ವಿಷಯದ ವಿವರಗಳಿಗೆ ದಾಟಿರಿ

ಜನವರಿ 6, 2016

5

ನಾನ್ ವೆಜ್ ತಿನ್ನುವ ಬಗ್ಗೆ ಒಂದು ವಿಶ್ಲೇಷಣೆ

‍ನಿಲುಮೆ ಮೂಲಕ

– ವಿಕ್ರಂ ಪತ್ತಾರ್

ತಂದೂರಿ ಚಿಕನ್ಮನುಷ್ಯನು ಕೆಲವೊಂದು ಅನವಶ್ಯಕ ಬಂಧನಗಳಿಗೆ ಧರ್ಮದ ಹೆಸರಿನಲ್ಲಿ ಸಿಲುಕುತ್ತಾನೆ.ಧರ್ಮದ ತಾತ್ಪರ್ಯವನ್ನಾಗಲೀ ಅಥವಾ ತತ್ವಗಳ ಮರ್ಮವನ್ನಾಗಲೀ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಒದ್ದಾಡುತ್ತಾನೆ ಅಲ್ಲದೇ ಕೆಲವೊಮ್ಮೆ ಇಂಥ ಸಂಗತಿಗಳೇ ವ್ಯರ್ಥ ಗುದ್ದಾಟಕ್ಕೆ ಈಡು ಮಾಡುವದಲ್ಲದೇ ಸೂಕ್ತ ತೀರ್ಮಾನಕ್ಕೆ ಬರುವಲ್ಲಿ ಹೆಣಗುತ್ತಾನೆ.ಅಂಥವುಗಳಲ್ಲಿ ಈ ನಾನ್ ವೆಜ್ ತಿನ್ನುವದು ಕೂಡ ಒಂದು.

ಮನುಷ್ಯನ ಅಂತಃಕರಣ ಏನಾದರೂ ಹಿಂಸಾತ್ಮಕ ಸನ್ನಿವೇಶವನ್ನು ನೋಡಿದಾಗ ಮರುಗುತ್ತದೆ. ನೀವು ಪರಿಪೂರ್ಣ ಅಹಿಂಸೆಯನ್ನಾಚರಿಸಿದರೆ ಬದುಕುವದಕ್ಕಾಗುವದಿಲ್ಲ.ನಿಮಗೆ ಅರಿವಿಲ್ಲದೇ ಅನೇಕ ಸೂಕ್ಷ್ಮಜೀವಿಗಳ ನಾಶಕ್ಕೆ ನಾವು ಕಾರಣವಾಗುತ್ತೇವೆ.ಕೃಷಿಯಲ್ಲಿ ಭೂಮಿಯನ್ನು ಊಳುವಾಗ ಅನೇಕ ಜೀವಿಗಳ ಸಾವಿಗೆ ಕಾರಣವಾಗುತ್ತೇವೆ.ಅದಕ್ಕಾಗಿಯೇ ಪ್ರಾರಂಭದಲ್ಲಿ ಜೈನ ಧರ್ಮವು ಕೃಷಿಯನ್ನು ಅಹಿಂಸೆಯ ಹೆಸರಿನಲ್ಲಿ ನಿಷೇಧಿಸಿತ್ತು.ಪ್ರಾಣಿಗಳಿಗೆ ಜೀವವಿದೆ,ಭಾವನೆಗಳಿವೆ ಎಂಬುದು ಎಷ್ಟು ಸತ್ಯವೋ ಸಸ್ಯಗಳಿಗೆ ಜೀವ ಮತ್ತು ಭಾವನೆಗಳಿವೆ ಎಂಬುದು ಅಷ್ಟೇ ಸತ್ಯ.ನೀವು ಹಿಂಸೆಯೆಂದು ಭಾವಿಸಿದರೆ ಸಸ್ಯಗಳನ್ನು ಆಹಾರವಾಗಿ ಬಳಸುವದನ್ನು ಬಿಡಲೇಬೇಕಾಗುತ್ತದೆ,ಕೃಷಿಯನ್ನು ನಿಷೇಧಿಸಬೇಕಾಗುತ್ತದೆ. ಮಹಾಭಾರತದಲ್ಲಿ ಒಂದು ಸಸ್ಯವನ್ನು ಕಡಿದರೆ ನೂರು ಮಕ್ಕಳನ್ನು ಕೊಂದ ಪಾಪ ಬರುತ್ತದೆ ಎಂಬ ಭಾವನೆಯಿತ್ತು.ಆದರೆ ಅದೇ ಮಹಾಭಾರತದಲ್ಲಿ ಸೈನ್ಯದಲ್ಲಿ ರಥಗಳು, ಮನೆಯಲ್ಲಿ ಕಟ್ಟಿಗೆಯ ಉಪಕರಣಗಳನ್ನು ಹೇಗೆ ಮಾಡುತ್ತಿದ್ದರು? ಮರಗಳನ್ನು ಕಡಿಯುವದರಿಂದಲೇ ಅಲ್ಲವೇ ? ಹಾಗಾದರೆ ಬಡಗಿಗಳೆಲ್ಲರೂ ಪಾಪಿಗಳಾ?

ಮನುಷ್ಯನೆಂದ ಮೇಲೆ ಭಾವನೆಗಳು ಸಹಜ ಹಾಗಂತ ಅವುಗಳಿಗೆ ದಾಸರಾಗುವದು ಉಚಿತವಲ್ಲ.ಒಬ್ಬ ಬಹಳಷ್ಟು ಕರುಣಾಮಯನಾದ ವ್ಯಕ್ತಿ ಒಂದು ಕಂಪನಿಯನ್ನು ತೆಗೆದು ಉದ್ಯೋಗ ಕೊಟ್ಟಿರುತ್ತಾನೆ.ಅವನ ಕಂಪನಿಯಲ್ಲಿದ್ದ ಎಲ್ಲಾ ಹುದ್ದೆಗಳು ಭರ್ತಿಯಾಗಿ ಹೊಸದಾಗಿ ಯಾರನ್ನಾದರೂ ಸೇರಿಸಿಕೊಂಡರೆ ಅದು ಕಂಪನಿಗೆ ಹೊರೆಯಾಗುವಂಥ ಸನ್ನಿವೇಶವಿರುತ್ತದೆ.ಆಗ ಅವನ ಬಳಿ ಒಬ್ಬ ಬಡ ವ್ಯಕ್ತಿ ಹೇಗಾದರೂ ಮಾಡಿ ಒಂದು ಉದ್ಯೋಗ ಕೊಡಯ್ಯ ಎಂದು ಅವನನ್ನು ಅಂಗಲಾಚುತ್ತಾನೆ.ಆಗ ಅವನು ಏನು ಮಾಡಬೇಕು? ಆ ಬಡ ಮನುಷ್ಯನ ಸ್ಥಿತಿಯ ಕುರಿತು ಮರುಕ ವ್ಯಕ್ತಪಡಿಸಿ ಅವನಿಗೆ ಬೇರೆ ಮಾರ್ಗ ತೋರಬಹುದೇ ವಿನಃ ತನ್ನ ಕಂಪನಿಯಲ್ಲೇ ಕೆಲಸ ಮಾಡಲು ಅವಕಾಶ ಕೊಡಲು ಸಾಧ್ಯವಿಲ್ಲ. ನೀವು ಧರ್ಮವನ್ನು ವಿಪರೀತವಾಗಿ ಆಚರಿಸಲು ಹೋದರೆ ಯುಧಿಷ್ಟಿರನಂತೆ ಹೆಂಡತಿಯನ್ನು,ತಮ್ಮಂದಿರನ್ನು ಪಣಕ್ಕಿಡುತ್ತೀರಿ. ಭೀಷ್ಮ,ದ್ರೋಣರಂತೆ ಒಬ್ಬ ಹೆಂಗಸಿನ ಸೀರೆ ಎಳೆಯುವದನ್ನು ನೋಡಿಯೂ ಸುಮ್ಮನೆ ಕೂಡುತ್ತೀರಿ.ಆದ್ದರಿಂದ ಧರ್ಮದ, ತತ್ವ,ಭಾವನೆಗಳ ವಾಸ್ತವಿಕ ರೂಪವನ್ನು ಅರ್ಥ ಮಾಡಿಕೊಳ್ಳುವದು ಒಳ್ಳೆಯದು.

ಒಬ್ಬ ಮನುಷ್ಯ ಯಾವಾಗಲೂ ಸಸ್ಯಹಾರಿಯೇ ಆಗಿದ್ದು ಮೊಟ್ಟೆಯನ್ನು ಕೂಡಾ ತಿನ್ನದೇ ಇರುವನೆಂದು ಅಂದುಕೊಳ್ಳಿ.ಆದರೆ ಅವನು ಯಾವಾಗಲೂ ತನ್ನ ಮಾತುಗಳಿಂದ ಮತ್ತೊಬ್ಬರನ್ನು ನೋಯಿಸುವವನಾಗಿಯೂ ತನ್ನ ನಡವಳಿಕೆಯಿಂದ ಮತ್ತೊಬ್ಬರನ್ನು ಘಾಸಿಗೊಳಿಸುವವನಾಗಿಯೂ ಇದ್ದರೆ ಅವನ ಕುರಿತು ನಿಮ್ಮ ಅಭಿಪ್ರಾಯವೇನು? ಅವನನ್ನು ಒಳ್ಳೆಯವನೆಂದು ಅವನ ಆಹಾರ ಪದ್ಧತಿಯ ಮೇಲೆ ಹೊಗಳುವಿರಾ? ಇಲ್ಲವೇ ಒಬ್ಬನು ಬಡಬಗ್ಗರಿಗೆ ದಾನ ಧರ್ಮವನ್ನು ಮಾಡುತ್ತಾ, ನ್ಯಾಯಪರನಾಗಿ ಜೀವಿಸುತ್ತಾ ಇದ್ದು ಮಾಂಸಹಾರಿಯಾಗಿದ್ದರೆ ಅವನನ್ನು ಅವನ ಆಹಾರ ಪದ್ಧತಿಯ ಮೇಲೆ ಹೀಗಳೆಯುವಿರೋ? ಆದ್ದರಿಂದ ಮನುಷ್ಯನ ಆಚಾರಗಳಲ್ಲಿ ಅವನ ವಾಸ್ತವಿಕತೆ ಅಡಗಿರದೇ ಅವನ ಆಶಯಗಳಲ್ಲಿ ಸುಪ್ತವಾಗಿರುತ್ತದೆ. ಒಂದು ಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಯಾವಾಗಲೂ ಎಡವುತ್ತೇವೆ.ನಾವು ಪ್ರತಿಯೊಂದು ತತ್ವವನ್ನು, ಭಾವನೆಯನ್ನು ಕೇವಲ ಒಂದು ಮುಖದಲ್ಲಿ ನೋಡುತ್ತೇವೆ.ನಾಣ್ಯವನ್ನು ನೀವು ತಿರುಗಿಸಿ ನೋಡುವವರೆಗೂ ಅದರ ಇನ್ನೊಂದು ಮುಖದ ಪರಿಚಯ ನಿಮಗಾಗದು.ಆದರೆ ನಾವು ಎಷ್ಟರಮಟ್ಟಿಗೆ ಜಡವಾಗಿದ್ದೇವೆಂದರೆ ಅದರ ಒಂದು ಮುಖವನ್ನು ನೋಡಿ ಇನ್ನೊಂದು ಮುಖವೂ ಹಾಗೆಯೇ ಇದೆ ಎಂದು ಭಾವಿಸುತ್ತೇವೆ.ಇದೇ ಹಲವಾರು ಅನರ್ಥಗಳಿಗೆ ಎಡೆ ಮಾಡಿಕೊಡುತ್ತದೆ.

ಜೀವಿಯನ್ನು ಆಹಾರಕ್ಕಾಗಿ ಅನುಭೋಗಿಸುವದು ತಪ್ಪಾಗಿದ್ದರೆ ಸೃಷ್ಟಿಯಲ್ಲಿ ಸಿಂಹ,ಹುಲಿ ಮುಂತಾದ ಪ್ರಾಣಿಗಳ ಉಗಮವೇ ಆಗುತ್ತಿರಲಿಲ್ಲ.ಆದರೆ ಅವುಗಳ ಅಸ್ತಿತ್ವವು ನಿಸರ್ಗದಲ್ಲಿ ಇರುವದು ನೀವು ಅನುಸರಿಸುವ ತತ್ವಕ್ಕೆ ಸೆಡ್ಡು ಹೊಡೆದಂತಿದೆ. ಕರುಣೆ ಮತ್ತು ಕಠೋರತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ನಾಣ್ಯವನ್ನು ತೂರಿದಾಗ ಎರಡು ಮುಖಗಳಿಗೂ ಸಂಭವನೀಯತೆಯಿರುತ್ತದೆ ಆದರೆ ಬಿದ್ದಾಗ ಕೇವಲ ಒಂದೇ ಮುಖ ನಮಗೆ ಕಾಣುತ್ತದೆ.ಹಾಗೆಯೇ ಕರುಣೆ ಮತ್ತು ಕಠೋರತೆಯನ್ನು ಯಾವ ಯಾವ ಸಮಯದಲ್ಲಿ ಹೇಗೆ ತೋರಿಸಬೇಕು ಎಂಬ ಪರಿಜ್ಞಾನವಿರಬೇಕು ಇಲ್ಲವಾದರೆ ಅನರ್ಥಕ್ಕೆ ಈಡು ಮಾಡುತ್ತದೆ.ನೀವು ಇತಿಹಾಸ ಬಲ್ಲವರಾಗಿದ್ದರೆ ಪೃಥ್ವಿ ರಾಜ ಚೌಹಾಣ ಮತ್ತು ಮಹಮ್ಮದ್ ಘೋರಿಯ ಪ್ರಸಂಗವನ್ನು ಖಂಡಿತ ಅರಿತಿರುತ್ತೀರಿ. ಮೊದಲನೇ ಪಾಣಿಪತ್ ಕದನದಲ್ಲಿ ಸೋತ ಘೋರಿಗೆ ಕರುಣೆ ತೋರಿ ಪೃಥ್ವಿ ರಾಜನು ತನಗೆ ತಾನೇ ಗೋರಿ ತೋಡಿಕೊಂಡನು.ಇಂಥ ಅನೇಕ ಪ್ರಸಂಗಗಳು ಇತಿಹಾಸದಲ್ಲಿವೆ.ಹಾಗೆಯೇ ಈ ಆಹಾರ ಪದ್ಧತಿಯಲ್ಲಿಯೂ. ನೀವಂತೂ ಭಾರತದಂಥ ಅದ್ಭುತ ವಾತಾವರಣವುಳ್ಳ ಸಮಶೀತೋಷ್ಣ ವಲಯದಲ್ಲಿ ವಾಸಿಸುತ್ತೀರಿ,ನಾನ್ ವೆಜ್ ತಿನ್ನದಿದ್ದರೆ ನಡೆಯುತ್ತದೆ.ಆದರೆ “ಅಂಟಾರ‍್ಟಿಕಾ “ಗಳಂಥ ಹಿಮಾಲಯದಂಥದ ವಾತಾವರಣದಲ್ಲಿ ಜೀವಿಸುವವರು ಏನು ಮಾಡಬೇಕು? ನಮ್ಮ ದೇಶದ ಗಡಿ ಕಾಯುವ ಹೆಮ್ಮೆಯ ಸೈನಿಕರು ಏನು ಮಾಡಬೇಕು.ಮೀನುಗಳು ಹೇರಳವಾಗಿ ಸಿಗುವ ರಾಷ್ಟ್ರಗಳು ಏನು ಮಾಡಬೇಕು? ನಿಮ್ಮ ಕಾನೂನುಗಳು ಅವರಿಗೆ ಅನ್ವಯವಾಗುತ್ತವಾ? ಯಾವುದೇ ಒಂದು ಸಂಪ್ರದಾಯ ಕಾನೂನು,ಕಟ್ಟಳೆಗಳನ್ನು ಅನುಸರಿಸುವಾಗ ಸುಮ್ಮನೆ ಎಲ್ಲರೂ ಮಾಡುತ್ತಾರೆಂದು ಮಾಡುವದು ಸರಿಯಲ್ಲ.ಬದಲಾಗಿ ಅದು ನಿಜವಾದ ಕಾನೂನಾ?ಇಡೀ ಜಗತ್ತಿಗೆ ಅನ್ವಯವಾಗುತ್ತದಾ?ಮನುಷ್ಯರು ತಮ್ಮ ಇಷ್ಟದ ಪ್ರಕಾರ ಮಾಡಿದ್ದಾ?ದೇವರು ಮಾಡಿದ್ದಾ? ಎಂದು ನಾನಾ ವಿಧವಾಗಿ ಯೋಚಿಸುವದು ಒಳಿತು.ಇಲ್ಲವಾದರೆ ಈ ಕೆಳಗಣ ಕಥೆಯಂತೆ ಆಗುತ್ತದೆ.

” ಒಂದು ಸಾರಿ ಒಬ್ಬ ಮನುಷ್ಯ ಒಂದು ಊರಲ್ಲಿ ಓಡಲಿಕ್ಕಾರಂಭಿಸಿದ.ಅವನು ಓಡುವದನ್ನು ನೋಡಿ ಇನ್ನೊಬ್ಬ ಓಡತೊಡಗಿದ.ಹೀಗೆ ಓಡುತ್ತಿರುವಾಗ ಕೆಲ ಜನ ಕೇಳಿದರು “ಯಾಕೆ ಓಡುತ್ತಿರುವಿರಿ?’ ಎಂದು.ಆಗ ಅವರು “ಎರೆ ಹೊಲದಲ್ಲಿ ಮೀನು ಬಂದಿವೆಯಂತೆ,ನಡಿ ನೋಡಾಕ್ ಹೋಗೋಣ” ಎಂದು ಹೇಳಿದ.ಕೊನೆಗೆ ಊರಿಗೆ ಊರೇ ಓಡಹತ್ತಿತು.ಅವರಲ್ಲಿ ಒಬ್ಬನಾದರೂ “ಎರೆ ಹೊಲದಲ್ಲಿ ಮೀನು ಹೇಗೆ ಬರುತ್ತವೆ? ಮೀನು ಇರುವದು ನೀರಿನಲ್ಲಿ ಅಲ್ಲವೇ?” ಎಂದು ಯೋಚಿಸಲಿಲ್ಲ.ಅವನು ಓಡುತ್ತಾನೆಂದು ಇವನು, ಇವನು ಓಡುತ್ತಾನೆಂದು ಮತ್ತೊಬ್ಬನು ಹೀಗೆ ಜನಮರುಳೋ, ಜಾತಕ ಮರುಳೋ ಎಂಬಂತೆ!”

ಕೆಲವರು ತುಂಬಾ ನಾಜೂಕಾಗಿರುತ್ತಾರೆ.ನನ್ನ ಸ್ನೇಹಿತರಲ್ಲಿ ಕೆಲವರಿಗೆ ರಕ್ತವನ್ನು ನೋಡಿದ ಕೂಡಲೇ ತಲೆ ಸುತ್ತುತ್ತದೆ.ನಮ್ಮ ಮನೆಯ ಹತ್ತಿರವಿದ್ದ ಒಬ್ಬ ಅಕ್ಕಳಿಗೆ ಶವವನ್ನು ನೋಡಲಾಗುತ್ತಿರಲಿಲ್ಲ.ಒಂದು ಸಾರಿ ದಾರಿಯಲ್ಲಿ ಸತ್ತವರನ್ನು ತೆಗೆದುಕೊಂಡು ಹೋಗುವಾಗ ಆಕೆ ಹೆದರಿ ನಮ್ಮ ಮನೆಯಲ್ಲಿ ಬಂದು ಇದ್ದಳು.ಅಲ್ಲದೆ ಕೆಲವರು ಸಂಪ್ರದಾಯಗಳನ್ನು,ನೀತಿ ನಿಯಮಗಳನ್ನು ತುಂಬಾ ಕಟ್ಟುನಿಟ್ಟಾಗಿ ಆಚರಿಸುತ್ತಾರೆ.ಇಂಥ ನಾಜೂಕು ಮನುಷ್ಯರು,ಭಕ್ತಿವಂತ ನಿಷ್ಟಾವಂತ ಮನುಷ್ಯರು ನಾನ್ ವೆಜ್ ತಿನ್ನುವದಿಲ್ಲ ಎಂದರೆ ಒಪ್ಪಿಕೊಳ್ಳಬಹುದು,ಆದರೆ ಕೆಲ ವೇಷಧಾರಿ ಮನುಷ್ಯರು,ಒಳಗೆ ತಿನ್ನಬೇಕೆಂದು ಆಸೆಯಿಟ್ಟುಕೊಂಡು ಹೊರಗೆ ನಟನೆ ಮಾಡುತ್ತಾ,ಗುಟ್ಟಾಗಿ ಬಿರಿಯಾನಿ,ಮಟನ್,ಬೀಫ್ ಗಳನ್ನು ಹೊಡೆಯುತ್ತಾ ನಾಲಿಗೆಯಲ್ಲಿ ಮಾತ್ರ ಸಂಸ್ಕಾರ,ನೀತಿ,ಧರ್ಮವನ್ನು ಉಚ್ಚರಿಸುವ ಕಪಟತನವನ್ನು ಒಪ್ಪಿಕೊಳ್ಳಲಾಗದು.

ಈ ಅಂಕಣವು ಈಗ ಉಪಸಂಹಾರವನ್ನು ಮುಟ್ಟಿತು.ಜೀವನವೆಲ್ಲಾ ನಮಗೋಸ್ಕರ ದುಡಿದ ಗೋವನ್ನು ಅದು ಮುದಿಯಾದ ತಕ್ಷಣ ಕಸಾಯಿಖಾನೆಗೆ ಕಳುಹಿಸುವದು ನನಗೆ ತಪ್ಪೆಂದು ಗೋಚರಿಸುತ್ತದೆ.ಅಷ್ಟು ದಿನ ನಿಸ್ವಾರ್ಥ ಸೇವೆ ಮಾಡಿದ ಅದನ್ನು ಇನ್ನು ಸ್ವಲ್ಪ ಕಾಲವಾದರೂ ಪ್ರತ್ಯುಪಕಾರಕ್ಕಾಗಿ ಇಟ್ಟುಕೊಳ್ಳದೇ ಹೋದರೆ ಖಂಡಿತ ಅದು ಮಾನವೀಯತೆ ಅಲ್ಲ.ಆದ್ದರಿಂದ ದಯವಿಟ್ಟು ನಿಮಗೋಸ್ಕರ ದುಡಿದ ಗೋವನ್ನು ಕಸಾಯಿಖಾನೆಗೆ ಅಟ್ಟಬೇಡಿ.ನಿಮಗೆ ಮಾಡಿದ ಉಪಕಾರಕ್ಕಾಗಿ ಪ್ರತ್ಯುಪಕಾರವಾಗಿ ಅದು ಸಾಯುವವರೆಗೂ ಜೋಪಾನ ಮಾಡಿ.ಅಷ್ಟೂ ಮಾಡಲಾಗದಿದ್ದರೆ ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ.ಅದು ಹೇಗೋ ಬದುಕುತ್ತದೆ.ಆದರೆ ಕಸಾಯಿಖಾನೆಗೆ ಅಟ್ಟಿ ದುರಂತದಲ್ಲಿ ಅದರ ಬದುಕನ್ನು ಅಂತ್ಯ ಮಾಡಬೇಡಿ.ಒಬ್ಬ ತಂದೆ ಬೀದಿಯಲ್ಲಿ ಹೊಡೆದಾಡುವ ಇಬ್ಬರು ಹುಡುಗರಲ್ಲಿ ತನ್ನ ಮಗನಿದ್ದರೆ ಮಾತ್ರ ಅವನ ಮೇಲೆ ಅಧಿಕಾರಯುತವಾಗಿ ಅವನಿಗೆ ಹೊಡೆದು ಬುದ್ಧಿಹೇಳುವ ಅವಕಾಶವಿರುತ್ತದೆ ಆದರೆ ಊರಮಂದಿಯ ಮಕ್ಕಳಿಗೆಲ್ಲಾ ಹೊಡೆದು ಕಾಳಜಿ ತೋರುವದು ಸಾಧ್ಯವಿಲ್ಲ ಹಾಗೆ ಮಾಡಲು ಹೋದರೆ ನಿಂದೆಗಳು ಬರುತ್ತವೆ.ಹಾಗೆಯೇ ನಾವು ಯಾವುದಕ್ಕೆ ಭಾವನಾತ್ಮಕವಾಗಿ ಅಂಟಿರುತ್ತೇವೆಯೋ ಅವುಗಳ ವಿಷಯದಲ್ಲಿ ಮಾತ್ರ ನಮ್ಮ ಸ್ವಂತಿಕೆಯನ್ನು ಚಲಾಯಿಸಲು ಸಾಧ್ಯ.ಹಾಗೆಯೇ ಕೆಲ ಪ್ರಾಣಿಗಳೊಂದಿಗೆ ಭಾವನಾತ್ಮಕವಾಗಿ ಅಂಟಿರುವಾಗ ಅವುಗಳನ್ನು ಕೊಂದು ತಿನ್ನಲು ನಮ್ಮಿಂದ ಖಂಡಿತ ಸಾಧ್ಯವಿಲ್ಲ.ಆದರೆ ಯಾವುದೇ ಸಂಗತಿಗೆ ಒಂದೇ ಮುಖವಂತೂ ಇರುವದಿಲ್ಲವಲ್ಲ.ಆದ್ದರಿಂದ ತಿನ್ನುವದಕ್ಕಾಗಿಯೇ ಬೆಳೆಸುವ ಕೋಳಿ,ಕುರಿ,ಮೀನು,ದನ ಇವುಗಳನ್ನು ಆಹಾರಕ್ಕಾಗಿ ಭಕ್ಷಿಸುವದರಲ್ಲಿ ತಕರಾರಿಗೆ ಕಾರಣವಾಗುವಂಥದ್ದು ಏನೂ ಇಲ್ಲ.

ಚಿತ್ರಕೃಪೆ : aramkitchen.com

5 ಟಿಪ್ಪಣಿಗಳು Post a comment
 1. A Srinivasa Murthy - vegetarian activist
  ಜನ 6 2016

  Vikram Hatwar
  I read your article on non veg. The entire article is based on illogical and unscientific and absurd ideas and views. To educate yourself please read the book ” A diet for new American” by John Robbins or read my book ” Naveke sasyahrigalagabeku”. Your ignorance will go away if you read these two books with scientific mind.

  ಉತ್ತರ
  • Shiva
   ಜನ 9 2016

   Well said Srinivasa Murthy..I have read above books and they prove things beyond doubt.

   ಉತ್ತರ
 2. ಜನ 7 2016

  ಹುಟ್ಟುತ್ತಲೇ ಮನುಷ್ಯ ತಾಯಿಯ ಹಾಲನ್ನು ಕುಡಿಯುತ್ತಾನೆ. ನಂತರ ಬದುಕಿರುವಷ್ಟು ಕಾಲವೂ ಒಂದಲ್ಲಾ ಒಂದು ರೀತಿಯಲ್ಲಿ ಹಸುವಿನ, ಎಮ್ಮೆಯ, ಮೇಕೆಯ ಹಾಲುಗಳನ್ನು ಕುಡಿಯುತ್ತಲೇ ಇರುತ್ತಾನೆ. ಹಾಲು ಪ್ರಾಣಿಜನ್ಯ ಪದಾರ್ಥವಾದ್ದರಿಂದ ಅದನ್ನು ಕುಡಿದವರ್ಯಾರೂ ಸಸ್ಯಾಹಾರಿಗಳೇ ಅಲ್ಲ. ಹಾಲನ್ನು ಕುಡಿಯದೇ ಹುಟ್ಟಿದವರ್ಯಾರೂ ಬದುಕಿ ಉಳಿದಿಲ್ಲ. ಅಂದ ಮೇಲೆ ಮಾಂಸಾಹಾರಿಗಳು, ಸಸ್ಯಾಹಾರಿಗಳು ಅನ್ನುವ ಬಗ್ಗೆ ಚರ್ಚೆಯೇ ಸರಿಯಿಲ್ಲ. ಅದು ಅಸಂಬದ್ಧವೂ ಕೂಡ.

  ಉತ್ತರ
 3. ashwin
  ಜನ 8 2016

  ಸ್ವಾಮಿ ನಿಮಗೆ ಮಾಂಸಾಹಾರ ತಿನ್ನಬೇಕೆಂದಿದ್ದರೆ ತಿನ್ನಿ. ಯಾಕೆ ಸಸ್ಯಹಾರಿಗಳ ಕಾಲೇಳೆಯುತ್ತೀರಿ ? ತಾವು ವಿವಿಧ ಧರ್ಮಗಳ ನಂಬಿಕೆಗಳ ಉಲ್ಲೇಖ ಮಾಡಿದಿರಲ್ಲ ಅದನ್ನು ಯಾವ ಗ್ರಂಥದಲ್ಲಿ ಓದಿ ತಿಳಿದುದ್ದು? ಗ್ರಂಥಾಧ್ಯಯನ ಮಾಡಿದ ಮಹಾನ್ ಪಂಡಿತರೆ ಇರಬೇಕು ನೀವು. ಆದರೆ ತಾವು ಯಾವಾಗಲಾದರೂ ತರಕಾರಿ (ಸಸ್ಯ) ಕತ್ತರಿಸುವಾಗ ಪ್ರಾಣಿಗಳು (ಕೋಳಿ , ಮೇಕೆ, ಹಂದಿ, ದನ ಇತ್ಯಾದಿ ) ನರಕ ವೇದನೆಯಿಂದ ಕೂಗುವ, ರಕ್ತ ಹರಿಯುವ ನೋಡಿರುವಿರಾ ? ನಾನು ಮಾಂಸಹಾರಿ ವಿರೋಧಿ ಅಲ್ಲಾ ಯಾರ್ ಏನ ಬೇಕಾದ್ರು ತಿನ್ನಿ, ಅವರಿಷ್ಟ ಆದರೆ ಮಾಂಸಾಹಾರ ಸಮರ್ಥಿಸುವ ಭರದಲ್ಲಿ ವಿತಂಡವಾದ ಮಾಡುವರ ಬಗ್ಗೆ ನನ್ನವಿರೋಧ ವ್ಯಕ್ತ !!!
  ಇನ್ನೊಂದು ಮಾತು. ತಿಳಿದವರು ನನ್ನ ಸಂಶಯ ನಿವಾರಿಸಿ. ದೇವರ ಸೃಷ್ಠಿಯ ಮಹಿಮೆ ನೋಡಿ ಮನುಷ್ಯ ತಿನ್ನುವ ಸಸ್ಯಹಾರವನ್ನು ಹಸಿಯಾಗಿಯೂ, ಬೇಯಿಸಿಯೂ ತಿನ್ನುವ ರೀತಿಯಲ್ಲಿ ಹುಟ್ಟಿಸಿದ್ದಾನೆ. ಯಾಕೋ ಮಾಂಸಾಹಾರವನ್ನು ಮನುಷ್ಯ ಹಸಿಯಾಗಿ ತಿನ್ನಲಾಗುತಿಲ್ಲ.ಅದು ಯಾಕೋ ಹಾಗೆ, ಬಲ್ಲವರು ತಿಳಿಸಿ. ನಾ ನೋಡಿದ ಪ್ರಕಾರ ಮನುಷ್ಯ ಹಸಿ ಮಾಂಸ ತಿನ್ನಲ್ಲ. ಹಸಿ ಮಾಂಸ ತಿನ್ನುವವರು ಇದ್ದರೂ ಇರಬಹುದು. ಕಲಿಯುಗವಲ್ಲವೇ, ಏನು ಸಾಧ್ಯ.

  ಉತ್ತರ
 4. mahashesha
  ಜನ 9 2016

  what it is, some kind of joke?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments