣ ಎಂದು ಹೇಳಬಹುದು. ನನ್ನೂರಿನಲ್ಲಿ ಶ್ರೀಯುತ ಗಣಪತರಾವ ಕಾರ್ಖಾನೀಸ್ ಎನ್ನುವವರು ಇದ್ದರು. ಇವರು ಜಾತಿಯಿಂದ ಬ್ರಾಹ್ಮಣರಾಗಿದ್ದರೂ ದಲಿತರಿಗಾಗಿ ಹಗಲಿರುಳು ದುಡಿದ ವ್ಯಕ್ತಿ. ಹಾಗೆಂದು ನನ್ನೂರಿನ ಬ್ರಾಹ್ಮಣರೆಲ್ಲಾ ದಲಿತರ ಪ್ರೀಯರೇ?? ಆ ಕಾಲಕ್ಕೆ ಅವರನ್ನು ಬ್ರಾಹ್ಮಣರೆಲ್ಲಾ ಬಹಿಷ್ಕಾರ ಹಾಕಿದರು. ಅಷ್ಟೇ ಅಲ್ಲ ಅವರ ತಂಗಿಯನ್ನು ಯಾರೂ ಮದುವೆಯಾಗಲು ಮುಂದೆ ಬರಲಿಲ್ಲ. ಅವರು ಕುಮಾರಿಯಾಗಿನೇ ತೀರಿಕೊಂಡರು. [ ಅವರನ್ನು ನಾನು 25 ವರ್ಷದ ಹಿಂದೆ ಬಿ. ಎಡ್ ಮುಗಿಸಿದ ಹೊಸದರಲ್ಲಿ ನೋಡಲು ಹೋಗಿದ್ದೆ. ಅವರ ಹೈಸ್ಕೂಲಿನಲ್ಲಿ ಕೆಲಸ ಕೇಳುವದಕ್ಕಾಗಿ. ನಂತರ ಅವರ ವಿಷ್ಯ ತಿಳಿದಿಲ್ಲ. ಆವಾಗಲೇ ಅವರಿಗೆ 65 ಮೇಲೆ ವಯಸ್ಸಾಗಿತ್ತು. ಅವರು ಜೀವಂತವಾಗಿದ್ದರೆ ನನ್ನನ್ನು ಕ್ಶಮಿಸಿ.] ಗಣಪತ್ ರಾವ್ ಕೂಡ ಮದುವೆಯಾಗಿರಲಿಲ್ಲ. ಇರಲಿ, ಇಂಥ ಉದಾಹರಣೆಗಳು ಎಲ್ಲಾ ಊರಿನಲ್ಲೂ ಸಿಗುತ್ತವೆ. ಆದರೆ ಇಡಿಯಾದ ಸಮಾಜ ದಲಿತರೊಂದಿಗೆ ಹೇಗೆ ನಡೆದುಕೊಂಡಿತೆಂಬುದು ಮುಖ್ಯವೇ ಹೊರತು ಒಬ್ಬಿಬ್ಬರು ದಯಾಳುಗಳಿಂದ ಅವರ ಉದಾಹರಣೆಗಳಿಂದ ದಲಿತರ ಶೋಷಣೆ ಆಗಿಲ್ಲವೆಂದು ನಿರ್ಧರಿಸುವದು ತಪ್ಪಾದ ಗ್ರಹಿಕೆ ಆಗುತ್ತದೆ. ದಲಿತರ ತಂದೆಯರೇ ಹೆಚ್ಚು ತಮ್ಮ ಮಕ್ಕಳನ್ನು ಶೋಷಣೆ ಮಾಡಿದ್ದಾರೆನ್ನುವದು ಕೂಡ ಸಮಂಜಸವಲ್ಲ. ಶ್ರೀ ಭೈರಪ್ಪನವರ ತಂದೆ ಲಿಂಗಣ್ಣಯ್ಯನೂ ಮಗನನ್ನು ಶೋಷಿಸಿದ್ದಾರೆ. ಆದರೆ ಮೇಲೆ ಲೇಖನದಲ್ಲಿ ರಾಜಕುಮಾರರು ಹೇಳುವಂತೆ ಗಣೇಶರಂಥ ಆಧುನಿಕ ಲೇಖಕರ ಸ್ವಂತ ಅನುಭವಗಳು ಇವಲ್ಲ. ಇವು ತಾತ ಮುತ್ತಾತರ ಬಾಯಿಂದ ಕೇಳಿದ ಕಥೆಗಳೆಂದು ಒಪ್ಪಿಕೊಳ್ಳಬಹುದು.

   ಉತ್ತರ
   • ಆನಂದ ಪೂಜಾರ
    ಜನ 14 2016

    ಮೀಸಲಾತಿಯನ್ನು ಕೇವಲ ಹತ್ತು ವರ್ಷಗಳವರೆಗೆ ಮಾತ್ರ ಮುಂದುವರೆಸಬೇಕು ಎಂದು ಡಾ ಬಿ ಆರ್ ಅಂಬೇಡ್ಕರ್ ರವರು ಹೇಳಿದ್ದಾರೆ ಎನ್ನಲಾದ. ವಿಚಾರಕ್ಕೆ ಏನಾದರೂ ಸಾಕ್ಷಿ ಕೊಟ್ಟರೆ ತುಂಬಾ ಉಪಯೋಗ ವಾಗಯತ್ತೆ.

    ಉತ್ತರ
   • ಎಲ್ಲಾರಿಗೂ ನಮಸ್ಕಾರ. ಈ ಲೇಖನ ನನ್ನಂತ ಸಂಶೋಧನಾ ವಿದ್ಯಾರ್ಥಿಗಳಿಗೆ ಹೊಸ ಚಿಂತನೆಯ ಹಾದಿಗೆ ಕರೆದೊಯ್ಯತ್ತದೆ. ದಲಿತರ ಸಬಲೀಕರಣಕ್ಕೆ ದಲಿತೇತತರು ನೀಡಿರುವ ಬಗ್ಗೆ ನಾನು ಸಂಶೋಧನೆ ಕೈಗೊಂಡಿದ್ದೇನೆ, ದಯಮಾಡಿ ದಲಿತರ ಸಬಲೀಕರಣಕ್ಕಾಗಿ ದುಡಿದಿರುವು ಮಾನವೀಯ ಮನಸ್ಸುಗಳನ್ನು ಹಾಗೂ ಅವರ ವಿಳಾಸವನ್ನು ತಿಳಿಸಿದರೆ ನನಗೆ ಸಹಾಯವಾಗುತ್ತದೆ. ದಯಮಾಡಿ ನನಗೆ ಮಾಹಿತಿ ನೀಡಲು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಧನ್ಯವಾದಗಳು

    ಉತ್ತರ
 4. WITIAN
  ಜನ 5 2016

  ನಿಮ್ಮ ಲೇಖನ ಚೆನ್ನಾಗಿದೆ. ಆದರೆ ಒಂದು ಸಣ್ಣ ದೋಷ ನುಸುಳಿದೆ. ‘ಫಣಿಯಮ್ಮ’ ಅನಂತಮೂರ್ತಿಗಳ ಕೃತಿಯಲ್ಲ, ಅದು ಎಂ ಕೆ ಇಂದಿರಾ ಬರೆದ ಕಾದಂಬರಿ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments