ವೃತ್ತಿಯ ಬಗೆಗೆ ಕೀಳರಿಮೆ ಬೇಡ!
– ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
ಹೀಗೇ ಸುಮ್ಮನೆ ನಾನು ಕೆಲಸ ಮಾಡುವ ಸಂಸ್ಥೆಯ ತಡೆಗೋಡೆಯ ಹೊರಗಡೆ ಬಂದಾಗ, ಒಬ್ಬಾತ ೧೨ ಚಕ್ರದ ಉದ್ದನೆಯ ಲಾರಿಯೊಂದನ್ನು ಬಹಳ ಸಲೀಸಾಗಿ ಹಿಮ್ಮಖವಾಗಿ ಚಲಾಯಿಸುತ್ತಿದ್ದ ,ಯಾವುದೇ ನಿರ್ವಾಹಕರೂ ಜೊತೆ ಇರಲಿಲ್ಲ. ಸರಿಯಾದ ಜಾಗದಲ್ಲಿ ತಂದು ನಿಲ್ಲಿಸಿದ ನಂತರ ಲಾರಿಯಿಂದಿಳಿದ, ಸುಮಾರು 60 ವರ್ಷ ಪ್ರಾಯದ ಸಿಂಗ್ ಜೀ, ಅತ್ತಿತ್ತ ನೋಡುತ್ತಾ ನನ್ನ ಬಳಿ ಬಂದರು, ಪೇಪರ್ ಒಂದು ಕೊಟ್ಟು ಇದನ್ನು ಓದಿ ಸ್ವಲ್ಪ ಅರ್ಥ ಹೇಳ್ತೀರಾ ಎಂದರು. ಅದು ವಾಹನದ ಬಗ್ಗೆ ಕೊಟ್ಟಿದ್ದ ಸೇವಾ ಮಾಹಿತಿಯಾಗಿತ್ತು.ಹಿಂದಿಯಲ್ಲಿ ವಿವರಿಸಿ ಹೇಳಿದೆ,ಹಾಗೇ ಮುಂದುವರೆಸುತ್ತಾ, ನನ್ನ ಹೆಸರು, ಊರು ,ಏನು ಉದ್ಯೋಗ ಎಂದು ವಿಚಾರಿಸಿದರು.ಎಲ್ಲವೂ ಹೇಳಿದೆ.ಆ ಕ್ಷಣವೇ ಆ ವ್ಯಕ್ತಿ ಎಂದರು, ನೀವೆಲ್ಲಾ ಭಾಗ್ಯವಂತರು. ಒಳ್ಳೆಯ ಕೆಲಸದಲ್ಲಿದ್ದೀರಾ ಹಾಗೂ ನಿಮ್ಮ ಕೆಲಸಕ್ಕೆ ಗೌರವ ಇದೆ, ತುಂಬಾ ಚತುರತೆ ನಿಮ್ಮ ಬಳಿ ಇರುತ್ತೆ ಎಂದು.
ನನಗೆ ಅವರ ಮಾತು ಸರಿ ಅನಿಸಲಿಲ್ಲ.ಪ್ರತ್ಯುತ್ತರ ನೀಡುತ್ತಾ ನಾನಂದೆ,ನೀವು ಈಗ ತಾನೇ ಅಷ್ಟು ಉದ್ದದ ಲಾರಿಯನ್ನು ನಿರ್ವಾಹಕನ ಸಹಾಯವಿಲ್ಲದೆ ಹಿಮ್ಮಖವಾಗಿ ಚಲಾಯಿಸಿದಿರಿ ತಾನೇ? ಆ ಕೆಲಸವೇನು ಸುಲಭ ಎಂದುಕೊಂಡಿರೇ? ನನ್ನ ಕೈಯಲ್ಲಿ ಒಂದು ಇಂಚು ಮುಂದೆ ಕೊಂಡೋಗಲು ಆಗುತ್ತಿರಲಿಲ್ಲ,ನಿಮ್ಮ ವೃತ್ತಿಯ ಬಗ್ಗೆ ನಿಮಗೆ ಗೌರವ ಭಾವನೆ ಇರಬೇಕು, ಶಿಕ್ಷಣ ಪಡೆದು ಸಿಕ್ಕ ಉದ್ಯೋಗಕ್ಕೆ ಮಾತ್ರ ಗೌರವ ಇರೋದಲ್ಲ, ಬೆವರು ಸುರಿಸಿ ದುಡಿಯುವ ಪ್ರತಿಯೊಂದು ಉದ್ಯೋಗವೂ ತನ್ನದೇ ಆದ ಶ್ರೇಷ್ಟತೆ ಹೊಂದಿದೆ ಅಂದೇ.ಆಗ ಉತ್ತರಿಸುತ್ತಾ ಆ ಹಿರಿಯ ವ್ಯಕ್ತಿ ಎಂದರು, ಈಗಿನ ತಲೆಮಾರಿನಲ್ಲಿ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುತ್ತೆ ಎಂದು ತಿಳಿದಿರಲಿಲ್ಲ, ಈಗ ತಿಳಿದು ಸಂತೋಷವಾಯಿತು, ಇನ್ನು ಯಾವತ್ತೂ ಕೀಳಾಗಿ ಯೋಚಿಸುವುದಿಲ್ಲ ಎಂದು,ನಮಸ್ಕರಿಸುತ್ತಾ ಹೊರಟು ಹೋದರು.
ಇದೊಂದು ಉದಾಹರಣೆಯಾದರೆ, ಇನ್ನು ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ಮುಂಜಾನೆಯ ಸಮಯ ತುಂಬಾ ಮಂದಿ ಯುವಕರು ಕೆಲಸಕ್ಕೆ ಹಾಜರಾಗುತ್ತಾರೆ, ಕೆಲಸ ಏನಪ್ಪಾ ಅಂದ್ರೆ ಮಾರುಕಟ್ಟೆಗೆ ಬಂದ ಲಾರಿಗಳಲ್ಲಿನ ತರಕಾರಿ ಇಳಿಸಿ, ಅಂಗಡಿಗಳಿಗೆ ಸರಬರಾಜು ಮಾಡುವುದು, ಈ ಕೆಲಸದ ಅವಧಿ ಕೇವಲ ಎರಡು ಮೂರು ಗಂಟೆಯಷ್ಟೇ, ಅಷ್ಟು ಕಡಿಮೆ ಅವಧಿಯಲ್ಲಿ ಬೆವರು ಸುರಿಸಿ ಕನಿಷ್ಠ ಒಂದು ಸಾವಿರ ರೂಪಾಯಿ ದುಡಿಯುತ್ತಾರೆ.ತದನಂತರ ಕೆಲವರು ಯಾವುದಾದರೊಂದು ಸಣ್ಣ ಕಂಪನಿಯಲ್ಲಿ ಉದ್ಯೋಗ ಮಾಡಿದರೆ, ಇನ್ನು ಕೆಲವರು ಸ್ವಂತ ಉದ್ಯಮ ನಡೆಸುತ್ತಾರೆ. ಅವರ ಬೆಳಗ್ಗಿನ ಸಂಪಾದನೆ, ತದನಂತರ ಮಾಡುವ ಕೆಲಸಕ್ಕಿಂತ ಜಾಸ್ತಿಯಾಗಿದ್ದರೂ, ತಾವು ಆ ಕೆಲಸದ ಬಗ್ಗೆ ಹೇಳಿಕೊಳ್ಳಲು ನಾಚಿಕೆ ಪಡುತ್ತಾರೆ, ಕಾರಣವಿಷ್ಟೇ ತಮ್ಮ ವೃತ್ತಿ ಬಗ್ಗೆ ತಮ್ಮಲ್ಲೇ ಬೆಳೆಸಿಕೊಂಡ ಕೀಳು ಮನೋಭಾವನೆಯಿಂದ. ನಿಜವಾಗಿ ನೋಡಿದರೆ ತಿಂಗಳಿಗೆ 30 ಸಾವಿರಕ್ಕೂ ಅಧಿಕ ದುಡಿಯುವ ಆ ಉದ್ಯೋಗದ ಬಗ್ಗೆ ಕೀಳರಿಮೆ ಇರಲೇಬಾರದು ಆದರೆ ನಮ್ಮ ಸಮಾಜ ಯೋಚಿಸುವ ರೀತಿ ಹೀಗಿದೆ.
ಸ್ವಚ್ಛತೆಯ ಕೆಲಸದಲ್ಲಿ ತೊಡಗಿರುವ ಮಂದಿ, ತಮ್ಮನ್ನು ಶ್ರೇಷ್ಟರು ಎಂದು ಭಾವಿಸಬೇಕು ಆದರೆ ಹೆಚ್ಚಿನವರು ತಮ್ಮ ವೃತ್ತಿಯ ಬಗ್ಗೆ ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತಾರೆ, ಬೇರೆನೋ ವೃತ್ತಿ ಎಂದು ಹೇಳಿ ಮೆಲ್ಲನೆ ಜಾರಿಕೊಳ್ಳುತ್ತಾರೆ. ಸ್ಮಶಾಣದಲ್ಲಿ ಹೆಣ ಸುಡುವ ವ್ಯಕ್ತಿಯು ತನ್ನ ವೃತ್ತಿಯ ಬಗ್ಗೆ ಹೇಳಿಕೊಳ್ಳುವಾಗ ನಾಚಿಕೆಪಡುತ್ತಾನೆ ಇದು ಸಲ್ಲದು.ಕೆಲವೊಂದು ವೃತ್ತಿ ’ಸೇವೆ’ ಎಂದು ಪರಿಗಣಿಸಲ್ಪಡುವದರಿಂದ ಅದಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತೆ ಅದರರ್ಥ ಇತರ ವೃತ್ತಿಗಳಿಗೆ ಗೌರವ ಇಲ್ಲವೆಂದಲ್ಲ.ಉದಾಹರಣೆಗೆ ವೈದ್ಯ,ಸೈನಿಕ,ಪೋಲಿಸರು ಇತ್ಯಾದಿ ಜನರಿಗೆ ಕೊಂಚ ಗೌರವ ಜಾಸ್ತಿ ನೀಡಲಾಗುತ್ತೆ ಅಷ್ಟೇ.
ನಾವು ಯಾವತ್ತು ಕಳ್ಳತನ, ಸುಲಿಗೆ ಮೋಸ, ಭ್ರಷ್ಟಾಚಾರದಂತಹ ದಂದೆಗಳಿಗೆ ಇಳಿಯದೆ,ಶುದ್ದ ಹಣ ಸಂಪಾದಿಸುತ್ತಿದ್ದೇವೆಯೋ ಹಾಗಾದರೆ ನಾಚಿಕೆ ಪಡುವ ಅಗತ್ಯವಾದರೂ ಏನು?ಮಾಡುವ ವೃತ್ತಿಯ ಬಗೆಗೆ ಗರ್ವವಿರಲಿ, ನಾನು ಮಾಡುತ್ತಿರುವ ವೃತ್ತಿ ಅತ್ಯಂತ ಶ್ರೇಷ್ಟ ಎನ್ನುವ ಭಾವನೆ ಬೆಳೆಸಿಕೊಳ್ಳೋಣ, ಯಾವಾಗ ನಾವು ನಮ್ಮತನವನ್ನು ಗೌರವಿಸುತ್ತೇವೆಯೋ, ಇತರರೂ ಕೂಡಾ ನಮ್ಮನ್ನು ಗೌರವಿಸಲು ಪ್ರಾರಂಭಿಸುತ್ತಾರೆ.
Work is worship indeed true Mr. Deeskhith, a very good article .