ವಿಷಯದ ವಿವರಗಳಿಗೆ ದಾಟಿರಿ

ಜನವರಿ 7, 2016

3

ಅನುಭವ, ಅನುಭಾವ, ಅನುಭೂತಿ ಇತ್ಯಾದಿ…

‍ನಿಲುಮೆ ಮೂಲಕ

– ನಾಗೇಶ ಮೈಸೂರು

ಮುಂಜಾನೆಬದುಕಿನ ಎಷ್ಟೊ ಒಡನಾಟಗಳಲ್ಲಿ ಕೆಲವಷ್ಟೆ ಆಳಕ್ಕಿಳಿದು ಬೇರೂರಿ ನಿಲ್ಲುವಂತಹವು. ಮಿಕ್ಕವೆಲ್ಲಿ ಕೆಲವು ಹಾಗೆ ಬಂದು ಹೀಗೆ ಹೋಗುವ ಗುಂಪಿನದಾದರೆ ಬಾಕಿಯೆಲ್ಲ ತಾವರೆಯೆಲೆಯ ಮೇಲಿನ ಅಂಟಿಯೂ ಅಂಟದ ನಿರ್ಲಿಪ್ತ ಕೊಂಡಿಗಳು. ಹಿಂದೆಲ್ಲ ಈ ತರಹೆವಾರಿ ಬಂಧಗಳೆಲ್ಲವನ್ನು ಅದರದರ ಸ್ಥಾಯಿ / ಚಲನ ಶಕ್ತಿಗನುಗುಣವಾಗಿ ಒಗ್ಗೂಡಿಸಿಡಲು ಮುಂಜಿ, ನಾಮಕರಣ, ಮದುವೆಗಳಂತಹ ಖಾಸಗಿ ಸಮಾರಂಭಗಳಿಂದ ಹಿಡಿದು ಸಾರ್ವಜನಿಕ ಸಭೆ, ಕಾರ್ಯಕ್ರಮ, ಚಟುವಟಿಕೆಗಳು ನೆರವಾಗುತ್ತಿದ್ದವು. ಒಂದಲ್ಲ ಒಂದು ಕಡೆ ಭೇಟಿಯಾಗುವ, ಕೊಂಡಿಯ ಸಂಪರ್ಕವನ್ನುಳಿಸಿಕೊಳ್ಳುವ ಸಾಧ್ಯತೆಯಿರುತ್ತಿತ್ತು.

ಆದರೀಗ ಅಷ್ಟೊಂದು ಹೆಣಗುವ ಅವಶ್ಯಕತೆಯಿಲ್ಲದೆಯೆ ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ ಗಳಂತಹ ತಂತ್ರಜ್ಞಾನ ಪ್ರೇರಿತ ಸಾಮಾಜಿಕ ಸಾಧನ ಸಲಕರಣೆಗಳನ್ನು ಬಳಸಿ ಸಂಪರ್ಕ ಕೊಂಡಿಯನ್ನು ನಿತ್ಯವೂ ಜೀವಂತವಿರಿಸಿಕೊಳ್ಳುವ ಸಾಧ್ಯತೆ. ಕಾಲೇಜಿನ ದಿನಗಳ ಒಡನಾಟದ ನಂತರ ಎಲ್ಲಿ, ಹೇಗಿರುವರೆಂದೆ ಗೊತ್ತಿರದೆ ಇದ್ದ ಅನೇಕ ಮಿತ್ರರು ಈ ಮೂಲಕ ಮತ್ತೆ ನಂಟಿಗೆ ಅಂಟಿಕೊಳ್ಳಲು ಸಾಧ್ಯವಾಗಿಸುತ್ತಿರುವುದೂ ಈ ತಂತಜ್ಞಾನ ಪರಿಕರಗಳೆ. ಹೀಗಾಗಿ ಖಾಸಗಿಯಾಗಲಿ, ಸಾರ್ವತ್ರಿಕವಾಗಲಿ ‘ಕಮ್ಯೂನಿಕೇಷನ್’ ಗೆ ಮೊದಲಿಗಿಂತ ಹೆಚ್ಚು ಸುಲಭ, ಸರಳ ಮಾರ್ಗೋಪಾಯಗಳು ಈಗ ಸದಾ ಬೆರಳ ತುದಿಯಲ್ಲಿ ಸಿದ್ದ. ಅದರಲ್ಲು ಮೊಬೈಲು ಜಗದಲ್ಲೆ ಎಲ್ಲಾ ನಿಭಾಯಿಸುವ ಸಾಧ್ಯತೆಯಿರುವುದರಿಂದ ನೆಟ್ವರ್ಕ್ / ಅಂತರ್ಜಾಲಕ್ಕೆ ಸಂಪರ್ಕವೊಂದಿದ್ದರೆ ಸಾಕು ಎಲ್ಲೆಂದರಲ್ಲಿ ಪರಿಸ್ಥಿತಿಗೆ ಸ್ಪಂದಿಸಬಹುದು ಕನಿಷ್ಠ ಪದಗಳಲ್ಲಾದರು.

ಈ ತಾಂತ್ರಿಕತೆಯೊದಗಿಸಿದ ವೇಗೋತ್ಕರ್ಷದ ಪರಿಣಾಮ ಹಳೆಯ ಶೈಲಿಯ ಎಲ್ಲಾ ಒಡನಾಟಗಳತ್ತಲೂ ಪ್ರಭಾವ ಬೀರಿರುವುದು ಎದ್ದು ಕಾಣುತ್ತದೆ, ಅದರಲ್ಲು ಅದನ್ನು ಹೆಚ್ಚು ಬಳಸುವ ಯುವ ಜನಾಂಗದಲ್ಲಿ. ಹಾಗೆಂದು ಆ ಹಳೆಯ ತುಡಿತ, ಮಿಡಿತ, ಸಂವೇದನೆಗಳು ಕಳುವಾಗಿದೆಯೆಂದಲ್ಲ – ಅದರ ತೀವ್ರತೆ ಮತ್ತು ಸ್ಪಂದನ ವೇಗಗಳು ಮೊದಲಿಗಿಂತ ಎಷ್ಟೊ ಪಟ್ಟು ಹೆಚ್ಚಾಗಿವೆಯಷ್ಟೆ. ಇದರಿಂದಾಗಿ ಈಗ ಒಡನಾಟದ ಆರಂಭಿಕ ವೇಗವೂ ಹೆಚ್ಚು, ಅದು ಗಟ್ಟಿಯಾಗುವ ಕಾಲಯಾನದ ವೇಗವೂ ಹೆಚ್ಚು – ಹೆಚ್ಚು ಕಮ್ಮಿಯಾದರೆ ಹಾಗೆಯೆ ಮುರಿದು ಬೀಳುವ ವೇಗವೂ ಸಹ. ಇವೆಲ್ಲಾ ತರದ ಒಡನಾಟಗಳ ಕಲಸುಮೇಲೋಗರದಲ್ಲಿ ಬಂಧಗಳ, ನಂಟಿನ ವಿವಿಧ ಬಗೆಗಳೆಲ್ಲವು ಒಂದು ರೀತಿಯ ವಿಶೇಷ ಐಡೆಂಟಿಟಿ ಕಳೆದುಕೊಂಡು ಎಲ್ಲಾ ಒಂದೆ ಹಣೆಪಟ್ಟಿ ಹಚ್ಚಿಕೊಂಡು ತುಸು ಕಳೆಗುಂದಿದಂತಾಗುವುದು ಮತ್ತೊಂದು ವಿಪರ್ಯಾಸ. ಆದರೆ ಎಲ್ಲಾ ತರದ ಒಡನಾಟಗಳನ್ನು ಒಂದೆ ಸೂರಿನಡಿ ಸೇರಿಸಹೊರಟಾಗ ವಿಭಿನ್ನ ಮನೋಭಾವದ ಎಲ್ಲರ ಅಗತ್ಯಗಳಿಗು ಒಂದೆ ಕಡೆ ಉತ್ತರ ಹುಡುಕಲ್ಹೊರಟಂತಾಗಿ ಕೆಲವರಿಗಾದರು ಭ್ರಮನಿರಸನವಾಗುವುದು ಖಚಿತ. ಇದರಿಂದಾಗಿಯೆ ಸಮಾನ ಆಸಕ್ತಿ, ಅಭಿರುಚಿಯ ಬೇರೆ ಬೇರೆ ಗುಂಪುಗಳು ಹುಟ್ಟಿಕೊಳ್ಳುವುದು, ಪ್ರತ್ಯೇಕ ವೆಬ್ಸೈಟ್-ಬ್ಲಾಗುಗಳಾಗಿ ತೆರೆದುಕೊಳ್ಳುವುದು, ಹೊಸ ವಾಟ್ಸಪ್ಪು ಗುಂಪುಗಳಾಗುವುದು. ಆದರೆ ಒಂದು ಹಂತದಲ್ಲಿ ಎಷ್ಟೊ ಗುಂಪುಗಳಾಗಿಹೋಗುತ್ತವೆಂದರೆ ಯಾವುದಕ್ಕೆ ಯಾವುದು ಅನ್ನುವ ಗೊಂದಲದ ಜತೆಗೆ ಯಾವುದೊ ಕೆಲವನ್ನು ಮಾತ್ರ ನಿತ್ಯ ಬಳಸುತ್ತ ಮಿಕ್ಕವನ್ನು ನೆಪಕ್ಕೆ, ಕಾಟಾಚಾರಕ್ಕೆ ಬಳಸಿಕೊಂಡು ಹೋಗುವಷ್ಟು. ಒಟ್ಟಾರೆ ಒಂದೆ ಮಾತಿನಲ್ಲಿ ಹೇಳುವುದಾದರೆ ಬದುಕಿನ ಒಡನಾಟದ ಪ್ರತಿ ಆಯಾಮಕ್ಕು ‘ವೇಗ’ವೆನ್ನುವ ಹೊಸ ವ್ಯಾಖ್ಯೆಯನ್ನು ಸೇರಿಸಿಕೊಂಡಿದೆ ಈ ಆಧುನಿಕ ಜಗ. ಆದರೆ ಆ ಮೂಲ ಮಿಡಿತ, ತುಡಿತಗಳು ಮಾತ್ರ ಮೊದಲಿದ್ದವೆ ಆಗಿವೆ..

ಇದೆಲ್ಲಾ ಅನಿಸಿದ್ದು ರಾಂಡಮ್ ಆಗಿ ಫೆಸ್ಬುಕ್ಕಿನ ಮತ್ತು ಕೆಲವು ವೆಬ್ಸೈಟಿನ ಪುಟಗಳನ್ನು ಅವಲೋಕಿಸುತ್ತಿದ್ದಾಗ. ಚೀನಾದಲ್ಲಿದ್ದಾಗ (ಅಲ್ಲಿನ ಸ್ಥಳೀಯ ನೀತಿಯನುಸಾರ) ಸುಲಭ ಸಾಧ್ಯವಾಗದೆ ಇದ್ದ ಕಾರಣ, ಈಗ ರಜೆಯಲ್ಲಿ ಸ್ವಲ್ಪ ಹೆಚ್ಚು ಆಳವಾಗಿಯೆ ನೋಡುತ್ತಿದ್ದೆ. ಅದರಲ್ಲಿ ಸೆಳೆದ ಒಂದು ಅಂಶವೆಂದರೆ, ಬಾಡಿಹೋಗುವ ಹಾದಿಯಲಿದ್ದ ಕನ್ನಡ, ಕನ್ನಡತನಕ್ಕೆ ಮತ್ತೆ ಮರುಜೀವ, ಮರು ಚಾಲನೆ ಕೊಡುವ ಹಾಗೆ ಹೆಚ್ಚೆಚ್ಚು ಕನ್ನಡ ಬರಹ, ಬರವಣಿಗೆಗಳು ಕಣ್ಣಿಗೆ ಬಿದ್ದಿದ್ದು.. ಅದರಲ್ಲು ಕೆಲವಂತು ವೈಯಕ್ತಿಕ ಭಾವನೆ, ತೀವ್ರತೆಗಳ ಅನಾವರಣಕ್ಕೆ ನೇರ ಅಭಿವ್ಯಕ್ತಿ ಮಾಧ್ಯಮವಾಗಿರುವುದನ್ನು ಕಂಡು – ಹೌದಲ್ಲಾ, ಒಳಗಿಟ್ಟುಕೊಳ್ಳದೆ ಹೊರಹಾಕಿ ನಿರಾಳವಾಗಲಿಕ್ಕೆ ಇದು ಒಂದು ನೇರ ಮಾಧ್ಯಮವಲ್ಲವೆ ? ಅನಿಸಿತು. ಹೊರಬಿದ್ದಷ್ಟು ಒಳಗೆ ಸಾಂದ್ರವಾಗಿ ಗಡ್ಡೆ ಕಟ್ಟಿಕೊಳ್ಳುವುದು ತಪ್ಪುತ್ತದೆ. ಆ ಹೊತ್ತಲ್ಲಿ ಕಣ್ಣಿಗೆ ಬಿದ್ದ ಹೆಚ್ಚಿನವು ಸ್ನೇಹ, ಪ್ರೇಮ, ವಿದಾಯ, ಉತ್ಕಟತೆ, ವಿಷಾದಗಳ ವಿಭಿನ್ನ ಹೂರಣಗಳ ಮೇಳ. ಆವನ್ನೆಲ್ಲ ಓದುತ್ತಿರುವಂತೆಯೆ ಕೆಲವನ್ನು ನಾನೆ ಅನುಭವಿಸಿದಷ್ಟೂ ಅನುಭೂತಿಯುಂಟಾಗಿ, ಆ ಉನ್ಮೇಷ ಕಳೆದುಹೋಗುವ ಮೊದಲೆ ಪದಗಳಾಗಿಸಬೇಕೆನಿಸಿತು. ಸ್ವಾನುಭವದ ಹೊರತಾಗಿಯೂ, ಪರಾನುಭವವನ್ನು ಎಷ್ಟು ತೀವ್ರತೆಯಿಂದ ಅನುಭವಿಸಲು ಸಾಧ್ಯ ನೋಡುವ ಎಂದುಕೊಂಡು, ನಾ ಗ್ರಹಿಸಿದ ಹೂರಣದ ವಸ್ತುವನ್ನೆ ಮೂಲಸರಕಾಗಿಟ್ಟುಕೊಂಡು ಮನದಲ್ಲಿ ಮೂಡಿಬಂದ ಸಾಲುಗಳನ್ನು ಕವನವಾಗಿ ಮೂಡಿಸತೊಡಗಿದೆ. ಅದು ಅಭಿವ್ಯಕ್ತವಾದ ತೀವ್ರತೆಯ ಬಗೆಯನ್ನು ಕಂಡು ನನಗೇ ಅಚ್ಚರಿಯಾಯ್ತು. ಜತೆಗೆ ಬರೆದ ನಂತರ ನನ್ನಲ್ಲಾರೋಪಗೊಂಡಿದ್ದ ತೀವ್ರತೆಯ ನಶೆಯೂ ಜರ್ರನೆ ಕೆಳಗಿಳಿದು ನಿರಾಳವಾದ ಅನುಭವವೂ ಆಯ್ತು..

ಆಗ ಮೂಡಿದ ಲಹರಿಯನ್ನು ಇಲ್ಲಿ ಕಾಣಿಸಿದ್ದೇನೆ.. ನನಗನಿಸಿದ ಅಚ್ಚರಿ ನಿಮಗೂ ಆಯಿತೆ – ಅನುಭವ, ಅನುಭಾವ, ಅನುಭೂತಿ ಇತ್ಯಾದಿ…?

ಉಳಿದುಬಿಡು ನೀನೊಂದು ಕನಸಾಗಿ ದೂರದೆ..
_____________________________________

ಉಳಿದುಬಿಡು ನೀನೊಂದು ಕನಸಾಗಿ ದೂರದೆ
ದೂರದೆ ಕೂರುವೆನು ತಕರಾರು ಮಾಡದೆ
ದೂರಿದರು ಸಾರಿದರು ಕೆಡುಕಾಗದ ರೀತಿ
ಒಳಿತನಾಡುವ ಪ್ರೀತಿ ಮರೆಯಾಗದ ಪ್ರವೃತ್ತಿ ||

ದೂರ ನೇಸರನ ಗೆಣೆಯರು ತಾರೆ ಉಲ್ಕೆಗಳಾರು
ಹೇಳಬಲ್ಲವರಾರು ಕಂಡ ಬೆಳಕೆ ಭೂತದ ಭೂತ
ಕಟ್ಟುತಲ್ಲಿಗೆ ಸೇತುವೆ ದ್ಯುತಿ ಕಿರಣದೆ ಗಗನದಲಿ
ಗೂಡು ಕಟ್ಟಿ ಗುಟ್ಟ ಮುಚ್ಚಿಡುವೆ ಪಾರದರ್ಶಿ ಬಯಲೆ ||

ಮನದ ಮಂಡಿಗೆ ಮಾತು ತಿಂದಿತ್ತು ಏಟ ಮೇಲೇಟು
ಕ್ಷಣಕೊಂದು ದಿನಕೊಂದು ಬದಲಾಗಿ ಚಿತ್ತದ ಮೊತ್ತ
ನಿರೀಕ್ಷೆಗಳ ಸಖರಾರು ? ಪರೀಕ್ಷೆಗಳದೇಕೊ ಜೋರು
ನನಸಾಗದ ಕನಸಾದರು ಸರಿ, ಉಳಿದುಬಿಡಲಿ ನೆನಪು ||

ನೆಪಗಳ ಮಾತೆಲ್ಲಿನ್ನು ? ನಿರಾಳವಿರಲಿನ್ನು ಎದೆಬಡಿತ
ಹುಡುಕಬೇಕಿಲ್ಲ ಕಾರಣ, ನೇರ ದಿಟ್ಟ ಉತ್ತರವೆ ಸಾಕು
ನೋವಾಗುವುದೆಂದು ನುಡಿಗೆ, ಕಟ್ಟಬೇಕಿಲ್ಲ ಅಣೆಕಟ್ಟು
ನೀನಾಡಿದ ಹಳೆ ಮಾತಿನ ಮೆಲುಕಲೆ ಕಳೆದು ಬದುಕ ||

ಈ ಬಾರಿಯಿದು ನಿಶ್ಚಿತ ಹಾದಿಯೂ ನಿಚ್ಚಳ ಸೂಕ್ತ
ಹಿಡಿಯೆ ನೀ ನಿನ ದಾರಿ ಅಂತೆ ನನದೂ ಸವಾರಿ
ಮುಗುಳ್ನಗೆ ಕೈ ಬೀಸಾಟ ಎಂದಿನಂತಿರಲಿ ಹಸನು
ಇರಿಸುಮುರುಸು ಮುಜುಗರ ಇರದಂತೆ ನಡೆದು ||


ಚಿತ್ರಕೃಪೆ:
newleaftrust.com

3 ಟಿಪ್ಪಣಿಗಳು Post a comment
 1. Sneha
  ಜನ 7 2016

  Social communication embha gunginalli nijavada bhavanegalannu nirlakshisabedi 

  ಉತ್ತರ
  • ನಿಮ್ಮ ಮಾತು ನಿಜ ಸ್ನೇಹಾರವರೆ…ಗಟ್ಟಿಯಾಗಿ ಕೊನೆಗುಳಿಯುವುದು ನೈಜ ಸಾಂಗತ್ಯವೆ… ಎಲ್ಲಿಯವರೆಗೆ ಆ ಗಮ್ಯಕ್ಕೆ ಪೂರಕವಾಗಿರಬಲ್ಲದೊ ಅಲ್ಲಿಯವರೆಗೆ ಅಡ್ಡಿಯಿಲ್ಲ.. ಹೊಸತಿನಬ್ಬರ, ಗದ್ದಲ, ಅಟ್ಟಹಾಸಗಳೆಲ್ಲ ಕರಗಿ ಸೂಕ್ತ ಪರಿಪಕ್ವತೆಯ ಹಂತ ಮುಟ್ಟಿದಾಗ ಈ ಸಮತೋಲನ ತಂತಾನೆ ಅನಾವರಣಗೊಳ್ಳಲಿದೆಯೆಂದು ನನ್ನ ಅನಿಸಿಕೆ, ಆಶಯ..:-)

   ಉತ್ತರ

Trackbacks & Pingbacks

 1. 00451. ಅನುಭವ, ಅನುಭಾವ, ಅನುಭೂತಿ ಇತ್ಯಾದಿ… | ಮನದಿಂಗಿತಗಳ ಸ್ವಗತ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments